ವಿಷಯಕ್ಕೆ ಹೋಗು

ಮಿಯಾಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಯೋಸಿಸ್ ಒಂದು ಬಗೆಯ ಜೀವಕೋಶ ವಿಭಜನೆ. ಪುನರುತ್ಪತ್ತಿಗಾಗಿ ಲೈಂಗಿಕ ಪ್ರಕ್ರಿಯೆಯನ್ನು ಬಳಸುವ ಪ್ರಾಣಿಗಳು, ಸಸ್ಯಗಳು ಮತ್ತು ಶಿಲೀಂಧ್ರಗಳಲ್ಲಿ ಮಿಯೋಸಿಸ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜೀವಕೋಶವು ಎರಡಾಗಿ ಹೋಳಾದಾಗ ಉತ್ಪನ್ನವಾದ ಕೋಶಗಳಲ್ಲಿ ಕ್ರೋಮೋಸೋಮ್‍ಗಳ ಸಂಖ್ಯೆ ಅರ್ಧವಾದರೆ ಆ ಪ್ರಕ್ರಿಯೆಗೆ ಮಿಯೋಸಿಸ್ ಎಂದು ಕರೆಯುತ್ತಾರೆ. ಮಿಯೋಸಿಸ್ ಪ್ರಕ್ರಿಯೆಯಲ್ಲಿ ದೋಷಗಳು ಉಂಟಾದಾಗ ಜೀವಿಯ ಬೆಳವಣಿಗೆ ಕುಂಠಿತವಾಗುತ್ತದೆ. ಗರ್ಭಪಾತಕ್ಕೆ ಮತ್ತು ಮಗುವಿನಲ್ಲಿ ಸರಿಯಾದ ಬೆಳವಣಿಗೆ ಇಲ್ಲದಿರುವುದಕ್ಕೆ ದೋಷಪೂರ್ಣ ಮಿಯಾಸಿಸ್ ಪ್ರಕ್ರಿಯೆ ಕಾರಣ.

ಮಿಯಾಸಿಸ್ ಪ್ರಕ್ರಿಯೆ

ಚಿತ್ರದಲ್ಲಿ ತೋರಿಸಿದಂತೆ ಒಂದು ಜೀವಕೋಶವು ಮಿಯಾಸಿಸ್ ಪ್ರಕ್ರಿಯೆಯ ಮೂಲಕ ನಾಲ್ಕು ಜೀವಕೋಶಗಳಲ್ಲಿ ವಿಭಜನೆಯಾಗುತ್ತದೆ. ಉದಾಹರಣೆಗಾಗಿ ಎರಡು ನೀಲಿ ಮತ್ತು ಎರಡು ಕೆಂಪು ವರ್ಣತಂತುಗಳನ್ನು ತೋರಿಸಲಾಗಿದೆ. ಜೀವಕೋಶವು ವಿಭಜನೆಯಾಗುವ ಮುನ್ನ ವರ್ಣತಂತುಗಳ (ಕ್ರೋಮೋಸೋಮ್) ಸಂಖ್ಯೆ ಮೊದಲು ದ್ವಿಗುಣವಾಗುತ್ತದೆ. ಒಂದೇ ಬಗೆಯ ಎರಡು ವರ್ಣತಂತುಗಳ ನಡುವೆ ವಂಶವಾಹಿಗಳ (ಜೀನ್) ಆದಾನ-ಪ್ರದಾನ ನಡೆಯುತ್ತದೆ. ಇದಕ್ಕೆ ಕ್ರೋಮೋಸೋಮ್ ಕ್ರಾಸೋವರ್ ಎಂಬ ಹೆಸರಿದೆ. ಚಿತ್ರದಲ್ಲಿರುವ ಜೀವಕೋಶದಲ್ಲಿ ಮೊದಲ ಘಟ್ಟದ ನಂತರ ಎಂಟು ವರ್ಣತಂತುಗಳಿರುವುದು ಕಾಣಬಹುದು. ಆದಾನ-ಪ್ರದಾನದ ನಂತರ ಮಿಶ್ರ ಬಣ್ಣದ ವರ್ಣತಂತುಗಳು ಇರುವುದೂ ನೋಡಬಹುದು. ಇದಾದ ನಂತರ ಮಿಯಾಸಿಸ್ ಮೊದಲ ಘಟ್ಟದಲ್ಲಿ ಜೀವಕೋಶವು ಎರಡಾಗಿ ವಿಭಜನೆಗೊಳ್ಳುತ್ತದೆ. ಎರಡೂ ಜೀವಕೋಶಗಳಲ್ಲಿ ನಾಲ್ಕು ವರ್ಣತಂತುಗಳಿರುವುದನ್ನು ಕಾಣುತ್ತೇವೆ. ದ್ವಿತೀಯ ಮಿಯಾಸಿಸ್ ಘಟ್ಟದಲ್ಲಿ ಎರಡೂ ಜೀವಕೋಶಗಳು ಮತ್ತೆ ವಿಭಜನೆಗೊಳ್ಳುತ್ತವೆ. ಹುಟ್ಟಿಕೊಳ್ಳುವ ನಾಲ್ಕು ಮರಿ ಜೀವಕೋಶಗಳಲ್ಲಿ ತಲಾ ಎರಡು ವರ್ಣತಂತುಗಳಿವೆ ಎಂಬುದನ್ನು ಗಮನಿಸಿ.

ವರ್ಣತಂತುಗಳ ಸಂಖ್ಯೆ ಅರ್ಧವಾಗುವ ಕಾರಣ ಹುಟ್ಟಿಕೊಳ್ಳುವ ಮರಿಕೋಶಗಳು ಸೇರ್ಪಡೆಯಾಗಲು ಸಾಧ್ಯ. ಇದಕ್ಕೆ ಗರ್ಭಾದಾನ ಎನ್ನುತ್ತಾರೆ (ಫರ್ಟಿಲೈಸೇಷನ್). ಸೇರ್ಪಡೆಯಿಂದ ಹುಟ್ಟಿಕೊಳ್ಳುವ ಜೈಗೋಟ್ ಎಂಬ ಕೋಶದಲ್ಲಿ ತಂದೆಯಿಂದ ಮತ್ತು ತಾಯಿಯಿಂದ ಬಳುವಳಿಯಾಗಿ ಪಡೆದ ವರ್ಣತಂತುಗಳು ಸಮಾನಸಂಖ್ಯೆಯಲ್ಲಿ ಇರುತ್ತವೆ. ಮಿಯಾಸಿಸ್ ಮತ್ತು ಗರ್ಭಾದಾನ ಪ್ರಕ್ರಿಯೆಗಳು ಒಂದರ ನಂತರ ಒಂದು ನಡೆದಾಗ ಹುಟ್ಟುವ ಜೀವಕೋಶದಲ್ಲಿ ವರ್ಣತಂತುಗಳ ಸಂಖ್ಯೆ ಮೊದಲಿನ ಜೀವಕೋಶದಲ್ಲಿ ಇದ್ದಷ್ಟೇ ಇರುತ್ತದೆ. ಉದಾಹರಣೆಗೆ ಮನುಷ್ಯನ ಒಂದು ಜೀವಕೋಶದಲ್ಲಿ ೨೩ ಜೊತೆ ವರ್ಣತಂತುಗಳು ಇರುತ್ತವೆ (ಒಟ್ಟು ೪೬). ಇವುಗಳಲ್ಲಿ ೨೩ ತಂದೆಯಿಂದ ಮತ್ತು ೨೩ ತಾಯಿಯಿಂದ ಬಳುವಳಿ ಪಡೆದದ್ದು. ಮಿಯಾಸಿಸ್ ಪ್ರಕ್ರಿಯೆಯ ಮೂಲಕ ಹೆಣ್ಣು ಅಂಡಕೋಶವನ್ನೂ ಮತ್ತು ಗಂಡು ವೀರ್ಯಕೋಶವನ್ನೂ ಸೃಷ್ಟಿಸುತ್ತಾರೆ. ಈ ವಿಶೇಷ ಕೋಶಗಳಲ್ಲಿ ತಲಾ ೨೩ ವರ್ಣತಂತುಗಳು ಮಾತ್ರ ಇರುತ್ತವೆ. ಒಂದು ಅಂಡಕೋಶವು ಒಂದು ವೀರ್ಯಾಕೋಶದೊಂದಿಗೆ ಸೇರ್ಪಡೆಯಾದಾಗ ಗರ್ಭಾದಾನ ಪ್ರಕ್ರಿಯೆ ಉಂಟಾಗುತ್ತದೆ. ಆಗ ಹುಟ್ಟುವ ಜೈಗೋಟ್ ಎಂಬ ಜೀವಕೋಶದಲ್ಲಿ ೨೩ ಜೊತೆ ವರ್ಣತಂತುಗಳಿರುತ್ತವೆ. ಹೀಗೆ ಮಿಯಾಸಿಸ್ ಎಂಬ ಪ್ರಕ್ರಿಯೆ ಲೈಂಗಿಕ ಪುನರುತ್ಪತ್ತಿಯಲ್ಲಿ ಬಹಳ ಮುಖ್ಯವಾದ ಜೈವಿಕ ಪ್ರಕ್ರಿಯೆ.

ಮೈಟಾಸಿಸ್ ಮತ್ತು ಮಿಯಾಸಿಸ್[ಬದಲಾಯಿಸಿ]

ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಣ ವ್ಯತ್ಯಾಸವನ್ನು ಕೆಳಗೆ ಕಾಣಿಸಿದ ಕೋಷ್ಟಕವು ಸ್ಪಷ್ಟಪಡಿಸುತ್ತದೆ.[೧]

ಮಿಯಾಸಿಸ್ ಮೈಟಾಸಿಸ್
ಒಟ್ಟು ಪರಿಣಾಮ ಸಾಮಾನ್ಯವಾಗಿ ನಾಲ್ಕು ಮರಿಕೋಶಗಳು, ಪ್ರತಿಯೊಂದರಲ್ಲೂ ಮೂಲಕೋಶಕ್ಕೆ ಹೋಲಿಸಿದರೆ ಅರ್ಧದಷ್ಟು ವರ್ಣತಂತುಗಳು ಎರಡು ಜೀವಕೋಶಗಳು, ಎರಡರಲ್ಲೂ ಮೂಲ ಜೀವಕೋಶದಲ್ಲಿ ಇದ್ದಷ್ಟೇ ವರ್ಣತಂತುಗಳು
ಉದ್ದೇಶ ಲೈಂಗಿಕ ಪುನರುತ್ಪತ್ತಿ, ಅಂಡಕೋಶ/ವೀರ್ಯಾಕೋಶದ ಸೃಷ್ಟಿ ಜೀವಕೋಶಗಳ ಉತ್ಪತ್ತಿ, ಬೆಳವಣಿಗೆ, ದುರಸ್ತಿ ಪ್ರಕ್ರಿಯೆ, ಅಲೈಂಗಿಕ ಪುನರುತ್ಪತ್ತಿ
ಎಲ್ಲಿ ನಡೆಯುತ್ತದೆ? ನ್ಯೂಕ್ಲಿಯಸ್-ಯುಕ್ತ ಜೀವಿಗಳ ಪುನರುತ್ಪತ್ತಿ ಜೀವಕೋಶಗಳಲ್ಲಿ (ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು ಮತ್ತು ಕೆಲವು ಏಕಕೋಶ ಜೀವಿಗಳಲ್ಲಿ ಕೂಡಾ [೨][೩] ನ್ಯೂಕ್ಲಿಯಸ್-ಯುಕ್ತ ಎಲ್ಲಾ ಜೀವಕೋಶಗಳಲ್ಲಿ
ಘಟ್ಟಗಳು ಒಟ್ಟು ಎಂಟು ಘಟ್ಟಗಳಲ್ಲಿ ನಡೆಯುವ ಕ್ರಿಯೆ ಐದು ಘಟ್ಟಗಳಲ್ಲಿ ನಡೆಯುವ ಕ್ರಿಯೆ
ಮೂಲಕೋಶದ ತದ್ರೂಪವೇ? ಇಲ್ಲ ಹೌದು
ವರ್ಣಸಂಕರ ನಡೆಯುತ್ತದೆಯೇ? ಸಾಧಾರಣವಾಗಿ ಅಪರೂಪವಾಗಿ
ಒಂದೇಬಗೆಯ ವರ್ಣತಂತುಗಳ ಜೊತೆಯಾಗುವುದೇ? ಹೌದು ಇಲ್ಲ

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "How Cells Divide". PBS. Public Broadcasting Service. Retrieved 6 December 2012.
  2. Heywood, P.; Magee, P.T. (1976). "Meiosis in protists. Some structural and physiological aspects of meiosis in algae, fungi, and protozoa". Bacteriological Reviews. 40 (1): 190–240.
  3. Raikov, I. B. (1995). "Meiosis in protists: recent advances and persisting problems". Europ J Protistol. 31: 1–7. doi:10.1016/s0932-4739(11)80349-4.