ಕಲ್ಲಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಲಂಗಡಿ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
Variety:
lanatus
Trinomial name
Citrullus lanatus var. lanatus
Watermelon output in 2005
Watermelon Juice

ಕಲ್ಲಂಗಡಿ (ಸಿಟ್ರಲಸ್ ಲನಾಟಸ್ (ಟೂನ್‍ಬಾರಿಯ), ಕುಟುಂಬ ಕುಕರ್ಬಿಟೇಸಿಯಿ) ಮೂಲತಃ ಆಫ್ರಿಕಾದ ದಕ್ಷಿಣ ಭಾಗದ ಒಂದು ಬಳ್ಳಿಯಂಥ (ತೆವಳುವ ಹಾಗು ಜೋಲುಬೀಳುವ) ಹೂ ಬಿಡುವ ಸಸ್ಯ. ಅದರ ಹಣ್ಣು ಸಸ್ಯಶಾಸ್ತ್ರಜ್ಞರಿಂದ ಪೀಪೊ (ದಪ್ಪನೆಯ ತೊಗಟೆ (ಬೀಜಕೋಶ) ಮತ್ತು ತಿರುಳಿರುವ ಕೇಂದ್ರವನ್ನು (ಮಧ್ಯ ಕವಚ ಹಾಗು ಅಂತಃಫಲ ಕವಚ) ಹೊಂದಿರುವ ಬೆರಿ) ಎಂದು ನಿರ್ದೇಶಿಸಲಾಗುವ ಒಂದು ವಿಶೇಷ ವಿಧವಾಗಿದೆ. ಪೀಪೊಗಳು ಕೆಳಭಾಗದಲ್ಲಿರುವ ಅಂಡಾಶಯದಿಂದ ಜನ್ಯವಾಗಿವೆ, ಮತ್ತು ಕುಕರ್ಬಿಟೇಸಿಯಿಯ ಲಕ್ಷಣವಾಗಿವೆ.

ಸಸ್ಯ ವಿವರಣೆ[ಬದಲಾಯಿಸಿ]

  • ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಬಳ್ಳಿ ಇದು. ಬಹುವಾಗಿ ಕವಲೊಡೆಯುತ್ತದೆ. ಕಾಂಡದ ಮೇಲೆಲ್ಲ ಸಣ್ಣ ರೋಮಗಳಿವೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ; ಇವು ಅಗಲ ಮತ್ತು ಹಸ್ತಾಕಾರವಾಗಿರುವುವಲ್ಲದೆ ಹಲವಾರು ಹಾಲೆಗಳಾಗಿ ಸೀಳುಗೊಂಡಿವೆ. ಎಲೆತೊಟ್ಟುಗಳು ಚಿಕ್ಕವು. ಎಲೆಗಳ ಕಂಕುಳಲ್ಲಿ ಹಳದಿಬಣ್ಣದ ಚಿಕ್ಕ ಹೂಗಳು ಒಂಟೊಂಟಿಯಾಗಿ ಅರಳುತ್ತವೆ.
  • ಹೂಗಳು ಏಕಲಿಂಗಿಗಳು. ಗಂಡು ಹೂವಿನಲ್ಲಿ ಐದು ಪುಷ್ಪಪತ್ರಗಳಿಂದ ಕೂಡಿದ ಗಂಟೆಯಾಕಾರದ ಪುಷ್ಪಪಾತ್ರೆಯೂ ಐದು ದಳಗಳಿಂದಾದ ಸಂಯುಕ್ತ ಮಾದರಿಯ ಪುಷ್ಪದಳ ಸಮೂಹವೂ ಮೂರು ಕೇಸರಗಳೂ ಇವೆ. ಹೆಣ್ಣು ಹೂವಿನಲ್ಲಿ ಗಂಡು ಹೂವಿನಲ್ಲಿರುವಷ್ಟೇ ಸಂಖ್ಯೆಯ ಪುಷ್ಪಪತ್ರ ಗಳೂ ದಳಗಳೂ ಮೂರು ಕಾರ್ಪೆಲುಗಳಿಂದಾದ ಒಂದು ನೀಚಸ್ಥಾನದ ಅಂಡಾಶಯವೂ ಇವೆ. ಅಂಡಾಶಯದಲ್ಲಿ ಹಲವಾರು ಅಂಡಕಗಳಿವೆ. ಫಲ ಒಡೆಯದ ಬೆರಿ ಮಾದರಿಯದು. ಗುಂಡಾಗಿಯೊ ಉದ್ದುದ್ದವಾಗಿಯೊ ಇದೆ.
  • ಪೂರ್ಣ ಬೆಳೆವಣಿಗೆ ಆದಾಗ ಸುಮಾರು ೨೫-೫೦ ಪೌಂ. ತೂಗುತ್ತದೆ. ಹಣ್ಣಿನ ಮೇಲ್ಮೈ ನಯ ಹಾಗೂ ತಿಳಿಹಸಿರು ಅಥವಾ ಕಡುಹಸುರು ಬಣ್ಣದ್ದಾಗಿದೆ. ಕೆಲವು ತಳಿಗಳಲ್ಲಿ ಬಿಳಿಯ ಪಟ್ಟೆಗಳಿರುವುದೂ ಉಂಟು. ತಿರುಳು ರಸಭರಿತ ಹಾಗೂ ಕೆಂಪು ಬಣ್ಣದ್ದು. ಕಪ್ಪು, ಬಿಳಿಯ ಅಥವಾ ಕಂದು ಬಣ್ಣದ ಬೀಜಗಳನ್ನು ಒಳಗೊಂಡಿದೆ. ಜಪಾನಿನಲ್ಲಿ ಬೆಳೆಯಲಾಗುವ ಕಲ್ಲಂಗಡಿ ತಳಿಯೊಂದರಲ್ಲಿ ಬೀಜಗಳೇ ಇರುವುದಿಲ್ಲ.

ತಳಿಗಳು[ಬದಲಾಯಿಸಿ]

ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿವೆ. ಇವುಗಳ ಹಣ್ಣಿನ ಆಕಾರ, ಗಾತ್ರ, ಬಣ್ಣ, ತಿರುಳಿನ ರುಚಿ ಹಾಗೂ ಬಣ್ಣ, ಬೀಜಗಳ ಬಣ್ಣ ಹಾಗೂ ಕಾಯಿಗಳು ಪಕ್ವವಾಗುವ ಕಾಲ-ಇವುಗಳಲ್ಲೆಲ್ಲ ವೈವಿಧ್ಯ ಇದೆ. ಇವುಗಳಲ್ಲಿ ಮುಖ್ಯವಾಗಿ ಷಹಜಾನ್ ಪುರಿ, ಜಾನ್ ಪುರಿ ರೆಡ್, ಫರೂಕಬಾದಿ, ಅಲಹಾಬಾದಿ ಇತ್ಯಾದಿ. ಉತ್ತರ ಭಾರತದ ಸ್ಥಳೀಯ ತಳಿಗಳು ಮತ್ತು ಮೈಸೂರು ರಾಜ್ಯದಲ್ಲಿ ಗೌಡ, ಸೆಲೆಕ್ಷನ್ ನಂ. ೧ ಮತ್ತು ಸೆಲೆಕ್ಷನ್ ನಂ. ೨ ಮುಂತಾದವು ಹೆಚ್ಚಿನ ಬೇಸಾಯದಲ್ಲಿವೆ. ಹೆಚ್ಚು ಇಳುವರಿ ಕೊಡುವ ಸುಧಾರಿಸಿದ ತಳಿಗಳನ್ನು ಹೊರ ದೇಶಗಳಿಂದ ತರಿಸಲಾಗಿದೆ. ಅವುಗಳ ಪೈಕಿ ಅಷಿಯ ಮಟೊ, ಶುಗರ್ ಬೇಬಿ, ನ್ಯೂ ಹೆಮಿಸ್ಫಿಯರ್ ಮಿಡ್ ಗಟ್ ಮುಂತಾದವು ಮುಖ್ಯವಾದುವು.

ಅಷಿಯಮಟೊ[ಬದಲಾಯಿಸಿ]

ಈ ತಳಿಯನ್ನು ಜಪಾನ್ ದೇಶದಿಂದ ತರಿಸಲಾಗಿದೆ. ಇದರ ಹಣ್ಣುಗಳು ೬ ರಿಂದ ೭ ಕೆ.ಜಿ. ತೂಗುತ್ತವೆ. ಸಿಪ್ಪೆ ತಿಳಿ ಹಸುರು. ಮೇಲು ಭಾಗದಲ್ಲಿ ನಸು ಬಿಳುಪು ಪಟ್ಟೆಗಳಿವೆ. ಒಳತಿರುಳು ಸಿಹಿ ಮತ್ತು ಕೆಂಪು ಬಣ್ಣದ್ದು. ಇದರ ಬೀಜಗಳು ಸಣ್ಣವು.

ಶುಗರ್ ಬೇಬಿ[ಬದಲಾಯಿಸಿ]

ಈ ತಳಿಯನ್ನು ಉತ್ತರ ಅಮೆರಿಕದಿಂದ ತರಿಸಲಾಗಿದೆ. ಇದರ ಹಣ್ಣಿನ ತೂಕ ೪ ರಿಂದ ೬ ಕೆ.ಜಿ. ಸಿಪ್ಪೆ ಗಾಜಿನ ಹಸುರು ಬಣ್ಣದ್ದು. ಒಳ ತಿರುಳು ಕೆಂಪು ಬಣ್ಣದ್ದು, ಸಿಹಿಯಾಗಿದೆ ಮತ್ತು ಬೀಜಗಳು ಸಣ್ಣ.

ನ್ಯೂ ಹೆಮಿಸ್ಫಿಯರ್ ಮಿಡ್ ಗಟ್ಬ[ಬದಲಾಯಿಸಿ]

ಇದರ ಹಣ್ಣು ೧ ರಿಂದ ೨ ಕೆ.ಜಿ. ತೂಗುತ್ತವೆ. ಮೇಲ್ಮೈ ಕಡು ಹಸುರು ಬಣ್ಣದ್ದು. ತಿರುಳು ಕೆಂಪು ಮತ್ತು ರುಚಿಕರ. ಈ ತಳಿ ವಿಶಾಲವಾಗಿ ಬೆಳೆಯದೆ ಇರುವುದರಿಂದ ಮನೆ ಕೈತೋಟಗಳಲ್ಲಿ ಬೆಳೆಯುವುದಕ್ಕೆ ಯೋಗ್ಯವಾಗಿದೆ.

ಬೇಸಾಯ[ಬದಲಾಯಿಸಿ]

  • ಕಲ್ಲಂಗಡಿ ಶುದ್ಧವಾದ ಬೇಸಗೆ ಬೆಳೆ. ಇದರ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ಹವಾಗುಣ ಅಗತ್ಯ. ತಂಪಾದ ಹವಾಗುಣದಲ್ಲಿ ಬಿತ್ತಿದ ಬೀಜಗಳ ಮೊಳೆಯುವ ಸಂಖ್ಯೆ ಕಡಿಮೆಯಾಗುತ್ತದೆಯಲ್ಲದೆ ಸಸ್ಯದಲ್ಲಿ ಎಲೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಇಳುವರಿಯೂ ಕಡಿಮೆ; ಮತ್ತು ರೋಗಗಳಿಗೆ ತುತ್ತಾಗುವ ಸಂಭವವೂ ಹೆಚ್ಚು. ರಭಸವಾದ ಗಾಳಿ ಬೀಸುವಾಗ ಪರಾಗ ವಿತರಣೆಯಾಗದೆ ಫಲ ತೀರ ಕಡಿಮೆಯಾಗುತ್ತದೆ. ಒಣ ಹವಾಗುಣದಲ್ಲಿ ಬೆಳೆದ ಹಣ್ಣು ತಂಪಾದ ಹವಾಗುಣದಲ್ಲಿ ಬೆಳೆದ ಹಣ್ಣಿಗಿಂತ ಸಿಹಿಯಾಗಿರುತ್ತದೆ.
  • ಕಲ್ಲಂಗಡಿಯನ್ನು ಅನೇಕ ವಿಧವಾದ ಮಣ್ಣುಗಳಲ್ಲಿ ಬೆಳೆಸ ಬಹುದಾದರೂ ಮರಳುಗೋಡು ಮತ್ತು ಜೇಡಿಗೋಡು ಮಣ್ಣು ಶ್ರೇಷ್ಠವಾದವು. ಬೇಸಗೆ ಕಾಲದಲ್ಲಿ ಕೆರೆ ಅಂಗಳ ಮತ್ತು ನದಿಯ ದಂಡೆಗಳಲ್ಲಿ ಕಲ್ಲಂಗಡಿ ಬೇಸಾಯ ಮಾಡುವುದು ಸಾಮಾನ್ಯವಾದ ರೂಢಿ. ಈ ರೀತಿ ಬೇಸಾಯ ಮಾಡುವಾಗ ಭೂಮಿಯಲ್ಲಿನ ಜಲಮಟ್ಟವನ್ನು ತಿಳಿಯಬೇಕು. ಜಲಮಟ್ಟ ಮೇಲಿರುವ ಭೂಮಿಯಲ್ಲಿ ಕಲ್ಲಂಗಡಿ ಬೇಸಾಯ ಮಾಡುವಾಗ ಮಣ್ಣನ್ನು ಬೇಕಾದ ಅಂತರದಲ್ಲಿ ಏರು ಹಾಕಿ ಅವುಗಳ ಮೇಲೆ ಕಲ್ಲಂಗಡಿ ಬೇಸಾಯ ಮಾಡಬೇಕು.
  • ಜಲಮಟ್ಟ ಕೆಳಗಿರುವ ಕೆರೆ ಅಂಗಳ ಅಥವಾ ನದಿಯ ದಂಡೆಯಲ್ಲಿ ಕಲ್ಲಂಗಡಿ ಬೇಸಾಯ ಮಾಡುವಾಗ ಸುಮಾರು ೧ ಮೀ ಆಳದ ಕಾಲುವೆಗಳನ್ನು ತೆಗೆದು ಬೀಜ ಬಿತ್ತಬೇಕು. ಕಲ್ಲಂಗಡಿಯನ್ನು ೫.೮ರಿಂದ ೮.೦ ಠಿಊ ಇರುವ ಮಣ್ಣಿನಲ್ಲಿ ಬೆಳೆಸಬಹುದು. ಆದರೆ ೭.೨-೮.೦ ಠಿಊ ಇರುವ ಮಣ್ಣು ಇದರ ಬೆಸಾಯಕ್ಕೆ ಸಮತೂಕವಾದ್ದು. ಇದು ಸ್ವಲ್ಪ ಮಟ್ಟಿಗೆ ಆಮ್ಲತೆಯನ್ನು ಸಹಿಸಬಲ್ಲುದು. ಹೆಚ್ಚು ಆಮ್ಲತೆಯಿರುವ ಮಣ್ಣಿನಲ್ಲಿ ಇದರ ಬೇಸಾಯ ಮಾಡುವಾಗ ಬೀಜ ಬಿತ್ತುವುದಕ್ಕೆ ಆರು ವಾರಗಳ ಮೊದಲು ಸುಣ್ಣವನ್ನು ಹಾಕಬೇಕು.
  • ಸಾಮಾನ್ಯವಾಗಿ ಕಲ್ಲಂಗಡಿ ಶುದ್ಧ ಬೆಳೆ (ಪ್ಯುರ್ ಕ್ರಾಪ್). ಆದರೆ ತೋಟಗಳಲ್ಲಿ ಇದರ ಬೇಸಾಯ ಮಾಡುವಾಗ ಬದುಗಳ ಮೇಲೆ ಈರುಳ್ಳಿ ಕೊತ್ತಂಬರಿ ಮುಂತಾದವುಗಳನ್ನು ಬೆಳೆಸುವುದು ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿದೆ. ನಾಲಾ ಪ್ರದೇಶಗಳಲ್ಲಿ ಬತ್ತದೊಂದಿಗೊ ಕಬ್ಬಿನೊಂದಿಗೊ ಕಲ್ಲಂಗಡಿಯನ್ನು ಮಿಶ್ರಬೆಳೆಯಾಗಿ ಬೆಳೆಸುವ ರೂಢಿ ಉಂಟು. ಕಲ್ಲಂಗಡಿ ಬೀಜ ನಾಟಿ ಮಾಡುವಾಗ ಸೊಪ್ಪು ಬೀಜವನ್ನು ಉಪ ಬೆಳೆಯಾಗಿ ಬಿತ್ತಿ ಒಂದು ತಿಂಗಳ ಅನಂತರ ಎಕರೆಗೆ ೩೨ ಕೆಜಿ ಸಾರ ಜನಕ, ೨೦ ಕೆಜಿ ರಂಜಕ ಮತ್ತು ೨೦ ಕೆಜಿ ಪೊಟ್ಯಾಷ್, ಹಾಕಿದರೆ ಉತ್ತಮ.
  • ಬೀಜ ಬಿತ್ತದ ಸುಮಾರು ೧ ತಿಂಗಳಿಗೆ ಹಂಬು ಹರಿಯಲು ಪ್ರಾರಂಭಿಸುತ್ತದೆ. ಆಗ ಮೊದಲ ಸಾರಿ ಕಳೆ ತೆಗೆದು ಸಸ್ಯದ ಬುಡಗಳ ಸುತ್ತಲೂ ಬೇಸಾಯ ಮಾಡಿ, ಮಣ್ಣನ್ನು ಬುಡಕ್ಕೆ ಏರು ಹಾಕಬೇಕು. ಮೊದಲು ಬಿಟ್ಟ ಕಾಯಿಗಳನ್ನು ಸಾಮಾನ್ಯವಾಗಿ ತೆಗೆದುಹಾಕುತ್ತಾರೆ. ಇದರಿಂದ ಅನಂತರ ಬಿಡುವ ಕಾಯಿಗಳು ದಪ್ಪವಾಗುತ್ತವೆ. ಕಲ್ಲಂಗಡಿ ಬೀಜ ಬಿತ್ತಿದ ಒಂದು ವಾರದಲ್ಲಿ ಮೊಳೆತು ಸುಮಾರು ೨ ತಿಂಗಳಿಗೆ ಹೂ ಬಿಟ್ಟು ೨೧/೨ ತಿಂಗಳಿಗೆ ಫಲವನ್ನು ಕೊಡುತ್ತದೆ. ಬಲಿತ ಕಾಯಿಗಳನ್ನು ಕೈಯಿಂದ ಮೃದುವಾಗಿ ತಟ್ಟಿದಾಗ ಒಡೆದ ಮಡಕೆ ಶಬ್ದ ಬರುತ್ತದೆ.
  • ಆಗ ಅವುಗಳ ತೊಟ್ಟನ್ನು ಚಾಕುವಿನಿಂದ ಕೊಯ್ದು ಹಂಬಿಗೆ ನೋವು ತಗಲದಂತೆ ಎಚ್ಚರಿಕೆಯಿಂದ ಪ್ರತ್ಯೇಕಿಸಬೇಕು. ಹಣ್ಣಾದ ಮೇಲೆ, ಬೆರಳಿನಿಂದ ಲಘುವಾಗಿ ಒತ್ತಿದರೆ ಸಿಪ್ಪೆ ಸ್ವಲ್ಪ ತಗ್ಗುತ್ತದೆ ಮತ್ತು ಸಿಪ್ಪೆಯ ಬಣ್ಣ ಬದಲಾಯಿಸುತ್ತದೆ. ಕಲ್ಲಂಗಡಿಯ ಇಳುವರಿ ತಳಿ ಮತ್ತು ಬೇಸಾಯ ಕ್ರಮವನ್ನು ಅನುಸರಿಸುತ್ತದೆ. ಎಕರೆಗೆ ಸುಮಾರು ೪,೦೦೦ ದಿಂದ ೬,೦೦೦ ಕೆಜಿ ಹಣ್ಣು ಸಿಕ್ಕುತ್ತದೆ. ಬೇಸಾಯದ ಕ್ರಮ ಸರಿಯಾಗಿದ್ದಲ್ಲಿ ಒಂದೊಂದು ಹಂಬಿನಿಂದಲೂ ಸುಮಾರು ೨೫-೪೦ ಕಾಯಿಗಳನ್ನು ಪಡೆಯಬಹುದು.

ಜಾಗತಿಕ ಉತ್ಪಾದನೆ[ಬದಲಾಯಿಸಿ]

೨೦೧೨ರಲ್ಲಿ ಕಲ್ಲಂಗಡಿ ಬೆಳೆಯುವ ಜಗತ್ತಿನ ೫ ರಾಷ್ಟ್ರಗಳು-ಟನ್ನುಗಳಲ್ಲಿ)
 ಚೀನಾ ಚೀನಾ 70,000,000
 ಟರ್ಕಿ ಟರ್ಕಿ 4,044,184
 ಇರಾನ್ ಇರಾನ್ 3,800,000
 Brazil 2,079,547
 ಈಜಿಪ್ಟ್ ಈಜಿಪ್ಟ್ 1,874,710
 ಜಗತ್ತಿನ ಓಟ್ಟು 95,211,432
Source: UN FAOSTAT [೧]


ಬೀಜರಹಿತ ಕಲ್ಲಂಗಡಿ

ಬಳಕೆ[ಬದಲಾಯಿಸಿ]

  • ಪ್ರಮುಖವಾಗಿ ಇದು ಅತ್ಯಂತ ರುಚಿಯಾದ ಬೇಸಗೆ ಹಣ್ಣೆಂದು ಪ್ರಸಿದ್ಧವಾಗಿದೆ. ಇದರ ರಸ ಬಹಳ ತಂಪುಗೊಳಿಸುವ ಹಾಗೂ ಚೇತೋಹಾರಿಯಾದ ಪಾನೀಯವೆಂದು ಹೆಸರಾಗಿದೆ. ರಾಜಸ್ತಾನದ ಕೆಲವೆಡೆಗಳಲ್ಲಿ ಇದರ ಕಾಯಿಗಳನ್ನು ತರಕಾರಿಯಾಗಿಯೂ ಉಪಯೋಗಿಸುವುದುಂಟು. ಕೆಲವು ಪ್ರದೇಶಗಳಲ್ಲಿ ಸಿಹಿತಿಂಡಿ ಮಾಡಲೂ ಉಪ್ಪಿನ ಕಾಯಿಯಾಗಿಯೂ ಇದನ್ನು ಬಳಸುವ ರೂಢಿಯಿದೆ. ಕಿರ್ಬತ್ ಎಂದು ಕರೆಯಲಾಗುವ ಒಂದು ಸ್ವಾಭಾವಿಕ ತಳಿಯ ಕಲ್ಲಂಗಡಿ ಹಣ್ಣು ಕಹಿ ರುಚಿಯುಳ್ಳದ್ದು. ಅದು ವಿರೇಚಕ ಗುಣವುಳ್ಳದ್ದು.
  • ಅಮೆರಿಕದಲ್ಲಿ ಬೆಳೆಸುವ ಗಟ್ಟಿ ತಿರುಳಿನ ಸಿಟ್ರನ್ ಎಂಬ ತಳಿಯ ಹಣ್ಣಿನಿಂದ ಜಾಮ್, ಜೆಲಿ ಮುಂತಾದುವನ್ನು ಮಾಡುತ್ತಾರೆ. ಕಲ್ಲಂಗಡಿಯ ಬೀಜಕ್ಕೆ ತಂಪುಗೊಳಿಸುವ ಮತ್ತು ಮೂತ್ರೋತ್ತೇಜಕ ಗುಣಗಳಿವೆ. ಹಣ್ಣಿನ ರಾಸಾಯನಿಕ ಸಂಯೋಜನೆ ಹೀಗಿದೆ: ತೇವಾಂಶ ಶೇ. ೯೫.೭; ವ್ರೋಟೀನು ಶೇ. ೦.೨; ಕೊಬ್ಬು ಶೇ.೦.೨; ಕಾರ್ಬೊಹೈಡ್ರೇಟುಗಳು ಶೇ. ೩.೩; ಲವಣಾಂಶ ಶೇ. ೦.೩; ಹಾಗೂ ಪ್ರತಿ ೧೦೦ ಗ್ರಾಂ ಹಣ್ಣಿಗೆ ೧೧ ಮಿ.ಗ್ರಾಂ ಕ್ಯಾಲಿಯಂ, ೧೨ ಮಿ.ಗ್ರಾಂ. ರಂಜಕ, ೭.೯ ಮಿ.ಗ್ರಾಂ. ಕಬ್ಬಿಣ. ೪೨ ಮಿ.ಗ್ರಾಂ ಗಂಧಕ ಇತ್ಯಾದಿ ಮತ್ತು ೦.೧೬ ಮಿ.ಗ್ರಾಂ ವಿಟಮಿನ್ ಬಿ ಹಾಗೂ ೧ ಮಿ.ಗ್ರಾಂ ವಿಟಮಿನ್ ಸಿ.

ಪೌಷ್ಟಿಕತೆ[ಬದಲಾಯಿಸಿ]

ಕಲ್ಲಂಗಡಿ,ಕಚ್ಛಾ
Nutritional value per 100 g (3.5 oz)
ಆಹಾರ ಚೈತನ್ಯ 127 kJ (30 kcal)
ಶರ್ಕರ ಪಿಷ್ಟ 7.55 g
- ಸಕ್ಕರೆ 6.2 g
- ಆಹಾರ ನಾರು 0.4 g
ಕೊಬ್ಬು 0.15 g
Protein 0.61 g
ನೀರು 91.45 g
Vitamin A equiv. 28 μg (4%)
- beta-carotene 303 μg (3%)
Thiamine (vit. B1) 0.033 mg (3%)
Riboflavin (vit. B2) 0.021 mg (2%)
Niacin (vit. B3) 0.178 mg (1%)
Pantothenic acid (B5) 0.221 mg (4%)
Vitamin B6 0.045 mg (3%)
Choline 4.1 mg (1%)
Vitamin C 8.1 mg (10%)
ಕ್ಯಾಲ್ಸಿಯಂ 7 mg (1%)
ಕಬ್ಬಿಣ ಸತ್ವ 0.24 mg (2%)
ಮೆಗ್ನೇಸಿಯಂ 10 mg (3%)
ಮ್ಯಾಂಗನೀಸ್ 0.038 mg (2%)
ರಂಜಕ 11 mg (2%)
ಪೊಟಾಸಿಯಂ 112 mg (2%)
ಸೋಡಿಯಂ 1 mg (0%)
ಸತು 0.1 mg (1%)
Lycopene 4532 µg
Link to USDA Database entry
Percentages are roughly approximated
using US recommendations for adults.
Source: USDA Nutrient Database

ಇದರ ಸಿಪ್ಪೆಯನ್ನು ಉಪ್ಪಿನಕಾಯಿ ಮಾಡಲು ಉಪಯೋಗಿಸುತ್ತಾರೆ.

ಕಲ್ಲಂಗಡಿ ಹಣ್ಣಿನ ಕೆಲವು ವಿಶೇಷಗಳು[ಬದಲಾಯಿಸಿ]

ಆರೋಗ್ಯಕ್ಕೆ ಪೂರಕ ಕಲ್ಲಂಗಡಿ
  • ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
  • ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ
  • ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ
  • ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಇದು ಸಹಕಾರಿ
  • ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಸಮಸ್ಯೆ ನೀಗುತ್ತದೆ
  • ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
  • ಶಕ್ತಿವರ್ಧನೆಯಾಗಿ ಕೆಲಸ ಮಾಡುತ್ತದೆ
  • ಅಸ್ತಮಾ ರೋಗಗಿಳಿಗೆ ಪ್ರಯೋಜನಕಾರಿ
  • ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ
  • ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಸುತ್ತದೆ
  • ದೇಹಕ್ಕೆ ಅವಶ್ಯ ನೀರಿನಂಶ ಸಿಗುತ್ತದೆ
  • ಮೂಳೆ, ಸ್ನಾಯುಗಳು ಬಲಗೊಳ್ಳುತ್ತವೆ
  • ಕಲ್ಲಂಗಡಿ ಜ್ಯೂಸ್ ಕುಡಿದರೆ ವ್ಯಾಯಾಮದ ನಂತರ ಉಂಟಾಗುವ ಮೂಳೆ ನೋವು ನಿವಾರಣೆಯಾಗುತ್ತದೆ
  • ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ.
  • ಕಲ್ಲಂಗಡಿಯಲ್ಲಿ 92% ರಷ್ಟು ನೀರಿನಂಶ ತುಂಬಿದೆ. ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಕಲ್ಲಂಗಡಿ ಗರ್ಭಿಣಿಯರ ಆರೋಗ್ಯಕ್ಕೂ ಹಿತ.
ಕಲ್ಲಂಗಡಿ ಹೆಚ್ಚು ತಿಂದರೆ ಪರಿಣಾಮ
  • ಲೈಸೊಪೀನ್ ಅಂಶ ಹೆಚ್ಚಿರುವ ಕಲ್ಲಂಗಡಿಯ ‌ಅತಿ ಸೇವನೆ ವಾಂತಿ, ಬೇಧಿ, ವಾಕರಿಕೆ, ಅನಿಲ ಉತ್ಪತ್ತಿ, ಅಜೀರ್ಣಕ್ಕೆ ಕಾರಣ.
  • ಇದರಲ್ಲಿ ಪೊಟಾಷಿಯಂ ಅಂಶ ಅಧಿಕವಾಗಿರುವ ಕಾರಣ ಹೆಚ್ಚು ಸೇವನೆ ಹೃದಯ ಬಡಿತ

ಏರಿಳಿತದಂಥ ತೊಂದರೆಗೆ ದಾರಿ.

  • ಕೆಲವರಿಗೆ ಇದು ಅಲರ್ಜಿಕಾರಕ. ಕ್ಯಾರೆಟ್‌, ಸೌತೆಕಾಯಿ ಅಲರ್ಜಿ ಇದ್ದವರಿಗೆ ಕಲ್ಲಂಗಡಿ ಆಗುವುದಿಲ್ಲ.
  • ಕಲ್ಲಂಗಡಿ ಹಣ್ಣು ಮಿತವಾಗಿ ಬಳಸಿದ್ದಲ್ಲಿ ಆರೋಗ್ಯ ಪ್ರಯೋಜನ ಪಡೆಯಬಹುದು ಆದರೆ ಅತಿಯಾಗಿ ಸೇವನೆ ತ್ವಚೆಯ ಬಣ್ಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತೋರಿಸಿದೆ, ಲೈಕೋಪೆನಿಯಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.[೨]
  • ಕಲ್ಲಂಗಡಿ ಸೌಂದರ್ಯ ವರ್ಧಕ. ಇದರ ಸೇವನೆಯಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ ಸುಕ್ಕು ನಿಯಂತ್ರಣಕ್ಕೆ ಬರುತ್ತದೆ.
  • ಬೇಸಿಗೆಯಲ್ಲಿ ಚರ್ಮ ಒಣಗುವುದನ್ನು ತಡೆಯುತ್ತದೆ. ಇದರ ಜ್ಯೂಸ್ ಸೇವನೆಯಿಂದ ಚರ್ಮದ ಶುಷ್ಕತೆ ತಪ್ಪಿ ತಾಜಾ ಇರುವಂತೆ ನೋಡಿಕೊಳ್ಳುತ್ತದೆ.

(ಆಧಾರ:ಪ್ರಜಾವಾಣಿ ೨೨-೩-೨೦೧೬-ಗುಲ್ಮೊಹರ್)

ಭಾರಿ ತೂಕದ ಕಲ್ಲಂಗಡಿ
  • 159 ಕೆ.ಜಿ ತೂಕದ ಕಲ್ಲಂಗಡಿ ‘ವಿಶ್ವದ ಅತಿ ದೊಡ್ಡ ಕಲ್ಲಂಗಡಿ’ ಎಂದು ಗಿನ್ನಿಸ್ ದಾಖಲೆ ಸೇರಿದೆ. 2013ರಲ್ಲಿ ಅಮೆರಿಕದ ಟೆನ್ನಿಸಿನ್ ಎಂಬಲ್ಲಿ ಇದನ್ನು ಬೆಳೆಯಲಾಗಿದೆ­.(ಪ್ರಜಾವಾಣಿ ೨೨-೩-೨೦೧೬-ಗುಲ್ಮೊಹರ್)

ಛಾಯಾಂಕಣ[ಬದಲಾಯಿಸಿ]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Statistics from: Food And Agricultural Organization of United Nations: Economic And Social Department: The Statistical Division". UN Food and Agriculture Organization Corporate Statistical Database.
  2. "Watermelon Side Effects: ಈ ಜನರು ಕಲ್ಲಂಗಡಿ ತಿನ್ನಬಾರದು.. ತಿನ್ನುವುದರಿಂದ ಆಗುವ ದುಷ್ಪರಿಣಾಮಗಳು ಇವು –". kannadanews.today.