ವಿಷಯಕ್ಕೆ ಹೋಗು

ದಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾರವು ಒಂದು ಬಗೆಯ ನೂಲು, ಆದರೆ ಇದನ್ನು ಹಾಗೆಯೇ ಹೊಲಿಗೆಗಾಗಿ ಬಳಸಲಾಗುತ್ತದೆ. ಇದನ್ನು ಹತ್ತಿ, ನಾರುಬಟ್ಟೆ, ನೈಲಾನ್, ಮತ್ತು ರೇಷ್ಮೆ ಸೇರಿದಂತೆ ಅನೇಕ ವಿಭಿನ್ನ ವಸ್ತುಗಳಿಂದ ತಯಾರಿಸಬಹುದು. ಯಾವುದನ್ನು ಜೋಡಿಸಲು ದಾರವನ್ನು ಬಳಸಲಾಗುತ್ತಿದೆಯೋ, ಆ ವಸ್ತುವಿಗಿಂತ ದಾರವು ಹೆಚ್ಚು ಗಟ್ಟಿಯಾಗಿದ್ದು, ಹೊಲಿಗೆ ಸಾಲುಗಳನ್ನು ಬಿಗಿಯಾಗಿ ಎಳೆದು ಇರಿಸಲಾದರೆ, ದಾರವು ತುಂಡಾಗುವ ಮುಂಚೆಯೇ ಆ ವಸ್ತು ಹರಿದುಹೋಗಬಹುದು. ಉಡುಪುಗಳನ್ನು ಸಾಮಾನ್ಯವಾಗಿ ಬಟ್ಟೆಗಿಂತ ಕಡಿಮೆ ಬಲದ ದಾರಗಳಿಂದ ಹೊಲಿಯಲಾಗುತ್ತದೆ, ಏಕೆಂದರೆ ಬಿಗಿ ಎಳೆತ ಉಂಟಾದರೆ ಉಡುಪಿಗಿಂತ ಮುಂಚೆ ಹೊಲಿಗೆ ಸಾಲು ತುಂಡಾಗಲಿ ಎಂದು. ಗಣನೀಯ ಪ್ರಮಾಣದ ಒತ್ತಡವನ್ನು ತಡೆದುಕೊಳ್ಳಬೇಕಾದ ಗವುಸು, ಕಾರ್‌ನ ಆಸನಗಳು, ಟಾರ್ಪಾಲಿನ್‍ಗಳು, ಟೆಂಟುಗಳು, ಮತ್ತು ಅಶ್ವಸಜ್ಜಿನಂತಹ ಭಾರದ ಸರಕುಗಳಿಗೆ ಬಹಳ ಗಟ್ಟಿಯಾದ ದಾರಗಳು ಬೇಕಾಗುತ್ತದೆ. ರಿಪೇರಿಗಳನ್ನು ಹಗುರಾದ ದಾರದಿಂದ ಪ್ರಯತ್ನಿಸುವುದರಿಂದ ಸಾಮಾನ್ಯವಾಗಿ ಕ್ಷಿಪ್ರ ವೈಫಲ್ಯ ಉಂಟಾಗುತ್ತದೆ, ಆದರೆ ಮತ್ತೊಮ್ಮೆ, ಹೊಲಿಯಲಾಗುತ್ತಿರುವ ವಸ್ತುವಿಗಿಂತ ಗಟ್ಟಿಯಾದ ದಾರವನ್ನು ಬಳಸಿದರೆ ದಾರವು ಸ್ವತಃ ಹರಿಯುವುದಕ್ಕೆ ಮುಂಚೆ ಆ ವಸ್ತುವಿನಲ್ಲಿ ಹರಕುಗಳು ಉಂಟಾಗಬಹುದು.

ಹತ್ತಿಯ ದಾರವನ್ನು ಸಾಮಾನ್ಯ ಬಳಕೆಗೆ ಉಪಯೋಗಿಸಬಹುದು. ಇದನ್ನು ಹೊಸೆದಿರಲಾಗಿರುತ್ತದೆ. ಹತ್ತಿ ಮತ್ತು ಪಾಲಿಯೆಸ್ಟರ್‌ನ ಮಿಶ್ರ ದಾರವು ಮಧ್ಯೆ ಪಾಲಿಯೆಸ್ಟರ್‌ನ್ನು ಹೊಂದಿದ್ದು ಹೊರಗೆ ಹತ್ತಿ ಇರುತ್ತದೆ. ಇದು ಸ್ವಲ್ಪ ಎಳೆಯಲ್ಪಡಬಹುದಾಗಿದ್ದು ಹತ್ತಿಯ ಸಾಂಪ್ರದಾಯಿಕ ನೋಟವನ್ನು ಉಳಿಸಿಕೊಳ್ಳುತ್ತದೆ. ಇದರ ಮುಖ್ಯ ಬಳಕೆ ಆಗುವುದು ಬಲ ಬೇಕಾಗಿದ್ದಾಗ ಆದರೆ ಹೊಳಪು ಬೇಡದಿದ್ದಾಗ. ಸಂಯೋಜಿಸಬಲ್ಲ ದಾರವು ಹೊಲಿಯಲಾದ ಬಟ್ಟೆಗಳನ್ನು ಇಸ್ತ್ರಿ ಮಾಡಿದಾಗ ಅವುಗಳನ್ನು ಒಂದುಗೂಡಿಸುತ್ತದೆ. ಇದರ ಮುಖ್ಯ ಬಳಕೆ ಬಂಧನ ಮತ್ತು ಮೇಲಲಂಕಾರದಲ್ಲಿ ಇರುತ್ತದೆ. ನಾರುಬಟ್ಟೆ ದಾರವು ಹೊಸೆಯಲಾದ ದಾರವಾಗಿದೆ. ಸಾಮಾನ್ಯವಾಗಿ ಬಟ್ಟೆಯ ಉಡುಪಗಳಿಗೆ ಬಳಸಲಾದವುಗಳಿಗಿಂತ ಹೆಚ್ಚು ದಪ್ಪ ವಿಸ್ತಾರದಲ್ಲಿರುತ್ತದೆ. ಬಾಳಿಕೆ ಮತ್ತು ಶಿಲೀಂಧ್ರ ಪ್ರತಿರೋಧಕ್ಕಾಗಿ ಇದಕ್ಕೆ ಮೇಣ ಹಚ್ಚಬಹುದು. ಇದರ ಬಳಕೆಗಳೆಂದರೆ ಸಾಂಪ್ರದಾಯಿಕ ಚಕ್ಕಳದ ಅಶ್ವಸಜ್ಜು, ಚಕ್ಕಳದ ಪೆಟ್ಟಿಗೆಗಳು, ಕೈಚೀಲಗಳು ಮತ್ತು ಪರಿಕರಗಳು, ಮಣಿಕೆಲಸ ಇತ್ಯಾದಿ. ಲೋಹೀಯ ದಾರವೆಂದರೆ ಸಾಮಾನ್ಯ ದಾರಕ್ಕೆ ಬಹಳ ತೆಳ್ಳನೆಯ ಲೋಹದ ಲೇಪನವನ್ನು ಕೊಡಲಾಗುತ್ತದೆ. ಇದು ಒಂದು ಬಾಹ್ಯ ಲೇಪನದಿಂದ ರಕ್ಷಿತವಾಗಿರುತ್ತದೆ. ಇದು ಬಹಳ ಹೊಳೆಯುವ ಬಣ್ಣ/ಮಿನುಗು ಮತ್ತು/ಅಥವಾ ರಚನೆಯನ್ನು ಒದಗಿಸುತ್ತದೆ. ಈ ದಾರವನ್ನು ಅಲಂಕಾರದಲ್ಲಿ ಬಳಸಲಾಗುತ್ತದೆ. ನೈಲಾನ್ ದಾರವು ಪಾರದರ್ಶಕ ಎಳೆಯಾಗಿರುತ್ತದೆ. ಇದನ್ನು ಇಸ್ತ್ರಿ ಪೆಟ್ಟಿಗೆಯಿಂದ ಕರಗಿಸಬಹುದು. ಸಾಮಾನ್ಯವಾಗಿ ನೈಲಾನ್ ಪಾಲಿಯೆಸ್ಟರ್‌ಗಿಂತ ಹೆಚ್ಚು ಬಲಶಾಲಿಯಾಗಿರುತ್ತದೆ. ಬಲ ಮತ್ತು ಪಾರದರ್ಶಕತೆ ಬೇಕಾದ ಕಡೆ ಇದನ್ನು ಬಳಸಲಾಗುತ್ತದೆ. ಪಾಲಿಯೆಸ್ಟರ್ ದಾರವು ಒಂದು ಕೃತಕ ಮಿಶ್ರಣವಾಗಿದ್ದು ಹತ್ತಿಗಿಂತ ಹೆಚ್ಚು ಬಲಶಾಲಿಯಾಗಿದ್ದು ಹೆಚ್ಚು ಎಳೆಯಬಹುದಾಗಿರುತ್ತದೆ. ಜಾಳುಎಳೆಗಳು ಬಹಳ ಕಡಿಮೆ ಅಥವಾ ಇರುವುದಿಲ್ಲ. ಬಲ ಬೇಕಾದ ಕಡೆ ಇದನ್ನು ಬಳಸಲಾಗುತ್ತದೆ. ರೇಯಾನ್ ದಾರವನ್ನು ಸೆಲ್ಯುಲೋಸ್‍ನಿಂದ ತಯಾರಿಸಲಾಗುತ್ತದೆ, ಆದರೆ ಇದನ್ನು ಪ್ರಾಕೃತಿಕ ನಾರು ಎಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ಇದು ಬಹಳ ಸಂಸ್ಕರಿತವಾಗಿರುತ್ತದೆ. ಇದು ಹೊಳಪಿನ ಬಣ್ಣಗಳನ್ನು ಪಡೆಯಲು ಉಪಯುಕ್ತವಾಗಿದೆ. ಆದರೆ ಯಾವಾಗಲೂ ಬಣ್ಣ ಬಿಡುವುದಿಲ್ಲ ಎಂದು ಹೇಳಲಾಗದು. ಹೆಚ್ಚಿನ ಮಿನುಗು ಮತ್ತು ಮೃದು ರಚನೆ ಬೇಕಾದಾಗ ಇದನ್ನು ಬಳಸಲಾಗುತ್ತದೆ. ರೇಷ್ಮೆ ದಾರವು ಬಹಳ ನವಿರಾದ, ಬಲವಾದ ಮತ್ತು ನೋಡಲು ಕಷ್ಟವಾದ ದಾರವಾಗಿದೆ; ಆದರೆ ಕಾಲಾಂತರದಲ್ಲಿ ಕಳಪೆ ಆಗುತ್ತದೆ. ಹೆಚ್ಚು ಬಲ ಮತ್ತು ಹೆಚ್ಚು ಮಿನುಗು ಬೇಕಾದ ಕಡೆಗೆ ಇದನ್ನು ಉಪಯೋಗಿಸಲಾಗುತ್ತದೆ. ಉದಾ. ಮಣಿಗಳನ್ನು ಜೋಡಿಸಲು ಬಳಸಲಾಗುತ್ತದೆ.

"https://kn.wikipedia.org/w/index.php?title=ದಾರ&oldid=858256" ಇಂದ ಪಡೆಯಲ್ಪಟ್ಟಿದೆ