ಮಾರ್ಸೆಲ್ಲೊ ಮ್ಯಾಲ್‍ಪಿಘಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಸೆಲ್ಲೊ ಮ್ಯಾಲ್‍ಪಿಘಿ

ಮಾರ್ಸೆಲ್ಲೊ ಮ್ಯಾಲ್‍ಪಿಘಿ (1628-94) ಇಟಲಿಯ ಒಬ್ಬ ಶರೀರ ಕ್ರಿಯಾವಿಜ್ಞಾನಿ. ಅಂಗರಚನಾವಿಜ್ಞಾನದ (ಮೈಕ್ರೋಸ್ಕೋಪಿಕ್ ಅನಾಟಮಿ ಮತ್ತು ಹಿಸ್ಟಾಲಜಿ) ಜನಕನೆಂದು ಪರಿಗಣಿಸಲ್ಪಟ್ಟಿದ್ದಾನೆ.

ಜೀವನ[ಬದಲಾಯಿಸಿ]

1628 ಮಾರ್ಚ್ 10 ರಂದು ಬೊಲೋನಾ ನಗರದಲ್ಲಿ ಜನನ.[೧] ವಿಶ್ವವಿದ್ಯಾಲಯ ವ್ಯಾಸಂಗವನ್ನು ಅಲ್ಲಿಯೇ ಪ್ರಾರಂಭಿಸಿ (1646),[೨] ವೈದ್ಯಕೀಯ ವ್ಯಾಸಂಗಕ್ಕೆ ಜಾರಿಕೊಂಡು (1649) ಎಂ.ಡಿ. ಮತ್ತು ಪಿ.ಎಚ್.ಡಿ. ಪದವಿಗಳನ್ನು ಪಡೆದ (1650). ಮುಂದೆ 1656 ರಲ್ಲಿ ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕನಾಗಿ ನೇಮಿತನಾದ. ಆದರೆ ಆ ನಗರದ ಹವೆ ಒಗ್ಗದೆ 1659 ರಲ್ಲಿ ಬೊಲೋನಾಕ್ಕೆ ವಾಪಸ್ಸಾಗಿ ಅಲ್ಲಿ 1662 ರ ತನಕ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಉಪನ್ಯಾಸಕನಾಗಿದ್ದ. ಅನಂತರ ಹೆಸ್ಸೀನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಮುಖ್ಯ ಪ್ರಾಧ್ಯಾಪಕನಾಗಿ ನೇಮಕಗೊಂಡು ಅಲ್ಲಿಗೆ ತೆರಳಿದ. 1666ರಲ್ಲಿ ಪುನಃ ಬೊಲಾನಾಕ್ಕೆ ವಾಪಸಾಗಿ ಅಲ್ಲಿ ಪ್ರಾಯೋಗಿಕ ವೈದ್ಯದ ಪ್ರಾಧ್ಯಾಪಕನಾಗಿ 25 ವರ್ಷ ಸೇವೆ ಸಲ್ಲಿಸಿದ. ಈ ಕಾಲದಲ್ಲಿ ಇವನು ಲಂಡನ್ನಿನ ರಾಯಲ್ ಸೊಸೈಟಿಗೆ ಬೊಲೋನಾ ವಿಶ್ವವಿದ್ಯಾಲಯದ ಅಧಿಕೃತ ಬಾತ್ಮೀದಾರನಾಗಿದ್ದು ನಿಕಟ ಸಂಪರ್ಕ ಪಡೆದಿದ್ದ. ವಾಸ್ತವವಾಗಿ ಇವನು ಬರೆದ ಗ್ರಂಥಗಳು ಹಾಗೂ ಲೇಖನಗಳನ್ನೆಲ್ಲ ರಾಯಲ್ ಸೊಸೈಟಿಯೇ ಪ್ರಕಟಿಸಿದೆ. 1691ರಲ್ಲಿ ಪೋಪ್ 12ನೆಯ ಇನ್ನೊಸೆಂಟಿನ ಮುಖ್ಯ ವೈದ್ಯನಾಗಿ ನೇಮಕಗೊಂಡು ರೋಮಿಗೆ ತೆರಳಿದ. ಮೂರು ವರ್ಷಗಳ ಅನಂತರ 1694 ನವೆಂಬರ್ 29 ರಂದು ಇಟಲಿಯ ತನ್ನ ಅಧಿಕೃತ ನಿವಾಸದಲ್ಲೇ ಮೃತನಾದ.

ಸಾಧನೆಗಳು[ಬದಲಾಯಿಸಿ]

ಸೂಕ್ಷ್ಮದರ್ಶಕವನ್ನು ರೂಢಿಯಾಗಿ ಬಳಸಿ ಅಧ್ಯಯನ ಮಾಡಿದ ಮೊದಲಿಗರಲ್ಲಿ ಮ್ಯಾಲ್‌ಪಿಘಿ ಒಬ್ಬ. ಸಸ್ಯ ಹಾಗೂ ಪ್ರಾಣಿ ಅಂಗಗಳ ಸೂಕ್ಷ್ಮರಚನೆ ನೋಡಿ ಅವುಗಳ ಕ್ರಿಯೆಗಳನ್ನು ಅರ್ಥವತ್ತಾಗಿ ಗ್ರಹಿಸುವುದರಲ್ಲಿ ಚತುರನಾದ. ಫುಪ್ಪುಸಗಳಲ್ಲಿ ಅಪಧಮನಿಯ ಅತ್ಯಂತ ಕಿರಿಕವಲುಗಳು ಅಭಿಧಮನಿಗಳ ಅತ್ಯಂತ ಕಿರಿಕವಲುಗಳಿಗೆ ಹೇಗೋ ಸಂಪರ್ಕಿಸಿರಲೇಬೇಕು, ಈ ರೀತಿ ರಚನೆಯಿಂದಲೇ ಫುಪ್ಪುಸಗಳಿಗೆ ಹರಿದುಹೋದ ರಕ್ತ ಪುನಃ ಹೃದಯಕ್ಕೆ ಬಂದು ಸೇರುತ್ತದೆ ಎಂದು ವಿಲಿಯಮ್ ಹಾರ್ವೆ 1628ರಲ್ಲಿ ಪ್ರತಿಪಾದಿಸಿದ್ದ. ಆದರೆ ಫುಪ್ಪುಸದಲ್ಲಿದ್ದ ಸಂಪರ್ಕ ಯಾವ ರೀತಿಯದು ಎಂದು ಗುರುತಿಸಿರಲಿಲ್ಲ. ಮ್ಯಾಲ್‌ಪಿಘಿ ಸೂಕ್ಷ್ಮದರ್ಶಕದಲ್ಲಿ ಕಪ್ಪೆಯ ಪುಪ್ಪುಸದ ರಚನೆಯನ್ನು ವೀಕ್ಷಿಸುತ್ತಿದ್ದಾಗ ಅತ್ಯಂತ ಕಿರಿನಾಳಗಳ ಜಾಲ ಅಪಧಮನಿಗಳ ಕವಲುಗಳನ್ನೂ ಅಭಿಧಮನಿ ಕವಲುಗಳನ್ನೂ ಜಂಟಿಸುವುದು ಕಂಡುಬಂತು.[೩] ಈ ಜಾಲ ಫುಪ್ಪುಸದ ವಾಯು ಬುಡ್ಡೆಗಳನ್ನು ಕೂಡ ಆವರಿಸಿತ್ತು. ಅಪಧಮನಿಗಳನ್ನೂ ಅಭಿಧಮನಿಗಳನ್ನೂ ನೇರವಾಗಿ ಕೂಡಿಸುವ ಇವುಗಳಿಗೆ ಲೋಮನಾಳಗಳು ಅಥವಾ ಕೇಶನಾಳಗಳು (ಕ್ಯಾಪಿಲ್ಲರಿ) ಎಂದು ಹೆಸರಾಯಿತು. ಇವುಗಳ ಪತ್ತೆ 1661 ರಲ್ಲಿ ಆಯಿತು. ಅಷ್ಟು ಹೊತ್ತಿಗೆ ಹಾರ್ವೆ ಕಾಲವಾಗಿ ನಾಲ್ಕು ವರ್ಷ ಸಂದಿದ್ದುವು. ಅಂತೂ ಅವನು ತರ್ಕಿಸಿದ್ದಂತೆ ಅಪಧಮನಿಗಳಿಗೂ ಅಭಿಧಮನಿಗಳಿಗೂ ಕೂಡುನಾಳಗಳಿರುವುದು ಮ್ಯಾಲ್‌ಪಿಘಿಯಿಂದ ಸ್ಥಿರೀಕರಿಸಲ್ಪಟ್ಟಿತು.[೪] ಆದರೆ ಇವನಿಗೆ ಸ್ತನಿಗಳಲ್ಲಿ ಇವನ್ನು ಪತ್ತೆಮಾಡುವುದಕ್ಕಾಗಲಿಲ್ಲ. ನೈಸರ್ಗಿಕವಾಗಿ ಕಿರಿದರ್ಜೆ ಪ್ರಾಣಿಯಲ್ಲಿರುವ ರಚನೆ ಮೇಲ್ದರ್ಜೆ ಪ್ರಾಣಿಯಲ್ಲಿ ಉತ್ತಮಗೊಂಡಿರದಿದ್ದರೂ ಕನಿಷ್ಠ ಪಕ್ಷ ತದ್ವತ್ತಾಗಿಯಾದರೂ ಇರಬೇಕೆಂಬುದು ಮ್ಯಾಲ್‌ಪಿಘಿಯ ತರ್ಕ.

ಈತ ಮೆಸ್ಸೀನದಲ್ಲಿದ್ದಾಗ ಸಾಗರಜೀವಿಗಳ ಅಂಗರಚನೆಯನ್ನು ವ್ಯಾಸಂಗಿಸಿದ. ಪ್ರಾಣಿಗಳಲ್ಲಿ ನಾಲಗೆಯ ಸೂಕ್ಷ್ಮ ರಚನೆ ವಿವರಿಸುತ್ತ ಅವುಗಳ ಚರ್ಮದಲ್ಲಿ ಒರಟು ಮೇಲ್ಪದರವೂ ಇದರ ಅಡಿಯಲ್ಲಿ ಕೋಶಯುಕ್ತ ಮೃದುಪದರವೂ ಇರುವುದನ್ನು ವಿವರಿಸಿದ. ಕೋಶಯುಕ್ತ ಪದರಕ್ಕೆ ಮ್ಯಾಲ್‌ಪಿಘಿಯನ್ ಪದರವೆಂದೇ ಹೆಸರು. ನಾಲಗೆಯ ಮೇಲೆ ಬಗೆಬಗೆಯ ಅತಿ ಸಣ್ಣ ಚಾಚುಗಳಿರುವುದನ್ನೂ ಆದ್ದರಿಂದಲೇ ಅದು ಉಪ್ಪುಕಾಗದದಂತೆ ಗಡಸುತನಗಳಿಂದ ಹೊದ್ದಲ್ಪಟ್ಟಂತೆ ಸ್ಪರ್ಶಾನುಭವಕ್ಕೆ ಬರುವುದನ್ನೂ ವಿವರಿಸಿದ. ಅನೇಕ ಚಾಚುಗಳ ಮೇಲುತುದಿಯಲ್ಲಿ ರಂಧ್ರವಿದ್ದು ಅದರೊಳಗಿನಿಂದ ಆಹಾರ ಪದಾರ್ಥವನ್ನು ಲೀನವಾಗಿಸಿಕೊಂಡಿರುವ ಜೊಲ್ಲು ಇಳಿದು ರುಚಿ ಅನುಭವಕ್ಕೆ ಬರುವುದೆಂದು ಸೂಚಿಸಿದ.[೫]

ಮೇದೋಜೀರಕಾಂಗ, ಲಾಲಾಗ್ರಂಥಿ, ವೃಷಣ ಇವುಗಳ ನಾಳಗಳು ಗ್ರಂಥಿಯ ಒಳಗೆ ಹೇಗೆ ಕವಲಾಗಿ ಕೊನೆಗೆ ಗ್ರಂಥಿಯ ಸ್ರಾವಭಾಗಗಳಲ್ಲಿ ಅಂತ್ಯವಾಗುವುವು ಎಂಬುದನ್ನು ವಿವರಿಸಿದ. ಗ್ರಂಥಿಯ ಒಳಕ್ಕೆ ಹೋಗುವ ಅಪಧಮನಿಯ ರಕ್ತದಿಂದ ವಿಶಿಷ್ಟ ಪದಾರ್ಥಗಳು ಬೇರ್ಪಟ್ಟು ಗ್ರಂಥಿಯ ಸ್ರಾವಭಾಗಕ್ಕೆ ಸೇರುವುವೆಂದು ಹೇಳಿದ. ಸ್ರಾವಭಾಗದಲ್ಲಿ ಹೀಗೆ ಸಂಚಯನವಾಗುವ ವಸ್ತುಗಳು ಅಪಧಮನಿ ಕವಲುಗಳ ಮೂಲಕ ಹೊರಬರುವಂತೆ ಆದರೆ ಅಭಿಧಮನಿ ಕವಲುಗಳೊಳಕ್ಕೆ ತೂರಿ ಹೋಗದಂತೆ ಇರುವುದೆಂಬ ತರ್ಕವನ್ನು ಮಂಡಿಸಿದ. ಆದ್ದರಿಂದ ಗ್ರಂಥಿಯಲ್ಲಿ ಸ್ರಾವವಾಗುವ ವಿಧಾನ ರಕ್ತವನ್ನು ಜರಡಿಯಲ್ಲಿ ಸೋಸಿದಂತೆ ಮಾತ್ರ, ಇನ್ನು ಯಾವ ಬಲವಂತಿಕೆಯೂ ಇಲ್ಲ ಎಂದು ಹೇಳಿ ಅಪಧಮನಿಗಳ ಗ್ರಂಥಿಯ ಸ್ರಾವಭಾಗಕ್ಕೂ ಪರಸ್ಪರ ಸಂಪರ್ಕವಿರುವುದರಿಂದ ಇದು ಸಾಧ್ಯವಾಗುವುದೆಂದು ವಿಶದೀಕರಿಸಿದ. ಆದರೆ ಈ ಸಂಪರ್ಕವನ್ನು ಸೂಕ್ಷ್ಮದರ್ಶಕದ ಮೂಲಕ ತೋರಿಸಲು ಸಾಧ್ಯವಾಗಲಿಲ್ಲ. ಮೂತ್ರಜನಕಾಂಗದಲ್ಲಿ ಅಪಧಮನಿ ಕವಲೊಡೆದು ಕೇಶಗುಚ್ಛವಾಗಿ ಅನಂತರ ಅಭಿಧಮನಿಯ ಕವಲುಗಳಾಗುವುದನ್ನೂ ಕೇಶಗುಚ್ಛ ಕವಚಾಚ್ಛಾದಿತವಾಗಿರುವುದನ್ನೂ ಮೂತ್ರಜನಕಾಂಗದಲ್ಲಿ ಲಕ್ಷಗಟ್ಟಲೆ ಇಂಥ ರಚನೆಗಳಿರುವುದನ್ನೂ ಮ್ಯಾಲ್‌ಪಿಘ ಈಗಾಗಲೇ ವಿವರಿಸಿದ್ದ. ಮೂತ್ರಜನಕಾಂಗಕ್ಕೆ ವರ್ಣದ್ರವ್ಯವನ್ನು ಚುಚ್ಚುಮದ್ದಾಗಿ ಒಳಹುಗಿಸಿದರೆ ಅದು ಶೀಘ್ರವಾಗಿಯೇ ಅಪಧಮನಿಗಳ ಕವಲಿನಲ್ಲಿಯೂ ಕೋಶಗುಚ್ಛದಲ್ಲಿಯೂ ಮೂತ್ರನಾಳಗಳ ಕವಲುಗಳಲ್ಲಿಯೂ ಕಾಣಬರುವುದೆಂದೂ ಇವುಗಳ ನಡುವೆ ಸಂಪರ್ಕವಿಲ್ಲದಿದ್ದರೆ ಹೀಗಾಗುತ್ತಿರಲಿಲ್ಲವೆಂದೂ ವಿಶದೀಕರಿಸಿದ. ಮೂತ್ರಜನಕಾಂಗದಲ್ಲಿ ಲಕ್ಷಗಟ್ಟಲೆ ಇರುವ ಕವಚ್ಛಾದಿತ ಕೇಶಗುಚ್ಛಗಳಿಗೆ ಮ್ಯಾಲ್‌ಪಿಘಿಯ ಕಣಗಳೆಂದು ಹೆಸರು.

ಈತನ ಇನ್ನೊಂದು ಮುಖ್ಯ ಆವಿಷ್ಕಾರವೆಂದರೆ ಹೃದಯದಲ್ಲಿ ಕೆಲವು ವೇಳೆ ಇರುವುವೆಂದು ಈತ ವಿವರಿಸಿದ ದಪ್ಪ ಮರಳು ಗಾತ್ರದ ಬಿಳಿಯ ರಚನೆಗಳು. ಹೃದಯಮಿಡಿತ ಹಾಗೂ ಉಸಿರಾಟಗಳು ಹಠಾತ್ತನೆ ನಿಂತು ಮೃತಹೊಂದಿದ್ದ ವ್ಯಕ್ತಿಗಳಲ್ಲಿಯೇ ವಿಶೇಷವಾಗಿ ಈ ರಚನೆಗಳು ಕಂಡುಬರುತ್ತಿದ್ದುವು. ಇವು ರಕ್ತಗರಣೆಗಳೇ ಇರಬೇಕು ಎಂದು ಮ್ಯಾಲ್‌ಪಿಘಿ ಊಹಿಸಿದ. ನಿಶ್ಚಯ ಮಾಡಿಕೊಳ್ಳಲು ರಕ್ತಗರಣೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೋಡಿದ. ಗರಣೆ ಬೆಳ್ಳಗಾಯಿತು. ಅಲ್ಲದೆ ಸೂಕ್ಷ್ಮದರ್ಶಕದಲ್ಲಿ ಅದರ ರಚನೆ ಹೃದಯದಲ್ಲಿದ್ದ ಗಂಟುಗಳಂತೆಯೇ ಇತ್ತು. ತೊಳೆದ ನೀರನ್ನೆ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅದರಲ್ಲಿ ಕೆಂಪಾದ ಕಣಗಳು (ಇವು ಕೆಂಪುರಕ್ತಕಣಗಳೇ ಆಗಿದ್ದಿರಬೇಕೆಂಬುದು ವ್ಯಕ್ತ) ಕಂಡುಬಂದುವು. ಈ ವ್ಯಾಸಂಗದಿಂದ ಮ್ಯಾಲ್‌ಪಿಘಿ ಹೃದಯದ ಒಳಗೆ ರಕ್ತಗರಣೆ ಕಟ್ಟುವ ಸಂದರ್ಭಗಳ ಪ್ರಥಮ ಆವಿಷ್ಕರ್ತೃ ಎಂಬುದು ಸಿದ್ಧವಾಯಿತು.

ಉಲ್ಲೇಖಗಳು[ಬದಲಾಯಿಸಿ]

  1.  Chisholm, Hugh, ed. (1911). "Malpighi, Marcello" . Encyclopædia Britannica. Vol. 17 (11th ed.). Cambridge University Press. p. 497. {{cite encyclopedia}}: Cite has empty unknown parameters: |separator= and |HIDE_PARAMETER= (help)
  2. Murray Scott, Flora (1927). "The Botany of Marcello Malpighi, Doctor of Medicine". The Scientific Monthly. 25 (6): 546–553. Bibcode:1927SciMo..25..546S.
  3. Gillispie, Charles Coulston (1960). The Edge of Objectivity: An Essay in the History of Scientific Ideas. Princeton University Press. p. 72. ISBN 0-691-02350-6.
  4. Reveron, Rafael Romero (2011). "Marcello Malpighi (1628-1694), Founder of Microanatomy". Int. J. Morphol. 29 (2): 399–402. doi:10.4067/S0717-95022011000200015.
  5. Doty, Richard L., ed. (2015-05-12). Handbook of Olfaction and Gustation: Doty/Handbook of Olfaction and Gustation (in ಇಂಗ್ಲಿಷ್). Hoboken, NJ, USA: John Wiley & Sons, Inc. doi:10.1002/9781118971758. ISBN 978-1-118-97175-8.

ಗ್ರಂಥಸೂಚಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]