ಕಾಡುಹಂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡುಹಂದಿಯು ಸಾಕುಹಂದಿಯ ಪೂರ್ವಜ ಪ್ರಾಣಿ. ವರಾಹ ಸಂಕುಲದ ಸೂಸ್ (Sus)ವರ್ಗ ಮತ್ತು ಜೀವಶಾಸ್ತ್ರದಲ್ಲಿ ಸೂಇಡೆ (Suidae) ಕುಟುಂಬಕ್ಕೆ ಸೇರಿದೆ. ಈ ವರ್ಗದಲ್ಲಿ ಅನೇಕ ಉಪವರ್ಗಗಳೂ ಇವೆ. ಇದರ ವೈಜ್ಞಾನಿಕ ಹೆಸರು ಸೂಸ್ ಸ್ಕ್ರೊಫ (Sus scrofa)[೧]. ಇವು ಅತ್ಯಂತ ಬೇಗನೇ ಪುನರುತ್ಪತ್ತಿಯಿಂದ ತಮ್ಮ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತವೆ. [೨]

ಭಾರತದ ಕಾಡುಹಂದಿಯು ಸೂಸ್ ಸ್ಕ್ರೊಫ ಕ್ರಿಸ್ಟಟಸ್ (Sus scrofa cristatus) ಎಂದು ವೈಜ್ಞಾನಿಕವಾಗಿ ಕರೆಯಲ್ಪಡುತ್ತದೆ. ಇದರ ಕತ್ತಿನ ಮೇಲಿನ ಕೂದಲು ಉದ್ದವಾಗಿರುತ್ತದೆಯಲ್ಲದೆ ಕಪ್ಪು ಬಣ್ಣದಲ್ಲಿರುತ್ತದೆ. ಯೂರೋಪಿನ ಪ್ರಾಣಿಗಿಂತ ಲಘುವಾಗಿದ್ದರೂ, ಅದಕ್ಕಿಂತ ತಲೆ ದೊಡ್ಡದಾಗಿಯೂ, ಮೂತಿ ಉದ್ದವಾಗಿಯೂ, ಕಿವಿಗಳು ಸಣ್ಣವಾಗಿ ಚೂಪಾಗಿರುತ್ತವೆ[೩]. ಭಾರತದ ಹಂದಿಯ ಹಣೆ ಸಪಾಟಾಗಿದ್ದರೆ ಯೂರೋಪಿನದರದು ನಿಮ್ನ(ಒಳಕ್ಕೆ ತಗ್ಗಿ)ವಾಗಿರುತ್ತದೆ.

ಇನ್ನೊಂದು ವರ್ಗವು ಸೂಸ್ ಸ್ಕ್ರೊಫ ಅಫಿನಿಸ್ (Sus scrofa affinis) ಎಂದು ಗುರುತಿಸಲ್ಪಡುತ್ತದೆ. ಈ ಉಪವರ್ಗವು ಸೂಸ್ ಸ್ಕ್ರೊಫ ಕ್ರಿಸ್ಟಟಸ್ ವರ್ಗಕ್ಕಿಂತ ಸಣ್ಣದಾಗಿರುತ್ತವೆ. ಮತ್ತೊಂದು ವರ್ಗವು ಸೂಸ್ ಸ್ಕ್ರೊಫ ಡವಿಡಿ (Sus scrofa davidi) ಎಂದಾಗಿದ್ದು ಇದರ ಕತ್ತಿನ ಕೂದಲು ಉದ್ದವಾಗಿದ್ದು, ತಿಳಿ ಕಂದುಬಣ್ಣದ್ದಾಗಿರುತ್ತದೆ.


ವ್ಯಾಪ್ತಿ[ಬದಲಾಯಿಸಿ]

ಕಾಡುಹಂದಿಯು ನೈಋತ್ಯ ಮತ್ತು ಮಧ್ಯ ಏಶಿಯಾ, ಜಪಾನ್ ಮತ್ತು ಇಂಡೋನೇಶ್ಯಾ, ಉತ್ತರ ಮತ್ತು ಮಧ್ಯ ಯೂರೋಪ್, ಹಾಗೂ ಮೆಡಿಟರೇನಿಯನ್ ಪ್ರದೇಶ ಮತ್ತು ಉತ್ತರ ಆಫ್ರಿಕ ಭೂಭಾಗಗಳಲ್ಲಿ ಕಾಣಸಿಗುವ ಕಾಡುಪ್ರಾಣಿ.

ಭಾರತದಲ್ಲಿ ಹಿಮಾಲಯ ಶ್ರೇಣಿಯ ದಕ್ಷಿಣದಿಂದ ಮಧ್ಯ ಭಾರತದವರೆಗೂ ಕಾಣಸಿಗುವ ಪ್ರಾಣಿಗಳು ಸೂಸ್ ಸ್ಕ್ರೊಫ ಕ್ರಿಸ್ಟಟಸ್ ಗುಂಪಿಗೆ ಸೇರಿದವು. ದಕ್ಷಿಣ ಭಾರತಲ್ಲಿರುವ ಕಾಡುಹಂದಿಗಳು ಸೂಸ್ ಸ್ಕ್ರೊಫ ಅಫಿನಿಸ್ ಗುಂಪಿನವು. ಇವು ಶ್ರೀಲಂಕಾದಲ್ಲಿಯೂ ಇವೆ. (ಇವುಗಳನ್ನು ಕುರಿತ ವಿವರಗಳು ವಿವಾದಾಸ್ಪದವಾಗಿವೆ). ಗುಜರಾತ್ ಪ್ರದೇಶದಲ್ಲಿ ಸಿಗುವ ಕಾಡುಹಂದಿಗಳು ಸೂಸ್ ಸ್ಕ್ರೊಫ ಡವಿಡಿ ಗುಂಪಿನವು.

ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲದೆ ಬಯಲು ಸೀಮೆಯಲ್ಲೂ ಕಾಡುಹಂದಿಗಳಿವೆ.


ಶಾರೀರಿಕ ಲಕ್ಷಣಗಳು[ಬದಲಾಯಿಸಿ]

ನಾಲ್ಕೂ ಕಾಲುಗಳ ಮೇಲೆ ನಿಂತಿರುವ ವಯಸ್ಕ ಪ್ರಾಣಿಯ ಭುಜದವರೆಗಿನ ಎತ್ತರವು ಸುಮಾರು ೬೦ರಿಂದ ೧೧೦ ಸೆಂಟಿಮೀಟರ್ ಇದ್ದು, ಮೂತಿಯಿಂದ ಬಾಲದ ಬುಡದವರೆಗೆ ೯೦ರಿಂದ ೨೦೦ ಸೆಂಟಿಮೀಟರ್ ಉದ್ದವಿರುತ್ತದೆ. ಅಂದಾಜು ೫೦ ರಿಂದ ೧೫೦ ಕಿಲೊಗ್ರಾಮ್‌ನಷ್ಟು ಭಾರವಿರುತ್ತದೆ. ಅವುಗಳಿರು ಭೂಪ್ರದೇಶಕ್ಕೆ ಅನುಗುಣವಾಗಿ ಅವುಗಳ ಗಾತ್ರ-ತೂಕವಿರುತ್ತವೆ.


ಭಾರತದ ಕಾಡುಹಂದಿ


ಕಾಡುಹಂದಿಯ ಮೈ ಬೂದುಗಪ್ಪಿನ ಒರಟಾದ ಮೋಟು ಕೂದಲಿನಿಂದ ಆವೃತವಾಗಿರುತ್ತದೆ. ಗಂಡುಹಂದಿಗೆ ತನ್ನ ಶತ್ರುಗಳೊಡನೆ ಕಾದಾಡಲು, ಕೆಳದವಡೆಯಲ್ಲಿ ಬಲಿಷ್ಠವಾದ ೬ರಿಂದ ೧೨ ಸೆಂಟಿಮೀಟರ್ ಉದ್ದನೆಯ ಎರಡು ಕೋರೆಹಲ್ಲುಗಳಿವೆ. ಹೆಣ್ಣುಹಂದಿಗಳ ಕೋರೆಹಲ್ಲುಗಳು ಸಣ್ಣಗಿರುತ್ತವೆ. ಹುಲಿಗಳು ಹೆಣ್ಣುಹಂದಿಗಳನ್ನಷ್ಟೇ ಬೇಟೆಯಾಡುತ್ತವೆ. ಗಂಡುಹಂದಿಗಳನ್ನು ಎದುರಿಸಿದಾಗ ಅವು ಸ್ವರಕ್ಷಣೆಗೆ ತಮ್ಮ ಕೋರೆಗಳಿಂದ ತಿವಿದು ಹುಲಿಗಳನ್ನು ಕೊಂದ ಸಂದರ್ಭಗಳೂ ಇವೆ. ಸಣ್ಣ ಮರಿಗಳಿರುವ ಹೆಣ್ಣುಹಂದಿಗಳು ಮನುಷ್ಯರನ್ನೂ ಎದುರಿಸಿ ಮಾರಣಾಂತಿಕವಾಗಿ ತಿವಿಯುವದೂ ಇದೆ.

ಕಾಡುಹಂದಿಯ ಮರಿಗಳು

ಮರಿಗಳ ಮೈ ಕಂದು ಮತ್ತು ಕೆನೆ ಬಣ್ಣಗಳ ಉದ್ದನೆಯ ಪಟ್ಟೆಗಳಿದ ಕೂಡಿರುತ್ತವೆ. ಸುಮಾರು ಆರು ತಿಂಗಳ ಬಳಿಕ ಈ ಪಟ್ಟೆಗಳು ಕಾಣಿಸದಂತಾಗುತ್ತವೆ.


ಗುಣ ಸ್ವಭಾವಗಳು[ಬದಲಾಯಿಸಿ]

ಕಾಡುಹಂದಿಗಳು ದಟ್ಟವಾದ ಪೊದೆಗಳಲ್ಲಿ ಜೀವಿಸುತ್ತವೆ. ಬೇಸಿಗೆಯ ತಾಪದಿಂದ ಕಾಪಾಡಿಕೊಳ್ಳಲು ಕೆಸರಲ್ಲಿ ಹೊರಳಾಡುತ್ತವೆ. ಗಂಡುಹಂದಿಗಳು ಸಾಮಾನ್ಯವಾಗಿ ಒಂಟಿಯಾಗಿರುತ್ತವೆ. ಹೆಣ್ಣುಹಂದಿಗಳು ಗುಂಪಾಗಿರುತ್ತವೆ.ಒಂದು ಗುಂಪಿನಲ್ಲಿ ೨-೩ ಹೆಣ್ಣುಹಂದಿಗಳು, ಇಪ್ಪತ್ತು-ಮೂವತ್ತು ಮರಿಗಳಿರುತ್ತವೆ. ಒಂದು ಹೆಣ್ಣುಹಂದಿ ನಾಯಕತ್ವವನ್ನು ವಹಿಸಿರುತ್ತದೆ.

ಕಾಡುಹಂದಿಗಳು ಬಲಶಾಲಿಯಾಗಿರುವವಲ್ಲದೆ, ಉಗ್ರವಾಗಿಯೂ ಇರುತ್ತವೆ. ಇವು ಬಹಳ ವೇಗವಾಗಿ ಓಡುತ್ತವೆ. ಆತುರ ಹೆಚ್ಚು. ಅಪಾಯದ ಸುಳಿವು ಸಿಕ್ಕ ಕೂಡಲೇ ಅಪಾಯದ ವಿರುದ್ಧ ದಿಕ್ಕಿನಲ್ಲಿ ಓಡುತ್ತವೆ. ಗಡಿಬಿಡಿಯಲ್ಲಿ ಹಲವೊಮ್ಮೆ ಹಿಂದುಮುಂದು ನೋಡದೆ ಯಾವ ಕಡೆಗಾದರೂ ಸರಿಯೇ ಧಾವಿಸುತ್ತವೆ.

ಆಹಾರ ಕ್ರಮ[ಬದಲಾಯಿಸಿ]

ಸದಾ ಜಾಗರೂಕವಾಗಿರುವ ಇವು ರಾತ್ರಿಯಲ್ಲಿ ತಮ್ಮ ಆಹಾರವಾದ ಕಂದ-ಮೂಲಗಳನ್ನೂ ಧಾನ್ಯಗಳನ್ನೂ ಹುಡುಕಿ ತಿನ್ನುತ್ತವೆ. ಹಲವು ಬಾರಿ ಆಹಾರ ಹುಡುಕುತ್ತಾ ಹೊಲ-ಗದ್ದೆಗಳನ್ನು ನುಗ್ಗಿ, ಬೆಳೆಗಳನ್ನು ಮೇಯುತ್ತವೆ. ಇವು ನೆಲದಲ್ಲಿ ಇಟ್ಟಿರುವ ಪಕ್ಷಿಗಳ ಮೊಟ್ಟೆಗಳನ್ನೂ, ಕೆಲವೊಮ್ಮೆ ಸಣ್ಣ ಪ್ರಾಣಿಗಳನ್ನೂ ತಿನ್ನುತ್ತವೆ.

ಮಾನವ ಸಂಪರ್ಕ ಮತ್ತು ಸಂಘರ್ಷ[ಬದಲಾಯಿಸಿ]

ಮಾನವ ಸಂಪರ್ಕದಲ್ಲಿ ಮನುಷ್ಯನು ಕಾಡುಹಂದಿಗಳನ್ನು ಪಳಗಿಸಿ ಸಾಕುಹಂದಿ ಅಥವಾ ನಾಡುಹಂದಿಗಳನ್ನಾಗಿಸಿದ್ದಾರೆ. ಇವು ಕಾಡುಹಂದಿಗಳಿಗಿಂತ ಹೆಚ್ಚು ಕೊಬ್ಬಿರುತ್ತವೆಯಲ್ಲದೆ ಸಾಧುವಾಗಿಯೂ ಇರುತ್ತವೆ. ಕಾಡುಹಂದಿಗಳನ್ನು, ಮಧ್ಯಪ್ರಾಚ್ಯ ಹಾಗು ಚೀನಾದಲ್ಲಿ ಸುಮಾರು ಕ್ರಿಸ್ತಪೂರ್ವ ೭೦೦೦ರಲ್ಲಿಯೇ ಒಗ್ಗಿಸಲಾಗುತ್ತಿತ್ತು[೪]. ಜಗತ್ತಿನ ಬಹುತೇಕ ಕಡೆಗಳಲ್ಲಿ ಹಂದಿಯ ಮಾಂಸವನ್ನು ಬಳಸುವವರಿದ್ದಾರೆ.

ಮನುಷ್ಯನು ಗೆಡ್ಡೆಗೆಣಸು, ಸೌದೆ, ಮೊದಲಾದ ಕಾಡಿನ ಉತ್ಪನ್ನಗಳನ್ನು ಸಂಗ್ರಸುತ್ತಿರುವ ಕಾಲದಲ್ಲೇ ಕಾಡುಹಂದಿಗಳೊಡನೆ ಸಂಘರ್ಷ ನಡೆಸಿದ್ದಾನೆ. ಈ ಪ್ರಾಣಿಗಳು ಬೆಳೆಗಳನ್ನು ನಾಶಪಡಿಸುವದು ಭಾರತದ ಬಹಳ ಕಡೆಯ ರೈತರು ಅನುಭವಿಸುತ್ತಿರುವ ತೊಂದರೆ. ಬೆಳೆಗಳನ್ನಷ್ಟೇ ಅಲ್ಲದೆ, ಹೂವು-ತರಕಾರಿಗಳ ಬೆಳೆಗಳನ್ನೂ, ಹಣ್ಣಿನ ತೋಟಗಳನ್ನೂ ಕಾಡಿನಲ್ಲಿ ಮರಗಳ ತೋಪುಗಳನ್ನೂ, ಅತಿಕ್ರಮಿಸಿ ನಷ್ಟಪಡಿಸುತ್ತವೆ. ಜತೆಗೆ ಅಂಟುಜಾಡ್ಯಗಳನ್ನೂ ಪ್ರಸರಿಸುತ್ತವೆ.


ಕಾಡುಹಂದಿಗಳ ಬೇಟೆ[ಬದಲಾಯಿಸಿ]

ಬಹಳ ಹಿಂದಿನ ಕಾಲದಿಂದಲೂ ಮನುಷ್ಯರು ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಇಂಗ್ಲೆಂಡ್ ದೇಶದಲ್ಲಿ ರಾಜರ ಅನುಮತಿಯಿಲ್ಲದೆ ಇವುಗಳನ್ನು ಬೇಟೆಯಾಡಿದವರ ಕಣ್ಣುಗಳನ್ನು ಕೀಳಿಸುವ ಶಿಕ್ಷೆಯೂ ಇತ್ತು. ಯೂರೋಪಿನಲ್ಲಿ ಸ್ವಂತ ಕಾಡುಗಳನ್ನು ಹೊಂದಿದ್ದ ಶ್ರೀಮಂತರು ಅಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲೆಂದು ತಂದು ಬಿಡುತ್ತಿದ್ದರು. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲೂ ಕೆಲವೆಡೆ ಈ ರೀತಿಯಲ್ಲಿ ಈ ಪ್ರಾಣಿಗಳನ್ನು ಕಾಡುಗಳಲ್ಲಿ ತಂದಿರಿಸಿ ಬೇಟೆಯಾಡುತ್ತಿದ್ದರು. ಕಾಡಿನಲ್ಲಿ ಬೇಟೆಗಾರರು ನಾಯಿಗಳೊಂದಿಗೆ ಭರ್ಚಿಗಳನ್ನು ಹಿಡಿದು ಇವುಗಳನ್ನು ಬೇಟೆಯಾಡುವದು ಶೌರ್ಯ-ಸಾಹಸಗಳ ಪ್ರತೀಕವೆಂದು ಪರಿಗಣಿಸುತ್ತಿದ್ದರು.

ಭಾರತದಲ್ಲೂ ಕಾಡುಹಂದಿಗಳನ್ನು ಬಹಳ ಹಿಂದಿನಿಂದಲೂ ಬೇಟೆಯಾಡುತ್ತಿದ್ದರು. ನಮ್ಮ ದೇಶದಲ್ಲಿ ಹಿಂದೆ ಕುದುರೆಯ ಮೇಲೆ ಕುಳಿತು, ಕಾಡುಹಂದಿಗಳನ್ನು ಕೆಣಕಿ, ಅವು ಎದುರಿಸುತ್ತಿರುವಾಗ ಕೈಯಲ್ಲಿ ಹಿಡಿದ ಭರ್ಚಿಯಿಂದ ತಿವಿಯುವದು ಶೌರ್ಯದ ಬೇಟೆಯಾಗಿತ್ತು.


ಭಾರತೀಯ ಪುರಾಣಗಳಲ್ಲಿ[ಬದಲಾಯಿಸಿ]

ಮಹಾಭಾರತದಲ್ಲಿ ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಕತೆಯಲ್ಲಿ ಕಾಡುಹಂದಿಯ ಬೇಟೆಯ ಚಿತ್ರಣವಿದೆ. ಈ ಸನ್ನಿವೇಶವನ್ನು ಕುರಿತು ಭಾರವಿ ಕವಿಯು ಬರೆದ ಕಿರಾತಾರ್ಜುನೀಯಮ್ [೫]ಎಂಬುದು ಸಂಸ್ಕೃತ ಭಾಷೆಯಲ್ಲಿಯ ಪಂಚ ಮಹಾಕಾವ್ಯಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ.

ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಮೂರನೇಯದು ವರಾಹಾವತಾರ.

ಭಾರತೀಯ ವೈದ್ಯಪದ್ಧತಿಯಲ್ಲಿ[ಬದಲಾಯಿಸಿ]

ಚರಕಾಚಾರ್ಯ ಸುಶ್ರುತಾಚಾರ್ಯರು ಜೀವಿಸಿದ್ದ ಸಮಯದಲ್ಲಿ ಮಾಂಸಾಹಾರ ರೂಢಿಯಲ್ಲಿತ್ತು. ಮೇಕೆ, ಕಾಡುಹಂದಿ, ಮೊದಲಾದವುಗಳ ರಕ್ತ-ಮಾಂಸ, ಮೇದಸ್ಸುಗಳನ್ನು, ರೋಗಪರಿಹಾರಾರ್ಥವಾಗಿ ವೈದ್ಯರು ಬಳಸುತ್ತಿದ್ದರು.[೬]ಹೆಚ್ಚಿನ ಅಧ್ಯಯನಕ್ಕೆ[ಬದಲಾಯಿಸಿ]

೧. http://www.iloveindia.com/wildlife/indian-wild-animals/wild-boar/index.html

೨. Natural History of the Mammalia of India and Ceylon, by Robert A. Sterndale. Gutenberg.org. 16 October 2006.

೩. ಗ್ರಾಮೀಣ ಬೇಟೆಗಳು, ಸಂಪಾದಕರು: ಡಾ ದೇವೇಂದ್ರಕುಮಾರ ಹಕಾರಿ, ಡಾ ಕೆ ಆರ್ ಸಂಧ್ಯಾರೆಡ್ಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ೫೬೦೦೧೮, ಮೊದಲ ಆವೃತ್ತಿ೨೦೦೦, (ಕಾಡುಹಂದಿಯ ಬೇಟೆಯನ್ನೂ ಸೇರಿಸಿ).


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

೧. http://wildvistas.com/fauna/wildboar/wildboar.html

೨. http://a-z-animals.com/animals/wild-boar/


ಉಲ್ಲೇಖ[ಬದಲಾಯಿಸಿ]