ಚರಕ ಸಂಹಿತೆ
ಚರಕ ಸಂಹಿತೆಯು ಆಯುರ್ವೇದದ ಮೂಲ ಗ್ರಂಥಗಳಲ್ಲಿ ಒಂದು. ಆಚಾರ್ಯ ಚರಕರಿಂದ ರಚಿಸಲ್ಪಟ್ಟ ಈ ಗ್ರಂಥವು ಬೃಹತ್ರಯೀಗಳಲ್ಲಿ ಒಂದು.[೧] ಈ ಗ್ರಂಥದಲ್ಲಿ ಆಯುರ್ವೇದ ಅವತರಣ, ವಿವಿಧ ರೋಗಗಳ ನಿದಾನ, ಲಕ್ಷಣ, ಚಿಕಿತ್ಸೆ ಹಾಗೂ ಪಥ್ಯಾಪಥ್ಯಗಳ ಬಗ್ಗೆ ವಿವರಿಸಲಾಗಿದೆ. ಮನುಷ್ಯ ಜೀವನದ ದೈನಂದಿನ ಚಟುವಟಿಕೆ, ಋತುಗಳು ಹಾಗೂ ಅವುಗಳಲ್ಲಿ ಪಾಲಿಸಬೇಕಾದ ಆಹಾರ ವಿಹಾರ ಕ್ರಮಗಳು, ಆರೋಗ್ಯ ಪಾಲನೆಯಲ್ಲಿ ಆಹಾರದ ಮಹತ್ವ, ರೋಗ ಪ್ರತಿರೋಧನಾ ಮಾರ್ಗಗಳು, ಚಿಕಿತ್ಸೆಯ ಸಫಲತೆಯಲ್ಲಿ ವೈದ್ಯ, ಔಷಧ, ಪರಿಚಾರಕ ಮತ್ತು ರೋಗಿಯ ಪಾತ್ರಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ.
ಆಯುರ್ವೇದ ಅವತರಣ
[ಬದಲಾಯಿಸಿ]ಚರಕ ಸಂಹಿತೆಯ ಅನುಸಾರ, ಆಯುರ್ವೇದವು ಬ್ರಹ್ಮನಿಂದ ಪ್ರಜಾಪತಿಗೆ, ಪ್ರಜಾಪತಿಯಿಂದ ಅಶ್ವಿನಿ ಕುಮಾರರಿಗೆ, ಅವರಿಂದ ಇಂದ್ರನಿಗೆ ಹಾಗೂ ಇಂದ್ರನಿಂದ ಭರದ್ವಾಜ ಋಷಿಗೆ ಉಪದೇಶಿಸಲ್ಪಟ್ಟಿತು. ಮಹರ್ಷಿ ಭರದ್ವಾಜರು ಭೂಮಂಡಲದ ಇತರ ಋಷಿಗಳಿಗೆ ಉಪದೇಶಿಸಿದರು. ತದನಂತರ ಪುನರ್ವಸು ಆತ್ರೇಯ ಮಹರ್ಷಿಗಳು ತನ್ನ ಶಿಷ್ಯರಾದ ಅಗ್ನಿವೇಶ, ಭೇಲ, ಜತೂಕರ್ಣ, ಪರಾಶರ, ಹಾರೀತ ಹಾಗೂ ಕ್ಷಾರಪಾಣಿಗಳಿಗೆ ಉಪದೇಶವನ್ನು ನೀಡಿದರು. ಇವರಲ್ಲಿ ಮಹರ್ಷಿ ಅಗ್ನಿವೇಶರು ತಂತ್ರ ರೂಪದಲ್ಲಿ ಅಗ್ನಿವೇಶ ತಂತ್ರವನ್ನು ರಚಿಸಿದರು. ಆಚಾರ್ಯ ಚರಕರು ಅಗ್ನಿವೇಶ ತಂತ್ರದಲ್ಲಿ ಭಾಷ್ಯವನ್ನು ಸೇರಿಸಿ ಸಂಗ್ರಹ ರೂಪದಲ್ಲಿ ರಚಿಸಿದಂತಹ ಸಂಹಿತೆಯು ಚರಕ ಸಂಹಿತೆಯಾಯಿತು.[೨]
ಸ್ಥಾನಗಳು
[ಬದಲಾಯಿಸಿ]ಚರಕ ಸಂಹಿತೆಯ ಸಂಪೂರ್ಣ ಗ್ರಂಥವನ್ನು ವಿಷಯಾನುಸಾರವಾಗಿ ೮ ಸ್ಥಾನಗಳಲ್ಲಿ ವಿಂಗಡಿಸಲಾಗಿದೆ:
ಸೂತ್ರ ಸ್ಥಾನ
[ಬದಲಾಯಿಸಿ]೩೦ ಅಧ್ಯಾಯಗಳಲ್ಲಿ ಆಯುರ್ವೇದದ ಮೂಲಭೂತ ಸಿದ್ಧಾಂತಗಳು, ಧ್ಯೇಯಗಳು, ಆರೋಗ್ಯಪೂರ್ಣ ಜೀವನದಲ್ಲಿ ಆಹಾರ ವಿಹಾರಗಳ ಮಹತ್ವ, ವಿವಿಧ ಆಹಾರ ಹಾಗೂ ಅವುಗಳ ಗುಣಕರ್ಮಗಳು ಇತ್ಯಾದಿ ವಿವರಗಳನ್ನೊಳಗೊಂಡಿದೆ.
ನಿದಾನ ಸ್ಥಾನ
[ಬದಲಾಯಿಸಿ]ರೋಗಗಳ ಉತ್ಪತ್ತಿಗೆ ಕಾರಣ ಅಥವಾ ನಿದಾನಗಳನ್ನು ಇಲ್ಲಿ ೮ ಅಧ್ಯಾಯಗಳಲ್ಲಿ ಹೇಳಲಾಗಿದೆ.
ವಿಮಾನ ಸ್ಥಾನ
[ಬದಲಾಯಿಸಿ]೮ ಅಧ್ಯಾಯಗಳನ್ನೊಳಗೊಂಡಿರುವ ಈ ಸ್ಥಾನದಲ್ಲಿ ಶಡ್ರಸಗಳು ಹಾಗೂ ಅದರ ಗುಣಗಳು, ವೈದ್ಯನ ತರಬೇತಿ, ರೋಗಿಯ ಪರೀಕ್ಷಾ ಪದ್ಧತಿ, ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ.
ಶಾರೀರ ಸ್ಥಾನ
[ಬದಲಾಯಿಸಿ]ಈ ಸ್ಥಾನವು ೮ ಅಧ್ಯಾಯಗಳಲ್ಲಿ ಗರ್ಭ ಉತ್ಪತ್ತಿ, ಬೆಳವಣಿಗೆ, ಪ್ರಸವ, ಗರ್ಭಿಣಿ ಹಾಗೂ ನವಜಾತ ಶಿಶುವಿನ ಪರಿಚರ್ಯೆ, ಶರೀರ ರಚನಾ ಶಾಸ್ತ್ರದ ಬಗ್ಗೆ ವಿಸ್ತಾರವಾಗಿ ವಿವರಿಸಿದೆ.
ಇಂದ್ರಿಯ ಸ್ಥಾನ
[ಬದಲಾಯಿಸಿ]೧೨ ಅಧ್ಯಾಯಗಳಲ್ಲಿ ರೋಗ ಪ್ರಶಮನದ ಸಾಧ್ಯಾಸಾಧ್ಯತೆ ಹಾಗೂ ಅರಿಷ್ಟ ಲಕ್ಷಣಗಳ ಬಗ್ಗೆ ಹೇಳಲಾಗಿದೆ.
ಚಿಕಿತ್ಸಾ ಸ್ಥಾನ
[ಬದಲಾಯಿಸಿ]ಈ ಸ್ಥಾನದಲ್ಲಿ ೩೦ ಅಧ್ಯಾಯಗಳಿವೆ. ಮೊದಲ ಎರಡು ಅಧ್ಯಾಯಗಳಲ್ಲಿ ರಸಾಯನ ತಂತ್ರ ಹಾಗೂ ವಾಜೀಕರಣಗಳ ಬಗ್ಗೆ ವಿವರಿಸಲಾಗಿದೆ. ಉಳಿದ ೨೮ ಅಧ್ಯಾಯಗಳಲ್ಲಿ ವಿವಿಧ ರೋಗಗಳ ಲಕ್ಷಣ, ಚಿಕಿತ್ಸಾ ಕ್ರಮ, ಔಷಧೋಪಕ್ರಮ ಹಾಗೂ ಪಥ್ಯಾಪಥ್ಯಗಳ ವಿವರಣೆಯಿದೆ.
ಕಲ್ಪ ಸ್ಥಾನ
[ಬದಲಾಯಿಸಿ]೧೨ ಅಧ್ಯಾಯಗಳಲ್ಲಿ ಔಷಧ ತಯಾರಿಕಾ ಕ್ರಮ, ಉಪಯೋಗಿಸುವ ವಿಧಾನ, ವಿಷ ಹಾಗೂ ವಿಷಗಳ ವಿಧ, ವಿಷದ ಪ್ರಭಾವ ಹಾಗೂ ವಿಷ ಚಿಕಿತ್ಸೆಯ ಬಗ್ಗೆ ವಿವರಿಸಲಾಗಿದೆ.
ಸಿದ್ಧಿ ಸ್ಥಾನ
[ಬದಲಾಯಿಸಿ]ರೋಗ ಗುಣಮುಖ ಹೊಂದುವ ಲಕ್ಷಣ, ಪಂಚಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಲಾಗಿದೆ.
ಹೀಗೆ ಎಂಟು ಸ್ಥಾನಗಳಲ್ಲಿ ಒಟ್ಟು ೧೨೦ ಅಧ್ಯಾಯಗಳನ್ನು ಶ್ಲೋಕ ಹಾಗೂ ಗದ್ಯ ರೂಪದಲ್ಲಿ ರಚಿಸಲಾಗಿದೆ.
ಟೀಕಾಕಾರರು
[ಬದಲಾಯಿಸಿ]- ಚಕ್ರಪಾಣಿದತ್ತ - ಆಯುರ್ವೇದ ದೀಪಿಕಾ
- ಭಟ್ಟಾರಕ ಹರಿಶ್ಚಂದ್ರ - ಚರಕನ್ಯಾಸ
- ಜೇಜ್ಜಟ - ನಿರಂತರ ಪದವ್ಯಾಖ್ಯ
- ಶಿವದಾಸ ಸೇನ್ - ತತ್ವ ಚಂದ್ರಿಕಾ [೩]