ಜೋಸೆಫ್ ಲಿಸ್ಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಸೆಫ್ ಲಿಸ್ಟರ್
ಜೋಸೆಫ್ ಲಿಸ್ಟರ್
ಜನನ1827
ಎಸ್ಸೆ‍ಕ್ಸ್, ಆಪ್ಟಾನ್
ವೃತ್ತಿಸರ್ಜನ್
ವಿಷಯಶಸ್ತ್ರಚಿಕಿತ್ಸೆ

ಸಹಿ

ಜೋಸೆಫ್ ಲಿಸ್ಟರ್ ಒಬ್ಬ ಬ್ರಿಟಿಷ್ ಶಸ್ತ್ರವೈದ್ಯ, ವೈದ್ಯಕೀಯ ವಿಜ್ಞಾನಿ. ಶಸ್ತ್ರಕ್ರಿಯೆಗೆ ಮುನ್ನ ಎಲ್ಲ ಸಂಬಂಧಿತ ಸಲಕರಣೆಗಳನ್ನು ಮತ್ತು ವ್ಯಕ್ತಿಗಳ ಕೈಗಳನ್ನು ಪೂತಿನಾಶಕಗಳಿಂದ ತೊಳೆಯುವ ಸಂಪ್ರದಾಯ ಹುಟ್ಟುಹಾಕುವುದರ ಮೂಲಕ ಶಸ್ತ್ರಕ್ರಿಯಾ ಮಂದಿರದಲ್ಲಾಗುವ ಸೋಂಕುಗಳಿಂದ ಮರಣಿಸುವವರ ಸಂಖ್ಯೆ ಕಡಿಮೆ ಮಾಡಿದವ. ಈತ ಆವಿಷ್ಕರಿಸಿದ ಪೂತಿನಾಶಕಗಳ ಬಳಕೆ ಆಧಾರಿತ ವಿಧಾನ ಈಗ ಆಚರಣೆಯಲ್ಲಿ ಇಲ್ಲದಿದ್ದರೂ ಶಸ್ತ್ರಕ್ರಿಯೆಯಿಂದ ಆಗುವ ಗಾಯದ ಮೂಲಕ ಬ್ಯಾಕ್ಟೀರಿಯ ಪ್ರವೇಶ ತಡೆಗಟ್ಟಬೇಕೆಂಬ ತತ್ತ್ವ ಇಂದೂ ಶಸ್ತ್ರಕ್ರಿಯೆಗಳ ಮೂಲತತ್ತ್ವವಾಗಿ ಉಳಿದಿದೆ.

ಬಾಲ್ಯ[ಬದಲಾಯಿಸಿ]

೧೮೨೭ರಲ್ಲಿ ಜೋಸೆಫ್ ಲಿಸ್ಟರ್ ಇಂಗ್ಲಿಷ್ ಹಳ್ಳಿಯ ವಾತಾವರಣದಲ್ಲಿ ಅಪ್ಟಾನ್ ನಲ್ಲಿ ಹುಟ್ಟಿದನು.[೧] ತಂದೆ-ತಾಯಿಗಳು "ಕ್ವೇಕರ್ಸ್(quakers)" ಎಂಬ ಧಾರ್ಮಿಕ ಪಂಥಕ್ಕೆ ಸೇರಿದವರು. ಆಚಾರ-ವಿಚಾರ, ಸಂಪ್ರದಾಯವನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದರು. ಆಡಂಬರದ ಪೂಜೆಗೆ ಸ್ಥಾನವಿರಲಿಲ್ಲ. ಸರಳ ಜೀವನ ನಡೆಸುತ್ತಿದ್ದರು. ಕೆಲಸದಲ್ಲಿ ಶ್ರದ್ಧೆ, ಆಸಕ್ತಿ, ಶ್ರಮ, ನಿಷ್ಠೆಯಿಂದ ಆಸಕ್ತರು. ಎಲ್ಲ ಕ್ವೇಕರ್ಸ್ ಮಕ್ಕಳಂತೆ ಜೋಸೆಫ್ ಕೂಡ ಕಟ್ಟುನಿಟ್ಟಿನ ವಾತವರಣದಲ್ಲಿ ಬೆಳೆದರೂ ಅವನ ಬಾಲ್ಯ ಚೇತೋಹಾರಿಯಾಗಿತ್ತು.

ಸಾವಿನ ಬಲೆ-ಆಸ್ಪತ್ರೆ[ಬದಲಾಯಿಸಿ]

ಆಸ್ಪತ್ರೆ, ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದವರಿಗೆ ಅನಾರೋಗ್ಯದ ಕೇಂದ್ರವಾಗಿತ್ತು. ಕಾಹಿಲೆಯಿಂದ ವಾಸಿ ಹೊಂದುವ ಬದಲಾಗಿ, ಆಸ್ಪತ್ರೆಗಳಲ್ಲಿ ಜನರು ಕಾಹಿಲೆಗೆ ಈಡಾಗುತ್ತಿದ್ದರು. ಇಂದಿನ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಲಾಗಿದೆ. ಸಾಂಕ್ರಾಮಿಕ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಆದರೆ, ಹತ್ತೊಂಬತ್ತನೆಯ ಶತಮಾನದ ಆಸ್ಪತ್ರೆಗಳು ಕೊಳಕಿನ ಆಗರ. ವಾರ್ಡ್ ಗಳಲ್ಲಿ ರೋಗಿಗಳನ್ನು ತುಂಬಿರುತ್ತಿದ್ದರು. ಇದರಿಂದ ರೋಗ ಸಾಂಕ್ರಾಮಿಕವಾಗಿ ಹರಡುತ್ತಿತ್ತು. ಹಾಸ್ಪಿಟಲ್ ಸೆಪ್ಸಿಸ್ ಕಾಹಿಲೆ ಸಾಮಾನ್ಯವಾಗಿತ್ತು. ಸಾವು ನಿಶ್ಚಿತವಾಗಿತ್ತು. 'ಹಾಸ್ಪಿಟಲ್ ಸೆಪ್ಸಿಸ್' ಎಂದರೆ, ಆಸ್ಪತ್ರೆಯಲ್ಲಿ ಹರಡುವ ಸೋಂಕು ರೋಗ. ಆಪರೇಷನ್ ಮಾಡುವ ವಿಧಾನವು ಹೊಸ ತಂತ್ರದಿಂದ ಆವಿಷ್ಕಾರ ಹೊಂದಿದ್ದರೂ, ಪರಿಸರದ ಮಾಲಿನ್ಯದ ಕಾರಣವಾಗಿ ಈ ಹೊಸ ವಿಧಾನವು ನಿರೀಕ್ಷಿತ ಫಲವನ್ನು ಕೊಡಲಿಲ್ಲ. ಯುದ್ಧದಲ್ಲಿ ಸೈನಿಕರು ಸಾಯುವ ಸಾಧ್ಯತೆಗಿಂತ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ರೋಗಿಗಳು 'ಹಾಸ್ಪಿಟಲ್ ಸೆಪ್ಸಿಸ್'ನಿಂದ ಸಾಯುವ ಸಾಧ್ಯತೆ ಹೆಚ್ಚಾಗಿದೆಯೆಂದು ವೈದ್ಯರು ಹೇಳುತ್ತಿದ್ದರು!

ಜೋಸೆಫ್ ಲಿಸ್ಟರ್ ವೀರಯೋಧನಾಗಿ 'ಹಾಸ್ಪಿಟಲ್ ಸೆಪ್ಸಿಸ್' ಎಂಬ ಶತ್ರುವನ್ನು ಸೋಲಿಸಿ ನಾಶ ಮಾಡಿದ.[೨] ಆಸ್ಪತ್ರೆಯ ಸಾವಿನ ವಾತವರಣವನ್ನು ಶಾಂತಿಧಾಮವನ್ನಾಗಿ ಪರಿವರ್ತಿಸಿ ಆರೋಗ್ಯ ಸುಧಾರಣೆಯ ಆಶಾದಾಯಕ ನಿಕೇತನವನ್ನಾಗಿ ಪರಿವರ್ತಿಸಿದನು. ಆಸ್ಪತ್ರೆಗಳು ಆರೋಗ್ಯದ ಕೇಂದ್ರಗಳಾಗಿ ರೋಗಿಗೆ ಜೀವಿಸುವ ಆಸೆಯ ದೀವಿಗೆಯಾಗಿ ಹೊಸದೊಂದು ಬಾಳು ಕೊಟ್ಟಿತು ಲಿಸ್ಟರ್‌ನ ಸುಧಾರಣೆಗಳು.

ಬಾಲ್ಯ, ವಿದ್ಯಾಭ್ಯಾಸ[ಬದಲಾಯಿಸಿ]

ತನ್ನ ಮನೆಯ ಸುತ್ತಲೂ ಕಂಡುಬಂದ ಪ್ರಾಣಿ-ಪಕ್ಷಿಗಳನ್ನು ಗಂಟೆಗಟ್ಟಲೆ ನೋಡುತ್ತಾ ಕಾಲ ಕಳೆಯುವ. ಲಿಸ್ಟರ್ ಈ ನೋಟದಿಂದ ಕುತೂಹಲ ಅರಳಿ ಪ್ರಾಣಿಗಳ ಜೀವನಕ್ರಮ ಅರಿಯಲು ಆಸಕ್ತನಾದ. ಅವು ಏನು ತಿನ್ನುತ್ತವೆ? ಎಲ್ಲಿ ವಾಸಿಸುತ್ತವೆ? ಹೇಗೆ ವ್ಯವಹರಿಸುತ್ತವೆ? ಎಂಬುದನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಈ ಆಸಕ್ತಿಯ ವೀಕ್ಷಣೆ ಮುದ ಕೊಡುತ್ತಿತ್ತು. ಬೇಸಿಗೆಯ ದಿನಗಳಲ್ಲಿ ತನ್ನ ಸಹೋದರ ಸಹೋದರಿಯರೊಂದಿಗೆ ಸಮೀಪದ ಕೊಳ ಕೆರೆಗಳಲ್ಲಿ ಈಜುತ್ತಿದ್ದ; ಚಳಿಗಾಲದಲ್ಲಿ ಸ್ಕೇಟಿಂಗ್ ಹೋಗುತ್ತಿದ್ದ. ಹೊರಾಂಗಣ ಕ್ರೀಡೆಗಳಾದ ಫುಟ್ಬಾಲ್, ಕ್ರಿಕೆಟ್ ಆಟಗಳನ್ನು ಆಡುತ್ತಿದ್ದ ಲಿಸ್ಟರ್.

ಪ್ರಕೃತಿ ಚರಿತ್ರೆ ಮತ್ತು ವಿಜ್ಞಾನ ಶಿಕ್ಷಣಕ್ಕೆ ಪ್ರಾಧಾನ್ಯವೀಯುತ್ತಿದ್ದ ಕ್ವೇಕರ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ.[೩] ಪ್ರಕೃತಿ ಚರಿತ್ರೆ ಮತ್ತು ಸೂಕ್ಷ್ಮದರ್ಶಕದ ಬಳಕೆಯಲ್ಲಿ ತಂದೆಯಿಂದಲೇ ಶಿಕ್ಷಣ.

ಶಾಲೆ ಎಂದರೆ ಒಂದು ರೀತಿಯ ಆನಂದ; ಒಂದು ರೀತಿಯ ಬೇಸರ ಲಿಸ್ಟರ್ ಗೆ. ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಯ ಕಲಿಕೆ ಬೇಸರವನ್ನು ತಂದರೆ ವಿಜ್ಞಾನದ ವಿಷಯಗಳು ಆಸಕ್ತಿಯನ್ನೂ, ಕುತೂಹಲವನ್ನೂ ಉಂಟು ಮಾಡುತ್ತಿದ್ದವು. ಜೀವಶಾಸ್ತ್ರ ಲಿಸ್ಟರ್‌ನನ್ನು ಆಕರ್ಷಿಸಿತು. ಬಿಡುವಿನ ಸಮಯದಲ್ಲಿ ಅಸ್ಥಿಪಂಜರದ ರೇಖಾಚಿತ್ರ ರಚನೆ ಅಥವಾ ಕಪ್ಪೆಯೋ, ಮೀನನ್ನೋ ಹಿಡಿದು ವಿಚ್ಛೇದಿಸುತ್ತಿದ್ದ.[೪] ಲಿಸ್ಟರ್ ಹದಿನಾಲ್ಕು ವರ್ಷದ ಬಾಲಕನಿದ್ದಾಗ, ಕಪ್ಪೆಯ ಅಸ್ಥಿಪಂಜರವೊಂದನ್ನು ಹುಡುಕಿ ತಂದು ತನ್ನ ತಂಗಿಯ ಬಳಿ ಇದ್ದ ಮರದ ತುಂಡೊಂದನ್ನು ಅವಳಿಗೆ ತಿಳಿಯದಂತೆ ಕದ್ದು ಅದರ ಮೇಲೆ ಮೌಂಟ್ ಮಾಡಿ, ಪ್ರದರ್ಶನಕ್ಕೆ ಇಟ್ಟು ಸಂತೋಷಪಟ್ಟ ಲಿಸ್ಟರ್. ಸಾಧಿಸಿಯೇ ಸಾಧಿಸುವೆನೆಂಬ ಛಲದಿಂದ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಲಂಡನ್ನಿಗೆ ತೆರಳಿದ. 16ನೆಯ ವಯಸ್ಸಿನಲ್ಲಿಯೇ ತೌಲನಿಕ ಅಂಗರಚನಾ ವಿಜ್ಞಾನದಲ್ಲಿ ಆಸಕ್ತನಾಗಿದ್ದ ಈತ ಶಸ್ತ್ರವೈದ್ಯನಾಗಲೋಸುಗ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ವೈದ್ಯವಿಜ್ಞಾನ ವಿದ್ಯಾರ್ಥಿಯಾಗಿ ದಾಖಲಾದ (1848).[೫] ಅನಂತರ ಸ್ನಾತಕ ಪದವಿ ಗಳಿಕೆ (1852), ಅದೇ ವರ್ಷ ಯೂನಿವರ್ಸಿಟಿ ಕಾಲೇಜ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್[೬] ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಫೆಲೊ ಆಗುವ ಅವಕಾಶ ಲಭ್ಯ.[೭] ಅವನ ಕಲ್ಪನೆ ಅವನನ್ನು ಮುಂದೆ ಮುಂದೆ ಕರೆದೊಯ್ದಿತು.

ಜೋಸೆಫ್ ಲಿಸ್ಟರ್-ತನ್ನ ಯೌವನದಲ್ಲಿ

ಸರ್ಜನ್ ತರಪೇತಿ ಭಾವೋದ್ರೇಕದ ಕಾಲ[ಬದಲಾಯಿಸಿ]

ಹಳ್ಳಿಯ ವಾತಾವರಣದಲ್ಲಿ ಶಾಂತಿ, ನೆಮ್ಮದಿ, ತೃಪ್ತಿ ಇತ್ತು. ಲಂಡನ್ ಪಟ್ಟಣದಲ್ಲಿ ಸದಾ ಗದ್ದಲ, ತಳಮಳ, ಜನಜಂಗುಳಿಯಿಂದ ತುಂಬಿ ತುಳುಕಾಡುವ ಚಟುವಟಿಕೆ. ಅಶಾಂತಿ ಅಸಹಾಯಕ ಪರಿಸ್ಥಿತಿ. ಜೋಸೆಫ್‍ಗೆ ವಿಶೇಷ ಅನುಭವವೊಂದು ಉಂಟಾಗುವ ಅದೃಷ್ಟ ಕಾದಿತ್ತು. ರೋಗಿಗೆ ಅರಿವಳಿಕೆ (ಅನಸ್ತೇಷಿಯಾ) ಕೊಟ್ಟು ನೋವು ಕಾಣದಂತೆ ಆಪರೇಷನ್ ಮಾಡುವ ವಿಧಾನವೊಂದು ಪ್ರಥಮ ಬಾರಿಗೆ ಬ್ರಿಟನ್‍ನಲ್ಲಿ ನಡೆಯಿತು.[೮][೬] ಈ ಚಾರಿತ್ರಿಕ ಘಟನೆಯಲ್ಲಿ ಪಾಲ್ಗೊಳ್ಳುವ ಸುಯೋಗ ಲಿಸ್ಟರ್‌ದಾಗಿತ್ತು.ಇಂದು ಎಲ್ಲ ಮುಖ್ಯ ಆಪರೇಷನ್‍ಗಳನ್ನೂ ಅರಿವಳಿಕೆ (ಅನಸ್ತೇಷಿಯಾ) ನೀಡಿ ಮಾಡುತ್ತಾರೆ. ಅರಿವಳಿಕೆ ಎಂದರೆ ಒಂದು ವಿಧವಾದ ಮೈ ಮರೆಸುವ ಔಷಧ. ಇದರಿಂದ ರೋಗಿಯ ಜೀವಕ್ಕೆ ಅಪಾಯ ತಪ್ಪಿರಲಿಲ್ಲ. ಅನಸ್ತೇಷಿಯಾವನ್ನು ಕಂಡುಹಿಡಿದದ್ದು ತುಂಬಾ ಬದಲಾವಣೆಯನ್ನು ತಂದಿತು. ೧೮೪೬ರಲ್ಲಿ ಪ್ರಥಮವಾಗಿ ಜೋಸೆಫ್ ಲಿಸ್ಟರ್ ಗ್ರೇಟ್ ಬ್ರಿಟನ್ನಿನಲ್ಲಿ ಅನಸ್ತೇಷಿಯಾ ಬಳಸಿ ಯಶಸ್ವಿಯಾಗಿ ಆಪರೇಷನ್ ಮಾಡೀದರು. ಈ ಚರಿತ್ರಾರ್ಹ ಘಟನೆಯಲ್ಲಿ ಪಾಲ್ಗೊಳ್ಳುವ ಅದೃಷ್ಟ ಲಿಸ್ಟರನದಾಗಿತ್ತು. ಆಪರೇಷನ್ ಅವಧಿಯ ಪೂರಾ ರೋಗಿಗೆ ಎಚ್ಚರವಿರಲಿಲ್ಲ ಮತ್ತು ಯಾವ ನೋವೂ ಇರಲಿಲ್ಲ. ಈ ಆಪರೇಷನ್ ವೀಕ್ಷಿಸಿ ಅನುಭವ ಪಡೆದು ಸ್ಫೂರ್ತಿ ಹೊಂದಿ ತಾನೂ ಯಶಸ್ವಿಯಾದ ಸರ್ಜನ್ ಆಗಲು ತಯಾರಿ ನಡೆಸಿದ. ಈ ಕಾಲ ಲಿಸ್ಟರ್ ದೃಷ್ಟಿಯಿಂದ ಕಲ್ಪನೆ, ಭಾವೋದ್ವೇಗ, ಸತತ ಅಧ್ಯಯನ ನಡೆದು ತನ್ನ ಧ್ಯೇಯ ಸಾಧನೆಯ ದಿಕ್ಕಿನಲ್ಲಿ ದಿಟ್ಟಹೆಜ್ಜೆ ಮುಂದಿಟ್ಟ ಕಾಲ. ಇದೊಂದು ಸರ್ಜನ್ ತರಪೇತಿಗಾಗಿ ಮುಡುಪಿಟ್ಟ ಭಾವೋದ್ರೇಕದ ಕಾಲ!

ಶಿಕ್ಷಣದ ನಂತರ[ಬದಲಾಯಿಸಿ]

ಆ ಕಾಲದ ಖ್ಯಾತ ಶಸ್ತ್ರಕ್ರಿಯಾಶಿಕ್ಷಕ ಜೇಮ್ಸ್ ಸೈಮ್‌ನ ಸಹಾಯಕನಾಗಿ ವೃತ್ತಿಜೀವನಾರಂಭ. ಎಡಿನ್‌ಬರೊ ರಾಯಲ್ ಇನ್‌ಫರ್ಮರಿಯ ಶಸ್ತ್ರವೈದ್ಯನ ಹುದ್ದೆ ಸ್ವೀಕಾರ (1856).[೯] ಗ್ಲಾಸ್ಗೊ ರಾಯಲ್ ಇನ್‌ಫರ್ಮರಿಯಲ್ಲಿ ನೂತನ ಶಸ್ತ್ರಕ್ರಿಯಾವಿಭಾಗದ ಉಸ್ತುವಾರಿ ಜವಾಬ್ದಾರಿಯುಳ್ಳ ಶಸ್ತ್ರವೈದ್ಯನಾಗಿ ನೇಮಕಾತಿ (1861). ಅಂಗಛೇದನೆ ಗೊಳಗಾದವರ ಪೈಕಿ ಸೇ.45-50 ರೋಗಿಗಳು ಪೂತಿಯಿಂದ (ಸೆಪ್ಸಿಸ್) ಮರಣಿಸುತ್ತಿದ್ದುದನ್ನು ಗಮನಿಸಿದ ಈತ ಅದನ್ನು  ತಡೆಗಟ್ಟುವ ಸಲುವಾಗಿ ಪ್ರಯೋಗನಿರತನಾದ.

ಪರಿಹಾರ ಕಂಡ ಸಮಸ್ಯೆ[ಬದಲಾಯಿಸಿ]

ಮುಂದೆ ೧೮೬೦ರ ಸಮಯದಲ್ಲೇ ಗ್ಲಾಸ್ಗೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸನಾಗಿದ್ದ ಜೋಸೆಫ್ ಲಿಸ್ಟರ್ ತನ್ನ ರೋಗಿಗಳ ತೆರೆದ ಗಾಯಗಳಲ್ಲಿ ಕೀವಾಗಿ ನಂಜೇರುವ ಸಮಸ್ಯೆಯನ್ನು ಎದುರಿಸಿದ್ದು. ಲಿಸ್ಟರ್ ಲೂಯಿ ಪ್ಯಾಶ್ಚರನ ಸಂಶೋಧನಾ ವಿಷಯಗಳನ್ನು ತಿಳಿದಿದ್ದನು.[೧೦][೧೧] ತನ್ನ ರೋಗಿಗಳ ತೆರೆದ ಅಥವಾ ಶಸ್ತ್ರ ಚಿಕಿತ್ಸಾ ಗಾಯಗಳಲ್ಲಿ ಕೀವಾಗುವ ಪರಿಸ್ಥಿತಿಯು ಹುದುಗೇಳುವ ಸ್ಥಿತಿಗೆ ಸರಿಸಮಾನವೆಂದು ಅರಿತು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳ ನಾಶಕ್ಕಾಗಿ ದುರ್ಬಲ ಕಾರ್ಬಾಲಿಕ್ ಆಮ್ಲವನ್ನು ಲೇಪಿಸಿದ. ಅದರಿಂದ ಉತ್ತೇಜಿತ ಪರಿಣಾಮ ಕಂಡುಬಂದಿತು.[೧೨][೧೩] ಜೋಸೆಫ್ ಲಿಸ್ಟರನೇ ಆ ವಿಧಾನದಲ್ಲಿ ಮುಂದೆ ಅನೇಕ ಸುಧಾರಣೆಗಳನ್ನು ತಂದನು.[೧೪] ಜೋಸೆಫ್ ಲಿಸ್ಟರ್ ತಂದ ಕಟ್ಟುನಿಟ್ಟಿನ ನಿಯಮಗಳೆಂದರೆ:

  • ಗಾಯಗಳಿಗೆ ಪೂತಿನಾಶಕಗಳನ್ನು ಲೇಪಿಸುವುದು.
  • ಶುಚಿ ಮಾಡಿದ ಬಟ್ಟೆಗಳಿಂದ ಮುಚ್ಚುವುದು.
  • ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಪರಿಶುದ್ಧ ವಾತಾವರಣ ಮೂಡಿಸುವುದು ಮತ್ತು
  • ಶಸ್ತ್ರಚಿಕಿತ್ಸೆಗೆ ಬಳಸುವ ಸಲಕರಣೆಗಳನ್ನು ಕಾಯಿಸಿ ಬಿಸಿ ಮಾಡುವುದು ಇವೇ ಆಗಿದ್ದವು.

ಈ ನಿಯಮಗಳನ್ನು ಪಾಲಿಸಿದುದರಿಂದ ಬಹುಪಾಲು ಗಾಯಗಳು ನಂಜಾಗದೇ ವಾಸಿಯಾಗುತ್ತಿದ್ದವು. ಹೀಗಾಗಿ ಅವುಗಳನ್ನು ನಂಜುರೋಧಕ ಅಥವಾ ಆಂಟಿಸೆಪ್ಟಿಕ್ ಗಳೆಂದು ಕರೆಯಲಾಯಿತು. ಲಿಸ್ಟರ್ ತನ್ನ ಮಹತ್ಸಾಧನೆಗಳಿಗಾಗಿ ಮೊದಲು 'ಲಾರ್ಡ್' ಪದವಿ ಗಳಿಸಿದ. ಮಹಾನ್ ಶಸ್ತ್ರ ವೈದ್ಯನೆಂದು ಇಂದಿಗೂ ವೈದ್ಯಸಮೂಹ ಆತನನ್ನು ಗೌರವಿಸುತ್ತದೆ. ಲಿಸ್ಟರನ ಶಸ್ತ್ರಚಿಕಿತ್ಸಾ ವಿಧಾನ ವಿಶ್ವವ್ಯಾಪಿ ಮನ್ನಣೆ ಪಡೆಯಿತು. ಪ್ಯಾಶ್ಚರನ ಸಂಶೋಧನೆಯ ಪರಿಣಾಮದ ಆಳವಾದ ಅಧ್ಯಯನವೇ ತನ್ನನ್ನು ಸರಿಯಾದ ದಾರಿಗೆ ಒಯ್ದಿದೆ ಎಂಬುದನ್ನು ಲಿಸ್ಟರ್ ಮರೆಯಲಿಲ್ಲ. ಸದಾ ಪ್ಯಾಶ್ಚರನಿಗೆ ಆಭಾರಿಯಾಗಿದ್ದ. ಪ್ಯಾಶ್ಚರ್ ಕೂಡಾ ತನ್ನ ಸಂಶೋಧನೆ ಅನೇಕ ಜನಗಳಿಗೆ ಉಪಯುಕ್ತವಾದದ್ದನ್ನು ಕಂಡು ಸಂತೋಷಪಟ್ಟ. ವಿಜ್ಞಾನದ ಬೆಳವಣಿಗೆಗೆ ವಿಕಾಸಕ್ಕೆ ವಿಜ್ಞಾನಿಗಳು ಇತರ ವಿಜ್ಞಾನಿಗಳೊಂದಿಗೆ ಸಹಕರಿಸಬೇಕೆಂಬುದಕ್ಕೆ ಪ್ಯಾಶ್ಚರನ ಸಂಶೋಧನೆ, ಸಾಧನೆ ಒಳ್ಳೆಯ ಉದಾಹರಣೆಯಾಗಿದೆ.

ಲಿಸ್ಟರನ ಇತರ ಕೊಡುಗೆಗಳು[ಬದಲಾಯಿಸಿ]

ರೋಗಿಗಳಿಗೆ ವಾಯವಿನಿಂದ ನೇರವಾಗಿ ಸೋಂಕು ತಗಲುತ್ತಿದೆ ಎಂಬ ಪ್ರಚಲಿತ ನಂಬಿಕೆಯನ್ನು ಒಪ್ಪದ ಈತ ವಾಯುವಿನಲ್ಲಿರುವ ಪರಾಗದಂಥ ದೂಳು ಸೋಂಕಿಗೆ ಕಾರಣ ಎಂದು ಪ್ರಕಲ್ಪಿಸಿದ. ಸೂಕ್ಷ್ಮಜೀವಿಗಳ ಕುರಿತು ಲೂಯಿ ಪಾಸ್ಚರ್‌ನ (1822-95) ಸಂಶೋಧನೆಗಳಿಂದ ಪ್ರಭಾವಿತನಾದ (1865) ಈತ ವಾಯುವಿನಲ್ಲಿರುವ ರೋಗಾಣುಗಳಿಂದ ಪೂತಿಬಾಧೆ ಉಂಟಾಗುತ್ತಿದೆ ಎಂದು ನಂಬಿದ. ಶಸ್ತ್ರಕ್ರಿಯೆಯಿಂದಾಗುವ ಗಾಯಕ್ಕೂ ವಾಯುವಿಗೂ ನಡುವೆ ಪೂತಿನಾಶಕ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಪರಿಹಾರವಾದೀತೆಂದು ಊಹಿಸಿದ. ಕಾರ್ಬಾಲಿಕ್ ಆಮ್ಲದಿಂದ ತೊಳೆದು ನೋಡಿದ ಮೇಲೆ ಮರಣ ದರ ಸೇ. 15ಕ್ಕೆ ಇಳಿಯಿತು. ಈತನ ಆವಿಷ್ಕಾರ ಅಪಾರ ಜನಮನ್ನಣೆ ಗಳಿಸಿತು.

ಆಧುನಿಕ ಸರ್ಜನರಿಗೆ ಆಂಟಿಸೆಪ್ಟಿಕ್ ವಿಧಾನವೊಂದೇ ಕೊಡುಗೆಯಲ್ಲ. ೧೮೮೦ವರೆಗೆ ಗಾಯಗಳಿಗೆ ಹೊಲಿಗೆ ಹಾಕಲು ಸಿಲ್ಕ್ ದಾರವನ್ನು ಬಳಸುತ್ತಿದ್ದರು. ಸಿಲ್ಕ್‌ನಲ್ಲಿ ಜೀವಂತ ಸೂಕ್ಷ್ಮಾಣುಗಳಿರುತ್ತಿದ್ದವು. ಇದರ ಕಾರಣವಾಗಿ ಗಾಯವು ಮಾಯುತ್ತಿರಲಿಲ್ಲ. ಮೊದಲ ಬಾರಿಗೆ ಕುರಿಯ ಕರುಳಿನ ದಾರವನ್ನು ಉಪಯೋಗಿಸಿದ. ಸರ್ಜರಿಯಲ್ಲಿ ಇದೊಂದು ಬಹುಮುಖ್ಯವಾದ ಸುಧಾರಣೆ. ಇತ್ತೀಚಿನವರೆಗೂ ಇದನ್ನೇ ಬಳಸುತ್ತಿದ್ದರು. ಬ್ಯಾಂಡೇಜಿಗೆ ಗಾಝನ್ನು ಮೊದಲ ಬಾರಿಗೆ ಬಳಸಿದವನು ಲಿಸ್ಟರ್. ಇಂದಿಗೂ ಬ್ಯಾಂಡೇಜಿಗೆ ಈ ಗಾಝನ್ನೇ ಬಳಸುತ್ತಿದ್ದಾರೆ.

ಸರ್ಜರಿಯಲ್ಲಿ ಅನೇಕ ರೀತಿಯ ತಂತ್ರಗಳನ್ನೂ ಹಾಗೂ ಉಪಕರಣವನ್ನೂ ಸೃಷ್ಟಿಸುವುದರ ಜೊತೆಗೇ 'ಬೀಜಾಣುಗಳು ಮತ್ತು ಕಾಹಿಲೆಗಳು' ಎಂಬುದರ ಬಗ್ಗೆ ಅಧ್ಯಯನ ನಡೆಸಿದನು. ಈ ಅಧ್ಯಯನಕ್ಕೆ ತನ್ನ ತಂದೆಯೇ ರಚಿಸಿದ್ದ ತಾನು ಚಿಕ್ಕಂದಿನಲ್ಲಿ ಅದರ ಮೂಲಕ ಅದ್ಭುತ ಪ್ರಪಂಚವನ್ನು ಕಂಡು ಆಶ್ಚರ್ಯಗೊಂಡ, ಕುತೂಹಲ ಮೂಡಿಸಿಕೊಂಡಿದ್ದ ಆ ಸೂಕ್ಷ್ಮ ದರ್ಶಕವನ್ನೇ ಈಗ ಸಾರ್ಥಕವಾಗಿ ಬಳಸಿದನು. ಸಾರ್ಥಕವಾಗಿ ಯಶಸ್ವಿಯಾಗುವಂತೆ ಆಪರೇಷನ್ ಮಾಡುವುದು, ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡುವುದು, ಆರೈಕೆ, ಎಚ್ಚರಿಕೆ, ಅಧ್ಯಯನ, ಸಂಶೋಧನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು - ಈ ಚಟುವಟಿಕೆಗೆ ತನ್ನನ್ನೇ ತೊಡಗಿಸಿಕೊಂಡ. ಅವಿಶ್ರಾಂತ ಜೀವನ ಅವನದಾಗಿತ್ತು. ಬಿಡುವೆಂಬುದೇ ವಿರಳವಾಗಿತ್ತು.

ಡಬ್ಲಿನ್ ನಗರದಲ್ಲಿ ಬ್ರಿಟಿಷ್ ವೈದ್ಯಕೀಯ ಸಮ್ಮೇಳನ ಜರುಗಿದಾಗ ತಾನು ಮಾಡಿದ ಪ್ರಯೋಗಗಳ ಕುರಿತಾದ ಒಂದು ಪ್ರಬಂಧ ಮಂಡಿಸಿದ ಲಿಸ್ಟರ್. ಎಲ್ಲೋ ಕೆಲವರು ಆಂಟಿಸೆಪ್ಟಿಕ್ ತತ್ವವನ್ನು ಸ್ವಾಗತಿಸಿದರು. ಆದರೆ ಅದನ್ನು ಅಲ್ಲಗಳೆದವರೇ ಹೆಚ್ಚು. ಕ್ಲೋರೋಫಾರಂ (ಅರಿವಳಿಕೆ) ಸೃಷ್ಟಿಸಿದ ಜೇಮ್ಸ್ ಸಿಂಪ್ಸನ್ ಅಂಥವರೂ ವಿರೋಧಿಸಿದಾಗ[೧೫] ಲಿಸ್ಟರ್ ಬೇಸರಪಟ್ಟುಕೊಂಡನು. ಪೂತಿನಾಶಕ ತತ್ವ ಮೆಚ್ಚಿಕೊಂಡ ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ಆ ನಿಯಮಗಳನ್ನು ಅನುಸರಿಸಿ ಲಾಭ ಪಡೆದರು.

ಲಿಸ್ಟರನ ಕೊನೆಯ ದಿನಗಳು[ಬದಲಾಯಿಸಿ]

ಈ ಲಿಸ್ಟರ್ ಪದಕವನ್ನು ಶಸ್ತ್ರಚಿಕಿತ್ಸೆಯ ವಿಜ್ಞಾನಕ್ಕೆ ಕೊಡುಗೆಗಳನ್ನು ಗುರುತಿಸಿ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಮಂಡಿಸಿದ ಪ್ರಶಸ್ತಿ

ಲಿಸ್ಟರ್ ಒಬ್ಬ ಪ್ರಸಿದ್ಧ ಸರ್ಜನ್ ಆದರೂ ಕೂಡ ಸ್ವಭಾವದಲ್ಲಿ ವಿನೀತ, ಸಂಕೋಚ ಪ್ರವೃತ್ತಿಯವನು. ಇತರ ಕೆಲವು ಸರ್ಜನ್ನರಂತೆ ಬೇರೆಯವರ ಮೇಲೆ ಪ್ರಭಾವ ಬೀರಲು ಹೋಗುತ್ತಿರಲಿಲ್ಲ ಅಥವಾ ತಾನೆಂತಹ ಪ್ರತಿಭಾಶಾಲಿ, ಬುದ್ಧಿವಂತನೆಂದೂ ತೋರ್ಪಡಿಸುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಮೌನವಾಗಿ ಕ್ರಿಯಾಶೀಲನಾಗಿರುತ್ತಿದ್ದ. ಹಮ್ಮು-ಬಿಮ್ಮು ಅವನ ಬಳಿ ಸುಳಿಯುತ್ತಿರಲಿಲ್ಲ. ಇತರರು ತಮ್ಮ ಹಿರಿಮೆ ಗರಿಮೆಯನ್ನು ವೈಯಕ್ತಿಕ ಪ್ರತಿಷ್ಠೆಯನ್ನೂ ರೋಗಿಗಳ ಮುಂದೆ ಅವರ ಸಂಬಂಧಿಗಳ ಮುಂದೆ ಹಾಡಿ ಹೊಗಳುತ್ತಿದ್ದರು. ಕೊನೆಗೆ ೧೦ ಫೆಬ್ರವರಿ ೧೯೧೨ರಂದು ತನ್ನ ೮೫ನೆಯ ವಯಸ್ಸಿನಲ್ಲಿ ಪೂರ್ಣಾಯುವಿನ ಸಾರ್ಥಕ ಜೀವನ ನಡೆಸಿ ಕ್ರಿಯಾಶೀಲನಾಗಿದ್ದು ನೋವಿನಲ್ಲಿ ನಲಿವು ಮೂಡಿಸಿ ಈ ಪ್ರಪಂಚವನ್ನೇ ನಲಿವಿನ ಆಗರವನ್ನಾಗಿ ಮಾಡಿ ವಾಸಿಸಲು ಯೋಗ್ಯವಾದ ತಾಣವನ್ನಾಗಿ ಮಾಡಿ ಮಾನವತೆಯ ಸಾಕಾರ ಮೂರ್ತಿ ಪರಮಾತ್ಮನಲ್ಲಿ ಸೇರಿಹೋದ.

ಲಿಸ್ಟರ್ ಕಾಲವಾದ ಸುದ್ದಿ ಹರಡಿತು.ಇಡೀ ದೇಶವೇ ಅವನ ಸಾವಿಗಾಗಿ ಕಂಬನಿ ಸುರಿಸಿತು. ಅಂತಿಮ ಯಾತ್ರೆಯಲ್ಲಿ ಅನೇಕ ಪ್ರಸಿದ್ಧ ಪ್ರತಿಷ್ಠಿತ ವ್ಯಕ್ತಿಗಳು ಭಾಗಿಯಾಗಿದ್ದರು. ವಿಶೇಷವೆಂದರೆ ಯಾವ ಶ್ರೀಸಾಮಾನ್ಯರ ನೋವನ್ನೆಲ್ಲಾ ನಲಿವನ್ನಾಗಿ ಮಾಡಿದ್ದನೋ ಆ ಶ್ರೀಸಾಮಾನ್ಯರೂ ಕಾರ್ಮಿಕರೂ ಶ್ರದ್ಧಾಂಜಲಿ ಅರ್ಪಿಸಿ ಆ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬ್ರಿಟನ್ನಿನ ಮಹಾನ್ ವ್ಯಕ್ತಿಗಳೂ ಪ್ರಸಿದ್ಧ ಪುರುಷರನ್ನೂ ಸಮಾಧಿ ಮಾಡುವ ತಾಣವಾದ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಲಿಸ್ಟರರನ್ನು ಸಮಾಧಿ ಮಾಡಬೇಕೆಂದು ಎಲ್ಲರ ಆಶಯವಾಗಿತ್ತು. ಆದರೆ ತನ್ನ ಉಯಿಲಿನಲ್ಲಿ ಲಿಸ್ಟರ್ ಸ್ಪಷ್ಟವಾಗಿ ತನ್ನ ಕೊನೆಯ ಆಸೆಯನ್ನು ಸ್ಪಷ್ಟಪಡಿಸಿದ್ದ "ತನ್ನ ಪ್ರೀತಿಯ ಅಗ್ನೇಸ್ ಸಮೀಪದಲ್ಲೇ ತನ್ನ ಅಂತಿಮ ಚಿರನಿದ್ರೆಯಾಗಬೇಕೆಂದು" ಅವನ ಇಚ್ಛೆಯಂತೆ ಜೋಸೆಫ್ ಲಿಸ್ಟರರನ್ನು ಅಂತಿಮ ವಿಶ್ರಾಂತಿಗಾಗಿ ಅವನ ಪತ್ನಿಯ ಸಮಾಧಿಯ ಪಕ್ಕದಲ್ಲೇ ಸಮಾಧಿ ಮಾಡಲಾಯ್ತು. ಜೋಸೆಫ್ ಲಿಸ್ಟರ್ ನ ಮೃತದೇಹವನ್ನು ರಾಜ ಮನೆತನದವರಿಗೆ ಸಲ್ಲುವ ಗೌರವಗಳೊಡನೆ ಸಮಾಧಿ ಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "ಜೋಸೆಫ್ ಲಿಸ್ಟರ್ ಹುಟ್ಟಿರುವ ಸ್ಥಳ".
  2. Jenkinson, Jacqueline; Moss, Michael S.; Russell, Iain (1994). The Royal : the history of Glasgow Royal Infirmary, 1794-1994 (in ಇಂಗ್ಲಿಷ್). Glasgow: Bicentenary Committee on behalf of Glasgow Royal Infirmary NHS Trust. p. 107. ISBN 9780852614334.
  3. Godlee 1924, pp. 12–15.
  4. Clark 1920.
  5. Bankston 2005, p. 17.
  6. ೬.೦ ೬.೧ Richardson & Rhodes 2013.
  7. Godlee 1924, p. 22.
  8. Squire 1888.
  9. Godlee 1924, p. 34.
  10. Cartwright 1977, p. 144.
  11. Cameron 1949, p. 60.
  12. Gaw 1999, p. 29.
  13. Lister 1867b, p. 4.
  14. "ಶಸ್ತ್ರಚಿಕಿತ್ಸೆಯನ್ನು ಬದಲಾಯಿಸಿದ ಲಿಸ್ಟರ್". Archived from the original on 2015-03-26. Retrieved 2015-12-10.
  15. Fisher 1977, p. 151.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: