ವಿಷಯಕ್ಕೆ ಹೋಗು

ಸುಶ್ರುತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸುಶ್ರುತ ಇಂದ ಪುನರ್ನಿರ್ದೇಶಿತ)
ಸುಶ್ರುತನ ಒಂದು ರೇಖಾಚಿತ್ರ

ಸುಶ್ರುತಾಚಾರ್ಯರು ಪ್ರಾಚೀನ ಭಾರತದ ಆಯುರ್ವೇದ ವೈದ್ಯರು, ಶಸ್ತ್ರವೈದ್ಯ ನಿಪುಣರು. ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು ಊಹಿಸಬಹುದಾಗಿದೆ. ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದರಲ್ಲೇ ತಮ್ಮ ಅಮೋಘ ಕಾಣಿಕೆಯನ್ನು ಇತ್ತವರು. ಅವರು ಬರೆದ ಸುಶ್ರುತ ಸಂಹಿತಾ, ವೈದ್ಯ ನೆರವಿನ ಬಹು ಉಪಯುಕ್ತವಾದ, ಆರೋಗ್ಯ ಸಂಬಂಧದ ವಿಚಾರಗಳಿಗೆ ಸಲಹೆ, ಪರಿಹಾರ ನೀಡುವ ಒಂದು 'ಖಣಿ' ಎಂಬುದು ಆ ಪುಸ್ತಕವನ್ನು ಓದಿದವರೆಲ್ಲರ ಅಭಿಪ್ರಾಯ.[]

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ವಿಶ್ವಾಮಿತ್ರನೆಂಬ ಋಷಿಯೋ ಅಥವಾ ರಾಜನೋ, ಗಾಂಧಾರ ದೇಶದಲ್ಲಿ ವಾಸಿಸುತ್ತಿದ್ದ ಅತ್ಯಂತ ಜನಪ್ರಿಯ ವ್ಯಕ್ತಿಯ ಮಗನೆಂದು ಗ್ರಂಥಗಳಿಂದ ತಿಳಿದುಬರುವ ವಿಚಾರ.[] ಸುಶ್ರುತ ಎಂಬ ಪದದ ಹತ್ತಿರವಾಗಿ ಅನೇಕ ಹೆಸರುಗಳನ್ನು ಈಗಿನ ಆಫ್ಘಾನಿಸ್ಥಾನದಲ್ಲಿ ನಾವು ಪತ್ತೆಹಚ್ಚಬಹುದು. ಅಲ್ಲಿನ ಬುಡಕಟ್ಟಿನ ಅನೇಕ ಜನರ ಹೆಸರು, ಸುಶ್ರುತ್, ಸುರಾಟ್, ಸೌರುಟಿ, ಸುಹ್ರಾದಿ, ಇತ್ಯಾದಿಗಳಿವೆ. ಬಹುಶಃ ಈ ನಾಮಧೇಯಗಳು, 'ಸುಶ್ರುತ ನಾಮ'ದ ಬೇರೆಬೇರೆ ರೂಪಗಳೆಂದು ಕೆಲವು ವಿದ್ವಾಂಸರ ಅಂಬೋಣ.

ಸುಶ್ರುತರ ವ್ಯಕ್ತಿತ್ವ

[ಬದಲಾಯಿಸಿ]

ಸುಶ್ರುತಾಚಾರ್ಯರು ಒಳ್ಳೆಯ ಆಜಾನುಬಾಹು. ಉದ್ದ ಕಿವಿಗಳು, ತೆಳುವಾದ ನಾಲಗೆ, ಸಮರ್ಪಕವಾದ ತುಟಿ, ಹೊಳೆಯುವ ದಂತಪಂಕ್ತಿಗಳು, ಮುಖ, ತೆಜಃಪುಂಜವಾದ ಕಣ್ಣುಗಳು, ಸುಂದರವಾದ ನಾಸಿಕ, ನೋಡಿದ ಕೂಡಲೆ ಗೌರವ, ಸಂತೋಷ ನೀಡುವ ಒಟ್ಟಾರೆ ವ್ಯಕ್ತಿತ್ವ. ಅದಕ್ಕೆ ಪೂರಕವಾದ, ಮೃದು ಮಾತು, ಕಷ್ಟಸಹಿಷ್ಣುತೆ, ಕೆಲಸದಲ್ಲಿ ಉತ್ಸಾಹ, ಮಾತಿನಲ್ಲಿ ವಿನಯ, ಅಸಾಧಾರಣವಾದ ಜ್ಞಾಪಕಶಕ್ತಿ ಎದ್ದು ಕಾಣುತ್ತಿತ್ತು.

ಭಗವಾನ್ ದಿವೋದಾಸರು ಸುಶ್ರುತರ ಗುರುಗಳು

[ಬದಲಾಯಿಸಿ]

ಆಯುರ್ವೇದ, ಶಲ್ಯ, ಶಾಲಾಕ್ಯ-ಚಿಕಿತ್ಸೆಗಳಲ್ಲಿ ಶಿಕ್ಷಣ ಪಡೆಯಲು ಬೇರೆಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಅವರ ಬಳಿಗೆ ಬರುತ್ತಿದ್ದರು. ಅವರಲ್ಲಿ 'ಔಷಧಸೇನವ', 'ಔತರಣ', 'ಔರಭ್ಯ', 'ಪೌಷ್ಕಲಾವತ', 'ಕರವೀರ', ಮತ್ತು 'ಗೋಪುರರಕ್ಷಕ' ರಿದ್ದರು. ಅವರೆಲ್ಲಾ ಸುಶ್ರುತರ ಸಹಪಾಠಿಗಳು. ಕರುಣಾಳು ದಿವೋದ್ಯಾಸರು, ಶಕರಾನ ವಂಶಸ್ಥರು. ಅಬ್ಜದೇವತೆಯ ವರಪ್ರಸಾದದಿಂದ ಕಾಶೀರಾಜನ ಪರಂಪರೆಯಲ್ಲಿ ಜನ್ಮ ತಾಳಿದ ವಿಚಾರಧಾರೆಗಳನ್ನು ಮಂಡಿಸಿದ್ದಾರೆ. "ಮುದಿತನ, ರೋಗರುಜಿನ, ಮರಣಗಳನ್ನು ನಿವಾರಿಸಿದ ಧನ್ವಂತರಿಯಾದ ನಾನು 'ಶಲ್ಯ ಚಿಕಿತ್ಸೆ', ಪ್ರಧಾನವಾದ ಸಿದ್ಧಾಂತಗಳನ್ನೂ, ಪರಿಕರಗಳನ್ನೂ, ಹಾಗೂ ವಿಶೇಷ ಮಾಹಿತಿಗಳನ್ನು ಉಪದೇಶಕೊಡಲು, ಪುನಃ ಕಾಶೀರಾಜನ ಮಗನಾಗಿ ಜನಿಸಿ, ಈ ಲೋಕಕ್ಕೆ ಬಂದಿದ್ದೇನೆ," ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ.[]

ಸುಶ್ರುತ ಸಂಹಿತಾ

[ಬದಲಾಯಿಸಿ]

ಪ್ರಕೃತ ಉಪಲಬ್ಧವಿರುವ ಸುಶ್ರುತ ಸಂಹಿತೆ ಬೌದ್ಧಭಿಕ್ಷು ನಾಗಾರ್ಜುನನಿಂದ ಕ್ರಿ.ಶ 2ನೆಯ ಶತಮಾನದಲ್ಲಿ ಪ್ರತಿಸಂಸ್ಕರಿಸಲ್ಪಟ್ಟುದೆಂದು ವಿದ್ವಾಂಸರ ಮತ.[] ಮೂಲಸಂಹಿತೆ 5 ಸ್ಥಾನಗಳಿಂದ ಕೂಡಿದ್ದು ಶಸ್ತ್ರಚಿಕಿತ್ಸಾ ವಿಷಯಗಳನ್ನು ಒಳಗೊಂಡಿದೆ.[] ನೇತ್ರ, ಕರ್ಣ, ನಾಸಾ ಮತ್ತು ಕಾಯರೋಗಗಳ ನಿದಾನ ಹಾಗೂ ಚಿಕಿತ್ಸೆ ತಿಳಿಸುವ ಉತ್ತರತಂತ್ರವನ್ನು ತರುವಾಯದ ಗ್ರಂಥಕರ್ತೃವೊಬ್ಬ ಸೇರಿಸಿರಬಹುದಾಗಿ ತಿಳಿದುಬರುತ್ತದೆ. []ನಾಗಾರ್ಜುನರು ಸುಶ್ರುತರನ್ನು ತನ್ನ ಪರಮಪೂಜ್ಯ ಆಚಾರ್ಯರೆಂದು ಗೌರವಿಸಿ ನಮಿಸಿದ್ದಾರೆ. 'ಬೋಟಾಂಗಿನಿ'ಯಲ್ಲಿ ಸಿಕ್ಕ ತಾಳೆಗರಿಯ ಸಂಗ್ರಹಗಳಿಂದ ತಯಾರಿಸಲ್ಪಟ್ಟ ಔಷಧಿಗಳ ಹೆಸರು, ಹಾಗೂ ವಿವರಗಳನ್ನು ಕಂಡುಕೊಳ್ಳಬಹುದು. ಸಂಹಿತೆಯನ್ನು ಅರಬ್ಬಿ, ಲ್ಯಾಟಿನ್, ಇಂಗ್ಲೀಷ್, ಫ್ರೆಂಚ್ ಭಾಷೆಗಳಲ್ಲಿ ತರ್ಜುಮೆ ಮಾಡಿದ್ದಾರೆ. ವಿಜ್ಞಾನಿಗಳ ಮಾನ್ಯತೆ ಪಡೆದಿದೆ. ಆಧುನಿಕ ಶಸ್ತ್ರಚಿಕಿತ್ಸಕರಿಗೂ ಮಾರ್ಗದರ್ಶಿಯಾಗಿದೆ. ಔಷಧಿ ಸೇವನೆ ಮುಂತಾದ ವಿವರಗಳು ಇದ್ದ ಗ್ರಂಥಗಳು ಕ್ರಮೆಣ ಕಾಲಗರ್ಭದಲ್ಲಿ ಕಳೆದುಹೋದವು. ಇದು ಮಾತ್ರ ಇಂದಿಗೂ ಲಭ್ಯವಾಗಿರುವುದು ಸುಕೃತ. ೫,೦೦೦ ವರ್ಷಗಳ ಹಿಂದಿನ ಭಾರತದಲ್ಲಿ ಉತ್ತಮ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಪ್ರಾಜ್ಞತೆ ಇತ್ತು.

ಪ್ರತಿ ಸಂಸ್ಕಾರದ ವೇಳೆ ಗ್ರಂಥ ಏನೇ ಬದಲಾವಣೆ ಹೊಂದಿದ್ದರೂ ಇದು ಶಸ್ತ್ರಚಿಕಿತ್ಸಾ ವಿಧಾನ ತಿಳಿಸುವ ಉತ್ಕೃಷ್ಟ ಗ್ರಂಥವಾಗಿ ಉಳಿದಿದೆ. ಯಂತ್ರ ಶಸ್ತ್ರಗಳ ವರ್ಣನೆ, ಶಸ್ತ್ರಚಿಕಿತ್ಸೆಯ ವಿವರ, ಪಶ್ಚಾತ್ಕರ್ಮ ಮತ್ತು ತತ್ಸಂಬಂಧಿಯಾದ ಇತರ ಅಧ್ಯಾಯಗಳು ವಿಶದವಾಗಿ ವಿವರಿಸಲ್ಪಟ್ಟಿವೆ.

ಚರಕ ಸಂಹಿತೆಯ ಭೌಗೋಳಿಕ ಕ್ಷೇತ್ರ ಮುಖ್ಯವಾಗಿ ಭಾರತದ ವಾಯವ್ಯ ಪ್ರಾಂತ ಮಾತ್ರ. ಸುಶ್ರುತನಿಗೆ ಇಡೀ ಭಾರತದ ಪರಿಚಯವಿದ್ದುದು ಆತನ ಕೃತಿಯಿಂದಲೇ ವೇದ್ಯವಾಗುತ್ತದೆ. ಈ ಕೃತಿಯಲ್ಲಿ ಪೂರ್ವದಲ್ಲಿ ಕಳಿಂಗ ದೇಶದ ಉಲ್ಲೇಖವೂ ಉತ್ತರದಲ್ಲಿ ಕಾಶ್ಮೀರ ಮತ್ತು ಉತ್ತರ ಕುರುಪ್ರಾಂತಗಳ ಉಲ್ಲೇಖವೂ ಬರುತ್ತವೆ. ಹಿಮಾಲಯ, ಸಹ್ಯಾದ್ರಿ, ಮಹೇಂದ್ರಪರ್ವತ, ಮಲಯಾಚಲ, ಶ್ರೀಪರ್ವತ, ದೇವಗಿರಿ, ಸಿಂಧೂನದಿ ಮೊದಲಾದವೂ ಉಲ್ಲೇಖಗೊಂಡಿವೆ. ಚರಕ ಸಂಹಿತೆಯಲ್ಲಿ ಇಷ್ಟು ವಿಸ್ತೃತ ಭೂಗೋಳದ ಪರಿಚಯವಿಲ್ಲ.

ಶ್ರೀಪರ್ವತ, ಸಹ್ಯಾದ್ರಿ, ದೇವಗಿರಿ, ಮಲಯಾಚಲ ಮೊದಲಾದವನ್ನು ಸುಶ್ರುತ ವಿಶೇಷವಾಗಿ ಹೇಳಿದ್ದಾನೆ. ದಕ್ಷಿಣಪಥವೆಂಬ ಹೆಸರೂ ಕಂಡುಬರುತ್ತದೆ. ಈತ ದಕ್ಷಿಣ ಭಾರತದ ಅನೇಕ ಶಬ್ದಗಳನ್ನು ಬಳಸಿದ್ದಾನೆ. ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ತುವರಕವನ್ನು ವಿವರಿಸಿದ್ದಾನೆ.

ಸುಶ್ರುತ ಸಂಹಿತೆಯಲ್ಲಿ 120 ಅಧ್ಯಾಯಗಳಿವೆ (ಉತ್ತರತಂತ್ರ ಹೊರತಾಗಿ).[] ಈ ಸಂಖ್ಯೆ ಮನುಷ್ಯನ ಆಯುರ್ಮಾನ ಸೂಚಕವಾಗಿದೆ. ಸೂತ್ರ ಸ್ಥಾನದಲ್ಲಿ 46, ನಿದಾನ ಸ್ಥಾನದಲ್ಲಿ 16, ಶಾರೀರ ಸ್ಥಾನದಲ್ಲಿ 10, ಚಿಕಿತ್ಸಾ ಸ್ಥಾನದಲ್ಲಿ 40, ಕಲ್ಪದಲ್ಲಿ 8 ಮತ್ತು ಉತ್ತರ ಸ್ಥಾನದಲ್ಲಿ 66. ಪ್ರಮುಖ ಶಲ್ಯ ತಂತ್ರ ವಿಷಯಗಳು ಮೊದಲ 5 ಸ್ಥಾನಗಳಲ್ಲಿ ವಿವರಿಸಲ್ಪಟ್ಟಿವೆ. ಸುಶ್ರುತನ ಕಾಲದ ಅಧ್ಯಯನ ಉಪನಿಷತ್ತುಗಳಲ್ಲಿದ್ದಂತೆ ‘ಅಂತೇ ವಾಸೀ’ ರೂಪದ್ದಾಗಿತ್ತು. ತರಬೇತಿಯಲ್ಲಿ ಉಪನ್ಯಾಸ, ಪ್ರತ್ಯಕ್ಷ ಮತ್ತು ಪ್ರಾಯೋಗಿಕ ವಿಧಾನಗಳಿಗೆ ಮಹತ್ತ್ವ ಕೊಟ್ಟಿರುವುದು ಈತನ ವೈಶಿಷ್ಟ್ಯವೆಂದು ಹೇಳಬಹುದು. ಈತ ಸಾಂಖ್ಯದ 25 ತತ್ತ್ವಗಳನ್ನು ಅಂಗೀಕರಿಸಿದ್ದರೂ ಕೆಲವು ವ್ಯತ್ಯಾಸಗಳನ್ನೂ ಇದರಲ್ಲಿ ಮಾಡಿಕೊಂಡಿದ್ದಾನೆ.[][][೧೦] ಈತನ ಪ್ರಕಾರ ಇಂದ್ರಿಯಗಳು ಪಂಚ ಭೌತಿಕಗಳು. ಸಾಂಖ್ಯದಲ್ಲಿ ಇಂದ್ರಿಯಗಳು ಅಹಂಕಾರ ತತ್ತ್ವಜನ್ಯಗಳು. ಈತನ ಕಾಲದಲ್ಲಿ ಸೃಷ್ಟಿಯ ಉತ್ಪತ್ತಿ, ಲಯಕ್ಕೆ ಸಂಬಂಧಿಸಿದಂತೆ ವಿವಿಧ ವಾದಗಳು ಪ್ರಚಲಿತವಿದ್ದು ವೈದ್ಯಶಾಸ್ತ್ರದಲ್ಲಿ ಈ ಎಲ್ಲ ವಾದಗಳನ್ನು ಮಾನ್ಯ ಮಾಡಿರುವುದು ‘ಸ್ವಭಾವಂ ಈಶ್ವರಂ ಕಾಲಂ ಯದೃಚ್ಛಾಂ ನಿಯತಿಂ ತಥಾ| ಪರಿಣಾಮಂ ಚ ಮಾನ್ಯಂತೇ ಪ್ರಕೃತಿಂ ಪೃಥುದರ್ಶಿನಃ'|| (ವೈದ್ಯಕೇತು) ಎಂಬುದರಿಂದ ವ್ಯಕ್ತವಾಗುತ್ತದೆ.

ಶಲ್ಯ ತಂತ್ರ, ಶಾಲಾಕ್ಯ ಪದ್ಧತಿಗಳಿಂದ, ವ್ರಣಗಳ ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿ

[ಬದಲಾಯಿಸಿ]

