ಅಲಂಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲಂಕಾರ:-- ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು.

 • ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು.

ಉದಾಹರಣೆ:- ಕಮಲೆಯ ಜಿಂಕೆಯಂತೆ ಓಡುತ್ತಾಳೆ ಉಪಮೇಯ -ಕಮಲೆಯು ಉಪಮಾನ - ಜಿಂಕೆ ಉಪಮಾವಾಚಕ - ಅಂತೆ ಸಾದಾರಣಧರ್ಮ - ಓಡುತ್ತಾಳೆ

ಅಲಂಕಾರಗಳು

 • ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ 'ಶಬ್ದ' ಮತ್ತು 'ಅರ್ಥ'ಗಳ ಉಕ್ತಿ ವೈಚಿತ್ರವನ್ನು "ಅಲಂಕಾರ" ಎನ್ನಬಹುದು. ಅಲಂಕಾರವು ಸಾಮಾನ್ಯವಾದ ಭಾಷೆಗೆ ಮಂತ್ರಶಕ್ತಿಯನ್ನು ತಂದುಕೊಡುವ ಸಾಧನ. ಹಾಗಾಗಿ ಭಾರತೀಯ ಕಾವ್ಯ ಮೀಮಾಂಸೆಯ ಪ್ರಮುಖ ಲಾಕ್ಷಣಿಕನಾದ ದಂಡಿ - "ಕಾವ್ಯಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ" ಎಂದಿದ್ದಾನೆ.
 • ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಪ್ರಸ್ಥಾನಗಳಾಗಿ ಅಲಂಕಾರಗಳನ್ನು ಗುರ್ತಿಸುತ್ತೇವೆ. ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
 • ೧.ಅಲಂಕಾರ ಪ್ರಸ್ಥಾನ : ಇದರಲ್ಲಿ ಪ್ರಮುಖ ಅಲಂಕಾರಿಕನಾದ ಭಾಮಹನನ್ನು ಮುಖ್ಯವಾಗಿಟ್ಟುಕೊಂಡು ಅಲಂಕಾರ ಪ್ರಸ್ಥಾನದ ಸಾಮಾನ್ಯ ಸಮೀಕ್ಷೆಯನ್ನು ಮಾಡಲಾಗಿದೆ.
 • ೨.ಶಬ್ದಾಲಂಕಾರಗಳು : ಇದರಲ್ಲಿ ಪ್ರಮುಖವಾಗಿ ಅನುಪ್ರಾಸ ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.
 • ೩.ಅರ್ಥಾಲಂಕಾರಗಳು : ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಲಾಗುತ್ತದೆ.

ಅಲಂಕಾರ ಪ್ರಸ್ಥಾನ

ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನುಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕರಾದ ಭಾಮಹ, ಉದ್ಬಟ, ರುದ್ರಟ, ಜಯದೇವ ಮೊದಲಾದವರ ಒಟ್ಟು ಚರ್ಚೆಯನ್ನು 'ಅಲಂಕಾರ ಪ್ರಸ್ಥಾನ'ವೆಂದು ಕರೆಯಬಹುದು. ಅಲಂಕಾರ ಪ್ರಸ್ಥಾನದ ಪ್ರಭಾವವೂ ಗಾಢವಾಗಿದ್ದ ಕಾವ್ಯಮೀಮಾಂಸೆಯನ್ನು 'ಅಲಂಕಾರ ಶಾಸ್ತ್ರ'ವೆಂದು ಹೇಳಲಾಗುತ್ತದೆ.

 • ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಆಲಂಕಾರಿಕನಾದ ಭಾಮಹನು "ಕಾವ್ಯಾಲಂಕಾರ" ಎಂಬ ಕೃತಿಯನ್ನು ರಚಿಸಿದ್ದಾನೆ. ಇದರ ಮೊದಲ ಪರಿಚ್ಛೇದದಲ್ಲಿ ಕಾವ್ಯದ ಲಕ್ಷಣ, ಪ್ರಯೋಜನ, ವಿಭಾಗ ಈ ಮೊದಲಾದ ಸಾಮಾನ್ಯ ವಿಚಾರವೂ, ಎರಡು, ಮೂರನೇ ಪರಿಚ್ಛೇದದಲ್ಲಿ ಸುಮಾರು ೪೦ ಅಲಂಕಾರಗಳ ನಿರೂಪಣೆಯೂ, ನಾಲ್ಕನೆಯದರಲ್ಲಿ ೧೦ ಕಾವ್ಯ ದೋಷಗಳನ್ನೂ, ಐದನೆಯದರಲ್ಲಿ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ದೋಷಗಳ ವಿಷಯವೂ, ಆರನೆಯದರಲ್ಲಿ ಶಬ್ದಶುದ್ಧಿಯನ್ನು ಕುರಿತ ಕೆಲವು ಸೂಚನೆಗಳು ಬಂದಿವೆ.
 • ಇವುಗಳಲ್ಲಿ ವಸ್ತುತಃ ತರ್ಕ ವ್ಯಾಕರಣಗಳಿಗೆ ಸೇರತಕ್ಕ ಕೊನೆಯ ಎರಡು ಪರಿಚ್ಛೇದಗಳನ್ನು ಬಿಟ್ಟರೆ, ಅಲಂಕಾರಗಳ ನಿರೂಪಣೆಯೇ ಭಾಮಹನ ಗ್ರಂಥದ ಪ್ರಧಾನ ವಿಷಯ. ಇವನು ರಸಕ್ಕೆ ಹೆಚ್ಚಿನ ಸ್ಥಾನವನ್ನೇನೂ ಕೊಟ್ಟಿಲ್ಲ. ಶೃಂಗಾರಾದಿ ರಸಗಳನ್ನು ಸ್ಪಷ್ಟವಾಗಿ ದರ್ಶಿಸಿದ್ದರೆ ರಸವದಲಂಕಾರವಾಗುವುದೆಂದು ಹೇಳಿ ಮುಗಿಸುತ್ತಾನೆ.
 • ಭಾಮಹನ ಮತದಂತೆ ಎಲ್ಲ ಕಾವ್ಯವೂ ಅದು ಮಹಾಕಾವ್ಯವಾಗಿರಲಿ, ಮುಕ್ತವಾಗಿರಲಿ 'ವಕ್ರೋಕ್ತಿ' ಯಿಂದ ಕೂಡಿರಬೇಕು. ಕಾವ್ಯದ ಶಬ್ದದಲ್ಲಿಯೂ ಲೋಕರೂಢಿಗೆ ಮೀರಿದ ಒಂದು ಅತಿಶಯವಿರುವುದೇ ಅತಿಶಯೋಕ್ತಿ ಅಥವಾ ವಕ್ರೋಕ್ತಿ. ವಕ್ರೋಕ್ತಿಯಿಲ್ಲದೆ ಅಲಂಕಾರವಿಲ್ಲ. ಸ್ವಭಾವೋಕ್ತಿಯನ್ನು ಕೆಲವರು ಮಾತ್ರ ಅಲಂಕಾರವೆಂದು ಕರೆಯುತ್ತಾರೆ.

ಶಬ್ದಾಲಂಕಾರಗಳು

 • ಭಾಮಹನಿಗಿಂತ ದಂಡಿಗೆ ಶಬ್ದಾಲಂಕಾರಗಳ ಮೇಲೆ ಹೆಚ್ಚು ಆಸಕ್ತಿ. ಇವನ ಕೃತಿ "ಕಾವ್ಯಾದರ್ಶ". ಇದರ ಮೊದಲನೆಯ ಪರಿಚ್ಛೇದದ ಬಹುಭಾಗವು ವೈದರ್ಭ, ಗೌಡ ಎಂಬ ಎರಡು ಕಾವ್ಯಮಾರ್ಗಗಳ ವಿಭೇದಗಳನ್ನು ಪ್ರತಿಪಾದಿಸುವುದಕ್ಕೆ ಮೀಸಲಾಗಿದೆ. ಎರಡನೆ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳೂ, ಮೂರನೆಯದರಲ್ಲಿ ಶಬ್ದಾಲಂಕಾರಗಳೂ, ದೋಷಗಳೂ ನಿರೂಪಿತವಾಗಿವೆ.
 • ದಂಡಿಯ ಒಲವೆಲ್ಲವೂ ವೈದರ್ಭದ ಮಾರ್ಗದ ಕಡೆಗಿದೆ. ಶ್ಲೇಷ, ಪ್ರಸಾದ, ಸಮತೆ, ಮಾಧುರ್ಯ, ಸುಕುಮಾರತೆ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ - ಈ ಹತ್ತು ಗುಣಗಳು ವೈದರ್ಭ ಮಾರ್ಗದ ಪ್ರಾಣಗಳು.
 • "ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ"| - ದಂಡಿ, ಕಾವ್ಯಕ್ಕೆ ಸೊಗಸು ಕೊಡುವ ಧರ್ಮಗಳನ್ನು ಅಲಂಕಾರಗಳೆಂದು ಕರೆದಿದ್ದಾನೆ.
 • ಶಬ್ದಾಲಂಕಾರಗಳಲ್ಲಿ ಮೂರು ಬಗೆಗಳಿವೆ. ಅವುಗಳೆಂದರೆ - ೧.ಅನುಪ್ರಾಸ : ಅಂದರೆ ಅಕ್ಷರಗಳ ಆವೃತ್ತಿ. ಇದರಲ್ಲಿ ಒಂದೊ, ಎರಡೊ. ಮೂರೊ ಅಕ್ಷರಗಳು ಮತ್ತೆ ಮತ್ತೆ ಬಂದರೆ ಅದನ್ನು "ವೃತ್ತ್ಯಾನುಪ್ರಾಸ" ಎನ್ನುತ್ತಾರೆ. ಎರಡು ಅಕ್ಷರಗಳು ಜತೆಜತೆಯಾಗಿ ಹಲವು ಕಡೆ ಬಂದರೆ, ಅದನ್ನು "ಛೇಕಾನುಪ್ರಾಸ" ಎನ್ನುವರು.
 • ೨.ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.
 • ೩.ಚಿತ್ರಕವಿತ್ವ :ಅಕ್ಷರಗಳನ್ನು, ಪದಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ 'ಚಿತ್ರಕವಿತ್ವ' ಎನ್ನುತ್ತಾರೆ. ಇದನ್ನು ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇವು ಇದ್ದ ಹಾಗೆಲ್ಲಾ ಕಲ್ಪಿಸಿ ರಚಿಸಬಹುದು.

ಅರ್ಥಾಲಂಕಾರಗಳು

ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ. ಅರ್ಥಾಲಂಕಾರದಲ್ಲಿ ಎಂಟು ವಿಧ ಅವುಗಳೆಂದರೆ :-

 1. ಉಪಮಾಲಂಕಾರ
 2. ದೀಪಕಾಲಂಕಾರ
 3. ರೂಪಕಾಲಂಕಾರ
 4. ಉತ್ಪ್ರೇಕ್ಷಾಲಂಕಾರ
 5. ಅರ್ಥಾಂತರನ್ಯಾಸ ಅಲಂಕಾರ
 6. ಅತಿಶಯೋಕ್ತಿ ಅಲಂಕಾರ
 7. ಶ್ಲೇಷಾಲಂಕಾರ
 8. ಸ್ವಭಾವೋಕ್ತಿ ಅಲಂಕಾರ

ಉಪಮಾಲಂಕಾರ

ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವುದೇ ಉಪಮಾಲಂಕಾರ. ಇದರಲ್ಲಿ ಎರಡು ಬಗೆ - ೧.ಪೂರ್ಣೋಪಮೆ, ೨.ಲುಪ್ತೋಪಮೆ ಉಪಮಾಲಂಕಾರದಲ್ಲಿ, ಉಪಮೇಯ = ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು, ಉಪಮಾನ = ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು, ಸಮಾನಧರ್ಮ = ಉಪಮೇಯ, ಉಪಮಾನಗಳಲ್ಲಿ ಕಂಡು ಬರುವ ಸಮಾನಗುಣ, ಉಪಮಾವಾಚಕ = ಅಂತೆ, ಹಾಗೆ, ವೊಲ್, ಅಂಗ ಎಂಬ ನಾಲ್ಕು ಅಂಶಗಳಿರುತ್ತವೆ. ಉದಾ 1: ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿವೆ ಉಪಮೇಯ = ಮಗುವಿನ ಮುಖ ಉಪಮಾನ = ಚಂದ್ರ ಸಮಾನಧರ್ಮ = ಮನೋಹರ ಉಪಮಾವಾಚಕ = ಅಂತೆ ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಸಮಾನವಾಗಿ ( ಸಾದೃಶ್ಯ) ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ. ಇಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ - ಈ ನಾಲ್ಕೂ ಅಂಶಗಳಿರುವುದರಿಂದ ಇದು ಪೂರ್ಣ ಉಪಮಾಲಂಕಾರ ಎಂದೆನ್ನಿಸಿಕೊಳ್ಳುತ್ತದೆ. ಉದಾ ೨ : ಸೀತೆಯ ಮುಖ ಕಮಲದಂತೆ ಇದೆ. ಉಪಮೇಯ = ಸೀತೆಯ ಮುಖ ಉಪಮಾನ = ಕಮಲ ಉಪಮಾವಾಚಕ = ಅಂತೆ ಇಲ್ಲಿ ಸಮಾನಧರ್ಮ ಇಲ್ಲ. ಆದ್ದರಿಂದ ಇದಕ್ಕೆ ಲುಪ್ತೋಪಮಾಲಂಕಾರ ಎಂದು ಹೆಸರು.

ಅಭ್ಯಾಸಕ್ಕಾಗಿ ಉದಾಹರಣೆ :

 1. ಹಸುಳೆಯಂತೆ ಕಾಂಬನಂತೆ.
 2. ಹಾರಬಯಸೆನೀ ಹಕ್ಕಿಗಳಂತೆ.
 3. ಹೊಳೆ ಕಡಲಿಗೆ ಸೇರುವ ತೆರದಿ.
 4. ಪ್ರಾಚೀನ ಮಹಾಕಾವ್ಯದಂತೆ ವೂಲವತ೯ವೂಂದು ಮಹಾಕೊಶವಾಗಿದೆ.

ರೂಪಕಾಲಂಕಾರ

ಉಪಮೇಯ ಉಪಮಾನಗಳಲ್ಲಿ ಹೋಲಿಕೆಯು ಬೇಧವಿಲ್ಲದೆ ವರ್ಣಿತವಾದರೆ ಅದು ರೂಪಕಾಲಂಕಾರ (ಉಪಮೇಯ , ಉಪಮಾನ ಎರಡೂ ಒಂದೇ ಎಂದು ವರ್ಣಿಸುವುದು ) ಉದಾ : ಸೀತೆಯ ಮುಖ ಕಮಲ ಉಪಮೇಯ = ಸೀತೆಯ ಮುಖ ಉಪಮಾನ = ಕಮಲ ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆದ್ದರಿಂದ ಇದು ರೂಪಕಾಲಂಕಾರ ಇದರಲ್ಲಿ ಎರಡು ವಿಧಗಳು-
೧.ಅಭೇದ ರೂಪಕಾಲಂಕಾರ= ವರ್ಣಿಸುವ ವಸ್ತುವು ಇನ್ನೊಂದರಂತೆ ಇದೆ ಎಂದು ಹೇಳದೆ,ಎರಡು ವಸ್ತುಗಳು ಅಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದೆ ಹೇಳುವುದು.
೨.ತದ್ರೂಪ್ಯ ರೂಪಕಾಲಂಕಾರ= ಉಪಮೇಯ & ಉಪಮಾನಗಳೆರಡನ್ನೂ ತದ್ರೂಪಿಯಾಗಿ ನಿದರ್ಶಿಸುವುದು.

ಅಭ್ಯಾಸಕ್ಕಾಗಿ ಉದಾಹರಣೆ "

 1. ಎನ್ನ ಬಗೆಗನಿವಾರ್ಯವೀ ಶೊಕದುಲ್ಕೆ
 2. ವದನಾರವಿಂದದಲ್ಲಿ
 3. ಮಾರಿಗೌತಣವಾಯ್ತು ನಾಳಿನ ಭಾರತ
 4. ಅಳ್ಳಿರಿಯುತಿಪ್ಪ ಎಮ್ಮ ಒಡಲಬೆಗೆಯ ಬೆಂಕಿ ಯುರಿ ನಿನ್ನನಿರಿಯದೆ ಪೆಳು ವಿಶ್ವಾಮಿತ್ರ


ಅರ್ಥಾಂತರನ್ಯಾಸಾಲಂಕಾರ

ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು . ಉದಾ : ಅಮೀರನು ಉಂಡಮನೆಗೆ ಕೇಡು ಬಗೆದ . ಕೃತಘ್ನರು ಏನನ್ನೂ ಮಾಡುವರು. ಅಮೀರನು ಉಂಡ ಮನೆಗೆ ಕೇಡು ಬಗೆದ. ( ವಿಶೇಷ ವಾಕ್ಯ ) ಕೃತಘ್ನರು ಏನನ್ನೂ ಮಾಡುವರು. ( ಸಾಮಾನ್ಯ ವಾಕ್ಯ ) ಸಮನ್ವಯ : ಇಲ್ಲಿ ಉಪಮಾನವಾದ "ಕೃತಘ್ನರು ಏನನ್ನೂ ಮಾಡುವರು." ( ಸಾಮಾನ್ಯ ವಾಕ್ಯ ) , ಅಮೀರನು ಉಂಡ ಮನೆಗೆ ಕೇಡು ಬಗೆದ ( ವಿಶೇಷ ವಾಕ್ಯ ) ಎಂಬ ಮಾತನ್ನು ಸಮರ್ಥಿಸಲಾಗಿದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.

ದೃಷ್ಟಾಂತ ಅಲಂಕಾರ

ಎರಡು ಬೇರೆಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ ಉದಾ : ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ ಉಪಮೇಯ = ತಾಯಿ ಉಪಮಾನ = ಉಪ್ಪು ಉಪಮವಾಚಕ = ಗಿಂತ ಸಮನ್ವಯ : ಇಲ್ಲಿ ಉಪಮೇಯವಾದ ತಾಯಿಗಿಂತ ಬಂಧುವಿಲ್ಲ ಹಾಗೂ ಉಪಮಾನವಾದ ಉಪ್ಪಿಗಿಂತ ರುಚಿಯಿಲ್ಲ ಎರಡೂ ಬಿಂಬ ಪ್ರತಿಬಿಂಬ ಭಾವದಂತೆ ಇರುವುದುರಿಂದ ಇದು ದೃಷ್ಟಾಂತ ಅಲಂಕಾರ

ಶ್ಲೇಷಾಲಂಕಾರ

ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು. ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ ) ಉಪಮಾನ = ಅರ್ಕ ( ಸೂರ್ಯ ) ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ಸುಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು. ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ ) ಉಪಮಾನ = ಅರ್ಕ ( ಸೂರ್ಯ ) ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ಸುಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ.

ಹೊರಗಿನ ಕೊಂಡಿಗಳು

ಅಲಂಕಾರಗಳು ಕನ್ನಡ ವ್ಯಾಕರಣ

ಉಲ್ಲೇಖ

"https://kn.wikipedia.org/w/index.php?title=ಅಲಂಕಾರ&oldid=1185821" ಇಂದ ಪಡೆಯಲ್ಪಟ್ಟಿದೆ