ಆಗುಂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Agumbe - ಆಗುಂಬೆ

Agumbe - ಆಗುಂಬೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಶಿವಮೊಗ್ಗ
ನಿರ್ದೇಶಾಂಕಗಳು 13.5087° N 75.0959° E
ವಿಸ್ತಾರ
 - ಎತ್ತರ
 km²
 - 826 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577 411
 - +08181
 - KA-14

ಆಗುಂಬೆ ಕರ್ನಾಟಕಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಒಂದು ಪ್ರವಾಸಿ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ. ಆದರೆ ಮಳೆಯೇ ಮಲೆನಾಡಿನ ಜೀವಾಳ. ಮಳೆಗಾಲದಲ್ಲಿ ಕಾದಿದ್ದು, ಸೂರ್ಯಾಸ್ತವನ್ನು ಕಾಣುವುದೇ ಒಂದು ಸಡಗರದ ಸನ್ನಿವೇಶ.

ಭೌಗೋಳಿಕ[ಬದಲಾಯಿಸಿ]

ಆಗುಂಬೆ ಶಿವಮೊಗ್ಗದಿಂದ ಸುಮಾರು 50 ಮೈಲು ಪಶ್ಚಿಮಕ್ಕೂ ಅರಬ್ಬೀ ಸಮುದ್ರದ ದಕ್ಷಿಣ ಕನ್ನಡ ಜಿಲ್ಲೆಯ ದಡದಿಂದ ಸುಮಾರು 30 ಮೈಲು ಪೂರ್ವಕ್ಕೂ ಇರುವ ಸಹ್ಯಾದ್ರಿಯ ಅತ್ಯುನ್ನತ ಶ್ರೇಣಿಗಳಲ್ಲೊಂದು (750 05' ಪೂ. ರೇ. 300 31' ಉ.ಅ.). ಎತ್ತರ 2,314'. ಪಶ್ಚಿಮದ ತಳದಲ್ಲಿ ಸೋಮೇಶ್ವರ ಎಂಬ ಊರಿದೆ. ಪೂರ್ವದಲ್ಲಿ ಆಗುಂಬೆಯ ಪೇಟೆ ಇದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಾಗಿಯೆ ಆಗುಂಬೆಯನ್ನು "ದಕ್ಷಿಣದ ಚಿರಾಪುಂಜಿ" ಎಂದೂ ಕರೆಯುತ್ತಾರೆ[೧]. ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನ ಕೇಂದ್ರ ಆಗುಂಬೆಯಲ್ಲಿದೆ. ಹೆಸರುವಾಸಿ ಉರಗತಜ್ಞ ರೊಮುಲುಸ್ ವಿಟೆಕರ್ ಆಗುಂಬೆಯನ್ನು "ಕಾಳಿಂಗ ಸರ್ಪಗಳ ರಾಜಧಾನಿ" ಎಂದು ಕರೆದಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]ಕರ್ನಾಟಕದ ಅತ್ಯಂತ ದಟ್ಟವಾದ ಅರಣ್ಯಸಿರಿಯನ್ನು ಇಲ್ಲಿ ನೋಡಬಹುದು. ಘಟ್ಟದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಇಲ್ಲಿಯ 200'-300' ಎತ್ತರದ ವೃಕ್ಷಗಳನ್ನು ಕಾಣಬಹುದು. ಇಲ್ಲಿಯ ಪ್ರದೇಶವೆಲ್ಲ ಜಿಗಣಿ ಜಾತಿಯ ಇಂಬುಳ ಎಂಬ ರಕ್ತಹೀರುವ ಕೀಟಗಳಿಂದ ತುಂಬಿದೆ. ಮರಚಾರಟೆಗಳ ಇಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಸಹ್ಯಾದ್ರಿಶ್ರೇಣಿಗಳಿಂದ ಮೇಲಿಂದ ಕೆಳಕ್ಕೆ ಹರಿಯುವ ಜಲಪಾತಗಳನ್ನು ಇಲ್ಲಿ ಕಾಣಬಹುದು.

ಹವಾಮಾನ[ಬದಲಾಯಿಸಿ]

A Panorama of Agumbe

ಮಳೆಗಾಲದಲ್ಲಿ ಸಿಡಿಲು, ಗುಡುಗು, ಮಿಂಚು, ಮಳೆಗಳಿಂದ ಆಗುಂಬೆ ಭಯಂಕರವೆನಿಸುತ್ತದೆ. ದಟ್ಟಕಾಡಿನಿಂದಲೂ ಮಳೆಮೋಡಗಳ ಆವರಣದಿಂದಲೂ ಮಳೆಗಾಲ ಮೂರು ತಿಂಗಳು ಇಲ್ಲಿ ಸೂರ್ಯನ ಬಿಸಿಲು ಬೀಳುವುದು ತುಂಬ ಅಪೂರ್ವ.

ಇತಿಹಾಸ[ಬದಲಾಯಿಸಿ]

ಕಳೆದ ಶತಮಾನದ ಆರಂಭದಲ್ಲಿ ಇದು ಒಂದು ಪ್ರಮುಖ ಊರು ಆಗಿತ್ತು. ಇದು ಆಗಿನ ಮೈಸೂರು ರಾಜ್ಯಕ್ಕೆ ಸೇರಿತ್ತು, ಮತ್ತು ಬ್ರಿಟೀಷ್-ಮುಂಬಯಿ ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಮಂಗಳೂರು ನಡುವಿನ ಕೊಂಡಿಯಾಗಿತ್ತು. ಆಗಿನ ಕಾಲದಲ್ಲಿ ಮಂಗಳೂರಿನಿಂದ ಮುಂಬಯಿಗೆ ಹೋಗುವವರು ಆಗುಂಬೆ ಮಾರ್ಗವಾಗಿ ಹೋಗುತ್ತಿದ್ದರು. ಪ್ರಯಾಣಿಕರು ಎತ್ತಿನ ಗಾಡಿಗಳಲ್ಲಿ ಬಂದು ರಾತ್ರಿ ತಂಗಿ ಮುಂಬಯಿ ಅಥವಾ ಮಂಗಳೂರಿಗೆ ಪ್ರಯಾಣ ಮುಂದುವರಿಸುತ್ತಿದ್ದರು. ನಂತರ ಮೈಸೂರಿನ ದೀವಾನ್ ಪಿ.ಎನ್.ಕೃಷ್ಣಮೂರ್ತಿಯವರು ಒಂದು ದೊಡ್ಡ ಪ್ರಯಾಣಿಕರ ತಂಗುದಾಣವನ್ನು 1906ರಲ್ಲಿ ಕಟ್ಟಿಸಿದರು. ಪ್ರಯಾಣಿಕರಿಗೆ ಉಚಿತ ಊಟ ವಸತಿಗಳನ್ನು ಒದಗಿಸಿದರು. ಕಲ್ಲು ಗಾರೆಗಳಿಂದ ನಿರ್ಮಿಸಿದ ಈ ತಂಗುದಾಣ ಇಂದು ಚಾವಣಿಯನ್ನು ಕಳೆದುಕೊಂಡು ಶಿಥಿಲವಾಗಿ ನಿಂತಿದೆ. ನಂತರದ ದಿನಗಳಲ್ಲಿ ಕಲ್ಲಿದ್ದಲಿನಿಂದ ಓಡುವ 7 ಆಸನಗಳ ಮೋಟಾರು ವಾಹನಗಳು ಬಂದವು. ಜನರು ಆಗುಂಬೆಯಿಂದ ಈ ವಾಹನ ಬಳಸಿ ಹರಿಹರಕ್ಕೆ ಹೋಗಿ ನಂತರ ಅಲ್ಲಿಂದ ರೈಲಿನಲ್ಲಿ ಮುಂಬಯಿಗೆ ತೆರಳುತ್ತಿದ್ದರು. ನಂತರದ ದಿನಗಳಲ್ಲಿ 14 ತೀಕ್ಷ್ಣ ತಿರುವುಗಳನ್ನು ಹೊಂದಿದ ಘಾಟಿಯನ್ನು ನಿರ್ಮಿಸಲಾಯಿತು. ಆಗುಂಬೆ ಮತ್ತು ಸೋಮೇಶ್ವರದ ಮಧ್ಯೆ ಬಾಡಿಗೆ ಕಾರು (ಟಾಕ್ಸಿ) ಉದ್ಯಮ ಪ್ರಾರಂಭವಾಯಿತು. ರೈಲ್ವೇ ಹಳಿಗಳ ಕೆಳಗೆ ಬಳಸುವ ಮರದ ಬಾರಾಟಿಗೆಗಳು ಆಗುಂಬೆಯ ಕಾಡುಗಳಿಂದ ಹೋಗುತ್ತಿದ್ದವು. ಅದು ಒಂದು ಉದ್ಯಮವಾಗಿ ಬೆಳೆಯುತ್ತಿದ್ದಂತೆ ಕಣ್ಣು ಬಿಟ್ಟ ಸರ್ಕಾರ ಅದನ್ನು ಮಟ್ಟ ಹಾಕಿತು.ಮಿನಿ ಬಸ್ಸುಗಳನ್ನು ಪ್ರಾರಂಭಿಸಿದ ಮೇಲೆ ಟ್ಯಾಕ್ಸಿ ಉದ್ಯಮ ನೆಲಕಚ್ಚಿತು. ಆಗುಂಬೆಯ ಕಾಡುಗಳಲ್ಲಿ ಬೆತ್ತ ಹೇರಳವಾಗಿ ದೊರೆಯುತ್ತಿದ್ದರಿಂದ ಬೆತ್ತದ ಉದ್ಯಮಗಳು ಪ್ರಾರಂಭವಾದವು.

ಪೌರಾಣಿಕ[ಬದಲಾಯಿಸಿ]

ಆಗುಂಬೆ ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆ ಇದೆ. ಅವನು ತನ್ನ ತಂದೆಯ ಮರಣಕ್ಕೆ ಕಾರಣನಾದ ಕಾರ್ತವೀರ್ಯಾರ್ಜುನನನ್ನು ಈಶ್ವರದತ್ತವಾದ ತನ್ನ ಪರಶುವಿಗೆ ಬಲಿಗೊಟ್ಟು, ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಿದನಂತೆ. ಈ ಕ್ಷತ್ರಿಯಹತ್ಯೆಯ ಪಾಪವನ್ನು ಕಳೆದುಕೊಳ್ಳಲು ಅಶ್ವಮೇಧಯಾಗವನ್ನು ಮಾಡಿ, ಆತ ಸಮಸ್ತ ಭೂಮಿಯನ್ನು ಕಶ್ಯಪ ಋಷಿಗೆ ಧಾರೆಯೆರೆದು ದಾನಕೊಟ್ಟನಂತೆ. ಆಗ ಪರಶುರಾಮನಿಗೆ ಇರಲು ಸ್ಥಳವಿಲ್ಲದೆ ಆಗುಂಬೆಯ ಸಹ್ಯಾದ್ರಿಶಿಖರದಲ್ಲಿ ನಿಂತು ಎದುರುಗಡೆಯ ಸಮುದ್ರಕ್ಕೆ ಈ ಪರಶು ಹೋದಷ್ಟು ದೂರ ತನಗೆ ಸ್ಥಳಕೊಡು ಎಂದು ಪ್ರಾರ್ಥಿಸಿ ತನ್ನ ಕೊಡಲಿಯನ್ನು ಎಸೆದನಂತೆ. ಸಮುದ್ರ ಸಹ್ಯಾದ್ರಿಯಿಂದ ಹಿಂದಕ್ಕೆ ಉರುಳಿತಂತೆ. ಅಂದಿನಿಂದ ಆ ಭಾಗದ ಪಶ್ಚಿಮ ಕರಾವಳಿಯೆಲ್ಲ ಪರಶುರಾಮಕ್ಷೇತ್ರವೆಂದು ಹೆಸರಾಯಿತಂತೆ. ಹೀಗೆ ಪೌರಾಣಿಕವಾಗಿಯೂ ಆಗುಂಬೆಗೆ ಮಹತ್ವವಿದೆ.

ಸೂರ್ಯಾಸ್ತಮಾನ[ಬದಲಾಯಿಸಿ]

ಆಗುಂಬೆಯ ಪೇಟೆಯಿಂದ ಸುಮಾರು ಒಂದು ಮೈಲು ಪಶ್ಚಿಮದಲ್ಲಿ ಆಗುಂಬೆಯ ಜಗತ್ಪ್ರಸಿದ್ಧ ಸೂರ್ಯಾಸ್ತಮಾನ ದೃಶ್ಯವನ್ನು ಕಾಣಲು ಬೆಟ್ಟದ ನೆತ್ತಿಯಲ್ಲಿ ಒಂದು ರಂಗಸ್ಥಳವನ್ನು ಮಾಡಿದ್ದಾರೆ. ವರ್ಷವಿಡೀ-ಮಳೆಗಾಲ ಹೊರತು-ಈ ಭೂಮದೃಶ್ಯವನ್ನು ನೋಡಲು ದೇಶೀಯ, ವಿದೇಶೀಯ ಪ್ರವಾಸಿಗಳು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಮೋಡವಲ್ಲದ ಶುಭ್ರ ಸಂಜೆಗಳಲ್ಲಿ ಸೂರ್ಯಾಸ್ತವನ್ನು ನೋಡಲು ಚೆನ್ನ. ಈ ರಂಗಸ್ಥಳದಿಂದ ಇದ್ದಕ್ಕಿದ್ದಂತೆ ಸುಮಾರು 3,000' ಪಾತಾಳ ದರ್ಶನ ಮೈನವಿರೇಳಿಸುವಂಥದು. ಕೇವಲ ಆಳ ಮಾತ್ರವಲ್ಲ, ಪಡುಗಡಲ ತಡಿಯವರೆಗಿನ, ಅಲ್ಲಿಂದ ದಿಗಂತದ ಅಂಚಿನವರೆಗಿನ ಸುಮಾರು 30 ಮೈಲುಗಳ ವಿಸ್ತಾರ ಒಮ್ಮೆಗೇ ಕಣ್ಣುಗಳನ್ನು ತುಂಬುತ್ತದೆ. ಆ ಕ್ಷಣದಲ್ಲಿ ಆಗುವ ಅನುಭವ ಮಾತಿಗೆ ಮೀರಿದುದು; ಮೌನವಾಗಿ ಅನುಭವಿಸುವಂಥದು. ಸೂರ್ಯಾಸ್ತಮಾನದ ಸುಂದರದೃಶ್ಯವನ್ನು ನೋಡಲು ರಂಗಸ್ಥಳದಲ್ಲಿ ಸಂಜೆಯ ಹೊತ್ತು ಕುಳಿತು ಪ್ರಕೃತಿ ತೋರುವ ವಿವಿಧವೇಷಗಳನ್ನು ಕಾಣಬೇಕು. ನಿಸರ್ಗ ತನ್ನ ನೂರಾರು ಸೀರೆಗಳನ್ನು ಉಟ್ಟು ಕಳಚುತ್ತಿರುತ್ತದೆ. ಅರಬ್ಬೀ ಸಮುದ್ರದಿಂದ ಹುಟ್ಟಿ ಸಾವಿರಾರು ಬೆಳ್ಳಿಮೋಡಗಳು ಬೆಳ್ಳಿಯ ವಿಮಾನಗಳಂತೆ ತೇಲಿ ಬರುತ್ತಿರುತ್ತವೆ. ಸೂರ್ಯನ ಬಿಸಿಲು ಪ್ರಖರವಾಗಿರುವ ಮಧ್ಯಾಹ್ನದ ಹೊತ್ತು ಸಮುದ್ರದ ಕಡೆಗೆ ನೋಡಬೇಕು. ಸಾವಿರಾರು ಮೈಲು ಅಗಲದ ಪಡುಗಡಲು ಕೇವಲ 2-3 ಅಗಲವಾಗಿ ದಿಗಂತರೇಖೆಯಲ್ಲಿ ಒಂದಾಗುವ ಅದ್ಭುತವನ್ನು ಕಾಣಬಹುದು. ಅಲೆಗಳಿಂದ ಸಂಚಲಿತವಾದ ಸಮುದ್ರ ಏನೋ ಜೀವಂತವಸ್ತು ಅತ್ತಿತ್ತ ಅಲುಗಾಡಿದಂತೆ ಕಾಣುವ ದೃಶ್ಯ ವಿಸ್ಮಯಕರವಾದುದು. ಸಮುದ್ರದಲ್ಲಿ ಓಡಾಡುವ ಬಿಳಿಯ ಹಾಯಿ ಬಿಚ್ಚಿದ ದೊಡ್ಡ ದೊಡ್ಡ ದೋಣಿಗಳನ್ನೂ ಹಡಗುಗಳನ್ನೂ ಕಾಣಬಹುದು.[೨] ಸಂಜೆಯ ಹೊತ್ತೋ, ಸೌಂದರ್ಯದ ವಾರಿಧಿಯೇ ನಮ್ಮೆದುರು ನಿಲ್ಲುತ್ತದೆ. ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಂಡು ಇಳಿಯುತ್ತಿರುವಾಗ ಕ್ಷಣಕ್ಷಣವೂ ಸಮುದ್ರ ಸುತ್ತಮುತ್ತಲಿನ ಮೇಘಮಾಲೆ ಬಗೆಬಗೆಯ ಬಣ್ಣವನ್ನು ತಳೆಯುತ್ತವೆ. ಸೂರ್ಯಾಸ್ತಮಾನದ ನಾಟಕವನ್ನಾಡಲು ಪ್ರಕೃತಿ ನಿರ್ಮಿಸಿದ ಮಹಾಪಟವಾಗಿ ಪಶ್ಚಿಮಾಕಾಶ ಚಿತ್ರ ವೈಚಿತ್ರ್ಯಗಳಿಂದ ತುಂಬಿರುತ್ತದೆ. ಸೂರ್ಯ ಇಳಿಯುತ್ತಿರುವಂತೆ ಕಡಲು ಮೊದಮೊದಲು ಹೊಂಬಣ್ಣದ ಹಾಳೆಯಾಗಿದ್ದು, ದಿಗಂತರೇಖೆಗೆ ಹತ್ತಿರವಾದಾಗ ಸಮಸ್ತ ಸಮುದ್ರವಿಸ್ತಾರ ರಕ್ತಾರುಣರೇಖೆಯಾಗುತ್ತದೆ. ಪ್ರಕೃತಿಯ ಸುಂದರದೃಶ್ಯಗಳಲ್ಲಿ ಒಂದಾದ ಸೂರ್ಯಾಸ್ತಮಾನ ಭಾರತದಲ್ಲಿ ಮತ್ತೆಲ್ಲಿಯೂ ಇಷ್ಟು ಸುಂದರವಾಗಿ ಕಾಣಿಸುವುದಿಲ್ಲವಂತೆ, ಸಾವಿರಾರು ಮೈಲು ದೂರದಿಂದ ಆ ಒಂದು ಅಮೃತಗಳಿಗೆಯನ್ನು ಸವಿಯಲಿಕ್ಕಾಗಿ ಪ್ರವಾಸಿಗಳು ಬರುತ್ತಾರೆ. ಬಣ್ಣಬಣ್ಣದ ಮೋಡಗಳು ಆನೆಯ, ಸಿಂಹದ, ವಿವಿಧ ಪ್ರಾಣಿಗಳು, ನಮ್ಮ ಕಲ್ಪನೆಗನುಸಾರವಾಗಿ ಬಗೆಬಗೆಯ ರೂಪಗಳನ್ನು ತಾಳಿ ತಮ್ಮ ಪಾತ್ರಗಳನ್ನು ಅಭಿನಯಿಸಿ ಮರೆಯಾಗುತ್ತವೆ. ಯಾವ ಚಿತ್ರಕಾರನ ಚಿತ್ರವೂ ಈ ನಿಸರ್ಗ ನಿರ್ಮಿತ ಕಲಾಕೃತಿಗೆ ಸರಿದೂಗದು ಎಂದೆನಿಸುತ್ತದೆ. ಸೂರ್ಯ ಮುಳುಗುವ ಕೊನೆಯ ಒಂದು ಮಿನಿಟು ಹೊತ್ತಂತೂ ಅಪೂರ್ವ ರಸಗಳಿಗೆ ಎನ್ನಬೇಕು. ಆಗುಂಬೆಯ ಸೂರ್ಯಾಸ್ತಮಾನದ ಸಮಯ ಸೂರ್ಯ ಕವುಚಿಟ್ಟ ಸ್ವರ್ಣ ಕುಂಭಾಕೃತಿಯಾಗಿ, ಅರ್ಧಚಂದ್ರಾಕೃತಿಯಾಗಿ; ಕಟ್ಟಕಡೆಗೆ ಬಿದಿಗೆಯ ಚಂದ್ರಲೇಖೆಯಾಗಿ ತನ್ನ ಕೊನೆಯ ರೂಪದಲ್ಲಿ ಮರೆಯಾಗುವ ಸೌಂದರ್ಯ ನಾಟಕ ದೃಶ್ಯ ಆನಂದದ ಹುಚ್ಚು ಹಿಡಿಸುತ್ತದೆ. ಸಾಯುವುದರೊಳಗೆ ಈ ಒಂದು ಅಮೃತಗಳಿಗೆಯನ್ನು ಕಾಣದೆ ಹೋಗುವವನು ಮನುಷ್ಯನಲ್ಲ ಎಂದೆನಿಸುತ್ತದೆ. ೧೯೦೦ ರಲ್ಲಿ ೫೦೦೦ದಷ್ಟಿದ್ದ ಜನಸಂಖ್ಯೆ ಇಂದು (೨೦೧೫) ರಲ್ಲಿ ಕೇವಲ ೩೦೦ ಇದೆ[೩]. ೨೦೦೫ ನಿಂದೀಚೆಗೆ ಆಗುಂಬೆಯಲ್ಲಿ ನಕ್ಸಲ್ ಚಟುವಟಿಕೆ[೪] ಶುರುವಾಗಿದೆಯಾದರೂ ಬರುವ ಪ್ರವಾಸಿಗಳು ಕಡಿಮೆಯೇನಾಗಿಲ್ಲ.

ಪೋಟೋ ಗ್ಯಾಲರಿ[ಬದಲಾಯಿಸಿ]

2014 ರ ಮುಂಗಾರು ಮಳೆಯ ಒಂದು ದಿನ ಆಗುಂಬೆ ಘಾಟ್ ನಲ್ಲಿ ಕಂಡ ದೃಶ್ಯಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Agumbe awash in monsoon magic" [೧] Archived 2012-10-23 ವೇಬ್ಯಾಕ್ ಮೆಷಿನ್ ನಲ್ಲಿ. The Hindu. Karnataka, India. 29 July 2005. In English. Accessed 24 October 2013.
  2. "Agumbe Sunset Point" [೨] Archived 2013-10-29 ವೇಬ್ಯಾಕ್ ಮೆಷಿನ್ ನಲ್ಲಿ. Udupi Tourism. Accessed 25 October 2013
  3. ARRS. [೩] Archived 2013-10-07 ವೇಬ್ಯಾಕ್ ಮೆಷಿನ್ ನಲ್ಲಿ. Karnataka. Accessed 24 October 2013
  4. Sampalli, J. "Voters ignore Naxal boycott call". [೪] Archived 2016-05-08 ವೇಬ್ಯಾಕ್ ಮೆಷಿನ್ ನಲ್ಲಿ. The New India Express online. 6 May 2013. Accessed 25 October 2013

[೧]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "Agumbe: Tears in heaven". Archived from the original on 2016-03-05. Retrieved 2015-01-10.
"https://kn.wikipedia.org/w/index.php?title=ಆಗುಂಬೆ&oldid=1205476" ಇಂದ ಪಡೆಯಲ್ಪಟ್ಟಿದೆ