ಮೇಹರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಹರೋಗವು ರೋಗಿಷ್ಠವ್ಯಕ್ತಿಯಿಂದ ನಿರೋಗಿಗೆ ಮುಖ್ಯವಾಗಿ ಸಂಭೋಗಕ್ರಮದಿಂದಲೇ ಅಂಟುವ ರೋಗ (ವೆನೀರಿಯಲ್ ಡಿಸೀಸಸ್). ಇವು ಪ್ರಪಂಚದ ಎಲ್ಲೆಡೆಗಳಲ್ಲೂ ಅನಾದಿಕಾಲದಿಂದಲೂ ಮಾನವನಿಗೆ ಅಂಟಿರುವ ಪಿಡುಗಾಗಿ ಬಂದಿದೆ. ಈ ಅಂಟುರೋಗದ ಚಿಹ್ನೆಗಳು ಲಿಂಗ ಮೂತ್ರಾಂಗಗಳಲ್ಲಿ ಕಂಡುಬರುವುದರಿಂದ ಇವುಗಳಿಗೆ ಲಿಂಗಮೂತ್ರಾಂಗಗಳ ರೋಗಗಳೆನ್ನಬಹುದು. ಇವು ಅಮಿತ ಹಾಗೂ ಸಂಕೀರ್ಣ ಸಂಭೋಗದಿಂದ ಉತ್ಪನ್ನವಾದವಾದರೂ ಕ್ರಿಮಿಗಳೇ ರೋಗಕಾರಣಗಳೆಂದು 19ನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು 20ನೆಯ ಶತಮಾನದ ಪ್ರಾರಂಭದಲ್ಲಿ ಶೋಧಿಸಲಾಯಿತು.

ಮುಖ್ಯವಾದ ಪಂಚ ಮೇಹರೋಗಗಳ ಪೈಕಿ ಸಿಫಿಲಿಸ್ ಮತ್ತು ಗನೋರಿಯ ಎಂಬೆರಡು ರೋಗಗಳನ್ನು ಹಿರಿಯಮೇಹವೆಂದೂ ಸಾಂಕ್ರಾಯ್ಡ್, ಲಿಂಫೋಗ್ರಾನ್ಯುಲೋಮ ವಿನೀರಿಯಮ್ ಮತ್ತು ಗ್ರಾನ್ಯುಲೋಮ ಇಂಗ್ವೈನಲಿ ಎಂಬ ಮೂರು ರೋಗಗಳನ್ನು ಕಿರಿಯ ಮೇಹವೆಂದೂ ವಿಂಗಡಿಸಿದೆ. ಇವಲ್ಲದೆ ಇತರ ಮೇಹರೋಗಗಳೂ ಇವೆ: ಕಾಂಡಿಲೋಮ ಆಕ್ಯುಮಿನೇಟ, ಹರ್ಷಿಸ್ ಪ್ರೊಜೆನೈಟಾಲಿಸ್, ವಿಶಿಷ್ಟಕ್ರಿಮಿರಹಿತ ಗನೋರಿಯ, ಕ್ರಿಮಿರಹಿತ ಉರಿಮೂತ್ರ ಇತ್ಯಾದಿ.

ಈ ರೋಗಗಳು ಸಾಮಾನ್ಯವಾಗಿ ಸಂಭೋಗದಿಂದಲೇ ಹರಡುವುವುವಾದರೂ ಚುಂಬನ, ಆಲಿಂಗನ ಮುಂತಾದ ಸಮೀಪಸ್ಪರ್ಶಗಳಿಂದ ಇಲ್ಲವೆ ಸಂಭೋಗ ವಕ್ರತೆಗಳಿಂದ ಒಬ್ಬರಿಂದಿನ್ನೊಬ್ಬರಿಗೆ ಹರಡುವುದೂ ಉಂಟು. ರೋಗಗ್ರಸ್ತ ಗಂಡನಿಂದ ಹೆಂಡತಿಗೆ ತಗಲುವುದು. ಈಕೆ ರೋಗಯುತ ಮಕ್ಕಳನ್ನು ಹಡೆಯುತ್ತಾಳೆ. ಈ ಕುಟುಂಬದ ಮಕ್ಕಳಿಗೆಲ್ಲ ಮೇಹ ಆಜನ್ಮಬೇನೆಯಾಗಬಹುದು. ಸಾಮಾಜಿಕ ಆಂದೋಲನ ಮತ್ತು ಯುದ್ಧಕಾಲದಲ್ಲಿ ಅನೈತಿಕ ಸಂಭೋಗವ್ಯಾಪಾರಗಳು ವಿಪರೀತವಾಗಿ ಲೈಂಗಿಕ ರೋಗಗಳು ವ್ಯಾಪಕವಾಗಿ ಹರಡುತ್ತವೆ. ಕೆಲವು ಕಾಡುಜನರಲ್ಲಿ ರೋಗಗಳು ಹೊಸದಾಗಿ ಕಾಣಿಸಿಕೊಂಡು ಆ ಜನಸಮೂಹವನ್ನು ನಾಶಮಾಡಿವೆ. ಈ ರೋಗಗಳಿದ್ದ ಕುಟುಂಬಗಳಲ್ಲಿ ಕಿವುಡ, ಕುರುಡ ಮತ್ತು ಹೆಳವರು ಬಹಳ ಇರುವರು. ಅವರಲ್ಲಿ ಕೆಲವರಿಗೆ ಮಿದುಳಿನ ರೋಗಗಳು ಇಲ್ಲವೆ ಪಾಲ್ಸಿ ರೋಗಗಳುಂಟಾಗಬಹುದು. ಹಿಂದುಳಿದ ಜನಾಂಗಗಳಲ್ಲಿ ಈ ರೋಗಗಳನ್ನು ಅಧಿಕವಾಗಿ ಕಾಣಬಹುದು. ಅಜ್ಞಾನಿ ಜನರಲ್ಲಿ ಇವು ಸ್ಥಳೀಕವಾಗಿ ನೆಲಸುತ್ತವೆ. ವೇಶ್ಯಾವೃತ್ತಿಗೆ ಸೊತ್ತಾದ ಈ ರೋಗಗಳನ್ನು ವೇಶ್ಯೆಯರು ಒಬ್ಬ ಗಿರಾಕಿಯಿಂದ ಇನ್ನೊಬ್ಬನಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವ ಮಾಧ್ಯಮಿಕರಾಗಿದ್ದು ಕೆಲವೇ ದಿವಸಗಳಲ್ಲಿ ರೋಗ ಸರ್ವವ್ಯಾಪಕವಾಗಿ ಹರಡಬಲ್ಲದು.

ಮೇಹರೋಗ ಬರಲು ಸಮಾಜದ ಕುಂದುಕೊರತೆಗಳಲ್ಲಿ ಅತಿಸಂಭೋಗಪ್ರಿಯತೆ ಮತ್ತು ಅತಿಸಂಭೋಗ ಹಾಗೂ ಸಂಕೀರ್ಣಸಂಭೋಗಕ್ಕೆ ಅನುಕೂಲವಿರುವುದೇ ಮುಖ್ಯ ಕಾರಣಗಳು. ಮನೆ ಬಿಟ್ಟು ದೂರ ಹೋಗಿ ಕೆಲಸ ಮಾಡುವವರಲ್ಲಿ ಮತ್ತು ಸಂಚಾರಿಜನಾಂಗದಲ್ಲಿ, ಮನೋರೋಗಗಳು ಹೆಚ್ಚಿದ್ದರೆ, ವಿದ್ಯಾಹೀನರು ಹೆಚ್ಚಿದ್ದರೆ ಅಧಿಕಜನ ರೋಗಗಳಿಗೀಡಾಗುತ್ತಾರೆ. ಇತ್ತೀಚಿಗೆ ಸಲಿಂಗಪ್ರಿಯತೆ ಹೆಚ್ಚಾಗಿ ಗಂಡಸು ಇನ್ನೊಬ್ಬ ಗಂಡಸಿಗೆ, ಸ್ತ್ರೀ ಮತ್ತೊಬ್ಬ ಸ್ತ್ರೀಗೆ ರೋಗವನ್ನು ಪಸರಿಸುತ್ತಿದ್ದಾರೆ.

ಪ್ರಥಮ ಚಿಹ್ನೆಗಳು ಬಾಹ್ಯಜನಾಂಗ ಮತ್ತು ಮೂತ್ರಾಂಗಗಳಲ್ಲಿ ಕಂಡರೂ ಈ ರೋಗಗಳ ಪರಿಣಾಮಗಳನ್ನು ದೇಹದೆಲ್ಲೆಡೆಗಳಲ್ಲಿಯೂ ಕಾಣಬಹುದು. ರೋಗಫಲವಾಗಿ ಸ್ತ್ರೀ ಬಂಜೆಯಾಗಿಯೂ ಪುರುಷ ಷಂಡನಾಗಿಯೂ ಮಾರ್ಪಡಬಹುದು. ಇಲ್ಲವೆ ಲಿಂಗ ಮೂತ್ರಾಂಗಗಳು ಕ್ಷೀಣವಾಗಿ ವಿಕಾರಹೊಂದಿ ಕೃಶವಾಗಿ ಕೊಳೆತು ನಾಶವಾಗಬಹುದು.

ಸಮಾಜದ ನಿಯಮಗಳನ್ನು ಉಲ್ಲಂಘಿಸಿದವರಿಗೆ ಇದೊಂದು ಶಾಪವೆಂದು ತಿಳಿಯಲಾಗದು. ಕೆಲವೆಡೆಗಳಲ್ಲಿ ಮೇಹರೋಗಿಯಾದವ ಕನ್ಯೆಯರ ಸಂಭೋಗದಿಂದ ರೋಗ ವಿಮುಕ್ತನಾಗುವೆನೆಂದು ತಿಳಿದು ಬಲಾತ್ಕಾರ ಸಂಪರ್ಕ ಮಾಡುವುದುಂಟು. ಈ ಮೂಢನಂಬಿಕೆಯ ಪರಿಣಾಮವಾಗಿ ಏನೂ ತಿಳಿಯದ ಶಿಶು ಹಾಗೂ ಕನ್ಯೆ ಬಲವಂತವಾಗಿ ರೋಗಪೀಡಿತರಾಗುತ್ತಾರೆ. ಸಾಮಾಜಿಕ ಪ್ರಜ್ಞೆ, ಕಳಕಳಿ ಮತ್ತು ಯೋಗ್ಯ ಶಿಕ್ಷಣಗಳಿಂದ ಮಾತ್ರ ಇಂಥ ಕ್ರೌರ್ಯವನ್ನು ನಿವಾರಿಸಬಹುದು.

ಪ್ರಾರಂಭದ ಚಿಹ್ನೆಗಳನ್ನರಿತು ರೋಗಗಳ ಪ್ರಥಮಾವಸ್ಥೆಯಲ್ಲೇ ಯುಕ್ತ ಚಿಕಿತ್ಸೆಯನ್ನಿತ್ತಲ್ಲಿ ರೋಗಿ ಸಂಪೂರ್ಣ ಗುಣಮುಖನಾಗಬಹುದು. ತಾವು ಎಂದಿಗೂ ಗುಣಹೊಂದಲಾರೆವೆಂದು ಮೇಹರೋಗದ ಅಂಜಿಕೆಯಿಂದ ಭಯಭೀತರಾಗಿ ಜೀವವನ್ನೇ ನಿರರ್ಥಕಗೊಳಿಸುತ್ತಿರುವ ಕೆಲವರನ್ನು ಸಮಾಜ ಕಾರ್ಯಕರ್ತರು ತಿದ್ದಲು ಸಾಧ್ಯ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೇಹರೋಗ&oldid=1139799" ಇಂದ ಪಡೆಯಲ್ಪಟ್ಟಿದೆ