ಕೊಡವರ ಆಭರಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗಿನ ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊಡವರದ್ದು ಅಮೋಘವಾದ ಜೀವನ ಶೈಲಿ. ಅವರು ಕ್ಷತ್ರೀಯರು. ಯೋಧರ ಗುಂಪಿಗೆ ಸೇರುವ ಈ ಜನರ ಜೀವನ ಶೈಲಿ ಮತ್ತು ಸಂಸ್ಕ್ರತಿಯಲ್ಲಿ ಮಹತ್ವದ ಪಾತ್ರ ವಹಿಸುವುದು ಅವರ ಉಡುಗೆ. ಉಡುಪಿನೊಂದಿಗೆ ಅವರ ಆಭರಣಗಳು ಬಹಳ ವಿಭಿನ್ನ. ವೀರ ಶೂರರ ನಾಡೆಂದು ಕರೆಯಲ್ಪಡುವ ಕೊಡಗಿನ ಕೀರ್ತಿ ಕೊಡವರಿಂದ. ಇವರು ಕೇವಲ ಸರ, ಕಿವಿ ಓಲೆ, ಕೈಬಳೆಗಳನ್ನು ಆಭರಣಗಳೆಂದು ನಂಬುವವರಲ್ಲ. ಕೊಡವರ ಆಭರಣಗಳು ಜೀವನ ಮೌಲ್ಯಗಳನ್ನು ಸಾರುತ್ತವೆ. ಶೌರ್ಯ ಮತ್ತು ಯೋಧರ ಜೀವನ ಶೈಲಿಯನ್ನು ಸಾರುತ್ತದೆ. ತಮ್ಮ ಆಯುಧಗಳನ್ನು ಸಹ ಅವರು ಆಭಣದಂತೆ ಧರಿಸುತ್ತಾರೆ. ಆದ್ದರಿಂದ ಭಾರತದ ಮತ್ತಾವುದೇ ಸಂಸ್ಕøತಿಯಲ್ಲಿ ಕಾಣಲು ಸಿಗದಂತಹ ವಿಶಿಷ್ಟ ಹಿನ್ನೆಲೆಯ ಕೊಡವರ ಆಭರಣಗಳು ಅತ್ಯಂತ ಅಪರೂಪ.

ಹಿನ್ನಲೆ[ಬದಲಾಯಿಸಿ]

ಹೆಂಗಸರ ಮತ್ತು ಪುರುಷರ ಬೇರೆ ಬೇರೆ ಆಭರಣಗಳಿಗೆ ಅದರದ್ದೇ ಆದ ಹಿನ್ನೆಲೆ ಮತ್ತು ಮಹತ್ವವಿದೆ. ಹೆಂಗಸರ ಆಭರಣಗಳಲ್ಲಿ ಅತ್ಯಂತ ಮುಖ್ಯವಾದದ್ದು ಪತ್ತಾಕ್. ಪತ್ತಾಕ್ ಎಂಬುದು ಕೊಡವರ ಮಾಂಗಲ್ಯ ಸರ. ಬೇರೆ ಯಾವ ಸಂಸ್ಕ್ರತಿಯಲ್ಲೂ ಇಂತಹ ತಾಳಿ ಕಾಣಲು ಸಿಗದು. ಲಕ್ಷ್ಮೀಯ ಅಚ್ಚಿರುವ ನಾಣ್ಯವನ್ನು ಹವಳ ಮತ್ತು ಚಿನ್ನದಿಂದ ಸುತ್ತಲು ಬಿಗಿಯಾಗಿಸಿ, ಮೇಲೆ ನಾಗನ ಹೆಡೆ ಎದ್ದು ಕಾಣುತ್ತದೆ. ಇದಕ್ಕೆ ಎರಡು ಬದಿಯಲ್ಲೂ ಎರಡು ಹವಳಗಳ ನಡುವೆ ಒಂದು ಚಿನ್ನದ ಗುಂಡು ಇಟ್ಟು ಕರಿ ಮಣಿಯ ಸರವಿರುತ್ತದೆ. ಈ ಅಪರೂಪದ ಮಾಂಗಲ್ಯಕ್ಕೆ ಒಂದು ಹಿನ್ನೆಲೆಯಿದೆ. ಕೊಡವ ಮಹಿಳೆಯರು ಕಾವೇರಿ ಮಾತೆಯ ಮಕ್ಕಳು ಎಂಬ ಪ್ರತೀತಿಯಿದೆ. ಅಂತೆಯೇ ಅವರು ದೇವಕನ್ಯೆಯರು. [೧] ದೇವಕನ್ಯೆಯರನ್ನು ಮನುಷ್ಯರು ಮದುವೆಯಾಗುವಂತಿಲ್ಲ. ಆದರೆ ಕೊಡವನೊಬ್ಬ ಅವರನ್ನು ಮದುವೆಯಾಗಲು ಬಯಸಿದರೆ, ಸಾಧಾರಣ ವಿವಾಹದಲ್ಲಿ ದೇವಕನ್ಯೆಯನ್ನು ಸೇರಲು ಸಾಧ್ಯವಿಲ್ಲ ಎಂದಾಗ ನಾಗದೇವ ಪ್ರತ್ಯಕ್ಷನಾಗಿ ತನ್ನ ಆಶಿರ್ವಾದದೊಂದಿಗೆ ಒಬ್ಬ ದೇವಕನ್ಯೆ ತನ್ನ ಸುಮಂಗಲಿ ಭಾಗ್ಯವನ್ನು ತನ್ನ ಮಗಳಿಗೆ ಧಾರೆಯೆಳೆದು ತಾಯಿಯೇ ಮಗಳಿಗೆ ಮಾಂಗಲ್ಯ ತೊಡಿಸುವ ಮೂಲಕ ಕೊಡವ ಪುರುಷನಿಗೆ ಮದುವೆ ಮಾಡಿಕೊಡಲಾಗುತ್ತದೆ ಎಂದು ವರ ನೀಡುತ್ತಾರೆ. ಹಾಗೆಯೇ ಇಂದಿಗೂ ಅದೇ ಪದ್ದತಿಯನ್ನು ಕೊಡವರು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಕೊಡವರ ವೈವಿದ್ಯಮಯ ಆಭರಣಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಕೊಕ್ಕೆತಾತಿ. ಅರ್ಧಚಂದ್ರ ಆಕಾರದಲ್ಲಿರುವ ಈ ಆಭರಣ ಚಿನ್ನದಿಂದ ಮಾಡಲಾಗುತ್ತದೆ. ಇದರಲ್ಲೂ ನಾಗನ ಹೆಡೆಯಿದ್ದು, ಹವಳದಿಂದ ಅಲಂಕೃತವಾಗಿರುತ್ತದೆ. ಅರ್ಧಚಂದ್ರ ಆಕಾರದ ಅಂಚು ಮುತ್ತುಗಳಿಂದ ಕೂಡಿರುತ್ತದೆ. ಇದು ಕೊಡವರ ಶೌರ್ಯ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳು, ಮದುವೆಯಾದ ಹೆಂಗಸರು ಇದನ್ನು ಧರಿಸುತ್ತಾರೆ. ಮದುವೆಯ ದಿನ ಮದುಮಗ ಮತ್ತು ಮದುಮಗಳು ಇಬ್ಬರು ಹಾಕುತ್ತಾರೆ. ಕೊಡವರ ಶೌರ್ಯದ ಸಂಕೇತವಾದ ಈ ಪದಕವನ್ನು ಚಿನ್ನದ ಗುಂಡುಗಳ ಸರದೊಂದಿಗೆ ಹಾಕುತ್ತಾರೆ. [೨]

ಹವಳಸರ[ಬದಲಾಯಿಸಿ]

ಹವಳಸರವೂ ಕೊಡವರ ಶ್ರೇಷ್ಟ ಆಭರಣಗಳಲ್ಲಿ ಒಂದು. ಎರಡು ಹವಳಗಳ ನಡುವೆ ಚಿನ್ನದ ಹರಳಿರುವ ಎರಡೆಳೆಯ ಮಾಲೆ, ಹವಳಸರ. ಇದು ಅಲಂಕಾರದ ಆಭರಣವೇ ಆದರೂ ಇದನ್ನು ಮದುವೆಯ ದಿನ ಗಂಡು ಮತ್ತು ಹೆಣ್ಣಿಗೆ ಅವರವರ ತಾಯಿಯರು ಇದನ್ನು ತೊಡಿಸುವುದು ವಿಶೇಷ. ಮದುವೆಗೆಂದು ಮನೆಯಿಂದ ಹೊರಟ ಹುಡುಗ ಮತ್ತು ಹುಡುಗಿ ವಿವಾಹವಾಗದೇ ಮನೆಗೆ ಹಿಂತಿರುಗುವಂತಿಲ್ಲ. ಮದುವೆ ಮಂಟಪಕ್ಕೆ ತಲುಪಿದ ನಂತರ ಅವರಿಗೆ ಈ ಸರವನ್ನು ತೊಡಿಸುತ್ತಾರೆ. ಇದು ಕೊಡವ ಪದ್ಧತಿಯ ಪ್ರಕಾರ ಕಂಕಣ ತೊಡಿಸಿದಂತೆ. ಮದುವೆಯ ಚಪ್ಪರದಂದು ಹವಳಸರವನ್ನು ಹಾಕಿದ ನಂತರ ಮದುವೆ ಮುಗಿದು ಹುಡುಗಿಯ ತವರು ಮನೆಗೆ ಹೋಗಿ, ತಲಕಾವೇರಿ ದರ್ಶನದ ನಂತರವೇ ಇದನ್ನು ತೆಗೆಯಬಹುದು. ಈ ಪದ್ದತಿಯನ್ನು ಕೊಡವರು ಬಹಳ ಶಿಸ್ತಿನಲ್ಲಿ ಪಾಲಿಸುತ್ತಾರೆ.

ಜೋಮಾಲೆ[ಬದಲಾಯಿಸಿ]

ಕೊಡವರ ವಿಭಿನ್ನವಾದ ಆಭರಣಗಳಲ್ಲಿ ಜೋಮಾಲೆಯೂ ಒಂದು. ಜೋಮಾಲೆ ಎಂದರೆ ಹೆಣ್ಣು ಮಕ್ಕಳ ಕೊರಳಿನಲ್ಲಿ ತೂಗುವ ಉದ್ದದ ಮಾಲೆ. ಚಿನ್ನದ ಹರಳುಗಳನ್ನು ಕಪ್ಪು ದಾರದಲ್ಲಿ ನೈದು ಎರಡೆಳೆ ತೂಗುವಂತೆ ಮಾಡಿರುತ್ತಾರೆ. ಕಪ್ಪು ದಾರ ಕಷ್ಟದ ಕ್ಷಣಗಳನ್ನು ಪ್ರತಿನಿದಿಸಿದರೆ, ಚಿನ್ನದ ಹರಳು ಸುಖದ ಸೂಚನೆಯಂತೆ. ಸುಖ ದುಖಃಗಳನ್ನು ಸಮನಾಗಿ ತೂಗಿ, ಜೀವನ ನಡೆಸಿಕೊಂಡು ಹೋಗಬೇಕೆಂಬ ಪಾಠವನ್ನು ಇದು ಕಲಿಸುತ್ತದೆ. ಇದರೊಂದಿಗೆ ಪಿಂಬಳೆ, ಪಿರಿಬಳೆ ಎಂಬ ಚಿನ್ನದ ಕಡಗಗಳನ್ನು ಧರಿಸುತ್ತಾರೆ. ಮದುವೆಯ ದಿನ ಹುಡುಗಿ ಇವೆಲ್ಲದರ ಜೊತೆಗೆ ಕೈಪಿಲಿ, ಕಾಲ್‍ಪಿಲಿ ಹಾಕುತ್ತಾರೆ. ಇದು ಐದು ಕೈ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕಿ ಅದರ ಬೆಳ್ಳಿಯ ಎಳೆಗಳನ್ನು ಕಡಗಕ್ಕೆ ಸೇರಿಸುತ್ತಾರೆ. ಕಾಲಿನ ಬೆರಳಿಗೂ ಹಾಗೆಯೇ. ಗಂಡಸರ ಆಭರಣಗಳು ಬಹಳ ಕಡಿಮೆ. ಆದರೆ ಇರುವುದು ಅವರ ವೀರ್ಯ ಮತ್ತು ಶೌರ್ಯದ ಸಂಕೇತವಾಗಿದೆ. ಹವಳಸರ, ಕೊಕ್ಕೆತಾತಿ ಅವರಿಗೂ ಅನ್ವಯಿಸುತ್ತದೆ. ಬೆಳ್ಳಿ ಕಡಗವನ್ನು ಪ್ರತಿದಿನ ಬಳಸುವುದು ವಾಡಿಕೆ. ಇತ್ತೀಚೆಗೆ ಇದು ಕಡಿಮೆಯಾದರೂ, ವೀರರ ಕೈಯಲ್ಲಿ ಕಡಗವೊಂದು ಇರಬೇಕು ಎನ್ನುತ್ತಾರೆ ಇವರು. ಮದುವೆ ಗಂಡಿನ ಕೈಯಲ್ಲಿ ಬೆಳ್ಳಿಯ ಕಡಗವೊಂದು ಹಾಕುತ್ತಾರೆ. ಅದರೊಂದಿಗೆ ತಾಮ್ರದ ಕಡಗಗಳನ್ನು ಎರಡೂ ಕೈಗೆ ತೊಡಿಸುತ್ತಾರೆ.

ಪೀಚೆಕತ್ತಿ[ಬದಲಾಯಿಸಿ]

ಪೀಚೆಕತ್ತಿ ಎಂಬುದು ಕೊಡವ ಗಂಡಸರ ಗತ್ತು. ಪೀಚೆಕತ್ತಿ ಎಂದರೆ ಎಳೆಯ ಅಥವಾ ಚಿಕ್ಕ ಕತ್ತಿ. ಸಾಂಪ್ರದಾಯಿಕ ಉಡುಪಾದ ಕುಪ್ಯ ಚೇಲೆಯ ಜೊತೆಗೆ ಇದನ್ನು ಹಾಕುತ್ತಾರೆ. ಚೇಲೆ ಎಂದರೆ ಕೆಂಪು ರೇಷ್ಮೆಯ ಸೊಂಟಪಟ್ಟಿ. ಚಿಕ್ಕದಾದ ಕತ್ತಿಯೊಂದಕ್ಕೆ ಬೆಳ್ಳಿಯ ಹೊರೆಯಲ್ಲಿಟ್ಟು ಬೆಳ್ಳಿಯ ಮಾಲೆಗಳನ್ನು ಪಟ್ಟುಗೆ ಸಿಕ್ಕಿಸಯತ್ತಾರೆ. ಇದು ಖಡ್ಗವೆತ್ತ ಯೋಧರ ಪ್ರತೀಕ. ಕುಪ್ಯದ ಜೊತೆಗೆ ಸದಾ ಈ ಪೀಚೆಕತ್ತಿಯನ್ನು ಧರಿಸುತ್ತಾರೆ. ಕೊಡವರು ಹಲ್ಲೆ ಮಾಡುವವರಲ್ಲ. ತಮ್ಮ ನಾಡು ಮತ್ತು ಮನೆಯವರ ರಕ್ಷಣೆಗಾಗಿ ನಿಲ್ಲುವವರು. ಹಾಗಾಗಿ ಈ ಪೀಚೆಕತ್ತಿ ಬಹುಮುಖ್ಯ. ತೊಡಙ. ಇದು ಬೆಳ್ಳಿಯಿಂದ ಮಾಡಿದ ಕತ್ತಿಯನ್ನು ಇರಿಸುವ ಸಾಧನ. ಸೊಂಟಕ್ಕೆ ಕಟ್ಟಿಕೊಳ್ಳುವ ಚೂಪಾದ ರಕ್ಷಣಾಯಂತ್ರ. ಯೋಧನೊಬ್ಬ ದೇವಕನ್ಯೆಯನ್ನು ಮದುವೆಯಾಗುವ ಪದ್ದತಿಯಿರುವುದರಿಂದ ಮದುಮಗನು ಈ ಬೆಳ್ಳಿಯ ಖಡ್ಗದ ಹೊರೆಯನ್ನು ಅಂದು ಧರಿಸಲೇಬೇಕು. ಇದರೊಳಗೆ ಇರಿಸುವ ಕತ್ತಿಯೇ ಒಡಿಕತ್ತಿ. ಒಡಿಕತ್ತಿ ಎಂಬುದು ಒಂದು ಕತ್ತಿ. ಯುದ್ದಕ್ಕು, ಕಾರ್ಯಕ್ಕೂ ಬಳಸುವ ಕತ್ತಿ. ಕೊಡಗಿನ ಶೂರನ ಕೈಯಲ್ಲಿ ಇರುವಂತಹ ಕತ್ತಿ ಎಂದು ಹೇಳುತ್ತಾರೆ. ಈಗ ಕೊಡವರ ಮನೆಯಲ್ಲಿ ಕಾಣಸಿಗುವ ಈ ಕತ್ತಿಯ ಹಿರಿಮೆ ಅಪಾರ. ಕೊಡವರ ವೀರ್ಯ ಪ್ರದರ್ಶಿಸುವ ಈ ಒಡಿಕತ್ತಿ ಯೋಧರ ಕೈಯಲ್ಲಿ ಮತ್ತು ಮದುವೆಯ ದಿನ ಗಂಡು ಧರಿಸುವಂತದ್ದು. ಇದೇ ಕತ್ತಿಯಲ್ಲಿ ಮದುವೆಯ ದಿನ ಬಾಳೆಗೊನೆ ಕಡಿಯುವ ಶಾಸ್ತ್ರ ಮಾಡುವುದು ವಿಶೇಷ. ಒಡಿಕತ್ತಿಯಲ್ಲಿ ಬಾಳೆಗೊನೆ ಕಡಿಯುವ ಮೂಲಕ ವೀರ್ಯ ಪ್ರದರ್ಶಿಸುವ ಹುಡುಗನ ಮಾವಂದಿರು ತಮ್ಮ ಕುಟುಂಬದ ಹುಡುಗನಿಗಾಗಿ ಹೆಣ್ಣು ಕೇಳಲು ಅರ್ಹರು ಎಂಬ ಮಾತಿದೆ.

ಗೆಜ್ಜೆತಂಡ್[ಬದಲಾಯಿಸಿ]

ಗೆಜ್ಜೆತಂಡ್ ಎಂದರೆ ಮರದ ಉದ್ದವಾದ ಕೋಲಿಗೆ ಬೆಳ್ಳಿಯುಂಗುರದಂತೆ ಅಲ್ಲಲ್ಲಿ ಸುತ್ತಿ ಸಣ್ಣ ಗೆಜ್ಜೆಗಳಿಂದ ಅಲಂಕರಿಸಲಾಗುತ್ತದೆ. ಇದು ವೀರ ಕೊಡವರ ಕೈಯಲ್ಲಿ ಕಾಣುವ ಕೋಲು. ಮದುವೆಗಂಡು ಈ ಗೆಜ್ಜೆತಂಡನ್ನು ಮದುವೆ ಮುಗಿದು ಮನೆ ಮುಟ್ಟುವವರೆಗೂ ಇಟ್ಟುಕೊಂಡಿರಬೇಕು. ಗೆಜ್ಜೆತಂಡ್ ಮನೆಯಲ್ಲಿದ್ದರೆ ಸಮೃದ್ಧಿಯ ಸಂಕೇತ. ಆಯುಧ ಪೂಜೆಯ ಸಂಧರ್ಭದಲ್ಲಿ ಮತ್ತು ಮನೆಯ ಶುಭ ಕಾರ್ಯಗಳಲ್ಲಿ ಇದನ್ನು ಇಟ್ಟು ಪೂಜೆ ಮಾಡುತ್ತಾರೆ. ಗೆಜ್ಜೆತಂಡ್ ಪೂರ್ವಜರ ಪ್ರತೀಕ ಎಂದು ನಂಬುವ ಕೊಡವರು ಅದನ್ನು ಆರಾಧಿಸುತ್ತಾರೆ. ದಾಂಪತ್ಯಕ್ಕೆ ಪ್ರವೇಶಿಸುವ ವಧು ವರರಿಗೆ ಆಶಿರ್ವಾದ ಎಂಬಂತೆ ಅದನ್ನು ವರ ತನ್ನೊಂದಿಗೆಯೇ ಇರಿಸುತ್ತಾನೆ. ಗೆಜ್ಜೆತಂಟ್ ಸಹಿತ ಕೊಡವ ಆಭರಣಗಳಲ್ಲಿ ಒಂದು ಮತ್ತು ಮುಖ್ಯವಾದುದು. ಇವುಗಳು ಕೊಡವರ ಸಾಂಪ್ರದಾಯಿಕ ಆಭರಣಗಳಾಗಿವೆ. ಪ್ರತಿ ಹೆಜ್ಜೆಗೂ ಸಂಸ್ಕøತಿಯ ಕಂಪನ್ನು ಪಸರಿಸುವ ವೈವಿದ್ಯಮಯ ಸಂಸ್ಕøತಿ ಮತ್ತು ಆಚರಣೆಗಳ ನಾಡಾಗಿರುವ ಕೊಡಗಿನ ಕೊಡವರ ಜೀವನ ಇನ್ನೂ ವಿಶಿಷ್ಟ.

ಉಲ್ಲೇಖಗಳು[ಬದಲಾಯಿಸಿ]

  1. https://www.google.com/search?q=kodava+ornaments&tbm=isch&source=univ&sa=X&ved=2ahUKEwjqhqyW4OLgAhVZi3AKHZAVB3AQsAR6BAgDEAE
  2. https://www.streetdirectory.com/etoday/importance-of-jewellery-for-women-wlpwel.html