ವಿಷಯಕ್ಕೆ ಹೋಗು

ನೆರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆರಡಿಯಿಂದ ಉಂಟಾದ ಚರ್ಮದ ಗಾಯ

ನೆರಡಿಯು ಕುರಿ, ಆಕಳು, ಎಮ್ಮೆ, ಕುದುರೆ, ಹಂದಿ, ಮೇಕೆ, ಒಂಟೆ, ಜಿಂಕೆ ಮುಂತಾದ ಜಾನುವಾರುಗಳನ್ನು ಬಾಧಿಸುವ ವಿಷಮ ಸಾಂಕ್ರಮಿಕ ರೋಗ (ಆಂತ್ರಾಕ್ಸ್). ಬ್ಯಾಸಿಲಸ್ ಆಂತ್ರಸಿಸ್ ಎಂಬ ಕಡ್ಡಿ ಆಕಾರದ ಸೂಕ್ಷ್ಮಾಣುಜೀವಿ ಈ ರೋಗಕ್ಕೆ ಕಾರಣ.[] ಜ್ವರ, ಗುಲ್ಮ ಅತಿ ದೊಡ್ಡದಾಗುವುದು, ದೇಹದೊಳಗಿನ ದ್ರವಗಳು ರಕ್ತಮಿಶ್ರಿತವಾಗಿರುವುದು ಇವು ಈ ರೋಗದ ಮುಖ್ಯ ಚಿಹ್ನೆಗಳು. ಮಾಂಸಾಹಾರಿ ಪ್ರಾಣಿಗಳಾದ ನಾಯಿ, ನರಿ, ಬೆಕ್ಕುಗಳಲ್ಲಿ ಕಾಣಿಸುವುದು ಅಪರೂಪ. ಕುರಿ ಮತ್ತು ಆಕಳುಗಳಲ್ಲಿ ಹಲವು ವೇಳೆ ರೋಗ ಹಠಾತ್ತನೆ ಸಂಭವಿಸಿ, ರೋಗದ ಚಿಹ್ನೆಗಳನ್ನು ಗುರ್ತಿಸುವ ಮೊದಲೇ ರಾಸು ಸತ್ತು ಬೀಳುವುದುಂಟು. ಈ ರೋಗ ಮನುಷ್ಯನಿಗೂ ತಗಲುವುದುಂಟು. ಆಗ ವ್ರಣದ ರೂಪದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಚರ್ಮ ಹದಮಾಡುವವರು, ಕುರಿ ತುಪ್ಪಟ ವಿಂಗಡಿಸುವವರು ಈ ರೋಗಕ್ಕೆ ಗುರಿಯಾಗುತ್ತಾರೆ.

ನೆರಡಿ ಪ್ರಪಂಚದ ಎಲ್ಲ ಕಡೆ ವ್ಯಾಪಿಸಿರುವ ರೋಗ. ಬಹುಪುರಾತನ ಕಾಲದಿಂದಲೂ ಪರಿಚಿತವಾಗಿದೆ. ಆದರೆ ಇದು ಸಾಂಕ್ರಾಮಿಕ ಎಂದು ಗೊತ್ತಾಗಿದ್ದು ಕ್ರಿ.ಶ. 1836ರಲ್ಲಿ. ರಾಬರ್ಟ್ ಕಾಕ್ 1867ರಲ್ಲೂ ಲೂಯಿ ಪಾಶ್ಚರ್ 1877ರಲ್ಲೂ ಈ ರೋಗದ ಕ್ರಿಮಿಯನ್ನು ದೇಹದ ಹೊರಗೆ ಕೃತಕವಾಗಿ ಬೆಳೆಸುವ ವಿಧಾನವನ್ನು ಕಂಡುಹಿಡಿದು ರೋಗನಿರೋಧಕ ಔಷಧಿ ತಯಾರಿಕೆಗೆ ಮಾರ್ಗ ತೋರಿಸಿದರು. ಹೀಗೆ ಬಳಸಲಾಗುವ ಮದ್ದುಗಳಲ್ಲಿ ಮುಖ್ಯವಾದವು ಆಂತ್ರಾಕ್ಸ್ ವ್ಯಾಕ್ಸೀನ್, ಸಪಾನಿನ್ ವ್ಯಾಕ್ಸೀನ್, ಆಂಟಿ-ಅಂತ್ರಾಕ್ಸ್ ಸೀರಮ್ ಮುಂತಾದವು. ಆದರೆ ಈಗೀಗ ಪೆನಿಸಿಲಿನ್ ಬಳಕೆ ಯಶಸ್ವಿಯೆನಿಸಿದೆ.

ರೋಗ ಕಾಣಿಸಿಕೊಂಡ ಮೇಲೆ ಚಿಕಿತ್ಸೆ ನಡೆಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಹೆಚ್ಚು ಉತ್ತಮವೆನಿಸಿದೆ. ಅಂತ್ರಾಕ್ಸ್ ಬ್ಯಾಕ್ಟೀರಿಯಮಿನ ಬೀಜಾಣುಗಳು ಮಣ್ಣಿನಲ್ಲಿ ಯಾವುದೇ ಸೋಂಕುನಿವಾರಕಕ್ಕೆ ಬಗ್ಗದೆ 18 ವರ್ಷಗಳ ಕಾಲ ಬದುಕಿರಬಲ್ಲವು. ಅಲ್ಲದೆ ಇವಕ್ಕೆ ಹೆಚ್ಚು ಶಾಖವನ್ನೂ ತಡೆದುಕೊಳ್ಳಬಲ್ಲ ಸಾಮರ್ಥ್ಯ ಇದೆ. ಜೊತೆಗೆ ಗಾಳಿಗೆ ವಿಷಾಣುಗಳನ್ನು ತೆರೆದಿಟ್ಟಾಗ ಬಲುಬೇಗ ಬೀಜಾಣುಗಳು ರೂಪುಗೊಳ್ಳುತ್ತವಾದ್ದರಿಂದ ನೆರಡಿ ರೋಗದಿಂದ ಸತ್ತ ರಾಸುಗಳನ್ನು ಚರ್ಮ ಸುಲಿಯದೆಯೇ ನೆಲದಲ್ಲಿ 2 ಮೀ. ಆಳದ ಗುಂಡಿಗಳನ್ನು ತೋಡಿ ಸುಟ್ಟ ಸುಣ್ಣದೊಂದಿಗೆ ಹೂಳಿಬಿಡುತ್ತಾರೆ. ರೋಗಪೀಡಿತ ಪ್ರಾಣಿಯ ಸಗಣಿ ಮುಂತಾದ ಎಲ್ಲ ತ್ಯಾಜ್ಯ ವಸ್ತುಗಳನ್ನು ಸುಟ್ಟುಹಾಕಿಬಿಡುವುದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Basic Information What is anthrax?". CDC. 1 September 2015. Archived from the original on 17 May 2016. Retrieved 14 May 2016.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ನೆರಡಿ&oldid=1022706" ಇಂದ ಪಡೆಯಲ್ಪಟ್ಟಿದೆ