ಕೊಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಕ್ಕುಗಳ ಹೋಲಿಕೆ

ಕೊಕ್ಕು ಹಕ್ಕಿಗಳಲ್ಲಿ ಕಾಣಬರುವ ವಿಶೇಷ ರೀತಿಯ ಒಂದು ಅಂಗ. ಇದು ಹಕ್ಕಿಗಳಿಗೆ ಅತ್ಯಂತ ಉಪಯುಕ್ತ ರಚನೆ. ಇದರ ಉಪಯೋಗಗಳೂ ವೈವಿಧ್ಯಮಯ: ಆಹಾರವನ್ನು ಹಿಡಿಯುವಲ್ಲಿ ಮತ್ತು ಗೂಡು ಕಟ್ಟುವ ಕಾರ್ಯದಲ್ಲಿ ಇದು ಕೈಯಂತೆಯೂ ಆಹಾರ ಸೇವನೆಯಲ್ಲಿ ಬಾಯಿಯಂತೆಯೂ ಮರಿಗಳಿಗೆ ಗುಟುಕು ಕೊಡುವ ಕಾರ್ಯದಲ್ಲಿ ಚಮಚದಂತೆಯೂ ಶತ್ರುಗಳನ್ನು ಎದುರಿಸುವುದರಲ್ಲಿ ಆಯುಧದಂತೆಯೂ ಕೆಲಸಕ್ಕೆ ಬರುತ್ತದೆ.

ಹಕ್ಕಿಯ ಮೇಲ್ದವಡೆ ಮತ್ತು ಕೆಳದವಡೆಗಳ ಮುಂಭಾಗದ ಎಲುಬುಗಳು ನೀಳವಾಗಿ ಚಾಚಿಕೊಂಡು ಕೊಂಬಿನಿಂದ ಕೂಡಿದ ಒರೆಯಿಂದ ಆವೃತವಾಗಿರುವ ರಚನೆಯೇ ಕೊಕ್ಕು. ಕೊಂಬಿನ ಭಾಗಕ್ಕೆ ಚುಂಚು (ಬಿಲ್) ಎಂದು ಹೆಸರು. ಇದು ವಾಸ್ತವವಾಗಿ ಚರ್ಮದ ಎಪಿಡರ್ಮಿಸ್ ಭಾಗ. ಇದರಲ್ಲಿ ಸ್ಟ್ರಾಟಮ್ ಕಾರ್ಸಿಯಮ್ ಎಂಬ ಹೊರಪದರವನ್ನೂ ಕೆರಟೊಹೈಯಲಿನ್ ಕಣಗಳಿಂದ ರಚಿತವಾದ ಸ್ಟ್ರಾಟಮ್ ಗ್ರಾನ್ಯುಲೋಸಮ್ ಎಂಬ ಮಧ್ಯ ಪದರವನ್ನೂ ಸ್ಟ್ರಾಟಮ್ ಜರ್ಮಿನೇಟಿಮ್ ಎಂಬ ಒಳಪದರವನ್ನೂ ಗುರುತಿಸಬಹುದು. ಮೊಟ್ಟೆಯಿಂದ ಹೊರಬರುವ ಮರಿಹಕ್ಕಿಗಳ ಕೊಕ್ಕುಗಳಲ್ಲಿ ಮೇಲೆ ಹೇಳಿದ ಮೂರು ಪದರಗಳು ಮಾತ್ರ ಇದ್ದು ಕೊಕ್ಕು ಮೃದುವಾಗಿರುತ್ತದೆ. ಮರಿಗಳು ಬೆಳೆದು ದೊಡ್ಡವಾದಂತೆಲ್ಲ ಈ ಪದರಗಳಿಂದ ಕೆರಾಟಿನ್ ಎಂಬ ವಸ್ತು ಉತ್ಪತ್ತಿಯಾಗಿ ಉದ್ದಕ್ಕೆ ಚಾಚಿದಂತಾಗಿ ಸಹಜವಾದ ಕೊಕ್ಕು ರೂಪುಗೊಳ್ಳುತ್ತದೆ. ಕೆಲವು ಬಗೆಯ ಹಕ್ಕಿಗಳಲ್ಲಿ ಕೊಕ್ಕಿನ ಮೇಲ್ಭಾಗದ ಬುಡದಲ್ಲಿ ಚರ್ಮ ದಪ್ಪವಾಗಿದ್ದು ಸಿರೆ ಎಂಬ ವಿಶಿಷ್ಟವಾದ ಅಂಗವೊಂದು ರೂಪುಗೊಂಡಿರುತ್ತದೆ. ಹಕ್ಕಿಗಳ ಮೂಗಿನ ಹೊಳ್ಳೆಗಳು ಇದರಲ್ಲಿ ಅಡಕವಾಗಿರುತ್ತವೆ. ನ್ಯೂಜ಼ೀಲೆಂಡ್ ನಿವಾಸಿಗಳಾದ ಕೀವೀ ಹಕ್ಕಿಗಳಲ್ಲಿ ಮಾತ್ರ ಮೂಗಿನ ಹೊಳ್ಳೆಗಳು ಸಿರೆಯಿಂದ ಆಚೆ ಬಂದು ಕೊಕ್ಕಿನ ತುದಿಯಲ್ಲಿ ಸ್ಥಿತವಾಗಿರುತ್ತವೆ. ಸಾಮಾನ್ಯವಾಗಿ ಕೊಕ್ಕನ್ನು ಆವರಿಸಿರುವ ಕೊಂಬು ವಸ್ತು ಏಕಪ್ರಕಾರವಾಗಿ ಲೇಪಿತವಾಗಿರುತ್ತದೆ. ಇದು ಸವೆದಂತೆಲ್ಲ ಕೊಕ್ಕಿನ ತಳ ಭಾಗದಿಂದ ಹೊಸಪದರ ಉತ್ಪತ್ತಿಯಾಗುತ್ತದೆ. ಆದರೆ ಅಟ್ಲಾಂಟಿಕ್ ಸಾಗರದ ತೀರಪ್ರದೇಶಗಳಲ್ಲಿ ವಾಸಿಸುವ ಫ್ರಾಟೆರ್‍ಕ್ಯುಲ ಎಂಬ ಶಾಸ್ತ್ರೀಯ ಹೆಸರಿನ ಪಫಿನ್ ಹಕ್ಕಿಗಳ ಕೊಕ್ಕಿನಲ್ಲಿ ಪರಸ್ಪರ ಪ್ರತ್ಯೇಕವಾಗಿರುವ 9 ಕೊಂಬಿನ ಫಲಕಗಳಿವೆ. ಈ ಹಕ್ಕಿಗಳ ಸಂತಾನೋತ್ಪತ್ತಿಯ ಕಾಲ ಕೊನೆಗೊಳ್ಳುತ್ತ ಬಂದಂತೆ (ಆಗಸ್ಟ್ ತಿಂಗಳಿನ ವೇಳೆಗೆ) ಕೊಂಬಿನ ಫಲಕಗಳು ಉದುರಿಹೋಗಿ ಮತ್ತೆ ಚಳಿಗಾಲದ ವೇಳೆಗೆ ಹೊಸ ಫಲಕಗಳು ಉತ್ಪತ್ತಿಯಾಗುತ್ತವೆ. ಈ ಫಲಕಗಳಿಗೂ ಹಕ್ಕಿಗಳ ಪೂರ್ವಜ ಪ್ರಾಣಿಗಳಾದ ಸರೀಸೃಪಗಳ ಹುರುಪೆಗಳಿಗೂ ಸಾದೃಶ್ಯವಿದೆಯೆಂದೂ ಕೊಂಬಿನ ಫಲಕಗಳು ಪ್ರತಿವರ್ಷ ಉದುರುವುದರಿಂದ ಪಫಿನ್ ಹಕ್ಕಿಗಳ ಕೊಕ್ಕು ಆದಿಮ ಕೊಕ್ಕೆಂದೂ ಪರಿಗಣಿಸಲಾಗಿದೆ.

ಈಗ ಜೀವಂತವಾಗಿರುವ ಯಾವ ಹಕ್ಕಿಯ ಕೊಕ್ಕಿನಲ್ಲೂ ಹಲ್ಲುಗಳಿಲ್ಲ. ಆದರೆ ಗತಕಾಲದ ಹಕ್ಕಿಗಳ ಕೊಕ್ಕಿನಲ್ಲಿ ಹಲ್ಲುಗಳಿದ್ದುವೆಂದು ಆ ಕಾಲದ ಹಕ್ಕಿಗಳ ಪಳೆಯುಳಿಕೆಗಳಿಂದ ತಿಳಿದುಬರುತ್ತದೆ. ಉದಾಹರಣೆಗೆ, 130 ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆರ್ಕಿಯಾಪ್ಟೆರಿಕ್ಸ್ ಹಕಿಯ ಕೊಕ್ಕಿನಲ್ಲಿ ಹಲ್ಲುಗಳನ್ನು ಕಾಣಬಹದು.

ಸಾಮಾನ್ಯವಾಗಿ ಎಲ್ಲ ಬಗೆಯ ಹಕ್ಕಿಗಳ ಕೊಕ್ಕು ದಪ್ಪವಾಗಿ ಗಟ್ಟಿಯಾಗಿರುತ್ತದೆ. ಆದರೆ ಮುಖ್ಯವಾಗಿ ಹಕ್ಕಿಗಳ ಆಹಾರಕ್ರಮವನ್ನೂ ಕೊಂಚಮಟ್ಟಿಗೆ ಜೀವನರೀತಿಯನ್ನೂ ಅವಲಂಬಿಸಿ ಕೊಕ್ಕು ತನ್ನ ಆಕಾರ ಮತ್ತು ಗಾತ್ರಗಳಲ್ಲಿ ವಿವಿಧತೆಯನ್ನು ಪ್ರದರ್ಶಿಸುತ್ತದೆ. ಕೊಕ್ಕಿನ ವಿವಿಧ ಆಕಾರಗಳನ್ನು ಗಮನಿಸಿ ಹಕ್ಕಿಗಳ ಆಹಾರ ಕ್ರಮವನ್ನು ಸ್ಥೂಲವಾಗಿ ಅರಿಯಬಹುದು. ಕೊಕ್ಕುಗಳ ವಿವಿಧತೆಯನ್ನು ಅಭ್ಯಸಿಸುವುದರಿಂದ ಸ್ವಲ್ಪ ಮಟ್ಟಿಗೆ ಕೊಕ್ಕಿನ ವಿಕಾಸಕ್ರಮವನ್ನೂ ತಿಳಿದುಕೊಳ್ಳಬಹುದು. ಆದರೂ ಪ್ರರೂಪೀ ಬಗೆಯದು ಎನಿಸಿಕೊಳ್ಳುವ ಕೊಕ್ಕು ಕಾಣಸಿಗುವುದು ಕಷ್ಟ. ಸಾಮಾನ್ಯವಾಗಿ ಕಾಗೆಯ ಕೊಕ್ಕು ಈ ಬಗೆಯದು ಎಂದು ಹೇಳಲಾಗುತ್ತದೆ. ಸರ್ವಭಕ್ಷಿಯಾದ ಕಾಗೆಯ ಕೊಕ್ಕು ದೊಡ್ಡದು, ಗಡಸು ಮತ್ತು ಬಲಯುತವಾದುದು. ಇದರ ತುದಿ ಚೂಪಾಗಿರುವುದರಿಂದ ಕಾಗೆ ಸಣ್ಣಪುಟ್ಟ ಕೀಟಗಳನ್ನು ಸುಲಭವಾಗಿ ಹಿಡಿಯಬಲ್ಲುದು; ಬಲಯುತವಾಗಿರುವುದರಿಂದ ಇಲಿ, ಅಳಿಲು, ಮುಂತಾದ ಪ್ರಾಣಿಗಳನ್ನು ಕುಕ್ಕಿ ತಿನ್ನಬಲ್ಲುದು. ಅಲ್ಲದೆ ಗೆಡ್ಡೆಗಳನ್ನು ಕೆದಕುವುದಕ್ಕೂ ಗಟ್ಟಿಯಾದ ಕಾಯಿಗಳನ್ನೊಡೆಯುವುದಕ್ಕೂ ಇದು ಸಹಾಯಕ.

ಹದ್ದು, ಗಿಡುಗ, ಗೂಬೆ ಮುಂತಾದ ಹಕ್ಕಿಗಳ ಕೊಕ್ಕು ಮಾಂಸಾಹಾರ ಸೇವನೆಗೆ ಅನುಕೂಲವಾಗಿದೆ. ಕೊಕ್ಕಿನ ಮೇಲುದವಡೆಯ ಭಾಗ ಬಲಯುತ; ತುದಿ ಚೂಪಾಗಿದ್ದು ಕೊಂಚ ಬಾಗಿದೆ. ಇದರಿಂದ ಎರೆಪ್ರಾಣಿಯನ್ನು ಹಿಡಿಯಲೂ ಅದರ ಮಾಂಸವನ್ನು ಹರಿದು ತಿನ್ನಲೂ ನೆರವಾಗುತ್ತದೆ.

ಸಸ್ಯಹಾರಿಯಾದ ಗಿಳಿಯ ಕೊಕ್ಕು ಹಣ್ಣುಹಂಪಲನ್ನು ಹಿಡಿದುಕೊಳ್ಳುವುದಕ್ಕೆ ಸಹಾಯಕವಾಗಿದೆ. ಹೂವಿನ ಮಕರಂದವನ್ನು ಕುಡಿಯುವ ಹಮಿಂಗ್‍ಬರ್ಡ್ ಮತ್ತು ಕಳ್ಳಿಪೀರ (ಬೀ ಈಟರ್) ಹಕ್ಕಿಗಳ ಕೊಕ್ಕು ಮಕರಂದವನ್ನು ಹೀರಲು ಅನುಕೂಲವಾಗುವಂತೆ ನೀಳವಾಗಿಯೂ ತೆಳುವಾಗಿಯೂ ಇದೆ. ಕೀಟ, ಡಿಂಬ ಮುಂತಾದುವನ್ನು ತಿನ್ನುವ ಪರಿಪಾಠವಿರುವ ಮರಕುಟಿಗಗಳಲ್ಲಿ ಕೊಕ್ಕು ನೀಳವಾಗಿರುವುದಲ್ಲದೆ ಗಡುಸಾಗಿಯೂ ದಪ್ಪವಾಗಿಯೂ ಇದೆ. ಇದರಿಂದ ಮರದ ಪೊಟರೆಗಳನ್ನು ಕುಕ್ಕಿ ಒಳಗೆ ಅಡಗಿರುವ ಕೀಟಗಳನ್ನು ತಿನ್ನಲು ಈ ಹಕ್ಕಿಗಳಿಗೆ ಸಾಧ್ಯವಾಗಿದೆ. ಸ್ವಿಫ್ಟ್ ಹಕ್ಕಿಗಳ ಕೊಕ್ಕು ಬಲುಚಿಕ್ಕದು. ಆದರೆ ಇದು ಬಹಳ ಅಗಲವಾಗಿ ತೆರೆಯಬಲ್ಲುದು. ಇದರಿಂದ ಈ ಹಕ್ಕಿಗಳು ತಾವು ಹಾರುತ್ತಿರುವಾಗಲೆ ಬಾಯಿತೆರೆದು ಗಾಳಿಯಲ್ಲಿ ಹಾರಾಡುತ್ತಿರುವ ಕೀಟಗಳನ್ನು ಹಿಡಿಯಬಲ್ಲವು. ಮತ್ಸ್ಯಾಹಾರಿ ಹಕ್ಕಿಗಳ ಕೊಕ್ಕೂ ವೈವಿಧ್ಯಮಯ. ಬಾತು, ಹಂಸ ಮುಂತಾದುವುಗಳ ಕೊಕ್ಕು ಅಗಲವಾಗಿಯೂ ಚಪ್ಪಟೆಯಾಗಿಯೂ ಇದೆ. ಕೊಕ್ಕಿನ ಎಡಬಲ ಪಕ್ಕಗಳಲ್ಲಿ ಜರಡಿಯಂಥ ರಚನೆಗಳಿವೆ. ಈ ಹಕ್ಕಿಗಳು ನೀರಿನಲ್ಲಿ ಈಜುವಾಗ ಆಹಾರ ತುಂಬಿದ ನೀರನ್ನು ಬಾಯಿತುಂಬ ತುಂಬಿಕೊಂಡು ಕೊಕ್ಕನ್ನು ಮುಚ್ಚುತ್ತವೆ. ಆಗ ಆಹಾರ ವಸ್ತುಗಳು ಮಾತ್ರ ಬಾಯಲ್ಲಿ ಉಳಿದು ನೀರೆಲ್ಲ ಹೊರಬಂದುಬಿಡುತ್ತದೆ. ಸ್ಪೂನ್‍ಬಿಲ್ ಬಾತಿನ ಕೊಕ್ಕು ಇವುಗಳ ಕೊಕ್ಕಿನಂತೆಯೇ ಇದ್ದರೂ ಅವಕ್ಕಿಂತ ಹೆಚ್ಚು ಉದ್ದ. ಪೆಲಿಕನ್, ಗ್ಯಾನೆಟ್, ಕಾರ್ಮೊರಾಂಟ್ ಹಕ್ಕಿಗಳ ಕೊಕ್ಕು ತುಂಬ ಉದ್ದ. ಇದರಿಂದ ನೀರಿನಲ್ಲಿನ ಮೀನು, ಬಸವನಹುಳು ಮುಂತಾದ ಪ್ರಾಣಿಗಳನ್ನು ಹಿಡಿಯಲು ಅನುಕೂಲ. ಅಲ್ಲದೆ ಪೆಲಿಕನ್ ಕೊಕ್ಕಿನ ಕೆಳಭಾಗದಲ್ಲಿ ಒಂದು ರೀತಿಯ ಚರ್ಮದ ಚೀಲ ಇದೆ. ನೀರಿನಲ್ಲಿ ಈಜುತ್ತಲೆ ಕೊಕ್ಕನ್ನು ಅಗಲಿಸಿ ಈ ಚೀಲವನ್ನು ಮುಳುಗುಬಲೆಯಂತೆ ಉಪಯೋಗಿಸಿ ಮೀನುಗಳನ್ನು ಪೆಲಿಕನ್ ಹಿಡಿಯಬಲ್ಲುದು. ಆಲ್ಬಟ್ರಾಸ್, ಸ್ಕಿಮರ್ ಮುಂತಾದ ಹಕ್ಕಿಗಳ ಕೊಕ್ಕು ನೀರಿನಿಂದ ಆಗಿಂದಾಗ್ಗೆ ಹೊರನೆಗೆಯುವ ಮೀನುಗಳನ್ನು ನೀರಿನ ಮೇಲೆ ಹಾರುತ್ತಿರುವಂತೆಯೇ ಹಿಡಿಯಲು ಅನುಕೂಲವಾಗಿದೆ. ಆಯಿಸ್ಟರ್‍ಕ್ಯಾಚರ್ ಹಕ್ಕಿಯ (ಹಿಮಟೋಪಸ್ ಪ್ರಭೇದ) ಕೊಕ್ಕು ಮೃದ್ವಂಗಿ ಪ್ರಾಣಿಗಳನ್ನು ಹಿಡಿಯುವುದಕ್ಕೂ ಅವುಗಳ ಚಿಪ್ಪನ್ನು ಒಡೆದು ಒಳಗಿನ ಪ್ರಾಣಿಗಳನ್ನು ತಿನ್ನುವುದಕ್ಕೂ ಹೇಳಿ ಮಾಡಿಸಿದಂತಿದೆ. ಈ ಹಕ್ಕಿ ತನ್ನ ನೀಳವಾದ, ಗಡುಸಾದ ಹಾಗೂ ಎಡಬಲಪಕ್ಕಗಳಲ್ಲಿ ಚಪ್ಪಟೆಯಾದ ಕೊಕ್ಕನ್ನು ಮೃದ್ವಂಗಿಗಳ ಚಿಪ್ಪಿನೊಳಕ್ಕೆ ತೂರಿಸಿ ತರುವಾಯ ತಿರುಗಿಸಿ ಚಿಪ್ಪುಗಳು ಬೇರ್ಪಡುವಂತೆ ಮಾಡಿ ಒಳಗಿನ ಮೃದುವಾದ ಮಾಂಸವನ್ನು ತಿನ್ನುತ್ತದೆ. ಗುಬ್ಬಚ್ಚಿ, ಪಾರಿವಾಳ, ಕೋಳಿ, ಗೀಜುಗಗಳಲ್ಲಿ ಕಾಳುಗಳನ್ನು ಆರಿಸಿ ತಿನ್ನಲು ಅನುಕೂಲವಾಗಿರುವ ಕೊಕ್ಕು ಇದೆ. ಹಾರ್ನ್‍ಬಿಲ್ ಹಕ್ಕಿಯ ಕೊಕ್ಕು ಬಹಳ ದೊಡ್ಡದು ಮತ್ತು ಉದ್ದವಾದುದು; ಹಣ್ಣು ಗಳನ್ನು ತಿನ್ನುವುದರಲ್ಲಿ ಸಹಾಯಕ. ಕ್ರಾಸ್‍ಬಿಲ್ ಎಂಬ ಹಕ್ಕಿಯ ಕೊಕ್ಕು ವಿಚಿತ್ರ ಬಗೆಯದು; ಕೊಕ್ಕಿನ ಮೇಲ್ಭಾಗ ಕೆಳಭಾಗಗಳು ಒಂದನ್ನೊಂದು ಅಡ್ಡ ಹಾಯುತ್ತವೆ. ಮೇಲ್ಭಾಗ ಬಲಕ್ಕೂ ಕೆಳಭಾಗ ಎಡಕ್ಕೂ ತಿರುವಿಕೊಂಡಿರುತ್ತವೆ. ಅಲ್ಲದೆ ಕೊಕ್ಕು ಮುಚ್ಚಿರುವಾಗಲೂ ತುದಿಗಳು ಅಡ್ಡಡ್ಡಲಾಗಿ ಚಲಿಸಬಲ್ಲವು. ಇಂಥ ರಚನೆಯಿಂದಾಗಿ ಕ್ರಾಸ್‍ಬಿಲ್ ಹಕ್ಕಿಗಳಿಗೆ ಪೈನ್ ಮರದ ಶಂಕುಗಳನ್ನು ಬಿಡಿಸಿಕೊಂಡು ಒಳಗಿರುವ ಬೀಜಗಳನ್ನು ತಿನ್ನುವ ನೈಪುಣ್ಯ ಬಂದಿದೆ.

ನ್ಯೂಜ಼ೀಲೆಂಡ್ ವಾಸಿಯಾದ ಹೂಯಿಯ ಎಂಬ ಹಕ್ಕಿಗಳಲ್ಲಿ ಗಂಡುಹಕ್ಕಿಯ ಕೊಕ್ಕು ಒಂದು ತೆರನಾದರೆ ಹೆಣ್ಣಿನ ಕೊಕ್ಕು ಇನ್ನೊಂದು ತೆರ. ಗಂಡಿನ ಕೊಕ್ಕು ಚಿಕ್ಕದಾಗಿದ್ದು ಗಡುಸಾಗಿಯೂ ಶಂಕುವಿನಾಕಾರದ್ದೂ ಆಗಿದೆ. ಇದರಿಂದ ಗಂಡು ಹಕ್ಕಿ ಕೀಟಗಳು ವಾಸಿಸುತ್ತಿರುವ ಮರಗಳನ್ನು ಕುಕ್ಕಿ ಕೀಟಗಳ ಗೂಡುಗಳನ್ನು ತೆರವು ಮಾಡಬಲ್ಲುದು. ಹೆಣ್ಣು ಹಕ್ಕಿಯ ಕೊಕ್ಕು ತೆಳುವಾಗಿಯೂ ನೀಳವಾಗಿಯೂ ಇದ್ದು ಕುಡುಗೋಲಿನಂತೆ ಬಾಗಿದೆ. ಇದರಿಂದ ಇದು ಕೀಟಗಳನ್ನು ಹಿಡಿಯಲು ಮಾತ್ರ ಅನುಕೂಲವಾಗಿದೆ; ಆದರೆ ಗಂಡಿನಂತೆ ಕೀಟಗಳ ಗೂಡುಗಳನ್ನು ಕುಕ್ಕಲು ಸಹಾಯಕವಾಗಿಲ್ಲ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ತಮ್ಮ ಆಹಾರಸೇವನೆಯಲ್ಲಿ ಪರಸ್ಪರ ಪೂರಕಗಳಾಗಿ ಕಾರ್ಯನಿರ್ವಹಿಸುತ್ತವೆ.

ಕೊಕ್ಕು ತನ್ನ ಆಕಾರ ಮತ್ತು ಗಾತ್ರಗಳಲ್ಲಿ ವೈವಿಧ್ಯಮಯವಾಗಿರುವಂತೆಯೇ ಬಣ್ಣದಲ್ಲೂ ವಿವಿಧತೆಯನ್ನು ಪ್ರದರ್ಶಿಸುತ್ತದೆ. ಕಾಗೆಯ ಕೊಕ್ಕು ಕಪ್ಪಾಗಿದ್ದರೆ, ಗಿಳಿ, ಮೈನ ಮುಂತಾದ ಹಕ್ಕಿಗಳ ಕೊಕ್ಕು ಹಳದಿ, ಕೆಂಪು, ಕಿತ್ತಳೆ, ನೇರಳೆ ಇತ್ಯಾದಿ ಬಣ್ಣಗಳಿಂದ ಕೂಡಿ ವರ್ಣರಂಜಿತವಾಗಿರುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೊಕ್ಕು&oldid=1075028" ಇಂದ ಪಡೆಯಲ್ಪಟ್ಟಿದೆ