ವಿಷಯಕ್ಕೆ ಹೋಗು

ಉಡುಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡುಗೆ: ಮಾನವ ಶರೀರವನ್ನು ಮುಚ್ಚುವ ಸಾಧನ; ಉಡುಪು, ಶರೀರವನ್ನು ಮುಚ್ಚುವುದರೊಂದಿಗೆ ರಕ್ಷಿಸುತ್ತದೆ ಮತ್ತು ಅಲಂಕರಿಸುತ್ತದೆ. ಮಾನವರಿಗೂ ಪ್ರಾಣಿಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಅವರು ಧರಿಸುವ ಉಡುಪು.

ಮಾನವರು ಉಡುಪನ್ನೇಕೆ ಧರಿಸುವರೆಂಬುದರ ವಿಚಾರವಾಗಿ ತತ್ತ್ವಜ್ಞರೂ ಸಾಹಿತಿಗಳೂ, ಮಾನವಶಾಸ್ತ್ರಜ್ಞರೂ ಮನಶ್ಶಾಸ್ತ್ರಜ್ಞರೂ ಹೀಗೆ ಎಲ್ಲ ಬಗೆಯ ಚಿಂತಕರೂ ವಿಭಿನ್ನ ಚಿಂತನೆಗಳನ್ನು ನಡೆಸಿದ್ದಾರೆ. ಸಭ್ಯರೆನಿಸಿಕೊಳ್ಳಬೇಕೆಂಬ ಹಠಾತ್ ಪ್ರೇರಣೆಯಿಂದ ಮಾನವರು ಮೊದಮೊದಲು ಉಡುಪು ಧರಿಸತೊಡಗಿದರೆಂಬ ವಾದವನ್ನು ಆಧುನಿಕ ಮಾನವಶಾಸ್ತ್ರಜ್ಞರು ತಳ್ಳಿಹಾಕಿದ್ದಾರೆ. ಏಕೆಂದರೆ ಮಾನರಕ್ಷಣೆಯ ಅರ್ಥವೇ ಕಾಲದಿಂದ ಕಾಲಕ್ಕೆ ಬಹಳ ಮಟ್ಟಿಗೆ ವ್ಯತ್ಯಾಸಗೊಂಡಿದೆ. ಇದನ್ನು ಕುರಿತ ಭಾವನೆಯೆಲ್ಲ ಬಹುತೇಕ ಕೇವಲ ಅವಿಚಾರಕ ಸಂಪ್ರದಾಯಗಳ ಸಮುದಾಯ ಫಲ. ಅರಬ್ಬೀ ಹೆಂಗಸು ಬುರಕಿ ಧರಿಸದಿದ್ದಾಗ ಆಕೆಯನ್ನು ಅಪರಿಚಿತರು ಕಂಡರೆ ಆಕೆ ಒಡನೆಯೇ ಉಟ್ಟ ಲಂಗದಿಂದ ಮುಖ ಮುಚ್ಚಿಕೊಳ್ಳುತ್ತಾಳೆ. ಕಾಲುಗಳನ್ನು ತೋರಗೊಡುವುದು ಅಸಭ್ಯವೆಂಬುದು ಚೀನಿಯರ ನಂಬಿಕೆಯಾಗಿತ್ತು. ಐರೋಪ್ಯ ಸ್ತ್ರೀಯರು ತಮ್ಮ ಎದೆಯ ಭಾಗದ ಪ್ರದರ್ಶನವಾಗುವಂತೆ ಉಡುಪು ಧರಿಸಿದ್ದರೂ ಕಾಲಿನ ಹರಡುಕಾಣಿಸಿಕೊಂಡಾಗ ನಾಚಿಕೆಯಿಂದ ಮುದುಡಿಕೊಳ್ಳುವುದನ್ನು 20ನೆಯ ಶತಮಾನದ ಆದಿಕಾಲದವರೆಗೂ ಕಾಣಬಹುದಾಗಿತ್ತು.

ಚಳಿ, ಗಾಳಿ, ಹಿಮ ಮುಂತಾದ ಪ್ರಾಕೃತಿಕ ವ್ಯಾಪಾರಗಳಿಂದ ದೇಹ ರಕ್ಷಿಸಿಕೊಳ್ಳುವ ಉದ್ದೇಶದಿಂದ ಉಡುಪಿನ ಸೃಷ್ಟಿಯಾಯಿತೆನ್ನುವ ವಾದವೂ ಉಂಟು. ಆದರೆ ಪ್ರಪಂಚದ ಪುರಾತನ ನಾಗರಿಕತೆಗಳೆಲ್ಲ ವಿಕಾಸ ಹೊಂದಿದ್ದು ಉಷ್ಣ ದೇಶಗಳಲ್ಲಿ. ಕಚ್ಚುವ ಹುಳುಹುಪ್ಪಟೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮನುಷ್ಯ ಉಡುಪನ್ನು ಸೃಷ್ಟಿಸಿದನೆಂಬುದು ಬಹುಶಃ ಹೆಚ್ಚು ಸಮಂಜಸ. ಬೇಟೆಯ ಅಸ್ತ್ರಗಳನ್ನೂ ಬಲಿಬಿದ್ದ ಪ್ರಾಣಿಗಳನ್ನೂ ಕೈಯಿಂದ ಹೊರುವುದಕ್ಕಿಂತ ಮೈಗೆ ಕಟ್ಟಿಕೊಳ್ಳುವುದೂ ನಡುವಿಗೆ ಬಿಗಿದ ಒರೆಯಲ್ಲೊ ಚೀಲದಲ್ಲೊ ಅವನ್ನು ಹಾಕಿಕೊಳ್ಳುವುದೂ ಹೆಚ್ಚು ಸರಾಗವೆಂದು ಆತನಿಗೆ ಎನಿಸಿರಬೇಕು.

ಮನುಷ್ಯ ತನ್ನ ಪ್ರತಿಷ್ಠೆ ಬೆಳೆಸಿಕೊಳ್ಳುವ ಉದ್ದೇಶದಿಂದಲೂ ಉಡುಪಿಗೆ ಮಾರು ಹೋಗಿದ್ದಿರಬಹುದು. ಉಡುಪು ಆಭರಣಗಳೂ ಪ್ರಾಣಿಗಳ ಪಾಲಿಗೆ ಸಾಧ್ಯವಿಲ್ಲದ ಒಂದು ಪರಿಕರ. ತಲೆಯ ಟೊಪ್ಪಿಗೆಯಲ್ಲಿ ಗರಿಯೊಂದನ್ನು ಸಿಕ್ಕಿಸಿಕೊಂಡರೆ ಅವನ ನಿಲುವೂ ಆತ್ಮವಿಶ್ವಾಸವೂ ಬೆಳೆದಂತೆ. ಹೆಚ್ಚು ಗರಿಗಳನ್ನು ಸಿಕ್ಕಿಸಿಕೊಂಡಷ್ಟೂ ಅವು ಇತರರ ಅಸೂಯೆಗೆ ಕಾರಣ. ಇವನ್ನು ಧರಿಸಲು ಹೋರಾಟ ಅನಿವಾರ್ಯವೇ ಆದೀತು. ಈ ಹೋರಾಟದಲ್ಲಿ ಗೆದ್ದವರಿಗೆ ಮಾತ್ರ ಹೆಚ್ಚು ಪುಕ್ಕ ಧರಿಸುವ ಅಧಿಕಾರ. ಇಂದಿಗೂ ಸೈನ್ಯದಲ್ಲೂ ಸಾರ್ವಜನಿಕ ಜೀವನದಲ್ಲೂ ಪ್ರಭಾವ ಬೀರುವ ಪದಕಗಳೂ ಬಗೆ ಬಗೆಯ ಉಡುಪುಗಳೂ ಆಯಾ ಅಂತಸ್ತುಗಳ ಸಂಕೇತ.

ಹೆಣ್ಣಿನ ಉಡುಪು ಅನುಸರಿಸುವ ಧರ್ಮವೇ ಬೇರೆ. ಸ್ತ್ರೀದೇಹದ ಬೇರೆ ಬೇರೆ ಭಾಗಗಳೂ ವಸ್ತ್ರ ರಹಿತವಾಗುವುದು ಗಂಡಸಿನ ಗಮನ ಸೆಳೆಯುವ ಸಾಧನಗಳೆಂದು ಫ್ಲೂಗೆಲ್ ಮುಂತಾದ ಮನೋವಿಜ್ಞಾನಿಗಳು ನೀಡಿರುವ ವಿವರಣೆ. ಉಡುಪು ತಯಾರಿಸುವವರು ಆಗಿಂದಾಗ್ಗೆ ಬಳಕೆಗೆ ತರುವ ಹೊಸ ಹೊಸ ಫ್ಯಾಷನ್ನುಗಳು ಈ ಗಮನ ಕೇಂದ್ರದ ಬದಲಾವಣೆಗಾಗಿ ಅನುಸರಿಸುವ ಹವಣರಿತ ವಿಧಾನಗಳೆಂಬುದಾಗಿ ಅವರ ವಿಶ್ಲೇಷಣೆ. ಆದರೆ ಹೆಂಗಸರ ಉಡುಪಿನ ಹಿಂದೆ ಫ್ಯಾಷನ್ನಿನ ದೃಷ್ಟಿಯೇ ಎಂದೆಂದೂ ಇರಲಿಲ್ಲ. ಸಾಮಾನ್ಯ ಸ್ತ್ರೀಪುರುಷರ ಹಿಂದೆ ಇರುವ ಮುಖ್ಯ ಉದ್ದೇಶವೆಂದರೆ ಸಂಸಾರದ ಬೆಳೆವಣಿಗೆ. ಗೃಹಕೃತ್ಯದ ನಿತ್ಯಕೆಲಸಗಳಲ್ಲಿ ತೊಡಗುವ ದೈಹಿಕ ಮಾನಸಿಕ ಸಾಮರ್ಥ್ಯ, ಸಾಮರಸ್ಯ. ಇಂಥ ಸನ್ನಿವೇಶಗಳಲ್ಲಿ ಉಡುಪು ಎಂದೂ ಪ್ರಧಾನವಾಗಿಲ್ಲ. ಗ್ರೀಕ್ ನಾಗರಿಕತೆಯ ಔನ್ನತ್ಯದ ಕಾಲದಲ್ಲೂ ಸಂಭಾವಿತ ಸಂಸಾರಗಳಲ್ಲಿ ಫ್ಯಾಷನ್ಗಳು ಸುಳಿದಿರಲಿಲ್ಲ. ಮುಂದೆ ಸಾಮ್ರಾಜ್ಯಗಳು ಬೆಳೆದು ರಾಜವೈಭವದ ದಿನಗಳು ಬಂದಾಗ ರಾಜರ, ಶ್ರೀಮಂತರ ಗಮನ ಸೆಳೆಯುವ ಉದ್ದೇಶದಿಂದ ಫ್ಯಾಷನ್ನುಗಳು ಬೆಳೆದುವೆಂಬುದು ಇತಿಹಾಸಕಾರ ಕಂಡಿರುವ ಸತ್ಯ. ಅಂತೂ ಒಟ್ಟಿನಲ್ಲಿ ಅಂತಸ್ತಿನ ಹಮ್ಮು, ಮನ ಸೆಳೆಯುವ ಬಿನ್ನಾಣ, ಉಪಯುಕ್ತತೆ- ಇವೇ ಫ್ಯಾಷನ್ನುಗಳ ಮೂಲ. ಗಂಡಿನ ಉಡುಪಿಗೆ ಮೊದಲನೆಯದೂ ಕೊನೆಯದೂ ಹೆಣ್ಣಿನ ಉಡುಪಿಗೆ ಕೊನೆಯ ಎರಡೂ ಬಹುತೇಕ ಉದ್ದೇಶ. ಫ್ಯಾಷನ್ನುಗಳಿಗೆ ಅಸ್ತಿಭಾರವಾಗಿರುವ ಇನ್ನೊಂದು ಪ್ರವೃತ್ತಿಯೆಂದರೆ ರಾಷ್ಟ್ರ ವೈಶಿಷ್ಟ್ಯ. ಹಿಂದಿನ ಕಾಲದಲ್ಲಿ ಉಡುಗೆ ತೊಡುಗೆಗಳು ಬೇಗ ಬದಲಾಗುತ್ತಿರಲಿಲ್ಲ. ಆದರೆ ಜನಸಂಪರ್ಕ ಬೆಳೆದಂತೆ, ಸಂಚಾರಸಾಧನಗಳಲ್ಲಿ ಕ್ರಾಂತಿಯಾದಂತೆ, ರಾಷ್ಟ್ರಪ್ರಜ್ಞೆ ಮೂಡಿದಂತೆ ಒಂದೊಂದು ರಾಷ್ಟ್ರದ ವೈಶಿಷ್ಟ್ಯವಾಗಿ ಅಲ್ಲಲ್ಲಿನ ಜನರ ಉಡುಗೆ ತೊಡುಗೆಗಳು ಏಕರೀತಿಯವಾಗತೊಡಗಿದುವು. 18ನೆಯ ಶತಮಾನದ ಅಂತ್ಯದವರೆಗೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಂಗಸಿನ ಉಡುಗೆ ತೊಡುಗೆಗಳು ಆಕೆಯ ವರ್ಗವನ್ನೆತ್ತಿ ಸಾರುತ್ತಿದ್ದವು. ಆದರೆ ಮನ ಸೆಳೆಯುವುದು ಮುಖ್ಯ ಗುರಿಯಾದ ಮೇಲೆ ಈ ಪ್ರವೃತ್ತಿ ಕಡಿಮೆಯಾಗುತ್ತಿದೆ.

ಮಧ್ಯಯುಗದ ಕಾಲದಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉಡುಪುಗಳ ರೀತಿನೀತಿಗಳು ಬಹು ಬೇಗ ಬೇಗ ಬದಲಾಗಿವೆ. ಉಡುಗೆತೊಡುಗೆ ಧರಿಸುತ್ತಿದ್ದವರ ಕಾಲವನ್ನು ಅವರ ಉಡುಗೆತೊಡುಗೆಗಳಿಂದಲೇ ನಿರ್ಣಯ ಮಾಡುವುದು ಸಾಧ್ಯ. ಆದರೆ 19ನೆಯ ಶತಮಾನಕ್ಕಿಂತ ಹಿಂದಿನ ಕಾಲದ ಉಡುಪುಗಳು ಈಗ ಲಭ್ಯವಿಲ್ಲ. ಈಚೆಗೆ ಉಡುಪುಗಳ ತಯಾರಿಕೆಯಲ್ಲಿ ಯಂತ್ರಗಳ ಆಗಮನವಾಗಿ ಅವುಗಳ ಉತ್ಪನ್ನದ ಪ್ರಮಾಣ ಹೆಚ್ಚಿರುವುದರಿಂದ ಅವುಗಳಲ್ಲಿ ಈಗ ಹೆಚ್ಚು ಹೆಚ್ಚು ಏಕರೂಪತೆ ಬರುತ್ತಿದೆ.

ಉಡುಗೆಯ ವಿಕಾಸ[ಬದಲಾಯಿಸಿ]

ಮೊದಮೊದಲು ಮಾನವನ ಉಡುಪು ಸಸ್ಯಮೂಲವಾದದ್ದಾಗಿ ರಲಿಲ್ಲ, ಪ್ರಾಣಿಮೂಲವಾದದ್ದಾಗಿತ್ತು - ಎಂದು ಊಹಿಸಬಹುದು. ಹುಲ್ಲು-ತೊಗಟೆಗಳನ್ನೂ ಹೆಣೆದ ನಾರುಗಳನ್ನೂ ತೊಡುವ ಮುನ್ನ ಅವನು ಪ್ರಾಣಿಯ ಚರ್ಮವನ್ನುಡುತ್ತಿದ್ದ. ಶಿಲಾಯುಗಕ್ಕೆ ಬರುವ ವೇಳೆಗೆ ಅವನು ನೇಯ್ಗೆ ಕಲಿತಿದ್ದ. ಆ ಕಾಲದ ಬಟ್ಟೆಗಳು ನಮಗೆ ದೊರಕುವುದಿಲ್ಲವಾದರೂ ಅಂದಿನವಾಗಿ ಸಿಕ್ಕಿರುವ ಕುಡಿಕೆ ಮಡಿಕೆಗಳ ಮೇಲಣ ಚಿತ್ರದಿಂದ ಇದು ವ್ಯಕ್ತ. ಕಂಚಿನ ಯುಗದಲ್ಲಿ ನಾರಗಸೆ ಹಾಗೂ ಉಣ್ಣೆಯ ಬಟ್ಟೆಗಳು ಬಳಕೆಯಲ್ಲಿದ್ದವು. ಈ ಕಾಲದ ಗಂಡಸರು ಅಂಡಾಕಾರದ ವಸ್ತ್ರವನ್ನು ನಡುವೆ ಅಡ್ಡಡ್ಡಲಾಗಿ ಮಡಿಸಿ ಉಡುತ್ತಿದ್ದರು; ಅಥವಾ ವಸ್ತ್ರ ಹೊದೆದು ಪಕ್ಕಕ್ಕೆ ಬಿಗಿಯುತ್ತಿದ್ದರು. ಹೆಂಗಸರು ತುಂಡುತೋಳಿನ ಕುಪ್ಪಸವನ್ನು ಧರಿಸಿ ನಡುವಿಗೆ ಹುರಿಯಿಂದ ಹೆಣೆದ ಲಂಗ ಸುತ್ತುತ್ತಿದ್ದರು. ಕಾಲಿಗೆ ಮೆಟ್ಟು ಧರಿಸುತ್ತಿದ್ದರೇ ಎಂಬುದು ತಿಳಿದು ಬಂದಿಲ್ಲ.

ಈಜಿಪ್ಷಿಯನ್ನರ ಹಾಗೂ ಅಸ್ಸೀರಿಯನ್ನರ ಉಡುಪು ಮುಖ್ಯವಾಗಿ ನಾರಗಸೆಯದು. ಅವರಿಗೆ ಉಣ್ಣೆಯ ಬಟ್ಟೆ ಗೊತ್ತಿತ್ತು. ಆದರೆ ಮೇಲಣ ವರ್ಗದವರಲ್ಲಿ ಅದರ ಬಗ್ಗೆ ತಾತ್ಸಾರವಿತ್ತು. ಮೊಳಕಾಲವರೆಗೂ ಹರಿಯುತ್ತಿದ್ದ ಮೋಟುತೋಳಿನ ಕಪಣಿಗಳಲ್ಲಿ ವೈವಿಧ್ಯವಿರಲಿಲ್ಲ. ಆದರೆ ಬಗೆಬಗೆಯ ನೆರಿಗೆಗಳಿಂದಲೂ ಬಣ್ಣ ಸಂಯೋಜನೆಯಿಂದಲೂ ಒಡವೆಗಳಿಂದೂ ಅವರು ವೈಶಿಷ್ಟ್ಯ ಸಾಧಿಸುತ್ತಿದ್ದರು. ಗುಲಾಮರ ಉಡುಪು ತುಂಡು ದಟ್ಟಿ. ಮೆಸೊಪೋಟೇಮಿಯ ಮತ್ತು ನೈಲ್ ನದಿ ಕಣಿವೆಯ ಜನರ ಉಡಿ ಸಡಿಲ. ಇವುಗಳ ಜೊತೆಗೆ ಪುರಾತನ ಪರ್ಷಿಯನ್ನರು ಕೋಟು ಷರಾಯಿ ಮಾದರಿಯ ಬಿಗಿಯುಡುಪನ್ನೂ ಧರಿಸುತ್ತಿದ್ದರು. ಈಜಿಪ್ಷಿಯನ್ನರಲ್ಲೂ ಅಸ್ಸೀರಿಯನ್ನರಲ್ಲೂ ಚಪ್ಪಲಿ ಬಳಕೆಗೆ ಬಂದಿತ್ತು. ಮಿನೋವನ್ನರು ಚೂಪು ತುದಿಯ ಬೂಟುಗಳನ್ನು ಹಾಕಿ ಕೊಳ್ಳುತ್ತಿದ್ದರು. ಅಸ್ಸೀರಿಯನ್ನರ ಟೋಪಿ ಶಂಕುವಿನಾಕಾರ.

