ವಿಷಯಕ್ಕೆ ಹೋಗು

ಗರ್ಭಧಾರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pregnant woman

ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ.[೧].ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು.[೨].ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ. ತಪ್ಪಿದ ಋತುಚಕ್ರ, ಕೋಮಲ ಸ್ತನಗಳು, ಸ್ತನಗಳ ವೃದ್ಧಿ, ಮೊಲೆತೊಟ್ಟು ಕಪ್ಪು ವರ್ಣಕ್ಕೆ ತಿರುಗುವುದು, ವಾಕರಿಕೆ ಮತ್ತು ವಾಂತಿ, ಹಸಿವು ಮತ್ತು ಪದೇ ಪದೇ ಮೂತ್ರವಿಸರ್ಜನೆ ಇವು ಗರ್ಭಧಾರಣೆಯ ಲಕ್ಷಣಗಳು.[೩] ಗರ್ಭ ಇರುವುದು ಗರ್ಭ ಪರೀಕ್ಷೆಯ ಮೂಲಕ ನಿರ್ಧರಿಸಲ್ಪಡುತ್ತದೆ.[೪]

ಸಂಭೋಗ ಕ್ರಿಯೆಯಿಂದ ವೀರ್ಯ ಯೋನಿಯೊಳಹೊಕ್ಕ ಸಮಯದಲ್ಲಿ ಅಂಡಾಣು ಗರ್ಭಕೋಶನಾಳದೊಳಗಿದ್ದರೆ (ಫೆಲೋಪಿಯನ್ ಟ್ಯೂಬ್) ಅಥವಾ 12-24 ಗಂಟೆಗಳ ಬಳಿಕವಾದರೂ ಅದು ಬರುವ ಹಾಗಿದ್ದರೆ ಮಾತ್ರ ಅದರೊಡನೆ ಪುರುಷಾಣುವಿನ ಮಿಲನ ಸಾಧ್ಯ. ಪ್ರತಿ ಸಂಭೋಗ ಕ್ರಿಯೆಯೂ ಸ್ತ್ರೀಯಲ್ಲಿ ಗರ್ಭಾವಸ್ಥೆಯನ್ನು ಉಂಟುಮಾಡದೆ ಇರುವುದಕ್ಕೂ ಸಾಮಾನ್ಯವಾಗಿ ಮಾಸಿಕಚಕ್ರದ ಸುಮಾರು ಮಧ್ಯಕಾಲದಲ್ಲಿ ಮಾತ್ರ ಸಂಭೋಗದಿಂದ ಗರ್ಭಧಾರಣೆಯಾಗುವುದಕ್ಕೂ ಇದೇ ಕಾರಣ. ಸ್ತ್ರೀಯರಲ್ಲಿ ಪ್ರತಿ ತಿಂಗಳೂ (28 ದಿವಸಗಳ ಚಾಂದ್ರಮಾನ ತಿಂಗಳು) ಒಂದು ಅಂಡಾಣು ಅಂಡಾಶಯದಿಂದ ಕಳಿತು ಹೊರಬೀಳುತ್ತದೆ. ಮೇಲೆ ಹೇಳಿದಂತೆ 12-24 ಗಂಟೆಗಳ ಒಳಗೇ ಅದು ಪುರುಷಾಣುವಿನೊಡನೆ ಮಿಲನಗೊಂಡರೆ ಆಗ ಗರ್ಭಾವಸ್ಥೆಯುಂಟಾಗುತ್ತದೆ. ಇಲ್ಲದಿದ್ದರೆ ಅಂಡಾಣು ನಿಧಾನವಾಗಿ ಮುಂದಕ್ಕೆ ನೂಕಲ್ಪಡುತ್ತ ಗರ್ಭಕೋಶವನ್ನು ತಲಪಬಹುದು. ಆಮೇಲೋ ಅಥವಾ ಇನ್ನೂ ಮುಂಚೆಯೋ ಅದು ನಶಿಸಿಹೋಗುತ್ತದೆ. ಗರ್ಭಾವಸ್ಥೆ ಉಂಟಾಗದ ಇಂಥ ಸನ್ನಿವೇಶದಲ್ಲಿ ಅಂಡಾಣು ಅಂಡಾಶಯದಿಂದ ಹೊರಬಿದ್ದ 14 ದಿವಸಗಳ ತರುವಾಯ ಸ್ತ್ರೀಯಲ್ಲಿ ರಜಸ್ರಾವವಾಗುತ್ತದೆ. ಗರ್ಭಾವಸ್ಥೆ ಉಂಟಾದರೆ ರಜಸ್ರಾವವಾಗುವುದಿಲ್ಲ. ಆದ್ದರಿಂದ ಹೆಂಗಸು ಮುಟ್ಟಾಗುವುದು ಆಕೆ ಬಸಿರಾಗದೆ ಹೋದುದರ ಸೂಚನೆ ಮತ್ತು ಪರಿಣಾಮವಾಗಿರುತ್ತದೆ. ಹೆಂಗಸಿನ ಜೀವಮಾನದಲ್ಲಿ ಗರ್ಭಧಾರಣಾ ಸೌಲಭ್ಯ ಸುಮಾರು 15ನೆಯ ವರ್ಷದಿಂದ ಸುಮಾರು 50ನೆಯ ವರ್ಷ ವಯಸ್ಸಿನ ತನಕ ಕಾಣಬರುತ್ತದೆ. ಅಂದರೆ ಹುಡುಗಿ ಮೈನೆರೆದು ಪ್ರೌಢಳಾದಾಗಿನಿಂದ ವಯಸ್ಕ ಹೆಂಗಸಿನಲ್ಲಿ ಮುಟ್ಟು ನಿಲ್ಲುವತನಕ ಸಂತಾನ ಪ್ರಾಪ್ತಿ ಸೌಲಭ್ಯ ಉಂಟು.

ಪ್ರಜನನ ಜನನಾಂಗಗಳು[ಬದಲಾಯಿಸಿ]

ಸ್ತ್ರೀ ಸಂತಾನೋತ್ಪತ್ತಿಯ ಮೂಲ ವ್ಯವಸ್ಥೆ (English)
ರಜಸ್ಸ್ರಾವಕ್ಕೂ ಗರ್ಭಧಾರಣೆ ಗರ್ಭಾವಸ್ಥೆಗಳಿಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಾದರೆ ಹೆಂಗಸಿನಲ್ಲಿ ಪ್ರಜನನ ಕ್ರಿಯೆ ಜನನಾಂಗಗಳಿಂದ ಜರುಗಿಸಲ್ಪಡುವ ದೇಹಕಾರ್ಯ ಸ್ತ್ರೀಯಲ್ಲಿ ಪ್ರಧಾನ ಜನನಾಂಗಗಳೆಂದರೆ ಕಿಬ್ಬೊಟ್ಟೆಯಲ್ಲಿರುವ (ಪೆಲ್ವಿಕ್ ಕ್ಯಾವಿಟಿ) ಎಡ ಮತ್ತು ಬಲ ಅಂಡಾಶಯಗಳು ಮತ್ತು ಅವುಗಳ ನಡುವೆ ಇರುವ ಗರ್ಭಕೋಶ. ಅಂಡಾಶಯಗಳ ಸನಿಹದಲ್ಲಿ ಪ್ರಾರಂಭವಾಗುವ ಗರ್ಭಕೋಶನಾಳಗಳು ಗರ್ಭಕೋಶವನ್ನು ಸೇರುತ್ತವೆ. ಗರ್ಭಕೋಶ ಗೇರುಹಣ್ಣಿನ ಆಕಾರದಲ್ಲಿರುತ್ತದೆ. ಅದರ ಕಂಠ ಯೋನಿಯೊಳಕ್ಕೆ ಚಾಚಿಕೊಂಡಿರುತ್ತದೆ. ಯೋನಿಗೆ ಸಂಪರ್ಕವನ್ನು ಉಂಟುಮಾಡುವ ಭಾಗವಿದು. ಅಲ್ಲದೇ ಇದು ಗರ್ಭಕೋಶದೊಳಕ್ಕೂ ಹೊರಗಡೆಗೂ ಸಂಪರ್ಕವನ್ನು ಉಂಟುಮಾಡುತ್ತದೆ. ಹುಡುಗಿ ಮೈನೆರೆದಾಗ ಈ ಭಾಗಗಳಲ್ಲಿ ಮತ್ತು ಅನುಷಂಗಿಕ ಅಂಗಗಳಲ್ಲಿ ಮುಖ್ಯವಾಗಿ ಸ್ತನಗಳಲ್ಲಿ ಚಟುವಟಿಕೆ ಮತ್ತು ಕ್ರಿಯಾಶಕ್ತಿ ಮೂಡಿ ಬಂದು ವಿಶಿಷ್ಟ ಕ್ರಮವನ್ನು ಅನುಸರಿಸಿ ಜರುಗುವ ಕ್ರಿಯೆ ಕಂಡುಬರುತ್ತದೆ. ಇದರ ಅವಧಿ ಸಾಮಾನ್ಯವಾಗಿ 28 ದಿವಸಗಳು ಅಥವಾ ಒಂದು ಚಾಂದ್ರಮಾನ 30ಗಳು ರಜಸ್ಸ್ರಾವ ಈ ಚಕ್ರೀಯ ಕ್ರಿಯೆಯಲ್ಲಿ ಪ್ರಧಾನವಾಗಿ ವ್ಯಕ್ತವಾಗುವ ಘಟ್ಟವಾದುದರಿಂದ ಇದನ್ನು ಮಾಸಿಕ ಚಕ್ರವೆಂದು ಕರೆದು, ಚಕ್ರವನ್ನು ರಜಸ್ಸ್ರಾವದ ಮೊದಲನೆಯ ದಿವಸದಿಂದ ಎಣಿಸುವುದು ರೂಢಿಯಾಗಿದೆ. ಈ ಕ್ರಿಯೆಗೆ ತಲೆಚಿಪ್ಪಿನೊಳಗೆ ಮಿದುಳಿನ ತಳಭಾಗದಿಂದ ತೊಟ್ಟಿನ ಮೂಲಕ ನೇತುಬಿದ್ದಿರುವ ಪಿಟ್ಯುಟರಿ ಗ್ರಂಥಿಯ ಮುಂಭಾಗದ ಎಸ್.ಎಸ್.ಎಚ್., ಎಲ್.ಎಚ್. ಮತ್ತು ಎಲ್.ಟಿ.ಎಚ್ ಗಳೆಂಬ ಅಂತಃಸ್ರಾವಗಳೇ ಕಾರಣ. ಇವು ಅಂಡಾಶಯಗಳ ಮೇಲೆ ಪ್ರಭಾವ ಬೀರಿ ಅವನ್ನು ಕಾರ್ಯೋನ್ಮುಖಗೊಳಿಸುತ್ತವೆ. ಎಡ ಅಥವಾ ಬಲ ಅಂಡಾಶಯಗಳಲ್ಲಿ ಯಾವುದಾದರೂ ಒಂದು (ಯಾವುದು ಎನ್ನುವುದು ಕೇವಲ ಅನಿರ್ದಿಷ್ಟ) ಅಂಡಾಶಯದಿಂದ ಸಾಮಾನ್ಯವಾಗಿ ಒಂದು ಅಂಡಾಣು ಸುಮಾರು 2 ವಾರಗಳಲ್ಲಿ ಬಲಿತು ಹಣ್ಣಾಗುವುದಕ್ಕೆ ಈ ಎರಡು ವಾರಗಳು ಪಿಟ್ಯುಟರಿಯಿಂದ ಉತ್ಪತ್ತಿಯಾಗುವ ಎಫ್.ಎಸ್.ಎಚ್. ಕಾರಣ. ಇದೇ ಕಾರಣದಿಂದಲೇ ಈ ಎರಡು ವಾರಗಳಲ್ಲೂ ಅಂಡಾಶಯದಿಂದ ಈಸ್ಟ್ರೋಜೆನ್ನೆಂಬ ಅಂತಃಸ್ರಾವ ಉತ್ಪತ್ತಿಯಾಗುತ್ತದೆ. ಈಸ್ಟ್ರೋಜಿನ್ ಮುಖ್ಯವಾಗಿ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಭಾವ ಬೀರಿ ಅವುಗಳ ವೃದ್ಧಿಯನ್ನು ಉಂಟುಮಾಡುವುದು. ಎರಡು ವಾರಗಳ ತರುವಾಯ ಪಿಟ್ಯುಟರಿ ಎಫ್.ಎಸ್.ಎಚ್. ಬದಲು ಎಲ್.ಎಚ್ ಮತ್ತು ಎಲ್.ಟಿ.ಎಚ್ಗಳನ್ನು ಸ್ರವಿಸುತ್ತದೆ. ಇವುಗಳ ಪ್ರಭಾವವೂ ಅಂಡಾಶಯಗಳ ಮೇಲೆಯೇ ಪ್ರಧಾನವಾಗಿರುವುದು. ಈ ಕಾಲದ ಪ್ರಾರಂಭದಲ್ಲಿ ಅಂದರೆ ಸುಮಾರು 14ನೆಯ ದಿವಸವೇ ಬಲಿತು ಹಣ್ಣಾದ ಅಂಡಾಣು ಅಂಡಾಶಯದಿಂದ ಹೊರಬಿದ್ದು ಗರ್ಭಕೋಶ ನಾಳದೊಳಕ್ಕೆ ಹೀರಲ್ಪಟ್ಟು ಅದರೊಳಗೆ ಗರ್ಭಕೋಶದೆಡೆಗೆ ನೂಕಲ್ಪಡುತ್ತಿರುತ್ತದೆ. ಅಂಡಾಣುವಿದ್ದ ಸ್ಥಳ ರೂಪಾಂತರಗೊಂಡು ಕಾರ್ಪಸ್ ಲೂಟಿಯಂ ಮುಂದಕ್ಕೆ 14 ದಿವಸಗಳ ಪರ್ಯಂತ ಪ್ರೊಜೆಸ್ಟಿರಾನ್ ಎಂಬ ಅಂತಃಸ್ರಾವವನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕೆ ಪಿಟ್ಯುಟರಿಯ ಎಲ್.ಟಿ.ಎಚ್. ಕಾರಣ ಪ್ರೊಜೆಸ್ಟಿರಾನ್ ಕೂಡ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಧಾನವಾಗಿ ಪ್ರಭಾವ ಬೀರಿ ಅವುಗಳ ವೃದ್ಧಿತ ಸ್ಥಿತಿ ಉಪಯುಕ್ತ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಎರಡು ವಾರಗಳ ಕೊನೆಯಲ್ಲಿ ಪಿಟ್ಯುಟರಿ ಎಲ್.ಎಚ್ ಮತ್ತು ಎಲ್.ಟಿ.ಎಚ್ ಅನ್ನು ಸ್ರವಿಸುವ ಬದಲು ಪುನಃ ಎಫ್.ಎಸ್.ಎಚ್. ಅನ್ನು ಸ್ರವಿಸುವುದಕ್ಕೆ ಪ್ರಾರಂಭಿಸುತ್ತದೆ. ತನ್ನ ಕ್ರಿಯಾಶಕ್ತಿ ಜರಾಯು ತಾಯಿಯ ಗರ್ಭಕೋಶ ಭಿತ್ತಿಯಿಂದ ಬೇರ್ಪಟ್ಟು ಅದರ ಕಾರ್ಯ ಕ್ಷೀಣಿಸುತ್ತದೆ, ಪ್ರೋಜೆಸ್ಟಿರಾನಿನ ಉತ್ಪತ್ತಿಗೆ ಇದರಿಂದ ಧಕ್ಕೆಯಾಗಿ ಗರ್ಭಾವಸ್ಥೆ ಕೊನೆಗೊಳ್ಳುತ್ತದೆ. ಆದರೆ ಇಷ್ಟರೊಳಗೆ ಭ್ರೂಣ ಬೆಳೆದು ತಾಯಿಯ ನೆರವಿಲ್ಲದೆ ಸ್ವತಂತ್ರವಾಗಿ ಜೀವಿಸಬಲ್ಲ ಮಗುವಾಗಿ ಅದರ ಜನನವಾಗುತ್ತದೆ. ಈ ಜನನಕ್ಕೆ ಪ್ರೋಜೆಸ್ಟಿರಾನಿನ ಉತ್ಪತ್ತಿಯ ನಿಲುಗಡೆ ಮಾತ್ರ ಕಾರಣವಲ್ಲ, ಪಿಟ್ಯುಟರಿ ಗ್ರಂಥಿಯ ಹಿಂಭಾಗದಿಂದ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಎಂಬ ಅಂತಃಸ್ರಾವವೂ ಶಿಶು ಜನನಕ್ಕೆ (ಗರ್ಭಾವಸ್ಥೆಯ ಅಂತ್ಯಕ್ಕೆ) ಮುಖ್ಯವಾಗಿದೆ. ಬಹುಶ ಪ್ರೋಜೆಸ್ಟಿರಾನಿನ ಪ್ರಭಾವಕ್ಕೆ ಒಳಗಾಗಿದ್ದ ಮತ್ತು ಆ ಪ್ರಭಾವ ಹಠಾತ್ತಾಗಿ ನಿಂತುಹೋದ ಗರ್ಭಕೋಶವನ್ನು ಮಾತ್ರ ಆಕ್ಸಿಟೋಸಿನ್ ಉದ್ರೇಕಿಸುತ್ತದೆ. ಹೀಗಾಗಿ 40 ವಾರಗಳ ಗರ್ಭಾವಸ್ಥೆಯ ಕೊನೆಯಲ್ಲಿ ಗರ್ಭಕೋಶ ಸಂಕುಚಿಸಿ ಒಳಗಿರುವ ಶಿಶುವನ್ನು ಹೊರದೂಡುತ್ತದೆ. ಸ್ವಲ್ಪ ಹೊತ್ತಿನಲ್ಲೆ ಬೇರ್ಪಟ್ಟ ಜರಾಯುವನ್ನೂ ಇದೇ ರೀತಿ ಹೊರದೂಡುತ್ತದೆ. ಇದು ಗರ್ಭಾವಸ್ಥೆಯ ಅಂತ್ಯ.


ತ್ರೈಮಾಸಿಕಗಳು[ಬದಲಾಯಿಸಿ]

ಗರ್ಭಧಾರಣೆಯನ್ನು ಸಾಮಾನ್ಯವಾಗಿ ಮೂರು ತ್ರೈಮಾಸಿಕಗಳನ್ನಾಗಿ ವಿಂಗಡಿಸಲಾಗುತ್ತದೆ.ಮೊದಲ ತ್ರೈಮಾಸಿಕವು ಗರ್ಭಧರಿಸಿದ ದಿನದಿಂದ 12 ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ. ವೀರ್ಯಾಣು ಮೊಟ್ಟೆಯ ಫಲೀಕರಣ ಮಾಡಿದಾಗ ಗರ್ಭ ಪ್ರಾರಂಭವಾಗುತ್ತದೆ.ನಂತರ ಫಲವತ್ತಾದ ಮೊಟ್ಟೆಯು ಡಿಂಬನಾಳದ ಕೆಳಗೆ ಚಲಿಸಿ ಗರ್ಭಕೋಶದ ಒಳಗೆ ಪ್ರವೇಶಿಸುತ್ತದೆ.ಭ್ರೂಣ ಮತ್ತು ಜರಾಯುವಿನ ರಚನೆಯು ಇಲ್ಲಿ ಆರಂಭವಾಗುತ್ತದೆ.[೧] ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತದ(ಭ್ರೂಣದ ಸ್ವಾಭಾವಿಕ ಸಾವು) ಅತ್ಯಧಿಕ ಅಪಾಯ ಕಂಡುಬರುತ್ತದೆ.[೫] ಎರಡನೇ ತ್ರೈಮಾಸಿಕವು ೧೩ ರಿಂದ ೨೮ ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ. ಎರಡನೇ ತ್ರೈಮಾಸಿಕದ ಮಧ್ಯದಲ್ಲಿ ಭ್ರೂಣದ ಚಲನೆಯನ್ನು ಅನುಭವಿಸಬಹುದು..ಉತ್ತಮ ಗುಣಮಟ್ಟದ ವೈದ್ಯೆಯಿಂದ ಶೇಕಡ ೯೦ಕ್ಕಿಂತ ಹೆಚ್ಚು ಮಕ್ಕಳು 28 ವಾರಗಳಿಗೇ ಗರ್ಭಾಶಯದ ಹೊರಗೆ ಬದುಕಬಲ್ಲವು. ಮೂರನೇ ತ್ರೈಮಾಸಿಕವು 29 ವಾರಗಳಿಂದ 40 ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ.[೧]

ಪ್ರಸವ(ಹೆರಿಗೆ) ಮತ್ತು ತೊಡಕುಗಳು[ಬದಲಾಯಿಸಿ]

ಪ್ರಸವಪೂರ್ವ ರಕ್ಷಣೆ ಗರ್ಭಧಾರಣೆಯ ಫಲಿತಾಂಶವನ್ನು ಸುಧಾರಿಸುತ್ತದೆ.[೬] ಪ್ರಸವಪೂರ್ವ ರಕ್ಷಣೆಯು ಫೋಲಿಕ್ ಆಸಿಡ್ನ್ನು ಹೆಚ್ಚುವರಿ ತೆಗೆದುಕೊಳ್ಳುವುದು, ಹಾನಿಕಾರಿಯಾದ ಔಷಧಗಳು ಮತ್ತು ಮದ್ಯವನ್ನು ತಪ್ಪಿಸುವುದು, ಪ್ರತಿನಿತ್ಯ ವ್ಯಾಯಾಮ, ರಕ್ತ ಪರೀಕ್ಷೆಗಳು, ಮತ್ತು ಸಾಮಾನ್ಯ ದೈಹಿಕ ಪರೀಕ್ಷೆ ಗಳನ್ನು ಒಳಗೊಂಡಿರುತ್ತದೆ.[೬] ಗರ್ಭಧಾರಣೆಯ ಅಧಿಕ ರಕ್ತದೊತ್ತಡ,   ಗರ್ಭಧಾರಣೆಯ ಮಧುಮೇಹ, ಕಬ್ಬಿಣದ ಕೊರತೆಯ ರಕ್ತಹೀನತೆ, ತೀವ್ರ ವಾಕರಿಕೆ ಮತ್ತು ವಾಂತಿ, ಇವು ಗರ್ಭಧಾರಣೆಯ ತೊಡಕುಗಳಲ್ಲಿ ಕೆಲವು.[೭] ಗರ್ಭಾವಸ್ಥೆಯ ಅವಧಿ ಸಾಮಾನ್ಯವಾಗಿ ೩೭ರಿಂದ ೪೧ವಾರಗಳಾಗಿದ್ದು ,೩೭ ಮತ್ತು ೩೮ ವಾರಗಳು ಅಲ್ಪಾವಧಿ, ೩೯ ಅಥವ ೪೦ ವಾರಗಳು ಪೂರ್ಣಾವಧಿ ಹಾಗು ೪೧ ವಾರಗಳು ಆಲಸ್ಯ ಅವಧಿಯಾಗಿದೆ.೪೧ ವಾರಗಳ ನಂತರ ಅತ್ಯಾಲಸ್ಯ ಅವಧಿಯಾಗಿದೆ. 37 ವಾರಗಳ ಮೊದಲು ಜನಿಸಿದ ಮಕ್ಕಳು ಸೆರೆಬ್ರಲ್ ಪಾಲ್ಸಿ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ.[೧] 39 ವಾರಗಳ ಮುಂಚೆ ವೈದ್ಯಕೀಯ ಕಾರಣಗಳಿಲ್ಲದೆ ಕೃತಕ ಹೆರಿಗೆ ನೋವು ಅಥವಾ ಸಿಸೇರಿಯನ್ ವಿಭಾಗದ ಮೂಲಕ ಡೆಲಿವರಿಯನ್ನು ಮಾಡುವುದು ಸೂಕ್ತವಲ್ಲ.[೮]


ರೋಗ, ಸಮಾಜ ಮತ್ತು ಸಂಸ್ಕೃತಿ[ಬದಲಾಯಿಸಿ]

೨೦೧೨ರಲ್ಲಿ ೨೧೩ ಮಿಲಿಯನ್ ಗರ್ಭಧಾರಣೆಗಳು ಸಂಭವಿಸಿದ್ದು, ಅದರಲ್ಲಿ ೧೯೦ ದಶಲಕ್ಷ ಅಭಿವೃದ್ಧಿ ಹೊಂದುತ್ತಿರುವ ವಿಶ್ವದಲ್ಲಿ ಹಾಗೂ ೨೩ ದಶಲಕ್ಷ ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಸಂಭವಿಸಿದ್ದವು. ೧೫ ರಿಂದ ೪೪ ವಯಸ್ಸಿನ ಮಹಿಳೆಯರಲ್ಲಿ ಗರ್ಭಧಾರಣೆಯ ಸಂಖ್ಯೆ ೧೦೦೦ದಲ್ಲಿ ೧೩೩.[೯] ಗುರುತಿಸಿದ ೧೦ ರಿಂದ ೧೫ ಶೇಕಡದಷ್ಟು ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ.[೫] ೨೦೧೩ರಲ್ಲಿ, ಗರ್ಭಧಾರಣೆಯ ತೊಡಕುಗಳು ೨೯೩೦೦೦ ಮರಣಗಳಿಗೆ ಕಾರಣವಾಯಿತು. ಇದಕ್ಕೆ ಸಾಮಾನ್ಯ ಕಾರಣಗಳು ರಕ್ತಸ್ರಾವ, ಗರ್ಭಪಾತದ ತೊಡಕುಗಳು, ಗರ್ಭಧಾರಣೆಯ ಅಧಿಕ ರಕ್ತದೊತ್ತಡ, ಸೆಪ್ಸಿಸ್, ಮತ್ತು ತಡೆಯೊಡ್ಡಿದ ಹೆರಿಗೆ.[೧೦] ಜಾಗತಿಕವಾಗಿ, ೪೦% ಗರ್ಭಧಾರಣೆಗಳು ಅನಪೇಕ್ಷಿತ ಗರ್ಭಧಾರಣೆಗಳಾಗಿವೆ. ಯೋಜಿತವಲ್ಲದ ಗರ್ಭಧಾರಣೆಗಳಲ್ಲಿ ಅರ್ಧದಷ್ಟು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ [೯] ಅನಪೇಕ್ಷಿತ ಗರ್ಭಧಾರಣೆಯಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ 60 ಶೇಕಡದಷ್ಟು ಮಹಿಳೆಯರು ಗರ್ಭ ಸಂಭವಿಸಿದೆ ತಿಂಗಳಲ್ಲಿ ಜನನ ನಿಯಂತ್ರಣ ಬಳಸುತ್ತಾರೆ.[೧೧]

ರೋಗ ಸೂಚನೆ ಹಾಗೂ ಲಕ್ಷಣಗಳು[ಬದಲಾಯಿಸಿ]

Melasma pigment changes to the face due to pregnancy

ಗರ್ಭಧಾರಣೆಯ ಲಕ್ಷಣಗಳು ಮತ್ತು ತೊಂದರೆಗಳು ಗರ್ಭದ ಸ್ಥಿತಿಯಲ್ಲಿ ಉಂಟಾಗುತ್ತವೆ ಹೊರತು ದೈನಂದಿನ ಜೀವನ ಚಟುವಟಿಕೆಗಳಲ್ಲಿ ಗಮನಾರ್ಹವಾದ ಹಸ್ತಕ್ಷೇಪ ಅಥವಾ ತಾಯಿ ಅಥವಾ ಮಗುವಿನ ಆರೋಗ್ಯಕ್ಕೆ ಯಾವುದೆ ಅಪಾಯವನ್ನು ಉಂಟುಮಾಡುವವಲ್ಲ.ಇವು ಗರ್ಭಧಾರಣೆಯ ತೊಡಕುಗಳಂತೆ ಅಲ್ಲ.ಕೆಲವೊಮ್ಮೆ ಯಾವ ಲಕ್ಷಣಗಳು ಸಾಮಾನ್ಯ ತೊಂದರೆಗಳಾಗಿ ಪರಿಗಣಿಸಲ್ಪಟ್ಟಿವಯೋ ಅವೇ ಹೆಚ್ಚು ತೀವ್ರ ಸಂದರ್ಭದಲ್ಲಿ ತೊಡಕುಗಳಾಗಿ ಪರಿಗಣಿಸಲಾಗುತ್ತವೆ.ಉದಾಹರಣೆಗೆ, ವಾಕರಿಕೆ(morning sickness) ಒಂದು ಅಸ್ವಸ್ಥತೆ ಇರಬಹುದು ಆದರೆ ಇದು ವಾಂತಿಯೊಂದಿಗೆ ಸಂಯೋಜನೆಗೊಂಡರೆ ನೀರು ಎಲೆಕ್ಟ್ರೋಲೈಟ್ ಅಸಮತೋಲನೆಗೆ ಕಾರಣವಾಗುತ್ತದೆ.ಇದು ಒಂದು ಹೈಪರೆಮೆಸಿಸ್ ಗ್ರಾವಿಡಾರಮ್(Hyperemesis Gravidarum) ಎಂಬ ತೊಡಕಾಗುತ್ತದೆ. ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳು ಮತ್ತು ತೊಂದರೆಗಳು:

ಜೊತೆಗೆ,ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಧಾರಣೆಯ ತೊಡಕುಗಳಾದ ಡೀಪ್ ವೇಯ್ನ್ ಥ್ರಾಂಬೋಸಿಸ್ ಅಥವಾ ಗರ್ಭಾವಸ್ಥೆಯಲ್ಲಿ ಹದಗೆಡುವಂತಹಅವಾಂತರದ ನಡುನಡುವೆ ಉಂಟಾಗುವ ರೋಗಗಳಿಗೆ ಕಾರಣವಾಗಬಹುದು.

ಗರ್ಭಿಣಿಯರು ಹೆಚ್ಚು ಧೈರ್ಯಶಾಲಿಗಳಾಗಿಯೂ ಬಲಶಾಲಿಗಳಾಗಿಯೂ ಸಾಹಸ ಪ್ರವೃತ್ತಿಯವರಾಗಿಯೂ ಇರುವರೆಂದೂ ಗರ್ಭಾವಸ್ಥೆಯ ಕೊನೆಗೊಂಡ ಮೇಲೂ ಅವರು ಈ ಗುಣಗಳನ್ನು ಹೊಂದಿರುವರೆಂದೂ ಹೇಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಗರ್ಭಿಣಿಯರಲ್ಲಿ ಮಾನಸಿಕ ವ್ಯಾಪಾರಗಳು ಸ್ವಲ್ಪಮಟ್ಟಿಗೆ ಏರುಪೇರಾಗುತ್ತವೆ. ಸ್ವಲ್ಪ ಕಿರಿಕಿರಿ-ಶೀಘ್ರ ಕೋಪ-ಸೂಕ್ಷ್ಮಮನಸ್ಕರಾಗಿರುತ್ತಾರೆ. ಕ್ಷಯ ರೋಗಿಗಳು ಗರ್ಭಿಣಿಯರಾದಾಗ ಅವರಲ್ಲಿ ರೋಗದ ಉಲ್ಬಣ ತಗ್ಗಿನ ಮಟ್ಟದಲ್ಲಿರುತ್ತದೆ. ಆದರೆ ಗರ್ಭಾವಸ್ಥೆ ಕೊನೆಗೊಂಡ ಮೇಲೆ ರೋಗ ತೀಕ್ಷ್ಣತರವಾಗುತ್ತದೆ. ಆದರೆ ಬಲಹೀನ, ರೋಗಿಷ್ಠ ಸೂಕ್ಷ್ಮವ್ಯಕ್ತಿಗಳು, ಅತಿಚಿಕ್ಕ ವಯಸ್ಸಿಯವರು ಮತ್ತು ಅತಿ ಹೆಚ್ಚು ವಯಸ್ಕರು ಗರ್ಭಿಣಿಯರಾದರೆ ಗರ್ಭಾವಸ್ಥೆಯಲ್ಲಿ ಅವರು ಅನೇಕ ಪಿಡುಗುಗಳನ್ನು ಅನುಭವಿಸ ಬೇಕಾಗುತ್ತದೆ. ಹೊಟ್ಟೆ ತೊಳಸು, ವಾಂತಿ, ಕೆಲವು ಬಯಕೆ, ಹಲ್ಲುನೋವು, ಕೆಮ್ಮು ಗರ್ಭಕಾಲದ ಪ್ರಾರಂಭಿಕ ಮೂರು ತಿಂಗಳು ಮತ್ತು ಕೊನೆಯ ತಿಂಗಳು ಮೂತ್ರವಿಸರ್ಜನೆಯಲ್ಲಿ ತೊಂದರೆ, ಕಾಲಿನ ಅಭಿಧಮನಿಗಳು ಊದಿಕೊಂಡು ಕಾಲು ತೊಡೆಗಳಲ್ಲಿ ಊತ, ನೋವು ಉಂಟಾಗುವುದು ಇತ್ಯಾದಿ ಇವರ ಗರ್ಭಾವಸ್ಥೆಯಲ್ಲಿ ಕಂಡುಬರುತ್ತವೆ.

ಭ್ರೂಣ ಅಥವಾ ಜೀವ ಅಭಿವೃದ್ಧಿ[ಬದಲಾಯಿಸಿ]

The initial stages of human embryogenesis

ಸ್ತ್ರೀಯ ಒಂದು ಅಂಡಾಶಯದಿಂದ ಬಿಡುಗಡೆಯಾದ ಮೊಟ್ಟೆಯ ಕಣ ಹಾಗೂ ಪುರುಷನ ವೀರ್ಯಾಣು,ಇವು ಯಾವುದಾದರೊಂದು ಡಿಂಬನಾಳದಲ್ಲಿ ಬಂದು ಒಂದಾಗುತ್ತವೆ.ನಂತರ ಯುಗ್ಮಜ(zygote) ಎಂಬ ಫಲವತ್ತಾದ ಅಂಡಾಣು ಗರ್ಭಕೋಶದತ್ತ ಸಾಗುತ್ತಾ ಪ್ರಯಾಣ ಪೂರ್ಣಗೊಳಿಸಲು ಒಂದು ವಾರದವರೆಗೆ ಸಮಯ ತೆಗೆದುಕೊಳ್ಳಬಹುದು. ಅಣುಕೋಶ ವಿಭಜನೆ ಪುರುಷ ಮತ್ತು ಸ್ತ್ರೀ ಜೀವಕೋಶಗಳು ಒಂದಾದಮೇಲೆ ಸುಮಾರು ೨೪ ರಿಂದ ೩೬ ಗಂಟೆಗಳ ನಂತರ ಪ್ರಾರಂಭವಾಗುತ್ತದೆ. ಅಣುಕೋಶ ವಿಭಜನೆ ಅತಿ ವೇಗವಾಗಿ ಮುಂದುವರಿಯುತ್ತದೆ ಮತ್ತು ಜೀವಕೋಶಗಳು ಬ್ಲ್ಯಾಸ್ಟೋಸಿಸ್ಟ್ ಎಂದು ಕರೆಯಲ್ಪಡುವ ಅಂಶಕ್ಕೆ ಅಭಿವೃದ್ಧಿಗೊಳ್ಳುತ್ತವೆ. ಬ್ಲ್ಯಾಸ್ಟೋಸಿಸ್ಟ್ ಗರ್ಭಕೋಶದೆಡೆಗೆ ಆಗಮಿಸಿ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುತ್ತದೆ.ಇದನ್ನು ಸೇರಿಸುವಿಕೆ(implantation) ಎಂದು ಕರೆಯಲಾಗುತ್ತದೆ.

ಗರ್ಭಧಾರಣೆಯಾದ ಸುಮಾರು ಹತ್ತು ವಾರಗಳ ಮೊದಲ ಸಮಯದಲ್ಲಿ ಶಿಶವಿಗೆ ರೂಪಕೊಡುವ ಜೀವಕೋಶಗಳ ಸಮೂಹ ಅಭಿವೃದ್ಧಿಯನ್ನು ಭ್ರೂಣಸೃಷ್ಟಿ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಜೀವಕೋಶಗಳು ದೇಹದ ವಿವಿಧ ಭಾಗಗಳಾಗಿ ಬೇರ್ಪಡಲು ಆರಂಭಿಸುತ್ತವೆ. ಅಂಗ, ದೇಹ, ಮತ್ತು ಮಂಡಲದ ಮೂಲ ಬಾಹ್ಯರೇಖೆಗಳು ಸ್ಥಾಪಿತವಾಗುತ್ತವೆ. ಭ್ರೂಣ ಹಂತದ ಅಂತ್ಯದಲ್ಲಿ, ಬೆರಳುಗಳು, ಕಣ್ಣು, ಬಾಯಿ, ಮತ್ತು ಕಿವಿ ಇವುಗಳ ಆರಂಭ ರಚನೆಯು ಗೋಚರವಾಗುತ್ತದೆ. ಇದೇ ಸಮಯದಲ್ಲೇ, ಜರಾಯು ಮತ್ತು ಹೊಕ್ಕುಳಬಳ್ಳಿ ಸೇರಿದಂತೆ ಭ್ರೂಣದ ಬೆಂಬಲಕ್ಕೆ ಮುಖ್ಯವಾದ ಅಂಶಗಳ ಅಭಿವೃದ್ಧಿಯಾಗುತ್ತದೆ.ಮಗುವಿನ ಪೌಷ್ಟಿಕಾಂಶ ಪಡೆಯುವಿಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆ,ತಾಯಿಯ ರಕ್ತದ ಮೂಲಕ ಅನಿಲದ ವಿನಿಮಯಕ್ಕಾಗಿ ಅವಕಾಶ ಕೊಡಲು ಜರಾಯುವು ಭ್ರೂಣವನ್ನು ಗರ್ಭಾಶಯದ ಗೋಡೆಯ ಸಂಪರ್ಕದಲ್ಲಿಡುತ್ತದೆ. ಹೊಕ್ಕುಳಬಳ್ಳಿ ಭ್ರೂಣವನ್ನು ಜರಾಯುವಿಗೆ ಜೋಡಿಸುವ ಬಳ್ಳಿಯಾಗಿದೆ. ಗರ್ಭಧಾರಣೆಯಾದ ಸುಮಾರು ಹತ್ತು ವಾರಗಳ ನಂತರ, ಭ್ರೂಣವು "ಫೀಟಸ್" ಎಂದು ಕರೆಯಲ್ಪಡುತ್ತದೆ."ಫೀಟಸ್" ಹಂತದ ಆರಂಭದಲ್ಲಿ, ಗರ್ಭಪಾತದ ಅಪಾಯವು ಕಡಿಮೆಯಾಗುತ್ತದೆ..[೧೫] ಈ ಹಂತದಲ್ಲಿ ಹೃದಯವನ್ನು ಶ್ರವಣಾತೀತ ತಂತ್ರಜ್ಞಾನದ ಮೂಲಕ ನೋಡಲಾಗುತ್ತದೆ ಮತ್ತು ಭ್ರೂಣವು ಅನೈಚ್ಛಿಕ ಚಲನೆ ಮಾಡುತ್ತದೆ.[೧೬] ಮುಂದುವರೆಯುತ್ತಿರುವ "ಫೀಟಸ್"ನ ಬೆಳವಣಿಗೆಯ ಸಮಯದಲ್ಲಿ, ಭ್ರೂಣದ ಹಂತದಲ್ಲಿ ದೃಢಪಡಿಸಿದ ಆರಂಭಿಕ ದೇಹ ವ್ಯವಸ್ಥೆಗಳ ಮತ್ತು ರಚನೆಗಳು ಅಭಿವೃದ್ಧಿ ಹೊಂದುತ್ತವೆ.ಲೈಂಗಿಕ ಅಂಗಗಳು ಗರ್ಭಾವಸ್ಥೆಯ ಮೂರನೇ ತಿಂಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ದೈಹಿಕ ಬೆಳವಣಿಗೆ ಬಹುತೇಕ ಗರ್ಭಾವಸ್ಥೆಯ ಕೊನೆಯ ವಾರಗಳಲ್ಲಿ ಕಂಡುಬರುವುದಾದರೂ, ಭ್ರೂಣವು ತೂಕ ಮತ್ತು ಉದ್ದದಲ್ಲಿ ಬೆಳವಣಿಗೆ ಹೊಂದುತ್ತವೆ. ವಿದ್ಯುತ್ ಮೆದುಳಿನ ಚಟುವಟಿಕೆ ಮೊದಲು ಗರ್ಭಾವಸ್ಥೆಯ ಐದನೇ ಮತ್ತು ಆರನೇ ವಾರದಲ್ಲಿ ಪತ್ತೆಯಾಗುತ್ತದೆ. ಇದು ಜಾಗೃತ ಮನದ ಚಿಂತನೆಯ ಆರಂಭ ಅಲ್ಲದೆ ಪ್ರಾಚೀನ ನರವ್ಯೂಹದ ಚಟುವಟಿಕೆ ಎಂದು ಪರಿಗಣಿಸಲಾಗಿದೆ."ಸಿನ್ಯಾಪ್ಸಿಸ್" ೧೭ ವಾರಗಳಲ್ಲಿ ರೂಪು ಪಡೆಯಲು ಆರಂಭಿಸುತ್ತದೆ, ಮತ್ತು ೨೮ ವಾರಗಳಿಂದ ಜನನದ ನಂತರ ೩-೪ ತಿಂಗಳ ತನಕ ತ್ವರಿತವಾಗಿ ಗುಣಿತವಾಗುತ್ತದೆ.[೧೭]

ಗರ್ಭಾವಸ್ಥೆಯಲ್ಲಿ ಸ್ವಾಭಾವಿಕ ಶಾರೀರಿಕ ಬದಲಾವಣೆಗಳು[ಬದಲಾಯಿಸಿ]

ಬೆಳೆಯುವ ಭ್ರೂಣಕ್ಕೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಕ್ಲಪ್ತ ಉಷ್ಣತೆಯುಳ್ಳ ಸ್ಥಳವನ್ನು ಗರ್ಭಾವಸ್ಥೆ ಅನುಕೂಲವಾಗಿ ಒದಗಿಸುವುದೇ ಅಲ್ಲದೆ ಮುಂದಕ್ಕೆ ಬೇಕಾಗಬಹುದಾದ ಶಾರೀರಿಕ ಬದಲಾವಣೆಗಳನ್ನೂ ಉಂಟುಮಾಡುತ್ತದೆ. ಮೊದಲಾಗಿ ಗರ್ಭಕೋಶ ದೊಡ್ಡ ದಾಗುವುದು. ಅದರೊಳಗಿರುವ ಭ್ರೂಣದ ಬೆಳೆವಣಿಗೆಯಿಂದ ಅದು ಹಿಗ್ಗುವುದು ಮಾತ್ರವಲ್ಲದೆ ತಾನೇ ಸ್ವತಃ ದೊಡ್ಡದಾಗಿ ದೃಢವಾಗುತ್ತದೆ. ಇದರಿಂದ ಗರ್ಭಕೋಶ ಸಕಾಲದಲ್ಲಿ ಸಂಕುಚಿಸಿ ಶಿಶುಜನನವಾಗುವುದಕ್ಕೆ ಅನುಕೂಲವಾಗುವುದು. ಉದರ ಮತ್ತು ಕಿಬ್ಬೊಟ್ಟೆಯ ಮುಂದಿನ ಭಿತ್ತಿಯ ಸ್ನಾಯುಗಳು ವೃದ್ಧಿ ಮತ್ತು ಸ್ರವಿಸುವ ಸಾಮರ್ಥ್ಯವೂ ಮೂಳೆಗಳ ಕಟ್ಟು ಹಿಗ್ಗಿದಂತಾಗುವುದೂ ಹೆರಿಗೆಗೆ ಅನುಕೂಲವಾಗುವ ಬದಲಾವಣೆಗಳು. ಸ್ತನಗಳ ವೃದ್ಧಿ ಮತ್ತು ಸ್ರವಿಸುವ ಸಾಮರ್ಥ್ಯವೂ ಗರ್ಭಾವಸ್ಥೆಯಲ್ಲಿ ಕಂಡುಬರುತ್ತದೆ. ಇದು ಮುಂದೆ ಹುಟ್ಟುವ ಮಗುವಿಗೆ ಹಾಲುಡಿಸಿ ಸಂರಕ್ಷಿಸಲು ಆಗಿರುವ ಏರ್ಪಾಡು, ಗರ್ಭಾವಸ್ಥೆಯಲ್ಲಿ ವ್ಯಕ್ತಿಯ ತೂಕದ ಹೆಚ್ಚಳ ಸುಮಾರು 11-12 ಕೆ.ಜಿ. ವೃದ್ಧಿಗೊಂಡ ಗರ್ಭಕೋಶ, ಅದರೊಳಗಿರುವ ಮಗು, ಸ್ತನಗಳು ಎಲ್ಲಾ ಸುಮಾರು 5-6 ಕೆ.ಜಿ. ತೂಕಕ್ಕೆ ಕಾರಣ. ಉಳಿದ 5-6 ಕೆ.ಜಿ. ತೂಕದ ಹೆಚ್ಚಳ ದೇಹದಲ್ಲಿ ದ್ರವಾಂಶ ಹೆಚ್ಚು ಶೇಖರಣೆ ಆಗುವುದರಿಂದ ಉಂಟಾಗಿರುತ್ತದೆ. ರಕ್ತ ಸಹಜ ಪ್ರಮಾಣಕ್ಕಿಂತ 1/3ರಷ್ಟು ಹೆಚ್ಚಾಗಿದ್ದು ಕಣಗಳಿಗಿಂತ ದ್ರವಾಂಶ ಜಾಸ್ತಿಯಾಗಿರುವುದರಿಂದ ಸಹಜವಾಗಿಯೆ ಗರ್ಭಾವಸ್ಥೆಯಲ್ಲಿ ರಕ್ತವರ್ಣಹೀನತೆ ಕಂಡುಬಂದು ಸ್ವಾಭಾವಿಕ ಪ್ರಮಾಣದ ಶೇ. 87 ರಷ್ಟು ಮಾತ್ರ ಹಿಮೋಗ್ಲೋಬಿನ್ ಇರುತ್ತದೆ. ಗರ್ಭಾವಸ್ಥೆ ಕೊನೆಗೊಂಡಾಗ ಶರೀರ ತೂಕ ಸಹಜಮಟ್ಟಕ್ಕೆ ಸಾಮಾನ್ಯವಾಗಿ ಬಂದರೂ ಕೆಲವು ವೇಳೆ ತೂಕದ ಹೆಚ್ಚಳ ಪ್ರಸವಕಾಲದಿಂದ ಗಣನೆಗೆ ಬರುವಂತೆ ಸ್ಥೂಲಕಾಯವಾಗಿ ನಿಂತುಬಿಡಬಹುದು. ಗರ್ಭಾವಸ್ಥೆಯ ಪ್ರಾರಂಭವನ್ನು ಅನೇಕ ವಿಧದಿಂದ ಕರಾರುವಾಕ್ಕಾಗಿ ಗುರುತಿಸಬಹುದು. ಅಂಡಾಣು ಅಂಡಕೋಶದಿಂದ ಹೊರಬಿದ್ದ ದಿವಸ ಸ್ತ್ರೀಯರಲ್ಲಿ ಮುಂಜಾನೆ ದೇಹದ ಉಷ್ಣತೆ ಹಠಾತ್ತನೆ ಸ್ವಲ್ಪ ತಗ್ಗಿ ಆಮೇಲೆ ಮುಂಚಿಗಿಂತ ಸ್ವಲ್ಪ ಹೆಚ್ಚಿನ ಮಟ್ಟಕ್ಕೆ ಏರಿ ಮುಂದಿನ ದಿವಸಗಳಲ್ಲಿ ಆ ಹೊತ್ತಿನಲ್ಲಿ ಅದೇ ಏರಿದ ಮಟ್ಟದಲ್ಲಿ ಇರುತ್ತದೆ. ಅಂಡಾಣು ಅಂಡಕೋಶದಿಂದ ಹೊರಬಿದ್ದ 22-24 ಗಂಟೆಗಳಲ್ಲಿ ಗರ್ಭಾವಸ್ಥೆ ಪ್ರಾರಂಭವಾಗಿರಬೇಕೆನ್ನುವುದು ವ್ಯಕ್ತಪಟ್ಟಿದೆ. ಆದ್ದರಿಂದ ಮುಂಜಾವಿನ ಶರೀರೋಷ್ಣತೆಯನ್ನು ಕ್ಲಿಪ್ತವಾಗಿ ನೋಡುತ್ತಿದ್ದರೆ ಅದರ ವ್ಯತ್ಯಾಸದಿಂದ ಅಂಡಾಣು ಹೊರಬಿದ್ದ ದಿವಸವನ್ನು, ಅರ್ಥಾತ್ ಗರ್ಭಾವಸ್ಥೆಯ ಪ್ರಾರಂಭವನ್ನು, ಪತ್ತೆಮಾಡಬಹುದು. ಶರೀರೋಷ್ಣತಾ ವ್ಯತ್ಯಾಸ ಸ್ವಲ್ಪವೇ ಆದರೂ (0.5ಲಿ ಸೆಂ.) ಅದು ಖಚಿತವಾಗಿ ಆಗುತ್ತದಾದ್ದರಿಂದ ಈ ರೀತಿಯ ಗಣನೆ ಕಷ್ಟವಾಗುವುದಿಲ್ಲ. ಆ ದಿವಸದಿಂದ ಗರ್ಭಾವಸ್ಥೆ ಸಾಮಾನ್ಯವಾಗಿ 266 ದಿವಸಗಳು ಅಂದರೆ 9 1/2 ತಿಂಗಳು (ಚಾಂದ್ರಮಾನ) ಕಾಲ ವ್ಯಾಪ್ತಿಯುಳ್ಳದ್ದಾಗಿರುತ್ತದೆ. ಆದರೆ ಬೇರೆ ಬೇರೆ ಸ್ತ್ರೀಯರಲ್ಲಿ ಆರೋಗ್ಯವಾಗಿದ್ದರೂ ಈ ಅವಧಿ 252 ರಿಂದ 285 ದಿವಸಗಳವರೆಗೆ ಬದಲಾಗಬಹುದು. ಜೊತೆಗೆ ಅಂಡಾಣು ಹೊರಬಿದ್ದ ದಿವಸವನ್ನು ಶರೀರದ ಉಷ್ಣತಾಮಾಪನದಿಂದ ಎಲ್ಲರೂ ಖಚಿತವಾಗಿ ತಿಳಿದುಕೊಳ್ಳಲಾರರು. ಆದ್ದರಿಂದ ಗರ್ಭಾವಸ್ಥೆಯ ಕಾಲವನ್ನು ಬೇರೆ ಸುಲಭ ರೀತಿಯಲ್ಲಿ ಗಣಿಸುವುದು ರೂಢಿಗೆ ಬಂದಿದೆ, ಕೊನೆಯ ಬಾರಿ ಆದ ರಜಸ್ರಾವದ ಮೊದಲನೆಯ ದಿವಸಕ್ಕೆ ಏಳು ದಿವಸಗಳನ್ನು ಸೇರಿಸಿ ಅಲ್ಲಿಂದ ಮುಂದಕ್ಕೆ 9 ತಾರೀಖು ಪಟ್ಟಿ ತಿಂಗಳನ್ನು ಎಣಿಸಿದರೆ ಲಭಿಸುವ ದಿವಸ ಗರ್ಭಾವಸ್ಥೆಯ ಅಂತಿಮ ದಿವಸವೆಂದು ಗಣಿಸುವುದೂ ಇದು ಮುಟ್ಟಾದ ಮೊದಲ ದಿವಸದಿಂದ 280 ದಿನಗಳು ಅಂದರೆ 10 ಚಾಂದ್ರಮಾನ ತಿಂಗಳುಗಳ ಮೇಲೆ ಎಂದು ಗಣಿಸುವುದೂ ರೂಢಿಯಾಗಿದೆ. ಆದರೆ ನಿಜವಾಗಿ ಗರ್ಭಾವಸ್ಥೆಯ ಕಾಲ ಅಂಡಾಣು ಹೊರಬಿದ್ದು ನಿಷೇಚನಗೊಂಡ ದಿವಸದಿಂದ ಪ್ರಾರಂಭವಾಗುವುದರಿಂದ ಇದಕ್ಕಿಂತ 14 ದಿವಸಗಳು ಕಡಿಮೆ ಇರುತ್ತದೆನ್ನುವುದನ್ನು ಮರೆಯಬಾರದು. ಗರ್ಭಾವಸ್ಥೆಯ ಅವಧಿ ಅನೇಕ ವೇಳೆ ಯೋಗ್ಯ ಅಥವಾ ಅನೈತಿಕ ಜನನ ನಿಷ್ಕರ್ಷೆಯಲ್ಲಿ ನ್ಯಾಯಾಲಯದ ಅವಲೋಕನಕ್ಕೆ ಬರಬಹುದಾಗಿರುವುದರಿಂದ ಅನೇಕ ದೇಶಗಳಲ್ಲಿ ಗರ್ಭಾವಸ್ಥೆಯ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ಕಾನೂನಿನಂತೆ ನಿಯಮಿಸಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಗರಿಷ್ಠ ಮಿತಿ ಬೇರೆ ಬೇರೆ ಉಂಟು. ಗರ್ಭಾವಸ್ಥೆಯ 28 ವಾರಗಳ ಮುಂಚೆಯೇ ಅಂದರೆ 7 ನೆಯ ತಿಂಗಳಿಗೆ ಮುಂಚೆಯೇ ಪ್ರಸವವಾದರೆ ಜನಿಸಿದ ಮಗು ಜೀವಂತವಾಗಿರುವುದಿಲ್ಲ ಎಂದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಅಂಗೀಕರಿಸಿದ್ದಾರೆ. ಆದ್ದರಿಂದ ಅನೇಕ ದೇಶಗಳಲ್ಲಿ ಗರ್ಭಾವಸ್ಥೆಯ ಗರಿಷ್ಠ ಮಿತಿ 310 ದಿವಸಗಳೆಂದು ಗಣಿಸಲಾಗಿದೆ.

ಆಹಾರ, ಪೋಷಕಾಂಶಗಳು, ಇತ್ಯಾದಿ[ಬದಲಾಯಿಸಿ]

ಗರ್ಭಧರಿಸಿದ ಸಮಯದಲ್ಲಿ ಒಳ್ಳೆಯಗಾಳಿ, ಪೌಷ್ಟಿಕ ಆಹಾರ ಮತ್ತು ನಿಯಮಿತ ವ್ಯಾಯಾಮ ಅಗತ್ಯ. ಆಹಾರ ಸಮತೋಲನವಾಗಿದ್ದು, ವಿಟಮಿನ್ನುಗಳನ್ನೂ ಕಬ್ಬಿಣದ ಮತ್ತು ಸುಣ್ಣ ಅಂಶವನ್ನೂ ಪೂರೈಸುವಂತಿರಬೇಕು. ಸಾಮಾನ್ಯವಾಗಿ ಗರ್ಭಿಣಿಗೆ ಗರ್ಭಸ್ಥಿತಿ ಪೂರ್ವದ 1 1/5 ರಷ್ಟು ಶಕ್ತಿಯನ್ನು ಒದಗಿಸುವಷ್ಟು ಆಹಾರ ಬೇಕಾಗುತ್ತದೆ. ಇದು 3ನೆಯ ತಿಂಗಳಿನಿಂದಲೇ ಸಹಜವಾಗಿ ಉಂಟಾಗುವ ಹೆಚ್ಚಿನ ಹಸಿವಿನಿಂದ ಪೂರೈಕೆ ಆಗುತ್ತದೆ. ತರಕಾರಿ ಹಣ್ಣುಗಳನ್ನೂ ದಿನಕ್ಕೆ ಕಡೆಪಕ್ಷ ಮುಕ್ಕಾಲು ಲೀಟರ್ ಹಾಲನ್ನು ತೆಗೆದುಕೊಂಡರೆ ಸಾಕಾದಷ್ಟು ಪೋಷಣೆ ದೊರೆಯುತ್ತದೆ. ಪ್ರಗತಿಪರ ರಾಷ್ಟ್ರಗಳ ಜನತೆಯಲ್ಲಿ ತಕ್ಕಷ್ಟು ಜ್ಞಾನ, ಧನ ಇರುವುದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಗತ್ಯವಾದ ವಿಟಮಿನ್ನುಗಳನ್ನುಳ್ಳ ಆಹಾರಗಳನ್ನು ತೆಗೆದುಕೊಂಡು ಆ ಅವಧಿಯಲ್ಲಿ ಮತ್ತು ಪ್ರಸವ ಸಮಯದಲ್ಲಿ ಕಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಭಾರತದಂಥ ಮುಂದುವರೆಯುತ್ತಿರುವ ದೇಶಗಳಲ್ಲಿ ಪೌಷ್ಟಿಕಾಹಾರದ ಕೊರತೆ ಕಂಡುಬರುತ್ತದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಕಂಡುಬರುತ್ತದೆ. ಗರ್ಭಾವಸ್ಥೆಯಲ್ಲಿ ಮದ್ಯಸಾರವು ಹೊಗೆಸೊಪ್ಪು ವರ್ಜ್ಯ, ವ್ಯಕ್ತಿಯ ಸ್ವಾಭಾವಿಕ ಬಯಕೆಗಳ ಪುರೈಕೆ ವಿಚಾರದಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ನರಮಂಡಲ ಸೂಕ್ಷ್ಮಸ್ಥಿತಿಯಲ್ಲಿ ಇರುವುದರಿಂದ ಮನಸ್ಸು ಉದ್ರೇಕಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅವಶ್ಯಕತೆಗೆ ತಕ್ಕಂತೆ ನಿದ್ರೆ ಬೇಕಾಗುತ್ತದೆ. ಕಡಿಮೆಯೆಂದರೂ 10 ಗಂಟೆಗಳ ಕಾಲ ನಿದ್ರೆ ಮಗುವಿನ ಬೆಳೆವಣಿಗೆಗೆ ಅಗತ್ಯ. ಉಡಿಗೆ ತೊಡಿಗೆಗಳು ಹೊಟ್ಟೆ, ಸ್ತನಗಳನ್ನು ಬಿಗಿಯದಂತೆ ಇರಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ದೇಹದ ಸಮತೋಲನ ವ್ಯತ್ಯಾಸವಾಗಿದ್ದು ಗರ್ಭಿಣಿಯರು ನಡೆದಾಡುವಾಗ ಒಂದೆರಡು ಬಾರಿಯಾದರೂ ಮುಗ್ಗರಿಸಿ ಬೀಳುವುದು ಸಾಮಾನ್ಯ. ದೇಹಘಾತ ಮತ್ತು ಶ್ರಮವನ್ನು ಉಂಟುಮಾಡುವ ಕೆಲಸಗಳು, ಎತ್ತರದಿಂದ ಧುಮುಕುವುದು, ಭಾರ ಹೊರುವುದು ಗುದ್ದಾಡುವುದು, ದೂರ ಪ್ರಯಾಣ ಇವುಗಳೆಲ್ಲ ವರ್ಜ್ಯ, ಎತ್ತರದ ಹಿಮ್ಮಡಿ ಚಪ್ಪಲಿ ಒಳ್ಳೆಯದಲ್ಲ, ಯಾವ ಆತಂಕಗಳೂ ಇಲ್ಲದಿದ್ದರೆ ಸಂಭೋಗ ನಿಶಿದ್ಧವಲ್ಲ.

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ೧.೦ ೧.೧ ೧.೨ ೧.೩ "Pregnancy: Condition Information". http://www.nichd.nih.gov/. December 19, 2013. Retrieved 14 March 2015. {{cite web}}: External link in |website= (help)
 2. Wylie, Linda (2005). Essential anatomy and physiology in maternity care (Second ed.). Edinburgh: Churchill Livingstone. p. 172. ISBN 9780443100413.
 3. "What are some common signs of pregnancy?". http://www.nichd.nih.gov/. July 12, 2013. Retrieved 14 March 2015. {{cite web}}: External link in |website= (help)
 4. "How do I know if I'm pregnant?". http://www.nichd.nih.gov/. November 30, 2012. Retrieved 14 March 2015. {{cite web}}: External link in |website= (help)
 5. ೫.೦ ೫.೧ The Johns Hopkins Manual of Gynecology and Obstetrics (4 ed.). Lippincott Williams & Wilkins. 2012. p. 438. ISBN 9781451148015.
 6. ೬.೦ ೬.೧ "What is prenatal care and why is it important?". http://www.nichd.nih.gov/. July 12, 2013. Retrieved 14 March 2015. {{cite web}}: External link in |website= (help)
 7. "What are some common complications of pregnancy?". http://www.nichd.nih.gov/. July 12, 2013. Retrieved 14 March 2015. {{cite web}}: External link in |website= (help)
 8. World Health Organization (November 2014). "Preterm birth Fact sheet N°363". who.int. Retrieved 6 Mar 2015.
 9. ೯.೦ ೯.೧ Sedgh, G; Singh, S; Hussain, R (September 2014). "Intended and unintended pregnancies worldwide in 2012 and recent trends". Studies in family planning. 45 (3): 301–14. doi:10.1111/j.1728-4465.2014.00393.x. PMID 25207494.
 10. GBD 2013 Mortality and Causes of Death, Collaborators (17 December 2014). "Global, regional, and national age-sex specific all-cause and cause-specific mortality for 240 causes of death, 1990-2013: a systematic analysis for the Global Burden of Disease Study 2013". Lancet. 385: 117–171. doi:10.1016/S0140-6736(14)61682-2. PMC 4340604. PMID 25530442. {{cite journal}}: |first1= has generic name (help)CS1 maint: numeric names: authors list (link)
 11. The Johns Hopkins manual of gynecology and obstetrics (4th ed.). Philadelphia: Wolters Kluwer Health / Lippincott Williams & Wilkins. p. 382. ISBN 9781605474335. {{cite book}}: Cite uses deprecated parameter |authors= (help)
 12. Merck. "Urinary tract infections during pregnancy". Merck Manual Home Health Handbook. Archived from the original on 2011-11-10. Retrieved 2015-12-18.
 13. Vazquez, JC (Aug 3, 2010). "Constipation, haemorrhoids, and heartburn in pregnancy". Clinical evidence. 2010: 1411. PMC 3217736. PMID 21418682.
 14. MedlinePlus > Breast pain Update Date: 31 December 2008. Updated by: David C. Dugdale, Susan Storck. Also reviewed by David Zieve.
 15. *Lennart Nilsson, A Child is Born 91 (1990): at eight weeks, "the danger of a miscarriage ... diminishes sharply."
 16. Kalverboer, Alex Fedde; Gramsbergen, Albertus Arend (1 January 2001). Handbook of Brain and Behaviour in Human Development. Springer. pp. 1–. ISBN 978-0-7923-6943-1.
 17. Illes, ed. by Judy (2008). Neuroethics : defining the issues in theory, practice, and policy (Repr. ed.). Oxford: Oxford University Press. p. 142. ISBN 9780198567219. {{cite book}}: |first= has generic name (help)
 18. 3D Pregnancy Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. (Image from gestational age of 6 weeks). Retrieved 2007-08-28. A rotatable 3D version of this photo is available here Archived 2007-09-14 ವೇಬ್ಯಾಕ್ ಮೆಷಿನ್ ನಲ್ಲಿ., and a sketch is available here Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ..
 19. 3D Pregnancy Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. (Image from gestational age of 10 weeks). Retrieved 2007-08-28. A rotatable 3D version of this photo is available here Archived 2007-09-16 ವೇಬ್ಯಾಕ್ ಮೆಷಿನ್ ನಲ್ಲಿ., and a sketch is available here Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ..
 20. 3D Pregnancy Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. (Image from gestational age of 20 weeks). Retrieved 2007-08-28. A rotatable 3D version of this photo is available here Archived 2007-09-16 ವೇಬ್ಯಾಕ್ ಮೆಷಿನ್ ನಲ್ಲಿ., and a sketch is available here Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ..
 21. 3D Pregnancy Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. (Image from gestational age of 40 weeks). Retrieved 2007-08-28. A rotatable 3D version of this photo is available here Archived 2007-09-16 ವೇಬ್ಯಾಕ್ ಮೆಷಿನ್ ನಲ್ಲಿ., and a sketch is available here Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ..