ಸೂಕ್ಷ್ಮ ಜೀವ ವಿಜ್ಞಾನ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಸೂಕ್ಷ್ಮಜೀವಿಗಳೊಂದಿಗೆ ಗುರುತಿಸಲಾಗಿರುವ ಒಂದು ಸಮುದ್ರಪಾಚಿಯ ತಟ್ಟೆ

ಸೂಕ್ಷ್ಮ ಜೀವವಿಜ್ಞಾನ (ವ್ಯುತ್ಪತ್ತಿ: ಗ್ರೀಕ್‌μῑκρος, ಮೈಕ್ರೋಸ್‌ , "ಚಿಕ್ಕ"; βίος, ಬಯಾಸ್‌ , "ಜೀವ"; ಮತ್ತು -λογία, -ಲಾಜಿಯಾ ) ಎಂಬುದು ಸೂಕ್ಷ್ಮಜೀವಿಗಳ ಅಧ್ಯಯನವಾಗಿದ್ದು, ಈ ಸೂಕ್ಷ್ಮಜೀವಿಗಳು ಏಕಕೋಶೀಯ ಅಥವಾ ಜೀವಕೋಶ-ಗುರ್ಚಛದ ಅತಿಸೂಕ್ಷ್ಮ ಜೀವಿಗಳಾಗಿರುತ್ತವೆ.[೧] ಇದು ಶಿಲೀಂಧ್ರಗಳು ಮತ್ತು ಪ್ರೋಟಿಸ್ಟ್‌ ವರ್ಗಕ್ಕೆ ಸೇರಿದ ಜೀವಿಗಳ ರೀತಿಯ ಯೂಕ್ಯಾರಿಯಟ್‌ ಜೀವಿಗಳು ಹಾಗೂ ಪ್ರೋಕ್ಯಾರಿಯಟ್‌ ಜೀವಿಗಳನ್ನು ಒಳಗೊಂಡಿರುತ್ತದೆ. ವೈರಸ್‌‌ಗಳನ್ನು ಬದುಕಿರುವ ಜೀವಿಗಳಂತೆ ಕಟ್ಟುನಿಟ್ಟಾಗಿ ವರ್ಗೀಕರಿಸಿಲ್ಲವಾದರೂ, ಅವುಗಳ ಕುರಿತೂ ಇಲ್ಲಿ ಅಧ್ಯಯನವನ್ನು ನಡೆಸಲಾಗುತ್ತದೆ.[೨] ಚಿಕ್ಕದಾಗಿ ಹೇಳಬೇಕೆಂದರೆ; ಬರಿಗಣ್ಣಿಗೆ ಕಾಣಿಸದಷ್ಟು ತುಂಬಾ ಚಿಕ್ಕದಾಗಿರುವ ಜೀವ ಮತ್ತು ಜೀವಿಗಳ ಅಧ್ಯಯನಕ್ಕೆ ಸೂಕ್ಷ್ಮ ಜೀವವಿಜ್ಞಾನ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಜೀವವಿಜ್ಞಾನವು ವಿಶಿಷ್ಟ ರೀತಿಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ, ಅಥವಾ ರೋಗರಕ್ಷಾಶಾಸ್ತ್ರದ ಅಧ್ಯಯನವನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಪ್ರತಿರಕ್ಷಣಾ ವ್ಯವಸ್ಥೆಗಳು ರೋಗಕಾರಕ ಸೂಕ್ಷ್ಮಜೀವಿಗಳೊಂದಿಗೆ ಪರಸ್ಪರ ಕಾರ್ಯನಡೆಸುತ್ತವೆ ಅಥವಾ ಪರಸ್ಪರ ಪ್ರಭಾವ ಬೀರುತ್ತವೆ; ಈ ಎರಡೂ ವಿಭಾಗಗಳು ಅನೇಕ ವೇಳೆ ಪರಸ್ಪರ ಅಡ್ಡಹಾಯುವುದರಿಂದಲೇ ಅನೇಕ ಕಾಲೇಜುಗಳು "ಸೂಕ್ಷ್ಮ ಜೀವವಿಜ್ಞಾನ ಮತ್ತು ರೋಗರಕ್ಷಾಶಾಸ್ತ್ರ" ಎಂಬ ಒಂದು ಒಗ್ಗೂಡಿತ ಪದವಿಯನ್ನು ಶಿಕ್ಷಣಾರ್ಥಿಗಳಿಗೆ ನೀಡುತ್ತವೆ. ಸೂಕ್ಷ್ಮ ಜೀವವಿಜ್ಞಾನ ಎಂಬುದು ಒಂದು ವ್ಯಾಪಕ ವಾದ ಪದವಾಗಿದ್ದು, ಇದು ಸೂಕ್ಷ್ಮರೋಗಾಣು ಶಾಸ್ತ್ರ, ಶಿಲೀಂಧ್ರಶಾಸ್ತ್ರ, ಪರಜೀವಿಶಾಸ್ತ್ರ, ಬ್ಯಾಕ್ಟೀರಿಯ ವಿಜ್ಞಾನ ಮತ್ತು ಇತರ ಶಾಖೆಗಳನ್ನು ಒಳಗೊಂಡಿದೆ. ಸೂಕ್ಷ್ಮ ಜೀವವಿಜ್ಞಾನದಲ್ಲಿ ಪರಿಣತಿ ಹೊಂದಿದವನಿಗೆ ಅಥವಾ ವಿಶೇಷಜ್ಞನಿಗೆ ಓರ್ವ ಸೂಕ್ಷ್ಮಜೀವ ವಿಜ್ಞಾನಿ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರದಲ್ಲಿ ಅಕ್ರಿಯವಾದ ಸಂಶೋಧನೆಗಳು ನಡೆಯುತ್ತಿವೆ, ಮತ್ತು ಈ ಕ್ಷೇತ್ರವು ನಿರಂತರವಾಗಿ ಪ್ರಗತಿ ಹೊಂದುತ್ತಿದೆ. ಪ್ರಾಯಶಃ ನಾವು ಭೂಮಿಯ ಮೇಲಿರುವ ಸೂಕ್ಷ್ಮಜೀವಿ ಜಾತಿಗಳ ಪೈಕಿ ಕೇವಲ ಸುಮಾರು ಶೇಕಡಾ ಒಂದರಷ್ಟನ್ನು ಮಾತ್ರವೇ ಅಧ್ಯಯನ ಮಾಡಿರಬಹುದು ಎನಿಸುತ್ತದೆ.[೩] ಸೂಕ್ಷ್ಮಜೀವಿಗಳು ಮುನ್ನೂರು ವರ್ಷಗಳಷ್ಟು ಹಿಂದಿನಿಂದಲೂ ನೇರವಾದ ವೀಕ್ಷಣೆಗೆ ಒಳಗಾಗಿದ್ದರೂ ಸಹ, ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನದಂಥ ಹಳೆಯದಾದ, ಜೀವವಿಜ್ಞಾನದ ಶಾಖೆಗಳಿಗೆ ಹೋಲಿಸಿದರೆ ಇನ್ನೂ ತನ್ನ ಶೈಶವಾವಸ್ಥೆಯಲ್ಲಿದೆ ಎಂದೇ ಹೇಳಬಹುದು.

ಇತಿಹಾಸ[ಬದಲಾಯಿಸಿ]

ಪ್ರಾಚೀನ ಇತಿಹಾಸ[ಬದಲಾಯಿಸಿ]

 • ಸೂಕ್ಷ್ಮಜೀವಿಗಳು 17ನೇ ಶತಮಾನದಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಆವಿಷ್ಕಾರಗೊಳ್ಳುವವರೆಗೂ ಅವುಗಳ ಅಸ್ತಿತ್ವವು ಆಧಾರಕಲ್ಪನೆಯಾಗಿ ಪರಿಗ್ರಹಿಸಲ್ಪಟ್ಟಿತ್ತು. 600 BCE ಅವಧಿಯಲ್ಲಿ ಪ್ರಾಚೀನ ಭಾರತದ ಶಸ್ತ್ರಚಿಕಿತ್ಸಾ ತಜ್ಷನಾದ ಸುಶ್ರುತನು ಹಲವಾರು ಕಾಯಿಲೆಗಳಿಗೆ ಸೂಕ್ಷ್ಮಜೀವಿಗಳೇ ಕಾರಣ ಎಂಬುದನ್ನು ತಿಳಿಸಿದ ಹಾಗೂ ಸಂಪರ್ಕ, ಗಾಳಿ ಅಥವಾ ನೀರಿನ ಮೂಲಕ ಅವು ಪ್ರಸರಣಗೊಳ್ಳಬಲ್ಲವು ಎಂಬುದನ್ನು ತಾನು ಬರೆದ ಸುಶ್ರುತ ಸಂಹಿತ ಎಂಬ ಕೃತಿಯಲ್ಲಿ ತಿಳಿಸಿದ. ಸೂಕ್ಷ್ಮಜೀವಿಗಳ ಕುರಿತಾದ ಸಿದ್ಧಾಂತಗಳು ಮಾರ್ಕಸ್‌ ಟೆರೆಂಷಿಯಸ್‌ ವರೊ ಎಂಬ ರೋಮನ್‌ ವಿದ್ವಾಂಸನಿಂದ ಪ್ರತಿಪಾದಿಸಲ್ಪಟ್ಟವು. ಜೌಗು ಪ್ರದೇಶಗಳ ಸುತ್ತಮುತ್ತಲ ಭಾಗಗಳಲ್ಲಿ ಗೃಹಸಂಕೀರ್ಣವೊಂದನ್ನು ನೆಲೆಗೊಳಿಸುವುದರ ವಿರುದ್ಧ ಆತ ತನ್ನ ಆನ್‌ ಅಗ್ರಿಕಲ್ಚರ್‌ ಎಂಬ ಶೀರ್ಷಿಕೆಯ ಪುಸ್ತಕವೊಂದರಲ್ಲಿ ಎಚ್ಚರಿಸಿದ್ದಾನೆ:

...ಮತ್ತು ಬರಿಯ ಕಣ್ಣುಗಳಿಗೆ ಕಾಣಿಸದ ನಿರ್ದಿಷ್ಟ ಸೂಕ್ಷ್ಮಜೀವಿಗಳು ಅಲ್ಲಿ ಹುಟ್ಟಿಕೊಳ್ಳುತ್ತವೆಯಾದ್ದರಿಂದ, ಅವು ಗಾಳಿಯಲ್ಲಿ ತೇಲಿಕೊಂಡು ಬಾಯಿ ಹಾಗೂ ಮೂಗಿನ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುತ್ತವೆ ಮತ್ತು ಗಂಭೀರಸ್ವರೂಪದ ಕಾಯಿಲೆಗಳನ್ನು ಉಂಟುಮಾಡುತ್ತವೆ.[೪]

 • ಇನ್ನೂ ಕಣ್ಣಿಗೆ ಕಾಣಿಸದ ಜೀವಿಗಳಿಂದ ಕಾಯಿಲೆಗಳು ಹರಡುವ ಸಾಧ್ಯತೆ ಇದೆ ಎಂಬುದನ್ನು ನಮ್ಮ ಪೂರ್ವಜರು ಅರಿತುಕೊಂಡಿದ್ದರು ಎಂಬುದನ್ನು ಆ ಪುಸ್ತಕದ ಈ ಉದ್ಧೃತಭಾಗವು ಸೂಚಿಸುತ್ತದೆ ಎನಿಸುತ್ತದೆ. ದಿ ಕೆನನ್ ಆಫ್ ಮೆಡಿಸಿನ್‌ (1020) ಎಂಬ ಕೃತಿಯಲ್ಲಿ, ಅಬು ಆಲಿ ಇಬ್ನ್‌ ಸಿನಾ (ಆವಿಸೆನ್ನಾ) ಎಂಬಾತ ತಿಳಿಸಿರುವ ಪ್ರಕಾರ, ಶಾರೀರಿಕ ಸ್ರವಿಕೆಯು ಸೋಂಕಿಗೆ ಒಳಗಾಗುವ ಮುನ್ನ ಭೂಮಿಗೆ ಸೇರಿದ ಮಲಿನವಾದ ಬಾಹ್ಯ ಕಾಯಗಳಿಂದ ಮಾಲಿನ್ಯಗೊಳ್ಳುತ್ತದೆ.[೫] ಕ್ಷಯರೋಗ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳ ಸಾಂಕ್ರಾಮಿಕ ಸ್ವರೂಪದ ಕುರಿತೂ ಆತನು ಆಧಾರಕಲ್ಪನೆಯಾಗಿ ಪರಿಗ್ರಹಿಸಿದ್ದು, ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯನ್ನು ಸೀಮಿತಗೊಳಿಸುವ ಒಂದು ಮಾರ್ಗವಾಗಿ ಸಂಪರ್ಕತಡೆ ಅಥವಾ ಪ್ರತಿಬಂಧಕವನ್ನು ಆತ ಬಳಸಿದ್ದಾನೆ.[೬]
 • ಗೆಡ್ಡೆ ಪ್ಲೇಗು ಎಂದು ಕರೆಯಲಾಗುವ ಪ್ಲೇಗುಮಾರಿಯು 14ನೇ ಶತಮಾನದಲ್ಲಿ ಅಲ್‌-ಅಂದಾಲಸ್‌ನ್ನು ತಲುಪಿದಾಗ, ಸಾಂಕ್ರಾಮಿಕ ಕಾಯಿಲೆಗಳು "ಸೂಕ್ಷ್ಮ ಕಾಯಗಳಿಂದ" ಉಂಟಾಗುತ್ತವೆ ಹಾಗೂ ಇವು ಮಾನವ ಶರೀರದೊಳಗೆ ಪ್ರವೇಶಿಸಿ, ಕಾಯಿಲೆ ಯನ್ನುಂಟುಮಾಡುತ್ತವೆ ಎಂಬುದನ್ನು ಇಬ್ನ್‌ ಖಾತಿಮಾ ಆಧಾರಕಲ್ಪನೆಯಾಗಿ ಪರಿಗ್ರಹಿಸಿದ.[೫] 1546ರಲ್ಲಿ ಗಿರೋಲಾಮೋ ಫ್ರಕಾಸ್ಟೊರೊ ಎಂಬಾತ ತನ್ನ ಪ್ರಸ್ತಾವನೆಯನ್ನು ಮಂಡಿಸುತ್ತಾ, ಸಾಂಕ್ರಾಮಿಕ ಕಾಯಿಲೆಗಳು ವರ್ಗವಣೆಗೊಳ್ಳಬಲ್ಲ ಬೀಜದಂಥ ವಸ್ತುಗಳಿಂದ ಉಂಟಾದವು. ಈ ಕಾಯಗಳು ಪ್ರತ್ಯಕ್ಷವಾದ ಇಲ್ಲವೇ ಪರೋಕ್ಷವಾದ ಸಂಪರ್ಕದ ಮೂಲಕ ಅಥವಾ ಕೆಲವೊಮ್ಮೆ ಸಂಪರ್ಕವಿಲ್ಲದೆಯೂ ದೀರ್ಘ ಅಂತರಗಳವರೆಗೆ ಸೋಂಕನ್ನು ಪ್ರಸರಣ ಮಾಡಬಲ್ಲವಾಗಿದ್ದವು ಎಂದು ತಿಳಿಸಿದ.
 • ಸೂಕ್ಷ್ಮಜೀವಿಗಳ ಕುರಿತಾದ ಈ ಎಲ್ಲಾ ಆರಂಭಿಕ ಸಮರ್ಥನೆಗಳೂ ಊಹಾತ್ಮಕ ಸ್ವರೂಪವನ್ನು ಹೊಂದಿದ್ದವು ಹಾಗೂ ಇವಕ್ಕೆ ಯಾವುದೇ ದತ್ತಾಂಶವಾಗಲೀ, ವಿಜ್ಞಾನವಾಗಲೀ ಆಧಾರವಾಗಿರಲಿಲ್ಲ. 17ನೇ ಶತಮಾನದವರೆಗೂ ಸೂಕ್ಷ್ಮಜೀವಿಗಳು ಸಾಬೀತು ಮಾಡಲ್ಪಟ್ಟಿರಲಿಲ್ಲ ಮತ್ತು ವೀಕ್ಷಿಸಲ್ಪಟ್ಟಿರಲಿಲ್ಲ, ಅಥವಾ ನಿಖರವಾಗಿ ಮತ್ತು ಸೂಕ್ತವಾಗಿ ವಿವರಿಸಲ್ಪಟ್ಟಿರಲಿಲ್ಲ. ಸೂಕ್ಷ್ಮ ಜೀವವಿಜ್ಞಾನ ಮತ್ತು ಬ್ಯಾಕ್ಟೀರಿಯ ವಿಜ್ಞಾನವು ಒಂದು ವಿಜ್ಞಾನದ ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವುದಕ್ಕಾಗಿ ಕ್ರಮಬದ್ಧವಾಗಿರುವ ಒಂದು ಅತ್ಯಂತ ಮೂಲಭೂತ ಉಪಕರಣವನ್ನು ಈ ಎಲ್ಲಾ ಆರಂಭಿಕ ಶೋಧನೆಗಳು ಒಳಗೊಳ್ಳದೇ ಇದ್ದುದೇ ಇದರ ಹಿಂದಿನ ಕಾರಣವಾಗಿತ್ತು. ಆ ಸಾಧನ ಮತ್ತಾವುದೂ ಆಗಿರದೆ, ಸೂಕ್ಷ್ಮದರ್ಶಕವಾಗಿತ್ತು.
ಆಂಟೊನಿ ವಾನ್‌ ಲೀವೆನ್‌ಹೂಕ್‌, ಮೊಟ್ಟಮೊದಲ ಸೂಕ್ಷ್ಮಜೀವವಿಜ್ಞಾನಿ ಸೂಕ್ಷ್ಮದರ್ಶಕವೊಂದನ್ನು ಬಳಸಿಕೊಂಡು ಸೂಕ್ಷ್ಮಜೀವಿಗಳನ್ನು ವೀಕ್ಷಿಸಿದವರಲ್ಲಿ ಮೊದಲಿಗ. 'ಸೂಕ್ಷ್ಮ ಜೀವವಿಜ್ಞಾನದ ಜನಕ' ಎಂದು ಹೆಸರಾಗಿದ್ದಾನೆ. ಆತ ಸೂಕ್ಷ್ಮದರ್ಶಕವನ್ನು ಕಂಡುಹಿಡಿಯಲಿಲ್ಲ, ಬದಲಿಗೆ ಅತ್ಯುತ್ತಮವಾಗಿ ಅದನ್ನು ಅಭಿವೃದ್ಧಿಪಡಿಸಿದ.

ಆಧುನಿಕತೆ ಇತಿಹಾಸ[ಬದಲಾಯಿಸಿ]

 • ಬ್ಯಾಕ್ಟೀರಿಯಾ, ಮತ್ತು ಇತರ ಸೂಕ್ಷ್ಮಜೀವಿಗಳು, ಮೊಟ್ಟಮೊದಲು ಆಂಟೊನಿ ವಾನ್‌ ಲೀವೆನ್‌ಹೂಕ್‌‌ನಿಂದ 1676ರಲ್ಲಿ ವೀಕ್ಷಿಸಲ್ಪಟ್ಟವು. ಇದಕ್ಕಾಗಿ ಆತ ತನ್ನದೇ ಸ್ವಂತ ವಿನ್ಯಾಸದ ಒಂದು ಏಕ-ಮಸೂರದ ಸೂಕ್ಷ್ಮದರ್ಶಕವನ್ನು ಬಳಸಿದ್ದ. ಹೀಗೆ ಮಾಡುವಲ್ಲಿ ಲೀವೆನ್‌ಹೂಕ್‌ ಎಂಬಾತ ಜೀವವಿಜ್ಞಾನದಲ್ಲಿನ ಅತ್ಯಂತ ಪ್ರಮುಖ ಆವಿಷ್ಕಾರಗಳಲ್ಲಿ ಒಂದನ್ನು ಕೈಗೊಂಡ, ಮತ್ತು ಬ್ಯಾಕ್ಟೀರಿಯ ವಿಜ್ಞಾನ ಹಾಗೂ ಸೂಕ್ಷ್ಮ ಜೀವವಿಜ್ಞಾನದ ವೈಜ್ಞಾನಿಕ ಕ್ಷೇತ್ರಗಳನ್ನು ಆತ ಆರಂಭಿಸಿದ.[೧] ಬಹಳ ಕಾಲದ ನಂತರ ಅಂದರೆ, 1828ರಲ್ಲಿ ಎಹ್ರೆನ್‌ ಬರ್ಗ್‌ ಎಂಬಾತನಿಂದ "ಬ್ಯಾಕ್ಟೀರಿಯಂ" ಎಂಬ ಹೆಸರು ಪರಿಚಯಿಸಲ್ಪಟ್ಟಿತು. "ಚಿಕ್ಕ ಕಡ್ಡಿ" ಎಂಬ ಅರ್ಥವನ್ನು ನೀಡುವ ಗ್ರೀಕ್‌ ಭಾಷೆಯ βακτηριον ಎಂಬ ಪದದಿಂದ ಈ ಪದವು ಜನ್ಯವಾಗಿತ್ತು.
 • ವಾನ್‌ ಲೀವೆನ್‌ಹೂಕ್‌ನನ್ನು ಮೊಟ್ಟಮೊದಲ ಸೂಕ್ಷ್ಮಜೀವವಿಜ್ಞಾನಿ ಎಂದು ಉಲ್ಲೇಖಿಸಲಾಗುತ್ತದೆಯಾದರೂ, ಬೂಷ್ಟುಗಳ ಬೀಜಾಣುಬಿಡುವ ಕಾಯಗಳ ಮೊಟ್ಟಮೊದಲ ದಾಖಲಿತ ಸೂಕ್ಷ್ಮಜೀವವಿಜ್ಞಾನದ ವೀಕ್ಷಣೆಯು ಅವನಿಗೂ ಮುಂಚಿತವಾಗಿ 1665ರಲ್ಲಿ ರಾಬರ್ಟ್‌ ಹುಕ್‌ ಎಂಬಾತನಿಂದ ಮಾಡಲ್ಪಟ್ಟಿತು.[೭]
 • ಬ್ಯಾಕ್ಟೀರಿಯ ವಿಜ್ಞಾನ' ದ ಕ್ಷೇತ್ರವು (ನಂತರ ಇದು ಸೂಕ್ಷ್ಮ ಜೀವವಿಜ್ಞಾನದ ಒಂದು ಉಪವಿಭಾಗವಾಗಿ ಪರಿಗಣಿಸಲ್ಪಟ್ಟಿತು) 19ನೇ ಶತಮಾನದಲ್ಲಿ ಫರ್ಡಿನಂಡ್‌ ಕೋನ್‌ ಎಂಬ ಓರ್ವ ಸಸ್ಯವಿಜ್ಞಾನಿಯಿಂದ ಸ್ಥಾಪಿಸಲ್ಪಟ್ಟಿತು ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಪಾಚಿಗಳು ಹಾಗೂ ದ್ಯುತಿಸಂಶ್ಲೇಷಕ ಬ್ಯಾಕ್ಟೀರಿಯಾಗಳ ಮೇಲಿನ ಈತನ ಅಧ್ಯಯನಗಳು, ಬೇಸಿಲಸ್‌ ಮತ್ತು ಬೆಗ್ಗಿಯಾಟೋವಾ ಸೇರಿದಂತೆ ಹಲವಾರು ಬ್ಯಾಕ್ಟೀರಿಯಾವನ್ನು ವಿವರಿಸುವಲ್ಲಿ ಆತನಿಗೆ ನೆರವಾದವು. ಬ್ಯಾಕ್ಟೀರಿಯಾದ ಜೀವಿವರ್ಗೀಕರಣದ ವಿಂಗಡಣೆಗೆ ಸಂಬಂಧಿಸಿದ ಒಂದು ಯೋಜನೆಯನ್ನು ರೂಪಿಸುವಲ್ಲಿ ಕೋನ್‌ ಕೂಡಾ ಮೊದಲಿಗನಾಗಿದ್ದ.[೮] ಲೂಯಿಸ್‌ ಪಾಶ್ಚರ್‌ ಮತ್ತು ರಾಬರ್ಟ್‌ ಕೋಚ್‌ ಈ ಇಬ್ಬರೂ ಸಹ ಕೋನ್‌ನ ಸಮಕಾಲೀನರಾಗಿದ್ದರು ಮತ್ತು ಇವರನ್ನು ವೈದ್ಯಕೀಯ ಸೂಕ್ಷ್ಮ ಜೀವವಿಜ್ಞಾನ ದ ಸಂಸ್ಥಾಪಕರೆಂದು ಪರಿಗಣಿಸಲಾಗಿದೆ.[೯]
 • ಅಂದು ವ್ಯಾಪಕವಾಗಿ ಪ್ರಚಾರದಲ್ಲಿದ್ದ ಸ್ವಯಂ ಜನನದ ಸಿದ್ಧಾಂತವನ್ನು ತಪ್ಪೆಂದು ಸಾಧಿಸಲು, ತನ್ಮೂಲಕ ಸೂಕ್ಷ್ಮ ಜೀವವಿಜ್ಞಾನದ ಗುರುತನ್ನು ಒಂದು ಜೈವಿಕ ವಿಜ್ಞಾನವಾಗಿ ಘನೀಕರಿಸಲು ವಿನ್ಯಾಸಗೊಳಿಸಲಾಗಿದ್ದ ತನ್ನ ಪ್ರಯೋಗಗಳ ಸರಣಿಗೆ ಪಾಶ್ಚರ್‌ ಅತ್ಯಂತ ಪ್ರಸಿದ್ಧ ನಾಗಿದ್ದಾನೆ.[೧೦] ಆಹಾರ ಸಂಸ್ಕರಣೆಗೆ (ಪಾಶ್ಚರೀಕರಣ) ಸಂಬಂದಪಟ್ಟಿರುವ ಅನೇಕ ವಿಧಾನಗಳನ್ನೂ ಸಹ ಪಾಶ್ಚರ್‌ ವಿನ್ಯಾಸಗೊಳಿಸಿದ್ದಾನೆ ಮತ್ತು ಆಂಥ್ರಾಕ್ಸ್‌, ಹಕ್ಕಿ ಕಾಲರ ಮತ್ತು ರೇಬೀಸ್ಸ್‌‌ನಂಥ ಅನೇಕ ಕಾಯಿಲೆಗಳಿಗೆ ಪ್ರತಿಯಾಗಿ ಲಸಿಕೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿಯೂ ಆತನಿಗೆ ಸಲ್ಲುತ್ತದೆ.[೧] ಕಾಯಿಲೆಯ ರೋಗಾಣು ಸಿದ್ಧಾಂತಕ್ಕೆ ನೀಡಿದ ತನ್ನ ಕೊಡುಗೆಗಳಿಂದಾಗಿ ಕೋಚ್‌ ತುಂಬಾ ಪ್ರಸಿದ್ಧನಾಗಿದ್ದಾನೆ.
 • ವಿಲಕ್ಷಣವಾದ ಕಾಯಿಲೆಗಳು ವಿಲಕ್ಷಣವಾದ ರೋಗಕಾರಕ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತಿದ್ದವು ಎಂಬುದು ಈತನ ಸಮರ್ಥನೆಯಾಗಿತ್ತು. ಕೋಚ್‌ನ ಆಧಾರ ನಿಯಮಗಳು ಎಂದು ಹೆಸರಾಗಿರುವ ಮಾನದಂಡದ ಒಂದು ಸರಣಿಯನ್ನೇ ಆತ ಅಭಿವೃದ್ಧಿಪಡಿಸಿದ. ಅಪ್ಪಟ ಸಂಗೋಪನ ಕೃಷಿಯಲ್ಲಿ ಬ್ಯಾಕ್ಟೀರಿಯಾದ ಬೇರ್ಪಡಿಸುವಿಕೆಯ ಕುರಿತಾಗಿ ಗಮನಹರಿಸಿದ ಮೊದಲ ವಿಜ್ಞಾನಿಗಳ ಪೈಕಿ ಕೋಚ್‌ ಕೂಡಾ ಒಬ್ಬ. ಇದರ ಪರಿಣಾಮವಾಗಿ, ಕ್ಷಯರೋಗದ ಕಾರಣಕರ್ತ ಮಧ್ಯವರ್ತಿಯಾದ ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್‌ ಸೇರಿದಂತೆ ಹಲವಾರು ಅಪೂರ್ವವಾದ ಬ್ಯಾಕ್ಟೀರಿಯಾ ಕುರಿತಾಗಿ ತಾನು ವಿವರಣೆಯನ್ನು ನೀಡಲು ಆತನಿಗೆ ಸಾಧ್ಯವಾಯಿತು.[೧]
 • ಪಾಶ್ಚರ್‌ ಮತ್ತು ಕೋಚ್‌ ಈ ಇಬ್ಬರನ್ನೂ ಸೂಕ್ಷ್ಮ ಜೀವವಿಜ್ಞಾನದ ಸಂಸ್ಥಾಪಕರೆಂದು ಪರಿಗಣಿಸಲಾಗಿದ್ದರೂ, ಅವರ ಕೆಲಸವು ಸೂಕ್ಷ್ಮಜೀವಿಯ ಪ್ರಪಂಚದ ನಿಜವಾದ ವೈವಿಧ್ಯತೆಯನ್ನು ಕರಾರುವಾಕ್ಕಾಗಿ ಪ್ರತಿಬಿಂಬಿಸಲಿಲ್ಲ. ನೇರವಾದ ವೈದ್ಯಕೀಯ ಪ್ರಸ್ತುತತೆಯನ್ನು ಹೊಂದಿರುವ ಸೂಕ್ಷ್ಮ ಜೀವಿಗಳ ಕುರಿತಾಗಿಯೇ ಅವರು ತಮ್ಮ ವಿಶೇಷ ಗಮನವನ್ನು ಹರಿಸಿದ್ದು ಇದಕ್ಕೆ ಕಾರಣವಾಗಿತ್ತು. 19ನೇ ಶತಮಾನದ ಅಂತ್ಯದ ತನಕ ಮತ್ತು ಸಾರ್ವತ್ರಿಕ ಸೂಕ್ಷ್ಮ ಜೀವವಿಜ್ಞಾನ ದ (ಸೂಕ್ಷ್ಮಜೀವಿಯ ಶರೀರ ವಿಜ್ಞಾನ, ವೈವಿಧ್ಯತೆ ಮತ್ತು ಪರಿಸರ ವಿಜ್ಞಾನದ ಮಗ್ಗಲುಗಳನ್ನು ಒಳಗೊಂಡಿರುವ ಒಂದು ಹಳೆಯ ಪದ) ಸಂಸ್ಥಾಪಕರಾದ ಮಾರ್ಟಿನಸ್‌ ಬೀಜೆರಿಂಕ್‌ ಮತ್ತು ಸೆರ್ಗೀ ವಿನೊಗ್ರಾಡ್ಸ್‌ಕಿ ಇವರ ಕೆಲಸವು ಹೊರಹೊಮ್ಮುವವರೆಗೆ ಸೂಕ್ಷ್ಮ ಜೀವವಿಜ್ಞಾನದ ನಿಜವಾದ ವ್ಯಾಪ್ತಿಯು ಬಹಿರಂಗಗೊಂಡಿರಲಿಲ್ಲ.[೧] ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರಕ್ಕೆ ಬೀಜೆರಿಂಕ್ ಎರಡು ಪ್ರಮುಖ ಕೊಡುಗೆಗಳನ್ನು ನೀಡಿದ.
 • ಅವುಗಳೆಂದರೆ: ವೈರಸ್‌‌ಗಳ ಆವಿಷ್ಕಾರ ಮತ್ತು ಸಂವರ್ಧನ ಸಂಗೋಪನ ಕೃಷಿ ಕೌಶಲಗಳ ಅಭಿವೃದ್ಧಿ.[೧೧] ಟೊಬ್ಯಾಕೊ ಮೊಸಾಯಿಕ್‌ ವೈರಸ್‌ ಕುರಿತಾದ ಆತನ ಕೆಲಸವು ಸೂಕ್ಷ್ಮರೋಗಾಣು ಶಾಸ್ತ್ರದ ಮೂಲಭೂತ ತತ್ತ್ವಗಳನ್ನು ಸ್ಥಾಪಿಸಿದ ಸಂದರ್ಭದಲ್ಲೇ, ಆತ ಕೈಗೊಂದ ಸಂವರ್ಧನ ಸಂಗೋಪನ ಕೃಷಿಗಾರಿಕೆಯ ಅಭಿವೃದ್ಧಿ ಕೆಲಸವು ಸೂಕ್ಷ್ಮ ಜೀವವಿಜ್ಞಾನದ ಮೇಲೆ ಅತ್ಯಂತ ಕ್ಷಿಪ್ರಕಾಲದಲ್ಲಿ ಪ್ರಭಾವ ಬೀರಿತು.
 • ವ್ಯಾಪಕವಾಗಿ ವೈವಿಧ್ಯಮಯವಾಗಿದ್ದ ದೈಹಿಕ ಕ್ರಿಯೆಗಳೊಂದಿಗಿನ ಸೂಕ್ಷ್ಮಜೀವಿಗಳ ಒಂದು ವ್ಯಾಪಕ ಶ್ರೇಣಿಯ ಸಂಗೋಪನೆಗೆ ಇದು ಅನುವುಮಾಡಿಕೊಟ್ಟಿತು. ಕೀಮೋಲಿಥೋಟ್ರೋಫಿ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ತನ್ಮೂಲಕ ಭೂರಾಸಾಯನಿಕ ಪ್ರಕ್ರಿಯೆಗಳಲ್ಲಿ ಸೂಕ್ಷ್ಮಜೀವಿಗಳು ವಹಿಸುವ ಮೂಲಭೂತ ಪಾತ್ರವನ್ನು ಬಹಿರಂಗಪಡಿಸುವಲ್ಲಿ ವಿನೊಗ್ರಾಡ್ಸ್‌ಕಿ ಎಂಬಾತ ಮೊಟ್ಟಮೊದಲಿಗನಾಗಿದ್ದ.[೧೨] ನೈಟ್ರೇಟೀಕರಿಸುವ ಮತ್ತು ನೈಟ್ರೋಜನ್‌-ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳೆರಡರ ಮೊಟ್ಟಮೊದಲ ಪ್ರತ್ಯೇಕಿಸುವಿಕೆ ಹಾಗೂ ವಿವರಣೆಗೆ ಆತ ಕಾರಣಕರ್ತನಾಗಿದ್ದ.[೧]

ಕ್ಷೇತ್ರಗಳು[ಬದಲಾಯಿಸಿ]

ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರವು ಸಾಮಾನ್ಯವಾಗಿ ಹಲವಾರು ಉಪವಿಭಾಗಗಳಾಗಿ ವಿಭಾಗಿಸಲ್ಪಡುತ್ತದೆ:

(ರೋಗನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ಕೇಂದ್ರದಲ್ಲಿನ ಉದ್ಯೋಗಗಳು, ಅದರಲ್ಲಿನ ಬಹುಪಾಲು ಸ್ಥಾನಗಳಿಗೆ ಸೂಕ್ಷ್ಮ ಜೀವವಿಜ್ಞಾನದಲ್ಲಿನ ಒಂದು ಪದವಿಯನ್ನು ಬಯಸುತ್ತವೆ)

ಪ್ರಯೋಜನಗಳು[ಬದಲಾಯಿಸಿ]

ಬಿಯರ್‌ನ್ನು ಹುದುಗಿಸಲು ಬಳಸಲಾಗುತ್ತಿರುವ ಯೀಸ್ಟ್‌ನ್ನು ಹೊಂದಿರುವ ಹುದುಗಿಸುವಿಕೆಯ ತೊಟ್ಟಿಗಳು
 • ಮಾನವನ ಹಲವಾರು ಅಸ್ವಸ್ಥತೆಗಳೊಂದಿಗೆ ಕೆಲವೊಂದು ಸೂಕ್ಷ್ಮಜೀವಿಗಳು ಗುರುತಿಸಿಕೊಂಡಿರುವುದರಿಂದಾಗಿ ಎಲ್ಲಾ ಸೂಕ್ಷ್ಮಜೀವಿಗಳ ಕುರಿತೂ ಕೆಲವೊಬ್ಬರಿಗೆ ಭಯವಿದೆ ಎಂಬುದು ನಿಸ್ಸಂದೇಹವಾದ ವಿಚಾರ. ಆದರೆ ಅನೇಕ ಸೂಕ್ಷ್ಮಜೀವಿಗಳು ಹಲವಾರು ಪ್ರಯೋಜನಕಾರಿ ಪ್ರಕ್ರಿಯೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ ಎಂಬುದೂ ಮಹತ್ವದ ವಿಚಾರವೇ.ಕೈಗಾರಿಕಾ ಹುದುಗುವಿಕೆ (ಉದಾಹರಣೆಗೆ,ಮದ್ಯಸಾರ, ವಿನೆಗರ್‌ ಮತ್ತು ಹೈನು ಉತ್ಪನ್ನಗಳ ಉತ್ಪಾದನಾ ಕಾರ್ಯ), ಪ್ರತಿಜೀವಕದ ಉತ್ಪಾದನೆ ಮತ್ತು ಸಸ್ಯಗಳಂಥ ಉನ್ನತ ಜೀವಿಗಳ ಲ್ಲಿನ ಅಬೀಜ ಸಂತಾನೋತ್ಪತ್ತಿಯಲ್ಲಿ ವಾಹಕಗಳಾಗಿ ಇವುಗಳ ಬಳಕೆ ಇವೇ ಮೊದಲಾದವುಗಳು ಸೂಕ್ಷ್ಮಜೀವಿಗಳ ಪ್ರಯೋಜಕತೆಗೆ ಒಂದಷ್ಟು ಉದಾಹರಣೆಗಳಾಗಿವೆ.
 • ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿರುವ ಟ್ಯಾಕ್‌ ಪಾಲಿಮರೇಸ್‌ನಂಥ ಕಿಣ್ವಗಳನ್ನು ತಯಾರಿಸಲು, ಇತರ ತಳಿವಿಜ್ಞಾನದ ಪದ್ಧತಿಗಳಲ್ಲಿನ ಬಳಕೆಗಾಗಿರುವ ಮಾಹಿತಿ ವಾಹಕ ಜೀನ್‌ಗಳನ್ನು ತಯಾರಿಸಲು ಮತ್ತು ಯೀಸ್ಟ್‌ ಎರಡು-ಮಿಶ್ರತಳಿ ಪದ್ಧತಿಯಂಥ ಅಪೂರ್ವವಾದ ಅಣು ಜೀವವಿಜ್ಞಾನ ಕೌಶಲಗಳನ್ನು ತಯಾರಿಸಲು ವಿಜ್ಞಾನಿಗಳು ಸೂಕ್ಷ್ಮಜೀವಿಗಳ ಕುರಿತಾದ ತಮ್ಮ ಜ್ಞಾನವನ್ನು ಬಳಸಿಕೊಂಡಿದ್ದಾರೆ. ಅಮೈನೋ ಆಮ್ಲಗಳ ಕೈಗಾರಿಕಾ ಉತ್ಪಾದನೆಗಾಗಿ ಬ್ಯಾಕ್ಟೀರಿಯಾವನ್ನು ಬಳಸಿಕೊಳ್ಳಬಹುದು.
 • ಕೋರೈನೆಬ್ಯಾಕ್ಟೀರಿಯಂ ಗ್ಲುಟಮಿಕಮ್‌ ಎಂಬುದು ಇಂಥ ಅತ್ಯಂತ ಪ್ರಮುಖ ಬ್ಯಾಕ್ಟೀರಿಯಾದ ಜಾತಿಗಳಲ್ಲಿ ಒಂದಾಗಿದ್ದು, ಇದರಿಂದ ಎರಡು ದಶಲಕ್ಷ ಟನ್ನುಗಳಿಗೂ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳನ್ನು, ಅದರಲ್ಲೂ ಮುಖ್ಯವಾಗಿ L-ಗ್ಲುಟಮೇಟ್‌ ಹಾಗೂ L-ಲೈಸೀನ್‌ ಪ್ರಭೇದಗಳನ್ನು ವಾರ್ಷಿಕವಾಗಿ ಉತ್ಪಾದಿಸಬಹುದಾಗಿದೆ. [೧೩]
 • ಬಹುಶರ್ಕರಗಳು, ಪಾಲಿಯೆಸ್ಟರ್‌ಗಳು, ಮತ್ತು ಪಾಲಿಅಮೈಡ್‌ಗಳಂಥ ವೈವಿಧ್ಯಮಯ ಜೈವಿಕ ಪಾಲಿಮರ್‌ಗಳು ಸೂಕ್ಷ್ಮಜೀವಿಗಳಿಂದ ತಯಾರಿಸಲ್ಪಡುತ್ತವೆ. ಜೈವಿಕ ಪಾಲಿಮರ್‌ಗಳನ್ನು ಜೈವಿಕ ತಂತ್ರಜ್ಞಾನದ ಸ್ವರೂಪದಲ್ಲಿ ತಯಾರಿಸುವುದಕ್ಕಾಗಿ ಸೂಕ್ಷ್ಮಜೀವಿಗಳನ್ನು ಬಳಸಲಾಗುತ್ತದೆ. ಅಂಗಾಂಶ ಎಂಜಿನಿಯರಿಂಗ್ ಹಾಗೂ ಔಷಧ ವಿತರಣೆಯಂಥ ಉನ್ನತ-ಮೌಲ್ಯದ ವೈದ್ಯಕೀಯ ಅನ್ವಯಿಕಗಳಿಗೆ ಸೂಕ್ತವಾಗಿರುವ ರೀತಿಯಲ್ಲಿ ಇವುಗಳ ಗುಣಲಕ್ಷಣಗಳನ್ನು ರೂಪಿಸಲಾಗಿರುತ್ತದೆ. ಈ ಕೆಳಗೆ ನಮೂದಿಸಲಾಗಿರುವುವುಗಳ ಜೈವಿಕ-ಸಂಶ್ಲೇಷಣೆಯಲ್ಲಿ ಸೂಕ್ಷ್ಮ ಜೀವಿಗಳನ್ನು ಬಳಸಲಾಗುತ್ತದೆ:
 • ಕ್ಸಾಂಥಾನ್‌, ಆಲ್ಜಿನೇಟ್‌, ಸೆಲ್ಯುಲೋಸು, ಸಯನೋಫೈಸಿನ್‌, ಪಾಲಿ(ಗ್ಯಾಮಾ-ಗ್ಲುಟಮಿಕ್‌ ಆಮ್ಲ), ಲೆವಾನ್‌, ಹೈಯಲುರೋನಿಕ್‌ ಆಮ್ಲ, ಸಾವಯವ ಆಮ್ಲಗಳು, ಆಲಿಗೋಸ್ಯಾಕರೈಡುಗಳು ಮತ್ತು ಬಹುಶರ್ಕರ, ಹಾಗೂ ಪಾಲಿಹೈಡ್ರಾಕ್ಸಿಆಲ್ಕನೋಯೇಟ್‌ಗಳು.[೧೪]
 • ಗೃಹಬಳಕೆಯ, ವ್ಯಾವಸಾಯಿಕ ಮತ್ತು ಕೈಗಾರಿಕಾ ತ್ಯಾಜ್ಯಗಳ ಸೂಕ್ಷ್ಮಜೀವಿಯ ಜೈವಿಕ ವಿಘಟನೆ ಅಥವಾ ಜೈವಿಕ ಪುನರ್‌ ಮಧ್ಯಸ್ತಿಕೆಗೆ ಸಂಬಂಧಿಸಿದಂತೆ ಹಾಗೂ ಮಣ್ಣುಗಳು, ಸಂಚಯಗಳು ಹಾಗೂ ಸಾಗರ ಪರಿಸರಗಳಲ್ಲಿನ ಕೆಳಮೇಲ್ಮೈನ ಮಾಲಿನ್ಯಗಳಿಗೆ ಸಂಬಂಧಿಸಿ ಸೂಕ್ಷ್ಮಜೀವಿಗಳು ಪ್ರಯೋಜನಕಾರಿಯಾಗಿ ಪರಿಣಮಿಸುತ್ತವೆ. ವಿಷಕಾರಿ ತ್ಯಾಜ್ಯವನ್ನು ವಿಘಟಿಸುವಲ್ಲಿನ ಪ್ರತಿ ಸೂಕ್ಷ್ಮಜೀವಿಯ ಸಾಮರ್ಥ್ಯವು ಪ್ರತಿ ಮಾಲಿನ್ಯಕಾರಕದ ಸ್ವರೂಪವನ್ನು ಅವಲಂಬಿಸಿರುತ್ತದೆ. ಪ್ರದೇಶಗಳು ವಿಶಿಷ್ಟ ರೀತಿಯಲ್ಲಿ ಬಹು ಮಾಲಿನ್ಯಕಾರಕ ಬಗೆಗಳನ್ನು ಹೊಂದಿರುತ್ತವೆಯಾದ್ದರಿಂದ, ಮಾಲಿನ್ಯಕಾರಕಗಳ ಒಂದು ಅಥವಾ ಹೆಚ್ಚು ಬಗೆಗಳ ಜೈವಿಕ ವಿಘಟನೆಯ ಕಡೆಗೆ ಒಂದೊಂದೂ ಗುರಿಯಿಟ್ಟಿರುವ ಬ್ಯಾಕ್ಟೀರಿಯಾದ ಜಾತಿಗಳು ಹಾಗೂ ತಳಿಗಳ ಒಂದು ಮಿಶ್ರಣವನ್ನು ಬಳಸುವುದು ಸೂಕ್ಷ್ಮಜೀವಿಯ ಜೈವಿಕ ವಿಘಟನೆಗೆ ಒಂದು ಪರಿಣಾಮಕಾರಿ ಮಾರ್ಗವಾಗಿದೆ.[೧೫]
 • ಪ್ರೋಬಯಾಟಿಕ್‌ಗಳು (ಜೀರ್ಣಾಂಗವ್ಯೂಹಕ್ಕೆ ಸಮರ್ಥವಾದ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಬ್ಯಾಕ್ಟೀರಿಯಾ) ಮತ್ತು/ಅಥವಾ ಪ್ರೀಬಯಾಟಿಕ್‌ಗಳನ್ನು (ಪ್ರೋಬಯಾಟಿಕ್‌ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರವರ್ತಿಸಲು ಸೇವಿಸಲಾಗುವ ವಸ್ತುಗಳು) ಸೇವಿಸುವುದರ ಮೂಲಕ ಮಾನವರ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ದೊರೆಯುವ ಕೊಡುಗೆಗಳು ಅಥವಾ ಪ್ರಯೋಜನಗಳ ಕುರಿತಾಗಿ ಹಲವಾರು ಸಮರ್ಥನೆಗಳು ಮಂಡಿಸಲ್ಪಟ್ಟಿವೆ.[೧೬]
 • ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ಸೂಕ್ಷ್ಮಜೀವಿಗಳು ಪ್ರಯೋಜನಕಾರಿಯಾಗಬಹುದು ಎಂದು ಇತ್ತೀಚಿನ ಸಂಶೋಧನೆಯು ಸೂಚಿಸಿದೆ. ರೋಗಕಾರಕವಲ್ಲದ ಕ್ಲಾಸ್ಟ್ರೀಡಿಯಾದ ಹಲವಾರು ತಳಿಗಳು ಘನವಾಗಿರುವ ಗಡ್ಡೆಗಳೊಳಗೆ ತೂರಿಕೊಳ್ಳಬಲ್ಲವು ಹಾಗೂ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬಲ್ಲವು. ಕ್ಲಾಸ್ಟ್ರೀಡಿಯಾದ ವಾಹಕಗಳನ್ನು ಕ್ಷೇಮಕರವಾಗಿ ಸೇವಿಸಬಹುದು ಮತ್ತು ಚಿಕಿತ್ಸಕ ಪ್ರೋಟೀನುಗಳನ್ನು ವಿತರಿಸಬಲ್ಲ ಅವುಗಳ ಸಾಮರ್ಥ್ಯವು ರೋಗನಿದಾನ ಪೂರ್ವದ ವೈವಿಧ್ಯಮಯ ಮಾದರಿಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.[೧೭]


ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ ೧.೫ Madigan M, Martinko J (editors) (2006). Brock Biology of Microorganisms (11th ed.). Prentice Hall. ISBN 0-13-144329-1.CS1 maint: extra text: authors list (link)
 2. Rice G (2007-03-27). "Are Viruses Alive?". Retrieved 2007-07-23.
 3. Amann RI, Ludwig W, Schleifer KH (1995). &db =pubmed&dopt=Abstract&list_uids=7535888 "Phylogenetic identification and in situ detection of individual microbial cells without cultivation" Check |url= value (help). Microbiol. Rev. 59: 143–169.CS1 maint: multiple names: authors list (link)
 4. ವಾರೊ ಆನ್‌ ಅಗ್ರಿಕಲ್ಚರ್‌ 1,xii ಲೋಯೆಬ್‌
 5. ೫.೦ ೫.೧ ಇಬ್ರಾಹಿಂ B. ಸೈಯದ್‌, Ph.D. (2002). "ಇಸ್ಲಾಮಿಕ್‌ ಮೆಡಿಸಿನ್‌: 1000 ಇಯರ್ಸ್‌ ಅಹೆಡ್‌ ಆಫ್‌ ಇಟ್ಸ್‌ ಟೈಮ್ಸ್‌", ಜರ್ನಲ್‌ ಆಫ್‌ ದಿ ಇಸ್ಲಾಮಿಕ್‌ ಮೆಡಿಕಲ್‌ ಅಸೋಸಿಯೇಷನ್‌ 2 , ಪುಟ 2–9.
 6. ಡೇವಿಡ್‌ W. ಷಾಂಝ್‌, MSPH, PhD (ಆಗಸ್ಟ್‌ 2003). "ಅರಬ್‌ ರೂಟ್ಸ್‌ ಆಫ್ ಯುರೋಪಿಯನ್‌ ಮೆಡಿಸಿನ್‌", ಹಾರ್ಟ್‌ ವ್ಯೂಸ್‌ 4 (2).
 7. Gest H (2005). "The remarkable vision of Robert Hooke (1635-1703): first observer of the microbial world". Perspect. Biol. Med. 48 (2): 266–72. doi:10.1353/pbm.2005.0053. PMID 15834198.
 8. Drews G (1999). "Ferdinand Cohn, a Founder of Modern Microbiology" ([dead link]). ASM News. 65 (8).
 9. Ryan KJ, Ray CG (editors) (2004). Sherris Medical Microbiology (4th ed.). McGraw Hill. ISBN 0-8385-8529-9.CS1 maint: extra text: authors list (link)
 10. Bordenave G (2003). "Louis Pasteur (1822-1895)". Microbes Infect. 5 (6): 553–60. doi:10. 1016/ S1286-4579(03)00075-3 Check |doi= value (help). PMID 12758285.
 11. Johnson J (1998-07-01). "Martinus Willem Beijerinck". American Phytopathological Society. Archived from the original on 2008-07-24. Retrieved 2007-07-23.
 12. Paustian T, Roberts G. "Beijerinck and Winogradsky initiate the field of environmental microbiology". The Microbial World. Archived from the original on 2008-09-14. Retrieved 2007-07-23.
 13. Burkovski A (editor). (2008). Corynebacteria: Genomics and Molecular Biology. Caister Academic Press. ISBN 978-1-904455-30-1.
 14. Rehm BHA (editor). (2008). Microbial Production of Biopolymers and Polymer Precursors: Applications and Perspectives. Caister Academic Press. ISBN 978-1-904455-36-3.
 15. Diaz E (editor). (2008). Microbial Biodegradation: Genomics and Molecular Biology (1st ed.). Caister Academic Press. ISBN 978-1-904455-17-2.
 16. Tannock GW (editor). (2005). Probiotics and Prebiotics: Scientific Aspects. Caister Academic Press. ISBN 978-1-904455-01-1.
 17. Mengesha; et al. (2009). "Clostridia in Anti-tumor Therapy". Clostridia: Molecular Biology in the Post-genomic Era. Caister Academic Press. ISBN 978-1-904455-38-7. Explicit use of et al. in: |author= (help)

ಹೆಚ್ಚಿನ ಓದಿಗೆ[ಬದಲಾಯಿಸಿ]

 • Lerner, Brenda Wilmoth & K. Lee Lerner (eds) (2006). Medicine, health, and bioethics : essential primary sources (1st ed.). Thomson Gale. ISBN 1414406231.CS1 maint: extra text: authors list (link)
 • Witzany, Guenther (2008). Bio-Communication of Bacteria and its Evolutionary Interrelations to Natural Genome Editing Competences of Viruses. Nature Precedings. hdl:10101/npre.2008.1738.1.

ಇವನ್ನೂ ಗಮನಿಸಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

ಸಾಮಾನ್ಯ[ಬದಲಾಯಿಸಿ]

ನಿಯತಕಾಲಿಕಗಳು[ಬದಲಾಯಿಸಿ]

ವೃತ್ತಿಪರ ಸಂಘಟನೆಗಳು[ಬದಲಾಯಿಸಿ]

 1. REDIRECT Template:Protist structures