ರಕ್ತಸ್ರಾವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆರಳಿನ ಗಾಯದಿಂದ ರಕ್ತಸ್ರಾವವಾಗುತ್ತಿರುವುದು

ರಕ್ತಸ್ರಾವ ಎಂದರೆ ರಕ್ತಪರಿಚಲನೆಯ ವ್ಯವಸ್ಥೆಯಿಂದ ಹಾನಿಗೊಳಗಾದ ರಕ್ತನಾಳಗಳ ಮೂಲಕ ರಕ್ತ ಹೊರಹೋಗುತ್ತಿರುವ ಸ್ಥಿತಿ.[೧] ರಕ್ತಸ್ರಾವವು ಆಂತರಿಕವಾಗಿ ಆಗಬಹುದು, ಅಥವಾ ಬಾಹ್ಯದಲ್ಲಿ ಆಗಬಹುದು, ಬಾಯಿ, ಮೂಗು, ಕಿವಿ, ಮೂತ್ರ ವಿಸರ್ಜನಾ ನಾಳ, ಯೋನಿ ಅಥವಾ ಗುದದಂತಹ ಸಹಜ ರಂಧ್ರದ ಮೂಲಕ, ಅಥವಾ ಚರ್ಮದಲ್ಲಿ ಆಗಿರುವ ಗಾಯದ ಮೂಲಕ. ಹೈಪೊವಲೀಮಿಯಾ ಎಂದರೆ ರಕ್ತದ ಪ್ರಮಾಣದಲ್ಲಿ ಭಾರೀ ಕೊರತೆಯಾಗುವುದು, ಮತ್ತು ವಿಪರೀತ ರಕ್ತನಷ್ಟದಿಂದ ಉಂಟಾಗುವ ಮರಣವನ್ನು ರಕ್ತಕಳೆತ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಒಬ್ಬ ಆರೋಗ್ಯವಂತ ವ್ಯಕ್ತಿಯು ಯಾವುದೇ ಗಂಭೀರ ವೈದ್ಯಕೀಯ ತೊಂದರೆಗಳಿಲ್ಲದೆ ಒಟ್ಟು ರಕ್ತದ ಪ್ರಮಾಣದ ಶೇಕಡ ೧೦-೧೫ ರಷ್ಟು ನಷ್ಟವನ್ನು ಸಹಿಸಿಕೊಳ್ಳಬಲ್ಲನು (ಇದಕ್ಕೆ ಹೋಲಿಸಿದರೆ, ರಕ್ತ ದಾನದಲ್ಲಿ ಸಾಮಾನ್ಯವಾಗಿ ದಾನಿಯ ರಕ್ತದ ಶೇಕಡ ೮-೧೦ ರಷ್ಟು ಪ್ರಮಾಣವನ್ನು ತೆಗೆಯಲಾಗುತ್ತದೆ).[೨] ರಕ್ತಸ್ರಾವವನ್ನು ನಿಲ್ಲಿಸುವ ಅಥವಾ ನಿಯಂತ್ರಿಸುವ ಕ್ರಿಯೆಯನ್ನು ರಕ್ತಸ್ತಂಭನ ಎಂದು ಕರೆಯಲಾಗುತ್ತದೆ ಮತ್ತು ಪ್ರಾಥಮಿಕ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಎರಡರ ಮುಖ್ಯ ಭಾಗವಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಯಲ್ಲಿ (ಕೊಯಾಗ್ಯುಲೇಷನ್; ಕ್ಲಾಟಿಂಗ್) ಅವ್ಯವಸ್ಥೆ ಉಂಟಾದಾಗಲೂ ರಕ್ತಸ್ರಾವವಾಗಬಹುದು.

ರಕ್ತಸ್ರಾವದ ಬಗೆಗಳು[ಬದಲಾಯಿಸಿ]

ಪ್ರಕಾಶಯುತವಾದ ಕೆಂಪುರಕ್ತ ಚಿಮ್ಮಿಚಿಮ್ಮಿ ಹೊರಬರುತ್ತಿದ್ದರೆ ಅದು ಅಪಧಮನಿಯಿಂದ ಆಗುತ್ತಿರುವ ರಕ್ತಸ್ರಾವ (ಆರ್ಟೀರಿಯಲ್ ಬ್ಲೀಡಿಂಗ್). ಸಾಧಾರಣವಾಗಿ ಆಳವಾದ ಗಾಯಗಳಾದಾಗ ಅಪಧಮನಿ ಛಿದ್ರಗೊಳ್ಳುವುದು ಸಾಮಾನ್ಯ. ಪ್ರತಿಯೊಂದು ಸಲವೂ ಹೃದಯ ಮಿಡಿದಾಗ ಹೀಗೆ ರಕ್ತ ಚಿಮ್ಮುತ್ತದೆ. ಮಸುಕು ಕೆಂಪುಬಣ್ಣದ ರಕ್ತ ನಿಧಾನವಾಗಿ ಒಂದೇ ಸಮನೆ ಹರಿದುಬರುತ್ತಿದ್ದರೆ ಅದು ಅಭಿಧಮನಿಯಿಂದ ಆಗುತ್ತಿರುವ ರಕ್ತಸ್ರಾವ (ವೇಯ್ನ್ ಬ್ಲೀಡಿಂಗ್). ಸಾಮಾನ್ಯ ಗಾಯಗಳಲ್ಲಿ ಕಂಡುಬರುವುದು ಇಂಥ ರಕ್ತಸ್ರಾವವೇ. ರಕ್ತ ಹರಿದು ಹೋಗದೆ ಸ್ವಲ್ಪ ಮಾತ್ರ ಜಿನುಗಿ ಹೊರಬರುವುದು ಲೋಮನಾಳಗಳಿಂದ ಆಗುವ ಎಂಬುದು ಈ ಮೂರು ಬಗೆಯ ಸ್ರಾವಗಳ ಮಿಶ್ರಣ. ರಕ್ತಸ್ರಾವ ಸಾಮಾನ್ಯವಾಗಿ 5-10 ಮಿನಿಟುಗಳಲ್ಲಿಯೇ ತಾನಾಗಿಯೇ ತೆಗೆದುಕೊಳ್ಳಬೇಕಾದುದು ಅಗತ್ಯ. ಏಕೆಂದರೆ ಇಂಥ ರಕ್ತಸ್ರಾವ ತಡೆಯೇ ಇಲ್ಲದೆ ಮುಂದುವರಿಯುತ್ತ ಪ್ರಾಣಾಪಾಯವೇ ಸಂಭವಿಸಬಹುದು.

ಗುಪ್ತರಕ್ತಸ್ರಾವ: ಕಣ್ಣಿಗೆ ಕಾಣಿಸದೇ ಇರುವ ರಕ್ತಸ್ರಾವವನ್ನು ವಮನ, ಶ್ಲೇಷ್ಮ, ಮೂತ್ರ, ಮಲ-ಇವುಗಳಲ್ಲಿ ರಕ್ತವಿರುವುದನ್ನೂ ಇಲ್ಲವೇ ಅವು ರಕ್ತದಂತೆ ಕೆಂಪಾಗಿರುವುದನ್ನೂ ನೊಡಿ ಪತ್ತೆ ಮಾಡಬಹುದು. ಮಲ ಟಾರಿನಂತೆ ಕಪ್ಪಾಗಿದ್ದರೂ ಅನ್ನನಾಳದಲ್ಲಿ ರಕ್ತಸ್ರಾವ ಆಗಿದೆ ಎಂದು ತಿಳಿಯಬೇಕು. ಗುಪ್ತರಕ್ತಸ್ರಾವ ಹೀಗೂ ಪತ್ತೆಗೆ ಬಾರದಂಥ ಸಂದರ್ಭಗಳೂ ಇವೆ. ವ್ಯಕ್ತಿ ಬಿಳಿಚಿಕೊಂಡು ತೀವ್ರ ಗತಿಯಿಂದ ನಾಡಿ ಮಿಡಿಯುತ್ತಿರುವುದು- ಇಂಥ ಲಕ್ಷಣಗಳಿಂದ ಗುಪ್ತರಕ್ತಸ್ರಾವನ್ನು ಗುರುತಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸೆ: ಕಣ್ಣಿಗೆ ಕಾಣಿಸುವ, ತಾನಾಗಿಯೇ ನಿಂತುಕೊಳ್ಳದ ರಕ್ತಸ್ರಾವವನ್ನು ನಿಲ್ಲಿಸಲು ಆ ಸ್ಥಳವನ್ನು ಶುದ್ಧವಾದ ಹೆಬ್ಬಟ್ಟಿನಿಂದಲೋ ಅಂಗೈಯಿಂದಲೋ ಭದ್ರವಾಗಿ ಅದುಮಿ ಹಿಡಿದಿರಬೇಕು. ಚಿಮ್ಮುತ್ತ ರಕ್ತ ಹೊರಬರುತ್ತಿದ್ದರೆ ಆ ಸ್ಥಳಕ್ಕೆ ಮೇಲೆ (ಅಂದರೆ ಹೃದಯದ ಕಡೆಗೆ) ಸಿಕ್ಕುವ ನಾಡಿಯನ್ನು ಒತ್ತಿ ಹಿಡಿಯಬೇಕು. 5-10 ಮಿನಿಟುಗಳ ಅನಂತರ ನಿಧಾನವಾಗಿ ಒತ್ತಡವನ್ನು ಸಡಿಲಿಸಬಹುದು.[೩]

ರಕ್ತಸ್ರಾವದಿಂದ ಕಾಣಿಸಬಹುದಾದ ಲಕ್ಷಣಗಳು: ಸಣ್ಣ ಪುಟ್ಟ ಗಾಯಗಳಿಂದ ಆಗುವ ಯಾವುದೇ ಬಗೆಯ ರಕ್ತಸ್ರಾವದಿಂದ ಆಗುವ ರಕ್ತನಷ್ಟ ಬಲುಕಡಿಮೆ; ಗರಿಷ್ಠ ಎಂದರೆ 5-10 ಮಿಲಿಲೀಟರುಗಳಷ್ಟು ಇರಬಹುದು. ಇದರಿಂದ ದೇಹಕ್ಕೆ ಏನೂ ಭಾಧಕವಿಲ್ಲ. ವಾಸ್ತವವಾಗಿ ಒಮ್ಮೆಗೆ 50-100 ಮಿಲಿಲೀಟರುಗಳಷ್ಟು ರಕ್ತನಷ್ಟವಾದರೂ ದೇಹಕ್ಕೆ ಏನೂ ತೊಂದರೆ ಆಗದು. ಇನ್ನೂ ಹೆಚ್ಚಿನ ಮೊತ್ತದಲ್ಲಿ ರಕ್ತಸ್ರಾವವಾದರೆ ಅದರಿಂದ ಆಗುವ ತೊಂದರೆಗಳು ರಕ್ತಸ್ರಾವದ ಮೊತ್ತ ಮತ್ತು ವೇಗವನ್ನು ಆಧರಿಸಿದೆ. ಅತೀವ ಸುಸ್ತು, ಸಂಕಟ, ನೀರಡಿಕೆ, ಮೈಬೆವತು ಚಳಿಯಾಗುವುದೂ ರಕ್ತಸ್ರಾವ ಮುಂದುವರಿಯುತ್ತಲೇ ಇದ್ದರೆ ಸುಸ್ತುಧಕ್ಕೆಯೂ ಕಂಡುಬರುತ್ತವೆ. ಸುಸ್ತುಧಕ್ಕೆಗೆ ತಕ್ಷಣ ಚಿಕಿತ್ಸೆ ಒದಗಿಸದಿದ್ದರೆ ಅದರಿಂದಲೇ ಅಂತಿಮವಾಗಿ ಮರಣ ಸಂಭವಿಸಬಹುದು. ಯಾವುದೇ ಸಂದರ್ಭದಲ್ಲೂ ಒಮ್ಮೆಲೇ ಸುಮಾರು 1 ಲೀಟರ್‌ನಷ್ಟು ರಕ್ತ ಕಳೆದುಹೋದರೆ ಚಿಕಿತ್ಸೆ ನೀಡಿದರೂ ಬದುಕುಳಿಸುವುದು ಬಲು ಕಷ್ಟ. ಮಕ್ಕಳಲ್ಲಿ ಇದರ ಕಾಲುಭಾಗ ರಕ್ತನಷ್ಟವೇ ಮಾರಕವಾಗಿ ಪರಿಣಮಿಸುತ್ತದೆ. ರಕ್ತಸ್ರಾವ ಬಲು ನಿಧಾನವಾಗಿ 2-3 ದಿವಸಗಳ ಪರ್ಯಂತ ಆಗುತ್ತಿರುವ ಸಂದರ್ಭಗಳಲ್ಲಿ ಒಟ್ಟು ಇಂತಿಷ್ಟು ರಕ್ತಸ್ರಾವವೇ ಆಗಿದೆ ಎನಿಸಿದರೂ ಬರೀ ರಕ್ತನಷ್ಟವೊಂದರಿಂದಲೇ ಪ್ರಾಣಾಪಾಯ ಇರುವುದಿಲ್ಲ.

ರಕ್ತ ಹೆಪ್ಪುಗಟ್ಟುವಿಕೆ[ಬದಲಾಯಿಸಿ]

ರಕ್ತಸ್ರಾವ ಸಾಮಾನ್ಯವಾಗಿ ತಾನಾಗಿಯೇ ನಿಂತುಹೋಗುವ ವಿಚಾರದ ಪ್ರಸ್ತಾಪ ಆಗಿದೆ. ಗಾಯ ಇರುವ ಸ್ಥಳದಲ್ಲಿ ರಕ್ತಹೊರಬಂದ ಕೂಡಲೇ ಅದರಲ್ಲಿರುವ ಕಿರಿಕಣಗಳು (ಪ್ಲೇಟ್‌ಲೆಟ್ಸ್- ಪ್ರತಿಯೊಂದು ಕಣದ ವ್ಯಾಸ 3/1000 ಮಿಮೀ; ಒಂದು ಘನ ಮಿಮೀ ರಕ್ತದಲ್ಲಿ ಇಂಥವು ಸುಮಾರು 3 ಲಕ್ಷದಷ್ಟಿರುತ್ತವೆ) ಲಕ್ಷಾಂತರ ಗಟ್ಟಲೆ ಒಂದಕ್ಕೊಂದು ಅಂಟಿಕೊಂಡು ಕಣ್ಣಿಗೆ ಕಾಣಿಸುವಂಥ ಗುಂಪುಗಳಾಗುತ್ತವೆ ಮತ್ತು ಶೀಘ್ರದಲ್ಲೇ ಅವನತಿ ಹೊಂದುತ್ತವೆ. ಈ ಅವನತಿಯಿಂದ ಅವುಗಳಲ್ಲಿರುವ ಹಲವು ವಿಶಿಷ್ಟ ರಾಸಾಯನಿಕಗಳು ಬಿಡುಗಡೆ ಆಗುತ್ತವೆ. ಇವುಗಳ ಪೈಕಿ ಸಿರೋಟೋನಿನ್ ಎಂಬುದು ಒಂದು. ಇದು ಸ್ಥಳೀಯವಾಗಿ ರಕ್ತನಾಳಗಳ ಮೇಲೆ ವರ್ತಿಸಿ ಸಂಕುಚನದಿಂದ ಅವುಗಳ ವ್ಯಾಸ ಕಿರಿದಾಗುವಂತೆ ಮಾಡುತ್ತದೆ. ಹೀಗೆ ಕಿರಿದಾದ ರಕ್ತನಾಳಗಳು ಒಸರಿರುವ ರಕ್ತ ಗರಣೆ ಕಟ್ಟಿಕೊಂಡು (ಇದಕ್ಕೂ ಸಾಮಾನ್ಯವಾಗಿ ಕಿರಿಕಿಣಗಳ ಅವನತಿಯೇ ಪ್ರಾರಂಭಿಕ ಕಾರಣ) ನಾಳಕ್ಕೆ ಆಗಿರುವ ಗಾಯವನ್ನು ಮುಚ್ಚಿಬಿಡುತ್ತವೆ. ರಕ್ತಸ್ರಾವವಾದ ಮೇಲೆ ಅಪಧಮನಿಗಳಲ್ಲೂ ಅದಕ್ಕಿಂತಲೂ ದೊಡ್ಡ ಅಭಿಧಮನಿಗಳಲ್ಲಿ ಈ ನೈಸರ್ಗಿಕ ಕ್ರಿಯಾತಂತ್ರದಿಂದ (ಮೆಕ್ಯಾನಿಸಮ್) ರಕ್ತಸ್ರಾವ ತಾನಾಗಿಯೇ 5-8 ಮಿನಿಟುಗಳಲ್ಲಿ ನಿಂತುಕೊಳ್ಳುವುದಾದರೂ ಇನ್ನೂ ದೊಡ್ಡ ರಕ್ತನಾಳಗಳಿಂದಾಗುವ ರಕ್ತಸ್ರಾವನ್ನು ಹೊಲಿದೇ ನಿಲ್ಲಿಸಬೇಕಾಗುತ್ತದೆ.

ಪ್ಲೇಟ್‍ಲೆಟ್ ಕಡಿಮೆಯಿದ್ದಾಗ ಕಾಣಿಸಬಹುದಾದ ರೋಗಗಳು: ಕಿರಿಕಣಗಳ ಸಂಖ್ಯೆ ಕಾರಣಾಂತರಗಳಿಂದ ಕಡಿಮೆ ಆಗಿಹೋಗಿರುವಾಗ ಇಲ್ಲಿ ಹೇಳಿರುವ ಕ್ರಿಯಾತಂತ್ರ ಪರಿಣಾಮಕಾರಿಯಾಗಿರದೆ ರಕ್ತಸ್ರಾವ ನಿಂತುಕೊಳ್ಳಲು ಬಹಳಷ್ಟು ಕಾಲ ಹಿಡಿಯುತ್ತದೆ. ಪರ್‌ಪ್ಯುರ ಎಂಬ ರೋಗದಲ್ಲಿ ಚರ್ಮದ ಅಡಿಯ ಲೊಮನಾಳಗಳು ಅವ್ಯಕ್ತ ಜಖಮ್ಮಿನಿಂದ ಗಾಯಗೊಂಡು ಅತ್ಯಲ್ಪ ಪ್ರಮಾಣದಲ್ಲಿ ರಕ್ತ ಒಸರುವಾಗ ಬಹಳಷ್ಟು ಕಾಲ ಒಸರುತ್ತಲೇ ಇರುವುದರಿಂದ ಚರ್ಮದ ಅಡಿ ರಕ್ತಗಟ್ಟಿ ನೀಲಿ, ಹಸುರು ಇತ್ಯಾದಿ ಬಣ್ಣದ ಕಿರಿ ಹಾಗೂ ಹಿರಿಮಚ್ಚೆಗಳು ಕಾಣಬರುತ್ತವೆ. ಹೀಮೋಫೀಲಿಯ ಎಂಬ ರೋಗದಲ್ಲಿ (ಹೆಂಗಸರಲ್ಲಿ ಅವ್ಯಕ್ತವಾಗಿದ್ದು ಗಂಡಸರಲ್ಲಿ ಮಾತ್ರ ವ್ಯಕ್ತವಾಗಿರುವುದು ಈ ರೋಗದ ವೈಶಿಷ್ಟ್ಯ) ರಕ್ತಗರಣೆ ಕಟ್ಟಿಕೊಳ್ಳುವುದು ಬಲು ನಿಧಾನ. ಹೀಗಾಗಿ ಗಾಯದಿಂದ ರಕ್ತಸ್ರಾವವಾಗುವುದನ್ನು ರಕ್ತಗರಣೆ ತಕ್ಕಷ್ಟು ಶೀಘ್ರವಾಗಿ ಮುಚ್ಚಿ ಬಿಡುವುದಕ್ಕಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಸಣ್ಣ ಗಾಯಗಳಿಂದಲೂ ಬಹಳಷ್ಟು ಕಾಲ ರಕ್ತಸ್ರಾವವಾಗುತ್ತಲೇ ಇರುವುದಿದೆ. ಯುಕ್ತ ಕ್ರಮಗಳಿಂದ ಈ ಸ್ಥಿತಿಗಳಲ್ಲಿ ರಕ್ತಸ್ರಾವವಾಗುವುದನ್ನು ನಿಲ್ಲಿಸಬಹುದು.

ರಕ್ತಸ್ರಾವದ ಪರಿಣಾಮಗಳು ಮತ್ತು ಚಿಕಿತ್ಸೆ[ಬದಲಾಯಿಸಿ]

