ವಿಷಯಕ್ಕೆ ಹೋಗು

ವೃಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೃಷಣದ ಒಳಗಿನ ರಚನೆ

ವೃಷಣವು (ತರಡು, ತೊಲ್ಡು, ಬೀಜ) ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ ಅಂಡಾಶಯಕ್ಕೆ ಸಮಾನರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಮತ್ತು ಆಂಡ್ರೋಜೆನ್‌ಗಳ (ಟೆಸ್ಟೊಸ್ಟರೋನ್) ಉತ್ಪಾದನೆ.

ವೃಷಣದ ರಚನೆ

[ಬದಲಾಯಿಸಿ]

ಶಿಶ್ನದ ಹಿಂಭಾಗದಲ್ಲಿ ಎರಡೂ ಕಡೆ ಎರಡು ಸಮಾನ ಗಾತ್ರದ ದುಂಡಗಿನ ಬೀಜಗಳಂಥ ಅಂಡಕೋಶಗಳಿವೆ. ಇವುಗಳನ್ನು ವೃಷಣಗಳು ಎಂದು ಕರೆಯಲಾಗಿದೆ. ಇವುಗಳ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಲ್ಲುದು. ವೃಷಣಗಳು ಚರ್ಮದ ಚೀಲಗಳಲ್ಲಿ ಅಡಕಗೊಂಡಿವೆ. ಈ ಚೀಲಗಳಿಗೆ ವೃಷಣಕೋಶ ಎನ್ನುತ್ತಾರೆ.[೧] ವೃಷಣ ಕೋಶವು ಉದರದ ಗೋಡೆಯ ವಿಸ್ತರಣೆಯಾಗಿರುತ್ತದೆ. ವೃಷಣ ಕೋಶದ (ಸ್ಕ್ರೋಟಮ್) ಅಸಮಾನತೆಯೂ ಅಪರೂಪಕ್ಕೆ ಕಂಡುಬರುವುದಿದೆ: ರಕ್ತನಾಳ ವ್ಯವಸ್ಥೆಯ ರಚನೆಯಲ್ಲಿನ ವ್ಯತ್ಯಾಸಗಳ ಕಾರಣದಿಂದ ಒಂದು ವೃಷಣ ಮತ್ತೊಂದಕ್ಕಿಂತ ಕೆಳಗೆ ವಿಸ್ತರಿಸಿರುವುದು. ಸಾಮಾನ್ಯವಾಗಿ ವೃಷಣ 5 ಸೆಂ.ಮೀ ಉದ್ದ, 2.5 ಸೆಂ.ಮೀ. ಅಗಲ ಮತ್ತು ಅರ್ಧ ಔನ್ಸ್ ತೂಕವಿರುತ್ತದೆ. ಎರಡೂ ಬದಿಗಳಲ್ಲಿರುವ ವೃಷಣಗಳು ವಾಸ್ ಡಿಫರೆನ್ಸ್ ಎಂಬ ಕೊಳವೆಯಿಂದ ಸಂಪರ್ಕ ಹೊಂದಿವೆ. ಮತ್ತೊಂದೆಡೆ ಅವು ಸೆಮಿನಲ್ ವೆಸಿಕಲ್ ಎಂದು ಕರೆಯಲ್ಪಡುವ ಮತ್ತೊಂದು ಗ್ರಂಥಿಗೆ ಸಂಪರ್ಕ ಹೊಂದಿವೆ. ವೃಷಣ ಕೋಶ ದ ಚರ್ಮ ಸಡಿಲವಾಗಿದ್ದು, ದೇಹದ ಉಷ್ಣತೆ ಹೆಚ್ಚಾದಾಗ ವೃಷಣವು ಹಿಗ್ಗುತ್ತದೆ ಮತ್ತು ಉಷ್ಣತೆ ಕಡಿಮೆಯಾದಾಗ ಕುಗ್ಗುತ್ತದೆ. ತಾಪಮಾನ ತುಂಬಾ ಹೆಚ್ಚಿದ್ದರೆ, ವೃಷಣಗಳಲ್ಲಿರುವ ವೀರ್ಯ ನಾಶವಾಗುವ ಅಪಾಯವಿರುತ್ತದೆ. ಇದು ಪುರುಷ ಬಂಜೆತನಕ್ಕೆ ಕಾರಣವಾಗಬಹುದು.

ವೃಷಣಕೋಶದ ಸ್ನಾಯುಗಳು ಚಳಿಗೆ ಮತ್ತು ಬಿಸಿಲಿಗೆ ಕುಗ್ಗುವ ಮತ್ತು ಹಿಗ್ಗುವ ಸಾಮರ್ಥ್ಯವನ್ನು ಹೊಂದಿವೆ. ಬಿಸಿನೀರಿನ ಸ್ನಾನ ಮಾಡಿದ ನಂತರ ವೃಷಣಕೋಶಗಳು ಸಡಿಲಗೊಂಡು ಕೆಳಗಿಳಿಯುವುದು ಸಾಮಾನ್ಯ. ಹೊರಗೆ ವಿಪರೀತ ಚಳಿಯಿರುವಾಗ ವೃಷಣಕೋಶಗಳ ಸಂಕುಚನಗೊಳ್ಳುತ್ತವೆ. ಆಗ ಕೋಶಗಳು ಸ್ವಲ್ಪ ಮೇಲಕ್ಕೆ ಬಿಗಿಯಾಗಿ ನಿಂತು ಸಣ್ಣಗಾದ ಹಾಗೆ ಭಾಸವಾಗುತ್ತದೆ. ವೃಷಣದ ಒಳಗಿನ ಅಂಗಾಂಶಗಳನ್ನು ಹೊರಗಣ ವಾತಾವರಣದ ಏರುಪೇರುಗಳಿಂದ ರಕ್ಷಿಸಲು ಪ್ರಕೃತಿ ಹೂಡಿರುವ ಉಪಾಯವಿದು. [೧]

ಕೆಲವರಿಗೆ ಎಡಭಾಗದ ವೃಷಣ ಬಲಗಡೆಯದಕ್ಕಿಂತ ದಪ್ಪವಾಗಿದ್ದು ಸ್ವಲ್ಪ ಕೆಳಗಿರುತ್ತದೆ. ಇದು ಯಾವುದೇ ಕಾಯಿಲೆಯ ಲಕ್ಷಣವಲ್ಲ. ಕೆಲವರಿಗೆ ಎರಡು ವೃಷಣಗಳೂ ಒಂದೇ ಗಾತ್ರದ್ದಾಗಿರುತ್ತದೆ. ಇದರಿಂದ ಆರೋಗ್ಯಕ್ಕೆ ಮತ್ತು ಸಾಮಾನ್ಯ ಜೀವನಕ್ಕೆ ಬಾಧಕವಿಲ್ಲ.

ವೃಷಣದ ಒಳಭಾಗದಲ್ಲಿ ನೂರಾರು ಸಣ್ಣ ಹಾಲೆಗಳಿವೆ. ಈ ಹಾಲೆಗಳಲ್ಲಿಯೇ ವೀರ್ಯಾಣುಗಳು ಸೃಷ್ಟಿಯಾಗುವುವು. ಹಾಲೆಗಳನ್ನು ಜೋಡಿಸುವ ಅಂಗಾಂಗಗಳಲ್ಲಿ ಟೆಸ್ಟೊಸ್ಟಿರಾನ್‌ ಎಂಬ ಹಾರ್ಮೋನು ಉತ್ಪತ್ತಿಯಾಗಿ ನೇರವಾಗಿ ರಕ್ತ ಪರಿಚಲನೆಗೆ ಸೇರುತ್ತದೆ. ಈ ಹಾರ್ಮೋನು ಗಂಡು ಲಕ್ಷಣಗಳಿಗೆ ಮೂಲ. ಇದರಿಂದಾಗಿಯೇ ಯೌವನದಲ್ಲಿ ಪುರುಷ ಜನನೇಂದ್ರಿಯಗಳು ಬೆಳೆಯುತ್ತವೆ ಹದಿವಯಸ್ಸಿನಲ್ಲಿ ಹುಡುಗನ ಧ್ವನಿ ಒಡೆಯುವುದಕ್ಕೂ ಕಂಕುಳು ಮತ್ತು ಗುಹ್ಯ ಭಾಗದಲ್ಲಿ ಕೂದಲು ಬೆಳೆಯುವುದಕ್ಕೂ ಇದೇ ಕಾರಣ. ವೃಷಣದಲ್ಲಿ ಉತ್ಪತ್ತಿಯಾದ ವೀರ್ಯಾಣುಗಳು ಬಳಸುದಾರಿಯ ಮೂಲಕ ಶಿಶ್ನವನ್ನು ತಲುಪುವ ಕ್ರಿಯೆ ಅತ್ಯಂತ ಕೌತುಕಪೂರ್ಣವಾದುದು. ವೀರ್ಯಾಣುಗಳು ವೃಷಣದ ಹಾಲೆಗಳಲ್ಲಿ ತಯಾರಾಗುತ್ತವೆ. ಹಾಲೆಗಳು ಒಂದುಗೂಡಿ ನಳಿಕೆಗಳಾಗುತ್ತವೆ. ನಳಿಕೆಗಳು ಒಂದುಗೂಡಿ ರುಳಿನಾಳಕ್ಕೆ ಸೇರುತ್ತವೆ. ಇದಕ್ಕೆ `ಎಪಿಡಿಡಿಮಸ್‌' ಎಂದು ಹೆಸರು. ಇಲ್ಲಿ ವೀರ್ಯಾಣುಗಳು ಶೇಖರಗೊಂಡು ಪಕ್ವಗೊಳ್ಳುತ್ತವೆ. ಎಪಿಡಿಡಿಮಸ್‌ ವೃಷಣದ ತಲೆಯ ಮೇಲಿನಿಂದ ಕೆಳಗಿಳಿದು ಮತ್ತೆ ಮೇಲಕ್ಕೆದ್ದು ವಾಹಕ ನಾಳವಾಗುತ್ತದೆ. ವಾಹಕನಾಳವೊಂದು ಗುಂಡುಕೊಳವೆ. ಇದರ ಉದ್ದ ಎರಡು ಅಡಿ. ಇದು ಮೂತ್ರಕೋಶವನ್ನು ಬಳಸಿ ಮೇಲಕ್ಕೇರಿ ಅದಾದ ನಂತರ ಕೆಳಕ್ಕಿಳಿದು ವೀರ್ಯಕೋಶದ ನಾಳದ ಜೊತೆಗೆ ಸೇರುತ್ತದೆ. [೧]

ವೃಷಣಗಳು ಟ್ಯುನಿಕಾ ಆಲ್ಬುಜಿನಿಯಾ ಎಂದು ಕರೆಯಲ್ಪಡುವ ಗಟ್ಟಿಯಾದ ಪೊರೆಯಂಥ ಕವಚದಿಂದ ಆವೃತವಾಗಿರುತ್ತವೆ. ವೃಷಣಗಳ ಒಳಗೆ ವೀರ್ಯವಾಹಕ ನಳಿಕೆಗಳು ಎಂದು ಕರೆಯಲ್ಪಡುವ ಬಹಳ ನಯವಾದ ಸುರುಳಿ ಸುತ್ತಿಕೊಂಡಿರುವ ನಳಿಕೆಗಳಿವೆ. ಈ ನಳಿಕೆಗಳು ಜೀವಕೋಶಗಳ (ಜಂಪತಿಗಳು) ಪದರವನ್ನು ಹೊಂದಿರುತ್ತವೆ. ಇವು ಪ್ರೌಢಾವಸ್ಥೆಯಿಂದ ವೃದ್ಧಾಪ್ಯದವರೆಗೆ ವೀರ್ಯಾಣು ಕೋಶಗಳಾಗಿ ವಿಕಸನಗೊಳ್ಳುತ್ತವೆ.

ಹದಿಹರೆಯದಲ್ಲಿ, ವೃಷಣವು ಹಾರ್ಮೋನುಗಳು ಮತ್ತು ವೀರ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಮತ್ತು ಅದರ ಸುತ್ತ ಕೂದಲು ಬೆಳೆಯತೊಡಗುತ್ತದೆ. ವಯಸ್ಸಾದಂತೆ ವೃಷಣಗಳ ಕಾರ್ಯ ಕಡಿಮೆಯಾಗುತ್ತದೆ ಮತ್ತು ಹಾರ್ಮೋನ್ ಉತ್ಪಾದನೆಯೂ ಕಡಿಮೆಯಾಗುತ್ತದೆ ಮತ್ತು ಕ್ರಮೇಣ ವೀರ್ಯೋತ್ಪಾದನೆ ನಿಂತುಹೋಗುತ್ತದೆ.


ಚಿತ್ರಾಂಕಣ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. 1 2 3 ದಾಂಪತ್ಯ ದೀಪಿಕೆ - ಡಾ. ಅನುಪಮಾ ನಿರಂಜನ 1993, p. 36-37.
"https://kn.wikipedia.org/w/index.php?title=ವೃಷಣ&oldid=1428642" ಇಂದ ಪಡೆಯಲ್ಪಟ್ಟಿದೆ