ವಿಷಯಕ್ಕೆ ಹೋಗು

ಬಿಳಿ ರಕ್ತ ಕಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಳಿ ರಕ್ತ ಕಣಗಳು
A scanning electron microscope image of normal circulating human blood. In addition to the irregularly shaped leukocytes, both red blood cells and many small disc-shaped platelets are visible.
ಲ್ಯಾಟಿನ್ leucocytus
ಬಿಳಿ ರಕ್ತ ಕಣಗಳು MRSA ಜೊತೆ
ನ್ಯೂಟ್ರೋಫಿಲ್‍ಗಳು

ಬಿಳಿ ರಕ್ತ ಕಣಗಳು (ಡಬ್ಲ್ಯು.ಬಿ.ಸಿ.) ಮಾನವ ದೇಹದ ಪ್ರತಿರಕ್ಷಾ ವ್ಯವಸ್ಥೆಯ ಜೀವಕೋಶಗಳು. ಇವು ಸಾಂಕ್ರಾಮಿಕ ರೋಗ ಹಾಗೂ ವಿದೇಶೀ ಆಕ್ರಮಣಕಾರರ ವಿರುದ್ಧ ಹೋರಾಡುವ ಜೀವಕೋಶಗಳಾಗಿವೆ. ಎಲ್ಲಾ ಬಿಳಿ ರಕ್ತ ಕಣಗಳು ಮೂಳೆಮಜ್ಜೆಯ ಒಂದು ಬಹುಪ್ರಬಲ ಜೀವಕೋಶವಾದ ಹೆಮ್ಯಾಟೋಪಯಟಿಕ್ ಕಾಂಡಕೋಶದಿಂದ ನಿರ್ಮಾಣಗೊಂಡಿರುತ್ತವೆ.[] ಬಿಳಿ ರಕ್ತ ಕಣಗಳು ರಕ್ತ ಹಾಗೂ ದುಗ್ಧನಾಳ ವ್ಯವಸ್ಠೆ ಸೇರಿದಂತೆ ನಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತವೆ.[]

ಸಾಮಾನ್ಯವಾಗಿ ನುಚ್ಚುಸಹಿತ ಕೋಶಗಳೆಲ್ಲ ಕೆಂಪುವರ್ಣದ ಮಜ್ಜೆಅಂಗಾಂಶದಲ್ಲಿ ತಯಾರಾಗುತ್ತವೆ (ಸಾಧಾರಣವಾಗಿ ತೆಟ್ಟೆ ಮೂಳೆಗಳಲ್ಲಿರುವ ಮಜ್ಜೆ). ದುಗ್ಧರಸಕಣ, ದುಗ್ಧರಸ ಗ್ರಂಥಿಗಳೂ ಮತ್ತೂ ಅಂಥದೇ ಅಂಗಾಂಶವಿರುವ ಮೆಂಡಿಕೆ, ಗುಲ್ಮ, ಅಂತ್ರಪುಚ್ಛ (ವರ್ಮಿಫಾರಮ್ ಅಫೆಂಡಿಕ್ಸ್), ಥೈಮಸ್ ಇವುಗಳಲ್ಲಿ ಉತ್ಪತ್ತಿಯಾಗುತ್ತವೆ. ದೊಡ್ಡ ಕಬಳಿಕ ಕಣಗಳು (ಮ್ಯಾಕ್ರೊಫೇಜಸ್) ಬಹುಶಃ ಮಜ್ಜೆ, ದುಗ್ಧರಸಗ್ರಂಥಿ ಇತ್ಯಾದಿ ಎರಡು ಕಡೆಗಳಲ್ಲೂ ಉದ್ಭವಿಸುತ್ತವೆ. ಉತ್ಪತ್ತಿ ಅತ್ಯಧಿಕವಾಗಿದ್ದು ನುಚ್ಚುಸಹಿತ ಕಣಗಳೊ ದುಗ್ಧರಸಕಣಗಳೊ ಪರಿಚಲನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರಬಹುದು (ಒಂದು ಘನ ಮಿಮೀಗೆ 50,000 ಕ್ಕೆ ಮೇಲ್ಪಟ್ಟು), ಬಹುಶಃ ಇದು ಅನುಗುಣ ಉತ್ಪತ್ಯಾಂಗಗಳ ಏಡಿಗಂತಿ ಪರಿಸ್ಥಿತಿ ಎನ್ನಲಾಗಿದೆ. ರಕ್ತದ ಅರ್ಬುದ (ಬ್ಲಡ್ ಕ್ಯಾನ್ಸರ್) ಎಂಬ ಈ ಸ್ಥಿತಿ ಮಾರಕ. ವೈಜ್ಞಾನಿಕವಾಗಿ ಈ ಸ್ಥಿತಿಗೆ ಲ್ಯುಕೀಮಿಯ ಎಂದಿದೆ.

ಬಿಳಿರಕ್ತಕಣಗಳಲ್ಲಿ ಬೇರೆ ದೈಹಿಕ ಜೀವಂತ ಕೋಶಗಳಲ್ಲಿಯಂತೆಯೇ ಚಯಾಪಚಯ ಕ್ರಿಯೆ ಚುರುಕಾಗಿ ಜರುಗುತ್ತಿರುತ್ತದೆ. ಒಂದು ಘನ ಮೀ ರಕ್ತದಲ್ಲಿ 4000 ದಿಂದ 10,000 ವರ್ಣರಹಿತ ರಕ್ತಕೋಶಗಳಿರುತ್ತವೆ.[] ಬೇರೆ ಬೇರೆ ದಿವಸಗಳಲ್ಲಿ, ದಿವಸದ ವಿವಿಧ ವೇಳೆಗಳಲ್ಲಿ ಅವುಗಳ ಸಂಖ್ಯೆಯ ಈ ಮಿತಿಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಬಿಳಿರಕ್ತಕಣವು ಕೆಂಪುರಕ್ತಕಣಕ್ಕಿಂತ ದೊಡ್ಡದಿದ್ದು ಬೀಜಾಣುವನ್ನು ಹೊಂದಿರುತ್ತದೆ. ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯಲ್ಪಡುತ್ತವೆ. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ರಕ್ತಕಣಗಳಿಗಿಂತ ಕಡಿಮೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಇರುವುದಿಲ್ಲ.

ಇವುಗಳ ಜೀವಿತಾವಧಿ ಕೆಲವೇ ಗಂಟೆಗಳಿಂದ 3 - 4 ದಿವಸಗಳಿರಬಹುದು. ನಾಶವಾಗುವ ವರ್ಣರಹಿತ ರಕ್ತಕೋಶಗಳ ಬದಲು ಹೊಸ ಕೋಶಗಳು ಹೆಚ್ಚು ಸಂಖ್ಯೆಯಲ್ಲಿಯೇ ಉತ್ಪತ್ತಿ ಆಗುತ್ತಿದ್ದು ಇಂಥ ಕೀವುಯುಕ್ತ ಸೋಂಕುಗಳಿಂದ ವ್ಯಕ್ತಿ ಬಾಧಿತವಾಗಿರುವಾಗ ವರ್ಣರಹಿತ ರಕ್ತಕೋಶಗಳ ಸಂಖ್ಯೆ 15 - 20 ಸಾವಿರದವರೆಗೂ ಏರುವುದು ವಿಶಿಷ್ಟ ಲಕ್ಷಣ. ಆದ್ದರಿಂದ ಕೋಶ ಸಂಖ್ಯಾವೃದ್ಧಿಯಾಗಿರುವುದು ಕಂಡುಬಂದರೆ ಅದು ದೇಹದಲ್ಲಿ ಎಲ್ಲೋ ಬಹುಶಃ ಅವ್ಯಕ್ತವಾಗಿಯೇ ಇಂಥ ಪ್ರಸಂಗವಿದೆ ಎಂಬ ತೀರ್ಮಾನಕ್ಕೆ ಬರುವುದಿದೆ. ಈ ಸ್ಥಿತಿಗೆ ವ್ಯತಿರಿಕ್ತವಾಗಿ ವರ್ಣರಹಿತರಕ್ತಕೋಶಗಳ ಸಂಖ್ಯೆ ಕಡಿಮೆ ಆಗುವುದೂ (3 - 4 ಸಾವಿರ) ಕಂಡುಬರುವುದುಂಟು. ಇದು ಆಕ್ರಮಣಕಾರಿ ಕ್ರಿಮಿಗಳ ಮೇಲ್ಗೈ ಸೂಚನೆ, ಕ್ರಿಮಿಕೃತ ರೋಗದ ತೀವ್ರಾವಸ್ಥೆಯ ಸೂಚನೆ ಹಾಗೂ ವ್ಯಕ್ತಿ ರೋಗಕ್ಕೆ ಬಲಿಯಾಗುವ ಸೂಚನೆ ಎಂದು ತಿಳಿಯಬಹುದು. ಕ್ರಿಮಿಗಳನ್ನು ಹೀಗೆ ಕಬಳಿಸಿ ನಾಶಮಾಡುವ ರಕ್ತದ ವರ್ಣರಹಿತಕೋಶಗಳನ್ನು ಕಬಳಿಕ ಕೋಶಗಳು (ಫೇಗೋಸೈಟ್ಸ್) ಎಂದೇ ಕರೆಯಲಾಗಿದೆ.

ಕಬಳಿಕಕೋಶಗಳಲ್ಲಿ 2 ವಿಧ:

  • ದೊಡ್ಡ ಕಬಳಿಕಕೋಶಗಳು (ಮ್ಯಾಕ್ರೋಫೇಜಸ್). ಮ್ಯಾಕ್ರೋಫೇಜಿಗೆ ಮಾನೋಸೈಟ್ ಎಂಬ ಹೆಸರೂ ಇದೆ. ಪಾಲಿಮಾರ್ಫ್‌ಗಳಿಗೆ ಮಣಿಯದ ಕ್ರಿಮಿಗಳನ್ನು ಮ್ಯಾಕ್ರೊಫೇಜ್‍ಗಳು ಕಬಳಿಸುತ್ತವೆ. ಮ್ಯಾಕ್ರೋಫೇಜ್‍ಗಳು ಸೋಂಕಿನ ವಿಷಾಣುಗಳಷ್ಟನ್ನೇ ಅಲ್ಲದೆ ರಕ್ತಪರಿಚಲನೆಯಲ್ಲಿರುವ ನಿರ್ಜೀವ ಕಣಿತ್ರಗಳನ್ನೂ (ಪಾರ್ಟಿಕ್ಯುಲೇಟೆಡ್ ಮ್ಯಾಟರ್) ಕಬಳಿಸಿ ರಕ್ತಶುದ್ಧಿ ಮಾಡುತ್ತವೆ. ನಿರ್ಜೀವಕಣಗಳು ವಿವಿಧ ದೇಹಕೋಶಗಳ ಅವನತಿಯಿಂದ ಉದ್ಭವಿಸಿದ್ದುವೇ ಆಗಿರಬಹುದು. ರಕ್ತದ ಕೆಂಪುಕಣಗಳ ಅವನತಿಯಿಂದ ಹೊರಬಂದ ಹೀಮೋಗ್ಲಾಬಿನ್ ಎಂಬ ಪ್ರೋಟೀನ್ ವಸ್ತುವಿನ ಕಣೀತ್ರಗಳೂ ಹೀಗೆ ಕಬಳಿಕೆಗೆ ಒಳಗಾಗುತ್ತವೆ.
  • ಸಣ್ಣ ಕಬಳಿಕಕೋಶಗಳು (ಮೈಕ್ರೋಫೇಜಸ್). ಮೈಕ್ರೋಫೇಜಿಗೆ ಪಾಲಿಮಾರ್ಫೊನ್ಯೂಕ್ಲಿಯರ್ ಕೋಶ (ರೂಢಿಯಾಗಿ ಪಾಲಿಮಾರ್ಫ್) ಎಂದೂ ಹೆಸರಿದೆ.

ಅತಿತೆಳು ರಕ್ತಲೇಪನವನ್ನು ಗಾಜಿನ ಫಲಕದ ಮೇಲೆ ಪಡೆದು, ಒಣಗಿಸಿ ಅನಂತರ ವಿಶಿಷ್ಟವರ್ಣ ವಸ್ತುಗಳಿಂದ (ಸ್ಪೆಷಲ್ ಸ್ಟೇಯ್ನ್) (ರೋಮನಾವ್‌ಸ್ಕಿ ಎಂಬವ ವಿವರಿಸಿರುವ ಹಲವು ಇಂಥವು) ವಿಶಿಷ್ಟವಾಗಿ ರಕ್ತಲೇಪನವನ್ನು ಸಂಸ್ಕರಿಸಿ ಒಳಗಿಸಿ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಲಾಗುತ್ತದೆ. ಹಾಗೆ ವೀಕ್ಷಿಸಿದಾಗ ಎಲ್ಲೆಲ್ಲೂ ಕಂದುಛಾಯೆಯ ಕೆಂಪುರಕ್ತಕಣಗಳೂ ಅವುಗಳ ನಡುವೆ ಅಲ್ಲಲ್ಲಿ ಕೆಂಪು ಮತ್ತು ನೀಲಿವರ್ಣಗಳಿಂದ ರಂಜಿತವಾದ ರಕ್ತಕೋಶಗಳೇ ಬಿಳಿರಕ್ತಕೋಶಗಳೂ ಹಾಗೂ ಕಣಿತ್ರಗಳ ಗುಂಪುಗಳೂ ಕಂಡುಬರುತ್ತವೆ. ಹೀಗೆ ಕಾಣಿಸುವ ಕೋಶಗಳೇ ರಕ್ತದ ವರ್ಣರಹಿತ ಕೋಶಗಳು. ಇವುಗಳ ಕೋಶಕೇಂದ್ರವೂ ಕೋಶದ್ರವ್ಯದಲ್ಲಿರುವ (ಸೈಟೋಪ್ಲಾಸ್ಮ್) ರವೆಯಂಥ ಘನಪದಾರ್ಥಗಳೂ ವರ್ಣವಸ್ತುಗಳಿಂದ ರಂಜಿತವಾಗಿ ನೀಲಿ ಹಾಗೂ ಕೆಂಪುಬಣ್ಣವುಳ್ಳ ರಚನೆಗಳಾಗಿ ಕಂಡುಬರುವುದರಿಂದ ವರ್ಣರಹಿತ ರಕ್ತಗಳನ್ನು ಗುರುತಿಸಬಹುದು ಹಾಗೂ ವಿಂಗಡಿಸಬಹುದು. ಐದು ವಿವಿಧ ಹಾಗೂ ವಿಭಿನ್ನ ರೀತಿಯ ಬಿಳಿರಕ್ತ ಕಣಗಳು ಅಸ್ತಿತ್ವದಲ್ಲಿವೆ. ಭೌತಿಕ ಹಾಗೂ ಕ್ರಿಯಾತ್ಮಕ ಗುಣಲಕ್ಷಣಗಳ ಆಧಾರದ ಮೇಲೆ ಇವುಗಳನ್ನು ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ:[]

ಮೋನೋಸೈಟ್‍ಗಳು ಹಾಗೂ ನ್ಯೂಟ್ರೋಫಿಲ್‍ಗಳು ಭಕ್ಷಿಸಿ ನಾಶಪಡಿಸುವ ಗುಣಲಕ್ಷಣವನ್ನು ಹೊಂದಿವೆ.

ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಒಂದು ಮೈಕ್ರೋ ಲೀಟರ್ ರಕ್ತದಲ್ಲಿ ೪,೦೦೦ ದಿಂದ ೧೧,೦೦೦ ಬಿಳಿ ರಕ್ತ ಕಣಗಳು ಕಂಡುಬರುತ್ತದೆ. ಹಾಗಿದ್ದರೆ ಮಾತ್ರ ಆರೋಗ್ಯವಂತ ಮನುಷ್ಯನೆಂದು ಕರೆಯಲಾಗುತ್ತದೆ. ಮನುಷ್ಯನ ಶರೀರದಲ್ಲಿ ಸರಿಸುಮಾರು ೫ ರಿಂದ ೬ ಲೀ ರಕ್ತವಿದೆ ಅಂದರೆ ೪,೦೦೦*೧೦೦*೧೦೦*೬ ಬಿಳಿರಕ್ತ ಕಣಗಳು ಇರುತ್ತವೆ.

ನ್ಯೂಟ್ರೋಫಿಲ್‍ಗಳು (ಪಾಲಿಮಾರ್ಫ್‌ಗಳು)

[ಬದಲಾಯಿಸಿ]

ಇವು ಅತಿ ಹೇರಳವಾಗಿರುವ ಬಿಳಿರಕ್ತಕಣಗಳು. ೬೦-೭೦%ರಷ್ಟು ಪರಿಚಲನೆಯಲ್ಲಿರುವ ಬಿಳಿರಕ್ತ ಕಣಗಳು.[] ಇವುಗಳು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ಸೋಂಕುಗಳ ವಿರುದ್ಧ ಹೋರಾಡಿ ದೇಹವನ್ನು ರಕ್ಷಿಸುತ್ತವೆ. ಸಾಮಾನ್ಯವಾಗಿ ಇವುಗಳು ಸೂಕ್ಷ್ಮ ಜೀವಿ ಸೋಂಕಿಗೆ ಮೊದಲ ಪ್ರತಿಕ್ರಿಯಿಸುತ್ತವೆ. ಪರಿಚಲನೆಯಲ್ಲಿರುವ ಮಾನವ ನ್ಯೂಟ್ರೋಫಿಲ್‍ಗಳ ಜೀವಿತಾವಧಿ ೫-೬ ದಿನಗಳು.

ಇವು ಕೆಂಪುರಕ್ತಕಣಗಳ ಸುಮಾರು 1.5 ರಷ್ಟು ವ್ಯಾಸ ಉಳ್ಳವಾಗಿ (ಅಂದರೆ 10 - 12 μ) ಇರುತ್ತವೆ. ಇವುಗಳ ಕೋಶದ್ರವದಲ್ಲಿಯೂ ಕೆಂಪು ನೀಲಿ ಬಣ್ಣದ ನುಚ್ಚಿನಂಥ ದ್ರವ್ಯ ಹೇರಳವಾಗಿ ಇರುತ್ತದೆ. ನ್ಯೂಟ್ರೊಫಿಲ್ ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್, ಮುಂತಾದ ಕಿಣ್ವಗಳನ್ನು ಹೊಂದಿರುತ್ತದೆ. ದೇಹದ ಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ಕಾಣಿಸಿಕೊಳ್ಳುವುದು, ಸೋಂಕನ್ನೂ ಸೋಂಕಿನಭಾಗವನ್ನೂ ಅರಗಿಸಿ ಹೊರದೂಡುವ ಕ್ರಮ. ಇವುಗಳ ಕೋಶಕೇಂದ್ರ ದೇಹದ ಕೋಶಗಳಲ್ಲಿ ಸಾಮಾನ್ಯವಾಗಿ ಇರುವಂತೆ ದುಂಡುಗಿರುವುದಿಲ್ಲ. ಬದಲು ವಿವಿಧ ರೂಫವಾಗಿ ಮತ್ತು 3 - 5 ತುಕ್ಕುಡಗಳು ಒಂದಕ್ಕೊಂದು ಜಂಟಿಸಿದಂತೆ ಇರುತ್ತದೆ.[] ಕೋಶಕೇಂದ್ರದ ಈ ವೈವಿಧ್ಯವೇ ಈ ರಕ್ತಕೋಶಗಳಿಗೆ ಪಾಲಿಮಾರ್ಫೊ ನ್ಯೂಕ್ಲಿಯರ್ ಸೆಲ್ಸ್ ಎಂದು ಹೆಸರಿರುವುದಕ್ಕೆ ಕಾರಣ. 1 ಘನ ಮಿಮೀ ರಕ್ತದಲ್ಲಿ 5000 - 7000, ಒಟ್ಟು ವರ್ಣರಹಿತ ಕಣಗಳಲ್ಲಿ 60 - 70% ರಷ್ಟು ಪಾಲಿಮಾರ್ಫ್‌ಗಳಿರುತ್ತವೆ. ಮೂರು ತುಕ್ಕುಡಗಳ ಕೋಶಕೇಂದ್ರವಿರುವ ಪಾಲಿಮಾರ್ಫ್ ನಡುವಯಸ್ಸಿನ ಕೋಶ; 5 ತುಕ್ಕಡಗಳದ್ದು ವೃದ್ಧಕೋಶ; 1 - 2 ತುಕ್ಕುಡಗಳುಳ್ಳದ್ದು ಎಳೆಯ ಪಾಲಿಮಾರ್ಫ್. ಸಾಮಾನ್ಯವಾಗಿ 3 - 4 ತುಕ್ಕುಡಗಳ ಕೋಶಕೇಂದ್ರವಿರುವ ಕೋಶಗಳೇ ಹೆಚ್ಚಾಗಿ (ಒಟ್ಟು ಪಾಲಿಮಾರ್ಫ್‌ಗಳಲ್ಲಿ ಸುಮಾರು 70%) ಇರುತ್ತವೆ. 5 ತುಕ್ಕುಡಗಳುಳ್ಳ ಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಾಗ ಪಾಲಿಮಾರ್ಫ್‌ಗಳ ಉತ್ಪತ್ತಿ ಕಡಿಮೆ ಆಗಿದೆಯೆಂದೂ 1 - 2 ತುಕ್ಕುಡಗಳ ಕೋಶಕೇಂದ್ರವಿರುವ ಪಾಲಿಮಾರ್ಫ್‌ಗಳೇ ಹೆಚ್ಚಾಗಿದ್ದಾಗ ಅವುಗಳ ಸಂಖ್ಯಾಭಿವೃದ್ಧಿ ತೀವ್ರಗತಿಯಿಂದ ಆಗುತ್ತಿದೆ ಎಂದೂ ಯಾವ ಸಂದರ್ಭಗಳಲ್ಲಿ ಹೀಗಾಗುವುದೆಂಬುದನ್ನೂ ವಿಶಿಷ್ಟವಾಗಿ ಅರ್ಥೈಸಿದೆ. ಪಾಲಿಮಾರ್ಫ್‌ಗಳಲ್ಲಿಯೇ ಇಂಥ ವಿಂಗಡನೆ ಮಾಡಿ ಅರಿಯುವ ವಿಧಾನಕ್ಕೆ ಆರ್ನೆತ್ ಕೌಂಟ್ ಎಂದು ಹೆಸರು.

ಇಯೊಸಿನೊಫಿಲ್‍ಗಳು

[ಬದಲಾಯಿಸಿ]

ಗುಲ್ಮ ಹಾಗೂ ಕೇಂದ್ರ ನರಮಂಡಲದ ಅಲರ್ಜಿ, ಪರಾವಲಂಬಿ ಸೋಂಕುಗಳು, ಕೊಲಾಜೆನ್ ರೋಗಗಳು- ಇವುಗಳ ವಿರುದ್ಧ ಇಯೊಸಿನೊಫಿಲ್‍ಗಳು ಪ್ರತಿಕ್ರಿಯೆಯನ್ನು ತೋರುತ್ತವೆ. ಇವುಗಳು ರಕ್ತದಲ್ಲಿ ಕಾಣಸಿಗುವುದು ಅಪರೂಪ. ಜೀರ್ಣಕಾರಿ ಪ್ರದೇಶದ, ಉಸಿರಾಟದ ಪ್ರದೇಶದ, ಕಡಿಮೆ ಮೂತ್ರದ ಪ್ರದೇಶದ ಮ್ಯೂಕಸ್ ಪೊರೆಗಳಲ್ಲಿ ಇವುಗಳು ಕಾಣಸಿಗುತ್ತವೆ.

ಈ ರಕ್ತಕಣಗಳು, ೧೦-೧೨ ಮೈಕ್ರಾನ್‍ನಷ್ಟಿರುತ್ತವೆ. ಇವುಗಳಲ್ಲಿ ಹಿಸ್ಟಮಿನ್ ದಂಡಿಯಾಗಿದೆ. ಚರ್ಮದ ಅಲರ್ಜಿ, ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕಿನಲ್ಲಿ ಇವುಗಳ ಸಂಖ್ಯೆ ವೃದ್ಧಿಸುವುದು. ಇಯೋಸಿನೋಫಿಲ್‍ನಲ್ಲಿ ಕೋಶಕೇಂದ್ರ 2 - 3 ತುಕ್ಕುಡಗಳಿಂದ ಮಾತ್ರ ಆಗಿರುತ್ತದೆ. ಕೋಶದ್ರವದ ನುಚ್ಚುಕಣಗಳು ವರ್ಣಸಂಸ್ಕಾರವಾದ ಬಳಿಕ ಅಚ್ಚ ಕೆಂಪಗೆ ಕಾಣುತ್ತವೆ. ಒಟ್ಟು ವರ್ಣರಹಿತ ಕಣಗಳಲ್ಲಿ ಇಯೋಸಿನೋಫಿಲ್‌ಗಳು 2 - 4% ನಷ್ಟು. ಒಂದು ಘನ ಮಿಮೀ ರಕ್ತದಲ್ಲಿ 150 - 250 ಗಳಷ್ಟು ಇರುತ್ತವೆ. ಎಕ್ಸೀಮದಂಥ ಅಸ್ವಸ್ಥಸ್ಥಿತಿಗಳು ಉಂಟಾದಾಗ ಮತ್ತು ಕರುಳಿನಲ್ಲಿ ಹುಳುಗಳು ಇದ್ದಾಗ ಇಯೋಸಿನೋಫಿಲ್‌ಗಳು ಸಂಖ್ಯೆ ಹೆಚ್ಚಾಗುತ್ತದೆ. ಇಂಥ ಸ್ಥಿತಿಗಳಲ್ಲಿ ಒಂದು ಘನಮಿಮೀ ರಕ್ತದಲ್ಲಿ 600 - 800 ರಷ್ಟು, ಒಟ್ಟು ವರ್ಣರಹಿತ ಕಣಗಳಲ್ಲಿ 6 - 8% ನಷ್ಟು ಇಯೋಸಿನೋಫಿಲ್‌ಗಳು ಇರಬಹುದು. ಈ ಸ್ಥಿತಿ ಪತ್ತೆ ಆದಾಗ ಕಾರಣಭೂತ ಅಸ್ವಸ್ಥತೆಯನ್ನು ಶಂಕಿಸಬಹುದು.

ಬೇಸೊಫಿಲ್‍ಗಳು

[ಬದಲಾಯಿಸಿ]

ಅಲರ್ಜಿ ಹಾಗೂ ಪ್ರತಿಜನಕದ ಪ್ರತಿಕ್ರಿಯೆಗೆ ಅನುಗುಣವಾಗಿ ರಾಸಾಯನಿಕವಾದ ಹಿಸ್ಟಮೀನ್ ಅನ್ನು ಬಿಡುಗಡೆ ಮಾಡಿ ರಕ್ತನಾಳಗಳ ಹಿಗ್ಗುವಿಕೆ ಮಾಡುವುದು ಬೇಸೋಫಿಲ್‍ಗಳ ಮುಖ್ಯ ಕಾರ್ಯ. ಇವು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಬಿಳಿ ರಕ್ತ ಕಣಗಳು. ದೇಹದ ರಕ್ಷಣೆಗಾಗಿ ಇವು ಹಿಸ್ಟಮೀನ್ ಹಾಗೂ ಹೆಪಾರಿನ್ ಎಂಬ ಎರಡು ರಾಸಾಯನಿಕಗಳನ್ನು ಹೊರಹಾಕುತ್ತವೆ. ಸೋಂಕು ಆಗಿರುವ ಪ್ರದೇಶಕ್ಕೆ ಇಯೊಸಿನೋಫಿಲ್‍ಗಳು ಹಾಗೂ ನ್ಯೂಟ್ರೋಫಿಲ್‍ಗಳನ್ನು ಆಕರ್ಷಿಸಲು ಬೇಸೊಫಿಲ್‍ಗಳು ರಾಸಾಯನಿಕ ಸಂಕೇತಗಳನ್ನು ಬಿಡುಗಡೆ ಮಾಡಬಹುದು.

ಇವು ೮-೧೦ ಮೈಕ್ರಾನ್‍ನಷ್ಟಿರುತ್ತವೆ. ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಇವು ಜಾಗ್ರತೆವಹಿಸುತ್ತವೆ. ಅವ್ಯಕ್ತಕಾರಣದಿಂದ ಬರುವ ಟ್ರಾಫಿಕಲ್ ಇಯೋಸಿನೋಫಿಲ್‌ಗಳಿಗಿಂತ ಸ್ವಲ್ಪ ಚಿಕ್ಕದಾಗಿ, 1 - 2 ಹಾಲೆಗಳು ಮಾತ್ರವಿರುವ ಕೋಶಕೇಂದ್ರ ಉಳ್ಳದ್ದಾಗಿ ಕೋಶದ್ರವದಲ್ಲಿ ಅಲ್ಪವಾಗಿಯೇ ಇರುವ ಮತ್ತು ವರ್ಣಸಂಸ್ಕಾರದಲ್ಲಿ ನೀಲಿಬಣ್ಣ ಪಡೆಯುವ ನುಚ್ಚುದ್ರವ್ಯವಿರುವ ವರ್ಣರಹಿತಕೋಶಗಳಿಗೆ ಬೇಸೋಫಿಲ್‌ಗಳೆಂದು ಹೆಸರು. ಒಟ್ಟು ವರ್ಣರಹಿತ ಕಣಗಳಲ್ಲಿ ಇವುಗಳ ಪ್ರಮಾಣ ಕೇವಲ 0 - 0.5%; ಒಂದು ಘನಮಿಮೀ ರಕ್ತದಲ್ಲಿ 0 - 50 ಇಂಥ ಕಣಗಳಿರಬಹುದು. ಯಕೃತ್ತು, ಫುಪ್ಪುಸ, ಮಜ್ಜೆ ಇತ್ಯಾದಿ ಅಂಗಗಳಲ್ಲಿ ಸುಮಾರು ಇಂಥ ರಚನೆಯ ಕಣಗಳು ಇರುತ್ತವೆ. ಇವಕ್ಕೆ ಮಾಸ್ಟ್ ಕೋಶಗಳು ಎಂದು ಹೆಸರು. ಬಹುಶಃ ಇವೂ ರಕ್ತದ ಬೇಸೋಫಿಲ್‌ಗಳೂ ಒಂದೇ ಬಗೆಯ ಆದರೆ ಸ್ಥಿರ ಇಲ್ಲದೇ ಚರಕೋಶಗಳೆಂದು ಹೇಳಲಾಗಿದೆ. ಮಾಸ್ಟ್ ಕೋಶಗಳೂ ಬಹುಶಃ ರಕ್ತದ ಬೇಸೋಫಿಲ್‌ಗಳೂ ಹೆಪಾರಿನ್ ಎಂಬ ರಕ್ತಗರಣ ಪ್ರತಿರೋಧಕವಸ್ತುವನ್ನು ಉತ್ಪಾದಿಸುತ್ತವೆ.

ದುಗ್ಧಕಣಗಳು

[ಬದಲಾಯಿಸಿ]

ರಕ್ತದ ಕೆಂಪುಕಣಗಳಷ್ಟೆ ವ್ಯಾಸದ ವರ್ಣರಹಿತ ಕಣಗಳನ್ನು ದುಗ್ಧರಸಕಣಗಳು (ಲಿಂಫೋಸೈಟ್ಸ್) ಎಂದು ಕರೆದಿದೆ. ಇವುಗಳ ಕೋಶಕೇಂದ್ರ ಗುಂಡಗೆ ದೊಡ್ಡದಾಗಿದ್ದು ಕಣವನ್ನು ಹೆಚ್ಚು ಕಡಿಮೆ ಪೂರ್ತಿ ಆಕ್ರಮಿಸಿರುತ್ತದೆ. ಹೊರಗಿನ ಸ್ತರದಂತೆ ಸ್ವಲ್ಪ ಕೊಂಚವಾಗಿರುವ ಕೋಶದ್ರವದಲ್ಲಿಯೂ ಯಾವ ಬಗೆಯ ನುಚ್ಚುದ್ರವ್ಯವೂ ಇರುವುದಿಲ್ಲ. ದುಗ್ಧರಸಕಣಗಳ ಶೇ. ಪ್ರಮಾಣ 20 - 26 ರಷ್ಟು; ಒಂದು ಘನ ಮಿಮೀ ರಕ್ತದಲ್ಲಿ 1500 - 2500 ಕಣಗಳಿರುತ್ತವೆ. ದೀರ್ಘಕಾಲಿಕ ರೋಗಗಳಲ್ಲಿ (ಉದಾಹರಣೆಗೆ ಕ್ಷಯ) ಇವುಗಳ ಸಂಖ್ಯೆ ಹೆಚ್ಚಾಗುವುದಿದೆ (35% ಕ್ಕೂ ಹೆಚ್ಚು, ಒಂದು ಘನ ಮಿಮೀ ರಕ್ತದಲ್ಲಿ 3000 - 6000 ಕೋಶಗಳಷ್ಟು). ಇದೇ ರಚನೆಯ, ಆದರೆ ಇವುಗಳ 1.5 ರಷ್ಟು ವ್ಯಾಸದ ದೊಡ್ಡ ದುಗ್ಧರಸಕಣಗಳಿರುವುದೂ ಉಂಟು.

ದುಗ್ಧಕಣಗಳು ರಕ್ತಕ್ಕಿಂತ ಹೆಚ್ಚಾಗಿ ದುಗ್ಧನಾಳ ವ್ಯವಸ್ಥೆಯಲ್ಲಿ ಕಂಡುಬರುತ್ತವೆ. ಇದರಲ್ಲಿ ೩ ವಿಧಗಳಿವೆ. ಅವುಗಳು -

  1. ಬಿ ದುಗ್ಧಕಣಗಳು
  2. ಟಿ ದುಗ್ಧಕಣಗಳು
  3. ಸಹಜವಾಗಿ ಸಾಯಿಸುವ ದುಗ್ಧಕಣಗಳು

ಇವುಗಳ ಸಾಮಾನ್ಯ ಕೆಲಸವೇನೆಂದರೆ ದೇಹದ ಮೇಲಾಗುವ ದಾಳಿಗಳನ್ನು ಗುರುತಿಸುವುದು ಹಾಗೂ ತಡೆಗಟ್ಟುವುದು. ಇವುಗಳು ನಿರ್ದಿಷ್ಟ ರೋಗಕಾರಕಗಳ ಹಾಗೂ ಸೋಂಕಿತ ಜೀವಕೋಶಗಳು ವಿರುದ್ಧ ಕೆಲಸ ಮಾಡುತ್ತವೆ. ಅಂತೆಯೇ ಹೊಂದಿಕೊಳ್ಳಬಲ್ಲ ಪ್ರತಿರಕ್ಷಣಾ ಪ್ರತಿಕ್ರಿಯೆಯ ಭಾಗವಾಗಿದೆ.

ಇವುಗಳು ತಯಾರಿಸುವ ಗಾಮಾ ಗ್ಲಾಬ್ಯುಲಿನ್ ದೇಹಕ್ಕೆ ದಾಳಿಯಿಡುವ ವಿಷಕ್ರಿಮಿಗಳು ಉತ್ಪಾದಿಸುವ ವಿಷದ ವಿರುದ್ಧ ಹೋರಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಬೀಟ ಗ್ಲಾಬ್ಯುಲಿನ್‍ಗಳು ದೇಹಕ್ಕೆ ಅವಶ್ಯಕವಾದ ಪ್ರೋಟೀನ್‍ಗಳನ್ನು ಒದಗಿಸುತ್ತವೆ.

ಮೋನೋಸೈಟ್‍ಗಳು

[ಬದಲಾಯಿಸಿ]

ದೇಹದ ವಿಷಕ್ರಿಮಿಗಳನ್ನು ನಾಶಮಾಡಲು, ಮಾನೋಸೈಟ್‍ಗಳು ಸಹಾಯಮಾಡುತ್ತವೆ (೧೬-೧೮ ಮೈಕ್ರಾನ್). ಮ್ಯಾಕ್ರೋಫೇಜ್‍ಗಳು ಅಥವಾ ಮಾನೋಸೈಟ್‌ಗಳು ರಕ್ತದ ವರ್ಣರಹಿತ ಕಣಗಳ ಪೈಕಿ ಅತಿದೊಡ್ಡವು. ಇವುಗಳ ವ್ಯಾಸ ಸು. 20μ. ಅಂದರೆ ರಕ್ತದ ಕೆಂಪುಕಣಗಳ 2.5 ರಷ್ಟು. ಇವುಗಳ ಗಾತ್ರಕ್ಕೆ ಹೋಲಿಸಿದರೆ ಕೋಶಕೇಂದ್ರ ಚಿಕ್ಕದೆಂದೇ ಹೇಳಬೇಕು. ಅಲ್ಲದೆ ಕೋಶದ ಮಧ್ಯದಲ್ಲಿರದೆ ಎಲ್ಲೋ ಮೂಲೆಯಲ್ಲಿರುತ್ತದೆ. ಕೋಶದ್ರವ ಹೆಚ್ಚಾಗಿಯೇ ಇರುವುದು ವ್ಯಕ್ತ. ಅಲ್ಲದೆ ಇದರಲ್ಲಿ ಯಾವ ಬಗೆಯ ನುಚ್ಚುನುರಿದ್ರವ್ಯಗಳೂ ಸಾಮಾನ್ಯವಾಗಿ ಇರುವುದಿಲ್ಲ. ಮಾನೋಸೈಟ್‌ಗಳ ಶೇಕಡಾವಾರು ಪ್ರಮಾಣ 2 - 3 ರಷ್ಟು; ಒಂದು ಘನ ಮಿಮೀ ರಕ್ತದಲ್ಲಿ 150 - 200 ಇಂಥ ವರ್ಣರಹಿತ ಕೋಶಗಳಿರುತ್ತವೆ.

ಇನ್ನೊಂದು ರೀತಿಯ ವಿಂಗಡಣೆ

[ಬದಲಾಯಿಸಿ]

ಒಟ್ಟಿನಲ್ಲಿ ವರ್ಣರಹಿತಕಣಗಳನ್ನು ನುಚ್ಚುದ್ರವ್ಯರಹಿತ ಕೋಶಗಳು (ಎಗ್ರ್ಯಾನ್ಯೂಲೋಸೈಟ್ಸ್) ಮತ್ತು ನುಚ್ಚುದ್ರವ್ಯಸಹಿತ ಕಣಗಳು (ಗ್ರ್ಯಾನ್ಯುಲೊಸೈಟ್ಸ್) ಎಂದು ವಿಂಗಡಿಸುವುದು ವಾಡಿಕೆ.[] ಶೇಕಡಾವಾರು ಪ್ರಮಾಣದಲ್ಲಿ (ಇದಕ್ಕೆ ಡಿಫರೆನ್ಷಿಯಲ್ ಡಬ್ಲ್ಯೂ. ಬಿ. ಸಿ. ಕೌಂಟ್ ಎಂದು ಹೆಸರಿದೆ) ನುಚ್ಚುದ್ರವ್ಯಕೋಶಗಳೇ ಹೆಚ್ಚಾಗಿರುತ್ತವೆ (ಸುಮಾರು 70% ಮೇಲ್ಪಟ್ಟು). ಕಾರಣಾಂತರಗಳಿಂದ (ತೀವ್ರ ಸೋಂಕು, ಅನೇಕ ಬಗೆಯ ಆಧುನಿಕ ಸಂಯೋಜಿತ ಔಷಧಗಳ ಸೇವನೆ ಇತ್ಯಾದಿ) ಈ ಕೋಶಗಳ ಪ್ರಮಾಣ ಕಡಿಮೆ ಆಗುತ್ತದೆ. ಸ್ವಾಭಾವಿಕವಾಗಿಯೇ ಪರೋಕ್ಷವಾಗಿ ನುಚ್ಚುರಹಿತಕೋಶಗಳ ಶೇಕಡಾವಾರು ಪ್ರಮಾಣ ಹೆಚ್ಚಾಗುತ್ತದೆ (ಶೇಕಡಾ 40 ಕ್ಕೂ ಹೆಚ್ಚು). ಇದಕ್ಕೆ ಗ್ರ್ಯಾನುಲೋಸೈಟೊಸಿಸ್ ಎಂದು ಹೆಸರು. ಈ ಪರಿಸ್ಥಿತಿ ಗಂಡಾಂತರದ ಸೂಚನೆ. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಷಯ ಎಂದರೆ ಈ ಸ್ಥಿತಿಯಲ್ಲಿ ವಾಸ್ತವವಾಗಿ ಕೋಶಗಳು ಮುಂಚೆ ಎಷ್ಟಿರುತ್ತವೋ ಈ ಸ್ಥಿತಿಯಲ್ಲೂ ಅಷ್ಟೇ ಇರುತ್ತವೆ. ಆದರೆ ದೇಹರಕ್ಷಣೆಯಲ್ಲಿ ಪ್ರತಿಯೊಂದು ಕ್ಷಣದಲ್ಲೂ ಭಾಗವಹಿಸುತ್ತಿರುವ ನುಚ್ಚುದ್ರವ್ಯಸಹಿತ ಕೋಶಗಳು (ಮುಖ್ಯವಾಗಿ ಪಾಲಿಮಾರ್ಫ್‌ಗಳು) ಅಧಿಕವಾಗಿ ನಾಶವಾಗುತ್ತ ಅವು ವಿರಳವಾಗುವುದು ನುಚ್ಚುರಹಿತ ಕೋಶಗಳ ಸಂಖ್ಯಾಭಿವೃದ್ಧಿಯಾಗಿರುವಂತೆ ತೋರುವ ಸ್ಥಿತಿಗೆ ಕಾರಣ.

ಉಲ್ಲೇಖಗಳು

[ಬದಲಾಯಿಸಿ]
  1. Monga I, Kaur K, Dhanda S (March 2022). "Revisiting hematopoiesis: applications of the bulk and single-cell transcriptomics dissecting transcriptional heterogeneity in hematopoietic stem cells". Briefings in Functional Genomics. 21 (3): 159–176. doi:10.1093/bfgp/elac002. PMID 35265979.
  2. Maton D, Hopkins J, McLaughlin CW, Johnson S, Warner MQ, LaHart D, Wright JD, Kulkarni DV (1997). Human Biology and Health. Englewood Cliffs, New Jersey, US: Prentice Hall. ISBN 0-13-981176-1.
  3. "Vital and Health Statistics Series 11, No. 247 (03/2005)" (PDF). Retrieved 2014-02-02.
  4. LaFleur-Brooks M (2008). Exploring Medical Language: A Student-Directed Approach (7th ed.). St. Louis, Missouri, US: Mosby Elsevier. p. 398. ISBN 978-0-323-04950-4.
  5. Alberts B, Johnson A, Lewis M, Raff M, Roberts K, Walter P (2002). "Leukocyte also known as macrophagesfunctions and percentage breakdown". Molecular Biology of the Cell (4th ed.). New York: Garland Science. ISBN 0-8153-4072-9.
  6. Saladin K (2012). Anatomy and Physiology: the Unit of Form and Function (6 ed.). New York: McGraw Hill. ISBN 978-0-07-337825-1.
  7. "Definition of white blood cell". www.cancer.gov (in ಇಂಗ್ಲಿಷ್). 2011-02-02. Retrieved March 15, 2023.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: