ಮಹಾರಾಣಿ ವಿಕ್ಟೋರಿಯ

ವಿಕಿಪೀಡಿಯ ಇಂದ
Jump to navigation Jump to search

ವಿಕ್ಟೋರಿಯ(1819-1901) ಗ್ರೇಟ್ ಬ್ರಿಟನ್ನಿನ ಪ್ರಸಿದ್ಧರಾಣಿ (1831-1901) ಹಾಗೂ ಭಾರತದ ಚಕ್ರವರ್ತಿನಿ (1876-1901).

ಬದುಕು[ಬದಲಾಯಿಸಿ]

ಲಂಡನ್ನಿನ ಕೆನ್‍ಸಿಂಗ್‍ಟನ್ ಎಂಬಲ್ಲಿ 1819 ಮೇ 24ರಂದು ಜನಿಸಿದಳು. ಇವಳ ತಂದೆ ಜಾರ್ಜ್‍ನ ನಾಲ್ಕನೆಯ ಮಗ ಎಡ್ವರ್ಡ್ ಡ್ಯೂಕ್, ತಾಯಿ ಮರಿಯಲೂಸಿಯ. ಇವಳು ವರ್ಷದ ಮಗುವಾಗಿರುವಾಗಲೇ ಎಡ್ವರ್ಡ್ ಡ್ಯೂಕ್ ನಿಧನಹೊಂದಿದ್ದರಿಂದ ತಾಯಿಯ ಪೋಷಣೆಯಲ್ಲಿ ಬೆಳೆದಳು. ಇವಳ ಚಿಕ್ಕಪ್ಪ ನಾಲ್ಕನೆಯ ವಿಲಿಯಂ ಸಹ ಮಕ್ಕಳಿಲ್ಲದೆ ನಿಧನಹೊಂದಿದ್ದರಿಂದ (1937 ಜೂನ್ 20) ಸಾಮ್ರಾಜ್ಯಕ್ಕೆ ಇವಳೇ ಉತ್ತರಾಧಿಕಾರಿಯಾದಳು (1837). ಅನಂತರ 1838 ಜೂನ್ 28ರಂದು ವೆಸ್ಟ್‍ಮಿನ್ಸ್ಟ್‍ರ್‍ನಲ್ಲಿ ಮಹಾರಾಣಿಯಾಗಿ ಸಿಂಹಾಸನವೇರಿದಳು. ತನ್ನ 63ವರ್ಷಗಳ ಸುದೀರ್ಘ ಆಳಿಕೆಯಲ್ಲಿ ಇಂಗ್ಲೆಂಡನ್ನು ಪ್ರಗತಿಪಥದತ್ತ ಕೊಂಡೊಯ್ದಳು.

ಈಕೆ ತನ್ನ ಚಿಕ್ಕಪ್ಪನ ಮಗನಾದ ರಾಜಕುಮಾರ ಆಲ್ಬರ್ಟ್ ಆಫ್ ಸ್ಯಾಕ್ಸ್‍ಕೊಬರ್ಗ್ ಗೋಥಾನನ್ನು ವಿವಾಹವಾಗಿದ್ದಳು (1840 ಫೆಬ್ರವರಿ). ಈ ದಂಪತಿಗಳಿಗೆ ನಾಲ್ಕು ಗಂಡುಮಕ್ಕಳು, ಐದು ಹೆಣ್ಣು ಮಕ್ಕಳಿದ್ದರು. ಈಕೆ ತನ್ನ ಪತಿಯ ನಿಧನದ (1861) ಅನಂತರ ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಇವಳು 1901 ಜನವರಿ 25ರಂದು ನಿಧನ ಹೊಂದಿದಳು. ಅನಂತರ ಹಿರಿಯ ಮಗ ಏಳನೆಯ ಎಡ್ವರ್ಡ್ ಇವಳ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೆ ಬಂದ.

ಆಳಿಕೆ[ಬದಲಾಯಿಸಿ]

ಇವಳ ಆಳಿಕೆಯ ಕಾಲವನ್ನು ಇಂಗ್ಲೆಂಡಿನ ಇತಿಹಾಸದಲ್ಲಿ ವಿಕ್ಟೋರಿಯ ಯುಗ ಎಂದು ಕರೆಯಲಾಗಿದೆ. ಇವಳು ಲಾರ್ಡ್‍ಮೆಲ್ಬರ್ನ್, ರಾಬರ್ಟ್‍ಪೀಲ್, ವಿನ್ಸೆಂಟ್ ಮಿಸ್ ಕೌಂಟ್ ಪಾಲ್ಲೆಸ್ಟ್ರೋನ್, ಬೆಂಜಮಿನ್ ಡಿಸ್ರೇಲಿ, ವಿಲಿಯಂ ಗ್ಲ್ಯಾಡ್‍ಸ್ಟನ್‍ರಂಥ ದಕ್ಷ ಮಂತ್ರಿಗಳನ್ನು ನೇಮಿಸಿಕೊಂಡಿದ್ದಳು.

ಇವಳ ಆಳಿಕೆ ಕಾಲದಲ್ಲಿ ಅನೇಕ ಯುದ್ಧಗಳು ನಡೆದುವು. ಇಂಗ್ಲೆಂಡ್ ಚೀನವನ್ನು ಅಫೀಮ್ ಯುದ್ಧದಲ್ಲಿ ಸೋಲಿಸಿ ಹಾಂಗ್‍ಕಾಂಗ್ ಪ್ರದೇಶವನ್ನು ಪಡೆದುಕೊಂಡಿತು(1839-42). ರಷ್ಯವನ್ನು ಕ್ರಿಮಿಯ ಯುದ್ಧದಲ್ಲಿ ಸೋಲಿಸಿತು(1853-56). ದಕ್ಷಿಣ ಆಫ್ರಿಕವನ್ನು ಬೋಯರ್ ಯುದ್ಧದಲ್ಲಿ ಸೋಲಿಸಿತು(1899-1902). ಡಿಸ್ರೇಲಿ ಎಂಬ ಪ್ರಧಾನಮಂತ್ರಿ ಜನಸಾಮಾನ್ಯರಿಗೆ ಉಪಯೋಗವಾಗುವ ಅನೇಕ ಕಾರ್ಯಗಳನ್ನು ಕೈಗೊಂಡ. ಇವನ ವಿದೇಶಾಂಗ ನೀತಿ ಉನ್ನತಮಟ್ಟದ್ದಾಗಿತ್ತು. ಇದರಿಂದ ಇಂಗ್ಲೆಂಡ್ ಇಡೀ ಪ್ರಪಂಚದಲ್ಲಿ ಪ್ರತಿಷ್ಠೆ ಪಡೆಯಿತು. ವಿಕ್ಟೋರಿಯ ಆಳಿಕೆಯಲ್ಲಿಯೇ ಭಾರತ ಬ್ರಿಟಿಷ್ ಸಾಮ್ರಾಜ್ಯದ ಪ್ರಮುಖ ಅಂಗವಾಗಿ ಪರಿಣಮಿಸಿತು. ಪೂರ್ವದೇಶಗಳೊಂದಿಗೆ ವ್ಯಾಪಾರ ಸ್ವಾಮ್ಯಕ್ಕಾಗಿಯೂ ಸಾಮ್ರಾಜ್ಯದ ನಿರ್ವಹಣೆಗಾಗಿಯೂ ಸೂಯೆಜ್ ಕಾಲುವೆಯ ಮೇಲೆ ಹತೋಟಿ ಹೊಂದುವುದಕ್ಕಾಗಿಯೂ 1875ರಲ್ಲಿ ಈಜಿಪ್ಟಿನ ದೊರೆಯಿಂದ ಸೂಯೆಜ್ ಕಾಲುವೆಯ ಷೇರುಗಳನ್ನು ಕೊಂಡುಕೊಳ್ಳಲಾಯಿತು. ರಷ್ಯದ ಬಗ್ಗೆ ಇಂಗ್ಲೆಂಡಿಗೆ ಭೀತಿ ಇದ್ದು, ಅದು ಪ್ರಬಲವಾಗುವುದು ಇದಕ್ಕೆ ಇಷ್ಟವಿರಲಿಲ್ಲ. ರಷ್ಯನ್ನರು ಆಫ್ಘಾನಿಸ್ತಾನದ ಮೂಲಕ ಭಾರತವನ್ನು ಆಕ್ರಮಿಸುವರೆಂಬ ಸಂಶಯದಿಂದ ಲಿಟ್ಟನ್ ಎಂಬವನನ್ನು ಭಾರತದ ಗವರ್ನರ್ ಜನರಲ್ಲಾಗಿ ಕಳುಹಿಸಲಾಯಿತು. ಈ ವಿಚಾರವೇ ಆಫ್ಘನ್ ಯುದ್ಧಕ್ಕೆ ಕಾರಣವಾಯಿತು.

1858ರಲ್ಲಿ ರಾಣಿಯು ಭಾರತದ ಆಡಳಿತವನ್ನು ಈಸ್ಟ್ ಇಂಡಿಯ ಕಂಪನಿಯಿಂದ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಳು. ಇವಳು 1877ರಲ್ಲಿ ಭಾರತದ ಚಕ್ರವರ್ತಿನಿಯಾದಳು. ಇವಳ ಕಾಲದಲ್ಲೆ ಭಾರತ ದಲ್ಲಿ ವ್ಯಾಪಾರ ಮಂಡಳಿಯನ್ನು ಸ್ಥಾಪಿಸಲಾಯಿತು. ಈಜಿಪ್ಟ್, ಆಸ್ಟ್ರೇಲಿಯ, ಕೆನಡ ಮುಂತಾದ ದೇಶಗಳಲ್ಲಿ ಇಂಗ್ಲೆಂಡ್ ತನ್ನ ವಸಾಹತುಗಳನ್ನು ಸ್ಥಾಪಿ ಸಿತ್ತು. ತನ್ನ ಅಧೀನ ದೇಶಗ ಳಿಂದ ಕಚ್ಚಾಸಂಪನ್ಮೂಲಗ ಳನ್ನು ಇಂಗ್ಲೆಂಡಿಗೆ ಸಾಗಿಸಿ, ಸಿದ್ಧವಸ್ತುಗಳಾಗಿ ಪರಿವ ರ್ತಿಸಿ, ಪುನಃ ಅಧೀನ ದೇಶ ಗಳಿಗೆ ಮಾರಾಟಕ್ಕೆ ಕಳುಹಿಸುವ ವ್ಯವಸ್ಥೆ ರೂಪಿತವಾಯಿತು. ಈ ವೇಳೆಗೆ ಇಂಗ್ಲೆಂಡಿನ ಆರ್ಥಿಕ ಕ್ಷೇತ್ರದಲ್ಲಿ ಮಹತ್ತ್ವದ ಬದಲಾವಣೆಗಳು ಆರಂಭವಾಗಿದ್ದುವು. ಕೃಷಿ ಪ್ರಧಾನವಾಗಿದ್ದ ಇಂಗ್ಲೆಂಡ್ ಕೈಗಾರಿಕಾ ರಾಷ್ಟ್ರವಾಗತೊಡಗಿತು. ಈ ಬದಲಾವಣೆಗಳನ್ನು ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಯಿತು. ಯಾಂತ್ರೀಕರಣದಿಂದ ಆರ್ಥಿಕ ಸ್ಥಿತಿ ಉತ್ತಮಗೊಂಡಿತು. ಹೊಸ ಹೊಸ ಆವಿಷ್ಕಾರಗಳಿಂದ ಕೈಗಾರಿಕೆಗಳು ಅಭಿವೃದ್ಧಿಗೊಂಡವು. ವಿಜ್ಞಾನ, ತಂತ್ರಜ್ಞಾನದ ಬೆಳೆವಣಿಗೆಯಿಂದ ಕೈಗಾರಿಕೆಗಷ್ಟೇ ಅಲ್ಲದೆ ಕೃಷಿಗೂ ಅನುಕೂಲ ವಾಯಿತು. ಉತ್ತಮ ರಸ್ತೆಗಳ ನಿರ್ಮಾಣದಿಂದ ಸರಕು ಸಾಗಾಣಿಕೆಗೆ ಅನುಕೂಲವಾಯಿತು.

ಇವಳ ಕಾಲದಲ್ಲಿ ಇಂಗ್ಲೆಂಡ್ ಸರ್ವಾಂಗೀಣ ಪ್ರಗತಿ ಸಾಧಿಸಿದ್ದರಿಂದ ಇದನ್ನು ಪ್ರಪಂಚದ ಕಾರ್ಯಾಗಾರ ಎಂದು ಕರೆಯಲಾಯಿತ್ತು. ಇವಳ ಆಳಿಕೆಯ ಕಾಲದಲ್ಲಿ ಎರಡನೆಯ ಸಂಸತ್ತು ಸುಧಾರಣಾ ಅಧಿನಿಯಮ ಜಾರಿಗೆ ಬಂತು. ಕಸಬುದಾರರಿಗೆ ಮತಚಲಾವಣೆಯ ಹಕ್ಕು ಪ್ರಾಪ್ತವಾಯಿತು. ರಹಸ್ಯ ಮತದಾನ ಅಧಿನಿಯಮ 1878ರಲ್ಲಿ ಜಾರಿಗೆ ಬಂತು. ಮೂರನೆಯ ಸಂಸತ್ತು ಸುಧಾರಣಾ ಅಧಿನಿಯಮದಂತೆ ರೈತರಿಗೆ ಮತದಾನದ ಹಕ್ಕು ದೊರೆಯಿತು (1884). ಪ್ರಾಪ್ತ ವಯಸ್ಕ ಪುರುಷರೆಲ್ಲರಿಗೂ ಮತ ಚಲಾಯಿಸುವ ಹಕ್ಕು ಜಾರಿಗೆ ಬಂತು. ಇವಳ ಕಾಲದಲ್ಲೇ ಕಾರ್ಮಿಕ ಪರಿಹಾರದ ಕಾಯಿದೆ, ಔದ್ಯೋಗಿಕ ಸಂಘಗಳ ಕಾಯಿದೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಕಾಯಿದೆ, ವೃದ್ಧಾಪ್ಯ ವೇತನ ಕಾಯಿದೆ ಮುಂತಾದವು ಜಾರಿಗೆ ಬಂದುವು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: