ವಿಷಯಕ್ಕೆ ಹೋಗು

ಶವಪರೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೆಂಭ್ರಾಂಟ್ ರಚಿಸಿರುವ ಡಾ. ನಿಕೊಲೇಸ್ ಟ್ಯುಲ್ಪ್ ರವರ ಅಂಗವಿಜ್ಞಾನ ಪಾಠದಲ್ಲಿ ಶವಪರೀಕ್ಷೆಯನ್ನು ನಿರೂಪಿಸುತ್ತದೆ.

ಮರಣೋತ್ತರ ಪರೀಕ್ಷೆ' , ಮೃತದೇಹ ಪರೀಕ್ಷೆ' (ಮುಖ್ಯವಾಗಿ ಮನುಷ್ಯೇತರ ದೇಹಗಳು), ಆಟೊಪ್ಸಿಯಾ ಕಾಡವೆರುಮ್ , ಅಥವಾ ಒಬ್‍ಡಕ್ಷನ್ ಎಂದು ಕೂಡ ಕರೆಯಲ್ಪಡುವ ಒಂದು ಶವಪರೀಕ್ಷೆ- ಎಂದರೆ, ಸಾವಿಗೆ ಕಾರಣ ಮತ್ತು ಸಾವು ಸಂಭವಿಸಿದ ರೀತಿಯನ್ನು ನಿರ್ಧರಿಸಲು ಮತ್ತು ಇದ್ದಿರಬಹುದಾದ ಯಾವುದೇ ಕಾಯಿಲೆ ಅಥವಾ ಗಾಯವನ್ನು ಮೌಲ್ಯೀಕರಿಸಲು ಒಂದು ಹೆಣದ ಸಂಪೂರ್ಣ ಪರೀಕ್ಷೆಯನ್ನೊಳಗೊಂಡಿರುವ ಒಂದು ವೈದ್ಯಕೀಯ ವಿಧಾನ. ಇದನ್ನು ಪೆಥಾಲೊಜಿಸ್ಟ್ ಎಂದು ಕರೆಯಲಾಗುವ ಒಬ್ಬ ವಿಶೇಷ ವೈದ್ಯರು ನಿರ್ವಹಿಸುತ್ತಾರೆ.

ಶವಪರೀಕ್ಷೆಗಳನ್ನು ಕಾನೂನು ಅಗತ್ಯಕ್ಕಾಗಿ ಅಥವಾ ವೈದ್ಯಕೀಯ ಉದ್ದೇಶಗಳಿಗಾಗಿ ಮಾಡಲಾಗುತ್ತದೆ. ಉದಾಹರಣೆಗೆ, ಒಂದು ಸಾವಿಗೆ ಅಪರಾಧ ಕಾರಣವಾಗಿದ್ದರೆ ವೈದ್ಯಕೀಯ ಶವಪರೀಕ್ಷೆ ನಡೆಸಲಾಗುವುದು, ಹಾಗೂ ಒಂದು ವೈದ್ಯಕೀಯ ಅಥವಾ ಶೈಕ್ಷಣಿಕ ಶವಪರೀಕ್ಷೆಯನ್ನು ಸಾವಿಗೆ ವೈದ್ಯಕೀಯ ಕಾರಣಗಳನ್ನು ಕಂಡುಹಿಡಿಯಲು ನಡೆಸಲಾಗುವುದು ಹಾಗೂ ಇದನ್ನು ಅಪರಿಚಿತ ಸಾವು ಅಥವಾ ಸಂಶೊಧನೆ ಉದ್ದೇಶಗಳಿಗಾಗಿ ನಡೆಸಲಾಗುವುದು. ಶವಪರೀಕ್ಷೆಗಳನ್ನು ಇನ್ನೂ ಮುಂದೆ ವರ್ಗೀಕರಿಸಿ ಕೇವಲ ಬಾಹ್ಯ ಪರೀಕ್ಷೆ ಸಾಕಾಗುವಂತಹ ಪರೀಕ್ಷೆಗಳು ಮತ್ತು ದೇಹವನ್ನು ಛೇದಿಸಿ ಆಂತರಿಕ ಪರೀಕ್ಷೆ ಮಾಡುವಂತಹ ಪರೀಕ್ಷೆಗಳು ಎಂದು ವರ್ಗೀಕರಣ ಮಾಡಬಹುದು. ಕೆಲವು ಪ್ರಕರಣಗಳಲ್ಲಿ ಆಂತರಿಕ ಶವಪರೀಕ್ಷೆ ಮಾಡುವುದಕ್ಕೆ ಮೃತವ್ಯಕ್ತಿಯ ಹತ್ತಿರದ ಸಂಬಂಧಿಗಳ ಅನುಮತಿ ಬೇಕಾಗುತ್ತದೆ. ಆಂತರಿಕ ಶವಪರೀಕ್ಷೆ ಮಾಡಿದ ನಂತರ ಶವಕ್ಕೆ ಹೊಲಿಗೆ ಹಾಕುವ ಮೂಲಕ ಅದರ ಪೂರ್ವಸ್ಥಿತಿಗೆ ತರಲಾಗುವುದು.

ಇತಿಹಾಸ

[ಬದಲಾಯಿಸಿ]

“autopsy” ಎಂಬ ಪದ ಪ್ರಾಚೀನ ಗ್ರೀಸ್‍ನ autopsia, ಅಂದರೆ, “(ತನ್ನನ್ನು ತಾನೇ ನೋಡಿಕೊಳ್ಳುವುದು)”, αυτος (autos, "ತಾನೇ") ಮತ್ತು όψις (opsis, "ಕಣ್ಣು")[] ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ಕ್ರಿ.ಪೂ. ೩,೦೦೦ ಸುಮಾರಿನಲ್ಲಿ ಶವ ಸಂರಕ್ಷಣೆ ಪದ್ಧತಿಯಲ್ಲಿ ದೇಹದಲ್ಲಿನ ಆಂತರಿಕ ಅಂಗಗಳನ್ನು ಹೊರತೆಗೆದು ಪರೀಕ್ಷಿಸುವ ನಾಗರಿಕತೆಗಳಲ್ಲಿ ಪ್ರಾಚೀನ ಈಜಿಪ್ಶಿಯನ್ನರು ಕೂಡ ಮೊದಲಿಗರಾಗಿರುತ್ತಾರೆ..[][]

ಸಾವಿಗೆ ಕಾರಣ ಕಂಡುಹಿಡಿಯಲು ದೇಹವನ್ನು ತೆರೆಯುವ ಶವಪರೀಕ್ಷೆ ಪದ್ಧತಿ ಕ್ರಿ.ಪೂ. ಮೂರನೇ ಶತಾಬ್ಧದ ಪೂರ್ವದಲ್ಲಿಯೇ ಇತ್ತೆಂಬುದಕ್ಕೆ ಆಧಾರಗಳಿವೆ, ಆದರೆ ಇದನ್ನು ಹಲವು ಪ್ರಾಚೀನ ನಾಗರಿಕತೆಗಳು ವಿರೋಧಿಸಿದ್ದುವು, ಏಕೆಂದರೆ ಮೃತವ್ಯಕ್ತಿಗಳ ಬಹಿರ್ದೇಹವನ್ನು ವಿರೂಪಗೊಳಿಸುವುದರಿಂದ ಅವರು ಪುನರ್ಜನ್ಮ[] ಪಡೆಯಲು ಅಶಕ್ತರಾಗುತ್ತಾರೆ ಎಂಬ ನಂಬಿಕೆಯಿತ್ತು.(ಈಜಿಪ್ಶಿಯನ್ನರು ಕೂಡ ದೇಹದಲ್ಲಿ ಸಣ್ಣ ಸಣ್ಣ ರಂದ್ರಗಳನ್ನು ಮಾಡಿ ಅಂಗಾಂಗಗಳನ್ನು ಹೊರತೆಗೆಯುತ್ತಿದ್ದರು).[] ಕ್ರಿ.ಪೂ. ೩ನೇ ಶತಮಾನದ ಅಲೆಕ್ಸಾಂಡ್ರಿಯದಲ್ಲಿ ಚಾಲ್ಸೆಡೋನ್‍ಗೆ ಸೇರಿದ ಎರಾಸಿಸ್ಟ್ರಾಟುಸ್ ಮತ್ತು ಹಿರೋಫೈಲುಸ್ ಪ್ರಸಿದ್ಧ ಶವಪರೀಕ್ಷಕರಾಗಿದ್ದರು, ಆದರೆ ಸಾಮಾನ್ಯವಾಗಿ ಹೇಳುವುದಾದರೆ ಪ್ರಾಚೀನ ಗ್ರೀಸ್‍ನಲ್ಲಿ ಶವಪರೀಕ್ಷೆಗಳು ಅಪರೂಪವಾಗಿದ್ದುವು. (೨/) ಕ್ರಿ.ಪೂ.೪೪ ರಲ್ಲಿ, ಅವನನ್ನು ಅವನ ವೈರಿ ಸೆನೆಟರ್‍ಗಳು ಕೊಂದ ನಂತರ ಜ್ಯೂಲಿಯಸ್ ಸೀಜರ್ ಒಂದು ಅಧಿಕೃತ ಶವಪರೀಕ್ಷೆಯ ವಿಷಯವಾಗಿದ್ದನು ಹಾಗೂ ಎರಡನೇ ಇರಿತ ಅವನಿಗೆ ಮಾರಕವಾಯಿತು ಎಂದು ವೈದ್ಯರು ತಮ್ಮ ವರದಿಯಲ್ಲಿ ದಾಖಲಿಸಿದ್ದರು.[] ಕ್ರಿ.ಪೂ. ಸುಮಾರು ೧೫೦ ರಲ್ಲಿ, ಪ್ರಾಚೀನ ರೋಮನ್ನರು ಕಾನೂನು ಪದ್ಧತಿ ಶವಪರೀಕ್ಷೆಗೆ ಸ್ಪಷ್ಟ ಪರಿಮಾಣಗಳನ್ನು ಸ್ಥಾಪಿಸಿದರು.[]

ರೋಮನ್ನರ ನಂತರವೂ ವೈದ್ಯಕೀಯ ಉದ್ದೇಶಗಳಿಗಾಗಿ ಮಾನವನ ಅಂಗಚ್ಛೇದವನ್ನು ಅನಿಯಮಿತವಾಗಿ ಅನುಸರಿಸುವುದು ಮುಂದುವರೆದಿತ್ತು, ಉದಾಹರಣೆಗೆ ಅರಬ್ ವೈದ್ಯರು ಅವೆನ್‍ಜೋರ್ ಮತ್ತು ಇಬಿನ್-ಅಲ್-ನಫೀಸ್, ಆದರೆ ನವೀನ ಶವಪರೀಕ್ಷೆ ಪ್ರಕ್ರಿಯೆ ಪುನರುಜ್ಜೀವನ ಅವಧಿಯ ಅಂಗರಚನ ಶಾಸ್ತ್ರಜ್ಞರಿಂದ ಬಂದಿದೆ. ಅಂಗರಚನ ರೋಗಲಕ್ಷಣ ಶಾಸ್ತ್ರದ ಪಿತಾಮಹ, ಎಂದು ಪ್ರಸಿದ್ಧಿ ಪಡೆದಿರುವ ಜಿಯೊವನ್ನಿ ಮೊರ್ಗಾಗ್ನಿ (೧೬೮೨–೧೭೭೧),[] ರೋಗಲಕ್ಷಣ ಶಾಸ್ತ್ರದ ಬಗ್ಗೆ ಡೀ ಸೆಡಿಬಸ್ ಎಟ್ ಕಾಸಿಸ್ ಮೋರ್ಬೊರಮ್ ಪರ್ ಅನಾಟೊಮೆನ್ (ದಿ ಸೀಟ್ಸ್ ಅಂಡ್ ಕಾಸಸ್ ಆಫ್ ಡಿಸೀಸಸ್ ಇನ್ವೆಸ್ಟಿಗೇಟೆಡ್ ಬೈ ಅನಾಟೊಮಿ, ೧೭೬೯). ಎಂಬ ವಿವರವಾದ ಪ್ರಪ್ರಥಮ ಕೃತಿಯನ್ನು ರಚಿಸಿದನು.[]

ಹತ್ತೊಂಭತ್ತನೇ ಶತಮಾನದ ಇಬ್ಬರು ಸುಪ್ರಸಿದ್ಧ ವೈದ್ಯಕೀಯ ಸಂಶೋಧಕರಾದ ರುಡಾಲ್ಫ್ ವಿರ್ಚೋವ್ ಮತ್ತು ಕಾರ್ಲ್ ವೋನ್ ರೋಕಿಟಾನ್ಸ್ಕಿ ಪುನರುಜ್ಜೀವನ ಪರಂಪರೆಯ ಮೇಲೆ ಆಧಾರಪಟ್ಟು ಅವರ ಹೆಸರುಗಳೇ ಈಗಲೂ ಬಳಕೆಯಲ್ಲಿರುವ ಎರಡು ಪ್ರತ್ಯೇಕ ಶವಪರೀಕ್ಷೆ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ಶವಗಳಲ್ಲಿ ಕಂಡುಬಂದ ರೋಗಲಕ್ಷಣ ಸ್ಥಿತಿಗಳು ಮತ್ತು ಜೀವಂತ ಇರುವಾಗ ಇರುವ ಅನಾರೋಗ್ಯ, ಇವೆರಡರ ನಡುವೆ ಇರುವ ಹೊಂದಾಣಿಕೆಯ ಬಗ್ಗೆ ಅವರ ನಿರೂಪಣೆ ಖಾಯಿಲೆ ಮತ್ತು ಅದರ ಚಿಕಿತ್ಸೆ ವಿಚಾರದಲ್ಲಿ ವಿಭಿನ್ನ ರೀತಿಯ ಆಲೋಚನೆಗಳನ್ನು ಮಾಡುವುದಕ್ಕೆ ದಾರಿಯಾಯಿತು.

ಉದ್ದೇಶ

[ಬದಲಾಯಿಸಿ]

ಶವಪರೀಕ್ಷೆಯ ಪ್ರಧಾನ ಉದ್ದೇಶ ಸಾವಿಗೆ ಕಾರಣ, ಅವನು ಅಥವಾ ಅವಳು ಸಾಯುವುದಕ್ಕೆ ಮುಂಚಿನ ಆರೋಗ್ಯ ಸ್ಥಿತಿ, ಹಾಗೂ ಸಾವಿಗೆ ಮುಂಚೆ ವೈದ್ಯಕೀಯ ರೋಗನಿರ್ಧರಣೆ ಮತ್ತು ಸಾವಿಗೆ ಮುಂಚೆ ನೀಡಿದ ಚಿಕಿತ್ಸೆ ಸೂಕ್ತವಾಗಿತ್ತೆ ಎಂಬುದನ್ನು ನಿರ್ಧರಿಸುವುದು.

ಬಹಳಷ್ಟು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ೧೯೫೫ ರಿಂದೀಚೆಗೆ ಆಸ್ಪತ್ರೆಗಳಲ್ಲಿ ನಡೆಸುತ್ತಿರುವ ಶವಪರೀಕ್ಷೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೋಗಶಾಸ್ತ್ರಜ್ಞರು ಮತ್ತು ಮಾಜಿ JAMA ಸಂಪಾದಕರು ಆದ ಜಾರ್ಜ್ ಲುಂಡ್‍ಬೆರ್ಗ್ ಸೇರಿದಂತೆ ವಿಮರ್ಷಕರು, ಶವಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿರುವುದು ಆಸ್ಪತ್ರೆಯಲ್ಲಿ ಒದಗಿಸುವ ಆರೈಕೆಯ ಮೇಲೆ ನಕಾರಾತ್ಮಕ ಪರಿಣಾಮ ಬಿರುತ್ತಿವೆ, ಏಕೆಂದರೆ, ತಪ್ಪು ಮಾಡುವುದರ ಫಲವಾಗಿ ಸಾವು ಸಂಭವಿಸಿದರೆ ಅವುಗಳನ್ನು ಎಷ್ಟೋ ಸಾರಿ ತನಿಖೆ ಮಾಡಲಾಗುವುದಿಲ್ಲ, ಹಾಗಾಗಿ ಅದರಿಂದ ಪಾಠಗಳನ್ನು ಕಲಿಯುವುದೇ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.

ಒಬ್ಬ ವ್ಯಕ್ತಿ ಪೂರ್ವಭಾವಿಯಾಗಿ ತನ್ನ ಸಾವಿಗೆ ಮುಂಚೆ ಅನುಮತಿ ಕೊಟ್ಟಿದ್ದರೆ ಬೋಧನೆ ಮತ್ತು ಸಂಶೋಧನೆ ಉದ್ದೇಶಗಳಿಗಾಗಿ ಶವಪರೀಕ್ಷೆಯನ್ನು ನಡೆಸಬಹುದು.

ಆಕಸ್ಮಿಕ ಸಾವು ಪ್ರಕರಣಗಳಲ್ಲಿ, ವೈದ್ಯರಿಗೆ ನಿಧನ ಪ್ರಮಾಣ ಪತ್ರ ನೀಡಲು ಸಾಧ್ಯವಾಗದಿದ್ದರೆ, ಅಥವಾ ಒಂದು ಸಾವು ಅನೈಸರ್ಗಿಕವಾಗಿ ಸಂಭವಿಸಿದೆ ಎಂದು ಭಾವಿಸಿದರೆ ಶವಪರೀಕ್ಷೆಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. . ಈ ಪರೀಕ್ಷೆಗಳನ್ನು ಒಂದು ಕಾನೂನುಬದ್ಧ ಅಧಿಕಾರದಡಿಯಲ್ಲಿ (ವೈದ್ಯಕೀಯ ಪರೀಕ್ಷಕ ಅಥವಾ ದುರ್ಮರಣ ವಿಚಾರಕ ಅಥವಾ ವಕಾಲತ್ತುದಾರ) ಮಾಡಲಾಗುವುದು ಮತ್ತು ಮೃತವ್ಯಕ್ತಿಯ ಹತ್ತಿರದ ಸಂಬಂಧಿಗಳ ಅನುಮತಿಯ ಅಗತ್ಯವಿಲ್ಲ. ಇದಕ್ಕೆ ಪರಮಾವಧಿ ಉದಾಹರಣೆಯೆಂದರೆ ಕೊಲೆಯಾದ ವ್ಯಕ್ತಿಯ ಪರೀಕ್ಷೆ ನಡೆಸುವಾಗ, ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಪರೀಕ್ಷಕರು ಸಾವಿನ ಚಿಹ್ನೆಗಳು ಅಥವಾ ಕೊಲೆ ವಿಧಾನ, ಅಂದರೆ ಗುಂಡಿನಿಂದ ಗಾಯ ಮತ್ತು ನಿಷ್ಕ್ರಮಣ ಬಿಂದು, ಕತ್ತುಹಿಸುಕಿದ ಕುರುಹುಗಳು, ಅಥವಾ ವಿಷಪ್ರಯೋಗದ ಸುಳಿವುಗಳು ಮುಂತಾದುವನ್ನು ಹುಡುಕುವುದು. ಜುದಾಯಿಸಂ ಮತ್ತು ಇಸ್ಲಾಂ ನಂತಹ ಹಲವು ಧರ್ಮಗಳು ತಮ್ಮ ಅನುಯಾಯಿಗಳ ಮೇಲೆ ಶವಪರೀಕ್ಷೆ ಮಾಡುವುದಕ್ಕೆ ಉತ್ತೇಜನ ನೀಡುವುದಿಲ್ಲ. ಇಸ್ರೇಲ್ನ ಜಕಾ ಮತ್ತು ಅಮೆರಿಕದ ಮಿಸಾಸ್ಕಿಮ್ ಮುಂತಾದ ಸಂಸ್ಥೆಗಳು ಒಂದು ಅನಗತ್ಯ ಶವಪರೀಕ್ಷೆ ಮಾಡದೆ ಇರುವುದನ್ನು ಹೇಗೆ ಖಚಿತಪಡಿಸಿಕೊಳ್ಳಬೇಕೆಂಬುದನ್ನು ಕುಟುಂಬಗಳಿಗೆ ಮಾರ್ಗದರ್ಶನ ನೀಡುತ್ತವೆ. .

ವೈದ್ಯಕೀಯ ಕ್ಶೇತ್ರದಲ್ಲಿ

[ಬದಲಾಯಿಸಿ]

ವೈದ್ಯಕೀಯ ಕ್ಷೇತ್ರದಲ್ಲಿ ಶವಪರೀಕ್ಷೆ ಬಹಳ ಮುಖ್ಯ ಏಕೆಂದರೆ ಅವು ವೈದ್ಯಕೀಯ ತಪ್ಪುಗಳನ್ನು ಗುರುತಿಸುತ್ತವೆ ಹಾಗೂ ನಿರಂತರ ಅಭಿವೃದ್ಧಿಗೆ ಸಹಾಕಾರಿಯಾಗುತ್ತವೆ.

ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್ (ಹೃದಯಾಘಾತ) ಮೇಲೆ ಕೇಂದ್ರೀಕರಿಸಿದ ಒಂದು ಅಧ್ಯಯನದಲ್ಲಿ ಬಹುಮುಖ್ಯವಾದ ಒಪ್ಪು-ತಪ್ಪುಗಳು ಕಂಡುಬಂದವು ,[] ಅಂದರೆ, ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್‍ಗಳು (MIs)ಎಂದು ನಿರ್ಧರಿಸಿದ ಪ್ರಕರಣಗಳು MI ಗಳಾಗಿರಲಿಲ್ಲ ಹಾಗೂ ಅದೇ ರೀತಿಯಲ್ಲಿ MI ಗಳಲ್ಲ ಎಂದು ನಿರ್ಧರಿಸಿದ ಹಲವು ಪ್ರಕರಣಗಳು ವಾಸ್ತವದಲ್ಲಿ MI ಗಳಾಗಿದ್ದುವು.

ಶವಪರೀಕ್ಷೆಗಳ ಅಧ್ಯಯನದ ಒಂದು ವ್ಯವಸ್ಥಿತ ಪರಿಶೀಲನೆಯಲ್ಲಿ ಸುಮಾರು ೨೫% ಶವಪರೀಕ್ಷೆಗಳಲ್ಲಿ ಪ್ರಮುಖ ರೋಗ ನಿರ್ಧರಣ ತಪ್ಪುಗಳು ಸಂಭವಿಸಿವೆಯೆಂದು ಒಂದು ಲೆಕ್ಕಾಚಾರದಿಂದ ತಿಳಿದುಬಂತು.[] ಆದರೆ, ಈ ದರ ಕಾಲಕ್ರಮೇಣ ಇಳಿಮುಖವಾಗಿದೆ ಹಾಗೂ ಒಂದು ಸಮಕಾಲೀನ ಸಂಸ್ಥೆಯಲ್ಲಿ ನಡೆಸಿದ ಅಧ್ಯಯನ ೮.೪% ರಿಂದ ೨೪.೪%ಶವಪರೀಕ್ಷೆಗಳು ಪ್ರಮುಖ ರೋಗ ನಿರ್ಧರಣ ತಪ್ಪುಗಳನ್ನು ತೋರಿಸಿಕೊಟ್ಟಿವೆ.

ಸುಮಾರು ಮೂರನೇ ಒಂದು ಭಾಗ ನಿಧನ ಪ್ರಮಾಣ ಪತ್ರಗಳು ಸರಿಯಿಲ್ಲದವು ಮತ್ತು ಅರ್ಧದಷ್ಟು ಶವಪರೀಕ್ಷೆಗಳು ವ್ಯಕ್ತಿ ಸಾಯುವುದಕ್ಕೆ ಮುಂಚೆ ಇಲ್ಲದಂತ ಅನುಮಾನಗಳನ್ನು ತೋರಿಸಿಕೊಟ್ಟವು[] ಎಂದು ಒಂದು ಪ್ರಮುಖ ವಿಶ್ಲೇಷಣೆ ಸೂಚಿಸಿದೆ. ಐದನೇ ಒಂದು ಭಾಗಕ್ಕಿಂತ ಹೆಚ್ಚು ಅನಿರೀಕ್ಷಿತ ಅನ್ವೇಷಣೆಗಳಲ್ಲಿ ಅಂಗಾಂಶಶಾಸ್ತ್ರದಿಂದ ಕಂಡುಹಿಡಿಯಬಹುದು, ಅಂದರೆ ಬಯಾಪ್ಸಿ ಅಥವಾ ಶವಪರೀಕ್ಷಣ, ಹಾಗೂ ಸುಮಾರು ಮೂರನೇ ಒಂದು ಭಾಗ ಅನಿರೀಕ್ಷಿತ ಅನ್ವೇಷಣೆಗಳು ಅಥವಾ ೫% ಎಲ್ಲ ಅನ್ವೇಷಣೆಗಳೂ ಪ್ರಮುಖವಾದುವು ಮತ್ತು ಅವುಗಳನ್ನು ಕೇವಲ ಅಂಗಾಂಶಗಳಿಂದ ರೋಗವನ್ನು ಕಂಡುಹಿಡಿಯಬಹುದು.

ಒಂದು ಅಧ್ಯಯನದಲ್ಲಿ "ಶವಪರೀಕ್ಷೆಗಳು ೨೧ ಕ್ಯಾನ್ಸರ್ ಗಳೂ ಸೇರಿದಂತೆ, ಇತರ ಕಾಯಿಲೆಗಳ ಜೊತೆಯಲ್ಲಿ ೧೭೧ ತಪ್ಪು ರೋಗ ನಿರ್ಧರಣೆಗಳು, ೧೨ ಪಾರ್ಶ್ವವಾಯು, ೧೧ ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್‍ಗಳು, ೧೦ ಪಲ್ಮೊನರಿ ಎಂಬೊಲಿ" ಗಳನ್ನು ಬಹಿರಂಗಪಡಿಸಿವೆ ಎಂದು ತಿಳಿದುಬಂದಿದೆ.[]

ಇನ್‍ಕ್ಯುಬೇಟ್ ಮಾಡಿದ ರೋಗಿಗಳ ಮೇಲೆ ನಡೆಸಿದ ಒಂದು ಅಧ್ಯಯನದಲ್ಲಿ "ಉದರ ರೋಗಲಕ್ಷಣ ಪರಿಸ್ಥಿತಿಗಳಲ್ಲಿ --ಕೀವುಬಾವು, ಕರುಳಿನಲ್ಲಿ ರಂದ್ರಗಳು ಅಥವಾ ಇನ್‍ಫಾರ್‍ಕ್ಷನ್‍-- ವರ್ಗ I ತಪ್ಪುಗಳು ಪಲ್ಮೊನರಿ ಎಂಬೊಲಿಯಂತೆ ಮರಳಿ ಮರಳಿ ಸಂಭವಿಸುತ್ತವೆ" ಎಂದು ಕಂಡುಹಿಡಿದಿದೆ. ಉದರ ರೋಗಲಕ್ಷಣ ಪರಿಸ್ಥಿತಿಗಳಲ್ಲಿರುವ ರೋಗಿಗಳು ಸಾಮಾನ್ಯವಾಗಿ ಉದರಬೇನೆ ಇದೆಯೆಂದು ದೂರಿದರೆ,ಬಹಳಷ್ಟು ರೋಗಿಗಳಲ್ಲಿ ಉದರದ ಪರೀಕ್ಷೆ ಫಲಿತಾಂಶಗಳು ಹೇಳಿಕೊಳ್ಳುವಂತಿರಲಿಲ್ಲ, ಹಾಗೂ ಲಕ್ಷಣಗಳನ್ನು ಅನ್ವೇಷಣೆ ಮಾಡಲಿಲ್ಲ.[]

ಪಶು ವೈದ್ಯೋಪಚಾರ

[ಬದಲಾಯಿಸಿ]
ewe ಯ ಒಂದು ಕ್ಷೇತ್ರ ಮರಣೋತ್ತರ ಪರೀಕ್ಷೆ.

ಮರಣೋತ್ತರ ಪರೀಕ್ಷೆ ವಿಧಾನ ಮಾನವ ವೈದ್ಯ ವಿಧಾನಕ್ಕಿಂತ ಪಶು ವೈದ್ಯ ವಿಧಾನದಲ್ಲಿ ಹೆಚ್ಚು ಬಳಕೆಯಲ್ಲಿದೆ. ಬಾಹ್ಯ ರೋಗಲಕ್ಷಣಗಳನ್ನು ತೋರ್ಪಡಿಸುವ ಪ್ರಾಣಿಗಳಿಗೆ (ಕುರಿ), ಅಥವಾ ವಿವರವಾದ ವೈದ್ಯಕೀಯ ಪರೀಕ್ಷೆಗೆ ಸೂಕ್ತವಲ್ಲದವು (ಕೋಳಿ, ಪಂಜರದ ಪಕ್ಷಿಗಳು, ಮೃಗಾಲಯದ ಪ್ರಾಣಿಗಳು), ಮುಂತಾದುವಕ್ಕೆ ಇದು ಸಾಮಾನ್ಯವಾಗಿ ರೋಗ ನಿರ್ಧಾರಕ್ಕೆ ಉಪಯೋಗಿಸುವ ವಿಧಾನ.

ವಿಧಗಳು

[ಬದಲಾಯಿಸಿ]

ಶವಪರೀಕ್ಷೆಗಳಲ್ಲಿ ಮೂರು ವಿಧಗಳಿವೆ:[೧೦]

  • ಮೆಡಿಕೊ-ಲೀಗಲ್ ಅಥವಾ ಫೊರೆನ್ಸಿಕ್ ಅಥವಾ ಕಾರೋನರ್ ಶವಪರೀಕ್ಷೆಗಳು ಸಾವಿಗೆ ಕಾರಣ ಮತ್ತು ವಿಧಾನ ಕಂಡುಹಿಡಿಯಲು ಮತ್ತು ಮೃತವ್ಯಕ್ತಿಯನ್ನು ಗುರುತಿಸುವುದು.[೧೦] ಇವುಗಳನ್ನು ಸಾಮಾನ್ಯವಾಗಿ, ದಾರುಣ, ಅನುಮಾನಾಸ್ಪದ ಅಥವಾ ಆಕಸ್ಮಿಕ ಸಾವು, ವೈದ್ಯಕೀಯ ನೆರವು ಸಿಗದೆ ಸಾವು, ಶಸ್ತ್ರಚಿಕಿತ್ಸೆ ಸಮಯದಲ್ಲಿ ಸಂಭವಿಸುವ ಸಾವು ಪ್ರಕರಣಗಳಲ್ಲಿ ಕಾನೂನು ನಿಗದಿಪಡಿಸಿರುವ ವಿಧಾನದಲ್ಲಿ ಮಾಡಲಾಗುವುದು.[೧೦]
  • ಕ್ಲಿನಿಕಲ್ ಅಥವಾ ಪ್ಯಾಥೊಲೋಜಿಕಲ್ ಶವಪರೀಕ್ಷೆಗಳಲ್ಲಿ ಶವಪರೀಕ್ಷೆಗಳನ್ನು ಒಂದು ನಿರ್ದಿಷ್ಟ ರೋಗವನ್ನು ಕಂಡುಹಿಡಿಯಲು ಅಥವಾ ಸಂಶೋಧನೆ ಉದ್ದೇಶಗಳಿಗಾಗಿ ನಡೆಸಲಾಗುವುದು. ಇವುಗಳು, ರೋಗಿಯ ಸಾವಿಗೆ ಮುಂಚೆ ಗೊತ್ತಿರದಿದ್ದ ಅಥವಾ ಅಸ್ಪಷ್ಟವಾಗಿದ್ದ ವೈದ್ಯಕೀಯವಾಗಿ ರೋಗವನ್ನು ನಿರ್ಧರಿಸುವ, ವಿವರಣೆ ಕೊಡುವ ಅಥವಾ ದೃಢಪಡಿಸುವ ಉದ್ದೇಶವನ್ನು ಹೊಂದಿರುತ್ತವೆ.[೧೦]
  • ಅನಾಟೊಮಿಕಲ್ ಅಥವಾ ಅಕಾಡೆಮಿಕ್ ಶವಪರೀಕ್ಷೆಗಳನ್ನು ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಉದ್ದೇಶಗಳಿಗಾಗಿ ನಡೆಸುತ್ತಾರೆ.

ಫೋರೆನ್ಸಿಕ್ ಶವಪರೀಕ್ಷೆ

[ಬದಲಾಯಿಸಿ]
ಚಾರೈಟ್ ಬರ್ಲಿನ್ ರವರ ಶವಪರೀಕ್ಷೆ ಕೊಠಡಿ

ಒಂದು ಫೋರೆನ್ಸಿಕ್ ಶವಪರೀಕ್ಷೆಯನ್ನು ಸಾವಿಗೆ ಕಾರಣವನ್ನು ನಿರ್ಧರಿಸುವುದಕ್ಕಾಗಿ ಉಪಯೋಗಿಸಲಾಗುವುದು. ಫೋರೆನ್ಸಿಕ್ ವಿಜ್ಞಾನ ಕಾನೂನು ವ್ಯವಸ್ಥೆಗೆ ಆಸಕ್ತಿಯಿರುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ವಿಜ್ಞಾನವನ್ನು ಬಳಸಿಕೊಳ್ಳುತ್ತದೆ. ಅಮೆರಿಕದ ಕಾನೂನಿನಲ್ಲಿ, ಸಾವುಗಳನ್ನು ಐದು ವಿಧಾನಗಳಲ್ಲಿ ಒಂದು ವಿಧಾನದಲ್ಲಿರಿಸಲಾಗುವುದು:

  • ಪ್ರಾಕೃತಿಕ
  • ಅಫಘಾತಗಳು
  • ನರಹತ್ಯೆ
  • ಆತ್ಮಹತ್ಯೆ
  • ಅನಿರ್ಧಾರಿತ

ಕೆಲವು ವ್ಯಾಪ್ತಿಗಳಲ್ಲಿ,ಅನಿರ್ಧಾರಿತ ವರ್ಗದಲ್ಲಿ ಗೈರುಹಾಜರಿ ಸಾವುಗಳು, ಅಂದರೆ, ಸಮುದ್ರದಲ್ಲಿ ಸಾವು ಮತ್ತು ಒಂದು ನ್ಯಾಯಾಲಯ ವ್ಯಕ್ತಿಗಳು ನಾಪತ್ತೆಯಾಗಿರುವ ಕಾರಣ ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿರುವುದು, ಮುಂತಾದುವುಗಳನ್ನು "ಇತರೆ" ಎಂದು ವರ್ಗೀಕರಿಸುತ್ತಾರೆ. ಆದರೆ, ವೈದ್ಯಕೀಯ ಪರೀಕ್ಷಕರು, ಸಾವು ಸಂಭವಿಸಿದ ಸಮಯ, ಸಾವಿಗೆ ನಿಖರವಾದ ಕಾರಣ, ಮತ್ತು ಸಾವಿಗೆ ಮುಂಚೆ ಹೋರಾಟ ಮುಂತಾದ ಏನಾದರೂ ಸಂಭವಿಸಿತ್ತೆ ಎಂಬಿವುಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತಾರೆ. ಒಂದು ಫೋರೆನ್ಸಿಕ್ ಶವಪರೀಕ್ಷೆಯಲ್ಲಿ ಮೃತವ್ಯಕ್ತಿಯಿಂದ ವಿಷಪ್ರಯೋಗವನ್ನು ಪರೀಕ್ಷಿಸುವುದಕ್ಕಾಗಿ ಉದರದಲ್ಲಿರುವ ವಸ್ತುಗಳೂ ಸೇರಿದಂತೆ ಜೈವಿಕ ಮಾದರಿಗಳು ಒಳಗೊಂಡಿರಬಹುದು. ವಿಷವಿಜ್ಞಾನ ಪರೀಕ್ಷೆಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ರಾಸಾಯನಿಕ "ವಿಷಗಳು" ಇರುವುದನ್ನು ಮತ್ತು ಅವುಗಳ ಪರಿಮಾಣವನ್ನು ಬೆಳಕಿಗೆ ತರಬಹುದು (ಎಲ್ಲ ರಾಸಾಯನಿಕಗಳನ್ನೂ, ಸೂಕ್ತ ಪರಿಮಾಣದಲ್ಲಿ, ವಿಷವಸ್ತುಗಳು ಎಂದು ವರ್ಗೀಕರಿಸಬಹುದು). ಮರಣೋತ್ತರ ದೇಹ ಕ್ಷೀಣಿಸುವುದರಿಂದ, ಜೊತೆಗೆ ದೇಹದ ದ್ರವಗಳು ಗುರುತ್ವಾಕರ್ಶಣೆಯ ಕಾರಣ ಒಂದೆಡೆಗೆ ಸೇರುವುದರಿಂದ ದೇಹಪ್ರಕೃತಿ ಅತ್ಯಗತ್ಯವಾಗಿ ಬದಲಾಗುತ್ತದೆ, ವಿಷ ವಿಜ್ಞಾನ ಪರೀಕ್ಷೆಗಳು ಅನುಮಾನಿತ ರಾಸಾಯನಿಕ ವಸ್ತುವನ್ನು ಕಡಿಮೆ ಅಂದಾಜಿಗಿಂತ ಹೆಚ್ಚು ಅಂದಾಜು ಮಾಡಬಹುದು. http://www.relentlessdefense.com/autopsy.html Archived 2010-05-03 ವೇಬ್ಯಾಕ್ ಮೆಷಿನ್ ನಲ್ಲಿ.

ಬಹಳಷ್ಟು ರಾಷ್ಟ್ರಗಳು ರಾಜ್ಯ ರಾಸಾಯನಿಕ ಪರೀಕ್ಷಕರು ಒಂದು ಶವಪರೀಕ್ಷೆ ವರದಿಯನ್ನು ಪೂರ್ಣಗೊಳಿಸಬೇಕೆಂದು ನಿಗದಿಪಡಿಸುತ್ತವೆ ಮತ್ತು ಹಲವು ರಾಷ್ಟ್ರಗಳು ಶವಪರೀಕ್ಷೆಯನ್ನು ವೀಡಿಯೊ ಚಿತ್ರೀಕರಣ ಮಾಡಬೇಕೆನ್ನುತ್ತವೆ.

ಎಲ್ಲ ರುಜುವಾತುಗಳನ್ನು ಆಳವಾಗಿ ಪರೀಕ್ಷಿಸಿದ ನಂತರ, ಒಬ್ಬ ವೈದ್ಯಕೀಯ ಪರೀಕ್ಷಕ ಅಥವಾ ಕರೋನರ್ ಮೇಲೆ ಪಟ್ಟಿಮಾಡಿರುವ ಸಾವಿನ ವಿಧಗಳಲ್ಲಿ ಒಂದು ವಿಧವನ್ನು ನಿರ್ಧರಿಸುತ್ತಾರೆ,ಹಾಗೂ ಸಾವಿನ ರೀತಿಯನ್ನು ರುಜುವಾತಿನ ಆಧಾರದ ಮೇಲೆ ವಿವರಿಸುತ್ತಾರೆ.

ವೈದ್ಯಕೀಯ ಶವಪರೀಕ್ಷೆ

[ಬದಲಾಯಿಸಿ]

ವೈದ್ಯಕೀಯ ಶವಪರೀಕ್ಷೆಗಳು ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅವುಗಳನ್ನು ಪ್ಯಾಥೊಲೋಜಿಕಲ್ ಪ್ರಕ್ರಿಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಹಾಗೂ ರೋಗಿಯ ಸಾವಿಗೆ ಯಾವ ಅಂಶಗಳು ಕಾರಣವಾದುವು ಎಂದು ನಿರ್ಧರಿಸಲು ನಡೆಸಲಾಗುತ್ತದೆ. ಶವಪರೀಕ್ಷೆಗಳನ್ನು ಆಸ್ಪತ್ರೆಗಳಲ್ಲಿ ಆರೈಕೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದಕ್ಕೂ ನಡೆಸಲಾಗುತ್ತದೆ. ಶವಪರೀಕ್ಷೆಗಳು ರೋಗಿಗಳ ಸಾವನ್ನು ನಿರೋಧಿಸಬಹುದು ಎಂಬ ಅಂಶದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಕಾರಿಯಾಗುತ್ತವೆ.

ಕರೋನರ್ (ಇಂಗ್ಲೆಂಡ್ ಮತ್ತು ವೇಲ್ಸ್) ಅಥವಾ ಪ್ರೋಕ್ಯುರೇಟರ್ ಫಿಸ್ಕಲ್ (ಸ್ಕಾಟ್‍ಲೆಂಡ್) ಸೂಚಿಸುವ ಮೆಡಿಕೊ-ಲೀಗಲ್ ಶವಪರೀಕ್ಷೆಗೆ ಕುಟುಂಬ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಲಾಗುವುದಿಲ್ಲ, ಆದರೆ ಯುನೈಟೆಡ್ ಕಿಂಗ್‍ಡಮ್ ನಲ್ಲಿ, ವೈದ್ಯಕೀಯ ಶವಪರೀಕ್ಷೆಯನ್ನು ಮೃತವ್ಯಕ್ತಿಯ ಕುಟುಂಬದವರ ಸಮ್ಮತಿ ಪಡೆದೇ ನಡೆಸಲಾಗುವುದು.

ಹರಡಿಕೆ

[ಬದಲಾಯಿಸಿ]

೨೦೦೪ ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ೫೧೪,೦೦೦ ಸಾವುಗಳು ಸಂಬವಿಸಿದ್ದುವು, ಅವುಗಳಲ್ಲಿ ೨೨೫,೫೦೦ ಸಾವುಗಳನ್ನು ಕರೋನರ್ ಗೆ ನಿರ್ದೇಶಿಸಲಾಯಿತು. ಅವುಗಳಲ್ಲಿ, ೧೧೫,೮೦೦ ಸಾವುಗಳು (೨೨.೫%) ಮರಣೋತ್ತರ ಪರೀಕ್ಷೆಗಳಲ್ಲಿ ಪರ್ಯವಸಾನವಾಯಿತು ಮತ್ತು ೨೮,೩೦೦ ಸಾವುಗಳು ಮರಣ ವಿಚಾರಣೆ, ೫೭೦ ನ್ನು ನ್ಯಾಯಾಧೀಶರಿಗೆ ಒಪ್ಪಿಸಲಾಯಿತು.[೧೧]

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ೧೯೮೦ ರಲ್ಲಿ ಇದ್ದ ೧೭% ಶವಪರೀಕ್ಷೆ ಪ್ರಮಾಣ, ಈ ಸಂಖ್ಯೆಗಳು ರಾಜ್ಯದಿಂದ ರಾಜ್ಯಕ್ಕೆ ಏರುಪೇರಾಗಿದ್ದರೂ ಕೂಡ [೧೨] ೧೯೮೫ ರಲ್ಲಿ ೧೪% ಗೆ ಇಳಿಯಿತು[೧೨] ಮತ್ತು ೧೯೮೯ ರಲ್ಲಿ ೧೧.೫% ಗೆ ಇಳಿಯಿತು,[೧೩].

ಕಾರ್ಯವಿಧಾನ

[ಬದಲಾಯಿಸಿ]
ಕ್ಯಾವಡಾರ್ ಶವಛೇದನ ಮೇಜು. ವೈದ್ಯಕೀಯ ಅಥವಾ ಅಪರಾಧ ತನಿಖೆ ಶವಪರೀಕ್ಷೆಗಳಲ್ಲಿ ಉಪಯೋಗಿಸುವಂತಹವು.

ಮೃತದೇಹವು ವೈದ್ಯಕೀಯ ಪರೀಕ್ಷಕರ ಕಛೇರಿ ಅಥವಾ ಆಸ್ಪತ್ರೆಗೆ ಒಂದು ದೇಹ ಚೀಲ ಅಥವಾ ಸಾಕ್ಷಿ ಹಾಳೆಯಲ್ಲಿ ತಲುಪುತ್ತದೆ. ಮೃತದೇಹ ಕೇವಲ ರುಜುವಾತುಗಳನ್ನು ಮಾತ್ರ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಶವಕ್ಕೂ ಒಂದು ಹೊಚ್ಚ ಹೊಸ ದೇಹ ಚೀಲವನ್ನು ಉಪಯೋಗಿಸಲಾಗುತ್ತದೆ. ದೇಹವನ್ನು ಸಾಗಿಸುವುದಕ್ಕೆ ಇರುವ ಪರ್ಯಾಯ ವಿಧಾನವೆಂದರೆ ಸಾಕ್ಷಿ ಹಾಳೆಗಳು. ಸಾಕ್ಷಿ ಹಾಳೆ ಎಂಬುದು ಶವವನ್ನು ಸಾಗಿಸುವಾಗ ಅದರ ಸುತ್ತ ಸುತ್ತುವ ಒಂದು ಕ್ರಿಮಿ ಶುದ್ಧೀಕರಿಸಿದ ಹಾಳೆ. ಕೈಗಳಲ್ಲಿ ಏನಾದರೂ ವಸ್ತು ಉಳಿದಿದೆಯೆಂದು ಅನ್ನಿಸಿದರೆ, ಉದಾಹರಣೆಗೆ ಗನ್ ಪೌಡರ್, ಒಂದು ಪ್ರತ್ಯೇಕ ಪೇಪರ್ ಚೀಲವನ್ನು ಕೈ ಸುತ್ತ ಹಾಕಿ ಮುಂಗೈ ಸುತ್ತಲೂ ಟೇಪ್ ಹಾಕಿ ಅಂಟಿಸಲಾಗುತ್ತದೆ.

ದೇಹದ ದೈಹಿಕ ಪರೀಕ್ಷೆಯಲ್ಲಿ ಎರಡು ಭಾಗಗಳಿವೆ: ಬಾಹ್ಯ ಮತ್ತು ಆಂತರಿಕ ಪರೀಕ್ಷೆಗಳು. ವಿಷ ವಿಜ್ಞಾನ, ಜೀವ ರಾಸಾಯನಿಕ ಪರೀಕ್ಷೆಗಳು ಮತ್ತು/ಅಥವಾ ಜಿನೆಟಿಕ್ ಪರೀಕ್ಷೆಗಳು ಇವುಗಳಿಗೆ ಪೂರಕವಾಗಿರುತ್ತವೆ ಮತ್ತು ಪೆಥಾಲೊಜಿಸ್ಟ್ ಗೆ ಆಗಾಗ ಸಾವಿಗೆ ಕಾರಣ ಅಥವಾ ಕಾರಣಗಳನ್ನು ಗೊತ್ತುಪಡಿಸುವುದಕ್ಕೆ ಸಹಾಯ ಮಾಡುತ್ತವೆ.

ಬಾಹ್ಯ ಪರೀಕ್ಷೆ

[ಬದಲಾಯಿಸಿ]

ಬಹಳಷ್ಟು ಸಂಸ್ಥೆಗಳಲ್ಲಿ ಮೃತದೇಹವನ್ನು ನಿರ್ವಹಿಸುವ, ಶುಭ್ರಗೊಳಿಸುವ ಮತ್ತು ಅಲ್ಲಿಂದಿಲ್ಲಿಗೆ ಸಾಗಿಸುವ ಕೆಲಸವನ್ನು ಸಾಮಾನ್ಯವಾಗಿ ಒಬ್ಬ ಡಯೆನರ್, ಜರ್ಮನ್ ಭಾಷೆಯಲ್ಲಿ ಸೇವಕ ಎಂದರ್ಥ ಮಾಡುತ್ತಾನೆ. ಯು.ಕೆ.ಯಲ್ಲಿ ಈ ಪಾತ್ರವನ್ನು ಒಬ್ಬ ಅನಾಟೊಮಿಕಲ್ ಪೆಥೋಲೊಜಿ ತಂತ್ರಜ್ಞ ನಿರ್ವಹಿಸುತ್ತಾನೆ ಹಾಗೂ ಇವನು ಹೆಣವನ್ನು ಕುಯ್ಯಲು ಮತ್ತು ಶವಪರೀಕ್ಷೆಯ ನಂತರ ಅದನ್ನು ಮತ್ತೆ ಮೊದಲಿನ ರೂಪಕ್ಕೆ ಹೊಲಿಯಲು ಪೆಥೋಲೊಜಿಸ್ಟ್ ಗೆ ಸಹಾಯ ಮಾಡುತ್ತಾನೆ. ದೇಹ ಸ್ವೀಕರಿಸಿದ ನಂತರ ಮೊದಲು ಅದರ ಭಾವಚಿತ್ರವನ್ನು ತೆಗೆಯಲಾಗುವುದು. ಆ ನಂತರ ಪರೀಕ್ಷಕ, ಮೃತವ್ಯಕ್ತಿ ಧರಿಸಿರುವ ಬಟ್ಟೆಗಳ ವಿಧವನ್ನು ಮತ್ತು ಅವುಗಳನ್ನು ಕಳಚುವುದಕ್ಕೆ ಮುಂಚೆ ಅವು ಇದ್ದ ಸ್ಥಿತಿಯನ್ನು ದಾಖಲಿಸುತ್ತಾನೆ. ನಂತರ, ಎನಾದರೂ ಉಳಿಕೆಗಳು, ಬಣ್ಣದ ಹೆಳಕೆಗಳು ಅಥವಾ ಇತರ ವಸ್ತುಗಳನ್ನು ದೇಹದ ಹೊರ ಮೇಲ್ಮೈಯಿಂದ ಶೇಖರಿಸಲಾಗುವುದು. . ದೇಹದ ಮೇಲ್ಮೈ ಮೇಲಿರುವ, ಕಣ್ಣಿಗೆ ಸುಲಭವಾಗಿ ಕಾಣಿಸದ ರುಜುವಾತುಗಳನ್ನು ಹುಡುಕಲು ಅತಿನೇರಳೆ ಕಿರಣವನ್ನು ಬಳಸಬಹುದು. ಕೂದಲು, ಉಗುರುಗಳು ಮತ್ತು ಇತರ ಭಾಗಗಳ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ದೇಹದ ರೋಡಿಯೊಗ್ರಾಫಿಕಲ್ ಬಿಂಬವನ್ನುಪಡೆಯಬಹುದು.

ಒಮ್ಮೆ ಬಾಹ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ, ದೇಹವನ್ನು ಚೀಲದಿಂದ ಹೊರತೆಗೆದು ವಿವಸ್ತ್ರಗೊಳಿಸಿ, ಏನಾದರೂ ಗಾಯಗಳು ಇದ್ದರೆ ಅವುಗಳನ್ನು ಪರೀಕ್ಷಿಸಲಾಗುವುದು. ಅನಂತರ ದೇಹವನ್ನು ಶುಭ್ರಗೊಳಿಸಿ, ತೂಕ ಮಾಡಲಾಗುವುದು ಮತ್ತು ಆಂತರಿಕ ಪರೀಕ್ಷೆಗೆ ದೇಹವನ್ನು ಸಿದ್ಧಗೊಳಿಸಲಾಗುವುದು. ದೇಹದ ತೂಕ ಕಂಡುಹಿಡಿಯುವ ತಕ್ಕಡಿ ದೇಹವನ್ನು ಹೊತ್ತಿರುವ ಗಾಡಿಯ ತೂಕವನ್ನೂ ಸೇರಿಸುವಂತೆ ಸಾಮಾನ್ಯವಾಗಿ ವಿನ್ಯಾಸಗೊಳಿಸಲಾಗಿರುತ್ತದೆ; ದೇಹದ ತೂಕ ನಿರ್ಧರಿಸಲು ಅದರ ತೂಕವನ್ನು ಒಟ್ಟು ತೂಕದಿಂದ ಕಳೆಯಲಾಗುವುದು.

ದೇಹ ಶವಪರೀಕ್ಷೆ ಕೊಠಡಿಯಲ್ಲಿ ಈಗಾಗಲೇ ಇಲ್ಲದಿದ್ದರೆ ಅದನ್ನು ಅಂತಹ ಒಂದು ಕೊಠಡಿಯೊಳಕ್ಕೆ ಸಾಗಿಸಿ ಒಂದು ಮೇಜಿನ ಮೇಲೆ ಇಡಲಾಗುವುದು. ಮೃತದೇಹದ ಸಾಮಾನ್ಯ ವಿವರಗಳು, ಅಂದರೆ ಜನಾಂಗ, ಲಿಂಗ, ವಯಸ್ಸು, ಕೂದಲು ಬಣ್ಣ ಮತ್ತು ಉದ್ದ, ಕಣ್ಣಿನ ಬಣ್ಣ ಮತ್ತು ಇತರ ಪ್ರಮುಖ ಲಕ್ಷಣಗಳು (ಹುಟ್ಟುಮಚ್ಚೆಗಳು, ಹಳೇ ಸುಟ್ಟಗಾಯಗಳು ಅಂಗಾಂಶಗಳು, ಮಚ್ಚೆಗಳು, ಇತ್ಯಾದಿ.) ಮುಂತಾದುವನ್ನು ದಾಖಲಿಸಲಾಗುವುದು. ಈ ಮಾಹಿತಿಯನ್ನು ದಾಖಲಿಸಲು ಒಂದು ಚಿಕ್ಕ ವಾಯ್ಸ್ ರೆಕಾರ್ಡರ್ ಅಥವಾ ಸಾಮಾನ್ಯವಾಗಿ ಪರೀಕ್ಷೆಗೆ ಉಪಯೋಗಿಸುವ ಸಲಕರಣೆಯನ್ನು ಬಳಸಲಾಗುವುದು. ಕೆಲವು ರಾಷ್ಟ್ರಗಳಲ್ಲಿ, ಉದಾ: ಫ್ರಾನ್ಸ್ ಜರ್ಮನಿ ಮತ್ತು ಕೆನಡಾಗಳಲ್ಲಿ, ಒಂದು ಶವಪರೀಕ್ಷೆ ಕೇವಲ ಬಾಹ್ಯ ಪರೀಕ್ಷೆಯನ್ನು ಮಾತ್ರ ಒಳಗೊಂಡಿರಬಹುದು. ಈ ಪರಿಕಲ್ಪನೆಯನ್ನು ಕೆಲವು ವೇಳೆ “ನೋಡು ಮತ್ತು ಮಂಜೂರು ಮಾಡು” (view and grant) ಎಂದು ಉಲ್ಲೇಖಿಸಲಾಗುವುದು. ಇದರ ಹಿಂದಿರುವ ತತ್ವವೆಂದರೆ ವೈದ್ಯಕೀಯ ದಾಖಲೆಗಳು, ಮೃತವ್ಯಕ್ತಿಯ ಚರಿತ್ರೆ ಮತ್ತು ಸಾವಿನ ಸನ್ನಿವೇಶ, ಇವೆಲ್ಲವೂ ಆಂತರಿಕ ಪರೀಕ್ಷೆಯ ಅಗತ್ಯವಿಲ್ಲದೆ ಸಾವಿಗೆ ಕಾರಣ ಮತ್ತು ವಿಧಾನ ತಿಳಿಸಿಕೊಡುತ್ತವೆ ಎಂಬುದು.೦/}

ಆಂತರಿಕ ಪರೀಕ್ಷೆ

[ಬದಲಾಯಿಸಿ]

ಈಗಾಗಲೇ ಇಟ್ಟಿಲ್ಲದಿದ್ದರೆ, “ಬಾಡಿ ಬ್ಲಾಕ್” ಎಂದು ಕರೆಯಲಾಗುವ ಒಂದು ಪ್ಲಾಸ್ಟಿಕ್ ಅಥವಾ ರಬ್ಬರ್ ಇಟ್ಟಿಗೆ ದೇಹದ ಬೆನ್ನಿನ ಭಾಗದಲ್ಲಿ ಇಡಲಾಗುವುದು, ಅಗ ಕೈಗಳು ಮತ್ತು ಕತ್ತು ಹಿಂದಕ್ಕೆ ಬಾಗುತ್ತವೆ ಹಾಗೂ ಎದೆ ಭಾಗವನ್ನು ಕುಯ್ಯುವುದಕ್ಕೆ ಸುಲಭವಾಗುವಂತೆ ವಿಸ್ತರಿಸುತ್ತದೆ ಮತ್ತು ಮೇಲಕ್ಕೆ ಎತ್ತುತ್ತದೆ. ಇದು ಪ್ರೋಸೆಕ್ಟರ್, ಒಬ್ಬ ಪೆಥೋಲೊಜಿಸ್ಟ್ ಅಥವಾ ಸಹಾಯಕನಿಗೆ ಮುಂಡದ ಅತಿಹೆಚ್ಚು ಭಾಗವನ್ನು ತೋರ್ಪಡಿಸುತ್ತದೆ. ಇದನ್ನು ಮಾಡಿದ ನಂತರ ಆಂತರಿಕ ಪರೀಕ್ಷೆ ಪ್ರಾರಂಭವಾಗುತ್ತದೆ. ಆಂತರಿಕ ಪರೀಕ್ಷೆಯಲ್ಲಿ ಅಘಾತ ಅಥವಾ ಸಾವಿಗೆ ಇತರ ಕಾರಣಗಳ ಸುಳಿವುಗಳನ್ನು ಕಂಡುಹಿಡಿಯುವಂತಹ ಆಂತರಿಕ ಅಂಗಗಳ ಪರೀಕ್ಷೆ ಒಳಗೊಂಡಿರುತ್ತದೆ. ಆಂತರಿಕ ಪರೀಕ್ಷೆಗೆ ಹಲವು ವಿಧಾನಗಳು ಲಭ್ಯವಿದೆ:

  • ಒಂದು ದೊಡ್ಡ ಮತ್ತು ಆಳವಾದ Y-ಆಕಾರದ ಛೇದನವನ್ನು ಎರಡೂ ಭುಜಗಳಿಂದ ಪ್ರಾರಂಭಿಸಿ ಎದೆಯ ಮುಂಭಾಗದ ಮೇಲೆ ಹೊರಟು ಎದೆಗೂಡಿನ ಮೂಳೆಯ ಕೆಳಭಾಗದಲ್ಲಿ ಕೂಡುವಂತೆ ಮಾಡಲಾಗುವುದು. ಇದು ಕತ್ತಿನ ಸಂರಚನೆಯ ಗರಿಷ್ಠ ಭಾಗವನ್ನು ತೋರ್ಪಡಿಸುತ್ತದೆ ಹಾಗೂ ಅನಂತರ ಇದನ್ನು ವಿವರವಾಗಿ ಪರೀಕ್ಷಿಸಲು ಈ ವಿಧಾನವನ್ನು ಸಾಮಾನ್ಯವಾಗಿ ವೈದ್ಯಕೀಯ ಶವಪರೀಕ್ಷೆಗಳಲ್ಲಿ ಅಳವಡಿಸಲಾಗುವುದು. ಇದು ಅನುಮಾನಾಸ್ಪದ ಕತ್ತುಹಿಸುಕಿ ಕೊಲೆ ಪ್ರಕರಣಗಳಲ್ಲಿ ಅತ್ಯಗತ್ಯ ವಿಧಾನವಾಗುತ್ತದೆ.
  • ಎರಡೂ ಭುಜಗಳಿಂದ ಪ್ರಾರಂಭಿಸಿ ಒಂದು T-ಆಕಾರದ ಸಮತಲ ರೇಖೆಯಲ್ಲಿ ಭುಜದ ಮೂಳೆಯುದ್ದಕ್ಕೂ ಛೇದನ ಮಾಡಿ ಅದು ಎದೆಗೂಡಿನ ಮೂಳೆಯವರೆಗೆ ಮಧ್ಯ ಭಾಗಕ್ಕೆ ವಿಸ್ತರಿಸುವಂತೆ ಕುಯ್ಯಲಾಗುವುದು. ಈ ರೀತಿಯ ಛೇದನ, ದೇಹವನ್ನು ಮರಳಿ ಮೊದಲಿನ ಸ್ಥಿತಿಗೆ ಸಂರಚಿಸಿದಾಗ Y-ಆಕಾರದ ಛೇದನದಲ್ಲಿ ಹೊಲಿಗೆ ಗುರುತುಗಳು ಕಾಣುವಂತೆ ಇಲ್ಲಿ ಕಾಣದೆ ಇರುವುದರಿಂದ ದೇಹದ ಸೌಂದರ್ಯ ಕಾಪಾಡಲು ಈ ವಿಧಾನ ಉಪಯೋಗಿಸಲಾಗುತ್ತದೆ.
  • ಒಂದು ಊರ್ಧ್ವ ರೇಖೆಯಲ್ಲಿ ಕತ್ತಿನ ಮಧ್ಯಭಾಗದಿಂದ (“ಆಡಮ್ ನ ಸೇಬು” ಪ್ರದೇಶ ಒಂದು ಪುರುಷ ದೇಹದ ಮೇಲೆ) ಮಾಡಲಾಗುವುದು.

ಮೇಲ್ಕಂಡ ಎಲ್ಲ ಪ್ರಕರಣಗಳಲ್ಲೂ ಕುಯಿತ ಕಿಬ್ಬೊಟ್ಟೆಯ ಕೆಳಭಾಗದವರೆಗೂ ವಿಸ್ತರಿಸುತ್ತದೆ (ಹೊಕ್ಕಳಿನ ಎಡಭಾಗದಿಂದ ಹಾದು ಹೋಗುತ್ತದೆ).

ಕುಯ್ದ ಸ್ಥಳಗಳಲ್ಲಿ ರಕ್ತಸ್ರಾವ ಅತ್ಯಂತ ಕಡಿಮೆಯಿರುತ್ತದೆ ಅಥವಾ ಇರುವುದೇ ಇಲ್ಲ, ಏಕೆಂದರೆ ಈ ಭಾಗದಲ್ಲಿ ಮಾತ್ರ ಗುರುತ್ವಾಕರ್ಶಣೆ ಇರುತ್ತದೆ, ಹೃದಯದ ಕಾರ್ಯ ಪೂರ್ತಿ ಸ್ತಬ್ಧವಾಗಿರುತ್ತದೆ. ಆದರೆ, ಕೆಲವು ಪ್ರಕರಣಗಳಲ್ಲಿ ರಕ್ತಸ್ರಾವ ತುಂಬಾ ತೀವ್ರವಾಗಿರುವ ಬಗ್ಗೆ ಚಾರಿತ್ರಿಕ ರುಜುವಾತು ಇದೆ, ಅದರಲ್ಲೂ ಪ್ರಮುಖವಾಗಿ ನೀರಿನಲ್ಲಿ ಮುಳುಗಿದಂತಹ ಪ್ರಕರಣಗಳಲ್ಲಿ.

ಈ ಹಂತದಲ್ಲಿ ಎದೆ ಗೂಡನ್ನು ತೆರೆಯಲು ಚಿಮುಟವನ್ನು ಉಪಯೋಗಿಸಲಾಗುವುದು. ಒಂದು ಸರಳವಾದ ಸಣ್ಣ ಚೂರಿಯನ್ನು ಕೂಡ ಉಪಯೋಗಿಸಬಹುದು. ಪ್ರೋಸೆಕ್ಟರ್ ಈ ಸಲಕರಣೆ ಉಪಯೋಗಿಸಿ ಎದೆ ಗೂಡಿನ ಪಾರ್ಶ್ವಗಳನ್ನು ಕತ್ತರಿಸುತ್ತಾರೆ, ಆಗ ಎದೆ ಗೂಡು ಮತ್ತು ಅದಕ್ಕೆ ಸೇರಿಕೊಂಡಿರುವ ಪಕ್ಕೆಲುಬುಗಳು ಸೇರಿ ಒಂದು ತಟ್ಟೆಯಂತೆ ಮೇಲಕ್ಕೇಳುತ್ತದೆ; ಈ ರೀತಿ ಮಾಡುವುದರಿಂದ ಹೃದಯ ಮತ್ತು ಶ್ವಾಸಕೋಶವನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಹೃದಯ, ಅದರಲ್ಲೂ ಹೃದಯಾವರಣ ಚೀಲಕ್ಕೆ ಹಾನಿಯಾಗುವುದಿಲ್ಲ ಅಥವಾ ಸ್ಥಾನಪಲ್ಲಟವಾಗುವುದಿಲ್ಲ. ಒಂದು ಸಣ್ಣ ಚೂರಿಯನ್ನು ಎದೆ ತಟ್ಟೆಯ ತಳಭಾಗದಲ್ಲಿ ಅಂಟಿಕೊಂಡಿರುವ ಮೃದುವಾದ ಅಂಗಾಂಶವನ್ನು ಕತ್ತರಿಸಲು ಕೂಡ ಉಪಯೋಗಿಸಬಹುದು. ಈಗ ಶ್ವಾಸಕೋಶ ಮತ್ತು ಹೃದಯ ತೆರೆದಿದೆ. ಎದೆ ತಟ್ಟೆಯನ್ನು ಈಗ ಪಕ್ಕಕ್ಕೆ ಇಡಲಾಗುವುದು ಮತ್ತು ಶವಪರೀಕ್ಷೆಯ ಕೊನೆಯಲ್ಲಿ ಅದನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸಲಾಗುವುದು.

ಈ ಹಂತದಲ್ಲಿ ದೇಹದ ಅಂಗಗಳು ತೆರೆದುಕೊಂಡಿರುತ್ತವೆ. ಸಾಮಾನ್ಯವಾಗಿ ಅಂಗಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಹೊರತೆಗೆಯಲಾಗುವುದು. ಅಂಗಗಳನ್ನು ಯಾವ ಕ್ರಮದಲ್ಲಿ ಹೊರತೆಗೆಯಬೇಕು ಎಂಬ ನಿರ್ಧಾರ ಕೈಲಿರುವ ಪ್ರಕರಣದ ಮೇಲೆ ಆಧಾರಗೊಂಡಿರುತ್ತದೆ. ಅಂಗಗಳನ್ನು ಹಲವು ರೀತಿಗಳಲ್ಲಿ ತೆಗೆಯಬಹುದು: ಮೊದಲನೆಯದು ಲೆಟುಲ್ಲೆ ತಂತ್ರ, ಇದರಲ್ಲಿ ಎಲ್ಲ ಅಂಗಗಳನ್ನೂ ಒಂದೇ ಮುದ್ದೆಯಾಗಿ ತೆಗೆಯುವುದು. ಎರಡನೆಯದು ಘೋನ್ ನ ಎನ್-ಬ್ಲಾಕ್ ವಿಧಾನ. ಯು.ಕೆ. ಯಲ್ಲಿ ಬಳಕೆಯಲ್ಲಿರುವ ವಿಧಾನ ಈ ವಿಧಾನದಲ್ಲಿ ಸ್ವಲ್ಪ ಮಾರ್ಪಾಡು ಮಾಡಿರುವುದು, ಇದರಲ್ಲಿ ಅಂಗಗಳನ್ನು ನಾಲ್ಕುಗುಂಪುಗಳಾಗಿ ವಿಂಗಡಿಸಲಾಗಿದೆ. ಯು.ಕೆ. ಯಲ್ಲಿ ಇವೆರಡು ಪ್ರಮುಖ ದೇಹಛೇದನ ತಂತ್ರಗಳಾಗಿದ್ದರೂ ಕೂಡ ಇವುಗಳ ರೂಪವ್ಯತ್ಯಾಸ ವಿಧಾನಗಳು ವ್ಯಾಪಕವಾಗಿ ಇವೆ.

ಇಲ್ಲಿ ಒಂದು ವಿಧಾನವನ್ನು ವಿವರಿಸಲಾಗಿದೆ: ಹೃದಯವನ್ನು ವೀಕ್ಷಿಸಲು ಪೆರಿಕಾರ್ಡಿಯಲ್ ಚೀಲವನ್ನು ತೆರೆಯಲಾಗುತ್ತದೆ. ರಾಸಾಯನಿಕೆ ವಿಶ್ಲೇಷಣೆಗಾಗಿ ರಕ್ತವನ್ನು ಅಧೋಮಹಾಭಿಧಮನಿ ಅಥವಾ ಶ್ವಾಸಾಭಿಧಮನಿಯಿಂದ ತೆಗೆದುಕೊಳ್ಳಲಾಗುವುದು. ಹೃದಯವನ್ನು ಹೊರಕ್ಕೆ ತೆಗೆಯುವುದಕ್ಕೆ ಮುಂಚೆ, ರಕ್ತ ಹೆಪ್ಪುಗಟ್ಟಿರುವುದನ್ನು ಹುಡುಕಲು ಶ್ವಾಸಾಪಧಮನಿಯನ್ನು ತೆರೆಯಲಾಗುವುದು. ಆಗ ಹೃದಯವನ್ನು, ಅಧೋಮಹಾಭಿಧಮನಿ, ಶ್ವಾಸಾಭಿಧಮನಿ, ಅಯೋರ್ಟಾ ಮತ್ತು ಉಚ್ಛಮಹಾಭಿಮನಿಯನ್ನು ಕತ್ತರಿಸುವ ಮೂಲಕ ತೆರೆಯಬಹುದು. ಈ ವಿಧಾನ ಅಯೋರ್ಟಾ ಕೀಲನ್ನು ಹಾಗೆಯೇ ಉಳಿಸುತ್ತದೆ, ಹಾಗೂ ಸುವಾಸನೆಭರಿತ ಮಾಡುವುದು ಸುಲಭವಾಗುತ್ತದೆ. ಆಗ ಎಡ ಶ್ವಾಸಕೋಶವನ್ನು ತಲುಪುವುದು ಸುಲಭವಾಗುತ್ತದೆ ಹಾಗೂ ಶ್ವಸ್ತನಿ, ಅಪಧಮನಿ ಮತ್ತು ಹೈಲಮ್‍ನಲ್ಲಿ ಅಭಿಧಮನಿಯನ್ನು ಕತ್ತರಿಸುವ ಮೂಲಕ ತೆಗೆಯಬಹುದು. ಇದೇ ರೀತಿಯಲ್ಲಿ ಬಲ ಶ್ವಾಸಕೋಶವನ್ನೂ ತೆಗೆಯಬಹುದು. ಹೊಟ್ಟೆಭಾಗದ ಅಂಗಗಳನ್ನು ಅವುಗಳ ಸಂಭಂಧ ಮತ್ತು ನಾಳಗಳನ್ನು ಪರೀಕ್ಷೆ ಮಾಡಿದ ನಂತರ ಒಂದೊಂದಾಗಿ ತೆಗೆಯಬಹುದು.

ಆದರೆ, ಕೆಲವು ಪೆಥಾಲೊಜಿಸ್ಟು‍ಗಳು ಎಲ್ಲ ಅಂಗಗಳನ್ನೂ "ಒಟ್ಟಿಗೆ" ತೆಗೆಯುವುದಕ್ಕೆ ಆದ್ಯತೆ ಕೊಡುತ್ತಾರೆ. ಅನಂತರ ಕಶೇರು ಸ್ತಂಭದುದ್ದಕ್ಕೂ ಕುಯ್ಯಲಾಗುವುದು, ಮುಂದಿನ ಪರೀಕ್ಷೆ ಮತ್ತು ಮಾದರಿ ತೆಗೆಯುವುದಕ್ಕೆ ಅಂಗಗಳನ್ನು ಒಂದೇ ಸಾರಿಗೆ ಬೇರ್ಪಡಿಸಲಾಗುತ್ತದೆ ಮತ್ತು ಮೇಲೆಳೆಯಲಾಗುತ್ತದೆ. ಶಿಶುಗಳ ಶವಪರೀಕ್ಷೆ ನಡೆಸುವಾಗ ಎಲ್ಲ ಸಮಯಗಳಲ್ಲೂ ಈ ವಿಧಾನವನ್ನು ಉಪಯೋಗಿಸಲಾಗುತ್ತದೆ. ವಿವಿಧ ಅಂಗಗಳನ್ನು ಪರೀಕ್ಷೆ ಮಾಡಿ, ಅವುಗಳ ತೂಕ ಕಂಡುಹಿಡಿದು ಹಾಗೂ ಅಂಗಾಂಶ ಮಾದರಿಗಳನ್ನು ತೆಳುಚೂರುಗಳ ರೂಪದಲ್ಲಿ ತೆಗೆದುಕೊಳ್ಳಲಾಗುವುದು. ಈ ಹಂತದಲ್ಲಿ ಪ್ರಮುಖ ರಕ್ತ ನಾಳಗಳನ್ನು ಕೂಡ ಕತ್ತರಿಸಿ ಪರೀಕ್ಷಿಸಲಾಗುವುದು. ನಂತರ ಹೊಟ್ಟೆ ಮತ್ತು ಕರುಳಿನಲ್ಲಿರುವ ಪದಾರ್ಥಗಳನ್ನು ಪರೀಕ್ಷಿಸಿ ತೂಕ ಮಾಡಲಾಗುವುದು. ಇದು ಆಹಾರ ಪಚನ ಪ್ರಕ್ರಿಯೆಯಲ್ಲಿ ಕರುಳಿನ ಮೂಲಕ ನೈಸರ್ಗಿಕವಾಗಿ ಚಲಿಸುವದರಿಂದ ಸಾವಿಗೆ ಕಾರಣ ಮತ್ತು ಸಾವು ಸಂಭವಿಸಿದ ಸಮಯ ನಿರ್ಧರಿಸಲು ಉಪಯೋಗಕ್ಕೆ ಬರುತ್ತದೆ. ಹೆಚ್ಚು ಭಾಗ ಖಾಲಿಯಿದ್ದರೆ, ಮೃತವ್ಯಕ್ತಿ ಸಾವಿಗೆ ಮುಂಚೆ ಹೆಚ್ಚು ಕಾಲ ಆಹಾರವಿಲ್ಲದೆ ಇದ್ದನೆಂದು ತಿಳಿದುಬರುತ್ತದೆ.

ಮಿದುಳು ಜ್ವರದ ಲಕ್ಷಣಗಳನ್ನು ನಿರೂಪಿಸುತ್ತಿರುವ ಒಂದು ಮೃತ ದೇಹದ ಮಿದುಳು ಪರೀಕ್ಷೆ. ಡ್ಯುರಾ ಮೇಟರ್ ನ್ನು (ಬಿಳಿ)ಚಿಮುಟ (ಮಧ್ಯದಲ್ಲಿ) ಹಿಂದಕ್ಕೆ ಎಳೆಯುತ್ತಿರುವುದು. ಡ್ಯೂರಾ ಮೇಟರ್ ಕೆಳಗೆ ಲೆಪ್ಟೋಮೆನಿಂಜಸ್ ಇದೆ, ಇದು ಎಡೆಮೆಟೌಸ್ ನಂತೆ ಕಾಣುತ್ತದೆ ಮತ್ತು ಬಹುಸಂಖ್ಯೆಯಲ್ಲಿ ಸಣ್ಣ ಸಣ್ಣ ಹೆಮೊರ್ಹಾಜಿಕ್ ಫೋಸೈ ಹೊಂದಿದೆ.

ಈ ಮುಂಚೆ ಎದೆ ಗೂಡನ್ನು ಮೇಲಕ್ಕೆ ಎತ್ತಿ ಹಿಡಿಯಲು ಉಪಯೋಗಿಸಿದ ದೇಹದ ಭಾಗ ಈಗ ತಲೆಯನ್ನು ಮೇಲಕ್ಕೆ ಎತ್ತಿ ಹಿಡಿಯಲು ಉಪಯೋಗಿಸಲಾಗುವುದು. ಮಿದುಳನ್ನು ಪರೀಕ್ಷಿಸಲು, ಕಿವಿಯ ಹಿಂಭಾಗದಿಂದ ಪ್ರಾರಂಭಿಸಿ, ನೆತ್ತಿಯ ಮೇಲುಗಡೆಯಿಂದ ಇನ್ನೊಂದು ಕಿವಿಯ ಹಿಂಭಾಗದವರೆಗೆ ಕುಯ್ಯಲಾಗುವುದು. ಶವಪರೀಕ್ಷೆ ಮುಕ್ತಾಯವಾದ ನಂತರ ಕುಯ್ದಿರುವ ಭಾಗವನ್ನು ಒಪ್ಪವಾಗಿ ಹೊಲಿಯಬಹುದು ಹಾಗೂ ಶವದ ತಲೆಯನ್ನು ಶವಸಂಸ್ಕಾರಕ್ಕಾಗಿ ದಿಂಬಿನ ಮೇಲೆ ಇಟ್ಟಿರುವಾಗ ಇದು ಕಾಣುವುದಿಲ್ಲ. ನೆತ್ತಿಚರ್ಮವನ್ನು ಬುರುಡೆಯಿಂದ ಎರಡು ಮಡಿಕೆಗಳಲ್ಲಿ ಎಳೆದು ಮುಂಭಾಗದ ಮಡಿಕೆಯನ್ನು ಮುಖದ ಮೇಲೆ ಮತ್ತು ಹಿಂಭಾಗದ ಮಡಿಕೆಯನ್ನು ಕತ್ತಿನ ಹಿಂಬದಿಗೆ ಹೋಗುವಂತೆ ಎಳೆಯಲಾಗುವುದು. ಬುರುಡೆಯನ್ನು, ಅದರ ತಯಾರಿಕೆಗಾಗಿ, ಸ್ಟ್ರೈಕರ್ ಗರಗಸ ಎಂಬ ಹೆಸರನ್ನು ಹೊಂದಿರುವ ಒಂದು ಸಲಕರಣೆಯಿಂದ ಕತ್ತರಿಸಲಾಗುವುದು ಹಾಗೂ ಇದು ಒಂದು "ಟೋಪಿ" ಆಕಾರವನ್ನು ರೂಪಿಸುತ್ತದೆ, ಅದನ್ನು ಸುಲಭವಾಗಿ ಮೇಲಕ್ಕೆತ್ತಿ ಮಿದುಳನ್ನು ನೋಡಬಹುದು. ಸಿಟು ಮೂಲಕ ಮಿದುಳನ್ನು ಪರೀಕ್ಷಿಸಲಾಗುವುದು. ನಂತರ ಮಿದುಳು ಕಪಾಲ ನರಮಂಡಲ ಮತ್ತು ಕಶೇರು ರಜ್ಜುವಿನ ಜೊತೆ ಇರುವ ಸಂಪರ್ಕವನ್ನು ಕಡಿಯಲಾಗುವುದು ಮತ್ತು ಮಿದುಳನ್ನು ಮತ್ತಷ್ಟು ಪರೀಕ್ಷೆಗಳಿಗಾಗಿ ಮೇಲಕ್ಕೆ ತೆಗೆಯಲಾಗುವುದು. ಪರೀಕ್ಷೆಗೆ ಮುನ್ನ ಮಿದುಳನ್ನು ಸಂರಕ್ಷಿಸಿಡಬೇಕಾದ ಅಗತ್ಯವಿದ್ದರೆ ಅದನ್ನು ಫಾರ್ಮಾಲಿನ್ (ಶೇ. ೧೫ ರ ಫಾರ್ಮಾಲ್ಡೀಹೈಡ್ ಅನಿಲದ ಕಾಪು ದ್ರಾವಣ) ಇರುವ ದೊಡ್ಡ ಪಾತ್ರೆಯಲ್ಲಿ ಕನಿಷ್ಠ ಎರಡು ವಾರಗಳ ಕಾಲ ಇರಿಸಲಾಗುವುದು, ಆದರೆ ನಾಲ್ಕು ವಾರಗಳಾದರೆ ಹೆಚ್ಚು ಸೂಕ್ತ. ಇದು ಮಿದುಳನ್ನು ಸಂರಕ್ಷಿಸುವುದೇ ಅಲ್ಲದೆ, ಅದನ್ನು ದೃಢವಾಗಿಸುತ್ತದೆ, ಹಾಗಾಗಿ ಅದನ್ನು ಅದರ ಅಂಗಾಶಗಳಿಗೆ ಹಾನಿಯಾಗದಂತೆ ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.

ದೇಹದ ಮರುಸಂಯೋಜನೆ

[ಬದಲಾಯಿಸಿ]

ಶವಪರೀಕ್ಷೆಯ ಅತಿಮುಖ್ಯ ಭಾಗವೆಂದರೆ ಪರೀಕ್ಷೆಯ ನಂತರ ಮೃತವ್ಯಕ್ತಿಯ ಸಂಬಂಧಿಗಳು ಇಚ್ಛಿಸಿದರೆ ಅದನ್ನು ನೋಡಲು ಆಗುವಂತೆ ದೇಹವನ್ನು ಮರುಸಂಯೋಜನೆ ಮಾಡುವುದು. ಪರೀಕ್ಷೆಯ ನಂತರ ದೇಹ ಎರಡೂ ಕಡೆಯಲ್ಲಿ ಎದೆ ಮಡಿಕೆಗಳನ್ನು ಹೊಂದಿರುವ ಒಂದು ತೆರೆದಿರುವ ಎದೆ ಗೂಡನ್ನು ಹೊಂದಿರುತ್ತದೆ, ತಲೆ ಬುರುಡೆಯ ಮೇಲ್ಬಾಗ ಕಾಣೆಯಾಗಿರುತ್ತದೆ ಮತ್ತು ಚರ್ಮದ ಮಡಿಕೆಗಳು ಮುಖ ಮತ್ತು ಕತ್ತಿನ ಮೇಲೆ ಎಳೆಯಲಾಗಿರುತ್ತದೆ. ಮುಖ, ಭುಜಗಳು, ಕೈಗಳು ಅಥವಾ ಕಾಲುಗಳನ್ನು ಆಂತರಿಕವಾಗಿ ಪರೀಕ್ಷೆ ಮಾಡುವುದು ಅಪರೂಪ. ಯು.ಕೆ. ಯಲ್ಲಿ, ಮಾನವ ಅಂಗಾಂಶ ಕಾಯ್ದೆ ೨೦೦೪ ರ ನಂತರ ಕುಟುಂಬ ಮುಂದಿನ ತನಿಖೆಗಾಗಿ ಯಾವುದೇ ಅಂಗಾಂಶವನ್ನು ಉಳಿಸಿಟ್ಟುಕೊಳ್ಳುವುದಕ್ಕೆ ಅನುಮತಿ ನೀಡದಿದ್ದ ಪಕ್ಷದಲ್ಲಿ ಎಲ್ಲ ಅಂಗಗಳನ್ನು ಮತ್ತು ಅಂಗಾಂಶಗಳನ್ನು ದೇಹಕ್ಕೆ ಕಡ್ಡಾಯವಾಗಿ ಹಿಂತಿರುಗಿಸಬೇಕು. ಸಾಮಾನ್ಯವಾಗಿ ಆಂತರಿಕ ದೇಹ ಪೊಟರೆಯನ್ನು ಹತ್ತಿ ಅಥವಾ ಬೇರಾವುದೇ ಸೂಕ್ತ ವಸ್ತುವಿನಿಂದ ಮುಚ್ಚಲ್ಪಡುತ್ತದೆ, ಅನಂತರ ಅಂಗಗಳನ್ನು ಸೋರಿಕೆ ತಡೆಗಟ್ಟುವುದಕ್ಕಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ದೇಹದ ಪೊಟರೆಯೊಳಗೆ ಇರಿಸಲಾಗುವುದು. ಎದೆಯ ಮಡಿಕೆಗಳನ್ನು ಆ ನಂತರ ಮುಚ್ಚಲಾಗುವುದು ಮತ್ತು ಸೇರಿಸಿ ಹೊಲಿಯಲಾಗುವುದು ಮತ್ತು ತಲೆ ಬುರುಡೆಯ ಟೊಪ್ಪಿಗೆಯನ್ನು ಅದರ ಜಾಗಕ್ಕಿಟ್ಟು ಹೊಲಿಯಲಾಗುವುದು. ನಂತರ ದೇಹವನ್ನು ಶವ ವಸ್ತ್ರದಲ್ಲಿ ಸುತ್ತಲಾಗುವುದು ಹಾಗೂ ಮೃತವ್ಯಕ್ತಿಯ ಸಂಬಂಧಿಕರಿಗೆ ಶವವನ್ನು ಸುಗಂಧ ಲೇಪನ ಮಾಡಿದ ನಂತರ ಶವ ಸಂಸ್ಕಾರಕ್ಕೆತೆಗೆದುಕೊಂಡು ಹೋಗುವಾಗ ಪರೀಕ್ಷಾ ವಿಧಾನಗಳನ್ನು ಅನುಸರಿಸಲಾಗಿದೆಯೆಂದು ತಿಳಿಯುವುದಿಲ್ಲ.

ಇವನ್ನೂ ನೋಡಿ

[ಬದಲಾಯಿಸಿ]
  • ವಿರ್ಟೋಪ್ಸಿ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ Rothenberg, Kelly (೨೦೦೮). "The Autopsy Through History". In Ayn Embar-seddon, Allan D. Pass (eds.) (ed.). Forensic Science. Salem Press. pp. ೧೦೦. ISBN ೯೭೮-೧೫೮೭೬೫೪೨೩೭. {{cite book}}: |editor= has generic name (help); Check |isbn= value: invalid character (help)
  2. "ಆರ್ಕೈವ್ ನಕಲು". Archived from the original on 2011-03-09. Retrieved 2010-11-04.
  3. ೩.೦ ೩.೧ Schafer, Elizabeth D. (೨೦೦೮). "Ancient science and forensics". In Ayn Embar-seddon, Allan D. Pass (eds.) (ed.). Forensic Science. Salem Press. pp. ೪೩. ISBN ೯೭೮-೧೫೮೭೬೫೪೨೩೭. {{cite book}}: |editor= has generic name (help); Check |isbn= value: invalid character (help)
  4. ಜಿಯೊವಾನಿ ಬಟಿಸ್ಟಾ ಮೋರ್ಗಾಗ್ನಿ -- ಬ್ರಿಟಾನಿಕಾ ಆನ್‍ಲೈನ್ ಎನ್‍ಸೈಕ್ಲೋಪೀಡಿಯಾ
  5. Ravakhah K (2006). "Death certificates are not reliable: revivification of the autopsy". South. Med. J. 99 (7): 728–33. doi:10.1097/01.smj.0000224337.77074.57. PMID 16866055.
  6. Brian Gallagher, Burton EC, McDonald KM, Goldman L (2003). "Changes in rates of autopsy-detected diagnostic errors over time: a systematic review". JAMA. 289 (21): 2849–56. doi:10.1001/jama.289.21.2849. PMID 12783916.{{cite journal}}: CS1 maint: multiple names: authors list (link)
  7. Roulson J, Benbow EW, Hasleton PS (2005). "Discrepancies between clinical and autopsy diagnosis and the value of post mortem histology; a meta-analysis and review". Histopathology. 47 (6): 551–9. doi:10.1111/j.1365-2559.2005.02243.x. PMID 16324191.{{cite journal}}: CS1 maint: multiple names: authors list (link)
  8. Combes A, Mokhtari M, Couvelard A; et al. (2004). "Clinical and autopsy diagnoses in the intensive care unit: a prospective study". Arch. Intern. Med. 164 (4): 389–92. doi:10.1001/archinte.164.4.389. PMID 14980989. {{cite journal}}: Explicit use of et al. in: |author= (help)CS1 maint: multiple names: authors list (link)
  9. Papadakis MA, Mangione CM, Lee KK, Kristof M (1991). "Treatable abdominal pathologic conditions and unsuspected malignant neoplasms at autopsy in veterans who received mechanical ventilation". JAMA. 265 (7): 885–7. doi:10.1001/jama.265.7.885. PMID 1992186.{{cite journal}}: CS1 maint: multiple names: authors list (link)
  10. ೧೦.೦ ೧೦.೧ ೧೦.೨ ೧೦.೩ Strasser, Russell S. (೨೦೦೮). "Autopsies". In Ayn Embar-seddon, Allan D. Pass (eds.) (ed.). Forensic Science. Salem Press. pp. ೯೫. ISBN ೯೭೮-೧೫೮೭೬೫೪೨೩೭. {{cite book}}: |editor= has generic name (help); Check |isbn= value: invalid character (help)
  11. ಯು.ಕೆ. ಸಂಸದೀಯ ವ್ಯವಹಾರಗಳ ಇಲಾಖೆ (೨೦೦೬), ಕ್ರೋನರ್ ಸರ್ವೀಸ್ ರಿಪಾರಮ್ ಬ್ರೀಫಿಂಗ್ ನೋಟ್, p. ೬
  12. ೧೨.೦ ೧೨.೧ ರೋಗ ನಿಯಂತ್ರಣ ಕೇಂದ್ರ (೧೯೮೮) , ಕರೆಂಟ್ ಟ್ರೆಂಡ್ಸ್ ಅಟಾಪ್ಸಿ ಫ್ರೀಕ್ವೆನ್ಸಿ -- ಯುನೈಟೆಡ್ ಸ್ಟೇಟ್ಸ್, 1980-1985, ಮೋರ್ಬಿಡಿಟಿ ಅಂಡ್ ಮೋರ್ಟಾಲಿಟಿ ವೀಕ್ಲಿ ರಿಪೋರ್ಟ್ , ೩೭ (೧೨);೧೯೧-೪
  13. ಡಿ.ಎ. ಪೊಲ್ಲಾಕ್ ಎಟ್ ಅಲ್ (೧೯೯೩), ಟೆಂಪೊರಲ್ ಅಂಡ್ ಜಿಯೋಗ್ರಾಫಿಕ್ ಟ್ರೆಂಡ್ಸ್ ಇನ್ ದಿ ಅಟೋಪ್ಸಿ ಫ್ರೀಕ್ವೆನ್ಸಿ ಆಫ್ ಬ್ಲಂಟ್ ಅಂಡ್ ಪೆನೆಟ್ರೇಟಿಂಗ್ ಟ್ರೌಮಾ ಡೆತ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್, JAMA , ೨೬೯ (೧೨):೧೫೨೫-೩೧ PubMed

ಬಾಹ್ಯ ಕೊಂಡಿಗಳು

[ಬದಲಾಯಿಸಿ]