ಭಾರವಿ
ಕೌಶಿಕ ಗೋತ್ರದಲ್ಲಿ ಜನಿಸಿದ ನಾರಾಯಣ ಸ್ವಾಮಿಯ ಮಗ ಭಾರವಿ.(Bharavi) ಭಾರವಿಯ ಪೂರ್ವಜರು ವಾಯುವ್ಯ ಭಾರತದ ಆನಂದಪುರ ಎಂಬ ನಗರದಲ್ಲಿ ವಾಸಿಸುತ್ತಿದ್ದರು. ಅನಂತರ ಅವರು ದಕ್ಷಿಣ ಭಾರತದ ನಾಸಿಕ ಎಂಬ ನಗರಕ್ಕೆ ತಮ್ಮ ವಾಸಸ್ಥಾನವನ್ನು ಬದಲಾಯಿಸಿದರು. ಒಮ್ಮೆ ತನ್ನ ಸಮಕಾಲೀನ ರಾಜಕುಮಾರನಾದ ವಿಷ್ಣುವರ್ಧನನ ಜೊತೆ ಬೇಟೆಗಾಗೆ ದಟ್ಟ ಅರಣ್ಯವನ್ನು ಹೊಕ್ಕಾಗ ಭಾರವಿ ಮಾಂಸವನ್ನು ಸೇವಿಸಿದ ಕಾರಣಕ್ಕಾಗಿ ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆಗೆ ಹೋದನು. ಆಗ ಅವನ ಕಾವ್ಯವನ್ನು ಕೇಳಿದ ಕಾಂಚೀನೃಪಾಲ ಸಿಂಹವಿಷ್ಣು ಅವನನ್ನು ತನ್ನ ರಾಜಧಾನಿಗೆ ಕರೆದೊಯ್ದನು. ಸಿಂಹವಿಷ್ಣುವಿನ ಮಗನಾದ ಮಹೇಂದ್ರವಿಕ್ರಮನೊಡನೆ ಭಾರವಿ ಅಲ್ಲಿಯೇ ಆನಂದದಿಂದ ವಾಸಿಸತೊಡಗಿದನು. ಅವನ ಮಗ ಮನೋರಥ ಹಾಗೂ ಮೊಮ್ಮಗ ದಂಡೀ. ಈ ಕಥೆ ಅವಂತಿಸುಂದರೀ ಕಥೆಯಲ್ಲಿ ನಿರೂಪಿತವಾಗಿದೆ. ಭಾರವಿಯ ಮತ್ತೊಂದು ಹೆಸರು ದಾಮೋದರೆಂಬುದು ಕೆಲವರ ಅಭಿಪ್ರಾಯವಾದರೆ, ಮತ್ತೆ ಕೆಲವರು ದಾಮೋದರ-ಭಾರವಿ ಬೇರೆಬೇರೆ ಎನ್ನುತ್ತಾರೆ.
ಪರಿಚಯ
[ಬದಲಾಯಿಸಿ]ಭಾರವಿಯ ಹುಟ್ಟು ಹೆಸರು ದಾಮೋದರ. ಈತನ ತಂದೆ ನಾರಾಯಣಸ್ವಾಮೀ. ಈತ ಚಾಲುಕ್ಯರಾಜನಾದ ವಿಷ್ಣುವರ್ಧನನ ಮಿತ್ರನಾಗಿದ್ದನು. ಇವನು ಗಂಗರಾಜನಾದ ದುರ್ವಿನೀತನ ಹಾಗೂ ಪಲ್ಲವರಾಜನಾದ ಸಿಂಹವಿಷ್ಣುವಿನ ಆಸ್ಥಾನದಲ್ಲಿ ದೆಲವು ಕಾಲ ಇದ್ದಂತೆ ತಿಳಿದುಬರುತ್ತದೆ. ಕ್ರಿ.ಶ.ಆರನೇ ಶತಮಾನದಲ್ಲಿ ಭಾರವಿ ಬದುಕಿದ್ದನು. ಕಿರಾತಾರ್ಜುನೀಯಂ ಭಾರವಿಯ ಪ್ರಸಿದ್ಧ ಕೃತಿ. ಮಹಾಭಾರತದಲ್ಲಿ ಬರುವ ಕಥಾಪ್ರಸಂಗವನ್ನೇ ಆಧರಿಸಿ ಭಾರವಿ ಈ ಮಹಾಕಾವ್ಯವನ್ನು ರಚಿಸಿದ್ದಾನೆ. ಭಾರವಿ ಶೈವನಾಗಿದ್ದನು. ಭಾರವಿ ಎಂಬ ಹೆಸರು ಐಹೊಳೆ ಶಿಲಾಶಾಸನದಲ್ಲಿ ಹೀಗೆ ದೊರಕುತ್ತದೆ: "ಯೇನಾಯೋಜಿ ನ ವೇಶ್ಮ ಸ್ಥಿರಮರ್ಥವಿಧೌ ವಿವೇಕಿನಾ ಜಿನವೇಶ್ಮ |" "ಸ ವಿಜಯತಾಂ ರವಿಕೀರ್ತಿಃ ಕವಿತಾಶ್ರಿತಕಾಲಿದಾಸಭಾರವಿಕೀರ್ತಿಃ ||" ಇದು ಪಲಕೇಶಿ ದುರ್ವಿನೀತನ ಕ್ರಿ.ಶ.೬೩೪ ರ ಶಾಸನ. ಆದ್ದರಿಂದ ಭಾರವಿ ಇದಕ್ಕಿಂತಲೂ ಹಿಂದಿನವನು ಎನ್ನಬಹುದು. ಆದರೆ 'ಕಾಶಿಕಾವೃತ್ತಿ' ಯಲ್ಲಿ ಭಾರವಿಯ ಕಾವ್ಯವನ್ನು ಉದಾಹರಿಸಲಾಗಿದೆ. ತನ್ನ ಹರ್ಷಚರಿತೆಯಲ್ಲಿ ಬಾಣನೂ ಭಾರವಿಯ ಹೆಸರನ್ನು ಉಲ್ಲೇಖಿಸಿರುವುದರಿಂದ ಬಾಣನ ಕಾಲದವರೆಗೂ ಭಾರವಿಯ ಕೀರ್ತಿ ಉಳಿದಿತ್ತೆಂದು ತರ್ಕಿಸಬಹುದು. ಆದ್ದರಿಂದ ಭಾರವಿಯ ಕಾಲ ಕ್ರಿ.ಶ. ಆರನೇ ಶತಮಾನವೆಂದು ತಿಳಿಯಬಹುದು.
ಕಿರಾತಾರ್ಜುನೀಯಮ್:
[ಬದಲಾಯಿಸಿ]ಭಾರವಿಯ ಕಿರಾತಾರ್ಜುನೀಯವು ಶಿವ ಮತ್ತು ಅರ್ಜುನರ ಯುದ್ಧವನ್ನು ವಸ್ತುವಾಗಿ ಹೊಂದಿದೆ. ಈ ಕಿರಾತಾರ್ಜುನೀಯ ಮಾತ್ರ ಭಾರವಿಯ ಕೃತಿಯಾಗಿ ಇಂದು ಲಭ್ಯವಿದೆ. ಈ ಮಹಾಕಾವ್ಯದಲ್ಲಿ ಹದಿನೆಂಟು ಸರ್ಗಗಳಲ್ಲಿ ಮಹಾಭಾರತದ ಉಪಾಖ್ಯಾನವನ್ನು ಚಿತ್ರಿಸಲಾಗಿದೆ. ಜೂಜಿನಲ್ಲಿ ಸೋತ ಧರ್ಮರಾಜ ಸಹೋದರರು ಮತ್ತು ಹೆಂಡತಿಯ ಜೊತೆ ದ್ವೈತವನದಲ್ಲಿ ವಾಸಿಸುತ್ತಿದ್ದನು. ಆಗ ದುರ್ಯೋಧನನ ರಾಜ್ಯಭಾರದ ರೀತಿಯನ್ನು ತಿಳಿಯಲು ವನಚರನೊಬ್ಬನನ್ನು ಗುಪ್ತಚರನನ್ನಾಗಿ ಕಳುಹಿಸಿದನು. ಆತ ರಾಜ್ಯದೆಲ್ಲೆಡೆ ಸಂಚರಿಸಿ ದುರ್ಯೋಧನನ ರಾಜ್ಯಭಾರ ನೀತಿಯುಕ್ತವಾಗಿರುವುದನ್ನು ತಿಳಿಸಿದನು. ಭೀಮ ಮತ್ತು ದ್ರೌಪದಿ ಯುದ್ಧಕ್ಕಾಗಿ ಧರ್ಮರಾಜನನ್ನು ಸಾಕಷ್ಟು ಪ್ರೇರೇಪಿಸಿದರೂ ಪ್ರತಿಜ್ಞೆಗೆ ಕಟ್ಟುಬಿದ್ದ ಅವನು ಸಿದ್ಧನಾಗಲಿಲ್ಲ. ಈ ಮಧ್ಯೆ ಅಲ್ಲಿಗೆ ಬಂದ ವೇದವ್ಯಾಸರು ಪಾಶುಪತಾಸ್ತ್ರವನ್ನು ಪಡೆಯಲೋಸ್ಕರ ತಪಸ್ಸು ಮಾಡಲು ಇಂದ್ರಕೀಲ ಪರ್ವತಕ್ಕೆ ಕಳುಹಿಸಿದರು. ನಿಶ್ಚಲ ಮನಸ್ಸಿನ ಅರ್ಜುನನ ತಪಸ್ಸನ್ನು ಕೆಡಿಸಲು ಬಂದ ದೇವನಾರಿಯರ ಪ್ರಯತ್ನ ವಿಫಲವಾಯಿತು. ಸ್ವತಃ ಇಂದ್ರನೇ ಅರ್ಜುನನ ಆಶ್ರಮಕ್ಕೆ ಬಂದು ಅವನನ್ನು ಪ್ರೋತ್ಸಾಹಿಸಿದನು. ಅರ್ಜುನನನ್ನು ಪರೀಕ್ಷಿಸಲು ಶಿವ ಕಿರಾತವೇಷವನ್ನು ಧರಿಸಿ ಬಂದನು. ಮಾಯಾವಿಯಾದ ವರಾಹ ಅರ್ಜುನನ ಆಶ್ರಮದ ಬಳಿ ಕಾಣಿಸಿಕೊಂಡಿತು. ಅರ್ಜುನ ಮತ್ತು ಕಿರಾತರಿಬ್ಬರೂ ಒಟ್ಟಿಗೇ ಹಂದಿಗೆ ಬಾಣವನ್ನು ಹೊಡೆದರು. ಇದೇ ಯುದ್ಧಕ್ಕೆ ಕಾರಣವಾಯಿತು. ಯುದ್ಧದಲ್ಲಿ ತನ್ನೆಲ್ಲಾ ಆಯುಧಗಳನ್ನೂ ಕಳೆದುಕೊಂಡ ಅರ್ಜುನನು ಬಾಹುಯುದ್ಧದಲ್ಲಿ ಕೂಡ ಸೋತುಹೋದನು. ಅನಂತರ ಅರ್ಜುನನ ಪರಾಕ್ರಮದಿಂದ ಸಂತುಷ್ಟನಾದ ಶಿವ ಅವನಿಗೆ ಪಾಶುಪತಾಸ್ತ್ರವನ್ನು ಕೊಟ್ಟನು.
ಭಾರವಿಯ ಕಾವ್ಯಶೈಲೀ
[ಬದಲಾಯಿಸಿ]ಭಾರವಿಯ ಅರ್ಥಗೌರವವು ಪ್ರಸಿದ್ಧವಾದದ್ದು. ಆದ್ದರಿಂದಲೇ ಮಲ್ಲಿನಾಥನು ತನ್ನ ಟೀಕೆಯ ಪ್ರಾರಂಭದಲ್ಲಿ -ಭಾರವಿಯ ಮಾತು ನಾರಿಕೇಲಫಲವನ್ನು ಹೋಲುತ್ತದೆ - ಎನ್ನುತ್ತಾನೆ. ತುಂಬ ಅರ್ಥರಾಶಿಯನ್ನು ಸ್ವಲ್ಪ ಶಬ್ದಗಳಿಂದಲೇ ಹೇಳುವ ಕಲೆ ಭಾರವಿಯದೆಂದು ಎಲ್ಲಾ ವಿದ್ವಾಂಸರ ಅಭಿಪ್ರಾಯ. ವಿಶಿಷ್ಟವಾದ ಅರ್ಥವನ್ನು ತನ್ನೊಳಗೆ ಹುದುಗಿಸಿಕೊಂಡ ವಾಕ್ಯಗಳನ್ನು ರಚಿಸುವಲ್ಲಿ ಭಾರವಿ ನಿಪುಣನಾಗಿದ್ದಾನೆ. 'हितं मनोहारि च दुर्लभं वचः' सहसा विदधीत न क्रियाम' ಮೊದಲಾದ ಮಾತುಗಳು ಈ ಅಭಿಪ್ರಾಯಕ್ಕೆ ಪುಷ್ಟಿನೀಡುತ್ತದೆ. भारवेरर्थगौरवम ಎಂಬ ಉಕ್ತಿ ಪ್ರಸಿದ್ಧವಾಗಿದೆ. ಒಂದೇ ಮಹಾಕಾವ್ಯವನ್ನು ರಚಿಸಿದರೂ ತನ್ನ ಕವಿತ್ವದಿಂದ, ಪಾಂಡಿತ್ಯದಿಂದ, ವರ್ಣನಾಕೌಶಲದಿಂದ ಕಾವ್ಯಪ್ರಪಂಚದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾನೆ.