ವಿಷಯಕ್ಕೆ ಹೋಗು

ಜಾನ್ ಹಂಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಹಂಟರ್

ಜಾನ್ ಹಂಟರ್ (1728-93) ಇಂಗ್ಲೆಂಡಿನ (ಸ್ಕಾಟಿಷ್) ಶಸ್ತ್ರವೈದ್ಯ, ಖ್ಯಾತ ಅಂಗರಚನಾವಿಜ್ಞಾನಿ ಹಾಗೂ ಪ್ರಾಯೋಗಿಕ ರೋಗವಿಜ್ಞಾನದ (ಪೆತಾಲಜಿ) ಪಿತಾಮಹ. ಶಸ್ತ್ರಕ್ರಿಯೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿಸಿದಾತ, 20ನೆಯ ಶತಮಾನದ ಬೆಳೆವಣಿಗೆಗಳಿಗೆ ಅಗತ್ಯ ಹಂದರ (ಫ್ರೇಮ್‌ವರ್ಕ್) ನಿರ್ಮಿಸಿದಾತ. ‘ಆಲೋಚಿಸಬೇಡ, ಪ್ರಯೋಗಮಾಡು’ ಇದು ಶಸ್ತ್ರವೈದ್ಯರಿಗೆ ಈತ ನೀಡುತ್ತಿದ್ದ ಉಪದೇಶ.

ಜನನ, ವಿದ್ಯಾಭ್ಯಾಸ

[ಬದಲಾಯಿಸಿ]

ಹತ್ತು ಮಕ್ಕಳಿದ್ದ ಕುಟುಂಬದ ಕೊನೆಯ ಸದಸ್ಯನಾಗಿ 1728 ಫೆಬ್ರವರಿ 13ರಂದು ಸ್ಕಾಟ್ಲೆಂಡಿನಲ್ಲಿ ಜನಿಸಿದ.[೧][೨]

ಆಸ್ಪತ್ರೆಯ ದಾದಿಯ ಬೇಜವಾಬ್ದಾರಿಯಿಂದಾಗಿ ಈತ ಜನಿಸಿದ್ದು 12 ಗಂಟೆಗೆ ಮೊದಲೋ ಅಥವಾ ಆನಂತರವೋ ಎಂಬ ಗೊಂದಲವಿತ್ತು. ಈತ ಶಾಲೆ ಮತ್ತು ಪುಸ್ತಕ ದ್ವೇಷಿ. ಸ್ಥಳೀಯ ಗ್ರಾಮರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಸಹೋದರರು ಸಂಭಾವಿತರಂತೆ ಶಿಕ್ಷಣಾಸಕ್ತರಾಗಿದ್ದಾಗ ಕಿರಿಯನಾದ ಈತ ಬಯಲಿನಲ್ಲಿ ಕೀಟಗಳ, ಪ್ರಾಣಿಗಳ ಗೂಡುಗಳಲ್ಲಿ ಆಸಕ್ತನಾಗಿದ್ದ. 13 ವರ್ಷ ವಯಸ್ಸಿನಲ್ಲಿ ತಂದೆ ನಿಧನನಾದಾಗ ಶಾಲೆ ಬಿಟ್ಟು ಮನೆಯಲ್ಲಿಯೇ ಉಳಿದ. ಮುಂದಿನ ಆರು ವರ್ಷ ಮೇಲ್ನೋಟಕ್ಕೆ ನಿರುಪಯುಕ್ತವಾಗಿದ್ದ ಆತನ ಚಟುವಟಿಕೆಗಳು ಮುಂದೆ ಆತ ಕೈಗೊಂಡ ಅಧ್ಯಯನಗಳಿಗೆ ಬುನಾದಿಯಾದುವು. 17 ವರ್ಷ ವಯಸ್ಸಾದಾಗ ಬಡಗಿ ಹಾಗೂ ಮರ ವ್ಯಾಪಾರೀ ಸಂಬಂಧಿಯೊಬ್ಬನ ಜೊತೆಗೂಡಿ ಮರಗೆಲಸದ ಸಲಕರಣೆಗಳ ಬಳಕೆಯ ಅನುಭವ ಪಡೆದ.

ವೃತ್ತಿಜೀವನ

[ಬದಲಾಯಿಸಿ]

20 ನೆಯ ವಯಸ್ಸಿನಲ್ಲಿ ಲಂಡನ್‌ನಲ್ಲಿ ಖ್ಯಾತ ಪ್ರಸವವಿಜ್ಞಾನಿಯಾಗಿದ್ದ ಅಣ್ಣ ವಿಲಿಯಮ್‌ನ ಸಹಾಯಕನಾಗಿ ವೃತ್ತಿಜೀವನದಾರಂಭ (1748). ಖಾಸಗಿಯಾಗಿ ಅಂಗಛೇದನೆ ಮತ್ತು ಅಂಗರಚನಾವಿಜ್ಞಾನ ಬೋಧಿಸುತ್ತಿದ್ದ ಅಣ್ಣನ ಉಪನ್ಯಾಸಗಳಿಗೆ ಅಗತ್ಯವಾದ ಪೂರ್ವಸಿದ್ಧತೆ ಮಾಡಲು ನೆರವು ನೀಡುವುದು ಈತನ ಕೆಲಸ.[೩] ಇಂಥ ಕೆಲಸಗಳಲ್ಲಿ ಇವನ ವಿಶೇಷ ಪ್ರತಿಭೆಯನ್ನು ಗುರುತಿಸಿದ ವಿಲಿಯಮ್ ಇವನನ್ನು ಸೇಂಟ್ ಜಾರ್ಜ್ ಮತ್ತು ಸೇಂಟ್ ಬಾರ್ತಲೊಮ್ಯು ಆಸ್ಪತ್ರೆಗಳಲ್ಲಿ ಶಸ್ತ್ರಕ್ರಿಯಾ ತರಗತಿಗಳಿಗೆ ದಾಖಲಿಸಿದ. ಮೊದಲು ಚೆಲ್ಸಿಯ ಆಸ್ಪತ್ರೆಯಲ್ಲಿ ಅಂದಿನ ಖ್ಯಾತ ಶಸ್ತ್ರವೈದ್ಯ ವಿಲಿಯಮ್ ಚೆಸೆಲ್‌ಡೆನ್‌ನ (1688-1752) ಬಳಿ ಶಿಷ್ಯವೃತ್ತಿ, ತದನಂತರ (1751) ಸೇಂಟ್ ಬಾರ್ತಲೊಮ್ಯು ಆಸ್ಪತ್ರೆಯ ಜಾನ್ ಪರ‍್ಸಿವಲ್ ಪಾಟ್‌ನ (1714-88) ಮಾರ್ಗದರ್ಶನದಲ್ಲಿ ಅಭ್ಯಾಸ. ಸರ್ಜನ್ಸ್ ಹಾಲ್‌ನಲ್ಲಿ ಸಿದ್ಧಪಡಿಸಿದ ಉಪನ್ಯಾಸಗಳನ್ನು ಓದುವ ಅಂಗರಚನಾ ವಿಜ್ಞಾನ ಬೋಧಕನ ಹುದ್ದೆ ಪ್ರಾಪ್ತಿ (1753). ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ‘ಹೌಸ್ ಸರ್ಜನ್’ ಆಗಿ (1754-56) ಪ್ರಾಯೋಗಿಕ ತರಬೇತಿ. ಆ ಅವಧಿಯಲ್ಲಿ ಘ್ರಾಣನರದ ಶಾಖೆಗಳು ತಲೆಬುರುಡೆಯಿಂದ ಹೊರಬರುವ ಪಥಗಳನ್ನು ನಿಖರವಾಗಿ ಗುರುತಿಸುವುದರಲ್ಲಿ ತಲ್ಲೀನ. ಆತ ಅಂಗಛೇದನ ಮಾಡಿದ ನಮೂನೆಯೊಂದು ಇಂದಿಗೂ ವಸ್ತುಸಂಗ್ರಹಾಲಯದಲ್ಲಿ ಲಭ್ಯವಿದೆ.

ಸೇಂಟ್ ಜಾರ್ಜ್ ಆಸ್ಪತ್ರೆಯ ಶಸ್ತ್ರವೈದ್ಯನಾಗಿ ನೇಮಕ (1758). ಬೋಧನೆಯ ಜವಾಬ್ದಾರಿಯ (1768) ನಿರ್ವಹಣೆಯೊಂದಿಗೆ ‘ಶಸ್ತ್ರಕ್ರಿಯೆಯ ತತ್ತ್ವಗಳು ಮತ್ತು ಅಭ್ಯಾಸ’ ಕುರಿತು ಖಾಸಗಿ ಉಪನ್ಯಾಸಗಳ ನೀಡಿಕೆ ಆರಂಭ (1770). ಏತನ್ಮಧ್ಯೆ ಸೇನಾಪಡೆಗಳ ಶಸ್ತ್ರವೈದ್ಯ ವೃತ್ತಿ (1760-63). ಮೂರನೆಯ ಜಾರ್ಜ್‌ನ ರಾಜವೈದ್ಯ ಗೌರವ ಪ್ರಾಪ್ತಿ (1776).

ಶಸ್ತ್ರಕ್ರಿಯೆ ಕ್ಷೇತ್ರಕ್ಕೆ ಬಲು ಮುಖ್ಯ ನಿರ್ದಿಷ್ಟ ಕೊಡುಗೆಗಳನ್ನು ನೀಡುವುದರೊಂದಿಗೆ, ವೈಜ್ಞಾನಿಕ ವೃತ್ತಿಗೆ ಸ್ಥಾನಮಾನ ದೊರಕಿಸಿಕೊಟ್ಟ ಕೀರ್ತಿಯೂ ಈತನಿಗೆ ಸಲ್ಲುತ್ತದೆ. ಗಾನೊರೀಯ ಮತ್ತು ಫರಂಗಿ ರೋಗಗಳು (ಸಿಫಿಲಿಸ್) ಒಂದೇ ರೋಗದ ವಿಭಿನ್ನ ಮೈದೋರಿಕೆಗಳು ಎಂಬುದನ್ನು ಸಿದ್ಧಪಡಿಸಲೋಸುಗ ಒಂದನ್ನು ತಗಲಿಸಿಕೊಂಡು ಸುದೀರ್ಘ ಕಾಲ ನರಳಿದನೆಂಬ ಐತಿಹ್ಯವಿದೆ.[೪]

ಅಂಗರಚನಾವಿಜ್ಞಾನ ಮತ್ತು ಶರೀರಕ್ರಿಯಾ ವಿಜ್ಞಾನಗಳ ತುಲನಾತ್ಮಕ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಇದ್ದ ಈತ ಇವೆರಡರ ತಳಹದಿಯ ಮೇಲೆ ಶಸ್ತ್ರಕ್ರಿಯೆಯನ್ನು ವಿಜ್ಞಾನದಂತೆ ಬೋಧಿಸಬೇಕೆಂದು ಒತ್ತಾಯ ಮಾಡುತ್ತಿದ್ದ. ಈತನ ಸಂಶೋಧನೆಗಳ ವ್ಯಾಪ್ತಿ ಬಲು ವಿಸ್ತಾರವಾದದ್ದು. ಅನ್ಯೂರಿಸಮ್‌ನ ಶಸ್ತ್ರಕ್ರಿಯಾ ಚಿಕಿತ್ಸೆ, ಊತಕಗಳ ನಾಟಿ ಮಾಡುವಿಕೆ ಹಾಗೂ ಪುನರುದ್ಭವ, ರತಿ ರೋಗಗಳು ಈ ಪೈಕಿ ಕೆಲವು. ಅತ್ಯಂತ ಮುಂಬರಿದ ಕುಶಲೀ ತಂತ್ರ ಎಂದು ಈತನ ಶಸ್ತ್ರಕ್ರಿಯಾ ವಿಧಾನ ಮನ್ನಣೆ ಗಳಿಸಿತ್ತು. ಪ್ರಪಂಚದ ಮೂಲೆಮೂಲೆಗಳಿಂದ ಪ್ರಾಣಿಗಳನ್ನು ಸಂಗ್ರಹಿಸಿ ಅಭ್ಯಸಿಸುವುದು ಈತನ ಹವ್ಯಾಸ. ಅಂಗರಚನಾ ವಿಜ್ಞಾನ, ಶರೀರಕ್ರಿಯಾ ವಿಜ್ಞಾನ ಮತ್ತು ರೋಗ ವಿಜ್ಞಾನಗಳ ಅಧ್ಯಯನಕ್ಕೆ ಉಪಯುಕ್ತವಾದ 10,000ಕ್ಕೂ ಹೆಚ್ಚಿನ ಸಂರಕ್ಷಿತ ನಮೂನೆಗಳು ಈತನ ಖಾಸಗಿ ಸಂಗ್ರಹಾಲಯದಲ್ಲಿದ್ದವು. ಈತನ ಮರಣಾನಂತರ ಸರ್ಕಾರ ಅವನ್ನು ಖರೀದಿಸಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ಗೆ ದಾನಮಾಡಿತು.

ಸಂಶೋಧನಾ ಪ್ರಬಂಧಗಳು

[ಬದಲಾಯಿಸಿ]

ಈತನ ಮೊದಲನೆಯ ಸಂಶೋಧನ ಪ್ರಬಂಧ ‘ದಿ ಸ್ಟೇಟ್ ಆಫ್ ದಿ ಟೆಸ್ಟಿಸ್ ಇನ್ ದಿ ಫೀಟಸ್ ಆ್ಯಂಡ್ ಆನ್ ದಿ ಹರ್ನಿಯ ಕಂಜೆನಿಟ’ ಪ್ರಕಟವಾದದ್ದು ಅಣ್ಣ ವಿಲಿಯಮ್ ಹಂಟರ್‌ನ ‘ಮೆಡಿಕಲ್ ಕಮೆಂಟರೀಸ್’ ನಿಯತಕಾಲಿಕದಲ್ಲಿ (1762). ‘ದಿ ನ್ಯಾಚುರಲ್ ಹಿಸ್ಟರಿ ಆಫ್ ದಿ ಹ್ಯೂಮನ್ ಟೀತ್ (1771)’, ‘ಆನ್ ದಿ ಡೈಜೆಶನ್ ಆಫ್ ದಿ ಸ್ಟಮಕ್ ಆಫ್ಟರ್ ಡೆತ್ (1772)’, ‘ಅಕೌಂಟ್ ಆಫ್ ಎ ವುಮನ್ ಹು ಹ್ಯಾಡ್ ದಿ ಸ್ಮಾಲ್‌ಪಾಕ್ಸ್ ಡ್ಯೂರಿಂಗ್ ಪ್ರೆಗ್ನೆನ್ಸಿ ಆ್ಯಂಡ್ ಹು ಸೀಮ್‌ಡ್ ಟು ಹ್ಯಾವ್ ಕಮ್ಯೂನಿಕೇಟೆಡ್ ದಿ ಸೇಮ್ ಡಿಸೀಸ್ ಟು ದಿ ಫೀಟಸ್ (1780)’, ‘ಎ ಟ್ರೀಟಿಸ್ ಆನ್ ದಿ ವಿನಯ್‌ರಿಯಲ್ ಡಿಸೀಸ್ (1786)’, ‘ಅಬ್ಸರ್ವೇಶನ್ಸ್ ಆನ್ ಸರ್ಟೆನ್ ಪಾರ್ಟ್ಸ್ ಆಫ್ ದಿ ಆ್ಯನಿಮಲ್ ಇಕಾನಮಿ (1786)’, ‘ಎ ಪ್ರ‍್ಯಾಕ್ಟಿಕಲ್ ಟ್ರೀಟಿಸ್ ಆನ್ ದಿ ಡಿಸೀಸಸ್ ಆಫ್ ದಿ ಟೀತ್ (1778)’ ಇವು ಈತನ ಪ್ರಕಟಣೆಗಳು. ಈತನ ಮರಣಾನಂತರ ಪ್ರಕಟವಾದದ್ದು ‘ಎ ಟ್ರೀಟಿಸ್ ಆನ್ ದಿ ಬ್ಲಡ್, ಇನ್‌ಫ್ಲಮೇಶನ್ ಆ್ಯಂಡ್ ಗನ್‌ಶಾಟ್ ವೂಂಡ್ಸ್ (1794)’.

ಮಾನವ ತೊಡೆಯಲ್ಲಿರುವ ಅಧಿಕರ್ಷಕ ನಾಲೆಗೆ (ಅ್ಯಡಕ್ಟರ್ ಕೆನಾಲ್) ಹಂಟರ್ಸ್ ಕೆನಾಲ್ ಎಂದೂ ಒಂದು ರತಿರೋಗವನ್ನು ಹಂಟರ್ಸ್ ಷ್ಯಾಂಕರ್ ಎಂದೂ ಹೆಸರಿಸಲಾಗಿದೆ. ಈತ 1793 ಅಕ್ಟೋಬರ್ 16ರಂದು ನಿಧನನಾದ.

ಉಲ್ಲೇಖಗಳು

[ಬದಲಾಯಿಸಿ]
  1. {{cite encyclopedia  |encyclopedia=Oxford Dictionary of National Biography  |edition=online  |publisher=Oxford University Press  |ref=harv  |last    =  |last1    =  |author  =  |author1  =  |authors  =  |first    =  |first1  =  |authorlink  =  |author-link  =  |HIDE_PARAMETER10=  |authorlink1  =    |last2    =  |author2  =  |first2    =  |authorlink2  =  |HIDE_PARAMETER16=  |last3    =  |author3  =  |first3    =  |authorlink3  =  |HIDE_PARAMETER21=  |title    =The Oxford Dictionary of National Biography  |title    =  |url      =http://www.oxforddnb.com/view/article/14220  |doi        =10.1093/ref:odnb/14220  |origyear    =  |year        =  |date        =23 September 2004  |month      =  |HIDE_PARAMETER30=  |HIDE_PARAMETER31=  |separator  =  |mode        =    |HIDE_PARAMETER38= }} (Subscription or UK public library membership required.)
  2. Moore, p. 43
  3. Brook C. 1945. Battling surgeon. Strickland, Glasgow. pp. 15–17
  4. Gladstein, Jay (2005). "Hunter's chancre: did the surgeon give himself syphilis?". Clinical Infectious Diseases. 41 (1): 128, author reply 128–9. doi:10.1086/430834. PMID 15937780.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: