ವಿಷಯಕ್ಕೆ ಹೋಗು

ಅರ್ಥಾಲಂಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಬ್ದಾಲಂಕಾರಗಳು ಕವಿತಾವನಿತೆಗೆಶರೀರದ ಬಾಹ್ಯ ಅಲಂಕಾರಗಳಂತಿದ್ದರೆ, ಇವನ್ನು ಇನ್ನೂ ಅಭ್ಯಂತರವಾದ ಲಕ್ಷಣಗಳು ಮತ್ತು ಹಾವಭಾವಗಳಂತೆನ್ನಬಹುದು. ಅಲಂಕಾರವಿಲ್ಲದ ವಾಣಿ ವಿಧವೆಯೇ ಸರಿ ಎಂಬ ಉಕ್ತಿ ಸಂಸ್ಕೃತ ಲಾಕ್ಷಣಿಕರಿಗಿದ್ದ ಅಲಂಕಾರ ವ್ಯಾಮೋಹಕ್ಕೆ ಸಾಕ್ಷಿಯಾಗಿದೆ.

ಮೊದ ಮೊದಲು ಇವುಗಳ ಸಂಖ್ಯೆ ಸಣ್ಣದಾಗಿತ್ತು. ಭರತನ ನಾಟ್ಯಶಾಸ್ತ್ರದಲ್ಲಿ ಉಪಮಾ, ರೂಪಕ, ದೀಪಕಗಳೆಂಬ ಮೂರೇ ನಿರ್ದಿಷ್ಟವಾಗಿವೆ. ಸಾದೃಶ್ಯವೇ ಇವಕ್ಕೆಲ್ಲ ಮೂಲ. ಕವಿಪ್ರತಿಭೆ ವಸ್ತುಗಳನ್ನು ವರ್ಣಿಸಹೊರಟಾಗ ತತ್ಸದೃಶವಾದ್ದನ್ನು ನಾನಾ ಭಂಗಿಗಳಿಂದ ತಂದು ತೋರಿಸಬಹುದು. ಹೀಗೆ ಸಕಲ ಅರ್ಥಾಲಂಕಾರಗಳಿಗೂ ಉಪಮಾತತ್ವವೇ ಮೂಲವೆಂದು ವಾಮನ, ಅಪ್ಪಯ್ಯದೀಕ್ಷಿತ ಮುಂತಾದವರು ನಿರ್ಣಯಿಸಿದ್ದಾರೆ. ನಿರೂಪಣೆಯಲ್ಲಿ ಉಪಮಾನೋಪಮೇಯಗಳ ಭೇದವನ್ನೋ ಅಭೇದವನ್ನೋ ಭೇದಾಭೇದವನ್ನೋ ಆರೋಪಿತ ಭೇದಾಭೇದಗಳನ್ನೋ ಒತ್ತಿ ಹೇಳಿದಾಗ ಉಪಮೆ, ರೂಪಕ, ದೀಪಕ, ಉತ್ಪ್ರೇಕ್ಷೆ, ಅತಿಶಯೋಕ್ತಿ ಮುಂತಾದ ಬೇರೆ ಬೇರೆ ಅಲಂಕಾರಗಳಾಗುತ್ತವೆಂದು ಪ್ರಾಚೀನರ ಅಭಿಪ್ರಾಯ. ಆದರೆ ಭಾಮಹ, ದಂಡಿ, ಕುಂತಕ ಮುಂತಾದ ಲಾಕ್ಷಣಿಕರು ಅಲಂಕಾರಗಳಿಗೆಲ್ಲ ಮೂಲವಾದ ಸಾಮಾನ್ಯ ತತ್ತ್ವಕ್ಕೆ ಸಾದೃಶವಲ್ಲ, ವಕ್ರೋಕ್ತಿ ಅಥವಾ ಅತಿಶಯೋಕ್ತಿಯೆಂದರು. ಕವಿಪ್ರತಿಭೆ ವಸ್ತುವನ್ನು ಇದ್ದಂತೆ ವರ್ಣಿಸದೆ, ಚಮತ್ಕಾರವಾಗಿ ಬಳಸು ಬಳಸಾಗಿ ಹೆಚ್ಚು ಮಾಡಿ ಹೇಳುವುದೇ ಈ ತತ್ತ್ವ. ಇದರ ಪ್ರಕಾರ ಸ್ವಭಾವೋಕ್ತಿ ಅಲಂಕಾರವೇ ಆಗುವುದಿಲ್ಲ. ವಕ್ರೋಕ್ತಿಯಿಲ್ಲವಾದ್ದರಿಂದ, ಇವರ ಕಾಲಕ್ಕೆ ಅಲಂಕಾರಗಳ ಸಂಖ್ಯೆ ಸುಮಾರು ನಲವತ್ತಕ್ಕೇರಿತು.

ರುಯ್ಯಕ ತನ್ನ ಅಲಂಕಾರ ಸರ್ವಸ್ವದಲ್ಲಿ ಈ ತತ್ವಗಳ ಜೊತೆಗೆ ಅರುವತ್ತನ್ನು ಮೀರಿ ಬೆಳೆದಿದ್ದ ಅಲಂಕಾರಗಳನ್ನೆಲ್ಲ ಶಾಸ್ತ್ರೀಯವಾಗಿ ವರ್ಗೀಕರಿಸಲು ತತ್ವಾಂತರಗಳನ್ನು ಬಳಸಿದ. ತರ್ಕಬದ್ಧವಾದ ಇವನ ಪರಿಭಾಷೆಯಲ್ಲಿ ಉತ್ಪ್ರೇಕ್ಷಾತಿಶಯೋಕ್ತಿಗಳು ಅಧ್ಯವಸಾಯಮೂಲ; ಸಮಾಸೋಕ್ತಿ, ಅಪ್ರಸ್ತುತಪ್ರಶಂಸಾ, ಪರ್ಯಾಯೋಕ್ತಿ ಮುಂತಾದವು ವ್ಯಂಗ್ಯಮೂಲ; ವಿರೋಧಾಭಾಸ, ಅಸಂಗತಿ, ವಿಷಮ, ವಿರೋಧಮೂಲ; ಸಾರ, ಏಕಾವಲಿ ಮುಂತಾದವು ಶೃಂಖಲಾಮೂಲ, ಇದರಂತೆ ತರ್ಕನ್ಯಾಯವನ್ನು ಕಾವ್ಯಲಿಂಗದಲ್ಲಿಯೂ ವಾಕ್ಯ ನ್ಯಾಯವನ್ನು ಯಥಾಸಂಖ್ಯದಲ್ಲಿಯೂ ಲೋಕನ್ಯಾಯವನ್ನು ವಕ್ರೋಕ್ತಿಯಲ್ಲಿಯೂ ಕಾಣಬಹುದು.

ಮಮ್ಮಟ, ರುಯ್ಯಕ, ವಿಶ್ವನಾಥ, ಜಗನ್ನಾಥ, ಅಪ್ಪಯ್ಯದೀಕ್ಷಿತ ಮುಂತಾದ ಲಕ್ಷಣಗ್ರಂಥ ಕಾರರೆಲ್ಲರೂ ತಮ್ಮ ನಿರೂಪಣೆಯಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸ್ಥಾನವನ್ನು ಅರ್ಥಾಲಂಕಾರಗಳ ನಿರೂಪಣೆಗಾಗಿಯೇ ಮೀಸಲಿಡುತ್ತಾರೆ. ಅಲಂಕಾರಗಳ ಲಕ್ಷಣ ನಿರ್ವಚನ, ವಿಭಾಗ, ಅನ್ಯಾಲಂಕಾರಗಳಿಂದ ಪೃಥಕ್ಕರಣ, ಉದಾಹರಣೆ-ಈ ಕ್ರಮವನ್ನು ಸಾಮಾನ್ಯವಾಗಿ ಎಲ್ಲರೂ ಅನುಸರಿಸುತ್ತಾರೆ. ಷಡ್ದರ್ಶನಗಳಲ್ಲಿ ಹಾಗೂ ವ್ಯಾಕರಣ ಕೋಶಾದಿಗಳಲ್ಲಿದ್ದ ಶಾಸ್ತ್ರೀಯವಿಚಾರ ಗಳಿಗನುಗುಣವಾಗಿ ವಿದ್ವಾಂಸರು ಕಾವ್ಯಾಲಂಕಾರಗಳನ್ನು ಕುರಿತು ವಿಮರ್ಶಿಸುತ್ತಿದ್ದುದರಿಂದ ಅರ್ಥಾಲಂಕಾರಗಳು ಬರಬರುತ್ತ ಸಂಖ್ಯೆಯಲ್ಲಿ ನೂರಕ್ಕೂ ಹೆಚ್ಚಾಗಿ ಬೆಳೆದು ಕೇವಲ ವಿದ್ವತ್ಪ್ರಿಯವೆನಿಸುವಂತಾದವು. ವಾಲ್ಮೀಕಿ, ಕಾಳಿದಾಸಾದಿಗಳಲ್ಲಿ ಮಾತ್ರ ಅವುಗಳ ಸರಳಸೌಂದರ್ಯವುಂಟು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: