ಅವಿಸೆನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವಿಸೆನ್ನನ ಒಂದು ಚಿತ್ರ

೯೮೦-೧೦೩೭. ಅಬು-ಅಲಿ-ಅಲ್-ಹುಸೇನ್ ಇಬ್ನ್‌ ಅಬ್ದ್‌ ಅಲ್ಲಾ ಇಬ್ನ್‌ಸೀನ. ಪರ್ಷಿಯದ ತತ್ತ್ವಜ್ಞಾನಿ, ವೈದ್ಯ. ಇಸ್ಲಾಂ ಪ್ರಪಂಚದಲ್ಲೂ ಲ್ಯಾಟಿನ್ ನಡುಗಾಲದಲ್ಲೂ ಹೆಸರಾಗಿದ್ದವ. ಅರಬ್ಬೀ ಭಾಷೆಯಲ್ಲಿ ಈತನ ನಾಮಧೇಯ ಇಬ್ನ್‌ಸೀನ ಎಂದಿದ್ದು, ಯೆಹೂದ್ಯ ಭಾಷೆಯಲ್ಲಿ ಅವೆನ್ ಸೀನ್ ಎಂಬುದಾಗಿ, ತದನಂತರ ಲ್ಯಾಟಿನ್ ಭಾಷೆಯಲ್ಲಿ ಅವಿಸೆನ್ನ ಎಂದು ಪರಿವರ್ತನೆಯಾಯಿತು.

ಬದುಕು[ಬದಲಾಯಿಸಿ]

೯೮೦-೮೧ ರಲ್ಲಿ ತುರ್ಕಿಸ್ತಾನದ ಬುಖಾರ ಬಳಿಯ ಖಾರ್ ಮೈತಾನ್ ಎಂಬ ಹಳ್ಳಿಯಲ್ಲಿ ಹುಟ್ಟಿದ. ಚಿಕ್ಕವಯಸ್ಸಿನಲ್ಲಿಯೇ ಮುಸಲ್ಮಾನರ ಪವಿತ್ರಗ್ರಂಥ ಕುರಾನನ್ನು ವಿಶೇಷವಾಗಿ ಅಧ್ಯಯನ ಮಾಡಿದ. ಅನಂತರ ಭಾರತೀಯ ಗಣಿತಶಾಸ್ತ್ರವನ್ನು ವಿಶೇಷವಾಗಿ ಅಭ್ಯಾಸ ಮಾಡಿದ.

ಅವಿಸೆನ್ನ ೧೮ ರ ಹರೆಯಕ್ಕೇ ನುರಿತ ವೈದ್ಯನಾಗಿ ವೈದ್ಯರ ರಾಜಕುಮಾರನೆಂದು ಹೆಸರಾಗಿ, ತತ್ತ್ವಶಾಸ್ತ್ರಗಳ ಅಪಾರ ತಿಳಿವನ್ನು ಪಡೆದಿದ್ದ. ಸಮಾನಿದ್ ಸಾಮ್ರಾಜ್ಯ ೯೯೯ ರಲ್ಲಿ ಅಳಿದ ಮೇಲೆ ತನ್ನೂರು ಬಿಟ್ಟು ಅಲೆದಾಡಿದ. ಸು.೧೦೨೦ ರ ಹಮಾದಾನಿನ ವಜೀರನಾಗಿದ್ದ. ತನ್ನ ಕೊನೆಯ ೧೪ ವರ್ಷಗಳೂ ಇಸ್ಫಹಾನಿನ ದೊರೆ ಅಲಾ ಉದ್ದೌಲನೊಂದಿಗೆ ಇದ್ದು, ಅವನು ಹೋದಲ್ಲೆಲ್ಲ ಹಿಂಬಾಲಿಸುತ್ತ ಸೇನೆಯ ಕಾರ್ಯಾಚರಣೆಗಳಲ್ಲೂ ಭಾಗಿಯಾಗಿದ್ದ. ಕೊನೆಗೆ ಹಮದಾನಲ್ಲೇ ಸತ್ತ. ಇವನೊಬ್ಬ ಜಾದೂಗಾರನೆಂದು ಎಷ್ಟೋ ಕಾಲ ಜನ ನಂಬಿದ್ದರು.

ಈತ ಅಲ್ ಫಲಾ ಸಿಫ್ ತತ್ತ್ವಜ್ಞಾನಿಗಳ ಪಂಥಕ್ಕೆ ಸೇರಿದವನಾಗಿದ್ದು ಪಂಥದ ಮುಖ್ಯ ಸಂಸ್ಥಾಪಕರಾದ ಅಲ್ಕಿಂಡಿ ಮತ್ತು ಅಲ್ ಫಾರಾಬೀಗಳ ಅನುಯಾಯಿಯಾಗಿದ್ದ. ಈ ಪಂಥದವರು ನವೀನ ಪ್ಲೇಟೊ ತತ್ತ್ವದ ಅಭಿಪ್ರಾಯಗಳನ್ನು ವಿಶೇಷ ಒಪ್ಪುತ್ತಾರೆ. ಅವಿಸೆನ್ನ ಪವಾಡಪುರುಷನೆಂಬ ನಂಬಿಕೆ ಇತ್ತಲ್ಲದೆ ಇವನ ಬಗ್ಗೆ ತುರ್ಕಿ ಭಾಷೆಯಲ್ಲಿ ಅನೇಕ ಕಥೆಗಳಿವೆ.

ಈತ ಕೇವಲ ವಿಚಾರಪರನಾದುದರಿಂದ ನಡತೆ, ನೀತಿಗಳಿಗೆ ಅಷ್ಟಾಗಿ ಪುರಸ್ಕಾರ ಕೊಡಲಿಲ್ಲ. ಈತನಿಗೆ ಮದ್ಯಪಾನ, ಸುಖಾನ್ವೇಷಣೆ ಬಹು ಇಷ್ಟವಾಗಿತ್ತು. ಈತನ ಅಭಿಪ್ರಾಯಗಳನ್ನು ಅನೇಕ ಪೌರಸ್ತ್ಯ ಮುಸಲ್ಮಾನರು ಪ್ರತಿಭಟಿಸಿದ್ದಾರೆ.

ಗ್ರಂಥಗಳು[ಬದಲಾಯಿಸಿ]

ಪಾಶ್ಚಾತ್ಯರಿಗೆ ಗಣಿತದಲ್ಲಿ ಸೊನ್ನೆ ಮತ್ತು ಅಂಕಿಗಳ ಸ್ಥಾನವೈಶಿಷ್ಟ್ಯದ ಅರಿವು ಮೊದಲಾದದ್ದು ಈತನ ಮುಖೇನ. ಅವಿಸೆನ್ನ ಮತ್ತು ಅವಿರೊಯಿಜ಼್ ಭಾರತೀಯ ಪ್ರಾಚೀನ ಸಂಸ್ಕೃತಿಗಳನ್ನು ಪಾಶ್ಚಾತ್ಯರಿಗೆ ಪರಿಚಯ ಮಾಡಿಕೊಟ್ಟರು. ಅವಿಸೆನ್ನ ವೈದ್ಯಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳಲ್ಲಿಯೂ ಪ್ರವೀಣನಾಗಿದ್ದು ಅನೇಕ ಗ್ರಂಥಗಳನ್ನು ಬರೆದಿದ್ದಾನೆ.

ತರ್ಕಶಾಸ್ತ್ರ, ಭೌತಶಾಸ್ತ್ರ, ಮನಶ್ಶಾಸ್ತ್ರ, ಅಧ್ಯಾತ್ಮಶಾಸ್ತ್ರ, ಅಧ್ಯಾತ್ಮಯೋಗ ಮತ್ತು ನೀತಿಶಾಸ್ತ್ರಗಳ ಬಗ್ಗೆ ಈತ ಬರೆದಿದ್ದಾನೆ.

  • ತರ್ಕಶಾಸ್ತ್ರ ಸತ್ಯತೆಯ ಆದರ್ಶ ಧ್ಯೇಯಗಳನ್ನು ಕಂಡುಹಿಡಿಯುವುದಿಲ್ಲವಾದರೂ ಜನಸಾಮಾನ್ಯರು ಆಲೋಚನಾ ಕ್ರಿಯೆಯಲ್ಲಿ ಆಭಾಸಗಳಿಗೀಡಾಗದ ಹಾಗೆ ನೇತ್ಯರ್ಥಕ ರೂಪದಲ್ಲಿ ಸಹಾಯ ಮಾಡುತ್ತದೆಯೆಂದು ಈತ ಹೇಳುತ್ತಾನೆ.
  • ಭೌತಶಾಸ್ತ್ರದಲ್ಲಿ ಭೌತದ್ರವ್ಯ, ವಸ್ತುವಿನ ನೈಜತತ್ತ್ವ, ಮೂಲಸ್ವರೂಪ ಇತ್ಯಾದಿಗಳನ್ನು ಚರ್ಚಿಸಿದ್ದಾನೆ.
  • ಮನಶ್ಶಾಸ್ತ್ರದಲ್ಲಿ ಒಂದು ಕ್ರಮಬದ್ಧ ಶ್ರೇಣಿಯಲ್ಲಿ ಸಸ್ಯಸಂಬಂಧವಾದ ಬುದ್ಧಿ, ಪ್ರಾಣಿಸಂಬಂಧವಾದ ಬುದ್ಧಿ ಮತ್ತು ಮನುಷ್ಯ ಸಂಬಂಧವಾದ ವಿವೇಚನಾಯುತವಾದ ಬುದ್ಧಿ ಎಂಬ ಮೂರು ವಿಭಾಗಗಳಲ್ಲಿ ಬುದ್ಧಿಯನ್ನು ವಿವರಿಸುತ್ತಾನೆ.

ಬಹು ಮುಖ್ಯವಾಗಿ ಈತ ತತ್ತ್ವಶಾಸ್ತ್ರದಲ್ಲಿ ಆದಿಕಾರಣ (ಮೂಲಹೇತು), ಅವಶ್ಯಪರ ವಸ್ತು ಮತ್ತು ದೇವ ಈ ಅಭಿಪ್ರಾಯಗಳನ್ನು ಪ್ರತಿಪಾದಿಸುತ್ತಾನೆ. ಪರಮಾತ್ಮನನ್ನು ಸತ್ಯ, ಶಿವ, ಸುಂದರನೆಂದು ವರ್ಣಿಸುತ್ತಾನೆ.

ಇವನ ನಾಡನುಡಿಯಾದ ಪರ್ಷಿಯದಲ್ಲೂ ಬಹುಪಾಲು ಅರಬ್ಬಿಯಲ್ಲೂ ಇವನು ಬರೆದ ೨೧ ಮಹಾಗ್ರಂಥಗಳು, ೨೪ ಸಣ್ಣ ಗ್ರಂಥಗಳಲ್ಲಿ ಅನೇಕವು ಈಗಲೂ ಉಳಿದಿವೆ. ಇವನಲ್ಲಿ ಕಲಿತವನೊಬ್ಬ ಬರೆದ ಇವನ ಜೀವನ ಚರಿತ್ರೆಯೂ ಇವುಗಳಲ್ಲಿ ಸೇರಿದೆ.

ಬೆಳಕು, ಕಾವು, ಶಕ್ತಿ, ಚಲನೆಗಳಂಥ ಭೌತಿಕ, ರಾಸಾಯನಿಕ ವಿಚಾರಗಳಲ್ಲೂ ಖನಿಜಶಾಸ್ತ್ರದಲ್ಲೂ ಜ್ಯಾಮಿತಿಯಲ್ಲೂ ಅವಿಸೆನ್ನ ಮುನ್ನಡೆದಿದ್ದ. ಈತನ ಗ್ರಂಥಗಳಲ್ಲಿ ಅಲ್ ಕಾನೂನ್ ಫಿಲ್ತಿಬ್ (ವೈದ್ಯ ವಿಜ್ಞಾನ) ಅವಿಸೆನ್ನನನ್ನು ಅಪಾರ ಕೀರ್ತಿಗೇರಿಸಿದ, ದಶಲಕ್ಷ ಪದಗಳಿರುವ ವೈದ್ಯಕ ಮಹಾಗ್ರಂಥ. ಬರೆದಿಟ್ಟಿದ್ದ ಇವನ ಅನುಭವಗಳಲ್ಲಿ ಬಹುಪಾಲು ಇವನ ಅಲೆದಾಟಗಳಲ್ಲಿ ಕಳೆದುಹೋದರೂ ಈ ಕ್ರಮವರಿತ ವಿಶ್ವಕೋಶದಂತಿರುವ ತನ್ನ ವೈದ್ಯಗ್ರಂಥದಲ್ಲಿ ಬಹುಮಟ್ಟಿಗೆ ರೋಮ್ ಸಾಮ್ರಾಜ್ಯದ ಗ್ರೀಕ್ ವೈದ್ಯರ ಸಾಧನೆಗಳನ್ನೂ ಇತರ ಅರಬ್ಬೀ ಗ್ರಂಥಗಳನ್ನೂ ತನ್ನ ಅನುಭವಗಳೊಂದಿಗೆ ಸೇರಿಸಿದ್ದ. ಅಲ್ಲದೆ, ಚರ್ಮರೋಗ ವಿಜ್ಞಾನ, ಅಂಗರಚನಾವಿಜ್ಞಾನ, ಅಂಗಕ್ರಿಯಾವಿಜ್ಞಾನ, ಶಸ್ತ್ರವೈದ್ಯ, ಪ್ರಸೂತಿವಿಜ್ಞಾನ, ಮನೋರೋಗವಿಜ್ಞಾನ, ಔಷಧವಸ್ತು ವಿಜ್ಞಾನಗಳನ್ನೂ ಅಳವಡಿಸಿದ್ದ. ಶಸ್ತ್ರವೈದ್ಯವನ್ನು ವೈದ್ಯದಲ್ಲಿ ಒಂದು ಕಿರಿಯ ವಿಭಾಗವೆಂದು ಈತ ಗಣಿಸಿದ್ದ ರಿಂದ, ಹಲವಾರು ಶತಮಾನಗಳ ಕಾಲ ಆ ದಿಸೆಯ ಮುನ್ನಡೆ ಕುಂಟಿತು. ಈ ಗ್ರಂಥ ಇಸ್ಲಾಂ ಪ್ರಪಂಚದಲ್ಲಿ ಹೆಸರಾಗಿ ಈಗಲೂ ಮಾನ್ಯವಾಗಿದೆ, ಅಧಿಕೃತವಾಗಿದೆ. ೬ ಶತಮಾನಗಳ ಕಾಲ ಯುರೋಪಿನ ವಿಶ್ವವಿದ್ಯಾಲಯಗಳಲ್ಲೂ ಇದೇ ಪಠ್ಯಗ್ರಂಥವಾಗಿತ್ತು. ಕ್ರಿಮೋನದ ಗೆರಾರ್ಡ್ ೧೨ ನೇಯ ಶತಮಾನದಲ್ಲಿ ಇದನ್ನು ಲ್ಯಾಟಿನ್ನಿಗೆ ಅನುವಾದಿಸಿದ್ದು, ೧೫೦೦ ರ ಹೊತ್ತಿಗೆ ೧೫ ಬಾರಿ ಅಚ್ಚಾಗಿತ್ತು. ಬೆಲ್ಲುನೋದ ಆಂಡ್ರಿಯ ಅಲ್ಪಾಗೊ ಹೊಸದಾಗಿ ಮಾಡಿದ ಅನುವಾದ ೧೫೨೭ ರಲ್ಲೂ ಅನಂತರವೂ ಅಚ್ಚಾಯಿತು. ಅಚ್ಚಾದ ಅರಬ್ಬೀ ಗ್ರಂಥಗಳಲ್ಲಿ (೧೫೯೩) ಇದು ಎರಡನೆಯದು. ಅವಿಸೆನ್ನನ ಕೃತಿಗಳಲೆಲ್ಲಾ ಈ ಮಹಾಗ್ರಂಥ ಅತ್ಯಂತ ಕೀರ್ತಿಗಳಿಸಿತ್ತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: