ವಿಷಯಕ್ಕೆ ಹೋಗು

ದುಂದುಭಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುಂದುಭಿ ಪದಕ್ಕೆ ಅನೇಕ ಅರ್ಥಗಳಿವೆ.

1. ಅರವತ್ತು ಸಂವತ್ಸರಗಳಲ್ಲಿ ಒಂದಕ್ಕೆ ದುಂದುಭಿ ಎಂಬ ಹೆಸರಿದೆ.

2. ಒಬ್ಬ ಗಂಧರ್ವನ ಹೆಂಡತಿಯ ಹೆಸರು ದುಂದುಭಿ. ಬ್ರಹ್ಮನ ಶಾಪದಿಂದ ಈಕೆ ಕುಬ್ಜೆಯಾಗಿ ಮಂಥರೆ ಎಂಬ ಹೆಸರಿನಿಂದ ಜನಿಸಿ, ಕೇಕಯ ರಾಜ ಅಶ್ವಪತಿಯ ಬಳಿ ದಾಸಿಯಾಗಿದ್ದಳು. ದಶರಥ ಮಹರಾಜ ಕೈಕೆಯನ್ನು ಮದುವೆಯಾದಾಗ ಅಶ್ವಪತಿ ಕೈಕೆಗೆ ನೀಡಿದ ಬಳುವಳಿಗಳಲ್ಲಿ ಈಕೆಯೂ ಒಬ್ಬಳಾಗಿದ್ದಳು. ಹಾಗಾಗಿ ಕೈಕೆಯೊಂದಿಗೆ ಅಯೋಧ್ಯೆಯನ್ನು ಸೇರಿದಳು. ಶ್ರೀರಾಮನ ಯೌವರಾಜ್ಯಾಭಿಷೇಕಕ್ಕೆ ಭಂಗವನ್ನು ತಂದು ಅಪಕೀರ್ತಿಗೆ ಗುರಿಯಾದಳು.

3. ದುಂದುಭಿ ಒಬ್ಬ ರಾಕ್ಷಸ. ಮಾಯಾಸುರನಿಂದ ಹೇಮೆಯೆಂಬ ಅಪ್ಸರ ಸ್ತ್ರೀಯಲ್ಲಿ ಜನಿಸಿದವ. ರಾವಣನ ಹೆಂಡತಿ ಮಂಡೋದರಿ ಹಾಗೂ ಮಾಯಾವಿಯೆಂಬ ರಾಕ್ಷಸ ಈತನ ಒಡಹುಟ್ಟಿದವರು. ಈತ ಅನೇಕ ವರಗಳನ್ನು ಪಡೆದು, ಮದೋನ್ಮತ್ತನಾಗಿ ಸಮುದ್ರ ರಾಜನ ಬಳಿಗೆ ಹೋಗಿ ಆತನನ್ನು ಯುದ್ಧಕ್ಕೆ ಕರೆದ. ಆತ ` ಅಯ್ಯೊ ನಿನ್ನೊಡನೆ ಯುದ್ಧ ಮಾಡಲು ನಾನು ಅಸಮರ್ಥ. ನೀನು ಹಿಮವಂತನನ್ನು ಆಹ್ವಾನಿಸು.' ಎಂದು ಹೇಳಿ ಕಳುಹಿಸಿದ. ಅದರಂತೆ ಆ ರಾಕ್ಷಸ ಹಿಮವಂತನ ಬಳಿಗೆ ಹೋಗಿ ಆತನನ್ನು ಯುದ್ಧಕ್ಕೆ ಕರೆದ. ಅದಕ್ಕೆ ಹಿಮವಂತ `ನಾನು ನಿನ್ನೊಡನೆ ಯುದ್ಧ ಮಾಡಲು ಅಶಕ್ಯ, ನಾನು ಕೇವಲ ತಾಪಸೋತ್ತಮರಿಗೆ ಆಶ್ರಯದಾತನಾಗಿದ್ದೇನೆ, ಅಷ್ಟೆ. ನಿನ್ನೊಡನೆ ಯುದ್ಧ ಮಾಡಲು ಕಿಷ್ಕಿಂಧೆಯ ರಾಜ ವಾಲಿಯೊಬ್ಬನೇ ಸಮರ್ಥ ಎಂದ. ಇದರಿಂದ ದುಂದುಭಿಗೆ ತೃಪ್ತಿಯಾಗದೆ ಆತನನ್ನು ಹೀಯಾಳಿಸಿ, ಕೋಣನ ವೇಷವನ್ನು ತಳೆದು ಕಿಷ್ಕಿಂಧೆಗೆ ನುಗ್ಗಿ ವಾಲಿಯೊಡನೆ ಸೆಣಸಾಡಿದ. ವಾಲಿ ಈತನನ್ನು ಸಂಹರಿಸಿದ. ಈತನ ಮೃತ ದೇಹವನ್ನು ದೂರಕ್ಕೆ ಎಸೆಯಲು ಅದು ಹೋಗಿ ಮತಂಗ ಮುನಿಯ ಆಶ್ರಮದ ಬಳಿ ಬಿದ್ದು ಆಶ್ರಮವನ್ನು ಹೊಲಸು ಮಾಡಿತು. ಇದರಿಂದ ಕೋಪಗೊಂಡ ಮುನಿ ವಾಲಿಯನ್ನು ಶಪಿಸಿದ.

4. ಒಂದು ಚರ್ಮವಾದ್ಯಕ್ಕೆ ದುಂದುಭಿ ಎಂದು ಕರೆಯುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದುಂದುಭಿ&oldid=893238" ಇಂದ ಪಡೆಯಲ್ಪಟ್ಟಿದೆ