ಬಾಯಾಪ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿದುಳಿನ ಬಾಯಾಪ್ಸಿ

ಬಾಯಾಪ್ಸಿ(ಜೀವುಂಡಿಗೆ)ಯು ಪರಿಶೀಲನೆಗಾಗಿ ಜೀವಕೋಶಗಳು ಅಥವಾ ಅಂಗಾಂಶಗಳನ್ನು ಹೊರತೆಗೆದು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡುವ ವೈದ್ಯಕೀಯ ಪರೀಕ್ಷೆ. ಅದು ಒಂದು ರೋಗದ ಇರವು ಅಥವಾ ವೈಶಾಲ್ಯವನ್ನು ನಿರ್ಧರಿಸಲು ಜೀವಂತ ವ್ಯಕ್ತಿಯ ಅಂಗಾಂಶದ ವೈದ್ಯಕೀಯ ತೆಗೆಯುವಿಕೆ. ಅಂಗಾಂಶವನ್ನು ಸಾಮಾನ್ಯವಾಗಿ ರೋಗ ಶಾಸ್ತ್ರಜ್ಞನಿಂದ ಸೂಕ್ಷ್ಮದರ್ಶಕದ ಕೆಳಗೆ ಪರಿಶೀಲಿಸಲಾಗುತ್ತದೆ, ಮತ್ತು ರಾಸಾಯನಿಕವಾಗಿಯೂ ವಿಶ್ಲೇಷಿಸಬಹುದು.

ಉಪಯೋಗಗಳು[ಬದಲಾಯಿಸಿ]

ವಿಪತ್ಕಾರಕ ಹಾಗೂ ಅಪಾಯಕರವಲ್ಲದ ಗಡ್ಡೆಗಳನ್ನು ಪತ್ತೆಹಚ್ಚಲು ಈ ವಿಧಾನ ಅಗತ್ಯ. ಈ ಪರೀಕ್ಷೆಯಿಂದ ಏಡಿಗಂತಿಗಳ ಸ್ಥಳೀಯ ವ್ಯಾಪನೆಯ ಕ್ಷೇತ್ರವನ್ನು ತಿಳಿದುಕೊಳ್ಳಬಹುದು. ಸ್ಥಳೀಯ ದುಗ್ಧರಸ ಗ್ರಂಥಿಗಳಿಗೆ ಏಡಿಗಂತಿಯ ಕೋಶಗಳು ಆಗಲೇ ಒಯ್ಯಲ್ಪಟ್ಟಿವೆಯೇ ಎನ್ನುವುದನ್ನೂ ತಿಳಿದುಕೊಳ್ಳಬಹುದು. ಗಡ್ಡೆಯನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕೇ, ಹಾಗೆ ತೆಗೆದರೆ ಎಷ್ಟರಮಟ್ಟಿಗೆ ತೆಗೆಯಬೇಕು ಮತ್ತು ತೆಗೆದಿರುವುದು ಸಾಕಾಗಿದೆಯೇ ಎನ್ನುವ ಮಾಹಿತಿಗಳನ್ನು ಈ ಪರೀಕ್ಷಾವಿಧಾನ ಒದಗಿಸುತ್ತದೆ. ವೃಷಣ, ಗರ್ಭಕೋಶ, ಯೋನಿ ಇವುಗಳ ಜೀವುಂಡಿಗೆಗಳು ಈ ಅಂಗಗಳಲ್ಲಿ ಸ್ವಾಭಾವಿಕ ದೈಹಿಕಕ್ರಿಯೆಗಳು ಜರಗುತ್ತಿವೆಯೋ ಇಲ್ಲವೋ ಎನ್ನುವುದನ್ನು ತಿಳಿಸುತ್ತವೆ. ಎಡೆಬಿಡದ ಜ್ವರದಲ್ಲಿ ಸೋಂಕಿನ ಮೂಲ ತಿಳಿಯದಾದಾಗ ಕೆಲವುಬಾರಿ ಜೀವುಂಡಿಗೆಯ ವಿಧಾನದಿಂದ ಅದರ ಕಾರಣವನ್ನು ಪತ್ತೆಹಚ್ಚಬಹುದು.

ಶಸ್ತ್ರವಿಧಾನಗಳು , ಎಚ್ಚರಿಕೆ ಮತ್ತು ಜಟಿಲತೆಗಳು[ಬದಲಾಯಿಸಿ]

ಈ ಪರೀಕ್ಷಾವಿಧಾನದಿಂದ ಅನುಕೂಲವಾಗಲು ಅಂಗದ ತುಣುಕೊಂದನ್ನು ಅಥವಾ ಒಳಗಿರುವ ದ್ರವವನ್ನು ತಕ್ಕ ಶಸ್ತ್ರಕಾರ್ಯದಿಂದ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಆ ವಸ್ತು ಕೆಡದಂತೆ ಅದನ್ನು ಜೋಪಾನಮಾಡಿ ತಕ್ಕ ರಾಸಾಯನಿಕಗಳಿಂದ ಸಿದ್ಧಗೊಳಿಸಿ ಸೂಕ್ಷ್ಮದರ್ಶಕದ ಪರೀಕ್ಷೆಗೆ ಅಣಿಮಾಡುವುದು ಕೂಡ ಅಷ್ಟೇ ಮುಖ್ಯ. ಈ ಎರಡು ಕಾರ್ಯಗಳಲ್ಲಿ ಯಾವುದು ಕೆಟ್ಟರೂ ಪರೀಕ್ಷೆಯಿಂದ ಒದಗುವ ಮಾಹಿತಿ ತಪ್ಪಾಗಿ ರೋಗದ ವಿಷಯದಲ್ಲಿ ಮುಂದೆ ಅನುಸರಿಸಬೇಕಾದ ಕ್ರಮದಲ್ಲಿ ಏರುಪೇರಾಗಿ ಅಪಾಯ ಸಂಭವಿಸಬಹುದು.

ವಾಯುಚೂಷಣ ಸೂಜಿ, ಹೀರೊತ್ತುವ ಸ್ಪಂಜು, ಕೆರೆಯುವ ಚಮಚ, ಹೆರೆಯುವ ಕಿರುಗತ್ತಿ, ಮೂಳೆ ಕೊರೆಯುವ ಉರುಳು ಗರಗಸ, ಕತ್ತರಿಸುವ ಇಕ್ಕಳ-ಇವೇ ಮುಂತಾದವು ಜೀವುಂಡಿಗೆಯನ್ನು ಪಡೆಯಲು ಉಪಯೋಗಿಸುವ ಶಸ್ತ್ರವಿಧಾನಗಳು. ಸಾಮಾನ್ಯವಾಗಿ ಇವು ಸಣ್ಣ ಶಸ್ತ್ರಕ್ರಿಯೆಗಳೆಂದು ಪರಿಗಣಿಸಲ್ಪಟ್ಟರೂ ಸಾಕಷ್ಟು ಎಚ್ಚರದಿಂದಿರದಿದ್ದರೆ ಜಟಿಲತೆಗಳು ಉಂಟಾಗಬಹುದು. ಹತ್ತಿರದ ರಕ್ತನಾಳಗಳೂ ನರಗಳೂ ಕತ್ತರಿಸಿಹೋಗುವುದು. ಜೀವುಂಡಿಗೆ ಹಾಕಿದ ಸ್ಥಳದಲ್ಲಿ ಸೋಂಕು ಉಂಟಾಗಿ ಕೀತು ವ್ರಣವಾಗುವುದು. ಒರಟು ವಿಧಾನಗಳಿಂದ ಏಡಿಗಂತಿಯ ಕೋಶಗಳು ದೇಹದ ಇತರ ಭಾಗಗಳಿಗೆ ರಕ್ತನಾಳ ದುಗ್ಧರಸನಾಳಗಳ ಮೂಲಕ ಪಸರಿಸುವುದು, ಉಂಡಿಗೆ ಹಾಕುವಾಗ ಉಪಯೋಗಿಸುವ ಸ್ಥಳೀಕಸಂವೇದನಾ ನಾಶಕವಸ್ತುವಿನಿಂದ ಅನನುಕೂಲ ಪರಿಣಾಮಗಳು ತಲೆದೋರುವುದು-ಇವೆಲ್ಲ ಇಂಥ ಜಟಿಲತೆಗಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: