ವಿಷಯಕ್ಕೆ ಹೋಗು

ಜೀವಕೋಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಶ ಚಕ್ರದ ಬೇರೆ ಬೇರೆ ಹಂತಗಳಲ್ಲಿರುವ ಈರುಳ್ಳಿಯ ಜೀವಕೋಶಗಳು
ಯೂಕ್ಯಾರಿಯೋ‍ಟ್‌‌‌ ಜೀವಕೋಶ (ಎಡಗಡೆ) ಮತ್ತು ಪ್ರೋಕ್ಯಾರಿಯೋಟ್‌ ಜೀವಕೋಶ (ಬಲಗಡೆ)
ಪ್ರಾಣಿ ಜೀವಕೋಶ ರಚನೆ

ಜೀವಕೋಶ [ಟಿಪ್ಪಣಿ ೧][ಟಿಪ್ಪಣಿ ೨] ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ ಸೆಲ್ ,ಲ್ಯಾಟಿನ್‌ನ ಸೆಲ್ಲಾ ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ”[] ಎಂದು.
ಜೀವಕೋಶದಲ್ಲಿ ಪೊರೆಯೊಳಗೆ ಸುತ್ತುವರಿದ ಜೀವರಸ (ಸೈಟೊಪ್ಲಾಸಂ) ಇರುತ್ತದೆ ಮತ್ತು ಈ ಜೀವರಸದಲ್ಲಿ ಪ್ರೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳಂತಹ ಜೈವಿಕ ಅಣುಗಳು ಇರುತ್ತವೆ.[] ಜೀವಿಗಳನ್ನು ಏಕಕೋಶಿಗಳು (ಬ್ಯಾಕ್ಟೀರಿಯವನ್ನೂ ಒಳಗೊಂಡು ಏಕಕೋಶ ಜೀವಿಗಳು) ಮತ್ತು ಬಹುಕೋಶಿಗಳು (ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಒಂದಕ್ಕಿಂತ ಹೆಚ್ಚು ಜೀವಕೋಶವಿರುವ ಜೀವಿಗಳು) ಎಂದು ವರ್ಗೀಕರಿಸಬಹುದು. ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು ಜೀವಸಂಕುಲದಿಂದ ಜೀವಸಂಕುಲಕ್ಕೆ ಬೇರೆ ಬೇರೆಯಾಗುತ್ತವೆ. ಮಾನವನಲ್ಲಿ ನೂರು ಲಕ್ಷ ಕೋಟಿಗೂ ಹೆಚ್ಚು ಜೀವಕೋಶಗಳಿವೆ.[] ಬಹಳಷ್ಟು ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಲು ಸಾಧ್ಯ, ಅವುಗಳ ಅಳತೆ ೧ ರಿಂದ ೧೦೦ ಮೈಕ್ರೋಮೀಟರ್ ಅಥವಾ ಮೈಕ್ರಾನ್[][ಟಿಪ್ಪಣಿ ೩] ಇರುತ್ತದೆ.
ಜೀವಕೋಶವನ್ನು ೧೬೬೫ ರಲ್ಲಿ ರಾಬರ್ಟ್ ಹುಕ್ ಕಂಡುಹಿಡಿದ ಮತ್ತು ಈ ಜೈವಿಕ ಘಟಕಗಳು ಕ್ರೈಸ್ತ ಸನ್ಯಾಸಿಗಳ ನಿವಾಸವನ್ನು ಹೋಲುತ್ತಿದ್ದ ಕಾರಣಕ್ಕೆ ಆ ಹೆಸರು ಕೊಟ್ಟ.[][] ಜೀವಕೋಶ ಸಿದ್ಧಾಂತವನ್ನು ಮೊದಲು ೧೮೩೯ರಲ್ಲಿ ಮ್ಯಾಥಿಯಾಸ್‌ ಜಾಕೋಬ್ ಸ್ಕಲೆಡೆನ್ ಮತ್ತು ಥಿಯೊಡರ್ ಸ್ಕವಾನ್ನ್ ಮಂಡಿಸಿದರು. ಈ ಸಿದ್ಧಾಂತದ ಪ್ರಕಾರ ಎಲ್ಲಾ ಜೀವಿಗಳು ಒಂದು ಅಥವಾ ಹೆಚ್ಚು ಜೀವಕೋಶಗಳಿಂದ ರಚಿಸಲ್ಪಟ್ಟಿವೆ, ಎಲ್ಲಾ ಜೀವಿಗಳಲ್ಲಿ ಜೀವಕೋಶಗಳು ರಚನೆ ಮತ್ತು ಕಾರ್ಯನಿರ್ವಹಣೆಯ ಪ್ರಾಥಮಿಕ ಘಟಕಗಳು, ಎಲ್ಲಾ ಜೀವಕೋಶಗಳೂ ಇತರ ಈಗಾಗಲೇ ಇರುವ ಜೀವಕೋಶಗಳಿಂದ ಬಂದಿವೆ ಮತ್ತು ಎಲ್ಲಾ ಜೀವಕೋಶಗಳಲ್ಲಿಯೂ ಅದರ ಕಾರ್ಯಗಳನ್ನು ನಿಯಂತ್ರಿಸಲು ಹಾಗೂ ನಂತರದ ಪೀಳಿಗೆಯ ಜೀವಕೋಶಗಳಿಗೆ ಮಾಹಿತಿ ರವಾನಿಸಲು ಅಗತ್ಯವಾದ ಅನುವಂಶಿಕ ಮಾಹಿತಿ ಅಡಕವಾಗಿದೆ.[] ಜೀವಕೋಶಗಳು ಕನಿಷ್ಠ 350 ಕೋಟಿ ವರುಷಗಳ ಹಿಂದೆ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡವು.[][][೧೦]

ಅಂಗರಚನಾ ಶಾಸ್ತ್ರ

[ಬದಲಾಯಿಸಿ]


ಜೀವಕೋಶಗಳಲ್ಲಿ ಯೂಕ್ಯಾರಿಯೋ‍ಟ್‌‌‌ ಮತ್ತು ಪ್ರೋಕ್ಯಾರಿಯೋಟ್‌ ಎಂದು ಎರಡು ಬಗೆಗಳಿವೆ. ಬೀಜಕಣ (ನ್ಯೂಕ್ಲಿಯಸ್) ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಲ್ಲಿ ಇರುತ್ತದೆ ಮತ್ತು ಪ್ರೊಕ್ಯಾರಿಯಟ್‌ ಜೀವಕೋಶಗಳಲ್ಲಿ ಇರುವುದಿಲ್ಲ. ಪ್ರೊಕ್ಯಾರಿಯಟ್‌ಗಳು ಒಂದೇ ಜೀವಕೋಶಗಳಿರುವ ಜೀವಿಗಳು ಆದರೆ ಯೂಕ್ಯಾರಿಯೋ‍ಟ್‌‌‌ ಜೀವಿಗಳು ಏಕಕೋಶಿಗಳಾಗಿರ ಬಹುದು ಅಥವಾ ಬಹುಕೋಶ ಜೀವಿಗಳೂ ಆಗಿರಬಹುದು.

ಪ್ರೋಕ್ಯಾರಿಯೋಟ್‌ ಜೀವಕೋಶಗಳು

[ಬದಲಾಯಿಸಿ]
ಮಾದರಿ ಪ್ರೋಕ್ಯಾರಿಯೋಟ್‌ ಜೀವಕೋಶದ ರಚನೆ


ಪ್ರೋಕ್ಯಾರಿಯೋಟ್‌ ಜೀವಕೋಶಗಳು ಭೂಮಿಯ ಮೇಲೆ ಕಂಡುಬಂದ ಮೊದಲ ಜೀವದ ಸ್ವರೂಪಗಳು. ಇವು ಜೀವಕೋಶ ಸಂಕೇತ ಮತ್ತು ಸ್ವಪೋಷಣೆಯ ಸಾಮರ್ಥ್ಯವನ್ನೂ ಒಳಗೊಂಡು ಅತ್ಯಾವಶ್ಯಕ ಜೈವಿಕ ಪ್ರಕ್ರಿಯೆಗಳನ್ನು ನಿರ್ವಹಿಸ ಬಲ್ಲವು. ಇವು ಯುಕ್ಯಾರಿಯಟ್ ಜೀವಕೋಶಗಳಿಗಿಂತ ಸರಳ, ಸಣ್ಣವು ಮತ್ತು ಬೀಜಕಣಗಳಂತಹ ಪೊರೆ ಇರುವ ಅಂಗಕಗಳನ್ನು ಹೊಂದಿರುವುದಿಲ್ಲ. ಪ್ರೋಕ್ಯಾರಿಯೋಟ್‌ಗಳು ಎರಡು ಡೊಮೇನ್‌ (ಜೀವವರ್ಗೀಕರಣದ ಮೊದಲ ವರ್ಗ) ಜೀವಿಗಳನ್ನು ಹೊಂದಿದ್ದು ಅವು ಬ್ಯಾಕ್ಟೀರಿಯ ಮತ್ತು ಆರ್ಕಿಯಾ. ಪ್ರೋಕ್ಯಾರಿಯೋಟ್‌ ಜೀವಕೋಶಗಳಲ್ಲಿನ ಡಿ.ಎನ್‌.ಎ ಜೀವರಸದೊಂದಿಗೆ ಸಂಪರ್ಕ ಪಡೆದ ಒಂದೇ ವರ್ಣತಂತುವಿನ ಮೇಲಿರುತ್ತದೆ. ಈ ಜೀವಕೋಶಗಳ ಜೀವರಸದಲ್ಲಿನ ಬೀಜಕಣದ ಪ್ರದೇಶವನ್ನು ನ್ಯೂಕ್ಲಿಯಾಯ್ಡ್ ಎಂದು ಕರೆಯಲಾಗಿದೆ. ಎಲ್ಲಾ ಜೀವಿಗಳಲ್ಲಿ ಪ್ರೊಕ್ಯಾರಿಯಟ್‌ಗಳು ತೀರಾ ಸಣ್ಣವು, ಅವುಗಳ ವ್ಯಾಸ 0.5 ದಿಂದ 2.0 ಮೈಕ್ರಾನ್.[೧೧] ಪ್ರೋಕ್ಯಾರಿಯೋಟ್‌ ಜೀವಕೋಶ ಮೂರು ಭಾಗಗಳನ್ನು ಒಳಗೊಂಡಿದೆ:

  • ಜೀವಕೋಶವನ್ನು ಸಾಮಾನ್ಯವಾಗಿ ಪ್ಲಾಸ್ಮಪೊರೆ (ಕೋಶಪೊರೆ ಅಥವಾ ಸೆಲ್ ಮೆಂಬರೇನ್) ಸುತ್ತುವರೆದಿರುತ್ತದೆ ಮತ್ತು ಅದನ್ನು ಕೋಶಭಿತ್ತಿ ಸುತ್ತುವರೆದಿರುತ್ತದೆ. ಕೆಲವು ಬ್ಯಾಕ್ಟೀರಿಯಗಳಲ್ಲಿ ಮೂರನೆಯ ಪದರ ಕ್ಯಾಪ್ಸೂಲ್ (ಜಿಲಿಟಿನ್ ಕವಚ) ಸಹ ಇರುತ್ತದೆ. ಬಹಳಷ್ಟು ಪ್ರೋಕ್ಯಾರಿಯೋಟ್‌ಗಳಲ್ಲಿ ಕೋಶಪೊರೆ ಮತ್ತು ಕೋಶಭಿತ್ತಿ ಎರಡೂ ಇರುತ್ತವೆಯಾದರೂ ಇದಕ್ಕೆ ಅಪವಾದಗಳಿವೆ. ಉದಾಹರಣೆಗೆ ಮೈಕೋಪ್ಲಾಸ್ಮ (ಬ್ಯಾಕ್ಟೀರಿಯ) ಮತ್ತು ಥರ್ಮೋಪ್ಲಾಸ್ಮಗಳಲ್ಲಿ (ಅರ್ಕಿಯ) ಕೇವಲ ಕೋಶಪೊರೆ ಮಾತ್ರ ಇರುತ್ತದೆ. ಜೀವಕೋಶವನ್ನು ಸುತ್ತುವರೆದ ಹೊದಿಕೆಗಳು ಅದಕ್ಕೆ ಗಡುಸುತನವನ್ನು ಕೊಡುತ್ತವೆ ಮತ್ತು ಒಳ ಆವರಣವನ್ನು ಪರಿಸರದಿಂದ ಬೇರ್ಪಡಿಸಿ ಕಾಪಾಡುವ ಶೋಧಕಗಳಾಗಿ (ಪಿಲ್ಟರ್‌) ಕೆಲಸಮಾಡುತ್ತವೆ. ಬ್ಯಾಕ್ಟೀರಿಯದ ಕೋಶಭಿತ್ತಿಯಲ್ಲಿ ಪೆಪ್ಟಿಡಾಗ್ಲೈಕಾನ್‌ ಇರುತ್ತದೆ ಮತ್ತು ಕೋಶಭಿತ್ತಿ ಹೊರಗಿನ ಶಕ್ತಿಗಳ ವಿರುದ್ಧ ಹೆಚ್ಚುವರಿ ತಡೆಯಾಗಿ ವರ್ತಿಸುತ್ತದೆ. ಜೀವಕೋಶ ಹೈಪೋಟೋನಿಕ್[ಟಿಪ್ಪಣಿ ೪] ಪರಿಸರದಲ್ಲಿದ್ದಾಗ ಅದು ಆಸ್ಮೋಸಿಸ್ ಒತ್ತಡದ ಪರಿಣಾಮವಾಗಿ ಹಿಗ್ಗುವುದನ್ನು ಮತ್ತು ಸಿಡಿಯುವುದನ್ನು ಕೋಶಭಿತ್ತಿ ತಡೆಹಿಡಿಯುತ್ತದೆ. ಕೆಲವು ಯೂಕ್ಯಾರಿಯೋ‍ಟ್‌‌‌ಗಳಲ್ಲಿಯೂ (ಸಸ್ಯ ಮತ್ತು ಶಿಲೀಂಧ್ರ ಜೀವಕೋಶಗಳಲ್ಲಿ) ಕೋಶಭಿತ್ತಿ ಇರುತ್ತದೆ.
  • ಜೀವಕೋಶದ ಒಳಗೆ ಜೀವರಸದ ಪ್ರದೇಶದಲ್ಲಿ ಜೀನೋಮ್ (ಡಿ.ಎನ್‌.ಎ), ರೈಬೋಸೋಮ್‌ಗಳು ಮತ್ತು ಇತರ ಕೆಲವು ಅಂಗಕಗಳು ಇರುತ್ತವೆ. ಜೀವರಸದಲ್ಲಿ ಅನುವಂಶಿಕ ಪದಾರ್ಥ ಯಾವುದೇ ಬಂಧನವಿಲ್ಲದೆ ಮುಕ್ತವಾಗಿರುತ್ತದೆ. ಪ್ರೋಕ್ಯಾರಿಯೋಟ್‌ ಜೀವಕೋಶಗಳಲ್ಲಿ ವರ್ಣತಂತು ಡಿ.ಎನ್‌.ಎ ಅಲ್ಲದೆ ಬೇರೆ ಡಿ.ಎನ್‌.ಎ ಪ್ಲಾಸ್ಮಿಡ್‌ಗಳಲ್ಲಿ ಕಂಡುಬರುತ್ತದೆ, ಪ್ಲಾಸ್ಮಿಡ್‌ಗಳು ಸಾಮಾನ್ಯವಾಗಿ ಚಕ್ರಾಕಾರದಲ್ಲಿರುತ್ತವೆ. ಕೆಲವು ಬ್ಯಾಕ್ಟೀರಿಯಗಳಲ್ಲಿ ರೇಖೆರೀತಿಯ ಪ್ಲಾಸ್ಮಿಡ್‌ಗಳು ಇರುತ್ತವೆ. ಬೀಜಕಣ ರೂಪಗೊಳ್ಳದಿದ್ದರೂ ಡಿ.ಎನ್‌.ಎ ನ್ಯೂಕ್ಲಿಯಾಯ್ಡ್‌ನಲ್ಲಿ ಸಾಂದ್ರಗೊಂಡಿದೆ. ಪ್ಲಾಸ್ಮಿಡ್‌ನಲ್ಲಿ ಪ್ರತಿಜೀವಕ (ಯಾಂಟಿಬಯಾಟಿಕ್‌) ನಿರೋಧಶಕ್ತಿ ಬಗೆಗಿನ ವಂಶವಾಹಿಗಳಂತಹ ಹೆಚ್ಚುವರಿ ವಂಶವಾಹಿಗಳು ಇರುತ್ತವೆ.
  • ಹೊರಗೆ ಜೀವಕೋಶದ ಹೊರಮೈ ಮೇಲೆ ಕಶಾಂಗ ಮತ್ತು ಪೈಲಸ್‌ನಂತಹ ಹೊರಚಿಮ್ಮುಗಳಿರುತ್ತವೆ. ಇವು ಎಲ್ಲಾ ಪ್ರೋಕ್ಯಾರಿಯೋಟ್‌ಗಳಲ್ಲಿ ಇರುವುದಿಲ್ಲ. ಈ ರಚನೆಗಳು ಪ್ರೋಟೀನ್‌ನಿಂದ ಆಗಿವೆ ಮತ್ತು ಜೀವಕೋಶಗಳ ಚಲನೆ ಮತ್ತು ಅವುಗಳ ನಡುವೆ ಸಂವಹನೆಗೆ ಅನುಕೂಲ ಮಾಡಿಕೊಢುತ್ತವೆ.

ಯೂಕ್ಯಾರಿಯೋ‍ಟ್‌‌‌ ಜೀವಕೋಶ

[ಬದಲಾಯಿಸಿ]
ಮಾದರಿ ಪ್ರಾಣಿ ಜೀವಕೋಶದ ರಚನೆ
ಮಾದರಿ ಸಸ್ಯ ಜೀವಕೋಶದ ರಚನೆ


ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರಗಳು, ಲೋಳೆ ಜೀವಿಗಳು, ಪ್ರೋಟೋಜೋವಗಳು ಮತ್ತು ಪಾಚಿಗಳೆಲ್ಲವೂ ಯೂಕ್ಯಾರಿಯೋ‍ಟ್‌‌‌ಗಳು. ಈ ಜೀವಕೋಶಗಳು ಮಾದರಿ ಪ್ರೋಕ್ಯಾರಿಯೋಟ್‌ ಜೀವಕೋಶಗಳಿಗಿಂತ ಹದಿನೈದು ಪಟ್ಟು ಅಗಲವಾಗಿರುತ್ತವೆ ಮತ್ತು ಘನ ಅಳತೆ ಸಾವಿರ ಪಟ್ಟು ಹೆಚ್ಚು ಇರುತ್ತದೆ. ಪ್ರೋಕ್ಯಾರಿಯೋಟ್‌ಗಳು ಮತ್ತು ಯೂಕ್ಯಾರಿಯೋ‍ಟ್‌‌‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವಿಭಾಗೀಕರಣ: ನಿರ್ದಿಷ್ಟ ಚಯಾಪಚಯ (ಮೆಟಬಲಿಸಂ) ಚಟುವಟಿಕೆಗಳು ನಡೆಯುವ ಅಂಗಕಗಳು ಪೊರೆ ಹೊಂದಿರುವುದು. ಬೀಜಕಣ (ನ್ಯೂಕ್ಲಿಯಸ್‌) ಇವುಗಳಲ್ಲಿ ಪ್ರಮುಖವಾದುದು ಮತ್ತು ಅದು ಡಿ.ಎನ್‌.ಎಯನ್ನು ಒಳಗೊಂಡಿರುತ್ತದೆ. ಇತರ ವ್ಯತ್ಯಾಸಗಳು ಹೀಗಿವೆ:

  • ಪ್ಲಾಸ್ಮ ಪೊರೆಯು ಕೆಲಸಮಾಡುವುದರಲ್ಲಿ, ಸಣ್ಣಪುಟ್ಟ ವ್ಯತ್ಯಾಸಗಳೊಂದಿಗೆ, ಪ್ರೋಕ್ಯಾರಿಯೋಟ್‌ಗಳನ್ನೇ ಹೊಲುತ್ತದೆ. ಕೋಶಭಿತ್ತಿ ಇರಬಹುದು ಅಥವಾ ಇಲ್ಲದಿರ ಬಹುದು.
  • ಯೂಕ್ಯಾರಿಯೋ‍ಟ್‌‌‌ ಡಿ.ಎನ್‌.ಎ- ಹಿಸ್ಟೋನ್‌ ಪ್ರೋಟೀನ್ ಇರುವ ವರ್ಣತಂತುಗಳೆಂದು ಕರೆಯಲಾದ ಒಂದು ಅಥವಾ ಹೆಚ್ಚು ರೇಖಾರೀತಿಯ ಅಣುಗಳಲ್ಲಿ ಇರುತ್ತದೆ. ಎಲ್ಲಾ ವರ್ಣತಂತು ಡಿ.ಎನ್‌.ಎ ಜೀವಕೋಶದ ಬೀಜಕಣದಲ್ಲಿ ಸಂಗ್ರಹವಾಗಿರುತ್ತದೆ ಮತ್ತು ಜೀವರಸದಿಂದ ಪೊರೆಯ ಮೂಲಕ ಪ್ರತ್ಯೇಕವಾಗಿರುತ್ತದೆ. ಮೈಟೊಕಾಂಡ್ರಿಯನಂತಹ ಕೆಲವು ಯೂಕ್ಯಾರಿಯೋ‍ಟ್‌‌‌ ಅಂಗಕಗಳಲ್ಲಿ ಸಹ ಡಿ.ಎನ್‌.ಎ ಇರುತ್ತದೆ.
  • ಹಲವು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಿಗೆ ಪ್ರಾಥಮಿಕ ಸೀಲಿಯಂಗಳು ಇರುತ್ತವೆ. ಪ್ರಾಥಮಿಕ ಸೀಲಿಯಂಗಳು ರಸಾಯನಿಕ ಸಂವೇದನೆ, ಯಂತ್ರಸಂವೇದನೆ ಮತ್ತು ತಾಪಸಂವೇದನೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸೀಲಿಯಂಗಳನ್ನು “ದೊಡ್ಡ ಮಟ್ಟದಲ್ಲಿ ಜೀವಕೋಶ ಸಂಕೇತಗಳ ಹಾದಿಯನ್ನು ಹೊಂದಿಸುವ, ಜೀವಕೋಶದ ಸಂವೇದನೆಯ ಸ್ಪರ್ಷಕ ಅಥವಾ ಯಾಂಟೆನ ಎಂದು ನೋಡಬಹುದು. ಕೆಲವೊಮ್ಮೆ ಇವು ಸೀಲಿಯಂ ಮೂಲಕ ಚಲನೆ ಅಥವಾ ಕೋಶ ವಿಭಜನೆ ಮತ್ತು ಪ್ರತ್ಯೇಕವಾಗಿಸುವ ಕ್ರಿಯೆಗಳ ನಡುವಿನ ಸಂಕೇತಗಳನ್ನು ಒಟ್ಟುಗೂಡಿಸ ಬಹುದು.”[೧೨]
  • ಯೂಕ್ಯಾರಿಯೋ‍ಟ್‌‌‌ನ ಚಲನಶೀಲ ಜೀವಕೋಶಗಳು ಚಲನಶೀಲ ಸೀಲಿಯಂ ಅಥವಾ ಕಶಾಂಗಗಳನ್ನು ಬಳಸಿ ಚಲಿಸ ಬಹುದು. ಶಂಕು ಮರಗಳಲ್ಲಿ ಮತ್ತು ಹೂಬಿಡುವ ಸಸ್ಯಗಳಲ್ಲಿ ಚಲನಶೀಲ ಜೀವಕೋಶಗಳು ಇರುವುದಿಲ್ಲ[೧೩]. ಯೂಕ್ಯಾರಿಯೋ‍ಟ್‌‌‌ ಕಶಾಂಗವು ಪ್ರೋಕ್ಯಾರಿಯೋಟ್‌ ಕಶಾಂಗಕ್ಕಿಂತ ಕಡಿಮೆ ಸಂಕೀರ್ಣವಾಗಿದೆ.

ಜೀವಕೋಶದ ಒಳ ಘಟಕಗಳು

[ಬದಲಾಯಿಸಿ]


ಪ್ರೋಕ್ಯಾರಿಯೋಟ್‌ಗಳಿರಲಿ ಅಥವಾ ಯೂಕ್ಯಾರಿಯೋ‍ಟ್‌‌‌ಗಳಿರಲಿ ಎಲ್ಲಾ ಜೀವಕೋಶಗಳಲ್ಲೂ ಅದನ್ನು ಸುತ್ತುವರೆದ ಪೊರೆ ಇರುತ್ತದೆ ಮತ್ತು ಅದು ಏನು ಒಳ ಬರುತ್ತದೆ ಮತ್ತು ಏನು ಹೊರ ಹೊಗುತ್ತದೆ ಎಂಬುದನ್ನು ನಿಯಂತ್ರಿಸುತ್ತದೆ ಮತ್ತು ಜೀವಕೋಶದ ವಿದ್ಯುತ್ ವಿಭವವನ್ನು (ಎಲೆಕ್ಟ್ರಿಕ್ ಪೊಟೆನ್ಶಿಯಲ್) ಕಾಪಾಡುತ್ತದೆ. ಪೊರೆಯೊಳಗೆ ಜೀವರಸ ಹೆಚ್ಚು ಸ್ಥಳವನ್ನು ಆಕ್ರಮಿಸುತ್ತದೆ. ಎಲ್ಲಾ ಜೀವಕೋಶಗಳಲ್ಲಿಯೂ (ಕೆಂಪು ರಕ್ತ ಜೀವಕೋಶಗಳು ಇದಕ್ಕೆ ಅಪವಾದ. ಅದರಲ್ಲಿ ಹಿಮೊಗ್ಲೋಬಿನ್‌ಗೆ ಹೆಚ್ಚು ಸ್ಥಳಾವಕಾಶ ಮಾಡಿಕೊಡಲು, ಬೀಜಕಣ ಮತ್ತು ಬಹುತೇಕ ಅಂಗಕಗಳು ಇರುವುದಿಲ್ಲ.) ವಂಶವಾಹಿಗಳ ಅನುವಂಶಿಕತೆಯ ಪದಾರ್ಥವಾದ ಡಿಎನ್‌ಎ ಮತ್ತು ಆರ್‌ಎನ್ಎ ಇರುತ್ತವೆ. ಆರ್‌ಎನ್ಎನಲ್ಲಿ ಜೀವಕೋಶದ ಪ್ರಾಥಮಿಕ ಯಂತ್ರಾಂಗವಾದ ಕಿಣ್ವಗಳಂತಹ (ಎಂಜೈಮ್‌) ಪ್ರೋಟೀನ್‌ಗಳನ್ನು ರಚಿಸಲು ಅಗತ್ಯವಾದ ಮಾಹಿತಿ ಇರುತ್ತದೆ. ಈ ಲೇಖನದಲ್ಲಿ ಜೀವಕೋಶದ ಪ್ರಾಥಮಿಕ ಘಟಕಗಳನ್ನು ಹೆಸರಿಸುತ್ತದೆ ಮತ್ತು ಅವು ಮಾಡುವ ಕೆಲಸಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

ಕೋಶಪೊರೆ

[ಬದಲಾಯಿಸಿ]
ಯುಕ್ಯಾರಿಯಟ್ ಪ್ರಾಣಿ ಜೀವಕೋಶದ ಪ್ರಮುಖ ರಚನೆಗಳನ್ನು ತೋರಿಸುವ ಚಿತ್ರ
ಪ್ರಾಣಿಯ ಜೀವಕೋಶ: ಅಂಗಕಗಳು- ೧) ಕೇಂದ್ರ ಬೀಜಕಣ ೨)ಬೀಜಕಣ ೩) ರೈಬೋಸೋಮ್ ೪) ಕೋಶಕ ೫) ಒರಟು ಎಂಡೊಪ್ಲಾಸ್ಮ ಜಾಲತಂತಿ ೬) ಗಾಲ್ಜಿ ಪರಿಕರ ೭) ಸೈಟೋಸ್ಕೆಲೆಟನ್ ೮) ನಯವಾದ ಎಂಡೊಪ್ಲಾಸ್ಮ ಜಾಲತಂತಿ ೯) ಮೈಟೋಕಾಂಡ್ರಿಯ ೧೦) ಕುಹರ ೧೧) ಜೀವರಸ ೧೨) ಸೈಟೋಸೋಮ್ ೧೩) ಸೆಂಟ್ರಿಯೋಲ್‌ಗಳು


ಕೋಶಪೊರೆ ಅಥವಾ ಪ್ಲಾಸ್ಮ ಪೊರೆ (ಸೆಲ್‌ ಮೆಂಬರೇನ್) ಕೋಶದ ಜೀವರಸವನ್ನು ಸುತ್ತುವರೆದ ಒಂದು ಜೈವಿಕ ಪೊರೆ. ಪ್ರಾಣಿಗಳಲ್ಲಿ ಪ್ಲಾಸ್ಮ ಪೊರೆ ಜೀವಕೋಶದ ಹೊರ ಗಡಿರೇಖೆ ಆದರೆ ಸಸ್ಯಗಳಲ್ಲಿ ಮತ್ತು ಪ್ರೋಕ್ಯಾರಿಯೋಟ್‌ಗಳಲ್ಲಿ ಸಾಮಾನ್ಯವಾಗಿ ಇದರ ಸುತ್ತು ಕೋಶಭಿತ್ತಿ (ಸೆಲ್‌ ವಾಲ್) ಸಹ ಇರುತ್ತದೆ. ಈ ಪೊರೆಯು ಜೀವಕೋಶವನ್ನು ಪರಿಸರದಿಂದ ಬೇರ್ಪಡಿಸುತ್ತದೆ ಮತ್ತು ಕಾಪಾಡುತ್ತದೆ. ಇದು ಬಹುತೇಕ ಎರಡು ಪದರಗಳ ಫಾಸ್ಪೊಲಿಪಿಡ್‌ಗಳಿಂದ ರೂಪಗೊಂಡಿದೆ. ಈ ಪೊರೆಯೊಳಗೆ ಹಲವು ಬಗೆಯ ವಿಭಿನ್ನ ಅಣುಗಳನ್ನು ಜೀವಕೋಶದ ಒಳಗೆ ಮತ್ತು ಹೊರಗೆ ರವಾನಿಸುವ ಕಾಲುವೆಗಳು ಮತ್ತು ಪಂಪ್‌ಗಳಾಗಿ ಕೆಲಸ ಮಾಡುವ ಪ್ರೋಟೀನ್ ಅಣುಗಳು ಸೇರಿಕೊಂಡಿವೆ. ಈ ಪೊರೆಯನ್ನು “ಸೆಮಿ-ಪರ್ಮಿಯಬಲ್‌” ಎಂದು ಕರೆಯಲಾಗಿದೆ ಏಕೆಂದರೆ ಇವು ಕೆಲವೊಂದು ಪದಾರ್ಥಗಳನ್ನು (ಅಣುಗಳು ಮತ್ತು ಐಯಾನ್‌ಗಳು) ಮುಕ್ತವಾಗಿ ಒಳ ಬರಲು ಅವಕಾಶ ಮಾಡಿಕೊಡುತ್ತವೆ, ಇನ್ನೂ ಕೆಲವು ಪದಾರ್ಥಗಳನ್ನು ಸೀಮೀತವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತವೆ ಮತ್ತು ಮತ್ತೆ ಕೆಲವು ಪದಾರ್ಥಗಳನ್ನು ಒಳಬರದಂತೆ ನಿರ್ಬಂಧಿಸುತ್ತವೆ. ಜೀವಕೋಶದ ಹೊರಮೈ ಪೊರೆಯಲ್ಲಿ ರಿಸೆಪ್ಟರ್ ಪ್ರೋಟೀನ್‌ಗಳು ಇರುತ್ತವೆ ಮತ್ತು ಇವು ಹಾರ್ಮೋನ್‌ನಂತಹ ಹೊರಗಿನಿಂದ ಸಂಕೇತಿಸುವ ಅಣುಗಳನ್ನು ಗುರುತಿಸುತ್ತವೆ.

ಸೈಟೊಸ್ಕೆಲೆಟನ್

[ಬದಲಾಯಿಸಿ]


ಸೈಟೊಸ್ಕೆಲೆಟನ್ ಜೀವಕೋಶದ ಆಕಾರ ಸಂಘಟಿಸಲು ಮತ್ತು ಉಳಿಸಿಕೊಳ್ಳಲು ಕ್ರಿಯಾಶೀಲವಾಗಿರುತ್ತದೆ, ಅಂಗಕಗಳು ತಮ್ಮ ಸ್ಥಾನದಲ್ಲಿರಿಸಲು ಕಾರಣವಾಗಿದೆ; ಹೊರಗಿನ ಪದಾರ್ಥಗಳನ್ನು ಜೀವಕೋಶದ ಒಳಗೆ ತೆಗೆದುಕೊಳ್ಳವ ಪ್ರಕ್ರಿಯೆಯಾದ ಎಂಡೊಸೈಟೋಸಿಸ್‌ನಲ್ಲಿ ಸಹಾಯ ಮಾಡುತ್ತದೆ; ಸೈಟೊಕಿನೆಸಿಸ್ನಲ್ಲಿ [ಟಿಪ್ಪಣಿ ೫] ಸಹಾಯ ಮಾಡುತ್ತದೆ ಮತ್ತು ಬೆಳವಣಿಗೆ ಹಾಗೂ ಚಲನೆಯ ಪ್ರಕ್ರಿಯೆಯಲ್ಲಿ ಜೀವಕೋಶದ ಭಾಗಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕೊಂಡೊಯ್ಯುತ್ತದೆ. ಯೂಕ್ಯಾರಿಯೋ‍ಟ್‌ ಸೈಟೊಸ್ಕೆಲೆಟಿನ್‌ನಲ್ಲಿ ಮೈಕ್ರೊತಂತುಗಳು, ಮಧ್ಯಂತರ ತಂತುಗಳು ಮತ್ತು ಚಿಕ್ಕನಳಿಕೆಗಳು ಇರುತ್ತವೆ. ಇವುಗಳೊಂದಿಗೆ ದೊಡ್ಡ ಸಂಖ್ಯೆಯ ಪ್ರೋಟೀನ್‌ಗಳು ಸಂಗಾತಿಗಳಾಗಿವೆ ಮತ್ತು ಪ್ರತಿಯೊಂದು ಪ್ರೋಟೀನ್‌ ಆದೇಶಿಸುವ ಮೂಲಕ, ಒಟ್ಟಿಗೆ ಪೇರುವ ಮೂಲಕ ಮತ್ತು ತಂತುಗಳನ್ನು ಸರಿಹೊಂದಿಸುವ ಮೂಲಕ ಜೀವಕೋಶದ ರಚನೆಯನ್ನು ನಿಯಂತ್ರಿಸುತ್ತದೆ. ಪ್ರೋಕ್ಯಾರಿಯೋಟ್‌ ಸೈಟೊಸ್ಕೆಲೆಟನ್ ಬಗೆಗೆ ಕಡಿಮೆ ಅಧ್ಯಯನಗಳು ಆಗಿವೆ. ಆದರೆ ಜೀವಕೋಶದ ಆಕಾರ ಕಾಪಾಡಿಕೊಂಡು ಬರುವಲ್ಲಿ, ದ್ರುವೀಯತೆ ಮತ್ತು ಸೈಟೊಕೈನೆಸಿಸ್‌ನಲ್ಲಿ ಅದರ ಪಾತ್ರವಿದೆ.[೧೪] ಯಾಕ್ಟಿನ್‌ ಎನ್ನುವ ಸಣ್ಣ, ಮೊನೊಮರ್ [ಟಿಪ್ಪಣಿ ೬] ಪ್ರೋಟೀನ್ ಮೈಕ್ರೊತಂತುಗಳ ಉಪಘಟಕ. ಚಿಕ್ಕನಳಿಕೆಯ ಉಪಘಟಕ ಟ್ಯುಬುಲಿನ್ ಎನ್ನುವ ಡೈಮರ್ (ಎರಡು ಮೊನೊಮರ್‌ ಅಣುಗಳ ಸೇರಿ ಆದ ಅಣು) ಅಣು. ಮಧ್ಯಂತರ ತಂತುಗಳ ಉಪಘಟಕಗಳು ಹೆಟರೊಪಾಲಿಮರ್‌ಗಳು (ಉಪಘಟಕಗಳು ಒಂದೇ ರೀತಿಯಿಲ್ಲದ ಸಂಯುಕ್ತಗಳು). ಇವುಗಳ ಉಪಘಟಕಗಳು ಬೇರೆ ಬೇರೆ ಅಂಗಾಶಗಳ ಜೀವಕೋಶಗಳ ನಮೂನೆಯಲ್ಲಿ ಬೇರೆ ಬೇರೆ ಇರುತ್ತವೆ.

ವಂಶವಾಹಿ ಪದಾರ್ಥ

[ಬದಲಾಯಿಸಿ]


ಎರಡು ರೀತಿಯ ಅನುವಂಶಿಕ ಪದಾರ್ಥ ಆಸ್ತಿತ್ವದಲ್ಲಿದೆ: ಡಿಆಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ (ಡಿಎನ್‌ಎ) ಮತ್ತು ರೈಬೊನ್ಯೂಕ್ಲಿಯಿಕ್ ಆಮ್ಲ್ (ಆರ್‌ಎನ್ಎ). ಜೀವಕೋಶವು ದೀರ್ಘಾವಧಿ ಮಾಹಿತಿ ದಾಸ್ತಾನಿಗೆ ಡಿಎನ್‌ಎ ಬಳಸುತ್ತದೆ. ಜೀವಿಯಲ್ಲಿರುವ ಜೈವಿಕ ಮಾಹಿತಿಯನ್ನು ಡಿಎನ್‌ಎ ಸರಣಿ ರೂಪದಲ್ಲಿ ,ಸಂಕೇತಿಸಲಾಗಿದೆ. ಆರ್‌ಎನ್ಎಯನ್ನು ಮಾಹಿತಿ ರವಾನೆ (ಉದಾ. ಎಂಆರ್‌ಎನ್ಎ) ಮತ್ತು ಕಿಣ್ವಗಳ ಕೆಲಸಮಾಡುವಿಕೆಯಲ್ಲಿ (ಉದಾ. ರೈಬೊಸೋಂ ಆರ್‌ಎನ್ಎ) ಬಳಸಲಾಗುತ್ತದೆ. ವರ್ಗಾವಣೆ ಆರ್‌ಎನ್ಎ (ಟಿಆರ್‌ಎನ್ಎ ಅಥವಾ ಟ್ರಾನ್ಸ್‌ಫರ್ ಆರ್‌ಎನ್ಎ) ಅಣುಗಳನ್ನು ಪ್ರೋಟೀನ್ ಅನುವಾದದಲ್ಲಿ ಅಮಿನೊ ಆಮ್ಲಗಳನ್ನು ಸೇರಿಸಲು ಬಳಸಲಾಗುತ್ತದೆ.
ಪ್ರೋಕ್ಯಾರಿಯೋಟ್‌ ಅನುವಂಶಿಕ ಪದಾರ್ಥವು ಜೀವರಸದ ನ್ಯೂಕ್ಲಿಯಾಯ್ಡ್ ಪ್ರದೇಶದಲ್ಲಿ ಸರಳ ಚಕ್ರಾಕಾರದ ಡಿಎನ್‌ಎ ಅಣುವಾಗಿ ವ್ಯವಸ್ಥೆಗೊಂಡಿದೆ. ಯೂಕ್ಯಾರಿಯೋ‍ಟ್‌‌‌ ಅನುವಂಶಿಕ ಪದಾರ್ಥವು ಪ್ರತ್ಯೇಕ ಬೀಜಕಣದಲ್ಲಿ ಒಂದು ಅಥವಾ ಹೆಚ್ಚು ವರ್ಣತಂತು ಎಂದು ಕರೆಯಲಾದ ರೇಖೆರೀತಿಯ ಅಣುಗಳಾಗಿ ವಿಭಜಿತ ಗೊಂಡಿದೆ. ಅಲ್ಲದೆ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಹೆಚ್ಚುವರಿ ಅನುವಂಶಿಕ ಪದಾರ್ಥ ಮೈಟೊಕಾಂಡ್ರಿಯಗಳಲ್ಲಿ ಮತ್ತು ಹರಿದ್ರೇಣುಗಳಲ್ಲಿ (ಕ್ಲೋರೊಪಾಸ್ಟ್‌) ಇರುತ್ತದೆ.
ಮಾನವನ ಜೀವಕೋಶದಲ್ಲಿ ಅನುವಂಶಿಕ ಪದಾರ್ಥ ಬೀಜಕಣದಲ್ಲಿ (ಬೀಜಕಣ ಜೀನೋಮ್) ಮತ್ತು ಮೈಟೋಕಾಂಡ್ರಿಯಗಳಲ್ಲಿ (ಮೈಟೋಕಾಂಡ್ರಿಯ ಡಿಎನ್‌ಎ) ಇರುತ್ತದೆ. ಬೀಜಕಣದ ಜೀನೋಮ್‌ ಅನ್ನು ವರ್ಣತಂತುಗಳು ಎಂದು ಕರೆಯಲಾದ ೪೬ ರೇಖೆರೀತಿಯ ಡಿಎನ್‌ಎ ಅಣುಗಳಾಗಿ ವಿಭಜಿಸಲಾಗಿದೆ. ಈ ವರ್ಣತಂತುಗಳಲ್ಲಿ 22 ಸಮಾನರೂಪದ ವರ್ಣತಂತುಗಳ ಜೋಡಿಗಳು ಮತ್ತು ಒಂದು ಲಿಂಗ ವರ್ಣತಂತುಗಳ ಜೋಡಿ ಇವೆ. ಮೈಟೊಕಾಂಡ್ರಿಯ ಜೀನೋಮ್‌ ಬೀಜಕಣ ಜೀನೋಮ್‌ನಿಂದ ಪ್ರತ್ಯೇಕವಾಗಿದ್ದು ಚಕ್ರಾಕಾರವಾಗಿರುತ್ತದೆ. ಮೈಟೋಕಾಂಡ್ರಿಯ ಡಿಎನ್‌ಎ ಬೀಜಕಣ ಜೀನೋಮ್‌ ಹೊಲಿಸಿದಾಗ ತೀರ ಸಣ್ಣದಾದರೂ ಅದು ಮೈಟೊಕಾಂಡ್ರಿಯದಲ್ಲಿನ ಶಕ್ತಿ ಉತ್ಪಾದನೆಯಲ್ಲಿ ಪಾತ್ರವಹಿಸುವ ೧೩ ಪ್ರೋಟೀನ್‌ಗಳು ಮತ್ತು ನಿರ್ದಿಷ್ಟ ಟಿಆರ್‌ಎನ್‌ಎ ಸಂಕೇತಗಳನ್ನು ಹೊಂದಿದೆ.
ಅನ್ಯ ಅನುವಂಶಿಕ ಪದಾರ್ಥವನ್ನು (ಬಹಳಷ್ಟು ಸಲ ಡಿಎನ್‌ಎ) ಕೃತ್ರಿಮವಾಗಿ ಜೀವಕೋಶದ ಒಳಗೆ ಸೇರಿಸ ಬಹುದು ಮತ್ತು ಈ ಪ್ರಕ್ರಿಯೆಯನ್ನು ಟ್ರಾನ್ಸ್‌ಫೆಕ್ಶನ್ ಎಂದು ಕರೆಯಲಾಗುತ್ತದೆ. ಇಂತಹ ಒಳಸೇರಿಸುವಿಕೆ ಜೀವಕೋಶದ ಜೀನೋಮ್‌ ಒಳಗಾದರೆ ಅದನ್ನು ಶಾಶ್ವತವೆಂತಲೂ ಮತ್ತು ಹಾಗಲ್ಲದಿದ್ದರೆ ಅದನ್ನು ಅಶಾಶ್ವತವೆಂತಲೂ ಕರೆಯಲಾಗಿದೆ. ಕೆಲವು ವೈರಸ್‌ಗಳು ಸಹ ಜೀನೋಮ್‌ನಲ್ಲಿ ಅನುವಂಶಿಕ ಪದಾರ್ಥವನ್ನು ಸೇರಿಸುತ್ತವೆ.

ಅಂಗಕಗಳು

[ಬದಲಾಯಿಸಿ]


(ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌ ಜೀವಕೋಶಗಳಲ್ಲಿರುವ ಅಂಗಕಗಳು)
ಅಂಗಕಗಳು ಜೀವಕೋಶದ ಒಂದು ಅಥವಾ ಹೆಚ್ಚು ಕಾರ್ಯಗಳನ್ನು ನಡೆಸಲು ಹೊಂದಿಕೊಂಡಿವೆ ಅಥವಾ/ಮತ್ತು ಪರಿಣಿತಿ ಪಡೆದಿವೆ. ಇವುಗಳನ್ನು ಮಾನವನ ದೇಹದ ಅಂಗಗಳಿಗೆ ಹೋಲಿಸ ಬಹುದು (ಉದಾ. ಬೇರೆ ಬೇರೆ ಕಾರ್ಯ ನಿರ್ವಹಿಸುವ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳು). ಯೂಕ್ಯಾರಿಯೋ‍ಟ್‌‌‌ ಮತ್ತು ಪ್ರೋಕ್ಯಾರಿಯೋಟ್‌ ಎರಡೂ ಜೀವಕೋಶಗಳಲ್ಲಿಯೂ ಅಂಗಕಗಳು ಇವೆ, ಆದರೆ ಪ್ರೋಕ್ಯಾರಿಯೋಟ್‌ ಅಂಗಕಗಳು ಸಾಮಾನ್ಯವಾಗಿ ಸರಳ ಮತ್ತು ಅವುಗಳ ಸುತ್ತ ಪೊರೆ ಇರುವುದಿಲ್ಲ.
ಜೀವಕೋಶದಲ್ಲಿ ಹಲವು ರೀತಿಯ ಅಂಗಕಗಳಿವೆ. ಕೆಲವು ಅಂಗಕಗಳು ಮಾದರಿ ಸ್ಥಿತಿಯಲ್ಲಿ ಒಂದೇ ಇದ್ದರೆ (ಉದಾ. ಬೀಜಕಣ ಮತ್ತು ಗೋಲ್ಜಿ ಪರಿಕರ) ಇನ್ನೂ ಕೆಲವು ಅಂಗಕಗಳು ಹಲವು (ನೂರರಿಂದ ಕೆಲವು ಸಾವಿರಗಳು) ಇರುತ್ತವೆ (ಉದಾ. ಮೈಟೋಕಾಂಡ್ರಿಯಗಳು, ಹರಿದ್ರೇಣುಗಳು, ಪೆರೊಕ್ಸಿಸೋಮ್‌ಗಳು ಮತ್ತು ಲೈಸೊಸೋಮ್‌ಗಳು). ಸೈಟೊಸೋಲ್ ಜೆಲ್ಲಿಯಂತಹ ದ್ರವವಾಗಿದ್ದು ಜೀವಕೋಶವನ್ನು ತುಂಬಿಕೊಳ್ಳುತ್ತದೆ ಮತ್ತು ಅಂಗಕಗಳನ್ನು ಸುತ್ತುವರೆದಿರುತ್ತದೆ. ಕೆಳಗೆ ಪಟ್ಟಿಮಾಡಿದ ಅಂಗಕಗಳಲ್ಲಿ ರೈಬೋಸೋಮ್‌ ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳೆರಡರಲ್ಲೂ ಇರುತ್ತದೆ ಮತ್ತು ಇತರ ಅಂಗಕಗಳು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಲ್ಲಿರುತ್ತವೆ.

ಮಾನವ ಕ್ಯಾನ್ಸರ್ ಜೀವಕೋಶಗಳು ನೀಲಿ ಬಣ್ಣದಲ್ಲಿರುವ ಬೀಜಕಣದೊದಿಗೆ (ವಿಶೇಷವಾಗಿ ಡಿ.ಎನ್‌.ಎ). ನಡುವೆ ಮತ್ತು ಬಲಗಡೆ ಇರುವ ಜೀವಕೋಶಗಳು ಇಂಟರ್‌ಫೇಸ್‌ನಲ್ಲಿವೆ (ಮೆಟಾಬಾಲಿಕ್ ಹಂತ). ಎಡಗಡೆ ಇರುವ ಜೀವಕೋಶ ಮೈಟೋಸಿಸ್ ವಿಭಜನೆಯ ಹಂತದಲ್ಲಿದ್ದು ಅದರ ಡಿ.ಎನ್‌.ಎ ಸಾಂದ್ರಗೊಂಡಿದೆ.
  • ಬೀಜಕಣ:ಜೀವಕೋಶದ ಮಾಹಿತಿ ಕೇಂದ್ರವಾದ ಬೀಜಕಣವು ಯೂಕ್ಯಾರಿಯೋ‍ಟ್‌‌‌ ಜೀವಕೋಶದ ಬಹಳ ಎದ್ದುಕಾಣುವ ಅಂಗಕ. ಇದರಲ್ಲಿ ವರ್ಣತಂತುಗಳಿರುತ್ತವೆ ಮತ್ತು ಇದು ಬಹಳಷ್ಟು ಡಿ.ಎನ್‌.ಎ ನಕಲು ಮತ್ತು ಆರ್‌ಎನ್ಎ ಸಂಯೋಜನೆ (ಲಿಪ್ಯಂತರ) ನಡೆಯುವ ಸ್ಥಳ. ಬೀಜಕಣ ಗೋಲಾಕಾರವಾಗಿರುತ್ತದೆ ಮತ್ತು ಜೀವರಸದಿಂದ ಬೀಜಕಣ ಪೊರೆ ಎಂದು ಕರೆಯಲಾದ ಎರಡು ಪದರಗಳ ಹೊದಿಕೆಯಿಂದ ಬೇರ್ಪಟ್ಟಿರುತ್ತದೆ. ಈ ಹೊದಿಕೆಯು ಜೀವಕೋಶದ ಡಿ.ಎನ್‌.ಎಯನ್ನು ಪ್ರತ್ಯೇಕಿಸುತ್ತದೆ ಮತ್ತು ಬೇರೆ ಅಣುಗಳು ಅಕಸ್ಮಿಕವಾಗಿ ಅದರ ರಚನೆಯನ್ನು ಹಾಳುಮಾಡದಂತೆ ಕಾಪಾಡುತ್ತದೆ ಅಥವಾ ಅದರ ಸಂಸ್ಕರಣದಲ್ಲಿ ಅಡ್ಡ ಬರುವುದನ್ನು ತಪ್ಪಿಸುತ್ತದೆ. ಈ ಸಂಸ್ಕರಣದಲ್ಲಿ ಡಿ.ಎನ್‌.ಎ ಲಿಪ್ಯಂತರವಾಗುತ್ತದೆ ಅಥವಾ ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ) ಎಂದು ಕರೆಯಲ್ಪಡುವ ವಿಶೇಷ ಆರ್‌ಎನ್ಎಯಾಗಿ ನಕಲಾಗುತ್ತದೆ. ಈ ಎಂಆರ್‌ಎನ್ಎ ಬೀಜಕಣದ ಹೊರಬಂದ ಮೇಲೆ ನಿರ್ದಿಷ್ಟ ಪ್ರೋಟೀನ್ ಅಣುವಾಗಿ ಅನುವಾದಿಸಲ್ಪಡುತ್ತದೆ. ಕೇಂದ್ರ ಬೀಜಕಣ ಬೀಜಕಣದೊಳಗಿನ ವಿಶೇಷ ಪ್ರದೇಶವಾಗಿದ್ದು ಇಲ್ಲಿ ರೈಬೋಸೋಮ್‌ ಉಪಘಟಕಗಳು ಒಗ್ಗೂಡಿಸಲ್ಪಡುತ್ತವೆ. ಪ್ರೋಕ್ಯಾರಿಯೋಟ್‌ಗಳಲ್ಲಿ ಡಿ.ಎನ್‌.ಎ ಸಂಸ್ಕರಣ ಜೀವರಸದಲ್ಲಿ ನಡೆಯುತ್ತದೆ.
  • ಮೈಟೊಕಾಂಡ್ರಿಯಗಳು ಮತ್ತು ಹರಿದ್ರೇಣುಗಳು:ಇವು ಜೀವಕೋಶದ ಶಕ್ತಿಯನ್ನು ಉತ್ಪಾದಿಸುತ್ತವೆ. (ಇವು ಜೀವಕೊಶದ ಪವರ್ ಹೌಸ್ ಇದ್ದಂತೆ- ವಿದ್ಯುತ್ ಶಕ್ತಿಯ ಕೇಂದ್ರಗಳು- ಅಥವಾ ಬ್ಯಾಟರಿ. - ಅದೇ ಜೀವ ಎನ್ನವ ಶಕ್ತಿ- ಅವು ಮೂಲ ವಿದ್ಯುತ್-ಮೂಲ ಜೀವಶಕ್ತಿ, ನೆನಪಿನ ಶಕ್ತಿ, ಅಗತ್ಯ ಕ್ರಿಯೆಯ ಶಕ್ತಿಗಳನ್ನು ಹೊಂದಿವೆ.) ಮೈಟೊಕಾಂಡ್ರಿಯಗಳು ಸ್ವತಹ ತಮ್ಮನ್ನು ತಾವು ನಕಲು ಮಾಡಿಕೊಳ್ಳುವ ಅಂಗಕಗಳು ಮತ್ತು ಯೂಕ್ಯಾರಿಯೋ‍ಟ್‌‌‌ ಜೀವಕೋಶದ ಜೀವರಸದಲ್ಲಿ ಹಲವು ಸಂಖ್ಯೆಗಳಲ್ಲಿ, ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಇರುತ್ತವೆ. ಉಸಿರಾಟವು ಜೀವಕೋಶದ ಮೈಟೊಕಾಂಡ್ರಿಯಗಳಲ್ಲಿ ನಡೆಯುತ್ತದೆ, ಇದು ಆಮ್ಲಜನಕ ಬಳಸಿ ಜೀವಕೋಶದ ಪೌಷ್ಟಿಕಾಂಶಗಳಲ್ಲಿನ (ಉದಾ. ಸಕ್ಕರೆ ಅಥವಾ ಗ್ಲುಕೊಸ್) ಶಕ್ತಿಯನ್ನು ಆಕ್ಸಿಡೇಟಿವ್ ಫಾಸ್ಪೊರೈಲೇಶನ್ ಮೂಲಕ ಬಿಡುಗಡೆ ಮಾಡಿ ಎಟಿಪಿ (ಅಡೆನೊಸಿನ್‌ ಟ್ರೈಪಾಸ್ಪೇಟ್) ಉತ್ಪಾದಿಸುತ್ತದೆ. ಮೈಟೊಕಾಂಡ್ರಿಯಗಳು ದ್ವಿವಿದಲನದ ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಹರಿದ್ರೇಣು ಸಸ್ಯ ಮತ್ತು ಪಾಚಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಇದು ಸೂರ್ಯನ ಶಕ್ತಿಯನ್ನು ಹಿಡಿದಿರಿಸಿ ದ್ಯುತಿಸಂಶ್ಲೇಷಣೆ ಅಥವಾ ಪೊಟೋಸಿಂಥೆಸಿಸ್ ಮೂಲಕ ಕಾರ್ಬೊಹೈಡ್ರೇಟ್‌ಗಳನ್ನು (ಶರ್ಕರಪಿಷ್ಟ) ತಯಾರಿಸುತ್ತದೆ.li
  • ಎಂಡೊಪ್ಲಾಸ್ಮ ಜಾಲರಚನೆ:ಇದು ಜೀವರಸದಲ್ಲಿ ಮುಕ್ತವಾಗಿ ತೇಲುವ ಅಣುಗಳಿಗೆ ಹೋಲಿಸಿದಲ್ಲಿ ನಿರ್ದಿಷ್ಟ ಬದಲಾವಣೆಗೆ ಗುರಿಮಾಡಲಾದ ಮತ್ತು ನಿರ್ದಿಷ್ಟ ಸ್ಥಳಕ್ಕೆ ತಲುಪಬೇಕಾದ ಅಣುಗಳ ಸಾಗಣೆಯ ಜಾಲ. ಇದು ಎರಡು ರೂಪದಲ್ಲಿದೆ: ಹೊರಮೈ ಮೇಲೆ ರೈಬೋಸೋಮ್‌ಗಳು ಇರುವ (ಇವು ಜಾಲರಚನೆ ಒಳಗೆ ಪ್ರೋಟೀನ್‌ಗಳನ್ನು ಸ್ರವಿಸುವಿಸುತ್ತವೆ) ಒರಟು ಎಂಡೊಪ್ಲಾಸ್ಮ ಜಾಲರಚನೆ ಮತ್ತು ಕ್ಯಾಲ್ಸಿಯಂನ್ನು (ಸುಣ್ಣ) ವಶಪಡಿಸಿಕೊಳ್ಳುವಲ್ಲಿ ಮತ್ತು ಬಿಡುಗಡೆ ಮಾಡುವಲ್ಲಿ ಪಾತ್ರ ವಹಿಸುವ ನಯವಾದ ಎಂಡೊಪ್ಲಾಸ್ಮ ಜಾಲರಚನೆ.
  • ಗಾಲ್ಜಿ ಪರಿಕರ: ಇದರ ಮೂಲಭೂತ ಕೆಲಸ ಜೀವಕೋಶದಲ್ಲಿ ಸಂಯೋಜಿಸಿದ ಪ್ರೋಟೀನ್‌ಗಳು ಮತ್ತು ಲಿಪಿಡ್‌ಗಳಂತಹ ದೊಡ್ಡ ಅಣುಗಳನ್ನು ಸಂಸ್ಕರಿಸುವುದು ಮತ್ತು ಶೇಖರಿಸುವುದು.
  • ಲೈಸೊಸೋಮ್‌ಗಳು ಮತ್ತು ಪೆರೊಕ್ಸಿಸೋಮ್‌ಗಳು: ಲೈಸೊಸೋಮ್‌ಗಳು ಜೀರ್ಣಕಾರಿ ಕಿಣ್ವಗಳನ್ನು (ಹೈಡ್ರೊಲೇಸಸ್ ಆಮ್ಲ) ಹೊಂದಿರುತ್ತವೆ. ಇವು ಹೆಚ್ಚುವರಿ ಅಥವಾ ಸವಕಲು ಅಂಗಕ, ಆಹಾರ ಕಣ ಮತ್ತು ಆಕ್ರಮಿಸಿದ ವೈರಾಣು ಅಥವಾ ಬ್ಯಾಕ್ಟೀರಿಯಗಳನ್ನು ಜೀರ್ಣ ಮಾಡುತ್ತವೆ. ಪೆರೊಕ್ಸಿಸೋಮ್‌ಗಳಲ್ಲಿ ವಿಷಕಾರಿ ಪೆರಾಕ್ಸೈಡ್‌ಗಳಿಂದ ಪಾರುಮಾಡುವ ಕಿಣ್ವಗಳಿವೆ. ಇಂತಹ ವಿನಾಶಕಾರಿ ಕಿಣ್ವಗಳನ್ನು ಮಿತಿಯಲ್ಲಿರಿಸಲು ಅಗತ್ಯವಾದ ಪೊರೆ-ಬಂಧನದ ವ್ಯವಸ್ಥೆ ಇಲ್ಲದಿದ್ದಲ್ಲಿ ಇವಕ್ಕೆ ಅವಕಾಶ ಇರುತ್ತಿರಲಿಲ್ಲ.
  • ಸೆಂಟ್ರೋಸೋಮ್: ಇದು ಸೈಟೊಸ್ಕೆಲೆಟನ್‌ನನ್ನು ವ್ಯವಸ್ಥೆಗೊಳಿಸುತ್ತದೆ. ಸೆಂಟ್ರಿಸೋಮ್‌ ಸೈಟೊಸ್ಕೆಲೆಟನ್‌ನ ಮುಖ್ಯ ಭಾಗವಾದ ಚಿಕ್ಕನಳಿಕೆಗಳನ್ನು ಉತ್ಪಾದಿಸುತ್ತದೆ. ಇದು ಎಂಡೊಪ್ಲಾಸ್ಮ ಜಾಲರಚನೆ ಮತ್ತು ಗಾಲ್ಜಿ ಪರಿಕರದ ಮೂಲಕ ಸಾಗಣೆಯನ್ನು ನಿರ್ದೇಶಿಸುತ್ತದೆ. ಸೆಂಟ್ರೊಸೋಮ್‌ಗಳಲ್ಲಿ ಎರಡು ಸೆಂಟ್ರಿಯೋಲ್‌ಗಳು ಇದ್ದು ಅವು ಕೋಶ ವಿಭಜನೆಯಲ್ಲಿ ಬೆರ್ಪಡುತ್ತವೆ ಮತ್ತು ಮೈಟಾಸಿಸ್ ಆಧಾರ ತಂತಿ (ಮೈಟಾಸಿಸ್ ಮತ್ತು ಮಿಯಾಸಿಸ್ ಎರಡರಲ್ಲಿಯೂ ಕೋಶ ವಿಭಜನೆಯಾಗುವಾಗ ವರ್ಣತಂತುಗಳು ಇಬ್ಭಾಗವಾಗಲು ಸಹಾಯ ಮಾಡುವ ಆಧಾರ ತಂತಿ) ರೂಪಗೊಳ್ಳಲು ಸಹಾಯ ಮಾಡುತ್ತದೆ. ಪ್ರಾಣಿ ಜೀವಕೋಶಗಳಲ್ಲಿ ಒಂದೇ ಸೆಂಟ್ರೊಸೋಮ್ ಇರುತ್ತದೆ. ಇದು ಕೆಲವು ಶಿಲೀಂಧ್ರ ಮತ್ತು ಪಾಚಿಗಳಲ್ಲಿಯೂ ಕಂಡುಬರುತ್ತದೆ.
  • ಕುಹರಗಳು: ಕುಹರಗಳು ಪೋಲು ಪದಾರ್ಥಗಳನ್ನು ಪ್ರತ್ಯೇಕಿಸುತ್ತವೆ ಮತ್ತು ಸಸ್ಯ ಜೀವಕೋಶಗಳಲ್ಲಿ ನೀರು ದಾಸ್ತಾನು ಮಾಡುತ್ತವೆ. ಅವುಗಳನ್ನು ಕೆಲವೊಮ್ಮೆ ಪೊರೆ ಸುತ್ತುವರೆದ ದ್ರವ ತುಂಬಿದ ಸ್ಥಳಗಳಾಗಿ ಬಣ್ಣಿಸಲಾಗಿದೆ. ಕೆಲವು ಜೀವಕೋಶಗಳಲ್ಲಿ, ವಿಶೇಷವಾಗಿ ಅಮೀಬಗಳಲ್ಲಿ ಸಂಕೋಚಕ ಕುಹರಗಳು ಇದ್ದು, ಜೀವಕೋಶದಲ್ಲಿ ತೀರ ಹೆಚ್ಚು ನೀರಿದ್ದರೆ ಅವು ನೀರನ್ನು ಹೊರತಳ್ಳುತ್ತವೆ. ಸಾಮಾನ್ಯವಾಗಿ ಸಸ್ಯ ಮತ್ತು ಶಿಲೀಂಧ್ರಗಳ ಜೀವಕೋಶಗಳಲ್ಲಿನ ಕುಹರಗಳು ಪ್ರಾಣಿ ಜೀವಕೋಶಗಳ ಕುಹರಗಳಿಗಿಂತ ದೊಡ್ಡವಿರುತ್ತವೆ.
  • ರೈಬೋಸೋಮ್‌ಗಳು: ರೈಬೋಸೋಮ್‌ಗಳು ದೊಡ್ಡ ಸಂಕೀರ್ಣ ಆರ್‌.ಎನ್.ಎ ಮತ್ತು ಪ್ರೋಟೀನ್ ಅಣುಗಳು. ಪ್ರತಿಯೊಂದರಲ್ಲಿಯೂ ಎರಡು ಉಪಘಟಕಗಳಿರುತ್ತವೆ ಮತ್ತು ಇವು ಬೀಜಕಣದ ಆರ್‌ಎನ್ಎ ಬಳಸಿ ಅಮಿನೊ ಆಮ್ಲಗಳಿಂದ ಪ್ರೋಟೀನ್ ಸಂಯೋಜಿಸುವ ತಯಾರಿ ಘಟಕಗಳಾಗಿ ವರ್ತಿಸುತ್ತವೆ. ರೈಬೊಸೋಮ್‌ಗಳು ಮುಕ್ತವಾಗಿ ತೇಲುತ್ತಿರ ಬಹುದು ಅಥವಾ ಪೊರೆಗೆ ಹತ್ತಿಕೊಂಡಿರಲೂ ಬಹುದು (ಯೂಕ್ಯಾರಿಯೋ‍ಟ್‌‌‌ಗಳಲ್ಲಿ ಒರಟು ಎಂಡೊಪ್ಲಾಸ್ಮ ಜಾಲರಚನೆ ಅಥವಾ ಪ್ರೋಕ್ಯಾರಿಯೋಟ್‌ಗಳಲ್ಲಿ ಕೋಶಭಿತ್ತಿಗೆ ಅಂಟಿಕೊಂಡಿರುತ್ತವೆ).[೧೫]

ಕೋಶಪೊರೆ ಹೊರಗಿನ ರಚನೆಗಳು

[ಬದಲಾಯಿಸಿ]


(ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌ ಜೀವಕೊಶಗಳಲ್ಲಿನ ಹೊರ ರಚನೆಗಳು)

ಕೋಶಭಿತ್ತಿ

[ಬದಲಾಯಿಸಿ]


ಹಲವು ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌ ಜೀವಕೋಶಗಳಲ್ಲಿ ಕೋಶಭಿತ್ತಿ ಇರುತ್ತದೆ. ಕೋಶಭಿತ್ತಿಯು ಜೀವಕೋಶವನ್ನು ಪರಿಸರದಲ್ಲಿನ ಯಾಂತ್ರಿಕ ಮತ್ತು ರಾಸಾಯನಿಕ ಕ್ರಿಯೆಗಳಿಂದ ಕಾಪಾಡುತ್ತದೆ ಮತ್ತು ಕೋಶಪೊರೆಯ ಜೊತೆಗೆ ಹೆಚ್ಚುವರಿ ರಕ್ಷಣಾ ಹೊದಿಕೆಯಾಗಿ ಕೆಲಸಮಾಡುತ್ತದೆ. ಬೇರೆ ಬೇರೆ ಜೀವಕೋಶಗಳ ಕೋಶಭಿತ್ತಿ ವಿಭಿನ್ನ ಪದಾರ್ಥಗಳಿಂದ ಮಾಡಲ್ಪಟ್ಟಿದೆ. ಸಸ್ಯಗಳ ಕೋಶಭಿತ್ತಿ ಸೆಲ್ಯೂಲೋಸ್‌ನಿಂದ ರಚಿತವಾಗಿದೆ, ಶಿಲೀಂಧ್ರದ ಕೋಶಭಿತ್ತಿ ಚಿಟಿನ್‌ನಿಂದ ರೂಪಿತವಾಗಿದೆ ಮತ್ತು ಬ್ಯಾಕ್ಟೀರಿಯದ ಕೋಶಭಿತ್ತಿ ಪೆಪ್ಟಿಡಾಗ್‌ಲಿಕ್ಯಾನ್‌ನಿಂದ ಮಾಡಲ್ಪಟ್ಟಿದೆ.

ಕ್ಯಾಪ್ಸೂಲ್

[ಬದಲಾಯಿಸಿ]


ಕೆಲವು ಬ್ಯಾಕ್ಟೀರಿಯಗಳಲ್ಲಿ ಕೋಶಪೊರೆ ಮತ್ತು ಕೋಶಭಿತ್ತಿ ಹೊರಗೆ ಜಿಲಿಟಿನ್‌ನಂತಹ ಕ್ಯಾಪ್ಸೂಲ್‌ ಇರುತ್ತದೆ. ಕ್ಯಾಪ್ಸೂಲ್‌ಗಳನ್ನು ಸಾಮಾನ್ಯ ಬಣ್ಣಹಾಕುವ (ಸ್ಟೇನಿಂಗ್) ಪದ್ಧತಿಗಳ ಮೇಲೆ ಗುರುತಿಸಲು ಆಗುವುದಿಲ್ಲ ಮತ್ತು ಜೀವಕೋಶಗಳ ನಡುವಿನ ವ್ಯತ್ಯಾಸವನ್ನು ಎತ್ತಿತೋರಿಸುವ ಇಂಡಿಯಾ ಇಂಕ್ ಮತ್ತು ಮಿಥೈಲ್‌ನೀಲಿಗಳನ್ನು ಬಳಸಿ ಅವುಗಳನ್ನು ಪತ್ತೆಹಚ್ಚಬಹುದು.[೧೬]

ಕಶಾಂಗ

[ಬದಲಾಯಿಸಿ]


ಕಶಾಂಗಗಳು ಜೀವಕೋಶದ ಚಲನೆಯ ಅಂಗಕಗಳು. ಬ್ಯಾಕ್ಟೀರಿಯ ಕಶಾಂಗವು ಜೀವರಸದಿಂದ ಹೊರಚಿಮ್ಮಿ ಕೋಶಪೊರೆ ಮತ್ತು ಕೋಶಭಿತ್ತಿಯ ಮೂಲಕ ಚಾಚಿಕೊಳ್ಳುತ್ತದೆ. ಅವು ಉದ್ದವಾದ, ದಪ್ಪವಾದ ದಾರದಂತಿರುವ ಉಪಾಂಗಗಳು ಮತ್ತು ಪ್ರೋಟೀನ್‌ನಿಂದ ಮಾಡಲ್ಪಟ್ಟಿವೆ. ಆರ್ಕಿಯಗಳಲ್ಲಿ ಮತ್ತು ಯೂಕ್ಯಾರಿಯೋ‍ಟ್‌‌‌ಗಳಲ್ಲಿ ಬೇರೆ ಬೇರೆ ರೀತಿಯ ಕಶಾಂಗಗಳಿರುತ್ತವೆ.

ಫಿಂಬ್ರಿಯ

[ಬದಲಾಯಿಸಿ]


ಫಿಂಬ್ರಿಯ ಅಥವಾ ಪೈಲಸ್‌ ಬ್ಯಾಕ್ಟಿರೀಯದ ಹೊರಮೈ ಮೇಲೆ ಇರುವ ಸಣ್ಣ, ತೆಳುವಾದ, ಕೂದಲಿನಂತಹ ತಂತು. ಫಿಂಬ್ರಿಯಗಳು ಪಿಲಿನ್‌ ಎಂದು ಕರೆಯಲಾದ ಪ್ರೋಟೀನ್‌ನಿಂದ ಮಾಡಲ್ಪಟ್ಟಿವೆ. ಅವು ಒಂದಕ್ಕೊಂದು, ಬೇರೆ ಪ್ರಾಣಿ ಜೀವಕೋಶಗಳಿಗೆ ಮತ್ತು ಕೆಲವು ವಸ್ತುಗಳಿಗೆ ಅಂಟಿಕೊಳ್ಳಲು ಬಳಸಲಾಗುತ್ತದೆ[ಟಿಪ್ಪಣಿ ೭] ಬ್ಯಾಕ್ಟೀರಿಯ ಕೂಡಿಕೆ[ಟಿಪ್ಪಣಿ ೮] ವಿಶೇಷ ರೀತಿಯ ಫಿಂಬ್ರಿಯಗಳು ಇವೆ.

ಜೀವಕೋಶದ ಪ್ರಕ್ರಿಯೆಗಳು

[ಬದಲಾಯಿಸಿ]

ಬೆಳವಣಿಗೆ ಮತ್ತು ಉಪಾಪಚಯ

[ಬದಲಾಯಿಸಿ]


ಎರಡು ಅನುಕ್ರಮ ಕೋಶ ವಿಭಜನೆಗಳ ನಡುವೆ ಜೀವಕೋಶಗಳು ಜೀವಕೋಶ ಚಯಾಪಚಯದ (ಮೆಟಬಾಲಿಸಂ) ಮೂಲಕ ಬೆಳೆಯುತ್ತವೆ. ಜೀವಕೋಶದ ಉಪಾಪಚಯ ಜೀವಕೋಶವೊಂದು ಪೋಷಕಾಂಶ ಅಣುಗಳನ್ನು ಸಂಸ್ಕರಿಸುವ ಪ್ರಕ್ರಿಯೆ. ಉಪಾಪಚಯದಲ್ಲಿ ಅಪಚಯ ಮತ್ತು ಉಪಚಯ ಎಂದು ಎರಡು ಪ್ರತ್ಯೇಕ ವಿಭಾಗಗಳಿವೆ. ಕೆಟಬಾಲಿಸಂನಲ್ಲಿ ಜೀವಕೋಶವು ಸಂಕೀರ್ಣ ಅಣುಗಳನ್ನು ಒಡೆದು ಶಕ್ತಿಯನ್ನು ಮತ್ತು ಅಪಕರ್ಷಣ ಶಕ್ತಿಯನ್ನು[ಟಿಪ್ಪಣಿ ೯] ಉತ್ಪಾದಿಸುತ್ತದೆ. ಅನಬಾಲಿಸಂನಲ್ಲಿ ಶಕ್ತಿ ಮತ್ತು ಅಪಕರ್ಷಣ ಶಕ್ತಿಯನ್ನು ಬಳಸಿ ಸಂಕೀರ್ಣ ಅಣುಗಳ ರಚನೆ ಮತ್ತು ಇತರ ಜೈವಿಕ ಕೆಲಸಗಳನ್ನು ಮಾಡುತ್ತದೆ. ಜೀವಿಯು ಕಬಳಿಸಿದ ಸಂಕೀರ್ಣ ಸಕ್ಕರೆ ಅಣುಗಳನ್ನು ಗ್ಲುಕೋಸ್‌ನಂತಹ ಸರಳ ಅಣುಗಳಾದ ಮೊನೋಸ್ಯಾಕರೈಡ್‌ಗಳಾಗಿ ಒಡೆಯಲಾಗುತ್ತದೆ. ಜೀವಕೋಶದೊಳಗೆ ಬಂದ ಗ್ಲುಕೋಸ್‌ನ್ನು ಅಡೆನೋಸೀನ್ ಟ್ರೈಫಾಸ್ಫೇಟ್ (ಎಟಿಪಿ) ಗಳಾಗಿ ಎರಡು ರೀತಿಯಲ್ಲಿ ಒಡೆಯಲಾಗುತ್ತದೆ ಮತ್ತು ಈ ಅಣುಗಳಲ್ಲಿ ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ಶಕ್ತಿ ಇರುತ್ತದೆ.

ಪ್ರತಿಕೃತೀಕರಣ

[ಬದಲಾಯಿಸಿ]
ಬ್ಯಾಕ್ಟೀರಿಯ ದ್ವಿವಿದಲನ ಮತ್ತು ಯೂಕ್ಯಾರಿಯೋಟ್‌ಗಳು ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆ


ಕೋಶ ವಿಭಜನೆಯು ಒಂದು ಜೀವಕೋಶವು (ಇದನ್ನು ತಾಯಿ ಜೀವಕೋಶ ಎಂದು ಕರೆಯಲಾಗಿದೆ) ವಿಭಜನೆಗೊಂಡು ಎರಡು ಮರಿ ಜೀವಕೋಶಗಳಾವುದನ್ನು ಒಳಗೊಂಡಿದೆ. ಇದು ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ (ಅಂಗಾಶಗಳ ಬೆಳವಣಿಗೆ) ಮತ್ತು ಸಂತಾನೋತ್ಪತ್ತಿಗಳಿಗೆ (ಸಸ್ಯಕ ಸಂತಾನೋತ್ಪತ್ತಿ – ಲೈಂಗಿಕತೆ ಇಲ್ಲದ ಸಂತಾನೋತ್ಪತ್ತಿ) ಕಾರಣವಾಗಿದೆ. ಪ್ರೋಕ್ಯಾರಿಯೋಟ್‌ ಜೀವಕೋಶಗಳಲ್ಲಿ ವಿಭಜನೆಯು ದ್ವಿವಿದಲನವನ್ನು (ಬೈನರಿ ಫಿಶನ್) ಒಳಗೊಂಡಿದೆ ಮತ್ತು ಯೂಕ್ಯಾರಿಯೋ‍ಟ್‌ ಜೀವಕೋಶಗಳು ಸಾಮಾನ್ಯವಾಗಿ ಮೈಟಾಸಿಸ್‌ ಎಂದು ಕರೆಯಲಾದ ಪ್ರಕ್ರಿಯೆಯ ಮೂಲಕ ಬೀಜಕಣ ವಿಭಜನೆಯಾಗಿ ನಂತರದಲ್ಲಿ ಸೈಟೊಕೈನೆಸಿಸ್ ಮೂಲಕ ಜೀವಕೋಶ ವಿಭಜನೆಯಾಗುತ್ತದೆ. ಡಿಪ್ಲಾಯಿಡ್ ಜೀವಕೋಶವು ಮಿಯಾಸಿಸ್‌ ವಿಭಜನೆಯಾಗಿ ಸಾಮಾನ್ಯವಾಗಿ ನಾಲ್ಕು ಹೆಪ್ಲಾಯಿಡ್[ಟಿಪ್ಪಣಿ ೧೦] ಜೀವಕೋಶಗಳಾಗುತ್ತವೆ. ಬಹುಜೀವಕೋಶ ಜೀವಿಗಳಲ್ಲಿ ಹೆಪ್ಲಾಯಿಡ್ ಜೀವಕೋಶಗಳು ಯುಗ್ಮಕಗಳು (ಅಥವಾ ಗ್ಯಾಮೇಟ್‌ಗಳು).
ಜೀವಕೋಶವೊಂದರ ಡಿಎನ್‌ಎ ನಕಲಾಗುವುದು ಅಥವಾ ಜೀವಕೋಶದ ಜೀನೋಮ್‌ ನಕಲಾಗುವ ಪ್ರಕ್ರಿಯೆ ಯಾವಾಗಲೂ ಮೈಟಾಸಿಸ್‌ ಅಥವಾ ದ್ವಿವಿದಲನದ ಮೂಲಕ ವಿಭಜನೆಯಾದಾಗ ಆಗುತ್ತದೆ. ಇದು ಕೋಶ ಚಕ್ರದ (ಅಥವಾ ಕೋಶ ವಿಭಜನೆ ಚಕ್ರ- ಒಂದು ಜೀವಕೋಶದಿಂದ ಎರಡು/ನಾಲ್ಕು ಮರಿ ಜೀವಕೋಶಗಳಾಗುವ ಘಟನಾವಳಿಗಳು) ಸಂಯೋಜನೆ ಹಂತದಲ್ಲಿ [ಟಿಪ್ಪಣಿ ೧೧] ಆಗುತ್ತದೆ. ಮಿಯಾಸಿಸ್‌ನಲ್ಲಿ ಡಿಎನ್‌ಎ ಒಂದು ಸಲ ಮಾತ್ರ ನಕಲಾಗುತ್ತದೆ ಆದರೆ ಜೀವಕೋಶವು ಎರಡುಸಲ ವಿಭಜನೆಯಾಗುತ್ತದೆ. ಡಿಎನ್‌ಎ ನಕಲು ಮಿಯಾಸಿಸ್ ಒಂದು ಹಂತದ ಮುಂಚೆ ಆಗುತ್ತದೆ. ಜೀವಕೋಶವು ಮಿಯಾಸಿಸ್‌ ಎರಡು ಹಂತದಲ್ಲಿ ಎರಡನೆಯ ಸಲ ವಿಭಜನೆಯಾದಾಗ ಡಿಎನ್‌ಎ ನಕಲಾಗುವುದಿಲ್ಲ.[೧೭] ಎಲ್ಲಾ ಜೀವಕೋಶ ಚಟುವಟಿಕೆಗಳಂತೆ ಪ್ರತಿಕೃತೀಕರಣಕ್ಕೂ ಸಹ ವಿಶೇಷ ಪ್ರೋಟೀನ್‌ಗಳ ಅಗತ್ಯವಿದೆ.

ಪ್ರೋಟೀನ್ ಸಂಯೋಜನೆ

[ಬದಲಾಯಿಸಿ]


ವಿವರಗಳಿಗಳಿಗೆ ನೋಡಿ ಪ್ರೋಟೀನ್ ಜೈವಿಕ ಸಂಯೋಜನೆ

>ಜೀವಕೋಶದ ಬೀಜಕಣದೊಳಗೆ (ನೀಲಿ ಬಣ್ಣದಲ್ಲಿದೆ) ವಂಶವಾಹಿಗಳು (ಡಿಎನ್‌ಎ (ಕಡುನೀಲಿ ಬಣ್ಣದಲ್ಲಿದೆ) ಆರ್‌ಎನ್ಎ (ಕೆಂಪು ಬಣ್ಣದಲ್ಲಿದೆ) ಆಗಿ ಲಿಪ್ಯಂತರಗೊಳ್ಳುತ್ತವೆ. ಈ ಆರ್‌ಎನ್ಎ ಲಿಪ್ಯಂತರ ನಂತರದ ಬದಲಾವಣೆ ಮತ್ತು ನಿಯಂತ್ರಣದ ಪರಿಣಾಮವಾಗಿ ಪಕ್ವ ಎಂಆರ್‌ಎನ್ಎ ರೂಪಗೊಳ್ಳುತ್ತದೆ. ನಂತರ ಎಂಆರ್‌ಎನ್‌ಎ ಬೀಜಕಣದ ಹೊರಗೆ ಜೀವರಸದ (ಕೆನೆ ಬಣ್ಣದಲ್ಲಿದೆ) ಒಳಗೆ ಸಾಗಿಸಲ್ಪಡುತ್ತದೆ. ಅಲ್ಲಿ ಅದು ಪ್ರೋಟೀನ್ ಆಗಿ ಅನುವಾದಗೊಳ್ಳುತ್ತದೆ. ರೈಬೋಸೋಮ್‌ಗಳು (ನೇರಳೆ ಬಣ್ಣದಲ್ಲಿವೆ) ಎಂಆರ್‌ಎನ್‌ಎನ ಮೂರರ ಕೊಡಾನುಗಳನ್ನು ಸಂವಾದಿ ಟಿಆರ್‌ಎನ್‌ಎಯ ಮೂರರ ಪ್ರತಿ-ಕೊಡಾನಿಗೆ ಸರಿಹೊಂದಿಸುತ್ತದೆ. ಹೊಸತಾಗಿ ಸಂಯೋಜಿಸಿದ ಪ್ರೋಟೀನ್‌ಗಳು (ಕಪ್ಪು ಬಣ್ಣದಲ್ಲಿವೆ) ಕೆಲವೊಮ್ಮೆ ಮುಂದೆ ಹೆಚ್ಚುವರಿ ಬದಲಾವಣೆ ಹೊಂದಿ ಎಫೆಕ್ಟರ್‌ ಅಣುಗಳಂತಹ (ಕಿತ್ತಳೆ ಬಣ್ಣದಲ್ಲಿದೆ) ಅಣುಗಳಿಂದ ಬಂಧಿಸಲ್ಪಡುವ ಮೂಲಕ ಪೂರ್ಣವಾಗಿ ಸಕ್ರಿಯ ಪ್ರೋಟೀನ್ ಆಗುತ್ತವೆ.


ತನ್ನ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಮತ್ತು ಪೋಷಿಸಿಕೊಂಡು ಹೋಗಲು ಅಗತ್ಯವಾದ ಪ್ರೋಟೀನ್ಗಳನ್ನು ಸಂಯೋಜಿಸಲು ಜೀವಕೋಶವು ಶಕ್ತವಾಗಿದೆ. ಈ ಪ್ರಕ್ರಿಯೆ ಅಮಿನೊ ಆಮ್ಲದಿಂದ ಹೊಸ ಪ್ರೋಟೀನ್ ಅಣುಗಳನ್ನು ಡಿ.ಎನ್‌.ಎ ಮತ್ತು ಆರ್‌ಎನ್ಎನಲ್ಲಿ ಸಂಕೇತ ಭಾಷೆಯಲ್ಲಿರುವ ಮಾಹಿತಿಯ ಆಧಾರದ ಮೇಲೆ ರೂಪಿಸುವದನ್ನು ಒಳಗೊಂಡಿದೆ. ಪ್ರೋಟೀನ್ ಸಂಯೋಜನೆ ಸಾಮಾನ್ಯವಾಗಿ ಲಿಪ್ಯಂತರ ಮತ್ತು ಅನುವಾದ ಎಂದು ಕರೆಯಲಾದ ಎರಡು ಮುಖ್ಯ ಹೆಜ್ಜೆಗಳನ್ನು ಹೊಂದಿದೆ.
ಲಿಪ್ಯಂತರ ಪ್ರಕ್ರಿಯೆಯಲ್ಲಿ ಡಿಎನ್‌ಎದಲ್ಲಿ ಮಾಹಿತಿಯನ್ನು ಬಳಸಿ ಪೂರಕ ಆರ್‌ಎನ್ಎ ತಂತು ತಯಾರಾಗುತ್ತದೆ. ಈ ಆರ್‌ಎನ್ಎ ತಂತುವು ನಂತರ ಸಂಸ್ಕರಿಸಲ್ಪಟ್ಟು ಮೆಸೆಂಜರ್‌ ಆರ್‌ಎನ್ಎ (ಎಂಆರ್‌ಎನ್ಎ) ಆಗುತ್ತದೆ. ಇದು ಜೀವಕೋಶದಲ್ಲಿ ಮುಕ್ತವಾಗಿ ಬೇರೆ ಸ್ಥಳಗಳಿಗೆ ಹೋಗಬಹುದು. ಎಂಆರ್‌ಎನ್ಎ ಅಣುಗಳು ಸೈಟೊಸೋಲ್‌ನಲ್ಲಿರುವ[ರೈಬೋಸೋಮ್‌ ಎಂದು ಕರೆಯಲಾದ ಪ್ರೋಟೀನ್-ಆರ್‌ಎನ್ಎ ಸಂಕೀರ್ಣಗಳಿಗೆ ಬಂಧಿತವಾಗುತ್ತವೆ ಮತ್ತು ಅಲ್ಲಿ ಪಾಲಿಪೆಪ್‌ಟೈಡ್ ಸರಣಿಯಾಗಿ ಅನುವಾದಿಸಲ್ಪಡುತ್ತವೆ. ರೈಬೊಸೋಂ ಎಂಆರ್‌ಎನ್ಎ ಸರಣಿಯ ಆಧಾರದ ಮೇಲೆ ಪಾಲಿಪೆಪ್‌ಟೈಡ್ ಸರಣಿ ರೂಪಗೊಳ್ಳಲು ಮಧ್ಯವರ್ತಿಯಾಗಿ ಕೆಲಸಮಾಡುತ್ತದೆ. ರೈಬೋಸೋಮ್‌ ಎಂಆರ್‌ಎನ್‌ಎ ಕೋಡಾನುಗಳನ್ನು ಪೂರಕ ಟಿಆರ್‌ಎನ್‌ಎ ಪ್ರತಿಕೊಡಾನ್‌ಗಳಿಗೆ ಬಂಧನವಾಗುವುದನ್ನು ಪ್ರಚೋದಿಸುವ ಮೂಲಕ ಸಂಕೇತವನ್ನು ಬಿಡಿಸಲು ಅನುವು ಮಾಡಿಕೊಡುತ್ತದೆ. ಟಿಆರ್‌ಎನ್‌ಎಯ ಒಂದು ತುದಿಗೆ (ಪ್ರತಿಕೋಡಾನ್‌ ಇರುವ ತುದಿಗೆ) ಅಮಿನೊ ಆಮ್ಲ ಅಂಟಿಕೊಂಡ ಸಂಕೀರ್ಣವು ರೈಬೊಸೋಂಗೆ ಸಾಗಿಸಲ್ಪಟ್ಟು ಅಲ್ಲಿ ಪಾಲಿಪೆಪ್‌ಟೈಡ್‌ ಸರಪಳಿ ಅಥವಾ ಅಮಿನೊ ಆಮ್ಲ ಸರಪಳಿಯಾಗಿ ಜೋಡಿಸಲ್ಪಡುತ್ತದೆ. [ಟಿಪ್ಪಣಿ ೧೨] ಈ ಹೊಸ ಪಾಲಿಪೆಪ್‌ಟೈಡ್ ನಂತರ ಮೂರು ಆಯಾಮಗಳ ಪ್ರೋಟೀನ್ ಅಣುವಾಗಿ ಮಡಿಚಿಕೊಳ್ಳುತ್ತದೆ.


ಏಕಕೋಶ ಜೀವಿಗಳು ಆಹಾರ ಅರಸಲು ಮತ್ತು ಪರಭಕ್ಷಗಳಿಂತ ತಪ್ಪಿಸಿಕೊಳ್ಳಲು ಚಲಿಸುತ್ತವೆ. ಸಾಮಾನ್ಯ ಚಲನೆಯ ವಿಧಾನ ಕಶಾಂಗ ಮತ್ತು ಸೀಲಿಯಂಗಳನ್ನು ಒಳಗೊಂಡಿದೆ.
ಬಹುಕೋಶ ಜೀವಿಗಳಲ್ಲಿನ ಜೀವಕೋಶಗಳು ಗಾಯ ಮಾಯುವಿಕೆ ಪ್ರಕ್ರಿಯೆಯಲ್ಲಿ, ಪ್ರತಿರಕ್ಷಿತಕ್ಕೆ (ಇಮ್ಯೂನ್‌) ಉತ್ತರವಾಗಿ ಮತ್ತು ಕ್ಯಾನ್ಸರ್ ಸ್ಥಾನಾಂತರದಂತಹ[ಟಿಪ್ಪಣಿ ೧೩] ಪ್ರಕ್ರಿಯೆಯಲ್ಲಿ ಜೀವಕೋಶಗಳು ಚಲಿಸ ಬಹುದು. ಉದಾಹರಣೆಗೆ, ಪ್ರಾಣಿಗಳಲ್ಲಿನ ಗಾಯ ಮಾಯುವಿಕೆಯಲ್ಲಿ ಬಿಳಿ ರಕ್ತ ಕಣಗಳು (ಜೀವಕೋಶಗಳು) ಸೋಂಕಿಗೆ ಕಾರಣವಾದ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಗಾಯದ ಜಾಗಕ್ಕೆ ಚಲಿಸುತ್ತವೆ. ಜೀವಕೋಶದ ಚಲನೆ ಅನೇಕ ರಿಸೆಪ್ಟರ್‌ಗಳು, ಅಡ್ಡ ಬಂಧಗಳು, ಕಂತೆಗಟ್ಟುವಿಕೆ, ಅಂಟಿಕೊಳ್ಳುವಿಕೆ, ಚಾಲಕ ಮತ್ತು ಇತರ ಪ್ರೋಟೀನ್‌ಗಳನ್ನು ಒಳಗೊಂಡಿದೆ.[೧೮] ಈ ಪ್ರಕ್ರಿಯೆ ಮೂರು ಹೆಜ್ಜೆಗಳಲ್ಲಿರುತ್ತವೆ: ಜೀವಕೋಶದ ಕೊನೆಯನ್ನು ಚಾಚುವುದು ಹಾಗೂ ಈ ಕೊನೆಯು ಅಂಟಿಕೊಳ್ಳುವುದು, ಜೀವಕೋಶದ ಅಂಟಿಕೊಂಡ ದೇಹ ಮತ್ತು ಹಿಂಭಾಗ ಬಿಡಿಸಿಕೊಳ್ಳುವುದು ಮತ್ತು ದೇಹವನ್ನು ಮುಂಚಾಚಲು ಸೈಟೊಸ್ಕೆಲೆಟನ್ ಸಂಕೋಚಗೊಳ್ಳುವುದು. ಪ್ರತಿ ಹೆಜ್ಜೆಯೂ ಒಂದು ಸೈಟೊಸ್ಕೆಲೆಟನ್‌ ಭಾಗ ಹುಟ್ಟುಹಾಕಿದ ಭೌತಶಕ್ತಿಗಳಿಂದ ತಳಲ್ಪಡುತ್ತದೆ.[೧೯][೨೦]

ಬಹುಕೋಶೀಯತೆ

[ಬದಲಾಯಿಸಿ]

ಜೀವಕೋಶ ವಿಶಿಷ್ಟವಾಗುವಿಕೆ

[ಬದಲಾಯಿಸಿ]


ಬಹುಕೋಶಿಯ ಜೀವಿಗಳು ಏಕಕೋಶ ಜೀವಿಗಳಂತಲ್ಲದೆ ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನು ಹೊಂದಿರುತ್ತವೆ.[೨೧]
ಸಂಕೀರ್ಣ ಬಹುಕೋಶ ಜೀವಿಗಳಲ್ಲಿ ಜೀವಕೋಶಗಳು ನಿರ್ದಿಷ್ಟ ಕಾರ್ಯಕ್ಕೆ ಹೊಂದಿಕೊಂಡ ವಿಭಿನ್ನ ನಮೂನೆಯ ಜೀವಕೋಶಗಳಿರುತ್ತವೆ. ಸಸ್ತನಿಗಳಲ್ಲಿನ ಪ್ರಮುಖ ಜೀವಕೋಶ ನಮೂನೆಗಳಲ್ಲಿ ಚರ್ಮಕೋಶ, ಸ್ನಾಯುಕೋಶ, ನರಕೋಶ. ರಕ್ತಕೋಶ, ಫೈಬ್ರೋಬ್ಲಾಸ್ಟ್, ಕಾಂಡಕೋಶ ಮುಂತಾದವುಗಳನ್ನು ಒಳಗೊಂಡಿವೆ. ಜೀವಕೋಶ ನಮೂನೆಗಳು ಕಾಣುವ ರೀತಿ ಮತ್ತು ಮಾಡುವ ಕೆಲಸ ಬೇರೆ ಬೇರೆಯಾದರೂ ಅವುಗಳು ಅನುವಂಶಿಕತೆಯಲ್ಲಿ ಒಂದೇ ರೀತಿಯವು. ಜೀವಕೋಶಗಳು ಒಂದೇ ರೀತಿಯ ಜೀನ್‌ ನಮೂನೆ ಹೊಂದಿರುತ್ತವೆ ಆದರೆ ಬೇರೆ ಬೇರೆ ಜೀವಕೋಶ ನಮೂನೆಗಳಿಗೆ ಯಾವಾಗಲು ಅವುಗಳಲ್ಲಿರುವ ವಂಶವಾಹಿಗಳ ಅಭಿವ್ಯಕ್ತಿಯಲ್ಲಿನ ವ್ಯತ್ಯಾಸ ಕಾರಣ.
ಬಹಳಷ್ಟು ವಿಭಿನ್ನ ಜೀವಕೋಶ ನಮೂನೆಗಳು ಒಂದೇ ಜೀವಕೋಶ ಯುಗ್ಮಜ ಅಥವಾ ಜೈಗೋಟಿನಿಂದ [ಟಿಪ್ಪಣಿ ೧೪] ಬಂದು ಕಾಲಕಳೆದಂತೆ ಬೆಳೆಯುತ್ತ ನೂರಾರು ನಮೂನೆಯ ವಿಭಿನ್ನ ಜೀವಕೋಶಗಳಾಗಿ ಪ್ರತ್ಯೇಕವಾಗುತ್ತವೆ. ಜೀವಕೋಶಗಳ ಪ್ರತ್ಯೇಕವಾಗುವಿಕೆಯು ವಿಭಿನ್ನ ಪರಿಸರದ ಪ್ರೇರಣೆ (ಉದಾ. ಜೀವಕೋಶ-ಜೀವಕೋಶಗಳ ನಡುವಿನ ಪರಸ್ಪರ ಕ್ರಿಯೆ) ಮತ್ತು ಸಹಜ ವ್ಯತ್ಯಾಸಗಳಿಂದ (ಉದಾ. ವಿಭಜನೆಯಲ್ಲಿ ಅಣುಗಳ ಹಂಚಿಕೆಯಲ್ಲಾಗುವ ಏರುಪೇರು ಕಾರಣ) ನಿರ್ದೇಶಿಸಿಲ್ಪಟ್ಟಿದೆ.

ಟಿಪ್ಪಣಿಗಳು

[ಬದಲಾಯಿಸಿ]
  1. ಈ ಪುಟ Cell (Biology) Wikipedia ಪುಟದ ಭಾಗಶಹ ಅನುವಾದ. https://en.wikipedia.org/wiki/Cell_(biology)
  2. ಇಲ್ಲಿನ ಹಲವು ತಾಂತ್ರಿಕ ಪದಗಳನ್ನು ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ, ಪ್ರಧಾನ ಸಂಪಾದಕರು ಜಿ.ಟಿ. ನಾರಾಯಣರಾವ್, 2001 ಮೊದಲನೆಯ ಮುದ್ರಣ ಪುಸ್ತಕದಿಂದ ಎತ್ತಿಕೊಳ್ಳಲಾಗಿದೆ
  3. ಮಿಲ್ಲೀಮೀಟರ್‌ನ ಒಂದು ಸಾವಿರ ಭಾಗ
  4. ಪರಿಸರದಲ್ಲಿ ಜೀವಕೋಶದ ಒಳ ಆವರಣಕ್ಕಿಂತ ಹೆಚ್ಚು ಕರಗಿರುವ ವಸ್ತುಗಳಿರುವ ಸ್ಥಿತಿ
  5. ಮೈಟಾಸಿಸ್ ಜೀವಕೋಶ ವಿಭಜನೆಯ ವೇಳೆಯಲ್ಲಿ ಜೀವರಸವು ಎರಡು ಮರಿ ಜೀವಕೋಶಗಳ ಭಾಗವಾಗುವ ಪ್ರಕ್ರಿಯೆ (ಮಿಯಾಸಿಸ್‌ನಲ್ಲಿ ಒಟ್ಟು ನಾಕು ಮರಿ ಜೀವಕೋಶಗಳು)
  6. ಇನ್ನೊಂದು ಅಣುವಿನೊಂದಿಗೆ ಬಂಧಿಸಲ್ಪಟ್ಟು ಪಾಲಿಮರ್ ಆಗಬಲ್ಲ ಅಣು
  7. Fimbria (bacteriology) wikipedia https://en.wikipedia.org/wiki/Fimbria_(bacteriology)
  8. ಬ್ಯಾಕ್ಟೀರಿಯಾ ಕಾಂಜುಗೇಶನ್‌- ಬ್ಯಾಕ್ಟೀರಿಯಗಳ ನಡುವೆ ನೇರವಾಗಿ ಅನುವಂಶಿಕ ಪದಾರ್ಥದ ವರ್ಗಾವಣೆ
  9. ರಸಾಯನಿಕ ಸಂಯುಕ್ತದಿಂದ ಆಮ್ಲಜನಕ ತೆಗೆದುಬಿಡುವ ಶಕ್ತಿ
  10. ಡಿಪ್ಲಾಯಿಡ್‌ ಜೀವಕೋಶದಲ್ಲಿನ ವರ್ಣತಂತುಗಳ ಸಂಖ್ಯೆ ಹೆಪ್ಲಾಯಿಡ್ ಜೀವಕೋಶದಲ್ಲಿ ಅರ್ಧವಾಗುತ್ತದೆ
  11. ಇದನ್ನು ಎಸ್-ಹಂತ ಎಂದು ಸಹ ಕರೆಯಲಾಗುತ್ತದೆ
  12. Translation (biology) wikipedia https://en.wikipedia.org/wiki/Translation_(biology)
  13. ಕ್ಯಾನ್ಸರ್ ಮೆಟಾಸ್ಟಾಸಿಸ್- ಈ ಪ್ರಕ್ರಿಯೆಯಲ್ಲಿ ರೋಗವು ಒಂದು ಭಾಗದಿಂದ ನೇರವಾಗಿ ಸಂಬಂಧಿಸಿರದ ಇನ್ನೊಂದು ಭಾಗಕ್ಕೆ ಹರಡುತ್ತದೆ
  14. ಯುಗ್ಮಜವನ್ನು ಟೋಟಿಪೊಟೆಂಟ್ ಎಂದು ಕರೆಯಲಾಗಿದೆ. ಟೋಟಿಪೊಟೆನ್ಸಿ ಎಂದರೆ ಒಂದೇ ಜೀವಕೋಶ ವಿಭಜನೆಯಾಗಿ ಜೀವಿಯ ಎಲ್ಲಾ ತರಹದ ಜೀವಕೋಶಗಳಿಗೆ ಕಾರಣವಾಗುವ ಸಾಮರ್ಥ್ಯ


ಉಲ್ಲೇಖಗಳು

[ಬದಲಾಯಿಸಿ]
  1. "Cell". Online Etymology Dictionary. Retrieved 31 December 2012
  2. Cell Movements and the Shaping of the Vertebrate Body in Chapter 21 of Molecular Biology of the Cell fourth edition, edited by Bruce Alberts (2002) published by Garland Science. The Alberts text discusses how the "cellular building blocks" move to shape developing embryos. It is also common to describe small molecules such as amino acids as "molecular building blocks".
  3. Alberts, p. 2.
  4. Campbell, Neil A.; Brad Williamson; Robin J. Heyden (2006). Biology: Exploring Life. Boston, Massachusetts: Pearson Prentice Hall. ISBN 0-13-250882-6.
  5. Karp, Gerald (19 October 2009). Cell and Molecular Biology: Concepts and Experiments. John Wiley & Sons. p. 2. ISBN 9780470483374. Hooke called the pores cells because they re- minded him of the cells inhabited by monks living in a monastery.
  6. Alan Chong Tero (1990). Achiever's Biology. Allied Publishers. p. 36. ISBN 9788184243697. In 1665, an Englishman, Robert Hooke observed a thin slice of" cork under a simple microscope. (A simple microscope is a microscope with only one biconvex lens, rather like a magnifying glass). He saw many small box like structures. These reminded him of small rooms called "cells" in which Christian monks lived and meditated.
  7. Maton, Anthea (1997). Cells Building Blocks of Life. New Jersey: Prentice Hall. ISBN 0-13-423476-6.
  8. Schopf, JW, Kudryavtsev, AB, Czaja, AD, and Tripathi, AB. (2007). Evidence of Archean life: Stromatolites and microfossils. Precambrian Research 158:141-155.
  9. Schopf, JW (2006). Fossil evidence of Archaean life. Philos Trans R Soc Lond B Biol Sci 29;361(1470):869-85.
  10. Peter Hamilton Raven; George Brooks Johnson (2002). Biology. McGraw-Hill Education. p. 68. ISBN 978-0-07-112261-0. Retrieved 7 July 2013.
  11. Microbiology : Principles and Explorations By Jacquelyn G. Black
  12. Satir, Peter; Christensen, ST; Søren T. Christensen (2008-03-26). "Structure and function of mammalian cilia". Histochemistry and Cell Biology (Springer Berlin/Heidelberg) 129 (6): 687–693. doi:10.1007/s00418-008-0416-9. PMC 2386530. PMID 18365235. 1432-119X. Retrieved 2009-09-12.
  13. PH Raven , Evert RF, Eichhorm SE (1999) Biology of Plants, 6th edition. WH Freeman, New York
  14. Michie K, Löwe J (2006). "Dynamic filaments of the bacterial cytoskeleton". Annu Rev Biochem 75: 467–92. doi:10.1146/annurev.biochem.75.103004.142452. PMID 16756499.
  15. Ménétret JF, Schaletzky J, Clemons WM, CW; Akey; et al. (December 2007). "Ribosome binding of a single copy of the SecY complex: implications for protein translocation". Mol. Cell 28 (6): 1083–92. doi:10.1016/j.molcel.2007.10.034. PMID 18158904.
  16. Prokaryotes. Newnes. Apr 11, 1996. ISBN 9780080984735.
  17. Campbell Biology—Concepts and Connections. Pearson Education. 2009. p. 138.
  18. Revathi Ananthakrishnan1 *, Allen Ehrlicher2 ✉. "The Forces Behind Cell Movement". Biolsci.org. Retrieved 2009-04-17.
  19. Alberts B, Johnson A, Lewis J. et al. Molecular Biology of the Cell, 4e. Garland Science. 2002
  20. Ananthakrishnan, R; Ehrlicher, A (2007). "The Forces Behind Cell Movement". Int J Biol Sci 3 (5): 303–317. doi:10.7150/ijbs.3.303. PMC 1893118. PMID 17589565.
  21. Becker, Wayne M.; et al. (2009). The world of the cell. Pearson Benjamin Cummings. p. 480. ISBN 978-0-321-55418-5.


ಗ್ರಂಥಸೂಚಿ

[ಬದಲಾಯಿಸಿ]
  • Alberts, Bruce; Johnson, Alexander; Lewis, Julian; Morgan, David; Raff, Martin; Roberts, Keith; Walter, Peter (2015). Molecular Biology of the Cell (6th ed.). Garland Science. p. 2. ISBN 978-0815344322.

ಪಠ್ಯಪುಸ್ತಕಗಳು

[ಬದಲಾಯಿಸಿ]
  • Alberts B, Johnson A, Lewis J, Raff M, Roberts K, Walter P (2002). Molecular Biology of the Cell (4th ed.). Garland. ISBN 0-8153-3218-1.
  • Lodish H, Berk A, Matsudaira P, Kaiser CA, Krieger M, Scott MP, Zipurksy SL, Darnell J (2004). Molecular Cell Biology (5th ed.). WH Freeman: New York, NY. ISBN 978-0-7167-4366-8.
  • Cooper GM (2000). The cell: a molecular approach (2nd ed.). Washington, D.C: ASM Press. ISBN 0-87893-102-3.
"https://kn.wikipedia.org/w/index.php?title=ಜೀವಕೋಶ&oldid=1173112" ಇಂದ ಪಡೆಯಲ್ಪಟ್ಟಿದೆ