ಮುರ್ಷಿದಾಬಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುರ್ಷಿದಾಬಾದ್ ಪಶ್ಚಿಮ ಬಂಗಾಲದ ಒಂದು ಜಿಲ್ಲೆ; ತಾಲ್ಲೂಕು ಮತ್ತು ಪಟ್ಟಣ. ಈ ಜಿಲ್ಲೆಯನ್ನು ಈಶಾನ್ಯ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶ ಉತ್ತರದಲ್ಲಿ ಮಾಲ್ಡ್, ಪಶ್ಚಿಮದಲ್ಲಿ ಬೀರ್‍ಭೂಮ್, ದಕ್ಷಿಣದಲ್ಲಿ ನದಿಯ ಮತ್ತು ಬರ್ದ್ವಾನ್ ಜಿಲ್ಲೆಗಳು ಸುತ್ತುವರಿದಿವೆ. ಜಿಲ್‍ಪೈಗುರಿ ಉಪವಿಭಾಗಕ್ಕೆ ಸೇರಿರುವ ಈ ಜಿಲ್ಲೆಯ ವಿಸ್ತೀರ್ಣ 5341 ಚಕಿಮೀ. ಜನಸಂಖ್ಯೆ 36,97,552 (1981). ಜಿಲ್ಲಾ ಆಡಳಿತಕೇಂದ್ರನಗರ ಬರ್ಹಾಂಪುರ, ಜನಸಂಖ್ಯೆ 1,02,311 (1981).

ಜಿಲ್ಲೆಯ ಉತ್ತರ ಮತ್ತು ಈಶಾನ್ಯಭಾಗದಲ್ಲಿ ಗಂಗಾನದಿ ಹರಿಯುತ್ತದೆ. ಅದರ ಬಲದಂಡೆಯ ಫಲವತ್ತಾದ ಭೂಮಿ ಈ ಜಿಲ್ಲೆಗೆ ದೊರೆತಿದೆ. ಭಾಗೀರಥಿ ನದಿ ಈ ಜಿಲ್ಲೆಯ ಮಧ್ಯದಲ್ಲಿ ಪ್ರವಹಿಸುವುದು. ಇವಲ್ಲದೆ ಜಲಂಗಿನದಿ ಹಾಗೂ ಇತರ ಸಣ್ಣಪುಟ್ಟ ಉಪನದಿಗಳಿದ್ದು ಈ ಜಿಲ್ಲೆಯಲ್ಲಿ ಜಲಾಭಾವವಿಲ್ಲ. ಜಿಲ್ಲೆ ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದ್ದು ಬತ್ತ, ಕಬ್ಬು, ಹೊಗೆಸೊಪ್ಪು, ಸೆಣಬು, ಗೋದಿ, ಎಣ್ಣೆ ಬೀಜ ಮುಂತಾದವನ್ನು ಬೆಳೆಸುತ್ತಾರೆ. ಈ ಜಿಲ್ಲೆ ಮಾವಿನ ಹಣ್ಣುಗಳಿಗೆ ಪ್ರಸಿದ್ಧ. ಹಿಪ್ಪುನೇರಳೆಯನ್ನೂ ಹೆಚ್ಚಾಗಿ ಬೆಳೆಸುತ್ತಾರೆ. ರೇಷ್ಮೆ, ಹತ್ತಿಬಟ್ಟೆ ಮತ್ತು ಕಸೂತಿ ಹಾಗೂ ನಕ್ಕಿ ಕೆಲಸಗಳಿಗೆ ಹೆಸರಾದದ್ದು. ಕಂಚು ಹಿತ್ತಾಳೆ ಪಾತ್ರೆಗಳನ್ನೂ ಸಂಗೀತವಾದ್ಯಗಳನ್ನೂ ತಯಾರಿಸುವುದು ಈ ಜಿಲ್ಲೆಯ ಮುಖ್ಯ ಕೈಗಾರಿಕೆ, ದಂತದ ಕೆತ್ತನೆಯು, ಕುಸುರಿ ಕೆಲಸಕ್ಕೆ ಮುರ್ಷಿದಾಬಾದ್ ಹೆಸರಾದದ್ದು.

ಮುರ್ಷಿದಾಬಾದ್ ನಗರ ಭಾಗೀರಥಿ ನದಿಯ ಎಡದಂಡೆಯ ಮೇಲಿದೆ. ಜನಸಂಖ್ಯೆ 21,341 (1981).

ಇತಿಹಾಸ[ಬದಲಾಯಿಸಿ]

ಇತಿಹಾಸ ಪ್ರಸಿದ್ಧವಾದ ಈ ಪಟ್ಟಣವನ್ನು 16ನೆಯ ಶತಮಾನದಲ್ಲಿ ಅಕ್ಬರ್ ಸ್ಥಾಪಿಸಿದನೆಂದೂ ನವಾಬ ಮುರ್ಷಿದ್ ಕುಲಿಖಾನ್ 1704ರಲ್ಲಿ ಢಾಕದಿಂದ ಇಲ್ಲಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿ ಈ ಊರಿಗೆ ಮುರ್ಷಿದಾಬಾದ್ ಎಂದು ಹೆಸರಿಟ್ಟನೆಂದೂ ತಿಳಿದುಬರುತ್ತದೆ. ಪ್ಲಾಸಿಕದನದ ಕಾಲದಲ್ಲಿ (1757) ಸಿರಾಜ್ ಉದ್‍ದೌಲ ಇದನ್ನು ತನ್ನ ಆಡಳಿತಕೇಂದ್ರವಾಗಿ ಮಾಡಿಕೊಂಡಿದ್ದ. ಮುಂದೆ 1790ರ ತನಕವೂ ಇದು ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. ಈಗಲೂ ಬಂಗಾಲದ ನವಾಬರ ಮನೆತನದವರು ವಾಸಿಸುವ ಮುಖ್ಯ ವಾಸಸ್ಥಾನವಾಗಿದೆ. ಇಲ್ಲಿ 1837ರಲ್ಲಿ ಕಟ್ಟಿದ ನಿಜಾಮತ್ ಕಿಲ ಎಂಬ ನವಾಬರ ಅರಮನೆ ಇದೆ. ಮೋತಿ ಸರೋವರ, ಮುರಾದ್ ಭಾಗ್ ಅರಮನೆ, ಬಂಗಾಲದ ಕೊನೆಯ ನವಾಬನಾದ ಅಲಿವರ್ದಿಖಾನ್‍ನ ಮತ್ತು ಸಿರಾಜ್ ಉದ್‍ದೌಲ ಇವರ ಸಮಾಧಿಯಿರುವ ಖುಸುಭಾಗ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ. ರಸ್ತೆ, ರೈಲು ಸಂಪರ್ಕವಿದೆ. ವ್ಯಾಪಾರಕೇಂದ್ರ, ರೇಷ್ಮೆ ನೇಯ್ಗೆಗೆ ಪ್ರಸಿದ್ಧ. 1869ರಿಂದಲೂ ಪುರಸಭಾ ಆಡಳಿತವಿದೆ. ಶಾಲಾಕಾಲೇಜುಗಳೂ ನಾಗರಿಕ ಸೌಲಭ್ಯಗಳೂ ಇವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: