ಶರೀರಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶರೀರಶಾಸ್ತ್ರವು ಜೀವಿಗಳ ದೇಹದ ಭಾಗಗಳ ಕಾರ್ಯನಿರ್ವಹಣೆಯ ಅಧ್ಯಯನ ಮಾಡುವ ವಿಜ್ಞಾನವಾಗಿದೆ. ಇದು ಜೀವಶಾಸ್ತ್ರದ ಒಂದು ಉಪವಿಭಾಗವಾಗಿದೆ. ಶರೀರಶಾಸ್ತ್ರದಲ್ಲಿ, ಒಂದು ಜೀವವ್ಯವಸ್ಥೆಯಲ್ಲಿ ಜೀವಿಗಳು, ಅಂಗವ್ಯವಸ್ಥೆಗಳು, ಅಂಗಗಳು, ಊತಕಗಳು, ಜೀವಕೋಶಗಳು ಮತ್ತು ಜೀವಾಣುಗಳು ಹೇಗೆ ರಾಸಾಯನಿಕ ಅಥವಾ ಭೌತಿಕ ಕಾರ್ಯನಿರ್ವಹಣೆ ಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ವಿಧಾನವನ್ನು ಬಳಸಲಾಗುತ್ತದೆ.[೧] ಫ಼ಿಜ಼ಿಯಾಲಜಿ ಪದವು ಗ್ರೀಕ್‌ನಿಂದ ಬಂದಿದೆ φύσις, ಫೈಸಿಸ್ , "ನೇಚರ್, ಒರಿಜಿನ್"; ಮತ್ತು -λογία, -ಲಾಜಿಯಾ , "ಸ್ಟಡಿ ಅಫ್".[೨] ಜೀವಿಗಳ ದೇಹ ರಚನೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದೇ ಶರೀರಶಾಸ್ತ್ರ. ಪ್ರಾಣಿ ಮತ್ತು ಸಸ್ಯಗಳೆರಡರಲ್ಲೂ ಜರಗುವ ಜೀವಕ್ರಿಯೆಗಳ ಅಧ್ಯಯನ ಇದರ ವ್ಯಾಪ್ತಿಗೊಳಪಡುವುದರಿಂದ ಜೀವಕ್ರಿಯಾವಿಜ್ಞಾನ ಎಂಬ ಪರ್ಯಾಯ ಪದವೂ ಉಂಟು. ಪ್ರಾಣಿ ದೇಹಕ್ಕೆ ಅನ್ವಯಿಸಿ ಶರೀರವಿಜ್ಞಾನ ಅಥವಾ ದೇಹವಿಜ್ಞಾನ ಎಂದು ಉಲ್ಲೇಖಿಸುವುದೂ ಉಂಟು. ಸಂತಾನೋತ್ಪಾದನೆ, ಬೆಳೆವಣಿಗೆ, ಉಪಾಪಚಯ, ಶ್ವಸನ, ಸಾಗಾಣಿಕೆ ಇವೇ ಮೊದಲಾದ ಮೂಲ ಕ್ರಿಯೆಗಳಿಗೆ ಸಂಬಂಧಿಸಿದಂತೆ ಅಂಗವ್ಯವಸ್ಥೆಗಳು, ಅಂಗಗಳು, ಊತಕಗಳು, ಕೋಶಗಳು ಮತ್ತು ಉಪಕೋಶೀಯ ಸಂರಚನೆಗಳಲ್ಲಿ ಜರಗುವ ಪ್ರಕ್ರಿಯೆಗಳು ಇದರ ಅಧ್ಯಯನ ವಿಷಯ.

ಅಂಗರಚನಾವಿಜ್ಞಾನದೊಂದಿಗೆ (ಅನಾಟಮಿ) ನಿಕಟ ಸಂಬಂಧಿಯಾದ ಈ ವಿಜ್ಞಾನ ಶಾಖೆಯನ್ನು ಬಲು ಹಿಂದೆ ವೈದ್ಯವಿಜ್ಞಾನದ ಶಾಖೆ ಎಂದೇ ಪರಿಗಣಿಸುತ್ತಿದ್ದರು. ಜೈವಿಕ ಯಂತ್ರತೆ ಮತ್ತು ಪ್ರಕ್ರಿಯೆಗಳನ್ನು ಅಭ್ಯಸಿಸಲು ಭೌತವಿಜ್ಞಾನ ಮತ್ತು ರಸಾಯನವಿಜ್ಞಾನಗಳ ಸಲಕರಣೆಗಳನ್ನು ಬಳಸತೊಡಗಿದ್ದರಿಂದ 19ನೆಯ ಶತಮಾನದಲ್ಲಿ ಶರೀರಕ್ರಿಯಾ ವಿಜ್ಞಾನಕ್ಕೆ ಸ್ವತಂತ್ರ ವಿಜ್ಞಾನದ ಸ್ಥಾನಮಾನ ದೊರೆಯಿತು. ತದನಂತರ ಅದರ ಅಧ್ಯಯನಕ್ಷೇತ್ರ ಬಹುವಾಗಿ ವಿಸ್ತರಿಸಿತು. ಎಂದೇ, ಶರೀರಕ್ರಿಯಾ ವಿಜ್ಞಾನದ ಮೂರು ಪ್ರಭೇದಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದು ರೂಢಿ: ಎಲ್ಲ ಜೀವಿಗಳಿಗೆ ಸಾಮಾನ್ಯವಾದ ಮೂಲ ಪ್ರಕ್ರಿಯೆಗಳನ್ನು ಅಭ್ಯಸಿಸುವ ಸಾರ್ವತ್ರಿಕ (ಜನರಲ್) ಶರೀರಕ್ರಿಯಾಶಾಸ್ತ್ರ; ರೋಗವಿಜ್ಞಾನವನ್ನೂ ಒಳಗೊಂಡು ಮಾನವರ ಮತ್ತು ಅನ್ಯ ಪ್ರಾಣಿಗಳಲ್ಲಿ ಜರಗುವ ಜೈವಿಕ ಪ್ರಕ್ರಿಯೆಗಳನ್ನು ಅಭ್ಯಸಿಸುವ ಮಾನವ ಅಥವಾ ಪ್ರಾಣಿಶರೀರಕ್ರಿಯಾಶಾಸ್ತ್ರ; ಸಸ್ಯಗಳಲ್ಲಿ ಜರಗುವ ಜೈವಿಕಕ್ರಿಯೆಗಳನ್ನು ಅಭ್ಯಸಿಸುವ ಸಸ್ಯಶರೀರಕ್ರಿಯಾವಿಜ್ಞಾನ.

