ಸಾಂಕ್ರಾಮಿಕ ರೋಗವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಕ್ರಾಮಿಕ ರೋಗವಿಜ್ಞಾನವು ಜನಸಮಷ್ಟಿಯಲ್ಲಿ ಹಬ್ಬಿರುವ ರೋಗಗಳ ಕಾರಣ, ಅವು ಹರಡುವ ಪರಿ, ಅವುಗಳ ನಿವಾರಣೋಪಾಯ, ಚಿಕಿತ್ಸಾಕ್ರಮ ಮುಂತಾದ ಜನಾರೋಗ್ಯ ಸಂಬಂಧೀ ವಿಷಯಗಳನ್ನು ಸಮಗ್ರವಾಗಿಯೂ ಕೂಲಂಕಷವಾಗಿಯೂ ಅಧ್ಯಯನಗೈಯುವ ವೈದ್ಯವಿಜ್ಞಾನ ವಿಭಾಗ (ಎಪಿಡೆಮಿಯಾಲಜಿ). ರೋಗಗಳು ಮರುಕಳಿಸುವ ಆವೃತ್ತಿ (ಫ್ರೀಕ್ವೆನ್ಸಿ), ವಿತರಣೆ (ಡಿಸ್ಟ್ರಿಬ್ಯೂಶನ್) ಮತ್ತು ನಿರ್ಣಾಯಕಗಳು (ಡಿಟರ್ಮಿನೆಂಟ್ಸ್) ಎಂಬ ಮೂರು ಪೂರಕ ಅಂಶಗಳನ್ನು ಇದರಲ್ಲಿ ಅಭ್ಯಸಿಸಲಾಗುತ್ತದೆ. ಜನಸಂಖ್ಯಾಸಾಂದ್ರತೆ, ವಿತರಣೆ, ಸರಾಸರಿ ಆಯುರ್ನಿರೀಕ್ಷೆ ಮುಂತಾದವುಗಳ ಸಂಖ್ಯಾಕಲನೀಯ ಅಧ್ಯಯನ (ಸ್ಟ್ಯಾಟಿಸ್ಟಿಕಲ್ ಸ್ಟಡಿ) ಇಲ್ಲಿ ಅವಶ್ಯ. ಜನತೆಗೆ ಯುಕ್ತ ವೈದ್ಯಕೀಯ ಸಹಾಯ ವಿಸ್ತರಿಸುವ ಸಲುವಾಗಿ ಸರ್ಕಾರ ತನ್ನ ನೀತಿ ರೂಪಿಸುವಲ್ಲಿ ಈ ಅಧ್ಯಯನ ಬಲು ಉಪಯುಕ್ತ.

ಇತಿಹಾಸ[ಬದಲಾಯಿಸಿ]

ಆ್ಯಡಮ್ ಮತ್ತು ಈವ್ “ನಿಷಿದ್ಧ ಫಲ” ಸೇವಿಸಲು ತೊಡಗಿದಾಗಲೇ ಸಾಂಕ್ರಾಮಿಕ ರೋಗವಿಜ್ಞಾನ ರೂಪುಗೊಂಡಿತೆಂಬ ಪ್ರತೀತಿ ಉಂಟು. ಅಂದರೆ ಚಿಂತನಶೀಲ ಮಾನವನ ಉಗಮದೊಂದಿಗೇ ಈ ವಿಜ್ಞಾನ ವಿಭಾಗ ಮೈದಳೆಯಿತೆಂದು ಭಾವಿಸಬಹುದು. ಮುಂದೆ 19ನೆಯ ಶತಮಾನದಲ್ಲಿ ಜಾನ್ ಸ್ನೋ (1813-58) ಎಂಬ ಇಂಗ್ಲಿಷ್ ವೈದ್ಯ ಕಾಲರಾ ಪಿಡುಗಿನ ಆಕರ ಶೋಧನೆಯಲ್ಲಿ ತೊಡಗಿ ಅದನ್ನು ಪತ್ತೆಹಚ್ಚಿದಾಗ ಸಾಂಕ್ರಾಮಿಕ ರೋಗವಿಜ್ಞಾನಕ್ಕೆ ಭವ್ಯ ವೈಜ್ಞಾನಿಕ ಅಸ್ತಿಭಾರ ಲಭಿಸಿತು:[೧] ಕಲುಷಿತ ಜಲ ಸೇವನೆಯೇ ಈ ಪಿಡುಗಿನ ಮೂಲ ಎಂಬುದು ಆತನ ಶೋಧನೆ (1831, 1848, 1854).[೨]

ಮುಂದೆ ಫುಪ್ಫುಸಗಳ ಕ್ಯಾನ್ಸರಿಗೂ ತಂಬಾಕು ಸೇವನೆಗೂ ಇರಬಹುದಾದ ಸಂಬಂಧವನ್ನು ಬ್ರಿಟಿಷ್ ವೈದ್ಯರು ಅನುಮಾನಿಸಿ ಈ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿದರು. ಇದು ನಿಜವೆಂದು ಸಾಬೀತಾದಾಗ (1956) ಸಾಂಕ್ರಾಮಿಕ ರೋಗವಿಜ್ಞಾನಕ್ಕೆ ಹೆಚ್ಚಿನ ಒತ್ತಾಸೆ ದೊರೆಯಿತು.

ರೋಗಗಳ ವರ್ಗೀಕರಣ[ಬದಲಾಯಿಸಿ]

ತರುವಾಯದ ವರ್ಷಗಳಲ್ಲಿ ನಡೆಸಿದ ವ್ಯವಸ್ಥಿತ ಅಧ್ಯಯನ ರೋಗಗಳಲ್ಲಿ ವ್ಯಾಪಕವಾಗಿ ನಾಲ್ಕು ವರ್ಗಗಳನ್ನು ಗುರುತಿಸಿದೆ:

  1. ನಿರ್ದಿಷ್ಟ ಜನಸಮಷ್ಟಿಯಲ್ಲಿ ಸ್ಥಳಿಕವಾಗಿ ಕಾಣಿಸಿಕೊಳ್ಳುವವು ಸ್ಥಳಿಕವ್ಯಾಧಿಗಳು (ಎಂಡೆಮಿಕ್)[೩]
  2. ಅಲ್ಲಿ ಇಲ್ಲಿ ಆಗ ಈಗ ಪ್ರಕಟವಾಗುವವು ಆಕಸ್ಮಿಕ ವ್ಯಾಧಿಗಳು (ಸ್ಪೊರೇಡಿಕ್)
  3. ಒಟ್ಟಾಗಿ ಸಾಕಷ್ಟು ವಿಸ್ತಾರದಲ್ಲಿ ಹರಡುವ ಪಿಡುಗು (ಎಪಿಡೆಮಿಕ್)
  4. ಅಂತರದೇಶೀಯವಾಗಿ ವ್ಯಾಪಿಸುವಂಥ ಖಂಡಾಂತರ ಪಿಡುಗು (ಪ್ಯಾಂಡೆಮಿಕ್).

ವ್ಯಾಧಿಪ್ರಕಾರ ಯಾವುದೇ ಇರಲಿ, ಅದು ಬಡಿದಾಗ ಅದನ್ನು ನಿವಾರಿಸಲು ದ್ವಿವಿಧ ಪ್ರತಿರೋಧ ಅಗತ್ಯ: ರೋಗಗ್ರಸ್ತರ ಚಿಕಿತ್ಸೆ ಮತ್ತು ಉಪಚಾರ, ಜೊತೆಯಲ್ಲೇ ರೋಗಮೂಲವನ್ನು ಶೋಧಿಸಿ ಅದರ ಉತ್ಪಾಟನೆ.

ಉಲ್ಲೇಖಗಳು[ಬದಲಾಯಿಸಿ]

  1. Doctor John Snow Blames Water Pollution for Cholera Epidemic, by David Vachon Archived 28 December 2011 ವೇಬ್ಯಾಕ್ ಮೆಷಿನ್ ನಲ್ಲಿ. UCLA Department of Epidemiology, School of Public Health May & June 2005
  2. John Snow, Father of Epidemiology Archived 20 June 2017 ವೇಬ್ಯಾಕ್ ಮೆಷಿನ್ ನಲ್ಲಿ. NPR Talk of the Nation. 24 September 2004
  3. Carol Buck, Alvaro Llopis; Enrique Nájera; Milton Terris (1998) The Challenge of Epidemiology: Issues and Selected Readings. Scientific Publication No. 505. Pan American Health Organization. Washington, DC. p. 3.

ಹೊರಗಿನ ಕೊಂಡಿಗಳು[ಬದಲಾಯಿಸಿ]