ಉತ್ತರ ಸಮುದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಸಮುದ್ರ ಗ್ರೇಟ್ ಬ್ರಿಟನ್ನಿಗೂ ಯುರೋಪ್ ಖಂಡ ಪ್ರದೇಶಕ್ಕೂ ನಡುವೆ ಇರುವ ಒಂದು ತಟ್ಟೆ (ಷ್ಯಾಲೋ) ಕಡಲು (ನಾರ್ತ್ ಸೀ). ಷೆಟ್ಲೆಂಡ್ ದ್ವೀಪಗಳ ಉತ್ತರ ಅಂಚಿನಿಂದ (ಉ.ಅ. 61º) ಡೋವರ್ ಜಲಸಂಧಿಯವರೆಗೆ (ಉ.ಅ. 51º) ವ್ಯಾಪಿಸಿರುವ ಸಮುದ್ರದ ನೀರು ನಾರ್ವೆ, ಡೆನ್ಮಾರ್ಕ್. ಜರ್ಮನಿ, ಬೆಲ್ಜಿಯಂ, ನೆದರ್ಲೆಂಡ್ಸ್‌ ಮತ್ತು ಉತ್ತರ ಫ್ರಾನ್ಸ್‌ ತೀರಗಳನ್ನು ತೊಳೆಯುತ್ತದೆ. ವಿಸ್ತೀರ್ಣ 2,20,000 ಚ.ಕಿಮೀ. ದಕ್ಷಿಣದಿಂದ ಉತ್ತರದೆಡೆಗೆ ಸ್ವಲ್ಪ ಬಾಗಿದೆ. ಸ್ವಲ್ಪ ತ್ರಿಕೋನಾಕಾರವಾಗಿದ್ದು, 960 ಕಿ.ಮೀ. ಉದ್ದ ಮತ್ತು 640 ಕಿಮೀ. ಅಗಲವಾಗಿದೆ. ದಕ್ಷಿಣದ ಭಾಗ ಬಲು ಅಗಾಧ. ಸಮುದ್ರದ ಇಳಿತದ ಸಮಯದಲ್ಲಿ ಕೆಳಗಣ ಮರಳನ್ನು ನೀರು ಮುಚ್ಚಿಯೂ ಮುಚ್ಚದಂತಿರುತ್ತದೆ. ಈ ಸಮುದ್ರದ ದಕ್ಷಿಣಾರ್ಧದ ಆಳ 40 ಮೀಟರುಗಳಿಗಿಂತ ಕಡಿಮೆ. ಈ ಕಡಲ ನಡುವೆ ಇರುವ ತಿಟ್ಟುತಳದ ಹೆಸರು ಡಾಗರ್ ಬ್ಯಾಂಕ್. ತಿಟ್ಟುತಳದ ಉತ್ತರ ಅಂಚು ಕಡಿದು. ಈಶಾನ್ಯದಲ್ಲಿ ನಾರ್ವೇಬಳಿ ಕಡಲ ಆಳ ಹೆಚ್ಚು. ಇಲ್ಲಿನ ನೀರು ಕಿರಿದಾದ ಕಂದಕದಂತೆ ನಾರ್ವೇತೀರದ ಗುಂಟ ಆಗ್ನೇಯಾಭಿಮುಖವಾಗಿ ಸಾಗುತ್ತದೆ.

ತಳದ ಭೂರಚನೆಯ ಇತಿಹಾಸ[ಬದಲಾಯಿಸಿ]

The North Sea between ೩೪ million years ago and ೨೮ million years ago, as Central Europe became dry land.

ಮೂರನೆಯ ಭೂಯುಗದಲ್ಲಿ ಯುರೋಪ್ ಖಂಡಭಾಗ ಕುಸಿದದ್ದರಿಂದ ಈ ಸಮುದ್ರ ರೂಪುಗೊಂಡಿತು. ತೃತೀಯ ಕಲ್ಪದ (ಪ್ಲಿಯೋಸೀನ್) ಅಂತ್ಯದಲ್ಲಿ ದಕ್ಷಿಣ ಇಂಗ್ಲೆಂಡು ಹಾಲೆಂಡ್ ಜರ್ಮನಿಗಳೊಂದಿಗೆ ಕೂಡಿಕೊಂಡಿತ್ತು. ದಟ್ಟ ಕಾಡಿದ್ದ ಈ ಜವುಗು ಮೈದಾನದಲ್ಲಿ ಥೇಮ್ಸ್‌-ರೈನ್ ನದೀ ವ್ಯವಸ್ಥೆಗಳ ಮುಖಜಭೂಮಿಗಳಿದ್ದುವು. ಬರಬರುತ್ತ ಶೈತ್ಯ ಹೆಚ್ಚಿ, ಚತುರ್ಥ (ಪ್ಲಿಸ್ಟೊಸೀನ್) ಯುಗದಲ್ಲಿ ಇದನ್ನು ಹಿಮಗಡ್ಡೆಯ ಪದರಗಳು ಮುಚ್ಚಿಕೊಂಡಿದ್ದುವು. ಹಾಲೆಂಡ್ ಮತ್ತು ಪೂರ್ವ ಆಂಗ್ಲಿಯವೂ ಹಿಮಾವೃತವಾಗಿ ದ್ದುವು. ಆಗ ಥೇಮ್ಸ್‌-ರೈನ್ ನದಿಗಳ ವ್ಯವಸ್ಥೆಗಳಿಗೆ ಉತ್ತರದ ಹಾದಿ ಮುಚ್ಚಿಹೋಗಿದ್ದಿರಬೇಕು. ಇವು ಈ ಹಿಮರಾಶಿಯ ದಕ್ಷಿಣಕ್ಕೆ (ಈಗಿನ ಉತ್ತರ ಸಮುದ್ರದ ದಕ್ಷಿಣದಲ್ಲಿ ಇದ್ದ ಹಿಮಾನಿ (ಗ್ಲೇಷಿಯಲ್) ಸರೋವರದಲ್ಲಿ ಐಕ್ಯವಾಗಲಾಗಿ ಈ ಸರೋವರದ ನೀರಿನ ಮಟ್ಟ ಹೆಚ್ಚಿ ಇದು ಚತುರ್ಥ ಯುಗದ ನದೀಕಣಿವೆಯೊಂದರ ಮೂಲಕ ಹರಿದು ಹೋಗಿರಬೇಕು. ಇದೇ ಮುಂದೆ ಅಗಲವಾಗಿ ಆಳವಾಗಿ ಡೋವರ್ ಜಲಸಂಧಿಯಾಯಿತು. ಹಿಮಯುಗದ ಅಂತ್ಯದಲ್ಲಿ ಡಾಗರ್ ತಿಟ್ಟುತಳದ ದಕ್ಷಿಣಭಾಗದಲ್ಲಿ ತಗ್ಗು ಮೈದಾನವಿತ್ತು. ಪ್ರ.ಶ.ಪು. 6000ದ ವೇಳೆಗೆ ಸಮುದ್ರದ ಮಟ್ಟ ಏರಿತು. ಉತ್ತರ ಸಮುದ್ರ ಸ್ಥೂಲವಾಗಿ ಈಗಿನ ಆಕಾರ ತಳೆದದ್ದು ಆಗ. ಉತ್ತರ ಸಮುದ್ರದ ಸುತ್ತಲೂ ಭೂಭಾಗ ಕುಸಿದು ಉಂಟಾದ ತೀರಭಾಗಗಳುಂಟು. ದಕ್ಷಿಣದ ತೀರಗಳು ಅತಿ ಕಿರಿದು. ಇಂಗ್ಲೆಂಡಿನ ತೀರದಲ್ಲಿ ಕಿರಿದಾದ ಕೋಡುಗಲ್ಲುಗಳೂ ಮರಳಿನಿಂದ ಕೂಡಿದ ದಂಡೆಗಳೂ ಕಂಡುಬರುತ್ತವೆ. ಯುರೋಪಿನ ತೀರದಲ್ಲಿ ಜೌಗು ಭಾಗಗಳೂ ಮರಳಿನ ದಿಣ್ಣೆಗಳೂ ಉಪ್ಪು ನೀರಿನ ಹರವು ಸುತ್ತು ಒಡ್ಡು ಗಳೂ (ಲಗೂನ್) ಉಂಟು. ಉತ್ತರದ ತೀರಗಳಲ್ಲಿ ಕಡಿದಾದ ಕೋಡುಗಲ್ಲುಗಳೂ ಕಿರಿ ಅಳಿವೆಯಂಥ ಕೊಲ್ಲಿಗಳೂ ಸ್ಕ್ಯಾಗರ್ಯಾಕ್ ಕೊಲ್ಲಿಯ ದಕ್ಷಿಣದಲ್ಲಿ ಮತ್ತು ಇಂಗ್ಲೆಂಡಿನ ವಾಯವ್ಯ ಭಾಗದಲ್ಲಿ ಮೃದುಶಿಲೆಗಳ ಕಿರಿದಾದ ಕೋಡುಗಲ್ಲುಗಳೂ ಕಂಡುಬರುತ್ತವೆ. ಅಟ್ಲಾಂಟಿಕ್ ಸಾಗರದಿಂದ 35% ಕ್ಕಿಂತ ಹೆಚ್ಚಿನ ಲವಣಯುಕ್ತ ನೀರು ಡೋವರ್ ಜಲಸಂಧಿಯ ಮೂಲಕವೂ ಷೆಟ್ಲೆಂಡ್ ನಾರ್ವೆಗಳ ಮೂಲಕವೂ ಇಲ್ಲಿಗೆ ಹರಿದು ಬರುತ್ತದೆ. ಈ ಎರಡು ಕವಲುಗಳೂ ವಾಷ್-ಸ್ಕ್ಯಾಗರ್ಯಾಕ್ಗಳ ನೆರೆಯಲ್ಲಿ ಸಂಧಿಸುವುದೇ ಇಲ್ಲಿ ತೊಡಕಿನ ಸುಳಿಗಳ ಉದ್ಭವಕ್ಕೆ ಕಾರಣ. ಡೋವರಿನ ಮೂಲಕ ಬರುವ ಪ್ರವಾಹದೊಂದಿಗೆ ಥೇಮ್ಸ್‌, ರೈನ್ ಮತ್ತು ಎಲ್ಬ್‌ ನದಿಯ ನೀರೂ ಸೇರುತ್ತದೆ. ಸ್ಕ್ಯಾಗರ್ಯಾಕ್ನಿಂದ ಉತ್ತರಾಭಿಮುಖ ವಾಗಿ ನಾರ್ವೇ ತೀರಗುಂಟ ಹರಿಯುವ ನೀರು 30% ರಷ್ಟು ಲವಣಯುಕ್ತವಾದದ್ದು. ಬಾಲ್ಟಿಕ್ನಿಂದ ಹರಿದು ಬರುವ ನೀರು ಇದರಲ್ಲಿ ಸೇರುವುದರಿಂದ ಇದರ ಲವಣಾಂಶ ಕಡಿಮೆ. ಸಮಕಾಲೀನ ಉಬ್ಬರ ರೇಖೆಗಳು ಈ ಸಮುದ್ರದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿವೆಯೆನ್ನಬಹುದು. ಆದ್ದರಿಂದ ಸ್ಕಾಟ್ಲೆಂಡ್ ಮತ್ತು ಥೇಮ್ಸ್‌ ಅಳಿವೆಯಲ್ಲಿ ಉಬ್ಬರಗಳು ಸಂಭವಿಸುವ ಕಾಲ ಒಂದೇ. ಉಬ್ಬರಗಳಿಂದ ಸ್ಕಾಟ್ಲೆಂಡಿನಲ್ಲಿ 4 ಮೀಟರುಗಳಷ್ಟೂ ಡಚ್ ಮತ್ತು ಜರ್ಮನ್ ತೀರಗಳಲ್ಲಿ 2 ರಿಂದ 3 ಮೀಟರುಗಳಷ್ಟೂ ನಾರ್ವೆ ತೀರದಲ್ಲಿ ಒಂದು ಮೀಟರಿನಷ್ಟೂ ಸಮುದ್ರಮಟ್ಟ ವ್ಯತ್ಯಾಸವಾಗುತ್ತದೆ. ಪೂರ್ವತೀರದಲ್ಲಿ ಉಬ್ಬರವಿಳಿತಗಳ ವ್ಯತ್ಯಾಸ ಹೆಚ್ಚು. ಬ್ರಿಟನ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ದೇಶಗಳ ತೀರ ಭಾಗಗಳಿಗೆ ಇಲ್ಲಿನ ವಿಷಮ ಉಬ್ಬರವಿಳಿತಗಳ ಸಂಭವಿಸುವ ಹಾನಿ ಅಧಿಕ. ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ಗಳ ತೀರಗಳಲ್ಲಿ ಕೃತಕ ದಿಣ್ಣೆಗಳನ್ನು ನಿರ್ಮಿಸಿ ಆಗುವ ಅನಾಹುತವನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಲಾಗಿದೆ. ಈ ಸಮುದ್ರದಲ್ಲಿ ಅನೇಕ ಪ್ರವಾಹಗಳೂ ಉಬ್ಬರವಿಳಿತಗಳೂ ಸುಳಿಗಳೂ ಕಂಡುಬರುವುದರಿಂದಲೂ ಅಟ್ಲಾಂಟಿಕ್ ಸಾಗರದ ಬೆಚ್ಚನೆಯ ನೀರಿಗೆ ಭೂಭಾಗದಿಂದ ಹರಿಯುವ ತಂಪಾದ ನೀರು ಸೇರುವುದರಿಂದಲೂ ವಿಪುಲವಾಗಿ ಪ್ಲಾಂಕ್ಟನ್ ಎಂಬ ಜೈವಿಕ ವಸ್ತು ಶೇಖರವಾಗಿರುತ್ತದೆ. ಅಲ್ಲದೆ ನೀರಿನ ಅಂಥ ಚಲನೆಗಳಿಂದ ಸಾಕಷ್ಟು ವಾಯುವಿನ ಅಂಶ ನೀರಿನಲ್ಲಿ ಸೇರಲೂ ಅವಕಾಶವಿದೆ. ಸಮುದ್ರ ಹೆಚ್ಚು ಆಳವಿಲ್ಲದಿರುವುದ ರಿಂದ ಬೆಳಕು ಸಾಕಷ್ಟು ಉಂಟು. ಇಂಥ ಆವರಣ ಮೀನುಗಳಿಗೆ ಆವಶ್ಯಕ. ಆದ್ದರಿಂದ ಉತ್ತರ ಸಮುದ್ರಕ್ಕೆ ಪ್ರಪಂಚದ ಮೀನುಗಾರಿಕೆ ಪ್ರದೇಶಗಳಲ್ಲಿ ಉನ್ನತ ಸ್ಥಾನ ಲಭ್ಯವಾಗಿದೆ. ಚಳಿಗಾಲದಲ್ಲಿ ಮೀನು ಹಿಡಿಯುವ ಚಟುವಟಿಕೆ ಹೆಚ್ಚು. ಜರಡಿ ಬಲೆಗಳಿಂದ ಈ ಭಾಗದಲ್ಲಿ ಹೇರಳವಾಗಿ ಮೀನು ಹಿಡಿಯುತ್ತಾರೆ. ಬೇಸಿಗೆಯಲ್ಲಿ ಪೂರ್ವಭಾಗದಲ್ಲಿ ಮೀನು ಹಿಡಿಯುವುದು ಹೆಚ್ಚು. ಆಳವಿಲ್ಲದ ಭಾಗಗಳಲ್ಲಿ ಚಪ್ಪಟೆ ಮೀನು ಉತ್ತರದ ಆಳವಾದ ಪ್ರದೇಶದಲ್ಲಿ ಕಾಡ್ ಮತ್ತು ಹ್ಯಾಡಕ್ ಮೀನೂ ಹೇರಳ. ಪಶ್ಚಿಮಭಾಗದಲ್ಲಿ ಜೂನ್ನಿಂದ ನವೆಂಬರ್ವರೆಗೆ ಹೆರಿಂಗ್ ಮೀನುಗಳೂ ಉಳಿದ ತಿಂಗಳುಗಳಲ್ಲಿ ಮೆಕರೆಲ್ ಮೀನುಗಳೂ ಸಿಗುತ್ತವೆ. ಡಾಗರ್ ಬ್ಯಾಂಕಿನ ಭಾಗದಲ್ಲಿ ಕಾಡ್ ಮೀನುಗಳು ಸಿಕ್ಕುತ್ತವೆ. ಡಚ್ ಭಾಷೆಯಲ್ಲಿ ಡಾಗರ್ ಎಂದರೆ ಕಾಡ್ ಮೀನು ಎಂದು ಅರ್ಥ. ಉತ್ತರದ ತಂಪು ನೀರಿನಲ್ಲೂ ಇವು ಸಿಕ್ಕುವುದುಂಟು. ಮಧ್ಯಭಾಗದಲ್ಲಿ ಮೀನುಗಳನ್ನು ಗಾಳಗಳಿಂದಲೇ ಹಿಡಿಯುತ್ತಾರೆ. 1899ಮತ್ತು 1927ರಲ್ಲಿ ಆದ ಅಂತಾರಾಷ್ಟ್ರೀಯ ಮೀನುಗಾರಿಕೆ ಒಪ್ಪಂದಗಳಿಂದ ಈ ಸಮುದ್ರದ ಮೀನುಗಾರಿಕೆಯಲ್ಲಿ ನಿರತವಾದ ವಿವಿಧ ರಾಷ್ಟ್ರಗಳು ನಿಯಂತ್ರಣಕ್ಕೊಳಪಟ್ಟಿವೆ. ಉತ್ತರ ಸಮುದ್ರವನ್ನು ಹಿಂದೆ ಜರ್ಮನ್ ಸಾಗರವೆಂದೂ ಕರೆಯಲಾಗುತ್ತಿತ್ತು. ಈ ಸಮುದ್ರದ ಮೂಲಕ ಸಾಗುವ ಸಾರಿಗೆ ಮಾರ್ಗಗಳು ಅನೇಕ. ಹಲ್, ಬರ್ಗೆನ್, ಸ್ಟಾಕ್ಹೋಂ ಮಾರ್ಗಗಳು ಮುಖ್ಯ. ಉತ್ತರ ಸಮುದ್ರವನ್ನು ಸೇರುವ ನದಿಗಳು ಈ ಮಾರ್ಗಗಳ ವಿಸ್ತರಣೆ ಗಳಂತಿರುವುದರಿಂದ ಉತ್ತರ ಸಮುದ್ರದ ಪ್ರಾಮುಖ್ಯ ಇನ್ನೂ ಅಧಿಕವಾಗಿದೆಯೆನ್ನಬಹುದು. (ಎ.ಕೆ.)

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://www.cnbc.com/amp/2018/08/28/equinor-considers-floating-wind-farm-to-power-north-sea-oilfields.html
  2. https://www.dailyrecord.co.uk/news/scottish-news/planned-north-sea-oil-worker-13153541.amp
  3. http://decomnorthsea.com/