ವಿಷಯಕ್ಕೆ ಹೋಗು

ವೈದ್ಯವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ

[ಬದಲಾಯಿಸಿ]
ಆಕ್ಲೆಪಿಯಸ್ನ ಪ್ರತಿಮೆ;ಗ್ರೀಕ್ ವೈದ್ಯಕೀಯ ದೇವರು

ಪ್ರಾಚೀನ ಕಾಲದಿಂದ,ಅಂದರೆ ಮಾನವನ ಇತಿಹಾಸದೊಂದಿಗೆ,ಹುಟ್ಟಿದ್ದು ವೈದ್ಯಿಕೆ.ಭೂತ,ಪ್ರೇತ,ಪಿಶಾಚಿಗಳ ಚೇಷ್ಟೆಗಳೇ ರೋಗಗಳಿಗೆ ಕಾರಣ ಎಂದು ಆಗ ತಿಳಿದಿದ್ದರು.ಆ ಕಾಲದಲ್ಲಿ ಮಾಂತ್ರಿಕರು,ಪುರೋಹಿತರು ಮತ್ತು ರಾಜರುಗಳು ದೈವಾಂಶಸಂಭೂತರೆಂಬ ಪ್ರತೀತಿ ಇದ್ದು,ಇವರು ರೋಗವನ್ನು ಕೇವಲ ಮಂತ್ರೋಚ್ಚಾರಣೆಯಿಂದಲೋ ಕೆಲವು ತಂತ್ರಗಳಿಂದಲೋ ಗುಣಪಡಿಸುತ್ತಾರೆಂಬ ನಂಬಿಕೆ ಎಲ್ಲರಲ್ಲೂ ಹಬ್ಬಿತ್ತು.ರಾಜ,ರೋಗಿಯ ತಲೆಯ ಮೇಲೆ ಕೈ ಇಟ್ಟರೆ ರೋಗನಿವಾರಣೆಯಾಗುತ್ತದೆಂದು ಪ್ರಜೆಗಳು ತಿಳಿದಿದ್ದರು.ಬರಬರುತ್ತ ಗಿಡಮೂಲಿಕೆಗಳು ಬಳಕೆಗೆ ಬಂದವು.ವೈದ್ಯಿಕೆಯ ಗುಟ್ಟು ಆನುವಂಶಿಕವಾಗಿ ಒಬ್ಬರಿಂದೊಬ್ಬರಿಗೆ ಸಾಗುತ್ತಿತ್ತು. ನಮ್ಮ ದೇಶದಲ್ಲೂ ವೈದ್ಯಿಕೆ ಇದೇ ರೀತಿ ಪ್ರಾರಂಭವಾಗಿದ್ದರೂ ಅದೇ ಒಂದು ವೇದವಾಗಿ ಪರಿಗಣಿಸಲ್ಪಟ್ಟು ಆಯುರ್ವೇದವೆಂದು ಸಾವಿರಾರು ವರ್ಷಗಳ ಹಿಂದಿನಿಂದ ನಮಗೆ ದತ್ತವಾಗಿದೆ.ಹಿಮಾಲಯದ ತಪ್ಪಲಲ್ಲಿ ತಪಸ್ವಿಗಳೆಲ್ಲ ಸೇರಿ ತಾವು ವೈದ್ಯಕೀಯ ವಿಚಾರದಲ್ಲಿ ಅಧ್ಯಯನ ನಡೆಸಬೇಕೆಂದೂ ಅದರ ಜ್ಞಾನ ಇಂದ್ರದೇವರಿಂದ ಪಡೆದು ಬರಬೇಕೆಂದೂ ತೀರ್ಮಾನಮಾಡಿ ಭರದ್ವಾಜ ಮುನಿಗಳನ್ನು ಇಂದ್ರನಲ್ಲಿಗೆ ಕಳುಹಿಸಿದರೆಂದು ಪ್ರತೀತಿ.ಭರದ್ವಾಜರು ಇಂದ್ರನಿಂದ ವೈದ್ಯಜ್ಞಾನ ಪಡೆದು ಹಿಂದಿರುಗಿ ಇತರರಿಗೆ ಬೋಧಿಸಿದರು;ಶಸ್ತ್ರವೈದ್ಯಿಕೆ ಕ್ಷೀರಸಾಗರ ಮಥನದಿಂದ ಉದ್ಭವವಾದ ಸಾಕ್ಷಾತ್ ಧನ್ವಂತರಿಯೇ ಕೊಟ್ಟದ್ದು-ಎಂಬ ನಂಬಿಕೆ.ಇದೇನೇ ಇರಲಿ ಆಯುರ್ವೇದವಂತೂ ಭಾರತದ್ದು.ಈ ವೇದ ಅಥವಾ ಉಪವೇದ ಮಹಾ ಪಂಡಿತರೂ ವಿದ್ವಾಂಸರೂ ಅಧ್ಯಯನ ಮಾಡಿ ಆಚರಣೆಗೆ ತಂದರೆಂಬುದರಲ್ಲಿ ಅನುಮಾನವಿಲ್ಲ.ಅಗ್ನಿವೇಶ,ಚರಕ,ಸುಶ್ರುತ,ವಾಗ್ಭಟ-ಅತ್ಯಂತ ಹೆಸರಾಂತ ಆಯುರ್ವೇದ ಪಂಡಿತರಲ್ಲಿ ಕೆಲವರು.ಆಯುರ್ವೇದ ಕೆಲವು ಆನುವಂಶಿಕ ಅಳಲೇಕಾಯಿ ಪಂಡಿತರ ಸ್ವತ್ತಾಗಿ ಜ್ಞಾನ ಮುಂದೆ ಬೆಳೆಯಲಿಲ್ಲವೆಂಬುದು ಕೆಲವರ ಅಭಿಪ್ರಾಯ.ಇನ್ನಿತರ ಕಾರಣಗಳೂ ಇರಬಹುದು. ಪಾಶ್ಚಾತ್ಯ ದೇಶಗಳಲ್ಲಿ ವೈದ್ಯಿಕೆ ವೈದ್ಯವಿಜ್ಞಾನವಾಗಲು ಹೆಚ್ಚುಕಾಲ ಬೇಕಾಗಲಿಲ್ಲ.ಮಾಂತ್ರಿಕರು ಮತ್ತು ಕ್ಷೌರಿಕರ ಕೈವಾಡವಾಗಿದ್ದ ವೈದ್ಯಿಕೆ ಗ್ರೀಸ್ ಮತ್ತು ರೋಮ್ ದೇಶಗಳಲ್ಲಿ ಹಿಪಾಕ್ರಟೀಸ್ ಮುಂತಾದ ಮಹಾ ಮೇಧಾವಿಗಳ ಸತತ ದುಡಿತ ಮತ್ತು ಅನುಭವದಿಂದ ವಿಜ್ಞಾನವಾಯಿತು.ರೋಗಲಕ್ಷಣ,ಚಿಕಿತ್ಸೆ ಮುಂತಾದುವೆಲ್ಲ ಲಿಖಿತ ಮೂಲಕ ನಮ್ಮ ಕೈಸೇರಿದವು.[]

ವೈದ್ಯವಿಜ್ಞಾನದಿಂದ ಆಗಿದ ಫಲ

[ಬದಲಾಯಿಸಿ]
ಒಂದು ಶ್ರವಣಾತೀತ ವಾದ್ಯ

ವೈದ್ಯಿಕೆ ವೈದ್ಯವಿಜ್ಞಾನವಾಗಲು ಪ್ರಪಂಚದ ಮಹಾಯುದ್ಧಗಳು ಬಹಳ ಮಟ್ಟಿಗೆ ನಮಗೆ ನೆರವಾದುವೆಂದು ಹೇಳಬಹುದು.ನೂರಾರು ವರ್ಷಗಳ ಅನುಭವದಿಂದ ಪಡೆಯಬೇಕಾಗಿದ್ದ ಜ್ಞಾನ ಈ ಯುದ್ಧಗಳು ಪ್ರೇರೇಪಿಸಿದ ಸ್ಥಿತಿಗತಿಗಳಿಂದ ಕೇವಲ ಕೆಲವೇ ವರ್ಷಗಳಲ್ಲಿ ಅನುಭವಸಿದ್ಧವಾಗಿ ರೂಢಿಗೆ ಬಂದವು.ವೀಸೇಲಿಯಸ್,ಲ್ಯೂವನ್ ಹಾಕ್,ಪಾಲ್ ಎರ್ಲಿಷ್,ಲೂಯಿಸ್ ಪಾಶ್ಚರ್,ರಾಬರ್ಟ್ ಕಾಕ್,ಎಡ್ವರ್ಡ್ ಜೆನ್ನರ್,ಮೆಂಡಲ್,ಫ್ರಾಯ್ಡ್,ಬ್ಯಾಂಟಿಂಕ್,ಬೆಸ್ಟ್,ಕಾಲ್ಮೆಟ್,ಗ್ವಾರಿನ್,ಸಾಬಿನ್ ಇನ್ನೂ ನೂರಾರು ಮಂದಿ ಸತತ ಸಂಶೋಧನೆ,ಪ್ರಯೋಗಗಳನ್ನು ನಡೆಸಿದರು.ಇದರಿಂದ ಇಂದು ಇಡೀ ಮಾನವ ಕೋಟಿಯೇ ಪ್ರಯೋಜನ ಹೊಂದಿದೆ. ಅನೇಕ ರೋಗಗಳು ಹತೋಟಿಗೆ ಬಂದಿವೆ.ಕೆಲವು ನಿರ್ಮೂಲವಾಗಿವೆ.ಸಾಯುವವರ ಸಂಖ್ಯೆ ಇಳಿಯುತ್ತಿದೆ.ಜನನ ಸಂಖ್ಯೆ ಅಗಾಧ.ಭಾರತದಲ್ಲಿ ಹುಟ್ಟಿದ ಸಾವಿರ ಶಿಶುಗಳಲ್ಲಿ ಎಂಟುನೂರು ಶಿಶುಗಳೂ ಮೊದಲ ಹುಟ್ಟು ಹಬ್ಬ ಕಾಣುತ್ತಿರಲಿಲ್ಲ.ಈಗಲಾದರೋ ೯೦೦-೯೫೦ ಶಿಶುಗಳು ಹುಟ್ಟಿದ ಹಬ್ಬವನ್ನು ಕಾಣುತ್ತವೆ.ಪ್ರತಿ ಸಾವಿರ ಜನನಗಳಿಗೆ ಹತ್ತು ಹದಿನೈದು ತಾಯಿಯರನ್ನು ಕಳೆದುಕೊಳ್ಳುತ್ತಿದ್ದ ಕಾಲ ಬಹಳ ಹಿಂದಿನದಲ್ಲ.ಈಗ ಕೇವಲ ಎರಡು ಮೂರು ತಾಯಿಯರು ಜನನ ಸಂದರ್ಭಗಳಲ್ಲಿ ಸಾಯುತ್ತಾರೆ.ನಮ್ಮ ಸರಾಸರಿ ಆಯುರ್-ನಿರೀಕ್ಷೆ ಇಪ್ಪತ್ತಾರೇ ವರ್ಷಗಳಿದ್ದದ್ದು ಇಂದು ೫೦-೫೫ ವರ್ಷಗಳು.ಇವೆಲ್ಲವೂ ವೈದ್ಯವಿಜ್ಞಾನದ ಪ್ರಗತಿಯ ಫಲ.

ವೈದ್ಯವಿಜ್ಞಾನದಿಂದ ಉಂಟಾದ ಪರಿವರ್ತನೆಗಳು

[ಬದಲಾಯಿಸಿ]

ಈ ಪ್ರಗತಿಯ ಕೆಲವು ಮುಖ್ಯ ಕ್ಷೇತ್ರಗಳನ್ನು ಅವಲೋಕಿಸಬಹುದು.ರೋಗ ತನಿಖೆ ಮತ್ತು ನಿದಾನ,ಆಧುನಿಕ ಔಷಧಗಳು,ಶಸ್ತ್ರಚಿಕಿತ್ಸೆ,ನಿರ್ನಾಳಗ್ರಂಥಿವಿಜ್ಞಾನ,ಆಹಾರವಿಜ್ಞಾನ,ರೋಗರಕ್ಷೆಗಳು ಮತ್ತು ಜೀವರಸಾಯನವಿಜ್ಞಾನ ಅತಿ ಮುಖ್ಯವಾದುವು. ಯಾವ ರೋಗದಿಂದ ರೋಗಿ ನರಳುತ್ತಿದ್ದಾನೆಂಬುದನ್ನು ನಿರ್ಧರಿಸಿದ ಹೊರತು ಚಿಕಿತ್ಸೆ ಯಶಸ್ವಿಯಾಗಲಾರದು.ರೋಗಿಯ ಮಲಮೂತ್ರಾದಿ ವಿಸರ್ಜನೆಗಳನ್ನು ಪರೀಕ್ಷಿಸುವುದು ಹಾಗೂ ರೋಗ ಲಕ್ಷಣಗಳ ಚಹರೆ ಹಿಡಿದು ಚಿಕಿತ್ಸೆ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ.ರೋಗ ಪ್ರಕೃತಿಯನ್ನು ಕಂಡುಹಿಡಿಯಲು ಇತ್ತೀಚೆಗೆ ಅನೇಕ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ,ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ಹಿಂದೆ ನಮಗೆ ಕಾಣಲಾಗದ ವೈರಸುಗಳೂ ಕಾಣಿಸುವಂತೆ ಮಾಡಿವೆ.ಇದರಿಂದ ಸಿಡುಬು,ದಡಾರ,ಪೋಲಿಯೊಮೈಲೈಟಿಸ್ ಮುಂತಾದ ವೈರಸುಗಳಿಂದ ಪ್ರೇರಿತವಾದ ರೋಗಗಳ ಅಧ್ಯಯನ ಸಾಧ್ಯವಾಗಿದೆ.ಇಷ್ಟೇ ಅಲ್ಲದೆ ಕೋಶಿಕೆ,ಕೋಶಿಕಾಬೀಜ,ವರ್ಣಸೂತ್ರ ಮತ್ತು ಜೀವಿಗಳ ಗುಟ್ಟನ್ನು ತಿಳಿಯಲು ಸಂದರ್ಭ ದೊರಕಿದೆ.ಕೇವಲ ವೈದ್ಯವಿಜ್ಞಾನ ಕ್ಷೇತ್ರದಲ್ಲೇ ಅಲ್ಲದೆ ಇತರ ವಿಜ್ಞಾನ ಕ್ಷೇತ್ರಗಳಲ್ಲೂ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅತ್ಯಂತ ಉಪಯುಕ್ತವಾಗಿದೆ. ವಿದ್ಯುತ್ ಹೃಲ್ಲೇಖ,ಹೃದಯ ರೋಗದಿಂದ ನರಳುವವರ ಭವಿಷ್ಯವನ್ನೇ ಆಶಾದಾಯಕವಾಗಿ ಪರಿವರ್ತಿಸಿದೆ ಎಂದರೆ ಅತಿಶಯೋಕ್ತಿಯಲ್ಲ.ಹೃದಯ ಕ್ರಿಯೆಗೆ ಸಂಬಂಧಪಟ್ಟ ವಿಚಾರವನ್ನು ವೈದ್ಯ ಇದರಿಂದ ತಿಳಿದು ಯಶಸ್ವಿ ಚಿಕಿತ್ಸೆ ಕೊಡಬಲ್ಲ. ವಿದ್ಯುತ್ ಮಸ್ತಿಷ್ಕ ಲೇಖಗಳಿಂದ ಮೆದುಳಿನ ಅಂತರಾಳವನ್ನು ಹೊಕ್ಕು ರೋಗ ನಿಷ್ಕರ್ಷೆ ಸಾಧ್ಯವಾಗಿದೆ. ಕ್ಷ-ಕಿರಣಗಳಿಂದ ಮೊದಲು ಕೇವಲ ಅಸ್ಥಿಭಂಗಗಳನ್ನು ತಿಳಿಯಬಹುದಾಗಿತ್ತು.ಅನೇಕ ರಾಸಾಯನಿಕಗಳ ಮೂಲಕವೂ ಕ್ಷ-ಕಿರಣಗಳು ಹಾಯಲಾರವೆಂದು ತಿಳಿದ ಮೇಲೆ ಈ ಜ್ಞಾನವನ್ನು ಅಳವಡಿಸಿಕೊಂಡು ಅಂಗಗಳ ಪರೀಕ್ಷೆಯೇ ಅಲ್ಲದೆ ರಕ್ತನಾಳಗಳ ನ್ಯೂನತೆಗಳನ್ನೂ ಕ್ಷ-ಕಿರಣಗಳಿಂದ ನೋಡಿ ತಿಳಿಯಬಹುದಾಗಿದೆ. ಗ್ರಾಸನಳಿಕೆ,ಧ್ವನಿಪೆಟ್ಟಿಗೆ,ಜಠರ,ಕರುಳು,ಶ್ವಾಸಕೋಶ,ಕಣ್ಣುಗಳು ಇತ್ಯಾದಿ ಅಂಗಗಳ ಒಳಭಾಗವನ್ನೀಕ್ಷಿಸಲು ಅದಕ್ಕಾಗಿ ತಯಾರಿಸಿದ ಆಧುನಿಕ ಉಪಕರಣಗಳಿವೆ.ಇದರಿಂದ ಆಯಾ ಅಂಗಗಳನ್ನು ಪರೀಕ್ಷಿಸಿ ರೋಗವನ್ನು ನಿರ್ಧರಿಸಿ ತಕ್ಕ ಚಿಕಿತ್ಸೆ ಕೊಡಲು ಸಾಧ್ಯವಾಗಿದೆ.

ಆಧುನಿಕ ಮತ್ತು ಅದ್ಭುತ ಔಷಧಗಳನ್ನು ಕೋಟ್ಯಂತರ ರೋಗಿಗಳನ್ನು ಗುಣಪಡಿಸಿ ಮಾನವಕೋಟಿಗೇ ಉಪಕಾರ ಮಾಡಿವೆ.ಗಂಧಕೀಯಗಳು,ನಿರೋಧಕಗಳು,ಅಡ್ರಿನಲ್ ಗ್ರಂಥಿಯ ಕಾರ್ಟಿಕೋಸ್ಟಿರಾಯಿಡ್ಗಳು ಇವುಗಳಲ್ಲಿ ಕೆಲವು.ರೋಗಾಣುಗಳಿಂದ ಪ್ರೇರಿತವಾದ ಅನೇಕ ರೋಗಗಳಿಗೆ ಇವು ರಾಮಬಾಣ.ನ್ಯುಮೋನಿಯ,ಕ್ಷಯ,ವಾಂತಿ ಭೇದಿ,ಮೇಹ,ವಿಷಮಜ್ವರ ಇತ್ಯಾದಿ ರೋಗಗಳಿಗೆ ಯಶಸ್ವಿ ಚಿಕಿತ್ಸೆಗಳಿವೆ.ಸಿಹಿಮೂತ್ರ,ಸಂಧಿವಾತ,ಮೂರ್ಛೆ,ಹುಚ್ಚು,ಅಧಿಕ ರಕ್ತದ ಒತ್ತಡ ಇತ್ಯಾದಿಗಳನ್ನು ಶಮನಮಾಡಲು ಔಷಧಗಳು ಬೆಳಕಿಗೆ ಬಂದಿವೆ.ಭಯಂಕರ ಕುಷ್ಠರೋಗ ಚಿಕಿತ್ಸೆಯಿಂದ ಗುಣವಾಗುತ್ತದೆ.ಮಲೇರಿಯ ರೋಗ ಡಿ ಡಿ ಟಿ ಸಿಂಪಡಿಸುವುದರಿಂದಲೂ ಅತ್ಯುತ್ತಮ ಔಷಧಗಳಿಂದಲೂ ನಿರ್ಮೂಲವಾಗುವ ಕಾಲ ಸನ್ನಿಹಿತವಾಗಿದೆ.[]

ರೋಗ ಮತ್ತು ಚಿಕಿತ್ಸೆ

[ಬದಲಾಯಿಸಿ]

ಈ ಶತಮಾನದ ಮೊದಲಲ್ಲಿಯೂ ನಿರ್ನಾಳಗ್ರಂಥಿಗಳ ವಿಚಾರ ನಮ್ಮ ಜ್ಞಾನ ಶೈಶವಾವಸ್ಥೆಯಲ್ಲಿತ್ತೆಂದು ಹೇಳಬಹುದು.ಇವುಗಳಿಂದ ಹೊರಬೀಳುವ ಹಾರ್ಮೋನುಗಳ ವಿಚಾರದಲ್ಲಿ ನಮ್ಮ ಜ್ಞಾನ ಬೆಳೆದಿದೆ.ಹಾರ್ಮೋನುಗಳನ್ನು ಬೇರ್ಪಡಿಸಿ ಅವುಗಳ ರಾಸಾಯನಿಕಾಂಶಗಳನ್ನು ಕಂಡುಹಿಡಿದು ಶರೀರದಲ್ಲಿ ಅವುಗಳ ಪಾತ್ರ ನಿರ್ಧರಿಸಲಾಗಿದೆ.ಹುಟ್ಟುವುದು,ಬದುಕುವುದು,ಮುದಿತನ ಮತ್ತು ಸಾವು ಈ ಹಾರ್ಮೋನುಗಳಿಂದಲೇ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಪ್ರಪಂಚದ ಮುಕ್ಕಾಲು ಭಾಗದ ಜನ ಹಸಿವಿನಿಂದ ನರಳುತ್ತಿದ್ದಾರೆ.ಆಹಾರವಿಜ್ಞಾನ ಭರದಿಂದ ಬೆಳೆದುಬಂದಿದೆ.ಸಮತೋಲ ಆಹಾರವೆಂದರೆ ಸರಿಯಾದ ಪ್ರಮಾಣದಲ್ಲಿ ಸಾಕಷ್ಟು ಪ್ರೊಟೀನು,ಮೇದಸ್ಸು,ಪಿಷ್ಟಗಳೇ ಅಲ್ಲದೆ ಜತೆಗೆ ವಿಟಮಿನು ಮತ್ತು ಲವಣಗಳನ್ನುಳ್ಳ ಆಹಾರವೆಂಬುದು ತಿಳಿದಿದೆ.ದಿನವಹಿ ಈ ಆಹಾರವನ್ನು ಸೇವಿಸಬೇಕು.ಸತ್ವಹೀನ ಹಾಗೂ ಕಡಿಮೆ ಆಹಾರ ಸೇವನೆಯಿಂದ ಹಸಿವು,ರೋಗಗಳು ಖಂಡಿತ.ಈ ಜ್ಞಾನವೃದ್ಧಿಯಾದದ್ದು ೧೯೨೦ರಿಂದೀಚೆಗೆ.ಊಟ ಬಲ್ಲವನಿಗೆ ರೋಗವಿಲ್ಲವೆಂಬುದರ ಸತ್ಯಾಂಶ ತಿಳಿದ ವಿಚಾರ. ಅನೇಕ ಭಯಂಕರ ರೋಗಗಳಿಗೆ ರೋಗರಕ್ಷೆಗಳು ಸಿದ್ಧವಾಗಿವೆ.ಸುಮಾರು ೧೮೦ ವರ್ಷಗಳ ಹಿಂದೆಯೇ ಎಡ್ವರ್ಡ್ ಜೆನ್ನರ್ ಮೊದಲಬಾರಿ ಸಿಡುಬಿನ ರೋಗರಕ್ಷೆಯನ್ನು ಕಂಡುಹಿಡಿದನು.ಈ ದಿನ ಜನಿಸಿದ ಶಿಶುವನ್ನು ಸಿಡುಬು ಒಂದರಿಂದಲೇ ಅಲ್ಲದೆ ಕ್ಷಯ,ಗಂಟಲುಮಾರಿ,ನಾಯಿಕೆಮ್ಮು,ಧನುರ್ವಾತ ಮತ್ತು ಪೋಲಿಯೋಮೈಲೈಟಿಸ್ ರೋಗಗಳಿಂದಲೂ ಪಾರುಮಾಡಲು ನಿರೋಧಕಗಳು ಕಂಡುಹಿಡಿಯಲ್ಪಟ್ಟಿವೆ.ಅಷ್ಟೇ ಅಲ್ಲದೆ ನಾಯಿಹುಚ್ಚು,ಹಳದಿಜ್ವರ,ಪ್ಲೇಗ್,ಕಾಲರ,ವಿಷಮಜ್ವರ,ದಡಾರ,ಮಂಗಬಾವು ಇತ್ಯಾದಿ ರೋಗಗಳಿಂದಲೂ ಸಕಾಲದಲ್ಲಿ ಮುಂಜಾಗ್ರತೆ ವಹಿಸಿ ರಕ್ಷಣೆ ಪಡೆಯಬಹುದು.ರೋಗ ನಿರೋಧ ವಿಜ್ಞಾನದಲ್ಲಿ ನಮ್ಮ ಜ್ಞಾನಭಂಡಾರ ಅತಿ ಭರದಿಂದ ಬೆಳೆಯುತ್ತಿದೆ.[]

ವೈದ್ಯವಿಜ್ಞಾನದ ವಿವಿಧ ಕ್ಷೇತ್ರಗಳು

[ಬದಲಾಯಿಸಿ]

ವೈದ್ಯವಿಜ್ಞಾನದ ಮೇಲೆ ಮಹತ್ವಪ್ರಭಾವ ಬೀರಿದ ಮತ್ತೊಂದು ಕ್ಷೇತ್ರವೆಂದರೆ ಜೀವರಸಾಯನವಿಜ್ಞಾನ.ಪ್ರಕೃತಿವಿಜ್ಞಾನ ವಿಭಾಗಗಳಲ್ಲಿ ಈ ವಿಜ್ಞಾನ ಅತಿ ಈಚಿನದು.ಸುಸಂತತಿವಿಜ್ಞಾನ ಮತ್ತು ತಳಿವಿಜ್ಞಾನಗಳಿಗೆ ಜೀವ ರಸಾಯನವಿಜ್ಞಾನವೇ ಆಧಾರ.ನಮ್ಮ ದೇಹದ ಪ್ರತಿಯೊಂದು ಕೋಶಿಕೆಯಲ್ಲಿ ನಡೆಯುವ ವ್ಯಾಪಾರಗಳೆಲ್ಲವೂ ರಾಸಾಯನಿಕ ಪರಿವರ್ತನೆಯ ಪ್ರಭಾವ ಮತ್ತು ಪರಿಣಾಮಗಳಿಂದಾಗಿ.ಜನಿಸುವ ಮುನ್ನ,ಹಾಗೂ ಅನಂತರವೂ ಇವುಗಳ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇದೆ.ಪೀಳಿಗೆಯಿಂದ ಪೀಳಿಗೆಗೆ ಸಾಗುವ ರೋಗಗಳು ಯಾವುವು ಎಂದು ತಿಳಿಯಲು ಸಾಧ್ಯವಾಗಿದೆ.ಚರ್ಮದ,ಕೂದಲಿನ ಮತ್ತು ಕಣ್ಣಿನ ಬಣ್ಣಗಳು ತಾಯಿಯಿಂದ ಅಥವಾ ತಂದೆಯಿಂದ ನಿರ್ಧಾರವಾಗುತ್ತವೆ.ಜನಿಸುವ ಶಿಶು ಗಂಡೋ ಹೆಣ್ಣೋ ಇತ್ಯರ್ಥವಾಗುವುದು ಲಿಂಗನಿರ್ಧಾರಕ ವರ್ಣಸೂತ್ರಗಳಿಂದ.ಜೀವ ರಸಾಯನವಿಜ್ಞಾನದಲ್ಲಿ ಮುನ್ನಡೆ ಈಗಾಗಲೇ ಗಣನೀಯವಾಗಿದ್ದರೂ ಅದರ ಭವಿಷ್ಯ ಇನ್ನೂ ಭವ್ಯವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನರಳುತ್ತಿರುವ ರೋಗಿಯ ಗುಣಲಕ್ಷಣ,ಚಿಹ್ನೆ ಇತ್ಯಾದಿ ವಿಚಾರಗಳನ್ನು ಕಂಪ್ಯೂಟರುಗಳಿಗೆ ಅಳವಡಿಸಿಕೊಟ್ಟರೆ,ರೋಗಿ ಯಾವ ರೋಗದಿಂದ ನರಳುತ್ತಿದ್ದಾನೆ ಹಾಗೂ ಚಿಕಿತ್ಸೆ ಯಾವ ರೀತಿ ಇರಬೇಕೆಂಬುದನ್ನು ತಿಳಯಲು ಅದು ಮಾರ್ಗದರ್ಶಕವಾಗಬಲ್ಲದು.ಅಷ್ಟೇ ಅಲ್ಲದೆ ರೋಗಿಯ ವಿಚಾರದಲ್ಲಿ ಸಂಪೂರ್ಣ ವಿವರ ಗುಂಡಿಯೊತ್ತಿದರೆ ಯಾವಾಗಲಾದರೂ ಪುನಃ ಪಡೆಯಬಹುದು.ಕಂಪ್ಯೂಟರ್ ಒಂದು ಸಾಧನವಷ್ಟೇ ಹೊರೆತು ಅದು ವೈದ್ಯನಲ್ಲ.ಅದರ ಯಶಸ್ವಿ ಉಪಯೋಗ ಮಾನವನಿಂದಲೇ ನಿರ್ಧಾರವಾಗಬೇಕು. ವೈದ್ಯವಿಜ್ಞಾನ ಅದ್ಭುತವಾದ ಪ್ರಗತಿ ಸಾಧಿಸಿದೆ,ನಿಜ.ಆದರೂ ಇನ್ನೂ ಅನೇಕ ಸಮಸ್ಯೆಗಳು,ಸಮಸ್ಯೆಗಳಾಗಿಯೇ ಉಳಿದಿವೆ.ಉದಾಹರಣೆಗೆ-ಕ್ಯಾನ್ಸರ್,ಹೃದಯ ಮತ್ತು ರಕ್ತನಾಳಗಳ ರೋಗ,ಹುಚ್ಚು,ಮೂರ್ಛೆ,ಅನೇಕ ಮಾನಸಿಕ ರೋಗಗಳು ಇನ್ನೂ ಪೀಡಿಸುತ್ತಲೇ ಇವೆ.ಸತತ ಸಂಶೋಧನೆ ಪ್ರಯೋಗಗಳ ಫಲವಾಗಿ ಈ ರೋಗಗಳುನ್ನೂ ನಾವು ಕ್ಷಿಪ್ರದಲ್ಲಿಯೇ ಜಯಿಸಿದರೂ ಜಯಿಸಬಹುದು.

ಉಲ್ಲೇಖನಗಳು

[ಬದಲಾಯಿಸಿ]