ಅಭಿಜಾತ ಕಾಲದ ಗ್ರೀಕರ ಮುಖ್ಯ ಉಡುಗೆಯೆಂದರೆ ದೀರ್ಘಚತುರಸ್ರಾಕಾರದ ಉಣ್ಣೆಯ ಬಟ್ಟೆ (ಹಿಮೇಟಿಯನ್). ಹೆಗಲ ಮೇಲಿಂದ ಶಾಲಿನಂತೆ ಇಡೀ ದೇಹವನ್ನು ಬಳಸುತ್ತಿದ್ದ ಇದೊಂದೇ ಸಾಮಾನ್ಯವಾಗಿ ಅವರ ವಸ್ತ್ರ. ಹಿರಿಯರು ಇದರ ಅಡಿಯಲ್ಲಿ ಉದ್ದನೆಯ ಒಳ ಅಂಗಿ (ಕೈಟನ್) ಧರಿಸುತ್ತಿದ್ದರು. ಇದು ಕೊಳವೆಯಂತಿರುತ್ತಿತ್ತು; ನಡುವಣ ಮೇಲ್ಭಾಗದಿಂದ ತಲೆ ಹೊಗಿಸುವಂತೆ ಇತ್ತು. ಹೆಂಗಸಿನ ಉಡುಗೆಯಾದ ಪಿಪ್ಲಾಸ್ ಕೂಡ ಸ್ಥೂಲವಾಗಿ ಹಿಮೇಟಿಯನ್ನಂತೆಯೇ ಇದ್ದಿತಾದರೂ ಇದರ ಮಡಿಕೆಯೂ ನಿರಿಗೆಯೂ ಹೆಚ್ಚು.

ರೋಮನ್ನರ ಉಡುಗೆಯ ವೈಶಿಷ್ಟ್ಯವೆಂದರೆ ಟೋಗ. ಇದು ತುಂಡು ವೃತ್ತದ ಆಕಾರದಲ್ಲಿ ದ್ದರೂ ಇದರ ನೆರಿಗೆಯೂ ಹಿಮೇಟಿಯನ್ನಿನಂತೆ. ಎಡಹೆಗಲ ಮೇಲಿಂದ ಸೊಂಟದ ಬಲಗಡೆಯ ದಿಕ್ಕಿನಲ್ಲಿ ಎದೆಯ ನಡುಭಾಗದ ಮೂಲಕ ಹರಿಯುತ್ತಿದ್ದ ಈ ಉಡುಪಿನ ಅಡಿಯಲ್ಲಿ ಗ್ರೀಕರಂತೆ ಒಳ ಅಂಗಿ ಧರಿಸುತ್ತಿದ್ದದ್ದೂ ಉಂಟು.

ಗ್ರೀಕರೂ ರೋಮನ್ನರೂ ವಿರಳವಾಗಿ ಹ್ಯಾಟು ಧರಿಸುತ್ತಿದ್ದರು. ಗ್ರೀಕರಿಗಿಂತ ರೋಮನ್ನ ರಲ್ಲಿ ಚಪ್ಪಲಿ ಹಾಗೂ ಬೂಟುಗಳ ಬಳಕೆ ಸ್ಪಲ್ಪ ಹೆಚ್ಚು. ಮನೆಯಿಂದ ಹೊರಗೆ ಹೋದಾಗ ಬೂಟುಗಳನ್ನು ಬಳಸುತ್ತಿದ್ದರು. ಮುಂದೆ 12ನೆಯ ಶತಮಾನದವರೆಗೆ ಗಂಡಸರು ಷರಟು ತೊಟ್ಟು ಅದರ ಮೇಲೆ ತೋಳಿರುವ ಗೌನು ಧರಿಸಿ ಬಲದೋಳಿನ ಮೇಲೆ ಬ್ರೂಚ್ ಸಿಕ್ಕಿಸಿಕೊಳ್ಳುವುದು ಅಥವಾ ಅರ್ಧವೃತ್ತಾಕಾರದ, ನಿಲುವಂಗಿಯ ರೂಪದ ಉಡುಗೆ ಧರಿಸಿ ಎದೆಯ ಮೇಲೆ ಅದನ್ನು ಹುರಿಯಿಂದ ಬಿಗಿದು ಕಟ್ಟುವುದು ವಾಡಿಕೆಯಾಯಿತು. ಮಂಡಿಯವರೆಗೆ ಇರುತ್ತಿದ್ದ ಒಳ ಅಂಗಿಯ ಮೇಲೆ ನಡುಪಟ್ಟಿ ಕಟ್ಟುವುದೂ ಸಾಮಾನ್ಯವಾಗಿತ್ತು. ಕಾಲುಗಳನ್ನು ಕೊಳವೆಯಾ ಕಾರದ ಬಟ್ಟೆಯಿಂದಲೋ ಸುತ್ತುಪಟ್ಟಿಯಿಂದಲೋ ಮುಚ್ಚಿಕೊಳ್ಳುತ್ತಿದ್ದರು. ತಲೆಯುಡುಗೆಗಳು ಬೋಗುಣಿಯಂತೆಯೋ ಶಂಕುವಿನಂತೆಯೋ ಇರುತ್ತಿದ್ದವು.

12ನೆಯ ಶತಮಾನದ ವೇಳೆಗೆ ದೇಹದ ಆಕಾರಕ್ಕೆ ತಕ್ಕಂತೆ ಉಡುಪು ರಚಿಸುವ (ದರ್ಜಿಯ) ಕ್ರಮ ಬೆಳೆಯಲಾರಂಭಿಸಿತು. ಉಡುಗೆಗಳಲ್ಲಿ ತೀವ್ರ ಮಾರ್ಪಾಟುಗಳಾದದ್ದು 14ನೆಯ ಶತಮಾನದಲ್ಲಿ. ಆ ವೇಳೆಗೆ ಹೆಂಗಸಿನ ಉಡುಪು ಗಂಡಸಿನದಕ್ಕಿಂತ ತೀರ ಭಿನ್ನವಾಗಿತ್ತು. ಆಕೆಯ ಉಡುಪಿಗೆ ಗುಂಡಿಗಳು ಬಂದಿದ್ದವು; ನಡುವಿನ ಅಳತೆಗೆ ತಕ್ಕಂತೆ ಹೊಲಿದ ಈ ಉಡುಪುಗಳು ಮಾಟವಾಗಿದ್ದು, ಬಣ್ಣ ಬೆಡಗುಗಳು ಎದ್ದು ಕಾಣತೊಡಗಿದವು. ಇಟ್ಯಾಲಿಯನ್ ರೇಷ್ಮೆ ಅಥವಾ ಮಖಮಲ್ಲಿನಲ್ಲಿ ಕತ್ತರಿಸಿ ಹೊಲಿದ ಈ ಉಡುಪುಗಳ ತೋಳುಗಳದೊಂದು ಚೆಂದ. ಮುಂದಿನ ಎರಡು ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಬಗೆಯ ಉಡುಪುಗಳು ಕವಲೊಡೆದವು. ಗಂಡಸರ ಗೌನು ಬಿದ್ದು ಹೋಯಿತು. ಹೆಂಗಸರ ಉಡುಪಿನ ಕತ್ತು ಕೆಳಸರಿದು ಅಗಲವಾಯಿತು. ತುಪ್ಪುಳ ಚರ್ಮದ ಅಂಚು ಬಂತು. ಜ್ಞಾನ ಪುನುರುಜ್ಜೀವನ ಕಾಲದಿಂದ 17ನೆಯ ಶತಮಾನದ ನಡುಗಾಲದವರೆಗೆ ಶೈಲಿಗಳು ಬಹಳ ಮಟ್ಟಿಗೆ ಸುಧಾರಿಸಿದವಾದರೂ ಒಟ್ಟಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳೇನೂ ಆಗಲಿಲ್ಲ. ರಾಣಿ ಎಲಿಜ಼ಬೆತಳ ಕಾಲದಲ್ಲಿ ಗಂಡಸರು ತುಂಡಂಗಿಯನ್ನೂ (ಡಬ್ಲೆಟ್) ಮೊಣಕಾಲವರೆಗಿನ ಚಲ್ಲಣವನ್ನೂ (ಬ್ರೀಚಸ್) ಧರಿಸುವ ವಾಡಿಕೆ ಬೆಳೆಯಿತು. ಜೋಲು ತೋಳಿನ ಜರ್ಕಿನ್ (ಗುತ್ತನಾದ ನಡುವಂಗಿ), ಮೇಲಂಗಿ, ಗೌನು ಇವು ಫ್ಯಾಷನ್ನುಗಳು. ಗಂಜಿ ಹಾಕಿ ಬಿರುಸು ಮಾಡಿ, ನಿರಿಯಾಗಿ ಸುತ್ತ ಚಾಚಿ ನಿಲ್ಲುವಂತೆ ಅಳವಡಿಸಿದ ಮಡಿಕೆಗಳಿದ್ದ ಕೊರಲು ಸುತ್ತುಗಳು ಸಾಮಾನ್ಯವಾಗಿದ್ದವು. ಇವನ್ನು ಹೆಂಗಸರೂ ಧರಿಸುತ್ತಿದ್ದರು. ಅಲ್ಲದೆ ಬಗೆಬಗೆಯ ಕುಪ್ಪಸ ಜಾಕೀಟುಗಳೂ ಲಂಗ, ಪಾವಡೆಗಳೂ ಚಾಲ್ತಿಗೆ ಬಂದವು. ಗಂಡಸರೂ ವಿರಳವಾಗಿ ಹೆಂಗಸರೂ ಕಪ್ಪು ಹ್ಯಾಟು ಧರಿಸಲಾರಂಭಿಸಿದರು.

17-18ನೆಯ ಶತಮಾನಗಳಲ್ಲಿ ಮೇಲಣ ವರ್ಗದ ಜನರಲ್ಲಿ ಬದಲಾವಣೆ ಯಾದದ್ದನ್ನು ಕಾಣಬಹುದು. ತುಂಡಂಗಿ (ಡಬ್ಲೆಟ್) ತುಂಬ ತುಂಡಾಗಿ ಈಟನ್ ಜಾಕೆಟ್ (ಗಿಡ್ಡಂಗಿ) ಆಗಿ ಪರಿಣಮಿಸಿ ಅದಕ್ಕಿದ್ದ ಪ್ರಾಮುಖ್ಯ ಹೋಯಿತು. ಈಗಿನ ಕೋಟಿನ ಮುತ್ತಜ್ಜನ ಅವತಾರವಾದದ್ದು ಆಗಲೇ. ಉದ್ದ ಮಂಡಿಯವರೆಗೆ, ಕತ್ತಿನಿಂದ ಕೆಳತುದಿಯವರೆಗೆ ಗುಂಡಿಗಳ ಸಾಲು-ಇವು ಇದರ ಲಕ್ಷಣ. ಫ್ಯಾಷನ್ನುಗಳ ವಿಚಾರದಲ್ಲಿ ಅದುವರೆಗೂ ಸ್ಪೇನ್ ಮುಂದಾಗಿದ್ದದ್ದು, ಅಲ್ಲಿಂದೀಚೆಗೆ ಫ್ರಾನ್ಸು ಇತರ ದೇಶಗಳಿಗೆ ಮೇಲ್ಪಂಕ್ತಿಯಾಯಿತು. ಹೆಂಗಸಿನ ಉಡುಪಿನಲ್ಲೂ ಬದಲಾವಣೆಯಾದದ್ದನ್ನು ಕಾಣಬಹುದು. 1690ರ ಸುಮಾರಿನ ಉಡುಪುಗಳನ್ನು ಅಡ್ಡ ಗೆರೆಗಳ ಬದಲು ಉದ್ದ ಗೆರೆಗಳು ಎದ್ದು ಕಾಣುವಂತೆ ಹೊಲಿಯಲಾಗು ತ್ತಿತ್ತು. ಅವನ್ನು ಧರಿಸುವವರು ವಾಸ್ತವವಾಗಿದ್ದಕ್ಕಿಂತ ಹೆಚ್ಚು ಎತ್ತರವಾಗಿ ಕಾಣುವಂತೆ ಮಾಡುವುದೇ ಈ ವ್ಯತ್ಯಾಸದ ಉದ್ದೇಶ. ವಿಶೇಷ ಉಡುಗೆಗಳೇ 8ನೆಯ ಶತಮಾನದ ಒಂದು ಮುಖ್ಯ ಬೆಳೆವಣಿಗೆ. ಸೈನಿಕರ ಸಮವಸ್ತ್ರವೂ ಹೆಂಗಸರ ಆಸ್ಥಾನಿಕ ಉಡುಗೆ ಹಾಗೂ ವಿವಾಹದ ಉಡುಪು ಸಾಮಾನ್ಯ ಉಡುಗೆಗಳಿಗಿಂತ ಭಿನ್ನವಾದದ್ದು ಈ ಕಾಲದಲ್ಲಿ. ಸ್ವಸ್ವರೂಪ ಮರೆಮಾಚುವಂಥ ಉಡುಪುಗಳು (ಮಾಸ್ಕರೇಡ್ ಡ್ರೆಸ್) ಗಂಡಸು-ಹೆಂಗಸರಿಬ್ಬರಿಗೂ ಪ್ರಿಯವಾದವು. ಬೇಟೆಗೆ ಉಚಿತವಾದ ಉಡುಗೆ ಬಂದದ್ದೂ ಆಗಲೇ. ಆಟಗಾರರ ವಿಶಿಷ್ಟ ಉಡುಗೆಗೆ ಇದೇ ಪ್ರಥಮ ಹಂತ.

18ನೆಯ ಶತಮಾನದ ಆಸ್ಥಾನವೈಭವದ ಉಡುಪುಗಳ ಮೋಹ ಮುಂದಿನ ಶತಮಾನದಲ್ಲಿ ಕ್ರಮೇಣ ಕಡಿಮೆಯಾಯಿತು. ಫ್ರೆಂಚ್ ಮಹಾಕ್ರಾಂತಿ ಹಾಗೂ ನೆಪೋಲಿಯಾನಿಕ್ ಯುದ್ಧಗಳಿ ಗಿಂತ ಹೆಚ್ಚಾಗಿ, ಅವುಗಳ ಫಲವಾದ ಆರ್ಥಿಕ ಬದಲಾವಣೆಗಳೇ ಇದಕ್ಕೆ ಕಾರಣ. 18ನೆಯ ಶತಮಾನದಲ್ಲಿ ಉಡುಪಿನ ವೈಶಿಷ್ಟ್ಯ ಸಾಧಿಸಿದವರು ಶ್ರೀಮಂತರು; 19ನೆಯ ಶತಮಾನದಲ್ಲಿಯಾದರೋ ಉಚ್ಚ ಮಧ್ಯಮ ವರ್ಗದ. ಗಂಡಸರ ಉಡುಪಿನ ಬಣ್ಣ ಬೆಡಗುಗಳು ಮಾಯವಾದವು. ಆಕರ್ಷಣೆಗಿಂತ ಕಾರ್ಯಾನುಕೂಲವೇ ಇದರ ಉದ್ದೇಶ. ಕಳೆದ 150 ವರ್ಷಗಳಲ್ಲಿ ಪುರುಷರ ಉಡುಪು ಬಹಳ ಹೆಚ್ಚಾಗಿ ಬದಲಾಗಿಲ್ಲ. ಆದರೆ ಸ್ತ್ರೀಯರದು ಹೀಗಲ್ಲ; ವರ್ಷೇ ವರ್ಷೇ ಬದಲಾಗಿದೆ. ಅಭಿಜಾತ ಶೈಲಿ, ಊಧರ್ವ್‌ ರೇಖೆ, ತೆಳು ಬಣ್ಣ - ಇವು 19ನೆಯ ಶತಮಾನದ ಆದಿಕಾಲದ ಹೆಣ್ಣುಡಿಗೆಯ ಲಕ್ಷಣ. ಮುಂದಿನ ಎರಡು ದಶಕಗಳಲ್ಲಿ ಅಗಲ ತೋಳು, ಗಿಡ್ಡ ಲಂಗ ಬಂದವು. ಅನಂತರದ 20ವರ್ಷಗಳಲ್ಲಿ ಲಂಗದ ಅಗಲದಲ್ಲಿ ಇನ್ನೂ ಹೆಚ್ಚಳವಾದರೂ ತೋಳಿನ ಉಬ್ಬು ಮಾಯವಾಯಿತು. ಅಗಲ ಹ್ಯಾಟಿನ ಬದಲು ಹೊಗೆಕೊಳವೆಯಂಥ, ಚಾಚಂಚಿಲ್ಲದ ಟೋಪಿ ಬಂತು. ಆಮೇಲೆ 20ವರ್ಷಕಾಲ ಹೆಂಗಸರ ಉಡುಪು ರೈಲನ್ನು ಹೋಲುತ್ತಿತ್ತು. ಅದುವರೆಗೂ ತಮ್ಮ ಉಡುಗೆ ನಡುವೆ ಇದ್ದವರು ಆಗ ತಮ್ಮ ಉಡುಗೆಯ ಮುಂದಿನ ಸ್ಥಾನ ಪಡೆದರು. 1880ರ ದಶಕದಲ್ಲಿ ಈ ಹನುಮಂತ ಬಾಲ ಮತ್ತೆ ತುಂಡಾಗತೊಡಗಿತು. ಆ ಶತಮಾನದ ಕೊನೆಯ ವೇಳೆಗೆ ನಿಡುದೋಳಿನ ತುದಿಯಗಲದ ಉಡುಪು ಸಾಮಾನ್ಯವಾಯಿತು. ಒಂದನೆಯ ಮಹಾಯುದ್ಧದ ವೇಳೆಗೆ ಲಂಗದ ಅಗಲ ಕಿರಿದಾಯಿತು. 20ನೆಯ ಶತಮಾನದ 23ನೆಯ ದಶಕದಲ್ಲಿ ತುಂಡು ಲಂಗವೂ ಗಂಟೆಯಾಕಾರದ ತಲೆಯುಡುಗೆಯೂ ಬಂದವು. ಅಲ್ಲಿಂದ ಮುಂದೆಯೂ ಅನೇಕ ಬದಲಾವಣೆ ಗಳಾಗುತ್ತಲೇ ಇದೆ.

ಏಷ್ಯದಲ್ಲಿ ಉಡುಗೆಗಳು[ಬದಲಾಯಿಸಿ]

ಪಶ್ಚಿಮ ಏಷ್ಯದಲ್ಲಿ ವೈವಿಧ್ಯಮಯ ಉಡುಗೆಗಳನ್ನು ಕಾಣಬಹುದು. ಅನೇಕ ಬಗೆಯ ಜನ ಇಲ್ಲಿ ವಾಸಿಸುವುದೇ ಈ ವೈವಿಧ್ಯಕ್ಕೆ ಕಾರಣ. ಆರ್ಮೀನಿಯನ್ ಹೆಂಗಸರ ಉದ್ದನೆಯ ನಿಲುಲಂಗವನ್ನೂ ಸಾಮಾನ್ಯ ಜನರ ಕುಳ್ಳನೆಯ ದೊಗಳೆ ಷರಾಯಿ ಫೆಜ್ ಟೋಪಿ ಪೇಟಗಳನ್ನೂ ಗ್ರೀಕರ ಐರೋಪ್ಯ ಶೈಲಿಯ ಉಡುಗೆಯನ್ನೂ ತುರ್ಕಿ ಜನರ ಗುಂಡಿ ತುಂಬಿದ ಬಿಗಿಯಂಗಿ ಟೋಪಿಗಳನ್ನೂ ರಬ್ಬಿಗಳ ಗ್ಯಾಬರ್ಡೀನುಗಳನ್ನೂ (ಒರಟು ಬಟ್ಟೆಯ ದೊಗಲೆ ಉಡುಪು) ಕುರ್ದಿ ರೈತರ ಕುರಿಚರ್ಮದ ಉಡುಪನ್ನೂ ಡ್ರೂಸ್ ಜನರ ನಿಲುವಂಗಿ ತಲೆಯುಡುಗೆಗಳನ್ನೂ ಇರಾಕಿಗಳ ಉದ್ದನೆಯುಡುಪು ನಡುಪಟ್ಟಿಗಳನ್ನೂ ಇಲ್ಲಿ ಕಾಣಬಹುದು. ಅರಬ್ಬೀ ಜನರು ಹತ್ತಿ ಅಥವಾ ರೇಷ್ಮೆಯ ಉದ್ದುಡುಗೆಯ ಮೇಲೆ ತೋಳಿಲ್ಲದ ಕೋಟು (ಅಬ್ಬ) ಧರಿಸಿ, ತಲೆಯ ಮೇಲೆ ಹೊದೆದ ಬಣ್ಣದ ವಸ್ತ್ರವನ್ನು (ಕಿಫಿಯೆ) ಒಂಟೆಯ ಕೂದಲಿನ ಹುರಿಯಿಂದ ಕಟ್ಟಿಕೊಳ್ಳುತ್ತಾರೆ. ಇರಾನಿನಲ್ಲಿ ಪುರೋಹಿತ ವರ್ಗವನ್ನು ಉಳಿದು ಎಲ್ಲರೂ ಐರೋಪ್ಯ ಉಡುಗೆ ಧರಿಸುತ್ತಾರೆ. ಆದರೆ ಮಾತ್ರೆಯ ಡಬ್ಬಿಯಂತೆ ಕಾಣುವ, ಬಣ್ಣಬಣ್ಣಗಳ ಪಾಲವಿ ಹ್ಯಾಟು ಮಾತ್ರ ಕಡ್ಡಾಯ. ಹೆಂಗಸರು ಮನೆಯಿಂದ ಹೊರಬರುವಾಗ ಚದರ್ (ಅರೆಮೊಗವಾಡದ ಸಡಿಲ ದಗಲ) ಧರಿಸಿ, ಕಣ್ಣನ್ನು ಬಿಸಿಲಿಂದ ರಕ್ಷಿಸುವ ಸಲುವಾಗಿ ಬಚೆ ಎಂಬ ಶಿರಸ್ತ್ರಾಣ ತೊಡುತ್ತಾರೆ.

ಚೀನಿ ಉಡುಗೆಯಲ್ಲಿ ಪ್ರಾಂತೀಯ ಭಿನ್ನತೆ ಬಹಳ. ಆದರೆ ದೊಗಳೆ ಅಂಗಿ, ರೇಷ್ಮೆ ಅಥವಾ ಹತ್ತಿಯ ಷರಾಯಿ ಸಾಮಾನ್ಯ. ಅನೇಕ ಏಷ್ಯನ್ ರಾಷ್ಟ್ರಗಳ ಉಡುಪು ಇದೇ ತರಹ. ದೊಡ್ಡ ಮನುಷ್ಯರು ಈ ಅಂಗಿಯ ಮೇಲೆ ತೋಳಿಲ್ಲದ ಜಾಕೆಟ್ ಧರಿಸುವುದುಂಟು. ಗಂಡಸರು ಪಾಶ್ಚಾತ್ಯ ವಿಧಾನಕ್ಕೆ ಪರಿವರ್ತನೆ ಹೊಂದುತ್ತಿದ್ದಾರಾದರೂ ಹೆಂಗಸರು ಸಾಮಾನ್ಯವಾಗಿ ಪಡುವಣ ಶೈಲಿಯನ್ನೊಪ್ಪುವುದಿಲ್ಲ. ಅವರ ಉದ್ದನೆಯ ಉಡುಗೆ ಆಕರ್ಷಕ. ಮಂಚೂರಿಯನ್ ಹಾಗೂ ಮಂಗೋಲಿಯನ್ ಉಡುಗೆ ಚೀನಿಯರ ಉಡುಪಿನ ಅನುಕರಣೆ. ಸೈಬೀರಿಯದ ಜನದ್ದು ತುಪ್ಪಳ ಚರ್ಮದ ಪದರವಿರುವ ಉಡುಪು. ಸಿಂಕಿಯಾಂಗಿನ ಜನರ ಉಡುಪು ಮುಸ್ಲಿಂ ಮಾದರಿಯದು. 19ನೆಯ ಶತಮಾನದಲ್ಲಿ ಜಪಾನೀಯರು ಪಾಶ್ಚಾತ್ಯ ಶೈಲಿಯನ್ನನುಕರಿಸಿದರು. ಸರ್ಕಾರಿ ನೌಕರರಿಗೆ ಇದು ಆಗ ಕಡ್ಡಾಯವಾಯಿತು. ಸ್ತ್ರೀಪುರುಷರಿಬ್ಬರೂ ಧರಿಸುವ ಕಿಮೋನೊ ಹೊರ ಉಡುಪು. ಇದು ಚೀನಿಯರ ಉಡುಪಿನ ಅನುಕರಣೆ. ಹೆಂಗಸರ ಕಿಮೋನೊಗಳು ವರ್ಣರಂಜಿತ, ಚಿತ್ರಮಯ. ಇದರ ನಡುವಿಗೆ ರಂಗು ರೇಷ್ಮೆಯ ಕಟ್ಟುಪಟ್ಟಿ, ಅವರಿಗೆ ಪಾಶ್ಚಾತ್ಯ ಉಡುಗೆಯಲ್ಲಿ ಹೆಚ್ಚು ಪ್ರೀತಿ.

ಕೊರಿಯದವರಲ್ಲಿ ಬಿಳಿಯುಡುಗೆ ಸಾಮಾನ್ಯ ಹಿಂದೊಮ್ಮೆ ಅನುಭವಿಸಿದ ದುಃಖ ದಿನಗಳ ಕಾಲದಿಂದ ಉಳಿದುಕೊಂಡು ಬಂದಿರುವ ಸಂಪ್ರದಾಯ. ಷರಾಯಿ ಅಥವಾ ಉದ್ದಲಂಗದ ಮೇಲೆ ಕೋಟು.

ಟಿಬೆಟಿನವರು ಉದ್ದನೆಯ ಉಡುಪು ಧರಿಸಿ ನಡು ಬಿಗಿಯುತ್ತಾರೆ.

ಬರ್ಮೀಯರಲ್ಲಿ ಸ್ತ್ರೀಪುರುಷರ ಉಡುಗೆ ಒಂದೇ ಆದರೂ ಅದನ್ನು ಉಡುವ ವಿಧಾನ ಬೇರೆ ಬೇರೆ. ನಡುವಿಗೆ ಸುತ್ತಿದ ರಂಗುರಂಗಿನ ಲುಂಗಿ, ಬಿಳಿಯ ಅಂಗಿ ಇವು ಇಲ್ಲಿನವರ ವೈಶಿಷ್ಟ್ಯ. ಗಂಡಸರು ತಮ್ಮ ತಲೆಯ ಸುತ್ತ ಗಾಂಗ್ವಾಂಗ್ ಎಂಬ ವಸ್ತ್ರ ಕಟ್ಟುತ್ತಾರೆ.

ಸಯಾಮಿಗಳ ಉಡುಗೆ ಪಾನುಂಗ್: ಆರು ಮೊಳದ ಧೋತಿಯ ಕಚ್ಚೆ, ಮೇಲುದು, ಇಂಡೋ-ಚೀನದ ಉಡುಪು ಚೀನೀ ತರಹ. ಮಲೆಯನ್ನರು ಉದ್ದನೆಯ ಸಡಿಲ ಲುಂಗಿಯುಟ್ಟು ಕಸೂತಿಯ ಬಿಳಿಕವಚ ತೊಡುತ್ತಾರೆ. ಫಿಲಿಪೀನಿನ ಉಡುಗೆಯ ಮೇಲೆ ಸ್ಪೇನ್ ಪ್ರಭಾವ. ಹೆಂಗಸರ ಉಡುಪಿನ ತೋಳು ದೊಗಳೆ. ಉಡುಪಿನ ಮೇಲಿನ ಕಸೂತಿ. ಆಕರ್ಷಕ ಗಂಡಸರಿಗೆ ಷರಟೂ ಷರಾಯಿಯೂ ಪ್ರಿಯ.

ಭಾರತೀಯರ ಉಡುಗೆ[ಬದಲಾಯಿಸಿ]

ಹರಪ್ಪ ಸಂಸ್ಕೃತಿಯ ಕಾಲದ ಪ್ರಾಗ್ಭಾರತೀಯರಿಗೆ ಹತ್ತಿ, ಸೆಣಬು ಮತ್ತು ನಾರು ಉಡುಗೆ ಗೊತ್ತಿತ್ತು. ನಿವೀತಿ ಮತ್ತು ಉಪವೀತಿ ವಿಧಾನಗಳಲ್ಲಿ ಅವರು ಬಟ್ಟೆ ಧರಿಸುತ್ತಿದ್ದರು. ಹೆಂಗಸರ ಉಡುಪು ನಡುವಿನಿಂದ ಕೆಳಕ್ಕೆ ಮಾತ್ರ. ಪುರುಷರೂ ಸ್ತ್ರೀಯರೂ ಅಲಂಕಾರಪ್ರಿಯರು. ಜಡೆಗಂಟು, ಡಾಬು, ಕರ್ಣಾಭರಣ, ಬಳೆ, ಅಂದಿಗೆ, ತೋಡಹಾರ, ಮೂಗುಬೊಟ್ಟು, ಹೇರ್ಪಿನ್, ಕರಿಮಣಿ ಸರ ಇತ್ಯಾದಿ ಅಲಂಕಾರಗಳ ಜೊತೆಗೆ ಅನೇಕ ವಿಧವಾದ ರುಮಾಲುಗಳು ಆಗಿನ ಹೆಂಗಸರಿಗೆ ಭೂಷಣಪ್ರಾಯ.

ವೇದಕಾಲದ ಆರ್ಯರು ಹತ್ತಿ, ಉಣ್ಣೆ, ಸೆಣಬು, ನಾರು ಬಟ್ಟೆಗಳನ್ನು ತ್ರಸರದ ಸಹಾಯದಿಂದ ನೇಯುತ್ತಿದ್ದರು. ಅವರು ಧರಿಸುತ್ತಿದ್ದದ್ದು ಮೂರು ವಸ್ತ್ರ: ಮೊದಲು ನೀವಿ, ಅದರ ಮೇಲೆ ವಾಮ, ಇವುಗಳ ಮೇಲೆ ಅಧಿವಾಮ. ಮೇಲಣ ವಸ್ತ್ರ ಧರಿಸುವುದರಲ್ಲಿ ಮೂರು ವಿಧ: ಎಡಭುಜದ ಮೇಲೂ ಬಲಗೈ ಕೆಳಗೂ ಹಾಕಿಕೊಳ್ಳುವುದು ಉಪವೀತಿ ಕ್ರಮ. ಬಲಭುಜದ ಮೇಲೂ ಎಡತೋಳಿನ ಕೆಳಗೂ ಹಾಕಿಕೊಳ್ಳುವುದು ಪ್ರಾಚೀನಾವೀತಿ. ಗಂಟಲಿನಿಂದ ಜೋಲಾಡುವಂತೆ ಹಾಕಿಕೊಳ್ಳುವುದು ನಿವೀತಿ. ಮೊದಲನೆಯದು ಮನುಷ್ಯರ ರೀತಿ, ಎರಡನೆಯದು ಪಿತೃಗಳ ಕ್ರಮ, ಮೂರನೆಯದು ದೇವತೆಗಳ ವಿಧಾನ. ಪ್ರಜಾಪತಿಗೆ ಯಜ್ಞೋಪವೀತ ಸಹಜವಾದದ್ದೆಂದು ಹೇಳಿದೆಯಾದ್ದರಿಂದ ಇದು ಮೃಗಶಿರಾ ನಕ್ಷತ್ರದ ಅನುಕರಣೆ ಇರಬಹುದೆಂದು ತಿಲಕರ ಊಹೆ. ಯಜ್ಞೋಪವೀತವನ್ನು ಯಾವಾಗಲೂ ದೇಹದ ಮೇಲೆ ಧರಿಸತಕ್ಕದ್ದೆಂಬ ನಿಯಮವಿದ್ದಂತಿಲ್ಲ. ಮೊದಲು ಕೃಷ್ಣಾಜಿನ ಅಥವಾ ವಸ್ತ್ರವೇ ಉಪವೀತ. ದೇವಭಾಗನಿಗೆ ವಾಗ್ದೇವಿ ಪ್ರತ್ಯಕ್ಷಳಾದಾಗ ಆತ ತನ್ನ ವಸ್ತ್ರವನ್ನೇ ಯಜ್ಞೋಪವೀತದಂತೆ ಹಾಕಿಕೊಂಡು ಆಕೆಗೆ ನಮಸ್ಕರಿಸಿದನೆಂದು ತೈತ್ತಿರೀಯ ಬ್ರಾಹ್ಮಣದಲ್ಲಿ ಹೇಳಿದೆ. ಅಭಿಚಾರಕ್ರಮದಲ್ಲಿ ಕೆಂಪುಬಟ್ಟೆಯನ್ನೂ ಉಷ್ಣೀಷವನ್ನೂ ಧರಿಸುವ ರೂಢಿಯಿತ್ತು. ವೇದಕಾಲದ ಯೋಧರು ಚಿನ್ನ, ತಾಮ್ರ ಮುಂತಾದ ಲೋಹಗಳ ಕವಚ, ತಲೆಪಾಗು ಧರಿಸುತ್ತಿದ್ದರು. ಸ್ತ್ರೀಯರ ಪರದಾ ಪದ್ಧತಿ ಬಹುಶಃ ಐಚ್ಛಿಕ.

ಶಿಲಾಯುಗದಲ್ಲೇ ಭಾರತೀಯರಿಗೆ ಸೂಜಿ ತಕಲಿಗಳ ಪರಿಚಯವಿತ್ತು. ಆದರೆ ಹೊಲಿದ ಬಟ್ಟೆ ಕಲಾತ್ಮಕವಲ್ಲ: ಆರೋಗ್ಯದೃಷ್ಟಿಯಿಂದಲೂ ಇದು ಅನುಚಿತ ಎಂಬುದು ಅವರ ಭಾವನೆ. ಆದ್ದರಿಂದ ಹೊಲಿಯದ ಬಟ್ಟೆಗಳೇ ಅವರ ದೃಷ್ಟಿಯಲ್ಲಿ ಪ್ರಶಸ್ತ. ಮೈಮೇಲೆ ಎರಡು ಬಟ್ಟೆ (ದ್ವಿಪಟ) ಇರಬೇಕಾದ್ದು ಕಡ್ಡಾಯ. ಲುಂಗಿ ವಜರ್ಯ್‌. ಕಚ್ಚೆಪಂಚೆ ವಿಹಿತ. ಕಚ್ಚೆಯ ಅಂಚು ಹಿಂದೆ ಜೋಲಾಡಬಾರದು. ಹೊಕ್ಕಳ ಹತ್ತಿರವೂ ಎಡಭಾಗ ಹಿಂಭಾಗಗಳಲ್ಲೂ ಒಟ್ಟು ಮೂರು ಗಂಟು ಹಾಕಬೇಕು. ನಡುವಿಗೆ ಉಡುವ ಬಟ್ಟೆಯಿಂದ ದೇಹದ ಮೇಲ್ಬಾಗ ಮುಚ್ಚಿಕೊಳ್ಳಬಾರದು. ಹೆಂಗಸರು ಉದ್ದನೆಯ ಒಂದೇ ಬಟ್ಟೆಯಿಂದ ಭುಜ ಮುಚ್ಚಿ ಕೆಳಗಿನ ವರೆಗೂ ಜೋಲಾಡುವಂತೆ ಧರಿಸುತ್ತಿದ್ದರೆಂದು ಯುವಾನ್ ಚೌಂಗ್ ಹೇಳಿದ್ದಾನಾ ದರೂ ಪ್ರಾಚೀನ ಶಿಲ್ಪಗಳಲ್ಲಿ ಈ ರೀತಿ ಕಂಡುಬರುವುದಿಲ್ಲ: ನಡುವಿನ ಕೆಳಗೆ ಒಂದು ವಸ್ತ್ರ, ಎದೆಕಟ್ಟು ಇವು ಸಾಮಾನ್ಯ ಉಡುಗೆ. ದಕ್ಷಿಣದವರಲ್ಲಿ ಚೋಳಿ (ರವಿಕೆ) ಪ್ರಚಾರದಲ್ಲಿತ್ತು.

ಹೊಯ್ಸಳ ವಿಜಯನಗರದ ಕಾಲದಲ್ಲಿ ಮಹಾಕೂರ್ಪಾಸ (ನಿಲುವಂಗಿ), ಕುಲಾವಿ, ಕೋಕು (ರುಮಾಲು), ಪಾದಯಾಮ ಅಥವಾ ಪಾಯ್ಜಾಮ (ಷರಾಯಿ), ಉತ್ತರೀಯ, ನಡುಕಟ್ಟು - ಇದು ರಾಜಸಭೆಯ ಉಡುಪು. ಕ್ಷತ್ರಿಯರೂ ಸೈನಿಕರೂ ಧರ್ಮ ಮತ್ತು ಲೋಹ ನಿರ್ಮಿತ ತನುತ್ತ್ರಾಣವನ್ನೂ ಶಿರಸ್ತ್ರಾಣವನ್ನೂ ಧರಿಸುತ್ತಿದ್ದರು.

ಉತ್ತರ ಭಾರತದಲ್ಲಿ ಪರಕೀಯರ ಆಗಮನದ ಪರಿಣಾಮ ಅಲ್ಲಿಯ ಜನರ ಉಡಿಗೆ ತೊಡಿಗೆಗಳ ಮೇಲೂ ಆಯಿತು. ಮೊಗಲ ದರ್ಬಾರಿಗೆ ಹೋಗುತ್ತಿದ್ದ ಪುರುಷರೆಲ್ಲ ಮೊಗಲರಂತೆ ಸಲವಾರ್, ಉದ್ದನೆಯ ನಿಲುವಂಗಿ, ಜರಿಯ ಪೇಟಗಳನ್ನು ಧರಿಸತೊಡಗಿದರು. ಪಂಜಾಬ್, ದೆಹಲಿ, ಕಾಶ್ಮೀರಗಳ ಮಹಿಳೆಯರೂ ಸಲವಾರ್ ಖಮೀಜ್ ಧರಿಸಿ ಮೇಲೊಂದು ದುಪ್ಪಟಿ ಹೊದ್ದುಕೊಳ್ಳುವುದು ಸಾಮಾನ್ಯವಾಯಿತು. ಪುರುಷರು ಬಣ್ಣ ಬಣ್ಣದ ರುಮಾಲನ್ನು ಸುತ್ತಿಕೊಂಡು ಬಣ್ಣದ ಅಂಗಿ ಧರಿಸುವುದುಂಟು. ಅಲ್ಲಿಯ ಸ್ತ್ರೀಯರು ಬಣ್ಣದ ಲಂಗ ಧರಿಸಿ ಕುಪ್ಪಸ ತೊಟ್ಟುಕೊಂಡು ತಲೆತುಂಬ ಮುಸುಕು ಹೊದಿಯುತ್ತಾರೆ. ಬಂಗಾಲಿ ಮಹಿಳೆಯರು ಸೀರೆ ಉಡುವ ಪದ್ಧತಿಯೇ ಬೇರೆ. ಬಿಹಾರ, ಗುಜರಾತುಗಳ ಜನ ಎಡಗಡೆ ಸೆರಗು ಹೊದೆಯುತ್ತಾರೆ. ದಕ್ಷಿಣದವರು ಸೀರೆ ಉಟ್ಟುಕೊಂಡು ತಲೆಯ ಮೇಲೆ, ಇಲ್ಲವೆ ಹೆಗಲಮೇಲೆ ಸೆರಗು ಹೊದೆಯುತ್ತಾರೆ. ಮಹಾರಾಷ್ಟ್ರದವರು ಕಚ್ಚೆ ಹಾಕಿ ಸೀರೆ ಉಡುವುದುಂಟು. ಪುರುಷರು ಧೋತ್ರ, ಷರ್ಟು, ಕೋಟುಗಳನ್ನೂ ರುಮಾಲು ಇಲ್ಲವೆ ಟೊಪ್ಪಿಗೆಯನ್ನೂ ಧರಿಸುತ್ತಿದ್ದರು. ಇಂದಿಗೂ ಕೇರಳ ಹಾಗೂ ಅಸ್ಸಾಮಿನ ಕೆಲವರ್ಗದ ಸ್ತ್ರೀಯರು ರಟ್ಟೆಯ ಕೆಳಭಾಗದಿಂದ ಪಾದದವರೆಗೆ ಲುಂಗಿಯಂತೆ ಬಟ್ಟೆ ಸುತ್ತಿಕೊಳ್ಳುತ್ತಾರೆ; ಕುಪ್ಪಸ ತೊಡುವುದೇ ಇಲ್ಲ.

ಭಾರತದ ಬನಾರಸ್ ಜರಿಯ ಬಟ್ಟೆ, ಮುರ್ಷಿದಾಬಾದ್ ಸಿಲ್ಕ್‌, ಗುಜರಾತಿನ ಬಾಂಧಣಿ, ಪಟೋಲಾಗಳು, ಮಧುರೆಯ ನೂಲಿನ ಸೀರೆಗಳು, ಧರ್ಮಾವರಂ ರೇಷ್ಮೆ ಸೀರೆಗಳು, ಕರ್ನಾಟಕದ ಇಳಕಲ್ ಸೀರೆ, ರೇಷ್ಮೆ ಬಟ್ಟೆಗಳು ಜಗತ್ಪ್ರಸಿದ್ಧ.

ಆದಿವಾಸಿ ಜನರ ಉಡುಗೆ[ಬದಲಾಯಿಸಿ]

ಉಡುಗೆ ತೊಡುಗೆಗಳ ಆವಶ್ಯಕತೆ ಮಾನವರು ಕಾಡುಸ್ಥಿತಿಯಲ್ಲಿದ್ದಾಗಲೇ ತೋರಿಬಂತು. ಆಹಾರಕ್ಕಾಗಿ ಬೇಟೆಯಾಡಿದ ಪ್ರಾಣಿಗಳ ಚರ್ಮಗಳನ್ನೇ ದೇಹರಕ್ಷಣೆಗಾಗಿ ಧರಿಸುತ್ತಿದ್ದರು. ಅನಂತರ ನಾರಿನ ಬಟ್ಟೆಗಳನ್ನು ನೇಯ್ದು ಧರಿಸುತ್ತಿದ್ದರು. ಮಾನವನಲ್ಲಿ ಕಲಾದೃಷ್ಟಿ ಬೆಳೆದಂತೆ, ಸಭ್ಯತೆಯ ಕಲ್ಪನೆ ಬೆಳೆದಂತೆ, ಉಡುಗೆಯಲ್ಲಿ ಮಾರ್ಪಾಟು ಆಗುತ್ತಿತು. ಕಮಲದ ದೇಟಿನ ನಾರಿನಿಂದ, ಗಿಡದ ತೊಗಟೆ ಯಿಂದ ಹಂಸದ ತುಪ್ಪಳದಿಂದ ದುಕೂಲಗಳನ್ನು ನೇಯಹತ್ತಿದರು.

ಅನೇಕ ದೇಶಗಳ ಕಾಡುಜನರೂ ಅಂಡಮಾನ್ ದ್ವೀಪದ ಜನರೂ ಮೊದಲಿಗೆ ಬಟ್ಟೆಯ ಬದಲು ದೇಹಕ್ಕೆ ಬಣ್ಣವನ್ನು ಲೇಪಿಸಿಕೊಳ್ಳುತ್ತಿದ್ದರು. ಆ ಬಣ್ಣ ಬಿಸಿಲು, ಮಳೆ, ಚಳಿಗಳಿಂದ ದೇಹವನ್ನು ರಕ್ಷಿಸುವುದೆಂಬ ಭಾವನೆ ಆ ಜನರಿಗಿತ್ತು. ಅಮೆರಿಕದ ರೆಡ್ ಇಂಡಿಯನ್ನರೂ ಆಫ್ರಿಕದ ನೀಗ್ರೋ ಜನರೂ ಸೊಂಟದಿಂದ ಮೊಣಕಾಲವರೆಗೆ ದೇಹದ ಸುತ್ತಲೂ ಚರ್ಮದ ಪಟ್ಟಿ ಧರಿಸುತ್ತಾರೆ. ಕೆಲವು ಅರಬ್ಬೀ ಜನಾಂಗದ ಪುರುಷರು ಒಂದೇ ಬಟ್ಟೆಯನ್ನುಡುತ್ತಾರೆ. ಮಹಿಳೆಯರು ಒಂದೇ ಬಟ್ಟೆಯಿಂದ ತಲೆ, ದೇಹ ಮುಚ್ಚುವಂತೆ ಸೀರೆಯನ್ನುಟ್ಟುಕೊಳ್ಳುವರು. ಝಾಲ್ ಕಾಡುಜನ ಸೊಂಟದಿಂದ ಮೊಣಕಾಲವರೆಗೆ ಚರ್ಮದ ಪಟ್ಟಿಗಳನ್ನು ಇಳಿಬಿಡುತ್ತಾರೆ.

ಎಸ್ಕಿಮೊ ಜನಕ್ಕೆ ಅಡಿಯಿಂದ ಮುಡಿಯವರೆಗೆ ಚರ್ಮದ ಬಟ್ಟೆಯಿರುತ್ತದೆ. ನಾಗಾಲ್ಯಾಂಡಿನ ಜನ ಸೊಂಟದಿಂದ ಮೊಣಕಾಲವರೆಗೆ ಬಟ್ಟೆ ಧರಿಸುವರು. ಅಸ್ಸಾಮಿನ ಕಾಡುಜನಾಂಗದ ಮಹಿಳೆಯರು ರಟ್ಟೆಯ ಕೆಳಭಾಗದಿಂದ ಮೊಣಕಾಲವರೆಗೆ ಬಿಗಿಯಾಗಿ ಬಟ್ಟೆ ಧರಿಸುತ್ತಾರೆ. ಪುರುಷರು ಕೊಂಬು ಗರಿಗಳಿಂದ ಅಲಂಕರಿಸಿಕೊಳ್ಳುತ್ತಾರೆ. ನೀಲಗಿರಿಯ ತೋಡಮಹಿಳೆಯರೂ ಘಟ್ಟದ ಕೆಳಗಿನ ಸ್ತ್ರೀಯರೂ ಕೇರಳದವರೂ ಕುಪ್ಪಸ ತೊಡುವುದಿಲ್ಲ. ಒಂದೇ ಬಟ್ಟೆಯನ್ನು ರಟ್ಟೆಯ ಕೆಳಭಾಗದಿಂದ ಪಾದದವರೆಗೆ ಉಟ್ಟುಕೊಳ್ಳುತ್ತಾರೆ.

ಪ್ರಾಚೀನಕಾಲದಿಂದ ಜಗತ್ತಿನ ಶಿರೋಭೂಷಣಗಳಲ್ಲಿ ಅನೇಕ ಬದಲಾವಣೆಗಳಾಗುತ್ತ ಬಂದಿವೆ. ಶಿಲಾಯುಗದ ಮಾನವ ಬೇಟೆಯಾಡಿದ ಪ್ರಾಣಿಗಳ ಚರ್ಮದಿಂದ, ಪಕ್ಷಿಗಳ ಗರಿಗಳಿಂದ ನಾನಾ ಬಗೆಯ ಶಿರೋಭೂಷಣಗಳನ್ನು ಸಿದ್ಧಗೊಳಿಸಿ ಧರಿಸುತ್ತಿದ್ದ. ಇಂದಿಗೂ ಅಮೆರಿಕದ ರೆಡ್ ಇಂಡಿಯನ್ನರು, ಆಫ್ರಿಕದ ಕೆಲ ಜನಾಂಗದವರು, ಭಾರತದ ಆದಿವಾಸಿಗಳು ಪ್ರಾಣಿಗಳ ಕೊಂಬು, ಪಕ್ಷಿಗಳ ಗರಿಗಳಿಂದ ಸಿದ್ಧವಾದ ಶಿರೋಭೂಷಣಗಳನ್ನು ಧರಿಸುವುದುಂಟು. ಎಸ್ಕಿಮೊ ಜನ ಚರ್ಮದ ಟೊಪ್ಪಿಗೆ ಧರಿಸುತ್ತಾರೆ. ಟಿಬೆಟಿನ ಜನರಿಗೆ ಗೋಪುರಗಳಂತೆ ಎತ್ತರವಾದ ಟೊಪ್ಪಿಗೆ ಸಾಮಾನ್ಯ.

ತಲೆಯುಡುಗೆ[ಬದಲಾಯಿಸಿ]

ಪ್ರಾಚೀನಕಾಲದಲ್ಲಿ ಸ್ತ್ರೀಪುರುಷರಿಬ್ಬರೂ ತಲೆಕೂದಲು ಬೆಳೆಸುತ್ತಿದ್ದರು. ಇಂದಿಗೂ ಕೆಲಪ್ರದೇಶಗಳಲ್ಲಿ ಪುರುಷರು ಕೂದಲು ಬೆಳೆಸುವುದುಂಟು. ಭಾರತದಲ್ಲಿ ಶಿರೋವಸ್ತ್ರಕ್ಕೆ ಪ್ರಾಧಾನ್ಯ ಇತ್ತು. ವೇದಗಳ ಕಾಲದಲ್ಲಿ ಹೆಂಗಸರು ಕುರೀರ, ಕುಮ್ಬ, ಓಪಶಗಳೆಂಬ ಶಿರೋಭೂಷಣ ಧರಿಸುತ್ತಿದ್ದರು. ಗಂಡಸರು ಶಿರಸ್ತ್ರಾಣ ಶಿರೋವೇಷ್ಟಗಳನ್ನು ಹಾಕಿಕೊಳ್ಳುವ ಪದ್ಧತಿಯಿತ್ತು. ಶುಭಕಾರ್ಯಗಳಲ್ಲಿ ಭಾರತೀಯರು ಶಿರೋವಸ್ತ್ರ ಧರಿಸಲೇ ಬೇಕೆಂಬ ಸಂಪ್ರದಾಯವಿದೆ. 8ನೆಯ ಶತಮಾನದವರೆಗೆ ಸ್ತ್ರೀಪುರುಷರಿಬ್ಬರೂ ಉದ್ದನೆಯ ಟೊಪ್ಪಿಗೆ ಧರಿಸುತ್ತಿದ್ದರೆಂದು ಕಾವ್ಯ ಶಿಲ್ಪಗಳಿಂದ ತಿಳಿದು ಬರುತ್ತದೆ. ಮೌರ್ಯರ ಕಾಲದಲ್ಲಿ ಅರಸರೂ ಮಂತ್ರಿ ಮಾನ್ಯರೂ ಕಿರೀಟ ಧರಿಸಿದರೆ ಸೈನಿಕರು ರುಮಾಲು ಸುತ್ತಿಕೊಳ್ಳುತ್ತಿದ್ದರು. ಗುಪ್ತರ ಕಾಲದಲ್ಲಿ ಸೈನಿಕರಿಗೆ ಕಂಚಿನ ಶಿರಸ್ತ್ರಾಣ ಬಂತು. ಪ್ರಾಚೀನಕಾಲದಿಂದಲೂ ರಾಜರಾಣಿಯರ ವಜ್ರ ವೈಡೂರ್ಯ ಬಂಗಾರ ಮುತ್ತುಗಳ ಕಿರೀಟವನ್ನೂ ಮಂತ್ರಿಮಾನ್ಯರು ತಮ್ಮ ಯೋಗ್ಯತೆಗೆ ತಕ್ಕ ಶಿರೋವಸ್ತ್ರಗಳನ್ನೂ ಧರಿಸುವುದು ವಾಡಿಕೆಯಾಗಿತ್ತು.

ಜನಸಾಮಾನ್ಯರು ತಮ್ಮ ಸ್ಥಾನಮಾನಗಳಿಗೆ ತಕ್ಕಂತೆ ಜರಿಬಟ್ಟೆ ರೇಷ್ಮೆ ನೂಲುಗಳ ಶಿರೋವಸ್ತ್ರ ಧರಿಸುತ್ತಿದ್ದರು. ಭಾರತದಲ್ಲಿ ಒಂದೊಂದು ಪ್ರಾಂತ್ಯದ ಜನರದು ಒಂದೊಂದು ಬಗೆಯ ತಲೆಯುಡುಗೆ, ಮೈಸೂರಿನ ಪೇಟ, ಕೇರಳದ ಬಿಳಿ ರುಮಾಲು, ಉತ್ತರ ಕರ್ನಾಟಕದ ರುಮಾಲು, ಮಹಾರಾಷ್ಟ್ರದ ಪಗಡಿ, ಮಾರವಾಡಿಗಳ ಹಳದಿ ಬಣ್ಣದ ರುಮಾಲು, ಮುಸ್ಲೀಮರ ಕೆಂಪು ಬಣ್ಣದ ಟೊಪ್ಪಿಗೆ, ಪಠಾಣರ ದೊಡ್ಡ ಪೇಟ, ಉತ್ತರ ಭಾರತದ ಭಯ್ಯಾಗಳ ಟೊಪ್ಪಿಗೆ, ಮುಂಡಾಸ, ಕಾಶ್ಮೀರಿ ಟೊಪ್ಪಿಗೆ, ಪಾರ್ಸಿ ಜನರ ಹೆಣಿಕೆಯ ಟೊಪ್ಪಿಗೆ ಮೊದಲಾದವು ಭಾರತದಲ್ಲಿ ಪ್ರಚಲಿತವಾಗಿದ್ದವು. ಪಾಶ್ಚಾತ್ಯರ ಪ್ರಭಾವದಿಂದ ವಿವಿಧ ಬಗೆಯ ಹ್ಯಾಟುಗಳು ರೂಢಿಗೆ ಬಂದವು. ಟೊಪ್ಪಿಗೆಯೂ ಮಾನ್ಯತೆ ಪಡೆದಿದೆ. ಪಾಶ್ಚಾತ್ಯ ದೇಶಗಳ ಸ್ತ್ರೀಪುರುಷರು ಬೆಳಗು ಬೈಗುಗಳಲ್ಲಿ, ಸಮಾರಂಭಗಳಲ್ಲಿ ಧರಿಸುವ ಟೊಪ್ಪಿಗೆಗಳು ವಿಧವಿಧವಾಗಿವೆ. ಫ್ರಾನ್ಸ್‌ ಜರ್ಮನಿಗಳ ಮಹಿಳೆಯರು ಗರಿಯ ಹ್ಯಾಟು ಪ್ರೀತಿಸುತ್ತಾರೆ. ದಕ್ಷಿಣ ಆಮೆರಿಕದಲ್ಲಿ ಹುಲ್ಲಿನಿಂದ ಮಾಡಿದ ಪನಾಮ ಹ್ಯಾಟುಗಳು ಜನಪ್ರಿಯ. ತುರ್ಕಿಸ್ತಾನದವರು ಎತ್ತರವಾದ ಚರ್ಮದ ಟೊಪ್ಪಿಗೆ ಧರಿಸುತ್ತಾರೆ. ಚೆಕೊಸ್ಲೊವಾಕಿಯದವರು ಹೆಣಿಗೆಯ ಟೊಪ್ಪಿಗೆಗಳನ್ನೂ ಬಣ್ಣಬಣ್ಣದ ಬಟ್ಟೆಯ ಶಿರೋವಸ್ತ್ರಗಳನ್ನೂ ಉಪಯೋಗಿಸುತ್ತಾರೆ. ಅರಬ್ಬರು ಬಿಳಿಬಟ್ಟೆಯನ್ನು ತಲೆಯಿಂದ ಪಾದದವರೆಗೆ ಹೊದಿಯುತ್ತಾರೆ. ಮಧ್ಯಭಾಗದಲ್ಲಿ ಟೊಪ್ಪಿಗೆಯಿಟ್ಟು ಸುತ್ತಲೂ ಬಟ್ಟೆಯನ್ನು ಸುತ್ತಿ ಹಿಂಬದಿಗೆ ಒಂದಿಷ್ಟು ಬಟ್ಟೆಯನ್ನು ಇಳಿಬಿಡು ವುದು ಆಫ್ಘಾನಿಸ್ತಾನದ ರುಮಾಲಿನ ವೈಖರಿ. ರಷ್ಯದ ಸ್ತ್ರೀಪುರುಷರು ಉದ್ದ ಟೊಪ್ಪಿಗೆಯನ್ನೂ ರೇಷ್ಮೆಯ ವಸ್ತ್ರವನ್ನೂ ಧರಿಸುತ್ತಾರೆ. ಜಪಾನೀ ಮಹಿಳೆಯರು ಹ್ಯಾಟಿನಾಕಾರದಲ್ಲಿ ಕೇಶಾಲಂಕಾರ ಮಾಡಿಕೊಳ್ಳುವರು. ಪುರುಷರದು ಹುಲ್ಲಿನ ಬುಟ್ಟಿಯಾಕಾರದ ಹ್ಯಾಟು. 19ನೆಯ ಶತಮಾನದಿಂದ ಪಾಶ್ಚಾತ್ಯ ಮಾದರಿಯ ಹ್ಯಾಟುಗಳು ಹೆಚ್ಚಾಗಿ ರೂಢಿಯಲ್ಲಿವೆ. ಇದುವರೆಗೆ ಶಿರೋವಸ್ತ್ರ, ಶಿರೋಭೂಷಣಗಳಿಗೆ ಎಲ್ಲ ರಾಷ್ಟ್ರಗಳಲ್ಲಿ ಹೆಚ್ಚಿನ ಗೌರವವಿತ್ತು. ಇತ್ತೀಚೆಗೆ ಶಿರೋವಸ್ತ್ರದ ಬಗೆಗೆ ಜನರಲ್ಲಿ ಹಿಂದಿನಷ್ಟು ಆಸ್ಥೆ ಇಲ್ಲ. ಬರಿದಲೆಯಿಂದ ತಿರುಗಾಡುವುದೇ ಹೆಚ್ಚಾಗಿ ರೂಢಿಗೆ ಬರುತ್ತಿದೆ. ಟೊಪ್ಪಿಗೆಯೂ ಹ್ಯಾಟುಗಳೂ ಇನ್ನಿತರ ಬಗೆಯ ತಲೆಯುಡುಗೆಗಳೂ ಮಹತ್ತ್ವದ ಸಮಾರಂಭಗಳಿಗೆ ಸೀಮಿತವಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಡುಗೆ&oldid=1099222" ಇಂದ ಪಡೆಯಲ್ಪಟ್ಟಿದೆ