ಜೊಹಾನ್ಸ್ ಪೀಟರ್ ಮ್ಯೂಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೊಹಾನ್ಸ್ ಪೀಟರ್ ಮ್ಯೂಲರ್

ಜೊಹಾನ್ಸ್ ಪೀಟರ್ ಮ್ಯೂಲರ್ (1801 - 58) ಜರ್ಮನಿಯ ಒಬ್ಬ ಶರೀರ ಕ್ರಿಯಾವಿಜ್ಞಾನಿ.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಬಡ ಮೋಚಿಯ ಮಗನಾಗಿ 1801 ರಲ್ಲಿ ಜುಲೈ 14 ರಂದು ಜನಿಸಿದ. ಈತ ಬಾಲ್ಯದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯಲಾರದೆ ಸ್ವಂತ ವ್ಯಾಸಂಗದಿಂದ ಒಂದಿಷ್ಟು ಜ್ಞಾನ ಗಳಿಸಿದ. ಪಾದ್ರಿ ಆದುದಾದರೆ ಜೀವನನಿರ್ವಹಣೆ ಸುಲಭವಾದೀತೆಂದು ಬಗೆದು ತಂದೆ ಮಗನನ್ನು ಆ ಹಾದಿಯಲ್ಲಿ ನಡೆಸಲು ಪ್ರಯತ್ನಿಸಿದ.[೧] ಆದರೆ ಚಿಕ್ಕಂದಿನಿಂದಲೂ ಸ್ಥಳೀಯ ಸಸ್ಯಪ್ರಾಣಿಗಳ ಬಾಹುಳ್ಯದಿಂದ ಬಲು ಆಕರ್ಷಿತನಾಗಿದ್ದ ಮ್ಯೂಲರನ ಆಸಕ್ತಿ ವಿವಿಧ ಸಸ್ಯಪ್ರಾಣಿಗಳ ಸಂಗ್ರಹಣೆ ಹಾಗೂ ಅಧ್ಯಯನದತ್ತ ಹರಿದಿತ್ತು. 1819ರಲ್ಲಿ ಉನ್ನತಶಾಲಾ ವಿದ್ಯಾಭ್ಯಾಸ ಕೈಗೊಂಡಾಗ ದೈವಿಕಶಾಸ್ತ್ರದ ಅಧ್ಯಯನಕ್ಕೆ ಇವನನ್ನು ಸೇರಿಸಲಾಯಿತಾದರೂ ಮೂರೇ ದಿನಗಳಲ್ಲಿ ಅದನ್ನು ತೊರೆದು ಆಗ ತಾನೇ ಪ್ರಾರಂಭವಾಗಿದ್ದ ಬಾನ್ ವಿಶ್ವವಿದ್ಯಾಲಯ ಸೇರಿ ನೈಸರ್ಗಿಕ ವಿಜ್ಞಾನ ಹಾಗೂ ವೈದ್ಯವಿಜ್ಞಾನಗಳ ವ್ಯಾಸಂಗದಲ್ಲಿ ತೊಡಗಿದ.[೨] ಇದಕ್ಕೆ ಮುಂಚೆ ಒಂದು ವರ್ಷ ಕಡ್ಡಾಯ ಸೈನ್ಯಸೇವೆಯನ್ನು ಎಂಜಿನಿಯರಿಂಗ್ ವಿಭಾಗದಲ್ಲಿ ಸಲ್ಲಿಸಿ ಮುಗಿಸಿದ್ದಾಗಿತ್ತು. ಹಿಡಿದ ಕೆಲಸವನ್ನು ಅತಿಶ್ರದ್ಧೆಯಿಂದ ನಿರ್ವಹಿಸುತ್ತ ಜೊತೆಯವರೊಡನೆ ಹಿರಿಮೆಗಳಿಸುವ ಸ್ವಭಾವ ಇವನದು. ವಿದ್ಯಾರ್ಥಿದೆಶೆಯ ಎರಡನೆಯ ವರ್ಷದಲ್ಲಿ ಹೊಸ ವಿಶ್ವವಿದ್ಯಾಲಯ ಅಲ್ಲಿಯ ವಿದ್ಯಾರ್ಥಿಗಳಿಗೆಂದೇ ಪ್ರಾರಂಭಿಸಿದ್ದ ವಿಜ್ಞಾನ ಲೇಖನ ಸ್ಪರ್ಧೆಯಲ್ಲಿ ಜಯಗಳಿಸಿದ. ವಿಷಯ - ಭ್ರೂಣದಲ್ಲಿ ಶ್ವಾಸೋಚ್ಛ್ವಾಸ. 1822 ರಲ್ಲಿ (ವಯಸ್ಸು 21) ಪಿ.ಎಚ್.ಡಿ. ಪದವಿ ಪಡೆದ. ವೈದ್ಯವ್ಯಾಸಂಗದ ಕೊನೆಯ ಮೂರು ಹಂತಗಳನ್ನು ಬರ್ಲಿನ್ನಿನಲ್ಲಿ ಮುಗಿಸಿ ಶರೀರರಚನಾ ವಿಜ್ಞಾನದಲ್ಲಿ ಶ್ರೇಷ್ಠ ಶಿಕ್ಷಣ ಪಡೆದು ವೈದ್ಯ ಪದವೀಧರನಾದ.

ವೃತ್ತಿಜೀವನ[ಬದಲಾಯಿಸಿ]

1824 ರಿಂದ ವೃತ್ತಿ ಜೀವನಾರಂಭ; ಪ್ರಾಧ್ಯಾಪಕನಾಗಿ ಮತ್ತು ಸಂಶೋಧಕನಾಗಿ.

ಇವನು ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ 37 ವರ್ಷಗಳ ಕಾಲದಲ್ಲಿ 28 ಗ್ರಂಥಗಳನ್ನೂ 250 ಲೇಖನಗಳನ್ನೂ 250 ವಿವರಣಾತ್ಮಕ ಚಿತ್ರಗಳನ್ನೂ ರಚಿಸಿದ. ಹೆಚ್ಚು ಕಡಿಮೆ 15 ದಿವಸಗಳಿಗೆ ಒಮ್ಮೆ ಹೊಸ ವೈಜ್ಞಾನಿಕ ವಿಷಯವಾಗಿ ಯಾವುದಾದರೂ ಲೇಖನವನ್ನೋ ವಿವರಣಚಿತ್ರವನ್ನೋ ಪ್ರಕಟಿಸುತ್ತಿದ್ದ. ಮಿದುಳು ಬಳ್ಳಿಗೆ ಜಂಟಿಸುವ ನರಗಳ ಮುಮ್ಮೂಲ ಹಿಮ್ಮೂಲಗಳು ಅನುಕ್ರಮವಾಗಿ ಕ್ರಿಯಾವಾಹಿ ಮತ್ತು ಜ್ಞಾನವಾಹಿಗಳಾಗಿವೆ ಎಂದು ಬೆಲ್ ಮತ್ತು ಮೆಹೆಂಡಿ ಪ್ರತಿಪಾದಿಸಿದ್ದ ಸಿದ್ಧಾಂತವನ್ನು ಇವನು ಪ್ರಾಯೋಗಿಕವಾಗಿ ಸಮರ್ಥಿಸಿ, ಇದೇ ರೀತಿ ನರಕೃತ ಅನೈಚ್ಛಿಕ ಪ್ರತಿಕ್ರಿಯೆಯ (ರಿಫ್ಲೆಕ್ಸ್ ಆ್ಯಕ್ಷನ್) ವಿಷಯವಾಗಿಯೂ ಪ್ರಾಯೋಗಿಕ ಸ್ಥಿರೀಕರಣೆ ನೀಡಿದ. ಸಂವೇದನೆಗಳು ಪ್ರಚೋದಕಗಳ ವೈವಿಧ್ಯದಿಂದ ಬೇರೆ ಬೇರೆಯಾಗಿ ಅನುಭವಕ್ಕೆ ಬರುವುದಿಲ್ಲ. ಗ್ರಾಹಕಾಂಗದ ವೈವಿಧ್ಯವೇ ವಿವಿಧ ಅನುಭವಗಳ ಮೂಲ ಎಂದು ಈತ ಆವಿಷ್ಕರಿಸಿದ ವಿಷಯವನ್ನು ನರಸಂವೇದನೆಗಳ ನಿರ್ದಿಷ್ಟತೆಯ ಬಗ್ಗೆ ಮ್ಯೂಲರನ ನಿಯಮವೆಂದೇ ಕರೆಯಲಾಗಿದೆ.[೩] ಮುಖ್ಯವಾಗಿ ಇವನು ನರ ಹಾಗೂ ಸಂವೇದನೆ ವಿಚಾರವಾಗಿ ಸಂಶೋಧನೆ ಮಾಡಿದ್ದರೂ ಇತರ ಅನೇಕ ವಿಷಯಗಳ ಬಗ್ಗೆ ಆಸಕ್ತಿ ತಳೆದಿದ್ದು ಧ್ವನಿಪೆಟ್ಟಿಗೆಯಲ್ಲಿ ಸ್ವರೋತ್ಪತ್ತಿ, ವ್ಯಕ್ತಿಯಲ್ಲಿ ವಾಚನಶ್ರವಣಗಳ ಯಾಂತ್ರಿಕತೆ, ಭ್ರೂಣದಲ್ಲಿ ಜನನಾಂಗಗಳು ಹಾಗೂ ವಿಸರ್ಜನಾಂಗಗಳ ವಿಕಸನೆ (1825), ಕಪ್ಪೆಯಲ್ಲಿ ದುಗ್ಧರಸ ರೇಚಕಗಳು (1832), ಗಂತಿದುರ್ಮಾಂಸಗಳು (1838), ಸೋರೊಸ್ಪರ್ಮಿಯಾಸ್ ಎಂಬ ಪರೋಪಜೀವಿಕೃತರೋಗ (1841), ಸಾಗರಜೀವಿಗಳು ಮತ್ತು ಅವುಗಳಲ್ಲಿಯ ತುಲನಾತ್ಮಕ ದೇಹರಚನೆ ಈ ವಿಷಯಗಳಲ್ಲೆಲ್ಲ ಸಂಶೋಧನೆಗಳನ್ನು ನಡೆಸಿದ. ಸಾಗರಜೀವಿಗಳ ವ್ಯಾಸಂಗಕ್ಕಾಗಿ ಇವನು ತಪ್ಪದೆ ರಜಾಕಾಲಗಳಲ್ಲಿ ಬಾಲ್ಟಿಕ್ ಸಮುದ್ರ, ಉತ್ತರ ಸಮುದ್ರ, ಏಡ್ರಿಯಾಟಿಕ್ ಸಮುದ್ರ ಮುಂತಾದ ಕಡೆಗಳಿಗೆ ಹೋಗುತ್ತಿದ್ದು ಇವನ ಆಪ್ತಸ್ನೇಹಿತ ಯಾನಮಾಡುತ್ತಿದ್ದ ಹಡಗು ಸಮುದ್ರ ಪಾಲಾಗಿ ಭೀಕರ ದುರಂತವಾದಾಗ ಸಮುದ್ರವೆಂದರೇ ಜುಗುಪ್ಸೆ ತಳೆದು ಆ ವ್ಯಾಸಂಗಗಳನ್ನು ಕೈಬಿಟ್ಟ. ಮನುಷ್ಯರ ಮತ್ತು ಪ್ರಾಣಿಗಳ ದೃಷ್ಟಿಕ್ರಿಯೆಯನ್ನು ತುಲನಾತ್ಮಕವಾಗಿ ವಿಮರ್ಶಿಸಿ (1825) ಮನುಷ್ಯರ ಕಣ್ಣುಗಳ ಚಲನೆಯ ವಿಚಾರವಾಗಿ ಶೋಧಿಸಿದ್ದ ವಿವರಗಳನ್ನು ಸೇರಿಸಿ ಒಂದು ಗ್ರಂಥ ರಚಿಸಿದ್ದ. ಶರೀರಕ್ರಿಯಾ ವಿಜ್ಞಾನ ಕುರಿತು ಗ್ರಂಥರಚನೆಯನ್ನು 1833ರಲ್ಲಿ ಪ್ರಾರಂಭಿಸಿ 1840ರಲ್ಲಿ ಮುಗಿಸಿದ. ಈ ಬೃಹತ್ ಗ್ರಂಥ ಆಗಿನ ಕಾಲಕ್ಕೆ ಶರೀರಕ್ರಿಯೆಯ ವಿಷಯವಾಗಿ ವೈಜ್ಞಾನಿಕವಾಗಿ ತಿಳಿದುಬಂದದ್ದೆಲ್ಲವನ್ನು ಒಳಗೊಂಡಿತ್ತು. 1842ರಲ್ಲಿ ಇದರ ಇಂಗ್ಲಿಷ್ ಆವೃತ್ತಿ ಪ್ರಕಟವಾಯಿತು.

ನಿಧನ[ಬದಲಾಯಿಸಿ]

ಇಷ್ಟು ವೈವಿಧ್ಯಮಯವಾಗಿ ಉನ್ನತಮಟ್ಟದ ವ್ಯಾಸಂಗಗಳನ್ನು ಮಾಡುತ್ತ ಲೋಕಾದ್ಯಂತ ಶಿಷ್ಯರು, ಪ್ರಸಿದ್ಧ ವಿಜ್ಞಾನಿಗಳು, ಸಹ ಪ್ರಾಧ್ಯಾಪಕರು ಎಲ್ಲರ ವಿಶ್ವಾಸಗಳಿಸಿದ್ದು ಇವನ ಕೀರ್ತಿ ಅತ್ಯುನ್ನತಮಟ್ಟದಲ್ಲಿದ್ದಾಗ ಮ್ಯೂಲರ್ ಬಿರುಗಾಳಿಯಿಂದ ಬುಡಮೇಲು ಮಾಡಲ್ಪಟ್ಟ ಓಕ್ ವೃಕ್ಷವೊಂದರ ಅಡಿಯಲ್ಲಿ ಸಿಕ್ಕಿ 1858ರಲ್ಲಿ ಏಪ್ರಿಲ್ 28 ರಂದು ದುರಂತ ಮರಣಕ್ಕೆ ಈಡಾದ.

ಉಲ್ಲೇಖಗಳು[ಬದಲಾಯಿಸಿ]

  1. Ripley, George; Dana, Charles A., eds. (1879). "Müller, Johannes" . The American Cyclopædia.
  2.  Herbermann, Charles, ed. (1913). "Johann Müller (1)" . Catholic Encyclopedia. New York: Robert Appleton Company. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, and |HIDE_PARAMETER3= (help)
  3. Boring, Edwin (1942). Sensation and Perception in the History of Experimental Psychology. Appleton-Century-Crofts.

ಹೊರಗಿನ ಕೊಂಡಿಗಳು[ಬದಲಾಯಿಸಿ]