ಗಾಯ
ವ್ರಣ, ಹುಣ್ಣು
ಗಾಯ
[ಬದಲಾಯಿಸಿ]ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸಮರಕ್ಕೆ ಮತ್ತು ಶಾಂತಿಗೆ ಸಂಬಂಧಿಸಿದ ಗಾಯ ಎಂಬ ಎರಡು ಬಗೆಗಳಾಗಿ ವಿಂಗಡಿಸಿ ಇವು ಪರಸ್ಪರ ವಿಭಿನ್ನವಾದವುಗಳೆಂದು ಪರಿಗಣಿಸುವುದುಂಟು. ಆದರೆ ಇವುಗಳ ರೋಗಲಕ್ಷಣಗಳಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸವೇನಿಲ್ಲ. ಹೀಗೆ ಇವನ್ನು ಬೇರ್ಪಡಿಸುವುದರಲ್ಲಿ ಯಾವ ಸ್ಪಷ್ಟ ಉದ್ದೇಶವನ್ನೂ ಸಾಧಿಸಿದಂತಾಗುವುದಿಲ್ಲ. ಈ ಕೆಳಗಿನ ವರ್ಗೀಕರಣ ಇವೆರಡನ್ನೂ ಒಳಗೊಳ್ಳುತ್ತದೆ- 1 ಮುಚ್ಚುಗಾಯಗಳು ಅಥವಾ ನಿರ್ಭೇದಕ ಗಾಯಗಳು: ಜಜ್ಜುಗಾಯ, ರಕ್ತಹೆಪ್ಪುಗಟ್ಟುವಿಕೆ, ಉಜ್ಜುಗಾಯ; 2 ಬಿಚ್ಚು ಅಥವಾ ತೆರೆಗಾಯಗಳು ಅಥವಾ ಭೇದಕ ಗಾಯಗಳು: ಕಚ್ಚು ಇರಿತ, ಚುಚ್ಚು, ಹರಿಯುವಿಕೆ, ಹೊರಗಾಣಿಸದ ಸರಳಭೇದಕ ಗಾಯ, ತೂತುಗೊರೆದು ಹೊರಹಾಯುವ ಭೇದಕ ಗಾಯ, ಚೂರು ಚೂರಾಗುವಿಕೆ ಅಥವಾಾ ಸಿಡಿಯುವಿಕೆ.
ಮುಚ್ಚುಗಾಯಗಳು
[ಬದಲಾಯಿಸಿ]ಮುಚ್ಚುಗಾಯಗಳು ಚರ್ಮದ ಪುರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯವಾಗುತ್ತವೆ. ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ ಅಥವಾ ನೆತ್ತಿಗೆ ಗಾಯವಾದಾಗ ಊತ ಕಡಿಮೆಯಾಗಿ ನೋವು ಹೆಚ್ಚಾಗಿರುತ್ತದೆ. ಕೆಂಪುರಕ್ತಕಣಗಳು ಒಡೆದು ಹೀಮೋಗ್ಲಾಬಿನ್ ಬಿಡುಗಡೆಯಾಗುವುದರಿಂದ ವಿವರ್ಣತೆಯುಂಟಾಗುತ್ತದೆ. ಇದು ಮೊದಲು ದಟ್ಟ ನೇರಳೆ ಬಣ್ಣದಾಗಿದ್ದು ಅನಂತರ ನೀಲಿ, ಕೆಂಪು, ಕಂದು, ಹಸಿರು ಬಣ್ಣಗಳಾಗಿ ಕೊನೆಯಲ್ಲಿ ಹಳದಿ ಕಲೆಯಾಗಿ 14-20 ದಿವಸಗಳೊಳಗೆ ಅದೃಶ್ಯವಾಗುತ್ತದೆ. ಹೀಮೋಗ್ಲಾಬಿನ್ ಹೀರಿಕೆಯ ಸಮಯದಲ್ಲಿ ನಡೆಯುವ ಕೆಲವು ರಾಸಾಯನಿಕ ಕ್ರಿಯೆಗಳೇ ಈ ವರ್ಣ ಬದಲಾವಣೆಗೆ ಕಾರಣ. ದೇಹದ ಒಳಪದರಗಳಲ್ಲಿ ಜಜ್ಜು ಗಾಯವಾದಾಗ ಊತ ಮತ್ತು ವಿವರ್ಣತೆಗಳು ಏಟುಬಿದ್ದ ಜಾಗದಿಂದ ದೂರದಲ್ಲಿಯೂ ಕಾಣಿಸಿಕೊಳ್ಳಬಹುದು.
ಹೆಚ್ಚು ರಕ್ತಸ್ರಾವವಾಗಿ ಅದು ತಂತುರೂಪದ ಅಂಗಾಂಶ ಕೋಶದ ಪದರಗಳ ಮತ್ತು ಮಾಂಸಖಂಡಗಳ ನಡುವೆ ಹೆಪ್ಪುಗಟ್ಟುತ್ತದೆ. ಮೊದಮೊದಲು ಇದು ಗುಂಡಾಗಿ, ಹುಣ್ಣಿನಂತೆ ಮೆತ್ತಗಿದ್ದು ಅನಂತರ ಗಟ್ಟಿಯಾಗುತ್ತದೆ. ಕ್ರಮೇಣ ಗಾಯ ವ್ಯವಸ್ಥಿತವಾಗಿ ಕರಗಿಹೋಗುತ್ತದೆ. ಆದರೆ ಎಲ್ಲ ಹೆಪ್ಪುಗಟ್ಟುಗಳೂ ಇಷ್ಟು ಸರಳವಾಗಿ ಮುಕ್ತಾಯವಾಗುವುದಿಲ್ಲ. ಕೆಲವು ಗಂಟುಗಳಾಗಿ ಮತ್ತೆ ಕೆಲವು ರಸಿಕೆಯ ಕೋಶಗಳಾಗಿ ಉಳಿಯಬಹುದು. ಸಾಮಾನ್ಯವಾಗಿ ಮಿದುಳಿನ ಮೇಲ್ಮೈಯಲ್ಲಿ, ನಡುವಿನ ಭಾಗದಲ್ಲಿ, ತೊಡೆಯ ಪಕ್ಕಗಳಲ್ಲಿ ರಸಿಕೆಯ ಕೋಶಗಳು ಉಂಟಾಗುತ್ತವೆ. ಇವುಗಳ ಸುತ್ತಲೂ ತಂತುದ್ರವ್ಯ (ಫೈಬ್ರಿನ್) ಶೇಖರಗೊಂಡು, ಹೀಮೋಗ್ಲಾಬಿನ್ ಕರಗಿಹೋಗಿ ಮೇಲೆ ನಸುಹಳದಿಬಣ್ಣದ ದ್ರವ ಉಳಿಯುತ್ತದೆ. ಸರಿಯಾದ ಚಿಕಿತ್ಸೆ ನಡೆಸದಿದ್ದಲ್ಲಿ ಈ ಕೋಶದಲ್ಲಿ ಒಳಪೊರೆಯೊಂದು ಬೆಳೆದು ಅನಂತರ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಕ್ರಿಮಿಗಳ ಬೆಳೆವಣಿಗೆಗೆ ರಕ್ತ ಒಳ್ಳೆಯ ಮಾಧ್ಯಮ. ಆದ್ದರಿಂದ ದುರ್ಬಲಶರೀರಿಗಳಲ್ಲಿ ಕೆಲವು ಸಲ ಈ ಹೆಪ್ಪುಗಟ್ಟಿಗೆ ಸೋಂಕು ತಗಲಬಹುದು. ಮಾಂಸಖಂಡ ಮತ್ತು ಇತರ ಮೇಲ್ಮೈಯ ಅಂಗಾಂಶಗಳಂತೆಯೇ ಒಳಾಂಗಗಳಾದ ಮಿದುಳು, ಪಿತ್ತಕೋಶ, ಗುಲ್ಮ, ಮೂತ್ರಜನಕಾಂಗ, ಪುಪ್ಪುಸ ಮತ್ತು ಅನ್ನನಾಳ ಮುಂತಾದವುಗಳಿಗೂ ಜಜ್ಜು ಗಾಯವುಂಟಾಗಿ ರಕ್ತ ಹೆಪ್ಪುಗಟ್ಟಬಹುದು. ಇವುಗಳ ಚಿಕಿತ್ಸೆಗೆ ವಿಶ್ರಾಂತಿ ಆವಶ್ಯಕ. ಆವಿಯಾಗುವ ದ್ರವಗಳ ಲೇಪನ, ಶಾಖ ಕೊಡುವಿಕೆ ಮತ್ತು ಬಿಸಿನೀರಿನ ಸ್ನಾನ ನೋವನ್ನು ಕುಗ್ಗಿಸುತ್ತದೆ. ಬಿಗಿಯಾಗಿ ಒತ್ತುವುದರಿಂದ ರಕ್ತಹೊರಸೋರುವುದು ಕಡಿಮೆಯಾಗುತ್ತದೆ. ಉಜ್ಜುವಿಕೆಯಿಂದ ಹೊರ ಬಂದ ರಕ್ತ ಬೇಗನೆ ಕರಗಿಹೋಗುತ್ತದೆ. ರಕ್ತದ ಹೀರುವಿಕೆ ತಡವಾದಲ್ಲಿ ಅದನ್ನು ಹೊರತೆಗೆದು ಬಿಗಿಯಾದ ಕಟ್ಟುಪಟ್ಟಿಯನ್ನು ಕಟ್ಟುವುದರಿಂದ ರಸಿಕೆಯ ಕೋಶ ಉಂಟಾಗುವುದನ್ನು ತಡೆಯಬಹುದು.
ಯಾವುದಾದರೂ ದೇಹದ ಭಾಗ ಒರಟು ಮೇಲ್ಮೈಗೆ ಉಜ್ಜಿದಾಗ ಉಜ್ಜು ಗಾಯ ಉಂಟಾಗುತ್ತದೆ. ಇದರಿಂದ ಚರ್ಮದ ಮೇಲ್ಪದರಗಳು ಕಿತ್ತುಹೋಗಿ, ನರಗಳ ತುದಿಗಳು ಹೊರಕಾಣಿಸಿಕೊಂಡು ತುಂಬ ನೋವುಂಟಾಗುತ್ತದೆ. ಗಾಯದ ಮೂಲಕ ದೂಳು ಪ್ರವೇಶಿಸಿ ಸೋಂಕು ಉಂಟಾಗುತ್ತದೆ. ಗಾಯವನ್ನು ತೊಳೆದು ಮುಲಾಮನ್ನು ಹಚ್ಚುವುದರಿಂದ ಇದನ್ನು ಗುಣಪಡಿಸಬಹುದು.
ಮರದ ತುಂಡು ಅಥವಾ ಗಾರೆಯ ಗಟ್ಟಿಗಳಿಂದ ದೇಹದ ಭಾಗವನ್ನು ಹೆಚ್ಚು ಕಾಲ ಅಮುಕಿದಾಗ ವಿಶೇಷವಾದ ಜಜ್ಜುಗಾಯ ಉಂಟಾಗುತ್ತದೆ. ಜಜ್ಜಿದ ಭಾಗದಿಂದ ಒಳಹೊಗುವ ಜೀವಾಣು ವಿಷವಸ್ತುಗಳು (ಟಾಕ್ಸಿಸ್) ಮೂತ್ರಜನಕಾಂಗಗಳ ರಕ್ತ ಪರಿಚಲನೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಇದರಿಂದ ಮೂತ್ರಜನಕಾಂಗದ ಹೊರಭಾಗಕ್ಕೆ (ಕಾರ್ಟೆಕ್ಸ್) ರಕ್ತಚಲನೆ ಇಲ್ಲದಂತಾಗುತ್ತದೆ. ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸಾವಿಧಾನ ಇನ್ನೂ ತಿಳಿಯಬರದಿದ್ದರೂ ಜಜ್ಜಿದ ಭಾಗಕ್ಕೆ ಸಂಪೀಡನೆ ಉಂಟುಮಾಡುವುದರಿಂದ ಜೀವಾಣುವಿಷದ ಹೀರುವಿಕೆಯನ್ನು ತಡೆಗಟ್ಟಿ ಮೂತ್ರಜನಕಾಂಗದ ರಕ್ತಪರಿಚಲನೆಯನ್ನು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬಹುದು.
2 ಬಿಚ್ಚು ಅಥವಾ ತೆರೆಗಾಯಗಳು
[ಬದಲಾಯಿಸಿ]ಬಿಚ್ಚು ಅಥವಾ ತೆರೆಗಾಯಗಳಲ್ಲಿ ಚರ್ಮದ ಅಥವಾ ಲೋಳೆಪೊರೆಯ ಅವಿಚ್ಛಿನ್ನತೆಗೆ ತಡೆಯುಂಟಾಗಿ ಒಳಭಾಗದ ಮೃದು ಅಂಗಾಂಶಗಳಿಗೆ ಹಾನಿ ತಗಲುತ್ತದೆ. ಇದರ ತೀವ್ರತೆ ಪೀಡಕವಸ್ತುವಿನ ಗುಣ ಮತ್ತು ಬಲವನ್ನು ಅವಲಂಬಿಸಿರುತ್ತದೆ. ಹಾನಿಗೆ ಒಳಗಾದ ಮಾಂಸಖಂಡದ ತಂತುಗಳ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಅವು ತಮ್ಮ ಸಂಕುಚನ ಸಾಮರ್ಥ್ಯ ಮತ್ತು ಸೋಂಕು ನಿರೋಧಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಅವಾಯುಶ್ವಸನ ಜೀವಿಗಳ ಬೆಳೆವಣಿಗೆಗೆ ಇವು ಉತ್ತೇಜನಕಾರಿಯಾಗಿರುತ್ತವೆ. ತತ್ಕ್ಷಣವೇ ಉರಿತದ ಕ್ರಿಯೆ ಪ್ರಾರಂಭ ವಾಗಿ ಶರೀರ ತನ್ನ ರಕ್ಷಣೆಗೆ ತೊಡಗುತ್ತದೆ. ಸ್ರಾವದಿಂದಾಗಿ ಊತ ಕಾಣಿಸಿಕೊಳ್ಳುತ್ತದೆ. ಊತ ಕೆಲವು ಸಲ ವಿಪರೀತವಾಗಿ ಆ ಅಂಗದ ರಕ್ತ ಚಲನೆಗೆ ತಡೆಯುಂಟಾಗಬಹುದು. ಚರ್ಮ ಅಶುದ್ಧವಾಗಿದ್ದು ದೂಳಿನ ಕಣಗಳು ಗಾಯದೊಳಕ್ಕೆ ಪ್ರವೇಶಿಸುತ್ತವೆ. ಗಾಯ ಉಂಟಾದ ಮೇಲೆ ಆರರಿಂದ ಹನ್ನೆರಡು ಗಂಟೆಯವರೆಗೆ ಈ ಕ್ರಿಮಿಗಳು ಹಾನಿಗೆ ಒಳಗಾದ ಅಂಗಾಂಶದ ಮೇಲೆಯೇ ಇದ್ದು ಇನ್ನೂ ನಂಜನ್ನು ಉತ್ಪತ್ತಿ ಮಾಡಿರುವುದಿಲ್ಲ. ಈ ಅವಧಿ ಕಳೆದ ಬಳಿಕ ಗಾಯ ಸೋಂಕಿಗೊಳಗಾಗಿದೆ ಎಂದರ್ಥ.
ಕಚ್ಚುಗಾಯ ಸಾಮಾನ್ಯವಾಗಿ ಗಾಜಿನಚೂರು, ಚಾಕು ಮೊದಲಾದ ಹರಿತವಾದ ವಸ್ತುಗಳಿಂದ ಉಂಟಾಗುತ್ತದೆ. ಅಪುರ್ವವಾಗಿ ನೆತ್ತಿಯ ಬಿಗಿಗೊಂಡ ಚರ್ಮವಿರುವ ಭಾಗದಲ್ಲಿ ಮೊಂಡು ಆಯುಧ ಸಹ ಕಚ್ಚುಗಾಯವನ್ನು ಉಂಟುಮಾಡಬಲ್ಲದು. ಕಚ್ಚುಗಾಯದಲ್ಲಿ ಬಿರುಕು ಕಾಣಿಸುತ್ತದೆ. ಇದರ ಉದ್ದ ಆಳಕ್ಕಿಂತ ಹೆಚ್ಚು. ಗಾಯದ ಅಂಚುಗಳು ಕ್ರಮವಾಗಿರುತ್ತವೆ. ರಕ್ತಸ್ರಾವ ಹೆಚ್ಚಾಗಿದ್ದು, ಸಂವೇದನ ನರಗಳು ಕತ್ತರಿಸಿಹೋಗುವುದರಿಂದ ನೋವಿರುತ್ತದೆ. ಸೋಂಕು ತಗಲಿರದಿದ್ದಲ್ಲಿ ಗಾಯದ ಅಂಚುಗಳನ್ನು ಸೇರಿಸಿದಾಗ ಅವು ಸರಿಯಾಗಿ ಕೂಡಿಕೊಳ್ಳುತ್ತವೆ.
ರಕ್ತನಾಳಗಳು, ನರಗಳು, ಮಾಂಸಖಂಡಗಳು ಮುಂತಾದ ಮುಖ್ಯ ಅಂಗಗಳಿಗೆ ಆಕಸ್ಮಿಕ ಚುಚ್ಚುಗಾಯದಿಂದ ಉಂಟಾಗುವ ಹಾನಿಯನ್ನು ತಿಳಿಯಲು ಗಾಯದ ಪುರ್ಣ ಹರವನ್ನು ಪರೀಕ್ಷಿಸಬೇಕು. ಸೋಂಕು ತಗುಲದಿದ್ದಲ್ಲಿ ನರ, ಮಾಂಸಖಂಡ ಮತ್ತು ಮೂಳೆಗಳ ಪುನರ್ನಿರ್ಮಾಣ ಚೆನ್ನಾಗಿ ಆಗುತ್ತದೆ. ಕೊಬ್ಬು ಮತ್ತು ಸ್ರಾವಕ ಗ್ರಂಥಿಗಳಲ್ಲಿ ಈ ಪುನರ್ನಿರ್ಮಾಣ ಅಷ್ಟು ಚೆನ್ನಾಗಿ ಆಗುವುದಿಲ್ಲ. ಕೇಂದ್ರ ನರಮಂಡಲದಲ್ಲಂತೂ ಇದು ಸಾಧ್ಯವೇ ಇಲ್ಲ. ಸೂಜಿ ಮೊದಲಾದ ಹರಿತವಾದ ಮೊನೆಯುಳ್ಳ ವಸ್ತುಗಳಿಂದ ಇರಿತ ಮತ್ತು ಚುಚ್ಚುಗಾಯಗಳು ಉಂಟಾಗುತ್ತವೆ. ಇವು ಹೊರನೋಟಕ್ಕೆ ಸಣ್ಣವಾಗಿದ್ದರೂ ಅನ್ಯವಸ್ತುಗಳು ಅಥವಾಾ ಸೋಂಕು ಇವುಗಳೊಳಕ್ಕೆ ಪ್ರವೇಶಿಸಬಹುದು; ಒಳಾಂಗಗಳಿಗೆ ಹಾನಿಯುಂಟಾಗಿದ್ದು ಅದನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗದೆ ಹೋಗಬಹುದು. ಯಾವುದೇ ತೊಡಕಿಲ್ಲದಿದ್ದಲ್ಲಿ ಈ ಚುಚ್ಚುಗಾಯದಿಂದ ಉಂಟಾಗುವ ರಕ್ತಸ್ರಾವ ಮತ್ತು ನೋವು ಕಡಿಮೆಯಾಗಿದ್ದು ಬೇಗನೇ ಗುಣವಾಗುತ್ತದೆ. ಅವು ಸೋಂಕಿಗೊಳಗಾದಾಗ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬೇಕಾಗುತ್ತದೆ.
ಹಾವಿನ ಕಡಿತವೂ ಒಂದು ಬಗೆಯ ಚುಚ್ಚುಗಾಯವೇ. ಊತ, ನೋವು, ವಿವರ್ಣತೆ, ಮೂರ್ಛೆ, ನಾಡಿಮಿಡಿತ ಕ್ಷೀಣವಾಗುವುದು, ಕಣ್ಣುಪಾಪೆ ಅಗಲ ಗೊಳ್ಳುವುದು-ಇವು ಇದರ ಮುಖ್ಯ ಲಕ್ಷಣಗಳು. ಉಗ್ರಪರಿಸ್ಥಿತಿಯಲ್ಲಿ ನರಗಳು ಮತ್ತು ಸ್ನಾಯುಗಳು ನಿಶ್ಚೇತನಗೊಂಡು ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸಬಹುದು. ಕಡಿದ ಜಾಗಕ್ಕೆ ತೀವ್ರವಾದ ಚಿಕಿತ್ಸೆ ಮಾಡಬೇಕು. ಗಾಯದಿಂದ ಕೊಂಚ ಮೇಲಕ್ಕೆ ಕಟ್ಟನ್ನು ಕಟ್ಟಿ, ಗಾಯವನ್ನು ಕೊಯ್ದು ರಕ್ತಸ್ರಾವವಾಗಲು ಬಿಡಬೇಕು. ಅನಂತರ ಅಮೋನಿಯ ಅಥವಾ ಹೈಡ್ರೊಜನ್ ಪೆರಾಕ್ಸೈಡಿನಿಂದ ತೊಳೆಯಬೇಕು. ಬ್ರಾಂಡಿ ಮತ್ತು ಹೃದಯೋತ್ತೇಜಕಗಳನ್ನು ಕೊಡಬೇಕು. ಹಾವು ಕಚ್ಚಿದ ಒಂದು ಗಂಟೆಯೊಳಗೆ ವಿಷನಿರೋಧಕಗಳನ್ನು ಕೊಟ್ಟಲ್ಲಿ ಒಳ್ಳೆಯ ಪರಿಣಾಮ ಕಾಣಿಸುತ್ತದೆ. ಜೇನು, ಕಣಜ, ಸೊಳ್ಳೆ, ಚೇಳು, ಮುಂತಾದವುಗಳ ಕಡಿತದಿಂದ ಸೋಂಕು ರೋಗಗಳು ಹರಡಬಹುದು. ನಾಲಿಗೆ ಮತ್ತು ಗಂಟಲಲ್ಲಿ ಇವು ಕಚ್ಚಿದಾಗ ಊತವುಂಟಾಗಿ ಜೀವಕ್ಕೇ ಅಪಾಯ ಒದಗಬಹುದು. ಕೊಂಡಿ ಸೇರಿದ್ದಲ್ಲಿ ಅದನ್ನು ಹೊರತೆಗೆದು ಕ್ಷಾರವಸ್ತುಗಳಿಂದ ಕಟ್ಟುಪಟ್ಟಿಯನ್ನು ಕಟ್ಟಿದಲ್ಲಿ ಗಾಯ ಗುಣವಾಗುತ್ತದೆ.
ಹರಿಗಾಯಗಳು ಯುದ್ಧರಂಗದಲ್ಲಿ ಆಗಬಹುದು ಇಲ್ಲವೇ ಯಂತ್ರಗಳಿಂದ ಆಗಬಹುದು. ಸಿಡಿಯುವ ಅಥವಾ ಹರಿಯುವ ಶಕ್ತಿಗಳಿಂದ ಈ ವಿಧವಾದ ಗಾಯಗಳು ಉಂಟಾಗುವುದರಿಂದ ಇವು ಆಕಾರರಹಿತವಾಗಿರುತ್ತವೆ. ಸಾಮಾನ್ಯವಾಗಿ ಚರ್ಮ ಹರಿದು ಒಳಭಾಗಕ್ಕೆ ಹೆಚ್ಚು ಪೆಟ್ಟಾಗಿರುತ್ತದೆ. ಗಾಯದ ಅಂಚುಗಳು ಚಿಂದಿಚಿಂದಿಯಾಗಿ, ನೇರಳೆ ಬಣ್ಣದವಾಗಿರುತ್ತವೆ. ಚರ್ಮದ ಕೆಳಭಾಗದಲ್ಲಿರುವ ಕೊಬ್ಬು, ಆಳದಲ್ಲಿರುವ ತಂತುರೂಪದ ಅಂಗಾಂಶದ ಕೋಶಗಳು ಮತ್ತು ಮಾಂಸಖಂಡಗಳು ಹಾನಿಗೊಳಗಾಗಿ ಊದಿಕೊಳ್ಳುತ್ತವೆ. ಸಾಮಾನ್ಯವಾಗಿ ರಕ್ತ ನಾಳಗಳಲ್ಲಿ ಹೆಪ್ಪುಗಟ್ಟುವುದರಿಂದ ಅದರ ಸ್ರಾವ ಹೆಚ್ಚಾಗಿರುವುದಿಲ್ಲ. ಹರಿಗಾಯದ ಬಾಯಿಯನ್ನು ಸಾಮಾನ್ಯವಾಗಿ ರಕ್ತದ ಗೆಡ್ಡೆಗಳು ಮುಚ್ಚಿರುತ್ತವೆ. ನರಗಳಿಗೆ ಹಾನಿ ಉಂಟಾದಲ್ಲಿ ಸಂವೇದನ ಸಾಮರ್ಥ್ಯ ಕುಗ್ಗುತ್ತದೆ. ಈ ಬಗೆಯ ಗಾಯಗಳಲ್ಲಿ ಸೋಂಕು ಖಚಿತ. ಕೆಲವು ಭೇದಕ ಗಾಯಗಳಿಗೆ ಪ್ರವೇಶದ್ವಾರ ಮಾತ್ರ ಇರುತ್ತದೆ. ಇವು ಕಚ್ಚು, ಚುಚ್ಚು ಅಥವಾ ಹರಿಗಾಯಗಳಾಗಿರಬಹುದು. ಇವು ಒಳಗಿನ ಅಂಗಗಳಿಗೆ ಹೆಚ್ಚು ಅಪಾಯವನ್ನು ಉಂಟುಮಾಡುತ್ತವೆ. ಅನೇಕ ಯುದ್ಧಗಾಯಗಳು ಈ ಬಗೆಯವು. ತೂತು ಕೊರೆದು ಹೊರಹಾಯುವ ಭೇದಕಗಾಯಗಳಿಗೆ ಪ್ರವೇಶ, ನಿರ್ಗಮನ ಗಳೆರಡೂ ಉಂಟು. ಇಂಥ ಗಾಯಗಳಲ್ಲಿ ಅನ್ಯವಸ್ತುಗಳು ಶರೀರದಲ್ಲಿ ಉಳಿಯುವುದಿಲ್ಲ. ಸಿಡಿತದಿಂದ ಉಂಟಾಗುವ ಗಾಯಗಳಲ್ಲಿ ಸ್ಪಷ್ಟವಾದ ಯಾವುದೇ ಬಾಹ್ಯವಸ್ತು ಅಂಗಾಂಶವನ್ನು ಪ್ರವೇಶಿಸಿರುವುದಿಲ್ಲ.
ಗಾಯಚಿಕಿತ್ಸೆಯ ಸಾಮಾನ್ಯ ನಿಯಮಗಳು:
- ಪ್ರತಿಯೊಂದು ಗಾಯವನ್ನೂ ಸ್ಪರ್ಶಜ್ಞಾನರಹಿತ ಮತ್ತು ವಿಷಾಣುರಹಿತ ಸ್ಥಿತಿಗಳಲ್ಲಿ ಚಿಕಿತ್ಸೆ ಮಾಡುವುದು.
- ಗಾಯಕ್ಕೆ ತೊಂದರೆಯಾಗದಂತೆ ಚರ್ಮವನ್ನು ತೊಳೆಯುವುದು.
- ಗಾಯದ ಅಂಚನ್ನು ಕತ್ತರಿಸುವುದು.
- ಗಾಯವನ್ನು ಸರಿಯಾಗಿ ಪರೀಕ್ಷಿಸುವುದು.
- ತೀವ್ರ ಹಾನಿಗೆ ಒಳಗಾದ ಅಂಗಾಂಶಗಳನ್ನು ತೆಗೆದುಹಾಕುವುದು.
- ರಕ್ತಸ್ರಾವವನ್ನು ತಡೆಗಟ್ಟುವುದು. # ಹರಿದ ನರ ಮತ್ತು ಮಾಂಸಖಂಡಗಳನ್ನು ಹೊಲಿಯುವುದು.
- ಪ್ರತಿಯೊಂದು ಬಿರುಕಿಗೂ ಸಲ್ಫೊನಮೈಡ್ ಮತ್ತು ಪೆನ್ಸಿಲಿನ್ ಪುಡಿಯನ್ನು ಹಾಕುವುದು.
- ಬಿಗಿತವುಂಟಾಗದಿದ್ದಲ್ಲಿ ಹೊಲಿಗೆಯನ್ನು ಹಾಕುವುದು.
- ಕಟ್ಟುಪಟ್ಟಿ ಹಾಕುವುದು.
- ಗಾಯಗೊಂಡ ಭಾಗ ಚಲಿಸದಂತೆ ನೋಡಿಕೊಳ್ಳುವುದು.