ಗಿಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಳಿ
ಕಡುಕೆಂಪು ಕೊಕ್ಕಿನ ಪ್ಯಾರಾಕೀಟ್
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಕೆಳವರ್ಗ:
ಗಣ:
Psittaciformes

ಗಿಳಿ ( ಸಿಟ್ಟಸಿಫೋರ್ಮ್ಸ್ ) ವರ್ಗಕ್ಕೆ ಸೇರಿದ ಒಂದು ಪಕ್ಷಿ. ಗಿಳಿಗಳಲ್ಲಿ ಸುಮಾರು ೩೫೦ ತಳಿಗಳಿವೆ. ಗಿಳಿಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲೂ ಕಾಣಬರುತ್ತವೆ. ಗಿಳಿಗಳನ್ನು ಮುಖ್ಯವಾಗಿ ಎರಡು ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಸಿಟ್ಟಿಸೀಡೇ ಅಥವಾ ನೈಜ ಗಿಳಿ ಮತ್ತು ಕಕಾಟುಯ್‌ಡೇ ಇವೇ ಆ ಎರಡು ಕುಟುಂಬಗಳು. ಸಂಪೂರ್ಣ ಉಷ್ಣವಲಯದ ಹೊರತಾಗಿ ದಕ್ಷಿಣ ಸಮಶೀತೋಷ್ಣವಲಯದಲ್ಲಿ ಸಹ ಗಿಳಿಗಳು ಕಂಡುಬರುತ್ತವೆ. ಅತ್ಯಂತ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕ ಮತ್ತು [[ಆಸ್ಟ್ರೇಲಿಯಾ ]]ಗಳಲ್ಲಿ ಜೀವಿಸಿವೆ.ಗಿಳಿಗಳ ಲಕ್ಷಣಗಳೆಂದರೆ - ಶಕ್ತಿಯುತ ಬಾಗಿದ ಕೊಕ್ಕು, ನೇರ ನಿಲುವು, ಬಲಶಾಲಿ ಕಾಲುಗಳು. ಹೆಚ್ಚಿನ ಗಿಳಿಗಳು ಹಸಿರು ಬಣ್ಣದ್ದಾಗಿರುತ್ತವೆ. ಕೆಲವು ತಳಿಗಳು ಬೇರೆ ಹೊಳೆಯುವ ಬಣ್ಣವುಳ್ಳವಾಗಿದ್ದರೆ ಇನ್ನು ಕೆಲವು ಮಿಶ್ರವರ್ಣದವು. ಕೊಕ್ಯಾಟೂ ತಳಿಗಳು ಪೂರ್ಣ ಬಿಳಿಯಿಂದ ಪೂರ್ಣ ಕಪ್ಪು ಬಣ್ಣದವರೆಗೆ ವಿಭಿನ್ನ ಛಾಯೆಯವಾಗಿದ್ದು ತಲೆಯ ಮೇಲೆ ಪುಕ್ಕಗಳ ಕಿರೀಟವನ್ನು ಸಹ ಹೊಂದಿರುತ್ತವೆ. ಹೆಚ್ಚಿನ ಗಿಳಿಗಳು ಜೀವನಪರ್ಯಂತ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಅತಿ ಸಣ್ಣ ಗಿಳಿಯು ೩.೨ ಅಂಗುಲ ಉದ್ದ ಮತ್ತು ೧೦ ಗ್ರಾಂ ತೂಕವುಳ್ಳದ್ದಾಗಿದ್ದರೆ ಅತಿ ದೊಡ್ಡ ಗಿಳಿಯು ೩.೩ ಅಡಿ ಉದ್ದ ಮತ್ತು ೪ ಕಿಲೋಗ್ರಾಂ ತೂಕ ಹೊಂದಿರುತ್ತದೆ. ಹೀಗೆ ಪಕ್ಷಿಸಂಕುಲದಲ್ಲಿಯೇ ಅತಿ ಹೆಚ್ಚಿನ ದೇಹಪ್ರಮಾಣದ ವೈವಿಧ್ಯ ಗಿಳಿಗಳಲ್ಲಿ ಕಂಡುಬರುವುದು. ಗಿಳಿಗಳ ಆಹಾರವಸ್ತುಗಳು ಮುಖ್ಯವಾಗಿ ಬೀಜಗಳು, ಕಾಳು, ಹಣ್ಣು, ಮೊಗ್ಗು ಮತ್ತಿತರ ಸಸ್ಯಜನ್ಯವಸ್ತುಗಳು. ಕೆಲ ತಳಿಯ ಗಿಳಿಗಳು ಕೀಟ ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ. ಲೋರೀಸ್ ಮತ್ತು ಲೋರಿಕೀಟ್‌ಗಳು ಮಕರಂದವನ್ನು ಹೀರುವಲ್ಲಿ ನೈಪುಣ್ಯವನ್ನು ಹೊಂದಿವೆ. ಬಹುತೇಕ ಗಿಳಿಗಳು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಗಿಳಿಯ ಬಿಳಿ ಮೊಟ್ಟೆಯಿಂದ ಹೊರಬರುವ ಮರಿಯು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುತ್ತದೆ.  ಗಿಳಿಯು ತೀಕ್ಷ್ಣಮತಿ ಪಕ್ಷಿಗಳ ಗುಂಪಿಗೆ ಸೇರಿದೆ. ಕೆಲವು ತಳಿಯ ಗಿಳಿಗಳು ಮಾನವನ ಧ್ವನಿಯನ್ನು ಬಲುಮಟ್ಟಿಗೆ ಅನುಕರಿಸುತ್ತವೆ. ಹೀಗಾಗಿ ಇವು ಮಾನವನಿಗೆ ಅತಿ ಮುದ್ದಿನ ಸಾಕುಪಕ್ಷಿಯಾಗಿ ಹೆಸರಾಗಿವೆ. ಪಳಗಿಸಲೋಸುಗ ಹಿಡಿಯುವಿಕೆ, ಬೇಟೆಯಾಡುವಿಕೆ ಮತ್ತು ಇತರ ಪಕ್ಷಿಕುಲಗಳಿಂದ ದಾಳಿ ಇವೇ ಮುಂತಾದ ಕಾರಣಗಳಿಂದ ಇಂದು ಕಾಡಿನ ಗಿಳಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇವನ್ನು ಉಳಿಸಿಕೊಳ್ಳುವಲ್ಲಿ ವಿಶ್ವದ ಹಲವೆಡೆ ಗಂಭೀರ ಯತ್ನಗಳು ಸಾಗಿವೆ.

ಮೂಲ, ವಿಕಾಸ ಮತ್ತು ತಳಿಗಳು[ಬದಲಾಯಿಸಿ]

ಕಾಲಿನಿಂದ ಬೀಜವನ್ನು ಒತ್ತಿಹಿಡಿದು ಕೊಕ್ಕಿನಿಂದ ಅದನ್ನು ಒಡೆಯುತ್ತಿರುವ ಸ್ಕಾರ್ಲೆಟ್ ಮಕಾವ್
ಹಳದಿ ತಲೆಯ ಗಿಳಿಯ ಗರಿಗಳು

ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲೇಷ್ಯಾಗಳಲ್ಲಿ ಕಾಣಬರುವ ಗಿಳಿಗಳ ವೈವಿಧ್ಯದಿಂದ ಇವುಗಳು ಮೂಲತಃ ಗೊಂಡ್ವಾನಾಗೆ ಸೇರಿರಬಹುದೆಂದು ತಿಳಿಯಲಾಗಿದೆ. ಸುಮಾರು ೭ ಕೋಟಿ ವರ್ಷಗಳಷ್ಟು ಹಳೆಯದಾದ ಗಿಳಿಯ ಪಳೆಯುಳಿಕೆಯೊಂದು ಈವರೆಗೆ ದೊರೆತಿರುವ ಅತಿ ಪ್ರಾಚೀನ ಮಾದರಿ. ಕೊಕ್ಯಾಟೂ ತಳಿಯ ಗಿಳಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು ತಲೆಯ ಮೇಲೆ ಪುಕ್ಕಗಳ ಗುಚ್ಛವನ್ನು ಹೊಂದಿರುತ್ತವೆ. ಇತರ ಜಾತಿಯ ಗಿಳಿಗಳಿಗಿಂತ ಇವುಗಳ ರಕ್ತನಾಳಗಳ ರಚನೆ, ತಲೆಬುರುಡೆ ಬೇರೆ ರೀತಿಯವಾಗಿವೆ. ಅಲ್ಲದೆ ಇವುಗಳ ಗರಿಗಳ ರೂಪುರೇಷೆಗಳು ಭಿನ್ನವಾಗಿದ್ದು ಬೆಳಕನ್ನು ಚದುರಿಸುವಲ್ಲಿ ಅಸಮರ್ಥವಾಗಿವೆ. ಈ ಕಾರಣದಿಂದಾಗಿ ಕೊಕ್ಯಾಟೂ ಗಿಳಿಗಳು ಸಿಟ್ಟಸೀಡೇ ಗಿಳಿಗಳಂತೆ ಹೊಳೆಯುವ ವಿಭಿನ್ನ ಆಕರ್ಷಕ ಬಣ್ಣವನ್ನು ಹೊಂದಿರುವುದಿಲ್ಲ. ಅಮೆಜಾನ್ ಗಿಳಿ, ಮಕಾವ್, ದೊಡ್ಡ ಕೊಕ್ಯಾಟೂ ಇಂತಹ ಗಿಳಿಗಳ ಜೀವಿತಾವಧಿ ೮೦ ವರ್ಷಗಳವರೆಗೆ ಇರುತ್ತದೆ. ನೂರು ವರ್ಷ ಬಾಳಿದ ಗಿಳಿಗಳ ಬಗ್ಗೆ ದಾಖಲೆಗಳು ಲಭ್ಯ. ಸಣ್ಣ ಜಾತಿಯ ಗಿಳಿಗಳು ಸಾಮಾನ್ಯವಾಗಿ ೧೫ ರಿಂದ ೨೦ ವರ್ಷಗಳವರೆಗೆ ಬಾಳುತ್ತವೆ.

ವ್ಯಾಪ್ತಿ ಮತ್ತು ವಿತರಣೆ[ಬದಲಾಯಿಸಿ]

ಈ ಮೊದಲೇ ತಿಳಿಸಿದಂತೆ ಗಿಳಿಗಳು ಜಗತ್ತಿನ ಉಷ್ಣವಲಯದಾದ್ಯಂತ ಹಾಗೂ ದಕ್ಷಿಣ ಸಮಶೀತೋಷ್ಣ ವಲಯದಲ್ಲಿ ಕಾಣಬರುತ್ತವೆ. ಮುಖ್ಯವಾಗಿ ಆಸ್ಟ್ರೇಲೇಷ್ಯಾ, ಭಾರತ, ಶಾಂತಸಾಗರದ ದ್ವೀಪಗಳು, ಆಗ್ನೇಯ ಏಷ್ಯಾ, ಉತ್ತರ ಅಮೆರಿಕದ ದಕ್ಷಿಣ ಭಾಗಗಳು, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾಗಳಲ್ಲಿ ಹೆಚ್ಚಾಗಿ ಗಿಳಿಗಳು ಜೀವಿಸಿವೆ. ಈ ಪೈಕಿ ಆಸ್ಟ್ರೇಲೇಷ್ಯಾ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ತಳಿಗಳು ಕಾಣಬರುತ್ತವೆ. ಲೋರಿ ಮತ್ತು ಲೋರಿಕೀಟ್‌ಗಳು ಹೆಚ್ಚಾಗಿ ಉತ್ತರದಲ್ಲಿ ಸುಲವೇಸಿ ಮತ್ತು ಫಿಲಿಪ್ಪೀನ್ಸ್ ಇಂದ ಉತ್ತರ ಆಸ್ಟ್ರೇಲಿಯಾವರೆಗೆ ಮತ್ತು ಶಾಂತಸಾಗರದ ಎಲ್ಲ ದ್ವೀಪಗಳಲ್ಲಿ ವಾಸಿಸುತ್ತವೆ. ಇವುಗಳ ಪೈಕಿ ಅತಿ ಹೆಚ್ಚಿನ ವೈವಿಧ್ಯ ನ್ಯೂ ಗಿನಿಯಲ್ಲಿ ಕಾಣುವುದು. ಅರೀನೇ ಎಂಬ ಉಪಜಾತಿಯ ಗಿಳಿಗಳು ಅಮೆಜಾನ್ ಗಿಳಿಗಳು, ಮಕಾವ್ ಮತ್ತು ಕೊನ್ಯೂರ್ ತಳಿಗಳನ್ನು ಒಳಗೊಂಡಿದ್ದು ಮೆಕ್ಸಿಕೋದಿಂದ ತೊಡಗಿ ದಕ್ಷಿಣ ಅಮೆರಿಕದ ಎಲ್ಲ ಭಾಗಗಳಲ್ಲಿ ಕಂಡುಬರುವುವು. ಪಿಗ್ಮಿ ಗಿಳಿ ಎಂದು ಹೆಸರಾಗಿರುವ ಅತಿ ಪುಟ್ಟ ಗಾತ್ರದ ಗಿಳಿಗಳು ನ್ಯೂ ಗಿನಿಯಲ್ಲಿ ಮಾತ್ರ ಜೀವಿಸಿವೆ. ಅಗಲ ಪುಚ್ಛವುಳ್ಳ ಪ್ಲಾಟಿಸೆರ್ಸಿನೇ ಉಪಕುಟುಂಬಕ್ಕೆ ಸೇರಿದ್ದು ಅವು ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್ ಮತ್ತು ಸುತ್ತಲಿನ ದ್ವೀಪಗಳಲ್ಲಿ ಕಾಣುತ್ತವೆ. ಕೆಲ ಜಾತಿಯ ಗಿಳಿಗಳು ಒಂದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಯಾದರೆ ಇನ್ನು ಕೆಲವು ತಳಿಗಳು ವಲಸೆಗಾರ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಹೆಚ್ಚಿನ ತಳಿಗಳ ಗಿಳಿಗಳು ಆಗಾಗ ವಲಸೆಹೋಗುವ

ಶರೀರದ ರಚನೆ[ಬದಲಾಯಿಸಿ]

ರೈನ್‌ಬೋ ಲೋರಿಕೀಟ್

ಗಿಳಿಗಳ ಅತಿ ಪ್ರಮುಖ ಶಾರೀರಿಕ ಲಕ್ಷಣವೆಂದರೆ ಕೊಕ್ಕು. ಗಿಳಿಯ ಕೊಕ್ಕು ಬಲಯುತವಾಗಿದ್ದು ಅಗಲವಾಗಿ ಹಾಗು ಬಾಗಿರುತ್ತದೆ. ಮೇಲ್ಕೊಕ್ಕು ದೊಡ್ಡದಾಗಿದ್ದು ಕೆಳಮುಖವಾಗಿ ಬಾಗಿ ತುದಿಯಲ್ಲಿ ಒಂದು ಮೊನಚಾದ ಬಿಂದುವಿನಂತಿದೆ. ಇದು ತಲೆಬುರುಡೆಗೆ ಅಂಟಿಲ್ಲವಾದ್ದರಿಂದ ಸ್ವತಂತ್ರವಾಗಿ ಚಲಿಸಬಲ್ಲುದಾಗಿದೆ ಮತ್ತು ಗಿಳಿಯ ಅಗಾಧವಾದ ಕಚ್ಚುವ (ಕಡಿಯುವ) ಬಲಕ್ಕೆ ಮೂಲವಾಗಿದೆ. ಕೆಳಕೊಕ್ಕು ಚಿಕ್ಕದಾಗಿದ್ದು ಮೊನಚಾದ ಮತ್ತು ಮೇಲ್ಮುಖವಾದ ಅಂಚನ್ನು ಹೊಂದಿದೆ. ಬೀಜ ತಿನ್ನುವ ಗಿಳಿಗಳು ಶಕ್ತಿಯುತ ನಾಲಿಗೆಯನ್ನು ಹೊಂದಿವೆ. ಗಿಳಿಯ ತಲೆಯು ಗಾತ್ರದಲ್ಲಿ ದೊಡ್ಡದಾಗಿದ್ದು ಕಣ್ಣೂಗಳು ಪಾರ್ಶ್ವದಲ್ಲಿವೆ. ಇದರಿಂದಾಗಿ ನೇರನೋಟವು ಸೀಮಿತವಾಗಿದ್ದರೂ, ಸುತ್ತಲಿನ ನೋಟವು ಹೆಚ್ಚು ಚುರುಕಾಗಿರುವುದು. ಕಕ ಗಿಳಿಗಳು ತಲೆಯ ಮೇಲೆ ಪುಕ್ಕಗಳ ಗುಚ್ಛವನ್ನು ಹೊಂದಿದ್ದು ಈ ಗುಚ್ಛವನ್ನು ಗಿಳಿಗಳು ಅರಳಿಸಿ ಪ್ರದರ್ಶಿಸುವುದಿದೆ.

ಆಹಾರ[ಬದಲಾಯಿಸಿ]

ಕಪ್ಪು ಕೊಕ್ಯಾಟೂ

ಬೀಜಗಳು, ಹಣ್ಣೂ, ಮಕರಂದ, ಮೊಗ್ಗು ಇವು ಗಿಳಿಗಳ ಮುಖ್ಯ ಆಹಾರವಾಗಿವೆ. ಕೆಲ ಜಾತಿಯವು ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ. ಆದರೆ ಸಾಮಾನ್ಯವಾಗಿ ಬೀಜಗಳು ಗಿಳಿಗೆ ಅತಿ ಮುಖ್ಯ ಆಹಾರವಸ್ತು. ಬೀಜವನ್ನು ತಮ್ಮ ಕೊಕ್ಕಿನಿಂದ ಕಡಿಉ ಒಡೆದು ಒಳಗಿರುವ ತಿರುಳನ್ನು ಗಿಳಿಯು ಬಲು ಸರಾಗವಾಗಿ ಹೊರತೆಗೆಯಬಲ್ಲುದು. ದೊಡ್ಡ ಗಾತ್ರದ ಬೀಜವಾಗಿದ್ದರೆ ಗಿಳಿಯು ಅದನ್ನು ತನ್ನ ಕಾಲಿನಡಿಯಲ್ಲಿ ಬಿಗಿಯಾಗಿ ಹಿಡಿದಿಟ್ಟು ಕೊಖ್ಖಿನಿಂದ ಒಡೆಯುತ್ತದೆ. ವಿಷಕಾರಿ ಬೀಜಗಳ ಅರಿವಿರುವ ಗಿಳಿಗಳು ಅಂತಹ ಬೀಜಗಳ ಹೊರ ಪರೆಯನ್ನು ಕಳಚಿ ಎಸೆದು ಉಳಿದ ವಿಷರಹಿತ ಭಾಗವನ್ನು ಮಾತ್ರ ತಿನ್ನುತ್ತವೆ. ಲೋರೀ ಮತ್ತು ಲೋರಿಕೀಟ್‌ಗಳು ಮಕರಂದ ಮತ್ತು ಪರಾಗರೇಣುವನ್ನು ಸೇವಿಸುವ ಗಿಳಿಗಳು. ಇವುಗಳ ನಾಲಗೆ ತುದಿಯು ಬ್ರಷ್‌ನಂತಿರುತ್ತದೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಗಿಳಿಯು ಒಂದೇ ಸಂಗಾತಿಯೊಂದಿಗೆ ಜೀವನ ಸವೆಸುತ್ತದೆ. ಸಂಗಾತಿಗಳ ನಡುವಿನ ಬಾಂಧವ್ಯ ಗಾಢವಾಗಿದ್ದು ಎಲ್ಲಾ ಕಾಲಗಳಲ್ಲಿ ಜೋಡಿಯಾಗಿಯೇ ಇರುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಗಿಳಿಯ ಮೊಟ್ಟೆಯು ಬಿಳಿಬಣ್ಣದ್ದು. ಹೆಚ್ಚಿನ ತಳಿಗಳಲ್ಲಿ ಹೆಣ್ಣು ಗಿಳಿಯು ಮೊಟ್ಟೆಗೆ ಕಾವುಕೊಡುವ ಕೆಲಸ ನಿರ್ವಹಿಸುತ್ತದೆ. ಈ ಸಮಯದಲ್ಲಿ ಹೆಣ್ಣು ಗೂಡಿನಿಂದ ಹೊರಗೆ ಹೋಗುವುದಿಲ್ಲ. ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು. ಜಾತಿಗನುಗುಣವಾಗಿ ೧೭ರಿಂದ ೩೫ ದಿನಗಳ ನಂತರ ಮೊಟ್ಟೆಯೊಡೆದು ಮರಿಗಳು ಹೊರಬೀಳುತ್ತವೆ. ನವಜಾತ ಮರಿಗಳು ಗರಿಗಳಿಲ್ಲದೆ ಬೋಳು ಮೈಯನ್ನು ಹೊಂದಿರುತ್ತವೆ. ಮರಿಗಳು ೩ ವಾರಗಳಿಂದ ೪ ತಿಂಗಳುಗಳವರೆಗೆ ಗೂಡಿನಲ್ಲಿಯೇ ಉಳಿಯುತ್ತವೆ.  ಮಕಾವ್ ಮತ್ತು ಇತರ ದೊಡ್ಡ ಗಿಳಿಗಳ ಸಂತಾನೋತ್ಪತ್ತಿಯ ಸಾಮರ್ಥ್ಯ ಕಡಿಮೆ. ಇವುಗಳು ಪ್ರೌಢಾವಸ್ಥೆಯನ್ನು ತಲುಪಲು ಅನೇಕ ವರ್ಷಗಳ ಸಮಯ ಹಿಡಿಯುತ್ತದೆ. ನಂತರ ವರ್ಷಕ್ಕೆ ಒಂದು ಯಾ ಅತಿ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಸಂತಾನವನ್ನು ಹೊರತರುತ್ತವೆ.

ಬುದ್ಧಿಮತ್ತೆ ಮತ್ತು ಕಲಿಯುವಿಕೆ[ಬದಲಾಯಿಸಿ]

ಆಹಾರದೊಡನೆ ದೇಹ ಸೇರಿದ ವಿಷಕಾರಿ ವಸ್ತುಗಳನ್ನು ನಿಷ್ಕ್ರಿಯಗೊಳಿಸಲು ಮಣ್ಣನ್ನು ತಿನ್ನುತ್ತಿರುವ ಗಿಳಿಗಳು

ಬಂಧನದಲ್ಲಿ ಇರಿಸಿದ ಕೆಲ ಗಿಳಿಗಳ ಮೇಲೆ ನಡೆಸಲಾದ ಅಧ್ಯಯನಗಳು ಹಲವು ಕೌತುಕಕಾರಿ ಸಂಗತಿಗಳನ್ನು ಹೊರಗೆಡವಿವೆ. ಸರ್ವೇಸಾಮಾನ್ಯವಾಗಿ ಗಿಳಿಯು ಮಾನವಧ್ವನಿಯನ್ನು ಅನುಕರಿಸಬಲ್ಲುದು. ಕೆಲ ಗಿಳಿಗಳು ಪದವನ್ನು ಅದರ ಅರ್ಥದೊಂದಿಗೆ ಜೋಡಿಸಬಲ್ಲ ಸಾಮರ್ಥ್ಯ ಹೊಂದಿದ್ದು ಸಣ್ಣ ಹಾಗೂ ಸರಳ ವಾಕ್ಯಗಳನ್ನು ನುಡಿಯಬಲ್ಲವು. ಕಾಗೆ, ರಾವೆನ್ ಮತ್ತು ಜೇ ಹಕ್ಕಿಗಳೊಂದಿಗೆ ಗಿಳಿಯು ಸಹ ಅತಿ ಬುದ್ಧಿಶಾಲಿ ಪಕ್ಷಿಯೆಂದು ಹೆಸರಾಗಿದೆ. ಇತರ ಹಕ್ಕಿಗಳಿಗೆ ಹೋಲಿಸಿದಾಗ ಗಿಳಿಯ ದೇಹ ಮತ್ತು ಮೆದುಳಿನ ಅನುಪಾತ ಗಮನಾರ್ಹವಾಗಿ ಹೆಚ್ಚಾಗಿದ್ದು ಕೆಲ ಮೇಲ್ಸ್ತರದ ಪ್ರಾಣಿಗಳ ಸಾಲಿನಲ್ಲಿ ನಿಲ್ಲುತ್ತದೆ.ಗಿಳಿಗಳು ಶೈಶವಾವಸ್ಥೆಯಿಂದಲೇ ಸಾಮಾಜಿಕ ನಡವಳಿಕೆಯನ್ನು ಕಲಿಯುತ್ತವೆ. ಅನೇಕ ತಳಿಗಳಲ್ಲಿ ಎಲ್ಲಾ ಮರಿಗಳನ್ನು ಒಂದೇ ಕಡೆ ಸೇರಿಸಿ ಬಾಲವಾಡಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಯು ಮರಿಗಳಿಗೆ ಸಾಮಾಜಿಕ ನಡವಳಿಕೆಗಳಲ್ಲಿ ಸಾಕಷ್ಟು ಅನುಭವ ನೀಡುತ್ತದೆ. ಆಹಾರಸೇವನೆಯ ರೀತಿನೀತಿಗಳನ್ನು ಮರಿಗಳು ತಂದೆತಾಯಿಯರಿಂದ ಕಲಿಯುತ್ತವೆ. ಈ ವಿದ್ಯಾಭ್ಯಾಸ ಬಲು ದೀರ್ಘಕಾಲದ್ದಾಗಿರುತ್ತದೆ. ಮಾನವಶಿಶುಗಳಂತೆಯೇ ಗಿಳಿಮರಿಗಳಲ್ಲಿ ಕೂಡ ಆಟವಾಡುವುದು ಕಲಿಯುವಿಕೆಯ ಬಲು ಮುಖ್ಯ ಅಂಗವಾಗಿದೆ. 

ಶಬ್ದದ ಅನುಕರಣೆ ಮತ್ತು ಮಾತು[ಬದಲಾಯಿಸಿ]

ಸನ್ ಕೊನ್ಯೂರ್ ತನ್ನ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಿದೆ

ಗಿಳಿಗಳಲ್ಲಿ ಧ್ವನಿಪೆಟ್ಟಿಗೆ ಇರುವುದಿಲ್ಲ. ಹೀಗಾಗಿ ಗಿಳಿಯು ಹೊರಡಿಸುವ ಧ್ವನಿಯು ವಾಸ್ತವದಲ್ಲಿ ಶಿಳ್ಳೆಯಾಗಿದೆ. ಅನೇಕ ತಳಿಗಳ ಗಿಳಿಗಳು ಮಾನವಧ್ವನಿ ಯಾ ಇತರ ಶಬ್ದಗಳನ್ನು ಯಥಾವತ್ತಾಗಿ ಅನುಕರಿಸಬಲ್ಲವು. ಕೆಲ ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನು ಸಹ ಹೊಂದಿವೆ. ಸರಳ ವಾಕ್ಯಗಳನ್ನು ರಚಿಸಬಲ್ಲ ಕೆಲ ಗಿಳಿಗಳು ಒಂದು ಸಾವಿರ ಪದಗಳ ಶಬ್ದಭಾಂಡಾರವನ್ನು ಸಹ ಇರಿಸಿಕೊಳ್ಳಬಲ್ಲವು. ಈ ವಿಶಿಷ್ಟ ಸಾಮರ್ಥ್ಯವು ಗಿಳಿಗಳನ್ನು ಮಾನವನ ಅತಿ ಮುದ್ದಿನ ಮತ್ತು ಪ್ರಿಯವಾದ ಸಾಕುಪ್ರಾಣಿ(ಪಕ್ಷಿ)ಯನ್ನಾಗಿಸಿದೆ. ಗಮನಿಸಬೇಕಾದ ಅಂಶವೆಂದರೆ ಗಿಳಿಗೆ ಮಾತು ಕಲಿಸುವುದು ಒಂದು ದೀರ್ಘಕಾಲದ ಶ್ರಮದಾಯಕ ಕೆಲಸ ಹಾಗೂ ಎಲ್ಲಾ ಗಿಳಿಗಳು ಮಾತನಾಡುವಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲಾರವು.

ಕೇಸರಿ ಗರಿಗಳ ಅಮೆಜಾನ್ ಗಿಳಿ ಮಾತನಾಡುತ್ತಿದೆ (ವಿಡಿಯೋ ನೋಡಿರಿ)

ಮಾನವನೊಂದಿಗೆ ಸಂಬಂಧ[ಬದಲಾಯಿಸಿ]

ಕ್ಯೂಬಾದ ಅಮೆಜಾನ್ ಗಿಳಿಗಳು ಪಂಜರದಲ್ಲಿ

ಗಿಳಿಗಳ ಮತ್ತು ಮಾನವನ ನಡುವಿನ ಸಂಬಂಧ ಸಂಕೀರ್ಣವಾದುದು. ಒಂದೆಡೆ ಸಾಕುಪಕ್ಷಿಗಳ ಮಾರಾಟದ ದಂಧೆ ಮತ್ತು ಪ್ರವಾಸಿ ಆಕರ್ಷಣೆಯಾಗಿ ಗಿಳಿಯು ಮಾನವನಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದರೆ, ಇನ್ನೊಂದೆಡೆ ಕೆಲ ತಳಿಯ ಗಿಳಿಗಳು ಕೃಷಿಕನಿಗೆ ಪೀಡೆಯಾಗಿವೆ. ಆಸ್ಟ್ರೇಲಿಯಾದ ಕೊಕ್ಯಾಟೂ ಗಿಳಿಗಳು ಅಲ್ಲಿನ ರೈತರಿಗೆ ಬಲು ದೊಡ್ಡ ಪಿಡುಗಾಗಿವೆ. ಆದರೂ ಸಹ ತನ್ನ ಆಕರ್ಷಕ ಬಣ್ಣಗಳು, ಬುದ್ಧಿಮತ್ತೆ, ಮಾತನಾಡುವ ಸಾಮರ್ಥ್ಯ ಹಾಗೂ ಚಿನ್ನಾಟವಾಡುವ ಸರಸ ಸ್ವಭಾವದಿಂದಾಗಿ ಗಿಳಿಯು ಮಾನವನಿಗೆ ಸದಾ ಪ್ರಿಯವಾದ ಮುದ್ದಿನ ಜೀವಿ.

ಸಣ್ಣ ಬಟ್ಟಲಿನಿಂದ ಮಕರಂದವನ್ನು ಹೀರುತ್ತಿರುವ ಲೋರಿ
"https://kn.wikipedia.org/w/index.php?title=ಗಿಳಿ&oldid=948070" ಇಂದ ಪಡೆಯಲ್ಪಟ್ಟಿದೆ