ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A bottle of olive oil used in food
Synthetic motor oil
ಸುರಿಯಲಾಗುತ್ತಿರುವ ಕೃತಕ ಮೋಟಾರು ತೈಲ

ಎಣ್ಣೆಯು ಒಳಾಂಗಣ ಉಷ್ಣಾಂಶ (ಸಾಮಾನ್ಯ ಉಷ್ಣಾಂಶಗಳಲ್ಲಿ) ದ್ರವವಾಗಿರುವ ಮತ್ತು ಜಲವಿಕರ್ಷಕವಾಗಿರುವ ಆದರೆ ಸಾವಯವ ದ್ರಾವಕಗಳಲ್ಲಿ ಕರಗುವ ಯಾವುದೇ ರಾಸಾಯನಿಕ ಪದಾರ್ಥ. ಎಣ್ಣೆಗಳು ಅಧಿಕ ಇಂಗಾಲ ಮತ್ತು ಜಲಜನಕ ಅಂಶವನ್ನು ಹೊಂದಿರುತ್ತವೆ ಮತ್ತು ಅಧ್ರುವೀಯ ಪದಾರ್ಥಗಳಾಗಿವೆ. ಮೇಲಿನ ಸಾಮಾನ್ಯ ಅರ್ಥವಿವರಣೆಯು ವನಸ್ಪತಿ ತೈಲಗಳು, ಖನಿಜತೈಲ ರಸಾಯನಶಾಸ್ತ್ರ ಖನಿಜ ರಾಸಾಯನಿಕ ಎಣ್ಣೆಗಳು, ಮತ್ತು ಆವಿಶೀಲ ಸಾರಭೂತ ತೈಲಗಳನ್ನು ಒಳಗೊಂಡಂತೆ ಅನ್ಯಥಾ ಅಸಂಬಂಧಿತ ರಾಸಾಯನಿಕ ರಚನೆಗಳು, ರಾಸಾಯನಿಕ ಲಕ್ಷಣಗಳು ಮತ್ತು ಬಳಕೆಗಳನ್ನು ಹೊಂದಿರುವ ಸಂಯುಕ್ತ ವರ್ಗಗಳನ್ನು ಒಳಗೊಳ್ಳುತ್ತದೆ.

ಇತಿಹಾಸ[ಬದಲಾಯಿಸಿ]

ಇತಿಹಾಸ ಪೂರ್ವ ಕಾಲದಿಂದ ಮಾನವ ಪ್ರಕೃತಿದತ್ತವಾದ ಎಣ್ಣೆಯನ್ನು ಆಹಾರ ಮತ್ತು ಇತರ ಉದ್ದೇಶಗಳಿಗಾಗಿ ಬಳಸುತ್ತಿದ್ದಾನೆ. ಕ್ರಿ.ಪೂ. ೧೪೦೦ರಲ್ಲಿಯೇ ಈಜಿಪ್ಟಿಯನ್ನರು ತಮ್ಮ ರಥಗಳು ಸರಾಗವಾಗಿ ಓಡುವಂತೆ ಮಾಡಲು ಗಾಲಿಯ ಕೀಲೆಣ್ಣೆಯಾಗಿ ಸವರುತ್ತಿದ್ದ ಬಗ್ಗೆ ಉಲ್ಲೇಖವಿದೆ. ಎಣ್ಣೆಯಿಂದ ದೀಪ ಉರಿಸುವುದು ಸಹಸ್ರಾರು ವರ್ಷಗಳಿಂದ ರೂಢಿಯಲ್ಲಿದೆ. ಬೇಗ ಒಣಗುವ ಎಣ್ಣೆಗಳಿಂದ ಗೋಡೆಗಳ ಅಲಂಕರಣ ಮತ್ತು ಹಡಗುಗಳ ಹೊರಭಾಗ ತೇವನಿರೋಧಕವಾಗುವಂತೆ ಮಾಡುವುದು ಮಾನವನಿಗೆ ಹಿಂದಿನಿಂದ ಪರಿಚಿತವಾಗಿದ್ದ ಕಲೆ. ಎಣ್ಣೆಯನ್ನು ಬಣ್ಣದೊಂದಿಗೆ ಎಮಲ್ಷನ್ ಮಾಡಿ, ಸಸ್ಯ ಅಂಟುಗಳಿಂದ ಸ್ಥಿರಗೊಳಿಸಿ, ಪ್ರಾಚೀನ ಚಿತ್ರಕಲೆಯಲ್ಲಿ ಬಳಸುತ್ತಿದ್ದರು.[೧] ಇವು ಆಧುನಿಕ ಎಮಲ್ಷನ್ ಪೇಯಿಂಟುಗಳನ್ನು ಹೋಲುತ್ತಿದ್ದುವು. ಖಾದ್ಯ ಎಣ್ಣೆಗಳ ಸಂಸ್ಕರಣದಲ್ಲಿ ಬಹಳ ಸುಧಾರಣೆಗಳಾಗಿವೆ.

ಆಲಿವ್ ಎಣ್ಣೆಯೊಡನೆ ಲಿಥಾರ್ಜ್ (ಸೀಸದ ಮಾನಾಕ್ಸೈಡ್ PbO) ಸೇರಿಸಿ ಕಾಯಿಸಿದರೆ ಗ್ಲಿಸರಾಲ್ ಬರುವುದೆಂದು ಷೀಲೆ ೧೭೭೯ರಲ್ಲೇ ಶೋಧಿಸಿದ್ದ. ಎಣ್ಣೆಗಳ ರಾಸಾಯನಿಕ ಸ್ವರೂಪವನ್ನು ೧೮೧೫ರಲ್ಲಿ ಮೊದಲು ಹೊರಗೆಡಹಿದ ಕೀರ್ತಿ ಮೈಕೇಲ್ ಯೂಜಿನ್ ಷೆವ್ರೆಲನಿಗೆ ಸಲ್ಲುವುದು. ೧೮೧೯ರಲ್ಲಿ ಜೆ.ಜೆ.ಇ. ಪೌಟೆ ಓಲಿಯಿಕಾಮ್ಲವನ್ನು ಇಲೇಡಿಕಾಮ್ಲವಾಗಿ ಮಾರ್ಪಡಿಸಿದುದು. ೧೮೨೮ರಲ್ಲಿ ಸಿ.ಎ.ಗಸ್ಸರೋವ್ ಅಪರ್ಯಾಪ್ತ ದ್ರವ್ಯಾಮ್ಲಗಳನ್ನು ಘನಾಮ್ಲಗಳಿಂದ ಪ್ರತ್ಯೇಕಿಸಿದುದು. ಈ ಕ್ಷೇತ್ರದಲ್ಲಿ ಹೆಸರಾಂತ ಪ್ರಾಥಮಿಕ ಶೋಧನೆ ಎನಿಸಿಕೊಂಡಿದೆ.

ರಾಸಾಯನಿಕ ಮಾಹಿತಿ[ಬದಲಾಯಿಸಿ]

ಕಾಡ್ ಲಿವರ್ ಎಣ್ಣೆ, ಷಾರ್ಕ್ ಲಿವರ್ ಎಣ್ಣೆ ಮುಂತಾದ ಮೀನಿನ ಎಣ್ಣೆಗಳು, ಸಸ್ಯಜನಿತ ನೆಲಗಡಲೆ, ಅಗಸೆ, ಕೊಬ್ಬರಿ ಮತ್ತು ಹರಳೆಣ್ಣೆಗಳು-ಇವೆಲ್ಲ ಎಸ್ಟರುಗಳು. ಅಂದರೆ ಆಲ್ಕೊಹಾಲ್ ಮತ್ತು ಆಮ್ಲಗಳ ಸಂಯೋಗದಿಂದ ಹುಟ್ಟಿದ ಲವಣಸದೃಶ ಸಾವಯವ ಸಂಯುಕ್ತಗಳು. ಇವುಗಳಲ್ಲಿರುವ ಆಲ್ಕೊಹಾಲಿಗೆ ಗ್ಲಿಸರಾಲ್ ಎಂದು ಹೆಸರು. ಅದರಲ್ಲಿ ಮೂರು ಹೈಡ್ರಾಕ್ಸಿಲ್ ಗುಂಪುಗಳಿವೆ (ಗ್ರೂಪ್ಸ್). ಅಂದರೆ ಟ್ರೈಹೈಡ್ರಿಕ್ ಆಲ್ಕೊಹಾಲ್ ಎಂದಾಯಿತು. ಪ್ಯಾರಫಿನ್ ವರ್ಗದ ಉನ್ನತ ಹೈಡ್ರೊಕಾರ್ಬನ್ನುಗಳಿಗೆ ಸಂಬಂಧಿಸಿದ ಕೆಲವು ಆಮ್ಲಗಳಿವೆ. ಅವು ಗ್ಲಿಸರಾಲಿನೊಂದಿಗೆ ಕೂಡಿ ಮೂರು ನೀರಿನ ಅಣುಗಳನ್ನು ಕಳೆದುಕೊಂಡು ಗ್ಲಿಸರೈಡುಗಳಾಗುತ್ತವೆ. ಸಸ್ಯದ ನೈಸರ್ಗಿಕ ಪ್ರಯೋಗಶಾಲೆಯಲ್ಲಿ ನಡೆಯುವ ಈ ಕ್ರಿಯೆಯನ್ನು ಕೆಳಕಂಡಂತೆ ಚಿತ್ರಿಸಿಕೊಳ್ಳಬಹುದು.

CH2OH        HOOCR                             CH2O.OC.R
CH.OH   +    HOOCR 	                       CH.O.OC.R
CH2OH 	     HOOCR			       CH2.O.OC.R
ಗ್ಲಿಸರಾಲ್      ಉನ್ನತ ಪ್ಯಾರಾಫಿನ್ನಿಗೆ                    ಟ್ರೈಗ್ಲಿಸರೈಡ್
             ಸಂಬಂಧಿಸಿದ ಆಮ್ಲ                     (ಕೊಬ್ಬು ಅಥವಾ ತೈಲ)

ಈ ನೈಸರ್ಗಿಕ ಎಸ್ಟರಿಫಿಕೇಷನ್ ಕ್ರಿಯೆಯಲ್ಲಿ ಭಾಗವಹಿಸುವ ಪರ್ಯಾಪ್ತ ಆಮ್ಲಗಳಲ್ಲಿ ಸ್ಟಿಯರಿಕ್ ಮತ್ತು ಪಾಮಿಟಿಕ್ ಅಮ್ಲಗಳು ಮುಖ್ಯವಾದುವು.

ಸ್ಟಿಯರಿಕ್ ಆಮ್ಲ CH3(CH2)15CH2.COOH

ಪಾಮಿಟಿಕ್ ಆಮ್ಲ CH3(CH2)13CH2.COOH

ಆಮ್ಲದ ಭಾಗ ಕೆಲವು ವೇಳೆ ಅಪರ್ಯಾಪ್ತವಾಗಿರಬಹುದು. ಅಂದರೆ ಎರಡು ಇಂಗಾಲದ ಪರಮಾಣುಗಳ ನಡುವೆ ದ್ವಿಬಂಧವಿರಬಹುದು. ಅಂಥ ಆಮ್ಲಗಳನ್ನು ಕೆಳಗೆ ಹೆಸರಿಸಲಾಗಿದೆ.

ಓಲಿಯಿಕ್ ಆಮ್ಲ CH3.(CH2)7.CH=CH-(CH2)7.COOH

ಲಿನೊಲಿಯಿಕ್ ಆಮ್ಲ CH3(CH2)4.CH=CH-(CH2)-CH=CH-(CH2)7.COOH

ಲಿನೊಲಿನಿಕ್ ಆಮ್ಲ CH3-CH2-CH=CH-CH2-CH=CH-CH2-CH=CH(CH2)7.COOH

ಅರ್‍ಯಾಬೆಡೋನಿಕ್ ಆಮ್ಲ CH3.(CH2)4.CH=CH.CH2(CH=CH-CH2)2CH=CH(CH2)3.COOH

ಮೊದಲು ಮೂರು ಅಪರ್ಯಾಪ್ತ ಆಮ್ಲಗಳಲ್ಲಿ ೧೮ ಇಂಗಾಲದ ಪರಮಾಣುಗಳಿವೆ.

ಆಮ್ಲಶೇಷಗಳೆಲ್ಲ ಸಜಾತೀಯವಾಗಿದ್ದರೆ ಸರಳ ಗ್ಲಿಸರೈಡುಗಳಾಗುತ್ತವೆ. ಉದಾಹರಣೆ:

CH2.O.OC.C17H35  CH2.O.OC.C15H31  CH2.O.OC.C17H33
CH.O.OC.C17H35   CH.O.OC.C15H31   CH.O.OC.C17H33
CH2.O.OC.C17H35  CH2.O.OC.C15H31  CH2.O.OC.C17H33
ಟ್ರೈಸ್ಟಿಯರಿನ್       ಟ್ರೈಪಾಮಿಟಿನ್      ಟ್ರೈಓಲಿಯಿನ್

ಆಮ್ಲದ ಭಾಗಗಳು ವಿಜಾತಿಯವಾಗಿದ್ದರೆ ಮಿಶ್ರ ಗ್ಲಿಸರೈಡುಗಳು ಉಂಟಾಗುವುವು. ಉದಾಹರಣೆ:

α    CH2.O.OC.C17H35                CH2.O.OC.C15H31         CH2.O.OC.C17H33
β    CH.O.OC.C17H35                 CH.O.OC.C15H31          CH.O.OC.C17H33
α’   CH2.O.OC.C17H35                CH2.O.OC.C15H31         CH2.O.OC.C17H33
α - ಸ್ಟಿಯರೊ β α’ - ಡೈಪಾಮಿಟಿನ್    β - ಸ್ಟಿಯೆರೊ            αα’ - ಡೈಪಾಮಿಟಿನ್

ಇಂಥ ಗ್ಲಿಸರೈಡುಗಳ ಸಂಕೀರ್ಣ ಮಿಶ್ರಣದಿಂದ ತೈಲ ಅಥವಾ ಕೊಬ್ಬು ಉಂಟಾಗುತ್ತವೆ. α β α’ ಮೂರು ಸ್ಥಾನಗಳಲ್ಲಿರುವ ಆಮ್ಲಗಳೂ ಬೇರೆ ಬೇರೆಯಾಗಿರಬಹುದು. ಆದ್ದರಿಂದ ಇಂಥ ಒಂದು ಕೊಬ್ಬಿನಲ್ಲಿ ೧೮ ವಿವಿಧ ಗ್ಲಿಸರೈಡುಗಳಿರುವ ಸಾಧ್ಯತೆಯಿದೆ. ಮೂರಕ್ಕಿಂತಲೂ ಹೆಚ್ಚು ಆಮ್ಲಗಳು ಭಾಗವಹಿಸಿರಬಹುದು. ಉದಾಹರಣೆಗೆ ಬೆಣ್ಣೆಯ ಕೊಬ್ಬಿನಿಂದ ೧೪ ವಿವಿಧ ಆಮ್ಲಗಳನ್ನು ಪಡೆದ ದಾಖಲೆಯಿದೆ. ಅವುಗಳಲ್ಲಿ ಮುಖ್ಯವಾದ ಆಮ್ಲಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಆಮ್ಲ ಸೂತ್ರ ದ್ರವೀಕರಣ

ಬಿಂದು ೦ ಸೆಂ.ಗ್ರೇ

ಮೂಲ
ಬ್ಯುಟಿರಿಕ್ C3H7.COOH -೪.೭ ಬೆಣ್ಣೆ
ಕೆಪ್ರೋಯಿಕ್ C5H11.COOH -೨ ಬೆಣ್ಣೆ, ಕೊಬ್ಬರಿ ಎಣ್ಣೆ
ಕೆಪ್ರಿಲಿಕ್ C7H15.COOH ೧೬ ಬೆಣ್ಣೆ, ಪಾಮ್ ಎಣ್ಣೆ
ಕ್ಯಾಪ್ರಿಕ್ C9H19.COOH ೩೧.೫ ಬೆಣ್ಣೆ, ಕೊಬ್ಬರಿ ಎಣ್ಣೆ
ಲಾರಿಕ್ C3H7.COOH ೪೪ ಬೆಣ್ಣೆ, ಕೊಬ್ಬರಿ ಎಣ್ಣೆ
ಮಿರಿಸ್ಟಿಕ್ C11H23.COOH ೫೮ ಕೊಬ್ಬರಿ ಎಣ್ಣೆ
ಪಾಮಿಟಿಕ್ C13H27.COOH ೬೪ ಪಾಮ್ ಎಣ್ಣೆ, ಪ್ರಾಣಿಗಳ

ಕೊಬ್ಬು

ಸ್ಟಿಯರಿಕ್ C15H31.COOH ೬೯.೪ ಕೊಬ್ಬುಗಳು, ಎಣ್ಣೆಗಳು
ಓಲಿಯಿಕ್ C17H35.COOH ೧೪ ಕೊಬ್ಬುಗಳು, ಎಣ್ಣೆಗಳು
ಲಿನೊಲಿಯಿಕ್ C17H33.COOH -೧೧ ಅಗಸೆ ಎಣ್ಣೆ, ಹತ್ತಿಬೀಜದ

ಎಣ್ಣೆ

ಲಿನೊಲಿನಿಕ್ C17H31.COOH ಅಗಸೆ ಎಣ್ಣೆ
ರಿಸಿನ್ C17H29.COOH ಹರಳೆಣ್ಣೆ
ಓಲಿಯಿಕ್ (ಇದರಲ್ಲಿ ಒಂದು

ದ್ವಿಬಂಧವೂ

ಒಂದು ಹೈಡ್ರಾಕ್ಸಿಲ್

ಗುಂಪೂ ಇವೆ.)

ಅರ್‍ಯಾಚಿಡೋನಿಕ್ C19H31.COOH

(ಇದರಲ್ಲಿ ನಾಲ್ಕು ದ್ವಿಬಂಧಗಳಿವೆ)

ಭೌತಿಕ ಗುಣಗಳು[ಬದಲಾಯಿಸಿ]

ಸಾಮಾನ್ಯ ಉಷ್ಣದಲ್ಲಿ ಎಣ್ಣೆಗಳು ಘನವಸ್ತುಗಳು. ಈ ಆಧಾರದಮೇಲೆ ನಾವು ಗ್ಲಿಸರೈಡುಗಳನ್ನು ವರ್ಗೀಕರಿಸುವಂತಿಲ್ಲ. ಏಕೆಂದರೆ ಕೊಬ್ಬರಿ ಎಣ್ಣೆಯನ್ನು ಚಳಿಗಾಲದಲ್ಲಿ ಗಟ್ಟಿಯಾಗುವುದರಿಂದ ಕೊಬ್ಬೆಂದೂ ಬೇಸಗೆಯಲ್ಲಿ ದ್ರವರೂಪದಲ್ಲಿರುವುದರಿಂದ ಎಣ್ಣೆಯೆಂದೂ ಕರೆಯಬೇಕಾಗುತ್ತದೆ. ಇದು ಆಭಾಸಕ್ಕೆಡೆಯಾಗುತ್ತದೆ. ಆದ್ದರಿಂದ ಅಪರ್ಯಾಪ್ತತೆ ಹೆಚ್ಚಾಗಿದ್ದರೆ ಎಣ್ಣೆಯೆಂದೂ ಕಡಿಮೆಯಾಗಿದ್ದರೆ ಕೊಬ್ಬೆಂದೂ ವಿಂಗಡಿಸುವುದು ಸಮಂಜಸವಾಗಿದೆ. ಅಪರ್ಯಾಪ್ತತೆ ಹೆಚ್ಚಿದಷ್ಟೂ ಕೊಬ್ಬಿನ ದ್ರವೀಕರಣ ಬಿಂದು ಕಡಿಮೆಯಾಗುವುದನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ೨೦ ಸೆ. ಗಿಂತ ಕಡಿಮೆ ದ್ರವೀಕರಣ ಬಿಂದುವಿರುವ ವಸ್ತು ಕೊಬ್ಬು ಎನಿಸಿಕೊಳ್ಳುತ್ತದೆ. ಇತ್ತೀಚೆಗೆ ಎಣ್ಣೆಗಳಿಗೂ ಕೊಬ್ಬು ಎಂಬ ಪದದ ಅನ್ವಯಮಾಡುವುದು ರಸಾಯನ ವಿಜ್ಞಾನಿಗಳ ಪರಿಪಾಠವಾಗಿದೆ. ಇದು ಒಂದು ಅನುಕೂಲವೇ ಸರಿ. ಏಕೆಂದರೆ ಗ್ಲಿಸರೈಡುಗಳಲ್ಲದ ಖನಿಜ ಮತ್ತು ಸುಗಂಧ ತೈಲಗಳಿಗೂ ಇರುವ ಮೂಲ ವ್ಯತ್ಯಾಸ ಇದರಿಂದ ವ್ಯಕ್ತವಾಗುತ್ತದೆ.

ಮುಖ್ಯವಾದ ತೈಲಗಳು[ಬದಲಾಯಿಸಿ]

ಮುಖ್ಯವಾದ ಕೊಬ್ಬು ಮತ್ತು ತೈಲಗಳ ಪ್ರಸರಣ, ಉಪಯೋಗ ಇತ್ಯಾದಿ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.

ಸಸ್ಯತೈಲಗಳು[ಬದಲಾಯಿಸಿ]

ತೈಲ ಅಥವಾ ಕೊಬ್ಬು ಉತ್ಪಾದಿಸುವ ಮುಖ್ಯ ದೇಶಗಳು ಅಯೋಡೀನ್

ಮೌಲ್ಯ

ಪ್ರಮುಖ ಉಪಯೋಗಗಳು
ಒಣಗುವ ತೈಲಗಳು
ಪೆರಿಲ್ಲ ಚೀನ, ಕೊರಿಯ, ಜಪಾನ್, ಭಾರತ ೧೯೩-೨೦೮ ಪೆಯಿಂಟ್, ವಾರ್ನಿಷ್
ಅಗಸೆ ಆರ್ಜಂಟೀನ, ಭಾರತ, ಉತ್ತರ ಅಮೆರಿಕ, ರಷ್ಯ ೧೭೫-೨೦೫ ಪೆಯಿಂಟ್, ವಾರ್ನಿಷ್, ಲಿನೋಲಿಯಂ,

ಅಚ್ಚು ಮಾಡುವ ಶಾಯಿ

ಟಂಗ್ ಚೀನ, ಜಪಾನ್, ಅಮೆರಿಕ ಸಂಯುಕ್ತ

ಸಂಸ್ಥಾನಗಳು

೧೬೦-೧೭೫ ಪೆಯಿಂಟ್, ವಾರ್ನಿಷ್
ಅಯ್ಟಿಸಿಕಾ ಬ್ರೆಜಿಲ್ ೧೩೯-೧೫೫ ಪೆಯಿಂಟ್, ವಾರ್ನಿಷ್
ಅರೆ ಒಣಗುವ ಎಣ್ಣೆಗಳು
ಗಸಗಸೆ ಭಾರತ ೧೨೩-೧೪೩ ಮೆದುಸಾಬೂನು, ಮಸಾಲೆ ಎಣ್ಣೆ
ಕುಸುಬೆ ಭಾರತ, ಅಮೆರಿಕ ಸಂಯುಕ್ತ ಸಂಸ್ಥಾನಗಳು ೧೩೦-೧೫೦ ಮಸಾಲೆ ಎಣ್ಣೆ ಅಂಟುಗಳು,

ಪೆಯಿಂಟುಗಳು

ಸೋಯಾ ಅವರೆ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ,

ಮಂಚೂರಿಯ

೧೨೫-೧೪೦ ಆಹಾರ, ಪೆಯಿಂಟುಗಳು, ಅಂಟುಗಳು,

ರಾಸಾಯನಿಕಗಳು

ಮುಸುಕಿನ ಜೋಳ ಅಮೆರಿಕ ಸಂಯುಕ್ತ ಸಂಸ್ಥಾನಗಳು,

ಆರ್ಜಂಟೀನ, ಯೂರೋಪ್

೧೧೫-೧೩೦ ಆಹಾರ
ಸೂರ್ಯಕಾಂತಿ ದಕ್ಷಿಣ ಅಮೆರಿಕ, ರಷ್ಯ ೧೨೦-೧೪೦ ಆಹಾರ
ಹತ್ತಿಬೀಜ ಅಮೆರಿಕ ಸಂಯುಕ್ತ ಸಂಸ್ಥಾನ, ಭಾರತ,

ಈಜಿಪ್ಟ್, ಮೆಕ್ಸಿಕೋ

೧೦೦-೧೧೬ ಆಹಾರ, ಸಾಬೂನು
ಎಳ್ಳು ಭಾರತ, ಈಜಿಪ್ಟ್ ೧೦೩-೧೧೮ ಆಹಾರ, ಸಾಬೂನು
ರೇಪ್ ಈಸ್ಟ್ ಇಂಡಿಯಾ, ಯೂರೋಪ್ ೯೪-೧೦೨ ಆಹಾರ, ಕೀಲೆಣ್ಣೆ
ಒಣಗದ ತೈಲಗಳು
ಬಾದಾಮಿ ದಕ್ಷಿಣ ಯೂರೋಪ್, ಉತ್ತರ ಆಫ್ರಿಕ ೯೩-೧೦೦ ಪರಿಮಳಗಳು, ವೈದ್ಯಕೀಯ, ಆಹಾರ
ಕಡಲೆಕಾಯಿ ಭಾರತ, ಪಶ್ಚಿಮ ಆಫ್ರಿಕ, ಚೀನ, ಅಮೆರಿಕ

ಸಂಯುಕ್ತ ಸಂಸ್ಥಾನ

೮೫-೧೦೦ ಆಹಾರ
ಆಲಿವ್ ಮೆಡಿಟರೇನಿಯನ್ ತೀರ ಪ್ರದೇಶ,

ಅಮೆರಿಕ ಸಂಯುಕ್ತ ಸಂಸ್ಥಾನ

೭೫-೯೫ ಆಹಾರ, ಸಾಬೂನು, ಕೀಲೆಣ್ಣೆ,

ವೈದ್ಯಕೀಯ

ಹರಳು ಭಾರತ, ಮೆಡಿಟರೇನಿಯನ್ ದೇಶಗಳು,

ಬ್ರೆಜ಼ಿಲ್, ಅಮೆರಿಕ ಸಂಯುಕ್ತ ಸಂಸ್ಥಾನ

೮೦-೯೦ ವೈದ್ಯಕೀಯ, ಕೀಲೆಣ್ಣೆ,

ರಾಸಾಯನಿಕಗಳು

ಪ್ರಾಣಿಗಳ ತೈಲಗಳು[ಬದಲಾಯಿಸಿ]

ಕಡಲ ಪ್ರಾಣಿಗಳಿಂದಾದ

ತೈಲಗಳು

ಸಾರ್ಡೀನ್ ಮೀನು ಉತ್ತರ ಅಮೆರಿಕದ ಪಶ್ಚಿಮತೀರ, ಜಪಾನ್ ೧೭೦-೧೯೦ ಅಂಟುಗಳು, ಲಿನೋಲಿಯಂ,ಪೆಯಿಂಟುಗಳು,

ಆಹಾರ, ಚರ್ಮ ಹದಮಾಡಲು

ಮೆನ್‌ಹೇಡನ್ ಉತ್ತರ ಅಮೆರಿಕದ ಅಟ್ಲಾಂಟಿಕ್ ತೀರ ೧೪೦-೧೭೩ ಅಂಟುಗಳು, ಲಿನೋಲಿಯಂ,ಪೆಯಿಂಟುಗಳು,

ಆಹಾರ, ಚರ್ಮ ಹದಮಾಡಲು

ಹೆರಿಂಗ್ ಮೀನು ಉತ್ತರ ಸಮುದ್ರ, ಜಪಾನ್ ೧೨೦-೧೪೫ ಚರ್ಮ ಹದಮಾಡಲು, ಪೆಯಿಂಟುಗಳು,

ಆಹಾರ

ಕಾಡ್‍ಲಿವರ್ ಉತ್ತರ ಸಮುದ್ರ, ಉತ್ತರ ಅಮೆರಿಕದ

ಪೂರ್ವತೀರ

೧೨೦-೧೮೦ ಜೀವಾತುಗಳು, ಚರ್ಮ ಹದಮಾಡಲು
ಷಾರ್ಕ್‌ಲಿವರ್ ಉತ್ತರ ಅಮೆರಿಕದ ತೀರಪ್ರದೇಶಗಳು ೧೦೦-೧೧೫ ಜೀವಾತುಗಳು, ಚರ್ಮ ಹದಮಾಡಲು
ಸೀಲ್ ಉತ್ತರ ಮತ್ತು ದಕ್ಷಿಣದ ಮೇರು

ಪ್ರದೇಶಗಳು

೧೨೭-೧೪೭ ಆಹಾರ, ಸಾಬೂನು, ಚರ್ಮ ಹದಮಾಡಲು
ತಿಮಿಂಗಲ ಉತ್ತರ ಮತ್ತು ದಕ್ಷಿಣದ ಮೇರು

ಪ್ರದೇಶಗಳು

೬೫-೭೫ ಕೀಲೆಣ್ಣೆ, ಉತ್ತಮದರ್ಜೆಯ ಚರ್ಮದ

ತಯಾರಿಕೆ

ಸಸ್ಯಜನ್ಯ ಎಣ್ಣೆಗಳು[ಬದಲಾಯಿಸಿ]

ಬಬಸ್ಸು ಎಣ್ಣೆ ಪಶ್ಚಿಮ ಆಫ್ರಿಕ ೯-೧೮ ಆಹಾರ, ಸಾಬೂನು, ರಾಸಾಯನಿಕಗಳು
ಕೊಬ್ಬರಿ ಎಣ್ಣೆ ಫಿಲಿಫೈನ್ಸ್ ದ್ವೀಪಗಳು, ಭಾರತ,

ಸಿಲೋನ್

೮-೧೦ ಆಹಾರ, ಸಾಬೂನು, ರಾಸಾಯನಿಕಗಳು

ಎಣ್ಣೆ ಪಡೆಯುವ ವಿಧಾನಗಳು[ಬದಲಾಯಿಸಿ]

ತೈಲಧಾರಕ ಊತಕಗಳಿಂದ (ಟಿಶ್ಯೂಸ್) ಕೊಬ್ಬನ್ನು ಪಡೆಯಲು ಮೂರು ವಿಧಾನಗಳಿವೆ - ದ್ರವೀಕರಣ, ಹಿಂಡುವಿಕೆ, ಸಂಸ್ಕರಣ.

ದ್ರವೀಕರಣ[ಬದಲಾಯಿಸಿ]

ಇಂದಿಗೂ ಕೆಲವು ದೇಶಗಳಲ್ಲಿ ಅನುಸರಿಸಲಾಗುತ್ತಿರುವ ಈ ಹಳೆಯ ಪದ್ಧತಿ ಪ್ರಕಾರ ತೈಲಯುಕ್ತ ಫಲಗಳನ್ನು ಗುಡ್ಡೆಹಾಕಿ ಬಿಸಿಲಿನಲ್ಲಿ ಒಣಗಿಸಿದರೆ ಎಣ್ಣೆ ಹೊರಸೂಸುವುದು. ಈ ಕ್ರಮವನ್ನೇ ಸ್ವಲ್ಪ ಸುಧಾರಿಸಿ ಪಾಮ್ ಎಣ್ಣೆಯ ತಯಾರಿಕೆಗೆ ಬಳಸುತ್ತಾರೆ. ಪಾಮ್ ಹಣ್ಣುಗಳನ್ನು ಕೊಯ್ದ ತತ್‌ಕ್ಷಣ ನೀರಿನಲ್ಲಿ ಕುದಿಸಿದರೆ ಎಣ್ಣೆ ತೇಲುತ್ತದೆ. ಅದನ್ನು ಗೋರಿಕೊಳ್ಳಬಹುದು. ತಮ್ಮ ಕೊಬ್ಬಿನ ಅಂಶವನ್ನು ಸುಲಭವಾಗಿ ತ್ಯಜಿಸುವ ಆಲಿವ್ ಮತ್ತು ಪಾಮ್ ಜಾತಿಯ ಹಣ್ಣು ಮತ್ತು ಬೀಜಗಳಿಗೆ ಈ ವಿಧಾನ ಅನ್ವಯಿಸುತ್ತದೆ. ತಿಮಿಂಗಲದ ಎಣ್ಣೆ, ಹಂದಿಯ ಕೊಬ್ಬು, ಟ್ಯಾಲೋ ಮತ್ತು ಎಲುಬಿನ ಕೊಬ್ಬು ಮೊದಲಾದುವನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲೂ ಈ ವಿಧಾನ ಅನ್ವಯಿಸುತ್ತದೆ. ಕೊಬ್ಬಿನ ಊತಕಗಳನ್ನು ಸಣ್ಣ ತುಂಡುಗಳಾಗಿ ಹೆಚ್ಚಿ, ಹಬೆ ಪಚನಕಾರಿಗಳಲ್ಲಿ ಅಥವಾ ತೆರೆದ ಕಡಾಯಿಗಳಲ್ಲಿ ಕುದಿಸಲಾಗುವುದು. ಆಗ ಕೋಶಗಳಿಂದ ಕೊಬ್ಬು ಬಿಡುಗಡೆಯಾಗಿ ನೀರಿನ ಮೇಲೆ ತೇಲುವುದು. ಅದನ್ನು ಗೋರಿಹಾಕಬಹುದು. ಉಳಿದ ವಸ್ತುವನ್ನು ಪ್ರಾಣಿಗಳಿಗೆ ತಿನಿಸಾಗಿ ಅಥವಾ ಗೊಬ್ಬರವಾಗಿ ಉಪಯೋಗಿಸುವರು.

ಹಿಂಡುವಿಕೆ[ಬದಲಾಯಿಸಿ]

ಕುದಿಸುವ ವಿಧಾನ ಬಹಳಷ್ಟು ಬೀಜಗಳಿಂದ ಎಣ್ಣೆ ಪಡೆಯಲು ಸಮರ್ಪಕವಲ್ಲ. ಇಂಥ ಸಂದರ್ಭಗಳಲ್ಲಿ ಎಣ್ಣೆ ಧಾರಕ ಕೋಶ ರಚನೆಯನ್ನು ಛಿದ್ರಗೊಳಿಸಲು ಅರೆಯುವುದು, ಒತ್ತಡದಿಂದ ಗಟ್ಟಿಸುವುದು, ಹಿಂಡುವುದು ಇತ್ಯಾದಿ ಕ್ರಮಗಳು ಅನಿವಾರ್ಯವಾಗುತ್ತವೆ. ಇದಕ್ಕಾಗಿ ಒರಳಿನಲ್ಲಿ ಎಣ್ಣೆಬೀಜಗಳನ್ನು ರುಬ್ಬುವ ಗಾಣದ ಪದ್ಧತಿ ಬಂದಿದೆ. ಇಂದಿಗೂ ನಮ್ಮಲ್ಲಿ ಈ ವಿಧಾನ ಅಲ್ಲಲ್ಲಿ ಬಳಕೆಯಲ್ಲಿದೆ. ಕಾಲಕ್ರಮದಲ್ಲಿ ಈ ವಿಧಾನದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಆಧುನಿಕ ಒತ್ತಡ ವಿಧಾನದಲ್ಲಿ ಮೂರುಹಂತಗಳಿವೆ : (i) ಅಯಸ್ಕಾಂತ ಪ್ರತ್ಯೇಕಿಯ ಸಹಾಯದಿಂದ ಲೋಹದ ಕಣಗಳನ್ನು ತೆಗೆದುಹಾಕುವುದು. (ii) ಅಗತ್ಯವಿದ್ದರೆ ತೊಗಟೆ ಬಿಡಿಸಿ ಚಿಪ್ಪನ್ನು ಬೇರ್ಪಡಿಸುವುದು. (iii) ತಿರುಳನ್ನು ಗಿರಣಿಗಳಲ್ಲಿ ಅರೆದು ಹಿಟ್ಟುಮಾಡುವುದು. (iv) ಕಾಯಿಸಿ ಅಥವಾ ಕಾಯಿಸದೆಯೇ ಸ್ಕ್ರ್ಯೂಪ್ರೆಸ್ಸುಗಳಲ್ಲಿ ಹಿಂಡುವುದು.   

ಕಾಯಿಸದೆ ಹೊರಡಿಸಿದ ಎಣ್ಣೆಯಲ್ಲಿ ಅತ್ಯಲ್ಪ ಪ್ರಮಾಣದ ಕಶ್ಮಲಗಳು ಇರುವುದರಿಂದ ಹೆಚ್ಚಿನ ಸಂಸ್ಕರಣವಿಲ್ಲದೆ, ಅದನ್ನು ಆಹಾರವಾಗಿ ಬಳಸಬಹುದು. ಅಂಥ ಎಣ್ಣೆಗಳನ್ನು ಹಸಿ ಎಣ್ಣೆಗಳು (ಕೋಲ್ಡ್‌ಡ್ರಾನ್) ಎನ್ನುತ್ತಾರೆ. ಕಾಯಿಸಿ ಹಿಂಡಿದರೆ ಹೆಚ್ಚು ಎಣ್ಣೆಯನ್ನು ಹೊರಡಿಸಬಹುದು. ಆದರೆ ಅಂಥ ಎಣ್ಣೆಗೆ ದಟ್ಟವಾದ ಬಣ್ಣ ಪ್ರಾಪ್ತವಾಗುತ್ತದೆ. ಇದಕ್ಕೆ ಹಸಿ ಹರಳೆಣ್ಣೆ ನಿರ್ವರ್ಣವಾಗಿರುವುದೇ ಸಾಕ್ಷಿ. ಉಳಿದ ಹಿಂಡಿಯನ್ನು ಪ್ರಾಣಿಗಳ ಆಹಾರವಾಗಿಯೋ ಅಥವಾ ಗೊಬ್ಬರವಾಗಿಯೋ ವಿಲೆಮಾಡಲಾಗುವುದು.

ಲೀನಕಾರಿಗಳಿಂದ ಸಂಗ್ರಹಣ[ಬದಲಾಯಿಸಿ]

ಒತ್ತಡ ವಿಧಾನದಿಂದ ಬಂದ ಹಿಂಡಿಯಲ್ಲಿ ೩%-೧೫% ಎಣ್ಣೆಯ ಅಂಶವಿದೆ. ಆ ಎಣ್ಣೆ ಹಿಂಡಿಗಿಂತ ಬೆಲೆ ಬಾಳುವಂತಿದ್ದರೆ ಲೀನಕಾರಿಗಳನ್ನುಪಯೋಗಿಸಿ ಅದನ್ನು ಬೇರ್ಪಡಿಸುವುದು ಲಾಭಕರವಾಗುತ್ತದೆ. ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲಿಯಂಈಥರ್, ಹೆಕ್ಸೇನ್, ಹೆಪ್ಟೇನ್ ಮುಂತಾದ ಹೈಡ್ರೋಕಾರ್ಬನ್ ದ್ರವಗಳು ಉಪಯೋಗವಾಗುತ್ತವೆ. ಇಂಥ ಲೀನಕಾರಿಕೆಗಳ ಬಳಕೆಯಿಂದ ಎಣ್ಣೆ ತಯಾರಿಕೆಯ ಕಾರ್ಖಾನೆಗಳಲ್ಲಿ ಅಗ್ನಿ ಪ್ರಕರಣಗಳು ಮತ್ತು ಆಸ್ಫೋಟನೆಗಳು ಪದೇ ಪದೇ ನಡೆಯುವುದುಂಟು. ಇವನ್ನು ತಪ್ಪಿಸಲು ಟ್ರೈಕ್ಲೋರೊ ಎಥಿಲೀನ್ ಮೊದಲಾದ ಕ್ಲೋರಿನ್‌ಯುಕ್ತ ಲೀನಕಾರಿಗಳನ್ನು ಬಳಸುವುದು ಒಮ್ಮೆ ಆಚರಣೆಯಲ್ಲಿತ್ತು. ಆದರೆ ಇವು ಲೋಹಾಂಶಗಳನ್ನೂ ಕರಗಿಸಿಕೊಂಡು ಎಣ್ಣೆಯನ್ನು ವಿಷಪೂರಿತವಾಗಿ ಮಾಡುತ್ತಿದ್ದವು. ಆದ್ದರಿಂದ ಅವುಗಳ ಬಳಕೆ ಈಗ ನಿಂತಿದೆ. ಕೈಗಾರಿಕಾ ಪ್ರಮಾಣದಲ್ಲಿ ಎಣ್ಣೆ ತೆಗೆಯಬೇಕಾದಾಗ ಒತ್ತಡ ವಿಧಾನಕ್ಕಿಂತ ಲೀನಕಾರೀ ವಿಧಾನದಿಂದ ಮಿತವ್ಯಯ ಸಾಧನೆಯಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸೋಯಾ ಅವರೆಯಿಂದ ಎಣ್ಣೆ ತೆಗೆಯಲು ಕೇವಲ ಪೆಟ್ರೋಲಿಯಂ ಬೆಂಜ಼ೀನ್ ಉಪಯೋಗಿಸುತ್ತಿದ್ದಾರೆ. ಸೋಯಾ ಅವರೆಗಿಂತ ಹೆಚ್ಚು ಎಣ್ಣೆಯ ಅಂಶವಿರುವ ಬೀಜಗಳಾದರೆ ಪೂರ್ವಭಾವಿಯಾಗಿ ಅವನ್ನು ಒತ್ತಡದಿಂದ ಹಿಂಡಿ ಅನಂತರ ಲೀನಕಾರಿಗಳಿಂದ ಉಳಿದ ಎಣ್ಣೆಯನ್ನು ಗ್ರಹಿಸುವುದು ಸೂಕ್ತ.

ಮತ್ತೊಂದು ಆಧುನಿಕ ತೈಲಗ್ರಹಣ ವಿಧಾನದಲ್ಲಿ ನಿಯತ ಕುದಿ ಮಿಶ್ರಣದ ತತ್ತ್ವವನ್ನು ಅಳವಡಿಸಿಕೊಳ್ಳಲಾಗಿದೆ. ತೈಲಭರಿತ ಊತಕಗಳನ್ನು ನೆನೆಸಲಾಗುವುದು. ಅನಂತರ ಸೂಕ್ತ ಕ್ಲೋರಿನ್‌ಯುಕ್ತ ಲೀನಕಾರಿಯೊಡನೆ ಕುದಿಸುವರು. ನಿಯತ ಕುದಿ ಮಿಶ್ರಣವನ್ನು ತಣಿಸಿದರೆ ಅದು ದ್ರವೀಕರಿಸುವುದು. ಅದರಿಂದ ನೀರನ್ನು ತೆಗೆದುಹಾಕಿ ಲೀನಕಾರಿಯನ್ನು ಗ್ರಾಹಕ ಯಂತ್ರಕ್ಕೆ ಹಿಂತಿರುಗಿಸಲಾಗುವುದು. ಫಲಿತ ವಸ್ತುವಿನಲ್ಲಿ ಮೂಲ ಪದಾರ್ಥದಲ್ಲಿದ್ದ ಕೊಬ್ಬಿನ ಬಹುಭಾಗ ಅಡಗಿರುವುದು. ಕ್ಲೋರಿನೀಕೃತ ಲೀನಕಾರಿಗಳು ದುಬಾರಿಯಾದರೂ ಉನ್ನತ ಉಷ್ಣತೆಗೆ ಈಡು ಮಾಡದೆ ಸಾಂದ್ರಿತ ಕೊಬ್ಬು ದೊರೆಯುವುದರಿಂದ ಈ ವಿಧಾನ ಆಶಾದಾಯಕವಾಗಿದೆ.

ಸಂಸ್ಕರಣ[ಬದಲಾಯಿಸಿ]

ಅವುಗಳ ಮೂಲ, ಗುಣ ಮತ್ತು ಉದ್ದೇಶಿತ ಬಳಕೆಗಳಿಗೆ ಅನುಗುಣವಾಗಿ ಕೊಬ್ಬುಗಳನ್ನು ಸಂಸ್ಕರಿಸಬೇಕಾಗುತ್ತದೆ. ಕೆಲವು ಕೊಬ್ಬುಗಳನ್ನು ಕೇವಲ ತಳವೂರಿಸಿ  ಅಥವಾ ಶೋಧಿಸಿ ಉಪಯೋಗಿಸಿ ಬಿಡುವುದುಂಟು. ಹೆಚ್ಚು ಸಂಸ್ಕರಿಸದೆ ಉಪಯೋಗಿಸುವ ಖಾದ್ಯ ಎಣ್ಣೆಗಳೆಂದರೆ ಹಸಿ ಕಡಲೆಕಾಯಿ ಮತ್ತು ಕೊಬ್ಬರಿ ಎಣ್ಣೆಗಳು. ಅಗಾಧ ಪ್ರಮಾಣದ ಬೆಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಕಡೆದು ಅಥವಾ ಕರಗಿಸಿ ವಿಶೇಷ ಸಂಸ್ಕರಣಕ್ಕೆ ಒಳಪಡಿಸದೆ ಉಪಯೋಗಿಸುತ್ತಾರೆ. ರುಚಿ ಮತ್ತು ವಾಸನೆ ರಹಿತವಾದ ಸಂಗ್ರಹ ಮಾಡಿದಾಗ ಕೆಡದಂತಿರುವ, ಖಾದ್ಯ ಎಣ್ಣೆ ಮತ್ತು ಕೊಬ್ಬುಗಳಿಗೆ ಬೇಡಿಕೆ ಏರುತ್ತಿರುವುದರಿಂದ ನವೀನ ತೈಲಸಂಸ್ಕರಣ ತಂತ್ರಗಳು ಹುಟ್ಟಿಕೊಂಡಿವೆ.

ಕೊಬ್ಬಿನ ಬಣ್ಣ, ರುಚಿ ಮತ್ತು ವಾಸನೆಗಳಿಗೆ ಅದರಲ್ಲಿ ಗ್ಲಿಸರೈಡೇತರ ಅಂಶಗಳು ಕಾರಣ.  ಇವುಗಳ ಪೈಕಿ ಮೇಣಗಳು, ಮೂಲ ಕೊಬ್ಬಿನ ಆಮ್ಲಗಳು, ವರ್ಣದ್ರವ್ಯಗಳು, ಫಾಸ್ಫೊಲೈವಿಡ್ಡುಗಳನ್ನು ಹೆಸರಿಸಬಹುದು.  ಕಾಸ್ಟಿಕ್ ಸೋಡ (NaOH) ಅಥವಾ ಸೋಡಾ ಬೂದಿ (Na2CO3) ಯೊಡನೆ ೪೦-೮೫. ಸೆಂ.ಗ್ರೇ. ಉಷ್ಣತೆಗೆ ಕೊಬ್ಬನ್ನು ಕಾಯಿಸುವುದರಿಂದ ಈ ಅನಪೇಕ್ಷಿತ ವಸ್ತುಗಳ ಬಹುಭಾಗ ನಿವಾರಣೆಯಾಗುವುದು.  ಈ ಶುದ್ಧೀಕರಣಕ್ಕಾಗಿಯೇ ನಿರ್ಮಿತವಾದ ಒಂದು ತೊಟ್ಟಿಯಿದೆ.  ಕೊಬ್ಬಿನ ಆಮ್ಲಗಳು ಸಾಬೂನಿಗೆ ಪರಿವರ್ತನೆ ಹೊಂದಿ ಇತರ ಮಲಿನ ವಸ್ತುಗಳೊಂದಿಗೆ ತಳವೂರುವುವು.  ಇವುಗಳ ಬೇರ್ಪಡೆಗೆ ಕೇಂದ್ರಾಪಗಮನ ಯಂತ್ರವನ್ನು ಉಪಯೋಗಿಸುವುದುಂಟು.  ಅನಂತರ ಕೊಬ್ಬನ್ನು ನೀರಿನಿಂದ ತೊಳೆದು ಅದಕ್ಕಂಟಿರುವ ಕ್ಷಾರ ಮತ್ತು ಸಾಬೂನನ್ನು ಹೋಗಲಾಡಿಸಬೇಕು.  ಸೋಡಾಬೂದಿ ಅಥವಾ ಅಮೋನಿಯದಿಂದ ಸಂಸ್ಕರಿಸಿದ ಎಣ್ಣೆಗಳನ್ನು ಸೋಡಿಯಂ ಹೈಡ್ರಾಕ್ಸೈಡಿನ ವರ್ತನೆಗೆ ಒಳಪಡಿಸಿದ ಹೊರತು ಅವುಗಳ ಬಣ್ಣ ಸುಧಾರಿಸುವುದಿಲ್ಲ. ಜಲಮಾರ್ಜನದ ಅನಂತರ ಎಣ್ಣೆಯನ್ನು ನಿರ್ವಾತ ಪರಿಸ್ಥಿತಿಯಲ್ಲಿ ಕಾಯಿಸಿ ಶುಷ್ಕಮಾಡಬೇಕು. ಇಂಥ ಸಂಸ್ಕರಿತ (ರಿಫೈನ್ಡ್) ಎಣ್ಣೆಯನ್ನು ನಯವಾಗಿ ಕೈಗಾರಿಕಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಆದರೆ ಅದು ಆಹಾರಯೋಗ್ಯವಾಗಬೇಕಾದರೆ ಹೆಚ್ಚಿನ ಸಂಸ್ಕರಣ ಅಗತ್ಯ. ಸಾಮಾನ್ಯವಾಗಿ ಸಂಸ್ಕರಿತ ತೈಲಗಳು ತಟಸ್ಥ ವಸ್ತುಗಳು. ಅವುಗಳಿಗೆ ಬಣ್ಣ ಕಡಿಮೆ ಮತ್ತು ಕಮಟು ಹಿಡೆಯುವ ಪ್ರವೃತ್ತಿ ಹೆಚ್ಚು.

ತೈಲ ಸಂಸ್ಕರಣಕ್ಕೆ ಕ್ಷಾರೀಯ ವಸ್ತುಗಳಿಗೆ ಬದಲಾಗಿ ಸಲ್ಫ್ಯೂರಿಕ್ ಆಮ್ಲವನ್ನು ಬಳಸುವುದುಂಟು.  ಆಗ ಕೊಬ್ಬಿನ ಆಮ್ಲಗಳ ಹೊರತು ಉಳಿದ ಕಶ್ಮಲಗಳು ನಿವಾರಣೆಯಾಗುವುವು.  ಕೈಗಾರಿಕೆಯಲ್ಲಿ ಬಳಸುವ ಅಗಸೆ ಎಣ್ಣೆಗಳಂಥ ಎಣ್ಣೆಗಳಲ್ಲಿ ಆಮ್ಲಗಳ ಅಂಶ ಹೆಚ್ಚಿದ್ದರೆ ಬಾಧಕವಿಲ್ಲ.  ಅಂಥ ಎಣ್ಣೆಗಳ ಶುದ್ಧೀಕರಣಕ್ಕೆ ಈ ಆಮ್ಲ ವಿಧಾನ ಅನುಕೂಲ.  ಫಾಸ್ಫೊಲೈಪಿಡ್ಡುಗಳ ಭಾಗ ಕಡಿಮೆಯಿರುವ ಕೊಬ್ಬರಿ ಎಣ್ಣೆ ಇತ್ಯಾದಿಗಳ ಸಂಸ್ಕರಣಕ್ಕೆ ಉಗಿಯ ಪ್ರಯೋಗ ಸಾಧುವಾಗಿದೆ.  ಉನ್ನತ ಉಷ್ಣಕ್ಕೆ ಕಾಯಿಸಿದ ಎಣ್ಣೆಯ ಮೂಲಕ ಶುದ್ಧ ಉಗಿಯನ್ನು ಹಾಯಿಸುವುದು ಪದ್ಧತಿ.  ಇದರಿಂದ ಆಮ್ಲಗಳು ಉಗಿಯೊಡನೆ ಪಾರಾಗುವುವು.   ಕೆಲವು ಸಂದರ್ಭಗಳಲ್ಲಿ ಎಣ್ಣೆಯಲ್ಲಿರುವ ಫಾಸ್ಫೊ ಲೈಪಿಡ್ಡುಗಳನ್ನು ತೊಡೆದು ಹಾಕಲು ಅಸಿಟಿಕ್ ಅನ್‌ಹೈಡ್ರೈಡನ್ನು ಬಳಸಿರುತ್ತಾರೆ.  ಇದೂ ಉಗಿಯ ಪ್ರಯೋಗದಿಂದ ನಿವಾರಿಸಲ್ಪಡುತ್ತದೆ.  ತೈಲಸಂಸ್ಕರಣಕ್ಕೆ ಬಳಸುವ ಇತರ ವಸ್ತುಗಳೆಂದರೆ ಪೆಟ್ರೋಲಿಯಂ ಬೆಂಜ಼ೀನ್, ಅಮೋನಿಯ, ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಆಕ್ಸೈಡುಗಳು, ಅಯಾನು ವಿನಿಯಮ ಅಂಟುಗಳು ಮತ್ತು ಕೆಲವು ಸಾವಯವ ಪ್ರತ್ಯಾಮ್ಲೀಯ ವಸ್ತುಗಳು.

ಕೆಲವು ಎಣ್ಣೆಗಳಲ್ಲಿ ಫಾಸ್ಫೊಲೈಪಿಡ್ಡುಗಳು ಗಣನೀಯ ಪ್ರಮಾಣದಲ್ಲಿವೆ.  ಅಂಥ ಎಣ್ಣೆಗಳಿಗೆ ಕೊಂಚ ನೀರುಬೆರೆಸಿ ಕೇಂದ್ರಾಪಗಮನ ಯಂತ್ರದಲ್ಲಿಟ್ಟು ತಿರುಗಿಸಿದರೆ ಅಂಟು ಪದಾರ್ಥಗಳೂ ಫಾಸ್ಫೊಲೈಪಿಡ್ಡುಗಳೂ ಬೇರ್ಪಡುವುವು.  ಮುಸುಕಿನ ಜೋಳ ಮತ್ತು ಸೋಯಾ ಅವರೆ ಎಣ್ಣೆಗಳಿಂದ ಹೀಗೆ ಬೇರ್ಪಡಿಸಿದ ವಸ್ತುಗಳನ್ನು ಲೆಸಿಥಿನ್ ಎಂಬ ವ್ಯವಹಾರನಾಮದಿಂದ ಚಾಕಲೇಟ್ ತಿನಿಸುಗಳು, ಪೆಯಿಂಟುಗಳು, ಮಾರ್ಗರಿನ್ ಇತ್ಯಾದಿಗಳ ತಯಾರಿಕೆಯಲ್ಲಿ ಎಮಲ್ಷನ್‌ಕಾರಿಗಳಾಗಿ ಉಪಯೋಗಿಸುತ್ತಾರೆ.  ಅಂಟುರಹಿತ ಎಣ್ಣೆಯನ್ನು ಪೆಯಿಂಟುಗಳು ಮತ್ತು ಆಲ್ಕಿಡ್ ರೆಸಿನ್ನುಗಳನ್ನು ಮಾಡಲು ಬಳಸಬಹುದು; ಅಥವಾ ಕ್ಷಾರಗಳಿಂದ ಸಂಸ್ಕರಿಸಿ ಆಹಾರಯೋಗ್ಯವಾಗಿ ಮಾಡಬಹುದು.

ಚಲುವೆ ಮಾಡುವುದು: ತೈಲದ ಬಣ್ಣವನ್ನು ಇನ್ನೂ ಕಡಿಮೆ ಮಾಡಬೇಕಾಗಿದ್ದರೆ ಅದಕ್ಕಾಗಿಯೇ ಹಲವು ಚಲುವೆಕಾರಿಗಳಿವೆ.  ಆಮ್ಲಮಿಶ್ರಿತ ಸೋಡಿಯಂ ಡೈಕ್ರೊಮೇಟ್, ಪರ್ಮ್ಯಾಂಗನೇಟುಗಳು, ಹೈಪೊಕ್ಲೋರೈಟುಗಳೂ ಮತ್ತು ಪರಾಕ್ಸೈಡುಗಳು ಈ ಕಾರ್ಯನಿರ್ವಹಿಸುತ್ತವೆ.  ಖಾದ್ಯ ಎಣ್ಣೆಗಳಿಗೆ ಇವುಗಳನ್ನು ಪ್ರಯೋಗಿಸುವುದು ವಿರಳ.  ಅಂಥ ಎಣ್ಣೆಗಳನ್ನು ಕಾಯಿಸಿ ಪಟುಗೊಳಿಸಿದ ಇಂಗಾಲ ಅಥವಾ ಮಣ್ಣುಗಳ ಸಂಪರ್ಕದಲ್ಲಿ ಬಿಡಲಾಗುವುದು.  ಇವು ಎಣ್ಣೆಯಲ್ಲಿರುವ ಕ್ಲೋರೋಫಿಲ್ ಮತ್ತು ಕೆರೋಟಿನಾಯ್ಡುಗಳನ್ನು ಹೀರುವುವು.  ಯಾವುದೇ ವಿಧಾನದಿಂದ ಚಲುವೆಗೊಳಿಸಿದರೂ ಎಣ್ಣೆಯ ಕಮುಟುಹಿಡಿಯುವ ಪ್ರವೃತ್ತಿ ವೃದ್ಧಿಯಾಗುವುದು.  ಇದೊಂದು ಅನನುಕೂಲ.

ಸ್ಟಿಯರಿನ್ ನಿವಾರಣೆ: ಬೀಜದ ಕವಚದ ಮೇಲಿರುವ ಮೇಣ ತೈಲಗತವಾಗುವುದುಂಟು.  ಶೀಘ್ರಶೀತಲೀಕರಣದಿಂದ ಅದನ್ನು ಬೇರ್ಪಡಿಸಬಹುದು.  ಆದರೆ ಅದರಲ್ಲಿರುವ ಸ್ಟಿಯರಿನ್ ಬೇರ್ಪಡಲು ತೈಲವನ್ನು ನಿಧಾನವಾಗಿ ತಣಿಸಬೆಕು.   ಆಗ ಮಾತ್ರ ಅದು ದಪ್ಪ ಹರಳುಗಳಾಗಿ ಶೋಧಿಸಲು ಅನುಕೂಲವಾಗುತ್ತದೆ.  ಅಗಸೆ ಎಣ್ಣೆಯಿಂದ ಮೇಣವನ್ನು ತೆಗೆದ ಹೊರತು ಅದನ್ನು ಪೆಯಿಂಟುಗಳಿಗೆ ಬಳಸುವಂತಿಲ್ಲ.  ಹಾಗೆಯೇ ಮೀನಿನ ಎಣ್ಣೆಗಳಿಂದ ಟ್ರೈಸ್ಟಿಯರಿನ್ ನಿವಾರಿಸಿದ ಅನಂತರವೇ ಅದು ಆಲ್ಕಿಡ್ ರೆಸಿನ್ನುಗಳ ತಯಾರಿಕೆಗೆ ಯೋಗ್ಯವಾಗುವುದು.  ಹೀಗೆ ಸ್ಟಿಯರಿನ್ ಇಲ್ಲದ ಕಡಲೆಕಾಯಿ ಎಣ್ಣೆ ಕಡಿಮೆ ಉಷ್ಣತೆಯಲ್ಲಿಯೂ ದ್ರವರೂಪದಲ್ಲಿ ಇರಬಲ್ಲದು.  ಬೇರ್ಪಡಿಸಿದ ಸ್ಟಿಯರಿನ್ನಿನಿಂದ ಮೇಣದಬತ್ತಿ ಮಾಡುತ್ತಾರೆ.

ಜಲಜನಕೀಕರಣ (ಹೈಡ್ರೊಜಿನೇಶನ್)[ಬದಲಾಯಿಸಿ]

ತೈಲಗಳಲ್ಲಿರುವ ಆಮ್ಲದ ಅಪರ್ಯಾಪ್ತ ಭಾಗವನ್ನು ಪರ್ಯಾಪ್ತಗೊಳಿಸಿ ಅವು ಕಮಟು ಹಿಡಿಯದಂತೆ ಮಾಡುವುದು ಇದರ ಉದ್ದೇಶ.  ಮೊದಲು ಎಣ್ಣೆಯನ್ನು ೧೭೫-೧೯೦ ಸೆಂ.ಗ್ರೇ.  ಉಷ್ಣತಾಮಿತಿಗೆ ಕಾಯಿಸಬೇಕು. ಒತ್ತಡ ೨ ವಾಯುಭಾರದಷ್ಟಿದ್ದರೆ ಸಾಕು. ಸೂಕ್ಷ್ಮ ಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕ ಅಗತ್ಯ (೦.೦೫-೦.೧೦%). ಸಾಮಾನ್ಯವಾಗಿ, ಕೀಸಲ್ ಘರ್ ಮೇಲೆ ನಿಕ್ಕಲನ್ನು ಹರಡಿ ಉಪಯೋಗಿಸುವುದು ರೂಢಿ.  ಈ ಸನ್ನಿವೇಶದಲ್ಲಿ ಹೈಡ್ರೊಜನ್ (ಜಲಜನಕ) ಹಾಯಿಸಿದರೆ, ದ್ವಿಬಂಧ ಸ್ಥಾನಗಳಲ್ಲಿರುವ ಇಂಗಾಲದ ಪರಮಾಣುಗಳಿಗೆ ಹೈಡ್ರೊಜನ್ನಿನ ಪರಮಾಣುಗಳು ಕೂಡಿ ಪರ್ಯಾಪ್ತಗೊಳಿಸುವುವು.  ಪರಿಣಾಮವಾಗಿ, ಎಣ್ಣೆ ಹೆಪ್ಪಾಗುವುದು.  ಮೂರು ದ್ವಿಬಂಧಗಳುಳ್ಳ ಲಿನೊಲಿಯಿಕ್ ಆಮ್ಲ ಮೊದಲೂ ಎರಡು ದ್ವಿಬಂಧಗಳಿರುವ ಲಿನೊಲಿಯಿಕ್ ಆಮ್ಲ ಅನಂತರವೂ ಒಂದು ದ್ವಿಬಂಧವಿರುವ ಓಲಿಯಿಕ್ ಆಮ್ಲ ಅಂತಿಮವಾಗಿಯೂ ಪರ್ಯಾಪ್ತಗೊಳ್ಳುವುವು.[೨]  ತೈಲ ಪರ್ಯಾಪ್ತವಾದಂತೆಲ್ಲ ಅದರ ಸ್ನಿಗ್ಧತೆ ಹೆಚ್ಚುತ್ತ ಬರುವುದು. ಅದು ಅಪೇಕ್ಷಿತ ಮಟ್ಟ ತಲುಪಿದ ಕೂಡಲೇ ಜಲಜನಕೀಕರಣವನ್ನು ನಿಲ್ಲಿಸಲಾಗುವುದು. ಪ್ರಯೋಗ ಪರಿಸ್ಥಿತಿಯನ್ನು ನಿಯಂತ್ರಿಸುವುದರ ಮೂಲಕ ಇದನ್ನು ಸಾಧಿಸುವರು. ಉನ್ನತ ಉಷ್ಣತೆ, ಒತ್ತಡಗಳನ್ನೂ ಒಮ್ಮೆ ಉಪಯೋಗಿಸಿದ ವೇಗವರ್ಧಕವನ್ನೂ ಬಳಸಿದರೆ ಜನಜನಕೀಕರಣ ಕ್ರಮಬದ್ಧವಾಗಿ ನಡೆಯುವುದಿಲ್ಲ. ಅತಿ ಗಟ್ಟಿಯಾದ ಕೊಬ್ಬು ಬೇಕಾಗಿದ್ದರೆ ಮಾತ್ರ ಹೀಗೆ ಮಾಡುವರು. ಜಲಜನಕೀಕರಣದ ಅನಂತರ, ಬಿಸಿ ಎಣ್ಣೆಯನ್ನು ಶೋಧಿಸಿ ನಿಕ್ಕಲ್ ವೇಗವರ್ಧಕವನ್ನು ಸಂಗ್ರಹಿಸುವರು. ಜಲಜನಕೀಕರಣ ಕಾಲದಲ್ಲಿ ಮತ್ತೊಂದು ಮುಖ್ಯ ಬದಲಾವಣೆ ನಡೆಯುವುದು.

ಅಪರ್ಯಾಪ್ತ ಆಮ್ಲದ ಭಾಗಗಳಲ್ಲಿರುವ ಪರಮಾಣುಗಳ ಸ್ಥಾನಪಲ್ಲಟವಾಗಿ ಐಸೊಓಲಿಯಿಕ್, ಐಸೋಲಿನೊಲಿಯಿಕ್ ಮತ್ತು ಐಸೊ ಲಿನೋಸಿಕ್ ಮುಂತಾದ ಆಮ್ಲಗಳು ರೂಪುಗೊಳ್ಳುವುವು.  ಮೂಲ ಆಮ್ಲಗಳಿಗಿಂತ ಇವುಗಳಿಗೆ ದ್ರವೀಕರಣ ಬಿಂದು ಹೆಚ್ಚು ಇರುವುದರಿಂದ ಹೆಪ್ಪುಗಟ್ಟುವ ಕ್ರಿಯೆಗೆ ಉತ್ತೇಜನ ದೊರೆತಂತಾಗುತ್ತದೆ. ಈ ಆಮ್ಲಗಳ ಉತ್ಪತ್ತಿಯನ್ನು ಅತಿ ರಕ್ತ (ಇನ್‌ಫ್ರಾರೆಡ್) ಕಿರಣಗಳ ಸಹಾಯದಿಂದ ಪತ್ತೆಹಚ್ಚಬಹುದು.

ಹತ್ತಿಬೀಜದ ಎಣ್ಣೆ ಪೂರ್ತಿಯಾಗಿ ಹೈಡ್ರೊಜನ್ನನ್ನು ಹೀರಿಕೊಳ್ಳುವಂತೆ ಮಾಡಿದರೆ ೬೨o ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುವ ಕೊಬ್ಬು ಲಭಿಸುತ್ತದೆ.  ಜಲಜನಕೀಕರಣದಿಂದ ಎಣ್ಣೆಯ ಭೌತ ಮತ್ತು ರಾಸಾಯನಿಕ ಲಕ್ಷಣಗಳೂ ಬದಲಾಯಿಸುವುವು.  ಅಂಥ ಎಣ್ಣೆಯನ್ನು ಬಹುಕಾಲ ಕೂಡಿಟ್ಟರೂ ಕೆಡುವುದಿಲ್ಲ.

ಎಣ್ಣೆಯನ್ನು ಅಪೂರ್ಣವಾಗಿ ಜಲಜನಕೀಕರಣ ಮಾಡಿದರೆ ವನಸ್ಪತಿ ತುಪ್ಪವಾಗುವುದು. ಲಭ್ಯ ವಸ್ತು, ನಮ್ಮ ಶರೀರದ ಉಷ್ಣತಾ ಮಟ್ಟವಾದ ೩೭o ಸೆಂ.ಗ್ರೇ. ನಲ್ಲಿ ಕರಗುವಂತಿರಬೇಕು. ಇದಕ್ಕಿಂತ ಮೀರಿದ ಉಷ್ಣತೆಯಲ್ಲಿ ಕರಗುವ ಕೊಬ್ಬುಗಳು, ನಮ್ಮ ದೇಹದಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಭಾರತದಲ್ಲಿ ಕಡಲೇಕಾಯಿ ಎಣ್ಣೆಯಿಂದ ವನಸ್ಪತಿ ತುಪ್ಪ ತಯಾರಿಸುವುದು ವಾಡಿಕೆ. ಪ್ರಕೃತಿದತ್ತ ಬೆಣ್ಣೆ ಅಥವಾ ತುಪ್ಪದಲ್ಲಿ A ಜೀವಾತು ಇರುವುದರಿಂದ ವನಸ್ಪತಿಗೂ ಅದನ್ನು ಸೇರಿಸುತ್ತಾರೆ.

ಅಯೊಡೀನ್ ಮೌಲ್ಯ[ಬದಲಾಯಿಸಿ]

ಗ್ಲಿಸರೈಡಿನಲ್ಲಿರುವ ಒಂದೊಂದು ದ್ವಿಬಂಧವೂ ತಲಾ ಎರಡು ಅಯೊಡೀನ್ ಪರಮಾಣುಗಳನ್ನು ಕೂಡಿಸಿಕೊಂಡು ಪರ್ಯಾಪ್ತಗೊಳ್ಳಬಲ್ಲದು. ಒಂದು ದ್ವಿಬಂಧವಿರುವ ಓಲಿಯಿಕಾಮ್ಲದ ಗ್ಲಿಸರೈಡಿಗಿಂತ ಎರಡು ದ್ವಿಬಂಧವಿರುವ ಲಿನೊಲಿಯಿಕಾಮ್ಲದ ಗ್ಲಿಸರೈಡು, ಎರಡು ಪಟ್ಟು ಅಯೊಡೀನ್ ಹೀರಿಕೊಳ್ಳುವುದು ಸಹಜವೇ. ೧೦೦ಗ್ರಾಂ ಕೊಬ್ಬು ಅಥವಾ ಎಣ್ಣೆ ಹೀರಿಕೊಳ್ಳುವ ಅಯೊಡೀನ್ (ಗ್ರಾಂನಲ್ಲಿ) ಅದರ ಅಯೊಡೀನ್ ಮೌಲ್ಯ. ಇದು ಕೊಬ್ಬು ಅಥವಾ ಎಣ್ಣೆಯ ಅಪರ್ಯಾಪ್ತತೆಯ ದ್ಯೋತಕವಾಗಿದೆ.[೩] ಟ್ರೈಸ್ಟಿಯರಿನ್ನಿನಂಥ ಪರ್ಯಾಪ್ತ ಗ್ಲಿಸರೈಡುಗಳು ಕೂಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವುಗಳ ಅಯೊಡೀನ್ ಮೌಲ್ಯ ಸೊನ್ನೆ.  ಶುದ್ಧ ಅಪರ್ಯಾಪ್ತ ಎಣ್ಣೆಯಾದ ಗ್ಲಿಸರೈಲ್ ಟ್ರೈ ಓಲಿಯೇಟಿನ ಅಯೊಡೀನ್ ಮೌಲ್ಯವನ್ನು ಮುಂದೆ ಕೊಡಲಾಗಿದೆ. ಇದರ ಅಯೊಡೀನ್ ಮೌಲ್ಯ ೮೬.೮೮.

ಅಯೊಡೀನ್ ಬದಲು ಅಯೊಡೀನ್ ಮಾನೊಕ್ಲೋರೈಡನ್ನು (ICl) ಉಪಯೋಗಿಸಿದರೆ ಪರ್ಯಾಪ್ತವಾಗುವಿಕೆ ಬೇಗ ನಡೆಯುವುದು.  ಈ ಕ್ರಿಯೆಯನ್ನು ಕೆಳಕಂಡ ಸಮೀಕರಣ ಸೂಚಿಸುತ್ತದೆ.

(-CH=CH-)+ICI→(-CHI-CHCI--)

ದ್ವಿಬಂಧದಲ್ಲಿ, ತಲಾ ಒಂದು ಅಯೊಡೀನ್ ಮತ್ತು ಕ್ಲೋರಿನ್ ಪರಮಾಣು ಸೇರುವುದು. ಅಯೊಡೈಡುಗಳಿಂದ ಒಂದು ಅಯೊಡೀನ್ ಪರಮಾಣುವನ್ನು ಪಲ್ಲಟಿಸಲು ಒಂದು ಕ್ಲೋರಿನಿನ ಪರಮಾಣು ಸಾಕು. ಆದ್ದರಿಂದ ಇಲ್ಲೂ ಅಯೊಡೀನ್ ಮೌಲ್ಯವನ್ನೇ ಗುಣಿಸಲಾಗುವುದು. ನಿರ್ದಿಷ್ಟ ತೂಕ ತೈಲವನ್ನು ಇಂಗಾಲದ ಟೆಟ್ರಕ್ಲೋರೈಡಿನಲ್ಲಿ ವಿಲೀನಗೊಳಿಸಿ ದ್ರಾವಣ ಮಾಡಿಕೊಳ್ಳಬೇಕು. ಹಾಗೆಯೇ ಅಯೊಡೀನ್ ಮಾನೊಕ್ಲೋರೈಡನ್ನು ಗ್ಲೇಷಿಯಲ್ ಅಸಿಟಕಾಮ್ಲದಲ್ಲಿ ವಿಲೀನ ಮಾಡುವರು. ಗೊತ್ತಾದ ಗಾತ್ರದ ಇದರ ದ್ರಾವಣವನ್ನು ಎಣ್ಣೆಯ ದ್ರಾವಣಕ್ಕೆ ಸೇರಿಸಿ ಕೆಲಕಾಲ ಬಿಡಬೇಕು. ಆಗ ಎಣ್ಣೆ ತನ್ನ ಶಕ್ತ್ಯನುಸಾರ ಅಯೊಡೀನ್ ಮಾನೋಕ್ಲೋರೈಡನ್ನು ಹೀರುವುದು.  ಹೆಚ್ಚುವರಿ ಅಯೊಡೀನ್ ದ್ರಾವಣದಲ್ಲಿ ಉಳಿದಿರುತ್ತದೆ.  ಇದಕ್ಕೆ ಪೊಟ್ಯಾಸಿಯಂ ಅಯೊಡೈಡಿನ ದ್ರಾವಣ ಹಾಕಿ ಶಿಷ್ಟ ಸೋಡಿಯಂ ಥಯೊಸಲ್ಫೇಟಿನೊಡನೆ ಪಿಷ್ಟ (ಸ್ಟಾರ್ಚ್) ಸೂಚಕದ ಸಹಾಯದಿಂದ ಅನುಮಾಪನ ಮಾಡಬಹುದು. ಇಲ್ಲಿ ನಡೆಯುತ್ತಿರುವ ರಾಸಾಯನಿಕ ಕ್ರಿಯೆಗಳು ಹೀಗಿವೆ.

ICl + KI → KCl + I2

2Na2S2O3 + I2 → Na2S4O6 + 2NaI

ಎಣ್ಣೆಗಳ ಗುಂಪುಗಳು[ಬದಲಾಯಿಸಿ]

ಅಯೊಡೀನ್ ಮೌಲ್ಯದ ಆಧಾರದ ಮೇಲೆ ಎಣ್ಣೆಯನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸುವರು.

ಒಣಗದ ಎಣ್ಣೆಗಳು: ಇವುಗಳ ಅಯೊಡೀನ್ ಮೌಲ್ಯ ೯೦ಕ್ಕಿಂತ ಕಡಿಮೆ. ಗಾಳಿಗೆ ಒಡ್ಡಿದಾಗ ಒಣಗುವುದಿಲ್ಲ. ಇವುಗಳಲ್ಲಿರುವ ಪ್ರಧಾನ ಅಂಶ ಒಲಿಯಿಕ್ ಆಮ್ಲ. ಆಲಿವ್, ಕೊಬ್ಬರಿ, ಕಡಲೆಕಾಯಿ ಮತ್ತು ಹರಳೆಣ್ಣೆಗಳು ಈ ಗುಂಪಿಗೆ ಸೇರಿದ ಎಣ್ಣೆಗಳು.

ಅರೆ ಒಣಗುವ ಎಣ್ಣೆಗಳು: ಇವು ಮುಖ್ಯವಾಗಿ  ಓಲಿಯಿಕ್ ಮತ್ತು ಲಿನೋಲಿಯಿಕ್ ಆಮ್ಲ ಭಾಗಗಳಿರುತ್ತವೆ. ಇವುಗಳ ಅಪರ್ಯಾಪ್ತತೆ ಹೆಚ್ಚಾಗಿದ್ದು ಅಯೊಡೀನ್ ಮೌಲ್ಯ ೯೦-೧೨೦ ಮಿತಿಯಲ್ಲಿರುತ್ತದೆ.  ಗಾಳಿಯ ಸಂಪರ್ಕದಲ್ಲಿ ಅವು ಒಣಗುವುದು ನಿಧಾನ. ಹತ್ತಿಬೀಜದ ಮತ್ತು ಎಳ್ಳೆಣ್ಣೆ ಈ ವರ್ಗದ ಪ್ರಮುಖ ಎಣ್ಣೆಗಳು.

ಒಣಗುವ ಎಣ್ಣೆಗಳು: ಇವುಗಳ ಅಯೊಡೀನ್ ಮೌಲ್ಯ ೧೨೦ಕ್ಕಿಂತ ಹೆಚ್ಚಾಗಿರುವುದು. ಇವುಗಳಲ್ಲಿ ಲಿನೊಲಿಯಿಕ್ ಮತ್ತು ಲಿನೊಲಿನಿಕ್ ಆಮ್ಲಗಳ ಪ್ರಮಾಣ ಅಧಿಕ. ಅಗಸೆ, ಗಸಗಸೆ ಮತ್ತು ಟಂಗ್ ಎಣ್ಣೆಗಳು ಇವುಗಳಲ್ಲಿ ಮುಖ್ಯವಾದವು. ತೆಳುವಾಗಿ ಲೇಪಿಸಿದಾಗ ಗಾಳಿಯ ಸಂಪರ್ಕದಲ್ಲಿ ಮೊದಲು ಅಂಟಾದರೂ ಕ್ರಮೇಣ ಶುಷ್ಕವಾದ ಸುಭದ್ರ ಪೊರೆಯ ರಚನೆಯುಂಟಾಗುವುದು. ಅಗಸೆ ಎಣ್ಣೆ ಪ್ರಧಾನವಾಗಿ ಪೆಯಿಂಟುಗಳಲ್ಲಿ ಬಳಕೆಯಾಗುತ್ತದೆ. ಇಂಥ ಎಣ್ಣೆಗಳನ್ನು ಒಳಗೊಂಡ ಪೆಯಿಂಟ್ ಮತ್ತು ವಾರ್ನಿಷುಗಳನ್ನು ಲೇಪಿಸುವುದು ಸುಲಭ. ಅಲ್ಲದೆ ಒಣಗಿದ ಮೇಲೆ ಬಲವಾದ ಸಾವಯವ ಪದರ ಏರ್ಪಡುವುದು. ಆ ಪದರದ ಮೂಲಕ ಬಣ್ಣ ಸಮನಾಗಿ ಹಂಚಿಹೋಗುವುದು. ಸೀಸ ಅಥವಾ ಮ್ಯಾಂಗನೀಸ್ ಲವಣಗಳು ಈ ಒಣಗುವ ಕ್ರಿಯೆಯನ್ನು ತ್ವರಿತಗೊಳಿಸುತ್ತವೆ. ಲೋಹದ ಆಕ್ಸೈಡ್ ಬೆರೆಸಿ ಕಾಯಿಸಿ ತಯಾರಿಸಿದ ಅಗಸೆ ಎಣ್ಣೆಗೆ ಕುದಿಸಿದ ಅಗಸೆ ಎಣ್ಣೆ ಎನ್ನುವರು. ಇದನ್ನೊಳಗೊಂಡ ಪೆಯಿಂಟ್ ಬಲು ಬೇಗ ಒಣಗುವುದು. ಉತ್ತಮ ಒಣಗುವ ಎಣ್ಣೆಯ ಮುಖ್ಯ ಲಕ್ಷಣಗಳೆಂದರೆ (i) ಎರಡು ಅಥವಾ ಮೂರು ದ್ವಿಬಂಧಗಳಿರುವ ಆಮ್ಲದ ಗ್ಲಿಸೆರೈಡುಗಳನ್ನು ಹೊಂದಿರುವುದು. (ii) ಆಮ್ಲದ ಇಂಗಾಲದ ಸರಣಿಯಲ್ಲಿ ಕ್ರಮವಾಗಿ ಎರಡು ದ್ವಿಬಂಧಗಳ ನಡುವೆ ಒಂದು ಏಕಬಂಧವಿರುವುದು. ಆಗ ಆ ಎಣ್ಣೆಗೆ ಆಕ್ಸಿಜನ್ ಹೀರುವ ಶಕ್ತಿ ಪ್ರಾಪ್ತಿಯಾಗಿ ಬೇಗನೆ ಒಣಗುತ್ತದೆ. ಕ್ರಮವರಿತ (ಕಾಂಜುಗೇಟೆಡ್) ದ್ವಿಬಂಧವಿರುವ ಟಂಗ್ ಎಣ್ಣೆ (ಅ. ಮೌ. ೧೬೦) ಅಗಸೆ ಎಣ್ಣೆಗಿಂತ (ಅ. ಮೌ. ೧೭೫) ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ. ಅಗಸೆ ಎಣ್ಣೆಯ ಉತ್ಪಾದನೆಯಲ್ಲಿ ಭಾರತ ತೃತೀಯ ಸ್ಥಾನ ಪಡೆದಿದೆ. ಮೇಣಗಪಟ (ಆಯಿಲ್ ಕ್ಲಾತ್), ರೆಕ್ಸಿನ್ ಮತ್ತು ಲಿನೋನಿಯಂ ತಯಾರಿಕೆಯಲ್ಲಿ ಈ ಎಣ್ಣೆಗಳ ಪಾತ್ರವಿದೆ. ಉದಾಹರಣೆಗೆ ಕಾರ್ಕನ್ನು ಪುಡಿಮಾಡಿ ಕುದಿಸಿದ ಅಗಸೆ ಎಣ್ಣೆಯೊಡನೆ ಬೆರೆಸಿ ಮಿಶ್ರಣವನ್ನು ಪದರಗಳಾಗಿ ಒತ್ತಿ ಒಣಗಿಸಿದರೆ ಲಿನೋಲಿಯಂ ಆಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Oldest Oil Paintings Found in Afghanistan", Rosella Lorenzi, Discovery News. Feb. 19, 2008. Archived June 3, 2011, ವೇಬ್ಯಾಕ್ ಮೆಷಿನ್ ನಲ್ಲಿ.
  2. Hudlický, Miloš (1996). Reductions in Organic Chemistry. Washington, D.C.: American Chemical Society. p. 429. ISBN 978-0-8412-3344-7.
  3. Thomas A (2002). "Fats and Fatty Oils". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a10_173. ISBN 3527306730.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಎಣ್ಣೆ&oldid=1201817" ಇಂದ ಪಡೆಯಲ್ಪಟ್ಟಿದೆ