ರೋಗನಿದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೇಡಿಯಾಗ್ರಫಿ

ರೋಗನಿದಾನ ಎಂದರೆ ರೋಗವನ್ನು ನಿರ್ದಿಷ್ಟವಾಗಿ ಪತ್ತೆಹಚ್ಚುವ ವಿಧಾನ (ಡಯಾಗ್ನೋಸಿಸ್).[೧][೨] ಇದೊಂದು ನಿಪುಣಕಲೆ ಹಾಗೂ ವಿಶಿಷ್ಟ ವಿಜ್ಞಾನ. ರೋಗನಿದಾನವಿಜ್ಞಾನವು ದೇಹದ ಅಥವಾ ಮನಸ್ಸಿನ ಅಸ್ವಸ್ಥ ಸ್ಥಿತಿಯ ಸ್ವರೂಪ ಅನ್ವೇಷಿಸುವ ವೈದ್ಯವಿಜ್ಞಾನ ವಿಭಾಗ (ಡಯೋಗ್ನೋಸ್ಟಿಕ್ಸ್). ರೋಗಗಳ ಪ್ರಾರಂಭ ಮತ್ತು ಮುಂದುವರಿಕೆ ಬಗ್ಗೆ ವ್ಯಕ್ತಿಗೆ ಅರಿವು ಅತ್ಯಗತ್ಯ. ಪ್ರತಿಯೊಂದು ಕಾಯಿಲೆಯೂ ತನ್ನದೇ ಆದ ವೇಗದಲ್ಲಿ, ರೀತಿಯಲ್ಲಿ ಸಾಗುತ್ತದೆ. ಇದು ಪ್ರತಿ ವ್ಯಕ್ತಿಯಲ್ಲೂ ಕಾಯಿಲೆಗೆ ತಕ್ಕಂತೆ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ರೋಗಿಯ ಹೇಳಿಕೆಯನ್ನು ಕೇಳಿ, ಸಂದರ್ಭಗಳನ್ನು ಗಮನಿಸಿ, ಆತನನ್ನು ವ್ಯವಸ್ಥಿತವಾಗಿ ಸಾಮಾನ್ಯ ಮತ್ತು ವಿಶಿಷ್ಟವಾದ ಪರೀಕ್ಷೆಗಳಿಗೆ ಒಳಪಡಿಸಿ, ಎಲ್ಲ ಬಗೆಗಳಿಂದಲೂ ಗ್ರಹಿಸಿದ ಮಾಹಿತಿಗಳನ್ನು ಕೂಲಂಕಷವಾಗಿ ತುಲನೆಮಾಡಿ, ಸ್ವಂತಾನುಭವಕ್ಕೆ ಒರೆಹಚ್ಚಿ, ರೋಗ ಇಂಥದೆಂದು ಕೊಟ್ಟ ಕೊನೆಯದಾಗಿ ನಿಷ್ಕರ್ಷಿಸುವುದೇ ರೋಗನಿದಾನ ಕ್ರಮ. ಯಾವುದೇ ರೋಗಚಿಕಿತ್ಸೆಗೆ ಕೈಹಾಕುವುದಕ್ಕೆ ಮುನ್ನವೇ ಸಾಧ್ಯವಾದಷ್ಟು ಮಟ್ಟಿಗಾದರೂ ರೋಗವನ್ನು ನಿರ್ದಿಷ್ಟವಾಗಿ ಗುರುತಿಸಬೇಕಾದದ್ದು ಅಗತ್ಯ. ಆದರೆ ಅನೇಕ ವೇಳೆ ರೋಗ ನಿರ್ದಿಷ್ಟವಾಗಿ ಪತ್ತೆ ಆಗದಿದ್ದರೂ ರೋಗ ಬಾಧೆಗಳಿಂದ ನರಳುವಿಕೆಯನ್ನು ಶಮನಮಾಡಲು ಲಾಕ್ಷಣಿಕ ಚಿಕಿತ್ಸೆ (ಸಿಂಪ್ಟೊಮ್ಯಾಟಿಕ್ ಟ್ರೀಟ್‍ಮೆಂಟ್) ಮಾಡಬೇಕಾಗುತ್ತದೆ.

ರೋಗದ ಮುಖ್ಯ ಕಾರಣಗಳು:

  • ತಂದೆ ತಾಯಿಯರಿಂದ ಬಂದ ವಂಶವಾಹಿನಿಗಳು,
  • ನಮ್ಮ ಒಳಗಿನ ಮತ್ತು ಹೊರಗಿನ ಪರಿಸರ,
  • ಮಾನಸಿಕ ಸ್ಥಿತಿ,
  • ಚಿಕಿತ್ಸೆಯ ಪರಿಣಾಮ ಇತ್ಯಾದಿ.

ಕೆಲವು ರೋಗಗಳು ಭ್ರೂಣಾವಸ್ಥೆಯಲ್ಲೇ ಪ್ರಾರಂಭವಾಗಿ, ಮಗುವಿನ ಜೊತೆಗೇ ಬೆಳೆಯುತ್ತವೆ. ಸೋಂಕುರೋಗಗಳು ಸೂಕ್ಷ್ಮಜೀವಿಗಳಿಂದ ಉಂಟಾಗುವುದರಿಂದ ರೋಗನಿದಾನವೇ ಬೇರೆ ರೀತಿಯದು. ವಿವಿಧ ಅಂಗೋಪಾಂಗಗಳಿಗೆ ಉಂಟಾಗಿರುವ ಹಾನಿಗೆ ತಕ್ಕಂತೆ ಅವುಗಳ ಕ್ರಿಯೆಗಳಲ್ಲಿ ಬದಲಾವಣೆ ಮಾಡಿ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಕೆಲವು ರೋಗಗಳು ದೇಹದ ಇತರ ಭಾಗಗಳಿಗೆ ಹರಡುವುದರಿಂದ ಕಾಯಿಲೆಯ ಸಂಪೂರ್ಣ ಮಾಹಿತಿ ಅತ್ಯಗತ್ಯ. ನಾನಾ ಕಾರಣಗಳಿಂದ ಜೀವಕೋಶಗಳ ಕಾರ್ಯವೈಖರಿ, ವಿಭಜನಾ ಸಾಮರ್ಥ್ಯಗಳಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ, ಅಂಗಾಂಶಗಳು ಹಾನಿಯಾಗಿ ಕಾಯಿಲೆಗಳು ಪ್ರಾರಂಭವಾಗುತ್ತವೆ. ಮಾನವ ದೇಹದಲ್ಲಿರುವ ರೋಗನಿರೋಧಕ ಶಕ್ತಿಗನುಗುಣವಾಗಿ, ರೋಗದ ತೀವ್ರತೆ ಕಂಡು ಬರುತ್ತದೆ. ಕೆಲವು ರೋಗಗಳು ಒಂದೇ ಭಾಗಕ್ಕೆ ಸಂಬಂಧಿಸಿದ್ದರೆ ಮತ್ತೆ ಕೆಲವು ಹಲವಾರು ಅಂಗೋಪಾಂಗಗಳಿಗೆ ತೊಂದರೆ  ಉಂಟುಮಾಡಬಹುದು. ಒಂದೇ ಕಾಯಿಲೆ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು.

ರೋಗವೈಶಿಷ್ಟ್ಯ: ಪ್ರತಿ ಕಾಯಿಲೆಗೂ ತನ್ನದೇ ಆದ ರೋಗವೈಶಿಷ್ಟ್ಯ ಇದೆ. ಉದಾಹರಣೆಗೆ, ಅರ್ಬುದರೋಗ ಜೀವಕೋಶಗಳ ವಿಭಜನಾ ಕಾರ್ಯದಲ್ಲಿ ಮಾರ್ಪಾಟು ಮಾಡಿ ಅನಿಯಂತ್ರಿತವಾಗಿ ಬೆಳೆದು ಉಪಯೋಗವಿಲ್ಲದ, ಆ ಭಾಗಕ್ಕೆ ಹಾನಿಮಾಡುವ ಒಂದು ಅಂಗಾಂಶದ ಗಂಟಾಗಿ ಮಾರ್ಪಾಡಾಗುತ್ತದೆ. ಅದರ ಬೆಳೆವಣಿಗೆಗೆ ಸುತ್ತಲಿನ ಆರೋಗ್ಯವಂತ ಅಂಗೋಪಾಂಗಗಳ ಜೀವಕೋಶಗಳೇ ಆಹಾರ. ವೈರಸ್, ಬ್ಯಾಕ್ಟೀರಿಯ, ಬೂಷ್ಟುಗಳ ಸೋಂಕಿನ ಕಥೆಯೂ ಹೀಗೆಯೇ. ಇವುಗಳ ಜೀವನಾಭಿವೃಧ್ದಿಗೆ ಆರೋಗ್ಯವಂತ ಅಂಗಾಂಶಗಳೇ ಬೇಕು. ವಿವಿಧ ಕಾಯಿಲೆಗಳಿಂದ ಹಲವಾರು ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗಿ, ದೇಹದ ಆಂತರಿಕ ಪರಿಸರದ ಸಮತೋಲದಲ್ಲಿ ವ್ಯತ್ಯಯ ಉಂಟುಮಾಡಿ, ಕ್ರಿಯೆಗಳಲ್ಲಿ ಏರುಪೇರುಂಟಾಗುತ್ತದೆ.

ರೋಗಕ್ಕೆ ತಕ್ಕ ಪರೀಕ್ಷೆ: ಆದ್ದರಿಂದ ಕಾಯಿಲೆಗೆ ತಕ್ಕಂತೆ, ಅದರ ಹಂತವನ್ನಾಧರಿಸಿ, ಯಾವ ಯಾವ ಅಂಗೋಪಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನುವುದನ್ನು ವಿಶ್ಲೇಷಿಸಿ, ತಕ್ಕ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಇವು ರಕ್ತದಲ್ಲಿಯ ರಕ್ತಕಣಸಂಖ್ಯೆ, ರಾಸಾಯನಿಕ ವಸ್ತುಗಳು (ಸಕ್ಕರೆ, ಜಿಡ್ಡು, ಬಿಲಿರುಬಿನ್, ಯೂರಿಯ, ಕಿಣ್ವಗಳು, ಹಾರ್ಮೋನುಗಳು, ಸಸಾರಜನಕ), ಕ್ರಿಮಿಗಳು, ಮುಂತಾದವುಗಳ ಪರೀಕ್ಷೆ; ಮೂತ್ರದಲ್ಲಿ ರಾಸಾಯನಿಕ ವಸ್ತುಗಳ (ಸಕ್ಕರೆ, ಆಲ್ಬುಮಿನ್, ಸಸಾರಜನಕ) ಪ್ರಮಾಣ, ಅಸಾಧಾರಣ ವಸ್ತುಗಳ ಇರುವಿಕೆ, ಕೆಂಪು ಮತ್ತು ಬಿಳಿ ರಕ್ತಕಣಗಳು, ಬ್ಯಾಕ್ಟೀರಿಯಾಗಳು; ಮಲ, ಕಫ, ವಿವಿಧ ದ್ರವಗಳಲ್ಲಿ ಕ್ರಿಮಿಗಳು, ರಾಸಾಯನಿಕಗಳು;  ಇವುಗಳ ಪರೀಕ್ಷೆಯಿಂದ ರೋಗದ ಕಾರಣ, ಹಂತ, ಬೇರೆ ಬೇರೆ ಭಾಗಗಳಿಗೆ ಆಗಿರುವ ಹಾನಿಯ ಪ್ರಮಾಣ, ಚಿಕಿತ್ಸೆಗೆ ಸಿಕ್ಕಿರುವ ಪ್ರತಿಫಲ ಇತ್ಯಾದಿಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದರಿಂದ ಚಿಕಿತ್ಸೆಯಲ್ಲಿ ಮಾಡಬೇಕಾದ ಬದಲಾವಣೆಗಳು, ಯಾವ ಔಷಧಗಳು ಹೆಚ್ಚು ಪರಿಣಾಮಕಾರಿ ಎಂಬುದನ್ನೂ ನಿರ್ಧರಿಸಬಹುದು. ಕೆಲವೊಮ್ಮೆ ರೋಗದ ಚಿಹ್ನೆಗಳಿಗೂ ಪ್ರಯೋಗಾಲಯದ ವರದಿಗೂ ಹೊಂದಾಣಿಕೆ ಆಗದಿರಬಹುದು. ಈ ವ್ಯತ್ಯಾಸಗಳನ್ನು ವೈದ್ಯ ತನ್ನ ವೈದ್ಯಕೀಯ ಜ್ಞಾನ ಮತ್ತು ಪರಿಣತಿಯ ಸಹಾಯದಿಂದ ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುತ್ತಾನೆ. ಮಾನವನ ಸುತ್ತಲಿನ ಪರಿಸರದ (ಗಾಳಿ, ನೀರು, ಆಹಾರ) ಮಾಲಿನ್ಯದಿಂದ ಹಲವಾರು ಕಾಯಿಲೆಗಳು ತಲೆದೋರುತ್ತವೆ. ಆಗ ಮಾನವ ಪರೀಕ್ಷೆಯಲ್ಲದೆ, ಆ ಪರಿಸರದ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಬೇಕಾಗುತ್ತದೆ ಕೂಡ. ಶಸ್ತ್ರಚಿಕಿತ್ಸೆಯಾದ ಬಳಿಕ ಮತ್ತು ಆ ಕಾಯಿಲೆಯ ಒಂದು ತುಣುಕನ್ನು ವಿಶೇಷವಾಗಿ ಸಂಶ್ಲೇಷಿಸಿ, ಅಧ್ಯಯನ ಮಾಡಿ ರೋಗದ ಬಗ್ಗೆ ಸರಿಯಾದ ಮಾಹಿತಿ ಪಡೆಯಬಹುದು. ಇದರಿಂದ ಒಂದೇ ರೀತಿ ಕಾಣುವ ಹಲವಾರು ಕಾಯಿಲೆಗಳನ್ನು ಬೇರ್ಪಡಿಸಲು ಸಹಾಯಕಾರಿ. ಈ ರೋಗನಿದಾನದ ವಿಜ್ಞಾನದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು, ಗಣಕ, ಮಾಹಿತಿ ತಂತ್ರವಿದ್ಯೆ, ಅಂತರಜಾಲ ವ್ಯವಸ್ಥೆ ಮುಂತಾದವು ರೋಗದ ಪತ್ತೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಯಲ್ಲಿ ಬಹು ಸಹಾಯಕಾರಿ.

ನಿದಾನಕ್ರಮ[ಬದಲಾಯಿಸಿ]

ಮೂಕಪ್ರಾಣಿಗಳಿಗೂ ರೋಗ ಬರುವುದು ಸರ್ವವೇದ್ಯ. ಅವುಗಳ ರೋಗನಿದಾನವನ್ನು ಪಶುವೈದ್ಯರು ಪರೋಕ್ಷ ವಿಧಾನಗಳಿಂದ ಮಾಡುತ್ತಾರೆ. ಮಾತುಬರುವ ಮಾನವ ರೋಗಿಗಳಲ್ಲಿ ರೋಗಬಾಧೆಗಳ ವಿಷಯ ಅವರ ಹೇಳಿಕೆಯಿಂದಲೇ ಗೊತ್ತಾಗುವ ಸೌಲಭ್ಯವಿರುವುದರಿಂದ ರೋಗನಿದಾನಕ್ಕೆ ರೋಗಿಯ ಹೇಳಿಕೆಯನ್ನು ಅಗತ್ಯವಾಗಿ ಪಡೆಯಬೇಕು. ನಿದಾನಕಲೆಯಲ್ಲಿ ಪರಿಣತನಾದ ವೈದ್ಯ ವಾಸ್ತವವಾಗಿ ರೋಗಿಯ ಆಗಮನ, ಅವನು ಪ್ರಶ್ನೆಗಳಿಗೆ ಕೊಡುವ ಉತ್ತರಗಳು, ಅವನ ಮುಖಚರ್ಯೆ ಮುಂತಾದವನ್ನು ಗಮನಿಸಿ ಒಂದೋ ಎರಡೋ ಪರೀಕ್ಷೆಗಳನ್ನು ಮಾಡಿ ರೋಗ ಇಂಥದೇ ಎಂದು ನಿರ್ಧರಿಸಿ ಚಿಕಿತ್ಸಿಸಬಲ್ಲ.[೩] ಇಂಥ ವೈದ್ಯನನ್ನೆ ಒಳ್ಳೆ ಹಸ್ತಗುಣ ಉಳ್ಳವ ಎಂದು ಕರೆಯುವುದಾಗಿದೆ.

ಸ್ವಾನುಭವಲಕ್ಷಣಗಳು[ಬದಲಾಯಿಸಿ]

ನಿದಾನಕ್ರಮದಲ್ಲಿ ರೋಗಿ ತನಗೆ ಇರುವ ತೊಂದರೆಗಳನ್ನು ಖಚಿತವಾಗಿ ತಿಳಿಯಪಡಿಸುವಂತೆ ಪ್ರೇರಿಸುವುದೂ ಅವನ ಹೇಳಿಕೆಯನ್ನು ಒಟ್ಟು ಬದುಕಿನ ಹಿನ್ನೆಲೆಯಲ್ಲಿ ಅವಲೋಕಿಸುವುದೂ ಮುಖ್ಯ. ಇದಕ್ಕಾಗಿ ಅವನಿಗೆ ಸದ್ಯದಲ್ಲಿ ಇರುವ ತೊಂದರೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬೇಕು. ಇವಕ್ಕೆ ಸ್ವಾನುಭವಲಕ್ಷಣಗಳು (ಸಿಮ್‍ಪ್ಟಮ್ಸ್-ಸಬ್ಜೆಕ್ಟಿವ್) ಎಂದು ಹೆಸರು. ಈ ತೊಂದರೆಗಳು ಹೇಗೆ ಮತ್ತು ಎಷ್ಟು ಕಾಲ ಹಿಂದೆ ಪ್ರಾರಂಭವಾದವು, ಹಿಂದೆ ಇದೇ ರೀತಿ ತೊಂದರೆ ಆಗಿತ್ತೆ ಅಥವಾ ಇನ್ನಾವ ರೋಗವಾದರೂ ಬಂದಿತ್ತೆ, ಅದರ ಪರಿಣಾಮ ಏನಾಯಿತು, ಏನು ಚಿಕಿತ್ಸೆ ಮಾಡಲಾಯಿತು ಮತ್ತು ಮಾಡಲಾಗುತ್ತಿದೆ, ರೋಗ ಆನುವಂಶಿಕವೆ, ಸಂಸಾರದಲ್ಲಿ ತಂದೆ ತಾಯಿ ಸಹೋದರ-ಸಹೋದರಿಯರು ಮಕ್ಕಳು ಮುಂತಾದ ಇತರರ ಆರೋಗ್ಯ ಸ್ಥಿತಿ ಹೇಗಿದೆ, ರೋಗಿಯ ಸಾಮಾಜಿಕ ಹಾಗೂ ಔದ್ಯೋಗಿಕ ಪರಿಸ್ಥಿತಿ ಏನು, ರೋಗಿಯ ಚಿತ್ತಸ್ವಾಸ್ಥ್ಯದ ಪರಿಸ್ಥಿತಿ ಏನು ಎಂಬ ತಪಶೀಲುಗಳನ್ನೆಲ್ಲ ಪಡೆಯಬೇಕು. ಇಂಥ ಕೆಲವನ್ನು ರೋಗಿ ತಾನಾಗಿಯೇ ಹೇಳದಿದ್ದರೆ ಅವನನ್ನು ಪ್ರಶ್ನಿಸಿ ಮಾಹಿತಿ ಪಡೆಯಬೇಕು. ಸ್ತ್ರೀ ರೋಗಿಗಳಲ್ಲಿ ಅವರ ಮಾಸಿಕ ಚಕ್ರದಲ್ಲಿ ಅಕ್ರಮಗಳಿವೆಯೇ ಎಂಬುದನ್ನೂ, ಲೈಂಗಿಕ ರೋಗಗಳಿಂದ ನರಳುತ್ತಿರುವವರು ಎನ್ನಿಸಿದವರಲ್ಲಿ ಸೋಂಕಿಗೆ ಕಾರಣವೆನಿಸುವ ಸಂಭೋಗದ ಸಾಧ್ಯತೆಯನ್ನೂ ಅರಿಯಬೇಕು. ಸಾಮಾನ್ಯವಾಗಿ ಇಂಥ ವಿವರಗಳನ್ನೆಲ್ಲ ಆದಷ್ಟು ಸಂಗ್ರಹಿಸಬೇಕಾದದ್ದು ಅಪೇಕ್ಷಣೀಯವಾದರೂ ಎಲ್ಲ ಸಂದರ್ಭಗಳಲ್ಲೂ ಎಲ್ಲ ವಿವರಗಳು ಮುಖ್ಯವೆನ್ನಿಸುವುದಿಲ್ಲ. ಅಲ್ಲದೆ ಯಾವುದೋ ಒಂದೆರಡು ವಿವರಗಳು ರೋಗ ಇಂಥದ್ದೇ ಎಂದು ಸೂಚಿಸಬಹುದು ಅಷ್ಟೆ. ಉದಾಹರಣೆಗೆ ರಕ್ತಸ್ರಾವ ಪ್ರಸಂಗಗಳಲ್ಲಿ ಸಂಸಾರಕ್ಕೆ ಸೇರಿದ ಇತರ ವ್ಯಕ್ತಿಗಳ ರೋಗ ವಿವರಣೆಗಳು ಮುಖ್ಯ. ಎದೆನೋವು, ಕೆಮ್ಮು ಮುಂತಾದ ಪ್ರಸಂಗಗಳಲ್ಲಿ ರೋಗಿಯ ಉದ್ಯೋಗ ವಿವರಗಳು ಮುಖ್ಯವಾದವು. ಕೆಲವು ಸಂದರ್ಭಗಳಲ್ಲಿ ರೋಗಿ 10-15 ವರ್ಷಗಳ ಹಿಂದೆ ಮಾಡುತ್ತಿದ್ದ ಉದ್ಯೋಗಫಲ ಇಂದು ಕಂಡುಬರುವ ಸಂಭವ ಇರುವುದರಿಂದ ಹೀಗೆ, ರಕ್ತಕಣಕೊರತೆ ಹಠಾತ್ತಾಗಿ ಉಂಟಾಗಿದ್ದರೆ ಸ್ವಲ್ಪ ಕಾಲ ಮುಂಚೆ ರೋಗಿಗೆ ಕ್ಲೋರಾಮ್‍ಫೆನಿಕಲ್ ಮುಂತಾದ ಔಷಧಿಗಳನ್ನು ಕೊಟ್ಟಿದ್ದರೇ ಎಂಬ ವಿಷಯ ತಿಳಿದುಕೊಳ್ಳುವುದು ಅಗತ್ಯ. ಚಳಿಜ್ವರ, ಆಮಶಂಕೆಗಳ ಪ್ರಸಂಗಗಳಲ್ಲಿ ರೋಗಿ ವ್ಯಾಧಿಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದನೇ ಎಂದು ತಿಳಿದುಕೊಳ್ಳಬೇಕಾದದ್ದು ಮುಖ್ಯ. ಅನೇಕ ವೇಳೆ ನಿತ್ಯಜೀವನದ ಧಕ್ಕೆಗಳು-ಗಂಡ ಹೆಂಡಿರ ನಡುವೆ, ತಾಪೇದಾರ ಅಧಿಕಾರಿಗಳ ನಡುವೆ, ನೆರೆಹೊರೆಯವರ ನಡುವೆ ಆದವು- ರೋಗಕ್ಕೆ ಕಾರಣವಾಗಿರಬಹುದು. ಇಂಥ ಮಾಹಿತಿಗಳನ್ನು ಪಡೆಯುವಾಗ ರೋಗಿಗೆ ಅಳುಕಾಗದಂತೆ ಭಯ ಹುಟ್ಟದಂತೆ ವಿಶ್ವಾಸಜನ್ಯವಿಧಾನವನ್ನು ವೈದ್ಯ ರೂಢಿಸಿಕೊಳ್ಳಬೇಕು. ಅಲ್ಲದೇ ನೇರ ಸಂಬಂಧವೇ ಇಲ್ಲದಂತಿರುವ ಸಂಗತಿಗಳು ರೋಗಕ್ಕೆ ಕಾರಣವಾಗಿರಬಹುದು ಎಂಬುದನ್ನು ಗಮನದಲ್ಲಿಟ್ಟು ವಿಚಾರಿಸಿ ತಿಳಿದುಕೊಂಡು ರೋಗವನ್ನು ಪತ್ತೆ ಮಾಡುವುದು ಒಂದು ಕಲೆಯೇ ಸರಿ.

ಬಾಹ್ಯಗೋಚರ ಲಕ್ಷಣಗಳು[ಬದಲಾಯಿಸಿ]

ರೋಗಿಯ ಮೈ ಮುಟ್ಟಿ ಪರೀಕ್ಷಿಸಬೇಕಾದದ್ದು ಮುಂದಿನ ಹಂತ. ಇದರಿಂದ ತಿಳಿದುಬರುವ ರೋಗ ಲಕ್ಷಣಗಳಿಗೆ ಬಾಹ್ಯಗೋಚರ ಲಕ್ಷಣಗಳು (ಸೈನ್ಸ್-ಅಬ್ಜೆಕ್ಟಿವ್) ಎಂದು ಹೆಸರು. ಮೈ ಮುಟ್ಟಿ ಪರೀಕ್ಷೆ ಮಾಡಿದರೆಂದೇ ಎಷ್ಟೋ ರೋಗಿಗಳಿಗೆ ತೃಪ್ತಿ ಆಗಿ ವೈದ್ಯನಲ್ಲಿ ನಂಬಿಕೆ ಹುಟ್ಟುವುದರಿಂದ ರೋಗನಿದಾನಕ್ಕೂ ಚಿಕಿತ್ಸೆಗೂ ಬಲು ಅನುಕೂಲ. ಅಲ್ಲದೆ ಇಂದಿಗೂ ಅತ್ಯಂತ ಆಧುನಿಕವಾದ ಪ್ರಯೋಗಾಲಯ ಪರೀಕ್ಷೆಗಳಿಗಿಂತ, ರೋಗಿಯ ದೇಹ ಪರೀಕ್ಷೆ ರೋಗನಿದಾನಕ್ಕೆ ಅಧಿಕ ಪ್ರಯೋಜನಕಾರಿಯಾಗಿದೆ. ಜೊತೆಗೆ ವಿಶೇಷ ಪ್ರಯೋಗಾಲಯ ಪರೀಕ್ಷೆಗಳು ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲೂ ಒದಗುವಂತಿಲ್ಲ. ಒದಗುವಂತಿದ್ದರೂ ಅನಾವಶ್ಯಕವಾಗಿ ಈ ವಿಶೇಷ ಪರೀಕ್ಷೆಗಳನ್ನು ರೋಗನಿದಾನಕ್ಕೆ ಬಳಸಿಕೊಳ್ಳುವುದು ವಿಹಿತವಲ್ಲ. ವಿಶೇಷ ಪರೀಕ್ಷೆಗೆ ಒಳಪಡಿಸದೇ ನಿರ್ವಾಹವಿಲ್ಲ ಎಂದಾಗ ಮಾತ್ರ, ಹಾಗೆ ಮಾಡಿದಾಗಲೇ ನಿರ್ದಿಷ್ಟ ತಪಶೀಲು ಯಾವುದಾದರೂ ತಿಳಿದುಬರುತ್ತದೆ ಎಂದು ವೈದ್ಯನ ಮನಸ್ಸಿಗೆ ಖಾತ್ರಿ ಆದಾಗ ಮಾತ್ರ ಇಂಥ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಅನೇಕವೇಳೆ ಸ್ವಾನುಭವ ಮತ್ತು ಬಾಹ್ಯಗೋಚರ ಲಕ್ಷಣಗಳಿಂದ ರೋಗನಿದಾನದ ಬಗ್ಗೆ ಬಂದ ಸಂಶಯಗಳನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಇಲ್ಲವೇ ಪರಿಹರಿಸಿಕೊಳ್ಳುವುದಕ್ಕಾಗಿ ವಿಶೇಷ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ವೈದ್ಯರಿಂದ ದೇಹಪರೀಕ್ಷೆ[ಬದಲಾಯಿಸಿ]

ರೋಗಿಯ ದೇಹಪರೀಕ್ಷೆ ಮಾಡುವಾಗ ವೈದ್ಯ ತನ್ನ ಕಣ್ಣು, ಕಿವಿ, ಮೂಗು, ಸ್ಪರ್ಶ ಸಾಮರ್ಥ್ಯ ಎಲ್ಲವನ್ನು ಬಳಸಿ ಆದಷ್ಟು ಮಾಹಿತಿಗಳನ್ನು ಸಂಗ್ರಹಿಸಬೇಕು. ರೋಗಿಯ ಪರೀಕ್ಷೆ ಮಾಡಬೇಕಾದಾಗ ವೈದ್ಯ ಸುಖಾಸೀನನಾಗಿರಬೇಕಲ್ಲದೆ ರೋಗಿಗೂ ಹಿತಕರವಾಗಿರುವಂತೆ ಕುಳ್ಳಿರಿಸಿ ಅಥವಾ ಮಲಗಿಸಿ ಪರೀಕ್ಷಿಸಬೇಕು. ಒಳ್ಳೆ ಬೆಳಕಿರುವ ಸ್ಥಳದಲ್ಲಿ ಪರೀಕ್ಷೆ ಮಾಡುವುದು ಉಚಿತ. ಹೀಗೆ ಮಾಡಿದಾಗ ಮೈಬಣ್ಣ ವ್ಯತ್ಯಾಸಗಳು ಚೆನ್ನಾಗಿ ತಿಳಿದುಬರುತ್ತದೆ. ಉಟ್ಟಿರುವ ಬಟ್ಟೆಯನ್ನು ಆದಷ್ಟು ಕಳೆದು ಹಾಕಿಸಿ ಮೈಪರೀಕ್ಷೆ ಮಾಡಬೇಕು. ಅಲ್ಲದೆ ಶರೀರದ ಎಲ್ಲ ಭಾಗಗಳನ್ನೂ ಪರೀಕ್ಷಿಸುವುದು ಯಾವಾಗಲೂ ಒಳ್ಳೆಯದು. ನಿರೀಕ್ಷೆ ಇರದ ಸ್ಥಳದಲ್ಲಿ ಏನಾದರೂ ಚಹರೆ ಪತ್ತೆ ಆಗಿ ರೋಗನಿದಾನಕ್ಕೆ ಅನುಕೂಲವಾಗಬಹುದು. ರೋಗಿ ಸಹಜವಾಗಿ ತಳೆಯುವ ಭಂಗಿ, ನಡೆಯುವಾಗಿನ ವಿನ್ಯಾಸಗಳನ್ನು ಕಂಡುಕೊಳ್ಳುವುದೂ ಮುಖ್ಯ. ಪ್ರಸಕ್ತ ರೋಗಕ್ಕೆ ಸಂಬಂಧಿಸದಂತಿರುವ ದೇಹದ ನ್ಯೂನಾತಿರೇಕಗಳನ್ನು ಗಮನಿಸಬೇಕು. ರೋಗಿ ಉಸಿರಾಡುವಾಗ ಕೇಳಿಬರುವ ಶಬ್ದ, ಅದರ ವೇಗ ಗತಿ, ಉಸಿರಿನ ವಾಸನೆ, ಎದೆ ಹೊಟ್ಟೆಗಳ ಚಲನೆ ಮುಂತಾದವನ್ನೆಲ್ಲ ಪರೀಕ್ಷಿಸಬೇಕು. ಇಂಥವನ್ನೆಲ್ಲ ಮೈಮುಟ್ಟಿ ಪರೀಕ್ಷೆ ಮಾಡುವುದಕ್ಕೆ ಮೊದಲೇ ತಿಳಿದುಕೊಳ್ಳಬೇಕು. ನಾಡಿ, ಗುಂಡಿಗೆಯ ಮಿಡಿತ, ರಕ್ತ ಒತ್ತಡ ಮಾಪನ, ಉಸಿರಾಟದ ಚಲನೆ ಹಾಗೂ ಶಬ್ದಗಳು, ಮೈಮೇಲಿನ ಊತಗಂಟುಗಳು, ಅಸ್ಥಿಕೀಲುಗಳು ಮುಂತಾದವನ್ನೆಲ್ಲ ಸ್ಪರ್ಶಪರೀಕ್ಷೆಗೆ ಒಡ್ಡಿ ಉಪಯುಕ್ತ ವಿಚಾರಗಳನ್ನು ಪಡೆಯಬಹುದು. ಅಮುಕಿ ನೋಡಿದಾಗ ರೋಗಿ ಮುಖ ಗಂಟಿಕ್ಕುವುದರಿಂದ ದೇಹಾಂತರಾಳದಲ್ಲಿ ನೋವಿರುವುದು (ಟೆಂಡರ್ನೆಸ್) ಪತ್ತೆ ಆಗುತ್ತದೆ. ಅನಂತರ ಮುಖ್ಯವಾಗಿ ಎದೆಯ ಮುಂದೆ ನಂತರ ಹಿಂದೆ ಒಂದು ಹಸ್ತವನ್ನಿಟ್ಟು ಅದರ ಮಧ್ಯೆ ಬೆರಳನ್ನು ಇನ್ನೊಂದು ಕೈಮಧ್ಯೆ ಬೆರಳಿನಿಂದ ಲಘುವಾಗಿ ಕುಟ್ಟಿ (ಪರ್ಕಷನ್) ಉದ್ಭವಿಸಿದ ಶಬ್ದವನ್ನು ಆಲಿಸಿ ಅದರ ಸಹಜತೆ ಅಸಹಜತೆ ಹಾಗೂ ಅದರ ಕ್ಷೇತ್ರವೈಶಾಲ್ಯವನ್ನು ಪತ್ತೆಮಾಡಬೇಕು. ಕೊನೆಯದಾಗಿ ಶ್ರವಣನಳಿಕೆಯಿಂದ (ಸ್ಟೆತಸ್ಕೋಪ್) ಎದೆಯ ಹಿಂದೆ ಮತ್ತು ಮುಂದೆ ಪರೀಕ್ಷಿಸಿ ಗುಂಡಿಗೆಯ ಮಿಡಿತದಲ್ಲಿ ಉದ್ಭವವಾಗುತ್ತಿರುವ ಶಬ್ದಗಳ ಸ್ವಭಾವವನ್ನು ಮತ್ತು ಫುಪ್ಪುಸದಲ್ಲಿ ತೋರಿಬರುವ ಉಸಿರಾಟ ಶಬ್ದಗಳು ಮತ್ತು ಇತರ ಸದ್ದಿನ ಇರುವಿಕೆಯನ್ನು ಪರೀಕ್ಷಿಸಬೇಕು. ರೋಗ ನಿದಾನದಲ್ಲಿ ಮೈಮುಟ್ಟಿ ಹೀಗೆ ಪರೀಕ್ಷೆಮಾಡಿ ಪಡೆಯುವ ಮಾಹಿತಿಗಳೇ ಅತ್ಯಂತ ಪ್ರಮುಖ.

ಪ್ರಯೋಗಾಲಯ ಪರೀಕ್ಷೆಗಳು[ಬದಲಾಯಿಸಿ]

ಇವುಗಳಿಂದ ತಿಳಿದುಬಂದ ತಪಶೀಲುಗಳ ಪುಷ್ಟೀಕರಣಕ್ಕಾಗಿ ಇಲ್ಲವೇ ಅನ್ಯಥಾ ನಿರ್ವಾಹವಿಲ್ಲದ ವಿಧಾನಗಳಿಗಾಗಿ ವಿಶಿಷ್ಟ ಪ್ರಯೋಗಾಲಾಯ ಪರೀಕ್ಷೆಗಳನ್ನು ಮಾಡಬೇಕು, ಅನೇಕ ರೀತಿಯ ರಕ್ತಪರೀಕ್ಷೆಗಳು, ಕಫ, ಮಲಮೂತ್ರಗಳ ಪರೀಕ್ಷೆ ಹಾಗೂ ಎಕ್ಸ್-ಕಿರಣ ಪರೀಕ್ಷೆಗಳು, ಇಂಥವನ್ನು ಈಗಿನ ಕಾಲದಲ್ಲಿ ರೋಗನಿದಾನಕ್ಕೋಸ್ಕರವಾಗಿ ಮಾಡುವುದು ಸಾಮಾನ್ಯವಾಗಿ ರೂಢಿಗೆ ಬಂದಿದೆ. ಇವಲ್ಲದೆ ಪ್ರಯೋಗಾಲಯದಲ್ಲಿ ಮಾಡಬಹುದಾದ ಎಲೆಕ್ಟ್ರೊಎನ್‍ಕೆಪಲೋಗ್ರಫಿ (ಇ.ಇ.ಜಿ), ಎಲೆಕ್ಟ್ರೊಕಾರ್ಡಿಯೊಗ್ರಾಫಿ (ಇ.ಸಿ.ಜಿ.), ಎಕೊಕಾರ್ಡಿಯೋಗ್ರಫಿ, ಅಲ್ಟ್ರಾಸೋನಾಗ್ರಫಿ, ಸಿಟಿಸ್ಕ್ಯಾನ್, ಎಂ.ಆರ್.ಐ, ಬಯಾಪ್ಸಿ, ಎಫ್.ಎನ್.ಎ.ಸಿ. ಸಿಸ್ಟಾಸ್ಕೊಪಿ, ಗ್ಯಾಸ್ಟ್ರಾಸ್ಕೊಪಿ, ಬ್ರ್ಯಾಂಕಾಸ್ಕೊಪಿ ಮುಂತಾದ ಇನ್ನಿತರ ವಿಶೇಷ ಪರೀಕ್ಷೆಗಳು ಉಂಟು.

ವಿವಿಧ ರೋಗನಿದಾನಗಳು[ಬದಲಾಯಿಸಿ]

ಸ್ವಾನುಭವ ಮತ್ತು ಬಾಹ್ಯಗೋಚರ ಲಕ್ಷಣಗಳಿಂದ ನಿರ್ಧರಿಸುವ ರೋಗನಿದಾನಕ್ಕೆ ಲಾಕ್ಷಣಿಕ (ಕ್ಲಿನಿಕಲ್ ಡಯಾಗ್ನೋಸಿಸ್) ಎಂದು ಹೆಸರು. ಲಕ್ಷಣಗಳು ಹಲವಾರು ರೋಗಗಳಲ್ಲಿ ಸಮಾನವಾಗಿದ್ದ ಸಂದರ್ಭಗಳಲ್ಲಿ ಒಂದು ರೋಗದ ವೈಶಿಷ್ಟ್ಯವಾದ ಲಕ್ಷಣ ಇದೆಯೇ ಎಂದು ಪರೀಕ್ಷಿಸಿ, ಇಲ್ಲವೆಂದು ದೃಢಪಡಿಸಿಕೊಂಡು ಆ ರೋಗದ ಸಂಭವನೀಯತೆಯನ್ನು ಕೈಬಿಡುತ್ತ ಕೊನೆಗೆ ಉಳಿಯುವುದು ಇದೇ ರೋಗ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಪ್ರತ್ಯೇಕತಾರೀತಿಯ ನಿದಾನ (ಡಯಾಗ್ನೋಸಿಸ್ ಬೈ ಎಕ್ಸ್‍ಕ್ಲೂಷನ್) ಎಂದು ಹೆಸರು. ಸಮಾನ ಲಕ್ಷಣಗಳಿರುವ ರೋಗಗಳಲ್ಲಿ ವ್ಯವಸ್ಥಿತವಾಗಿ ಒಂದೊಂದು ಲಕ್ಷಣವನ್ನು ತುಲನೆ ಮಾಡಿ ನೋಡುತ್ತ ರೋಗ ಇಂಥಾದ್ದೇ ಎಂದು ಬರುವ ನಿರ್ಧಾರಕ್ಕೆ ವಿಭೇದಾತ್ಮಕ ನಿದಾನ (ಡಿಫರೆನ್‍ಷಿಯಲ್ ಡಯಾಗ್ನೋಸಿಸ್) ಎಂದು ಹೆಸರು. ದೇಹದ ಒಳಗಿನ ಹಾಗೂ ಊತಕಗಳಲ್ಲಿ ಕಂಡು ಬರುವ ಲಕ್ಷಣಗಳನ್ನು ಗಮನಿಸಿದಲ್ಲಿ ಕೆಲವು ವೇಳೆ ರೋಗ ಪತ್ತೆ ಮಾಡುವುದಕ್ಕೆ ಸಾಧ್ಯವಾಗದು. ಬಹುವಾಗಿ ವ್ಯಕ್ತಿಯ ಮರಣಾನಂತರವೇ ಇದು ಸಾಧ್ಯವಾಗಬಹುದಾದ್ದರಿಂದ ಈ ಕ್ರಮಕ್ಕೆ ಮರಣೋತ್ತರ ನಿದಾನ (ಪೋಸ್ಟ್‍ಮಾರ್ಟೆಮ್ ಡಯಾಗ್ನೋಸಿಸ್) ಎಂದು ಹೆಸರು. ಹೀಗೆಯೇ ಎಕ್ಸ್-ಕಿರಣ ಪರೀಕ್ಷೆ ರೀತಿಯ ನಿದಾನ, ಲಸಿಕೆ ಪರೀಕ್ಷೆ ರೀತಿಯ ನಿದಾನ (ಸೀರಮ್ ಡಯಾಗ್ನೋಸಿಸ್), ಕ್ರಿಯಾ ಸಾಮರ್ಥ್ಯ ಪರೀಕ್ಷೆ ರೀತಿಯ ನಿದಾನ (ಫಂಕ್ಷನಲ್ ಡಯಾಗ್ನೋಸಿಸ್), ಜೀವುಂಡಿಗೆಯ ಸೂಕ್ಷ್ಮದರ್ಶಕ ಪರೀಕ್ಷೆ ರೀತಿಯ ನಿದಾನ (ಬೈಯಾಪ್ಸಿ ಡಯಾಗ್ನೋಸಿಸ್), ಚಿಕಿತ್ಸೆಯ ಪರಿಣಾಮ ರೀತಿಯ ನಿದಾನ (ಥಿರಾಪ್ಯೂಟಿಕ್ ಡಯಾಗ್ನೋಸಿಸ್) ಎಂದು ಬೇರೆ ಬೇರೆ ಮಾರ್ಗಗಳಲ್ಲಿ ರೋಗನಿದಾನ ಸಾಧ್ಯವಿದೆ.

ಆಯುರ್ವೇದದಲ್ಲಿ[ಬದಲಾಯಿಸಿ]

ರೋಗ ಇಂಥದೇ ಎಂದು ಪರೀಕ್ಷಿಸಿ ತಿಳಿಯುವ ವಿಧಾನಕ್ಕೆ ಆಯುರ್ವೇದದಲ್ಲಿ ನಿದಾನ ಎಂಬ ಹೆಸರಿದೆ (ಡಯಾಗ್ನೋಸಿಸ್). ಪ್ರತಿಯೊಂದು ರೋಗಕ್ಕೂ ವಿಶಿಷ್ಟವಾದ ಕೆಲವು ಲಕ್ಷಣಗಳಲ್ಲದೆ ಸಾಮಾನ್ಯವಾದ ಲಕ್ಷಣಗಳಿರುವುದೂ ಉಂಟು. ಸಾದಾ ರೋಗವನ್ನು ಪತ್ತೆ ಹಚ್ಚುವಷ್ಟು ಸುಲಭವಾಗಿ ಸಂಕೀರ್ಣ ರೋಗವನ್ನು ಗುರುತಿಸುವುದು ಕಷ್ಟ. ರೋಗಿಯನ್ನು ಪರೀಕ್ಷಿಸಿ, ಅವನ ಪರಿಸರ, ಊಟೋಪಚಾರಗಳ ಬಗ್ಗೆ ತಿಳಿದು ರೋಗವನ್ನು ಗುರುತಿಸಬೇಕಾಗುತ್ತದೆ.

ನಿದಾನಪಂಚಕ[೪][ಬದಲಾಯಿಸಿ]

  1. ನಿದಾನ (ಹೇತು),
  2. ಪೂರ್ವರೂಪ,
  3. ರೂಪ,
  4. ಉಪಶಯ,
  5. ಸಂಪ್ರಾಪ್ತಿ

ಎಂದು ಐದು ವಿಧವಾಗಿದೆ. ಇವುಗಳಿಗೆ ನಿದಾನಪಂಚಕವೆಂದು ಹೇಳುತ್ತಾರೆ. ಇವು ಐದೂ ರೋಗವನ್ನು ತಿಳಿಯುವ ಕಾರಣಗಳಾದರೂ ಕೆಲವೊಮ್ಮೆ ಇಲ್ಲಿಯ ಒಂದೊಂದರಿಂದಲೇ ರೋಗವನ್ನು ಕಂಡುಹಿಡಿಯಬಹುದು. ಒಂದರಿಂದ ತಿಳಿದ ರೋಗ ಮತ್ತೊಂದರ ಸಹಾಯದಿಂದಲೂ ತಿಳಿಯಲ್ಪಟ್ಟರೆ, ಅದಕ್ಕೆ ಇನ್ನಿಷ್ಟು ದೃಢತ್ವ ಬರುತ್ತದೆ. ಅಲ್ಲದೆ ಕೆಲವೊಮ್ಮೆ ಒಂದರಿಂದಲೇ ಸ್ಪಷ್ಟವಾಗಿ ರೋಗವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇವು ಐದೂ ವಿಧಾನಗಳನ್ನು ಚಿಕಿತ್ಸಕ ತಿಳಿದಿರಬೇಕು.

ಹೇತು ಅಥವಾ ರೋಗೋತ್ಪತ್ತಿಕರ ವಿಧಾನ[ಬದಲಾಯಿಸಿ]

ಸಂಕ್ಷಿಪ್ತವಾಗಿ ಹೇಳುವುದಾದರೆ ಹೇತುವನ್ನು ಬಿಡುವುದೇ ಚಿಕಿತ್ಸೆ (ರೋಗನಿವಾರಣೋಪಾಯ). ಅಂದರೆ ರೋಗಕ್ಕೆ ಮುಖ್ಯ ಕಾರಣ ಯಾವುದೋ ಅದನ್ನು ತಿಳಿದು ಅದನ್ನು ವರ್ಜಿಸಿದರೆ ಅದೇ ಆ ರೋಗಕ್ಕೆ ಚಿಕಿತ್ಸೆ. ಹಾಗೆ ರೋಗ ಹೇತುವನ್ನು ಬಿಡಲು ಯಾವುದು ರೋಗದ ಹೇತುವೆಂದು ಮೊದಲು ತಿಳಿಯುವುದು ಅಗತ್ಯ. ನೊಣ ತಿನ್ನುವುದರಿಂದ ವಾಂತಿ (ವರ್ದಿ) ಎಂಬ ರೋಗ ಆಗುತ್ತದೆಯೇ ಹೊರತು ಬೇರೆ ಯಾವ ರೋಗವೂ ಆಗುವುದಿಲ್ಲ. ಇಲ್ಲಿ ನೊಣ ತಿಂದದ್ದರಿಂದ ವಾಂತಿಯಾಯಿತು ಎಂಬುದರ ಜ್ಞಾನ ವಾಂತಿ ರೂಪ ರೋಗವನ್ನು ತಿಳಿಯಲು ಪ್ರಧಾನಕಾರಣವಾಗಿದ್ದುದರಿಂದ, ಇದು ರೋಗೋತ್ಪಾದಕ ಕಾರಣವೆಂದು ಕರೆಯಲ್ಪಟ್ಟಿತು.

ಒಂದು ರೋಗಕ್ಕೆ ಒಂದೇ ಕಾರಣ ಇರಬಹುದು; ಹಾಗೆಯೇ ಅದಕ್ಕೆ ಅನೇಕ ಕಾರಣಗಳೂ ಇರಬಹುದು. ಅನೇಕ ರೋಗಗಳಿಗೆ ಒಂದೇ ಕಾರಣವಿರುವುದೂ ಉಂಟು. ಕೆಲವು ಸಾರಿ ಅನೇಕ ರೋಗಗಳಿಗೆ ಅನೇಕ ಕಾರಣಗಳಿರಬಹುದು.

ಹೇತುವಿನ ಪ್ರಕಾರಗಳು

ಹೇತುವಿನಲ್ಲಿ ಅನೇಕ ಪ್ರಕಾರಗಳಿವೆ. ಒಂದು ದೃಷ್ಟಿಯಲ್ಲಿ ನೋಡಿದರೆ ಹೇತು ಭೇದಗಳು ನಾಲ್ಕು.

  1. ಸನ್ನಿಕೃಷ್ಟ ಅಥವಾ ಸಮೀಪದ ಕಾರಣ. ಉದಾಹರಣೆಗೆ ವಾತ ಪಿತ್ತ ಕಫಗಳು ಹಗಲುರಾತ್ರಿಗಳಲ್ಲಿ ಹೆಚ್ಚುಕಡಿಮೆಯಾಗಿ ರೋಗವನ್ನುಂಟುಮಾಡುತ್ತವೆ. ಉದಾಹರಣೆಗೆ ಪ್ರಾತಃ ಕಾಲದಲ್ಲಿ ಕಫಪ್ರಕೋಪ.
  2. ವಿಪ್ರಕಷ್ಟ ಅಥವಾ ದೂರದ ಕಾರಣ. ಉದಾಹರಣೆಗೆ ಹೇಮಂತ ಋತುವಿನಲ್ಲಿ ಸಂಗ್ರಹಿಸಲ್ಪಟ್ಟ ಕಫ ವಸಂತಕಾಲದಲ್ಲಿ ಸೂರ್ಯ ಕಿರಣಗಳಿಂದ ದ್ರವತ್ವಹೊಂದಿ ಪ್ರಕುಪಿತವಾಗಿ ರೋಗಕಾರಣವಾಗುತ್ತದೆ.
  3. ವ್ಯಭಿಚಾರಿ (ಅನಿಯಮಿತ) ಕಾರಣ: ವಾತಪಿತ್ತಕಫಗಳೆಂಬ ದೋಷಗಳೂ ರಸಾದಿ ದೂಷ್ಯಗಳೂ ಬಲವತ್ತರವಾಗಿ ಸಂಪರ್ಕ ಹೊಂದದಿದ್ದರೆ ಆ ರೋಗವುಂಟಾಗುವುದಿಲ್ಲ. ಆದರೂ ಬಹುಕಾಲಾನಂತರ ಅಥವಾ ದೌರ್ಬಲ್ಯವಿದ್ದಾಗ ರೋಗ ಉತ್ಪನ್ನವಾಗುತ್ತದೆ.
  4. ಪ್ರಾಧಾನಿಕ (ವಿಷಾದಿಕಾರಣ): ಪ್ರಸನ್ನವರ್ಣ ಇಂದ್ರಿಯ ಚಿತ್ತಚೇಷ್ಟಾದಿಗಳು ಉಂಟಾದಾಗ ನಿವಾರಣೆಯಾಯಿತೆಂದು ತಿಳಿಯಬೇಕೆಂದು ಶಾಸ್ತ್ರಕಾರರು ಹೇಳುತ್ತಾರೆ. ವಿಷದಿಂದ ಪ್ರಸನ್ನವರ್ಣಾದಿರೂಪವಾದ ಸ್ವಸ್ಥನ (ಆರೋಗ್ಯವಂತನ) ಲಕ್ಷಣಗಳು ಇಲ್ಲವಾಗುತ್ತವೆಂಬುದು ಇದರಿಂದ ಸಿದ್ಧವಾಗುತ್ತದೆ.

ಎರಡನೆಯ ದೃಷ್ಟಿಯಲ್ಲಿ ನೋಡಿದರೆ ದೋಷಭೇದಗಳು ಮೂರು:

  1. ಅಸಾತ್ಮ್ಯ ಇಂದ್ರಿಯಾರ್ಥ ಸಂಯೋಗ: ಪ್ರತಿಯೊಂದು ಇಂದ್ರಿಯಕ್ಕೂ ಅದರದೇ ಆದ ವಿಶಿಷ್ಟ ಅರ್ಥವಿದೆ. ಉದಾಹರಣೆಗೆ ಕಣ್ಣಿಗೆ ರೂಪವೇ ಅರ್ಥ. ಇಂದ್ರಿಯಗಳಿಗೆ ಅರ್ಥಗಳೊಂದಿಗಿನ ಸಂಯೋಗ ಅತಿಯಾದಾಗ ಅಥವಾ ಹೀನವಾದಾಗ ಅಥವಾ ಬೇರೆಯಾದಾಗ ರೋಗ ಸಂಭವಿಸುತ್ತದೆ.
  2. ಪ್ರಜ್ಞಾಪರಾಧ: ತಿಳಿದೂ ತಪ್ಪು ಮಾಡುವುದು. ಉದಾಹರಣೆಗೆ ಹೆಚ್ಚು ತಿಂದರೆ ಅಜೀರ್ಣವಾಗುತ್ತದೆಂದು ತಿಳಿದೂ ರುಚಿಗೆ ಅಥವಾ ದಾಕ್ಷಿಣ್ಯಕ್ಕೆ ಮಾರುಹೋಗಿ ಹೆಚ್ಚು ತಿನ್ನುವುದು ರೋಗಕಾರಣವಾಗುತ್ತದೆ.
  3. ಪರಿಣಾಮ ಅಥವಾ ಕಾಲ: ಋತುವೂ ರೋಗಕ್ಕೆ ಕಾರಣ. ಉದಾಹರಣೆಯಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆ ಬಿದ್ದರೆ ಅಥವಾ ಮಳೆ ಬಾರದಿದ್ದರೆ ಅಥವಾ ಬಿಸಿಲು ಬಹಳ ಬಿದ್ದರೆ, ರೋಗ ಹುಟ್ಟುತ್ತದೆ.

ಮೂರನೆಯ ದೃಷ್ಟಿಯಲ್ಲಿ ನೋಡಿದರೆ ದೋಷಭೇದಗಳು ಮೂರು ವಿಧ.

  1. ದೋಷಹೇತು: ಚಯ, ಪ್ರಕೋಪ, ಪ್ರಶಮನಗಳಿಗೆ ಕಾರಣಗಳಾದ ಮಧುರಾದಿ ರಸಗಳು.
  2. ವ್ಯಾಧಿಹೇತು: ಮಣ್ಣು ತಿನ್ನುವುದರಿಂದ ಪಾಂಡುರೋಗ ಬರುವುದು.
  3. ಉಭಯ (ದೋಷವ್ಯಾಧಿ) ಹೇತು: ವಾಹನಗಳಿಂದ ಪ್ರಯಾಣ ಮಾಡುತ್ತ ವಿದಾಹಿ ಅನ್ನಪಾನ ಸೇವನೆ ಮಾಡುವುದು. ವಾತುದುಷ್ಟಿಗೂ ರಕ್ತದುಷ್ಟಿಗೂ ಕಾರಣವಾಗುತ್ತದೆ. ಅದರಿಂದ ವಾತರಕ್ತರೋಗ ಬರುತ್ತದೆ. ಇಲ್ಲಿ ವಾತವೆಂಬ ದೋಷದುಷ್ಟಿಗೂ ವಾತ ರಕ್ತವೆಂಬ ವ್ಯಾಧಿಗೂ ಇವು ಕಾರಣಗಳಾಗುತ್ತವೆ.

ನಾಲ್ಕನೆಯ ದೃಷ್ಟಿಯಲ್ಲಿ ನೋಡಿದರೆ ರೋಗಭೇದಗಳು ಎರಡು.

  1. ಉತ್ಪಾದಕ: ಹೇಮಂತಜವಾದ ಮಧುರ ರಸ ಕಫೋತ್ಪಾದಕ.
  2. ವ್ಯಂಜಕ: ವಸಂತದಲ್ಲಿ ಅದೇ ಕಫದ ವ್ಯಂಜಕ ಸೂರ್ಯಸಂತಾಪವಾಗುತ್ತದೆ.

ಐದನೆಯ ದೃಷ್ಟಿಯಲ್ಲಿ ನೋಡಿದರೆ ರೋಗ ಹೇತುಗಳು ಎರಡು ವಿಧ:

  1. ಬಾಹ್ಯ: ಆಹಾರ, ಆಚಾರ, ಕಾಲಗಳು.
  2. ಅಭ್ಯಂತರ: ದೋಷ ದೂಷ್ಯಗಳು.

ಪ್ರಕುಪಿತ ದೋಷದಲ್ಲಿಯ ಭೇದಗಳು ಎರಡು.

  1. ಪ್ರಾಕೃತ ಹೇತು: ಆಯಾ ಋತುವಿನಲ್ಲಿ ಆಯಾ ದೋಷಗಳು ಪ್ರಕುಪಿತವಾಗುತ್ತವೆ. ಉದಾಹರಣೆಗೆ ವಾಯು ಗ್ರೀಷ್ಮದಲ್ಲಿ ಸಮಚಯವಾಗಿ ವರ್ಷ ಋತುವಿನಲ್ಲಿ ಪ್ರಕುಪಿತವಾಗುತ್ತದೆ. ಅದು ರೋಗಕ್ಕೆ ಆಗ ಕಾರಣ.
  2. ವೈಕೃತಿಕ ಹೇತು: ಆ ಋತುವಿನಲ್ಲಿ ಅದೇ ದೋಷ ಪ್ರಕೋಪವಾಗದೆ ಬೇರೆ ಮೋಕ್ಷದಿಂದ ಉಂಟಾಗಬಹುದು. ಉದಾಹರಣೆಗೆ ವಾತದಿಂದಾಗದೇ ಪಿತ್ತಪ್ರಕೋಪದಿಂದ ರೋಗವಾಗುವುದು.

ಮತ್ತೊಂದು ದೃಷ್ಟಿಯಿಂದ ದೋಷಭೇದಗಳು ಎರಡು.

  1. ಅನುಬಂಧ್ಯ ಪ್ರಧಾನದೋಷ.
  2. ಅನುಬಂಧ ಅಪ್ರಧಾನ ದೋಷ.

ಇನ್ನೊಂದು ದೃಷ್ಟಿಯಿಂದ ದೋಷಭೇದಗಳು ಎರಡು.

  1. ಪ್ರಕೃತಿ ಹೇತು: ಹುಟ್ಟಿನಿಂದಲೇ ಬಂದ ವಾತಾದಿ ಪ್ರಕೃತಿಯಿಂದ ಬಂದ ರೋಗ ಕಾರಣ ದೋಷ.
  2. ವಿಕೃತಿ ಹೇತು: ಜನ್ಮ ಪ್ರಕೃತಿಯ ದೋಷದಿಂದಲ್ಲದೇ ಅನ್ಯದೋಷದಿಂದ ಬಂದ ರೋಗಕಾರಣವಾದ ಅನ್ಯದೋಷ.

ಆಶಯಾಪಕರ್ಷದಿಂದಾದ ದೋಷಭೇದಗಳು ಅನೇಕ: ಶ್ಲೇಷ್ಮಕ್ಷಯದಿಂದ ವಾತಕೋಪವಾಗಿ, ಅದು ಪ್ರಕೃತಿಸ್ಥಾವದ ಪಿತ್ತವನ್ನು ತನ್ನ ಆಶ್ರಯದಿಂದ ಹೊರಗೆಡಹಿ ಸಂಚರಿಸುತ್ತದೆ. ಆಗ ಪಿತ್ತವೃದ್ಧಿಯೆಂದು ತಿಳಿದು ಹ್ರಾಸ ಮಾಡಿದಾಗ ಕೇಡಾಗುತ್ತದೆ.

ದೋಷದ ಗತಿಭೇದಗಳು. ದೋಷಗಳ ಕ್ಷಯಾದಿ ಅವಸ್ಥೆಯಿಂದ ಮೂರು ವಿಧ

  1. ಕ್ಷಯ (ಕ್ಷೀಣತ್ವ),
  2. ಸ್ಥಾನ (ಸಮತ್ವ)
  3. ವೃದ್ಧಿ.

ಆಶ್ರಯಸ್ಥಾನಾನುಸಾರ ಮೂರು ವಿಧ:

  1. ಶಾಖಾಗತ.
  2. ಕೋಷ್ಠಗತ,
  3. ಮರ್ಮಾಸ್ಥಿ ಸಂಧಿಗತ.

ದಿಗ್ಭೇದದಿಂದ ಗತಿಭೇದಗಳು ಮೂರು ವಿಧ:

  1. ಊರ್ಧ್ವಗತ.
  2. ಅಧೋಗತ,
  3. ತಿರ್ಯಗತ.

ಮತ್ತೊಂದು ದೃಷ್ಟಿಯಿಂದ ದೋಷಭೇದಗಳು ಎರಡು:

  1. ಸಾಮ (ಆಮದಿಂದ ಕೂಡಿದ),
  2. ನಿರಾಮ (ಆಮವಿಲ್ಲದ).

ಪೂರ್ವರೂಪ[ಬದಲಾಯಿಸಿ]

ಹೀಗೆಂದರೆ ರೋಗದ ಮೊದಲು ಕಂಡುಬರುವ ಲಕ್ಷಣ. ಇದು

  1. ಸಾಮಾನ್ಯ ಪೂರ್ವರೂಪ.
  2. ವಿಶಿಷ್ಟ ಪೂರ್ವರೂಪ

ಎಂದು ಎರಡು ಬಗೆಯದಾಗಿದೆ. ಸಾಮಾನ್ಯ ಪೂರ್ವರೂಪವೆಂದರೆ ದೋಷ ಇಂಥದೆಂದು ಸ್ಪಷ್ಟವಾಗದೇ ಇರುವ ರೋಗಪೂರ್ವಲಕ್ಷಣ ಅಥವಾ ರೋಗಪೂರ್ವದ ಅಸ್ಪಷ್ಟ ಲಕ್ಷಣ. ವಿಶಿಷ್ಟ ಪೂರ್ವರೂಪವೆಂದರೆ ಇಂಥದೇ ದೋಷವೆಂದು ಸ್ಪಷ್ಟವಾಗಿ ತಿಳಿದಿರುವ ರೋಗದ ಮೊದಲ ಲಕ್ಷಣ. ಉದಾಹರಣೆಗೆ ವಾತಜ್ವರದ ಮೊದಲಿನ ಆಕಳಿಕೆ, ಪಿತ್ತ ಜ್ವರದ ಮೊದಲಾಗುವ ಕಣ್ಣುರಿ, ಕಫಜ್ವರದ ಮೊದಲಾಗುವ ಅರುಚಿ ಇತ್ಯಾದಿ.

ರೂಪ[ಬದಲಾಯಿಸಿ]

ಉತ್ಪನ್ನವ್ಯಾಧಿಯ ಲಕ್ಷಣಗಳೇ ರೂಪವೆನಿಸುತ್ತವೆ. ಉದಾಹರಣೆಗೆ ಅತಿಸಾರವೆಂಬ ರೋಗದಲ್ಲಿ ಆಗುವ ಅತಿದ್ರವ ಮಲಪ್ರವೃತ್ತಿ. ಕಾಸರೋಗದಲ್ಲಿ ಕೆಮ್ಮು, ಶ್ವಾಸದಲ್ಲಿ ಅನಿಯಮಿತ ಶ್ವಾಸೋಚ್ಛ್ವಾಸ. ಮೂಲ ರೋಗದ ಉತ್ತರಕಾಲೀನ ಲಕ್ಷಣಕ್ಕೆ ಉಪದ್ರವವೆಂದೂ ಮರಣಸೂಚಕ ಲಕ್ಷಣಕ್ಕೆ ಆರಿಷ್ಟವೆಂದೂ ಹೇಳುತ್ತಾರೆ.

ಉಪಶಯ[ಬದಲಾಯಿಸಿ]

ಕೆಲವೊಮ್ಮೆ ರೋಗದ ಲಕ್ಷಣ ಸ್ಪಷ್ಟವಾಗಿರುವುದಿಲ್ಲ. ಆಗ, ಔಷಧಾದಿಗಳಿಂದ ಅದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ರೋಗ ತಿಳಿಯಲು ಮಾಡಿದ ಔಷದಾಧಿಗಳು ಅನುಕೂಲವಾದರೆ ಅದಕ್ಕೆ ಉಪಶಯವೆನ್ನುತ್ತಾರೆ. ಇದು

  1. ಹೇತುವಿಪರೀತ (ವಿರುದ್ಧ) ಔಷಧ,
  2. ಹೇತು ವಿಪರೀತ ಆಹಾರ,
  3. ಹೇತು ವಿಪರೀತ ವಿಹಾರ, ಎಂದೂ
  4. ವ್ಯಾಧಿ ವಿಪರೀತ ಔಷಧ,
  5. ವ್ಯಾಧಿ ವಿಪರೀತಾಹಾರ,
  6. ವ್ಯಾಧಿ ವಿಪರೀತ ವಿಹಾರ,
  7. ಹೇತುವ್ಯಾಧಿ ವಿಪರೀತ ಔಷಧ,
  8. ಹೇತು ವ್ಯಾಧಿ ವಿಪರೀತ ಆಹಾರ,
  9. ಹೇತುವ್ಯಾಧಿ ವಿಪರೀತ ವಿಹಾರ,

ಎಂದು ಒಂಬತ್ತು ವಿಧಗಳಾಗಿದ್ದು ಇದಕ್ಕೆ ಅರ್ಥಕಾರಿ (ಅಂದರೆ, ಅದರಂತೆ ಪ್ರಯೋಜನವನ್ನು ಉಂಟುಮಾಡುವ) ಎಂಬುದನ್ನು ಸೇರಿಸಿ ಹದಿನೆಂಟು ವಿಭಾಗ ಮಾಡುತ್ತಾರೆ.

ಅನುಪಶಯ: ಇದೇ ಔಷಧಾದಿಗಳು ರೋಗವನ್ನು ಹೆಚ್ಚುಮಾಡಿದರೆ ಅದಕ್ಕೆ ಅನುಪಶಯವೆಂದು ಹೆಸರು. ಇದು ರೋಗವನ್ನು ಹೆಚ್ಚು ಮಾಡುವುದರಿಂದ ಇದನ್ನು ರೋಗೋತ್ಪಾದಕ ನಿದಾನ ಅಥವಾ ಹೇತುವಿನಲ್ಲೇ ಅಂತರ್ಗತ ಮಾಡಬಹುದು.

ಸಂಪ್ರಾಪ್ತಿ[ಬದಲಾಯಿಸಿ]

ಈ ದೋಷ ಇಂಥ ಸ್ಥಾನದಲ್ಲಿ ಪ್ರಕುಪಿತವಾಗಿ, ಇಂಥ ಸ್ಥಾನದಲ್ಲಿ ಸಂಚರಿಸಿ, ಇಂಥ ಸ್ಥಾನದಲ್ಲಿ ಆಶ್ರಯ ಹೊಂದಿ ಈ ರೋಗವನ್ನು ಉಂಟು ಮಾಡುತ್ತವೆಯೆಂಬ ವಿವರಣೆಗೆ ಸಂಪ್ರಾಪ್ತಿಯೆಂದು ಹೆಸರು. ಇದು ಐದು ವಿಧ.

  1. ಸಂಖ್ಯಾ: ಉದಾಹರಣೆಗೆ ಎಂಟು ಜ್ವರಗಳು.
  2. ವಿಕಲ್ಪ, ಅಂದರೆ, ಅಂಶಾಂಶ ವಿವರಣೆ. ಉದಾಹರಣೆಗೆ ವಾತ ರೂಕ್ಷಗುಣದಿಂದ ಹೆಚ್ಚಿದಾಗ, ಅದನ್ನು ತಿಳಿಯುವುದು.
  3. ಪ್ರಾಧಾನ್ಯ: ಸ್ವತಂತ್ರ ರೋಗವೋ ಪರತಂತ್ರ ರೋಗವೋ ಎಂದು ತಿಳಿಯುವುದು.
  4. ಬಲ: ರೋಗದ ಪ್ರಧಾನ, ಮಧ್ಯ ಕನಿಷ್ಠ ಬಲ.
  5. ಕಾಲ: ಯಾವ ಕಾಲದಲ್ಲಿ ಹೆಚ್ಚಾಗುತ್ತದೆಂದು ತಿಳಿಯುವುದು.

ಹೀಗೆ ರೋಗವನ್ನು ನಿದಾನ ಪಂಚಕದಿಂದ ತಿಳಿದು ಚಿಕಿತ್ಸೆ ಮಾಡಬೇಕು.

ನಿದಾನದ ಇತರ ವಿಧಾನಗಳು[ಬದಲಾಯಿಸಿ]

ರೋಗಿಯ

  1. ನಾಡಿ,
  2. ಮೂತ್ರ,
  3. ಪುರೀಷ (ಮಲ),
  4. ಜಿಹ್ವೆ,
  5. ಶಬ್ದ,
  6. ಸ್ಪರ್ಶ,
  7. ನೇತ್ರ,
  8. ಆಕೃತಿ (ಪ್ರಕೃತಿ)

ಇವುಗಳಿಂದಲೂ ರೋಗವನ್ನು ತಿಳಿಯಬಹುದು.[೫]

ಅಲ್ಲದೆ

  1. ಪ್ರತ್ಯಕ್ಷ,
  2. ಅನುಮಾನ,
  3. ಉಪಮಾನ,
  4. ಶಬ್ದ,
  5. ಯುಕ್ತಿ

ಎಂಬ ಪ್ರಮಾಣಗಳಿಂದಲೂ ನಿದಾನ ಮಾಡಬಹುದು.

  1. ದರ್ಶನ,
  2. ಸ್ಪರ್ಶನ,
  3. ಪ್ರಶ್ನೆ

ಇವುಗಳಿಂದಲೂ ರೋಗವನ್ನು ತಿಳಿಯಬಹುದು.

ಈ ರೀತಿ ರೋಗದ ವಿಜ್ಞಾನೋಪಾಯಗಳು ಆಯುರ್ವೇದದಲ್ಲಿ ಬಹಳ ಬಗೆಯಲ್ಲಿವೆ.

ಉಲ್ಲೇಖಗಳು[ಬದಲಾಯಿಸಿ]

  1. Rakel, Robert Edwin. "diagnosis". Encyclopedia Britannica, 11 Jan. 2024, https://www.britannica.com/science/diagnosis. Accessed 3 March 2024.
  2. "Diagnosis ." The Gale Encyclopedia of Science. . Encyclopedia.com. 22 Feb. 2024 <https://www.encyclopedia.com>.
  3. Langlois, John P. (2002). "Making a Diagnosis". In Mengel, Mark B.; Holleman, Warren L.; Fields, Scott A. (eds.). Fundamentals of Clinical Practice (2nd ed.). New York, N.Y.: Kluwer Academic/Plenum Publishers. ISBN 0-306-46692-9.
  4. https://jaims.in/jaims/article/download/572/582/#:~:text=As%20per%20Monier%2DWilliams%2C%20Nidana,the%20cause%20of%20the%20disease.&text=Nidana%20Panchaka%20is%20one%20of,causes%20and%20predict%20its%20prognosis.
  5. Mishra, Lakshmi-chandra; Singh, Betsy B.; Dagenais, Simon (2001). "Healthcare and disease management in Ayurveda". Alternative Therapies in Health and Medicine. 7 (2): 44–50. PMID 11253416.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: