ಅಪಚಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಂಕೇತಿಕ ರೇಖಾಚಿತ್ರ

ಅಪಚಯ ಅಣುಗಳನ್ನು ಹೆಚ್ಚು ಸಣ್ಣ ಘಟಕಗಳಾಗಿ ವಿಭಜಿಸುವ ಚಯಾಪಚಯ ಮಾರ್ಗಗಳ ಸಮೂಹ. ಈ ಸಣ್ಣ ಘಟಕಗಳನ್ನು ಶಕ್ತಿ ಬಿಡುಗಡೆಮಾಡಲು ಉತ್ಕರ್ಷಿಸಲಾಗುತ್ತದೆ, ಅಥವಾ ಇತರ ಚಯ ಪ್ರತಿಕ್ರಿಯೆಗಳಲ್ಲಿ ಬಳಸಲಾಗುತ್ತದೆ.[೧] ಅಪಚಯವು (ಪಾಲಿಸ್ಯಾಕರೈಡ್‍ಗಳು, ಲಿಪಿಡ್‍ಗಳು, ನ್ಯೂಕ್ಲೆಯಿಕ್ ಆಮ್ಲಗಳು ಮತ್ತು ಪ್ರೋಟೀನ್‍ಗಳಂತಹ) ದೊಡ್ಡ ಅಣುಗಳನ್ನು (ಅನುಕ್ರಮವಾಗಿ ಮೋನೊಸ್ಯಾಕರೈಡ್‍ಗಳು, ನೆಣಾಮ್ಲಗಳು, ನ್ಯೂಕ್ಲಿಯೊಟೈಡ್‍ಗಳು, ಮತ್ತು ಅಮೈನೊ ಆಮ್ಲಗಳಂತಹ) ಸಣ್ಣ ಘಟಕಗಳಾಗಿ ವಿಭಜಿಸುತ್ತದೆ.

ಜೀವಕೋಶಗಳು ವಿಭಜನೆಗೊಳ್ಳುತ್ತಿರುವ ಪಾಲಿಮರ್‍ಗಳಿಂದ ಬಿಡುಗಡೆಗೊಂಡ ಮೋನೊಮರ್‍ಗಳನ್ನು ಹೊಸ ಪಾಲಿಮರ್ ಅಣುಗಳನ್ನು ನಿರ್ಮಿಸಲು, ಅಥವಾ ಮೋನೊಮರ್‍ಗಳನ್ನು ಇನ್ನಷ್ಟು ವಿಭಜಿಸಿ ಸರಳ ತ್ಯಾಜ್ಯ ಉತ್ಪನ್ನಗಳಾಗಿ ಪರಿವರ್ತಿಸಿ (ಜೊತೆಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ) ಬಳಸುತ್ತವೆ. ಲ್ಯಾಕ್ಟಿಕ್ ಆಮ್ಲ, ಅಸಿಟಿಕ್ ಆಮ್ಲ, ಇಂಗಾಲದ ಡೈಆಕ್ಸೈಡ್, ಅಮೋನಿಯಾ, ಮತ್ತು ಯೂರಿಯಾ ಜೀವಕೋಶಗಳ ತ್ಯಾಜ್ಯಗಳಲ್ಲಿ ಸೇರಿವೆ. ಈ ತ್ಯಾಜ್ಯಗಳ ಸೃಷ್ಟಿಯು ಸಾಮಾನ್ಯವಾಗಿ ಒಂದು ಉತ್ಕರ್ಷಣ ಪ್ರಕ್ರಿಯೆಯಾಗಿದೆ, ಹಾಗಾಗಿ ರಾಸಾಯನಿಕ ಮುಕ್ತ ಶಕ್ತಿಯ ಬಿಡುಗಡೆಯಾಗುತ್ತದೆ, ಇದರಲ್ಲಿ ಸ್ವಲ್ಪ ಭಾಗ ಶಾಖವಾಗಿ ಕಳೆದುಹೋಗುತ್ತದೆ, ಆದರೆ ಉಳಿದದ್ದನ್ನು ಅಡಿನೋಸಿನ್ ಟ್ರೈಫ಼ಾಸ್‍ಫ಼ೇಟ್‍ನ ಸಂಶ್ಲೇಷಣೆಯನ್ನು ಚಾಲನೆಮಾಡಲು ಬಳಸಲಾಗುತ್ತದೆ. ಈ ಅಣುವು ಜೀವಕೋಶಕ್ಕೆ ಅಪಚಯದಿಂದ ಬಿಡುಗಡೆಯಾದ ಶಕ್ತಿಯನ್ನು ಚಯವನ್ನು ರೂಪಿಸುವ ಶಕ್ತಿ ಬೇಕಾದ ಪ್ರತಿಕ್ರಿಯೆಗಳಿಗೆ ವರ್ಗಾಯಿಸುವ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಅಪಚಯವು ಜೀವಕೋಶಗಳ ನಿರ್ವಹಣೆ ಮತ್ತು ಬೆಳವಣಿಗೆಗೆ ಅಗತ್ಯವಾದ ರಾಸಾಯನಿಕ ಶಕ್ತಿಯನ್ನು ಒದಗಿಸುತ್ತದೆ. ಗ್ಲೈಕಾಲಿಸಿಸ್, ಸಿಟ್ರಿಕ್ ಆಮ್ಲ ಚಕ್ರ, ಸ್ನಾಯು ಪ್ರೋಟೀನ್‍ನ ವಿಭಜನೆ, ಅಡಿಪೋಸ್ ಅಂಗಾಂಶದಲ್ಲಿ ಕೊಬ್ಬಿನ ವಿಭಜನೆಯಿಂದ ನೆಣಾಮ್ಲಗಳ ರಚನೆ, ಇತ್ಯಾದಿ ಅಪಚಯ ಪ್ರಕ್ರಿಯೆಗಳ ಕೆಲವು ಉದಾಹರಣೆಗಳಾಗಿವೆ.

ಅಪಚಯವನ್ನು ನಿಯಂತ್ರಿಸುವ ಅನೇಕ ಸಂಜ್ಞೆಗಳಿವೆ. ಪರಿಚಿತವಿರುವ ಬಹುತೇಕ ಸಂಜ್ಞೆಗಳು ಹಾರ್ಮೋನುಗಳು ಮತ್ತು ಸ್ವತಃ ಚಯಾಪಚಯ ಕ್ರಿಯೆಯಲ್ಲಿ ಸೇರಿದ ಅಣುಗಳಾಗಿವೆ. ಅಂತಃಸ್ರಾವಶಾಸ್ತ್ರಜ್ಞರು ಸಾಂಪ್ರದಾಯಿಕವಾಗಿ ಅನೇಕ ಹಾರ್ಮೋನ್‍ಗಳನ್ನು, ಅವು ಚಯಾಪಚಯ ಕ್ರಿಯೆಯ ಯಾವ ಭಾಗವನ್ನು ಉದ್ರೇಕಿಸುತ್ತವೆ ಎಂಬುದನ್ನು ಆಧರಿಸಿ, ಚಯ ಹಾರ್ಮೋನು ಅಥವಾ ಅಪಚಯ ಹಾರ್ಮೋನು ಎಂದು ವರ್ಗೀಕರಿಸಿದ್ದಾರೆ. ಕಾರ್ಟಿಸಾಲ್, ಗ್ಲೂಕಗಾನ್, ಮತ್ತು ಅಡ್ರೆನಲಿನ್ ೨೦ನೇ ಶತಮಾನದ ಮುಂಚಿನಿಂದ ಪರಿಚಿತವಿರುವ ಅಪಚಯ ಹಾರ್ಮೋನ್‍ಗಳು.

ಉಲ್ಲೇಖಗಳು[ಬದಲಾಯಿಸಿ]

  1. de Bolster, M.W.G. (1997). "Glossary of Terms Used in Bioinorganic Chemistry: Catabolism". International Union of Pure and Applied Chemistry. Retrieved 2007-10-30.
"https://kn.wikipedia.org/w/index.php?title=ಅಪಚಯ&oldid=780851" ಇಂದ ಪಡೆಯಲ್ಪಟ್ಟಿದೆ