ಸ್ತನ್ಯಪಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಗುವಿನ ಹಾಲುಣಿಸುವಿಕೆ
ಅಂತರರಾಷ್ಟ್ರೀಯ ಹಾಲುಣಿಸುವ ಸಂಕೇತ

ಸ್ತನ್ಯಪಾನ (ನರ್ಸಿಂಗ್) ಎಂದರೆ ಅಮ್ಮಂದಿರು ಸ್ತನದಿಂದ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ  ಹಾಲನ್ನು ಉಣಿಸುವುದು. ಸಸ್ತನಿ ವರ್ಗದಲ್ಲಿ ಹಾಲು ತಯಾರಿ ಹಾಗೂ ಕುಡಿಸುವಿಕೆ ಅತ್ಯಂತ ವಿಶಿಷ್ಟವಾದುದು. ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ ಮತ್ತು ಹಲವುವೇಳೆ ಮಗುವು ಬಯಸಿದಷ್ಟು ಕಾಲ ಮುಂದುವರಿಯುತ್ತದೆ ಎಂದು ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ. ಜೀವನದ ಮೊದಲ ಕೆಲವು ವಾರಗಳಲ್ಲಿ ಶಿಶುಗಳು ಸುಮಾರು ಎರಡು ಅಥವಾ ಮೂರು ಗಂಟೆಗಳ ಕಾಲ ಸ್ತನ್ಯಪಾನ ಮಾಡಬಹುದು ಮತ್ತು ಆಹಾರದ ಅವಧಿಯು ಸಾಮಾನ್ಯವಾಗಿ ಪ್ರತಿ ಸ್ತನಕ್ಕೆ ಹತ್ತು ಹದಿನೈದು ನಿಮಿಷಗಳು ಆಗಿರುತ್ತದೆ. ಮಕ್ಕಳು ಬೆಳೆದಂತೆ ಕಡಿಮೆ ಬಾರಿ ಆಹಾರ ಪಡೆಯುತ್ತವೆ. ತಾಯಂದಿರು ಹಾಲನ್ನು ಪಂಪ್ ಮಾಡಬಹುದು. ತಾಯಂದಿರಿಂದ ಮಗುವಿಗೆ ಸ್ತನ್ಯಪಾನವು ಹಲವಾರು ಪ್ರಯೋಜನಗಳನ್ನು ಹೊಂದಿದೆ.[೧]

ಐದನೇ ವರ್ಷದೊಳಗಿನ ಅಂದಾಜು 820,000 ಮಕ್ಕಳ ಸಾವುಗಳನ್ನು ಪ್ರತಿ ವರ್ಷ ಜಾಗತಿಕವಾಗಿ ಹೆಚ್ಚಿನ ಹಾಲುಣಿಸುವಿಕೆಯಿಂದ ತಡೆಯಬಹುದು. ಸ್ತನ್ಯಪಾನವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ಉಸಿರಾಟದ ಸೋಂಕುಗಳು ಮತ್ತು ಅತಿಸಾರದ ಅಪಾಯವನ್ನು ಕಡಿಮೆ ಮಾಡುತ್ತದೆ. ಇತರ ಪ್ರಯೋಜನಗಳಲ್ಲಿ ಆಸ್ತಮಾ, ಆಹಾರ ಅಲರ್ಜಿ, ಟೈಪ್ 1 ಮಧುಮೇಹ, ಮತ್ತು ಲ್ಯುಕೀಮಿಯಾ ಆಗುವ ಕಡಿಮೆ ಅಪಾಯಗಳು ಸೇರಿವೆ. ಸ್ತನ್ಯಪಾನವು ಅರಿವಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಪ್ರೌಢಾವಸ್ಥೆಯಲ್ಲಿ ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡಬಹುದು. ತಾಯಂದಿರು ಸ್ತನ್ಯಪಾನ ಮಾಡಿಸುವ ಒತ್ತಡವನ್ನು ಅನುಭವಿಸಬಹುದು, ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಾಟಲ್‍ನಿಂದ ಆಹಾರ ಪಡೆಯುವ ಮಕ್ಕಳು ಮಾಮೂಲಾಗಿ ಬೆಳೆಯುತ್ತಾರೆ.[೨]

ತಾಯಿಗೆ ಲಾಭಗಳೆಂದರೆ ಹೆರಿಗೆ ನಂತರ ಕಡಿಮೆ ರಕ್ತದ ನಷ್ಟ, ಉತ್ತಮ ಗರ್ಭಾಶಯದ ಕುಗ್ಗುವಿಕೆ, ಮತ್ತು ಕಡಿಮೆ ಪ್ರಸವಾನಂತರದ ಖಿನ್ನತೆ. ಸ್ತನ್ಯಪಾನವು ಮುಟ್ಟು ಮತ್ತು ಫಲವತ್ತತೆಯನ್ನು ಹಿಂದಿರುಗಿಸುತ್ತದೆ, ಇದು ಲ್ಯಾಕ್ಟೇಶನಲ್ ಅಮೆನೋರಿಯಾ ಎಂದು ಕರೆಯಲ್ಪಡುವ ಒಂದು ವಿದ್ಯಮಾನವಾಗಿದೆ. ತಾಯಿಗೆ ದೀರ್ಘಕಾಲದ ಪ್ರಯೋಜನಗಳೆಂದರೆ ಸ್ತನ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ, ಮತ್ತು ಸಂಧಿವಾತದ ತೊಂದರೆಗಳು ಕಡಿಮೆ ಕಂಡುಬರುತ್ತವೆ.[೩]

ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿದಂತೆ ಆರೋಗ್ಯ ಸಂಸ್ಥೆಗಳು, ಆರು ತಿಂಗಳು ಕೇವಲ ಹಾಲುಣಿಸುವಿಕೆಯನ್ನು ಶಿಫಾರಸು ಮಾಡುತ್ತವೆ. ಅಂದರೆ, ಬಹುಶಃ ವಿಟಮಿನ್ D ಹೊರತಾಗಿ ಇತರ ಯಾವುದೇ ಆಹಾರಗಳು ಅಥವಾ ಪಾನೀಯಗಳನ್ನು ವಿಶಿಷ್ಟವಾಗಿ ನೀಡಲಾಗುವುದಿಲ್ಲ. ಆರು ತಿಂಗಳ ನಂತರ ಆಹಾರವನ್ನು ಪರಿಚಯಿಸಲಾದ ನಂತರ, ಒಂದು ಅಥವಾ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೂ ಸ್ತನ್ಯಪಾನ ಮುಂದುವರೆಸಲು ಶಿಫಾರಸು ಮಾಡಲಾಗುತ್ತದೆ.[೪]

ಜಾಗತಿಕವಾಗಿ ಸುಮಾರು 38% ರಷ್ಟು ಶಿಶುಗಳಿಗೆ ಅವುಗಳ ಮೊದಲ ಆರು ತಿಂಗಳ ಜೀವಿತಾವಧಿಯಲ್ಲಿ ಮಾತ್ರ ಎದೆಹಾಲು ನೀಡುತ್ತಾರೆ. ಅಮೇರಿಕದಲ್ಲಿ ಸುಮಾರು 75% ನಷ್ಟು ಮಹಿಳೆಯರು ಸ್ತನ್ಯಪಾನವನ್ನು ಪ್ರಾರಂಭಿಸುತ್ತಾರೆ ಮತ್ತು ಸುಮಾರು 13% ನಷ್ಟು ಮಾತ್ರ ಆರು ತಿಂಗಳ ವಯಸ್ಸಿನವರೆಗೆ ಸ್ತನ್ಯಪಾನ ಮಾಡುತ್ತಾರೆ.

ಸ್ತನ್ಯಪಾನವನ್ನು ಅನುಮತಿಸದ ವೈದ್ಯಕೀಯ ಪರಿಸ್ಥಿತಿಗಳು ಅಪರೂಪ. ಕೆಲವು ಮನರಂಜನಾ ಔಷಧಿಗಳನ್ನು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವ ತಾಯಂದಿರು ಸ್ತನ್ಯಪಾನ ಮಾಡಬಾರದು. ಸ್ವಲ್ಪ ಪ್ರಮಾಣದ ಧೂಮಪಾನ, ಸೀಮಿತ ಪ್ರಮಾಣದಲ್ಲಿ ಆಲ್ಕೊಹಾಲ್, ಅಥವಾ ಕಾಫಿ ತೆಗೆದುಕೊಂಡಿರುವವರು ಹಾಲುಣಿಸುವಿಕೆಯನ್ನು ತಪ್ಪಿಸಲು ಕಾರಣಗಳಲ್ಲ.[೫]

ಮೊಲೆಹಾಲೂಡುವಿಕೆ ಕೃತಕಹಾಲೂಡುವಿಕೆಗಿಂತ ಉತ್ಕೃಷ್ಟವಾದುದು. ಇದಕ್ಕೆ ಕಾರಣಗಳೆಂದರೆ:

  1. ಮಗುವಿಗೆ ಬೇಕಾದ ಹಾಲು ದೇಹೋಷ್ಣತೆಯಲ್ಲೇ ಸಿಗುತ್ತದೆ. ಬಿಸಿ ಮಾಡುವ ಅಥವಾ ತಯಾರುಮಾಡುವ ಅಗತ್ಯವಿಲ್ಲ.
  2. ಅದು ಸ್ವಚ್ಛವಾದುದು ಮತ್ತು ಕ್ರಿಮಿಹೀನವಾದುದು.
  3. ದುಬಾರಿಯಲ್ಲ: ಖರ್ಚಿಲ್ಲದೆ ದೊರೆಯುವಂಥದು.
  4. ಫಲವಾಗಿ ಮಗುವಿಗೆ ಮಾನಸಿಕ ಭದ್ರತೆಯುಂಟಾಗುತ್ತದೆ. ತಾಯಿಗೆ ಹಾಲೂಡಿಸುವ ಸಂತೋಷವುಂಟಾಗುತ್ತದೆ.
  5. ಮೊಲೆ ಹಾಲಿನಲ್ಲಿ ಅನೇಕ ರಕ್ಷಣಾ ಘಟಕಗಳಿದ್ದು ಅವು ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.

ತಾಯಿಯು ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು:

  1. ಮೊಲೆಯ ಆರೈಕೆ: ಮೊಲೆ ತೊಟ್ಟು ಸಣ್ಣದಾಗಿದ್ದರೆ ಅಥವಾ ಒಳಗೆ ತಿರುಗಿಕೊಂಡಿದ್ದರೆ ಅದನ್ನು ಹೊರಗೆ ಮೆದುವಾಗಿ ಎಳೆಯಬೇಕು. ಮೊಲೆ ಹಾಲೂಡುವ ಮುನ್ನ ಮತ್ತು ಆ ಬಳಿಕ ಅದನ್ನು ನೀರಿನಲ್ಲಿ ತೊಳೆಯಬೇಕು.
  2. ಹಾಲೂಡುವಿಕೆಗೆ ಅಂತರ: ಒಂದು ಸಾರಿ ಹಾಲೂಡುವಿಕೆ ಆರಂಭವಾದ ಬಳಿಕ, ಮೂರು ತಿಂಗಳ ತನಕ ಪ್ರತಿ ಮೂರು ಗಂಟೆಗಳಿಗೊಮ್ಮೆ ದಿನಕ್ಕೆ ಆರು ಬಾರಿ ಕೊಡುವ ಗುರಿಯಿರಿಸಿಕೊಳ್ಳಬೇಕು. ಮೂರು ತಿಂಗಳ ಬಳಿಕ ನಾಲ್ಕು ಗಂಟೆಗಳಿಗೊಮ್ಮೆ, ದಿನಕ್ಕೆ ಐದು ಸಾರಿ ಕೊಡಬೇಕು. ಸಾಧಾರಣವಾಗಿ ಮಗು ಹಾಲೂಡುವಿಕೆಗೆ ನಿಯಮಿತವಾಗಿ ಸಮಯವನ್ನು ಬೆಳೆಸಿಕೊಳ್ಳುತ್ತದೆ. ಆದರೆ ಕಟ್ಟುನಿಟ್ಟಾಗಿ ಗಡಿಯಾರಕ್ಕೆ ಅಂಟಿಕೊಳ್ಳುವ ಪರಿಪಾಠವನ್ನು ಎಂದಿಗೂ ಮಾಡಬಾರದು. ಮಗುವಿನ ಹಸಿವು ಮತ್ತು ಮನೋಧರ್ಮವನ್ನು ಗೌರವಿಸಬೇಕು.
  3. ಮೊಲೆ ಕೊಡುವ ಅವಧಿ ಪ್ರತಿಯೊಂದು ಮಗುವಿಗೂ ಬೇರೆ ಬೇರೆಯಾಗುತ್ತದೆ. ಆದರೆ ಪ್ರತಿಬಾರಿ ಬೇಕಾದಷ್ಟು ಪ್ರಮಾಣ ಸಿಗಬೇಕಾದರೆ ಸರಾಸರಿ 15 ಮಿನಿಟುಗಳು ಸಾಕು.
  4. ವಿಧಾನ: ತಾಯಿ ಆರಾಮವಾಗಿ ಕುಳಿತುಕೊಳ್ಳಬೇಕು. ಮಗುವನ್ನು ಮೊಲೆಗೆ ಸಮೀಪವಾಗಿ 300-400 ಕೋನದಲ್ಲಿ ಬೆನ್ನು ಆಧರಿಸಿ ಹಿಡಿಯಬೇಕು. ಅವಳು ಮೊಲೆತೊಟ್ಟನ್ನು ಬೆರಳುಗಳ ಮಧ್ಯೆ ಹಿಡಿದು, ಮಗುವಿನ ತುಟಿಗೆ, ಕೆನ್ನೆಗೆ ಮಿದುವಾಗಿ ತಾಗಿಸಿದಾಗ ಮಗು ಜೋರಾಗಿ ಬಾಯಿ ತೆಗೆದು ತೊಟ್ಟನ್ನು ಹುಡುಕತೊಡಗುತ್ತದೆ. ಆಗ ಅದರ ಬಾಯೊಳಗೆ ತೊಟ್ಟನ್ನು ಅದರ ಸುತ್ತ ಇರುವ ಕಪ್ಪುಭಾಗವನ್ನು (ಏರಿಯೋಲಾ) ಊಡಬೇಕು. ಮಗು ಏರಿಯೋಲಾದ ಮೇಲೆ ದವಡೆಯನ್ನಿಟ್ಟು ಕಚ್ಚಲು ಅನುವು ಮಾಡಿಕೊಡಬೇಕು. ಮಗುವಿನ ಬಾಯಿಯೊಳಗೆ ಇರಿಸಬೇಕು. ಪ್ರತಿ ಬಾರಿಯೂ ಎರಡೂ ಕಡೆ ಕುಡಿಸಬೇಕು. ಮಗುವಿನ ಮುಖವನ್ನು ತಾಯಿಯ ಹೆಗಲ ಮೇಲಿರಿಸಿಕೊಂಡು ಬೆನ್ನನ್ನು ಮೆಲ್ಲನೆ ನೀವಿ ವಾಯುವನ್ನು ಹೊರಗೆ ಬರಿಸಬೇಕು.
  5. ಹಾಲು ಸಾಕಾಗುತ್ತದೆಯೇ ಎಂಬುದನ್ನು ಈ ಮುಂದಿನವುಗಳಿಂದ ನಿರ್ಧರಿಸಬಹುದು. ಮಗುವಿನ ತೃಪ್ತಿ, ತೂಕಮಾಡಿದಾಗ ಮಗುವಿನ ತೂಕ ಏರುವಿಕೆ ಸಮಾಧಾನಕರವಾಗಿರುತ್ತದೆ. ಸಾಕಾಗದಿದ್ದರೆ ಮಲಬದ್ಧತೆಯುಂಟಾಗುತ್ತದೆ. ಸಾಕಷ್ಟು ಬಾರಿ ಮಗು ಮೂತ್ರ ಮಾಡುತ್ತದೆ. ತಿಂಗಳಿಗೆ 300-400 ಗ್ರಾಂ ಹೆಚ್ಚಳ ತೂಕ ಆಗುತ್ತವೆ.

ತೊಟ್ಟಿನ ಸುತ್ತ ಇರುವ Ascola ಭಾಗದಲ್ಲಿ ಸಿದ್ಧಿಗೊಂಡ ಹಾಲು ಶೇಖರಣೆಯಾಗಿರುತ್ತವೆ. ಅದು ಮೊದಲು ಸುಲಭವಾಗಿ ಮಗುವಿನ ಬಾಯೊಳಗೆ ಹೋಗುತ್ತವೆ. ಮಗು ಚೀಪಲು ಆರಂಭಿಸಿದಾಗ ದುಗ್ಧನಾಳಗಳಲ್ಲಿ, ಗ್ರಂಥಿಗಳಲ್ಲಿ ಉತ್ಪತ್ತಿಯಾದ ಹಾಲನ್ನು ಎಳೆಯಲು ಸಮರ್ಥವಾಗುತ್ತದೆ. ತಾಯಿಗೂ ಅನಿವರ್ಚನೀಯ ಆನಂದ ಸಿಗುತ್ತದೆ.

ಹಾಲೂಡಿಕೆ[ಬದಲಾಯಿಸಿ]

ಗರ್ಭಾವಸ್ಥೆಯಲ್ಲಿನ ಆರಂಭಿಕ ಬದಲಾವಣೆಗಳು ಹಾಲೂಡಿಕೆಗೆ ಸ್ತನವನ್ನು ತಯಾರಿಸುತ್ತದೆ. ಗರ್ಭಾವಸ್ಥೆಗೆ ಮೊದಲು ಸ್ತನ ಹೆಚ್ಚಾಗಿ ಅಡಿಪೋಸ್ (ಕೊಬ್ಬು) ಅಂಗಾಂಶದಿಂದ ಕೂಡಿರುತ್ತದೆ. ಆದರೆ ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಪ್ರೋಲ್ಯಾಕ್ಟಿನ್ ಮತ್ತು ಇತರ ಹಾರ್ಮೋನುಗಳ ಪ್ರಭಾವದಿಂದ ಸ್ತನಗಳು ಮಗುವಿನ ಹಾಲು ಉತ್ಪಾದನೆಗೆ ತಯಾರಾಗುತ್ತವೆ. ಸ್ತನಗಳಿಗೆ ರಕ್ತದ ಹರಿವಿನ ಹೆಚ್ಚಳವಿರುತ್ತದೆ. ಮೊಲೆತೊಟ್ಟುಗಳ ವರ್ಣದ್ರವ್ಯ ಮತ್ತು ಕವಚವು ಹೆಚ್ಚಾಗುತ್ತದೆ, ಗಾತ್ರವೂ ಹೆಚ್ಚಾಗುತ್ತದೆ. ಆದರೆ ಸ್ತನದ ಗಾತ್ರವು ಮಗುವಿನ ಜನನದ ನಂತರ ತಾಯಿಯಿಂದ ಉತ್ಪತ್ತಿಯಾಗಬಲ್ಲ ಹಾಲಿನ ಪ್ರಮಾಣಕ್ಕೆ ಸಂಬಂಧಿಸಿಲ್ಲ.

ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ, ದಟ್ಟವಾದ ಹಳದಿ ದ್ರವವಾದ ಕೊಲೊಸ್ಟ್ರಮ್ (ಗಿಣ್ಣುಹಾಲು) ಅಲ್ವೆಯೋಲಿಯಲ್ಲಿ ಉತ್ಪತ್ತಿಯಾಗಲು ಆರಂಭವಾಗುತ್ತದೆ ಮತ್ತು ಹಾಲು "ಬರುವವ" ರೆಗೆ ಮೊದಲ ಕೆಲವು ದಿನಗಳವರೆಗೆ, ಅಂದರೆ ಹೆರಿಗೆಯ ನಂತರ ಸುಮಾರು 30 ರಿಂದ 40 ಗಂಟೆಗಳವರೆಗೆ ಉತ್ಪತ್ತಿಯಾಗುತ್ತದೆ. ಇದರ ಸಂಯೋಜನೆ ಬೇರೆ ರೀತಿಯದು. ಗಿಣ್ಣುಹಾಲನ್ನು ಕುಡಿಸುವುದರಿಂದ ಯಾವ ಅಪಾಯವೂ ಇಲ್ಲ. ಕರುಳಿಗೆ ಅಗತ್ಯವಾದ ರಕ್ಷಣಾ ಕಣ-ಘಟಕಗಳು ಇದರಲ್ಲಿ ಸಾಂದ್ರೀಕೃತವಾಗಿರುತ್ತದೆ. ತಮ್ಮ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸ್ತನ್ಯಪಾನ ಮಾಡಿಸುವ ತಾಯಂದಿರು ಹೆಚ್ಚಿನ ದ್ರವ ಸೇವನೆ ಮಾಡಬೇಕು ಎಂಬುದನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಆಕ್ಸಿಟೋಸಿನ್ ಜನನದ ಸಮಯದಲ್ಲಿ ಗರ್ಭಕೋಶದ ಮೃದುವಾದ ಸ್ನಾಯು ಪದರವನ್ನು ಸಂಕುಚಿಸುತ್ತದೆ. ಪ್ರಸವಾನಂತರದ ಅವಧಿಯಲ್ಲಿ, ಸ್ತನ್ಯಪಾನ ಮಾಡುವಾಗ ಹೊಸದಾಗಿ ಉತ್ಪತ್ತಿಯಾಗುವ ಹಾಲನ್ನು ನಾಳದ ವ್ಯವಸ್ಥೆಯೊಳಗೆ ಹಿಂಡುವ ಸಲುವಾಗಿ ಆಲ್ವಿಯೋಲಿಯನ್ನು ಸುತ್ತುವರಿದ ಪಟ್ಟೆಯಂತಹ ಕೋಶಗಳ ಮೃದು ಸ್ನಾಯುವಿನ ಪದರವನ್ನು ಸಹ ಆಕ್ಸಿಟೋಸಿನ್ ಸಂಕುಚಿಸುತ್ತದೆ. ಹೀರುವ ಪ್ರಕ್ರಿಯೆಗೆ ಪ್ರತಿಯಾಗಿ, ಹಾಲು ವಿಸರ್ಜನಾ ಪ್ರತಿವರ್ತನವಾಗಲು ಅಥವಾ ಕೆಳಗೆ ಬೀಳಲು ಆಕ್ಸಿಟೋಸಿನ್ ಅಗತ್ಯವಾಗಿರುತ್ತದೆ.

ಎದೆ ಹಾಲು[ಬದಲಾಯಿಸಿ]

ಎದೆ ಹಾಲಿನ ಎಲ್ಲ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲಾಗಿಲ್ಲ. ಆದರೆ ಇದರ ಪೋಷಕಾಂಶವು ತುಲನಾತ್ಮಕವಾಗಿ ಸ್ಥಿರವಾಗಿರುತ್ತದೆ. ಎದೆ ಹಾಲು ತಾಯಿಯ ರಕ್ತ ಪ್ರವಾಹದಲ್ಲಿ ಮತ್ತು ದೈಹಿಕ ಸಂಗ್ರಹಗಳಲ್ಲಿನ ಪೋಷಕಾಂಶಗಳಿಂದ ತಯಾರಾಗುತ್ತದೆ. ಇದು ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಕೊಬ್ಬು, ಸಕ್ಕರೆ, ನೀರು, ಮತ್ತು ಪ್ರೋಟೀನ್‍ಗಳ ಸಮತೋಲನವನ್ನು ಹೊಂದಿದೆ. ಮೊಲೆ ಹಾಲಿನಲ್ಲಿ 2% ಸಸಾರಜನಕ, 4% ಕೊಬ್ಬು ಮತ್ತು 6% ಪಿಷ್ಟಪದಾರ್ಥಗಳಿರುತ್ತವೆ. ಹಾರ್ಮೋನುಗಳು, ಬೆಳವಣಿಗೆಯ ಅಂಶಗಳು ಮತ್ತು ಪ್ರತಿರಕ್ಷಾ ವಸ್ತುಗಳು ಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಶಿಶುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸುವುದಕ್ಕೆ ಅನುವು ಮಾಡಿಕೊಡಲು ಸ್ತನ್ಯಪಾನವು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಎದೆ ಹಾಲು ದೀರ್ಘ ಸರಪಳಿ ಬಹುಅಪರ್ಯಾಪ್ತ ಕೊಬ್ಬಿನಾಮ್ಲವನ್ನೂ ಹೊಂದಿರುತ್ತದೆ. ಇದು ಸಾಮಾನ್ಯ ರೆಟಿನಲ್ ಮತ್ತು ನರಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಪ್ರಕ್ರಿಯೆ[ಬದಲಾಯಿಸಿ]

ಪ್ರಾರಂಭ[ಬದಲಾಯಿಸಿ]

ಹುಟ್ಟಿದ ನಂತರ ತಕ್ಷಣ ಹಾಲೂಡಿಕೆ ಪ್ರಾರಂಭವಾಗಬಹುದು. ಮಗು ಆಸಕ್ತಿ ತೋರಿಸಿದ ತಕ್ಷಣ ಮಗುವನ್ನು ತಾಯಿಯ ಮೇಲೆ ಇರಿಸಲಾಗುತ್ತದೆ ಮತ್ತು ಹಾಲುಣಿಸುವಿಕೆ ಪ್ರಾರಂಭವಾಗುತ್ತದೆ. ತಾಯಿ ಮತ್ತು ಮಗುವಿಗೆ ತಾಯಿ-ಮಗುವಿನ ಬಂಧದಲ್ಲಿ ಈ ಶಿಶು-ತಾಯಿಯ ಪರಸ್ಪರ ಕ್ರಿಯೆಯು ಸಹಾಯ ಮಾಡುತ್ತದೆ ಎಂದು ಊಹಿಸಲಾಗಿದೆ.

ತಾಯಿಯ ಮತ್ತು ಮಗುವಿನ ನಡುವೆ ಆರಂಭಿಕ ಚರ್ಮದಿಂದ ಚರ್ಮದ ಸಂಪರ್ಕವು (ಕಾಂಗರೂ ಕಾಳಜಿ ಎಂದೂ ಕರೆಯಲಾಗುತ್ತದೆ) ಮಗುವಿನಲ್ಲಿ ಹಾಲುಣಿಸುವ ನಡವಳಿಕೆಯನ್ನು ಪ್ರಚೋದಿಸುತ್ತದೆ. ಸೂಚಿಸುವ ಸಾಕ್ಷ್ಯ ಹೆಚ್ಚುತ್ತಿದೆ.

ಹುಟ್ಟಿದ ತಕ್ಷಣವೇ ನವಜಾತ ಶಿಶುಗಳನ್ನು ತಮ್ಮ ತಾಯಿಯ ಚರ್ಮದ ಮೇಲೆ ಇರಿಸಿಕೊಳ್ಳುವುದರಿಂದ ಅವುಗಳು ಸ್ತನಕ್ಕೆ ತಾಳಿಕೊಳ್ಳುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿರುತ್ತವೆ ಮತ್ತು ಅವು ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸುತ್ತವೆ. ತತ್ಕ್ಷಣದ ಚರ್ಮದಿಂದ ಚರ್ಮದ ಸಂಪರ್ಕವು ಒಂದು ರೀತಿಯ ಆಪ್ತವಾಗುವಿಕೆಯನ್ನು ನೀಡುತ್ತದೆ. ಅದು ನಂತರದ ಆಹಾರ ಸೇವನೆಯನ್ನು ಗಮನಾರ್ಹವಾಗಿ ಸುಲಭಗೊಳಿಸುತ್ತದೆ. ಹೆಚ್ಚು ಯಶಸ್ವಿಯಾದ ಸ್ತನ್ಯಪಾನ ಮತ್ತು ಬಂಧದ ಜೊತೆಗೆ, ತಕ್ಷಣದ ಚರ್ಮದಿಂದ ಚರ್ಮದ ಸಂಪರ್ಕವು ಅಳುವನ್ನು ಕಡಿಮೆಮಾಡುತ್ತದೆ ಮತ್ತು ಮಗುವನ್ನು ಬೆಚ್ಚಗಾಗಿಸುತ್ತದೆ.

UNICEF ನಿಂದ ಉಲ್ಲೇಖಿಸಲ್ಪಟ್ಟ ಅಧ್ಯಯನದ ಪ್ರಕಾರ, ಮೊದಲ ಸ್ತನ್ಯಪಾನಕ್ಕೆ ಕಾರಣವಾಗುವ ಪ್ರಕ್ರಿಯೆಯನ್ನು ಶಿಶುಗಳು ನೈಸರ್ಗಿಕವಾಗಿ ಅನುಸರಿಸುತ್ತವೆ.

ಆರಂಭದಲ್ಲಿ ಜನನದ ನಂತರ, ಮಗುವು ಮೊದಲ ಶ್ವಾಸಗಳ ಮೂಲಕ ಅಳುತ್ತದೆ. ಸ್ವಲ್ಪ ಸಮಯದ ನಂತರ, ಅದು ಸಡಿಲಗೊಂಡು ಭುಜ ಮತ್ತು ತಲೆಯನ್ನು ಸಣ್ಣದಾಗಿ ಚಲಿಸುತ್ತದೆ.

ತಾಯಿಯ ಉದರದ ಮೇಲೆ ಇರಿಸಿದರೆ ಮಗುವು ನಂತರ ಸ್ತನದ ಕಡೆಗೆ ತೆವಳುತ್ತದೆ. ಇದನ್ನು ಸ್ತನ ತೆವಳುವಿಕೆ ಎಂದು ಕರೆಯಲಾಗುತ್ತದೆ ಮತ್ತು ಆಹಾರ ಸೇವನೆಯನ್ನು ಪ್ರಾರಂಭಿಸುತ್ತದೆ. ಸೇವನೆಯ ನಂತರ, ವಿಶ್ರಾಂತಿ ಮಾಡುತ್ತಿರುವಾಗ ಮಗುವು ಸ್ತನಕ್ಕೆ ಅಂಟಿಕೊಂಡಿರುವುದು ಸಾಮಾನ್ಯವಾಗಿದೆ. ತೂಕ, ಅಳತೆ, ಸ್ನಾನ, ಸೂಜಿ ಚುಚ್ಚುವುದು, ಮತ್ತು ಕಣ್ಣಿನ ರೋಗನಿರೋಧಕ ಚಿಕಿತ್ಸೆಗಳಂತಹ ಚಟುವಟಿಕೆಗಳನ್ನು ಮೊದಲ ಸೇವನೆಯ ನಂತರ ನಡೆಸಲಾಗುತ್ತದೆ.

ಮಗುವು ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದ ಜನಿಸಿದರೂ, ಪ್ರಸ್ತುತ ಸಂಶೋಧನೆಯು ಚರ್ಮದಿಂದ ಚರ್ಮದ ತಾಯಿಯ-ಮಗುವಿನ ಸಂಪರ್ಕವನ್ನು ಬಲವಾಗಿ ಬೆಂಬಲಿಸುತ್ತದೆ. ಮಗುವನ್ನು ಶಸ್ತ್ರಕ್ರಿಯಾ ಕೋಣೆಯಲ್ಲಿ ಅಥವಾ ಚೇತರಿಸಿಕೊಳ್ಳುವ ಸ್ಥಳದಲ್ಲಿ ತಾಯಿಯ ಮೇಲೆ ಇರಿಸಲಾಗುತ್ತದೆ. ಮಗುವನ್ನು ತಕ್ಷಣ ಹಿಡಿದಿಡಲು ತಾಯಿಗೆ ಸಾಧ್ಯವಾಗದಿದ್ದರೆ ಅದು ಸಾಧ್ಯವಾಗುವ ತನಕ ಕುಟುಂಬದ ಒಬ್ಬ ಸದಸ್ಯನು ಚರ್ಮದಿಂದ ಚರ್ಮದ ಆರೈಕೆಯನ್ನು ಒದಗಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Breastfeeding and Breast Milk: Condition Information". 19 ಡಿಸೆಂಬರ್ 2013. Archived from the original on 27 ಜುಲೈ 2015. Retrieved 27 ಜುಲೈ 2015. {{cite web}}: Unknown parameter |deadurl= ignored (help)
  2. "Infant and young child feeding Fact sheet N°342". WHO. ಫೆಬ್ರವರಿ 2014. Archived from the original on 8 ಫೆಬ್ರವರಿ 2015. Retrieved 8 ಫೆಬ್ರವರಿ 2015. {{cite web}}: Unknown parameter |deadurl= ignored (help)
  3. "How do I breastfeed? Skip sharing on social media links". 14 ಏಪ್ರಿಲ್ 2014. Archived from the original on 27 ಜುಲೈ 2015. Retrieved 27 ಜುಲೈ 2015. {{cite web}}: Unknown parameter |deadurl= ignored (help)
  4. "What is weaning and how do I do it?". 19 ಡಿಸೆಂಬರ್ 2013. Archived from the original on 8 ಜುಲೈ 2015. Retrieved 27 ಜುಲೈ 2015. {{cite web}}: Unknown parameter |deadurl= ignored (help)
  5. Ip S, Chung M, Raman G, Trikalinos TA, Lau J (October 2009). "A summary of the Agency for Healthcare Research and Quality's evidence report on breastfeeding in developed countries". Breastfeeding Medicine. 4 Suppl 1: S17–30. doi:10.1089/bfm.2009.0050. PMID 19827919.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: