ವಿಷಯಕ್ಕೆ ಹೋಗು

ಆಭರಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಬರಿನ ಸರಪದಕಗಳು

ಆಭರಣಗಳು ಮನುಷ್ಯನ ಅಲಂಕರಣ ಸಾಧನಗಳಲ್ಲಿ ಒಂದು (ತೊಡುಗೆ); ಅಂಗರಾಗಗಳು (ನೋಡಿ- ಅಂಗರಾಗಗಳು,-ಅಂಗರಾಗಶಾಸ್ತ್ರ) ಮತ್ತು ಉಡುಗೆ ಉಳಿದ ಎರಡು ಸಾಧನಗಳು. ಇವು ವೈಯಕ್ತಿಕ ಶೃಂಗಾರಕ್ಕೆ ಧರಿಸಲಾಗುವ ಬ್ರೋಚುಗಳು, ಉಂಗುರಗಳು, ಕಂಠಹಾರಗಳು, ಕಿವಿಯೋಲೆಗಳು, ಲೋಲಕಗಳು ಮತ್ತು ಕಂಕಣಗಳಂತಹ ಸಣ್ಣ ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ರತ್ನಾಭರಣಗಳನ್ನು ಮೈ ಮೇಲೆ ಧರಿಸಬಹುದು ಅಥವಾ ಬಟ್ಟೆಗಳಿಗೆ ಲಗತ್ತಿಸಬಹುದು, ಮತ್ತು ಈ ಪದವು ಬಾಳಿಕೆ ಬರುವ ವಸ್ತುಗಳಿಗೆ ಸೀಮಿತವಾಗಿದೆ. ಅಮೂಲ್ಯ ಪದಾರ್ಥ, ಲೋಹ, ಮುತ್ತು, ರತ್ನಗಳಿಂದ ಕೂಡಿದ ಅಲಂಕರಣ ಸಾಧನ ಆಭರಣ, ಕವಡೆ, ಚಿಪ್ಪು ಅಮೂಲ್ಯ ಪದಾರ್ಥಗಳೆಂದೆನಿಸಿದ್ದ ಅತಿ ಪ್ರಾಚೀನ ಕಾಲದಲ್ಲಿ ಅವೇ ಆಭರಣದ ಮೂಲ ವಸ್ತುಗಳಾಗಿದ್ದುವು. ಆದರೆ ಚಿರಕಾಲ ಉಳಿದಿರುವುದು ಅಮೂಲ್ಯ ಲೋಹ, ಮುತ್ತು, ರತ್ನ ಮಾತ್ರ. ಆಭರಣ ಪುರಾತತ್ವ ಕಲಾಕೃತಿಯ ಅತ್ಯಂತ ಹಳೆಯ ಬಗೆಗಳಲ್ಲಿ ಒಂದಾಗಿದೆ – ನ್ಯಾಸೇರಿಯಸ್ ಚಿಪ್ಪುಗಳಿಂದ ತಯಾರಿಸಲ್ಪಟ್ಟ ೧೦೦,೦೦೦ ವರ್ಷ ಹಳೆಯ ಮಣಿಗಳು ಪರಿಚಿತವಿರುವ ಅತ್ಯಂತ ಹಳೆಯ ರತ್ನಾಭರಣಗಳು ಎಂದು ನಂಬಲಾಗಿದೆ.[] ಆಭರಣ ರಚನೆ ಮತ್ತು ಧಾರಣೆಯಲ್ಲಿನ ಉದ್ದೇಶಗಳು ಸ್ಥೂಲವಾಗಿ ಮೂರು-ಸೌಂದರ್ಯ ವರ್ಧನೆ, ಸ್ವಪ್ರತಿಷ್ಠೆಯ ಪ್ರದರ್ಶನ, ಸಂಪತ್ತಿನ ಸಂಚಯನ. ಇಲ್ಲೆಲ್ಲ ಸಮಕಾಲೀನ ಸಾಮಾಜಿಕ ಮೌಲ್ಯಗಳ ಮತ್ತು ವ್ಯಕ್ತಿಯ ಮಾನಸಿಕ ಸ್ಥಿತಿಯ ಪಾತ್ರ ಹಿರಿದು. ಆಭರಣಗಳು ಒಂದು ಜನಾಂಗದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಪ್ರತೀಕಗಳು. ಆದ್ದರಿಂದ ಆಭರಣಗಳ ರೂಪರೇಖೆ, ಆ ದೇಶದಲ್ಲಿ ಸಿಗಬಹುದಾದ ಖನಿಜ ಮತ್ತು ಲೋಹ ಸಂಪತ್ತು, ದೇಶದ ಹವಾಗುಣ ಮತ್ತು ಅಲ್ಲಿನ ಜನ ಧರಿಸುವ ಉಡುಪನ್ನು ಅವಲಂಬಿಸಿದೆ. ಧಾರ್ಮಿಕ ನಂಬಿಕೆಗಳು, ರಾಷ್ಟ್ರೀಯ ಪದ್ಧತಿಗಳು ಮತ್ತು ಸಂಸ್ಕಾರ ಶಾಸ್ತ್ರದ ಪ್ರಭಾವ ಕೆಲವು ಆಭರಣಗಳಿಗೆ ವಿಶೇಷ ಮಹತ್ವವನ್ನು ತಂದಿವೆ.

ಪ್ರಪಂಚದ ಇತಿಹಾಸದಲ್ಲಿ ಆಭರಣಗಳ ಮೂಲವನ್ನು ಕಂಡುಹಿಡಿಯುವುದು ಕಷ್ಟ. ಇವುಗಳ ಬಳಕೆ ಶಿಲಾಯುಗದಲ್ಲೂ ಇತ್ತು. ಕಂಚಿನ ಯುಗಕ್ಕೂ ಮೊದಲು ಚಿನ್ನದ ಒಡವೆಗಳು ಪ್ರಚಲಿತವಾಗಿದ್ದುವು ಎಂದು ತಿಳಿದಿದೆ. ಪ್ರಾಚೀನ ಭಾರತೀಯ ಮಹಾಕಾವ್ಯಗಳಲ್ಲಿ ವರ್ಣಿತವಾಗಿರುವ ಆಭರಣಗಳು ಇಂದಿಗೂ ವಿಶೇಷ ಬದಲಾವಣೆ ಹೊಂದದೆ ಪ್ರಚಲಿತವಾಗಿರುವುದನ್ನು ಗಮನಿಸಬಹುದು. ಇದರಿಂದ ಆಭರಣಗಳ ಪ್ರಾಚೀನತೆ ತಿಳಿಯುತ್ತದೆ. ಸುಗ್ರೀವನಿಂದ ಶ್ರೀರಾಮಚಂದ್ರನಿಗೆ ದೊರೆತ ಸೀತಾದೇವಿ ತೊಟ್ಟಿದ್ದ ಕಾಲುಗೆಜ್ಜೆ ಕಡಗ, ರಾಮ ಸೀತೆಗೆ ಕಳಿಸಿದ ಪ್ರತೀಕ ಚೂಡಾಮಣಿ, ಸೀತೆ ಹನುಮಂತನಿಗೆ ಬಹುಮಾನ ನೀಡಿದ ಕಂಠಾಭರಣ ಮುಂತಾದ ಆಭರಣಗಳು ಇನ್ನೂ ಭಾರತದಲ್ಲಿ ಅವೇ ಹೆಸರಿನಿಂದ ಪ್ರಚಲಿತವಿದೆ. ಸೌಂದರ್ಯಕ್ಕಾಗಿ ಹರಳುಗಳನ್ನು ಚಿನ್ನದಲ್ಲಿ ಕೂರಿಸಿ ಮಾಡುವ ಕಲೆಯನ್ನು ಭಾರತ ಅರಿತಿತ್ತೆಂದು ಶಮಂತಕಮಣಿಯ ಕಥೆಯಿಂದ ತಿಳಿದುಕೊಳ್ಳಬಹುದು. 2000 ವರ್ಷಕ್ಕೂ ಹಿಂದೆ ರೂಪುಗೊಂಡ ಮನುಧರ್ಮಶಾಸ್ತ್ರದಲ್ಲಿಯೂ ಆಭರಣಕಲೆ ವಿವರಿಸಲ್ಪಟ್ಟಿದೆಯಲ್ಲದೆ ಕೆಟ್ಟ ಕೈಕೆಲಸ ಅಥವಾ ಬಂಗಾರವನ್ನು ಮಿಶ್ರಗೊಳಿಸುವ ನೀತಿ ಬಾಹಿರ ಕೆಲಸಗಳಿಗೆ ವಿಧಿಸಲ್ಪಡುತ್ತಿದ್ದ ದಂಡವನ್ನೂ ನಮೂದಿಸಲಾಗಿದೆ. ಮೃಚ್ಛಕಟಿಕ ಎಂಬ ಸಂಸ್ಕøತ ನಾಟಕದಲ್ಲಿ ಆಭರಣ ಕಲೆಯ ಕೌಶಲವನ್ನು ಕಾಣಬಹುದು. ಅಮೂಲ್ಯ ಹರಳು, ಮುತ್ತುಗಳನ್ನು ಅಳವಡಿಸಿಕೊಂಡು ಚಿನ್ನದ ಮಣಿಗಳನ್ನು ಬಣ್ಣಬಣ್ಣದ ದಾರಗಳಲ್ಲಿ ಹೆಣೆದು ತಯಾರಿಸುವ ರೀತಿಗಳಲ್ಲದೆ ಹವಳ ಚಿಪ್ಪುಗಳನ್ನು ಚಿನ್ನದೊಂದಿಗೆ ಅಳವಡಿಸಿ ಸುಂದರ ಆಭರಣಗಳನ್ನಾಗಿ ಪರಿವರ್ತಿಸುವ ವಿಧಾನ ಹೇಳಲಾಗಿದೆ. ಇಂದು ನಾವು ಧರಿಸುವ ವಿವಿಧ ನಮೂನೆಯ ಕಂಠಹಾರಗಳು, ತೋಳಬಂದಿಗಳು, ಕೈಬಳೆಗಳು, ಕಾಲ್‍ಗೊಲಸುಗಳು ಶಿರಾಭರಣಗಳು, ಮಕುಟಗಳು, ಉಂಗುರಗಳು, ಮೂಗುತಿಗಳು, ಕಡಗಗಳು, ಒಂಟಿಗಳು ಮುಂತಾದುವುಗಳಿಗೂ, ಅಜಂತಾ ಎಲ್ಲೋರಾಗಳ ಚಿತ್ರಕಲೆಗಳಲ್ಲಿ ಸಾಂಚಿ, ಬರಹೂತ್, ಅಮರಾವತಿ, ಒರಿಸ್ಸಾ, ಹಳೆಬೀಡು, ಬೇಲೂರು ಮುಂತಾದಲ್ಲಿನ ಶಿಲ್ಪಗಳಲ್ಲಿ ತೋರುವ ಇವೇ ಆಭರಣಗಳಿಗೂ ಹೊಂದಾಣಿಕೆ ಕಂಡುಬರುತ್ತದೆ. ಭಾಷೆ ಮತ್ತು ಭೌಗೋಳಿಕ ರಾಜಕೀಯ ಕಾರಣಗಳಿಗಾಗಿ ಭಾರತ ಭಿನ್ನ ರಾಜ್ಯಗಳಾಗಿ ವಿಭಾಗಿಸಲ್ಪಟ್ಟಿದ್ದರೂ ಅಖಿಲ ಭಾರತೀಯ ಮಹಿಳೆಯರು ತೊಡುವ ಒಡವೆಗಳಲ್ಲಿ ಮಾತ್ರ ವಿಶೇಷ ಸಾಮ್ಯ ಕಂಡುಬರುವುದು.

Necklace with Shiva's family; late 19th century; gold inlaid with rubies, a diamond Rudraksha beads (elaeo carpus seeds) and silver back plate on clasp; overall: 38.1 centimetres (15.0 in); Los Angeles County Museum of Art (Los Angeles, US)

ಮಾನವರು ರತ್ನಾಭರಣಗಳನ್ನು ಹಲವಾರು ಭಿನ್ನ ಕಾರಣಗಳಿಗಾಗಿ ಬಳಸಿದ್ದಾರೆ: ಕ್ರಿಯಾತ್ಮಕ ಕಾರಣಗಳು, ಉದಾ. ಸಾಮಾನ್ಯವಾಗಿ ಉಡುಪು ಅಥವಾ ಕೂದಲನ್ನು ಅದರ ಜಾಗದಲ್ಲಿ ಭದ್ರಪಡಿಸಲು, ಅಥವಾ ಸಮಯ ಹೇಳಲು (ಕೈಗಡಿಯಾರದ ವಿಷಯದಲ್ಲಿ); ಸಾಮಾಜಿಕ ಸ್ಥಾನಮಾನದ ಮತ್ತು ವೈಯಕ್ತಿಕ ಸ್ಥಾನಮಾನದ ಸೂಚಕವಾಗಿ, ಉದಾ. ಮದುವೆ ಉಂಗುರ; ಯಾವುದೋ ರೂಪದ ಸದಸ್ಯತ್ವದ ಸೂಚಕವಾಗಿ, ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ; ಮಾಂತ್ರಿಕ ರಕ್ಷಣೆ ಒದಗಿಸಲು (ತಾಯಿತಗಳ ರೂಪದಲ್ಲಿ); ಕಲಾತ್ಮಕ ಪ್ರದರ್ಶನವಾಗಿ; ವೈಯಕ್ತಿಕ ಅರ್ಥದ ಸಂಕೇತವಾಗಿ, ಉದಾ. ಪ್ರೀತಿ, ಶೋಕಾಚರಣೆ, ಅಥವಾ ಅದೃಷ್ಟ.

ಆಭರಣದಲ್ಲಿನ ವಿಧ/ಪ್ರಕಾರಗಳು

[ಬದಲಾಯಿಸಿ]

1. ಶಿರಭೂಷಣಗಳು-ಬೈತಲೆಸರ, ಬಾಸಿಂಗ, ಬೈತಲೆ ಪದಕ, ನಾಗರ ರಾಗಟೆ, ಕೇದಿಗೆ, ಸಂಪಿಗೆ, ಚೌರಿ, ರೋಜಾ ಹೂ, ಮೊಗ್ಗಿನ ಮಾಲೆ, ಮುಳ್ಳು, ಮೊಗ್ಗಿನ ಜಡೆ, ಗಿಳಿ ಹರಳು ಬಂಗಾರ, ಹರಳಲಂಕಾರ, ಗೊಂಡೆ ಹೂ ಇತ್ಯಾದಿ. 2. ಕರ್ಣಭೂಷಣಗಳು-ಓಲೆ, ಕಮಲಪುಷ್ಪ, ಬುಗುಡಿ, ಗುಬ್ಬಿ, ಬಳೆ, ಕೊಪ್ಪು, ಕೆನ್ನೆ ಸರಪಳಿ ಇತ್ಯಾದಿ. 3. ನಾಸಿಕ ಭೂಷಣಗಳು-ಮೂಗುತಿ, ಬುಲಾಕು, ಇತ್ಯಾದಿ. 4. ಕಂಠಭೂಷಣಗಳು-ತಾಳಿ, ಚಂದ್ರಹಾರ, ಮೋಹನಮಾಲೆ ಕಂಠೀಸರ, ಪುತ್ಥಳಿಸರ, ಕಾಸಿನಸರ, ಗುಂಡಿನಸರ, ಬ್ರಹ್ಮಮುಡಿಸರ, ಕೋಪಚೇನು, ಬೋರಮಾಳು, ನೆಲ್ಲಿಕಾಯಿಸರ, ಗೋದಿಸರ, ಜೋಳದಸರ, ಮಾವಿನಕಾಯಿಸರ, ಮಲ್ಲಿಗೆಮೊಗ್ಗಿನ ಮಾಲೆ ಪದಕ ಇತ್ಯಾದಿ. 5. ಕರಭೂಷಣಗಳು-ಕಡಗ, ಗೋಟು, ಪಾಟಲಿ, ತೋಡೆ, ಬಳೆ, ತೋಳಬಂದಿ, ವಂಕಿ, ನಾಗಮುರಿಗೆ, ಉಂಗುರ, ಸರಪಳಿ, ಸರಿಗೆ, ಅಸಲಿ ಇತ್ಯಾದಿ. 6. ಕಟಿಭೂಷಣಗಳು-ಡಾಬು, ವಡ್ಯಾಣ, ಮೇಖಲೆ ಇತ್ಯಾದಿ. 7. ಪಾದಬೂಷಣಗಳು-ಗೆಜ್ಜೆ, ಪೈಜಣ, ರುಳೀ, ಕಡಗ, ಸರಪಳಿ, ಕಾಲುಂಗುರ, ಇತ್ಯಾದಿ. ಈ ಆಭರಣಗಳಲ್ಲಿ ಪ್ರದರ್ಶಿತವಾಗಿರುವ ಸೂಕ್ಷ್ಮ ಕುಸುರಿ ಕೆಲಸ, ಕಲಾಪ್ರಿಯತೆ, ವರ್ಣಜೋಡಣೆ, ಮೆರುಗು ಬೆರಗು ಹುಟ್ಟಿಸುವಂತಿವೆ. ಅತ್ಯಂತ ಹಳೆಯ ಒಂದು ಕುಶಲ ಕೈಗಾರಿಕೆಯನ್ನು ಕಾಬುಲ್ ಕಣಿವೆಯಲ್ಲಿ ಜಲಾಲಾಬಾದ್‍ನಲ್ಲಿರುವ ಬುದ್ಧ ದೇವಸ್ಥಾನದಲ್ಲಿ ಕಾಣಬಹುದು. ಕೆಂಪುಗಳನ್ನು ಕೂರಿಸಿದ ಒಂದು ಚಿನ್ನದ ಸ್ಮøತಿಭರಣಿ ಅಲ್ಲಿ ಸಿಕ್ಕಿತು. ಸುಟ್ಟ ಮುತ್ತುಗಳು ಹರಳುಗಳು, ವಿವಿಧ ಮಣಿಗಳು ಚಿಕ್ಕಪುಟ್ಟ ಆಭರಣಗಳು ಅದರಲ್ಲಿದ್ದುವು. ಅದರಲ್ಲಿ ದೊರೆತ ನಾಣ್ಯಗಳಿಂದ ಆ ವಸ್ತುಗಳು ಕ್ರಿ.ಪೂ. ಒಂದನೆಯ ಶತಮಾನಕ್ಕೆ ಸೇರಿದ್ದುವೆಂದು ತಿಳಿಯಿತು.

ಉಪಯೋಗ

[ಬದಲಾಯಿಸಿ]

ನಾನಾ ತರದ ಬಣ್ಣಬಣ್ಣಗಳ ಹರಳುಗಳನ್ನು ಆಭರಣಗಳಲ್ಲಿ ತಾಂತ್ರಿಕ ಉದ್ದೇಶಗಳಿಗಾಗಿ ಬಳಸುವುದು ರೂಢಿಯಲ್ಲಿದ್ದರೂ ಭಾರತೀಯರು ಆಭರಣಗಳ ರೂಪದಲ್ಲಿ ಅಮೂಲ್ಯ ಲೋಹಗಳಾದ ಚಿನ್ನ-ಬೆಳ್ಳಿಗಳನ್ನು ಆಸ್ತಿಯಾಗಿ ಕೂಡಿಡಲು ಪಡೆಯುವುದೇ ಹೆಚ್ಚು. ಭಾರತೀಯ ಮಹಿಳೆ ಒಡವೆಗಳಿಂದ ಅಲಂಕರಿಸಿಕೊಂಡು ತನ್ನ ಪತಿಯನ್ನು ಸೌಂದರ್ಯದಿಂದ ಸಂತುಷ್ಟಗೊಳಿಸುವುದು ಧರ್ಮವೆಂದು ಭಾವಿಸುತ್ತಾಳೆ. ಹಿಂದೂ ವಿವಾಹಗಳಲ್ಲಿ ಚಿನ್ನದ ಪಾತ್ರ ಹಿರಿದು. ಚಿನ್ನದಲ್ಲಿ ತಯಾರಿಸಿದ ಮಾಂಗಲ್ಯದ ತಾಳಿ ವಧೂವರರ ಜೀವನ ಬಂಧನದ ಪವಿತ್ರ ಸಂಕೇತ. ವಧುವಿಗೆ ಆಕೆಯ ತಂದೆಯಿಂದ ಬಳುವಳಿಯಾಗಿ ದೊರೆತ ಚಿನ್ನ, ವಿವಾಹ ಕಾಲದಲ್ಲಿ ಮತ್ತು ಅನಂತರ ಪತಿಯಿಂದ ಮತ್ತು ಬಂಧುಬಳಗದವರಿಂದ ಕಾಲಕಾಲಕ್ಕೆ ದೊರೆತ ಒಡವೆಗಳು ಸ್ತ್ರೀಧನ. ಆ ಒಡವೆಗಳಿಗೆ ಆಕೆ ಒಡತಿ. ಮಹಿಳೆ ಗಂಡನ ಮನೆಯಿಂದ ಹಿಂತಿರುಗುವ ಪ್ರಸಂಗ ಬಂದರೆ ಆ ಒಡವೆಗಳೇ ಆಕೆಗೆ ಜೀವನಾಧಾರ. ಮಡದಿ ಮಕ್ಕಳಿಗೆ ಆಭರಣಗಳನ್ನು ಮಾಡಿಸಿಕೊಡುವಾಗ ಪುರುಷನ ಉದ್ದೇಶ ಬಹುಶ: ಪ್ರಸಂಗ ಒದಗಿದಾಗ ಅವು ಉಪಯೋಗಕ್ಕೆ ಬರುವುವೆಂದಿರಬಹುದು. ಹಿಂದಿನ ಕಾಲದ ಹೆಚ್ಚಿನ ಒಡವೆಗಳು ವಿಶೇಷ ನಯನಾಜೂಕನ್ನು ಪಡೆಯದೆ ಸರಳ ಮತ್ತು ತೂಕವುಳ್ಳದ್ದಾಗಿದ್ದುವು. ಹಣ ಬೇಕಿದ್ದಾಗ ತತ್‍ಕ್ಷಣ ಅವನ್ನು ಮುರಿದು ಹಣಪಡೆದು ಹಣ ಮತ್ತೆ ದೊರಕಿದಾಗ ಕೂಡಲೇ ಆ ಒಡವೆಗಳನ್ನು ಮಾಡಿಸುವುದು ಸುಲಭವಾಗುತ್ತಿತ್ತು. ಸರಳ ಒಡವೆಗಳಿಗೆ ಕೂಲಿ ಸಮಯ ಕಡಿಮೆ ಬೇಕಾಗುತ್ತಿದ್ದುದರಿಂದ ಹೆಚ್ಚು ಜನ ಗಟ್ಟಿ ಬಂಗಾರದ ಸರಳ ಒಡವೆಗಳನ್ನು ಮಾಡಿಸುತ್ತಿದ್ದರು. ಇಂಥ ಒಡವೆಗಳಲ್ಲಿ ಗೋಟು, ಪಾಟಲಿ, ಪಟ್ಟೆ, ಅಸಲಿ ಸರಿಗೆ ಪುತ್ಥಳಿ ಸರ ಇವು ಮುಖ್ಯ. ನೋಟುಗಳಿಲ್ಲದ ಕಾಲದಲ್ಲಿ ಫಸಲು ಮಾರಿ ಬಂದ ಬೆಳ್ಳಿಯ ರೂಪಾಯಿಗಳ ಒಡವೆಗಳನ್ನು ಮಾಡಿಸಿ ಕ್ಷಾಮವಿದ್ದಾಗ ಅವುಗಳನ್ನು ಮುರಿಸಿಬಿಡುವುದು ಹಳ್ಳಿಯ ರೈತನಿಗೆ, ಕೂಲಿ ಮಾಡುವ ಮಹಿಳೆಯರಿಗೆ ಸಾಧಾರಣ ಸಂಗತಿ. ಆ ಒಡವೆಗಳೇ ಅವರಿಗೆ ಭದ್ರ ಸುರಕ್ಷಿತ ಬ್ಯಾಂಕುಗಳು, ಜಮೀನು ಕೊಳ್ಳುವಾಗ ಹಣ ಒದಗಿಸಲು, ಎತ್ತುಗಳನ್ನು ಕೊಳ್ಳುವಾಗ, ಅಡವಿಡಲು, ಮದುವೆ ಮತ್ತು ಕರ್ಮಾಂತರಗಳಿಗೆ ಹಣ ಬೇಕಿದ್ದಾಗ ಉಪಯೋಗಿಸಿಕೊಳ್ಳಲು ಒಡವೆಗಳು ಆಪದ್ಧನವಾಗಿ ಉಪಯುಕ್ತ. ಆದ್ದರಿಂದ ಭಾರತೀಯರ ಜೀವನಕ್ಕೆ ಆಭರಣಗಳು ಅತ್ಯಾವಶ್ಯಕ. ಜೀವನದ ಒಂದು ಭಾಗವೇ ಬಂಗಾರ, ಬೆಳ್ಳಿ ಎಂದು ಧಾರಾಳವಾಗಿ ಹೇಳಬಹುದು.

ವೈಶಿಷ್ಟ್ಯ

[ಬದಲಾಯಿಸಿ]

ಆಭರಣಗಳ ತಯಾರಿಕೆಯಲ್ಲಿ ಭಾರತೀಯ ವೈಶಿಷ್ಟ್ಯವನ್ನು ಪ್ರಪಂಚದ ವೈಶಿಷ್ಟ್ಯದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಭಾರತದಲ್ಲಿಯೂ ಪ್ರಾದೇಶಿಕವಾಗಿ ವಿವಿಧ ಕೌಶಲಗಳು ವಿಕಾಸಗೊಂಡಿವೆ. ಹಿಂದೂ ಪುರಾಣಗಳಲ್ಲಿ ಬರುವ ಬಂಗಾರದ ಒಡವೆಗಳನ್ನು ತಯಾರಿಸುವ ಕಲೆ ದಕ್ಷಿಣ ಭಾರತಕ್ಕಿದ್ದರೆ, ತೆಳುವಾದ ಬೆಳ್ಳಿಯ ಕೆತ್ತನೆಯ ಕೆಲಸ (ಫಿಲಿಗ್ರಿವರ್ಕ್) ಮಾಡುವುದರಲ್ಲಿ ಕಾಶ್ಮೀರ, ಒರಿಸ್ಸಾದ ಕಟಕ್, ಬಂಗಾಲ, ಮತ್ತು ಆಂಧ್ರದ ಅಕ್ಕಸಾಲಿಗರು ಪ್ರಾವೀಣ್ಯ ಪಡೆದಿದ್ದಾರೆ. ಈ ಕೆತ್ತನೆಯ ಕೌಶಲ ಕಂಡುಬರುವ ನಮೂನೆಗಳು : ನವಿಲು, ನಾನಾ ಪ್ರಕಾರದ ಹೂಗಳು, ವಿಮಾನ, ಮೀನು, ಪಕ್ಷಿ, ಎಲೆ, ಅತ್ತರದಾನಿ, ವಿವಿಧಾಕಾರದ ತಟ್ಟೆಗಳು, ಪನ್ನೀರದಾನಿ, ಹೂಜಿ, ದುಂಡು, ಅಂಡಾಕಾರದ ಬಾದಾಮಿ ಆಕಾರದ ಮಾವಿನಕಾಯಿ ನಮೂನೆಯ ಹಲವು ಬಗೆಯ ಕುಂಕುಮ ಅಂಗಚೂರ್ಣ ಡಬ್ಬಿಗಳು; ನಾನಾ ಪ್ರಕಾರದ ಹೂದಾನಿಗಳು, ತಾರೀಕು ಪಟ್ಟಿ ಪೀಠ, ದೀಪದ ಪೀಠ, ಪರಿಚಯ ಚೀಟಿ (ವಿಸಿಟಿಂಗ್ ಕಾರ್ಡ್), ಕಡ್ಡಿ ಪೊಟ್ಟಣ, ಸಿಗರೇಟು, ಮತ್ತು ಇಸ್ಪೀಟುಗಳ ಕೇಸುಗಳು, ಬೂದಿ ಕರಂಡಗಳು, ಶೇರವಾನಿ, ಶರ್ಟು ಕೋಟುಗಳ ಗುಂಡಿಗಳು, ವಿವಿಧ ಚಿತ್ರವಿಚಿತ್ರ ಬ್ರೋಚುಗಳು, ಎಲೆ ಅಡಿಕೆ ಡಬ್ಬಗಳು (ಪಾನದಾನಿ) ಬಳೆಗಳು, ಲೋಲಕ್ಕುಗಳು, ಜುಮುಕಿ, ಪೆಂಡೆಂಟು ಪದಕಗಳು, ಹೇರ್‍ಪಿನ್ ಮೊದಲಾದ ನಾನಾ ಪ್ರಕಾರದ ಮುಡಿ ಭೂಷಣದ ಮಸ್ತುಗಳು ಇತ್ಯಾದಿ. ಹೀಗೆ ಕಾಲಕ್ಕನುಸಾರವಾಗಿ ಅವಶ್ಯಕತೆಗಳನ್ನು ಪೂರೈಸುವ ಕಲೆ ಪರಂಪರೆಯನ್ನು ಉಳಿಸಿಕೊಂಡು ಅಭಿವೃದ್ದಿ ಮಾರ್ಗದಲ್ಲಿಯೇ ನಡೆದಿದೆ. ಬಂಗಾರದ ಆಭರಣಗಳನ್ನು ಗಾಜುಲೇಪನದಿಂದ (ಎನಾಮಲ್) ಅಧಿಕ ಸೌಂದರ್ಯಗೊಳಿಸುವ ಕಲೆ ಭಾರತದಲ್ಲಿ ಪರಿಪೂರ್ಣ ಹೊಂದಿದೆ. ಈ ಕಲೆಯಲ್ಲಿ ರಾಜಾಸ್ಥಾನದ ಜಪೂರಿನ ಅಕ್ಕಸಾಲಿಗರು ಅತ್ಯಂತ ನಿಪುಣರಾಗಿದ್ದಾರೆ. ಆಭರಣದ ಆಕಾರವನ್ನು ಚಿನ್ನದಲ್ಲಿ ಕೆತ್ತಿ ಪಾರದರ್ಶಕ ಗಾಜು ಲೇಪನದಿಂದ ಹೊಳೆಯುವಂತೆ ತುಂಬುತ್ತಾರೆ.

ಅಮೂಲ್ಯವಾದ ಹರಳುಗಳನ್ನು ಚಿನ್ನದಲ್ಲಿ ಕೂರಿಸುವ ಕಲೆಯಲ್ಲಿ ಉತ್ತರ ಪ್ರದೇಶದ ಆಗ್ರಾ ಪಟ್ಟಣವೂ ಉನ್ನತಸ್ಥಾನ ಪಡಿದಿದೆ. 1952ರಲ್ಲಿ ಕೊಲಂಬೋಪ್ಲ್ಯಾನ್ ಪ್ರದರ್ಶನವಾದಾಗ ಅಲ್ಲಿ ಆಗ್ರಾ ನಗರದ ಅಕ್ಕಸಾಲಿಗರು ಭಾರತದ ಹೆಮ್ಮೆ ಎಂಬ ಹೆಸರಿನಿಂದ ಅಲಂಕಾರಿಕ ಜಾಡಿಯೊಂದನ್ನು ತಯಾರಿಸಿ ಪ್ರದರ್ಶಿಸಿದ್ದರು. ಅದು ಸಾವಿರಾರು ಜನರ ಮೆಚ್ಚುಗೆ ಗಳಿಸಿ ಭಾರತದ ಅಕ್ಕಸಾಲಿಗರ ಕುಶಲ ಕೈಗಾರಿಕೆಯ ಶ್ರೇಷ್ಠತೆಯನ್ನು ತೋರಿಸಿಕೊಟ್ಟಿತು. ಹಿತ್ತಾಳೆ ಮತ್ತು ತಾಮ್ರ ಮಿಶ್ರಿತ ಕಂಠಹಾರ ಮಣಿಪುರದ ಕಲಾವಿದರ ಮಾದರಿ ಈ ಮಿಶ್ರಣದ ಒಡವೆಗಳು ಕಪ್ಪು ಅಥವಾ ಹಸಿರು ಆಗದಿರುವುದು ಅವುಗಳ ವೈಶಿಷ್ಟ್ಯ. ಭಾರತದ ಯಾವುದೇ ಸಮಾಜ ಅಥವಾ ನಾಗರಿಕತೆಯನ್ನು ಪ್ರತಿಬಿಂಬಿಸುವ ಹಳೆಯ ಮಾದರಿಯ ಹೆಚ್ಚಿನ ಆಭರಣಗಳೆಲ್ಲವೂ ಯಾವ ಲೋಹದಲ್ಲಿ ತಯಾರಿಸಿದ್ದರೂ ಅವು ಬಹಳ ತೂಕ ಉಳ್ಳದ್ದಾಗಿವೆ. ರಾಜಾಸ್ಥಾನ, ಪಂಜಾಬ್, ಅಸ್ಸಾಂಗಳಲ್ಲಿ ಬಳಸುವ ಕೆಲವು ಆಭರಣಗಳನ್ನು ನೋಡಿದರೆ ಆ ಒಡವೆಗಳ ಭಾರದಿಂದಲಾದರೂ ಸ್ತ್ರೀ ತಗ್ಗಿ ಬಗ್ಗಿ ನಡೆಯಲಿ ಎಂಬ ಒಂದು ಭಾವ ಆ ಸಮಾಜಕ್ಕಿದ್ದಿರಬಹುದೆ ಎನ್ನಿಸುವುದು. ಭಾರವಾದ ಒಡವೆಗಳನ್ನು ತೊಡುವುರಲ್ಲಿ ಕರ್ನಾಟಕದ ಮಹಿಳೆಯೂ ಹಿಂದಿರಲಿಲ್ಲ ಎಂಬುದಕ್ಕೆ

ಆರು ಸೇರಿನ ಸರಿಗಿ ಅರಗಿಲ್ಲದ ಕಟ್ಟಾಣಿ ನತ್ತು ಬೇಡಿದರ, ಬೇಡಿದರ ನಗುವಂಥ ರಾಯನ ನಿಂತು ಬೇಡಿನ ಶಿವನಲ್ಲಿ '

ಎಂದು ಗರತಿ ಪದ ಹೇಳುತ್ತಾಳೆ.

ಅರಗಿಲ್ಲದ ಅಚ್ಚ ಬಂಗಾರದ ಚಿನ್ನವನ್ನು ಭಾರತೀಯರು ಹೆಚ್ಚಾಗಿ ಬಯಸುತ್ತಾರೆ ಎಂಬುದನ್ನು ಮೇಲಿನ ಪದದಿಂದಲೂ ತಿಳಿಯಬಹುದು. ಚಿನ್ನದ ಬೆಲೆ ಅತಿಯಾಗಿ ಬೆಳೆದು ಭಾರವಾದ ಒಡವೆಗಳನ್ನು ಮಾಡಿಸುವುದು ದುರ್ಲಭವಾಗಿದ್ದರೂ ಆ ಹಳೆಯ ನಮೂನೆಗಳನ್ನು ಆಕರ್ಷಕ ರೀತಿಯಲ್ಲಿ ಮತ್ತು ಕಡಿಮೆ ಚಿನ್ನದಲ್ಲಿ ಮಾಡುವ ಕಲೆಯಲ್ಲಿಯೂ ಭಾರತದ ಅಕಾಸ್ಕಾಲಿಗರು ಅತ್ಯಂತ ನಿಪುಣರಿರುವರು.

ಪೂರ್ವದೇಶಗಳಲ್ಲಿ ನಾಜೂಕಿನ ಅಭರಣಗಳನ್ನು ಕಲಾತ್ಮಕವಾಗಿ ಚೀನದ ಕುಶಲ ಕರ್ಮಿಗಳು ತಯಾರಿಸುತ್ತಾರೆ. ಬಂಗಾರದ ಭಾರವಾದ ಒಡವೆಗಳು ಚೀನದಲ್ಲಿ ಸಹ ಬಳಕೆಯಲ್ಲಿದ್ದರೂ ಅಲ್ಲಿ ಹೆಚ್ಚಾಗಿ ಬೆಳ್ಳಿಯ ಆಭರಣವೇ ಕಂಡುಬರುತ್ತದೆ. ಆಭರಣಗಳಿಗೆ ಬಳಸುವ ಹರಳುಗಳನ್ನು ಕೆತ್ತುವ ಬದಲಾಗಿ ಮೆರುಗು ನೀಡುವುದು (ಪಾಲಿಶ್) ಚೀನೀ ಕುಶಲ ಕೈಗಾರಿಕೆಯ ವೈಶಿಷ್ಟ್ಯ. ಅವರ ಆಭರಣಗಳು ಪ್ರಾಣಿಗಳ ಆಕಾರ ಸಂಸ್ಕøತಿ ಮತ್ತು ಕಲೆಯನ್ನು ಪ್ರತಿಬಿಂಬಿಸುತ್ತವೆ. ಅಮೂಲ್ಯ ಹರಳುಗಳನ್ನು ಕೂಡಿಸುವ ಭಾರತದ ವಿಧಾನವನ್ನು ಚೀನ ಅನುಸರಿಸುತ್ತದೆ. ನೇಪಾಳ, ಬರ್ಮಾ, ಸಯಾಂ ದೇಶಗಳ ಆಭರಣಗಳಲ್ಲಿ ಅನೇಕವು ಚೀನದ ಆಭರಣಗಳನ್ನೇ ಹೋಲುತ್ತವೆ. ವಜ್ರ ಮತ್ತು ಚಿನ್ನದ ಮಣಿಗಳಿಂದ ಕೂಡಿದ ಅನೇಕ ಎಳೆಗಳುಳ್ಳ ಕಂಠಾಭರಣ ಬರ್ಮಾದ ವೈಶಿಷ್ಟ್ಯ. ಬೇರ್ಪಟ್ಟಿರುವುದರಿಂದಲೂ ಪ್ರಕೃತಿ ಸಾಧನಗಳು ಅಲ್ಪವಿರುವುದರಿಂದ ಆಭರಣಗಳ ಪ್ರಭಾವ ಅಲ್ಲಿ ಹರಡಿಲ್ಲ.

ಯೂರೋಪಿನಲ್ಲಿ ಆಭರಣಗಳು

[ಬದಲಾಯಿಸಿ]

ಚಿನ್ನದ ವಿವಿಧ ರೀತಿಯ ಬ್ರೋಚುಗಳು, ಕೆಂಪು ಹರಳುಗಳನ್ನು ಲೋಹದಲ್ಲಿ ಕೂರಿಸುವಿಕೆ, ಗಾಜುಲೇಪನ ಮಾದರಿಯ ಕೌಶಲ ಯೂರೋಪಿಗೆ ಇಟಲಿಯ ಕೊಡುಗೆ. 3 ರಿಂದ 6 ಶತಮಾನದವರೆಗೆ ಈ ಕಲೆ ಯೂರೋಪಿನಲ್ಲಿ ಬಳಕೆಯಲ್ಲಿತ್ತು.

ಆ ಕಾಲದಲ್ಲಿ ಸತ್ತವರ ಜೊತೆಗೆ ತಮ್ಮ ಅಮೂಲ್ಯವಾದ ವಸ್ತುಗಳನ್ನು ಹೂತಿಡುವ ಪದ್ಧತಿ ಇದ್ದುದರಿಂದ ಯೂರೋಪಿನ ಕೆಲವು ವಸ್ತುಸಂಗ್ರಹಾಲಯಗಳಲ್ಲಿ ಈಗಲೂ ಕೆಲವು ಮಾದರಿಗಳನ್ನು ಕಾಣಲು ಸಾಧ್ಯ. ರೋಮ್ ಸಾರ್ವಭೌಮತ್ವದಲ್ಲಿ ಈ ಕಲೆ ಊರ್ಜಿತಾವಸ್ಥೆಗೆ ಬಂದು ಚಕ್ರಾಧಿಪತ್ಯ ಅಳಿದ ಮೇಲೂ ಕಲೆ ಪರಂಪರಾಗತವಾಗಿ ಉಳಿದು ಬಂದು ಸ್ಕ್ಯಾಂಡಿನೇವಿಯ ದೇಶಗಳಲ್ಲಿ ಮತ್ತೂ ಪ್ರಕಾಶಮಾನ ಹೊಂದಿತು. ಪ್ಯಾರಿಸ್ ಮತ್ತು ಮಾಡ್ರಿಡ್ ಪಟ್ಟಣಗಳ ವಸ್ತು ಸಂಗ್ರಹಾಲಯಗಳಲ್ಲಿ ಆಗಿನ ಕಾಲದ ರಾಜಮಹಾರಾಜರು ಶಿರೋಭೂಷಣವಾಗಿ ಧರಿಸುತ್ತಿದ್ದ ಆಭರಣಗಳ ನಮೂನೆಗಳು ಹಲವಾರು ಇವೆ. ವೃತ್ತಾಕಾರದ ಪಕ್ಷಿಗಳನ್ನು ಹೋಲುವ ಜರ್ಮನ್ ಶೈಲಿಯ ಬ್ರೋಚುಗಳು ರೋಮ್ ಅಧಿಪತ್ಯದ ಪ್ರಭಾವದಿಂದ ಚಚ್ಚೌಕ, ಅರ್ಧಚಂದ್ರಕಾರ, ಮೀನು, ಕುದುರೆ ಮುಂತಾದ ಮಾದರಿಯನ್ನೊಳಗೊಂಡು ಬೆಳಕಿಗೆ ತಂದಿದ್ದರು. ಈ ವಿಧಾನ ಸ್ಕ್ಯಾಂಡಿನೇವಿಯಾ ದೇಶಗಳ ವೈಶಿಷ್ಟ್ಯವಾಗಿ ಉಳಿಯಿತು. ಇಂಗ್ಲೆಂಡಿನ ಮಾದರಿಗಳು ಹಲವಾರು ದೇಶಗಳ ನಮೂನೆಗಳ ಪರಿಷ್ಕøತ ರೂಪಗಳಾಗಿದ್ದವು. ಕೆಂಪು ಹರಳಿನ ತುಣುಕಿನ ಮತ್ತು ಬಂಗಾರದ ಫಿಲಿಗ್ರಿ ಕೆಲಸ ದಕ್ಷಿಣ ಭಾಗದಲ್ಲಿ ಬಳಕೆಯಲ್ಲಿದ್ದರೆ ಥೇಮ್ಸ್ ಉತ್ತರ ಭಾಗದಲ್ಲಿ ಸ್ಕ್ಯಾಂಡಿನೇವಿಯಾ ನಮೂನೆಗಳು ಬಳಕೆಯಲ್ಲಿದ್ದವು. ಕ್ರೈಸ್ತ ಮತ ಹರಡಿದಾಗ ಶಿಲಬೆಯಾಕಾರದ ಪದಕಗಳು ಜಾರಿಗೆ ಬಂದವು. ಮಧ್ಯಕಾಲದ ಉದಯದೊಂದಿಗೆ ಅನಾಗರಿಕ ಪದ್ಧತಿಯ ನಮೂನೆಗಳು ಕೊನೆಗೊಂಡು ಆಭರಣಗಳ ತಯಾರಿಕೆ ಒಂದು ಉದ್ದಿಮೆಯಾಗಿ ಪರಿಣಮಿಸಿತು. ಹೂ ಗೊಂಚಲುಗಳು, ಹೃದಯಾಕಾರದ ಬ್ರೋಚುಗಳು, ಉಂಗುರ, ಒಡ್ಯಾಣ ಪಿನ್ನುಗಳು, ಕಂಠಾಭರಣಗಳು ಘಾಜಿಲೇಪನದಿಂದ ಕೂಡಿದ ಪದಕಗಳು ಹೆಚ್ಚಾಗಿ ಬಳಕೆಗೆ ಬಂದವು. ಅವು 15ನೆಯ ಶತಮಾನದಲ್ಲಿ ಉಡುಪಿನ ಒಂದು ಭಾಗವಾಗಿ ಪರಿಣಮಿಸಿ ಅದಕ್ಕೆ ಜೋಡಿಸಿ ಹೊಲಿಯುವ ಕ್ರಮವೂ ಆರಂಭವಾಯಿತು. 1857ರ ಸುಮಾರಿಗೆ ಅಭಿವೃದ್ಧಿ ಹೊಂದಿದ ಯೂರೋಪಿನ ರಾಷ್ಟ್ರಗಳಲ್ಲಿ ಹಣವಂತ ಕುಟುಂಬಗಳು ಹೆಚ್ಚಿದುವು. ಸಂಪತ್ತು ಅಭಿವೃದ್ಧಿಯಾದಾಗ ಅಕ್ಕಸಾಲಿಗರು ಬೆಲೆಬಾಳುವ ವಜ್ರ ಮತ್ತು ಹರಳುಗಳನ್ನು ಕೂರಿಸಿದ, ಮುತ್ತುಗಳನ್ನು ಬಳಸಿದ ಹೊಳಪುಳ್ಳ ವಿವಿಧಾಕೃತಿಯ ಶಿರೋಭೂಷಣಗಳನ್ನು ರಚಿಸಿದರು. ಬ್ರೋಚುಗಳು, ಬ್ರೇಸ್‍ಲೆಟ್‍ಗಳು, ಉಂಗುರ, ಹೇರ್ ಪಿನ್ನುಗಳು ಮುಂತಾದ ವೈಯಕ್ತಿಕವಾಗಿ ತೊಡುವ ಆಭರಣಗಳು, ಪೌಡರ್ ಅಲಂಕಾರಿಕ ವಸ್ತುಗಳು ಚಿನ್ನದಲ್ಲಿ ತಯಾರಿಸುವ ಕಲೆ ಬೆಳಕೆಗೆ ಬಂದಿತು. ಕೆಲವು ಅಕ್ಕಸಾಲಿಗರು ಪ್ರಕೃತಿ ವೈಶಿಷ್ಟ್ಯವನ್ನು ಬಿಂಬಿಸಿ ನವ್ಯ ಕಲೆಯನ್ನು ಬೆಳಕಿಗೆ ತಂದರೆ ಕೆಲವು ಕಲಾವಿದರು ಹಳೆಯ ಮಾದರಿಯ ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿಯೇ ನಿರತರಾದರು.

ಯಾವುದೇ ವಿದೇಶ ವ್ಯವಹಾರಗಳಿಗೆ ವಾಣಿಜ್ಯದಲ್ಲಿ ದಾಸ್ತಾನಿಗೆ ಬದಲು ದಾಸ್ತಾನು ಕೊಡುವುದು ಸಾಧ್ಯವಿರದ ಕಾರಣ ಚಿನ್ನವನ್ನಾಗಿ ಪರಿವರ್ತಿಸಲು ಆ ಬೆಲೆಯ ಕರೆನ್ಸಿ ಅಥವಾ ಚಿನ್ನವನ್ನು ವಿದೇಶ ವಿನಿಮಯಕ್ಕೆ ಬಳಸಲಾಗುತ್ತದೆ. ಭಾರಿ ಭಾರಿ ಪಂಚವಾರ್ಷಿಕ ಯೋಜನೆಗಳು ಮತ್ತು ದೇಶದ ರಕ್ಷಣೆಗಾಗಿ ವಿದೇಶ ವಿನಿಮಯದ ಕೊರತೆ ಬಿದ್ದುದರಿಂದ ದೇಶದಲ್ಲಿ ಚಿನ್ನದ ಬಳಕೆಯನ್ನು ಕಡಿಮೆಮಾಡಲು, ಕಳ್ಳ ವ್ಯಾಪಾರವನ್ನು ತಡೆಗಟ್ಟಲು, ಜನತೆ ತಮ್ಮ ಉಳಿತಾಯವನ್ನು ಚಿನ್ನದ ಆಭರಣಗಳಲ್ಲಿ ತೊಡಗಿಸದೇ ಯೋಜನೆಗಳಿಗೆ ಸಹಾಯವಾಗುವಂತೆ ಹಣವನ್ನು ತೊಡಗಿಸಿ ವ್ಯಕ್ತಿಗಳ ಲಾಭದೊಂದಿಗೆ ಸಾಮಾಜಿಕ ಲಾಭವಾಗುವಂತೆ ಮಾಡಲು ಭಾರತ ಸರ್ಕಾರ 10ನೆಯ ಜನವರಿ 1963ರಲ್ಲಿ ಆಜ್ಞೆ ಹೊರಡಿಸಿತು. ಶುದ್ಧ ಚಿನ್ನಕ್ಕೆ ಬದಲಾಗಿ ಹದಿನಾಲ್ಕು ಕೆರೆಟ್‍ಗಳ ಚಿನ್ನವನ್ನು ತಯಾರಿಸಲು ಅನುಮತಿ ನೀಡಿತು. ಶುದ್ಧ ಚಿನ್ನವನ್ನು ಆಸ್ತಿಯಾಗಿ ಪಡೆಯುವ ಹಂಬಲವನ್ನು ರೂಢಿಸಿಕೊಂಡು ಬಂದ ಭಾರತೀಯರ ಮೇಲೆ ಹದಿನಾಲ್ಕು ಕೆರಟ್ ಚಿನ್ನದ ಒಡವೆಗಳು ಬಣ್ಣದಿಂದಲೂ ಅಶುದ್ಧತೆಯಿಂದಲೂ ಯಾವ ಪ್ರಭಾವವನ್ನು ಬೀರಲಿಲ್ಲ. ಅನೇಕ ಕುಶಲಕಲೆಗಳು ಶುದ್ಧ ಚಿನ್ನವನ್ನು ಅವಲಂಬಿಸಿದ್ದುದರಿಂದ ಕುಶಲ ಕಲಾವಿದರು ಕಷ್ಟದಿಂದ ಪ್ರತಿರೂಪಗಳನ್ನು ಸೃಷ್ಟಿಸಿದರೂ ಗ್ರಾಹಕರ ಶುದ್ಧ ಚಿನ್ನದ ಹಂಬಲ ಕಡಿಮೆಯಾಗದೆ ಅದು ಕಳ್ಳ ವ್ಯಾಪಾರವನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ. ಅಕ್ಕಸಾಲಿಗರ ಆರ್ಥಿಕ ಸ್ಥಿತಿಗತಿಗಳ ಮೇಲೆ ಭಾರಿ ಪರಿಣಾಮವನ್ನುಂಟು ಮಾಡಿತು. ಪ್ರಪಂಚದಲ್ಲಿಯೇ ಶ್ರೇಷ್ಠವೆನಿಸಿಕೊಂಡ ಭಾರತೀಯ ಆಭರಣಗಳ ಕುಶಲ ಕೈಗಾರಿಕೆಯ ಮಟ್ಟ ಇಳಿಯುವ ಅಳಿಯುವ ಸಂಭವವಿತ್ತು. ಪರಿಣಾಮವಾಗಿ 2ನೇ ಸೆಪ್ಟೆಂಬರ್‍ನ 1966ರಂದು ಈ ಚಿನ್ನ ನಿಯಂತ್ರಣ ಕಾನೂನನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕಾಯಿತು. ಭಾರತದ ಯಾವದೇ ಪರಿಸ್ಥಿತಿ ಅಭರಣಗಳ ಮೇಲೆ ಪ್ರಭಾವವನ್ನು ಬೀರಲು ಸಮರ್ಥವಾಗಿಲ್ಲ. ಜೊತೆಗೆ ಸಾಂಪ್ರದಾಯಿಕತೆ, ಧಾರ್ಮಿಕ ನಂಬಿಕೆ, ಸಾಮಾಜಿಕ ಘನತೆ, ಸೌಂದರ್ಯ ಪ್ರಿಯತೆ, ಇವೆಲ್ಲವೂ ಅಭರಣಗಳ ಕುಶಲ ಕಲೆಯ ಉನ್ನತ ಮಟ್ಟವನ್ನು ಉಳಿಸಿಕೊಂಡು ಬರಲು ಸಹಾಯಕವಾಗಿದೆ.

ಜಾನಪದ ಆಭರಣಗಳು

[ಬದಲಾಯಿಸಿ]

ಆಭರಣವನ್ನು ಧರಿಸುವುದರಿಂದ ನೈಸರ್ಗಿಕ ಸೌಂದರ್ಯ ಇನ್ನೂ ಶೋಭಿಸುತ್ತದೆ. ಕುರೂಪಿಗಳಾದವರ ದೋಷಗಳೆಲ್ಲ ಮುಚ್ಚಿಹೋಗಿ ಅವರು ಸುರೂಪಿಗಳಾಗಿ ತೋರುತ್ತಾರೆ. ಈ ಸೌಂದರ್ಯ ದೃಷ್ಟಿಯ ಜೊತೆಗೆ ವಿಶೇಷವಾದ ಆಭರಣಗಳನ್ನು ಧರಿಸುವುದು ಶ್ರೀಮಂತಿಕೆ ಕುರುಹೂ ಆಗಿದೆ. ವ್ಯಕ್ತಿತ್ವಕ್ಕೆ ಒಂದು ಬಗೆಯ ಪ್ರತಿಷ್ಠೆಯನ್ನೂ, ಗೌರವವನ್ನೂ ಅವು ತಂದುಕೊಡುತ್ತವೆ. ಕೆಲವರಿಗೆ ಅವು ಅಲಂಕಾರ ಸಾಧನವಾದರೆ ಮತ್ತೆ ಕೆಲವರಿಗೆ ಅಹಂಕಾರದ ಪ್ರದರ್ಶನ ನಗವೂ ಆಗಬಹುದು. ಅವರವರ ಅಭಿರುಚಿಗಳಿಗೆ ತಕ್ಕಂತೆ ಆಭರಣಗಳು ಶರೀರವನ್ನು ಅಲಂಕರಿಸುತ್ತವೆ.

ಕೇವಲ ಸೌಂದರ್ಯ ದೃಷ್ಟಿಯಷ್ಟೇ ಆಭರಣಗಳಿಗೆ ಸೀಮಿತವಾಗಬೇಕಾದುದಿಲ್ಲ. ಧಾರ್ಮಿಕ ಶ್ರದ್ಧೆ, ನಂಬಿಕೆಗಳ ಹಿನ್ನೆಲೆಯಲ್ಲಿಯೂ ಧರಿಸಬಹುದು. ದುಷ್ಟಶಕ್ತಿಗಳ ಬಾಧೆಯಿಂದ ಪಾರಾಗಲು ಕೆಲವು ತೊಡಿಗೆಗಳು ನೆರವಾಗಬಹುದು. ಆಭರಣಗಳ ಗುಂಪಿನಲ್ಲಿ ಇವು ಗೌಣ. ತಾಯಿತಿ, ಯಂತ್ರ, ಕರಡಿಗೆ, ಚಿನ್ನದ ಹೊದಿಕೆಯ ರುದ್ರಾಕ್ಷಿ ಮುಂತಾದುವನ್ನು ಅಭರಣಗಳೆನ್ನಲಾಗುವುದಿಲ್ಲ. ಆದರೆ ವಿಶಿಷ್ಟವಾದ ಧಾರ್ಮಿಕ ಉದ್ದೇಶಗಳಿಗಾಗಿ ಧರಿಸುವ ಕೆಲವು ಕುಂಡಲಗಳು ಅಲಂಕಾರ ಸಾಧನವೂ ಆಗಬಹುದು. ಒಡವೆಗಳ ಪರಿಶೀಲನೆಯಿಂದ ಅಯಾ ವ್ಯಕ್ತಿಯ ಸಾಮಾಜಿಕ, ಧಾರ್ಮಿಕ ನೆಲೆ ಬೆಲೆಗಳನ್ನು ಅಳೆಯಲೂಬಹುದು. ಈ ಎಲ್ಲ ಅಭಿಪ್ರಾಯಗಳೂ ಜಾನಪದ ಅಲಂಕರಣಗಳ ಹಿಂದೆ ಇದ್ದುವೆನ್ನಬಹುದು.

ಪ್ರಾಚೀನ ದೇವಾಲಯಗಳ ಶಿಲಾಮೂರ್ತಿಗಳನ್ನೂ ಅಜಂತ, ಎಲ್ಲೋರ, ಲೇಪಾಕ್ಷಿ ಮುಂತಾದ ಕಡೆಯ ಭಿತ್ತಿಚಿತ್ರಗಳನ್ನೂ ಗಮನಿಸಿದರೆ ಭಾರತದಲ್ಲಿ ಒಡವೆಗಳಿಗೆ ಎಷ್ಟೊಂದು ಪ್ರಾಶಸ್ತ್ಯವಿತ್ತು ಎಷ್ಟೊಂದು ವೈವಿಧ್ಯಮಯ ಆಭರಣಗಳು ನಮ್ಮಲ್ಲಿ ಇದ್ದುವು ಎನ್ನುವುದು ಸ್ಪಷ್ಟವಾಗುತ್ತದೆ. ಅನೇಕ ಪ್ರಾಚೀನ ಕವಿಗಳ ವರ್ಣನೆಯಲ್ಲಿ ಒಡವೆಗಳ ಪ್ರಸ್ತಾಪ ಬರುತ್ತದೆ. ಜನಪದ ಸಾಹಿತ್ಯದಲ್ಲಿಯೂ ಅಲ್ಲಲ್ಲಿ ಒಡವೆಗಳ ಮನೋಜ್ಞ ವರ್ಣನೆಗಳು ಬರುತ್ತವೆ;

ಪಿಲ್ಲಿಯ ಕಾಲಿನೊಳೆ ಚಿಲ್ಲಿದ ನೆರಿಯೋಳೆ ಕಲ್ಲುಮೇಲೆ ಕಾಲ ತೊಳಿಯೋಳೆ- ಮಾಳವ್ವ ನಿನ್ನ ಪಿಲ್ಲಿ ಸಾವಿರಕೆ ಬೆಲೆಯಾದೊ. ಮೂಗಿನಾಗೆ ಮೂಗುತಿ ನಕ್ಕರೆ ಕರಿಗಲ್ಲು ಅಕ್ಕ ನೀನ್ಯಾರ ಮಗಳವ್ವ-ಹಲಸಂಗಿ ಗಜ್ಜಿನ ಗುಡಿಯ ಜಕ್ಕವ್ವ. ಕಡಗ ಇಲ್ಲದ ಕೈಯ ಕರುಣ ಇಲ್ಲದ ಪುರಷ ಹಡೆದವ್ವನಿಲ್ಲದ ತೌರೀಗೆ- ಹೋದಾರ ಅಡವ್ಯಾಗ ವಸ್ತಿ ಇಳಿದಂಗ. ಬಂಗಾರ ಬಳೆಯವರು ತಿಂಗಳ ಹಾದ್ಯವರು ನನ ಕೊಡ್ಸ್ಯಾಕ ಮರೆತಾರ- ಮಾವಿನ ಹಣ್ಣು ಉಣುವಾಗ ನೆನೆಸ್ಯಾರ. ಉಂಗುರ ಉಡದಾರ ಮುರಿದರ ಮಾಡಿಸಬಹುದು ಮಡದಿ ಸತ್ತರ ತರಬಹುದು - ಹಡೆದಂಥ ತಂದೆ ತಾಯೆಲ್ಲಿ ಸಿಕ್ಕಾರ. ಬಾವುಲಿ ಇಟಗೊಂಡು ಕಾವುಲಿ ತಿದ್ದುವ ಗಾಳಿ ಬಂದತ್ತ ಬಳಕುವ - ನನ ತಮ್ಮ ಬಾಳಿಯೆಲಿಗಿಂತ ಬಲು ಚೆಲುವ.

ಜನಪದ ಸಾಹಿತ್ಯದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಆಭರಣಗಳನ್ನು ಗಮನಿಸಿದಾಗ ಜನತೆಯ ಸಂಸ್ಕøತಿಯೊಡನೆ ಅವು ಅವಿಚ್ಛಿನ್ನವಾಗಿ ಉಳಿದು ಬಂದ ಪರಿ ಆಶ್ಚರ್ಯವನ್ನುಂಟುಮಾಡುತ್ತದೆ. ಬದುಕಿಗೂ ಆಭರಣಗಳಿಗೂ ನಿಕಟವಾದ ಸಂಬಂಧವಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಒಡವೆ ಎನ್ನುವುದು ಜನಸಾಮಾನ್ಯರ ದೃಷ್ಟಿಯಲ್ಲಿ ಕೇವಲ ಒಂದು ಅಲಂಕಾರ ಸಾಧನ ಮಾತ್ರವಲ್ಲ, ಜೀವನ ಮೌಲ್ಯಗಳಿಗೆ ಸಂಕೇತವಾಗಿ ನಿಲ್ಲುವ ಪವಿತ್ರ ವಸ್ತು. ಇಂದಿಗೂ ಗ್ರಾಮಾಂತರ ಪ್ರದೇಶದ ವಿವಾಹಗಳಲ್ಲಿ ಬಂಗಾರದ ಪೆಟ್ಟಿಗೆಯನ್ನು ಗಂಡಿನ ಕಡೆಯವರು ಹೊತ್ತು ತರುತ್ತಾರೆ. ವಧುವಿಗೆ ಇಂತಿಷ್ಟೇ ಒಡವೆಗಳನ್ನು ತರದಿದ್ದರೆ ಅಮಂಗಳಕರವೆಂದೂ ಭಾವಿಸಲಾಗಿದೆ. ಒಡವೆಗಳನ್ನು ಮಾಡಿಸುವ ಶಕ್ತಿ ಇಲ್ಲದವರು ಇತರರ ಒಡವೆಗಳನ್ನಾದರೂ ಎರವಲಾಗಿ ಪಡೆದು ಆ ದಿನ ಧರಿಸಲೇಬೇಕು. ಊರಿನ ಒಡವೆಯನ್ನೆಲ್ಲಾ ತಂದು ಹೆಣ್ಣನ್ನು ಅಲಂಕರಿಸುವ ಸಂಪ್ರದಾಯ ಮದುವೆಗಳಲ್ಲಿ ಇಂದಿಗೂ ಕಂಡುಬರುತ್ತದೆ.

ಹಬ್ಬ ಹರಿದಿನಗಳಲ್ಲಿ, ಮಂಗಳ ಕಾರ್ಯಗಳಲ್ಲಿ, ಜಾತ್ರೆ-ಉತ್ಸವಗಳಲ್ಲಿ ಮಾತ್ರ ಆಭರಣಗಳನ್ನು ಧರಿಸಿ ಉಳಿದ ಸಂದರ್ಭದಲ್ಲಿ ತೆಗೆದು ಪೆಟ್ಟಿಗೆಯಲ್ಲಿ ಭದ್ರಪಡಿಸುವ ಪದ್ಧತಿ ಬಹಳ ದಿನಗಳಿಂದಲೂ ಬಂದಿದೆ. ತೆರವಾದ ಕಿವಿಗಳಿಗೆ ಓಲೆಗಳ ಬದಲಾಗಿ ಬಿಚ್ಚೋಲೆಯನ್ನು ಹೆಂಗಸರು ಇಂದಿಗೂ ಧರಿಸುತ್ತಾರೆ.

ಒಡವೆಗಳನ್ನು ಕುರಿತು ವಿವೇಚಿಸುವಾಗ ಪುರುಷರಿಗೆ, ಸಂಬಂಧಿಸಿದವು, ಸ್ತ್ರೀಯರಿಗೆ ಸಂಬಂಧಿಸಿದವು. ಮಕ್ಕಳಿಗೆ ಸಂಬಂಧಿಸಿದವು ಹೀಗೆ ಮೂರು ಸ್ಥೂಲ ವಿಭಜನೆಯನ್ನು ಮಾಡಿಕೊಳ್ಳಬಹುದು. ಮಾನವರು ಪ್ರಾಣಿಗಳು ಎಂದು ಮತ್ತೆರಡು ಪ್ರಮುಖ ವರ್ಗಗಳನ್ನು ಮಾಡಿಕೊಳ್ಳಬಹುದು.

ಸೌಂದರ್ಯ ಪ್ರಿಯನಾದ ಮಾನವ ತಾನು ಆಭರಣಗಳನ್ನು ಧರಿಸಿ ಆನಂದಿಸಿದ. ಸ್ತ್ರೀಯರಿಗೆ ತೊಡಿಸಿ ಹಿಗ್ಗಿದ. ಅಂತೆಯೇ ತನ್ನ ಅಚ್ಚುಮೆಚ್ಚಿನ ಪ್ರಾಣಿ ಮಾತ್ರಕ್ಕೂ ಕೆಲವು ಆಭರಣಗಳನ್ನು ತೊಡಿಸಿ ಸಂತೋಷಪಟ್ಟ. ಪ್ರಾಣಿಗಳಲ್ಲಿ ಟಗರಿನ ಕೊಂಬಿನಲ್ಲಿ ರಂಧ್ರವನ್ನು ಮಾಡಿ ಗೆಜ್ಜೆ ಕಟ್ಟುವುದನ್ನು ಹೊರತು, ಕೊರಳಿಗೆ ಹಾಕುವ ಹವಳ ಹಾಗೂ ಸಣ್ಣ ಗಂಟೆಯ ಸರವನ್ನು ಹೊರತು ಉಳಿದ ಅಲಂಕಾರವೆಲ್ಲ ಒಳ್ಳೆಯ ಹೋರಿಗಳಿಗೆ ಮೀಸಲು. ಹೋರಿಗಳ ಕೊರಳಿಗೆ ಗಂಟೆಸರ, ಗಗ್ಗರಗಳನ್ನು ಹಾಕಿ ಅಲಂಕರಿಸುತ್ತಾನೆ ರೈತ. ಕೂದಲು ದಂಡೆಗೆ ಹಿತ್ತಾಳೆಯ ಸರಪಣಿಯನ್ನು ಸುತ್ತಿ ಕೊರಳಿಗೆ ಹಾಕುತ್ತಾನೆ. ಮೊಕರಂಬಗಳನ್ನು ಹಾಕಿ ಹೋರಿಗಳ ಬೆಡಗನ್ನು ನೋಡುತ್ತಾನೆ. ಕೋಡಣುಸುಗಳಂತೂ ಬಗೆಬಗೆಯಲ್ಲಿ ಲಭ್ಯವಾಗುತ್ತದೆ. ಮೂರು ಅಂಗುಲ ಉದ್ದದ ಕೋಡಣಸಿನಿಂದ 5 - 6 ಅಂಗುಲ ಉದ್ದದ ಕಲಾತ್ಮಕವಾದ ಕೊಂಬು ಕಳಸಗಳೂ ಇವೆ. ಹೋರಿಗಳಿಗೆ ಧರಿಸುವ ಆಭರಣಗಳಲ್ಲಿ ಗಗ್ಗರಗಳು, ಮಾಗಾಯಿಗಳು ಅಪೂರ್ವವಾದುವು. ಇತ್ತೀಚೆಗೆ ಮಾಗಾಯಿಗಳು ವಿರಳವಾಗುತ್ತಿವೆ. ಅರ್ಧಚಂದ್ರಾಕಾರದ ವಿವಿಧ ಕೆತ್ತನೆಯಿಂದ ಕೂಡಿದ ಜಣಜಣ ಶಬ್ದ ಮಾಡುವ ಮಾಗಾಯಿಗಳು 3 - 4 ಅಂಗುಲ ಉದ್ದವಾಗಿ ಆಕರ್ಷಕವಾಗಿರುತ್ತವೆ.

ಕೆಲವು ಕಡೆ ಬೆಲೆಬಾಳುವ ಹೋರಿಗಳ ದೃಷ್ಟಿ ಪರಿಹಾರಕ್ಕಾಗಿ, ಅಥವಾ ಇನ್ನಾವುದೋ ರೀತಿಯ ದುಷ್ಟ ಶಕ್ತಿಗಳ ಪ್ರಭಾವವುಂಟಾಗದಂತೆ ಸೊಗಸಾದ ತಾಯಿತಿಗಳನ್ನು ಮಾಡಿಸಿ ಹಾಕುವುದೂ ಉಂಟು. ಮೂರು ಅಂಗುಲ ಉದ್ದದ ಹೆಬ್ಬೆರಳು ಗಾತ್ರದ ಬೆಳ್ಳಿ ತಾಯಿತಿಗಳು ಶ್ರೀಮಂತರ ಮನೆಯ ಹೋರಿಯ ಕೊರಳನ್ನು ಅಲಂಕರಿಸುತ್ತದೆ. ಮಾನವ ವರ್ಗದಲ್ಲಿ ಮಕ್ಕಳ ಅಭರಣಗಳು ಚಿನ್ನ ಬೆಳ್ಳಿಯವಾಗಿರಬಹುದು. ಅರಳೆಲೆ ಮಾಗಾಯಿಗಳ ವರ್ಣನೆ ಪ್ರಾಚೀನ ಕಾವ್ಯಗಳಲ್ಲೂ ಬರುತ್ತದೆ. ಬೆಳ್ಳಿಯ ಉಡಿದಾರ, ಕಾಲಂದುಗೆ, ಇವು ಮಕ್ಕಳ ಆಭರಣಗಳು. ಸಾಮಾನ್ಯವಾಗಿ ಹುಟ್ಟಿದ ಮೇಲೆ ತಿಂಗಳಿಗೆ ಮೂರು ದಿನ ಮುಂಚಿತವಾಗಿಯೇ ಕಿವಿ ಚುಚ್ಚಿ ಬಿಡುವ ಪದ್ಧತಿಯಿತ್ತು. ಚುಚ್ಚಿ ಮುರುವು, ಹರಳಿನ ಬೊಟ್ಟುಗಳನ್ನು ಮಕ್ಕಳಿಗೆ ಇಡುವ ವಾಡಿಕೆ. ಮೊದಲ ಹೆರಿಗೆಯಲ್ಲಿ ತೌರಿನವರು ಸಾಮಾನ್ಯವಾಗಿ ಮಕ್ಕಳ ಒಡವೆಗಳನ್ನು ಮಾಡಿಸುವರು. ಮೂರನೆಯ ಮಗುವಿನಲ್ಲಿ ಮುಖ ನೋಡಬೇಕಾದರೆ ಸೋದರ ಮಾವ ಒಂದು ಚಿನ್ನದ ಉಂಗುರವನ್ನು ತಂದು ಮಗುವಿನ ಕೈಗೆ ಧರಿಸಿ, ಎಣ್ಣೆಯಲ್ಲಿ ಮುಖ ನೋಡಬೇಕು ಎಂಬ ವಾಡಿಕೆ ಕೆಲವು ಕಡೆ ಉಂಟು.

ಆಭರಣಗಳಲ್ಲಿ ಪುರುಷರಿಗಾಗಿಯೇ ಮೀಸಲಾದವು ಹೆಚ್ಚು ಸಂಖ್ಯೆಯಲ್ಲಿಲ್ಲ. ಪುರುಷರಲ್ಲಿ ಕಿವಿಯ ಆಭರಣಗಳೇ ಹೆಚ್ಚು. ಹಿಂದೆ ಗಂಡಸರು ಕೂದಲು ಬಿಟ್ಟು ತಲೆ ಬಾಚಿ, ಜಡೆಹಾಕಿ ಹೂ ಮುಡಿಯುತ್ತಿದ್ದರೂ ಮುಡಿಗೆ ಯಾವ ಬಗೆಯ ಒಡೆಗಳನ್ನೂ ಧರಿಸುತ್ತಿರಲಿಲ್ಲ. ಆದರೆ ಕಿವಿಗೆ ಮಾತ್ರ ಎರಡು ಮೂರು ಬಗೆಯ ಆಭರಣಗಳನ್ನು ಎರಡೆರಡೂ ಕಡೆ ಧರಿಸುತ್ತಿದ್ದ ಪದ್ಧತಿಯಿತ್ತು. ಕಿವಿಯ ಮೇಲು ಭಾಗಕ್ಕೆ ತೊಟ್ಟು ಮುರುವು, ಇನ್ನೊಂದು ಕಡೆಗೆ ಅರೆಬಾಬಲು ಅಥವಾ ಉಂಗುರಾಕಾರದ ಜಟ್ಲಿ ಗುಂಡಲನ್ನು ತೊಡುತ್ತಿದ್ದರು. ಕೆಳಭಾಗಕ್ಕೆ ಅತ್ತಕಡಕು ಮುಂತಾದುವನ್ನು ಈಗಲೂ ಅನೇಕರು ಧರಿಸುತ್ತಾರೆ. ಈಚೆಗೆ ಕೆಲವರು ಕೊರಳಿಗೆ ಚಿನ್ನದ ಸರ ಧರಿಸುವುದು ಬಳಕೆಗೆ ಬಂದಿದೆ. ಇದರಂತೆ ಗಡಿಯಾರದ ಸರಪಣಿಗಳು ಗಡಿಯಾರವಿರುವ ಉಂಗುರಗಳು ಆಭರಣಗಳಾಗಿವೆ.

ಬಲಗಾಲಿಗೆ ಕಪ್ಪ ಧರಿಸುವ ವಾಡಿಕೆಯೂ ಕೆಲವು ಕಡೆ ಇದೆ. ಕಾಲ್ಬೆರಳುಗಳಿಗೆ ಕೆಲವರು ಗಂಡುಮಿಂಚುಗಳನ್ನು ಧರಿಸುತ್ತಾರೆ. ಇವು ಬೆಳ್ಳಿಯಿಂದ ಮಾಡಿದ ಆಭರಣಗಳು. ಮದುವೆಯಲ್ಲಂತೂ ವರ ಇವನ್ನು ಕಾಲ್ಬೆರಳಿಗೆ ಧರಿಸಲೇಬೇಕು. ಕೈಬೆರಳಿಗೆ ಹಿಂದೆ ವಿಶೇಷವಾಗಿ ಬೆಳ್ಳಿಯ ಮುದ್ರೆಯುಂಗುರವಿರುತ್ತಿತ್ತು. ಕೈಗೆ ಬೆಳ್ಳಿ ಅಥವಾ ಚಿನ್ನದ ಕಪ್ಪಗಳನ್ನು ಧರಿಸುವ ವಾಡಿಕೆ ಈಗಲೂ ಇದೆ. ಚಿನ್ನದ ಕಪ್ಪಗಳಲ್ಲಿ ನುಲಿಕೆಕಪ್ಪ ಪ್ರಸಿದ್ಧವಾದುದು.

ಆಭರಣ ವಿಶೇಷಗಳು ಹೆಚ್ಚಾಗಿ ಸ್ತ್ರೀಯರಿಗಾಗಿಯೇ ಹುಟ್ಟಿಕೊಂಡವೆನ್ನಬೇಕು. ಕನ್ನಡ ನಾಡಿನ ಎಲ್ಲ ಪ್ರದೇಶಗಳಲ್ಲೂ ಸಂಚರಿಸಿ ಪರಿಶೀಲಿಸುತ್ತ ಹೋದರೆ ನೂರಾರು ಬಗೆಗಳನ್ನು ಕಾಣಬಹುದು. ತಲೆ, ತುರುಬು, ಕಿವಿ, ಮೂಗು, ಕೊರಳು, ಕೈ, ಸೊಂಟ, ಕಾಲುಬೆರಳು ಹೀಗೆ ಎಲ್ಲೆಲ್ಲಿ ಒಡವೆಗಳನ್ನು ಧರಿಸಲು ಸಾಧ್ಯವೋ ಅಲ್ಲಿಗೆಲ್ಲ ಅನೇಕ ಒಡವೆಗಳು ಲಭ್ಯವಾಗುತ್ತವೆ. ಭಾರವನ್ನು ಹೆಚ್ಚಾಗಿ ತಡೆಯುವ ಕೊರಳು ಹೆಚ್ಚು ಹೊರೆಯಾದ ಒಡವೆಗಳ ಮಾಲೆಗಳನ್ನೇ ಪಡೆದುಕೊಳ್ಳತ್ತವೆ. ಚುಚ್ಚಲು ಹೆಚ್ಚು ಸುಲಭವಾದ ಕಿವಿಯಲ್ಲಿ ಆರೇಳು ಕಡೆ ರಂಧ್ರಗಳನ್ನು ಮಾಡಿ ಒಡವೆಗಳನ್ನು ಧರಿಸುತ್ತಾರೆ. ಮೂರು ಕಡೆ ಮಾತ್ರ ಚುಚ್ಚಲು ಸಾಧ್ಯವಾದ ಮೂಗಿನಲ್ಲಿ ಎಡ, ಬೆರಳುಗಳಿಗೂ ಒಡವೆಗಳುಂಟು. ಅಲ್ಲದೆ ಕಾಲು ಮತ್ತು ಕೈಗಳಿಗೆ ಹೆಚ್ಚು ತೂಕದ ಒಡವೆಗಳನ್ನೇ ನೋಡಿದರೆ ಮೈತುಂಬ ಒಡವೆಗಳೇ ಕಾಣುತ್ತವೆ.

ಒಡವೆಗಳಲ್ಲಿ ಸಾಮಾನ್ಯವಾಗಿ ಕಿವಿ, ಮೂಗು, ನೆತ್ತಿ, ತುರುಬು, ಕೊರಳು ಮುಂತಾದ ಕಡೆಗೆ ಚಿನ್ನದ ಒಡವೆಗಳನ್ನೇ ಧರಿಸುತ್ತಾರೆ. ಸೊಂಟ ಕೈಕಾಲುಗಳಿಗೆ ಬೆಳ್ಳಿಯ ಒಡವೆಗಳು ಹಳ್ಳಿಯ ಬದುಕಿನ ಮನೆಗಳನ್ನು ಒಂದೊಂದು ಬೀಸುವ ಕುಕ್ಕೆಯಷ್ಟು ಆಭರಣಗಳು ಇರುತ್ತಿದ್ದವು.

  • ತಲೆಗೆ : ಜಡೆಬಿಲ್ಲೆ, ನಾಗರು, ಚವಲಿತುಂಬು, ಸೇವಂತಿಗೆ ಹೂ, ಕುಪ್ಪಿಗೆ ಇತ್ಯಾದಿ. ಕಿವಿಗೆ: 1. ಮೇಲು ಕಿವಿಗೆ - ಬುಗಡಿ, ಸಿಂಹನ ಮೆಟ್ಟಿದ ಮುರುವು; (ಮುತ್ಹಾಕಿದ ಮುರುವು, ಹಲಸಿನ ಕಾಯಿ ಮುರುವು, ಕಪ್ಹಾಕಿದ ಮುರುವು); ತಟ್ಟು ಬಾಬುಲು, ಮೇಟಿಕೊಳವೆ, ಇತ್ಯಾದಿ. 2. ನಡುಗಿವಿಗೆ -- ಲವಂಗದ ಹೂವು, ಬುರುಗಿ ಬೊಟ್ಟು, ಗೆಜ್ಜೆ ಡಾಬು, ಸಾದಾ ಡಾಬು, ಕುಡುಕೆ ವಾಲೆ, ಕನ್ನೆ ಸರಪಣಿ ಇತ್ಯಾದಿ. ಮೂಗಿಗೆ : ಮೂಗು ಬೊಟ್ಟು, ಬುಲಾಕು, ಚಂದ್ರ, ಅಕ್ಕಿ ಮುರು, ಬೊಟ್ಟು, ಇತ್ಯಾದಿ. ಕೊರಳಿಗೆ: ಚಿಂತಾಕು, ಮೂರೆಳೆ ಗುಂಡು, ಐದೆಳೆ ಗುಂಡು, ಆರೆಳೆ ಗುಂಡು, ತಟ್ಟು ಗುಂಡು, ಮೂರೆಳೆ ಅಂಟು ಗುಂಡು, ದೊಡ್ಡ ಗುಂಡು, ಜೋಮಾಲೆ ರಸ, ಇತ್ಯಾದಿ.
  • ಕೈಗೆ: ಕಡಗ, ಗಂಟುಮುರಿ, ಕೊಂಡಿಕಪ್ಪ, ಬೆಳ್ಳಿ ಬಳೆ ಇತ್ಯಾದಿ. ಕೈ ಬೆರಳಿಗೆ: ಬೆರಳುಂಗುರ, ತಟ್ಟುಂಗುರ, ಗೋಲುಂಗುರ, ಬೇಲುಂಗುರ, ಮುದ್ರೆಯುಂಗುರ, ಮುಡಿಯುಂಗುರ, ಅಕ್ಕಿಯುಂಗುರ, ಇತ್ಯಾದಿ.
  • ಕಾಲ್ಬೆರಳಿಗೆ : ಕಿರುಪಿಲ್ಲಿ, ಗೆಜ್ಜೆಪಿಲ್ಲಿ, ಮಿಂಚು, ಸುತ್ತು, ಕಾಲುಂಗುರ, ಕಳಸಪಿಲ್ಲಿ, ಎಲೆಪಿಲ್ಲಿ, ನಿಂಬೆ ಹೂವಿನ ಪಿಲ್ಲಿ, ಇತ್ಯಾದಿ.
  • ತೋಳಿಗೆ: ಎಡಗೈ ಮುರಿ, ಬೇವಿನ ಕಾಯಿ ತಾತಿ, ಸನಿಕೆ ಬಂದಿ, ಬಂದಿಮೇಗಣ ಸನಿಕೆ ಇತ್ಯಾದಿ.

ಹೆಂಗಸರ ಒಡವೆಗಳಲ್ಲಿ ಕಾಲುಚೈನು, ಕಾಸಿನ ಸರ, ಹರಳೊಲೆಗಳು ಇತ್ತೀಚಿಗೆ ಬಂದವು, ಕಾಲುಂಗುರ ಹಿಂದೆ ವಿಶೇಷವಾಗಿರಲಿಲ್ಲ. ಹೆಣ್ಣು ಮಕ್ಕಳಿಗೆ ಕುವಾಲಿ ಹಾಕಿ, ಜಡೆಹಾಕಿ, ಕುವಾಲೆಗೆ ಸೇರಿಂದತೆ ಮುಂದಲೆ ಹೂವು ಹಾಕುತ್ತಿದ್ದರು. ಕುವಾಲಿ ಹಾಕುವ ಪದ್ಧತಿಯೊಡನೆ ಮುಂದಲೆ ಹೂವು ಕಣ್ಮರೆಯಾಗಿದೆ. ಒಡವೆಗಳಲ್ಲಿ ದೊಡ್ಡ ಗುಂಡಿನ ಸರ ಬೆಲೆಯಾದುದು. ಕಲಾತ್ಮಕವಾದುದು. ಮುದ್ರೆಯುಂಗುರ ತಲೆತಲಾಂತರದಲ್ಲಿ ವಂಶದ ಹಿರಿಯ ಮಗನಿಗೆ ಹೋಗುತ್ತದೆ. ಕುಡಿಕೆ ವಾಲೆಗೆ ಸೇರಿದಂತೆ ಎರಡೆಳೆ ಕಂಠಿಸರ ತಲೆಗಂಟಿಗೆ ಸೇರಿಸಿ ಕಟ್ಟುತ್ತಾರೆ.

ಬಯಲು ನಾಡಿನ ಆಭರಣಗಳಂತೆಯೇ ಮಲೆನಾಡಿನ ಆಭರಣಗಳೂ ವಿಶಿಷ್ಟವಾದುವು. ಎಲ್ಲ ಪ್ರಾಂತ್ಯಕ್ಕಿಂತ ಘಟ್ಟದ ಕೆಳಗಿನ ದಕ್ಷಿಣ ಕನ್ನಡ ಭಾಗ ಒಡವೆಗಳಿಗೆ ಪ್ರಸಿದ್ಧವಾದುವು. ಕೊಪ್ಪು ಮೊದಲಾದ ಅತ್ಯಂತ ಪ್ರಾಚೀನವಾದ, ಕಲಾತ್ಮಕವಾದ ಆಭರಣ ವಿಶೇಷಗಳು ಅಲ್ಲಿ ಈಗಲೂ ಲಭ್ಯವಾಗುತ್ತವೆ. ಭೂತದ ಒಡವೆಗಳ ರಾಶಿಯನ್ನು ನೋಡಿದರೆ ಯಾರಾದರೂ ಬೆರಗಾಗುತ್ತಾರೆ. ಬಯಲು ನಾಡಿನ ದೇವರ ಒಡವೆಗಳೂ ಅಷ್ಟೇ ಆಕರ್ಷಿತವಾಗಿವೆ. ಇವತ್ತಿಗೂ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ ದೇವರುಗಳಿಗೆ ಆಭರಣಾಲಂಕಾರಗಳು ನಡೆಯುತ್ತವೆ. ಹಳೆಯ ಕಲಾಪ್ರಕಾರಗಳಾದ ನೃತ್ಯ ನಾಟಕಗಳಲ್ಲಿನ ಪಾತ್ರಗಳಿಗೆ ಶಾಸ್ತ್ರೀಯವಾದ ಎಲ್ಲ ಆಭರಣಗಳನ್ನೂ ತೊಡಿಸುತ್ತಿದ್ದರು.

ಕಿರು ಜಾತಿಗಳಲ್ಲಿ ಮಣಿಸರಗಳು, ಹವಳದ ಸರಗಳು, ಹಿತ್ತಾಳೆಯ ಕೈಬಂದಿಗಳು ಹೆಚ್ಚು. ಕಾಡುಗೊಲ್ಲರ, ಲಂಬಾಣಿಗರ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಗೌಡರ ಹೆಂಗಸರ ಹವಳದ ಸರಗಳು, ದಂತದ ಒಡವೆಗಳು, ಮಣಿಸರಗಳು ಗಮನಾರ್ಹವಾದುವು.

ಈಗೀಗ ಹಳೆಯ ಕಾಲದ ಅಪೂರ್ವ ಆಭರಣಗಳನ್ನು ಧರಿಸುವವರೂ, ತಯಾರಿಸುವವರೂ ವಿರಳವಾಗುತ್ತಿದ್ದಾರೆ. ಸರ್ಕಾರದ ಈಚಿನ ಧೋರಣೆಯಿಂದಾಗಿ ಅಕ್ಕಸಾಲಿಗರ ಉದ್ಯಮಕ್ಕೆ ಪ್ರೋತ್ಸಾಹ ಕಡಿಮೆಯಾಗಿದೆ. ಅಲ್ಲದೆ ಆಭರಣಗಳ ವಿಷಯ ಮನೋಧರ್ಮಕ್ಕೆ ಸಂಬಂಧಪಟ್ಟದ್ದಾದ್ದರಿಂದ ಜನ ಹೊಸ ಮಾದರಿಯನ್ನು ಬಯಸತೊಡಗಿದ್ದಾರೆ. ನವೀನ ರೀತಿಯ ಒಡವೆಗಳು ಆ ಸ್ಥಾನವನ್ನು ಅಕ್ರಮಿಸುತ್ತಿವೆ.


ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಆಭರಣಗಳು&oldid=1228829" ಇಂದ ಪಡೆಯಲ್ಪಟ್ಟಿದೆ