ಅಗಾಧ ರಕ್ತಸ್ರಾವದ ಪರಿಣಾಮಗಳಿಗೆಲ್ಲ ಕಾರಣ ದೇಹದಲ್ಲಿನ ರಕ್ತದ ಘನಗಾತ್ರ (ಬ್ಲಡ್ ವಾಲ್ಯೂಮ್) ಕಡಿಮೆ ಆಗುವುದೇ. ಇದರ ನೇರ ಪರಿಣಾಮ ಎಂದರೆ ರಕ್ತದ ಒತ್ತಡ ಕುಸಿಯವುದು. ಇದರಿಂದ ದೇಹದ ಎಲ್ಲ ಅಂಗಗಳಿಗೆ ರಕ್ತಪೂರೈಕೆ ಕಡಿಮೆ ಆಗುತ್ತದೆ. ಪ್ರಮುಖ ಅಂಗಗಳಾದ ಮಿದುಳು, ಹೃದಯ ಹಾಗೂ ಮೂತ್ರಪಿಂಡಗಳಿಗೆ ಈ ಸಂದರ್ಭದಲ್ಲಿಯೂ ರಕ್ತ ಸಾಕಷ್ಟು ಒದಗುವಂತೆ ದೇಹದಲ್ಲಿ ತಾನಾಗಿಯೇ ವ್ಯವಸ್ಥೆಯಾಗುತ್ತದೆ. ಚರ್ಮ, ಅನ್ನನಾಳ, ಗುಲ್ಮ ಇವುಗಳಲ್ಲಿನ ರಕ್ತನಾಳಗಳು ಸಂಕುಚಿಸುವುದರಿಂದ ಅಲ್ಲೆಲ್ಲ ಪೂರೈಕೆ ಆಗುವ ರಕ್ತದಲ್ಲಿ ಉಳಿತಾಯವಾಗಿ ಅಷ್ಟುಮೊತ್ತದ ರಕ್ತ ಈ ಪ್ರಮುಖ ಅಂಗಗಳಿಗೆ ಒದಗುತ್ತದೆ. ಆದರೆ ರಕ್ತಸ್ರಾವ ಮುಂದುವರಿದು ರಕ್ತದ ಒತ್ತಡ ಇನ್ನೂ ಕುಸಿದರೆ ಪ್ರಮುಖ ಅಂಗಗಳಿಗೂ ರಕ್ತಪೂರೈಕೆಯ ಖೋತ ಉಂಟಾಗುವುದು. ಅಲ್ಲೆಲ್ಲ ಆಕ್ಸಿಜನ್ನಿನ ಕೊರತೆ ಉಂಟಾಗುವುದರಿಂದ ತೀವ್ರ ನಿಶ್ಶಕ್ತಿ ಕಾಣಬರುತ್ತವೆ. ದೇಹದಲ್ಲಿ ಉಳಿದಿರುವ ರಕ್ತದ ಮೊತ್ತ ಇನ್ನೂ ಕಡಿಮೆ ಆಗದಿರುವ ಸಲುವಾಗಿ ಮೂತ್ರೋತ್ಪತ್ತಿ ತಗ್ಗುತ್ತದೆ; ಬಾಯಿ ಒಣಗುತ್ತದೆ. ಸ್ಥಿತಿ ಇನ್ನೂ ಹದಗೆಟ್ಟರೆ ಸುಸ್ತುಧಕ್ಕೆ ಪರಿಣಮಿಸುತ್ತದೆ. ಆದ್ದರಿಂದ ರಕ್ತಸ್ರಾವವಾದ ಬಳಿಕ ಚಿಕಿತ್ಸೆ ಮಾಡಬೇಕಾದರೆ ಕಡಿಮೆ ಬಿದ್ದ ರಕ್ತದ ಮೊತ್ತವನ್ನು ಮಾಮೂಲು ಮಟ್ಟಕ್ಕೆ ಏರಿಸಬೇಕು. ಇದಕ್ಕಾಗಿ ಚುಚ್ಚುಮದ್ದಿನ ರೀತಿ 0.8% ಸೋಡಿಯಮ್ ಕ್ಲೋರೈಡ್ ದ್ರಾವಣ, ಪ್ರೋಟೀನ್ ದ್ರಾವಣ, ರಕ್ತರಸ ಪುಡಿಯ (ಪ್ಲಾಸ್ಮಪೌಡರ್) ದ್ರಾವಣ ಇಲ್ಲವೇ ವ್ಯಕ್ತಿಗೆ ಒಗ್ಗುವ ಇನ್ನೊಬ್ಬರ ರಕ್ತ ಇವನ್ನು ಕೊಡಬೇಕು.

ಉಲ್ಲೇಖಗಳು[ಬದಲಾಯಿಸಿ]

  1. "Bleeding Health Article". Healthline. Archived from the original on 2012-09-04. Retrieved 2007-06-18.
  2. "Blood Donation Information". UK National Blood Service. Archived from the original on 2007-09-28. Retrieved 2007-06-18.
  3. "Severe bleeding: First aid". Mayo Clinic (in ಇಂಗ್ಲಿಷ್). Retrieved 15 June 2020.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: