ಶಸ್ತ್ರಚಿಕಿತ್ಸೆ
ಶಸ್ತ್ರಚಿಕಿತ್ಸೆಯು (ಸರ್ಜರಿ ಪದವು ಗ್ರೀಕ್ ಭಾಷೆಯ χειρουργική ಅಂದರೆ ಚೆಯಿರೋರ್ಗಿಕೆ ಯಿಂದ ಬಂದಿದೆ, ಮೂಲ ಲ್ಯಾಟಿನ್‍ನಲ್ಲಿ chirurgiae ಅಂದರೆ "ಕೈಯಿಂದ ಮಾಡಲಾಗುವ ಕೆಲಸ" ಎಂಬ ಅರ್ಥವಿದೆ) ಒಂದು ವೈದ್ಯಕೀಯ ಪರಿಣತಿಯಾಗಿದೆ. ಒಬ್ಬ ರೋಗಿಯನ್ನು ಪರೀಕ್ಷಿಸಲು ಹಾಗೂ/ಅಥವಾ ರೋಗಶಾಸ್ತ್ರೀಯ ಸಂದರ್ಭಗಳಾದ ಕಾಯಿಲೆ ಅಥವಾ ಗಾಯಗಳಿಗೆ ಚಿಕಿತ್ಸೆ ನೀಡಲು, ದೇಹಕ್ಕೆ ಶಸ್ತ್ರಚಿಕಿತ್ಸೆ ಹಾಗು ಉಪಕರಣ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಶರೀರ ಕ್ರಿಯೆ ಅಥವಾ ಸ್ವರೂಪವನ್ನು ಇನ್ನಷ್ಟು ಸುಧಾರಿಸುವಲ್ಲಿ ಹಾಗು ಕೆಲವೊಂದು ಬಾರಿ ಧಾರ್ಮಿಕ ಕಾರಣಗಳಿಗೆ ಸಹಾಯಕವಾಗಿದೆ.
ಸೋಂಕಿನ ನಿವಾರಣೆ, ಕೊಳೆತ ಅಂಗಗಳ ಅಂತೆಯೇ ಅರ್ಬುದರೋಗದ ಗೆಡ್ಡೆಗಳ ತೆಗೆಯುವಿಕೆ, ಛಿದ್ರಗೊಂಡ ಊತಕದ ದುರಸ್ತಿ, ಮುರಿದ ಮೂಳೆಗಳ ಜೋಡಣೆ, ಅಂಗಗಳ ಕಸಿ ಇವೇ ಮುಂತಾದವು ಶಸ್ತ್ರಚಿಕಿತ್ಸಾಕ್ರಮದಲ್ಲಿ ಸೇರಿವೆ. ಸಮಗ್ರವಾಗಿ ಇವೆಲ್ಲವೂ ಸಾಮಾನ್ಯ ಶಸ್ತ್ರಚಿಕಿತ್ಸೆ (ಜನರಲ್ ಸರ್ಜರಿ) ಎಂಬ ಶಿರೋನಾಮದಲ್ಲಿ ಸೇರಿದ್ದು ಪ್ರತ್ಯೇಕವಾಗಿ ಒಂದೊಂದು ಉಪಾಂಗಗಳಾಗಿವೆ.
ಶಸ್ತ್ರಚಿಕಿತ್ಸೆ ನಡೆಸುವ ವಿಧಾನವನ್ನು ಶಸ್ತ್ರಚಿಕಿತ್ಸಕ ವಿಧಾನ, ಶಸ್ತ್ರಕ್ರಿಯೆ, ಅಥವಾ ಕೇವಲ ಶಸ್ತ್ರಚಿಕಿತ್ಸೆ ಎಂದು ಕರೆಯಬಹುದು. ಈ ಸಂದರ್ಭದಲ್ಲಿ, ಕ್ರಿಯಾಪದವಾದ ಶಸ್ತ್ರಕ್ರಿಯೆ ಮಾಡುವುದು ಎಂದರೆ ಶಸ್ತ್ರಚಿಕಿತ್ಸೆಯನ್ನು ವೃತ್ತಿಪರವಾಗಿ ನಡೆಸುವುದು ಎಂಬ ಅರ್ಥವಿದೆ. ಶಸ್ತ್ರಚಿಕಿತ್ಸಕ ಎಂಬ ವಿಶೇಷಣವು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದೆ; ಉದಾಹರಣೆಗೆ ಶಸ್ತ್ರಚಿಕಿತ್ಸಾ ಉಪಕರಣಗಳು ಅಥವಾ ಸಹಾಯಕವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸುವ ದಾದಿ ಎಂದೂ ಅರ್ಥೈಸಬಹುದು. ಶಸ್ತ್ರಚಿಕಿತ್ಸೆಗೆ ಗುರಿಯಾಗುವ ರೋಗಿ ಅಥವಾ ವ್ಯಕ್ತಿಯು ಒಬ್ಬ ಮನುಷ್ಯ ಅಥವಾ ಒಂದು ಪ್ರಾಣಿಯಾಗಿರಬಹುದು. ಒಬ್ಬ ಶಸ್ತ್ರಚಿಕಿತ್ಸಕನು ಅಗತ್ಯವಿರುವ ರೋಗಿಗಳಿಗೆ ಶಸ್ತ್ರಕ್ರಿಯೆ ನಡೆಸುತ್ತಾನೆ. ಅಪರೂಪದ ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸಕರು ಸ್ವತಃ ತಾವೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಶಸ್ತ್ರಚಿಕಿತ್ಸಕರು ಎಂದು ಕರೆಯಲ್ಪಡುವ ವ್ಯಕ್ತಿಗಳು ಸಾಮಾನ್ಯವಾಗಿ ವೈದ್ಯಕೀಯ ವೃತ್ತಿಗಾರರಾಗಿರುತ್ತಾರೆ, ಆದರೆ ಈ ಪದವು ವೈದ್ಯರು, ಪಾದಚಿಕಿತ್ಸಕರು, ದಂತವೈದ್ಯರು (ಅಥವಾ ಬಾಯಿಯ (ಮುಖದ) ಹಾಗೂ ಒಸಡುಚಹರೆಯ ಶಸ್ತ್ರಚಿಕಿತ್ಸಕ) ಹಾಗು ಪ್ರಾಣಿಶಸ್ತ್ರಚಿಕಿತ್ಸಕರಿಗೂ ಅನ್ವಯವಾಗುತ್ತದೆ. ಶಸ್ತ್ರಚಿಕಿತ್ಸೆಯು ಕೆಲವೇ ನಿಮಿಷಗಳಿಂದ ಹಿಡಿದು ಗಂಟೆಗಳ ತನಕವೂ ತೆಗೆದುಕೊಳ್ಳಬಹುದು. ಆದರೆ ಇದು ಸಾಮಾನ್ಯವಾಗಿ ಪ್ರಗತಿಯಲ್ಲಿರುವ ಅಥವಾ ಆವರ್ತಕ ಬಗೆಯ ಚಿಕಿತ್ಸೆಯಲ್ಲ.
ಶಸ್ತ್ರಚಿಕಿತ್ಸೆ ಎಂಬ ಪದವು ಶಸ್ತ್ರಕ್ರಿಯೆ ನಡೆಯುವ ಸ್ಥಳವನ್ನು, ಅಥವಾ ಕೇವಲ ವೈದ್ಯರ ಕೋಣೆಯನ್ನು, ದಂತವೈದ್ಯ/ಬಾಯಿ ಹಾಗು ವಸಡು-ಚಹರೆಯ ಶಸ್ತ್ರಚಿಕಿತ್ಸಕ, ಅಥವಾ ಪ್ರಾಣಿಶಸ್ತ್ರಚಿಕಿತ್ಸಕರನ್ನೂ ಸೂಚಿಸುತ್ತದೆ.
ಶಸ್ತ್ರಚಿಕಿತ್ಸೆಯ ಅರ್ಥವಿವರಣೆಗಳು
[ಬದಲಾಯಿಸಿ]ಶಸ್ತ್ರಚಿಕಿತ್ಸೆಯು ಒಂದು ವೈದ್ಯಕೀಯ ತಂತ್ರಜ್ಞಾನವಾಗಿದ್ದು, ಅಂಗಾಂಶಗಳ ಮೇಲಿನ ಭೌತಿಕ ಮಧ್ಯಸ್ಥಿಕೆಯನ್ನು ಒಳಗೊಂಡಿರುತ್ತದೆ.
ಒಂದು ಸಾಧಾರಣ ನಿಯಮದ ಪ್ರಕಾರ, ರೋಗಿಯ ಅಂಗಾಂಶದ ಛೇದನ ಅಥವಾ ಹಿಂದೆ ಆದಂತಹ ಗಾಯದ ಮುಚ್ಚುವಿಕೆಯನ್ನು ಒಳಗೊಳ್ಳುವ ವಿಧಾನವನ್ನು ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಇತರ ವಿಧಾನಗಳು ಅಗತ್ಯವಾಗಿ ಈ ಸಂಪ್ರದಾಯದ ಅಡಿಯಲ್ಲಿ ಬರುವುದಿಲ್ಲ, ಉದಾಹರಣೆಗೆ ಆಂಜಿಯೋಪ್ಲ್ಯಾಸ್ಟಿ ಅಥವಾ ಅಂತರ್ದರ್ಶನಗಳು "ಸಾಮಾನ್ಯವಾದ" ಶಸ್ತ್ರಚಿಕಿತ್ಸಕ ವಿಧಾನಗಳು ಅಥವಾ ಸನ್ನಿವೇಶಗಳನ್ನು ಒಳಗೊಂಡರೆ ಮಾತ್ರ ಅವನ್ನು ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ, ಉದಾಹರಣೆಗೆ ಒಂದು ನಿರ್ದಿಷ್ಟ ಸನ್ನಿವೇಶದ ಬಳಕೆ, ಅರಿವಳಿಕೆ, ಪೂತಿನಾಶಕ ಸನ್ನಿವೇಶಗಳು, ವಿಶಿಷ್ಟ ಶಸ್ತ್ರಚಿಕಿತ್ಸಕ ಉಪಕರಣಗಳು, ಹಾಗು ಹೊಲಿಗೆ ಹಾಕುವುದು ಅಥವಾ ತಂತಿಗಳಿಂದ ಜೋಡಿಸುವುದನ್ನು ಬಳಸಿಕೊಳ್ಳುವುದು ಇತ್ಯಾದಿ ಸೇರಿವೆ. ಎಲ್ಲ ರೂಪದ ಶಸ್ತ್ರಚಿಕಿತ್ಸೆಗಳನ್ನು ಛೇದನ ಬೇಕಿರುವ ವಿಧಾನಗಳೆಂದು ಪರಿಗಣಿಸಲಾಗುತ್ತದೆ; "ಛೇದನ ಬೇಕಿಲ್ಲದ ಶಸ್ತ್ರಚಿಕಿತ್ಸೆ" ಎಂದು ಕರೆಯಲ್ಪಡುವ ವಿಧಾನವು ಸಾಮಾನ್ಯವಾಗಿ ಛೇದಿಸಲ್ಪಡುತ್ತಿರುವ ರಚನೆಯನ್ನು ಭೇದಿಸಿಕೊಂಡು ಹೋಗದ ಛೇದನವನ್ನು ಸೂಚಿಸುತ್ತದೆ. (ಉದಾಹರಣೆಗೆ ಲೇಸರ್ ಮೂಲಕ ನಡೆಸಲಾಗುವ ಕಾರ್ನಿಯಾದ ವಿಚ್ಛೇದನ) ಅಥವಾ ರೇಡಿಯೋ ಶಸ್ತ್ರಚಿಕಿತ್ಸಾ ವಿಧಾನ (ಉದಾಹರಣೆಗೆ ದುರ್ಮಾಂಸದ ವಿಕಿರಣೀಕರಣ ಇತ್ಯಾದಿ).
ಶಸ್ತ್ರಚಿಕಿತ್ಸೆಯ ಬಗೆಗಳು
[ಬದಲಾಯಿಸಿ]ಶಸ್ತ್ರಚಿಕಿತ್ಸಕ ವಿಧಾನಗಳನ್ನು ಸಾಮಾನ್ಯವಾಗಿ ತುರ್ತುಸ್ಥಿತಿ, ವಿಧಾನದ ಬಗೆ, ಒಳಗೊಂಡ ದೇಹ ವ್ಯವಸ್ಥೆ, ಛೇದನದ ಮಟ್ಟ, ಹಾಗು ವಿಶೇಷ ಉಪಕರಣಗಳನ್ನು ಆಧರಿಸಿ ವರ್ಗೀಕರಿಸಲಾಗುತ್ತದೆ.
ಜರೂರಲ್ಲದ ಶಸ್ತ್ರಚಿಕಿತ್ಸೆಯನ್ನು ಜೀವಕ್ಕೆ ಅಪಾಯವಿಲ್ಲದಂತಹ ಪರಿಸ್ಥಿತಿಗಳನ್ನು ಸರಿಪಡಿಸಲು ನಡೆಸಲಾಗುತ್ತದೆ. ಅದಲ್ಲದೇ ಇದನ್ನು ರೋಗಿಯ ಕೋರಿಕೆಯ ಮೇರೆಗೆ ನಡೆಸಲಾಗುತ್ತದೆ. ಇದು ಶಸ್ತ್ರಚಿಕಿತ್ಸಕರ ಹಾಗು ಲಭ್ಯವಿರುವ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಅವಲಂಬಿಸಿರುತ್ತದೆ. ತುರ್ತುಸ್ಥಿತಿಯ ಶಸ್ತ್ರಚಿಕಿತ್ಸೆ ಎಂದರೆ ಜೀವ, ಅಂಗ, ಅಥವಾ ಕಾರ್ಯಾತ್ಮಕ ಸಾಮರ್ಥ್ಯವನ್ನು ಉಳಿಸಲು ತಕ್ಷಣವೇ ನಡೆಸಲಾಗುವ ಶಸ್ತ್ರಚಿಕಿತ್ಸೆ.
ಪರಿಶೋಧನಾತ್ಮಕ ಶಸ್ತ್ರಚಿಕಿತ್ಸೆಯನ್ನು ರೋಗನಿರ್ಣಯಕ್ಕೆ ಸಹಾಯಾರ್ಥವಾಗಿ ಅಥವಾ ರೋಗವನ್ನು ದೃಢಪಡಿಸಲು ನಡೆಸಲಾಗುತ್ತದೆ. ಚಿಕಿತ್ಸಾತ್ಮಕ ಶಸ್ತ್ರಚಿಕಿತ್ಸೆಯು ಈ ಹಿಂದೆ ನಿರ್ಣಯಿಸಲಾದ ರೋಗ ಪರಿಸ್ಥಿತಿಗೆ ಚಿಕಿತ್ಸೆ ನೀಡುತ್ತದೆ.
ಅಂಗಛೇದನವು ದೇಹದ ಅಂಗದ ಛೇದನವನ್ನು ಒಳಗೊಂಡಿರುತ್ತದೆ, ಸಾಮಾನ್ಯವಾಗಿ ಒಂದು ಅವಯವ ಅಥವಾ ಬೆರಳು. ರೀಪ್ಲಾಂಟೇಶನ್ ಹಾನಿ ಉಂಟಾದ ಶರೀರ ಭಾಗದ ಮರುಜೋಡಣೆಯಾಗಿದೆ. ಪುನಾರಚನೆಯ ಶಸ್ತ್ರಚಿಕಿತ್ಸೆಯು ಗಾಯಗೊಂಡ, ಅಂಗಹೀನವಾದ, ಅಥವಾ ವಿರೂಪಗೊಂಡ ದೇಹದ ಭಾಗದ ಪುನಾರಚನೆಯನ್ನು ಒಳಗೊಂಡಿರುತ್ತದೆ. ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಮಾಮೂಲಾದ ರಚನೆಯ ರೂಪವನ್ನು ಸುಧಾರಣೆ ಮಾಡಲು ನಡೆಸಲಾಗುತ್ತದೆ. ಛೇದನ ಎಂದರೆ ಒಂದು ಅಂಗ, ಅಂಗಾಂಶ, ಅಥವಾ ದೇಹದ ಇತರ ಭಾಗವನ್ನು ರೋಗಿಯಿಂದ ಕತ್ತರಿಸಿ ಬೇರ್ಪಡಿಸುವುದು. ಕಸಿ ಶಸ್ತ್ರಚಿಕಿತ್ಸೆ ಎಂದರೆ ಅಂಗ ಅಥವಾ ದೇಹದ ಇತರ ಭಾಗವನ್ನು ರೋಗಿಗೆ ಬೇರೊಬ್ಬರಿಂದ (ಅಥವಾ ಪ್ರಾಣಿಯಿಂದ) ದೇಹದ ಒಳಗೆ ಜೋಡಿಸುವುದು. ಒಂದು ಅಂಗ ಅಥವಾ ದೇಹದ ಭಾಗವನ್ನು ಜೀವಂತ ಮಾನವರಿಂದ ಅಥವಾ ಪ್ರಾಣಿಯಿಂದ ಬೇರ್ಪಡಿಸಿ ಕಸಿಯಲ್ಲಿ ಬಳಸುವುದೂ ಶಸ್ತ್ರಚಿಕಿತ್ಸೆಯ ಒಂದು ಬಗೆಯಾಗಿದೆ.
ಒಂದು ಅಂಗವ್ಯವಸ್ಥೆ ಅಥವಾ ರಚನೆಯ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸಿದಾಗ, ಒಳಗೊಳ್ಳಲಾದ ಅಂಗ, ಅಂಗವ್ಯವಸ್ಥೆ ಅಥವಾ ಅಂಗಾಂಶವನ್ನು ಆಧರಿಸಿ ಅದನ್ನು ವರ್ಗೀಕರಿಸಬಹುದು. ಉದಾಹರಣೆ: ಹೃದಯ ಶಸ್ತ್ರಚಿಕಿತ್ಸೆ (ಹೃದಯಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತದೆ), ಜಠರ-ಕರುಳಿನ ಶಸ್ತ್ರಚಿಕಿತ್ಸೆ (ಜೀರ್ಣಾಂಗ ವ್ಯೂಹ ಹಾಗು ಅದರ ಅನುಬಂಧವಾದ ಅಂಗಗಳಿಗೆ ನಡೆಸಲಾಗುತ್ತದೆ), ಅಲ್ಲದೇ ಮೂಳೆ ಶಸ್ತ್ರಚಿಕಿತ್ಸೆ (ಮೂಳೆಗಳು ಹಾಗೂ/ಅಥವಾ ಸ್ನಾಯುಗಳ ಮೇಲೆ ನಡೆಸಲಾಗುತ್ತದೆ).
ಕನಿಷ್ಠತಮ ಛೇದನ ಶಸ್ತ್ರಚಿಕಿತ್ಸೆಯು ಸಣ್ಣದಾದ ಬಾಹ್ಯ ಛೇದನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ದೇಹದ ಕುಳಿ ಅಥವಾ ರಚನೆಯೊಳಗೆ ಕಿರಿದಾದ ಉಪಕರಣಗಳನ್ನು ಅಳವಡಿಸಲಾಗುತ್ತದೆ, ಉದರದರ್ಶಕ ಶಸ್ತ್ರಚಿಕಿತ್ಸೆ ಅಥವಾ ಆಂಜಿಯೋಪ್ಲ್ಯಾಸ್ಟಿಯಲ್ಲಿರುವಂತೆ. ಇದಕ್ಕೆ ವ್ಯತಿರಿಕ್ತವಾಗಿ, ತೆರೆದ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಅಗತ್ಯವಿರುವ ಭಾಗದಲ್ಲಿ ದೊಡ್ಡ ಛೇದನ ಮಾಡುವ ಅಗತ್ಯವಿರುತ್ತದೆ. ಲೇಸರ್ ಶಸ್ತ್ರಚಿಕಿತ್ಸೆಯಲ್ಲಿ ಅಂಗಾಂಶದ ಛೇದನಕ್ಕೆ ಚಿಕ್ಕಚಾಕು (ಚೂರಿ) ಅಥವಾ ಇದೇ ರೀತಿಯಾದ ಶಸ್ತ್ರಚಿಕಿತ್ಸಕ ಉಪಕರಣಗಳ ಬದಲಿಗೆ ಲೇಸರ್‌ನ ಅಗತ್ಯವಿರುತ್ತದೆ. ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರು ಸಣ್ಣ ರಚನೆಗಳನ್ನು ವೀಕ್ಷಿಸಲು ಛೇದನದ ಸಮಯದಲ್ಲಿ ಸೂಕ್ಷ್ಮದರ್ಶಕವನ್ನು ಬಳಸುತ್ತಾರೆ. ರೊಬೋಟಿಕ್ ಶಸ್ತ್ರಚಿಕಿತ್ಸೆಯು ಶಸ್ತ್ರಚಿಕಿತ್ಸಕ ರೋಬೋಟ್ ಅನ್ನು ಬಳಕೆ ಮಾಡಿಕೊಳ್ಳುತ್ತದೆ, ಉದಾಹರಣೆಗೆ ಡಾ ವಿಂಚಿ ಅಥವಾ ಜ಼್ಯೂಸ್ ಶಸ್ತ್ರಚಿಕಿತ್ಸಕ ವ್ಯವಸ್ಥೆಗಳು. ಇದನ್ನು ಶಸ್ತ್ರಚಿಕಿತ್ಸಕರ ನಿರ್ದೇಶನದಡಿಯಲ್ಲಿ ಉಪಕರಣಗಳ ಬಳಕೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ಪರಿಭಾಷೆ
[ಬದಲಾಯಿಸಿ]- ಛೇದನ ಶಸ್ತ್ರಚಿಕಿತ್ಸೆ ಎಂಬ ಪದವು ಸಾಮಾನ್ಯವಾಗಿ ಕತ್ತರಿಸಿ ಹಾಕಬೇಕಾದ ಅಂಗದ ಹೆಸರಿನೊಂದಿಗೆ ಆರಂಭಗೊಂಡು -ಎಕ್ಟಮಿ ಎಂಬ ಪದದೊಂದಿಗೆ ಕೊನೆಗೊಳ್ಳುತ್ತದೆ.
- ಒಂದು ಅಂಗ ಅಥವಾ ಅಂಗಾಂಶದ ಛೇದನವನ್ನು ಒಳಗೊಳ್ಳುವ ವಿಧಾನಗಳು -ಓಟಮಿ ಎಂಬ ಪದದೊಂದಿಗೆ ಕೊನೆಗೊಳ್ಳುತ್ತವೆ. ಉದರದ ಹೊರಪದರವನ್ನು ಕತ್ತರಿಸುವ ಮೂಲಕ ಉದರದ ಕುಳಿಯನ್ನು ಪ್ರವೇಶಿಸುವ ಶಸ್ತ್ರಚಿಕಿತ್ಸಕ ವಿಧಾನವನ್ನು ಲ್ಯಾಪರೋಟಮಿ ಎಂದು ಕರೆಯಲಾಗುತ್ತದೆ.
- ಸಣ್ಣ ಛೇದನದ ಮೂಲಕ ಅಂತರ್ದರ್ಶಕವನ್ನು ಅಳವಡಿಸುವ ಕನಿಷ್ಠತಮ ಛೇದನ ಬೇಕಿರುವ ವಿಧಾನಗಳು -ಓಸ್ಕೊಪಿ ಎಂಬ ಪದದಿಂದ ಕೊನೆಗೊಳ್ಳುತ್ತವೆ. ಉದಾಹರಣೆಗೆ, ಉದರದ ಕುಳಿಯಲ್ಲಿ ನಡೆಯುವ ಇಂತಹ ಶಸ್ತ್ರಚಿಕಿತ್ಸೆಯನ್ನು ಲ್ಯಾಪ್ರೋಸ್ಕೊಪಿ ಎಂದು ಕರೆಯಲಾಗುತ್ತದೆ.
- ದೇಹದಲ್ಲಿ ಸ್ಟೋಮ(ಕೃತಕ ರಂಧ್ರ) ಎಂದು ಕರೆಯಲ್ಪಡುವ ಶಾಶ್ವತ ಅಥವಾ ಅರೆ-ಶಾಶ್ವತ ಆರಂಭಿಕ ಭಾಗದ ರಚನಾ ವಿಧಾನಗಳು -ಓಸ್ಟೋಮಿ ಎಂಬ ಪದದಿಂದ ಕೊನೆಗೊಳ್ಳುತ್ತವೆ.
- ಪುನಾರಚನೆ, ದೇಹದ ಅಂಗದ ಪ್ಲ್ಯಾಸ್ಟಿಕ್ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯು ಪುನಾರಚನೆಯಾಗಬೇಕಾದ ದೇಹದ ಅಂಗಾಂಗಗಳ ಹೆಸರಿನಿಂದ ಆರಂಭಗೊಂಡು -ಓಪ್ಲ್ಯಾಸ್ಟಿ ಇಂದ ಕೊನೆಗೊಳ್ಳುತ್ತದೆ. ರೈನೋ ಎಂಬ ಪದವನ್ನು "ಮೂಗಿಗೆ" ಪೂರ್ವಪ್ರತ್ಯಯವಾಗಿ ಬಳಸಲಾಗುತ್ತದೆ, ಈ ರೀತಿಯಾಗಿ ರೈನೋಪ್ಲ್ಯಾಸ್ಟಿ ಎಂಬುದು ಮೂಲತಃ ಮೂಗಿನ ಪುನಾರಚನೆ ಅಥವಾ ರೂಪಸುಧಾರಕ ಶಸ್ತ್ರಚಿಕಿತ್ಸೆ.
- ಹಾನಿಯುಂಟಾದ ಅಥವಾ ಬಹುಕಾಲದ ಅಪಸಾಮಾನ್ಯ ರಚನೆಯ ರಿಪೇರಿ (ದುರಸ್ತಿ) ಮಾಡುವ ಕ್ರಿಯೆಗಾಗಿ ಬಳಸುವ ಪದವು -ರ್ರಫಿ ಯಿಂದ ಕೊನೆಗೊಳ್ಳುತ್ತದೆ. ಹರ್ನಿಯೋರ್ರಫಿ ಎಂಬುದು ಹರ್ನಿಯಾದ ದುರಸ್ತಿಯಾದರೆ, ಪೆರಿನಿಯೋರ್ರಫಿ ಎಂಬುದು ಮೂಲಾಧಾರ ಭಾಗದ ದುರಸ್ತಿ.
ಶಸ್ತ್ರಚಿಕಿತ್ಸಕ ವಿಧಾನದ ವಿವರಣೆ
[ಬದಲಾಯಿಸಿ]ಆಸ್ಪತ್ರೆಯಲ್ಲಿ, ಆಧುನಿಕ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಕ ಉಪಕರಣಗಳು, ರೋಗಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೇಜು ಹಾಗು ಇತರ ಉಪಕರಣವನ್ನು ಬಳಸಿಕೊಂಡು ಆಪರೇಟಿಂಗ್ ಥಿಯೇಟರ್ (ಶಸ್ತ್ರಕ್ರಿಯಾ ಕೊಠಡಿ) ನಲ್ಲಿ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುವ ಪರಿಸರ ಹಾಗು ವಿಧಾನಗಳು ಅಪೂತಿಕಾರಿ ವಿಧಾನದ ನಿಯಮಗಳಿಂದ ವ್ಯವಸ್ಥಿತಗೊಂಡಿರುತ್ತದೆ: "ಸೂಕ್ಷ್ಮಜೀವಿರಹಿತ"(ಸೂಕ್ಷ್ಮಜೀವಿಗಳಿಂದ ಮುಕ್ತವಾದ) ವಸ್ತುಗಳನ್ನು "ಸೂಕ್ಷ್ಮಜೀವಿಸಹಿತ" ಅಥವಾ "ಕಲುಷಿತ" ಪದಾರ್ಥಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸುವುದು. ಎಲ್ಲ ಶಸ್ತ್ರಚಿಕಿತ್ಸಕ ಉಪಕರಣಗಳನ್ನು ಕ್ರಿಮಿನಾಶನಗೊಳಿಸಬೇಕು. ಜೊತೆಗೆ, ಉಪಕರಣವು ಕಲುಷಿತಗೊಂಡರೆ ಇದನ್ನು ಬದಲಾಯಿಸಬೇಕು ಅಥವಾ ಮತ್ತೆ ಕ್ರಿಮಿನಾಶನಗೊಳಿಸಬೇಕು (ಅಂದರೆ ಉಪಕರಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಹೋದರೆ, ಅಥವಾ ಅದು ಕ್ರಿಮಿಸಹಿತ ಮೇಲ್ಮೈಯನ್ನು ಸ್ಪರ್ಶಿಸಿದ ಸಂದರ್ಭದಲ್ಲಿ). ಶಸ್ತ್ರಚಿಕಿತ್ಸಕ ಕೊಠಡಿಯಲ್ಲಿನ ಸಿಬ್ಬಂದಿಯು ಸೂಕ್ಷ್ಮಜೀವಿರಹಿತ ಉಡುಪುಗಳನ್ನು ಧರಿಸಬೇಕು (ಕೈಯನ್ನು ಸಂಪೂರ್ಣವಾಗಿ ತೊಳೆಯುವುದು, ಸ್ಕ್ರಬ್ ಟೋಪಿ, ಸೂಕ್ಷ್ಮಜೀವಿರಹಿತ ಶಸ್ತ್ರಚಿಕಿತ್ಸಕ ಗೌನು, ಸೂಕ್ಷ್ಮಜೀವಿರಹಿತ ಕೃತಕ ರಬ್ಬರು ಅಥವಾ ರಬ್ಬರಲ್ಲದ ಪಾಲಿಮರ್ ಕೈಗವಸುಗಳು ಹಾಗು ಶಸ್ತ್ರಚಿಕಿತ್ಸಕ ಮುಖರಕ್ಷೆ). ಜೊತೆಗೆ ಅವರು ತಮ್ಮ ಕೈಗಳನ್ನು ಹಾಗು ತೋಳುಗಳನ್ನು ಒಂದು ಪ್ರಮಾಣೀಕೃತ ಸೋಂಕು ನಿವಾರಕ ಪದಾರ್ಥದಿಂದ ಪ್ರತಿ ವಿಧಾನಕ್ಕೆ ಮುಂಚೆ ತೊಳೆಯಬೇಕು.
ಶಸ್ತ್ರಚಿಕಿತ್ಸೆಗೆ ಮುಂಚೆ, ರೋಗಿಗೆ ವೈದ್ಯಕೀಯ ಪರೀಕ್ಷೆ, ಶಸ್ತ್ರಚಿಕಿತ್ಸೆಗೆ ಮುಂಚಿನ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ, ಹಾಗೂ ಅವರ ದೈಹಿಕ ಸ್ಥಿತಿಗತಿಯನ್ನು ಎಎಸ್‍ಎ ದೈಹಿಕ ಸ್ಥಿತಿಗತಿ ವರ್ಗೀಕರಣ ಪದ್ಧತಿಯ ಪ್ರಕಾರ ನಿರ್ಧರಿಸಲಾಗುತ್ತದೆ. ಇದರಿಂದ ಹೊರಬಿದ್ದ ಫಲಿತಾಂಶಗಳು ಸಮಾಧಾನಕರವಾಗಿದ್ದರೆ, ರೋಗಿಯು ಸಮ್ಮತಿ ಅರ್ಜಿಗೆ ಸಹಿ ಹಾಕುತ್ತಾನೆ. ಜೊತೆಗೆ ಈತನಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ರಕ್ತದ ಹಾನಿ ಉಂಟಾಗುವ ನಿರೀಕ್ಷೆ ಇದ್ದರೆ, ಸ್ವಜಾತ ರಕ್ತ ದಾನದಿಂದ ಶಸ್ತ್ರಚಿಕಿತ್ಸೆಗೆ ಕೆಲ ವಾರಗಳು ಮುಂಚಿತವಾಗಿ ರಕ್ತವನ್ನು ಮುಂಗಡವಾಗಿ ಕಾಯ್ದಿರಿಸಬೇಕು. ಶಸ್ತ್ರಚಿಕಿತ್ಸೆಯು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ್ದೇ ಆದರೆ, ರೋಗಿಗೆ ಶಸ್ತ್ರಚಿಕಿತ್ಸೆ ನಡೆಯುವ ಹಿಂದಿನ ರಾತ್ರಿ ಪಾಲಿಈಥಲಿನ್ ಗ್ಲೈಕಾಲ್‍ನ ದ್ರಾವಣವನ್ನು ನೀಡುವ ಮೂಲಕ ಕರುಳನ್ನು ಪೂರ್ವಸಿದ್ಧತೆಗೊಳಿಸಿಕೊಳ್ಳಲು ನಿರ್ದೆಶಿಸಲಾಗುತ್ತದೆ. ರೋಗಿಗಳಿಗೆ ಆಹಾರ ಅಥವಾ ದ್ರವಾಹಾರವನ್ನು ವರ್ಜಿಸಲು ಸಹ ಸೂಚಿಸಲಾಗುತ್ತದೆ (ಒಂದು ಎನ್‍ಪಿಒ ಆದೇಶ, ಇದರಂತೆ ಅವರು ಶಸ್ತ್ರಚಿಕಿತ್ಸೆ ನಡೆಯುವ ಹಿಂದಿನ ಮಧ್ಯರಾತ್ರಿಯ ನಂತರ ತೊರೆಯಬೇಕಾಗುತ್ತದೆ, ಶಸ್ತ್ರಚಿಕಿತ್ಸಾ ಪೂರ್ವದ ಔಷಧವು ಹೊಟ್ಟೆಯಲ್ಲಿರುವ ಪದಾರ್ಥಗಳ ಮೇಲೆ ಬೀರುವ ಪರಿಣಾಮವನ್ನು ತಗ್ಗಿಸಲು, ಜೊತೆಗೆ ರೋಗಿಯು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅಥವಾ ನಂತರ ಚೋಷಣೆಯ ಅಪಾಯವನ್ನು ತಗ್ಗಿಸಲು ಈ ರೀತಿ ಮಾಡಲಾಗುತ್ತದೆ).
ಶಸ್ತ್ರಚಿಕಿತ್ಸಾಪೂರ್ವದ ಕೊಠಡಿಯಲ್ಲಿ, ರೋಗಿಯು ತಮ್ಮ ಸಾಮಾನ್ಯ ಉಡುಪು, ಬಟ್ಟೆಗಳನ್ನು ಬದಲಾಯಿಸುತ್ತಾರೆ. ಜೊತೆಗೆ ಆತನ ಅಥವಾ ಆಕೆಯ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಣೆಯನ್ನು ದೃಢಪಡಿಸಬೇಕು. ಅತಿಮುಖ್ಯವಾದ ಲಕ್ಷಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ, ದೇಹದ ಹೊರಮೈಯ ನರಗಳ ತುದಿಗಳಿಗೆ IV ಲೈನ್‍ನ್ನು (ತೂರುನಳಿಕೆಯನ್ನು) ಅಳವಡಿಸಲಾಗುತ್ತದೆ. ಜೊತೆಗೆ ಶಸ್ತ್ರಚಿಕಿತ್ಸಾಪೂರ್ವದ ಔಷಧಗಳನ್ನು ನೀಡಲಾಗುತ್ತದೆ (ಆಂಟಿಬಯೋಟಿಕ್‍ಗಳು, ನಿದ್ರಾಜನಕಗಳು, ಮುಂತಾದವು). ಶಸ್ತ್ರಚಿಕಿತ್ಸಾ ಕೊಠಡಿಗೆ ರೋಗಿಯು ಪ್ರವೇಶಿಸಿದಾಗ, ಶಸ್ತ್ರಚಿಕಿತ್ಸೆ ಮಾಡಬೇಕಾದ ಚರ್ಮದ ಮೇಲ್ಮೈಯನ್ನು ಶುದ್ಧಗೊಳಿಸಿ, ಸೋಂಕಿನ ಸಂಭಾವ್ಯತೆಯನ್ನು ತಗ್ಗಿಸಲು ಕ್ಲೋರ್ಹೆಕ್ಸಿಡೈನ್ ಗ್ಲುಕೊನೆಟ್ ಅಥವಾ ಪೋವಿಡೋನ್-ಐಯೋಡಿನ್ ನಂತಹ ಕೀವುಗಳೆಕಗಳನ್ನು ಲೇಪಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ಜಾಗದಲ್ಲಿ ರೋಮಗಳಿದ್ದರೆ, ಅದನ್ನು ಕೀವುಗಳೆಕಗಳ ಲೇಪನಕ್ಕೆ ಮುಂಚೆ ತೆಗೆದುಹಾಕಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಬೇಕಾದ ಜಾಗವನ್ನು ಹೊರತುಪಡಿಸಿ ಸೂಕ್ಷ್ಮಕ್ರಿಮಿರಹಿತ ಬಟ್ಟೆಗಳನ್ನು ರೋಗಿಯ ದೇಹದ ಎಲ್ಲ ಭಾಗಕ್ಕೂ ಹಾಗೂ ತಲೆಗೆ ಸುತ್ತಲಾಗುತ್ತದೆ; ನಂತರ "ಈಥರ್ ಪರದೆಯನ್ನು" ರೂಪಿಸಲು ಬಟ್ಟೆಯನ್ನು ಆತನ ತಲೆಗೆ ಸಮೀಪದಲ್ಲಿರುವ ಕಂಬಿಗಳ ಹಿಡಿಕೆಗಳಿಗೆ ಭದ್ರಪಡಿಸಲಾಗುತ್ತದೆ, ಇದು (ಸೂಕ್ಷ್ಮಕ್ರಿಮಿಸಹಿತ) ಅರಿವಳಿಕೆತಜ್ಞ/ಅರಿವಳಿಕೆತಜ್ಞರು ನಡೆಸುವ ಕಾರ್ಯವನ್ನು (ಸೂಕ್ಷ್ಮಕ್ರಿಮಿರಹಿತ) ಶಸ್ತ್ರಚಿಕಿತ್ಸಾ ಜಾಗದಿಂದ ಪ್ರತ್ಯೇಕಿಸುತ್ತದೆ.
ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನೋವನ್ನು ತಡೆಗಟ್ಟಲು, ಅಂಗಾಂಶದ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವುದು ಹಾಗು ಹೊಲಿಗೆ ಹಾಕುವುದರಿಂದ ಉಂಟಾಗುವ ನೋವನ್ನು ತಡೆಗಟ್ಟಲು ಅರಿವಳಿಕೆಯನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸಾ ವಿಧಾನವನ್ನು ಆಧರಿಸಿ, ಅರಿವಳಿಕೆಯನ್ನು ಸ್ಥಳೀಯವಾಗಿ ಅಥವಾ ಸಾಮಾನ್ಯ ಅರಿವಳಿಕೆಯಾಗಿ ನೀಡಲಾಗುತ್ತದೆ. ಬೆನ್ನುಮೂಳೆಗೆ ನೀಡಲಾಗುವ ಅರಿವಳಿಕೆಯನ್ನು ಶಸ್ತ್ರಚಿಕಿತ್ಸೆ ಮಾಡುವ ಭಾಗಕ್ಕೆ ಬಳಸಿಕೊಳ್ಳಬಹುದಾದರೂ ಬಹಳ ಅಗಾಧ ಪ್ರಮಾಣದಲ್ಲಿ ನೀಡಬೇಕಾಗುತ್ತದೆ ಅಥವಾ ಸ್ಥಳೀಯ ವಿಭಾಗಕ್ಕೆ ಆಳವೆನಿಸುತ್ತದೆ, ಆದರೆ ಸಾಮಾನ್ಯ ಅರಿವಳಿಕೆಯು ಸಹ ಅಪೇಕ್ಷಣೀಯವಲ್ಲ. ಸ್ಥಳೀಯ ಹಾಗು ಬೆನ್ನುಮೂಳೆಗೆ ನೀಡಲಾಗುವ ಅರಿವಳಿಕೆಯೊಂದಿಗೆ ಶಸ್ತ್ರಚಿಕಿತ್ಸೆ ಮಾಡುವ ಜಾಗವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ, ಆದರೆ ರೋಗಿಗೆ ಪ್ರಜ್ಞೆ ಇರುತ್ತದೆ ಅಥವಾ ಕಡಿಮೆ ಮಟ್ಟದಲ್ಲಿ ನಿದ್ರಾಜನಕಗಳನ್ನು ನೀಡಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ, ಸಾಮಾನ್ಯ ಅರಿವಳಿಕೆಯಿಂದಾಗಿ ರೋಗಿಯು ಪ್ರಜ್ಞೆ ತಪ್ಪುತ್ತಾನೆ, ಹಾಗೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಷ್ಕ್ರಿಯಗೊಳ್ಳುತ್ತಾನೆ. ಈ ಸಂದರ್ಭದಲ್ಲಿ ರೋಗಿಯಲ್ಲಿ ಒಂದು ನಳಿಕೆಯನ್ನು ತೂರಿಸಲಾಗುತ್ತದೆ. ಅದಲ್ಲದೇ ಈತನನ್ನು ಒಂದು ಯಂತ್ರಚಾಲಿತ ಕೃತಕ ಶ್ವಾಸಸಾಧನದ ಮೇಲೆ ಮಲಗಿಸಲಾಗಿರುತ್ತದೆ. ಅಲ್ಲದೇ ಅರಿವಳಿಕೆ ಚುಚ್ಚುಮದ್ದು ಹಾಗು ಒಳಕ್ಕೆ ನಿಶ್ವಾಸ ಪದಾರ್ಥಗಳ ಸಂಯೋಜನೆಯಿಂದ ಇದಕ್ಕೆ ಸಿದ್ಧಪಡಿಸಲಾಗಿರುತ್ತದೆ.
ಶಸ್ತ್ರಚಿಕಿತ್ಸೆ ಮಾಡುವ ಭಾಗವನ್ನು ತಲುಪಲು ಛೇದನ ಮಾಡಲಾಗುತ್ತದೆ. ರಕ್ತಸ್ರಾವ ತಡೆಗಟ್ಟಲು ರಕ್ತನಾಳಗಳನ್ನು ಬಂಧಿಸಲಾಗುತ್ತದೆ, ಜೊತೆಗೆ ಜಾಗವು ತೆರೆದುಕೊಳ್ಳಲು ಅಥವಾ ಛೇದನವು ತೆರೆದುಕೊಂಡಂತೆ ಹಾಗೆ ಇಡಲು ಪ್ರತಿಕರ್ಷಕಗಳನ್ನು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಭಾಗವು ಹಲವಾರು ಪದರಗಳ ಛೇದನವನ್ನು ಹಾಗು ಅಂಗವಿಚ್ಛೇದನವನ್ನು ಒಳಗೊಳ್ಳಬಹುದು. ಉದರ ಶಸ್ತ್ರಚಿಕಿತ್ಸೆಯಲ್ಲಿ, ಛೇದನವು ಚರ್ಮವನ್ನು, ಚರ್ಮದಡಿಯ ಅಂಗಾಂಶ, ಸ್ನಾಯುಗಳ ಮೂರು ಪದರಗಳು ಹಾಗು ನಂತರ ಪರಿವೇಷ್ಟನ ಪಟಲವನ್ನು ಹಾದು ಹೋಗಬೇಕು. ಕೆಲವು ಸಂದರ್ಭಗಳಲ್ಲಿ, ಮತ್ತಷ್ಟು ದೇಹದ ಒಳ ಪ್ರವೇಶ ಪಡೆಯಲು ಮೂಳೆಯನ್ನು ಕತ್ತರಿಸಬೇಕಾಗುತ್ತದೆ; ಉದಾಹರಣೆಗೆ, ಮಿದುಳಿನ ಶಸ್ತ್ರಚಿಕಿತ್ಸೆಯಲ್ಲಿ ಬುರುಡೆಯನ್ನು ಕತ್ತರಿಸುವುದು ಅಥವಾ ಪಕ್ಕೆಗೂಡುಗಳನ್ನು ತೆರೆಯಲು ವಕ್ಷದ (ಹೃದಯ) ಶಸ್ತ್ರಚಿಕಿತ್ಸೆಯಲ್ಲಿ ವಕ್ಷಾಸ್ಥಿಯನ್ನು ಕತ್ತರಿಸುವುದು.
ದೇಹದಲ್ಲಿನ ಸಮಸ್ಯೆಯನ್ನು ಸರಿಪಡಿಸುವ ಕಾರ್ಯವು ನಂತರದಲ್ಲಿ ಮುಂದುವರೆಯುತ್ತದೆ. ಈ ಕಾರ್ಯದಲ್ಲಿ ಕೆಳಕಂಡ ವಿಧಾನಗಳು ಸೇರಿರುತ್ತವೆ:
- ಛೇದನ - ಒಂದು ಅಂಗ, ಗೆಡ್ಡೆ,[೧] ಅಥವಾ ಇತರ ಅಂಗಾಂಶವನ್ನು ಕತ್ತರಿಸುವುದು.
- ಅಂಶಛೇದನ - ಒಂದು ಅಂಗದ ಅಥವಾ ದೇಹದ ಇತರ ರಚನೆಯನ್ನು ಭಾಗಶಃ ತೆಗೆದುಹಾಕುವುದು.
- ಅಂಗಗಳು, ಅಂಗಾಂಶಗಳು, ಮುಂತಾದವುಗಳನ್ನು ಮರುಜೋಡಣೆ ಮಾಡುವುದು, ವಿಶೇಷವಾಗಿ ಪರಿಸ್ಥಿತಿಯು ತೀವ್ರತರವಾಗಿದ್ದಲ್ಲಿ. ಕರುಳಿನಂತಹ ಅಂಗಗಳ ಅಂಶಛೇದನವು ಮರುಜೋಡಣೆಯನ್ನು ಒಳಗೊಂಡಿರುತ್ತದೆ. ಆಂತರಿಕವಾಗಿ ಹೊಲಿಗೆ ಹಾಕುವುದು ಅಥವಾ ತಂತಿಗಳ ಜೋಡಣೆಯನ್ನು ಬಳಸಬಹುದು. ರಕ್ತನಾಳಗಳು ಅಥವಾ ಇತರ ಕೊಳವೆಯಾಕಾರದ ಅಥವಾ ಟೊಳ್ಳಾದ ರಚನೆಗಳ ನಡುವಿನ ಶಸ್ತ್ರಚಿಕಿತ್ಸಕ ಸಂಯೋಜನೆಯನ್ನು, ಉದಾಹರಣೆಗೆ ಕರುಳಿನ ಕುಣಿಕೆಯನ್ನು ಸೇರಿಸುವುದನ್ನು ಅಡ್ಡಗೂಡಣೆ ಎಂದು ಕರೆಯಲಾಗುತ್ತದೆ.
- ಬಂಧನ - ರಕ್ತನಾಳಗಳು, ನಾಳಗಳು, ಅಥವಾ "ಕೊಳವೆ"ಗಳನ್ನು ಬಂಧಿಸುವುದು.
- ಕಸಿ ಕಟ್ಟುವುದು - ಒಂದೇ ದೇಹದಿಂದ (ಅಥವಾ ಬೇರೆ ದೇಹದಿಂದ) ಕತ್ತರಿಸಲಾದ ಅಂಗಾಂಶದ ತುಂಡುಗಳು ಅಥವಾ ಭಾಗಶಃ ದೇಹಕ್ಕೆ ಜೋಡಿಸಲಾದ ಅಂಗಾಂಶದ ಚರ್ಮದ ತುಂಡುಗಳು, ಆದರೆ ಇವುಗಳನ್ನು ಸಮಸ್ಯೆ ಇರುವ ದೇಹದ ಭಾಗವನ್ನು ಮರುಜೋಡಣೆ ಮಾಡಿ ಅಥವಾ ಮರುವಿನ್ಯಾಸಗೊಳಿಸಿ ಮತ್ತೆ ಹೊಲಿಗೆ ಹಾಕಲಾಗುತ್ತದೆ. ಆದಾಗ್ಯೂ ಕಸಿ ಮಾಡುವುದನ್ನು ಸಾಮಾನ್ಯವಾಗಿ ರೂಪಸುಧಾರಕ ಶಸ್ತ್ರಚಿಕಿತ್ಸೆಯಲ್ಲಿ ಬಳಸಿದರೂ, ಇದನ್ನು ಇತರ ಶಸ್ತ್ರಚಿಕಿತ್ಸೆಗಳಲ್ಲೂ ಬಳಸಲಾಗುತ್ತದೆ. ಕಸಿಕೆಗಳನ್ನು ರೋಗಿಯ ದೇಹದ ಒಂದು ಭಾಗದಿಂದ ತೆಗೆದುಕೊಂಡು ಮತ್ತೊಂದು ಭಾಗಕ್ಕೆ ಅಳವಡಿಸಬಹುದು. ಒಂದು ಉದಾಹರಣೆ ಎಂದರೆ ಉಪಮಾರ್ಗ ಶಸ್ತ್ರಚಿಕಿತ್ಸೆ, ಇದರಲ್ಲಿ ಅಡಚಣೆಯಾದ ರಕ್ತನಾಳಗಳನ್ನು, ದೇಹದ ಇತರ ಭಾಗದಿಂದ ಕಸಿಕೆ ಮಾಡಿ ಅವುಗಳ ಹರಿವಿಗೆ ಉಪ ಮಾರ್ಗ ಕಲ್ಪಿಸಲಾಗುತ್ತದೆ. ಪರ್ಯಾಯವಾಗಿ, ಇತರ ವ್ಯಕ್ತಿಗಳು, ಶವಗಳು, ಅಥವಾ ಪ್ರಾಣಿಗಳಿಂದ ಪಡೆಯುವದರ ಮೂಲಕ ಕಸಿಕೆಗಳನ್ನು ಮಾಡಲಾಗುತ್ತದೆ.
- ಅಗತ್ಯ ಬಿದ್ದಾಗ ಪ್ರಾಸ್ಟೇಟ್‍ಗೆ ಸಂಬಂಧಿಸಿದ ಭಾಗಗಳ ಅಳವಡಿಕೆ. ಮೂಳೆಗಳನ್ನೂ ಒಂದಕ್ಕೊಂದು ಅಂಟಿಸಲು ಹಾಗು ಹಿಡಿದಿಡಲು ಪಿನ್ನುಗಳು ಅಥವಾ ತಿರುಪುಗಳನ್ನು ಬಳಸಬಹುದು. ಮೂಳೆಯ ಭಾಗಗಳನ್ನು ಕೃತಕಾಂಗ ಜೋಡಣಾ ಚಿಕಿತ್ಸೆಯ ಕಂಬಿಗಳು ಅಥವಾ ಇತರ ಭಾಗಗಳಿಂದ ಬದಲಾವಣೆ ಮಾಡಬಹುದು. ಕೆಲವೊಂದು ಬಾರಿ ತಲೆಬುರುಡೆಯ ಹಾನಿಯಾದ ಭಾಗಕ್ಕೆ ಒಂದು ಫಲಕವನ್ನು ಅಳವಡಿಸಿ ಬದಲಾವಣೆ ಮಾಡಲಾಗಿರುತ್ತದೆ. ಕೃತಕ ಸೊಂಟದ ಬದಲಾವಣೆಯು ಹೆಚ್ಚು ಸಾಮಾನ್ಯವೆನಿಸಿದೆ. ಹೃದಯದ ಗತಿ ನಿಯಾಮಕಗಳು ಅಥವಾ ಕವಾಟಗಳನ್ನೂ ಸಹ ಅಳವಡಿಕೆ ಮಾಡಬಹುದು. ಇತರ ಹಲವು ಕೃತಕಾಂಗಗಳನ್ನೂ ಬಳಸಬಹುದು.
- ಕೃತಕ ರಂಧ್ರದ ಸೃಷ್ಟಿ - ದೇಹದಲ್ಲಿನ ಒಂದು ಶಾಶ್ವತವಾದ ಅಥವಾ ಅರೆಶಾಶ್ವತವಾದ ರಂಧ್ರ.
- ಕಸಿ ಶಸ್ತ್ರಚಿಕಿತ್ಸೆಯಲ್ಲಿ, ದಾನಿಯ ಅಂಗವನ್ನು (ದಾನಿಯ ದೇಹದಿಂದ ತೆಗೆದುಕೊಂಡಿರಲಾಗುತ್ತದೆ) ಸ್ವೀಕರಿಸುವವನ ದೇಹಕ್ಕೆ ಅಳವಡಿಸಲಾಗುತ್ತದೆ. ಜೊತೆಗೆ ಇದನ್ನು ಎಲ್ಲ ಅತ್ಯವಶ್ಯಕ ಮಾರ್ಗಗಳಲ್ಲಿ ಸ್ವೀಕಾರ ಮಾಡುವವನಿಗೆ ಮರುಜೋಡಣೆ ಮಾಡಲಾಗುತ್ತದೆ (ರಕ್ತನಾಳಗಳು, ನಾಳಗಳು, ಮುಂತಾದವು).
- ಸಂಧಿಬೆಸುಗೆ - ಶಸ್ತ್ರಚಿಕಿತ್ಸೆಯ ಮೂಲಕ ಪಕ್ಕಪಕ್ಕದಲ್ಲಿರುವ ಮೂಳೆಗಳನ್ನು ಒಂದುಗೂಡಿಸುವುದು, ಈ ರೀತಿಯಲ್ಲಿ ಮೂಳೆಗಳು ಕೂಡಿಕೊಂಡು ಒಟ್ಟಾಗಿ ಬೆಳವಣಿಗೆಯಾಗುತ್ತವೆ. ಬೆನ್ನುಮೂಳೆಯ ಬೆಸುಗೆಯು ಪಕ್ಕಪಕ್ಕದಲ್ಲಿರುವ ಬೆನ್ನುಮೂಳೆಯನ್ನು ಜೋಡಿಸುವ ಒಂದು ವಿಧಾನ, ಈ ವಿಧಾನದಲ್ಲಿ ಮೂಳೆಗಳು ಒಟ್ಟಾಗಿ ಬೆಳವಣಿಗೆಯಾಗುತ್ತವೆ.
- ತೂಕ ಇಳಿಸಲು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಮೂಲಕ ಜಠರಗರುಳು ವ್ಯೂಹವನ್ನು ಮಾರ್ಪಡಿಸಲಾಗುತ್ತದೆ.
- ಭಗಂದರ, ಹರ್ನಿಯ, ಅಥವಾ ಭ್ರಂಶದ ಸರಿಪಡಿಸುವಿಕೆ.
- ಇತರ ವಿಧಾನಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
-
- ತಡೆಗಟ್ಟಿರುವ ದ್ರವಸಾಗಣೆ ನಾಳಗಳು, ರಕ್ತ ಅಥವಾ ಇತರ ನಾಳಗಳನ್ನು ಸರಿಪಡಿಸುವುದು
- ಅಶ್ಮರಿಗಳನ್ನು (ಕಲ್ಲುಗಳು) ತೆಗೆದುಹಾಕುವುದು
- ಶೇಖರಣೆಯಾದ ದ್ರವಗಳನ್ನು ಹೊರಹಾಕುವುದು
- ಡೆಬ್ರೈಡ್‍ಮೆಂಟ್ - ಸತ್ತ, ಹಾನಿಯಾದ, ಅಥವಾ ವ್ಯಾಧಿ ಹಿಡಿದ ಅಂಗಾಂಶವನ್ನು ತೆಗೆಯುವುದು
- ಜೊತೆಯಾಗಿ ಅಂಟಿಕೊಂಡ ಅವಳಿಗಳನ್ನು ಬೇರ್ಪಡಿಸಲೂ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.
- ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗಳು
ರಕ್ತ ಅಥವಾ ರಕ್ತದ ವರ್ಧಕಗಳನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಾಗುವ ರಕ್ತದ ನಷ್ಟವನ್ನು ಭರ್ತಿ ಮಾಡಲು ಕೊಡಬಹುದು. ಒಂದೊಮ್ಮೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಹೊಲಿಗೆಯನ್ನು ಅಥವಾ ತಂತಿಜೋಡಣೆಯ ಮೂಲಕ ಛೇದನ ಮುಚ್ಚಲು ಬಳಸಿಕೊಳ್ಳಬಹುದು. ಛೇದನವನ್ನು ಮುಚ್ಚಿಹಾಕಿದ ನಂತರ, ಅರಿವಳಿಕೆ ಪದಾರ್ಥಗಳನ್ನು ನಿಲ್ಲಿಸಲಾಗುತ್ತದೆ. ಅದಲ್ಲದೇ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ, ಜೊತೆಗೆ ರೋಗಿಗೆ ಹಾಕಲಾದ ಕೃತಕ ಶ್ವಾಸಸಾಧನಗಳನ್ನು ತೆಗೆದುಹಾಕಲಾಗುತ್ತದೆ, ಹಾಗು ಕೊಳವೆಯನ್ನು ಹೊರತೆಗೆಯಲಾಗುತ್ತದೆ (ಸಾಮಾನ್ಯ ಅರಿವಳಿಕೆ ನೀಡಲಾದ ಸಂದರ್ಭಗಳಲ್ಲಿ).
ಶಸ್ತ್ರಚಿಕಿತ್ಸೆಯು ಪೂರ್ಣಗೊಂಡ ನಂತರ, ರೋಗಿಯನ್ನು ಅರಿವಳಿಕೆ ನಂತರದ ಆರೈಕೆ ಘಟಕಕ್ಕೆ ವರ್ಗಾವಣೆ ಮಾಡುವುದರ ಜೊತೆಗೆ ಸಮೀಪದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ರೋಗಿಯು ಅರಿವಳಿಕೆಯಿಂದ ಚೇತರಿಸಿಕೊಂಡ ನಂತರ, ಆತ/ಆಕೆಯನ್ನು ಶಸ್ತ್ರಚಿಕಿತ್ಸಕ ವಾರ್ಡ್‌ಗೆ ಅಥವಾ ಆಸ್ಪತ್ರೆಯಲ್ಲಿರುವ ಬೇರೆ ಕೊಠಡಿಗೆ ವರ್ಗಾವಣೆ ಮಾಡಲಾಗುತ್ತದೆ ಅಥವಾ ಮನೆಗೆ ಬಿಡುಗಡೆ ಮಾಡಿ ಕಳುಹಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ನಂತರದ ಅವಧಿಯಲ್ಲಿ, ರೋಗಿಯ ಸಾಮಾನ್ಯ ಕ್ರಿಯೆಗಳನ್ನು ನಿರ್ಧರಿಸಲಾಗುತ್ತದೆ, ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಲ್ಲದೇ ಸೋಂಕಿನ ಯಾವದೇ ಲಕ್ಷಣಗಳಿಗಾಗಿ ಶಸ್ತ್ರಚಿಕಿತ್ಸೆಯಾದ ಭಾಗವನ್ನು ಪರೀಕ್ಷಿಸಲಾಗುತ್ತದೆ. ತೆಗೆದು ಹಾಕಬಹುದಾದ ಚರ್ಮಕ್ಕೆ ಮುಚ್ಚಲಾಗುವ ವಸ್ತುಗಳನ್ನು ಬಳಸಿದ್ದಲ್ಲಿ, ಅವುಗಳನ್ನು ಶಸ್ತ್ರಚಿಕಿತ್ಸೆಯಾದ ಏಳರಿಂದ ಹತ್ತು ದಿನಗಳ ನಂತರ ತೆಗೆದು ಹಾಕಲಾಗುತ್ತದೆ, ಅಥವಾ ಛೇದನವು ಸಂಪೂರ್ಣವಾಗಿ ಗುಣವಾದ ನಂತರದಲ್ಲಿ ತೆಗೆಯಲಾಗುತ್ತದೆ.
ಶಸ್ತ್ರಚಿಕಿತ್ಸೆಯ ನಂತರದ ಉಪಚಾರದಲ್ಲಿ ಸಹೌಷಧ ಚಿಕಿತ್ಸೆಗಳಾದ ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಅಥವಾ ಔಷಧಗಳನ್ನು ನೀಡುವುದು ಉದಾಹರಣೆಗೆ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಉಂಟಾಗಬಹುದಾದ ನಿರಾಕರಣ ನಿರೋಧಿ ಔಷಧಿಗಳು ಸೇರಿರಬಹುದು. ಇತರ ಅನುಸರಣಾ ಅಧ್ಯಯನಗಳು ಅಥವಾ ಪುನಃಸ್ಥಾಪನೆಯನ್ನು ಚೇತರಿಸಿಕೊಳ್ಳುವ ಅವಧಿಯಲ್ಲಿ ಹಾಗು ನಂತರದಲ್ಲಿ ಸೂಚಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಕಡೇಪಕ್ಷ ಎರಡು ಇತಿಹಾಸಪೂರ್ವ ಸಂಸ್ಕೃತಿಗಳು ಶಸ್ತ್ರಚಿಕಿತ್ಸೆಯ ವಿಧಾನಗಳನ್ನು ಅಭಿವೃದ್ಧಿಪಡಿಸಿವೆ. ಸಾಕ್ಷ್ಯವಿರುವ ಅತ್ಯಂತ ಹಳೆಯ ವಿಧಾನವೆಂದರೆ ತಲೆಚಿಪ್ಪು ಕೊರೆತ.[೨] ಇದರಲ್ಲಿ ತಲೆಬುರುಡೆಯಲ್ಲಿ ಒಂದು ರಂಧ್ರವನ್ನು ಕೊರೆಯಲಾಗುತ್ತದೆ ಅಥವಾ ಕೆರೆದು ತೆಗೆದು ಹಾಕಲಾಗುತ್ತದೆ. ಈ ರೀತಿಯಾಗಿ, ತಲೆಬುರುಡೆಯೊಳಗಿನ ಒತ್ತಡ ಹಾಗು ಇತರ ಕಾಯಿಲೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಡ್ಯೂರ ಮೇಟರ್ (ದರುಕು ಪೊರೆ) ಅನ್ನು ತೆರೆದಿಡಲಾಗುತ್ತದೆ. ನವಶಿಲಾಯುಗದ ಅವಧಿಯ ಇತಿಹಾಸಪೂರ್ವ ಮಾನವನ ಅವಶೇಷಗಳಿಂದ, ಗುಹೆಯಲ್ಲಿನ ವರ್ಣಚಿತ್ರಗಳಿಂದ ಸಾಕ್ಷ್ಯಗಳು ಪತ್ತೆಯಾದವು. ಜೊತೆಗೆ ಈ ಪ್ರಕ್ರಿಯೆಯು ದಾಖಲಿತ ಇತಿಹಾಸದವರೆಗೂ ಉತ್ತಮವಾಗಿ ಮುಂದುವರೆಯಿತು. ಆಶ್ಚರ್ಯಕರವಾಗಿ, ಹಲವು ಇತಿಹಾಸಪೂರ್ವ ಹಾಗು ಆಧುನಿಕಪೂರ್ವ ರೋಗಿಗಳು ತಮ್ಮ ತಲೆಬುರುಡೆಯು ಮಾಗುತ್ತಿರುವ ಲಕ್ಷಣಗಳನ್ನು ತೋರಿದರು; ಇದು ಹಲವರು ಶಸ್ತ್ರಚಿಕಿತ್ಸೆಯ ನಂತರ ಬದುಕುಳಿದಿದ್ದರೆಂಬುದನ್ನು ಸೂಚಿಸುತ್ತದೆ. ಇಂಡಸ್ ವ್ಯಾಲಿ ನಾಗರೀಕತೆಯ ಆರಂಭದ ಹರಪ್ಪನ್ ಅವಧಿಯ ಅವಶೇಷಗಳು (ಸುಮಾರು. ಕ್ರಿ.ಪೂ. 3300) ಹಲ್ಲಿನಲ್ಲಿ ರಂಧ್ರ ಕೊರೆದ ಬಗ್ಗೆ ಸಾಕ್ಷ್ಯವನ್ನು ಪ್ರದರ್ಶಿಸುತ್ತವೆ, ಈ ವಿಧಾನವು ಸುಮಾರು 9,000 ವರ್ಷಗಳಷ್ಟು ಹಳೆಯದೆನಿಸಿದೆ.[೩] ಇತಿಹಾಸಪೂರ್ವ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಿದ ಕೊನೆಯ ಜನರೆಂದರೆ ಪ್ರಾಚೀನ ಈಜಿಪ್ಟ್‌ನವರಾಗಿದ್ದಾರೆ. ಇಲ್ಲಿನ ಸರಿಸುಮಾರು ಕ್ರಿ.ಪೂ. 2650 ಯಷ್ಟು ಹಳೆಯದಾದ ಮ್ಯಾಂಡಿಬಲ್‍ನಲ್ಲಿ (ಕೆಳ ದವಡೆಯ ಮೂಳೆ) ಮೊದಲ ಹಲ್ಲಿನ ಕೆಳಭಾಗದಲ್ಲಿರುವ ಬುಡದಲ್ಲಿ ಎರಡು ರಂಧ್ರೀಕರಣಗಳು ಕಂಡುಬಂದಿವೆ, ಇದು ಕೀವು ತುಂಬಿದ ಹಲ್ಲಿನ ಕುರುವನ್ನು ಸೂಚಿಸುತ್ತದೆ.
ಅತ್ಯಂತ ಹಳೆಯ ಶಸ್ತ್ರಚಿಕಿತ್ಸಾ ಗ್ರಂಥಗಳು ಸುಮಾರು 3500 ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‌ನಲ್ಲಿ ಕಂಡುಬಂದಿವೆ. ಶಸ್ತ್ರಚಿಕಿತ್ಸೆಗಳನ್ನು ಪುರೋಹಿತರು ನಡೆಸುತ್ತಿದ್ದರು, ಆಗ ಇವರು ಇಂದಿನವರಿಗೆ ಸರಿಸಮಾನರಾಗಿ, ಸದೃಶವಾಗಿ ವೈದ್ಯಕೀಯ ಚಿಕಿತ್ಸೆಗಳಲ್ಲಿ ಪರಿಣಿತರಾಗಿದ್ದರು. ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಪಪೈರಸ್‌ನ ಹಸ್ತ ಕೃತಿಯಲ್ಲಿ ದಾಖಲು ಮಾಡಲಾಗಿದೆ. ಜೊತೆಗೆ ಮೊದಲ ಬಾರಿಗೆ ರೋಗಿಯ ಪರಿಸ್ಥಿತಿಯನ್ನು ವಿವರಿಸಿದ ಕಡತ ಇದಾಗಿದೆ; ಎಡ್ವಿನ್ ಸ್ಮಿತ್ ಪಪೈರಸ್ (ನ್ಯೂಯಾರ್ಕ್ ಅಕ್ಯಾಡೆಮಿ ಆಫ್ ಮೆಡಿಸಿನ್‌ನಲ್ಲಿ ರಕ್ಷಿಸಲಾಗಿದೆ) ದಾಖಲೆಗಳು ಶರೀರಛೇದನ ಹಾಗು ಶರೀರವಿಜ್ಞಾನವನ್ನು ಆಧರಿಸಿದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳ ವಿವರಣೆಗಳನ್ನು ಒಳಗೊಂಡಿವೆ. ಈ ನಡುವೆ, ಎಬೆರ್ಸ್ ಪಪೈರಸ್ ಗ್ರಂಥವು ಇಂದ್ರಜಾಲವನ್ನು ಆಧರಿಸಿ ಗಾಯವನ್ನು ಮಾಯಿಸುವ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ವೈದ್ಯಕೀಯ ಪರಿಣತಿಯನ್ನು ನಂತರದಲ್ಲಿ ಹೆರಾಡೋಟಸ್ ದಾಖಲಿಸಿದ್ದಾರೆ: "ಔಷಧಶಾಸ್ತ್ರ ಬಳಕೆಯು ಅವರಲ್ಲಿ ಬಹಳ ವಿಶೇಷವಾಗಿತ್ತು. ಪ್ರತಿ ವೈದ್ಯನೂ ಒಂದು ಬಗೆಯ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದನು. ದೇಶವು ವೈದ್ಯರುಗಳಿಂದ ತುಂಬಿಹೋಗಿದೆ, ಕೆಲವರು ಕಣ್ಣಿಗೆ ಚಿಕಿತ್ಸೆ ನೀಡಿದರೆ, ಮತ್ತೆ ಕೆಲವರು ಹಲ್ಲಿಗೆ, ಮತ್ತೆ ಕೆಲವರು ಉದರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ, ಮತ್ತೆ ಕೆಲವರು ಆಂತರಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು."[೪]
ಶಸ್ತ್ರಚಿಕಿತ್ಸೆಯ ಬಗ್ಗೆ ಜ್ಞಾನ ಹೊಂದಿದ್ದ ಇತರ ಪುರಾತನ ಸಂಸ್ಕೃತಿಗಳಲ್ಲಿ ಭಾರತ, ಚೀನಾ ಹಾಗು ಗ್ರೀಸ್‌ಗಳು ಸೇರಿವೆ.
ಮನುಕುಲದ ಜೊತೆ ಶಸ್ತ್ರಚಿಕಿತ್ಸೆ ಪುರಾಣಕಾಲದಿಂದಲೂ ಬೆಳೆದುಬಂದಿದೆ. ಶಿವಪುರಾಣದಲ್ಲಿ ಗಣಪತಿಯ ಶಿರಚ್ಛೇದನವಾಗಿ ಅದರ ಬದಲಿಗೆ ಒಂದು ಆನೆ ತಲೆಯನ್ನು ಜೋಡಿಸಿದ ವಿಚಾರ ಅವಲೋಕಿಸಿದರೆ ದೇಹದಲ್ಲಿ ಅಂಗಗಳನ್ನು ನಾಟಿಮಾಡುವ ಅರಿವು ಆಗಲೇ ಇದ್ದ ಹಾಗೆ ತೋರುತ್ತದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಶಸ್ತ್ರವೈದ್ಯದ ಪರಂಪರೆ ಇದೆ.
ಸುಶ್ರುತ ಸುಮಾರು ಕ್ರಿ.ಪೂ. ಆರನೇ ಶತಮಾನದಲ್ಲಿ ಪ್ರಾಚೀನ ಭಾರತದ ಒಬ್ಬ ಪ್ರಖ್ಯಾತ ಶಸ್ತ್ರಚಿಕಿತ್ಸಕ ಹಾಗು ಸುಶ್ರುತ ಸಂಹಿತದ ಕರ್ತೃವಾಗಿದ್ದರು. ಸಂಸ್ಕೃತದಲ್ಲಿ ಬರೆಯಲಾದ ಅವನ ಕೃತಿಗಳಲ್ಲಿ, ಈತ ಸುಮಾರು 120ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳ ಬಗ್ಗೆ, 300 ಶಸ್ತ್ರಚಿಕಿತ್ಸಾ ವಿಧಾನಗಳ ಬಗ್ಗೆ ವಿವರಣೆ ನೀಡಿದ್ದಾನೆ. ಅಲ್ಲದೇ ಮಾನವ ಶಸ್ತ್ರಚಿಕಿತ್ಸೆಯನ್ನು ಎಂಟು ವಿಭಾಗಗಳಾಗಿ ವರ್ಗೀಕರಣ ಮಾಡಿದ್ದಾನೆ. ಈತ ಪ್ಲ್ಯಾಸ್ಟಿಕ್ ಸರ್ಜರಿಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದ. ಈತ ಅರಿವಳಿಕೆಗೆ ಸಮನಾದ ಒಂದು ಬಗೆಯ ಮೂಲಿಕೆಯ ರಸವನ್ನು ನೀಡುತ್ತಿದ್ದ. ಈತ ಧನ್ವಂತರಿ ಆಯುರ್ವೇದ ಶಾಲೆಯ ಒಬ್ಬ ಶಸ್ತ್ರಚಿಕಿತ್ಸಕನಾಗಿದ್ದ. ಸುಶ್ರುತ ನಿರೂಪಿಸಿದ್ದ ಚಾಕು (ಸ್ಕಾಲ್ಪೆಲ್), ಬಿಸ್ಚೂರಿ, ಮೂಳೆ ಹೆಕ್ಕುವ ಇಕ್ಕಳ (ಬೋನ್ ನಿಬ್ಲರ್), ಮೂಳೆ ಕತ್ತರಿಸುವ ಇಕ್ಕಳ, ಟ್ರೊಕಾರ್ ಮತ್ತು ಸೂಜಿಗಳ ಉಪಯೋಗ ಇಂದಿಗೂ ಪ್ರಸ್ತುತ.
ಪ್ರಾಚೀನ ಗ್ರೀಸ್‍ನಲ್ಲಿ, ರೋಗಗಳನ್ನು ಗುಣಪಡಿಸುವ ದೇವರು ಎನ್ನಲಾದ ಎಸ್ಕ್ಲೆಪಿಯಸ್‍ಗೆ ದೇವಾಲಯಗಳನ್ನು ನಿರ್ಮಿಸಿ ಅರ್ಪಿಸಲಾಗುತ್ತಿತ್ತು, ಇದನ್ನು ಎಸ್ಕ್ಲೆಪಿಯಾ ಎಂದು ಕರೆಯಲಾಗುತ್ತಿತ್ತು (ಗ್ರೀಕ್: Ασκληπιεία, ಏಕವಚನ. ಆಸ್ಕ್ಲೆಪಿಯಾನ್ Ασκληπιείον) ಇವುಗಳು ವೈದ್ಯಕೀಯ ಸಲಹೆ, ತಪಾಸಣೆ ಮತ್ತು ಗುಣಪಡಿಸುವ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.[೫] ಇಂತಹ ದೇವಾಲಯಗಳ ಆವರಣಗಳಲ್ಲಿ ಪ್ರವೇಶಿಸಿದ ರೋಗಿಗಳು ಯಾವದೋ ಒಂದು ಕನಸಿನ ಸ್ಥಿತಿಗೆ ಕಾಲಿಟ್ಟು "ಎನ್ಕೊಯಿಮೆಸಿಸ್" (ಗ್ರೀಕ್: ενκοίμησις) ಎಂಬ ವಿಚಿತ್ರ ಅನುಭವಕ್ಕೆ ತುತ್ತಾಗುತ್ತಿದ್ದರು. ಆದರೆ ಇದು ಅರಿವಳಿಕೆಗಿಂತ ಭಿನ್ನವಾಗಿರುತ್ತಿತ್ತು. ಇದರಲ್ಲಿ ಅವರು ದೇವಾಲಯದಲ್ಲಿನ ದೇವರಿಂದ ತಮ್ಮ ಕನಸಿನಲ್ಲಿ ಸಲಹೆ ಪಡೆಯುತ್ತಿದ್ದರು ಅಥವಾ ಶಸ್ತ್ರಕ್ರಿಯೆಯಿಂದ ಗುಣಮುಖರಾಗುತ್ತಿದ್ದರು.[೬] ಎಸ್ಕ್ಲೆಪಿಯಾನ್‍ನ ಎಪಿಡೌರಸ್‍ನಲ್ಲಿ, ಕ್ರಿ.ಪೂ. 350 ರಲ್ಲಿ ಮೂರು ಅಮೃತಶಿಲೆಯ ಫಲಕಗಳಲ್ಲಿನ ಹೆಸರುಗಳು, ರೋಗದ ಇತಿಹಾಸ, ಅಸ್ವಸ್ಥತೆ, ಹಾಗು ಸುಮಾರು 70 ರೋಗಿಗಳು ಗುಣಮುಖರಾದ ದಾಖಲೆಯನ್ನು ಹೊಂದಿದೆ. ಇವರೆಲ್ಲರೂ ದೇವಾಲಯಕ್ಕೆ ರೋಗಿಗಳಾಗಿ ಪ್ರವೇಶಿಸಿ, ನಂತರ ಅಲ್ಲಿಂದ ಗುಣಮುಖರಾಗಿ ತೆರಳಿದ್ದರು. ಶಸ್ತ್ರಚಿಕಿತ್ಸೆಯ ಮೂಲಕ ಕೆಲ ಕಾಯಿಲೆಗಳನ್ನು ಗುಣಪಡಿಸಲಾದ ಬಗ್ಗೆ ಪಟ್ಟಿ ದೊರೆಯಿತು, ಉದಾಹರಣೆಗೆ ಅಪಾಯಕಾರಿ ಬಾಹ್ಯವಸ್ತುಗಳನ್ನು ತೆಗೆದುಹಾಕಲು ಉದರದ ಛೇದನವು ವಾಸ್ತವವಾಗಿ ನಡೆದಿತ್ತು, ಆದರೆ ರೋಗಿಗೆ ಅಫೀಮಿನಂತಹ ನಿದ್ರಾಜನಕ ವಸ್ತುಗಳನ್ನು ನೀಡಿ ಎನ್ಕೊಯಿಮೆಸಿಸ್‍ನ ಸ್ಥಿತಿಯನ್ನು ಉಂಟುಮಾಡಲಾಗುತ್ತಿತ್ತು.[೭]
ಪ್ರಾಚೀನ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಚಿಕಿತ್ಸಕರಲ್ಲಿ ಗ್ರೀಸ್‍ನ ಗಾಲೆನ್ ಸಹ ಒಬ್ಬನಾಗಿದ್ದ. ಜೊತೆಗೆ ಈತ ಹಲವು ಸಾಹಸಭರಿತ ಶಸ್ತ್ರಚಿಕಿತ್ಸೆಗಳಾದ ಮಿದುಳು ಹಾಗು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಿದ - ಇಂತಹ ಶಸ್ತ್ರಚಿಕಿತ್ಸೆಗಳನ್ನು ನಂತರ ಸರಿಸುಮಾರು ಎರಡು ಸಾವಿರ ವರ್ಷಗಳವರೆಗೆ ಪ್ರಯತ್ನಿಸಲಾಗಲಿಲ್ಲ.
ಚೀನಾದಲ್ಲಿ, ಹುವ ಟುವೊ, ಪೂರ್ವ ಹಾಂ ಹಾಗು ಮೂರು ಸಾಮ್ರಾಜ್ಯಗಳ ಅವಧಿಯಲ್ಲಿ ಅತ್ಯಂತ ಪ್ರಸಿದ್ಧ ಚೈನೀಸ್ ವೈದ್ಯ ಎನಿಸಿಕೊಂಡಿದ್ದ, ಈತ ಅರಿವಳಿಕೆಯ ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಆದಾಗ್ಯೂ ಇದು ಆರಂಭಿಕ ಸ್ಥಿತಿ ಹಾಗು ಅತ್ಯಾಧುನಿಕವಲ್ಲದ ವಿಧಾನವೆನಿಸಿದೆ.
ಮಧ್ಯಯುಗಗಳಲ್ಲಿ, ಇಸ್ಲಾಮೀ ಜಗತ್ತಿನಲ್ಲಿ ಶಸ್ತ್ರಚಿಕಿತ್ಸೆಯನ್ನು ಒಂದು ಉನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಯಿತು. ಅಬುಲ್ಕಾಸಿಸ್ (ಅಬು ಅಲ್-ಖಾಸಿಂ ಖಲಾಫ್ ಇಬ್ನ್ ಅಲ್-ಅಬ್ಬಾಸ್ ಅಲ್-ಜಹ್ರಾವಿ) ಒಬ್ಬ ಅಂಡಲೂಶಿಯನ್-ಅರಬ್ ವೈದ್ಯ ಹಾಗು ವಿಜ್ಞಾನಿಯಾಗಿದ್ದ. ಈತ ಕಾರ್ಡೋಬದ ಜಹ್ರಾ ಉಪನಗರದಲ್ಲಿ ವೃತ್ತಿಯನ್ನು ನಡೆಸುತ್ತಿದ್ದ. ಈತ ಹಲವಾರು ವೈದ್ಯಕೀಯ ಗ್ರಂಥಗಳನ್ನು ಬರೆದಿದ್ದಾನೆ. ಇವುಗಳು ಪುನರುದಯದವರೆಗೂ ಯುರೋಪ್ ನ ಶಸ್ತ್ರಚಿಕಿತ್ಸಕ ಪ್ರಕ್ರಿಯೆಗಳನ್ನು ನಿರ್ದೇಶಿಸಿತು.[೮]
ಪಾಶ್ಚಾತ್ಯ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಹಲವಾರು ವರ್ಷಪರ್ಯಂತ ನಿಗೂಢತೆ, ಭಯ, ಭಕ್ತಿ ಮತ್ತು ಧಾರ್ಮಿಕ ಆಚರಣೆಗಳ ಸಮ್ಮಿಶ್ರಣವಾಗಿತ್ತು. ಶಿಶ್ನದ ಮುಂದೊಗಲಿನ ಸುನತಿ (ಸರ್ಕಮ್‌ಸಿಶನ್) ಮಾಡುವುದು ಆಸ್ತಿಕ್ಯದ ಹಕ್ಕು ಎಂದಾಗಿತ್ತು. ದೆವ್ವ ಬಿಡಿಸುವುದಾಗಿ ತಲೆಬುರುಡೆ ಸೀಳುವುದು ವಾಡಿಕೆಯಾಗಿತ್ತು. ನೋವು, ಕೀವು ಮತ್ತು ಸಾವು ಎಂಬ ಶಬ್ದಗಳು ಶಸ್ತ್ರಚಿಕಿತ್ಸೆಯ ಅಪಭ್ರಂಶಗಳಾಗಿದ್ದುವು. ಎಂದೇ ಈ ಚಿಕಿತ್ಸೆಯ ಬೆಳೆವಣಿಗೆಗೆ ಧರ್ಮ ಗುರುಗಳ ಅಡ್ಡಿ, ಅಡಚಣೆಗಳಿದ್ದುವು. ಹೀಗಾಗಿ ಆ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಪ್ರಗತಿ ಕಾಣಲಿಲ್ಲ.
ಯುರೋಪ್ ನಲ್ಲಿ, ವೃತ್ತಿಗೆ ಮುಂಚೆ ಶಸ್ತ್ರಚಿಕಿತ್ಸಕರು ಹಲವು ವರ್ಷ ಅಧಿಕೃತವಾಗಿ ಅಧ್ಯಯನವನ್ನು ನಡೆಸುವುದಕ್ಕೆ ಬೇಡಿಕೆ ಹೆಚ್ಚಾಯಿತು; ಮೊಂಟ್ಪೆಲ್ಲಿಯರ್, ಪಡುವಾ ಹಾಗು ಬೋಲೋಗ್ನದಂತಹ ವಿಶ್ವವಿದ್ಯಾಲಯಗಳು ವಿಶೇಷವಾಗಿ ಖ್ಯಾತಿ ಗಳಿಸಿದ್ದವು. ಮಧ್ಯಯುಗದಲ್ಲಿ ಗೈ ಡೆ ಚೌಲಿಯಾಕ್ ಒಬ್ಬ ಅತ್ಯುತ್ತಮ ಶಸ್ತ್ರಚಿಕಿತ್ಸಕರಲ್ಲಿ ಒಬ್ಬನೆನಿಸಿದ್ದ. ಆತನ ಚಿರುರ್ಗಿಯ ಮ್ಯಾಗ್ನ ಅಥವಾ ಗ್ರೇಟ್ ಸರ್ಜರಿ (1363) ಹದಿನೇಳನೆಯ ಶತಮಾನದವರೆಗೂ ಶಸ್ತ್ರಚಿಕಿತ್ಸಕರಿಗೆ ಒಂದು ಉತ್ತಮ ವೈದ್ಯಕೀಯ ಗ್ರಂಥವೆನಿಸಿತ್ತು.[೯] ಹದಿನೈದನೆಯ ಶತಮಾನದ ಸುಮಾರಿಗೆ, ಶಸ್ತ್ರಚಿಕಿತ್ಸೆಯು ರೋಗಚಿಕಿತ್ಸೆಯಿಂದ ಬೇರ್ಪಟ್ಟು ತನ್ನದೇ ಆದ ಅಧ್ಯಯನವನ್ನು ರೂಪಿಸಿಕೊಂಡಿತು. ಇದು ಶುದ್ಧ ಔಷಧಶಾಸ್ತ್ರಕ್ಕಿಂತ ಸ್ವಲ್ಪಮಟ್ಟಿಗಿನ ಕಡಿಮೆ ಸ್ಥಾನ ಗಳಿಸಿತ್ತು. ಜೊತೆಗೆ ರೋಜೆರಿಯಸ್ ಸಾಲರ್ನಿಟನಸ್ ರಚಿಸಿದ ಚಿರುರ್ಗಿಯ ಕೃತಿ ಬಿಡುಗಡೆಯಾಗುವವರೆಗೂ ಆರಂಭಿಕವಾಗಿ ಕೈಕಸುಬಿನ ಸಂಪ್ರದಾಯದ ರೂಪವನ್ನು ಪಡೆಯಿತು. ಇದು ಆಧುನಿಕ ಅವಧಿಯವರೆಗೂ ಆಧುನಿಕ ಪಾಶ್ಚಿಮಾತ್ಯ ಶಸ್ತ್ರಚಿಕಿತ್ಸಕ ಕೈಪಿಡಿಗೆ ಅಡಿಪಾಯ ಹಾಕಿಕೊಟ್ಟಿತು. ಹತ್ತೊಂಬತ್ತನೇ ಶತಮಾದ ಕಡೆಯ ಭಾಗದಲ್ಲಿ, ಬ್ಯಾಚಲರ್ ಆಫ್ ಸರ್ಜರಿ ಡಿಗ್ರೀಸ್ (ಸಾಮಾನ್ಯವಾಗಿ ChB) ಅನ್ನು (MB) ಪದವಿಯೊಂದಿಗೆ ನೀಡಲಾಗುತ್ತಿತ್ತು, ಜೊತೆಗೆ ಇದರಲ್ಲಿ ವಿಶೇಷತೆ ಪಡೆಯುವುದು ಹೆಚ್ಚಿನ ಪದವಿಯಾಗಿ ಮಾರ್ಪಟ್ಟಿತು. ಸಾಮಾನ್ಯವಾಗಿ ಇದನ್ನು ಲಂಡನ್ ನಲ್ಲಿ ChM ಅಥವಾ MS ಎಂದು ಕರೆಯಲಾಗುತ್ತಿತ್ತು, ಇಲ್ಲಿ ಮೊದಲ ಪದವಿಯೆಂದರೆ MB, BS ಎನ್ನಲಾಗುತ್ತಿದೆ.
ಕ್ಷೌರಿಕ-ಶಸ್ತ್ರಚಿಕಿತ್ಸಕರು ಸಾಧಾರಣವಾಗಿ ಕುಖ್ಯಾತಿ ಗಳಿಸಿದ್ದರು. ಇದು ಶೈಕ್ಷಣಿಕ ಶಸ್ತ್ರಚಿಕಿತ್ಸೆಯ ಉಪಕ್ಷೇತ್ರಕ್ಕಿಂತ ಹೆಚ್ಚಾಗಿ ಔಷಧಶಾಸ್ತ್ರ ಒಂದು ವಿಭಾಗವಾಗಿ ಬೆಳವಣಿಗೆ ಹೊಂದುವವರೆಗೂ, ಹೆಚ್ಚಿನ ಚೇತರಿಕೆ ಕಂಡಿರಲಿಲ್ಲ.[೧೦] ಅಪೂತಿ ಚಿಕಿತ್ಸೆ ಮುಂತಾದವುಗಳ ಮೂಲಭೂತ ಶಸ್ತ್ರಚಿಕಿತ್ಸಕ ನಿಯಮಗಳನ್ನು ಹಾಲ್‍ಸ್ಟೆಡ್‍ನ ತತ್ತ್ವಗಳು ಎಂದು ಕರೆಯಲಾಗುತ್ತದೆ.
ಆಧುನಿಕ ಶಸ್ತ್ರಚಿಕಿತ್ಸೆ
[ಬದಲಾಯಿಸಿ]ಸೂಕ್ಷ್ಮದರ್ಶಕ, ದೂರದರ್ಶಕ, ಮುದ್ರಣ ಯಂತ್ರಗಳ ಉಪಜ್ಞೆ, ನ್ಯೂಟನ್ ತತ್ತ್ವಗಳ ಘೋಷಣೆ ಮುಂತಾದವು (ಸು. 15-16ನೆಯ ಶತಮಾನಗಳು) ಮಾನವನನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ ಇನ್ನೊಂದು ಕಡೆ 1543ರಲ್ಲಿ ಪಡುವಾ ವಿಶ್ವವಿದ್ಯಾಲಯದ ವೆಸೇಲಿಯಸ್ (1514-64) ಎಂಬಾತ ತನ್ನ ಡಿ ಕಾರ್ಪೊರಿಸ್ ಹ್ಯೂಮನಿ ಎಂಬ ಲೇಖನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಪ್ರಾರಂಭಿಸಿದ. ವಿಜ್ಞಾನದ ಆಸರೆಯಲ್ಲಿ ಅಂಗರಚನಾವಿಜ್ಞಾನದ (ಅನಾಟಮಿ) ಬೆಳೆವಣಿಗೆಯಾಯಿತು. ವೈಜ್ಞಾನಿಕ ಯುಗದೊಂದಿಗೆ ಆಧುನಿಕ ಶಸ್ತ್ರಚಿಕಿತ್ಸೆಯು ಶೀಘ್ರದಲ್ಲಿಯೇ ಅಭಿವೃದ್ಧಿ ಹೊಂದಿತು.ಬಾಹ್ಯಕ್ಕೆ ಕಾಣಿಸದೇ ಇರುವ ರೋಗಗಳ ಕಾರಣವನ್ನು ಬೆನೆವಿನಿ, ಮ್ಯಾಲ್ಪೀಗಿ (1628-94) ಮತ್ತು ವಲ್ಸಾಲ್ವ ಎಂಬವರು ಮರಣೋತ್ತರ ಪರೀಕ್ಷೆಯಿಂದ ಪತ್ತೆಹಚ್ಚಿ ರೋಗವಿಜ್ಞಾನದ (ಪೆತಾಲಜಿ) ಅರಿವನ್ನು ಬೆಳಕಿಗೆ ತಂದರು. ಫ್ರೆಂಚ್ ಸೈನ್ಯದ ಶಸ್ತ್ರತಜ್ಞ ಆಂಬ್ರೋಯಿಸೆ ಪಾರೆ (ಕೆಲವೊಂದು ಬಾರಿ "ಆಂಬ್ರೋಸ್"[೧೧] ಎಂದು ಉಚ್ಚರಿಸಲಾಗುತ್ತದೆ) ಬಂದೂಕಿನಿಂದ ಸಿಡಿದ ಗುಂಡುಗಳಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ಮೊದಲಿಗರೆನಿಸಿದರು. ಜೊತೆಗೆ ನೆಪೋಲಿಯನ್ನನ ಯುದ್ಧಗಳಲ್ಲಿ, ಸಮರಾಂಗಣದಲ್ಲಿ ಚಿಕಿತ್ಸೆ ನೀಡಿದ ಮೊದಲ ಆಧುನಿಕ ಶಸ್ತ್ರಚಿಕಿತ್ಸಕರೆನಿಸಿಕೊಂಡರು. ಮುಂದಿನ ಶತಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಬೆಳೆವಣಿಗೆಗಳೇನೂ ಆಗಲಿಲ್ಲ. ನೌಕಾದಳದ ಶಸ್ತ್ರಚಿಕಿತ್ಸಕರು ಸಾಮಾನ್ಯವಾಗಿ ಕ್ಷೌರಿಕ ಶಸ್ತ್ರಚಿಕಿತ್ಸಕರಾಗಿದ್ದರು. ಇವರು ಶಸ್ತ್ರಚಿಕಿತ್ಸೆಯೊಂದಿಗೆ ತಮ್ಮ ಮುಖ್ಯ ಕಸುಬಾದ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದರು.
1630ರ ಸುಮಾರಿಗೆ ಡಿ ಮೋಟು ಕಾರ್ಡಿಸ್ ಎಟ್ ಸ್ಯಾಂಗ್ವಿನಿಸ್ ಇನ್ ಅನಿಮಾಲಿಬಸ್ ಎಂಬ ಪ್ರಕಟಣೆಯಿಂದ ವಿಲಿಯಮ್ ಹಾರ್ವೆ (1578-1657) ವೈದ್ಯವಿಜ್ಞಾನದಲ್ಲಿ ಪ್ರಯೋಗಗಳನ್ನು ಬಳಕೆಗೆ ತಂದ. ಮುಂದೆ ಜಾನ್ ಹಂಟರ್ (1728-93) ಇದರ ಉಪಯೋಗವನ್ನು ಶಸ್ತ್ರಚಿಕಿತ್ಸಾವಿಧಾನಗಳಿಗೆ ವಿಸ್ತರಿಸಿದ.
ಮೂರು ಮುಖ್ಯ ಬೆಳವಣಿಗೆಗಳು ಆಧುನಿಕ ಶಸ್ತ್ರಚಿಕಿತ್ಸಕ ಮಾರ್ಗಗಳ ಬದಲಾವಣೆಗೆ ಅವಕಾಶ ನೀಡಿದವು. ಇವುಗಳೆಂದರೆ - ರಕ್ತಸ್ರಾವದ ನಿಯಂತ್ರಣ, ಸೋಂಕಿನ ನಿಯಂತ್ರಣ ಹಾಗು ನೋವಿನ ನಿಯಂತ್ರಣ (ಅರಿವಳಿಕೆ).
- ರಕ್ತಸ್ರಾವ
- ಆಧುನಿಕ ಶಸ್ತ್ರಚಿಕಿತ್ಸಕಗಳ ಅಭಿವೃದ್ಧಿಗೆ ಮುಂಚೆ, ರೋಗಿಯು ಚಿಕಿತ್ಸೆಗೆ ಮುಂಚಿತವಾಗಿ ಅಥವಾ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ರಕ್ತಸ್ರಾವದ ಕಾರಣದಿಂದ ಸಾವನ್ನಪ್ಪುವ ಅಪಾಯವಿರುತ್ತಿತ್ತು. ದಹನವು (ಗಾಯವನ್ನು ತೀವ್ರತರವಾದ ಶಾಖಕ್ಕೆ ಒಡ್ಡುವುದು) ಯಶಸ್ವಿಯಾದ ವಿಧಾನವೆನಿಸಿದರೂ ಸೀಮಿತವಾಗಿತ್ತು - ಇದು ಮಾರಕವಾಗಿಯೂ, ನೋವಿನಿಂದ ಕೂಡಿದುದೂ ಆಗಿತ್ತು. ಅಲ್ಲದೇ ದೀರ್ಘಕಾಲಿಕವಾಗಿ ಇದು ಬಹಳ ಕಳಪೆಯಾದ ಪರಿಣಾಮ ಬೀರುತ್ತಿತ್ತು. ಬಂಧಕರಜ್ಜುಗಳು, ಅಥವಾ ಹಾನಿಗೊಳಗಾದ ರಕ್ತನಾಳಗಳನ್ನು ಬಂಧಿಸಲು ಬಳಕೆ ಮಾಡಲಾಗುತ್ತಿದ್ದ ವಸ್ತುವು ಪ್ರಾಚೀನ ರೋಮ್[೧೨] ನಲ್ಲಿ ಹುಟ್ಟಿಕೊಂಡಿತು. ಅಲ್ಲದೇ ಇದನ್ನು 16ನೇ ಶತಮಾನದಲ್ಲಿ ಆಂಬ್ರೋಯಿಸೆ ಪಾರೆ ಸುಧಾರಣೆ ಮಾಡಿದರು. ದಹನದ ವಿಧಾನಕ್ಕೆ ಹೋಲಿಸಿದರೆ ಈ ವಿಧಾನದಲ್ಲಿ ಮಹತ್ವದ ಸುಧಾರಣೆ ಕಂಡುಬಂದರೂ ಇದು ಸೋಂಕಿನ ಅಪಾಯವನ್ನು ನಿಯಂತ್ರಣಕ್ಕೆ ತರುವವರೆಗೂ ಅಪಾಯಕಾರಿಯಾಗಿರುತ್ತಿತ್ತು. ಇದರ ಪರಿಶೋಧನೆಯ ವೇಳೆಗೆ, ಸೋಂಕು ಎಂಬ ಕಲ್ಪನೆಯು ಸಂಪೂರ್ಣವಾಗಿ ಗ್ರಾಹ್ಯವಾಗಿರಲಿಲ್ಲ. ಅಂತಿಮವಾಗಿ, ರಕ್ತದ ವರ್ಗಗಳ ಮೇಲೆ ನಡೆದ 20ನೇ ಶತಮಾನದ ಆರಂಭದ ಸಂಶೋಧನೆಯು ರಕ್ತದ ಮೊದಲ ಯಶಸ್ವೀ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿತು.
- ನೋವು
- ಅರಿವಳಿಕೆಯ ಮೂಲಕ ಆಧುನಿಕ ನೋವು ನಿಯಂತ್ರಣವನ್ನು ಇಬ್ಬರು ಅಮೆರಿಕನ್ ದಂತವೈದ್ಯರುಗಳಾದ ಹೋರೇಸ್ ವೆಲ್ಸ್ (1815–1848) ಹಾಗು ವಿಲ್ಲಿಯಮ್ ಟಿ. ಜಿ. ಮಾರ್ಟನ್ ಕಂಡುಹಿಡಿದರು. ಅರಿವಳಿಕೆಯ ಸಂಶೋಧನೆಗೆ ಮುಂಚೆ, ಶಸ್ತ್ರಚಿಕಿತ್ಸೆಯು ದೈಹಿಕವಾಗಿ ನೋವನ್ನುಂಟುಮಾಡುವ ವಿಧಾನವಾಗಿತ್ತು. ಇದು ಶಸ್ತ್ರಚಿಕಿತ್ಸಕರಿಗೆ, ರೋಗಿಯ ನರಳಿಕೆಯನ್ನು ಆದಷ್ಟು ಕಡಿಮೆ ಮಾಡಲು ವೇಗವಾಗಿರುವಂತೆ ಉತ್ತೇಜಿಸುತ್ತಿತ್ತು. ಇದರರ್ಥ ಶಸ್ತ್ರಚಿಕಿತ್ಸೆಗಳು ವ್ಯಾಪಕವಾಗಿ ಅಂಗಛೇದನಗಳು ಹಾಗೂ ಬಾಹ್ಯವಾಗಿ ಬೆಳವಣಿಗೆಯಾದ ಭಾಗಗಳನ್ನು ತೆಗೆದುಹಾಕಲು ಮಾತ್ರ ಸೀಮಿತವಾಗಿತ್ತು. 1840ರಲ್ಲಿ ಆರಂಭಗೊಂಡು, ಶಸ್ತ್ರಚಿಕಿತ್ಸೆಯು ಪರಿಣಾಮಕಾರಿ ಹಾಗೂ ಕಾರ್ಯೋಪಯೋಗಿ ಅರಿವಳಿಕೆ ರಾಸಾಯನಿಕಗಳಾದ ಈಥರ್ ಹಾಗು ಕ್ಲೋರೋಫಾರ್ಮ್ ನ ಪರಿಶೋಧನೆಯೊಂದಿಗೆ ತನ್ನ ಲಕ್ಷಣದಲ್ಲಿ ನಾಟಕೀಯವಾಗಿ ಬದಲಾವಣೆ ಹೊಂದಿತು. ಇದನ್ನು ನಂತರದಲ್ಲಿ ಬ್ರಿಟನ್ ನ ಜಾನ್ ಸ್ನೋ ಮೊದಲ ಬಾರಿಗೆ ಪರಿಚಯಿಸಿದರು. ಇದರ ಜೊತೆಯಲ್ಲಿ ರೋಗಿಗಳನ್ನು ನೋವಿನಿಂದ ಮುಕ್ತಗೊಳಿಸಲು, ಅರಿವಳಿಕೆಯು ಮಾನವ ದೇಹದ ಆಂತರಿಕ ಭಾಗಗಳಲ್ಲಿ ಹೆಚ್ಚು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿತು. ಇದರ ಜೊತೆಯಲ್ಲಿ, ಸ್ನಾಯು ಶಾಮಕಗಳು ಉದಾಹರಣೆಗೆ ಕ್ಯುರೇರ್‌ನ ಪರಿಶೋಧನೆಯು ಸುರಕ್ಷಿತ ಬಳಕೆಗೆ ಅವಕಾಶ ಮಾಡಿಕೊಟ್ಟಿತು.
- ಸೋಂಕು
- ದುರದೃಷ್ಟವಶಾತ್, ಅರಿವಳಿಕೆಯ ಪರಿಚಯವು ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಉತ್ತೇಜಿಸಿದರೂ, ಇದು ಪ್ರಮಾದವಶಾತ್ ಹೆಚ್ಚು ಅಪಾಯಕಾರಿಯಾದ ಶಸ್ತ್ರಚಿಕಿತ್ಸಾ ನಂತರದ ಸೊಂಕುಗಳಿಗೆ ಕಾರಣವಾಯಿತು. ಸೋಂಕು ಎಂಬ ಕಲ್ಪನೆಯು ತುಲನಾತ್ಮಕವಾಗಿ ಇತ್ತೀಚಿನ ಸಮಯದವರೆಗೂ ತಿಳಿದುಬಂದಿರಲಿಲ್ಲ. ಸೋಂಕನ್ನು ಎದುರಿಸುವಲ್ಲಿ ಮೊದಲ ಹೆಜ್ಜೆಯನ್ನು 1847ರಲ್ಲಿ ಹಂಗೇರಿಯನ್ ವೈದ್ಯ ಈಗ್ನಾಜ್ ಸೆಮ್ಮೆಲ್ವೆಯಿಸ್ ಮಾಡಿದರು. ಇವರು ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳು, ಸೂಲಗಿತ್ತಿಯರಿಗೆ ಹೋಲಿಸಿದರೆ ಅಧಿಕವಾಗಿ ತಾಯಂದಿರ ಸಾವಿಗೆ ಕಾರಣರಾಗುತ್ತಿರುವುದನ್ನು ಗಮನಿಸಿದರು. ಸೆಮ್ಮೆಲ್ವೆಯಿಸ್, ವ್ಯಂಗ್ಯ ಹಾಗು ವಿರೋಧದ ನಡುವೆಯೂ, ತಾಯಂದಿರ ವಾರ್ಡ್‌ಗಳಿಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಕೈಯನ್ನು ತೊಳೆದುಕೊಳ್ಳುವುದು ಕಡ್ಡಾಯವೆಂದು ಸೂಚಿಸಿದರು. ಅದಲ್ಲದೇ ತಾಯಿಯ ಹಾಗು ಮಗುವಿನ ಸಾವುಗಳಲ್ಲಿ ಇಳಿಕೆಯ ಪ್ರಮಾಣದ ಪ್ರತಿಫಲ ದೊರೆಯಿತು. ಆದಾಗ್ಯೂ ಯುಕೆಯ ರಾಯಲ್ ಸೊಸೈಟಿಯು ಇವರ ಸಲಹೆಯನ್ನು ತಿರಸ್ಕರಿಸಿತು. 19ನೆಯ ಶತಮಾನದಲ್ಲಿ ಅನೇಕ ಮುಖ್ಯ ಸಂಗತಿಗಳು ಬೆಳಕಿಗೆ ಬಂದುವು. ಇವೆಲ್ಲ ಸಂಗತಿಗಳು ಆಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳಿಗೆ ಬುನಾದಿಯಾದುವೆಂಬುದಕ್ಕೆ ಸಂದೇಹವಿಲ್ಲ. ವಿರ್ಚೋವ್ (1821-1902) ‘ರೋಗ ವಿಜ್ಞಾನದ ತಳಹದಿ ಜೀವಕಣಗಳು’ ಎಂಬ ವಾದ ಮಂಡಿಸಿದ, ಲೂಯಿ ಪಾಸ್ತರ್ (1822-95) ಪದಾರ್ಥಗಳ ಹುದುಗಿಗೆ ಜೀವಿಗಳೇ ಕಾರಣ ಎಂದು ಸಾಧಿಸಿದ, ತಾಮಸ್ ಕಾಕ್ ‘ಒಂದು ಜೀವಾಣುವಿನಿಂದ ಒಂದು ರೋಗ’ ಎಂದು ಪ್ರತಿಪಾದಿಸಿದ (1864)-ಇವೇ ಮುಂತಾದವು ಆಧುನಿಕ ಶಸ್ತ್ರಚಿಕಿತ್ಸಾ ವಿಜ್ಞಾನದ ಮುನ್ನಡೆಗೆ ದಿಕ್ಸೂಚಿಗಳಾದುವೆಂದರೆ ತಪ್ಪಾಗಲಾರದು. ಲೂಯಿಸ್ ಪಾಶ್ಚರ್ ಅವರ ಬರಹಗಳನ್ನು, ಜೊತೆಗೆ ಸೂಕ್ಷ್ಮಜೀವಿವಿಜ್ಞಾನದ ಬಗೆಗಿನ ಅವರ ಸಿದ್ಧಾಂತವನ್ನು ಆಧರಿಸಿದಾಗ ಮಹತ್ವದ ಪ್ರಗತಿ ಕಂಡುಬಂದಿತು. ಬ್ರಿಟಿಶ್ ಶಸ್ತ್ರಚಿಕಿತ್ಸಕ ಜೋಸೆಫ್ ಲಿಸ್ಟರ್, ಶಸ್ತ್ರಚಿಕಿತ್ಸೆಯ ಅವಧಿಯಲ್ಲಿ ಸೋಂಕನ್ನು ತಡೆಗಟ್ಟಲು ಫೀನಾಲ್ ಬಳಸುವ ಪ್ರಯೋಗ ನಡೆಸಿದರು. ಲಿಸ್ಟರ್, ಶೀಘ್ರದಲ್ಲಿ ಸೋಂಕಿನ ಪ್ರಮಾಣವನ್ನು ತಗ್ಗಿಸುವಲ್ಲಿ ಸಮರ್ಥರಾದರು, ಈ ಪ್ರಮಾಣವು ನಂತರದಲ್ಲಿ ರಾಬರ್ಟ್ ಕಾಚ್‍ರ ವಿಧಾನಗಳ ಪರಿಚಯದಿಂದ ಮತ್ತಷ್ಟು ತಗ್ಗಿತು (ಉದಾಹರಣೆಗೆ ಆವಿ ಕ್ರಿಮಿನಾಶನಗೊಳಿಸುವುದು, ಇದು ಲಿಸ್ಟರ್ ಈ ಹಿಂದೆ ಬಳಸಿದ ಕಾರ್ಬೋಲಿಕ್ ಆಮ್ಲ ಸೇಚಕಕ್ಕಿಂತ ಹೆಚ್ಚು ಪರಿಣಾಮಕಾರಿಯೆಂದು ಸಾಬೀತಾಯಿತು), ಉಪಕರಣವನ್ನು ಕ್ರಿಮಿನಾಶನಗೊಳಿಸುವುದು, ಅತಿ ಶಿಸ್ತಿನಿಂದ ಕೈಗಳನ್ನು ತೊಳೆದುಕೊಳ್ಳುವುದು ಹಾಗು ರಬ್ಬರ್ ಕೈಗವಸುಗಳ ಬಳಕೆಯನ್ನು ಕಡ್ಡಾಯ ಮಾಡುವುದು. ಲಿಸ್ಟರ್ ತಮ್ಮ ಪ್ರಯೋಗಗಳನ್ನು ಲೇಖನಗಳ ಒಂದು ಸರಣಿಯಾಗಿ ದ ಲಾನ್ಸೆಟ್‍ನಲ್ಲಿ (ಮಾರ್ಚ್ 1867) ಆಂಟಿಸೆಪ್ಟಿಕ್ ಪ್ರಿನ್ಸಿಪಲ್ ಆಫ್ ದ ಪ್ರ್ಯಾಕ್ಟಿಸ್ ಆಫ್ ಸರ್ಜರಿ ಹೆಸರಿನಡಿಯಲ್ಲಿ ಪ್ರಕಟಿಸಿದರು. ಇದು ಬದಲಾವಣೆಯನ್ನು ತಂದಂತಹ ಲೇಖನವಾಗಿತ್ತು. ಜೊತೆಗೆ ಸೋಂಕು ನಿಯಂತ್ರಣದಲ್ಲಿ ಶೀಘ್ರವಾದ ಪ್ರಗತಿಗೆ ಅಡಿಪಾಯವನ್ನು ಹಾಕಿತು. ಇದು 50 ವರ್ಷಗಳೊಳಗಾಗಿ ಆಧುನಿಕ ಅಪೂತಿಕಾರಿ ಶಸ್ತ್ರಕ್ರಿಯಾ ಕೊಠಡಿಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿತು (ಖುದ್ದು ಲಿಸ್ಟರ್ ತಮ್ಮ ಜೀವಿತಾವಧಿಯ ಉದ್ದಕ್ಕೂ ಪೂತಿನಾಶಕ ಹಾಗು ಅಪೂತಿ ಚಿಕಿತ್ಸೆಯ ಬಗ್ಗೆ ಮತ್ತಷ್ಟು ಸಾಧನೆ ಮಾಡಿದರು). ಜೀವಾಣುಗಳಿಂದಲೇ ರೋಗದ ಸೋಂಕು ಮತ್ತು ಹರಡುವಿಕೆ ಎಂಬ ಖಚಿತ ತತ್ತ್ವವನ್ನು ಜೋಸೆಫ್ ಲಿಸ್ಟರ್ ಶೋಧಿಸಿದ ನಂತರ ಪೂತಿನಾಶಕ ಶಸ್ತ್ರಚಿಕಿತ್ಸೆಗೆ ಇದು ಆಧಾರವಾಯಿತು ಮತ್ತು ಆ ತನಕ ಶಸ್ತ್ರಚಿಕಿತ್ಸೆ ಕುರಿತು ಇದ್ದ ಆತಂಕ ನಿವಾರಣೆಯಾಯಿತು. ಇಂದಿಗೂ ಜೋಸೆಫ್ ಲಿಸ್ಟರ್‌ನನ್ನು ಆಧುನಿಕ ಶಸ್ತ್ರಚಿಕಿತ್ಸೆಯ ಪಿತಾಮಹನೆಂದು ಕರೆಯುವುದುಂಟು.
- ನಡೆದ ಸಂಶೋಧನೆಗಳಿಂದಾಗಿ 1846ರ ಅಕ್ಟೋಬರ್ 16ರಂದು ಮೆಸಾಚುಸೆಟ್ಸ್ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯ ಹಲ್ಲು ಕೀಳಲು ಪ್ರಪ್ರಥಮವಾಗಿ ಶೀಘ್ರ ಇಮರುವ (ಬಾಷ್ಪಶೀಲ) ದ್ರವ ಈಥರನ್ನು ಅರಿವಳಿಕವಾಗಿ ಬಳಸಲಾಯಿತು. ಇದೊಂದು ಕ್ರಾಂತಿಕಾರಿ ಬೆಳೆವಣಿಗೆ. ಇದೇ ವೇಳೆ ಇಂಗ್ಲೆಂಡಿನ ಎಡಿನ್‌ಬರೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್ ಯಂಗ್ ಸಿಂಪ್ಸನ್ (1811-70) 1853ರಲ್ಲಿ ವಿಕ್ಟೋರಿಯ ರಾಣಿಗೆ ಅರಿವಳಿಕೆಯಾಗಿ ಕ್ಲೋರೊಫಾರ್ಮ್ ಪ್ರಯೋಗಿಸಿದ ಆಧಾರಗಳಿವೆ. ಮುಂದಿನ 75 ವರ್ಷ ಕಾಲ ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆಲ್ಲ ಅರಿವಳಿಕೆಯಾಗಿ ಕ್ಲೋರೊಫಾರ್ಮ್‌ನ್ನು ಉಪಯೋಗಿಸಲಾಯಿತು. ಆದರೆ 1950ರ ಅನಂತರ ಕ್ಲೋರೊಫಾರ್ಮ್ ಮತ್ತು ಈಥರಿನಿಂದ ದೇಹಕ್ಕೆ ಉಂಟಾಗುವ ಹಾನಿಗಳ ಬಗ್ಗೆ ಅರಿವು ಮೂಡಿ ಅವುಗಳ ಉಪಯೋಗ ಕಡಿಮೆಯಾಗಿ ಕ್ಷೇಮಕರವಾದ ನೈಟ್ರಸ್ ಆಕ್ಸೈಡ್ ಅನಿಲದ ಬಳಕೆಯೇ ಹೆಚ್ಚಾಗಿದೆ.
- ನೈಟ್ರಸ್ ಆಕ್ಸೈಡ್, ಆಮ್ಲಜನಕಗಳ ಮಿಶ್ರಣ ಮತ್ತು ಸ್ನಾಯುಶಾಮಕ (ಮಸಲ್ ರಿಲ್ಯಾಕ್ಸೆಂಟ್) ವಸ್ತುಗಳ ಬಳಕೆಯಿಂದಾಗಿ ಅರಿವಳಿಕೆಗಳಿಂದಾಗಬಹುದಾದ ಹಾನಿಗಳನ್ನು ಇಂದು ಸೇ. 99ಕ್ಕಿಂತ ಹೆಚ್ಚು ನಿವಾರಿಸಲಾಗಿದೆ. ಬೆನ್ನಿನ ಮಧ್ಯದಲ್ಲಿ ಸೂಜಿ ಮೂಲಕ ಬೆನ್ನುಹುರಿ ನರದ ಸುತ್ತಲೂ ಮದ್ದು ಚುಚ್ಚಿ ದೇಹದ ಕೆಳ ಅರ್ಧಭಾಗವನ್ನು ಮರಗಟ್ಟುವಂತೆ ಮಾಡಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು. ಆದರೆ ಬೆನ್ನೆಲುಬು ಅರಿವಳಿಕೆ (ಸ್ಪೈನಲ್ ಅನೆಸ್ತೇಶಿಯ) ಎಂದು ಹೆಸರಿರುವ ಇದರ ಬಳಕೆ ಮಕ್ಕಳಲ್ಲಿ ನಿಷಿದ್ಧ. ಚಿಕ್ಕಪುಟ್ಟ ಗೆಡ್ಡೆ ಅಥವಾ ಗಂಟುಗಳ ಸುತ್ತಲೂ ಲಿಗ್ನೊಕೇನ್ ಹೈಡ್ರೊಕ್ಲೋರೈಡ್ ಎಂಬ ಚುಚ್ಚುಮದ್ದನ್ನು ಕೊಟ್ಟು ಅವನ್ನು ತೆಗೆಯಬಹುದು. ಇಂಥ ಸ್ಥಳೀಯ ಅರಿವಳಿಕೆಯನ್ನು ಕಿವಿ, ಮೂಗು ಮತ್ತು ಕಣ್ಣುಗಳ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಬಳಸಬಹುದಾಗಿದೆ.
- ಕುದಿಯುವ ನೀರಿನಲ್ಲಿ ಉಪಕರಣಗಳನ್ನು ಹಾಕಿ ವಂದ್ಯಕರಿಸುವುದನ್ನು 1886ರಲ್ಲಿ ವಾನ್ ಬರ್ಗ್ಮನ್ ಎಂಬಾತನೂ ಶಸ್ತ್ರಚಿಕಿತ್ಸೆ ವೇಳೆ ತೊಡುವ ರಬ್ಬರ್ ಕೈಚೀಲಗಳನ್ನು ಹಾಲ್‌ಸ್ಟೆಡ್ ಎಂಬಾತನೂ ಬಳಕೆಗೆ ತಂದು ಶಸ್ತ್ರಚಿಕಿತ್ಸೆಯಿಂದ ಆಗುತ್ತಿದ್ದ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಇಳಿಸಿದರು. ಇದೇ ವೇಳೆಗೆ ಮಿಕುಲಿಕ್ಜ್-ರೆಡೆಕ್ಕಿ ಎಂಬವನು ಗಾಳಿಯಲ್ಲಿ ಹರಡುವ ರೋಗಾಣುಗಳನ್ನು ಪರೀಕ್ಷಿಸಿ ಅವುಗಳಿಂದ ಉಂಟಾಗುತ್ತಿದ್ದ ಹಾನಿ ತಡೆಯಲು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಫಾರ್ಮಾಲ್ಡಿಹೈಡ್ ಹೊಗೆಯಿಂದ ಶುದ್ಧೀಕರಿಸುವ ವಿಧಾನ ಜಾರಿಗೆ ತಂದರು. ಆ ಕೊಠಡಿಯಲ್ಲಿರುವವರಿಗೆ ಮೊಗವಾಡದ (ಫೇಸ್ ಮಾಸ್ಕ್) ಬಳಕೆಯೂ ಪ್ರಾರಂಭವಾಯಿತು. ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಬಟ್ಟೆ, ಹತ್ತಿ, ಗಾಜ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಉಪಕರಣಗಳನ್ನು ಹೆಚ್ಚು ಒತ್ತಡದ ನೀರಾವಿಯಿಂದ ವಂದ್ಯಕರಿಸಬಹುದು. ಇದಕ್ಕೆ ಆಟೊಕ್ಲೇವಿಂಗ್ ಎಂದು ಹೆಸರು. ಈ ವಿಧಾನದಲ್ಲಿ ಹಾಳಾಗುವ ಪ್ಲಾಸ್ಟಿಕ್ ಮತ್ತು ರಬ್ಬರ್ ಸಾಮಗ್ರಿಗಳನ್ನು ಇಥಲೀನ್ ಆಕ್ಸೈಡ್ ಅನಿಲ ಮತ್ತು ಗಾಮಾ ಕಿರಣಗಳಿಂದ ಶುದ್ಧೀಕರಿಸಬಹುದು.
- ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವದ ನಿಗ್ರಹಕ್ಕಾಗಿ ಆ್ಯಂಬ್ರೋಸ್ ಪಾರೆ ಸು. 4 ಶತಮಾನಗಳಿಗೂ ಹಿಂದೆ ದಾರದ ಕುಣಿಕೆ (ಲಿಗೇಚರ್) ಪ್ರಯೋಗಿಸಿದ ಪುರಾವೆ ಇದೆ.[೧೩] 1876ರಲ್ಲಿ ಲಿಸ್ಟರ್ ಎಂಬ ವೈದ್ಯ ಕ್ರೋಮಿಯಮ್ ಲೇಪಿಸಿದ ಕ್ಯಾಟ್‌ಗಟ್‌ನಿಂದ (ಕುರಿಯ ಕರುಳಿನಿಂದ ಮಾಡಿದ ಹುರಿ) ರಕ್ತನಾಳವನ್ನು ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸಿದ. ಚಿಮುಟಗಳ (ಫೋರ್‌ಸೆಪ್ಸ್) ಉಪಯೋಗ ಪ್ರಾಚೀನ ಭಾರತದ ಸುಶ್ರುತನ ಕಾಲದಿಂದ ಇದ್ದಿತಾದರೂ 19ನೆಯ ಶತಮಾನದ ಉತ್ತರಾರ್ಧದಲ್ಲಿ ಕೋಖರ್ ಮತ್ತು ಸ್ಪೆನ್ಸರ್ ವೆಲ್ಸ್ ಎಂಬವರು ತಮ್ಮದೇ ಆದ ಅಪಧಮನಿ ಚಿಮುಟಗಳನ್ನು ಬಳಕೆಗೆ ತಂದರು.[೧೪] ರಕ್ತಸ್ರಾವ ನಿಲ್ಲಿಸಲು 20ನೆಯ ಶತಮಾನಾರಂಭದಲ್ಲಿ ಬಳಕೆಗೆ ಬಂದ ಎಲೆಕ್ಟ್ರೋಕಾಟರಿ ಇಂದಿಗೂ ಉಪಯೋಗದಲ್ಲಿದೆ. ಲೇಸರ್ ಕಿರಣಗಳು, ಶೈತ್ಯಜನಕ ಅನಿಲ, ಜೀವಸತ್ತ್ವ K, ಜೆಲ್ ಫೋಮ್ ಮುಂತಾದ ವಸ್ತುಗಳು ರಕ್ತಸ್ರಾವ ನಿಯಂತ್ರಣಕ್ಕಾಗಿ ಉಪಯೋಗದಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ರಕ್ತಹೆಪ್ಪುಗಟ್ಟುವ ಅನೇಕ ಅಂಶಗಳಿಂದ ಕೂಡಿದ ಹಸನು ರಕ್ತದ ವರ್ಗಾವಣೆ ರಕ್ತಸ್ರಾವ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ. ಇದಲ್ಲದೆ ಶಸ್ತ್ರಚಿಕಿತ್ಸೆಯ ವೇಳೆ ದೇಹತಾಪ 100-150 ಸೆ.ಗೆ ಇಳಿಸಿ ರಕ್ತಸ್ರಾವವನ್ನು ಕಡಿಮೆ ಮಾಡಬಹುದು. ಇದಕ್ಕೆ ಹೈಪೊಥರ್ಮಿಯ ಎಂದು ಹೆಸರು.
- ಶಸ್ತ್ರಚಿಕಿತ್ಸೆ ವೇಳೆ ಹೊಲಿಗೆ ಸಾಮಗ್ರಿಗಳಾದ ಸೂಜಿ ಮತ್ತು ದಾರಗಳು ಅತ್ಯಾವಶ್ಯಕ ಪರಿಕರಗಳು. ಊತಕಗಳನ್ನು ಹೊಲಿಯಲು ಉಪಯೋಗಿಸುವ ಕ್ಯಾಟ್‌ಗಟ್ ಎನ್ನುವುದು ಒಂದು ಅಣಕು ಪದ. ನಿಜಕ್ಕೂ ಇದನ್ನು ತಯಾರಿಸುವುದು ಕುರಿ ಕರುಳಿನ ಪದರದಿಂದ. ಇದಲ್ಲದೆ ಹತ್ತಿಯ ದಾರ, ಸಿಲ್ಕ್ ನೈಲಾನ್ ದಾರಗಳು ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನ ತೆಳು ಎಳೆಗಳೂ ಬಳಕೆಯಲ್ಲಿವೆ.
ಆಧುನಿಕ ಶಸ್ತ್ರಚಿಕಿತ್ಸೆ
[ಬದಲಾಯಿಸಿ]ನೋವು ನಿವಾರಿಸುವ ಸಂವೇದನಹಾರಿಗಳು, ಪೂತಿರೋಧಕ ವಿಧಾನಗಳು, ರಕ್ತಸ್ರಾವದ ಹತೋಟಿ ಕ್ರಮಗಳು ಮತ್ತು 20ನೆಯ ಶತಮಾನದ ಪೂರ್ವಾರ್ಧದ ಪ್ರತಿಜೈವಿಕಗಳು - ಈ ಉಪಜ್ಞೆಗಳಿಂದಾಗಿ ಆಧುನಿಕ ಯುಗದಲ್ಲಿ ಶಸ್ತ್ರಚಿಕಿತ್ಸೆ ಅತ್ಯಂತ ಕ್ಷೇಮಕರವಾಗಿದೆ. ಇದರಿಂದಾಗುವ ಸಾವಿನ ಪ್ರಮಾಣ ಕಡಿಮೆಯಾಗಿ ಅಪೆಂಡಿಕ್ಸ್ ತೆಗೆಯುವಿಕೆ, ಹರ್ನಿಯ ಶಸ್ತ್ರಕ್ರಿಯೆ ಮುಂತಾದವು ಕೇವಲ ಒಂದು ದಿನದ ಚಿಕಿತ್ಸೆಗಳಾಗಿ ಪರಿಣಮಿಸಿವೆ.
ಜೀವವೈದ್ಯಕೀಯ ಎಂಜಿನಿಯರಿಂಗ್‌ನ ಅಪ್ರತಿಮ ಸಾಧನೆಯಿಂದಾಗಿ ಶೈಶವಾವಸ್ಥೆಯಲ್ಲೇ ರೋಗ ಪತ್ತೆಮಾಡಬಲ್ಲ ಅಲ್ಟ್ರಾಸೊನೋಗ್ರಫಿ (ಯುಎಸ್ ಸ್ಕ್ಯಾನ್), ಕಂಪ್ಯೂಟರೈಸ್ಡ್ ಟೊಮೋಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂಆರ್‌ಐ) ಮುಂತಾದ ಸಾಧನಗಳು ತಜ್ಞರಿಗೆ ಲಭ್ಯವಾಗಿ ಶಸ್ತ್ರಚಿಕಿತ್ಸಾನಂತರದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅನ್ನನಾಳ, ಜಠರ ಮತ್ತು ಕರುಳು ದರ್ಶಕ ವೀಡಿಯೊಯಂತ್ರಗಳ ಮತ್ತು ಕ್ಯಾಪ್ಸೂಲ್ ಎಂಡೊಸ್ಕೋಪಿಗಳ ಉಪಜ್ಞೆಯಿಂದ ಸಂಬಂಧಿತ ಅಂಗಗಳ ರೋಗಗಳು ಖಚಿತವಾಗಿ ಪತ್ತೆಯಾಗಿ ಅವುಗಳ ಶಸ್ತ್ರಚಿಕಿತ್ಸೆಗಳೂ ಸಮರ್ಪಕವಾಗಿ ನಡೆಯುವಂತಾಗಿವೆ.
ಇತ್ತೀಚಿನ ಬೆಳೆವಣಿಗೆ ಎಂದರೆ ಉದರದರ್ಶಕದಿಂದ ಮಾಡುವ ಶಸ್ತ್ರಚಿಕಿತ್ಸೆ ಅಥವಾ ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್). ಇದು ರೋಗಿಯ ಹೊಟ್ಟೆ ಮೇಲೆ 1-0.5 ಸೆಂಮೀ ಗಾತ್ರದ 4-6 ರಂಧ್ರಗಳನ್ನು ಮಾಡಿ ಇವುಗಳ ಮೂಲಕ ಉದರದರ್ಶಕ ಮತ್ತು ಇತರ ಉಪಕರಣಗಳನ್ನು ತೂರಿಸಿ ಮಾಡಬಹುದಾದ ಶಸ್ತ್ರಚಿಕಿತ್ಸೆ. ಅನ್ನನಾಳ, ಜಠರ, ಕರುಳು, ಪಿತ್ತಕೋಶ, ಮೂತ್ರಪಿಂಡ, ಗರ್ಭಕೋಶ, ಅಂಡಾಶಯಗಳು ಮುಂತಾದ ಅಂಗಗಳ ಶಸ್ತ್ರಚಿಕಿತ್ಸೆಗಳನ್ನು ವಿವೃತ ಕ್ರಮ (ಓಪನ್ ಪ್ರೊಸೀಜರ್) ಅನುಸರಿಸಿ ಮಾತ್ರ ಯಶಸ್ವಿಯಾಗಿ ನಿರ್ವಹಿಸಬಹುದು. ಉದರದರ್ಶಕ ಶಸ್ತ್ರಕ್ರಿಯೆಯಿಂದ ರೋಗಿ ಪಡೆವ ಲಾಭಗಳೆಂದರೆ ಕನಿಷ್ಠ ಆಸ್ಪತ್ರೆ ವಾಸ, ನೋವು ಮತ್ತು ಕೆಲಸದಿಂದ ಕನಿಷ್ಠ ಗೈರುಹಾಜರಿ.
ಮೂಳೆ ಮತ್ತು ಕೀಲುಗಳ ಚಿಕಿತ್ಸೆಯಲ್ಲಿ ಸಾಕಷ್ಟು ಬೆಳೆವಣಿಗೆ ಆಗಿದೆ. ಮುರಿದ ಮೂಳೆಗಳ ಜೋಡಣೆಗಾಗಿ ಬಾಹ್ಯ ಫಿಕ್ಸೇಟರುಗಳು, ಇಂಟರ್‌ಲಾಕಿಂಗ್ ನೆಯ್‌ಲಿಂಗ್, ಡೈನಮಿಕ್ ಹಿಪ್‌ಸ್ಕ್ರೂ ಮತ್ತು ರಷ್ಯದ ಇಲಿಜಾರೋವ್ ವಿಧಾನಗಳು ಬಳಕೆಯಲ್ಲಿವೆ. ಚರ್ಮದ ಮೇಲೆ ಮಾಡಿದ 1 ಸೆಂಮೀ ಚಿಕ್ಕರಂಧ್ರದಿಂದ ಕೀಲುಗಳ ಒಳಭಾಗವನ್ನು ಪರೀಕ್ಷಿಸಿ, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಇದಕ್ಕೆ ಆರ್ಥ್ರೊಸ್ಕೊಪಿ ಎಂದು ಹೆಸರು. ಇದಲ್ಲದೆ ಪೂರ್ಣ ಕೆಟ್ಟಿರುವ ಕೀಲಿನ ಮೂಳೆಗಳ ಜೋಡಣೆಯೂ ಬಳಕೆಯಲ್ಲಿದೆ. ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್) ಮೂಲಕ ಅಂತರಕಶೇರಿನ ಮೃದ್ವಸ್ಥಿಯ ಜಾರಿಳಿತ ಚಿಕಿತ್ಸೆಮಾಡಿ ಎರಡು ದಿನಗಳಲ್ಲಿ ರೋಗಿ ಗುಣ ಹೊಂದಬಹುದು.
ಅಂಗಗಳ ನಾಟಿ ಮಾಡುವ ಶಸ್ತ್ರಚಿಕಿತ್ಸೆ 1900ರ ದಶಕದಲ್ಲಿ ಪ್ರಾರಂಭವಾಗಿ 1960ರಲ್ಲಿ ಹೃದಯ-ಶ್ವಾಸಕೋಶ (ಹಾರ್ಟ್-ಲಂಗ್) ಯಂತ್ರದ ಅನ್ವೇಷಣೆಯಿಂದ ಇನ್ನಷ್ಟು ಫಲಪ್ರದವಾಗಿದೆ. ಹೃದಯದ ನಾಟಿ ಪ್ರಪ್ರಥಮವಾಗಿ 1967ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಕ್ರಿಶ್ಚಿಯನ್ ಬಾರ್ನಾರ್ಡ್ (1922-2001) ಎಂಬವನಿಂದ ನಡೆಯಿತು.[೧೫][೧೬] ಭಾರತದಲ್ಲಿ ಪಿ.ಕೆ.ಸೇನ್ ಮುಂಬಯಿಯಲ್ಲಿ ಇದರ ಪ್ರಯತ್ನ ನಡೆಸಿದ್ದರು.[೧೭]
ಮೂತ್ರಪಿಂಡಗಳ ನಾಟಿ ಈಗ ಸರ್ವೇಸಾಧಾರಣವಾಗಿ ಹಲವಾರು ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ದೇಹದ ಏಕಾಂಗಗಳಾದ ಪಿತ್ತಜನಕಾಂಗ ಮತ್ತು ಮೇದೋಜೀರಕಾಂಗಗಳ ಬದಲಿ ಜೋಡಣೆ ಇನ್ನಷ್ಟು ಕ್ಲಿಷ್ಟಕರ. ಇದನ್ನು ಪ್ರಪಂಚದ ಕೆಲವೇ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.
ಹೃದಯದ ಕಿರೀಟ ಧಮನಿಗಳ ಹೊರಳು ನಾಟಿ (ಕರೋನರಿ ಬೈಪಾಸ್ ಗ್ರಾಫ್ಟ್) 1960ರಿಂದ ಈಚಿನ ತನಕವೂ ಅವ್ಯಾಹತವಾಗಿ ನಡೆದು, ಕಳೆದ ಒಂದೆರಡು ವರ್ಷಗಳಿಂದ ಇತರ ಪರಿಣಾಮಕಾರಿ ಚಿಕಿತ್ಸೆಗಳಿಂದಾಗಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಂತಿದೆ. ರೋಗಿಯ ರಕ್ತಪರಿಚಲನೆಯನ್ನು ಹೃದಯ-ಶ್ವಾಸಕೋಶ ಯಂತ್ರದ ಮೂಲಕ ಹಾಯಿಸಿ, ಹೃದಯವನ್ನು ತಾತ್ಕಾಲಿಕವಾಗಿ ಸ್ತಂಭಿಸಿ, ವಿವೃತ ಹೃದಯ ಶಸ್ತ್ರಚಿಕಿತ್ಸೆಗಳಾದ ಹೊರಳು ನಾಟಿ (ಬೈಪಾಸ್ ಗ್ರಾಫ್ಟ್) ಅಲ್ಲದೆ, ಕವಾಟಗಳ ಜೋಡಣೆ, ಅಂತರಹೃತ್ಕರ್ಣಗಳ ಮತ್ತು ಅಂತರಹೃತ್ಕುಕ್ಷಿಗಳ ಸೆಪ್ಟಮ್‌ನ ದುರಸ್ತಿ ಮುಂತಾದ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ಮಾಡಬಹುದಾಗಿದೆ. ಅತ್ಯಾಧುನಿಕವಾಗಿ ಮೇಲೆ ಹೇಳಿದ ಯಂತ್ರದ ಬಳಕೆ ಇಲ್ಲದೆ, ಮಿಡಿಯುತ್ತಿರುವ ಹೃದಯದ ಮೇಲೆಯೇ ಶಸ್ತ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ ಎದೆಗೂಡನ್ನು ತೆರೆಯದೇ ಚಿಕ್ಕ ಚಿಕ್ಕ ರಂಧ್ರಗಳ ಮೂಲಕ ಥೊರ‍್ಯಾಕೊಸ್ಕೋಪ್ ಎಂಬ ಉಪಕರಣದಿಂದ ಹೊರಳುನಾಟಿ ಶಸ್ತ್ರಕ್ರಿಯೆಯನ್ನು ಕೂಡ ಮಾಡಲಾಗುತ್ತಿದೆ.
ಮೂತ್ರಪಿಂಡಗಳ ಶಸ್ತ್ರಕ್ರಿಯೆಗಳನ್ನು ಇದೇ ರೀತಿ ಚಿಕ್ಕರಂಧ್ರಗಳ ಮೂಲಕ ನಿರ್ವಹಿಸುವ ವ್ಯವಸ್ಥೆ ಕೂಡ ಉಂಟು. ಮೂತ್ರಕೋಶ ಮತ್ತು ಮೂತ್ರನಾಳಗಳ ಅನೇಕ ತೊಂದರೆಗಳನ್ನು ಅಂತರದರ್ಶಕ ಉಪಕರಣದಿಂದ ಶಮನಪಡಿಸಬಹುದಾಗಿದೆ. ಮೂತ್ರಸಂಬಂಧೀ ಕಶ್ಮಲಗಳನ್ನು ತೆಗೆಯಲು ವಿವೃತ ಶಸ್ತ್ರಚಿಕಿತ್ಸೆ ವಿರಳವಾಗುತ್ತಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯ ಇತರ ಉಪಾಂಗಗಳಾದ ರಕ್ತನಾಳಗಳ ಪ್ಲಾಸ್ಟಿಕ್, ಪುನಾರಚನೆ ಮಿದುಳು ಮತ್ತು ನರಗಳ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯುತ ಸಾಧನೆಗಳಾಗಿವೆ.
ರೊಬೋಟಿಕ್ ಶಸ್ತ್ರಚಿಕಿತ್ಸೆ: ಗಣಕಾವಲಂಬಿತ ರೊಬೋಟುಗಳ ಮೂಲಕ ಮಾಡುವ ಈ ವಿಧಾನ ಇನ್ನೂ ಪ್ರಯೋಗಾವಸ್ಥೆಯಲ್ಲಿದೆ. ರೊಬೋಟಿಕ್ ಶಸ್ತ್ರಚಿಕಿತ್ಸೆಯ ಯಶಸ್ಸನ್ನು ಕಾಲವೇ ತೀರ್ಮಾನಿಸಬೇಕಾಗಿದೆ.
ಶಸ್ತ್ರಚಿಕಿತ್ಸಾ ಪರಿಣತಿಗಳು ಹಾಗು ಉಪ ಪರಿಣತಿಗಳು
[ಬದಲಾಯಿಸಿ]- ಸಾಮಾನ್ಯ ಶಸ್ತ್ರಚಿಕಿತ್ಸೆ
- ಕಿವಿ ಗಂಟಲು ಶಾಸ್ತ್ರ
- ಸ್ತ್ರೀರೋಗ ಶಾಸ್ತ್ರ
- ಬಾಯಿ ಮತ್ತು ದವಡೆ ಹಲ್ಲುಗಳ-ಚಹರೆಯ ಶಸ್ತ್ರಚಿಕಿತ್ಸೆ
- ಮೂಳೆ ಶಸ್ತ್ರಚಿಕಿತ್ಸೆ
- ನರಶಸ್ತ್ರಚಿಕಿತ್ಸೆ
- ನೇತ್ರವಿಜ್ಞಾನ
- ಪಾದದ ಶಸ್ತ್ರಚಿಕಿತ್ಸೆ
- ಮೂತ್ರಶಾಸ್ತ್ರ
ಇತರ ಕೆಲವು ಪರಿಣತಿಗಳು ಕೆಲವು ರೀತಿಯ ಶಸ್ತ್ರಚಿಕಿಸ್ತಾ ಮಧ್ಯಸ್ಥಿಕೆಯನ್ನು ಒಳಗೊಂಡಿರುತ್ತದೆ, ವಿಶೇಷವಾಗಿ ಸ್ತ್ರೀರೋಗ ಶಾಸ್ತ್ರ. ಅಲ್ಲದೆ, ಕೆಲವರು ಚಿಕಿತ್ಸಾಕ್ರಮ/ರೋಗನಿರ್ಣಯದ ಛೇದನ ಬೇಕಿರುವ ವಿಧಾನಗಳನ್ನು ಪರಿಗಣಿಸುತ್ತಾರೆ, ಉದಾಹರಣೆಗೆ ಹೃದಯಕ್ಕೆ ನಳಿಕೆಯನ್ನು ಒಳತೂರಿಸುವುದು, ಅಂತರ್ದರ್ಶಕ ಪರೀಕ್ಷೆ, ಹಾಗು ಹೃದಯದ ನಾಳಗಳು ಅಥವಾ ಕೇಂದ್ರ ನಾಳಗಳನ್ನು ಸರಿಪಡಿಸುವ "ಶಸ್ತ್ರಚಿಕಿತ್ಸೆ". ವೈದ್ಯಕೀಯ ಕ್ಷೇತ್ರದ ಹಲವು ಭಾಗಗಳಲ್ಲಿ, ಈ ದೃಷ್ಟಿಕೋನವನ್ನು ಹಂಚಿಕೊಳ್ಳಲಾಗಿಲ್ಲ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಡಳಿತ ಮಂಡಳಿಗಳು
[ಬದಲಾಯಿಸಿ]- ಅಮೆರಿಕನ್ ಕಾಲೇಜ್ ಆಫ್ ಸರ್ಜನ್ಸ್
- ಅಮೆರಿಕನ್ ಅಕ್ಯಾಡೆಮಿ ಆಫ್ ಆರ್ತೋಪೆಡಿಕ್ ಸರ್ಜನ್ಸ್
- ಅಮೆರಿಕನ್ ಕಾಲೇಜ್ ಆಫ್ ಫುಟ್ ಅಂಡ್ ಆಂಕಲ್ ಸರ್ಜನ್ಸ್
- ರಾಯಲ್ ಆಸ್ಟ್ರಲೇಶಿಯನ್ ಕಾಲೇಜ್ ಆಫ್ ಸರ್ಜನ್ಸ್
- ರಾಯಲ್ ಆಸ್ಟ್ರಲೇಶಿಯನ್ ಕಾಲೇಜ್ ಆಫ್ ಡೆಂಟಲ್ ಸರ್ಜನ್ಸ್
- ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್ ಆಫ್ ಕೆನಡಾ
- ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಇನ್ ಐರ್ಲ್ಯಾಂಡ್
- ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್ಬರ್ಗ್
- ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲ್ಯಾಸ್ಗೋ
- ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಇಂಗ್ಲೆಂಡ್
ಯುಕೆ ಹಾಗು ಐರ್ಲ್ಯಾಂಡ್‍ನಲ್ಲಿನ ವಿದ್ಯಾರ್ಹತೆ
[ಬದಲಾಯಿಸಿ]- ಫೆಲೋಶಿಪ್ ಆಫ್ ದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್
- ಮೆಂಬರ್ಶಿಪ್ ಆಫ್ ದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್
ಉಲ್ಲೇಖಗಳು
[ಬದಲಾಯಿಸಿ]- ↑ Wagman LD. "Principles of Surgical Oncology" Archived 2009-05-15 ವೇಬ್ಯಾಕ್ ಮೆಷಿನ್ ನಲ್ಲಿ. in Pazdur R, Wagman LD, Camphausen KA, Hoskins WJ (Eds) Cancer Management: A Multidisciplinary Approach Archived 2013-10-04 ವೇಬ್ಯಾಕ್ ಮೆಷಿನ್ ನಲ್ಲಿ.. 11 ed. 2008.
- ↑ Capasso, Luigi (2002). Principi di storia della patologia umana: corso di storia della medicina per gli studenti della Facoltà di medicina e chirurgia e della Facoltà di scienze infermieristiche (in Italian). Rome: SEU. ISBN 8887753652. OCLC 50485765.
{{cite book}}
: CS1 maint: unrecognized language (link) - ↑ "Stone age man used dentist drill". BBC News. 6 April 2006. Retrieved 24 May 2010.
- ↑ Herodotus, Histories 2,84
- ↑ Risse, G.B. Mending bodies, saving souls: a history of hospitals. Oxford University Press, 1990. p. 56 [೧]
- ↑ Askitopoulou, H., Konsolaki, E., Ramoutsaki, I., Anastassaki, E. Surgical cures by sleep induction as the Asclepieion of Epidaurus. The history of anesthesia: proceedings of the Fifth International Symposium, by José Carlos Diz, Avelino Franco, Douglas R. Bacon, J. Rupreht, Julián Alvarez. Elsevier Science B.V., International Congress Series 1242(2002), p.11-17. [೨]
- ↑ Askitopoulou, H., Konsolaki, E., Ramoutsaki, I., Anastassaki, E. Surgical cures by sleep induction as the Asclepieion of Epidaurus. The history of anesthesia: proceedings of the Fifth International Symposium, by José Carlos Diz, Avelino Franco, Douglas R. Bacon, J. Rupreht, Julián Alvarez. Elsevier Science B.V., International Congress Series 1242(2002), p.11-17. [೩]
- ↑ biography from Famousmuslims.com Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. accessed 16 April 2007.
- ↑ Peter Elmer,Ole Peter Grell (2004). "Health, disease, and society in Europe, 1500-1800: a source book". Manchester University Press. p.8. ISBN 0719067375
- ↑ Sven Med Tidskr. (2007). "From barber to surgeon- the process of professionalization". Svensk medicinhistorisk tidskrift. 11 (1): 69–87. PMID 18548946.
- ↑ Levine JM (1992). "Historical notes on pressure ulcers: the cure of Ambrose Paré". Decubitus. 5 (2): 23–4, 26. PMID 1558689.
{{cite journal}}
: Unknown parameter|month=
ignored (help) - ↑ "Medical innovations and war,Science Museum,London". Archived from the original on 2010-10-21. Retrieved 2010-10-21.
- ↑ Paget, Stephen (1897). Ambroise Paré and his times, 1510-1590. G.P. Putnam's Sons. p. 23. Retrieved 2 November 2012.
- ↑ "Spencer Wells-type artery forceps". Brought to Life: Exploring the History of Medicine. The Science Museum. Retrieved 13 October 2016.
- ↑ Organ Donation, GlobalViewpoints, Margaret Haerens editor, Detroit, New York, San Francisco, New Haven, Conn., Waterville, Maine, U.S.; London, England, UK: Greenhaven Press, 2013.
- ↑ The operation that took medicine into the media age, BBC, Ayesha Nathoo (Centre for Medical History, University of Exeter), 3 December 2017. The photo caption incorrectly states Louis Washkansky was the first heart transplant recipient, when in actuality he was second. Boyd Rush with physician James D. Hardy was the first person to receive a heart transplant in 1964.
- ↑ Mittal, Chander Mohan (2002). "Profulla Kumar Sen". Texas Heart Institute Journal. 29 (1): 17–25. ISSN 0730-2347. PMC 101263. PMID 11995843.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಶಸ್ತ್ರಚಿಕಿತ್ಸೆ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಶಸ್ತ್ರಚಿಕಿತ್ಸೆ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Dr. ಕ್ಯನರಾ ಕೂಮೆರ್ ಪ್ರಿಪೇರ್ಸ ಯು ಫಾರ್ ಸರ್ಜರಿ: ಆಸ್ಕ್ ದಿ ರೈಟ್ ಕೊಶ್ಚನ್ಸ್ Archived 2010-08-29 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೆರಿಕನ್ ಮೆಡಿಕಲ್ ವೀಡಿಯೋಸ್ ಜರ್ನಲ್ ನಿಂದ ಶಸ್ತ್ರಚಿಕಿತ್ಸೆಯ ದೃಶ್ಯಾವಳಿಗಳು Archived 2011-09-02 ವೇಬ್ಯಾಕ್ ಮೆಷಿನ್ ನಲ್ಲಿ.