ವಿಷಯಕ್ಕೆ ಹೋಗು

ಮಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಕೃತಿ ಸರಣಿಯ ಭಾಗ
ಹವಾಮಾನ
 
ಋತುಗಳು
ವಸಂತ · ಬೇಸಿಗೆಕಾಲ

ಶರತ್ಕಾಲ · ಚಳಿಗಾಲ

ಒಣ ಋತು · ತಂಪು ಋತು

ಚಂಡಮಾರುತ ಗಳು

ಗುಡುಗುಮಳೆ · ಮಹಾ ಗುಡುಗುಮಳೆ
ಕೆಳಬಿರಿತ · ಮಿಂಚು
ಸುಂಟರಗಾಳಿ · ನೀರಸುಳಿಗಂಬ
ಉಷ್ಣವಲಯದ ಸುಂಟರಗಾಳಿ(ಚಂಡಮಾರುತ)
ಹೆಚ್ಚುವರಿ ಉಷ್ಣವಲಯದ ಸುಂಟರಗಾಳಿ
ಶರತ್ಕಾಲಚಂಡಮಾರುತ  · ಹಿಮಗಾಳಿ · ಮಂಜುಗಡ್ಡೆಚಂಡಮಾರುತ
ಧೂಳು ಚಂಡಮಾರುತ  · ಅಗ್ನಿ ಬಿರುಗಾಳಿ  · ಮೋಡ

ಅವಕ್ಷೇಪನ

ಸೋನೆ ಮಳೆ  · ಮಳೆ  · ಹಿಮ · ಗ್ರೌಪುಲ್
ಘನೀಕೃತ ಮಳೆ · ಹಿಮ ತುಣುಕುಗಳು · ಆಲಿಕಲ್ಲು

ವಿಷಯಗಳು

ಪವನ ವಿಜ್ಞಾನ · ಹವಾಮಾನ
ಹವಾಮಾನ ಮುನ್ಸೂಚನೆ
ತಾಪ ಅಲೆ · ವಾಯು ಮಾಲಿನ್ಯ

ಹವಾಮಾನ ಪೋರ್ಟಲ್
Black storm clouds under which a grey sheet of rain is falling on grasslands.
A rain shaft at the base of a thunderstorm
Torrential rain in Greece.

ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂ ಬೀಳುವ ಪ್ರಕ್ರಿಯೆಯೇ ಮಳೆ. ಮೋಡಗಳ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು 'ವಿರ್ಗಾ' ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ ಮರುಭೂಮಿ[]ಯ ಪ್ರದೇಶಗಳಲ್ಲಿ ಘಟಿಸುತ್ತದೆ.

ಮಳೆಯ ಉತ್ಪತ್ತಿ

[ಬದಲಾಯಿಸಿ]
ದೂರದಲ್ಲಿ ಬೀಳುತ್ತಿರುವ ಮಳೆಯ ನೋಟ

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು [ಸೇರುವುದು ]ತಲುಪುವುದು. ಈ ಚಕ್ರ ಮತ್ತೆ ಮುಂದುವರಿಯುವುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಜಲಚಕ್ರ ಎಂದು ಕರೆಯಲಾಗುತ್ತದೆ. ನೆಲದ ಮೇಲಿನ ಮರಗಿಡಗಳು ಸಹ ಗಣನೀಯ ಪ್ರಮಾಣದಲ್ಲಿ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತವೆ.

ಮಳೆಯ ಬಗೆಗಳು

[ಬದಲಾಯಿಸಿ]

ಪುರಾತನ ಕಾಲದಿಂದಲೂ ಮಳೆಯನ್ನು ನಕ್ಷತ್ರದ ಹೆಸರಿಂದ ಕರೆಯುವ ಕ್ರಮ ಭಾರತದಲ್ಲಿದೆ. ಭರಣಿ ಮೃಗಶಿರ ಆರಿದ್ರಾ ಮಳೆ. ಒಂದು ಮಳೆಗೆ ಬಿತ್ತನೆ ಇನ್ನೊಂದಕ್ಕೆ ಬೇರೆ ಕೆಲಸ ಹೀಗೆ. ಆರಿದ್ರಾ ಮಳೆಗೆ ಅದ್ರಿಮಳೆ ಎಂಬ ಹಬ್ಬವನ್ನೂ ಆಚರಿಸುತ್ತಾರೆ.

ಮಳೆ ಬೀಳಲು ನೆರವಾದ ಕಾರಣ ಮತ್ತು ವಾತಾವರಣದ ಸ್ಥಿತಿಗಳ ಆಧಾರದ ಮೇಲೆ ಮಳೆಯನ್ನು ಈ ಮೂರು ಬಗೆಯವಾಗಿ ವಿಂಗಡಿಸಬಹುದು.

  1. ಓರೋಗ್ರಾಫಿಕ್ ಮಳೆ
  2. ಕನ್ವೆಕ್ಟಿವ್ ಮಳೆ
  3. ಚಂಡಮಾರುತದ ಮಳೆ

ಓರೋಗ್ರಾಫಿಕ್ ಮಳೆ

[ಬದಲಾಯಿಸಿ]
  • ರಿಲೀಫ್ ಮಳೆಯೆಂದೂ ಸಹ ಕರೆಸಿಕೊಳ್ಳುವ ಈ ಬಗೆಯ ಮಳೆಯು ಹೆಚ್ಚಿನ ಪ್ರಮಾಣದ ತೇವಾಂಶವುಳ್ಳ ಮಾರುತಗಳು ಘಟ್ಟಗಳ ಸಾಲಿನಂತಹ ಪ್ರಾಕೃತಿಕ ಅಡೆತಡೆಯನ್ನು ಎದುರಿಸಿದಾಗ ಉಂಟಾಗುತ್ತದೆ. ಹೀಗೆ ತಡೆಯುಂಟಾದಾಗ ಮಾರುತಗಳು ಇನ್ನೂ ಎತ್ತರಕ್ಕೆ ಚಲಿಸುತ್ತವೆ. ಎತ್ತರ ಹೆಚ್ಚಿದಂತೆಲ್ಲಾ ಗಾಳಿಯ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತದರ ಪರಿಣಾಮವಾಗಿ ಉಷ್ಣತೆಯು ಕುಸಿಯತೊಡಗುವುದು.
  • ಉಷ್ಣತೆಯು ಕಡಿಮೆಯಾದಾಗ ತೇವಾಂಶದಲ್ಲಿ ಹೆಚ್ಚಳವುಂಟಾಗಿ ಸೂಕ್ಷ್ಮಗಾತ್ರದ ನೀರಹನಿಗಳುಳ್ಳ ಮೋಡಗಳ ಉತ್ಪತ್ತಿಯಾಗುವುದು. ಆದರೆ ತೇವಾಂಶ ಮತ್ತೂ ಹೆಚ್ಚತೊಡಗಿದಾಗ ಮೋಡಗಳಲ್ಲಿನ ನೀರಿನಂಶವು ಹನಿಗೂಡತೊಡಗುತ್ತದೆ. ಇಂತಹ ಹನಿಗಳು ಭಾರದ ಕಾರಣದಿಂದಾಗಿ ಮೋಡಗಳಿಂದ ಕೆಳಬಿದ್ದು ಮಳೆಯ ರೂಪದಲ್ಲಿ ನೆಲವನ್ನು ಸೇರುತ್ತವೆ. ಪರ್ವತದ ಹೊರಮುಖದಿಂದ ಮೇಲೆ ಸಾಗಿ ಮುಂದುವರಿದ ಮಳೆಯ ಮಾರುತವು ಪರ್ವತಸಾಲಿನ ಹಿಂಭಾಗ ತಲುಪಿ ಕೆಳಗಿಳಿಯತೊಡಗುವುದು.
  • ಹೀಗೆ ಇಳಿಯುವ ಕಾರಣದಿಂದಾಗಿ ಗಾಳಿಗಳಲ್ಲಿ ತೇವಾಂಶ ಕಡಿಮೆಯಿರುವುದು. ಅಲ್ಲದೆ ಪರ್ವತದ ಮುಂಭಾಗದ ಪ್ರದೇಶದಲ್ಲಿ ತನ್ನಲ್ಲಿದ್ದ ಹೆಚ್ಚಿನ ತೇವಾಂಶವನ್ನು ಮಳೆಯ ರೂಪದಲ್ಲಿ ಮರುತವು ಹೊರ ಹಾಕಿರುತ್ತದೆ. ಆದ್ದರಿಂದಲೇ ಪರ್ವತದ ಹಿಂಭಾಗದ ಪ್ರದೇಶವು ಇಂತಹ ಮಾರುತಗಳಿಂದ ಅತ್ಯಲ್ಪ ಪ್ರಮಾಣದ ಮಳೆಯನ್ನು ಮಾತ್ರ ಪಡೆಯುವುದು.
  • ಇಂತಹ ಪ್ರದೇಶವನ್ನು ಪರ್ವತದ ಮಳೆಯ ನೆರಳಿನ ಪ್ರದೇಶ ಎಂದು ಕರೆಯಲಾಗುತ್ತದೆ. ಹಿಂದೂ ಮಹಾಸಾಗರದ ಮಳೆಯ ಮಾರುತಗಳು ಓರೋಗ್ರಾಫಿಕ್ ಮಳೆಗೊಂದು ಒಳ್ಳೆಯ ಉದಾಹರಣೆ. ಭಾರತದಲ್ಲಿ ಬೀಳುವ ಒಟ್ಟು ಮಳೆಯ ೮೦% ಪ್ರಮಾಣ ಈ ರೀತಿಯದೆಂದು ಹೇಳಲಾಗುತ್ತದೆ.

ಕನ್ವೆಕ್ಟಿವ್ ಮಳೆ

[ಬದಲಾಯಿಸಿ]
  • ಈ ರೀತಿಯ ಮಳೆಯು ಮುಖ್ಯವಾಗಿ ವಿಷುವದ್ರೇಖೆಯ ಹವಾಮಾನ ವಲಯ ಮತ್ತು ಉಷ್ಣವಲಯದ ಹವಾಮಾನ ವಲಯಗಳಲ್ಲಿ ಉಂಟಾಗುವುದು. ಇಂತಹ ಪ್ರದೇಶಗಳಲ್ಲಿ ಹಗಲಿನ ಸಮಯದಲ್ಲಿ ತಾಪಮಾನ ಬಲು ಹೆಚ್ಚಾಗಿರುತ್ತದೆ. ಈ ಸನ್ನಿವೇಶದಲ್ಲಿ ಜಲಸಮೂಹಗಳಿಂದ ನೀರು ಆವಿಯಾಗುವ ಪ್ರಮಾಣ ಅತಿ ಹೆಚ್ಚು.
  • ಅಲ್ಲದೆ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಡುಗಳು ಬಹಳ ದಟ್ಟವಾಗಿರುವುದರಿಂದ ಮರಗಿಡಗಳ ಮೂಲಕ ವಾತಾವರಣ ಸೇರುವ ತೇವಾಂಶವೂ ಬಹಳ ಹೆಚ್ಚು. ಹೀಗೆ ಆವಿಯಾದ ತೇವಾಂಶವು ಸುತ್ತಲಿನ ಬಿಸಿಗಾಳಿಯೊಡಗೂಡಿ ಮೇಲೇರಲಾರಂಭಿಸುತ್ತದೆ. ಮೇಲೆ ತಿಳಿಸಿದಂತೆ ಎತ್ತರ ಹೆಚ್ಚಿದಂತೆಲ್ಲಾ ತಾಪಮಾನ ಕುಸಿಯತೊಡಗಿ ಕೊನೆಗೆ ಮಳೆಯ ರೂಪದಲ್ಲಿ ಗಾಳಿಯಲ್ಲಿನ ತೇವಾಂಶವು ನೆಲ ಸೇರುತ್ತದೆ.

ಚಂಡಮಾರುತದ ಮಳೆ

[ಬದಲಾಯಿಸಿ]
  • ಈ ಬಗೆಯ ಮಳೆಯು ಚಂಡಮಾರುತದ ಚಟುವಟಿಕೆಯಿಂದ ಉಂಟಾಗುತ್ತದೆ. ಇದು ಚಂಡಮಾರುತದ ಹೊರ ಅಂಚಿನ ಪ್ರದೇಶದಲ್ಲಿ ವ್ಯಾಪಕವಾಗಿ (ಕೆಲವೊಮ್ಮೆ ಅತಿ ಭಾರಿಯಾಗಿ) ಸಂಭವಿಸುವುದು. ವಿಭಿನ್ನ ಉಷ್ಣತೆ, ಸಾಂದ್ರತೆ ಮತ್ತು ತೇವಾಂಶವನ್ನು ಹೊಂದಿರುವ ಎರಡು ಬೃಹತ್ ವಾಯುಸಮೂಹ(ಏರ್ ಮಾಸ್)ಗಳನ್ನು ಒಂದನ್ನೊಂದು ಸಂಧಿಸಿದಾಗ ಚಂಡಮಾರುತವು ಉಂಟಾಗುತ್ತದೆ.
  • ಉಷ್ಣವಲಯದ ತೇವಭರಿತ ಬಿಸಿ ಮಾರುತವು ಧ್ರುವಪ್ರದೇಶದ ತಂಪು ಮಾರುತವನ್ನು ಸಂಧಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ಈ ಸಂಧಿಸ್ಥಾನವು ಒಂದು ಬೆಚ್ಚಗಿನ ಮುಖ ಮತ್ತು ಒಂದು ತಂಪಾದ ಮುಖಗಳನ್ನು ಹೊಂದಿರುತ್ತದೆ. ಬೆಚ್ಚಗಿನ ಭಾಗದ ಬಿಸಿ ಹಗುರ ಗಾಳಿಯು ಭಾರವಾದ ತಂಪುಗಾಳಿಗಿಂತ ಮೇಲಕ್ಕೇರುವುದು. ಬಿಸಿಗಾಳಿ ಮೇಲೇರಿದಂತೆಲ್ಲಾ ತಂಪಾಗತೊಡಗಿ ಅದರೊಳಗಿನ ತೇವಾಂಶವು ಒತ್ತಾಗತೊಡಗಿ ಮೋಡಗಳ ನಿರ್ಮಾಣವಾಗುವುದು.
  • ಈ ರೀತಿಯ ಮೋಡವು ಆಲ್ಟೋಸ್ಟ್ರೇಟಸ್ ಮೋಡವೆಂಬ ಹೆಸರು ಪಡೆದಿದೆ. ಇಂತಹ ಮೋಡಗಳಿಂದ ಮಳೆಯು ಬಿಟ್ಟೂಬಿಡದೆ ಹಲವು ಗಂಟೆಗಳಿಂದ ಹಲವು ದಿನಗಳವರೆಗೆ ಬೀಳುತ್ತದೆ. ಸಂಧಿಸ್ಥಾನದ ತಂಪುಮುಖದಲ್ಲಿ ತಂಪುಗಾಳಿಯು ಬಿಸಿಗಾಳಿಯನ್ನು ತೀವ್ರಗತಿಯಲ್ಲಿ ಮೇಲಕ್ಕೆ ದಬ್ಬಿ ಸಾಂದ್ರ ಮಳೆಮೋಡಗಳ ನಿರ್ಮಾಣದಲ್ಲಿ ಸಹಕರಿಸುವುದು. ಈ ರೀತಿಯ ಮೋಡವು ಕ್ಯುಮುಲೋನಿಂಬಸ್ ಮೋಡವೆಂದು ಕರೆಯಿಸಿಕೊಳ್ಳುವುದು. ಈ ಮೋಡಗಳಿಂದ ಬೀಳುವ ಮಳೆಯು ಸಾಮಾನ್ಯವಾಗಿ ಭಾರೀ ಮಳೆಯಾಗಿದ್ದು ಸಣ್ಣ ಅವಧಿಯದಾಗಿರುವುದು.

ಮಳೆಯಲ್ಲಿ ಮಾನವನ ಪ್ರಭಾವ

[ಬದಲಾಯಿಸಿ]
ಭಾರತದ ಕೋಲ್ಕಾಟಾ ನಗರದ ರಸ್ತೆಯೊಂದರ ಮೇಲೆ ಬೀಳುತ್ತಿರುವ ಮಳೆ
  • ಮಾನವನಿರ್ಮಿತ ಯಂತ್ರಗಳು ಮತ್ತು ಇತರ ಪ್ರದೂಷಣ ಸಾಧನಗಳಿಂದ ಸೂಕ್ಷ್ಮ ಗಾತ್ರದ ವಸ್ತುಕಣಗಳು ಮೋಡದ ಉತ್ಪತ್ತಿಯಲ್ಲಿ ಪಾತ್ರ ವಹಿಸುವುವು. ಒಂದು ವಿಶಿಷ್ಟ ಸಂಗತಿಯೆಂದರೆ ವಾಹನಗಳ ದಟ್ಟಣೆಯಿಂದಾಗಿ ವಾರದ ಮೊದಲ ಭಾಗದಲ್ಲಿ ಮೋಡಗಳ ರಚನೆಯುಂಟಾಗಿ ವಾರಾಂತ್ಯದಲ್ಲಿ ಅವು ಮಳೆ ಸುರಿಸುವ ಸಂಭವ ಹೆಚ್ಚಾಗಿರುತ್ತದೆ.
  • ಇದಕ್ಕೊಂದು ಉದಾಹರಣೆಯೆಂದರೆ ಯು.ಎಸ್.ಎ ನ ಅತಿ ನಿಬಿಡ ಜನವಸತಿ ಮತ್ತು ವಾಹನದಟ್ಟಣೆಯುಳ್ಳ ಪೂರ್ವ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಳುವ ಮಳೆಯ ಪ್ರಮಾಣವು ಗಣನೀಯವಾಗಿ ಹೆಚ್ಚು. ನೆಲದ ಮೇಲೆ ಹಸಿರು ಹೆಚ್ಚಿದ್ದಷ್ಟೂ ಮೋಡಗಳ ಉತ್ಪತ್ತಿ ಹೆಚ್ಚಿ ತನ್ಮೂಲಕ ಮಳೆಯ ಪ್ರಮಾಣವೂ ಅಧಿಕವಾಗಿರುತ್ತದೆ. ಆದರೆ ಮಾನವನು ಅವಿರತವಾಗಿ ನಡೆಸಿಕೊಂಡು ಬಂದಿರುವ ಅರಣ್ಯನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯತೊಡಗಿದೆ.

ಮಳೆಯ ವರ್ಗೀಕರಣ

[ಬದಲಾಯಿಸಿ]

ಪ್ರತಿ ಗಂಟೆಗೆ ಬೀಳುವ ಪ್ರಮಾಣಕ್ಕೆ ಅನುಗುಣವಾಗಿ ಮಳೆಯನ್ನು ಕೆಳಕಂಡಂತೆ ವರ್ಗೀಕರಿಸಬಹುದು.

  1. ತುಂತುರು ಮಳೆ - ಗಂಟೆಗೆ ೦.೨೫ ಮಿಲಿಮೀಟರಿಗಿಂತ ಕಡಿಮೆ ಪ್ರಮಾಣ.
  2. ಹಗುರ ಮಳೆ - ಗಂಟೆಗೆ ೦.೨೫ ಮಿಲಿಮೀಟರಿನಿಂದ ೧.೦ ಮಿಲಿಮೀಟರ್ ವರಗೆ.
  3. ಸಾಧಾರಣ ಮಳೆ - ಗಂಟೆಗೆ ೧.೦ ಮಿಲಿಮೀಟರಿನಿಂದ ೪.೦ ಮಿಲಿಮೀಟರ್ ವರಗೆ.
  4. ಭಾರೀ ಮಳೆ - ಗಂಟೆಗೆ ೪.೦ ಮಿಲಿಮೀಟರಿನಿಂದ ೧೬.೦ ಮಿಲಿಮೀಟರ್ ವರಗೆ.
  5. ಅತಿ ಭಾರೀ ಮಳೆ - ಗಂಟೆಗೆ ೧೬.೦ ಮಿಲಿಮೀಟರಿನಿಂದ ೫೦.೦ ಮಿಲಿಮೀಟರ್ ವರಗೆ.
  6. ಅತ್ಯಂತ ಭಾರೀ ಮಳೆ - ಗಂಟೆಗೆ ೫೦.೦ ಮಿಲಿಮೀಟರಿಗಿಂತ ಹೆಚ್ಚು.

ಮಳೆಯ ಲಕ್ಷಣಗಳು

[ಬದಲಾಯಿಸಿ]
ಮಳೆಯ ಇನ್ನೊಂದು ನೋಟ
  • ಸಾಮಾನ್ಯವಾಗಿ ಮಳೆಯ ಸಣ್ಣ ಹನಿಗಳು ಪೂರ್ಣ ಗೋಲಾಕಾರದಲ್ಲಿರುತ್ತವೆ. ದೊಡ್ಡ ಹನಿಗಳು ಬುಡದಲ್ಲಿ ಮಟ್ಟಸವಾಗಿರುತ್ತವೆ. ಅತಿ ದೊಡ್ಡ ಹನಿಗಳು ಪ್ಯಾರಾಚೂಟ್ ಆಕಾರದಲ್ಲಿರುವುವು. ಮಳೆಯ ಹನಿಗಳ ಗಾತ್ರವು ಸಾಮಾನ್ಯವಾಗಿ ೧ ರಿಂದ ೨ ಮಿಲಿಮೀಟರ್ ಗಳಷ್ಟು. ೫ ಮಿ.ಮೀ. ಗಿಂತ ದೊಡ್ಡ ಹನಿಗಳು ಅಸ್ಥಿರಗೊಂಡು ಒಡೆದು ಸಣ್ಣಸಣ್ಣ ಹನಿಗಳಾಗಿ ಮಾರ್ಪಡುತ್ತವೆ.
  • ಈವರೆಗೆ ದಾಖಲಾಗಿರುವಂತೆ ೨೦೦೪ರಲ್ಲಿ ಬ್ರೆಜಿಲ್ ಮತ್ತು ಮಾರ್ಷಲ್ ದ್ವೀಪಗಳಲ್ಲಿ ೧೦ ಮಿ.ಮೀ. ಗಾತ್ರದ ಭಾರೀ ಮಳೆಹನಿಗಳು ಬಿದ್ದುವು. ಆದರೆ ಇಂತಹ ವಿದ್ಯಮಾನ ಬಲು ಅಪರೂಪ. ಸಮುದ್ರಮಟ್ಟದಲ್ಲಿ ಮತ್ತು ಬೀಸುಗಾಳಿಯಿಲ್ಲದಿರುವಾಗ ೦.೫ ಮಿ.ಮೀ. ಮಳೆಹನಿಯು ನೆಲಕ್ಕೆ ಸೆಕೆಂಡಿಗೆ ೨ ಮೀಟರ್ ವೇಗದಲ್ಲಿ ಇಳಿದರೆ ೫ ಮಿ.ಮೀ. ಗಾತ್ರದ ಹನಿಯು ಸೆಕೆಂಡಿಗೆ ೯ ಮೀಟರ್ ವೇಗದಲ್ಲಿ ಅಪ್ಪಳಿಸುವುದು.
  • ನೀರಿನ ಮೇಲೆ ಮಳೆಹನಿಯು ಬಿದ್ದಾಗ ಉಂಟಾಗುವ ವಿಶಿಷ್ಟ ಸದ್ದಿಗೆ ನೀರಿನಡಿಯಲ್ಲಿ ಗಾಳಿಯ ಗುಳ್ಳೆಗಳ ಕಂಪನವೇ ಕಾರಣವಾಗಿರುತ್ತದೆ. ವಾತಾವರಣದಲ್ಲಿನ ಇಂಗಾಲಾಮ್ಲವು ಮಳೆಹನಿಗಳಲ್ಲಿ ಕೊಂಚ ಪ್ರಮಾಣದಲ್ಲಿ ಕರಗಿ ಕಾರ್ಬಾನಿಕ್ ಆಮ್ಲದ ಅಲ್ಪ ಅಂಶವನ್ನು ಮಳೆಯ ನೀರಿನಲ್ಲಿ ಸೇರಿಸುತ್ತದೆ. ಕೆಲ ಮರುಭೂಮಿ ಪ್ರದೇಶಗಳಲ್ಲಿ ಧೂಳಿನಲ್ಲಿ ಕೊಂಚ ಕ್ಯಾಲ್ಸಿಯಮ್ ಕಾರ್ಬೊನೇಟ್ ಅಂಶವು ಬೆರೆತಿರುವುದರಿಂದ ಅಲ್ಲಿ ಮಳೆಯಾದರೆ ಆ ನೀರು ಕೊಂಚ ಮಟ್ಟಿಗೆ ಕ್ಷಾರಯುಕ್ತವಾಗಿರುವ ಸಂಭವವಿದೆ.

ಮಳೆಯ ಮಾಪನ

[ಬದಲಾಯಿಸಿ]
ಸಂಗ್ರಹ ಮಾಪಕ
ದಾಖಲಿಸುವ ಮಾಪಕ
  • ಮಳೆಯ ಪ್ರಮಾಣನ್ನು ಮಳೆಮಾಪಕದ (ರೆಯ್ನ್ ಗೇಜ್) ಮೂಲಕ ಅಳೆಯಲಾಗುತ್ತದೆ. ಮಟ್ಟಸ ನೆಲದ ಮೇಲಿರಿಸಲಾದ ಈ ಮಾಪಕದಲ್ಲಿ ಸಂಗ್ರಹವಾದ ನೀರಿನ ಆಳವನ್ನು ಬಿದ್ದ ಮಳೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಮಳೆಮಾಪಕಗಳನ್ನು ನೆಲದಿಂದ ಸಮಾನ ಮತ್ತು ನಿಗದಿತ ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಮಳೆಮಾಪಕಗಳಲ್ಲಿ ಎರಡು ವಿಧ.
  1. ಸಂಗ್ರಹ ಮಾಪಕ (ಸ್ಟೋರೇಜ್ ರೆಯ್ನ್ ಗೇಜ್) ಮತ್ತು
  2. ದಾಖಲಿಸುವ ಮಾಪಕ (ಟಿಪ್ಪಿಂಗ್ ಬಕೆಟ್ ರೆಕಾರ್ಡಿಂಗ್ ರೆಯ್ನ್ ಗೇಜ್). ಸಂಗ್ರಹ ಮಾಪಕವನ್ನು ದಿನವಹಿ ಅಥವಾ ಮಾಹೆಯಾನ ಬೀಳುವ ಮಳೆಯ ಪ್ರಮಾಣವನ್ನು ಅಳೆಯಲು ಉಪಯೋಗಿಸಲಾಗುವುದು. ದಾಖಲಿಸುವ ಮಾಪಕವನ್ನು ಮಳೆಯ ತೀವ್ರತೆಯನ್ನು ಅಳೆಯಲು ಬಳಸುವರು.

ಕೃಷಿಯ ಮೇಲೆ ಮಳೆಯ ಪರಿಣಾಮ

[ಬದಲಾಯಿಸಿ]
  • ಎಲ್ಲಾ ಸಸ್ಯರಾಜಿಗಳಿಗೂ ನೀರಿನ ಅವಶ್ಯಕತೆಯಿದ್ದೇ ಇರುವುದರಿಂದ ಮಳೆಯು ಸಸ್ಯಗಳ ಬೆಳವಣಿಗೆಯ ಮೇಲೆ ಅತಿ ಮುಖ್ಯ ಪರಿಣಾಮವನ್ನು ಬೀರುತ್ತದೆ. ಆದರೆ ಸಸ್ಯಗಳು ನಿಗದಿತ ಪ್ರಮಾಣ ಮತ್ತು ನಿಯಮಿತ ಅವಧಿಯಲ್ಲಿ ನೀರನ್ನು ಬಯಸುವುದರಿಂದ ಅತಿ ಕಡಿಮೆ ಅಥವಾ ಅತಿ ಹೆಚ್ಚು ಮಳೆ ಎರಡೂ ಸಸ್ಯಗಳಿಗೆ ಹಾನಿಕರ. ಬರದ ವಾತಾವರಣವು ಸಸ್ಯಸಂಕುಲವನ್ನು ಪೂರ್ಣವಾಗಿ ನಾಶಮಾಡಿದರೆ, ಅತಿ ಮಳೆಯು ಸಸ್ಯಗಳಲ್ಲಿ ರೋಗಗಳನ್ನುಂಟುಮಾಡಬಹುದು ಮತ್ತು ಹಾನಿಕಾರಕ ಶಿಲೀಂಧ್ರಗಳ ಉತ್ಪತ್ತಿಗೆ ಕಾರಣವಾಗುವುದು.
  • ಪ್ರತಿ ಜಾತಿಯ ಗಿಡವು ನಿಗದಿತ ಪ್ರಮಾಣದ ನೀರಿನ ಆಸರೆಯಲ್ಲಿ ಮಾತ್ರ ಉತ್ತಮ ಬೆಳವಣಿಗೆ ತೋರುವುದು. ಕಳ್ಳಿ ಗಿಡಕ್ಕೆ ಅತ್ಯಲ್ಪ ಪ್ರಮಾಣದ ನೀರು ಸಾಕಾದರೆ ಉಷ್ಣವಲಯದ ಸಸ್ಯಗಳು ಬದುಕುಳಿಯಲು ವರ್ಷಕ್ಕೆ ನೂರಾರು ಅಂಗುಲ ಮಳೆಯನ್ನು ಬಯಸುತ್ತವೆ.

ವಿಶ್ವದ ಎಲ್ಲಾ ದೇಶಗಳು ವ್ಯವಸಾಯಕ್ಕಾಗಿ ಮಳೆಯನ್ನು ನಾನಾ ಪ್ರಮಾಣದಲ್ಲಿ ಅವಲಂಬಿಸಿವೆ.

  • ಭಾರತದಲ್ಲಿ ಕೃಷಿಯು ಮಳೆಯ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಹತ್ತಿ, ಬತ್ತ, ಎಣ್ಣೆಬೀಜಗಳ ಬೆಳೆಗಳು ಪೂರ್ಣವಾಗಿ ಮಳೆಯನ್ನೇ ನೆಚ್ಚಿವೆ. ಮಳೆಗಾಲದ ಆರಂಭವು ಕೆಲವೇ ದಿನಗಳಷ್ಟು ವ್ಯತ್ಯಾಸವಾದರೂ ದೇಶದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾವುಂಟಾಗುವುದು.

ಮಳೆ ಮತ್ತು ಸಂಸ್ಕೃತಿ

[ಬದಲಾಯಿಸಿ]
  • ವಿಶ್ವದಲ್ಲಿ ಮಳೆಯನ್ನು ಪರಿಗಣಿಸುವ ರೀತಿ ಬೇರೆಬೇರೆಯದಾಗಿದೆ. ಸಮಶೀತೋಷ್ಣ ಪ್ರದೇಶವಾದ ಯುರೋಪಿನಲ್ಲಿ ಸಾಂಪ್ರದಾಯಿಕವಾಗಿ ಮಳೆಯನ್ನು ಅನಪೇಕ್ಷಿತ ಮತ್ತು ದುಃಖದ ವಿದ್ಯಮಾನವೆಂಬಂತೆ ಕಾಣುವರು. ಆದರೆ ಆಫ್ರಿಕಾದ ಕೆಲಭಾಗಗಳು, ಆಸ್ಟ್ರೇಲಿಯ, ಭಾರತ ಮತ್ತು ಮಧ್ಯಪ್ರಾಚ್ಯದಂತಹ ಬಿಸಿಲು ಹೆಚ್ಚಿರುವ ಹಾಗೂ ಒಣಪ್ರದೇಶಗಳಲ್ಲಿ ಮಳೆಯನ್ನು ಆನಂದ ಮತ್ತು ಉಲ್ಲಾಸದಿಂದ ಸ್ವಾಗತಿಸಲಾಗುತ್ತದೆ.
  • ಬೋಟ್ಸ್ವಾನಾ ಕಲಹರಿ ಮರುಭೂಮಿಯಲ್ಲಿನ ದೇಶ. ಇಲ್ಲಿ ಮಳೆ ಎಂಬರ್ಥ ಕೊಡುವ ಪುಲಾ ಎಂಬ ಪದವನ್ನೇ ವಿನಿಮಯದ (ನಾಣ್ಯ) ಹೆಸರನ್ನಾಗಿ ಇರಿಸಲಾಗಿದೆ. ಬಹಳ ಜನರು ಮಳೆ ಬಿದ್ದಾಗ ಪಸರಿಸುವ ಮಣ್ಣಿನ ವಾಸನೆಯನ್ನು ಮೆಚ್ಚುವರು. ಈ ವಾಸನೆಯ ಮೂಲ ಪೆಟ್ರಿಕೋರ್ ಎಂಬ ಸಸ್ಯಜನ್ಯ ತೈಲ. ಸಸ್ಯದಿಂದ ಉತ್ಪತ್ತಿಯಾದ ಈ ತೈಲವು ಮಣ್ಣು ಮತ್ತು ಕಲ್ಲುಗಳಿಂದ ಹೀರಲ್ಪಟ್ಟು ಮಳೆ ಬಿದ್ದಾಗ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

ವಿಶ್ವದಲ್ಲಿ ಮಳೆಯ ಪ್ರಮಾಣ

[ಬದಲಾಯಿಸಿ]
  • ಯೂರೋಪಿನಲ್ಲಿ ಯು.ಕೆ. ದೇಶವು ಹೆಚ್ಚಾಗಿ ಮಳೆಯನ್ನು ಕಾಣುತ್ತದೆ. ಇಲ್ಲಿ ವರ್ಷದಲ್ಲಿ ಮಳೆ ಬೀಳುವ ದಿನಗಳು ಸಹ ಅಧಿಕ. ಗಲ್ಫ್ ಸ್ಟ್ರೀಮ್ ಸಾಗರಪ್ರವಾಹವನ್ನು ಅನುಸರಿಸಿ ಬರುವ ನೈಋತ್ಯ ವಾಣಿಜ್ಯ ಮಾರುತಗಳು ಇದಕ್ಕೆ ಕಾರಣ. ಇಲ್ಲಿನ ಕರಾವಳಿಯಲ್ಲಿ ವಾರ್ಷಿಕ ೪೦ ಅಂಗುಲದಿಂದ ೧೦೦ ಅಂಗುಲದವರೆಗೆ ಮಳೆ ಬೀಳುತ್ತದೆ. ಆದರೆ ಬೆಲ್ಜಿಯಮ್ ನ ಬರ್ಗೆನ್ ನಗರವು ಯುರೋಪಿನಲ್ಲಿ ಅತ್ಯಧಿಕ ಸರಾಸರಿ ವಾರ್ಷಿಕ ಮಳೆ ( ೮೮ ಅಂಗುಲ) ಬೀಳುವ ಪ್ರದೇಶವಾಗಿದೆ.
  • ಶಾಂತಸಾಗರಹವಾಯ್ ದ್ವೀಪದಲ್ಲಿ ವಾರ್ಷಿಕ ೧೦೦೦೦ ಮಿ.ಮೀ. ಗಿಂತ ಹೆಚ್ಚು ಸರಾಸರಿ ಮಳೆ ಬೀಳುತ್ತದೆ. ದಕ್ಷಿಣ ಅಮೆರಿಕಅಮೆಜಾನ್ ಮಳೆಕಾಡಿನಲ್ಲಿ ಮಳೆಯ ಹನಿಗಳ ನಡುವಿನ ಅಂತರ ತೀರಾ ಕಡಿಮೆಯಾಗಿದ್ದು ಕೆಲವೊಮ್ಮೆ ನೀರಿನ ಹಾಳೆಯಂತೆ ಮಳೆ ಬೀಳುವುದು. ಇಲ್ಲಿ ಪ್ರತಿದಿನ ಅಪರಾಹ್ನದ ಸಮಯದಲ್ಲಿ ಮಳೆ ಸಾಮಾನ್ಯ.
  • ಯೆಮೆನ್ ದ ಮರುಭೂಮಿಯಲ್ಲಿ ವಿಶ್ವದಲ್ಲಿಯೇ ಅತ್ಯಲ್ಪ ಮಳೆ ಬೀಳುತ್ತದೆ. ಭಾರತದ ಮೇಘಾಲಯಮಾಸಿನ್ರಾಮ್ ಮತ್ತು ಚಿರಾಪುಂಜಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಸರಾಸರಿ ವಾರ್ಷಿಕ ಮಳೆ ಬೀಳುವ ಸ್ಥಳಗಳೆಂದು ಹೆಸರಾಗಿವೆ. ದಕ್ಷಿಣ ಭಾರತದಲ್ಲಿ ಕರ್ನಾಟಕಆಗುಂಬೆ ಅತಿ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ.
ಮಳೆಯ ಮೋಡ ಮತ್ತು ಶುಭ್ರ ಆಗಸ ಒಟ್ಟಾಗಿರುವ ಒಂದು ವಿಹಂಗಮ ದೃಶ್ಯ

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಳೆ&oldid=1264881" ಇಂದ ಪಡೆಯಲ್ಪಟ್ಟಿದೆ