ವಿಷಯಕ್ಕೆ ಹೋಗು

ಕ್ಷ-ಕಿರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಕ್ಷ-ಕಿರಣ ಚಿತ್ರ

ಕ್ಷ-ಕಿರಣ ಒಂದು ರೀತಿಯ ವಿದ್ಯುತ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್‌ವರೆಗಿನ ತರಂಗಾಂತರವನ್ನು (wavelength) ಹೊಂದಿರುವ ವಿದ್ಯುತ್ಕಾಂತೀಯ ವಿಕಿರಣಗಳಿಗೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ವಿಕಿರಣಗಳ ತರಂಗಾಂತರ ಗಾಮಾ ವಿಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ವಿಕಿರಣಗಳಿಗಿಂತ ಕಡಿಮೆ. ಕ್ಷ- ಕಿರಣಗಳು 3x1016 Hz ರಿಂದ 3x1018 Hz ರವರೆಗಿನ ವ್ಯಾಪ್ತಿಯ ಕಂಪನಾಂಕವನ್ನು ಹೊಂದಿದ್ದು 100eV ನಿಂದ 100keV ನಷ್ಟು ಅಗಾಧ ಶಕ್ತಿಯನ್ನು ಹೊಂದಿರುತ್ತವೆ. ಕ್ಷ-ಕಿರಣಗಳನ್ನು ಕಂಡುಹಿಡಿದವರು ಜರ್ಮನಿಯ ವಿಲ್‍ಹೆಲ್ಮ್ ರಾಂಟ್‍ಜೆನ್. ಇದನ್ನು ರಾಂಟ್‍ಜೆನ್‍ನ ವಿಕಿರಣಗಳು ಎಂದೂ ಕರೆಯುತ್ತಾರೆ. ಈ ವಿಕಿರಣಗಳಿಗೆ ಕ್ಷ ವಿಕಿರಣಗಳು ಎಂದು ಹೆಸರನ್ನು ನೀಡಿದವನು ವಿಲ್‍ಹೆಲ್ಮ್ ರಾಂಟ್‍ಜೆನ್.[೧] ಏಕೆಂದರೆ ಅವನ ಪ್ರಕಾರ ಈ ವಿಕಿರಣಗಳು ಅಪರಿಚಿತವಾದ ಹೊಸ ಪ್ರಕಾರದ ವಿಕಿರಣಗಳಾಗಿದ್ದವು. ಈ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದ ಮೊದಲ ನೊಬೆಲ್ ಬಹುಮಾನವನ್ನು ೧೯೦೧ರಲ್ಲಿ ವಿಲ್‍ಹೆಲ್ಮ್ ರಾಂಟ್‍ಜೆನ್‍ರಿಗೆ ನೀಡಲಾಯಿತು.

ವಿಲ್‍ಹೆಲ್ಮ್ ರಾಂಟ್‍ಜೆನ್.

ವೇಗೋತ್ಕರ್ಷಗೊಂಡ ಎಲೆಕ್ಟ್ರಾನ್‍ಗಳು ಲೋಹದ ಗುರಿಗೆ ಬಡಿದು ಶಕ್ತಿಯುತವಾದ ವಿಕಿರಣಗಳನ್ನು ಬಿಡುಗಡೆ ಮಾಡುತ್ತವೆ ಇವೇ ಕ್ಷ-ಕಿರಣಗಳಾಗಿರುತ್ತವೆ. ಮೂಲಭೂತವಾಗಿ ಕ್ಷ-ಕಿರಣಗಳು ಮತ್ತು ಗಾಮಾ ವಿಕಿರಣಗಳ ನಡುವಿನ ವ್ಯತ್ಯಾಸವನ್ನು ಅವುಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದರಿಂದ ನಿರ್ಧರಿಸಲಾಗುತ್ತದೆ. ಅಂದರೆ ಕ್ಷ-ಕಿರಣಗಳು ಎಲೆಕ್ಟ್ರಾನ್‍ಗಳಿಂದ ಹೊರಸೂಸಲ್ಪಡುತ್ತವೆ ಮತ್ತು ಗಾಮಾ ವಿಕಿರಣಗಳು ಪರಮಾಣುವಿನ ಬೀಜಕೇಂದ್ರದಿಂದ ಹೊರಸೂಸಲ್ಪಡುತ್ತವೆ.[೨][೩][೪][೫] ಆದರೆ ಈ ಹೇಳಿಕೆಯ ಬದಲಾಗಿ ಈ ಎರಡು ವಿಕಿರಣಗಳ ನಡುವಿನ ತರಂಗಾಂತರದ ವ್ಯತ್ಯಾಸದಿಂದ ಗುರುತಿಸುವುದು ಸೂಕ್ತವಾಗುತ್ತದೆ. ಕ್ಷ-ಕಿರಣಗಳನ್ನು ಕಠಿಣ ಮತ್ತು ಮೆದು ಕ್ಷ-ಕಿರಣಗಳು ಎಂದು ಎರಡು ವಿಧವಾಗಿ ವಿಂಗಡಿಸಬಹುದು.[೬] ಕ್ಷ-ಕಿರಣಗಳು ವಸ್ತುವಿನ ಮೂಲಕ ಹಾದು ಹೋಗುವಾಗ ಅಣುಬಂಧಗಳಲ್ಲಿ ಬದಲಾವಣೆ ತರುವಂತಹ ಅಗಾಧ ಶಕ್ತಿಯನ್ನು ಹೊಂದಿರುತ್ತವೆ. ಕ್ಷ-ಕಿರಣಗಳು ವಸ್ತುವಿನ ಮೂಲಕ ಸಲೀಸಾಗಿ ಚೆದುರದೆ ಮತ್ತು ಹೀರಲ್ಪಡದೆ ಸಾಗುವ ಗುಣವನ್ನು ಹೊಂದಿವೆ. ಈ ವಿಕಿರಣಗಳ ತರಂಗಾಂತರ ಗೋಚರ ಬೆಳಕಿಗಿಂತ ಕಡಿಮೆಯಿರುವುದರಿಂದ ಸೂಕ್ಷ್ಮದರ್ಶಕದ ಮೂಲಕ ಗೋಚರಿಸದ ವಸ್ತುವಿನ ರಚನೆಯನ್ನು ವೀಕ್ಷಿಸಬಹುದಾಗಿದೆ. ಈ ವಿಕಿರಣಗಳನ್ನು ಬಳಸಿ ಹರಳುಗಳಲ್ಲಿ ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ಸಾಧ್ಯವಿದೆ. ಈ ವಿಕಿರಣಗಳು ಉನ್ನತ ಮಟ್ಟದ ಹಾದು ಹೋಗುವ ಗುಣವನ್ನು ಹೊಂದಿರುವುದರಿಂದ ಇವುಗಳನ್ನು ಒಂದು ವಸ್ತುವಿನ ಆಂತರಿಕ ಚಿತ್ರಗಳನ್ನು ಪಡೆಯಲು ವೈದ್ಯಕೀಯ ರಂಗದಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಪರಿಶೋಧಕ ಯಂತ್ರಗಳಲ್ಲಿ (scanner) ವ್ಯಾಪಕವಾಗಿ ಬಳಸುತ್ತಾರೆ.

ಕ್ಷ-ಕಿರಣದ ಉಪಯೋಗಗಳು[ಬದಲಾಯಿಸಿ]

 1. ಕ್ಷ-ಕಿರಣಗಳನ್ನು ಕ್ಷ-ಕಿರಣ ಬಿಂಬನ (x-ray imaging) ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಅಂದರೆ ದೇಹದ ಒಳಭಾಗಗಳಲ್ಲಿನ ಮುರಿತ, ಊತಗಳು, ಅನಪೇಕ್ಷಿತ ರಚನೆಗಳ ಬಗ್ಗೆ ತಿಳಿಯಲು ಬಳಸಲಾಗುತ್ತದೆ.
 2. ಕ್ಷ-ಕಿರಣಗಳನ್ನು ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಾಶಪಡಿಸಲು ಕ್ಷ-ಕಿರಣ ಚಿಕಿತ್ಸೆ (x -ray therapy) ರೂಪದಲ್ಲಿ ಬಳಸಲಾಗುತ್ತದೆ. ಆದರೆ ಈ ರೀತಿ ಮಾಡುವಾಗ ಆರೋಗ್ಯಕರ ಜೀವಕೋಶಗಳು ಸಹ ನಾಶಗೊಳ್ಳುವ ಸಾಧ್ಯತೆ ಇರುತ್ತದೆ.
 3. ಕ್ಷ-ಕಿರಣಗಳನ್ನು ಬಳಸಿ ಪರಿಶೋಧಕ ಯಂತ್ರಗಳು ( scanner) ಕೆಲಸ ಮಾಡುತ್ತವೆ.
 4. ಕ್ಷ-ಕಿರಣಗಳ ಬಳಕೆಯಿಂದ ಹರಳುಗಳಲ್ಲಿನ ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ಸಾಧ್ಯವಿದೆ. ಆದ್ದರಿಂದ ಹರಳುಶಾಸ್ತ್ರ (crystallography) ಕ್ಷೇತ್ರದಲ್ಲಿ ಇದರ ಅಪಾರ ಉಪಯುಕ್ತತೆ ಕಂಡುಬರುತ್ತದೆ.
 5. ಕ್ಷ -ಕಿರಣಗಳನ್ನು ಹಳೆಯ ಕಲಾಕೃತಿಗಳ, ಚಿತ್ರಗಳ ಆಯುಷ್ಯ ತಿಳಿಯಲು ಮತ್ತು ಅವುಗಳಲ್ಲಿರುವ ಬ್ರಷ್ ಸ್ಟ್ರೋಕ್‍ಗಳ (brush stroke) ಬಗ್ಗೆ ತಿಳಿಯಲು ಬಳಸುತ್ತಾರೆ.

ಕ್ಷ-ಕಿರಣದ ದುಷ್ಪರಿಣಾಮಗಳು[ಬದಲಾಯಿಸಿ]

 1. ಪದೇ ಪದೇ ಕ್ಷ-ಕಿರಣಗಳಿಗೆ ದೇಹವನ್ನು ಒಡ್ಡುವುದರಿಂದ ದೇಹದ ಆರೋಗ್ಯವಂತ ಜೀವಕೋಶ ನಾಶವಾಗುವ ಸಾಧ್ಯತೆ ಇರುತ್ತದೆ.[೭]
 2. ಕ್ಷ-ಕಿರಣಗಳು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
 3. ಅತಿಯಾಗಿ ಕ್ಷ-ಕಿರಣಗಳನ್ನು ಬಳಸಿ ಕಾರ್ಯನಿರ್ವಹಿಸಿದರೆ ನಮ್ಮ ಜೀವಕೋಶಗಳ ಡಿಎನ್ಎ (DNA) ಸಂರಚನೆಯೇ ಏರುಪೇರಾಗುವ ಸಾಧ್ಯತೆ ಕಂಡಬರುತ್ತದೆ.
 4. ಭ್ರೂಣಪರೀಕ್ಷೆ ಮಾಡಲು ಎಕ್ಸ್‌-ಕಿರಣ ಚಿತ್ರ ತೆಗೆಯುವುದು ವಾಡಿಕೆ. ಇಲ್ಲೆಲ್ಲ ದೇಹಕೋಶಗಳು ವಿಕಿರಣದ ನೇರ ದಾಳಿಗೋ ಘಾತಕ್ಕೋ ಈಡಾಗುತ್ತವೆ. ಇದು ಅನೇಕ ಬಗೆಯ ರೋಗಗಳಿಗೂ ಅಂಗವಿಕಲ ಶಿಶುಜನನಕ್ಕೂ ಕಾರಣವಾಗಬಹುದು.

ಉಲ್ಲೇಖಗಳು[ಬದಲಾಯಿಸಿ]

 1. "X-Rays". NASA. Archived from the original on ನವೆಂಬರ್ 22, 2012. Retrieved November 7, 2012.
 2. Denny, P. P.; B. Heaton (1999). Physics for Diagnostic Radiology. USA: CRC Press. p. 12. ISBN 0-7503-0591-6.
 3. Feynman, Richard; Robert Leighton; Matthew Sands (1963). The Feynman Lectures on Physics, Vol.1. USA: Addison-Wesley. pp. 2–5. ISBN 0-201-02116-1.
 4. L'Annunziata, Michael; Mohammad Abrade (2003). Handbook of Radioactivity Analysis. Academic Press. p. 58. ISBN 0-12-436603-1.
 5. Grupen, Claus; G. Cowan; S. D. Eidelman; T. Stroh (2005). Astroparticle Physics. Springer. p. 109. ISBN 3-540-25312-2.
 6. "Physics.nist.gov". Physics.nist.gov. Retrieved 2011-11-08.
 7. X-rays: Advantages and Disadvantages