ಶಲ್ಯ ತಂತ್ರವೆಂದರೆ, ಕಂಠದ ಕೆಳಗಿರುವ ದೇಹದ ಭಾಗದಲ್ಲಿ, ಉತ್ಪನ್ನವಾದ ವ್ರಣಗಳ ಚಿಕಿತ್ಸಾಕ್ರಮ. ಶಾಲಾಕ್ಯ ಪದ್ಧತಿಯಲ್ಲಿ, ಕತ್ತಿನ ಬುಡದಿಂದ ಕಿವಿ, ಮೂಗು, ಕಣ್ಣು, ಬಾಯಿ, ಮುಂತಾದ ಅವಯವಗಳಲ್ಲಿ ಉತ್ಪನ್ನವಾದ ವ್ರಣವನ್ನು ನಿವಾರಣೆ ಮಾಡಲಾಗುತ್ತಿತ್ತು. ಕಾಲದಲ್ಲಿ ಒಟ್ಟು ೧೦೧ ಯಂತ್ರಗಳು, ಉಪಯೋಗದಲ್ಲಿ ಶರೀರದಲ್ಲಿನ ಶಲ್ಯಗಳನ್ನು ಹೊರಗೆ ತೆಗೆಯಲು ಪಶುಪಕ್ಷಿ ಮುಖಾಕಾರವಾಗಿರುವ ತುಕ್ಕು ಹಿಡಿಯದಂತಹ ಸುವರ್ಣಾದಿ ಪಂಚಲೋಹಗಳಿಂದ ನಿರ್ಮಾಣವಾದ ಯಂತ್ರಗಳಿದ್ದವು. ಆಚಾರ್ಯ ಸುಶ್ರುತರು 'ಪುನರ್ ನಾಸಾಂಗ ರಚನೆ', 'ಅಂಗೋಸ್ಥಿ', 'ವಿಚ್ಛೇದನ', 'ಗುಲ್ಮೋನ್ಮೂಲನ', ಗರ್ಭಾಶಯದಿಂದ ಮೃತಗರ್ಭದ ಶಿಶುವನ್ನು ಚಿರಂತನವಾಗಿ ಹೊರಗೆ ತೆಗೆಯುವುದು, ಮೂತ್ರಾಶಯದಲ್ಲಿ ಅಶ್ಮರಿ, ಭಗಂಧರ, ರಕ್ತಾರ್ಶಸ್, ಅಂತ್ರವೃದ್ಧಿ ಮುಂತಾದ ರೋಗಗಳ ಮೇಲೆ ನಡೆಸಿದ ಪ್ರಯೋಗ ಮತ್ತು ಶಸ್ತ್ರಚಿಕಿತ್ಸೆಗಳನ್ನು ಓದಿ ಅಭ್ಯಸಿಸಿದ ಇಂದಿನ ಪಾಶ್ಚಾತ್ಯಶಾಸ್ತ್ರಜ್ಞರು ಹೊಗಳಿದ್ದಾರೆ. 'ಪುನರ್ನಾಸಾಂಗ ರಚನೆ' ಎಂದರೆ ವಿಕಾರವಾದ ಮನುಷ್ಯನ ಅಂಗಾಂಗಗಳನ್ನು ತಿದ್ದಿ ಮೊದಲಿನ ರೂಪಕ್ಕೆ ತರುವ ಪರಿಕ್ರಮ. ಉದಾಹರಣೆಗಾಗಿ, ಆಕಾರಕೆಟ್ಟ ಮೂಗಿನ ಆಕಾರವನ್ನು ತಿದ್ದುವುದು.[೧೧] 'ಅಂಗೋಸ್ಥಿ', 'ವಿಚ್ಛೇದನ' ಎಂದರೆ ಮೂಳೆಗಳು ಮತ್ತು ಅಂಗಾಂಗಗಳನ್ನು ಕತ್ತರಿಸಿ ತೆಗೆಯುವುದು. 'ಗುಲ್ಮೋಸ್ತೂಲನ' ಎಂದರೆ ಗೆಡ್ಡೆಗಳನ್ನು ತೆಗೆಯುವುದು. ಭಗಂಧರ ತುಂಬಾ ನೋವನ್ನುಂಟು ಮಾಡುವ ಒಂದು ಕಾಯಿಲೆ. ರಕ್ತ ಹೊರಬೀಳುವ 'ರಕ್ತಾರ್ಶಸ್' ಮೂಲವ್ಯಾಧಿ ನೋವಿನ ಕಾಯಿಲೆ. ಅಂಗದ ಭಾಗ, ಯಾವುದಾದರೂ ಕಾರಣದಿಂದ ತನ್ನ ಸ್ಥಾನದಿಂದ ಆಚೆಗೆ ಚಾಚಿಕೊಂಡಿರುವುದು 'ಅಂತ್ರವೃದ್ಧಿ'. 'ಭೇಷಜಗ್ರಂಥ'ದಲ್ಲಿ ಸುವೈದ್ಯನು, 'ಭೇಷಜಕುಶಲ'ನಾಗಿ, ಮಿತ್ರನಾಗಿ, ಸುಶ್ರುತನಂತೆ ಸುಶಿಕ್ಷಿತನಾಗಿ ಇರಬೇಕೆಂದು ಹೊಗಳಿದ್ದಾನೆ. 'ಭೈಷಜವಿದ್ಯಯ ಪರಮಾಚಾರ್ಯ'ರೆಂದು ಹೆಸರಾಗಿದ್ದವರೆಂದು ಚೀನದ ವಿಜ್ಞಾನಿ, 'ತುಚ್ಛಿ'ಯವರು ತಮ್ಮ ಗ್ರಂಥವೊಂದರಲ್ಲಿ ತಿಳಿಸಿದ್ದಾರೆ. ಇದು ವಿಸ್ತಾರವಾಗಿದ್ದು ಅನೇಕ ವಿಷಯಗಳನ್ನು ಒಳಗೊಂಡಿದೆ. ಇಂದಿಗೂ ಔಷಧೋಪಚಾರಗಳ ಮಾಹಿತಿಯ ಬಗ್ಗೆ, ಶಲ್ಯಚಿಕಿತ್ಸೆಗಳ ಬಗ್ಗೆ, ಅತ್ಯುತ್ತಮ ವಿಚಾರಗಳನ್ನು ದಾಖಲಿಸಿರುವುದರಿಂದ ಮಾನ್ಯತೆಯನ್ನು ಪಡೆದಿದೆ.

ಶಲ್ಯತಂತ್ರಕ್ಕೆ ಕ್ರಿಯಾತ್ಮಕ ಜ್ಞಾನದೊಡನೆ ಹೆಚ್ಚು ಸಂಬಂಧ ಇರುವುದರಿಂದ ಕ್ರಿಯಾತ್ಮಕ ಜ್ಞಾನದ ಶಿಕ್ಷಣ ಕೊಡಲು ಯೋಗ್ಯಾಸೂತ್ರೀಯ ಅಧ್ಯಾಯ ಸುಶ್ರುತದಲ್ಲಿ ಹೇಳಲ್ಪಟ್ಟಿದೆ. ಇದರಲ್ಲಿ ಯಾವ ಕರ್ಮವನ್ನು ಯಾವ ವಸ್ತುವಿನ ಮೇಲೆ ಅಭ್ಯಾಸ ಮಾಡಬೇಕೆಂಬುದರ ವಿಶೇಷ ಉಲ್ಲೇಖವಿದೆ. ಹೇಗೆಂದರೆ ಕೂಷ್ಮಾಂಡ, ಸೌತೆ, ಕಲ್ಲಂಗಡಿಹಣ್ಣು ಮೊದಲಾದ ವಸ್ತುಗಳಲ್ಲಿ ಛೇದನಕರ್ಮದ ಅಭ್ಯಾಸ ಮಾಡಬೇಕು.[೧೨] ಊರ್ಧ್ವ ಛೇದನ, ಅಧೋ ಛೇದನಗಳನ್ನೂ ಇವೇ ವಸ್ತುಗಳ ಮೇಲೆ ಅಭ್ಯಾಸ ಮಾಡಬೇಕು. ಜಲ, ಕೆಸರನ್ನು ತುಂಬಿದ ಬಸ್ತಿ, ಚರ್ಮದ ಚೀಲಾದಿಗಳ ಮೇಲೆ ಭೇದನ ಕರ್ಮವನ್ನೂ, ರೋಮವುಳ್ಳ ತೊಗಲಿನ ಮೇಲೆ ಲೇಖನ ಕರ್ಮವನ್ನೂ, ಮೃತ ಪಶುಗಳ ಶಿರ ಹಾಗೂ ಕಮಲನಾಳದ ಮೇಲೆ ವ್ಯಧನ ಕರ್ಮವನ್ನೂ ಮಾಡಬೇಕು. ಕುಟ್ಟೆಹುಳು ತಿಂದಿರುವ ಮರದ ರಂಧ್ರದಲ್ಲಿ, ಒಣ ಸೋರೆಕಾಯಿ ಮುಖದಲ್ಲಿ ಏಷಣಕರ್ಮವನ್ನೂ, ಹಲಸು, ಬಿಂಬೀ, ಬಿಲ್ವಫಲಗಳ ಮಜ್ಜಾ ಮತ್ತು ಮೃತ ಪಶುಗಳ ದಂತಗಳ ಮೇಲೆ ಆಹಾರ್ಯ ಕರ್ಮವನ್ನೂ ಮಾಡಬೇಕು. ವಸ್ತ್ರದ ಎರಡು ಅಂಚುಗಳ ಮೇಲೆಯೂ ಕೋಮಲ ತ್ವಚೆಯ ಮೇಲೆಯೂ ಸೀವನ ಕಾರ್ಯದ ಅಭ್ಯಾಸ ಮಾಡಬೇಕು. ಮಣ್ಣು, ಮರಗಳಿಂದ ಮಾಡಿದ ಬೊಂಬೆಗಳ ಅಂಗ, ಪ್ರತ್ಯಂಗಗಳ ಮೇಲೆ ಬಂಧನಗಳ ಅಭ್ಯಾಸಮಾಡಬೇಕು. ಮೃದುಮಾಂಸದ ತುಂಡುಗಳ ಮೇಲೆ ಅಗ್ನಿ ಮತ್ತು ಕ್ಷೌರಕರ್ಮದ ಅಭ್ಯಾಸಮಾಡಬೇಕು.

ಶವಚ್ಛೇದನ

[ಬದಲಾಯಿಸಿ]

ಶವಚ್ಛೇದನ ವಿಧಾನದ ಬಗ್ಗೆ ದೊರೆಯುವ ವಿವರಣೆ ಅತಿ ಪ್ರಾಚೀನವಾದ್ದರಿಂದ ಸುಶ್ರುತನನ್ನು ಶರೀರರಚನಾಶಾಸ್ತ್ರದ ಪಿತಾಮಹನೆಂದು ಹೇಳಬಹುದು. ಚರ್ಮ ಮತ್ತು ಪದರ, ಮೂಳೆ ಮತ್ತು ಸಂಧಿ, ಮಾಂಸಪೇಶಿ ಮತ್ತು ರಕ್ತನಾಳ ಇವನ್ನು ವಿಸ್ತಾರವಾಗಿಯೂ ಸೂಕ್ಷ್ಮವಾಗಿಯೂ ವಿವರಿಸಿದ್ದಾನೆ.

ಶವಚ್ಛೇದನ ಅಭ್ಯಾಸದ ಉಪಾಯವನ್ನು ಹೀಗೆ ತಿಳಿಸಿದ್ದಾನೆ: ಶಲ್ಯಶಾಸ್ತ್ರದ ಸಂಪೂರ್ಣ ಜ್ಞಾನವನ್ನು ಸಂಶಯಾತೀತವಾಗಿ ತಿಳಿಯಲಿಚ್ಛಿಸುವ ವಿದ್ಯಾರ್ಥಿ ಮೃತಶರೀರ ಶೋಧಿಸಿ ಅಂಗಪ್ರತ್ಯಂಗಗಳ ನಿಶ್ಚಯಜ್ಞಾನ ಪಡೆಯುವುದು ಆವಶ್ಯಕ.[೧೩] ಶಾಸ್ತ್ರಜ್ಞಾನ ಮತ್ತು ಶಾಸ್ತ್ರೋಕ್ತ ವಿಷಯಗಳ ಪ್ರತ್ಯಕ್ಷ ಜ್ಞಾನ - ಹೀಗೆ ಎರಡೂ ರೀತಿಯಿಂದ ತಿಳಿಯುವುದು ಜ್ಞಾನವೃದ್ಧಿ ಕಾರಣ. ಆದ್ದರಿಂದ ಸಂಪೂರ್ಣ ಅಂಗವುಳ್ಳ ವಿಷದಿಂದ ಮೃತವಾಗಿರದ, ಜೀರ್ಣ ವ್ಯಾಧಿಯಿಂದ ಸತ್ತಿರದ 100 ವರ್ಷಕ್ಕಿಂತ ಕಡಮೆ ಆಯುಷ್ಯದ ವ್ಯಕ್ತಿಯ ಶವದಿಂದ ಅಂತ್ರ ಮತ್ತು ಮಲವನ್ನು ತೆಗೆದುಹಾಕಿ ಶರೀರವನ್ನು ದರ್ಭೆ, ಮರದ ತೊಗಟೆ, ಸೆಣಬು ಮೊದಲಾದವುಗಳಿಂದ ಸುತ್ತಿ ಏಕಾಂತ ಸ್ಥಳದಲ್ಲಿ ಪಂಜರದಲ್ಲಿ ಹರಿಯುವ ನದಿಯ ನೀರಿನಲ್ಲಿ ಮುಳುಗಿಸಿ ಶಿಥಿಲಗೊಳಿಸಬೇಕು. ಸಮ್ಯಕ್ ಮೃದು ಅಥವಾ ಶಿಥಿಲವಾದ ಅನಂತರ ಶವವನ್ನು ಹೊರತೆಗೆದು ಲಾಮಂಚ, ಕೇಶ, ಬಿದಿರುಗಳಿಂದ ಮಾಡಲ್ಪಟ್ಟ ಯಾವುದಾದರೂ ಒಂದರ ಕೂರ್ಚದಿಂದ ಏಳುದಿನ ಪರ್ಯಂತ ನಿಧಾನವಾಗಿ ಘರ್ಷಣೆ ಮಾಡುತ್ತ ತ್ವಚದಿಂದ ಪ್ರಾರಂಭಿಸಿ ಅಭ್ಯಂತರ ಹಾಗೂ ಬಾಹ್ಯದ ಪ್ರತ್ಯೇಕ ಅಂಗ ಪ್ರತ್ಯಂಗಗಳನ್ನು ನೋಡಿ ತಿಳಿಯಬೇಕು.

ವ್ರಣಿತಾಗಾರ

[ಬದಲಾಯಿಸಿ]

ರೋಗಿಗೆ ಸರ್ವ ಪ್ರಥಮ ವಸತಿಯೊಂದು ಅಗತ್ಯ. ಪೀಡಾರಹಿತ, ಪರ್ಯಾಪ್ತ ಉದ್ದ ಅಗಲ ಇರುವ ಸುಂದರ ದಿಂಬಿನಿಂದ ಕೂಡಿದ ಶಯ್ಯೆ ಇರಬೇಕು. ತಲೆಯ ಭಾಗ ಪೂರ್ವದ ಕಡೆಗೆ ಇರಬೇಕು. ಇದರ ಮೇಲೆ ಶಸ್ತ್ರವನ್ನಿಟ್ಟಿರಬೇಕು. ಶಯ್ಯೆಯ ಹತ್ತಿರ ರೋಗಿಯ ಮಿತ್ರರು ಹೊಸ ಹೊಸ ಹಾಗೂ ಮನೋಹರ ವಿಚಾರಗಳನ್ನು ಮಾತಾಡುತ್ತ ರೋಗಿಯ ವ್ರಣದ ತಾಪವನ್ನು ಕಡಿಮೆ ಮಾಡುತ್ತ ರೋಗಿಗೆ ಸಾಂತ್ವನ ನೀಡುತ್ತಿರಬೇಕು. ರೋಗಿಯ ಹತ್ತಿರ ಸ್ತ್ರೀಯರು (ಸ್ತ್ರೀ ಪರಿಚಾರಿಕೆಯರು) ಹೋಗುವುದನ್ನು ಸುಶ್ರುತದಲ್ಲಿ ನಿಷೇಧಿಸಲಾಗಿದೆ. ವಿಶೇಷವಾಗಿ ಗಮ್ಯ ಸ್ತ್ರೀಯರ ದರ್ಶನ, ಅವರೊಡನೆ ಮಾತು ಮತ್ತು ಅವರ ಸ್ಪರ್ಶವನ್ನು ಸರ್ವಥಾ ಬಿಡಬೇಕೆಂದು ಆದೇಶಿಸಿದೆ. ರೋಗಿಗೆ ಆಹಾರ ವಿಧಾನವನ್ನು ಹೇಳಿ ಅವನಿಗೆ ಆದಿದೈವಿಕ ಚಿಕಿತ್ಸೆಯನ್ನೂ ಹೇಳಿದೆ. ಇದು ಮನಸ್ಸು ಮತ್ತು ಶರೀರದ ಪಾವಿತ್ರ‍್ಯದೊಡನೆ ಸಂಬಂಧ ಹೊಂದಿರುತ್ತದೆ. ರೋಗಿ ನಖ, ಕೇಶಗಳನ್ನು ಕತ್ತರಿಸಿ ಶ್ವೇತವಸ್ತ್ರ ಧರಿಸಿರಬೇಕು. ಮನಸ್ಸು ಶಾಂತವಾಗಿದ್ದು ಮಂಗಳ, ದೇವತಾ, ಬ್ರಾಹ್ಮಣ ಮತ್ತು ಗುರುತತ್ಪರವಾಗಿರಬೇಕು. ಶುಚಿತ್ವ ಕ್ರಿಮಿ ಸಂಕ್ರಮಣವನ್ನು ತಡೆಯಲೂ ಮಂಗಳ ಮತ್ತು ದೇವತಾ ತತ್ಪರತೆ ಆತ್ಮಬಲವೃದ್ಧ್ಯರ್ಥವೂ ಆಗಿರುತ್ತವೆ.

ಸುಶ್ರುತ

ಅಂದು ಉಪಯೋಗಿಸುತ್ತಿದ್ದ ಯಂತ್ರಗಳು, ಶಸ್ತ್ರಗಳು

[ಬದಲಾಯಿಸಿ]

ತುಕ್ಕು ಹಿಡಿಯದಂತಹ, ಸುವರ್ಣಾದಿ ಪಂಚಲೋಹಗಳಿಂದ ನಿರ್ಮಾಣವಾದ ಯಂತ್ರಗಳು ಬಳಕೆಯಲ್ಲಿದ್ದವು. ಬಿದಿರು, ದಾರ, ಕೊಂಬು, ನರಗಳು, ಕಡೆಗೆ, ಹುಲ್ಲು (ದರ್ಭೆ) ಕತ್ತರಿಸುವುದಕ್ಕೆ, ಕೊಯ್ಯುವುದಕ್ಕೆ ೨೦ ಬಗೆಯ ಶಸ್ತ್ರಗಳ ಉಪಯೋಗವನ್ನು ಮಾಡುತ್ತಿದ್ದರು. ಉದಾಹರಣೆಗೆ, 'ಮಂಡಲಾಗ್ರ', 'ಕರಪತ್ರ', 'ವೃದ್ಧಿಪತ್ರ', 'ನಖಶಸ್ತ್ರ', 'ಮುದ್ರಿಕ', 'ಉತ್ಪಲಪತ್ರಿಕಾ', 'ಅರ್ಧಧರಾಸೂಚಿ', 'ಕಶಪತ್ರ', ಮುಂತಾದವುಗಳು.

ಶಸ್ತ್ರ ಕರ್ಮೋಪಯೋಗಿಯಾದ ಸಾಧನಗಳನ್ನು ಯಂತ್ರ, ಶಸ್ತ್ರ, ಕ್ಷಾರ, ಅಗ್ನಿ ಮತ್ತು ಜಲೌಕ ಎಂಬ ರೂಪಗಳಲ್ಲಿ 4 ಅಧ್ಯಾಯಗಳಲ್ಲಿ ವರ್ಣಿಸಿರುತ್ತಾರೆ. ಯಂತ್ರ ಮತ್ತು ಶಸ್ತ್ರಗಳನ್ನು ಉಪಯೋಗಕ್ಕೆ ಅನುಗುಣವಾಗಿ ರಚಿಸಿ ಅವುಗಳ ಆಕಾರಕ್ಕೆ ತಕ್ಕಂತೆ ಪ್ರಾಣಿ ಪಕ್ಷಿಗಳ ಹೆಸರನ್ನು ಕೊಟ್ಟಿರುವುದು ಕಂಡುಬರುತ್ತದೆ. ಈತ 101 ಯಂತ್ರಗಳನ್ನು ಹೇಳಿದ್ದು ಅವುಗಳ ಪೈಕಿ ಹಸ್ತವನ್ನು ಪ್ರಧಾನ ಯಂತ್ರವಾಗಿ ಪರಿಗಣಿಸಿದ್ದಾನೆ. ಮನಸ್ಸು ಮತ್ತು ಶರೀರದಲ್ಲಿ ಯಾವುದು ಕಷ್ಟ ಉಂಟುಮಾಡುತ್ತದೋ ಅದನ್ನು ಶಲ್ಯವೆಂದು ಕರೆದಿದ್ದಾನೆ. ಈತನ ಮತದಂತೆ ಶೋಕ ಮತ್ತು ಚಿಂತೆ ಕೂಡ ಶಲ್ಯವಾಗಿರುತ್ತವೆ. ಈ ಶಲ್ಯಗಳನ್ನು ನಿವಾರಿಸಲು ಯಂತ್ರಗಳಿವೆ.

ಸ್ವಸ್ತಿಕ, ಸಂದಂಶ, ಕಾಲ, ನಾಡೀಶಲಾಕಾ ಮತ್ತು ಉಪಯಂತ್ರ ಹೀಗೆ ಯಂತ್ರಗಳು 6 ಪ್ರಕಾರ. ಯಂತ್ರ ಕರ್ಮ 24 ವಿಧ. ಆದರೆ ಚಿಕಿತ್ಸಕ ತನ್ನ ಬುದ್ಧಿಕೌಶಲದಿಂದ ಹೊಸ ಕರ್ಮಗಳನ್ನು ಯೋಚಿಸಿಕೊಳ್ಳಲು ಅವಕಾಶ ಉಂಟು. ಯಂತ್ರಗಳಲ್ಲಿ ಅತಿಸ್ಥೂಲಾದಿ 12 ದೋಷಗಳಿರುತ್ತವೆ. ಶಸ್ತ್ರಗಳು 20. ಇವು ಸುಗ್ರಾಹ್ಯಾದಿ ಗುಣಗಳಿಂದ ಕೂಡಿರಬೇಕು. ಬೀಭತ್ಸ, ವಕ್ರಾದಿ ದೋಷರಹಿತವಾಗಿರಬೇಕು. ಶಸ್ತ್ರಧಾರೆ 4 ಪ್ರಕಾರವಾಗಿರುತ್ತದೆ. ಭೇದನ ಕರ್ಮೋಪಯೋಗಿ ಶಸ್ತ್ರಧಾರೆ ಮಸೂರ ಪತ್ರದಷ್ಟು ದಪ್ಪವೂ, ಲೇಖನ ಕರ್ಮೋಪಯೋಗಿ ಶಸ್ತ್ರಧಾರೆ ಅರೆಮಸೂರು ಪತ್ರದಷ್ಟು ದಪ್ಪವೂ, ಛೇದನ (ವ್ಯಧನ) ಮತ್ತು ವಿಸ್ರಾವಣ ಶಸ್ತ್ರಧಾರೆ ಕೂದಲಿನಷ್ಟು ದಪ್ಪವೂ, ಛೇದನ ಶಸ್ತ್ರಗಳ ಧಾರೆ ಅರ್ಧ ಕೂದಲಿನಷ್ಟು ದಪ್ಪವೂ ಇರಬೇಕು. ಈ ಶಸ್ತ್ರಗಳ ಪಾಯನ ಮೂರು ಪ್ರಕಾರವಾಗಿರುತ್ತದೆ: ಕ್ಷಾರ, ಜಲ ಮತ್ತು ತೈಲ ಪಾಯನ. ಶಸ್ತ್ರಗಳನ್ನು ಹರಿತಮಾಡಲು ಸ್ನಿಗ್ಧ ಶಿಲೆಯನ್ನು ಹೇಳಿರುತ್ತಾನೆ. ಇದು ಮಾಷದಂತೆ ಕೃಷ್ಣವರ್ಣವಿರುತ್ತದೆ. ಶಸ್ತ್ರಧಾರೆಯನ್ನು ಸುರಕ್ಷಿತವಾಗಿಡಲು ಕೋಶ ಕೂಡ ಹೇಳಲ್ಪಟ್ಟಿದೆ.

ಶಸ್ತ್ರದ ತೀಕ್ಷ್ಣತೆಯನ್ನು ತಿಳಿಯುವಿಕೆ

[ಬದಲಾಯಿಸಿ]

ಚೆನ್ನಾಗಿ ಹರಿತಗೊಳಿಸಿದ ಶಸ್ತ್ರ ರೋಮಗಳನ್ನು ಕತ್ತರಿಸುವಂತಿರಬೇಕು. ಇಂಥ ಶಸ್ತ್ರವನ್ನು ಉಚಿತ ರೂಪದಲ್ಲಿ ಗ್ರಹಣಮಾಡಿ ಶಸ್ತ್ರಕರ್ಮದಲ್ಲಿ ಬಳಸಬೇಕು. ಇವನ್ನು ಉತ್ತಮ ಲೋಹದಿಂದ ಮಾಡಿರಬೇಕು.

ಕ್ಷಾರವನ್ನು ತಯಾರಿಸುವುದು ಮತ್ತು ಹಚ್ಚುವುದು, ಅಗ್ನಿಕರ್ಮ ಮಾಡುವುದು, ಜಲೌಕಾವಚರಣ ಮತ್ತು ಜಲೌಕಗಳ ರಕ್ಷಣಾದಿ ವಿಷಯದಲ್ಲಿ ಪೂರ್ಣ ವಿವರಣೆ ಗ್ರಂಥದಲ್ಲಿ ಕೊಡಲ್ಪಟ್ಟಿದೆ. ಇದರ ಅನಂತರ ಕರ್ಣಬಂಧನದ ಉಲ್ಲೇಖವಿದೆ. ಈ ವಿಷಯ ಚಿಕಿತ್ಸಾಸ್ಥಾನದಲ್ಲೂ ಬಂದಿದೆ. ಆ ಕಾಲದಲ್ಲಿ ಕರ್ಣವ್ಯಧನ ಮತ್ತು ಕರ್ಣಪಾಲಿಯನ್ನು ದೊಡ್ಡದು ಮಾಡುವ ಪ್ರತೀತಿ ಹೆಚ್ಚಿದ್ದುದಾಗಿ ವ್ಯಕ್ತವಾಗುತ್ತದೆ. ಕರ್ಣಪಾಲಿಯನ್ನು ದೊಡ್ಡದು ಮಾಡಲು ಇದನ್ನು ವ್ಯಧನಮಾಡಿ ರಂಧ್ರದಲ್ಲಿ ವರ್ಧನಕ ಉಂಗುರಗಳನ್ನು ಧರಿಸುತ್ತಿದ್ದರು. ಈ ಉಂಗುರಗಳಿಂದ ಕೆಲವು ಸಾರಿ ಪಾಲಿ ಕತ್ತರಿಸಿ ಹೋಗುತ್ತಿತ್ತು. ಇದನ್ನು ಜೋಡಿಸಲು 15 ವಿಧವಾದ ಬಂಧನ ಹಾಗೂ ತೈಲಾದಿಗಳನ್ನು ಹೇಳಿದ್ದಾನೆ. ಕರ್ಣಪಾಲಿಯನ್ನು ದೊಡ್ಡದು ಮಾಡುವ ವಿಸ್ತೃತ ಉಲ್ಲೇಖ, ಇದರಲ್ಲಿ ಉಂಟಾಗುವ ಉಪದ್ರವ, ಇವುಗಳಿಗೆ ಪ್ರತೀಕಾರ (ಚಿಕಿತ್ಸೆ) ಸುಶ್ರುತದಲ್ಲಿ ಇರುವಷ್ಟು ವಿಸ್ತಾರವಾಗಿ ಸುಶ್ರುತ ಪೂರ್ವದ ಮತ್ತು ಅನಂತರದ ಸಂಹಿತೆಗಳಲ್ಲಿ ಇಲ್ಲ.

ಸುಶ್ರುತಾಚಾರ್ಯರ ಪ್ರಯೋಗಶಾಲೆ

[ಬದಲಾಯಿಸಿ]

ಸುಶ್ರುತರು ಮತ್ತು ಅವರ ಸಂಗಡಿಗರು, ತಾವು ಸೇರಿದ ದೇಶಗಳನ್ನೇ ಕಾರ್ಯ ಕ್ಷೇತ್ರವಾಗಿ ಆರಿಸಿಕೊಂಡರು. ಶಸ್ತ್ರಚಿಕಿತ್ಸಾಲಯಗಳು, ಸಿಂಧು ಪ್ರಾಂತ್ಯದ ತಕ್ಷಶಿಲ ಪರಿಸರದಲ್ಲಿತ್ತು. ತಮ್ಮ ಗ್ರಂಥ ಸುಶ್ರುತ ಸಂಹಿತಾದಲ್ಲಿ ಕೆಲವಾರು ಉದಾಹರಣೆಗಳನ್ನು ವಿವರಿಸಿದ್ದಾರೆ. ಅವರ ಬಳಿ ಇದ್ದ ಕೆಲವು ಶಿಷ್ಯರು ಉತ್ತರ ಭಾರತದ ರಾಜರ ಆಶ್ರಯಕ್ಕೆ ಹೋಗಿ ನೆಲಸಿ ಹಲವು ಗ್ರಂಥಗಳನ್ನು ರಚಿಸಿದರು. ರಾಜರು ತಮ್ಮ ಸೈನಿಕರ ಮತ್ತು ಪ್ರಜೆಗಳ ಆರೋಗ್ಯ ರಕ್ಷಣೆಗೆ ವೈದ್ಯರನ್ನು ನೇಮಕಮಾಡಿದರು.

ಶಸ್ತ್ರಚಿಕಿತ್ಸೆಗೆ ಮೊದಲು ಸಿದ್ಧಪಡಿಸಿಕೊಳ್ಳಬೇಕಾದ ವೈದ್ಯಕೀಯ ಉಪಕರಣಗಳು

[ಬದಲಾಯಿಸಿ]

ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ರೋಗಿಯ ಮನಃಸ್ಥಿತಿ, ಮತ್ತು ವೈದ್ಯರ ಮಾನಸಿಕ ಸ್ಥಿತಿ ಹೇಗಿರಬೇಕೆಂಬುದನ್ನು ತಿಳಿಸಿದ್ದಾರೆ. ವೈದ್ಯರು ಒಳ್ಳೆಯ ಭಾಷೆ ಮತ್ತು ಶಬ್ದಗಳ ಬಳಕೆಯನ್ನು ಮಾಡಬೇಕು. ಋತುಗಳು ಅನುಕೂಲಕರವಾಗಿರಬೇಕು. ನೆಲ ಸ್ವಚ್ಛವಾಗಿರಬೇಕು. ಶಸ್ತ್ರಚಿಕಿತ್ಸೆಗೆ ಬೇಕಾಗಬಹುದಾದ ಉಪಕರಣಗಳನ್ನು ಮೊದಲೇ ನಿರ್ಧರಿಸಿ ಹತ್ತಿರದಲ್ಲಿ ಸಿಕ್ಕುವಂತೆ ಇಟ್ಟುಕೊಂಡಿರಬೇಕು. ಯಂತ್ರ, ಶಸ್ತ್ರಗಳು, ಕ್ಷಾರ, ಅಗ್ಗಿಷ್ಟಿಕೆ, ಸಲಾಕೆಗಳು, ಶ್ರುಂಗಯಾತ್ರ, ಸೋರೆಬುರುಡೆ, ನೇರಳೆಹಣ್ಣಿನ ಮುಖಭಾಗದಂತಿರುವ ಬತ್ತಿಗಳು, ರಕ್ತವನ್ನು ದೇಹದಿಂದ ತೆಗೆಯಲು ಜಿಗಣೆಗಳು, ಹತ್ತಿಯ ಉಂಡೆಗಳು, ವ್ರಣಸ್ರಾವ ಎಲ್ಲವೂ ಶುಭ್ರವಾಗಿರಬೇಕು. ಸುತ್ತಲೂ ಹೊಲಿಗೆ ಬಟ್ಟೆಯ ತುಂಡುಗಳು, ವ್ರಣಸ್ರಾವ ಮತ್ತು ವ್ರಣಬಂಧನ ಮಾಡಲು ದಪ್ಪವಾದ ಮತ್ತು ಉದ್ದನೆಯ ಬಿಳಿಯ ಅಥವಾ ಹಳದಿ ಬಟ್ಟೆಯ ಸುರಳಿಗಳು, ಗಟ್ಟಿಯಾಗಿ ತುಂಡಾಗದಿರುವಂತಹ ದಾರದ ಉಂಡೆ, ಮತ್ತು ವ್ರಣಹಾರೀ ಎಲೆಗಳು, ಶುದ್ಧ ಜೇನುತುಪ್ಪ, ತುಪ್ಪ, ಮೇದಸ್ಸು, ಕೊಬ್ಬು, ನವಿಲು, ಉಡ, ಪಾರಿವಾಳಗಳ ಕೊಬ್ಬು, ಹಾಲು, ಸೀಪಡಿಸಿದ ತೈಲಗಳು, ತಣ್ಣೀರು, ಮತ್ತು ಬಿಸಿನೀರು, ನೀರು ತುಂಬಿದ ಪಾತ್ರೆಗಳು, ಹಾಲಿನಲ್ಲಿ ಕದಡಿ ಗಟ್ಟಿಯಾದ ಹಿಟ್ಟುಗಳು, ಕಷಾಯಗಳು, ವ್ರಣಗಳ ಮೇಲೆ ಮತ್ತು ಸುತ್ತಲಿನ ಭಾಗದ ಮೇಲೆ ಹಚ್ಚಲು ಲೇಪಗಳು, 'ಗಂಡೂಷ' (ಬಾಯಿ ಮುಕ್ಕಳಿಸಲು) ಬೇಕಾದ ಲೋಟ-ಚಂಬು, ಸಣ್ಣ ಮೂತಿಯಿರುವ ಹೂಜಿ, ಮೆತ್ತನೆಯ ಹಾಸಿಗೆ, ಬೆಚ್ಚನೆಯ ಹೊದಿಕೆ ಸಿದ್ಧವಾಗಿರಬೇಕು. ಅವುಗಳೆಲ್ಲಾ ಶುಭ್ರವಾಗಿರಬೇಕು. ಶಸ್ತ್ರಚಿಕಿತ್ಸೆಗೆ ತೊಡಗುವ ಚಿಕಿತ್ಸಕನು (ಧನ್ವಂತರಿ) ಪ್ರಾರ್ಥನಾದಿಗಳನ್ನು ಪೂರೈಸಿ ಶುಭ್ರವಾದ ಬಿಗಿ ಉಡುಪನ್ನು ಧರಿಸಬೇಕು. ಪಾದರಕ್ಷೆ ಧರಿಸಬೇಕು. ತಲೆಕೂದಲು, ಉಗುರುಗಳನ್ನು ಮೋಟಾಗಿ ಕತ್ತರಿಸಬೇಕು. ಈಶಾನ್ಯ ಬಾಗಿಲಿನಲ್ಲಿ ಶಸ್ತ್ರಾಗಾರವನ್ನು ಪ್ರವೇಶಮಾಡಬೇಕು. ನಿರ್ಭಯವಾಗಿರಬೇಕು. ಶಸ್ತ್ರಚಿಕಿತ್ಸೆಯಲ್ಲಿ ಹಸ್ತಕೌಶಲ ಚೆನ್ನಾಗಿರಬೇಕು. ವ್ರಣ ಶಲ್ಯಗಳ ತಿಳುವಳಿಕೆ, ಸ್ಥಾನಭೇದ ತಿಳಿವಳಿಕೆ, ಪರಿಹಾರ ಉಪಯುಕ್ತತೆ, ಶುದ್ಧವೂ ಹರಿತವೂ ಆದ ಶಸ್ತ್ರಗಳನ್ನು ಕೈಗೆ ನಿಲುಕುವಂತೆ ಜಾಗ್ರತೆ ವಹಿಸಬೇಕು. ವ್ರಣ ಛೇದಾದಿಗಳಲ್ಲಿ ರಕ್ತ, ಕೀವು, ರೋಗಿ ಹುಣ್ಣನ್ನು ತೆರೆದಾಗ ನೋಡದಂತೆ ಜಾಗ್ರತೆ ವಹಿಸಬೇಕು. ಸುಶ್ರುತರ ಪ್ರಕಾರ, ಜನರು ಪೂರ್ಣಚಿಕಿತ್ಸೆ ಹೊಂದಿ ರೋಗಗಳು ಬಾರದಂತೆ ದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಅತ್ಯಾವಶ್ಯಕ.

ಅಭಿಘಟನ ಶಲ್ಯ (ಪ್ಲಾಸ್ಟಿಕ್ ಸರ್ಜರಿ)

[ಬದಲಾಯಿಸಿ]

ಈ ಪ್ರಸಂಗದಲ್ಲಿ ಅನ್ಯಸ್ಥಾನದಿಂದ ಮಾಂಸವನ್ನು ಕತ್ತರಿಸಿ ಅಥವಾ ಕಪೋಲದ ಮಾಂಸದಿಂದ ನಾಸಾಬಂಧ ಮಾಡುವ ಉಲ್ಲೇಖವಿದೆ. ನಾಸಾಸಂಧಾನ ವಿಧಿಯ ಅನುಸಾರ ಓಷ್ಠ ಸಂಧಾನ ವಿಧಿಯ ಉಲ್ಲೇಖವೂ ಇದೆ. ಕರ್ಣವ್ಯಧನದಂತೆ ನಾಸಿಕ ವ್ಯಧನ ಮಾಡಿ ಇದರಲ್ಲಿ ಆಭರಣಗಳನ್ನು ಧರಿಸುತ್ತಿದ್ದರು. ಬಹುಶಃ ಓಷ್ಠದಲ್ಲೂ ಆಭರಣ ಧರಿಸುತ್ತಿದ್ದಿರಬಹುದು. ಜನ್ಮದಿಂದ ಅಥವಾ ಯಾವುದೇ ಕಾರಣದಿಂದ ಛೇದನ ಉಂಟಾದರೆ ಅದನ್ನು ಜೋಡಿಸುವ ವಿಧಿಯ ಉಲ್ಲೇಖವಿದೆ. ಚಿಕಿತ್ಸಾ ಶಾಸ್ತ್ರದಲ್ಲಿ ಸುಶ್ರುತ ಸಂಹಿತೆಯಲ್ಲೇ ಸರ್ವಪ್ರಥಮವಾಗಿ ಪ್ಲಾಸ್ಟಿಕ್ ಸರ್ಜರಿ ಸಂಬಂಧವಾದ ಲಿಖಿತ ಪ್ರಮಾಣ ದೊರೆಯುತ್ತದೆ. ಪ್ಲಾಸ್ಟಿಕ್ ಸರ್ಜರಿ ಸುಶ್ರುತನ ಮಹತ್ತ್ವದ ಕೊಡುಗೆಯಾಗಿದ್ದು ಪ್ರಪಂಚ ಈ ವಿಷಯದಲ್ಲಿ ಈತನಿಗೆ ಋಣಿಯಾಗಿದೆ.[೧೪][೧೫][೧೬][೧೭]

ಸಂಹಿತೆಯಲ್ಲಿ ಇತರ ವಿಷಯಗಳು

[ಬದಲಾಯಿಸಿ]

ಸುಶ್ರುತ ಸಂಹಿತೆಯಲ್ಲಿ ಅಶ್ಮರೀ, ಆರ್ಶ, ಉದರರೋಗ, ಮೂಢಗರ್ಭ ಹಾಗೂ ವ್ರಣಗಳ ಉಪಕ್ರಮವೇ ಮೊದಲಾದ ಶಸ್ತ್ರಕರ್ಮ ಸಂಬಂಧೀ ವಿವರಣೆ ಸ್ಪಷ್ಟ ರೂಪದಲ್ಲಿದೆ. ಭಯಂಕರ ಶಲ್ಯಕರ್ಮದಲ್ಲಿ ಅಂದರೆ ಎಲ್ಲಿ ಪ್ರಾಣರಕ್ಷಣೆಯ ಸಂಶಯವಿರುತ್ತದೋ ಅಲ್ಲಿ ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆದು ಹಾಗೂ ಬೇರೆಯವರಿಗೆ (ರಾಜನಿಗೆ) ತಿಳಿಸಿ ಶಸ್ತ್ರಕರ್ಮ ಮಾಡಬೇಕು. ಶಸ್ತ್ರಕರ್ಮದ ಪೂರ್ವಕರ್ಮ, ಪ್ರಧಾನಕರ್ಮ ಮತ್ತು ಪಶ್ಚಾತ್ಕರ್ಮಗಳ ಸ್ಪಷ್ಟ ನಿರೂಪಣೆ ಇದೆ. ಕಲ್ಪಸ್ಥಾನದಲ್ಲಿ ವಿಷದಿಂದ ರಾಜರ ರಕ್ಷಣೆಯನ್ನು ಹೇಗೆ ಮಾಡಬೇಕು, ವಿಷ ಪ್ರಯೋಗ ಯಾವ ಯಾವ ಸ್ಥಾನಗಳಲ್ಲಿ ಮತ್ತು ಯಾವ ಯಾವ ರೀತಿ ಆಗುತ್ತದೆ ಎಂಬ ಪೂರ್ಣ ವಿವರಣೆ ಕಂಡುಬರುತ್ತದೆ. ಅಡುಗೆ ಮನೆಯ ವ್ಯವಸ್ಥೆ, ಆಹಾರ ಪರೀಕ್ಷೆ, ಧೂಪ, ವಾಯು, ಮಾರ್ಗ, ಜಲ, ವಸ್ತ್ರ, ಮಾಲಾ, ಪಾದುಕೆ, ಬಾಚಣಿಗೆ ಮೊದಲಾದವುಗಳಲ್ಲಿ ವಿಷ ಸೇರಿದರೆ ಇದನ್ನು ಹೇಗೆ ಶುದ್ಧಿ ಮಾಡಬೇಕು ಇವೆಲ್ಲ ವಿಷಯಗಳೂ ಇವೆ. ಈ ಪ್ರಕರಣದಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ವಾಯುಮಂಡಲದಲ್ಲಿ ಯಾವಾಗ ವಿಷ ಸಂಚಾರವಾಗುತ್ತದೋ ಆಗ ದುಂದುಭಿಯ ಮೇಲೆ ವಿಷನಾಶಕ ಔಷಧಿಗಳ (ಅಗದ) ಲೇಪಮಾಡಿ ಇದನ್ನು ಬಾರಿಸಬೇಕು. ಹೀಗೆ ಬಾರಿಸುವುದರಿಂದ ಉಂಟಾದ ಶಬ್ದ ವಾಯುವಿನಲ್ಲಿ ಗತಿಯನ್ನುಂಟುಮಾಡುತ್ತದೆ. ಅದರಿಂದ ವಾಯುವಿನ ವಿಷ ನಷ್ಟವಾಗುತ್ತದೆ. ಎಷ್ಟು ದೂರ ಈ ಶಬ್ದ ಪ್ರಸಾರವಾಗುತ್ತದೋ ಅಷ್ಟು ದೂರ ವಿಷ ನಷ್ಟವಾಗುತ್ತದೆ. ಸುಶ್ರುತ ಸಂಹಿತೆಯಲ್ಲಿ ಮೊದಲ ಬಾರಿಗೆ ಗ್ರಹಗಳ ಹೆಸರು, ಅವುಗಳ ಉತ್ಪತ್ತಿ ಹಾಗೂ ತತ್ಸಂಬಂಧಿಯಾದ ಇತರ ಅಂಶಗಳು ವ್ಯಕ್ತವಾಗಿವೆ. ಗ್ರಹಶಾಂತಿಗಾಗಿ ಬಲಿ, ಚತುಷ್ಪಥದಲ್ಲಿ ಸ್ನಾನ ಮೊದಲಾದ ಕರ್ಮಗಳು ಹೇಳಲ್ಪಟ್ಟಿವೆ. ಭಿನ್ನ ಭಿನ್ನ ಗ್ರಹಗಳ ಪೂಜೆ ವರ್ಣಿಸಲ್ಪಟ್ಟಿದೆ. ಚರಕ ಸಂಹಿತೆಯಲ್ಲಿ ಪೂತನಾ ಗ್ರಹದ ಹೆಸರಿದೆ; ಆದರೆ ಸುಶ್ರುತ ಸಂಹಿತೆಯಲ್ಲಿ ಪೂತನಾ, ಅಂಧಪೂತನಾ, ಶೀತ ಪೂತನಾ ಎಂಬ ಮೂರು ಹೆಸರುಗಳಿವೆ. ಗ್ರಹಗಳಲ್ಲದೆ ಅಮಾನುಷೋಪಸರ್ಗ ಪ್ರತಿಷೇಧ ಅಧ್ಯಾಯದಲ್ಲಿ ನಿಶಾಚರರ ಸಂಬಂಧದಲ್ಲಿ ವಿಶೇಷ ಉಲ್ಲೇಖವಿದೆ. ಇದರಲ್ಲಿ ಅದೃಶ್ಯ ವಸ್ತುವಿನ ಭವಿಷ್ಯಜ್ಞಾನ, ಅದರ ಅಸ್ಥಿರತೆ ಕುರಿತು ಹೇಳಲ್ಪಟ್ಟಿದೆ. ಮನುಷ್ಯರಿಗಿಂತ ಅಧಿಕ ಕ್ರಿಯೆ ಮತ್ತು ಶಕ್ತಿ ಯಾವ ರೋಗಿಯಲ್ಲಿ ಕಂಡುಬರುತ್ತದೋ ಅವನನ್ನು ಗ್ರಹಾಕ್ರಾಂತನೆಂದು ತಿಳಿಯಬೇಕೆಂದು ಹೇಳಿದೆ. ಹೀಗೆ ಗ್ರಹಜ್ಞಾನ ಮೊತ್ತಮೊದಲಿಗೆ ಸುಶ್ರುತ ಸಂಹಿತೆಯಲ್ಲಿ ದೊರೆಯುತ್ತದೆ. ಸುಮಾರು ಇದೇ ಕಾಲದ ಕಾಶ್ಯಪ ಸಂಹಿತೆಯಲ್ಲಿಯೂ ಗ್ರಹವಿಜ್ಞಾನದ ವಿಷಯ ವಿಸ್ತಾರವಾಗಿ ದೊರೆಯುತ್ತದೆ.

ಸುಶ್ರುತ ಸಂಹಿತೆ ಪ್ರಧಾನವಾಗಿ ಶಲ್ಯತಂತ್ರ ಸಂಬಂಧಿಯಾಗಿದೆ. ಶಲ್ಯ ಚಿಕಿತ್ಸೆಯಲ್ಲಿ ಜೀವಾಣು ಒಂದು ಮುಖ್ಯ ಪದಾರ್ಥವಾಗಿದ್ದು ಸುಶ್ರುತ ಇದನ್ನು ನಿಶಾಚರ ರೂಪದಲ್ಲಿ ಹೆಸರಿಸಿದ್ದಾನೆ. ಇದರ ಕಾರ್ಯ ಸರಿಯಾಗಿ ತಿಳಿಯದ ಕಾರಣ ಮತ್ತು ಇದರ ಪ್ರತ್ಯಕ್ಷ ಜ್ಞಾನವಾಗದ ಕಾರಣ ಇದನ್ನು ಗ್ರಹ ಹಾಗೂ ದೇವತೆಗಳೊಡನೆ ಸಂಬಂಧಿಸಲಾಗಿದೆ. ಎಲ್ಲಿ ವಿಚಿತ್ರವೂ ಮನುಷ್ಯನಿಗಿಂತ ಅಧಿಕ ಪರಾಕ್ರಮವೂ ಕಂಡು ಬರುತ್ತದೋ ಅಲ್ಲಿ ದೇವತಾ ಅಥವಾ ಗ್ರಹಗಳ ಸಂಬಂಧವಿರುತ್ತದೆಂದು ಹೇಳಬಹುದು.

ಧಾತ್ರಿಯ ಲಕ್ಷಣಗಳು

[ಬದಲಾಯಿಸಿ]

ಮಗು ಜನಿಸಿದಾಗ, ಅದಕ್ಕೆ ತಾಯಿಯ ಹಾಲನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುವುದು ಪ್ರತಿ ತಾಯಿಯ ಆದ್ಯಕರ್ತವ್ಯ. ಇದು ಪ್ರತಿ ಶಿಶುವಿನ ಹಕ್ಕು ಸಹ. ಶಿಶುವಿನ ಮಾನಸಿಕ, ಶಾರೀರಿಕ ಬೆಳವಣಿಗೆಗೆ ತಾಯಿಯ ಹಾಲಿಗೆ ಸರಿಸಮನಾದ ಆಹಾರ ಇನ್ನೊಂದಿಲ್ಲ. ಕೆಲವೊಮ್ಮೆ ತಾಯಂದಿರಿಗೆ ಮೊಲೆಹಾಲು ಸಾಕಷ್ಟು ಪ್ರಮಾಣದಲ್ಲಿ ಇರದೆ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಆಗ ಧಾತ್ರಿಯರ ಅಗತ್ಯವಾಗುತ್ತದೆ. ತನ್ನದಲ್ಲದ ಬೇರೆ ಮಕ್ಕಳಿಗೂ ಮೊಲೆಯುಣ್ಣಿಸುವಷ್ಟು ಸಮರ್ಥವಾದ ಹೆಣ್ಣುಮಗಳನ್ನು "ಧಾತ್ರಿ" ಎನ್ನುತ್ತಾರೆ. ಆಕೆ ಸಾಮಾನ್ಯವಾಗಿ ಕುರೂಪಿ, ದುಃಖಿ, ಕೆಟ್ಟ ಹೆಂಗಸು ಆಗಿರಕೂಡದು. ಅವಳಿಗೆ ಹೊಟ್ಟೆಗೆ ಕುಡಿಯುವ ವಯಸ್ಸಿನ ಮಕ್ಕಳಿರಬಾರದು. ಹೆಚ್ಚು ಎದೆಹಾಲಿರಬೇಕು.

ನವಜಾತ ಶಿಶುವಿನ ಮಾತೆಯರಿಗೆ ಮೊಲೆಹಾಲು ಕುಡಿಸುವ ಬಗ್ಗೆ ಕೆಲವು ಎಚ್ಚರಿಕೆಯ ಮಾತುಗಳು

[ಬದಲಾಯಿಸಿ]

ಪ್ರತಿ ತಾಯಿಗೂ ಇದೊಂದು ಅನಿರ್ವಚನೀಯವಾದ ಸಂತಸವನ್ನು ಕೊಡುವ ಕಾಲ. ಒಂದು ಹೊಸ ಜೀವಕ್ಕೆ ಜನ್ಮಕೊಟ್ಟ ಸಂಭ್ರಮ, ಸಡಗರ, ಹಾಗೂ ಮಗುವಿನ ಲಾಲನೆ-ಪಾಲನೆಯಲ್ಲಿ ಚ್ಯುತಿ ಬಂದೀತೆಂಬ ಉದ್ವೇಗ. ಅಲ್ಲದೆ ತಾಯಿಯಾಗಿ ತನ್ನ ಹೊಸ-ಜವಾಬ್ದಾರಿಯ ಅರಿವು ಮೂಡುವ ಸಮಯ. ಹೊಸ ಮಾತೆಯರಿಗೆ ಇದೊಂದು ಪರ್ವಕಾಲ. ತಾಯಿಯ ಸ್ತನ್ಯಪಾನ ಮಾಡುವ ಸಮಯದಲ್ಲಿ ಮಗು ತಲೆ ಹೆಚ್ಚಾಗಿ ಮೇಲೆತ್ತಬಾರದು. ಹಲ್ಲುಬ್ಬು ಬರುವ ಸಾಧ್ಯತೆಗಳಿವೆ. ಹಾಲು ತಣ್ಣಗೆ, ಕೊಳೆಯಿಲ್ಲದೆ, ತೆಳ್ಳಗೆ, ಬೆಳ್ಳಗೆ, ನೀರಿಗೆ ಸುರಿದರೆ ಬೆರೆತು ನೊರೆಯಿಲ್ಲದೆ, ದಾರದಂತಾಗದೆ ಮೇಲೆ-ತೇಲದೆಯೂ ಇದ್ದರೆ ಅದು ಶುದ್ಧವಾದ ಹಾಲು-ಆರೋಗ್ಯಕರವೆಂದು ಭಾವಿಸತಕ್ಕದ್ದು.

ಚರಕಾಚಾರ್ಯ, ಸುಶ್ರುತಾಚಾರ್ಯರ ಕಾಲ

[ಬದಲಾಯಿಸಿ]

ಇವರು ಜೀವಿಸಿದ್ದ ಸಮಯದಲ್ಲಿ ಮಾಂಸಾಹಾರ ರೂಢಿಯಲ್ಲಿತ್ತು. ಮೇಕೆ, ಕಾಡುಹಂದಿ, ಕೋಳಿ, ಪಾರಿವಾಳ, ತಿತ್ತಿರಿ, ಮೊಲ, ಜಿಂಕೆ, ವಿವಿಧ ಜಾತಿಯ ಮೀನುಗಳು, ಸಾರಂಗ, ಕುರಿಗಳ ಉಪಯೋಗವಿತ್ತು. ಉಡ, ಮೊಲ, ನಾಗರಹಾವು, ಪುನುಗಿನ ಬೆಕ್ಕು, ಹದ್ದು, ಕಾಗೆ, ಗೂಬೆ, ಕೆಂಪುಕಾಗೆ, ಕಾಡುಗುಬ್ಬಿ, ಗಿಣಿ, ನವಿಲು, ದನ, ಮುಂತಾದವುಗಳ, ರಕ್ತ, ಮಾಂಸ ಮೇದಸ್ಸುಗಳನ್ನು ರೋಗಪರಿಹಾರಾರ್ಥವಾಗಿ ವೈದ್ಯರು ಬಳಸುತ್ತಿದ್ದರು.

ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಕೆಲವಾರು ವೈದ್ಯಕೀಯ ವಸ್ತುಗಳನ್ನು ಇಟ್ಟುಕೊಳ್ಳಲು ಸಲಹೆ ಮಾಡಿದ್ದರು

[ಬದಲಾಯಿಸಿ]

ತಾತ್ಕಾಲಿಕವಾಗಿ ಶುಶ್ರೂಷೆ ಮಾಡಲು ಕೆಲವು ಔಷಧಿಗಳನ್ನು ಸಂಗ್ರಹಿಸಿಡಬೇಕು. ಹಿಪ್ಪಲಿ, ಜೀರಿಗೆ, ಶುಂಠಿ, ತುಳಸಿ, ಕರಿತುಳಸಿ, ಕಾಮಕಸ್ತೂರಿ, ಮಜ್ಜಿಗೆಹುಲ್ಲು, ಪರಿಮಳಗಂಧಿನೀಹುಲ್ಲು, ಸರಂಬಾಳೆ, ಬಟಾಣಿ, ಇತ್ಯಾದಿ ಸಂಗ್ರಹವಿರಬೇಕು. ಸೊಪ್ಪು ಆಹಾರವೂ ಹೌದು ಹಾಗೂ ಔಷಧಿಯಾಗಿಯೂ ವರ್ತಿಸುತ್ತದೆ. ಕಿರುಸಾಲೆ, ಬಸಳೆ, ಹರಿವೆ, ಚಕ್ಕೋತ, ದೊಡ್ಡಪತ್ರೆ ಸೊಪ್ಪು, ಅಗಸೆ, ಗಣಿಕೆ, ಗೋಡಂಬಿ, ಗೋಣಿ, ರೇರಣದ ಸೊಪ್ಪು, ಕರಿಬೇವು, ಅಗಾಳು ಶುಂಠಿ ಗಿಡಗಳು ಇರಬೇಕು. ಊಟದ ನಂತರ, ರಾತ್ರಿ ಮಲಗುವ ಮುಂಚೆ, ಬಾಯಿ ಮುಕ್ಕಳಿಸಿ ಉಗುಳುವ ಕ್ರಿಯೆ ಅತ್ಯಂತ ಮಹತ್ವದ್ದು. ಹಲ್ಲಿನ ಸಂದಿಗಳಲ್ಲಿ, ಒಸಡುಗಳ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಇಲ್ಲವೆ, ಅಲ್ಲೇ ಇದ್ದು ಕೊಳೆಯಲು ಸಾಧ್ಯತೆಯಿರುವ ಅತಿಸೂಕ್ಷ್ಮವಾದ ಆಹಾರದ ಕಣಗಳನ್ನು ಬಾಯಿಯಿಂದ ಹೊರಗೆ ಹಾಕುವುದು ಮುಖ್ಯ. ಊಟಕ್ಕೆ ಮೊದಲು ಕೈಕಾಲು, ಮುಖ ತೊಳೆಯುವುದರ ಜೊತೆಗೆ, ಬಾಯಿ ಮುಕ್ಕಳಿಸಿ ಉಗುಳುವುದು ಒಳ್ಳೆಯದು.

ಪುರಾತನ ಕಾಲದ ಜನರ ಸಾಮಾನ್ಯವಾದ ದೇಹದಾರ್ಢ್ಯ

[ಬದಲಾಯಿಸಿ]

ಆಗಿನ ಕಾಲದ ಜನರು ಎತ್ತರವಾಗಿಯೂ ಬಲಿಷ್ಠರಾಗಿಯೂ, ಕಷ್ಟಸಹಿಷ್ಣುಗಳಾಗಿಯೂ ಇದ್ದರು. ಬಿಸಿಲು, ಮಳೆಯೆನ್ನದೆ ರೈತಾಪಿ ಕೆಲಸ ಮಾಡುತ್ತಿದ್ದಿದ್ದರಿಂದ ಆಹಾರವನ್ನೂ ಹೆಚ್ಚಾಗಿ ಸೇವಿಸುತ್ತಿದ್ದರು. ಮೈಕೈ ತುಂಬಿಕೊಂಡು ಆರೋಗ್ಯವಂತರಾಗಿರುತ್ತಿದ್ದರು.

ಮಲಗಲು ಉಪಯೋಗಿಸುವ ಹಾಸಿಗೆ ಹೇಗಿರಬೇಕು

[ಬದಲಾಯಿಸಿ]

ಹಾಸಿಗೆ ಅತಿಮೆತ್ತಗೂ, ಹೆಚ್ಚು ಗಡಸಾಗಿಯೂ ಇರಬಾರದು. ತಲೆದಿಂಬು ಹೆಚ್ಚು ಎತ್ತರ ಇರಬಾರದು.

ಅಪಘಾತ ಸಮಯಗಳಲ್ಲಿ

[ಬದಲಾಯಿಸಿ]

ಕೈಕಾಲು ಕೊಳೆತರೆ, ಅಂತಹ ಅಂಗಗಳನ್ನು ಕಿತ್ತುಹಾಕಿ, ರೋಗಿಯನ್ನು ಉಳಿಸುತ್ತಾರೆ. ಹುಣ್ಣುಗಳಲ್ಲಿನ ಕೀವು, ಕೆಟ್ಟ ರಕ್ತ ತೆಗೆದು, ಶುಚಿಮಾಡಿ, ಅದಕ್ಕೆ ಔಷಧ ಲೇಪಿಸಿ, ಶುಭ್ರವಾದ ಬಿಳಿಯ ಬಟ್ಟೆಯನ್ನು ಬಿಗಿಯುತ್ತಿದ್ದರು. ಮೂತ್ರಕೋಶದಲ್ಲಿ ಕಲ್ಲಿನಂತಹ ಗಟ್ಟಿ ಪದಾರ್ಥ ಕಟ್ಟಿಕೊಳ್ಳುತ್ತದೆ. ಇದನ್ನು ಅಶ್ಮರವೆಂದು ಕರೆಯುತ್ತಾರೆ. ಈ ನ್ಯೂನತೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಅಗತ್ಯ.[೧೮]

ಸಂಹಿತೆಗೆ ಟೀಕೆಗಳು

[ಬದಲಾಯಿಸಿ]

ಸುಶ್ರುತ ಸಂಹಿತೆಗೆ ಜೇಜ್ಜಟ,[೧೯] ಗಯದಾಸ (ಪಂಜಿಕಾ ಅಥವಾ ನ್ಯಾಯ ಚಂದ್ರಿಕಾ),[೨೦] ಡಲ್ಹಣರು ಟೀಕೆ ಬರೆದಿದ್ದಾರೆ. ಡಲ್ಹಣಕೃತ ನಿಬಂಧ ಸಂಗ್ರಹ ಪ್ರಸಿದ್ಧವಾಗಿದ್ದು, ಸುಶ್ರುತ ಸಂಹಿತೆಗಿರುವ ಸಂಪೂರ್ಣ ಟೀಕೆಯಾಗಿದೆ. ಇದು ಸರಳವೂ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವೂ ಆದ ಟೀಕೆ. ಇದನ್ನು ಎನ್.ಎಲ್. ಭಟ್ಟಾಚಾರ್ಯ ಮತ್ತು ಎಮ್.ಆರ್.ಭಟ್ ಕನ್ನಡಕ್ಕೆ ಅನುವಾದಿಸಿದ್ದಾರೆ.

  • ಸುಶ್ರುತ - ಲೇಖಕ: ವೈ. ಪಾರ್ಥನಾರಾಯಣ ಪಂಡಿತ್, ಭಾರತ ಭಾರತಿ ಪುಸ್ತಕ ಸಂಪದ, ಬೆಂಗಳೂರು-೫೬೦೦೦೧೯ ಮುದ್ರಣ: ರಾಷ್ಟ್ರೋತ್ಥಾನ, ಬೆಂಗಳೂರು-೫೬೦ ೦೧೯.

ಉಲ್ಲೇಖಗಳು

[ಬದಲಾಯಿಸಿ]
  1. Wujastyk, Dominik (2003). The Roots of Ayurveda. Penguin. ISBN 978-0-14-044824-5. OCLC 708372480.[page needed]
  2. Bhishagratna, Kunjalal (1907). An English Translation of the Sushruta Samhita, based on Original Sanskrit Text. Calcutta: Calcutta. pp. ii (introduction).
  3. Monier-Williams, A Sanskrit Dictionary, s.v. "suśruta"
  4. Prof.P.V.Sharma, Ayurveda Ka Vaijnannika Itihas,7th ed., Ch. 2, Pg.87, Chaukhambha orientalia, Varanasi (2003)
  5. Menon IA, Haberman HF (1969). "Dermatological writings of ancient India". Med Hist. 13 (4): 387–392. doi:10.1017/s0025727300014824. PMC 1033984. PMID 4899819.
  6. Meulenbeld 1999, pp. 203–389 (Volume IA).
  7. Ramachandra S.K. Rao, Encyclopaedia of Indian Medicine: historical perspective, Volume 1, 2005 Reprint (Original: 1985), pp 94-98, Popular Prakashan
  8. Bhishagratna 1911, pp. 113-121 etc.
  9. Bhishagratna 1916, pp. 285, 381, 407, 409, 415 etc.
  10. Engler 2003, pp. 416–463.
  11. Melvin A. Shiffman, Alberto Di Gi. Advanced Aesthetic Rhinoplasty: Art, Science, and New Clinical Techniques. Springer Science & Business Media. p. 132.
  12. Bhishagratna 1907, p. xxi.
  13. Zysk, Kenneth G. (1986). "The Evolution of Anatomical Knowledge in Ancient India, with Special Reference to Cross-Cultural Influences". Journal of the American Oriental Society. 106 (4): 687–705. doi:10.2307/603532. JSTOR 603532. PMID 11617255.
  14. Susruta; Singh, K. P; Singh, L. M; Singhal, G. D; Udupa, K. N (1972). Susruta-samhita (in Sanskrit). Allahabad: G.D. Singhal. OCLC 956916023.{{cite book}}: CS1 maint: unrecognized language (link)[page needed]
  15. Singhal, G.D.; Dwivedi, R.N. (1976). Toxicological Considerations in ancient Indian surgery. Ancient Indian Surgery Series ;7. Singhal Publications. hdl:2027/mdp.39015019929879. OCLC 581768392.[page needed]
  16. Champaneria, Manish C.; Workman, Adrienne D.; Gupta, Subhas C. (July 2014). "Sushruta: Father of Plastic Surgery". Annals of Plastic Surgery. 73 (1): 2–7. doi:10.1097/SAP.0b013e31827ae9f5. PMID 23788147.
  17. Kansupada, K. B.; Sassani, J. W. (1997). "Sushruta: the father of Indian surgery and ophthalmology". Documenta Ophthalmologica. Advances in Ophthalmology. 93 (1–2): 159–167. doi:10.1007/BF02569056. PMID 9476614. S2CID 9045799.
  18. Lock etc., page 836
  19. "Jejjaṭa's commentary on the Suśrutasaṃhitā (Work) - Pandit". www.panditproject.org. Retrieved 2023-08-23.
  20. "Nyāyacandrikā (Work) - Pandit". www.panditproject.org. Retrieved 2023-08-23.


ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: