ಅಮೊನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೊನಿಯ ಅಣುವಿನ ರಚನೆ

ಅಮೊನಿಯವು (NH3) ಬಣ್ಣವಿಲ್ಲದ, ಮೂರು ಭಾಗ ಜಲಜನಕ ಹಾಗೂ ಒಂದು ಭಾಗ ಸಾರಜನಕದಿಂದ ಮಾಡಲ್ಪಟ್ಟ ಒಂದು ಕ್ಷಾರ ಅನಿಲ. ಇದು ಗಾಳಿಗಿಂತ ಹಗುರ ಹಾಗೂ ತೀಕ್ಷ್ಣ, ಕುಟುಕು ವಾಸನೆ ಹೊಂದಿದೆ. ಪ್ರಬಲ ಅಮೊನಿಯದಿಂದ ಉಸಿರುಗಟ್ಟುತ್ತದೆ ಹಾಗೂ ಸಾವೂ ಸಂಭವಿಸಬಹುದು. ಗಾಳಿಯಲ್ಲಿ ಉರಿಯುವುದಿಲ್ಲ ಆದರೆ ಆಮ್ಲಜನಕದಲ್ಲಿ ಉರಿದು ಹಳದಿ ಜ್ವಾಲೆಯನ್ನು ಹೊರಸೂಸುತ್ತದೆ. ಸಾರಜನಕದಿಂದ (ನೈಟ್ರೊಜನ್) ಕೂಡಿದ ಸಾವಯವ ಪದಾರ್ಥಗಳು ಕೊಳೆತಾಗ ಅಮೋನಿಯ ಉತ್ಪನ್ನವಾಗುತ್ತದೆ.

ತಯಾರಿಕೆ[ಬದಲಾಯಿಸಿ]

ವಿಧಾನ ೧: ಈಗ ಅಮೋನಿಯವನ್ನು ಸಂಶ್ಲೇಷಣ ಮಾರ್ಗದಿಂದ (ಸಿಂಥೆಸಿಸ್) ಅತ್ಯಧಿಕ ಪ್ರಮಾಣದಲ್ಲಿ ತಯಾರು ಮಾಡುತ್ತಾರೆ. ಸಾಮಾನ್ಯವಾಗಿ ಅಮೊನಿಯವನ್ನು ಸುಲಭವಾಗಿ ಸಿಗುವ ಸಾರಜನಕ ಹಾಗೂ ಜಲಜನಕವನ್ನು ಹೆಚ್ಚಿನ ಒತ್ತಡ ಹಾಗೂ ಉಷ್ಣತೆಯಲ್ಲಿ ಉತ್ಪ್ರೇರಕ(Catalyst)ವನ್ನು ಉಪಯೋಗಿಸಿ ತಯಾರಿಸುತ್ತಾರೆ. ಇದರ ಹೆಸರು ಹಾಬರ್ ವಿಧಾನ. ಸಾಧಾರಣ ಉಷ್ಣತೆ ಮತ್ತು ಒತ್ತಡಗಳಲ್ಲಿ ಸಾರಜನಕ, ಜಲಜನಕಗಳು ಸಂಯೋಜಿಸುವುದಿಲ್ಲವಾದರೂ ನಿಯತಪ್ರಮಾಣದಲ್ಲಿ ಈ ಎರಡು ಅನಿಲಗಳ ಮಿಶ್ರಣವನ್ನು ವಾತಾವರಣದ ೨೦೦ರಷ್ಟು ಒತ್ತಡ ಮತ್ತು ೪೦೦-೫೦೦ ಸೆಂ.ಗ್ರೇ. ಉಷ್ಣತೆಯಲ್ಲಿ ಕಬ್ಬಿಣ ಮತ್ತು ಮಾಲಿಬ್ಡಿನಂ ಲೋಹಗಳ ಪುಡಿಯನ್ನು ವೇಗವರ್ಧಕವಾಗಿ ಉಪಯೋಗಿಸಿ ಅವು ಸಂಯೋಗವಾಗುವಂತೆ ಮಾಡಬಹುದು. ಈ ವಿಧಾನವನ್ನು ಕಂಡುಹಿಡಿದವನು ಹಾಬರ್ ಎಂಬ ವಿಜ್ಞಾನಿ. ಕಬ್ಬಿಣ ಮತ್ತು ಸ್ವಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಂ ಆಕ್ಸೈಡ್, ಸಿಲಿಕ ಅಥವಾ ಅಲ್ಯೂಮಿನ ಇವುಗಳ ಮಿಶ್ರಣವನ್ನೂ ವೇಗವರ್ಧಕವಾಗಿ ಬಳಸುವರು. ಜಲಜನಕ ಸಾರಜನಕ ಮಿಶ್ರಣದ ತಯಾರಿಕೆ, ವೇಗವರ್ಧಕ, ಒತ್ತಡ ಇವುಗಳಲ್ಲಿ ವ್ಯತ್ಯಾಸವಿದ್ದು ಈ ವಿಧಾನದಲ್ಲಿ ಹಲವಾರು ಮಾರ್ಪಾಡುಗಳಾಗಿವೆ.

ಜಲಜನಕ ಸಾರಜನಕಗಳನ್ನು ೧ : ೩ ಗಾತ್ರ ಪ್ರಮಾಣದಲ್ಲಿ (ಘನಗಾತ್ರದಲ್ಲಿ) ಬೆರೆಸಿ ವೇಗವರ್ಧಕದ ಮೇಲೆ ಹಾಯಿಸುವರು. ಈ ಅನಿಲಗಳ ಮಿಶ್ರಣವನ್ನು, ಜಲಾನಿಲ (ವಾಟರ್ ಗ್ಯಾಸ್) ಮತ್ತು ಪ್ರೊಡ್ಯೂಸರ್ ಗ್ಯಾಸ್ ಎಂಬ ಅನಿಲ ಮಿಶ್ರಣದೊಡನೆ ಸೂಕ್ತಪ್ರಮಾಣದಲ್ಲಿ ಬೆರೆಸಿ ಈ ಮಿಶ್ರಣದಿಂದ ಅವಶ್ಯವಾದ ಜಲಜನಕ ಸಾರಜನಕಗಳ ಮಿಶ್ರಣವನ್ನು ಕೆಳಗೆ ವಿವರಿಸಿದ ರೀತಿಯಲ್ಲಿ ಪಡೆಯುವರು. ಜಲಾನಿಲ ಎಂಬುದು ಜಲಜನಕ ಮತ್ತು ಇಂಗಾಲದ ಮಾನಾಕ್ಸೈಡ್‌ಗಳ ಮಿಶ್ರಣ. ಪ್ರೊಡ್ಯೂಸರ್ ಗ್ಯಾಸ್ ಎಂಬುದು ಸಾರಜನಕ ಮತ್ತು ಇಂಗಾಲದ ಮಾನಾಕ್ಸೈಡ್‌ಗಳ ಮಿಶ್ರಣ. ಇವೆರಡರ ಮಿಶ್ರಣಕ್ಕೆ ಹಬೆಯನ್ನು (ಸ್ಟೀಮ್) ಸೇರಿಸಿ, ಕಾಯಿಸಿದ ಫೆರಿಕ್ ಆಕ್ಸೈಡ್ ವೇಗವರ್ಧಕದ ಮೇಲೆ ಹಾಯಿಸಿದರೆ, ಇಂಗಾಲದ ಮಾನಾಕ್ಸೈಡ್, ಇಂಗಾಲದ ಡಯಾಕ್ಸೈಡ್‌ಗೆ ಪರಿವರ್ತನೆಯಾಗುತ್ತದೆ ಮತ್ತು ಜಲಜನಕ ಬಿಡುಗಡೆಯಾಗುತ್ತದೆ. CO + H2O → CO2 + H2 ಈ ಮಿಶ್ರಣವನ್ನು ನೀರಿನ ಮೂಲಕ ಒತ್ತಡದಲ್ಲಿ ಹಾಯಿಸುವುದರಿಂದ, ಇಂಗಾಲದ ಡಯಾಕ್ಸೈಡನ್ನು ತೆಗೆದು, ಉಳಿದ ಇಂಗಾಲದ ಮಾನಾಕ್ಸೈಡನ್ನು ಅಮೋನಿಯ ಮಿಶ್ರಿತ ಕ್ಯುಪ್ರಸ್ ಫಾರ್ಮೇಟ್ ಸಹಾಯದಿಂದ ತೆಗೆಯುವರು. ಉಳಿಯುವುದು ಜಲಜನಕ ಸಾರಜನಕಗಳ ಮಿಶ್ರಣ. ಇದನ್ನು ಕಾಯಿಸಿದ ವೇಗವರ್ಧಕವಿರುವ ಪರಿವರ್ತಕದ (ಕ್ಯಾಟಲಿಸ್ಟ್ ಚೇಂಬರ್) ಮೂಲಕ ಹೆಚ್ಚು ಒತ್ತಡದಲ್ಲಿ ಹಾಯಿಸಿದಾಗ, ಅಮೋನಿಯ ಉತ್ಪನ್ನವಾಗುತ್ತದೆ. ಉತ್ಪನ್ನವಾಗುವ ಅಮೋನಿಯದ ಪ್ರಮಾಣ ಸುಮಾರು ೧೦% ರಷ್ಟು ಮಾತ್ರ. ಆದ್ದರಿಂದ ಒತ್ತಡವನ್ನು ಕಡಿಮೆಮಾಡದೆ (ಉಳಿದ ಜಲಜನಕ ಸಾರಜನಕಗಳನ್ನು ಮತ್ತೆ ವೇಗವರ್ಧಕದ ಮೇಲೆ ಹಾಯಿಸುವ ಸಲುವಾಗಿ), ಅಮೋನಿಯವನ್ನು ಬೇರ್ಪಡಿಸುವುದು ಆವಶ್ಯಕ. ಇದಕ್ಕಾಗಿ ಅನಿಲಮಿಶ್ರಣವನ್ನು ತಣ್ಣೀರಿನಲ್ಲಿ ಮುಳುಗಿಸಿರುವ ಕೊಳವೆ ಸುರಳಿಯ (ಸ್ಟೈರಲ್ ಟ್ಯೂಬ್) ಮೂಲಕ ಹಾಯಿಸಿದರೆ, ಅಮೋನಿಯ ದ್ರವರೂಪಕ್ಕೆ ಬರುತ್ತದೆ. ಸಂಯೋಗವಾಗದೆ ಉಳಿದಿರುವ ಜಲಜನಕ ಸಾರಜನಕಗಳನ್ನು ಮತ್ತೆ ವೇಗವರ್ಧಕದ ಮೇಲೆ ಹಾಯಿಸುವರು.

ಈ ವಿಧಾನದ ರೂಪಾಂತರವಾದ ಕ್ಲಾಡ್ ವಿಧಾನದಲ್ಲಿ ಗಾಳಿಯ ೧೦೦೦ರಷ್ಟು ಒತ್ತಡದಲ್ಲಿ ಕ್ರಿಯೆ ನಡೆಯುವುದರಿಂದ ಅಧಿಕ ಪ್ರಮಾಣದಲ್ಲಿ ಅಮೋನಿಯ ಬಿಡುಗಡೆಯಾಗುತ್ತದೆ.

ಸಾರಜನಕವನ್ನು ದ್ರವಿತಗಾಳಿಯಿಂದಲೂ ಮತ್ತು ಜಲಜನಕವನ್ನು ನೀರಿನ ವಿದ್ಯುತ್ ವಿಶ್ಲೇಷಣದಿಂದಲೂ ಪಡೆಯಬಹುದು.

ವಿಧಾನ ೨: ಕಲ್ಲಿದ್ದಲನ್ನು ಗಾಳಿಯ ಸಂಪರ್ಕವಿಲ್ಲದೆ ಕಾಯಿಸಿ (ನಾಶಕಭಟ್ಟಿ: ಡಿಸ್ಟ್ರಕ್ಟಿವ್ ಡಿಸ್ಟಿಲ್ಲೇಷನ್) ಉಂಟಾಗುವ ಆವಿಯನ್ನು ಶೈತ್ಯಗೊಳಿಸಿದಾಗ ಸಾಂದ್ರಿಸುವ ದ್ರಾವಣದಲ್ಲಿ ಅಮೋನಿಯ ಹೆಚ್ಚಾಗಿರುತ್ತದೆ. ಅಮೋನಿಯವನ್ನು ಔದ್ಯೋಗಿಕ ಪ್ರಮಾಣದಲ್ಲಿ ಈ ರೀತಿ ತಯಾರಿಸುತ್ತಾರೆ. ಈ ದ್ರಾವಣದಲ್ಲಿ ಅಮೋನಿಯಂ ಮತ್ತು ಅದರ ಕೆಲವು ಲವಣಗಳು ಕರಗಿರುತ್ತವೆ. ಹಬೆಯ ಸಹಾಯದಿಂದ ಈ ದ್ರಾವಣವನ್ನು ಕಾಯಿಸಿದಾಗ, ಅಮೋನಿಯ ಹೊರಬರುತ್ತದೆ ಮತ್ತು ಅಮೋನಿಯಂ ಕಾರ್ಬೊನೇಟ್ ವಿಭಜಿತವಾಗುತ್ತದೆ. ಅಮೋನಿಯದ ಬಿಡುಗಡೆ ನಿಂತಾಗ, ಸುಣ್ಣವನ್ನು ಸೇರಿಸಿ ಮತ್ತೆ ಕಾಯಿಸುವರು. ಇದರಿಂದ ಉಳಿದ ಅಮೋನಿಯಂ ಲವಣಗಳೆಲ್ಲವೂ ವಿಭಜಿತವಾಗಿ, ಅಮೋನಿಯ ಬಿಡುಗಡೆಯಾಗುವುದು. ಹೀಗೆ ಎರಡು ಘಟ್ಟಗಳಲ್ಲಿ ಬರುವ ಅಮೋನಿಯವನ್ನು ಸಾಮಾನ್ಯವಾಗಿ ಸಲ್ಫ್ಯೂರಿಕ್ ಆಮ್ಲದಿಂದ ಹೀರಿಸಲಾಗುತ್ತದೆ. ಇದರಿಂದ ಅಮೋನಿಯಂ ಸಲ್ಫೇಟ್‌ನ ದ್ರಾವಣ ಬರುವುದು. ದ್ರಾವಣದಿಂದ ಲವಣದ ಹರಳುಗಳನ್ನು ಪಡೆಯಬಹುದು.

ಸಯನಮೈಡ್ ವಿಧಾನ: ವಿದ್ಯುಚ್ಛಕ್ತಿಯ ಸಹಾಯದಿಂದ ೧೧೦೦ ಸೆಂ.ಗ್ರೇ.ಗೆ ಕಾಯಿಸಿದ ಕ್ಯಾಲ್ಸಿಯಂ ಕಾರ್ಬೈಡ್ ಪುಡಿಯ ಮೇಲೆ ಸಾರಜನಕವನ್ನು ಹಾಯಿಸಿದರೆ, ಕ್ಯಾಲ್ಸಿಯಂ ಸಯನಮೈಡ್ ಎಂಬ ಪದಾರ್ಥ ಉತ್ಪನ್ನವಾಗುತ್ತದೆ.

CaC2 + N2 = CaCN2 + C

ಕ್ಯಾಲ್ಸಿಯಂ ಸಯನಮೈಡ್ CaCN2 ಮತ್ತು ಇಂಗಾಲದ (C) ಈ ಮಿಶ್ರಣಕ್ಕೆ ನೈಟ್ರೋಲಿಮ್ ಎಂದು ಹೆಸರು. ಇದನ್ನು ಸಸ್ಯಪೋಷಕವಾಗಿ ಉಪಯೋಗಿಸುವರು.

ಕ್ಯಾಲ್ಸಿಯಂ ಸಯನಮೈಡನ್ನು ಕಾಯಿಸಿ ಹೆಚ್ಚಿನ ಒತ್ತಡದಲ್ಲಿ ನೀರಿನ ಹಬೆಯನ್ನು ಅದರ ಮೇಲೆ ಹಾಯಿಸಿದರೆ, ಅಮೋನಿಯ ಉತ್ಪನ್ನವಾಗುವುದು.

CaCN2 + 3H2O = CaCO3 + 2NH3

ವಿಧಾನ ೪: ಪ್ರಯೋಗಶಾಲೆಯ ಮಟ್ಟದ ವಿಧಾನಗಳಲ್ಲಿ, ಅಮೋನಿಯಂ ಲವಣಗಳನ್ನು ಕ್ಷಾರಗಳೊಡನೆ ಕಾಯಿಸುವುದು ಮತ್ತು ಲೋಹ ನೈಟ್ರೈಡ್‌ಗಳ ಜಲವಿಶ್ಲೇಷಣ (ಹೈಡ್ರೊಲಿಸಿಸ್) ಮುಖ್ಯವಾದುವು.

2NH4Cl + CaO → 2NH3 + CaCl2 + H2O

Mg3N2 + 6H2O → 2NH3 + 3Mg(OH)2

ನೈಟ್ರೇಟ್‌ಗಳೆಂಬ ಲವಣಗಳ ಅಪಕರ್ಷಣದಿಂದಲೂ (ರಿಡಕ್ಷನ್) ಅಮೋನಿಯವನ್ನು ಪಡೆಯಬಹುದು.

ಗುಣಗಳು[ಬದಲಾಯಿಸಿ]

ಅಮೊನಿಯವು ನೀರಿನಲ್ಲಿ ಕರಗಿ ಅಮೊನಿಯಮ್ ಹೈಡ್ರಾಕ್ಸೈಡ್ ಆಗುತ್ತದೆ. ನೀರಿನಲ್ಲಿ ಕರಗಿರುವಾಗ ಹೆಚ್ಚು ರಾಸಾಯನಿಕಗಳೊಂದಿಗೆ ವರ್ತಿಸುತ್ತದೆ. ಅಮೊನಿಯಮ್ ಹೈಡ್ರಾಕ್ಸೈಡ್ ಅಮ್ಲಗಳನ್ನು ಸ್ಥಿರೀಕರಿಸಿ ಆಯಾಯ ಅಮೊನಿಯ ಲವಣಗಳನ್ನಾಗಿ ಪರಿವರ್ತಿಸುತ್ತದೆ. ಈ ಅನಿಲವನ್ನು ಒತ್ತಿ ಶೈತ್ಯಗೊಳಿಸಿ ಸುಲಭವಾಗಿ ದ್ರವರೂಪಕ್ಕೆ ತರಬಹುದು. ಅಮೊನಿಯವು -೩೩.೩೫°C,ಯಲ್ಲಿ ದ್ರವದಿಂದ ಅನಿಲವಾಗುತ್ತದೆ. ಸುಮಾರು -೭೭.೭ °C ಯಲ್ಲಿ ಘನರೂಪಕ್ಕೆ ಬರುತ್ತದೆ. ಪುನಹ ಘನರೂಪದಿಂದ ಅನಿಲ ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ ಉಷ್ಣತೆಯನ್ನು ಹೀರುತ್ತದೆ. ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.[೧]

ಸಾಮಾನ್ಯವಾಗಿ ಅಮೋನಿಯ ದಹನಾನುಕೂಲಿಯಲ್ಲ. ಆದರೆ ಗಾಳಿಯಲ್ಲಿ ಅಥವಾ ಆಮ್ಲಜನಕದಲ್ಲಿ ಹಳದಿಬಣ್ಣದ ಜ್ವಾಲೆಯೊಡನೆ ಉರಿಯುತ್ತದೆ.

4NH3 + 3O2 → 2N2 + 6H2O

ಅನೇಕ ಆಕ್ಸೈಡುಗಳು ಅಮೋನಿಯವನ್ನು ಉತ್ಕರ್ಷಿಸುತ್ತವೆ.

3CuO + 2NH3 → 3Cu + N2 + 3H2O

ಪ್ಲಾಟಿನಂ ತಂತಿಬಲೆಯನ್ನು (ಗಾಝ್) ವೇಗವರ್ಧಕವಾಗಿ ಬಳಸಿದಾಗ, ಅಮೋನಿಯವನ್ನು ನೈಟ್ರಿಕ್ ಆಮ್ಲಕ್ಕೆ ಉತ್ಕರ್ಷಿಸಬಹುದು.

4NH3 + 5O2 → 4NO + 6H2O

2NO + O2​ → 2NO2

3NO2​ + H2​O → 2HNO3 ​+ NO

ಈ ಕ್ರಿಯೆ ನೈಟ್ರಿಕ್ ಆಮ್ಲದ ತಯಾರಿಕೆಯ ವಿಧಾನವೊಂದಕ್ಕೆ ಆಧಾರವಾಗಿದೆ.

ಸಾಮಾನ್ಯ ಉಷ್ಣತೆಯಲ್ಲಿ ಅಮೋನಿಯ ವಿಭಜನೆ ಹೊಂದುವುದಿಲ್ಲ. ಆದರೆ ೪೫೦-೫೦೦ ಸೆಂ. ಗ್ರೇ. ಉಷ್ಣತೆಯಲ್ಲಿ ವಿಭಜಿತವಾಗಿ ಸಾರಜನಕ ಮತ್ತು ಜಲಜನಕಗಳನ್ನು ಕೊಡುವುದು.

ದ್ರವಿತ ಅಮೋನಿಯವನ್ನು ವಿದ್ಯುದಣುಕಾರಕವಾದ ದ್ರಾವಕವಾಗಿ (ಅಯೊನೈಜ಼ಿಂಗ್ ಸಾಲ್ವೆಂಟ್) ಅನೇಕ ಪ್ರಯೋಗಗಳಲ್ಲಿ ಬಳಸಲಾಗುತ್ತದೆ. ಸೋಡಿಯಂ ಮತ್ತು ಪೊಟ್ಯಾಸಿಯಂ ಲೋಹಗಳು ಅಮೋನಿಯ ದ್ರವದಲ್ಲಿ ವಿಲೀನವಾಗುತ್ತವೆ. ಪೊಟ್ಯಾಸಿಯಂ ನಿಧಾನವಾಗಿ ಪೊಟ್ಯಾಸಿಯಂ ಅಮೈಡನ್ನು ಕೊಡುತ್ತದೆ.

2K + 2NH3 → 2KNH2 + H2

ಕ್ಲೋರಿನ್, ಬ್ರೋಮಿನ್, ಅಯೊಡೀನ್‌ಗಳು ಅಮೋನಿಯದೊಡನೆ ರಾಸಾಯನಿಕವಾಗಿ ವರ್ತಿಸುತ್ತವೆ.

3Cl2 + 8NH3 → 6NH4Cl + N2

2NH3 + 3I2 → NI3NH3 + 3HI

ಅಮೋನಿಯ ಅನೇಕ ಸಂಕಲಿತವಸ್ತುಗಳನ್ನು (ಅಡಿಷನ್ ಕಾಂಪೌಂಡ್ಸ್) ಕೊಡುತ್ತದೆ. ಇವನ್ನು ಅಮೋನಿಯ ಸಂಯುಕ್ತಗಳೆಂದು (ಅಮೋನಿಯೇಟ್) ಕರೆಯುವುದೂ ಉಂಟು.

ನೀರಿನಲ್ಲಿ ಅಮೋನಿಯ ದ್ರಾವಣ ಕ್ಷಾರೀಯವಾಗಿರುತ್ತದೆ. ನೀರು ಮತ್ತು ಅಮೋನಿಯಗಳ ನಡುವಿನ ಕ್ರಿಯೆಯನ್ನು ಈ ರೀತಿ ಸೂಚಿಸಬಹುದು.

NH3 + H2O → NH4OH → NH3+ + OH-

← ←

ಅಮೋನಿಯ ದ್ರಾವಣ ಹೈಡ್ರೊಕ್ಲೋರಿಕ್ ಆಮ್ಲ (HCl) ನೈಟ್ರಿಕ್ ಆಮ್ಲ (HNO3) ಸಲ್ಫ್ಯೂರಿಕ್ ಆಮ್ಲ (H2SO4) ಇವುಗಳೊಡನೆ ವರ್ತಿಸಿ, ಈ ಆಮ್ಲಗಳ ಲವಣಗಳನ್ನು ಕೊಡುತ್ತದೆ- NH4Cl, NH4NO3, (NH4)2SO4. NH4 ಎಂಬ ಸಮೂಹವನ್ನು ಅಮೋನಿಯಂ ರ‍್ಯಾಡಿಕಲ್ ಎಂದು ಕರೆಯುವರು.[೨]

ಅಮೋನಿಯ ಅನೇಕ ಸಂಕೀರ್ಣ (ಕಾಂಪ್ಲೆಕ್ಸ್) ಲವಣಗಳನ್ನು ಕೊಡುತ್ತದೆ. ಉದಾ : Cu(NH3)4SO4. ಇಂಥ ಸಂಕೀರ್ಣಗಳನ್ನು ಅಮೀನ್‌ಗಳು ಎಂದೂ ಕರೆಯುವರು.

ಈ ಸಂಕಲನ ಕ್ರಿಯೆಗಳಲ್ಲಿ ಅಮೋನಿಯ ಅಣು ಇತರ ಅಣು ಅಥವಾ ವಿದ್ಯುದಂಶಯುಕ್ತವಾದ ಕಣಕ್ಕೆ (ಅಯಾನ್) ಸಂಯೋಜಿತವಾಗುವುದು. ಈ ಕ್ರಿಯೆಗಳನ್ನು ಅಮೊನೇಷನ್ ಎಂದು ಕರೆಯುವರು.

ಪಲ್ಲಟನ ಕ್ರಿಯೆಗಳು (ಸಬ್‌ಸ್ಟಿಟ್ಯೂಷನ್ ರಿಯಾಕ್ಷನ್ಸ್) ಅಮೋನಿಯ ಭಾಗವಹಿಸುವ ಇನ್ನೊಂದು ಬಗೆಯ ಕ್ರಿಯೆಗಳು. ಇವಕ್ಕೆ ಅಮೋನೋಲಿಸಿಸ್ ಎಂದೂ ಹೆಸರುಂಟು. ಈ ಕ್ರಿಯೆಗಳಲ್ಲಿ ಇನ್ನೊಂದು ಅಣುವಿನಲ್ಲಿನ ಒಂದು ಅಥವಾ ಹೆಚ್ಚಿಗೆ ಪರಮಾಣುಗಳ ಪಲ್ಲಟನ ಅಮೈಡ್ (-NH2), ಇಮೈಡ್ (=NH) ಅಥವಾ ನೈಟ್ರೈಡ್‌ಗಳಿಂದ (≡N) ನಡೆಯುವುದು. ಉದಾಹರಣೆಗಾಗಿ,

HgCl2 + 2NH3 → Hg(NH2)Cl + NH4Cl

ಅಮೋನಿಯ ಭಾಗವಹಿಸುವ ಮೂರನೆಯ ಬಗೆಯ ಕ್ರಿಯೆ ಉತ್ಕರ್ಷಣ-ಅಪಕರ್ಷಣ (ಆಕ್ಸಿಡೇಷನ್-ರಿಡಕ್ಷನ್). ಉದಾಹರಣೆ-ಅಮೋನಿಯದ ಉರಿಯುವಿಕೆ.

ಉಪಯೋಗಗಳು[ಬದಲಾಯಿಸಿ]

ಬಹುವಿಧವಾದ ಉಪಯೋಗಗಳ ದೆಸೆಯಿಂದ ಅಮೋನಿಯವನ್ನು ಅಧಿಕಪ್ರಮಾಣದಲ್ಲಿ ತಯಾರಿಸುತ್ತಿದ್ದಾರೆ. ಅಮೊನಿಯವು ರಸಗೊಬ್ಬರ ತಯಾರಿಕೆಯಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿದೆ.[೩] ಅಮೋನಿಯದ ಉತ್ಕರ್ಷಣದಿಂದ ನೈಟ್ರಿಕ್ ಆಮ್ಲವನ್ನು ಈಗ ಹೆಚ್ಚಾಗಿ ತಯಾರಿಸುತ್ತಿದ್ದಾರೆ. ಈ ನೈಟ್ರಿಕ್ ಆಮ್ಲ ಟಿ.ಎನ್.ಟಿ., ನೈಟ್ರೊಗ್ಲಿಸರೀನ್, ನೈಟ್ರೊ ಸೆಲ್ಯುಲೋಸ್, ಅಮೋನಿಯಂ ನೈಟ್ರೇಟ್ ಮುಂತಾದ ಆಸ್ಫೋಟಕ ಪದಾರ್ಥಗಳ ತಯಾರಿಕೆಯಲ್ಲಿ ಉಪಯುಕ್ತವಾಗಿದೆ. ಅಮೋನಿಯಂ ನೈಟ್ರೇಟನ್ನು ರಾಸಾಯನಿಕ ಗೊಬ್ಬರವಾಗಿಯೂ ಬಳಸುವರು. ಸ್ಪೋಟಕಗಳ ತಯಾರಿಕೆಯಲ್ಲಿ ಅಮೊನಿಯ ವ್ಯಾಪಕವಾಗಿ ಬಳಕೆಯಲ್ಲಿರುವ ಇನ್ನೊಂದು ಕೈಗಾರಿಕೆ. ನೈಲಾನ್, ರೆಯಾನ್ ಮುಂತಾದ ಕೃತಕ ನಾರಿನ ಉತ್ಪಾದನೆಯಲ್ಲಿ, ಬಟ್ಟೆ,ಚರ್ಮ ಮುಂತಾದವುಗಳಿಗೆ ಬಣ್ಣಕೊಡಲು ಉಪಯೋಗವಾಗುತ್ತದೆ. ಮಂಜುಗಡ್ಡೆ ತಯಾರಿಸಲು ರೆಫ್ರಿಜಿರೆಶನ್ ಪ್ಲಾಂಟ್ನಲ್ಲಿ ಉಪಯೊಗಿಸುತ್ತಾರೆ ಹಾಗೂ ಹಲವಾರು ಔಷಧಗಳಲ್ಲಿ, ಹಲವಾರು ರಾಸಾಯನಿಕಗಳ ತಯಾರಿಕೆಯಲ್ಲಿಯೂ ಬಳಕೆಯಲ್ಲಿದೆ.

ಅಮೋನಿಯ ಮತ್ತು ಇಂಗಾಲದ ಡೈ ಆಕ್ಸೈಡ್ (CO2) ಇವುಗಳಿಂದ ಯೂರಿಯ [CO(NH2)2] ಎಂಬ ಪದಾರ್ಥವನ್ನು ತಯಾರಿಸಬಹುದು. ಯೂರಿಯ ಉತ್ತಮವಾದ ಫಲವತ್ಕಾರಿ. ಇದು ಪ್ಲಾಸ್ಟಿಕ್‌ಗಳ ತಯಾರಿಕೆಗೆ ಮೂಲ.

ಅಮೋನಿಯಂ ಸಲ್ಫೇಟ್ ಬಹು ಮುಖ್ಯವಾದ ರಾಸಾಯನಿಕ ಗೊಬ್ಬರ. ಅಮೋನಿಯ ಅನಿಲವನ್ನೇ ಸಲ್ಫ್ಯೂರಿಕ್ ಆಮ್ಲದ ಮೂಲಕ ಹಾಯಿಸುವುದು ಇದನ್ನು ತಯಾರಿಸುವ ಒಂದು ವಿಧಾನ. ಇಂಗಾಲದ ಡೈ ಆಕ್ಸೈಡ್ ಮತ್ತು ಅಮೋನಿಯಗಳನ್ನು ನೀರಿನಲ್ಲಿ ನಿಲಂಬಿಸಿರುವ (ಸಸ್ಪೆನ್ಷನ್) ಕ್ಯಾಲ್ಸಿಯಂ ಸಲ್ಫೇಟ್ ಮೂಲಕ ಹಾಯಿಸುವುದು ಇನ್ನೊಂದು ವಿಧಾನ.

CaSO4 + 2NH3 + H2O + CO2 → (NH4)2SO4 + CaCO3

ಅಮೋನಿಯಂ ಕ್ಲೋರೈಡ್, ಅಮೋನಿಯಂ ಕಾರ್ಬೊನೇಟ್ ಉಪಯುಕ್ತವಾದ ಇತರ ಅಮೋನಿಯಂ ಲವಣಗಳು.

ಸೋಡಿಯಂ ಕಾರ್ಬೊನೇಟ್ ಎಂಬ ಉಪಯುಕ್ತ ಪದಾರ್ಥದ ತಯಾರಿಕೆಯಲ್ಲಿಯೂ (ಸಾಲ್ವೆ ವಿಧಾನ) ಔಷಧಿಗಳು, ಬಣ್ಣಗಳೇ ಮೊದಲಾದ ಅನೇಕ ಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿಯೂ ಅಮೋನಿಯದ ಉಪಯೋಗವಿದೆ. ಕ್ಲೋರಿನ್ ಮತ್ತು ಅಮೋನಿಯ ಮಿಶ್ರಣವನ್ನು ನೀರಿನ ಶುದ್ಧೀಕರಣದಲ್ಲಿ ಕ್ರಿಮಿನಾಶಕ್ಕಾಗಿ ಉಪಯೋಗಿಸುವರು.

ಉಲ್ಲೇಖಗಳು[ಬದಲಾಯಿಸಿ]

[೪] [೫] [೬]

  1. Max Appl (2006). "Ammonia". Ammonia, in Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a02_143.pub2. ISBN 978-3527306732.
  2. Chisholm 1911, p. 862.
  3. "Ammonia Technology Roadmap – Analysis".
  4. https://pubchem.ncbi.nlm.nih.gov/compound/ammonia
  5. Wikidata
  6. https://www.merriam-webster.com/dictionary/ammonia

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮೊನಿಯ&oldid=1147057" ಇಂದ ಪಡೆಯಲ್ಪಟ್ಟಿದೆ