ಇತಿಹಾಸ[ಬದಲಾಯಿಸಿ]

  • ಮಾನವ ಶರೀರಶಾಸ್ತ್ರವು ಕನಿಷ್ಠ ಕ್ರಿ.ಪೂ. 420 ನಷ್ಟು ಹಿಂದಿನದ್ದಾಗಿದೆ ಮತ್ತು ವೈದ್ಯವಿಜ್ಞಾನದ ಪಿತಾಮಹನಾದ ಹಿಪಾಕ್ರಟೀಸ್‍ನ,[೩] ಕಾಲದ್ದಾಗಿದೆ. ವೈದ್ಯವಿಜ್ಞಾನದ ಹಿಪಾಕ್ರೆಟೀಯ ಪಂಥದ ಪುಸ್ತಕಗಳಲ್ಲಿ (ಕ್ರಿ.ಪೂ. 350ಕ್ಕೂ ಮುನ್ನ), ವಿಶೇಷತಃ ರೋಗದ ಶರೀರ ರಸಧಾತು ಸಿದ್ಧಾಂತ ಕುರಿತಾದ ಗ್ರಂಥ ‘ಡೆ ನ್ಯಾಚುರ ಹೋಮಿನಿಸ್’ನಲ್ಲಿ (ಆನ್ ದ ನೇಚರ್ ಆಫ್ ಮ್ಯಾನ್) ಶರೀರಕ್ರಿಯಾವಿಜ್ಞಾನದ ವಿಕಾಸದಲ್ಲಿ ಮಹತ್ತ್ವದ ಪಾತ್ರ ವಹಿಸಿದ ಆಲೋಚನೆಗಳಿವೆ. ಅರಿಸ್ಟಾಟಲ್‌ನ ವಿಮರ್ಶಾತ್ಮಕ ಯೋಚನೆ ಮತ್ತು ಪುರಾತನ ಗ್ರೀಸ್‌ನಲ್ಲಿ ದೇಹರಚನೆ ಮತ್ತು ಕಾರ್ಯಗಳ ನಡುವಿನ ಸಂಬಂಧಕ್ಕೆ ಆತ ನೀಡಿದ ಪ್ರಾಮುಖ್ಯವು ಶರೀರಶಾಸ್ತ್ರದ ಪ್ರಾರಂಭವೆಂದು ಗುರುತಿಸಲಾಗಿದೆ. ದೇಹದ ಪ್ರತಿಯೊಂದು ಅಂಗಕ್ಕೂ ಅದರದ್ದೇ ಆದ ನಿರ್ದಿಷ್ಟ ಕಾರ್ಯವಿದೆ. ಆದ್ದರಿಂದ ಅಂಗ ಸಂರಚನೆಯನ್ನು ಅಭ್ಯಸಿಸಿ ಕಾರ್ಯವನ್ನು ನಿಗಮಿಸಲು ಸಾಧ್ಯ ಎಂದು ಅರಿಸ್ಟಾಟಲ್ ಪ್ರತಿಪಾದಿಸಿದ ಮೂಲಸಂಕಲ್ಪವಾದ ಶರೀರಕ್ರಿಯಾವಿಜ್ಞಾನೇತಿಹಾಸದ ಒಂದು ಮುಖ್ಯ ಭಾಗ. ಗೇಲನ್ ಎಂದು ಗುರುತಿಸಲಾಗಿರುವ ಕ್ಲಾಡಿಯಸ್ ಗ್ಯಾಲೆನಸ್ (ಸು. ಕ್ರಿ.ಶ. 126-199) ದೇಹದ ಕಾರ್ಯನಿರ್ವಹಣೆಯನ್ನು ವಿವರವಾಗಿ ಪರೀಕ್ಷಿಸಲು ಪ್ರಯೋಗಗಳನ್ನು ನಡೆಸಿದವರಲ್ಲಿ ಮೊದಲಿಗನಾಗಿದ್ದಾನೆ. ಗ್ಯಾಲೆನ್ ಪ್ರಯೋಗಾತ್ಮಕ ಶರೀರ ಶಾಸ್ತ್ರವನ್ನು ಕಂಡುಹಿಡಿದವನು.[೪] ಇದೇ ಗ್ಯಾಲೆನ್‌ನ ‘ಡೆ ಉಸು ಪಾರ್ಟಿಯಮ್’ (ಆನ್ ದಿ ಯೂಸ್ ಆಫ್ ಪಾರ್ಟ್ಸ್) ಕೃತಿಗೆ ಮತ್ತು ಶರೀರಕ್ರಿಯೆಗಳಿಗೆ ಸಂಬಂಧಿಸಿದಂತೆ ಇದ್ದ ಅನೇಕ ತಪ್ಪು ಪರಿಕಲ್ಪನೆಗಳ ಮೂಲ. ಉದಾಹರಣೆಗೆ ರಕ್ತದ ಹರಿವಿನ ಉಬ್ಬರವಿಳಿತ ಪರಿಕಲ್ಪನೆ, ರೋಗದ ಶರೀರ ರಸಧಾತು ಸಿದ್ಧಾಂತ ಮತ್ತು ಅರಿಸ್ಟಾಟಲ್‌ನ ಮೂಲಸಂಕಲ್ಪ ವಾದಗಳು ರಕ್ತಪರಿಚಲನೆಗೆ ಸಂಬಂಧಿಸಿದಂತೆ ಗ್ಯಾಲೆನ್‌ನ ತಪ್ಪು ಮೂಲ ತಿಳಿವಳಿಕೆಗೆ ಕಾರಣ. ಪುರಾತನ ಭಾರತೀಯ ಆಯುರ್ವೇದ ಪುಸ್ತಕಗಳಾದ, ಸುಶ್ರುತ ಸಂಹಿತಾ ಮತ್ತು ಚರಕ ಸಂಹಿತಾಗಳು ಸಹ ಮಾನವ ಅಂಗರಚನೆ ಮತ್ತು ಶರೀರಶಾಸ್ತ್ರದ ಬಗ್ಗೆ ವಿವರಣೆಗಳನ್ನು ಹೊಂದಿವೆ.
  • ಆಂಡ್ರಿಯಾಸ್ ವೆಸಾಲಿಯಸ್ ಮತ್ತು ವಿಲಿಯಮ್ ಹಾರ್ವೇ ಅವರ ಆಗಮನದಿಂದ ಮಾತ್ರ ಗ್ಯಾಲ್ವನಿಸಮ್‍ನಿಂದ ವೈದ್ಯಕೀಯ ವಿಶ್ವವು ಮುಂದೆ ಸಾಗಿತು.[೫] ಮಧ್ಯಯುಗದ ಸಮಯದಲ್ಲಿ, ಪುರಾತನ ಗ್ರೀಕ್ ಮತ್ತು ಭಾರತೀಯ ವೈದ್ಯಕೀಯ ಸಂಪ್ರದಾಯವು ಮುಸ್ಲಿಂ ಶರೀರಶಾಸ್ತ್ರಜ್ಞರಿಂದ ಇನ್ನೂ ಅಭಿವೃದ್ಧಿಗೊಂಡಿತು.
  • ವಿಶೇಷವಾಗಿ ಅವಿಸೆನ್ನ (980-1037) ಎಂಬುವವನು ದ ಕ್ಯಾನನ್ ಆಫ್ ಮೆಡಿಸಿನ್‌ ನಲ್ಲಿ ಶರೀರಶಾಸ್ತ್ರದ ಅಧ್ಯಯನಕ್ಕಾಗಿ ಪ್ರಯೋಗಪರೀಕ್ಷೆ ಮತ್ತು ಪರಿಮಾಣ ಮಾಪನವನ್ನು ಪರಿಚಯಿಸಿದ. ಶರೀರಶಾಸ್ತ್ರದ ಹಲವಾರು ಪುರಾತನ ಉಪದೇಶಗಳನ್ನು ಕೊನೆಯಲ್ಲಿ ಇಬ್ನ್ ಅಲ್-ನಫೀಸ್ (1213–1288) ಎಂಬುವವನು ಅಲ್ಲಗಳೆದಿದ್ದಾನೆ, ಈತನು ಹೃದಯಅಂಗರಚನೆಯನ್ನು ಸರಿಯಾಗಿ ವಿವರಿಸಿದ ಮೊದಲ ಶರೀರ ಶಾಸ್ತ್ರಜ್ಞ, ಕರೊನರಿ ರಕ್ತಪರಿಚಲನೆ, ಶ್ವಾಸಕೋಶಗಳ ರಚನೆ, ಮತ್ತು ಪಲ್ಮನರಿ ರಕ್ತಪರಿಚಲನೆಗಳ ವಿವರಣೆಯಿಂದಾಗಿ ಈತನನ್ನು ರಕ್ತಪರಿಚಲನಾ ಶರೀರಶಾಸ್ತ್ರದ ಪಿತಾಮಹನೆಂದು ಪರಿಗಣಿಸಲಾಗುತ್ತದೆ.[೬]
  • ಅಲ್ಲದೆ ಈತ ಶ್ವಾಸಕೋಶಗಳ ಹಾಗೂ ರಕ್ತದ ಅನಿಲಪೂರಣದ ನಡುವಿನ ಸಂಬಂಧ, ಹೃದಯಬಡಿತವಾಗುವುದು ಮತ್ತು ಲೋಮನಾಳೀಯ ರಕ್ತಪರಿಚಲನೆಯ ಮೊದಲ ಕಲ್ಪನೆ ಇವುಗಳ ಬಗ್ಗೆ ವಿವರಣೆ ನೀಡಿದ ಮೊದಲಿಗ ಕೂಡ.[೭]
  • ಮಧ್ಯಯುಗಗಳಿಂದ ಮುಂದುವರೆದು, ನವೋದಯ ಕಾಲದಲ್ಲಿ ಪಶ್ಚಿಮ ವಿಶ್ವದಲ್ಲಿ ಅಂಗರಚನೆ ಮತ್ತು ಶರೀರಶಾಸ್ತ್ರದ ಬಗ್ಗೆ ಆಧುನಿಕ ಅಧ್ಯಯನಗಳು ಹೆಚ್ಚಾದವು. ಆಂಡ್ರಿಯಾಸ್ ವೆಸಾಲಿಯಸ್‍ನು ಮಾನವ ಅಂಗರಚನಾಶಾಸ್ತ್ರದ ಅತಿ ಪ್ರಭಾವಶಾಲಿ ಪುಸ್ತಕ ಡಿ ಹ್ಯುಮನಾಯ್ ಕಾರ್ಪೊರಿಸ್ ಫ್ಯಾಬ್ರಿಕಾ ದ ಲೇಖಕ.[೮] ವೆಸಾಲಿಯಸನನ್ನು ಮಾನವ ಅಂಗರಚನಾಶಾಸ್ತ್ರದ ಸ್ಥಾಪಕನೆಂದು ಗುರುತಿಸಲಾಗುತ್ತದೆ.[೯]
  • ಶರೀರರಚನಾಶಾಸ್ತ್ರಜ್ಞ ವಿಲಿಯಮ್ ಹಾರ್ವೇ 17ನೆಯ ಶತಮಾನದಲ್ಲಿ ರಕ್ತಪರಿಚಲನೆಯ ವ್ಯವಸ್ಥೆ ಬಗ್ಗೆ ವಿವರಣೆ ನೀಡಿದ್ದಾರೆ,[೧೦] ದೇಹದ ಕಾರ್ಯನಿರ್ವಹಣೆಯನ್ನು ಕಲಿಯಲು ಎಚ್ಚರಿಕೆಯ ಪ್ರಯೋಗಗಳನ್ನು ಮತ್ತು ಹತ್ತಿರದ ಅವಲೋಕನಗಳ ಫಲಕಾರಿ ಸಂಯೋಜನೆಯನ್ನು ಇದರಲ್ಲಿ ತೋರಿಸಿದ್ದಾರೆ. ಹಾರ್ವೆಯ ಗ್ರಂಥ ‘ಎಕ್ಸರ್ಸಿಟೇಶನ್ ಡೆ ಅನ್ಯಾಟೊಮಿಕ ಡೆ ಮಾಟು ಕಾರ್ಡಿಸ್ ಎಟ್ ಸ್ಯಾಂಗ್ವಿನಿಸ್ ಇನ್ ಆ್ಯನಿಮಲಿಬಿಸ್’ನ (ಆ್ಯನ್ ಅನ್ಯಾಟೊಮಿಕಲ್ ಡಿಸರ್ಟೇಶನ್ ಅಪಾನ್ ದಿ ಮೂವ್‌ಮೆಂಟ್ ಆಫ್ ದಿ ಹಾರ್ಟ್ ಅ್ಯಂಡ್ ಬ್ಲಡ್ ಇನ್ ಆ್ಯನಿಮಲ್ಸ್) ಪ್ರಕಟವಾದಂದು (1628) ಆಧುನಿಕ ಪ್ರಯೋಗಾಧಾರಿತ ಶರೀರಕ್ರಿಯಾ ವಿಜ್ಞಾನದ ಆರಂಭ. ಹಾರ್ವೆಯ ಅಧ್ಯಯನ ಅಂಗರಚನೆಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾತ್ರ ಆಧರಿಸಿತ್ತು.
  • ಪ್ರಯೋಗಾತ್ಮಕ ಶರೀರಶಾಸ್ತ್ರದ ಅಭಿವೃದ್ಧಿಯಲ್ಲಿ ಇದು ಮೊದಲನೆಯದಾಗಿದೆ. ಹರ್ಮನ್ ಬೋರ್ಹಾವೆಯನ್ನು ಆತನ ಲೀಡನ್‌ನಲ್ಲಿನ ಆದರ್ಶಪ್ರಾಯ ಬೋಧನೆ ಹಾಗೂ ಪಠ್ಯಪುಸ್ತಕ Institutiones medicae (1708) ಯಿಂದಾಗಿ ಶರೀರಶಾಸ್ತ್ರದ ಪಿತಾಮಹನೆಂದು ಕೆಲವುಬಾರಿ ಹೇಳಲಾಗುತ್ತದೆ. 17ನೆಯ ಶತಮಾನದಲ್ಲಿ ಭೌತ ಮತ್ತು ರಸಾಯನವಿಜ್ಞಾನ ಸಂಬಂಧಿತ ಜ್ಞಾನ ಗಣನೀಯ ಪ್ರಮಾಣದಲ್ಲಿದ್ದರೂ ಅಂಗರಚನಾವಿಜ್ಞಾನ ಮತ್ತು ವೈದ್ಯವಿಜ್ಞಾನಗಳ ಆಶ್ರಯದಲ್ಲಿಯೇ ಶರೀರಕ್ರಿಯಾವಿಜ್ಞಾನ ವಿಕಸಿಸುತ್ತಿತ್ತು. ಸ್ವಿಸ್ ಶರೀರಕ್ರಿಯಾ ವಿಜ್ಞಾನಿ ಆಲ್‌ಬ್ರೆಕ್ಟ್ ವಾನ್ ಹಾಲೆರ್ (1708-77) ಶರೀರಕ್ರಿಯಾ ವಿಜ್ಞಾನದ ಮೊದಲನೆಯ ಪ್ರಯೋಗ ಪುಸ್ತಕ ಪ್ರಕಟಿಸಿದ (1747). ತದನಂತರ ಆತ ‘ಎಲಿಮೆಂಟ ಫಿಸಿಯಾಲಜಿಯ ಕಾರ್ಪೊರಿಸ್ ಹ್ಯುಮಾನಿ’ (ಎಲಿಮೆಂಟ್ಸ್ ಆಫ್ ಹ್ಯುಮನ್ ಫಿಸಿಯಾಲಜಿ) ಎಂಬ ಹೆಸರಿನ ಎಂಟು ಸಂಪುಟಗಳ ಗ್ರಂಥ ಪ್ರಕಟಿಸಿದ. ಲ್ಯಾಟಿನ್ ಭಾಷೆಯ ಈ ಗ್ರಂಥ ‘ಚಲನೆಯಲ್ಲಿರುವ ಅಂಗಸಂರಚನೆಯೇ ಶರೀರಕ್ರಿಯೆ’ ಎಂಬ ನಿರೂಪಣೆಯ ಪ್ರತಿಪಾದನೆಯಾಗಿತ್ತು. ‘ಶ್ವಸನಕ್ರಿಯೆಯ ಶರೀರಕ್ರಿಯಾ ಸಮಸ್ಯೆಗಳು ಮತ್ತು ಪ್ರಾಣಿಗಳಲ್ಲಿ ಉಷ್ಣೋತ್ಪಾದನೆ’ ಎಂಬ ವಿಷಯ ಕುರಿತು ಫ್ರೆಂಚ್ ರಸಾಯನವಿಜ್ಞಾನಿ ಆಂಟಾಯಿನ್ ಲಾರೆಂಟ್ ಲೆವಾಸ್ಯೇ (1743-94) ಅನೇಕ ಪ್ರೌಢಪ್ರಬಂಧಗಳನ್ನು ಪ್ರಕಟಿಸಿದ (1782-84). ಈ ವಿಷಯಗಳನ್ನು ತಿಳಿಯಲು ಅಗತ್ಯವಾದ ಬುನಾದಿಯನ್ನು ಇವು ಹಾಕಿದುವು.
  • 18ನೆಯ ಶತಮಾನದಲ್ಲಿ, ಈ ವಿಭಾಗದಲ್ಲಿ ಪ್ರಮುಖ ಅಧ್ಯಯನ ನಡೆಸಿದವರೆಂದರೆ ಫ್ರೆಂಚ್ ವೈದ್ಯ ಮತ್ತು ಶರೀರಶಾಸ್ತ್ರಜ್ಞ ಪಿಯೆರ್ರೆ ಕ್ಯಬಾನಿಸ್. 19ನೆಯ ಶತಮಾನದಲ್ಲಿ, ಶರೀರಶಾಸ್ತ್ರದ ಜ್ಞಾನವು ಅತಿ ವೇಗವಾಗಿ ಒಟ್ಟುಗೂಡಲಾರಂಭಿಸಿತು.
  • ಅತಿ ವಿಶೇಷವಾಗಿ 1838ರ ಮ್ಯಾಥಿಯಾಸ್ ಶ್ಲೈಡನ್‌ನ ಕೋಶ ಸಿದ್ಧಾಂತ ಪ್ರಮುಖವಾಗಿದೆ.[೧೧] ಇದು ಜೀವಕೋಶಗಳೆಂದು ಕರೆಯಲ್ಪಡುವ ಅಂಶಗಳಿಂದ ಜೀವಿಗಳು ಮಾಡಲ್ಪಟ್ಟಿವೆಯೆಂದು ಸಂಪೂರ್ಣವಾಗಿ ಹೇಳಿತು. ರಸಾಯನ, ಭೌತ ಮತ್ತು ಅಂಗರಚನಾವಿಜ್ಞಾನದ ವಿಧಾನಗಳನ್ನು ಉಪಯೋಗಿಸಿಕೊಂಡರೂ ತನ್ನದೇ ಆದ ವಿಶಿಷ್ಟತೆಯುಳ್ಳ ಪ್ರತ್ಯೇಕ ವಿಜ್ಞಾನವಾಗಿ ಶರೀರಕ್ರಿಯಾವಿಜ್ಞಾನ ವಿಕಸಿಸಲಾರಂಭಿಸಿದ್ದು 19ನೆಯ ಶತಮಾನದಲ್ಲಿ. ಜರ್ಮನಿಯ ಜೊಹಾನ್ಸ್ ಪೀಟರ್ ಮ್ಯೂಲರ್ (1801-58), ಜಸ್ಟಸ್ ವಾನ್ ಲೀಬಿಕ್ (1803-73) ಮತ್ತು ಕಾರ್ಲ್ ಫ್ರೆಡ್ರಿಚ್ ವಿಲ್‌ಹೆಲ್ಮ್ ಲೂಡ್‌ವಿಕ್ (1816-95) ಹಾಗೂ ಇಂಗ್ಲೆಂಡಿನ ಮೈಕೆಲ್ ಫಾಸ್ಟರ್ (1836-1907) ಇವರು ಆಧುನಿಕ ಶರೀರಕ್ರಿಯಾವಿಜ್ಞಾನದ ಆದ್ಯ ಪ್ರವರ್ತಕರು.
  • ವಾಸ್ತವವಾಗಿ, ಜೀವಂತ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾರಂಭಿಸಿದ್ದು ಬರ್ನಾರ್ಡ್‌ನ ಅಧ್ಯಾಪಕ ಫ್ರಾಂಕೊಯಿಸ್ ಮಝಾಂಡೀ (1783-1855). ಪ್ರಯೋಗ ಮತ್ತು ವೀಕ್ಷಣೆಗಳ ಫಲಿತಾಂಶಗಳನ್ನು ವೈಜ್ಞಾನಿಕ ಜ್ಞಾನ ಸಂಚಯಕ್ಕೆ ಸಂಯೋಜಿಸಬೇಕಾದ್ದರ ಹಾಗೂ ನೈಸರ್ಗಿಕ ತತ್ತ್ವಶಾಸ್ತ್ರಜ್ಞರ ಸಿದ್ಧಾಂತಗಳನ್ನು ಪ್ರಯೋಗ ಮುಖೇನ ಪರೀಕ್ಷಿಸಬೇಕಾದ್ದರ ಮಹತ್ತ್ವವನ್ನು ಗುರುತಿಸಿದವರು ಬರ್ನಾರ್ಡ್ ಮತ್ತು ಮ್ಯೂಲರ್. ಶರೀರಕ್ರಿಯಾವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಚಲಿತ ಚಿಂತನೆಗಳನ್ನು ಪ್ರಯೋಗ ಮುಖೇನ ಪರೀಕ್ಷಿಸಿ ಫಲಿತಾಂಶಗಳನ್ನು ಬರ್ನಾರ್ಡ್ ಪ್ರಕಟಿಸಿದ. ಕೋಶಗಳು ಜೀವಿದೇಹದ ಕಾರ್ಯಘಟಕಗಳು ಎಂಬ ತಥ್ಯವನ್ನು ಆತ ಗುರುತಿಸಿದ್ದಲ್ಲದೆ ಕೋಶಗಳು ಕಾರ್ಯ ನಿರ್ವಹಿಸುವುದು ರಕ್ತ ಹಾಗೂ ದೇಹ ತರಲಗಳು ನಿರ್ಮಿಸಿದ ಆಂತರಿಕ ಪರಿಸರದಲ್ಲಿ ಎಂಬ ಪರಿಕಲ್ಪನೆಯನ್ನು ವಿಕಸಿಸಿದ. ಆಂತರಿಕ ಪರಿಸರದ ಶರೀರಕ್ರಿಯಾ ನಿಯಂತ್ರಣದ ಪರಿಕಲ್ಪನೆ ಶರೀರಕ್ರಿಯಾವಿಜ್ಞಾನ ಮತ್ತು ವೈದ್ಯವಿಜ್ಞಾನಗಳ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದು. ಅಂಗರಚನಾವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಮ್ಯೂಲರ್‌ನ ಆಸಕ್ತಿಗಳು. ಬರ್ನಾರ್ಡ್‌ನದಾದರೋ ಮಾನವ ಶರೀರಕ್ರಿಯೆಗಳಿಗೆ ಸೀಮಿತಗೊಳಿಸದೆ ಎಲ್ಲ ಜೀವಿಗಳಿಗೆ ವಿಸ್ತರಿಸಿಕೊಳ್ಳಲು ಇವರೀರ್ವರ ಸಹಭಾಗಿತ್ವವೇ ಕಾರಣ.
  • ಕ್ಲಾಡ್ ಬರ್ನಾರ್ಡ್‌ನ (1813–1878) ನಂತರದ ಪರಿಶೋಧನೆಗಳು ಅಂತಿಮವಾಗಿ ಆತನ ಪರಿಕಲ್ಪನೆಯಾದ milieu interieur (ಆಂತರಿಕ ಪರಿಸರ)ಕ್ಕೆ ದಾರಿ ತೋರಿತು.[೧೨][೧೩]
  • ಆಧುನಿಕ ಶರೀರಕ್ರಿಯಾವಿಜ್ಞಾನದ ವಿಕಾಸಕ್ಕೆ ಉತ್ತೇಜನ ಒದಗಿಸಿದಾತ ಮ್ಯೂಲರ್, ಚಿಂತನೆಗಳನ್ನು ಪೂರೈಸಿದಾತ ಬರ್ನಾರ್ಡ್ ಮತ್ತು ವಿಧಾನಗಳನ್ನು ನೀಡಿದ್ದು ಲೂಡ್‌ವಿಕ್. ಭೌತವಿಜ್ಞಾನಗಳ ಹೊಸ ಚಿಂತನೆಗಳನ್ನೂ ವಿಧಾನಗಳನ್ನೂ ಶರೀರಕ್ರಿಯಾವಿಜ್ಞಾನಕ್ಕೆ ಅನ್ವಯಿಸಿದಾತ ಲೂಡ್‌ವಿಕ್. ಸ್ನಾಯು ಚಲನೆ, ರಕ್ತದೊತ್ತಡ ಮತ್ತಿತರ ಶರೀರಕ್ರಿಯಾ ವಿದ್ಯಮಾನಗಳನ್ನು ದಾಖಲಿಸಲು ಇಂದೂ ಉಪಯೋಗಿಸುತ್ತಿರುವ ಸಿಲಿಂಡರಿನಾಕೃತಿಯ ಡ್ರಮ್, ಅರ್ಥಾತ್ ಕೈಮೊಗ್ರಾಫ್ ಈತನ ಉಪಜ್ಞೆ (1847). ಪರಿಚಲನೆ ಮತ್ತು ಮೂತ್ರೋತ್ಪಾದನೆ ಸಂಬಂಧಿತ ಶರೀರಕ್ರಿಯಾ ವಿಜ್ಞಾನಕ್ಕೂ ಈತನ ಕೊಡುಗೆ ಇದೆ. ಶರೀರಕ್ರಿಯಾವಿಜ್ಞಾನಕ್ಕೆ ಅಂಗರಚನಾ ಆಯಾಮಕ್ಕೆ ಬದಲಾಗಿ ಭೌತಿಕ ಆಯಾಮ ನೀಡುವುದರಲ್ಲಿ ಈತ ಪ್ರಕಟಿಸಿದ (1852, 1856) ಎರಡು ಸಂಪುಟಗಳ ‘ಶರೀರಕ್ರಿಯಾ ವಿಜ್ಞಾನ ಪಠ್ಯಪುಸ್ತಕ’ ಯಶಸ್ವಿಯಾಯಿತು.
  • ಲೂಡ್‌ವಿಕ್ ಜರ್ಮನಿಯಲ್ಲಿ ಸ್ಥಾಪಿಸಿದ (1869) ‘ಫಿಸಿಯಲಾಜಿಕಲ್ ಇನ್‌ಸ್ಟಿಟ್ಯೂಟ್’ ಶರೀರಕ್ರಿಯಾವಿಜ್ಞಾನದಲ್ಲಿ ಸಂಶೋಧನೆಗಳನ್ನು ಮಾಡುವ ಎಲ್ಲ ಸಂಶೋಧನಾ ಸಂಸ್ಥೆಗಳಿಗೆ ಮಾದರಿಯಾಯಿತು. ಶರೀರಕ್ರಿಯಾ ವಿಜ್ಞಾನದ ಸಮಸ್ಯೆಗಳ ಅಧ್ಯಯನಕ್ಕೆ ರಾಸಾಯನಿಕ ಮಾರ್ಗ ರೂಪಿಸಿದವ ಲೆವಾಸ್ಯೇ. ಅದನ್ನು ವಿಸ್ತರಿಸಿದವ ಲೀಬಿಕ್. ‘ಕಾರ್ಬನಿಕ ರಸಾಯನ ವಿಜ್ಞಾನ ಮತ್ತು ಕೃಷಿ ಹಾಗೂ ಶರೀರಕ್ರಿಯಾವಿಜ್ಞಾನಕ್ಕೆ ಅದರ ಅನ್ವಯಗಳು,’ ‘ಪ್ರಾಣಿ ರಸಾಯನವಿಜ್ಞಾನ’ ಕುರಿತು ಲೀಬಿಕ್ ಬರೆದ ಪುಸ್ತಕಗಳು (1840, 1842) ವೈದ್ಯಕೀಯ ಶರೀರಕ್ರಿಯಾವಿಜ್ಞಾನ ಮತ್ತು ಕೃಷಿಗೆ ಸಂಬಂಧಿಸಿದಂತೆ ಹೊಸ ಅಧ್ಯಯನ ಕ್ಷೇತ್ರಗಳನ್ನು ಸೃಷ್ಟಿಸಿದುವು.
  • ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಯೋಗಿಕ ಶರೀರಕ್ರಿಯಾ ವಿಜ್ಞಾನದ ಪ್ರಾಧ್ಯಾಪಕನಾದ ಬಳಿಕ (1869) ಫಾಸ್ಟರ್ ವೈದ್ಯವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಪ್ರಯೋಗಾಲಯ ತರಬೇತಿ ಶರೀರಕ್ರಿಯಾ ವಿಜ್ಞಾನದ ಬ್ರಿಟಿಷ್ ಪರಂಪರೆಗೆ ಕಾರಣವಾಯಿತು. ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜನ್ನು ಪ್ರಾಧ್ಯಾಪಕನಾಗಿ ಪ್ರವೇಶಿಸಿದ ಫಾಸ್ಟರ್, ಅಲ್ಲಿ ಸ್ಥಾಪಿಸಿದ ಶರೀರಕ್ರಿಯಾವಿಜ್ಞಾನ ಪ್ರಯೋಗಾಲಯ ಈ ವಿಜ್ಞಾನದ ಸ್ನಾತಕೋತ್ತರ ಪದವಿ ಶಾಲೆಯಾಗಿ ರೂಪುಗೊಂಡಿತು. ಫಾಸ್ಟರ್ ಪ್ರಕಟಿಸಿದ (1877) ‘ಟೆಕ್ಸ್ಟ್‌ಬುಕ್ ಆಫ್ ಫಿಸಿಯಾಲಜಿ’ ರಷ್ಯನ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳ ಅನೇಕ ಆವೃತ್ತಿಗಳೂ ಪ್ರಕಟವಾಗಿವೆ. ‘ಹಿಸ್ಟರಿ ಆಫ್ ಫಿಸಿಯಾಲಜಿ’ ಎಂಬ ಶೀರ್ಷಿಕೆಯಲ್ಲಿ ಅವನ ಭಾಷಣಗಳು ಪ್ರಕಟವಾಗಿವೆ (1901). ಪ್ರಾಣಿ ಪ್ರಯೋಗಗಳಿಗೆ ಅಧಿಕಾಧಿಕ ವಿರೋಧ ವ್ಯಕ್ತವಾಗತೊಡಗಿದಾಗ ವೃತ್ತಿ ಶರೀರಕ್ರಿಯಾ ವಿಜ್ಞಾನಿಗಳನ್ನು ಸಂಘಟಿಸಿ ‘ಫಿಸಿಯಲಾಜಿಕಲ್ ಸೊಸೈಟಿ’ ಸ್ಥಾಪಿಸಿದ ಖ್ಯಾತಿಯೂ ಅವನಿಗೆ ಸಲ್ಲುತ್ತದೆ. ‘ಜರ್ನಲ್ ಆಫ್ ಫಿಸಿಯಾಲಜಿ’ ಪ್ರಕಟಣಾರಂಭವೂ ಅವನ ಕೊಡುಗೆಗಳ ಪೈಕಿ ಒಂದು.
  • ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಜೀವವಿಜ್ಞಾನ ಪ್ರಾಧ್ಯಾಪಕ ಹೆನ್ರಿ ನ್ಯುವೆಲ್ ಮಾರ್ಟಿನ್ ಎಂಬಾತ ಫಾಸ್ಟರ್‌ನ ಬೋಧನ ವಿಧಾನಗಳನ್ನು ಅಮೆರಿಕಕ್ಕೆ (1876) ಒಯ್ದು ಈತ ಮತ್ತು ಬರ್ನಾರ್ಡ್‌ನ ಶಿಷ್ಯ ಹಾಗೂ ಲೂಡ್‌ವಿಕ್‌ನ ಸಹೋದ್ಯೋಗಿಯಾಗಿದ್ದ ಸಿಲಾಸ್ ವೆಯಿರ್ ಮಿಚೆಲ್ (1829-1914) ಜೊತೆಗೂಡಿ ‘ಅಮೆರಿಕನ್ ಫಿಸಿಯಲಾಜಿಕಲ್ ಸೊಸೈಟಿ’ ಸ್ಥಾಪಿಸಿದ್ದಲ್ಲದೆ (1887),[೧೪] ‘ಅಮೆರಿಕನ್ ಜರ್ನಲ್ ಆಫ್ ಫಿಸಿಯಾಲಜಿ’ಯ ಪ್ರಕಟಣೆಯನ್ನು ಪ್ರವರ್ತಿಸಿದರು ಕೂಡ. ಜರ್ಮನಿಯ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿಯಲ್ಲಿ ಪ್ರಾಧ್ಯಾಪಕನಾಗಿದ್ದ ಎಡ್ವರ್ಡ್ ಫ್ಲೂಗರ್‌ಗೆ (1829-1910) ಜರ್ಮನಿಯ ಪ್ರಮುಖ ಶರೀರಕ್ರಿಯಾವಿಜ್ಞಾನ ನಿಯತಕಾಲಿಕ ಪ್ರವರ್ತಿಸಿದ (1868) ಖ್ಯಾತಿ ಸಲ್ಲುತ್ತದೆ. ಅರ್ನ್‌ಸ್ಟ್ ಫೆಲಿಕ್ಸ್ ಹಾಪೆಸೆಯ್ಲರ್ (1825-95) ಸ್ಥಾಪಿಸಿದ (1877) ‘ಝೈಟ್‌ಶಿಫ್ಟ್ ಫಾರ್ ಫಿಸಯಾಲಜಿಶೆ ಕೆಮಿ’ ಸಂಸ್ಥೆ ಶರೀರಕ್ರಿಯಾವಿಜ್ಞಾನದಲ್ಲಿ ರಾಸಾಯನಿಕ ವಿಧಾನಗಳ ಅಳವಡಿಕೆಗೆ ಮಾನ್ಯತೆ ಒದಗಿಸಿತು. ಇಂಗ್ಲೆಂಡಿನ ಕೇಂಬ್ರಿಜ್‍ನಲ್ಲಿ ಸ್ಥಾಪಿತವಾದ (1898) ಪ್ರಯೋಗಾಲಯ ಫಾಸ್ಟರ್ ಹುಟ್ಟುಹಾಕಿದ ಮಾರ್ಗಕ್ಕೆ ಪೂರಕವಾಗಿ ಈ ವಿಧಾನಗಳ ಅಳವಡಿಕೆಯನ್ನು ಮುಂದುವರಿಸಿತು.
  • ನಂತರದಲ್ಲಿ ಬರ್ನಾರ್ಡ್‌ನ ಪರಿಕಲ್ಪನೆಯನ್ನು ಅಮೆರಿಕನ್ ಶರೀರಶಾಸ್ತ್ರಜ್ಞ ವಾಲ್ಟರ್ ಕ್ಯಾನನ್ (1871–1945) ತೆಗೆದುಕೊಂಡು "ಸಂತುಲನ" ಎಂಬ ಪದವನ್ನು ಸೃಷ್ಟಿಸಿದರು. 20ನೆಯ ಶತಮಾನದಲ್ಲಿ, ಮಾನವರಲ್ಲದೆ ಇತರೆ ಜೀವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರಲ್ಲಿ ಜೀವಶಾಸ್ತ್ರಜ್ಞರು ಆಸಕ್ತಿ ತೋರಿಸಲಾರಂಭಿಸಿದರು.
  • ಕೊನೆಯಲ್ಲಿ ಹೋಲಿಕೆಯ ಶರೀರಶಾಸ್ತ್ರ ಮತ್ತು ಎಕೊಫಿಸಿಯಾಲಜಿ ಕ್ಷೇತ್ರಗಳು ಬೆಳವಣಿಗೆ ಕಂಡವು.[೧೫] ಈ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳೆಂದರೆ ನಟ್ ಶ್ಮಿಡ್ಟ್-ನೀಲ್ಸನ್ ಮತ್ತು ಜಾರ್ಜ್ ಬಾರ್ಥೊಲೊಮೆವ್. ತೀರಾ ಇತ್ತೀಚೆಗೆ, ವಿಕಾಸಾತ್ಮಕ ಶರೀರಶಾಸ್ತ್ರವು ಬೋಧನದ ಪ್ರತ್ಯೇಕವಾದ ಉಪಶಾಖೆಯಾಗಿದೆ.[೧೬]
  • 20ನೆಯ ಶತಮಾನದಲ್ಲಿ ಶರೀರಕ್ರಿಯಾವಿಜ್ಞಾನ ಒಂದು ಪರಿಪಕ್ವ ವಿಜ್ಞಾನದ ಸ್ಥಾನಮಾನ ಗಳಿಸಿತು. ಜೀವರಸಾಯನವಿಜ್ಞಾನ, ಜೀವಭೌತ ವಿಜ್ಞಾನ, ಸಾರ್ವತ್ರಿಕ ಶರೀರಕ್ರಿಯಾವಿಜ್ಞಾನ, ಅಣು ಜೀವವಿಜ್ಞಾನ ಮುಂತಾದ ಅನೇಕ ವಿಜ್ಞಾನ ಶಾಖೆಗಳ ಉದಯಕ್ಕೂ ಕಾರಣವಾಗಿದೆ. ವೈದ್ಯವಿಜ್ಞಾನದಲ್ಲಂತೂ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಸ್ತನಿ ಶರೀರಕ್ರಿಯಾವಿಜ್ಞಾನ ಕ್ಷೇತ್ರದಲ್ಲಿ ಅಂಗ ಮತ್ತು ಅಂಗ ವ್ಯವಸ್ಥೆ ದೃಷ್ಟಿಕೋನದಿಂದ ಅನೇಕ ಸಂಶೋಧನೆಗಳಾಗಿವೆ. ತುಲನಾತ್ಮಕ ಅಧ್ಯಯನಗಳು ಮುಂದುವರಿಯುತ್ತಿವೆ. ಪ್ರಾಣಿ ಸ್ತರದಲ್ಲಿ ಕೋಶಗಳು, ಊತಕಗಳು, ಅಂಗಗಳು ಮತ್ತು ಅಂಗವ್ಯವಸ್ಥೆಗಳು ಹೇಗೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಲೂ ಸಂಶೋಧನೆಗಳು ಪ್ರಯತ್ನಿಸುತ್ತಿವೆ. ಮಾನಸಿಕ ಕ್ರಿಯೆಗಳ ಶರೀರಕ್ರಿಯಾ ತಳಹದಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳೂ ಆಗುತ್ತಿವೆ. ಮಾನವ ದೇಹದಲ್ಲಾಗುವ ಸಮಸ್ತ ಜೀವಾಧಾರ ಕ್ರಿಯೆಗಳ ಅಧ್ಯಯನ ಈ ವಿಜ್ಞಾನದ ವ್ಯಾಪ್ತಿಯಲ್ಲಿ ಸೇರಿವೆ.

ಶಿಕ್ಷಣಸಂಸ್ಥೆಗಳು[ಬದಲಾಯಿಸಿ]

ವಿದ್ಯಾರ್ಥಿಗಳಿಗೆ ಶರೀರಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಅಧ್ಯಯನ ನಡೆಸಲು ಅವಕಾಶ ನೀಡುವಂತಹ ವಿಶ್ವವಿದ್ಯಾಲಯಗಳು ಬಹಳಷ್ಟಿವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅತಿವೇಗವಾಗಿ ಬೆಳೆಯುತ್ತಿರುವ ವಿಷಯಗಳಲ್ಲಿ ಇದು ಒಂದು ಎಂದು ಪರಿಗಣಿಸಲಾಗಿದೆ.

ಗೌರವಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ನವರು 1901ರಿಂದ ನೀಡುತ್ತಿರುವ ಅತ್ಯುನ್ನತ ಗೌರವವೆಂದರೆ ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಆಗಿದೆ.

  1. REDIRECT Template:Nobel Prize in Physiology or Medicine

ಉಲ್ಲೇಖಗಳು[ಬದಲಾಯಿಸಿ]

  1. Guyton, Arthur; Hall, John (2011). Guyton and Hall Textbook of Medical Physiology (12th ed.). Philadelphia: Saunders/Elsevier. p. 3. ISBN 978-1-4160-4574-8.
  2. Harper, Douglas. "physiology". Online Etymology Dictionary.
  3. Physiology - History of physiology, Branches of physiolog y
  4. Thoracic Surgery Clinics: Historical Perspectives of Thoracic Anatomy, ಸ್ಟ್ಯಾನ್ಲೆ ಸಿ. ಫೆಲ್ ಮತ್ತು F. ಗ್ರಿಫಿತ್ ಪಿಯರ್ಸನ್
  5. Galen
  6. Chairman's Reflections (2004), "Traditional Medicine Among Gulf Arabs, Part II: Blood-letting", Heart Views 5 (2), p. 74-85 [80].
  7. ಪಾಲ್ ಗಾಲಿಯಂಗ್ವಿ, Ibn an-Nafis, Cairo, 1966, pp. 109-129, and "The West denies Ibn Al Nafis's contribution to the discovery of the circulation" for the Symposium on Ibn al-Nafis , Second International Conference on Islamic Medicine: Islamic Medical Organization, Kuwait, 1982.
  8. Page through a virtual copy of Vesalius's De Humanis Corporis Fabrica
  9. Andreas Vesalius (1514-1567)
  10. ಜಿಮ್ಮೆರ್, ಕಾರ್ಲ್. 2004. Soul Made Flesh: The Discovery of the Brain - and How It Changed the World. New York: Free Press.
  11. "Introduction to physiology: History, biological systems, and branches". www.medicalnewstoday.com (in ಇಂಗ್ಲಿಷ್). 2017-10-13. Retrieved 2020-10-01.
  12. Bernard, Claude (1865). An Introduction to the Study of Ex- perimental Medicine. New York: Dover Publications (published 1957).
  13. Bernard, Claude (1878). Lectures on the Phenomena of Life Common to Animals and Plants. Springfield: Thomas (published 1974).
  14. "American Physiological Society > About". the-aps.org (in ಇಂಗ್ಲಿಷ್). Archived from the original on 2018-10-21. Retrieved 2017-02-21.
  15. ಫೆಡರ್, M. E., A. F. ಬೆನ್ನೆಟ್, W. W. ಬರ್ಗ್ರೆನ್, ಮತ್ತು R. B. ಹುಯೆ, eds. 1987. New directions in ecological physiology. Cambridge Univ. Press, New York.
  16. http://www.biology.ucr.edu/people/faculty/Garland/GarlCa94.pdf Archived 2021-04-12 ವೇಬ್ಯಾಕ್ ಮೆಷಿನ್ ನಲ್ಲಿ. Garland, T., Jr., and P. A. Carter. 1994. Evolutionary physiology. Annual Review of Physiology 56:579-621.

ಬಾಹ್ಯ ಕೊಂಡಿಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: