ವಿಷಯಕ್ಕೆ ಹೋಗು

ಹುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಲಿ
ಭಾರತದ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಬಂಗಾಳದ ಹುಲಿ.
Scientific classification
ಸಾಮ್ರಾಜ್ಯ:
ಅನಿಮೇಲಿಯಾ
ವಿಭಾಗ:
ಕಾರ್ಡೇಟಾ
ವರ್ಗ:
ಸಸ್ತನಿ
ಗಣ:
ಕಾರ್ನಿವೋರಾ
ಕುಟುಂಬ:
ಫೆಲಿಡೇ
ಕುಲ:
ಪ್ಯಾಂಥೆರಾ
ಪ್ರಜಾತಿ:
ಪ್ಯಾಂಥೆರಾ ಟೈಗ್ರಿಸ್
Binomial name
'ಪ್ಯಾಂಥೆರಾ ಟೈಗ್ರಿಸ್'
(ಕಾರ್ಲ್ ಲಿನ್ನೇಯಸ್, 1758)
ಐತಿಹಾಸಿಕ ಕಾಲದಲ್ಲಿ ಹುಲಿಗಳ ವ್ಯಾಪ್ತಿ (ತಿಳಿ ಹಳದಿ ಬಣ್ಣ) ಮತ್ತು ೨೦೦೬ರಲ್ಲಿ (ಹಸಿರು ಬಣ್ಣ)
೧೯೯೦ರಲ್ಲಿ ಹುಲಿಗಣತಿ
ಹುಲಿಯು (ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.
ಪ್ಯಾಂತೆರಾ ಎಂದರೆ ಘರ್ಜಿಸುವ ಮಾರ್ಜಾಲ ಎಂದರ್ಥ. ಈ ಪ್ಯಾಂತೆರಾ ಪ್ರಭೇದದಲ್ಲಿ ಪ್ರಾಣಿಗಳ ಗಂಟಲಿನ ಹೈಬೋಡ್ ಎಲುಬು ಘರ್ಜಿಸಲು ಸಹಕಾರಿಯಾಗಿದೆ. ಇದೇ ಪ್ಯಾಂತೆರಾ ಪ್ರಭೇದವನ್ನು ಇತರ ಬೇರೆ ಪ್ರಭೇದಗಳಿಂದ ಪ್ರತ್ಯೇಕಿಸುವುದು. ಹಿಂದೆ ಹುಲಿ ಪ್ರಭೇದಗಳನ್ನು ಎಂಟು ಉಪ ಪ್ರಭೇದಗಳಾಗಿ ವಿಂಗಡಿಸಲಾಗಿತ್ತು. ಟೈಗ್ರಿಸ್ ದಕ್ಷಿಣ ಏಷ್ಯಾದಲ್ಲಿ, ಅಲ್ಟೈಕಾ ನೈರುತ್ಯ ಏಷ್ಯಾದಲ್ಲಿ, ಅಮೈಯೆನ್ಸಿಸ್ ದಕ್ಷಿಣ ಮಧ್ಯ ಚೈನಾದಲ್ಲಿ, ವರ‍್ಗಾಟ ಪಶ್ಚಿಮ ಏಷ್ಯಾದಲ್ಲಿ, ಕರ‍್ಬೆಟಿ ಇಂಡೋಚೀನಾದಲ್ಲಿ, ಸಾಡೈಕಾ ಮತ್ತು ಸುಮಾತ್ರೆ ಕ್ರಮವಾಗಿ ಇಂಡೊನೇಷಿಯಾದ ಬಾಲಿ ದ್ವೀಪಗಳು ಹಾಗೂ ಜಾವಾ ಮತ್ತು ಸುಮಾತ್ರಗಳಲ್ಲಿ. ಆದರೆ, ಇವುಗಳಲ್ಲಿ ಮೂರು ಮಾತ್ರ ನೈಜ ಪ್ರಭೇದಗಳೆಂದೂ ಉಳಿದವು ತಪ್ಪು ತೀರ್ಮಾನಗಳಿಂದಾದದ್ದು ಎಂದೂ ತಿಳಿದು ಬಂದಿದೆ. ಇಂದು ಹುಲಿಗಳ ವಿಕಾಸ, ಪ್ರಸರಣೆ ಮತ್ತು ವ್ಯಾಪಕತೆಯನ್ನು ಅರ್ಥೈಸಲು ವಿಜ್ಞಾನಿಗಳು ಆಧುನಿಕ ಆಂಗಿಕರಚನೆ, ತಳಿವಿಜ್ಞಾನ ಹಾಗೂ ಪರಿಸರ ವಿಜ್ಞಾನವನ್ನು ಅವಲಂಬಿಸಿದ್ದಾರೆ.
ಕಾಡಿನ ಸಾಮ್ರಾಜ್ಯದಲ್ಲಿ ಹುಲಿಯೆಂದರೆ ಬಲು ಭೀತಿಹುಟ್ಟಿಸುವ ಬೇಟೆಗಾರ ಪ್ರಾಣಿ. ಮಾನವರು ಏಷ್ಯ ಖಂಡದಲ್ಲಿ ವಸತಿಹೂಡುವ ಹೊತ್ತಿಗಾಗಲೇ ಹುಲಿಗಳು ಇಲ್ಲಿನ ಅರಣ್ಯಗಳಲ್ಲಿ ಮೆರೆದಾಡುತ್ತಿದ್ದವು. ಜಿಂಕೆ, ಹಂದಿ, ಕಾಟಿ, ಅಷ್ಟೇ ಏಕೆ, ನಮ್ಮಷ್ಟೇ ದೊಡ್ಡದಾದ ಒರಾಂಗುಟಾನ್ ವಾನರನನ್ನೂ ಬೇಡೆಯಾಡಬಲ್ಲ ಹುಲಿಯೆಂದರೆ ಇತರ ಪ್ರಾಣಿಗಳ ಹಾಗೆಯೇ ಪ್ರಾಚೀನ ಮಾನವನಿಗೂ ಬಲುಭಯವಿತ್ತು. ಮುಂದಿನ ಕೆಲವು ಸಾವಿರ ವರ್ಷಗಳ ಅವಧಿಯಲ್ಲಿ, ಮಾನವ ಜನಾಂಗ ಬೇಟೆ, ಆಹಾರ ಸಂಗ್ರಹಣೆಗಳ ಪ್ರಾಚೀನತಂತ್ರಗಳಿಗೆ ಬದಲಾಗಿ ಕೃಷಿ, ಪಶುಸಂಗೋಪನೆಗಳನ್ನು ರೂಢಿಸಿಕೊಂಡಿತು. ಹುಲಿಗಳ ನೆಲೆಯಾಗಿದ್ದ ಕಾಡುಗಳನ್ನು ಕತ್ತರಿಸಿಯೋ, ಸುಟ್ಟುಹಾಕಿಯೋ ಜನರು ಬಹುತೇಕ ಭೂಪ್ರದೇಶವನ್ನು ಹುಲಿಗಳ ನಿವಾಸಕ್ಕೆ ಒಗ್ಗದ ಹಾಗೆ ರೂಪಾಂತರ ಮಾಡಿಬಿಟ್ಟರು. ಪುರಾತನ ಬೇಟೆಗಾರರು ಹುಲಿಗಳನ್ನು ಕೊಲ್ಲುವುದಕ್ಕಾಗಿ ಕುಣಿಕೆ, ಕಂದಕ, ಬಲೆ, ಈಟಿ, ಮಾರಕ ಬಂಧಗಳಂಥ ವಿವಿಧ ತಂತ್ರಗಳನ್ನು ಕಲ್ಪಿಸಿಕೊಂಡರು. ಕೈಗಾರಿಕಾ ಕ್ರಾಂತಿಯಾದ ಮೇಲೆ, ಹುಲಿಹತ್ಯೆಗಳ ಆಯುಧಗಳ ಪಟ್ಟಿಗೆ ಸಿಡಿಮದ್ದು, ಬಂದೂಕು, ರಾಸಾಯನಿಕ ವಿಷಗಳೂ ಸೇರ್ಪಡೆಯಾದವು. ಹುಲಿಯ ನಿವಾಸವನ್ನು ಆಕ್ರಮಿಸಿಕೊಂಡ ವಾನರಕುಲದ ಚತುರ ಮಾನವ ಕಂಡು ಹಿಡಿದ ಮಾರಕಾಸ್ತ್ರಗಳೆದುರಿಗೆ ಹುಲಿಯ ಪ್ರಕೃತಿದತ್ತವಾದ ಆಯುಧಗಳು ಎಂದರೆ, ಶಕ್ತಿ, ವೇಗ, ರಹಸ್ಯಚಲನೆ, ಇರುಳು ದೃಷ್ವಿ, ಮೊನಚಾದ ಹಲ್ಲು ಪಂಜಗಳು-ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇಂದು ಹುಲಿಯ ಉಳಿವು ಮಾನವನ ತಾಂತ್ರಿಕ ನ್ಯೆಪುಣ್ಯದೆದುರು ತತ್ತರಿಸುತ್ತಿದೆ; ಇಷ್ಟಾದರೂ ಅರಣ್ಯಗಳನ್ನು ಅತಿಕ್ರಮಿಸುವ ಮಾನವನ ಲಾಲಸೆ ಅದೆಷ್ಟು ಪ್ರಬಲವಾಗಿದೆಯೆಂದರೆ ಏಷ್ಯಾದ ಕಾಡುಗಳಲ್ಲಿ ಹುಲಿಯ ಗರ್ಜನೆ ಎಂದಿಗೂ ಕೇಳಿಸದಂತೆ ಶಾಶ್ವತವಾಗಿ ಅಡಗಿಹೋಗಲಿದೆಯೆಂಬ ವಿಷಾದದ ನುಡಿಗೆ ಎಡೆಗೊಟ್ಟಿದೆ. ಏಕೆಂದರೆ, ಹುಲಿ ಎಷ್ಟು ಪ್ರಬಲವೆನಿಸಿಕೊಂಡಿದೆಯೋ ಅಷ್ವೇ ನಾಜೂಕಾದ ಜೀವಿ. ವಿರೋಧಾಭಾಸವೆಂದರೆ ಎಲ್ಲರೂ ಭಯಪಡುವ ಹುಲಿಯ ದೇಹದ ಗಾತ್ರ ಮತ್ತು ಮಾಂಸಾಹಾರದ ಪ್ರವೃತ್ತಿಯಂತಹ ವೈಶಿಷ್ಟ್ಯಗಳೇ ಅದರ ಜೀವಿ ಪರಿಸ್ಥಿತಿಯ ಸೂಕ್ಷ್ಮತೆಗೂ ಕಾರಣವಾಗಿರುವುದು.
  • ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ ೨೯ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು.[]

ಜೀವಿವಿಕಾಸ ಹಾಗೂ ಪ್ರಸರಣ

[ಬದಲಾಯಿಸಿ]

ಹುಲಿಯಂಥ ದೊಡ್ಡ ಮಾರ್ಜಾಲಗಳು ರಾತ್ರೋರಾತ್ರಿ ಶೂನ್ಯದಿಂದ ಅವತರಿಸಿ ಬಂದವಲ್ಲ. 4.5 ಶತಕೋಟಿ ವರ್ಷಗಳ ಭೂಮಿಯ ಇತಿಹಾಸದುದ್ದಕ್ಕೂ ಭೌಗೋಳಿಕ ಹವಾಮಾನ ಪರಿವರ್ತನೆ, ಭೂಖಂಡಗಳ ಚಲನೆ, ಬಿಸಿಲು, ಮಳೆ, ಗಾಳಿಗಳಿಂದಾದ ಭೌಗೋಳಿಕ ವ್ಯತ್ಯಯಗಳು ವೈವಿಧ್ಯಮಯ ಜೈವಿಕರೂಪಗಳ, ಸಸ್ಯವರ್ಗಗಳ ಹುಟ್ಟಿಗೆ ಕಾರಣವಾದವು. ಅನಂತರ, ಈ ಸಸ್ಯಗಳನ್ನು ಅವಲಂಬಿಸಿ ಬದುಕುವ ಚಿಕ್ಕ ಮಿಡತೆಯಿಂದ ದೊಡ್ಡ ಆನೆಗಳವರೆಗಿನ ಸಸ್ಯಾಹಾರಿ ಪ್ರಾಣಿ ಸಮುದಾಯಗಳು ಜನಿಸಿ ಬಂದವು. ಈ ಸಸ್ಯಾಹಾರಿ ಪ್ರಾಣಿಗಳಲ್ಲಿ ಈಗಿನ ಜಿಂಕೆ, ಹಂದಿ, ಕಾಟಿ, ಟೆಪಿರ್, ಖಡ್ಗಮೃಗ, ಆನೆಗಳ ಪೂರ್ವಿಕರಾದ ದೊಡ್ಡ ಸ್ತನಿಪ್ರಾಣಿಗಳೂ ಸೇರಿದ್ದವು. ಇಂಥ ಸಸ್ಯಾಹಾರಿ ಪ್ರಾಣಿ ಸಮುದಾಯವೆಂದರೆ ಕೇವಲ ಪ್ರತ್ಯೇಕಜೀವಿಗಳ ಗುಂಪುಗಳು ಮಾತ್ರವಲ್ಲ; ಇವು ಬಲು ಸಂಕೀರ್ಣವಾದ ಜೀವಿಪರಿಸ್ಥತಿ ಜಾಲದ ಅಂಶಗಳು. ದೊಡ್ಡಪ್ರಾಣಿಗಳು ನಾರುತೊಗಟೆಗಳ ಗಿಡಮರಗಳನ್ನು ಆಹಾರಕ್ಕಾಗಿ ಅವಲಂಬಿಸುವುದರಿಂದ ಚಿಕ್ಕಪ್ರಾಣಿಗಳ ಚಲನವಲನಕ್ಕೂ ಮೇವಿಗೂ ಅವಕಾಶವೊದಗುತ್ತದೆ. ಪ್ರತಿಯೊಂದು ಪ್ರಾಣಿಯೂ ವಿಭಿನ್ನ ಸಸ್ಯಜಾತಿಯನ್ನು, ಸಸ್ಯಭಾಗವನ್ನು, ಇಲ್ಲವೇ ಸಸ್ಯದ ಬೆಳವಣಿಗೆಯ ಬೇರೆಬೇರೆ ಸ್ತರವನ್ನು ಆಹಾರಕ್ಕಾಗಿ ಆಯ್ದುಕೊಳ್ಳುತ್ತದೆ. ಈ ಸಸ್ಯಾಹಾರಿ ಪ್ರಾಣಿವರ್ಗಕ್ಕೆ ಸಮಾಂತರವಾಗಿ, ಇವನ್ನು ಆಹಾರಕ್ಕಾಗಿ ಬೇಟೆಯಾಡುವ ಮಾಂಸಾಹಾರಿ ಸ್ತನಿಗಳು ಕಬ್ಬೆಕ್ಕಿನ ಗಾತ್ರದ ಮಾರ್ಜಾಲದ ಪೂರ್ವಜನಿಂದ 40 ಮಿಲಿಯ ವರ್ಷಗಳ ಹಿಂದೆ ವಿಕಾಸಗೊಂಡವು.

ತಮಗಿಂತ ಸಾಕಷ್ಟು ದೊಡ್ಡ ಪ್ರಾಣಿಗಳನ್ನೂ ಆಹಾರಕ್ಕಾಗಿ ಕೊಲ್ಲಬಲ್ಲ ದೊಡ್ಡ ಬೇಟೆಗಾರ ಪ್ರಾಣಿಗಳೆಲ್ಲ ಮೂಲತಃ ಎರಡು ತಂತ್ರಗಳನ್ನು ಅನುಸರಿಸಿಕೊಂಡು ಬಂದಿವೆ. ಅವೆಂದರೆ, ವೇಗವಾಗಿ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡುವುದು ಇಲ್ಲವೇ ಅವಿತೇ ಪ್ರಾಣಿಗಳನ್ನು ಅನುಸರಿಸಿ ಹೋಗಿ ಆಶ್ಚರ್ಯವಾಗುವಷ್ಟು ಕ್ಷಿಪ್ರಗತಿಯಲ್ಲಿ ಆಕ್ರಮಣ ನಡೆಸುವುದು. ವೇಗಗತಿಯ ಬೇಟೆಗಾರ ಪ್ರಾಣಿಗಳು ಬಲು ದೂರದವರೆಗೆ ಪ್ರಾಣಿಗಳನ್ನು ಬೆನ್ನಟ್ಟಿಹೋಗಿ ಆಯಾಸಗೊಂಡ ಬೇಟೆಯನ್ನು ನೆಲಕ್ಕೆ ಉರುಳಿಸುವುವು. ಅವಿತು ಬೇಟೆಯಾಡುವ ಆಕ್ರಮಣಕಾರಿಗಳ ದೇಹವಿನ್ಯಾಸವಾದರೂ ಬೇಟೆಯ ಸಮೀಪದವರೆಗೆ ಕದ್ದುಮುಚ್ಚಿ ಸಾಗುವುದಕ್ಕೂ ದಿಢೀರನೆ ಆಕ್ರಮಣ ನಡೆಸುವುದಕ್ಕೂ ತಕ್ಕಂತೆ ರೂಪುಗೊಂಡಿದೆ. ಸಿವಂಗಿ(ಚೀತಾ) ಒಂದನ್ನು ಹೊರತುಪಡಿಸಿ ಉಳಿದೆಲ್ಲ ದೊಡ್ಡ ಮಾರ್ಜಾಲಗಳು - ಹುಲಿ, ಜಾಗ್ವಾರ್, ಚಿರತೆ, ಹಿಮಚಿರತೆ, ಹುಲ್ಲುಗಾವಲಿನಲ್ಲಿ ವಾಸಿಸುವ ಸಿಂಹವೂ ಸೇರಿ - ಮಂದಗತಿಯ ಅನುಸರಣೆಯ ಆಕ್ರಮಣಕಾರಿಗಳೇ.

ವರ್ತಮಾನಯುಗದ ಹುಲಿಗಳ ವಿಕಾಸಸ್ಥಿತಿಯನ್ನು ಪಾರಂಪರಿಕವಾಗಿ ಅವುಗಳ ಆಂಗಿಕ ರಚನೆ ಮತ್ತು ಅಸ್ಥಿಪಂಜರದ ಸ್ವರೂಪಗಳನ್ನು ಹೋಲಿಸಿ ನೋಡುವ ಮೂಲಕ ಮತ್ತು ಇತ್ತೀಚೆಗೆ ಆಣವಿಕ ತಳಿವಿಜ್ಞಾನ (ಮಾಲಿಕ್ಯುಲರ್ ಜಿನೆಟಿಕ್ಸ್) ವನ್ನು ಆಧರಿಸಿದ ಆಧುನಿಕ ವಿಧಾನಗಳ ಮೂಲಕವೂ ಪುನನಿರ್ಧರಿಸಲಾಗಿದೆ. ತಳಿವಿಜ್ಞಾನಿ ಸ್ಟೀಫನ್ ಓ ಬ್ರಿಯನ್ ಮತ್ತವರ ಸಹೋದ್ಯೋಗಿಗಳು "ಆಣವಿಕ ಗಡಿಯಾರ" (ಮಾಲಿಕ್ಯುಲರ್ ಕ್ಲಾಕ್) ಗಳನ್ನು ಬಳಸಿ ಪ್ಯಾಂತೆರಾ ವರ್ಗದ ಮಾರ್ಜಾಲಗಳು 4ರಿಂದ 6ಮಿಲಿಯ ವರ್ಷಗಳ ಹಿಂದೆಯೇ ತಮ್ಮ ಪೂರ್ವಿಕರಿಂದ ಬೇರ್ಪಟ್ಟುವೆಂದೂ, ಈ ವಂಶವಾಹಿನಿಯಿಂದ ಹುಲಿ (ಪ್ಯಾಂತೆರಾ ಟೈಗ್ರಿಸ್) ಒಂದು ಮಿಲಿಯ ವರ್ಷಗಳಿಂದ ಈಚೆಗಷ್ಟೇ ಪ್ರತ್ಯೇಕಗೊಂಡಿತೆಂದೂ ಅಂದಾಜು ಮಾಡಿದ್ದಾರೆ. ಈಗ ದಕ್ಷಿಣ ಚೀನಾದಲ್ಲಿ ಕಂಡುಬರುವ ಪ್ಯಾಂತೆರಾ ಟೈಗ್ರೀಸ್ ಅಮೊಯೆನ್ಸಿಸ್ ಉಪಜಾತಿಯ ಹುಲಿಯ ಎಲುಬಿನ ರಚನೆಯು ತಕ್ಕಮಟ್ಟಿಗೆ ಪುರಾತನ ವಿನ್ಯಾಸವನ್ನು ಹೋಲುವುದನ್ನು ಗಮನಿಸಿ, ವರ್ಗೀಕರಣಕಾರರು ಹುಲಿಯ ವಿಕಾಸ ಈ ಪ್ರದೇಶದಲ್ಲೇ ಆಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ಇಲ್ಲಿನ ಅರಣ್ಯಪ್ರದೇಶದಲ್ಲಿ (ಹುಲಿಯ ಬೇಟೆಯ ಆಯ್ಕೆಗಳಾದ) ದನಗಳ ಜಾತಿಯ ಕಾಡುಪ್ರಾಣಿಗಳು ಹಾಗೂ ಸರ್ವಸ್ ವರ್ಗದ ಜಿಂಕೆಗಳು ಯಥೇಚ್ಛವಾಗಿರುವುದೂ ಮೇಲಿನ ಅಭಿಪ್ರಾಯವನ್ನು ಬೆಂಬಲಿಸುತ್ತದೆ.

ಕೆಲವು ವೈಶಿಷ್ಟ್ಯಗಳು

[ಬದಲಾಯಿಸಿ]
  • ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಜೀವಿಸುವ ಹುಲಿಗಳು ಸೈಬೀರಿಯಾದ ಟೈಗಾ ಕಾಡುಗಳಲ್ಲಿ, ತೆರೆದ ಹುಲ್ಲುಗಾವಲುಗಳಲ್ಲಿ ಮತ್ತು ಉಷ್ಣವಲಯದ ಕಾಡುಗಳಲ್ಲಿ ನೆಲೆಸಿವೆ. ಹುಲಿಗಳು ತಮ್ಮ ತಮ್ಮ ಭೂಮಿತಿಯೊಳಗೆಯೇ ಜೀವಿಸುವ ಪ್ರಾಣಿಗಳು. ಸಾಮಾನ್ಯವಾಗಿ ಅವು ಒಂಟಿಜೀವಿ ಸಹ. ತನ್ನ ಪರಿಸರದಲ್ಲಿ ಲಭ್ಯವಿರುವ ಆಹಾರದ ಪ್ರಾಣಿಗಳ ಸಂಖ್ಯೆಗನುಗುಣವಾಗಿ ಪ್ರತಿ ಹುಲಿಯು ತನ್ನ ಸರಹದ್ದನ್ನು ಗುರುತಿಸಿಟ್ಟುಕೊಳ್ಳುತ್ತದೆ.
  • ವಿಶಾಲ ಪ್ರದೇಶದ ಮೇಲೆ ಒಡೆತನ ಸಾಧಿಸಬಯಸುವ ಮತ್ತು ಕೆಲ ಪ್ರದೇಶಗಳಲ್ಲಿ ಅಲ್ಪ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಹುಲಿಗಳು ಬಹಳಷ್ಟು ಬಾರಿ ಮಾನವನೊಡನೆ ಸಂಘರ್ಷಕ್ಕಿಳಿಯುತ್ತವೆ. ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ. ನೆಲೆಗಳ ನಾಶ ಮತ್ತು ಬೇಟೆಯಾಡುವಿಕೆಗಳು ಹುಲಿಗೆ ದೊಡ್ಡ ಕುತ್ತಾಗಿವೆ.
  • ಇಂದು ವಿಶ್ವದಲ್ಲಿರುವ ಎಲ್ಲ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ. ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯು ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.
೧೯೦೦ ಮತ್ತು ೧೯೯೦ರಲ್ಲಿ ಹುಲಿಗಳ ವ್ಯಾಪ್ತಿ

ವ್ಯಾಪ್ತಿ

[ಬದಲಾಯಿಸಿ]
  • ಏಷ್ಯಾ ಖಂಡ ಮತ್ತು ಅದಕ್ಕೆ ಹೊಂದಿಕೊಂಡ (ಜಾವಾ, ಬಾಲಿ, ಸುಮಾತ್ರ, ಮತ್ತಿತರ ದ್ವೀಪಗಳನ್ನು ಒಳಗೊಂಡ) ಸುಂದಾ ದ್ವೀಪಗಳು ಹುಲಿಯ ನಿವಾಸ ಪ್ರದೇಶಗಳು.[] ಒಂದೆಡೆ, ಹಿಮಾಲಯದಿಂದ ಉತ್ತರಕ್ಕೆ ಚೈನಾದಿಂದ ರಷ್ಯಾದವರೆಗೂ, ಮಧ್ಯ ಏಷ್ಯಾದ ದೇಶಗಳನ್ನು ಹಾಯ್ದು ಇರಾನ್‌ನವರೆಗೂ ಹರಡಿಕೊಂಡರೆ, ಮತ್ತೊಂದೆಡೆ ದಕ್ಷಿಣಪೂರ್ವದ ಇಂಡೋಚೈನಾದಿಂದ ಬರ್ಮಾ (ಇಂದಿನ ಮ್ಯಾನ್‌ಮಾರ್), ಅಲ್ಲಿಂದ ಭಾರತದ ಎಲ್ಲೆಡೆ ವಿಸ್ತರಿಸಿದ[] ಹುಲಿಗಳ ವಿಸ್ತರಣೆಗೆ ರಾಜಸ್ಥಾನದ ಮರುಭೂಮಿ, ಹಿಮಾಲಯ, ಹಿಂದೂ ಮಹಾಸಾಗರಗಳೇ ಅಡ್ಡಿಯಾದವು. ಹುಲಿಗಳ ಹಂಚಿಕೆಯ ಇನ್ನೊಂದು ಕವಲು ಮಲಯಾ ಮತ್ತು ಜಾವಾ, ಬಾಲಿ, ಸುಮಾತ್ರ ಮತ್ತಿತರ ಇಂಡೋನೇಷ್ಯನ್ ದ್ವೀಪಗಳಿಗೆ ವಿಸ್ತರಿಸಿತು. ಪ್ಲೀಸ್ಟೊಸಿನ್ ಯುಗದಲ್ಲಿನ ಸಮುದ್ರದ ಮಟ್ಟಗಳು ಮತ್ತು ಬದಲಾವಣೆಗಳೇ ಈ ರೀತಿಯ ವಿಸ್ತರಣೆಯ ವೈವಿಧ್ಯಕ್ಕೆ ಕಾರಣವೆಂದು ವಿಜ್ಞಾನಿ ಜಾನ್ ಸೈಡೆನ್‌ಸ್ಟಿಕೆರ್‌ರವರ ಅಭಿಪ್ರಾಯ.
  • ಐತಿಹಾಸಿಕ ಕಾಲದಲ್ಲಿ ಹುಲಿಗಳು ಕಾಕಸಸ್ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಸೈಬೀರಿಯಾ ಮತ್ತು ಇಂಡೋನೇಷ್ಯಾವರೆಗೆ ಏಷ್ಯಾದ ಎಲ್ಲ ಭಾಗಗಳಲ್ಲಿ ಜೀವಿಸಿದ್ದವು. ೧೯ನೆಯ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷ್ಯಾದಿಂದ ಸಂಪೂರ್ಣವಾಗಿ ಕಣ್ಮರೆಯಾದವು. ಅಲ್ಲದೆ ಖಂಡವ್ಯಾಪ್ತಿಯನ್ನು ಹೊಂದಿದ್ದ ಹುಲಿಗಳ ನೆಲೆಗಳು ಬಹುವಾಗಿ ಕುಗ್ಗಿ ಇಂದು ಹುಲಿಗಳು ಕೆಲ ಪ್ರದೇಶಗಳಿಗ ಮಾತ್ರ ಸೀಮಿತವಾಗಿವೆ.
  • ಇಂದು ಸೈಬೀರಿಯಾದ ಆಮೂರ್ ನದಿಯ ದಕ್ಷಿಣಭಾಗದಿಂದ ಹುಲಿಗಳ ನೆಲೆ ಆರಂಭ. ದ್ವೀಪಗಳ ಪೈಕಿ ಸುಮಾತ್ರಾದಲ್ಲಿ ಮಾತ್ರ ಹುಲಿಗಳು ಕಾಣುತ್ತವೆ. ೨೦ನೆಯ ಶತಮಾನದಲ್ಲಿ ಜಾವಾ ಮತ್ತು ಬಾಲಿ ದ್ವೀಪಗಳಿಂದ ಹುಲಿಗಳು ಶಾಶ್ವತವಾಗಿ ಮರೆಯಾದವು.
  • ವ್ಯಾಪಕವಾದ ಭೂಪ್ರದೇಶಗಳಲ್ಲಿ ಹರಡಿದ ಹುಲಿಗಳು ನಿಜಕ್ಕೂ ವೈವಿಧ್ಯಮಯವಾದ ನಿವಾಸನೆಲೆಗಳಲ್ಲಿ ಜೀವಿಸುತ್ತಿದ್ದವು. ರಷ್ಯಾದ ನಿತ್ಯಹಸುರಿನ ಅಗಲದೆಲೆಯ ಸಮಶೀತೋಷ್ಣಕಾಡುಗಳಿಂದ ಚೈನಾದ ಉಷ್ಣವಲಯದಂಚಿನ ಅರಣ್ಯಗಳವರೆಗೆ ಕ್ಯಾಸ್ಪಿಯನ್ ಪ್ರದೇಶದ ಹುಲ್ಲುಗಾವಲುಗಳಿಂದ ಥೈಲ್ಯಾಂಡ್, ಇಂಡೋಚೈನಾ, ಮಲೇಷಿಯಾ, ಭಾರತ ಹಾಗೂ ಇಂಡೋನೇಷ್ಯಾ ದೇಶಗಳ ಉಷ್ಣವಲಯದ ದಟ್ಟ ಹಸಿರುಕಾಡುಗಳವರೆಗೆ ಹುಲಿಯ ನೆಲೆ ಹಂಚಿಕೆಯಾಗಿದೆ. ಭಾರತ ಉಪಖಂಡ ಮತ್ತು ದಕ್ಷಿಣಪೂರ್ವ ಏಷ್ಯಾದ ಉಷ್ಣವಲಯದ ಎಲೆಯುದುರುವ ಕಾಡುಗಳು ಹುಲಿಯ ಆದರ್ಶ ನೆಲೆಗಳೆನಿಸಿದವು. ಅಲ್ಲದೆ, ಭಾರತ, ಬಾಂಗ್ಲಾದೇಶ, ಜಾವಾಗಳ ಕಾಂಡ್ಲಾ (ಮ್ಯಾಂಗ್ರೋವ್) ಕಾಡುಗಳಲ್ಲೂ ಸುಮಾತ್ರದ ಜೌಗುಪ್ರದೇಶಗಳಲ್ಲೂ ಹುಲಿಗಳು ನೆಲೆಸಿದ್ದವು. ಸಿಂಹ ಚಿರತೆಗಳಂತೆ ಒಣಭೂಮಿಯ ತೆರವುಗಳಲ್ಲಿ ಹುಲಿ ವಾಸಿಸಲಾರದಿದ್ದರೂ ಒಂದಿಷ್ಟು ಕಾಡಿನ ಆವರಣ ನೀರಿನ ಸೌಲಭ್ಯಗಳಿದ್ದಲ್ಲಿ ಹುಲಿ ಎಂಥ ನೆಲೆಯನ್ನೇ ಆದರೂ ಆಯ್ಕೆಮಾಡಿಕೊಂಡುಬಿಡುವುದು.
  • ಹೇಗೇ ಇದ್ದರೂ, ಒಂದು ನಿರ್ದಿಷ್ಟ ಪ್ರದೇಶ ಹುಲಿಗಳ ನಿವಾಸಯೋಗ್ಯವೆನಿಸಬೇಕಾದರೆ ಅಲ್ಲಿ ಸಾಕಷ್ಟು ಬೇಟೆಯ ಪ್ರಾಣಿಗಳ ಲಭ್ಯತೆಯಿರುವುದು ಅವಶ್ಯ. ಹುಲಿಯ ಆಹಾರದ ಆಯ್ಕೆಯ ಅಪೂರ್ಣಪಟ್ಟಿಯಲ್ಲಿ ದೊಡ್ಡಗೊರಸಿನ ಪ್ರಾಣಿಗಳಾದ ಕಾಡುದನಗಳು (ಕಾಟಿ, ಬಾನ್‌ಟೆಂಗ್, ಗೌಪ್ರೇ ಮತ್ತು ಕಾಡೆಮ್ಮೆ)[], ಬೋವಿಡ್ ವರ್ಗದ ಇತರ ಪ್ರಾಣಿಗಳು (ನೀಲ್‌ಗಾಯ್, ಚೌಸಿಂಘ, ಚಿಂಕಾರ, ತಾಕಿನ್, ವುಕ್ವಾಂಗ್ ಆಕ್ಸ್) ಕಾಡುಮೇಕೆಗಳು ಮತ್ತು ಆಂಟಿಲೋಪ್‌ಗಳು (ಥಾರ್, ಗೊರಲ್, ಸೆರೋ) ಹಲವು ಜಾತಿಯ ಜಿಂಕೆಗಳು (ಮೂಸ್, ಎಲ್ಕ್, ಸಿಕಾ, ಸಾಂಬಾರ್, ಬಾರಸಿಂಘ, ತಮಿನ್, ಸಾರಗ, ಹಾಗ್ ಡಿಯರ್, ತಿಯೋಮೊರಸ್ ಡಿಯರ್, ಕಾಡುಕುರಿ) ಟೆಪಿರ್‌ಗಳು, ಕಾಡುಹಂದಿ ಹಾಗೂ ಅಪರೂಪವಾಗಿ ಖಡ್ಗಮೃಗ ಮತ್ತು ಆನೆಯ ಮರಿಗಳು. ಹುಲಿಗಳು ಚಿಕ್ಕಪುಟ್ಟ ಜೀವಿಗಳನ್ನೂ ಕೊಲ್ಲುತ್ತವೆಯಾದರೂ ಅವುಗಳ ಆವಾಸದಲ್ಲಿ ಸಾಕಷ್ಟು ದಟ್ಟಣೆಯಲ್ಲಿ ಗೊರಸಿನ ಪ್ರಾಣಿಗಳು ಇಲ್ಲದಿದ್ದಲ್ಲಿ ಹುಲಿಗಳು ಬದುಕಿ ತಮ್ಮ ಸಂತಾನವನ್ನು ಬೆಳೆಸಲಾರವು.

ಶಾರೀರಿಕ ಲಕ್ಷಣಗಳು ಮತ್ತು ತಳಿಗಳು

[ಬದಲಾಯಿಸಿ]
ಸೈಬೀರಿಯಾದ ಹುಲಿ
ಹುಲಿಯ ಅಸ್ಥಿಪಂಜರ
  • ಹುಲಿಯ ದೇಹದ ಸ್ವರೂಪ ಮತ್ತು ಆಂಗಿಕ ರಚನೆಗಳು, ಎಲ್ಲಕ್ಕಿಂತ ಮುಖ್ಯವಾಗಿ ವಿಕಾಸದ ವಿವಿಧ ಘಟ್ಟಗಳಲ್ಲಿ ಬೇಟೆಗಾಗಿಯೇ ರೂಪುಗೊಂಡ ಹೊಂದಾಣಿಕೆಗಳು. ಹುಲಿ ತನ್ನ ಸ್ಥಿತಿಗತಿ, ಬೆಳವಣಿಗೆ, ಹಾಗೂ ಸಂತಾನೋತ್ಪತ್ತಿಗಾಗಿ ಬೇಕಾದ ಶಕ್ತಿಸಂಚಯನಕ್ಕೆ ತನ್ನ ಬೇಟೆಯ ದೇಹದ ಅಂಗಾಂಶಗಳಲ್ಲೂ ರಕ್ತದಲ್ಲೂ ಸಂಚಿತವಾಗಿರುವ ರಾಸಾಯನಿಕ ಶಕ್ತಿಯನ್ನೇ ಅವಲಂಬಿಸಿರಬೇಕು. ಬೇಟೆಯನ್ನು ಹಿಡಿಯುವುದಕ್ಕೆ ವೆಚ್ಚವಾಗುವ ಶಕ್ತಿಗಿಂತ ಆಹಾರದಿಂದ ದೊರಕುವ ಶಕ್ತಿ ಮಿಗಿಲಾಗಿರಲೇ ಬೇಕಷ್ಟೇ. ಇಲಿ, ಕಪ್ಪೆ, ಮೀನುಗಳಂಥ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿಯುವುದಕ್ಕಿಂತ ಹುಲಿಗೆ ತನ್ನ ಪೌಷ್ಟಿಕ ಅವಶ್ಯಕತೆಗಳಿಗೆ ಶಕ್ತಿಯ ಭಂಡಾರಗಳಾದ ದೊಡ್ಡ ಗೊರಸಿನ ಪ್ರಾಣಿಗಳನ್ನೇ ಕೊಲ್ಲಬೇಕು. ಆದರೆ ಇಂಥ ದೊಡ್ಡ ಪ್ರಾಣಿಗಳ ಲಭ್ಯತೆ ಇಲಿ ಕಪ್ಪೆಗಳಿಗಿಂತ ವಿರಳ; ಎಲ್ಲೋ ಅಪರೂಪಕ್ಕೊಮ್ಮೆ ಕೊಲ್ಲುವುದು ಸಾಧ್ಯ. ಆದ್ದರಿಂದ, ಹುಲಿಯ ಆಂಗಿಕರಚನೆಯಲ್ಲಿ ಆಹಾರಪಥ್ಯಕ್ರಮ ಹೇಗೆ ರೂಪುಗೊಂಡಿದೆಯೆಂದರೆ ಅದಕ್ಕೆ 6-8 ದಿನಗಳಿಗೊಮ್ಮೆ ಪುಷ್ಕಳವಾಗಿ ಊಟ ಸಿಕ್ಕಿದರಾಯಿತು. ಹುಲಿಯೊಂದು ಎರಡು ವಾರಗಳವರೆಗೆ ಯಾವುದೇ ಬೇಟೆಯಾಡದೇ ಇದ್ದುದು ರೇಡಿಯೋ ಕಾಲರ್ ತೊಡಿಸಿ ನಡೆಸುತ್ತಿದ್ದ ಸಂಶೋಧನೆಯ ಸಂದರ್ಭದಲ್ಲಿ ತಿಳಿದುಬಂದಿದೆ. ಹಸಿದಿರಲಿ, ಬಿಡಲಿ, ಹುಲಿಗಳು ದಿನಂಪ್ರತಿ 15 ರಿಂದ 16 ಗಂಟೆಗಳ ಕಾಲ ವಿಶ್ರಾಂತಿಯಲ್ಲಿರುವುದರಿಂದಲೂ ತಮ್ಮ ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ಇನ್ನು ಬೇಟೆಯಾಡಿದ ಮೇಲೆ ಹೇಳುವುದೇ ಬೇಡ. ಮುಂದಿನ ಎರಡುಮೂರು ದಿನ ಹುಲಿ ಸಂಪೂರ್ಣ ನಿಷ್ಕ್ರಿಯ.
  • ಮೊದಲಿಗೆ ಹುಲಿ ತನ್ನ ಬೇಟೆಯನ್ನು ಪತ್ತೆಹಚ್ಚಿ ಕೊಲ್ಲಬೇಕಷ್ಟೆ. ಇದೇನೂ ಸುಲಭದ ಕೆಲಸವಲ್ಲ. ಬಹುತೇಕ ಗೊರಸಿನ ಪ್ರಾಣಿಗಳು ಸದಾ ಎಚ್ಚರದಿಂದಿರುತ್ತವೆ. ಅವುಗಳ ಶ್ರವಣ ಶಕ್ತಿ ಬಲು ತೀಕ್ಷ್ಣ. ವಾಸನೆ ಹಿಡಿಯುವುದರಲ್ಲೂ ಅವು ಬಲು ಚುರುಕು. ಅವಕ್ಕೆ ಪತ್ತೆಯೇ ಹತ್ತದಂತೆ 10 ರಿಂದ 30 ಮೀಟರುಗಳಷ್ಟು ಸಮೀಪಕ್ಕೆ ತಲಪಿ ಮೇಲೆರಗುವುದೆಂದರೆ ಹುಲಿ ತನ್ನೆಲ್ಲ ಕೌಶಲವನ್ನೂ ಬಳಸಲೇಬೇಕು. ಮೃಗಾಲಯದಲ್ಲಿ ಹುಲಿಯನ್ನು ಕಾಣುವಾಗ ಅದರ ಅರಶಿನ ಮತ್ತು ಬಿಳಿಬಣ್ಣಗಳ ವರ್ಣರಂಜಿತ ವೈದೃಶ್ಯವು ಕಪ್ಪುಪಟ್ಟೆಗಳೊಡನೆ ಬೆರೆತು ಆಕರ್ಷಕವಾಗಿ ಕಾಣಬಹುದು. ಆದರೆ ಬಗೆಬಗೆಯಾಗಿ ಹರಡಿಕೊಂಡ ನೆರಳುಗಳ ಚಿತ್ತಾರವಿರುವ ಕಾಡಿನ ಕಡುಗಂದು ಆವರಣದಲ್ಲಿ ಹುಲಿ ನಡೆದುಬರುವಾಗ, ಹುಲಿಯ ಈ ಬಣ್ಣದ ವಿನ್ಯಾಸ ಸುತ್ತಲಿನ ಪೊದರುಗಳೊಡನೆ ಮಿಳಿತಗೊಂಡುಬಿಡುತ್ತದೆ. ಹುಲಿಯ ಆಹಾರವಾದ ಗೊರಸಿನ ಪ್ರಾಣಿಗಳು ಬಣ್ಣಗಳ ಅಂತರವನ್ನು ಅಷ್ಟಾಗಿ ಗುರುತಿಸಲಾರವು. ಹೀಗಾಗಿ, ನಿಶ್ಚಲವಾಗಿ ಕುಳಿತ ಹುಲಿ ಅವಕ್ಕೆ ಕಾಣಿಸುವುದೇ ಇಲ್ಲ.
  • ಇನ್ನಿತರ ಬೇಟೆಯ ಹೊಂದಾಣಿಕೆಗಳೆಂದರೆ ಅಡಿಮೆತ್ತೆ ಇರುವ ಪಾದಗಳು, ತುದಿಬೆರಳಲ್ಲಿ ನಿಲ್ಲುವ ಸಾಮರ್ಥ್ಯ, ಮತ್ತು ಬಳುಕುವ ಶರೀರ. ಹುಲಿಗಳು ತಾವು ಮರಗಳ ಕಾಂಡಗಳ ಮೇಲೆ ಸಿಂಪಡಿಸಿದ ವಾಸನೆಯ ಗುರುತುಗಳಿಂದಲೇ ಪರಸ್ಪರ ಸಂಪರ್ಕ ಸಾಧಿಸುವುದನ್ನು ಗಮನಿಸಿದರೆ ಹುಲಿಗಳಿಗೆ ಒಳ್ಳೆಯ ವಾಸನಾ ಶಕ್ತಿ ಇರುವುದೆಂದು ಹೇಳಬಹುದು. ಆದರೆ, ಬೇಟೆಗೆ ಸಂಬಂಧಿಸಿದಂತೆ ಅವು ನೋಟ ಮತ್ತು ಶ್ರವಣ ಶಕ್ತಿಯನ್ನೇ ಬಳಸಿಕೊಳ್ಳುವಂತೆ ತೋರುತ್ತದೆ. ಹುಲಿಯ ಕಣ್ಣುಗಳ ರಚನೆ ಮತ್ತು ಅವಕ್ಕೆ ಸಂಪರ್ಕಿಸುವ ನರಗಳಿಂದ ಸೂಚಿತವಾಗುವಂತೆ ಬಹುಶಃ ಹುಲಿಗಳಿಗೆ ಜಗತ್ತು ಕಪ್ಪು ಬಿಳುಪಾಗಿ ಮಾತ್ರವೇ ಕಾಣುವುದಾದರೂ ಅವುಗಳ ಇರುಳುನೋಟದ ಶಕ್ತಿ ಮಾತ್ರ ಅದ್ಭುತವಾದುದು. ದಟ್ಟವಾದ ಕಾಡಿನೊಳಗೆ ನೆಟ್ಟಿರುಳಿನಲ್ಲಿ ಜಾಡಿನ ಪತ್ತೆಗೆ ಅವುಗಳ ಉದ್ದಮೀಸೆಗಳ ಸ್ಪರ್ಶಜ್ಞಾನದಿಂದಲೂ ನೆರವು ದೊರಕೀತು. ಹುಲಿಗಳು ಗಾಢಾಂಧಕಾರದಲ್ಲೂ ನಿಶ್ಶಬ್ದವಾಗಿ ಬೇಟೆಗಾಗಿ ಹುಡುಕಾಟ ನಡೆಸಬಲ್ಲವು. ವಿಶೇಷವಾಗಿ ರೂಪುಗೊಂಡ ಕಿವಿಯ ಒಳಕೋಣೆಗಳು ಹಾಗೂ ಚಲಿಸಬಲ್ಲ ಹೊರಗಿವಿಗಳ ನೆರವಿನಿಂದ ಹುಲಿ ಕಣ್ಣಿಗೆ ಕಾಣದ ಪ್ರಾಣಿಯ ಅತಿಸೂಕ್ಷ್ಮ ಸದ್ದನ್ನೂ ಗ್ರಹಿಸಿ ಅದರ ನೆಲೆಯನ್ನು ಪತ್ತೆಹಚ್ಚಬಲ್ಲುದು.
  • ಬೇಟೆಯ ಪ್ರಾಣಿಯನ್ನು ಹಿಡಿಯಲು ಬೇಕಾದ ಶಕ್ತಿಯಷ್ಟನ್ನೂ ಹುಲಿಯ ಮಾಂಸಖಂಡಗಳು ಒಗ್ಗೂಡಿಸಬಲ್ಲವು. ಆದರೆ, ಗೊರಸಿನ ಪ್ರಾಣಿಯ ಮಾಂಸಖಂಡಗಳಿಗೆ ಹೋಲಿಸಿದರೆ, ಹುಲಿಯ ಮಾಂಸಖಂಡಗಳು ಬಲುಬೇಗನೆ ದಣಿಯುತ್ತವೆ. ಗಟ್ಟಿಮುಟ್ಟಾದ ಮೂಳೆಗಳು ಹಾಗೂ ಬೇಕಾದಂತೆ ಮಣಿಯುವ ಕೀಲುಗಳನ್ನು ಸುತ್ತುವರಿದಿರುವ ಈ ಮಾಂಸಖಂಡಗಳು ವಿಪರೀತ ಹೊರಳು, ತಿರುಗು, ತಿರುಚು, ಬಳುಕಾಟಗಳಿಂದ ತುಂಬಿದ ಕ್ಷಣಿಕ ಆಕ್ರಮಣಕ್ಕೆ ಮಾತ್ರವೇ ಸಮರ್ಥವಾಗಿವೆ. ಹುಲಿಯೊಂದು ಕಡವೆಯನ್ನು ನೆಲಕ್ಕುರುಳಿಸುವ ದೃಶ್ಯಗಳು ಹುಲಿಯ ದೇಹದ ಬೆರಗುಹುಟ್ಟಿಸುವ ತಿರುಚುವಿಕೆಗಳನ್ನು ಯಥಾವತ್ತಾಗಿ ಪ್ರದರ್ಶಿಸುವಲ್ಲಿ ಸಮರ್ಥವಾಗಿವೆ.
  • ತನ್ನ ದೇಹದ ತೂಕಕ್ಕಿಂತ 3 ರಿಂದ 5 ಪಟ್ಟು ದೊಡ್ಡದಾದ ಕಾಟಿ ಇಲ್ಲವೇ ಕಡವೆಯಂತಹ ಪ್ರಾಣಿಯನ್ನು ನೆಲಕ್ಕೆ ಉರುಳಿಸುವ ಪ್ರಯತ್ನದಲ್ಲಿರುವಾಗ ಹುಲಿ ಅವುಗಳ ಗೊರಸು ಇಲ್ಲವೇ ಕೋಡುಗಳ ತಿವಿತೊದೆತಗಳಿಂದ ಗಾಯಗೊಳ್ಳದಂತೆ ಎಚ್ಚರವಹಿಸಬೇಕಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಹುಲಿ ತನ್ನ ಮುಂಗಾಲುಗಳನ್ನೂ, ಪಂಜದ ಅಲಗಿನೊಳಗೆ ಹುದುಗಿಕೊಂಡಂತಿರುವ ಹರಿತವಾದ ಉಗುರುಗಳನ್ನೂ ಬಳಸುತ್ತದೆ. ತೀವ್ರ ಘರ್ಷಣೆಯ ಸಂದರ್ಭಗಳಲ್ಲಿ ಹುಲಿಯ ಹಿಂಗಾಲುಗಳೂ ಪ್ರಾಣಿಯನ್ನು ಗಂಭೀರವಾಗಿ ಗಾಯಗೊಳಿಸಬಲ್ಲವು. ಇವೆಲ್ಲಕ್ಕಿಂತ ಅತಿಮುಖ್ಯವಾದ ಆಯುಧಗಳೆಂದರೆ ಚೂರಿಯಂತಹ ನಾಲ್ಕು ಕೋರೆಹಲ್ಲುಗಳು. ದವಡೆಯ ಬಲಿಷ್ಠ ಮಾಂಸಖಂಡಗಳು ಬೇಟೆಯ ಪ್ರಾಣಿಯ ಕುತ್ತಿಗೆ, ಗಂಟಲು ಇಲ್ಲವೇ ಮಿದುಳಕವಚದೊಳಕ್ಕೆ ಈ ಕೋರೆ ಹಲ್ಲುಗಳನ್ನು ಆಳವಾಗಿ ಊರಿ, ಇರಿದು ಪ್ರಾಣಿಯನ್ನು ನಿಷ್ಕ್ರಿಯಗೊಳಿಸಿ ಕ್ಷಿಪ್ರವಾಗಿ ಕೊಲ್ಲುತ್ತವೆ.
  • ಹುಲಿಗಳು ತುಕ್ಕಿನ ಬಣ್ಣದ ಇಲ್ಲವೆ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಮುಖದ ಪರಿಧಿಯಲ್ಲಿ ಬಿಳಿ ಬಣ್ಣವನ್ನು ಪಡೆದಿರುತ್ತವೆ. ಪಟ್ಟೆಗಳ ಆಕಾರ ಹಾಗೂ ಸಾಂದ್ರತೆಯು ಜಾತಿಯಿಂದ ಜಾತಿಗೆ ಬದಲಾಗುತ್ತವೆ. ಹೆಚ್ಚಿನ ಹುಲಿಗಳು ನೂರಕ್ಕೂ ಹೆಚ್ಚು ಪಟ್ಟೆಗಳನ್ನು ಹೊಂದಿರುತ್ತವೆ. ಪಟ್ಟೆಗಳ ವಿನ್ಯಾಸವು ಪ್ರತಿ ಹುಲಿಗೂ ಬದಲಾಗುತ್ತದೆ.[][] ಬೇಟೆಗಾಗಿ ಹೊಂಚು ಹಾಕುತ್ತಿರುವಾಗ ಹುಲಿಯು ಸುತ್ತಲಿನ ಪರಿಸರದೊಂದಿಗೆ ಸೇರಿಹೋಗಲು ಈ ಪಟ್ಟೆಗಳು ಅನುವಾಗುವುವೆಂದು ನಂಬಲಾಗಿದೆ.[][]
  • ಬೆಕ್ಕಿನ ಜಾತಿಯ ಇತರ ಪ್ರಾಣಿಗಳಿಗಿರುವಂತೆ ಹುಲಿಗೆ ಸಹ ಕಿವಿಯ ಹಿಂಭಾಗದಲ್ಲಿ ದೊಡ್ಡ ಬಿಳಿ ಮಚ್ಚೆಯಿರುವುದು. ಬೆಕ್ಕುಗಳಲ್ಲಿ ಹುಲಿಯ ದೇಹತೂಕ ಅತಿ ಅಧಿಕ. ಹುಲಿಯ ಭುಜಗಳು ಮತ್ತು ಕಾಲುಗಳು ಬಲವಾಗಿ ರೂಪುಗೊಂಡಿದ್ದು ಇವುಗಳ ಸಹಾಯದಿಂದ ಹುಲಿಯು ತನಗಿಂತ ದೊಡ್ಡ ಗಾತ್ರದ ಬೇಟೆಯ ಪ್ರಾಣಿಯನ್ನು ಸುಲಭವಾಗಿ ನೆಲಕ್ಕೆ ಕೆಡವಬಲ್ಲುದು.
  • ಜಗತ್ತಿನ ಉತ್ತರಭಾಗದಲ್ಲಿರುವ ಹುಲಿಗಳು ದಕ್ಷಿಣದಲ್ಲಿರುವುವಕ್ಕಿಂತ ಗಾತ್ರದಲ್ಲಿ ದೊಡ್ಡವು. ಹೆಣ್ಣು ಹುಲಿಯು ಗಾತ್ರದಲ್ಲಿ ಗಂಡಿಗಿಂತ ಚಿಕ್ಕದು. ಗಂಡು ಹುಲಿಗಳ ಮುಂಪಾದ ಹೆಣ್ಣಿನದಕ್ಕಿಂತ ಹೆಚ್ಚು ಅಗಲವಾಗಿರುತ್ತದೆ. ಈ ಲಕ್ಷಣದ ಸಹಾಯದಿಂದ ತಜ್ಞರು ಹೆಜ್ಜೆ ಗುರುತಿನ ಆಧಾರದ ಮೇಲೆ ಹುಲಿಯ ಲಿಂಗವನ್ನು ಗುರುತಿಸುತ್ತಾರೆ.

ಉಪತಳಿಗಳು

[ಬದಲಾಯಿಸಿ]

ಆಧುನಿಕ ಯುಗದ ಹುಲಿಗಳಲ್ಲಿ ೮ ಉಪತಳಿಗಳಿವೆ. ಇವುಗಳ ಪೈಕಿ ಎರಡು ಭೂಮಿಯಿಂದ ಮರೆಯಾಗಿವೆ. ಇಂದು ಜೀವಿಸಿರುವ ಉಪತಳಿಗಳೆಂದರೆ:

  • ಬಂಗಾಳ ಹುಲಿ (ರಾಯಲ್ ಬೆಂಗಾಲ್ ಟೈಗರ್ ಅಥವಾ ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್): ಇದು ಭಾರತ, ಬಾಂಗ್ಲಾದೇಶ, ಭೂತಾನ್, ಬರ್ಮಾ ಮತ್ತು ನೇಪಾಳದ ಭಾಗಗಳಲ್ಲಿ ಕಾಣಬರುತ್ತದೆ. ಹುಲ್ಲುಗಾವಲು, ಮಳೆಕಾಡು, ಕುರುಚಲು ಕಾಡು, ಎಲೆ ಉದುರಿಸುವ ಕಾಡು ಮತ್ತು ಮ್ಯಾಂಗ್ರೋವ್‌ಗಳಂತಹ ವಿಭಿನ್ನ ಪರಿಸರಗಳಲ್ಲಿ ಬಂಗಾಳ ಹುಲಿ ಜೀವಿಸಬಲ್ಲುದು. ಉತ್ತರ ಭಾರತ ಮತ್ತು ನೇಪಾಳಗಳಲ್ಲಿ ಕಾಣುವ ಹುಲಿಯು ದಕ್ಷಿಣ ಭಾರತದಲ್ಲಿರುವುದಕ್ಕಿಂತ ದೊಡ್ಡ ದೇಹವನ್ನು ಹೊಂದಿರುತ್ತದೆ. ಇಂದು ಬಂಗಾಳದ ಹುಲಿಗಳ ಒಟ್ಟು ಸಂಖ್ಯೆ ಸುಮಾರು ೨೦೦೦ ದಷ್ಟು. ತೀವ್ರ ಗತಿಯಲ್ಲಿ ಅವನತಿಯತ್ತ ಸಾಗುತ್ತಿದ್ದ ಈ ಜೀವಿಯನ್ನು ಇಂದು ಭಾರತದಲ್ಲಿ ಸಂರಕ್ಷಿತ ಜೀವಿಯನ್ನಾಗಿ ಘೋಷಿಸಲಾಗಿದ್ದು ಪ್ರಾಜೆಕ್ಟ್ ಟೈಗರ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಕಾಪಾಡಿಕೊಳ್ಳಲಾಗುತ್ತಿದೆ. ಆದರೆ ಕಳ್ಳಬೇಟೆಯಿಂದಾಗಿ ಈ ಹುಲಿಯು ದಿನೇ ದಿನೇ ವಿನಾಶದತ್ತ ಸಾಗುತ್ತಿದೆ. ಇದರ ಫಲವಾಗಿ ಸಾರಿಸ್ಕಾ ಹುಲಿ ಮೀಸಲಿನಲ್ಲಿ ಇಂದು ಒಂದು ಹುಲಿ ಸಹ ಜೀವಿಸಿಲ್ಲ. ಭಾರತದ ಗಂಡುಹುಲಿಗಳು 200 ರಿಂದ 250 ಕೆ.ಜಿ.ತೂಕವಿದ್ದರೆ ಹೆಣ್ಣುಹುಲಿಗಳ ತೂಕ ಅವಕ್ಕಿಂತ 100 ಕಿಲೊ ಕಡಿಮೆ.[][೧೦][೧೧][೧೨] ಭಾರತದ ಹುಲಿಗಳು 155 ರಿಂದ 225 ಸೆಂಟಿಮೀಟರುಗಳಷ್ಟು ಉದ್ದವಾಗಿರುವುದಲ್ಲದೆ, ಬಾಲದ ಅಳತೆ ಬೇರೆ 75 ರಿಂದ 100 ಸೆಂ.ಮೀ.ಗಳಷ್ಟಿರುತ್ತದೆ. ಆದರೆ ಹಳೆಯ ಶಿಕಾರಿ ದಾಖಲೆಗಳು ಹುಲಿಯ ಉದ್ದವನ್ನು ಮೂಗಿನ ತುದಿಯಿಂದ ಬಾಲದ ತುದಿವರೆಗೆ ಎರಡೂ ಬದಿಗೆ ನೆಟ್ಟ ಮರದ ಗೂಟಗಳ ನಡುವಿನ ನೇರ ಅಳತೆಗಳಾಗಿದ್ದು ಅವುಗಳಿಂದ ಹುಲಿಯ ಉದ್ದದ ಖಚಿತ ಮಾಹಿತಿ ಪಡೆಯುವುದು ಕಷ್ಟಸಾಧ್ಯ.
  • ಇಂಡೋಚೀನಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಕಾರ್ಬೆಟ್ಟಿ): ಇದು ಲಾವೋಸ್, ಕಾಂಬೋಡಿಯಾ, ಚೀನಾ, ಬರ್ಮಾ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್‌ಗಳಲ್ಲಿ ನೆಲೆಸಿದೆ. ಇವು ಬಂಗಾಳದ ಹುಲಿಗಳಿಗಿಂತ ಚಿಕ್ಕದಾಗಿದ್ದು ಮೈಬಣ್ಣವು ಹೆಚ್ಚು ಗಾಢವಾಗಿರುತ್ತದೆ. ಇವು ಸಾಮಾನ್ಯವಾಗಿ ಬೆಟ್ಟಗುಡ್ಡಗಳ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇಂದು ಈ ತಳಿಯ ಹುಲಿಗಳು ೧೨೦೦ ರಿಂದ ೧೮೦೦ರಷ್ಟು ಭೂಮಿಯ ಮೇಲಿವೆ. ಇವುಗಳಲ್ಲಿ ಕಾಡಿನಲ್ಲಿ ಕೆಲವು ನೂರು ಮಾತ್ರ ಇದ್ದು ಉಳಿದವು ಜಗತ್ತಿನ ಬೇರೆಬೇರೆ ಕಡೆ ಮೃಗಾಲಯಗಳಲ್ಲಿವೆ.
  • ಮಲಯ ಹುಲಿ (ಪ್ಯಾಂಥೆರಾ ಟೈಗ್ರಿಸ್ ಜಾಕ್ಸನಿ): ಈ ಉಪತಳಿಯು ಮಲಯ ಜಂಬೂದ್ವೀಪದ ದಕ್ಷಿಣ ಭಾಗದಲ್ಲಿ ಮಾತ್ರ ಕಂಡುಬರುತ್ತದೆ. ಈ ಜಾತಿಯ ಸುಮಾರು ೬೦೦ ರಿಂದ ೮೦೦ ಹುಲಿಗಳು ಇಂದು ಜೀವಿಸಿವೆ. ಮಲಯ ಹುಲಿಯು ಗಾತ್ರದಲ್ಲಿ ಬಲು ಚಿಕ್ಕದಾಗಿದ್ದು ಭೂಖಂಡದ ತಳಿಗಳ ಪೈಕಿ ಅತಿ ಸಣ್ಣ ತಳಿಯಾಗಿದೆ. ಮಲಯ ಹುಲಿಯು ಮಲೇಷ್ಯಾದ ರಾಷ್ಟ್ರಚಿಹ್ನೆಯಾಗಿದೆ.
  • ಸುಮಾತ್ರಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಸುಮಾತ್ರೇ): ಇದು ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮಾತ್ರ ಜೀವಿಸಿದೆ. ಅತ್ಯಂತ ಅಪಾಯಕ್ಕೊಳಗಾಗಿರುವ ಸುಮಾತ್ರಾ ಹುಲಿಯು ಭೂಮಿಯ ಎಲ್ಲ ಹುಲಿಗಳ ಪೈಕಿ ಅತ್ಯಂತ ಸಣ್ಣಗಾತ್ರವುಳ್ಳದ್ದಾಗಿದೆ. ಗಂಡು ಹುಲಿಯು ೧೦೦ ರಿಂದ ೧೪೦ ಕಿ.ಗ್ರಾಂ ತೂಗಿದರೆ ಹೆಣ್ಣು ಕೇವಲ ೭೫ ರಿಂದ ೧೧೦ ಕಿ.ಗ್ರಾಂ ತೂಕವುಳ್ಳದ್ದಾಗಿದೆ. ಇಂದು ಜಗತ್ತಿನಲ್ಲಿ ಸುಮಾರು ೪೦೦ ರಿಂದ ೫೦೦ ಸುಮಾತ್ರಾ ಹುಲಿಗಳು ಜೀವಿಸಿವೆಯೆಂದು ಅಂದಾಜು ಮಾಡಲಾಗಿದೆ.
  • ಸೈಬೀರಿಯಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಆಲ್ಟೈಕಾ): ಇದಕ್ಕೆ ಮಂಚೂರಿಯನ್ ಹುಲಿ, ಕೊರಿಯನ್ ಹುಲಿ, ಆಮೂರ್ ಹುಲಿ ಮತ್ತು ಉತ್ತರ ಚೀನಾ ಹುಲಿಯೆಂದು ಇತರ ಹೆಸರುಗಳಿವೆ. ಈ ಹುಲಿಗಳ ನೆಲೆಯು ಇಂದು ಸೈಬೀರಿಯಾದ ಆಮೂರ್ ನದಿ ಮತ್ತು ಉಸ್ಸೂರಿ ನದಿಗಳ ನಡುವಣ ಪ್ರದೇಶಕ್ಕೆ ಸೀಮಿತವಾಗಿದೆ. ಭೂಮಿಯ ಮೇಲಿರುವ ಹುಲಿಗಳ ಪೈಕಿ ಸೈಬೀರಿಯಾ ಹುಲಿ ಎಲ್ಲಕ್ಕಿಂತ ದೊಡ್ಡದು. ಅತಿ ಶೀತಲ ವಾತಾವರಣದಲ್ಲಿ ಜೀವಿಸುವ ಕಾರಣದಿಂದಾಗಿ ಈ ಹುಲಿಗಳ ತುಪ್ಪಳ ಬಲು ಮಂದವಾಗಿರುತ್ತದೆ. ಇವುಗಳ ಬಣ್ಣವು ಪೇಲವವಾಗಿದ್ದು ಪಟ್ಟೆಗಳ ಸಂಖ್ಯೆಯು ಕಡಿಮೆಯಿರುತ್ತದೆ. ಈ ತಳಿಯನ್ನು ಇಂದು ಸೈಬೀರಿಯಾದಲ್ಲಿ ಅತಿ ಜಾಣತನದಿಂದ ಕಾಪಾಡಿಕೊಳ್ಳಲಾಗುತ್ತಿದೆ.
  • ದಕ್ಷಿಣ ಚೀನಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಅಮೊಯೆನ್ಸಿಸ್): ಇದಕ್ಕೆ ಅಮೊಯೆನ್ ಅಥವಾ ಕ್ಸಿಯಾಮೆನ್ ಹುಲಿ ಎಂದು ಇತರ ಹೆಸರುಗಳು. ಈ ಹುಲಿಗಳು ಇಂದು ಹೆಚ್ಚೂ ಕಡಿಮೆ ಭೂಮಿಯ ಮೇಲಿನಿಂದ ಮರೆಯಾಗಿವೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಪಾಯಕ್ಕೊಳಗಾಗಿರುವ ೧೦ ಪ್ರಾಣಿಗಳ ಪೈಕಿ ಈ ಹುಲಿ ಸಹ ಒಂದು. ಈಗ ಒಟ್ಟು ೫೯ ದಕ್ಷಿಣ ಚೀನಾ ಹುಲಿಗಳು ಜೀವಿಸಿವೆ. ಇವೆಲ್ಲವೂ ಚೀನಾದಲ್ಲಿ ಮಾನವನ ರಕ್ಷಣೆಯಡಿ ಬಾಳುತ್ತಿವೆ. ಆದರೆ ಈ ಎಲ್ಲ ೫೯ ಹುಲಿಗಳು ಕೇವಲ ೬ ಹಿರಿಯರ ಪೀಳಿಗೆಯವಾಗಿದ್ದು ಒಂದು ಪ್ರಾಣಿಯ ಆರೋಗ್ಯಕರ ವಂಶಾಭಿವೃದ್ಧಿಗೆ ಬೇಕಾದ ವಂಶ ವೈವಿಧ್ಯ ಇಲ್ಲವಾಗಿದೆ. ಆದ್ದರಿಂದ ಈ ತಳಿಯನ್ನು ಉಳಿಸಿಕೊಳ್ಳುವುದು ಬಹುಶಃ ಅಸಾಧ್ಯವೆಂಬ ತೀರ್ಮಾನಕ್ಕೆ ತಜ್ಞರು ಬಂದಿದ್ದಾರೆ.

ಮರೆಯಾದ ಉಪತಳಿಗಳು

[ಬದಲಾಯಿಸಿ]
  1. ಬಾಲಿ ಹುಲಿ: ಇದು ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಮಾತ್ರ ಜೀವಿಸಿತ್ತು. ಕೇವಲ ೯೦ರಿಂದ ೧೦೦ ಕಿ.ಗ್ರಾಂ. ತೂಗುತ್ತಿದ್ದ ಇವು ಹುಲಿಗಳ ಪೈಕಿ ಅತಿ ಸಣ್ಣವಾಗಿದ್ದವು. ಮಾನವನ ಬೇಟೆಯ ಹುಚ್ಚಿಗೆ ಬಲಿಯಾದ ಈ ತಳಿ ಸಂಪೂರ್ಣವಾಗಿ ೧೯೩೭ರಲ್ಲಿ ಭೂಮಿಯಿಂದ ಶಾಶ್ವತವಾಗಿ ಮರೆಯಾಯಿತು. ಆದರೆ ಬಾಲಿ ದ್ವೀಪದ ಹಿಂದೂ ಸಂಸ್ಕೃತಿಯಲ್ಲಿ ಈ ಹುಲಿಗೆ ಇನ್ನೂ ಗೌರವದ ಸ್ಥಾನವಿದೆ.
  2. ಜಾವಾ ಹುಲಿ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಮಾತ್ರ ಜೀವಿಸಿದ್ದ ಈ ಹುಲಿ ೧೯೮೦ರ ದಶಕದಲ್ಲಿ ಪೂರ್ಣವಾಗಿ ಮರೆಯಾಯಿತೆಂದು ನಂಬಲಾಗಿದೆ. ಬಾಲಿ ಹುಲಿಯಂತೆ ಜಾವಾ ಹುಲಿಯನ್ನು ಸಹ ಮಾನವನು ಭೂಮಿಯ ಮೇಲಿನಿಂದ ಅಳಿಸಿಹಾಕಿದನು.

ಮಿಶ್ರತಳಿಗಳು

[ಬದಲಾಯಿಸಿ]
  • ಮಾನವನು ಹಣ ಮಾಡಿಕೊಳ್ಳಲು ಹಲವು ವಿಚಿತ್ರಗಳನ್ನು ಸೃಷ್ಟಿಸಿದನು. ಇವುಗಳಲ್ಲಿ ದೊಡ್ಡ ಬೆಕ್ಕುಗಳ ಮಿಶ್ರತಳಿಗಳು ಸಹ ಸೇರಿವೆ. ಮೃಗಾಲಯಗಳಲ್ಲಿ ಇಂದು ಸಹ ಹುಲಿ ಮತ್ತು ಸಿಂಹಗಳ ಸಂಯೋಗದಿಂದ ಮಿಶ್ರತಳಿಗಳ ಜೀವಿಗಳನ್ನು ಪಡೆಯಲಾಗುತ್ತಿದೆ. ಆದರೆ ಇವು ಹುಲಿಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂಯೋಗದಿಂದ ಜನಿಸುವ ಜೀವಿಗೆ ಲೈಗರ್ ಎಂದು ಹೆಸರಿಸಲಾಗಿದೆ.
  • ಅದೇ ರೀತಿ ಹೆಣ್ಣು ಸಿಂಹ ಮತ್ತು ಗಂಡು ಹುಲಿಗಳ ಸಂಯೋಗದಿಂದ ಟೈಗಾನ್ ಎಂಬ ಮಿಶ್ರತಳಿಯ ಜೀವಿಯನ್ನು ಪಡೆಯಲಾಗುತ್ತಿದೆ. ಆದರೆ ಈ ವಿಚಿತ್ರ ಜೀವಿಗಳು ಬೆಕ್ಕು ಎಂಬ ಮೂಲ ಗುಣವನ್ನು ಹೊರತುಪಡಿಸಿದರೆ ಅತ್ತ ಹುಲಿಯೂ ಅಲ್ಲ ಇತ್ತ ಸಿಂಹವೂ ಅಲ್ಲ ಎಂಬಂತಹ ಜೀವಿಗಳಾಗಿವೆ.

ವರ್ಣ ವೈವಿಧ್ಯ

[ಬದಲಾಯಿಸಿ]

ಬಿಳಿ ಹುಲಿಗಳು

[ಬದಲಾಯಿಸಿ]
ಬಿಳಿ ಹುಲಿಗಳ ಜೋಡಿ
ಅಪರೂಪದ ಚಿನ್ನದ ಬಣ್ಣದ ಹುಲಿ
  • ವಾಸ್ತವವಾಗಿ ಬಿಳಿ ಹುಲಿಯು ಹುಲಿಗಳ ತಳಿಗಳಲ್ಲಿ ಒಂದಲ್ಲ. ಮಾನವರಲ್ಲಿ ಕೆಲವೊಮ್ಮೆ ಉಂಟಾಗುವ ವರ್ಣರಾಹಿತ್ಯವು ಹುಲಿಗಳಲ್ಲಿ ಸಹ ಉಂಟಾದಾಗ ಅಂತಹ ಹುಲಿಯು ಬಿಳಿಯದಾಗಿ ಕಾಣುತ್ತದೆ. ಇಂತಹ ಹುಲಿಗಳ ರೂಪವು ಮಾನವನಿಗೆ ಆಕರ್ಷಕವಾಗಿ ಕಂಡಿದ್ದು ಹೆಚ್ಚು ಹೆಚ್ಚು ಬಿಳಿ ಹುಲಿಗಳನ್ನು ಇಂದು ಮೃಗಾಲಯಗಳಲ್ಲಿ ಹುಟ್ಟಿಸಲಾಗುತ್ತಿದೆ. ಬಿಳಿ ಹುಲಿಗಳನ್ನು ಪಡೆಯುವ ಮುಖ್ಯ ವಿಧಾನವೆಂದರೆ ಒಳಸಂತಾನ. ಅತಿ ಸಮೀಪದ ಬಂಧುಗಳಾಗಿರುವ ಹುಲಿಗಳ ಸಂಯೋಗದಿಂದ ಇಂತಹ ವಾಸ್ತವವಾಗಿ ವಿಕೃತ ಜೀವಿಗಳನ್ನು ಪಡೆಯಲಾಗುತ್ತಿದೆ.
  • ಒಳಸಂತಾನದ ಮುಖ್ಯ ಪರಿಣಾಮವಾದ ಅಂಗವೈಕಲ್ಯವು ಬಿಳಿಹುಲಿಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ.[೧೩] ಅಲ್ಲದೆ ಇಂಥ ಹುಲಿಗಳು ಸಾಮಾನ್ಯವಾಗಿ ಅಲ್ಪಾಯುಗಳಾಗಿವೆ. ಮೈಬಣ್ಣದ ಹೊರತಾಗಿ ಬಿಳಿ ಹುಲಿಗಳು ನೀಲಿ ಕಣ್ಣುಗಳನ್ನು ಹೊಂದಿದ್ದು ಮೂಗು ಗುಲಾಬಿ ಬಣ್ಣದ್ದಾಗಿರುತ್ತದೆ. ಸಾಮಾನ್ಯ ಹುಲಿಗೂ ಬಿಳಿ ಹುಲಿಗೂ ಇರುವ ಮೂರು ಮುಖ್ಯ ವ್ಯತ್ಯಾಸಗಳು ಇವು. ಬಿಳಿ ಹುಲಿಯು ಬಂಗಾಳ ಹುಲಿಯ ಒಂದು ವಿಕೃತ ರೂಪ.

ಚಿನ್ನದ ಬಣ್ಣದ ಹುಲಿ

[ಬದಲಾಯಿಸಿ]

ಬಂಗಾಳ ಹುಲಿಗಳ ಒಂದು ಉಪಗುಂಪಾದ ಇವು ಹೊಳೆಯುವ ಚಿನ್ನದ ಮೈಬಣ್ಣವನ್ನು ಹೊಂದಿರುತ್ತವೆ. ಇವುಗಳ ಪಟ್ಟೆಯು ತಿಳಿ ಕಿತ್ತಳೆ ಬಣ್ಣದ್ದಾಗಿದ್ದು ತುಪ್ಪಳವು ಹೆಚ್ಚು ದಪ್ಪವಾಗಿರುತ್ತದೆ. ಇಂದು ಸುಮಾರು ೩೦ ಇಂತಹ ಹುಲಿಗಳು ಜೀವಿಸಿವೆ. ಇದಲ್ಲದೆ ನೀಲಿ ಬಣ್ಣದ ಹುಲಿ, ಕಪ್ಪು ಹುಲಿಗಳನ್ನು ಕಾಣಲಾಗಿರುವ ವದಂತಿಗಳಿವೆ. ಆದರೆ ಇವು ನಿಜವೇ ಆಗಿದ್ದಲ್ಲಿ ಇಂತಹ ಹುಲಿಗಳು ಸಾಮಾನ್ಯ ಹುಲಿಯ ವಂಶವಾಹಿಗಳ ವೈಪರೀತ್ಯದಿಂದ ಜನಿಸಿದ ಪ್ರಾಣಿಗಳಾಗಿದ್ದು ಸ್ವತಃ ಬೇರೆ ಉಪತಳಿಗಳಲ್ಲವೆಂದು ಅಭಿಪ್ರಾಯಪಡಲಾಗಿದೆ.

ನಡವಳಿಕೆ

[ಬದಲಾಯಿಸಿ]
ಹುಲಿ ಸಾಮಾನ್ಯವಾಗಿ ಒಂಟಿಜೀವಿ

ಹುಲಿಯ ಸರಹದ್ದು

[ಬದಲಾಯಿಸಿ]
  • ಹುಲಿಗಳು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ ನಿಗದಿಮಾಡಿಕೊಂಡು ಅದರೊಳಗೆ ಜೀವಿಸುವ ಒಂದು ಒಂಟಿಜೀವಿ. ಹುಲಿಯ ಸರಹದ್ದಿನ ವ್ಯಾಪ್ತಿ ಆ ಪ್ರದೇಶದಲ್ಲಿ ದೊರೆಯುವ ಬೇಟೆ ಮತ್ತು ಗಂಡು ಹುಲಿಗಾದರೆ ಆ ಸುತ್ತಲಿನ ಪರಿಸರದಲ್ಲಿ ಇರಬಹುದಾದ ಹೆಣ್ಣು ಸಂಗಾತಿಗಳ ಮೇಲೆ ನಿರ್ಧಾರಿತವಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ಹುಲಿಯ ಪ್ರಾಂತ್ಯ ೨೦ ಚ. ಕಿ.ಮೀ. ಇದ್ದರೆ ಒಂದು ಗಂಡು ಹುಲಿಯ ಪ್ರಾಂತ್ಯ ೬೦ ರಿಂದ ೧೦೦ ಚ.ಕಿ.ಮೀ. ವಿಸ್ತಾರವಾಗಿರುವುದು. ಒಂದು ಗಂಡು ಹುಲಿಯ ಪ್ರಾಂತ್ಯವು ಹಲವು ಹೆಣ್ಣು ಹುಲಿಗಳ ಸರಹದ್ದನ್ನು ಸಹ ಒಳಗೊಂಡಿರುತ್ತದೆ.
  • ಇತರ ಎಲ್ಲ ಪ್ರಾಣಿಗಳಂತೆ ಹುಲಿಗಳೂ ಪರಸ್ಪರ ಸಂಪರ್ಕಿಸುತ್ತವೆ-ಕೂಡುವುದಕ್ಕೆ, ಆಹಾರವನ್ನು ಹಂಚಿಕೊಳ್ಳುವುದಕ್ಕೆ ಅಥವಾ ಇರುವ ಸಂಪನ್ಮೂಲದ ಮೇಲೆ ಪ್ರಭುತ್ವ ಸ್ಥಾಪಿಸುವುದಕ್ಕೆ. ಕೆಲವೊಮ್ಮೆ ಅವು ಪರಸ್ಪರ ಘರ್ಷಣೆಯನ್ನು ನಿವಾರಿಸಲು ತಪ್ಪಿಸಿಕೊಂಡು ಹೋಗಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಹುಲಿಗಳು ಪರಸ್ಪರ ಆಕರ್ಷಿಸುವುದಕ್ಕೂ ಘರ್ಷಣೆಯನ್ನು ತಪ್ಪಿಸುವುದಕ್ಕೂ ಗರ್ಜನೆ ಮತ್ತಿತ್ತರ ಧ್ವನಿಸಂಕೇತಗಳನ್ನು ಬಳಸುತ್ತವೆ. ನೆಲವನ್ನು ಕೆರೆಯುವುದೂ, ಕಾಣುವಂಥ ಜಾಗದಲ್ಲಿ ಮಲವಿಸರ್ಜನೆ ಮಾಡುವುದೂ ಪರಸ್ಪರ ಸಂಪರ್ಕಕ್ಕೆ ಸಹಕಾರಿ.
  • ಒಂದು ಕಾಡಿನಲ್ಲಿರುವ ಹುಲಿಗಳಲ್ಲಿ ಗಂಡು, ಹೆಣ್ಣುಗಳೂ ವಿಭಿನ್ನ ವಯೋಮಾನದವುಗಳೂ ಕಂಡು ಬರುತ್ತವೆ. ನಿವಾಸಿ ಅಥವಾ ವಾಸಕ್ಷೇತ್ರ (ಹೋಮ್‌ರೇಂಜ್) ಹೊಂದಿರುವ ಮತ್ತು ಸಂತಾನ ಷೋಷಣೆಗೆ ಶಕ್ತವಾದ ಹೆಣ್ಣುಹುಲಿಗಳು ಈ ಸಾಮಾಜಿಕ ವ್ಯವಸ್ಥೆಯ ಮುಖ್ಯಭಾಗವಾಗಿವೆ. ಹೆಚ್ಚು ಆಹಾರ ಪ್ರಾಣಿಗಳ ಸಾಂದ್ರತೆಯಿರುವಂಥ ನಿರ್ದಿಷ್ಟ ನಿವಾಸನೆಲೆಯ ಮೇಲೆ ಒಡೆತನ ಸಾಧಿಸಿರುವ ಹೆಣ್ಣುಹುಲಿ ಆ ಪ್ರದೇಶದಲ್ಲಿ ಸಂತಾನವನ್ನು ಬೆಳೆಸುವ ಏಕಮೇವ ಹಕ್ಕುದಾರ್ತಿಯೂ ಆಗಿರುತ್ತಾಳೆ. ಈ ಹೆಣ್ಣನ್ನು ಕೂಡುವ ದೊಡ್ಡ ಗಂಡುಹುಲಿ ಇಂಥ ಎರಡು ಮೂರು ಹೆಣ್ಣುಗಳ ನಿವಾಸವಲಯಗಳನ್ನೊಳಗೊಂಡ ವಿಶಾಲ ನೆಲೆಯ ಯಜಮಾನಿಕೆಯನ್ನು ವಹಿಸಿಕೊಂಡಿರುತ್ತದೆ. ಇನ್ನು ನಿವಾಸನೆಲೆಯೇನೂ ಇಲ್ಲದ ಅಲೆಮಾರಿ ಹುಲಿಗಳು. ಈ ದೇಶಾಂತರಿಗಳು ಗಂಡಾಗಿರಲಿ, ಹೆಣ್ಣಾಗಿರಲಿ ಸಂತಾನವನ್ನು ಬೆಳೆಸಲಾರವು. ಒಂದೂವರೆ ಎರಡು ವರ್ಷ ವಯಸ್ಸಾಗುತ್ತಿದ್ದಂತೆ ತನ್ನ ತಾಯಿಯಿಂದ ಬೇರ್ಪಡುವ ಹುಲಿ ತಾನು ಹುಟ್ಟಿ ಬೆಳೆದ ನೆಲೆಯೊಳಗೂ ಸುತ್ತಮುತ್ತಲ ಪ್ರದೇಶಗಳಲ್ಲೂ ಆಚೆ ಈಚೆ ತಿರುಗಾಡುತ್ತಿರುತ್ತದೆ. ತನ್ನದೇ ಆದ ನಿವಾಸವಲಯವನ್ನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತದೆ. ಇಂಥ ಅಲೆಮಾರಿಗಳು ವಯಸ್ಸಿಗೆ ಬಂದು ಸಶಕ್ತವಾಗಿ ಬೆಳೆಯುತ್ತಿದ್ದ ಹಾಗೆ, ನಿವಾಸವಲಯಗಳಲ್ಲಿ ತಳವೂರಿರುವ ಹಳೇಹುಲಿಗಳೊಡನೆ ಸ್ಪರ್ಧೆಗೆ ಇಳಿಯುತ್ತವೆ. ಕೆಲವೂಮ್ಮೆ ಅವನ್ನು ಕೊಂದು ಅವುಗಳ ನಿವಾಸದ ಅಧಿಪತ್ಯವನ್ನು ತಾವೇ ವಹಿಸಿಕೊಳ್ಳುತ್ತವೆ. ಆದರೆ, ಈ ಸ್ಥಿತ್ಯಂತರದಲ್ಲಿ ಅನೇಕ ಅಲೆಮಾರಿ ಹುಲಿಗಳು ಸಾವನ್ನಪ್ಪುತ್ತವೆ.
  • ಹುಲಿಗಳ ನಡುವಣ ಸಂಬಂಧವು ಸಾಕಷ್ಟು ಸಂಕೀರ್ಣವಾಗಿರುತ್ತದೆ. ತನ್ನ ಪ್ರಾಂತ್ಯದ ಮೇಲಿನ ಅಧಿಕಾರ ಸಾಧಿಸುವುದರಲ್ಲಾಗಲೀ ಅಥವಾ ಅತಿಕ್ರಮಣವುಂಟಾದಾಗ ಪ್ರತಿಕ್ರಿಯೆ ನೀಡುವಲ್ಲಾಗಲೀ ಒಂದೇ ನಿರ್ದಿಷ್ಟ ನಿಯಮ ಮತ್ತು ನಡಾವಳಿಗಳು ಹುಲಿಗಳಲ್ಲಿ ಕಾಣವು. ಸಾಮಾನ್ಯವಾಗಿ ಪರಸ್ಪರರಿಂದ ದೂರವಿದ್ದರೂ ಸಹ ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಹುಲಿಗಳು ಬೇಟೆಯನ್ನು ಹಂಚಿಕೊಂಡು ಉಣ್ಣುವುದನ್ನು ಕಾಣಲಾಗಿದೆ. ಹೆಣ್ಣು ಹುಲಿಯು ಗಂಡು ಹುಲಿಯನ್ನು ತನ್ನ ಮರಿಗಳ ಬಳಿ ಸುಳಿಯಗೊಡುವುದಿಲ್ಲ.
ಹುಲಿಯ ದವಡೆಗಳು ಬಲಯುತವಾಗಿದ್ದು ಹಲ್ಲುಗಳು ಬಲು ತೀಕ್ಷ್ಣವಾಗಿರುತ್ತವೆ.
ಹುಲಿಯು ತನ್ನ ಎತ್ತರದ ಎರಡರಷ್ಟು ಮೇಲಕ್ಕೆ ಜಿಗಿಯಬಲ್ಲುದು.
  • ಹುಲಿಯ ಹೆಣ್ಣು ಮರಿಗಳು ಪ್ರೌಢಾವಸ್ಥೆಯನ್ನು ತಲುಪಿ ತನ್ನದೇ ಆದ ನೆಲೆಯನ್ನು ಸ್ಥಾಪಿಸುವಾಗ ಮೊದಲು ತಮ್ಮ ತಾಯಿಯ ವಾಸಸ್ಥಳದ ಆಸುಪಾಸಿನಲ್ಲಿಯೇ ಜಾಗ ಹುಡುಕುತ್ತವೆ. ಗಂಡು ಮರಿಯು ಪ್ರಾರಂಭದಲ್ಲಿಯೇ ತನ್ನ ತಾಯಿಯಿಂದ ಮತ್ತು ಸೋದರಿಯರಿಂದ ದೂರ ಸಾಗಿ ತನ್ನ ಪ್ರತ್ಯೇಕ ನೆಲೆಯನ್ನು ಗುರುತಿಸಿಕೊಳ್ಳುವುದು.
  • ಮೊದಮೊದಲು ಗಂಡು ಮರಿಯು ಹುಲಿರಹಿತ ಪ್ರದೇಶದಲ್ಲಿ ಅಥವಾ ಇನ್ನೊಂದು ದೊಡ್ಡ ಗಂಡು ಹುಲಿಯ ಪ್ರಾಂತ್ಯದ ಒಂದು ಭಾಗದಲ್ಲಿ ನವಜೀವನ ಆರಂಭಿಸಿ ಬಲಿತು ಬಲಶಾಲಿಯಾಗುತ್ತಿದ್ದಂತೆ ಕ್ರಮೇಣ ಅಲ್ಲಿನ ಮೂಲ ಗಂಡು ಹುಲಿಗೆ ಸವಾಲೆಸೆಯುತ್ತದೆ. ಆ ಸಂದರ್ಭದಲ್ಲಿ ಭೀಕರ ಕಾಳಗ ನಡೆದು ಕಡಿಮೆ ಬಲವುಳ್ಳ ಹುಲಿ ಒಂದೋ ಮರಣಿಸುತ್ತದೆ ಇಲ್ಲವೇ ಪ್ರಾಂತ್ಯ ತೊರೆದು ದೂರ ಪಲಾಯನ ಮಾಡುವುದು. ಕಾಡಿನ ಹುಲಿಗಳಲ್ಲಿ ಯುವ ಗಂಡು ಹುಲಿಗಳ ಸಾವಿಗೆ ಇದು ಬಲು ದೊಡ್ಡ ಕಾರಣವಾಗಿದೆ.
  • ಗಂಡು ಹುಲಿಗಳಲ್ಲಿ ಪರಸ್ಪರರ ಬಗ್ಗೆ ಅಸಹನೆ ಹೆಣ್ಣುಗಳಲ್ಲಿಗಿಂತ ಅಧಿಕ. ಸರಹದ್ದುಗಳ ವ್ಯಾಪ್ತಿಯ ಬಗ್ಗೆ ವಿವಾದವುಂಟಾದಾಗ ಮುಖಾಮುಖಿ ಸಹಜವಾಗಿಯೇ ಏರ್ಪಡುವುದು. ಆದರೆ ಈ ಸನ್ನಿವೇಶದಲ್ಲಿ ಘೋರ ಕಾಳಗವು ಬಲು ಅಪರೂಪ. ತಮ್ಮ ತಮ್ಮ ಶಕ್ತಿ ತೋರಿಸುತ್ತ ಎದುರಾಳಿಯನ್ನು ಹೆದರಿಸುವ ಯತ್ನಗಳು ಹೆಚ್ಚಾಗಿರುತ್ತವೆ. ಸೋಲೊಪ್ಪುವ ಹುಲಿಯು ತನ್ನ ಬೆನ್ನ ಮೇಲೆ ಉರುಳಿ ಹೊಟ್ಟೆಯ ಕೆಳಭಾಗವನ್ನು ಎದುರಾಳಿಗೆ ತೋರಿಸುವುದು ಶರಣಾಗತಿಯ ಸೂಚನೆ.[೧೪]
  • ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ವಿಜೇತ ಹುಲಿಯು ಸೋತವನನ್ನು ತನ್ನ ಪ್ರಾಂತ್ಯದಲ್ಲಿಯೇ ಉಳಿಯಗೊಡುವುದು ಸಹ ಇದೆ. ಗಂಡು ಹುಲಿಗಳ ನಡುವೆ ಬಲು ತೀವ್ರ ವಿವಾದ ಒಂದು ಹೆಣ್ಣಿನ ಬಗ್ಗೆ ಸಂಭವಿಸುವುದು. ಇಂತಹ ಸಂದರ್ಭಗಳಲ್ಲಿ ನಡೆಯುವ ಕದನ ಒಮ್ಮೊಮ್ಮೆ ಒಂದು ಹುಲಿಯ ಸಾವಿನೊಂದಿಗೆ ಮುಗಿಯುವುದು.[೧೫] ಹುಲಿಗಳು ತಮ್ಮ ಸರಹದ್ದನ್ನು ಮರಗಳನ್ನು ಮೂತ್ರದಿಂದ ಗುರುತುಮಾಡುವುದರ ಮೂಲಕ ನಿಗದಿಮಾಡಿಕೊಳ್ಳುತ್ತವೆ.[೧೬][೧೭] ಜೊತೆಗೆ ಸೀಮೆಯ ಗಡಿಯುದ್ದಕ್ಕೂ ಮಲದಿಂದ ಗುರುತಿನ ಚಿಹ್ನೆಗಳನ್ನು ಹಾಕಿರುತ್ತವೆ.

ಬೇಟೆ ಮತ್ತು ಆಹಾರ

[ಬದಲಾಯಿಸಿ]
ತನ್ನ ಮರಿಯೊಂದಿಗೆ ಸೈಬೀರಿಯಾ ಹುಲಿ.
ಈಜುತ್ತಿರುವ ಒಂದು ಹುಲಿ
  • ಒಂದು ಗಂಡು ಹುಲಿಗೆ ವರ್ಷವೊಂದಕ್ಕೆ 2200 ರಿಂದ 2500 ಕೆ. ಜಿ. ಗಳಷ್ಟು ಮಾಂಸದ ಅವಶ್ಯಕತೆಯಿದ್ದು ಹೆಣ್ಣು ಹುಲಿಗಾಗಲೀ ಚಿಕ್ಕಪ್ರಾಯದ ಹುಲಿಗಾಗಲೀ 1850 ರಿಂದ 2300 ಕೆ.ಜಿ. ಗಳಷ್ಟು ಮಾಂಸ ಬೇಕಾಗುತ್ತದೆ. ವ್ಯರ್ಥವಾಗುವ ಆಹಾರ ಮತ್ತು ತಿನ್ನಲಾಗದ ಅಂಗಗಳ ಲೆಕ್ಕಾಚಾರವನ್ನು ಸೇರಿಸಿದರೆ, ಸರಾಸರಿ ಪ್ರಾಯದ ಹುಲಿಯೊಂದಕ್ಕೆ ವಾರ್ಷಿಕವಾಗಿ 3000 ದಿಂದ 3200 ಕಿಲೋಗ್ರಾಮುಗಳಷ್ಟು ತೂಕದ ಜೀವಂತ ಬೇಟೆಯ ಪ್ರಾಣಿಗಳ ಅವಶ್ಯಕತೆಯಿರುವುದು. ಇಷ್ಟು ಪೌಷ್ಟಿಕ ಅವಶ್ಯಕತೆಯನ್ನು ಪಡೆದುಕೊಳ್ಳಲು ಹುಲಿಯೊಂದು ಪ್ರತಿವರ್ಷದಲ್ಲಿ 40 ರಿಂದ 50 ಬೇಟೆಯ ಪ್ರಾಣಿಗಳನ್ನು ಕೊಲ್ಲಬೇಕಾಗುತ್ತದೆ. ಅಂತೆಯೇ ಮೂರು ಮರಿಗಳನ್ನು ಪೋಷಿಸುವ ಹೊಣೆಹೊತ್ತ ತಾಯಿಹುಲಿ 60 ರಿಂದ 70 ಪ್ರಾಣಿಗಳನ್ನು ಬೇಟೆಯಾಡಬೇಕಾಗುತ್ತದೆ. ಹುಲಿಗಳನ್ನು (ಮತ್ತು ಇತರ ಮಾರ್ಜಾಲಗಳನ್ನು) ಕುರಿತ ಸಂಶೋಧನೆಗಳಿಂದ ತಿಳಿದುಬರುವಂತೆ, ಅವು ತಮ್ಮ ನೆಲೆಯಲ್ಲಿರುವ ಒಟ್ಟು ಬೇಟೆಯ ಪ್ರಾಣಿಗಳ ಶೇ.8ರಿಂದ 10ರಷ್ಟನ್ನು ಮಾತ್ರ ಆಹಾರವಾಗಿ ಬಳಸಿಕೊಳ್ಳುವುದು ಸಾಧ್ಯ. ಈ ಬಗೆಯ ಬೇಟೆಗಾರ - ಬೇಟೆಯ ಆಹಾರ ಪ್ರಾಣಿಗಳ ಅನುಪಾತಕ್ಕೆ ಸಂಬಂಧಿಸಿದ ಇನ್ನಿತರ ಅಂಶಗಳೆಂದರೆ, ಗೊರಸಿನ ಪ್ರಾಣಿಗಳ ಸಂತತಿಯ ಬೆಳವಣಿಗೆ, ಇತರೆ ಕಾರಣಗಳಿಂದಾದ ಮರಣ ಪ್ರಮಾಣ ದರಗಳು, ಮತ್ತು ಹುಲಿಗಳೇ ತಮ್ಮ ಸಂಖ್ಯಾವೃದ್ಧಿಯ ನಡುವೆ ಬದುಕಲು ನಡೆಸಬೇಕಾದ ಹೋರಾಟ. ದೊಡ್ಡ ಮಾರ್ಜಾಲಗಳ ಬೇಟೆಗಾರಿಕೆ ಆಹಾರಪ್ರಾಣಿಗಳ ಶೇ. 10ರ ಲಕ್ಷ್ಮಣ ರೇಖೆಯನ್ನು ದಾಟಲಾರದು ಎನ್ನುವುದಾದರೆ, ಪ್ರತಿ ಒಂದು ಹುಲಿಗೆ ಸುಮಾರು 500 ಗೊರಸಿನ ಪ್ರಾಣಿಗಳು ವಾಸವಾಗಿರುವ ನೆಲೆಯ ಅಗತ್ಯವಿದೆಯೆಂದಾಯಿತು.
  • ಒಂದು ಹುಲಿ ಸರಾಸರಿ 7-8 ದಿನಗಳಿಗೊಮ್ಮೆ ಬೇಟೆಯಾಡುತ್ತದೆ. ಆದರೆ, ಮರಿಗಳಿರುವ ಹುಲಿ ತನ್ನ ಕುಟುಂಬವನ್ನು ಪೋಷಿಸಲು ಇನ್ನೂ ಹೆಚ್ಚು ಬಾರಿ ಬೇಟೆಯಾಡುವುದು ಅನಿವಾರ್ಯ. ಬೇಟೆಯನ್ನು ಬಲಿತೆಗೆದುಕೊಂಡ ಕೂಡಲೇ ಹುಲಿ ಆ ಪ್ರಾಣಿಯನ್ನು ಸಮೀಪದ ಆವರಣದೊಳಕ್ಕೆ ಎಳೆದೊಯ್ದು ಹದ್ದುಗಳಿಂದಲೂ ಇತರ ಹೊಂಚುಗಾರರಿಂದಲೂ ಅಡಗಿಸಿಡುತ್ತದೆ. ಸಾಮಾನ್ಯವಾಗಿ ಹುಲಿ ಪ್ರಾಣಿಯ ಹಿಂಭಾಗದಿಂದ ತಿನ್ನಲು ಪ್ರಾರಂಭಿಸುತ್ತದೆ. ತಾನು ತಿನ್ನುವ ಮಾಂಸದ ಭಾಗಗಳೊಡನೆ ಜಠರ ಮತ್ತು ಕರುಳಿನ ಭಾಗಗಳು ಬೆರೆಯದಂತೆ ಎಚ್ಚರವಹಿಸುತ್ತದೆ. ತನ್ನ ನೆಮ್ಮದಿಗೆ ಭಂಗಬಾರದಿದ್ದರೆ ಹುಲಿ ತನ್ನ ಬೇಟೆಯೊಡನೆ 3-4 ದಿನಗಳವರೆಗೆ ಉಳಿದು 50 ರಿಂದ 80 ಕಿಲೋಗ್ರಾಮುಗಳಷ್ಟು ಮಾಂಸವನ್ನು ಸೇವಿಸುತ್ತದೆ. ನಾಗರಹೊಳೆಯ ಹುಲಿಗಳು ತಮ್ಮ ಬೇಟೆಯ ಶೇ. 65ರಷ್ಟು ಭಾಗವನ್ನು ಸೇವಿಸುತ್ತವೆಯಾದರೂ ದೊಡ್ಡ ಕಾಟಿಗಳನ್ನು ಕೊಂದ ಸಂದರ್ಭಗಳಲ್ಲಿ ಆಹಾರ ಸೇವನೆಯ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿ ಇರುತ್ತದೆ.
  • ಕಾಡಿನ ಹುಲಿಗಳು ಸಾಮಾನ್ಯವಾಗಿ ದೊಡ್ಡ ಮತ್ತು ಮಧ್ಯಮ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಿ ಆಹಾರ ಪಡೆಯುತ್ತವೆ. ಭಾರತದಲ್ಲಿ ಹುಲಿಗಳಿಗೆ ಸಾಂಬಾರ ಜಿಂಕೆ, ಕಾಡುಕೋಣ, ಚೀತಾಲ್ ಜಿಂಕೆ, ಕಾಡುಹಂದಿ ಮತ್ತು ನೀಲಗಾಯ್ ಮುಖ್ಯ ಆಹಾರ. ಅಪರೂಪವಾಗಿ ಹುಲಿಗಳು ಚಿರತೆ, ಕರಡಿ, ಹೆಬ್ಬಾವು ಮತ್ತು ಮೊಸಳೆಗಳನ್ನು ಸಹ ಬೇಟೆಯಾಡುವುದಿದೆ.[೧೮]
  • ಸೈಬೀರಿಯಾದ ಹುಲಿಗಳ ಮುಖ್ಯ ಆಹಾರ ಎಲ್ಕ್, ಮತ್ತು ಜಿಂಕೆಗಳು. ಆದರೆ ಹುಲಿಗಳು ಸನ್ನಿವೇಶದೊಂದಿಗೆ ಉತ್ತಮ ರಾಜಿ ಮಾಡಿಕೊಳ್ಳುವ ಸ್ವಭಾವವುಳ್ಳವಾಗಿದ್ದು ಸಮಯಕ್ಕೆ ತಕ್ಕಂತೆ ಕೋತಿ, ನವಿಲು, ಮೊಲ ಮತ್ತು ಮೀನುಗಳನ್ನು ಸಹ ಆಹಾರವಾಗಿ ಬಳಸುತ್ತವೆ. ಆನೆಗಳು ಹುಲಿಗಳಿಗೆ ಮೀರಿದ ಪ್ರಾಣಿಗಳಾದ್ದರಿಂದ ಹುಲಿ ಸಾಮಾನ್ಯವಾಗಿ ಹುಲಿ ಆನೆಯ ಗೊಡವೆಗೆ ಹೋಗುವುದಿಲ್ಲ. ಆದರೆ ಒಮ್ಮೊಮ್ಮೆ ಆನೆಮರಿಗಳು ಮತ್ತು ಘೇಂಡಾ ಮರಿಗಳನ್ನು ಹುಲಿ ಬೇಟೆಯಾಡುವುದಿದೆ.[೧೯][೨೦][೨೧]

ಮುದಿಹುಲಿಗಳು ಮತ್ತು ತೀವ್ರ ಗಾಯಗೊಂಡು ಬೇಟೆಯಾಡಲು ಅಸಮರ್ಥವಾದ ಹುಲಿಗಳು ನರಭಕ್ಷಕವಾಗುತ್ತವೆ. ಭಾರತದಲ್ಲಿ ಈ ಸನ್ನಿವೇಶ ಸಾಮಾನ್ಯ.

  • ಸುಂದರಬನದಲ್ಲಿ ಬೆಸ್ತರು ಮತ್ತು ಇತರ ವಾಸಿಗಳು ಹುಲಿಗಳಿಗೆ ತುತ್ತಾಗುವುದು ಆಗಾಗ ಘಟಿಸುತ್ತದೆ. ಶರೀರಕ್ಕೆ ಬೇಕಾದ ನಾರನ್ನು ಪಡೆಯಲು ಹುಲಿಗಳು ಒಮ್ಮೊಮ್ಮೆ ಸಸ್ಯಾಹಾರಿಗಳಾಗುವುದು ಸಹ ಇದೆ. ಹುಲಿಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತು ಬೇಟೆಯಾಡುತ್ತವೆ.[೨೨] ಒಂಟಿಯಾಗಿ ಬೇಟೆಯಾಡುವ ಹುಲಿ ತನ್ನ ಬೇಟೆಯನ್ನು ಕೆಳಗೆ ಕೆಡವುದರ ಮೂಲಕ ವಶಕ್ಕೆ ತೆಗೆದುಕೊಳ್ಳುತ್ತದೆ. ತನ್ನ ಭಾರೀ ದೇಹತೂಕದ ಹೊರತಾಗಿಯೂ ಹುಲಿಯು ಗಂಟೆಗೆ ೫೦ ರಿಂದ ೬೫ ಕಿ.ಮೀ. ವರೆಗಿನ ಓಟದ ವೇಗವನ್ನು ತಲುಪಬಲ್ಲುದು.
  • ಆದರೆ ಇಂತಹ ಓಟವು ಬಲು ಕಡಿಮೆ ದೂರದ್ದಾಗಿರುವುದು. ಹುಲಿಯು ದೊಡ್ಡ ಜಿಗಿತಕ್ಕೆ ಹೆಸರಾಗಿದೆ. ಹಲವು ಬಾರಿ ಹುಲಿ ೧೦ ಮೀ. ದೂರಕ್ಕೆ ಸಹ ಜಿಗಿಯಬಲ್ಲುದು. ಹುಲಿಯು ನಡೆಸುವ ಪ್ರತಿ ೨೦ ಬೇಟೆಯಾಡುವಿಕೆಯಲ್ಲಿ ಒಂದು ಮಾತ್ರ ಯಶ ನೀಡುವುದೆಂದು ಅಂದಾಜು ಮಾಡಲಾಗಿದೆ.[೨೩] ದೊಡ್ಡ ಗಾತ್ರದ ಪ್ರಾಣಿಯನ್ನು ಬೇಟೆಯಾಡುವಾಗ ಹುಲಿಯು ತನ್ನ ಮುಂಗಾಲುಗಳಿಂದ ಬೇಟೆಯನ್ನು ಹಿಡಿದು ಅದರ ಕೊರಳನ್ನು ಕಚ್ಚಿ ಹಿಡಿಯುತ್ತದೆ.
  • ಬಲಿಯು ಉಸಿರುಗಟ್ಟಿ ಪ್ರಾಣ ನೀಗುವವರೆಗೆ ಹುಲಿಯು ಅದರ ಕೊರಳನ್ನು ಕಚ್ಚಿಕೊಂಡೇ ಇರುತ್ತದೆ.[೨೪] ಈ ವಿಧಾನದಿಂದಾಗಿ ಹುಲಿಯು ತನಗಿಂತ ಗಣನೀಯವಾಗಿ ದೊಡ್ಡವಾದ ಪ್ರಾಣಿಗಳನ್ನು ಸಹ ಸಾಯಿಸಬಲ್ಲುದು. ಸಣ್ಣ ಪ್ರಾಣಿಗಳನ್ನು ಬೇಟೆಯಾಡುವಾಗ ಹುಲಿಯು ಬಲಿಯ ಬೆನ್ನುಹುರಿ, ಶ್ವಾಸನಾಳ ಮತ್ತು ಮುಖ್ಯ ರಕ್ತನಾಳಗಳನ್ನು ಛೇದಿಸುವ ಮೂಲಕ ಕೊಲ್ಲುವುದು.[೨೫]
  • ಹುಲಿಗಳು ಹಗಲು ವೇಳೆಯಲ್ಲಿ ಬೇಟೆಯಾಡಬಲ್ಲವಾದರೂ ಅವು ನಡುಹಗಲಿನಲ್ಲಿ ತೀರ ನಿಷ್ಕ್ರಿಯವಾಗಿದ್ದು ಇಳಿಸಂಜೆಯಿಂದ ಬೆಳಗಿನಜಾವದವರೆಗೆ ಬಹು ಚಟುವಟಿಕೆಯಿಂದಿರುತ್ತವೆ. ಹುಲಿಗಳು ಪ್ರಾಣಿಗಳ ನಡಿಗೆಯ ಜಾಡುಗಳಲ್ಲೂ ದಾರಿಗಳಲ್ಲೂ ನಿಶ್ಶಬ್ದವಾಗಿ ಸಂಚರಿಸುತ್ತ ಬೇಟೆಯನ್ನು ಪತ್ತೆಹಚ್ಚಲು ತೊಡಗುತ್ತವೆ. ನಾಗರಹೊಳೆಯಲ್ಲಿ ಹುಲಿಗಳು ದಟ್ಟ ಅರಣ್ಯದೊಳಗೆಲ್ಲ ಅಲೆದಾಡಿ ತೆರವಿನ ಅಂಚುಗಳಲ್ಲಿ ಹುಡುಕಾಟ ನಡೆಸುತ್ತ ವಿಶ್ರಾಂತಿಯಲ್ಲೋ ಮೇಯುವುದರಲ್ಲೋ ತೊಡಗಿರುವ ಬೇಟೆಯ ಪ್ರಾಣಿಗಳನ್ನು ಚೆದುರಿಸಿ ಹಿಡಿಯಲೆತ್ನಿಸುತ್ತವೆ. ಆದರೆ, ರಣಥಂಭೋರ್‌ನ ಸರೋವರಗಳ ಸುತ್ತಲಿನ ನೆಲೆಯ ತೆರವುಗಳಲ್ಲಿ ಹುಲಿ ಕಡವೆಗಳನ್ನು ಬೆನ್ನಟ್ಟಿ ಇನ್ನೂ ದೂರದವರೆಗೆ (ಆಫ್ರಿಕಾದ ಸವನ್ನಾದಲ್ಲಿ ಸಿಂಹಗಳು ಬೇಟೆಯಾಡುವಂತೆ) ಧಾವಿಸುತ್ತವೆ. ಎಂಥ ಪ್ರಶಸ್ತವಾದ ಸನ್ನಿವೇಶದಲ್ಲೂ ಹುಲಿ ಬೇಟೆಗೆಂದು 10 ಸಲ ಪ್ರಯತ್ನಪಟ್ಟರೆ ಒಮ್ಮೆ ಮಾತ್ರ ಯಶಸ್ವಿಯಾಗಬಹುದೆಂದು ಅಂದಾಜು ಮಾಡಲಾಗಿದೆ.
  • ಬಹುತೇಕ ಸಂದರ್ಭಗಳಲ್ಲಿ ಹುಲಿಯ ಆಕ್ರಮಣದ ಮೊದಲ ಪರಿಣಾಮವೆಂದರೆ ಬೇಟೆಯ ಪ್ರಾಣಿಯನ್ನು ನೆಲಕ್ಕೆ ಬೀಳಿಸುವುದು. ಮರುಕ್ಷಣದಲ್ಲಿ ಅದರ ಕುತ್ತಿಗೆಯನ್ನೋ, ಹೆಗ್ಗತ್ತನ್ನೊ, ಮಿದುಳಕವಚವನ್ನೊ ಕಚ್ಚಿಹಿಡಿಯುವುದು. ಕಾಟಿ ಇಲ್ಲವೇ ಕಡವೆಯಂಥ ದೊಡ್ಡ ಪ್ರಾಣಿಯನ್ನು ಹಿಡಿದಾಗ ಹುಲಿ ಅದರ ಕುತ್ತಿಗೆಯನ್ನು ಕಚ್ಚಿ ಹಿಡಿದರೆ ಹಂದಿಯಂಥ ಚಿಕ್ಕ ಪ್ರಾಣಿಯನ್ನು ಹಿಡಿದಾಗ ಅದರ ಹೆಗ್ಗತ್ತನ್ನು ಹಿಡಿಯುವುದು. ಉಸಿರುಕಟ್ಟಿ, ರಕ್ತನಾಳಗಳು ತುಂಡರಿಸಿ, ಬೆನ್ನುಹುರಿಯ ಮುರಿತದಿಂದ, ಇಲ್ಲವೇ ಆಘಾತದಿಂದಲೇ ಪ್ರಾಣಿ ಸಾವನ್ನಪ್ಪುವುದು. ನಾಗರಹೊಳೆಯ ಕಾಡುಗಳಲ್ಲಿ ಚೀತಲ್ ಜಿಂಕೆಗಳು ಯಥೇಚ್ಛವಾಗಿದ್ದರೂ ಹುಲಿಗಳು ಕಾಟಿ ಇಲ್ಲವೇ ಕಡವೆಗಳನ್ನೇ ಬೇಟೆಗೆ ಆಯ್ಕೆ ಮಾಡಿಕೊಳ್ಳುವಂತೆ ಕಂಡುಬರುತ್ತದೆ. ಅದೇ ಚಿತ್ವಾನ್ ಮತ್ತು ಕಾನ್ಹ ಅರಣ್ಯಗಳಲ್ಲಿ ದೊಡ್ಡಬೇಟೆಯ ಪ್ರಾಣಿಗಳ ಲಭ್ಯತೆ ಕಡಿಮೆಯಿರುವುದರಿಂದ ಅಲ್ಲಿನ ಹುಲಿಗಳ ಆಹಾರದ ಮುಖ್ಯಭಾಗ ಜಿಂಕೆಗಳೇ ಆಗಿವೆ. ಥೈಲ್ಯಾಂಡಿನಲ್ಲಿ ಸ್ಥಳೀಯ ಬೇಟೆಗಾರರು ದೊಡ್ಡಪ್ರಾಣಿಗಳಾದ ಬಾನ್‌ಟೆಂಗ್, ಕಡವೆ ಮತ್ತು ಹಾಗ್ ಡಿಯರ್‌ಗಳನ್ನು ಬೇಟೆಯಾಡಿರುವುದರ ಪರಿಣಾಮವಾಗಿ ಅವುಗಳ ಸಂಖ್ಯೆಯೇ ಕುಗ್ಗಿಬಿಟ್ಟಿರುವುದರಿಂದ ಅಲ್ಲಿನ ಹುಲಿಗಳು ಕಾಡುಕುರಿ ಮತ್ತಿತ್ತರ ಚಿಕ್ಕಪುಟ್ಟ ಪ್ರಾಣಿಗಳನ್ನೇ ತಿಂದು ಹೊಟ್ಟೆಹೊರೆಯಬೇಕಾಗಿದೆ.
  • ಹುಲಿಯ ನೆಲೆಯಲ್ಲಿ ಜಾನುವಾರುಗಳು ಕಂಡುಬಂದರೆ ಹುಲಿ ಅವನ್ನು ಕೊಲ್ಲುವುದು ಖಂಡಿತ. ಅಪರೂಪಕ್ಕೊಮ್ಮೆ ಒಂದೊಂದು ಹುಲಿ ನರಭಕ್ಷಕವಾಗುತ್ತದೆ. ಈ ವಿಷಯದಲ್ಲಿ ಇನ್ನೂ ಸಮಗ್ರ ವಿಶ್ಲೇಷಣೆ ಆಗಬೇಕಾಗಿದೆ. ಎತ್ತರವಾಗಿ ನೆಟ್ಟಗೆ ನಿಲ್ಲುವ ಮನುಷ್ಯಪ್ರಾಣಿ ತನ್ನ ಭೋಜನದ ಒಂದು ಭಾಗವೆಂದು ಹುಲಿಯ ಮಿದುಳಿನಲ್ಲಿ ಸಾಮಾನ್ಯವಾಗಿ ದಾಖಲಾಗಿರುವುದಿಲ್ಲ. ಹೀಗಾಗಿ ಅದಕ್ಕೆ ಮನುಷ್ಯನ ಮೇಲೆ ಆಕ್ರಮಣ ಮಾಡಬೇಕೆನಿಸುವುದಿಲ್ಲ. ಹೇಗೂ ಇರಲಿ, ಆಕಸ್ಮಿಕವಾಗಿ ನಿರ್ದಿಷ್ಟ ಹುಲಿಯೊಂದಕ್ಕೆ ಮಾನವಪ್ರಾಣಿಯ ಔತಣ ಸುಲಭಸಾಧ್ಯವೆಂದು ಮನವರಿಕೆಯಾಗಿಬಿಟ್ಟರೆ, ಹುಲಿ ವಿಷಯಗಳ ಗ್ರಹಿಕೆಯಲ್ಲಿ ಬಹಳ ಚುರುಕಾಗಿರುವುದರಿಂದ, ಮತ್ತೆ ಮತ್ತೆ ಮನುಷ್ಯರನ್ನು ಕೊಲ್ಲಲೆಳಸಬಹುದು. ಹುಲಿಗಳಲ್ಲಿನ ನರಭಕ್ಷಕ ಪ್ರವೃತ್ತಿ ಸಾರ್ವತ್ರಿಕವಾಗಿರದೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಸ್ಥಳೀಯ ಪ್ರವರ್ತನೆಯಾಗಿರುವುದನ್ನು ಗಮನಿಸಿದರೆ ತಾಯಿಹುಲಿಯಿಂದ ಮರಿಗಳೂ ಈ ಹವ್ಯಾಸವನ್ನು ಕಲಿತಿರುವ ಸಾಧ್ಯತೆಯಿದೆಯೆಂದು ತಿಳಿಯುತ್ತದೆ. ಆದರೆ, ದಕ್ಷಿಣ ಭಾರತದಂತಹ ವಿಶಾಲ ಭೂಪ್ರದೇಶಗಳಲ್ಲಿ ನರಭಕ್ಷಕ ಹುಲಿಗಳ ದಾಖಲೆ ತೀರ ಅಪರೂಪವಾಗಿರುವುದೇಕೆಂದು ಇನ್ನೂ ತಿಳಿಯಬೇಕಾಗಿದೆ.

ಸಂತಾನೋತ್ಪತ್ತಿ

[ಬದಲಾಯಿಸಿ]
  • ಹುಲಿಗಳಿಗೆ ಬೆದೆಗೆ ಬರುವ ಋತುಗಳಿಲ್ಲ. ಸಂತಾನೋತ್ಪತ್ತಿ ವರ್ಷದ ಯಾವ ಸಮಯದಲ್ಲಾದರೂ ನಡೆಯಬಹುದಾದರೂ ಹುಲಿಗಳ ಹೆಣ್ಣು ಗಂಡುಗಳ ಸಂಗಮ ನವೆಂಬರ್ ನಿಂದ ಎಪ್ರಿಲ್ ವರೆಗೆ ಹೆಚ್ಚು ಸಾಮಾನ್ಯ. ಹುಲಿಯ ಗರ್ಭಧಾರಣೆಯ ಅವಧಿ ೧೬ ವಾರಗಳು. ಒಂದು ಬಾರಿಗೆ ಮೂರರಿಂದ ೪ ಮರಿಗಳು ಜನಿಸುತ್ತವೆ. ನವಜಾತ ಮರಿಯು ೧ ಕಿ.ಗ್ರಾಂ. ತೂಕ ಹೊಂದಿದ್ದು ಕುರುಡಾಗಿದ್ದು ಸಂಪೂರ್ಣ ನಿಸ್ಸಹಾಯಕ ಸ್ಥಿತಿಯಲ್ಲಿರುವುದು. ಮರಿಗಳ ಪಾಲನೆ ಮತ್ತು ಪೋಷಣೆಯ ಪೂರ್ಣ ಜವಾಬ್ದಾರಿ ತಾಯಿ ಹುಲಿಯದು ಮಾತ್ರ. ಈ ಶಿಶುಗಳಿಗೆ ಏಳೆಂಟು ವಾರಗಳ ಕಾಲ ತಾಯಿಯ ಹಾಲೇ ಆಹಾರ. ಅನಂತರ ತಾಯಿ ಅವನ್ನು ತಾನು ಕೊಂದ ಪ್ರಾಣಿಗಳೆಡೆಗೆ ಕರೆದೊಯ್ಯತೊಡಗುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಮರಿಗಳು ಬೇಟೆಯ ಕೌಶಲಗಳನ್ನು ಕ್ರಮಬದ್ಧವಾಗಿ ಬೆಳೆಸಿಕೊಳ್ಳತೊಡಗುತ್ತವೆ. ಹುಲಿಯ ಸಾಮಾಜಿಕ ಸಂಬಂಧಗಳ ಬಗೆಗಿನ ನಮ್ಮ ಈಗಿನ ತಿಳಿವಳಿಕೆಯು, ಜೀವಶಾಸ್ತ್ರಜ್ಞರಾದ ಮೆಲ್ವಿನ್ ಸನ್‌ಕ್ವಿಸ್ವ್ ಹಾಗೂ ಡೇವಿಡ್ ಸ್ಮಿತ್‌ರವರು ನೇಪಾಳದ ಚಿತ್ವಾನ್ ಅರಣ್ಯಗಳಲ್ಲಿ ರೇಡಿಯೋ ಟೆಲೆಮೆಟ್ರಿ ಉಪಯೋಗಿಸಿ ನಡೆಸಿದ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆಗಳಿಂದ ಲಭಿಸಿದೆ. ಅವರು ಒದಗಿಸಿದ ಮಾಹಿತಿಗಳಿಗೆ ಪೂರಕವಾಗಿ ಮುಂದೆ, ನಾಗರಹೊಳೆ ಹಾಗೂ ರಷ್ಯಾಗಳಲ್ಲಿ ಟೆಲೆಮೆಟ್ರಿ ಅಧ್ಯಯನಗಳು ನಡೆದವು. ಈ ಅಧ್ಯಯನಗಳಿಂದ ದೊರೆತ ಹೊಸ ಮಾಹಿತಿಗಳಿಂದ ತಿಳಿದುಬರುವುದೆಂದರೆ, ಚಿತ್ವಾನ್‌ನಲ್ಲಿ ಗಮನಿಸಲಾಗಿರುವಂತಹ ಹುಲಿಗಳ ಪ್ರಾಥಮಿಕ ರೂಪರೇಖೆಗಳು ಇತರೆಡೆಗಳಲ್ಲಿ ಅಲ್ಲಿನ ಬೇಟೆಯ ಪ್ರಾಣಿಗಳ ಸಾಂದ್ರತೆ ಹಾಗೂ ಅರಣ್ಯದ ಸಸ್ಯವರ್ಗಸ್ವರೂಪವನ್ನು ಆಧರಿಸಿ ವಿಭಿನ್ನವಾಗಿರುವ ಸಾಧ್ಯತೆಗಳಿವೆ.
  • ಮರಿಗಳನ್ನು ಬಂಡೆಗಳ ಕೊರಕಲಿನಲ್ಲಿ ಅಥವಾ ದಟ್ಟ ಪೊದೆಗಳಲ್ಲಿ ಮರೆಸಿಟ್ಟು ತಾಯಿ ಹುಲಿಯು ಅವುಗಳನ್ನು ಪಾಲಿಸುತ್ತದೆ. ಹುಲಿಗಳಲ್ಲಿ ಶಿಶುಗಳ ಮರಣ ಅಧಿಕವಾಗಿದ್ದು ಅರ್ಧಕ್ಕೂ ಹೆಚ್ಚು ಮರಿಗಳು ಎರಡು ವರ್ಷದೊಳಗೆ ಮರಣಿಸುತ್ತವೆ. ಜನಿಸಿದ ೮ ವಾರಗಳ ಬಳಿಕ ಮರಿಯು ತನ್ನ ತಾಯಿಯನ್ನು ಹಿಂಬಾಲಿಸಿ ಮನೆಯಿಂದ ಹೊರಹೋಗಲು ಸಮರ್ಥವಾಗಿರುತ್ತದೆ. ಪ್ರಾರಂಭದಲ್ಲಿ ಈ ಚಲನೆ ನೆಲೆಯ ಆಸುಪಾಸಿಗಷ್ಟೇ ಸೀಮಿತವಾಗಿರುವುದು. ಮರಿಯು ೧೮ ತಿಂಗಳುಗಳಲ್ಲಿ ಸ್ವಾವಲಂಬಿಯಾಗುವುದು.
  • ೨ ರಿಂದ ೨ ೧/೨ ವರ್ಷಗಳ ಸಮಯದಲ್ಲಿ ಮರಿಯು ತನ್ನ ತಾಯಿಯನ್ನು ತೊರೆದು ಸ್ವತಂತ್ರ ಜೀವನ ರೂಪಿಸಿಕೊಳ್ಳುವುದು. ಹೆಣ್ಣು ಹುಲಿಗಳು ೩ ರಿಂದ ೪ ವರ್ಷಗಳಲ್ಲಿ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪಿದರೆ ಗಂಡುಗಳಲ್ಲಿ ಈ ಅವಧಿ ೪ ರಿಂದ ೫ ವರ್ಷಗಳು.[೨೬] ತನ್ನ ಜೀವನಾವಧಿಯಲ್ಲಿ ಒಂದು ಹೆಣ್ಣು ಹುಲಿಯು ಸರಿಸುಮಾರು ಸಮಾನ ಸಂಖ್ಯೆಯ ಗಂಡು ಮತ್ತು ಹೆಣ್ಣು ಮರಿಗಳಿಗೆ ಜನ್ಮವೀಯುತ್ತದೆ. ಹುಲಿಗಳು ಬಂಧನದಲ್ಲಿ ಕೂಡ ಸರಾಗವಾಗಿ ಸಂತಾನೋತ್ಪತ್ತಿಯನ್ನು ನಡೆಸಬಲ್ಲವು.

ವಾಸದ ನೆಲೆಗಳು

[ಬದಲಾಯಿಸಿ]
  • ಸಾಮಾನ್ಯವಾಗಿ ಹುಲಿಯ ವಾಸದ ನೆಲೆಯ ಪರಿಸರವು ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರುವುದು. ಇವೆಂದರೆ ಗಿಡಮರಗಳಿಂದ ಒದಗುವ ನೈಸರ್ಗಿಕ ಮರೆ, ನೀರಿನಾಶ್ರಯ ಮತ್ತು ಧಾರಾಳವಾಗಿ ಒದಗುವ ಆಹಾರದ ಪ್ರಾಣಿಗಳು. ಮೊದಲೇ ತಿಳಿಸಿದಂತೆ ಬಂಗಾಳದ ಹುಲಿಗಳು ಎಲ್ಲ ಬಗೆಯ ಅರಣ್ಯಗಳಲ್ಲಿ ವಾಸಿಸುವುದು. ಹುಲಿಗಳು ದಟ್ಟ ಸಸ್ಯರಾಶಿಯನ್ನು ಬಯಸುತ್ತವೆ.
  • ಹುಲಿಯು ಒಂದು ನುರಿತ ಈಜುಗಾರ ಸಹ ಆಗಿದೆ. ಒಂದು ಸಲಕ್ಕೆ ಹುಲಿಯು ೪ ಮೈಲಿಗಳಷ್ಟು ದೂರವನ್ನು ಈಜಬಲ್ಲುದು. ತನ್ನ ಬೇಟೆಯನ್ನು ಕಚ್ಚಿಹಿಡಿದು ಹುಲಿಯು ಈಜಿಕೊಂಡು ನದಿ ಕೆರೆಗಳನ್ನು ದಾಟುವುದಿದೆ.

ಆಯುಷ್ಯ

[ಬದಲಾಯಿಸಿ]

ಬಹುತೇಕ ಹುಲಿಗಳು ದೀರ್ಘಕಾಲ ಬದುಕುವುದಿಲ್ಲ. ಚಿತ್ವಾನ್ ಮತ್ತು ನಾಗರಹೊಳೆಗಳಲ್ಲಿ ನಡೆಸಿದ ಸೀಮಿತ ಅಧ್ಯಯನ ಮತ್ತು ಇದಕ್ಕೆ ಪೂರಕವಾಗಿ ಕಾನ್ಹದಲ್ಲಿ ಹೆಚ್.ಎಸ್.ಪನ್ವರ್‌ರವರ ಸಮೀಕ್ಷೆಗನುಗುಣವಾಗಿ ಕೆಲವು ಅಂಶಗಳನ್ನು ಹೀಗೆ ಸರಳೀಕರಿಸಿ ಹೇಳಬಹುದು. ಒಂದು ಹೆಣ್ಣುಹುಲಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸರಾಸರಿ ಮೂರು ಮರಿಗಳನ್ನು ಈಯುತ್ತದೆ. ಕಾಯಿಲೆ, ಬೆಂಕಿ, ಪ್ರವಾಹ, (ಮನುಷ್ಯನೂ ಸೇರಿದಂತೆ) ಇತರ ಬೇಟೆಗಾರ ಪ್ರಾಣಿಗಳೂ, ಮತ್ತು ಮರಿಹತ್ಯೆ (ಎಂದರೆ, ಒಂದು ನಿವಾಸನೆಲೆಯನ್ನು ಹೊಸದಾಗಿ ವಶಪಡಿಸಿಕೊಂಡ ಗಂಡುಹುಲಿ ಹಿಂದಿನ ಗಂಡುಹುಲಿಯ ಸಂತಾನವನ್ನು ಕೊಂದುಹಾಕುವುದು) - ಇವೆಲ್ಲ ಮರಿಗಳು ಹೆಚ್ಚಾಗಿ ಸಾಯಲು ಕಾರಣಗಳಾಗಿವೆ. ಹೀಗಾಗಿ ಹುಟ್ಟಿದ ಮರಿಗಳಲ್ಲಿ ಕೇವಲ ಶೇ. 50ರಷ್ಟು ಮಾತ್ರ ಒಂದು ವರ್ಷದ ಆಯುಷ್ಯವನ್ನು ದಾಟಿ ಬದುಕುತ್ತವೆ. ಹೀಗೆ ಬದುಕುಳಿದ ಮರಿಹುಲಿಗಳು ಬಹುತೇಕ ತಾಯಿಯಿಂದ ಬೇರ್ಪಟ್ಟು ದೇಶಾಂತರಿಗಳಾಗುವವರೆಗೂ ಜೀವಿಸಿರಲು ಹೆಚ್ಚು ತೊಂದರೆಯಾಗದು. ಆದರೆ, ತಾಯಿಯಿಂದ ಬೇರ್ಪಟ್ಟ ಮೇಲೆ ಹುಲಿಗಳು ತಮ್ಮ ತಮ್ಮ ನಡುವೆಯೂ ಪ್ರಬಲ ಹುಲಿಗಳ ಜೊತೆಗೂ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ನೆಲೆ, ಬೇಟೆ, ಸಂಗಾತಿ, ಎಲ್ಲವೂ ಸ್ಪರ್ಧೆಯ ವಿಷಯಗಳಾಗಿ ಸವಾಲೊಡ್ಡುತ್ತವೆ. ಕೆಲವು ಕೃಷಿಭೂಮಿಗಳತ್ತ ಸಾಗಿ ಹತ್ಯೆಗೀಡಾಗುತ್ತವೆ. ಬಹುಶಃ ಪ್ರತಿವರ್ಷ ಶೇ.20ರಿಂದ 30ರಷ್ಟು ದೇಶಾಂತರೀ ಹುಲಿಗಳೂ ಸಾಯುತ್ತವೆ. ಒಂದಿಷ್ಟು ಬಲಿಷ್ಠವಾಗಿರುವ ಅಲೆಮಾರಿಗಳು ಮಾತ್ರ ಬದುಕುಳಿದು ನೆಲೆಸ್ಥಾಪಿಸಿಕೊಂಡು ಸಂತಾನವನ್ನು ಬೆಳೆಸುತ್ತವೆ. ಸಂತಾನವನ್ನು ಬೆಳೆಸುವ ಸ್ಥಿತಿಗೆ ತಲಪುವ ವೇಳೆಗೆ ಗಂಡುಹುಲಿ ಐದರಿಂದ ಆರು ವರ್ಷ ವಯಸ್ಸಿನದಾಗಿದ್ದರೆ ಹೆಣ್ಣಿನ ವಯಸ್ಸು ಮೂರರಿಂದ ನಾಲ್ಕು ವರ್ಷವಾಗಿರುತ್ತದೆ. ಹೆಣ್ಣುಹುಲಿ ಸರಾಸರಿ ಏಳರಿಂದ ಎಂಟು ವರ್ಷಗಳ ಅವಧಿಯವರೆಗೂ ಮರಿಗಳನ್ನೂ ಹೆರಲು ಸಮರ್ಥವಾಗಿದ್ದರೆ, ಗಂಡುಹುಲಿಗಳು ಮೂರು ನಾಲ್ಕು ವರ್ಷಕಾಲ ಮಾತ್ರ ಸಂತಾನ ಪ್ರಕ್ರಿಯೆಯಲ್ಲಿ ತೊಡಗಿರುವುದು ಸಾಧ್ಯ. ನೆಲೆಯ ನೆಮ್ಮದಿ ಕಂಡುಕೊಂಡ ಕೆಲವು ಹುಲಿಗಳು 12 ರಿಂದ 15 ವರ್ಷಗಳವರೆಗೆ ಜೀವಿಸಿರಬಲ್ಲವಾದರೂ ಸಾಧಾರಣ ಹುಲಿಯೊಂದರ ಜನನದಿಂದ ಗಣನೆಮಾಡುವುದಾದರೆ ಅದರ ಆಯುಷ್ಯ ಪ್ರಮಾಣ ಮೂರರಿಂದ ಐದು ವರ್ಷಗಳು ಮಾತ್ರ ಎಂದು ಗುರುತಿಸಬೇಕಾಗುತ್ತದೆ.

ಹುಲಿ ಸಂರಕ್ಷಣೆಯ ಯತ್ನಗಳು

[ಬದಲಾಯಿಸಿ]
  • ಹುಲಿಯನ್ನು ಅದರ ಚರ್ಮ ಮತ್ತು ಉಗುರುಗಳಿಗೋಸ್ಕರವಾಗಿ ವ್ಯಾಪಕವಾಗಿ ಬೇಟೆಯಾಡಲಾಗುತ್ತದೆ. ಜೊತೆಗೆ ವಾಸದ ನೆಲೆಗಳ ನಾಶವು ಸಹ ಸೇರಿ ಹುಲಿಗಳ ಸಂಖ್ಯೆ ಇಂದು ಗಣನೀಯವಾಗಿ ಕುಸಿದಿದೆ. ೨೦ ನೆಯ ಶತಮಾನದ ಆದಿಯಲ್ಲಿ ಜಗತ್ತಿನಲ್ಲಿ ಸುಮಾರು ಒಂದು ಲಕ್ಷ ಹುಲಿಗಳಿದ್ದರೆ ಇಂದು ಈ ಸಂಖ್ಯೆ ವಿಶ್ವದ ಅರಣ್ಯಗಳಲ್ಲಿ 3890 ಮಾತ್ರ.
  • ಇಂದು ಸುಮಾರು ೨೦೦೦೦ ಹುಲಿಗಳು ಜಗತ್ತಿನೆಲ್ಲೆಡೆ ಮೃಗಾಲಯಗಳಲ್ಲಿ ಮತ್ತಿತರ ಕಡೆ ಬಂಧನದಲ್ಲಿವೆ. ಈ ದೊಡ್ಡ ಸಂಖ್ಯೆಯಿಂದಾಗಿ ಹುಲಿಗಳು ಹಠಾತ್ತಾಗಿ ಭೂಮಿಯಿಂದ ಶಾಶ್ವತವಾಗಿ ಮರೆಯಾಗುವ ಅಪಾಯ ಇಲ್ಲವಾಗಿದೆ. ಅಳಿವಿನಂಚಿಗೆ ತಲಪಿದ ಹುಲಿಯ ಉಳಿವಿಗಾಗಿ ಅಂತರರಾಷ್ಟ್ರೀಯ ಸಂರಕ್ಷಣಾವಾದಿ ಸಮುದಾಯದ ಕಾಳಜಿ ಕಾತರಗಳಿಗೆ ಪ್ರತಿಸ್ಪಂದಿಸಿದ ಕೆಲವು ಏಷಿಯನ್ ದೇಶಗಳು 1970ರ ದಶಕದ ಪ್ರಾರಂಭದಲ್ಲಿ ಹುಲಿ ಸಂರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೊಳಿಸಿದವು. ನೇಪಾಳ ಹಾಗೂ ಆಗಿನ ರಷ್ಯನ್ ಒಕ್ಕೂಟದ ಕೆಲವು ಭಾಗಗಳನ್ನು ಹೊರತುಪಡಿಸಿದಂತೆ, ಉಳಿದ ಎಲ್ಲಾ ದೇಶಗಳು ಪರಿಣಾಮಕಾರಿ ಹುಲಿ ಸಂರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದವು. ಇದರ ಪರಿಣಾಮವಾಗಿ ಏಷ್ಯಾದ ಬಹು ಭಾಗಗಳಲ್ಲಿ ಹುಲಿಯ ಅವನತಿ ಮುಂದುವರೆಯಿತು. ಹುಲಿಯನ್ನು ಸಂಕ್ಷಿಸುವ ಅಂತರರಾಷ್ಟ್ರೀಯ ಆಂದೋಲನಗಳು ಪ್ರಾರಂಭಗೊಳ್ಳುತ್ತಿರುವಂತೆಯೇ ಇನ್ನೊಂದೆಡೆ ಜಾವಾ ದ್ವೀಪದ ಹುಲಿ ಪ್ರಭೇದವೂ ಕ್ಯಾಸ್ಪಿಯನ್ ಉಪಜಾತಿಯ ಹುಲಿಗಳೂ ಶಾಶ್ವತವಾಗಿ ಕಣ್ಮರೆಯಾದ ದುರಂತ ಸತ್ಯವೂ ಪ್ರಕಟವಾಯಿತು.
  • 1960ರ ದಶಕದ ಪ್ರಾರಂಭದಲ್ಲಿ ಮುಂದಿನ ದಶಕದೊಳಗೆ ಹುಲಿಗಳು ನಾಮಾವಶೇಷವಾಗಿ ಬಿಡುತ್ತವೆಂದು ನಿಶ್ಚಯವಾಗಿ ತೋರಿತ್ತು. ಪರಿಸ್ಥಿತಿ ಇಷ್ಟೊಂದು ಹೀನಾಯವಾಗಿ ಕಂಡುಬರಲು ಕಾರಣವೇನೆಂದರೆ, ಕೈ ಬೆರಳೆಣಿಕೆಯಷ್ಟು ಆದ್ಯ ಸಂರಕ್ಷಣಾವಾದಿಗಳನ್ನು ಹೊರತುಪಡಿಸಿ (ಇ.ಪಿ.ಜೀ, ಸಲೀಮ್ ಅಲಿ, ಬಿಲ್ಲಿ ಅರ್ಜುನ್ ಸಿಂಗ್, ಜಾಫರ್ ಫತೇ ಅಲಿ ಖಾನ್ ಹಾಗೂ ಎಂ. ಕೃಷ್ಣನ್) ಯಾರಿಗೂ ಭಾರತದ ವನ್ಯ ಜೀವಿಗಳಿಗೆ ಏನಾಗುತ್ತಿದೆ ಎಂಬುದರ ಬಗೆಗೆ ಜ್ಞಾನೋದಯವಾಗುವುದಿರಲಿ ಅತ್ತಕಡೆ ಗಮನ ಹರಿಸುವ ವ್ಯವಧಾನವೂ ಇರಲಿಲ್ಲ. 1967ರಲ್ಲಿ ನ್ಯೂಯಾರ್ಕ್‌ನ ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ಜಾರ್ಜ್ ಷಾಲರ್‌ರವರು ಹುಲಿಗಳ ಬಗೆಗಿನ ಪ್ರಪಥಮ ವೈಜ್ಞಾನಿಕ ಅಧ್ಯಯನವನ್ನು ಪೂರ್ಣಗೊಳಿಸಿದರು. ತಮ್ಮ "ದ ಡಿಯರ್ ಅಂಡ್ ದ ಟೈಗರ್" ಎಂಬ ಶ್ರೇಷ್ಠ ಅಧ್ಯಯನ ಕೃತಿಯಲ್ಲಿ ಷಾಲರ್‌ರವರು ಹುಲಿಯ ಜೀವ ಪರಿಸ್ಥಿತಿಯ ಅತಿ ಮುಖ್ಯ ಅಂಶಗಳನ್ನು ವಿಶ್ಲೇಷಿಸುವುದರೊಂದಿಗೆ, ಹುಲಿಯ ಅಸ್ತಿತ್ವ ಅತಿ ಅಪಾಯದ ಸ್ಥಿತಿಗೆ ತಲಪಿರುವುದರತ್ತ ಜಗತ್ತಿನ ಗಮನ ಸೆಳೆದಿದ್ದಾರೆ.
  • ಭಾರತ ಮತ್ತು ನೇಪಾಳದ ಕೆಲವು ಅಭಯಾರಣ್ಯಗಳಲ್ಲಿ ಮಾತ್ರವೇ ಹುಲಿಗಳನ್ನು ಅವುಗಳ ನೆಲೆಯಲ್ಲಿ ರಕ್ಷಿಸಬೇಕಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಯಿತು. ಹುಲಿ ಸಂರಕ್ಷಣೆಗಾಗಿ ಬದ್ಧವಾಗಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ರಾಜಕೀಯ ನಾಯಕತ್ವ, ವನ್ಯಜೀವಿ ಪರವಾದ ತಿಳುವಳಿಕಸ್ಥರ ಚಿಕ್ಕ ಸಂಘಟನೆಗಳು ಹಾಗೂ ರಾಜ್ಯ ಅರಣ್ಯ ಇಲಾಖೆಗಳಲ್ಲಿದ್ದ ಶಿಸ್ತುಬದ್ಧ ಅಧಿಕಾರಿಗಳ ಬಲ-ಹೀಗೆ, ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿ 3 ಶಕ್ತಿಗಳು ಕೈಜೋಡಿಸುವಂತಾದುದು ಒಂದು ವರವೆಂದೇ ಹೇಳಬೇಕು. ಇದರಿಂದಾಗಿ ಅನೇಕ ಅಭಯಾರಣ್ಯಗಳಲ್ಲಿ ಹೊಸ ವನ್ಯಜೀವಿ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಕಡೇ ಪಕ್ಷ ಈ ಅಭಯಾರಣ್ಯಗಳಲ್ಲಾದರೂ ಹುಲಿಗಳೂ ಅವುಗಳ ಆಹಾರ ಪ್ರಾಣಿಗಳೂ ನೆಲೆಗಳೂ ಕ್ಷೇಮವಾಗಿದ್ದವು.
  • ಭಾರತವು ವಿಶ್ವದ ಅತಿ ದೊಡ್ಡ ಸಂಖ್ಯೆಯ ಕಾಡಿನ ಹುಲಿಗಳನ್ನು ಹೊಂದಿದೆ.[೨೭] ಹುಲಿಗಳನ್ನು ಕಾಪಾಡಿಕೊಳ್ಳಲು ೧೯೭೩ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ೨೫ ಹುಲಿ ಮೀಸಲು ಕ್ಷೇತ್ರಗಳನ್ನು ರಚಿಸಲಾಗಿದ್ದು ಇವುಗಳ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆಯನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.
  • ಸಂರಕ್ಷಣೆಯ ಇತಿಹಾಸದ ಪುಟಗಳಿಂದ ಪಾಠ ಕಲಿಯಬೇಕೆಂದರೆ ಭಾರತದಲ್ಲಿ ಹುಲಿ ಸಂರಕ್ಷಣೆಗಾಗಿ ನಡೆದ ಪ್ರಯತ್ನಗಳ ಮುಖ್ಯಾಂಶಗಳನ್ನು ವಿಶ್ಲೇಷಿಸುವುದು ಬಹು ಮುಖ್ಯ. ಈ ಪ್ರಯತ್ನದ ಅತಿ ಪರಿಣಾಮಕಾರಿ ಘಟಕವೆಂದರೆ, ಹೊಸ ವನ್ಯಜೀವಿ ಕಾನೂನುಗಳನ್ನು ಜಾರಿಗೆ ತರುವ ಹೊಣೆ ಹೊತ್ತ ಭಾರತದ ಅರಣ್ಯಾಧಿಕಾರಿಗಳು ಇಡೀ ವ್ಯವಸ್ಥೆಗೆ ಅತಿ ಪ್ರಾಯೋಗಿಕವೂ ಸಂರಕ್ಷಣಾಪರವೂ ಆದ ದೃಷ್ಟಿಕೋನವನ್ನು ಅಳವಡಿಸಿದುದು. ಜೆ.ಜೆ.ದತ್ತ, ಸರೋಜ್ ರಾಜ್ ಚೌಧರಿ, ಕೈಲಾಶ್ ಸಂಕಾಲ, ಸಂಜಯ್ ದೇಬ್‌ರಾಯ್, ಹೆಚ್.ಎಸ್.ಪನ್ವರ್, ಫತೇಸಿಂಗ್ ರಾಥೋರ್ ಮತ್ತಿತರರು ಹುಲಿ ಸಂರಕ್ಷಣೆಯ ಮಹತ್ವದ ಜವಾಬ್ದಾರಿ ಹೊತ್ತು ಅತಿ ಜರೂರಾದ ಕಾರ್ಯಗಳನ್ನು ಸಮಂಜಸವಾಗಿ ನಿರ್ವಹಿಸಿದರು. ಮೊದಲನೆಯದಾಗಿ ಹುಲಿಯ ಸಂರಕ್ಷಿತ ನೆಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುಸಜ್ಜಿತರಾದ ಅರಣ್ಯ ರಕ್ಷಕರನ್ನು ನೇಮಿಸುವುದು. ಎರಡನೆಯದೆಂದರೆ, ಹುಲಿಯ ನೆಲೆಗಳಲ್ಲಿ ಜಾನುವಾರು ಮೇವು, ಕಾಡ್ಗಿಚ್ಚು, ಮರಕಡಿತ, ಸೌದೆ ಮತ್ತು ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಗಳನ್ನು ತಡೆಯುವ ಮೂಲಕ ಜೀವರಾಶಿಯ ದುರುಪಯೋಗದ ಒತ್ತಡಗಳನ್ನು ತಡೆಯುವುದು. ಹುಲಿ ಯೋಜನೆಯ ನಿರ್ದೇಶಕರುಗಳು ತಮ್ಮ ತಮ್ಮ ಯೋಜನಾ ಪ್ರದೇಶಗಳಲ್ಲಾದರೂ ತಮ್ಮ ಇಲಾಖೆಯವರೇ ನಡೆಸುತ್ತಿದ್ದ ಮರಹನನ ಕಾರ್ಯವನ್ನು ತಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದು ದೂರದೃಷ್ಟಿಯ ಕ್ರಮವೆಂದರೆ ಸಂರಕ್ಷಿತ ಹುಲಿಯ ನೆಲೆಗಳಲ್ಲಿ ವಸತಿ ಹೂಡಿದ್ದ ಜನಸಂಖ್ಯಾ ಸಾಂದ್ರತೆಯನ್ನು ತಗ್ಗಿಸುವ ಪ್ರಯತ್ನವಾಗಿ ಅಂತಹ ಜನರಿಗೆ ಹುಲಿಯ ನೆಲೆಗಳಿಂದ ದೂರದ ಭೂ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸುವುದು. ಹುಲಿ ಸಂರಕ್ಷಣೆಯ ಪ್ರಾರಂಭಿಕ ಪ್ರಯತ್ನದಲ್ಲಿನ ಸಂರಕ್ಷಣಾಪರ ಧೋರಣೆಯಿಂದ ಕೆಲವೊಮ್ಮೆ ಸ್ಥಳೀಯ ಜನರ ತಾತ್ಕಾಲಿಕ ಆಸಕ್ತಿಗಳಿಗೆ ಧಕ್ಕೆಯೊದಗಿರಬಹುದಾದರೂ ಹುಲಿಗಳೂ ಸೇರಿದಂತೆ ಸಕಲ ವನ್ಯಜೀವಿ ಸಂಕುಲವೇ ಈ ಕ್ರಮಗಳಿಂದ ಪ್ರಯೋಜನ ಪಡೆಯುವಂತಾಯಿತೆಂಬುದು ಸತ್ಯ.
  • ಸಂರಕ್ಷಣೆಯ ಮೊದಲ ದಶಕದಲ್ಲಿ (1974-84) ಈ ಅರಣ್ಯ ನೆಲೆಗಳು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡವು. ಹುಲಿಗಳ ಮತ್ತು ಅವುಗಳ ಬೇಟೆಯ ಪ್ರಾಣಿಗಳ ಸಂಖ್ಯೆಯಲ್ಲೂ ಗಮನಾರ್ಹ ವೃದ್ಧಿ ಗೋಚರಿಸತೊಡಗಿತು. ಹುಲಿ ಯೋಜನೆಯ ಕ್ಷೇತ್ರಗಳಲ್ಲೂ (ಕಾನ್ಹಾ, ರಣಥಂಬೋರ್, ಕಾರ್ಬೆಟ್, ಮಾನಸ್, ಕಾಜೀರಂಗ) ಇತರ ನೆಲೆಗಳಲ್ಲೂ (ನಾಗರಹೊಳೆ, ಆನೆಮಲೈ, ದುದ್ವಾ, ಬಾಂಧವಗಡ) ಗಮನಾರ್ಹ ಪುನಶ್ಚೇತನ ಕಂಡುಬಂದಿತು. ಪ್ರವಾಸೋದ್ಯಮಕ್ಕೆ ತೆರೆದಿಟ್ಟ ಅರಣ್ಯಪ್ರದೇಶಗಳಲ್ಲಿ, ಉದಾಹರಣೆಗೆ, ಭಾರತದ ಕಾನ್ಹ, ರಣಥಂಭೋರ್, ಅಂತೆಯೇ ನೇಪಾಳದ ಚಿತ್ವಾನ್‌ಗಳಲ್ಲಿ ಪ್ರವಾಸಿಗರು ಜೀಪುಗಳಲ್ಲೋ ಆನೆಯ ಮೇಲೆ ಕುಳಿತೋ ಹುಲಿಗಳನ್ನು ಸುತ್ತುವರಿದು ವೀಕ್ಷಿಸುವ ದೃಶ್ಯ ಸಾಮಾನ್ಯವಾಯಿತು. ಆ ದಿನಗಳ ಸಂಭ್ರಮದ ಸೊಗಸನ್ನು ಬೆಲಿಂಡಾ ರೈಟ್, ಫತೇಸಿಂಗ್‌ರಾಥೋರ್, ವಾಲ್ಮಿಕ್ ಥಾಪರ್ ಮತ್ತಿತರರು ಅದ್ಭುತ ಛಾಯಾಚಿತ್ರಗಳಲ್ಲೂ ಚಲನಚಿತ್ರಗಳಲ್ಲೂ ಸೆರೆಹಿಡಿದಿದ್ದಾರೆ. 1980ರ ಪ್ರಾರಂಭದ ವೇಳೆಗೆ ಈ ಪರಿಸ್ಥಿತಿ ಒಂದುವಿಧವಾದ ಸಂತೃಪ್ತ ಭಾವನೆಗೂ ಎಡೆಗೊಟ್ಟಿತು. ಹುಲಿಯೋಜನೆಯ ನಿರ್ದೆಶಕರೊಬ್ಬರು "ಹುಲಿಸಂರಕ್ಷಣೆ ಆಯ್ತಲ್ಲ, ಇವಾಗ ಇನ್ನೇನು ಮಾಡ್ತೀರಿ?" ಎಂದು ಕೇಳುವಷ್ಟರಮಟ್ಟಿಗೆ ಉದಾಸೀನ ಪ್ರವೃತ್ತಿ ಬೆಳೆಯಿತು. ಅಂತರರಾಷ್ಟ್ರೀಯ ಸಂರಕ್ಷಣಾ ಸಂಘಟನೆಗಳು ಯಶಸ್ಸಿನ ಕಥೆ ಬರೆದು ಮುಗಿಸುವ ಕಾತುರತೆಯಿಂದ ತಾವು ಹುಲಿಯನ್ನು ಸಂರಕ್ಷಿಸಿಬಿಟ್ಟಿದ್ದೇವೆಂದು ಸಾರಲು ಧಾವಂತಪಟ್ಟರು. ಹೆಚ್ಚು ಹುಲಿಗಳ ದಟ್ಟಣೆಯಿರುವ ಈ ಬೆರಳೆಣಿಕೆಯಷ್ಟು ಪ್ರದೇಶಗಳು ಸಮಗ್ರ ಹುಲಿನೆಲೆಯ ತೀರ ಚಿಕ್ಕ ಭಾಗವಾಗಿದೆಯೆನ್ನುವುದು ಎಲ್ಲರಿಗೂ ಮರೆತುಹೋಗಿತ್ತು. ಇತರ ನೆಲೆಗಳಲ್ಲಿ ಹುಲಿಯ ಅವನತಿ ಮುಂದುವರಿದೇ ಇತ್ತು.
  • ದೊಡ್ಡ ಅರಣ್ಯಗಳಲ್ಲಿರುವ ಎಲ್ಲಾ ವನ್ಯ ಪ್ರಾಣಿಗಳನ್ನು ಒಂದೊಂದಾಗಿ ಎಣಿಸುವುದು ಸಾಧ್ಯವೇ ಇಲ್ಲವೆಂದು ಮೊದಲಿಗೇ ಕಂಡುಕೊಂಡ ವಿಜ್ಞಾನಿಗಳು ಪ್ರಾಣಿಸಂಖ್ಯೆಯನ್ನು ವಸ್ತುನಿಷ್ಠವಾಗಿ ಅಂದಾಜು ಮಾಡಲು ಹಲವಾರು ಕ್ರಮಬದ್ಧವಾದ ಮಾದರಿ ಸಂಗ್ರಹಣಾ ತಂತ್ರಗಳನ್ನು (ಸ್ಯಾಂಪಲಿಂಗ್ ಟೆಕ್ನಿಕ್ಸ್) ಅಭಿವೃದ್ಧಿಪಡಿಸಿದರು. ಈ ತಂತ್ರಗಳಿಂದ ಏನಿಲ್ಲವೆಂದರೂ ಪ್ರಾಣಿಸಂಖ್ಯೆಯ ಹೆಚ್ಚಳ ಇಲ್ಲವೇ ಇಳಿಮುಖವಾಗಿರುವುದನ್ನು ಗುರುತಿಸಲು ಸಾಧ್ಯವಿತ್ತು.
  • ಇಂಥ ಕ್ರಮಬದ್ಧವಾದ ವಸ್ತುನಿಷ್ಠ ಮಾದರಿ ಸಂಗ್ರಹಣಾ ತಂತ್ರಗಳನ್ನು ಮೊದಲಿನಿಂದಲೂ ಕಡೆಗಣಿಸಿದ ಭಾರತೀಯ ಅರಣ್ಯಾಧಿಕಾರಿಗಳು ಕಡಿಮೆ ಸಾಂದ್ರತೆಯಲ್ಲಿರುವ ಹುಲಿಯಂತಹ ಸಂಕೋಚ ಪ್ರವೃತ್ತಿಯ ಪ್ರಾಣಿಗಳನ್ನು ಒಂದೊದಾಗಿ ಎಣಿಸುವ ದೇಶವ್ಯಾಪಿ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಇದಕ್ಕಾಗಿ ಅವರು ತೀರ ಸರಳವೂ ಅಸಮರ್ಥನೀಯವೂ ಆದ ಹೆಜ್ಜೆ ಗುರುತಿನ ಗಣತಿ (ಪಗ್‌ಮಾರ್ಕ್ ಸೆನ್ಸಸ್) ಎನ್ನುವ ವಿಧಾನವನ್ನು ಕಂಡುಹಿಡಿದರು. ಈ ವಿಧಾನವನ್ನು ಅನುಸರಿಸಿ ದೇಶದಲ್ಲಿರುವ ಎಲ್ಲ ಹುಲಿಗಳ ಹೆಜ್ಜೆ ಗುರುತುಗಳನ್ನು ಏಕಕಾಲದಲ್ಲಿ ಸಂಗ್ರಹಿಸಬಹುದೆಂದೂ ಭಾವಿಸಲಾಗುತ್ತದೆ. ಹುಲಿಗಳ ಎಲ್ಲ ನಾಲ್ಕೂ ಹೆಜ್ಜೆ ಗುರುತುಗಳ ಮುದ್ರೆಗಳು ಪರಿಶೀಲನೆಗೆ ದೊರಕಿರುವ ಕೆಲವು ಸಂದರ್ಭಗಳಲ್ಲಿ ಕ್ಷೇತ್ರಕರ್ಯದಲ್ಲಿ ಪರಿಣತರಾದವರು ಕೆಲವು ಹುಲಿಗಳನ್ನು ಮಾತ್ರ ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ, ನಿಜ. ಆದರೆ ಇದೇ ಕ್ರಮದಲ್ಲಿ ಪ್ರತಿಯೊಂದು ಹುಲಿಯನ್ನು ಎಣಿಸಿಬಿಡಬಹುದೆಂಬ ಸಿದ್ಧಾಂತ ಮಾತ್ರ ಕಾಡಿನ ಹುಲಿಗಳಿರಲಿ, ಮೃಗಾಲಯದಲ್ಲಿರುವ ಹುಲಿಗಳ ವಿಷಯದಲ್ಲೂ ಸಾಬೀತು ಮಾಡಲಾಗಿಲ್ಲ.
  • ಈ ಹುಲಿಗಣತಿಯನ್ನು ಇನ್ನಷ್ಟು ಗೊಂದಲಗೊಳಿಸುವ ವಾಸ್ತವಿಕ ಅಂಶಗಳೆಂದರೆ ಹುಲಿಗಳ ಸಂಖ್ಯೆಯಲ್ಲಿ ವರ್ಷಕ್ಕೆ ಶೇ.15-20ರಷ್ಟು ಬದಲಾವಣೆಯ ಸಾಧ್ಯತೆ; ಹೆಜ್ಜೆ ಗುರುತು ಬೇರೆ ಬೇರೆ ಬಗೆಯ ಮಣ್ಣುಗಳ ಮೇಲೆ ವಿಭಿನ್ನ ರೀತಿಯಲ್ಲಿ ಮೂಡುವುದು; ಪ್ರಾಣಿಯ ವೇಗಕ್ಕೆ ತಕ್ಕಂತೆ ಆಗಬಹುದಾದ ಹೆಜ್ಜೆ ಗುರುತಿನ ವ್ಯತ್ಯಯ; ಒಂದೇ ಪಾದದ ಗುರುತುಗಳನ್ನೇ ಮತ್ತೆ ಮತ್ತೆ ಸಂಗ್ರಹಿಸುವುದು, ಹಾಗೂ ಅನೇಕ ಜಾಡುಗಳಲ್ಲಿ ಹೆಜ್ಜೆ ಗುರುತು ಮೂಡಲು ಅವಶ್ಯಕವಾದ ಮಣ್ಣು ಇಲ್ಲದಿರುವುದು, ಹೀಗಾಗಿ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳ ಯಶಸ್ಸನ್ನು ಸಾಬೀತುಪಡಿಸುವುದಕ್ಕಾಗಿ ಮುಂದಿಡಲಾದ ಹುಲಿಗಳ ಸಂಖ್ಯೆಯ ಆಕರ್ಷಕ ದಾಖಲೆಗಳಿಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವೇ ಉಳಿಯಿತು.
  • ನಾಗರಹೊಳೆ ಅರಣ್ಯದಲ್ಲಿ ಬೇಟೆಯ ಆಹಾರ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜು ಮಾಡಲು, ಟ್ರಾನ್ಸೆಕ್ಟ್ ಎಂದು ಕರೆಯಲಾಗುವ ಮೂರು ಕಿ.ಮೀ. ಉದ್ದದ ಸೀಳುದಾರಿಗಳನ್ನು ರಚಿಸಿಕೊಳ್ಳಲಾಯಿತು. ಪ್ರತಿದಿನ ಸೂರ್ಯ ಮೂಡುವ ವೇಳೆಗೆ, ಈ ಸೀಳುದಾರಿಗಳಲ್ಲಿ ಬಲುಎಚ್ಚರದಿಂದ ನಡೆಯುತ್ತ ಪ್ರಾಣಿಗಳ ಚಲನವಲನಕ್ಕಾಗಿ ಹುಡುಕಾಡಿ, ಕಾಟಿಯೋ ಕಡವೆಯೋ ಬೇರೊಂದು ಪ್ರಾಣಿಯೋ ಕಂಡಕೂಡಲೇ ಆ ಪ್ರಾಣಿ ಯಾವುದು ಎಷ್ಟಿವೆ ಎಂಬ ವಿವರಗಳನ್ನಲ್ಲದೆ, ರೇಂಜ್ ಫೈಂಡರ್ ಎಂಬ ಉಪಕರಣದ ಮೂಲಕ ಸೀಳುದಾರಿಯಲ್ಲಿ ಎಣಿಕೆದಾರ ನಿಂತಿರುವ ಸ್ಥಳಕ್ಕೂ ಆ ಪ್ರಾಣಿಗಳಿರುವ ಜಾಗಕ್ಕೂ ಇರುವ ದೂರವನ್ನು ಗುರುತುಮಾಡಿಕೊಳ್ಳುವುದು. ಆರು ಜನ ಸಹಾಯಕರ ನೆರೆವಿನೊಂದಿಗೆ ಎರಡು ವರ್ಷಗಳ ಅವಧಿಯಲ್ಲಿ ಈ ಸೀಳುದಾರಿಗಳಲ್ಲಿ ಸುಮಾರು 460 ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಿ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಈ ಎಲ್ಲ ಮಾಹಿತಿಗಳಿಂದ ಮಾದರಿ ಸಂಗ್ರಹಣೆಗೆ ಕ್ರಮಿಸಿದ ಅರಣ್ಯದ ಸ್ಥಿತಿಗತಿ ಹಾಗೂ ಸಸ್ಯಾಹಾರಿ ಪ್ರಾಣಿಗಳ ಸಂಖ್ಯಾ ಸಾಂದ್ರತೆಯನ್ನು ಅಂದಾಜು ಮಾಡಲು ಬಳಸಿಕೊಳ್ಳಲಾಯಿತು. ಈ ಅಧ್ಯಯನದಲ್ಲಿ ಕೆಲಸ ಮಾಡಿದ ಕರ್ನಾಟಕದ ಅರಣ್ಯಾಧಿಕಾರಿಗಳು ಈ ಸೀಳುದಾರಿ ಗಣತಿಯ ಮೂಲಕ ಬೇರೆ ಬೇರೆ ಗೊರಸಿನ ಪ್ರಾಣಿಗಳ ಸಂಖ್ಯಾ ಸಾಂದ್ರತೆಯನ್ನು ಸಾಕಷ್ಟು ಖಚಿತವಾಗಿ ನಿರ್ಣಯಿಸಲು ಸಮರ್ಥರಾಗಿದ್ದರು.
  • ಕ್ಷೇತ್ರ ಸಹಾಯಕರು ಹುಲಿಯ ಹಿಕ್ಕೆ (ಸ್ಕಾಟ್)ಗಳನ್ನು ಸಂಗ್ರಹಿಸಿದರು. ಇವು ಹುಲಿಗಳ ಬಗೆಗೆ ಸಾಕಷ್ಟು ಮಾಹಿತಿ ನೀಡಬಲ್ಲ ಆಕರಗಳಾಗಿದ್ದವು. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಹುಲಿಗಳಿವೆಯೆಂದರೆ ಹಿಕ್ಕೆಗಳೂ ಹೆಚ್ಚಾಗಿ ಕಂಡುಬರಬೇಕಷ್ಟೆ. ಹೀಗೆ 100 ಕಿ.ಮೀ. ನಡಿಗೆಯ ಪ್ರದೇಶದಲ್ಲಿ ಕಂಡುಬರುವ ಹುಲಿಗಳ ಹಿಕ್ಕೆಗಳ ಸಾಮಾನ್ಯ ಪಟ್ಟಿಯನ್ನು ನಮೂದಿಸುವುದು ಸಾಧ್ಯ. ಈ ಲೆಕ್ಕಾಚಾರದಿಂದ ಒಂದು ಪ್ರದೇಶದಲ್ಲಿ ಎಷ್ಟು ಹುಲಿಗಳಿವೆಯೆನ್ನುವುದನ್ನು ತಿಳಿಯಲು ಸಾಧ್ಯವಿಲ್ಲವಾದರೂ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೋ ಇಳಿಮುಖವಾಗಿದೆಯೋ ಎನ್ನುವುದು ಗೊತ್ತಾಗುವುದರಿಂದ ನಿರ್ವಹಣಾಧಿಕಾರಿಗಳಿಗೆ ಅರಣ್ಯ ಪ್ರದೇಶದಲ್ಲಿನ ಹುಲಿಗಳ ಸಂಖ್ಯೆಯ ಅಂದಾಜಿನ ಬಗೆಗೆ ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ.
  • ಯಾವುದೇ ಗೊಂದಲವಿಲ್ಲದೆ ಒಂದೊಂದು ಹುಲಿಯನ್ನೂ ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗವೆಂದರೆ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸುವುದು. ಈ ಕ್ಯಾಮೆರಾಗಳನ್ನು ಅರಣ್ಯದಲ್ಲಿ ಹುಲಿಗಳು ಸಂಚರಿಸುವ ನಿರ್ದಿಷ್ಟ ದಾರಿಗಳಲ್ಲಿ ಅಳವಡಿಸಿದ್ದು ಹುಲಿ ಆ ಮಾರ್ಗವಾಗಿ ನಡೆದಾಡುವಾಗ ಕ್ಯಾಮೆರಾ ತನ್ನಂತಾನೇ ಚಿತ್ರ ತೆಗೆಯುವುದು. ಹುಲಿ ತನ್ನ ಚಿತ್ರವನ್ನು ತಾನೇ ತೆಗೆದುಕೊಳ್ಳುತ್ತದೆ ಎಂದರೂ ಸರಿಯೇ. ಆಯಾ ಹುಲಿಯ ಮೈಮೇಲಿನ ಪಟ್ಟೆಗಳು ವಿಶಿಷ್ಟವಾಗಿದ್ದು ಈ ಪಟ್ಟೆಗಳ ಮೂಲಕ ಒಂದೊಂದು ಹುಲಿಯನ್ನೂ ನಿದಿರ್ಷ್ಟವಾಗಿ ಗುರುತಿಸಲು ಸಾಧ್ಯ. ಅಲ್ಲದೆ ಆಯಾ ಪ್ರದೇಶದಲ್ಲಿರುವ ಹುಲಿಗಳ ಸಂಖ್ಯೆಯನ್ನೂ ಅತಿ ಖಚಿತವಾಗಿ ನಿರ್ಣಯಿಸಬಹುದಾಗಿದ್ದು ಹುಲಿಗಳು ಆಯಾ ಜಾಡಿನಲ್ಲಿ ಎಷ್ಟು ಸಲ ಓಡಾಡುತ್ತವೆಯೆಂಬುದನ್ನು ನಮೂದಿಸುವ ಕ್ಯಾಪ್ಚರ್-ರೀಕ್ಯಾಪ್ಚರ್ ಎಂಬ ಲೆಕ್ಕಾಚಾರದ ಮಾದರಿಗಳ ನೆರವಿನಿಂದ ಈ ಗಣತಿಯನ್ನು ಇನ್ನಷ್ಟು ನಿಖರವಾಗಿ ದಾಖಲಿಸಬಹುದು.
  • ಹುಲಿಗಣತಿ ಮಾಡುವಲ್ಲಿ ರೇಡಿಯೋ ಟೆಲೆಮೆಟ್ರಿ ವಿಧಾನವು ಬಹುಮಹತ್ವದ್ದಾಗಿದೆ. ಸಂಶೋಧಕ ತನ್ನ ಭುಜದ ಮೇಲೆ ಗ್ರಾಹಕವನ್ನು ನೇತುಹಾಕಿಕೊಂಡು ಕೈಯಲ್ಲೊಂದು ಆಂಟೆನಾವನ್ನು ಹಿಡಿದುಕೊಂಡು ಪ್ರತಿದಿನ ಅನೆಯ ಮೇಲೋ ನಡಿಗೆಯಲ್ಲೋ ನಾಗರಹೊಳೆ ಕಾಡಿನಲ್ಲಿ ಸುತ್ತಾಡುತ್ತ ತಾನು ರೇಡಿಯೋ ಕಾಲರ್ ತೊಡಿಸಿದ್ದ  ಹುಲಿಗಳ ಚಲನವಲನಗಳ ಅಭ್ಯಾಸದಲ್ಲಿ ತೊಡಗಿರುತ್ತಾನೆ. ಈ ತಂತ್ರದ ಮೂಲಕ ಸಂಶೋಧಕರಿಗೆ ಹುಲಿಗಳ ಗುಪ್ತ ಸಾಮ್ರಾಜ್ಯವನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ.
  • 1990ರ ದಶಕದ ಪ್ರಾರಂಭದಲ್ಲಿ ತೀವ್ರವಾದ ಸಾಮಾಜಿಕ ಆರ್ಥಿಕ ವೈಪರೀತ್ಯಗಳಿಂದಾಗಿ ಹುಲಿ ಸಂರಕ್ಷಣೆ ಆಧಾರ ತಪ್ಪಿ ಮತ್ತೆ ನೆನೆಗುದಿಗೆ ಬೀಳುವಂತಾಯಿತು. ಮೊದಲು ದೊರೆತಿದ್ದ ಸೀಮಿತ ಯಶಸ್ಸಿನ ಆಧಾರ ಸ್ಥಂಭಗಳು ಕುಸಿಯತೊಡಗಿದ್ದವು. ಇಂದಿರಾ ಗಾಂಧಿಯವರ ನಂತರದ ಪ್ರಧಾನಿಗಳ ಆಡಳಿತದಲ್ಲಿ ವನ್ಯಜೀವಿ ಸಂರಕ್ಷಣೆಗೆ ರಾಜಕೀಯ ಬೆಂಬಲ ದೊರಕದೆ ಹೋಯಿತು. ಹೊಸದಾಗಿ ಉದ್ಭವಿಸಿದ ರಾಜಕೀಯ ಸಂಸ್ಕೃತಿಯ ಆಶ್ರಯದಲ್ಲಿ ನೆಮ್ಮದಿಯನ್ನು ಕಂಡುಕೊಂಡ ಅಧಿಕಾರವರ್ಗ ಹಿಂದಿನ ಅಧಿಕಾರಿಗಳ ಕರ್ತವ್ಯನಿಷ್ಠ ಕಾಠಿಣ್ಯವನ್ನು ತೊರೆದು ನಯನಾಜೂಕುಗಳನ್ನು ಕಲಿತರು. 1970ರ ದಶಕದ ವನ್ಯಜೀವಿಪರವಾದವನ್ನು ಅಡಗಿಸುವಂತೆ ಮೇಲೆದ್ದ ಪರಿಸರವಾದೀ ಹೊಸ ಗಾಳಿಯೊಂದು ಬಾಯಿಮಾತಿನಲ್ಲಿ ಜೀವಿವೈವಿಧ್ಯವನ್ನು ಉಳಿಸುವ ಕಾಳಜಿಯನ್ನು ವ್ಯಕ್ತಪಡಿಸಿದರೂ ಸ್ಥಳೀಯ ಜನರು ಮಾರುಕಟ್ಟೆಯ ಲಾಭಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಅವಕಾಶವಿರಬೇಕೆಂದು ಪ್ರಬಲವಾಗಿ ಪ್ರತಿಪಾದಿಸತೊಡಗಿತು.
  • ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂರಕ್ಷಣಾವಾದಿ ಸಮೂಹಗಳೂ ಧನವಿನಿಯೋಗ ಸಂಸ್ಥೆಗಳೂ ಹುಲಿಯ ಕೊನೆಯ ನೆಲೆಯಾಗಿ ಅಳಿದುಳಿದ ಶೇ.3ರಷ್ಟು ಭೂಭಾಗದಲ್ಲೂ ಕೈಚಾಚುವ "ತಾಳಿಕೆಯ ಬಳಕೆ" (ಸಸ್ಟೇನಬಲ್ ಯೂಸ್) ಸಿದ್ಧಾಂತವನ್ನು ಪ್ರತಿಪಾದಿಸತೊಡಗಿದವು. ವನ್ಯಜೀವಿ ಸಮಸ್ಯೆಗಳ ಬಗೆಗೆ ಅಲ್ಪಸ್ವಲ್ಪ ತಿಳಿದವರೂ ಆಸಕ್ತಿಯೇ ಇಲ್ಲದವರೂ ರಾಜಕೀಯ ಲಾಭದ ದೃಷ್ಟಿಯಿಂದ ಈ ಸಿದ್ಧಾಂತ ಬಹು ಸಮಂಜಸವಾಗಿದೆಯೆಂದು ಹೇಳತೊಡಗಿದರು. ಹುಲಿ ಯೋಜನೆಯ 20ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣವೊಂದು ಜನರ ಅಗತ್ಯಗಳನ್ನು ಕುರಿತು ಚರ್ಚಿಸುವ ವೇದಿಕೆಯಾಗಿ ಮಾರ್ಪಟ್ಟಿತು. ಅದರಲ್ಲಿ ಭಾಗವಹಿಸಿದ್ದವರಿಗೆ ಹುಲಿಯ ಜೀವಿ ಪರಿಸ್ಥಿತಿಯ ಕನಿಷ್ಠ ಅಗತ್ಯಗಳ ವಿಚಾರವೊಂದೂ ನೆನಪಿಗೆ ಬಾರದೆಹೋಯಿತು. ಅಧಿಕೃತ ಸಾಕ್ಷ್ಯಚಿತ್ರವೊಂದು ಹುಲಿ ಸರ್ವತ್ರ ಸುಕ್ಷೇಮಿಯಾಗಿರುವುದೆಂದು ಘೋಷಿಸಿಯೇ ಬಿಟ್ಟಿತು. ಈ ಸಂಕುಚಿತ ಸಂತೃಪ್ತಿ ತಪ್ಪುದಾರಿಗೆಳೆಯುವಂಥದು. ವಾಸ್ತವದಲ್ಲಿ ಹುಲಿಗಳ ಬದುಕಿಗೆ ಈಗಾಗಲೇ ಇದ್ದ ಕಂಟಕಗಳ ಜೊತೆಗೆ ಮತ್ತೂ ಒಂದು ಆತಂಕ ತಲೆಯೆತ್ತತೊಡಗಿತ್ತು - ಪೂರ್ವದೇಶಗಳ ವೈದ್ಯರು ತಯಾರಿಸುವ ಔಷಧಕ್ಕಾಗಿ ಹುಲಿಯ ಎಲುಬುಗಳನ್ನು ಪೂರೈಸುವ ಹೊಸ ದಂಧೆ ಪ್ರಾರಂಭವಾಗಿತ್ತು.
  • ಅತಾರ್ಕಿಕ ಗಣತಿಯ ಫಲಿತಾಂಶಗಳಿಂದಲೂ ರಣಥಂಬೋರ್‌ನಲ್ಲಿ ತಮಗೆ ಪರಿಚಿತವಾಗಿದ್ದ ಹುಲಿಗಳ ಹತ್ಯೆಯಿಂದಲೂ ಬೇಸರಗೊಂಡಿದ್ದ ಕೆಲವು ಹುಲಿ ಸಂರಕ್ಷಣಾವಾದಿಗಳು ವ್ಯಕ್ತಪಡಿಸಿದ್ದ ಅಳುಕು-ಆತಂಕಗಳು 1993ರ ಮಧ್ಯಭಾಗದಲ್ಲಿ ಗಂಭೀರ ಸ್ವರೂಪವನ್ನೇ ತಾಳುವಂತಾಯಿತು. ದೆಹಲಿಯ ಸಂರಕ್ಷಣಾವಾದಿ ಅಶೋಕ್ ಕುಮಾರ್‌ರವರೂ ಅವರ ಸಹಚರರೂ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಹುಲಿಹತ್ಯೆಯನ್ನು ಸಾಕ್ಷ್ಯಾಧಾರಗಳ ಸಮೇತ ಬಹಿರಂಗಪಡಿಸಿದರು. ಆಗಿನ ಹುಲಿ ಯೋಜನೆಯ ನಿರ್ದೇಶಕರು, ಹುಲಿ ಮರಣಶಯ್ಯೆಯಲ್ಲಿರುವ ರೋಗಿಯೇನೂ ಅಲ್ಲವೆಂದೂ ಅತ್ಯಂತ ಸುರಕ್ಷಿತವಾಗಿದೆಯೆಂದೂ ಪ್ರತಿಪಾದಿಸುತ್ತಲೇ ಇದ್ದರು; ಇನ್ನೊಂದೆಡೆ ವ್ಯಾಪಕ ತನಿಖೆಗಳು ಪರಿಸ್ಥಿತಿ ವಿಷಮವಾಗಿರುವುದನ್ನು ಸಾರಿದವು. ಹುಲಿಗಳ ನಿಜವಾದ ಸಂಖ್ಯೆ ಮತ್ತು ಎಷ್ಟು ಹುಲಿಗಳನ್ನು ಬೇಟೆಯಾಡಲಾಗಿದೆಯೆನ್ನುವುದರ ಬಗೆಗೆ ನಿಖರವೆನ್ನಬಹುದಾದ ಅಂದಾಜುಗಳಿಲ್ಲದಿರುವುದರಿಂದ ಹುಲಿಬೇಟೆ ಹಾಗೂ ಅದರ ಪರಿಣಾಮಗಳ ನೈಜ ಸ್ವರೂಪವೇನೆಂದು ತಿಳಿಯಲಾಗಿಲ್ಲ. ಆದರೆ, ಇನ್ನು ಮುಂದಕ್ಕಂತೂ ಈ ಬಗೆಯ ಅಲಕ್ಷ್ಯ, ಉದಾಸೀನಗಳಿಗೆ ಅವಕಾಶವಿಲ್ಲವೆಂಬುದು ಖಂಡಿತ. (ಹುಲಿಸಂರಕ್ಷಣೆಯನ್ನು ಕುರಿತಾದ) "ಸಮಸ್ಯೆ ಗಂಭೀರವಾಗಿದೆ" ಎಂದು ಆಗಿನ ಪರಿಸರಖಾತೆಯ ಸಚಿವರು ಕೊನೆಗೂ ಒಪ್ಪಿಕೊಂಡರು.
  • ಇದರ ಫಲಸ್ವರೂಪವಾಗಿ ೧೯೭೩ರಲ್ಲಿ ೧೨೦೦ ರಷ್ಟಿದ್ದ ಹುಲಿಗಳ ಸಂಖ್ಯೆ ೯೦ರ ದಶಕದಲ್ಲಿ ೩೦೦೦ಕ್ಕೆ ಮುಟ್ಟಿತು. ಆದರೆ ೨೦೦೭ರಲ್ಲಿ ನಡೆದ ಹುಲಿಗಣತಿಯು ಭಾರತದಲ್ಲಿ ಇರುವ ಹುಲಿಗಳ ಒಟ್ಟು ಸಂಖ್ಯೆಯು ೧೪೧೧ ಎಂದು ತಿಳಿಸಿದೆ. ಈಚಿನ ದಿನಗಳಲ್ಲಿ ಮತ್ತೆ ಹೆಚ್ಚುತ್ತಿರುವ ಕಳ್ಳಬೇಟೆ ಹುಲಿಗಳ ಅವನತಿಗೆ ಕಾರಣವೆಂದು ಈ ವರದಿಯಲ್ಲಿ ತಿಳಿಸಲಾಗಿದೆ.[೨೮][೨೯][೩೦] (ಭಾರತದಲ್ಲಿ ಹುಲಿ ನೋಡಿ)

ರಷ್ಯಾ

[ಬದಲಾಯಿಸಿ]
೧೯ನೆಯ ಶತಮಾನದಲ್ಲಿ ಭಾರತದಲ್ಲಿ ಆನೆಯ ಮೇಲೆ ಕುಳಿತು ಹುಲಿ ಬೇಟೆ.
  • ಭೂಮಿಯ ಅತಿ ದೊಡ್ಡ ಹುಲಿಯಾದ ಸೈಬೀರಿಯಾದ ಹುಲಿ ಹೆಚ್ಚೂಕಡಿಮೆ ವಿನಾಶದಂಚನ್ನು ತಲುಪಿತ್ತು. ೧೯೪೦ರಲ್ಲಿ ಈ ತಳಿಯ ಕೇವಲ ೪೦ ಹುಲಿಗಳು ಜಗತ್ತಿನಲ್ಲಿದ್ದವು. ಅಪಾಯವನ್ನರಿತ ಅಂದಿನ ಸೋವಿಯತ್ ಒಕ್ಕೂಟದ ಸರಕಾರವು ಈ ಹುಲಿಗಳ ಬೇಟೆಯ ವಿರುದ್ಧ ಅತಿ ಕಠಿಣ ಕ್ರಮಗಳನ್ನು ಕೈಗೊಂಡು ಜೊತೆಗೆ ಹಲವು ಸಂರಕ್ಷಿತ ಹುಲಿ ವಲಯಗಳನ್ನು ರಚಿಸಿತು.
  • ಇದರ ಫಲಸ್ವರೂಪವಾಗಿ ೮೦ರ ದಶಕದ ಕೊನೆಯ ವೇಳೆಗೆ ಸೈಬೀರಿಯಾದ ಹುಲಿಗಳ ಸಂಖ್ಯೆ ಹಲವು ನೂರನ್ನು ತಲುಪಿತು. ಆದರೆ ೯೦ರ ದಶಕದಲ್ಲಿ ಸೋವಿಯೆತ್ ಒಕ್ಕೂಟ ಮುರಿದುಬಿದ್ದು ರಷ್ಯಾದ ಆರ್ಥಿಕಸ್ಥಿತಿ ದಯನೀಯವಾಗಿ ಕುಸಿದಾಗ ಈ ಹುಲಿವಲಯಗಳಲ್ಲಿ ಕಳ್ಳ ನಾಟಾ ಧಂದೆ ಮತ್ತು ಹುಲಿಗಳ ಕಳ್ಳಬೇಟೆ ಹೆಚ್ಚಿತು. ಆದರೆ ಈಚೆಗೆ ರಷ್ಯಾದ ಹಣಕಾಸು ಪರಿಸ್ಥಿತಿ ಉತ್ತಮಗೊಂಡಿದ್ದು ಹುಲಿ ಸಂರಕ್ಷಣೆಯತ್ತ ಮತ್ತೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಹುಲಿ ಮತ್ತು ಮಾನವ

[ಬದಲಾಯಿಸಿ]
ಕರ್ಣಾಟಕಬೇಲೂರಿನಲ್ಲಿರುವ ಹೊಯ್ಸಳ ಅರಸರ ಲಾಂಛನ. ಹುಲಿಯೊಂದಿಗೆ ಹೋರಾಡುತ್ತಿರುವ ಸಳ.
  • 18-19 ನೇ ಶತಮಾನಗಳ ವೇಳೆಗೆ ಏಷ್ಯಾದಲ್ಲಿ ವಸಾಹತುಷಾಹಿ ಬೇರೂರತೊಡಗಿದಂತೆಲ್ಲಾ ಚಿತ್ರ ಬದಲಾಯಿತು. ಪಾರಂಪರಿಕ ಬೇಟೆಯ ನೈಪುಣ್ಯದ ಜೊತೆಗೆ ಬಂದೂಕುಗಳ ನೆರವೂ ದೊರೆತು ವಸಾಹತುಗಾರರು, ರಾಜರುಗಳು, ಸಾಮಾನ್ಯರು ಹುಲಿಗಳ ವಿರುದ್ಧ ವಿನಾಶಕಾರಿ ಯುದ್ಧವನ್ನೇ ಸಾರುವುದಕ್ಕೆ ಅವಕಾಶವಾಯಿತು. ಅದೇ ವೇಳೆಗೆ ರಾಜಕೀಯ ಸ್ಥಿರತೆಯೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪರಿಣಾಮಕಾರಿ ಔಷಧಗಳ ಬಳಕೆಯೂ ಜನಸಂಖ್ಯಾ ಸಾಂದ್ರತೆಯ ಹೆಚ್ಚಳಕ್ಕೆ ಕಾರಣವಾಯಿತು. ಆವರೆಗೂ ಮಾನವ ವಸತಿ ಕೃಷಿಗಳಿಗೆ ಕಷ್ಟಸಾಧ್ಯವೆನಿಸಿದ್ದ ಅರಣ್ಯ ಪ್ರದೇಶದೊಳಗೆಲ್ಲಾ ಕಬ್ಬು, ಕಾಫಿ, ಟೀ ಮೊದಲಾದ ವಾಣಿಜ್ಯ ಬೆಳೆಗಳೂ ಸೇರಿದಂತೆ ವ್ಯಾಪಕ ಕೃಷಿ ಚಟುವಟಿಕೆಗಳು ಪ್ರಾರಂಭವಾದವು. ಈ ಕಾಲದಲ್ಲಿ ಹುಲಿಗಳ ಹಿತದೃಷ್ಟಿಯಿಂದ ಅನುಕೂಲಕರವಾಗಿದ್ದ ಏಕೈಕ ಅಂಶವೆಂದರೆ ಕುಮರಿ ಕೃಷಿಗೆ ಅವಕಾಶವಿರದೆ ಇದ್ದದ್ದು ಹಾಗೂ ವ್ಯಾಪಕವಾದ ಅರಣ್ಯ ವಿಸ್ತೀರ್ಣಗಳನ್ನು ಸಂರಕ್ಷಿಸಿ ಅರಣ್ಯಗಳೆಂದು (ರಿಸರ್ವ್ ಫಾರೆಸ್ಟ್) ತನ್ನ ಸ್ವಾಧೀನದಲ್ಲಿ ಇರಿಸಿಕೊಂಡ ಸರ್ಕಾರವು, ಹೆಚ್ಚುತ್ತಿದ್ದ ಜನಸಮುದಾಯಕ್ಕೆ ಈ ಅರಣ್ಯಗಳಲ್ಲಿ ಮರ ಕಡಿಯಲು ಇಲ್ಲವೆ ಕೃಷಿ ಮಾಡಲು ಅವಕಾಶ ನೀಡದೇ ಇದ್ದುದು. ಇದರಿಂದಾಗಿ, ಅರಣ್ಯ ಇಲಾಖೆಯವರೇ ತಾಳಿಕೆ ಮೀರಿ ಮರಕಡಿತದಲ್ಲಿ ತೊಡಗಿದ್ದರೂ 19ನೇ ಶತಮಾನದ ಮಧ್ಯದ ವೇಳೆಗೆ ಭಾರತ ಹಾಗೂ ಬರ್ಮಾಗಳಲ್ಲಿ ಬಹುತೇಕ ಹುಲಿಯ ನೆಲೆಗಳು ಸಂರಕ್ಷಿತ ಕಾಡುಗಳಲ್ಲಿ ಮಾತ್ರ ಉಳಿದುಕೊಂಡವು. ಇದೇ ವೇಳೆಗೆ ಕೃಷಿ ಚಟುವಟಿಕೆಗಳ ಅತಿಕ್ರಮಣದಿಂದ ಕಾಡುಗಳನ್ನು ರಕ್ಷಿಸಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದ ಚೀನಾ ಬಹುತೇಕ ಹುಲಿಯ ನೆಲೆಗಳನ್ನು ಕಳೆದುಕೊಂಡಿತು. ಜನಸಂಖ್ಯೆಯ ಒತ್ತಡ ತುಲನಾತ್ಮಕವಾಗಿ ಕಡಿಮೆ ಇದ್ದುದರಿಂದಲೇ ಥೈಲ್ಯಾಂಡ್, ಇಂಡೋ ಚೈನಾ, ಮಲಯಾ ಮತ್ತು ಸುಮಾತ್ರಗಳಲ್ಲಿ ಹುಲಿಯ ನೆಲೆಗಳು ಉಳಿದುಕೊಳ್ಳುವುದು ಸಾಧ್ಯವಾಯಿತು.
  • 20ನೇ ಶತಮಾನದ ಮಧ್ಯದ ವೇಳೆಗೆ ಬಾಲೀ ದ್ವೀಪದಲ್ಲಿದ್ದ ಹುಲಿಯ ಉಪಜಾತಿ ಅಳಿದುಹೋಯಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ ಹುಲಿಗಳ ಅಸ್ತಿತ್ವ ಅಪಾಯದ ದವಡೆಗೆ ಸಿಲುಕಿಬಿಟ್ಟಿತ್ತು. ಹುಲಿಗಳನ್ನು ಕೊಂದವರಿಗೆ ಅಧಿಕೃತವಾಗಿ ಬಹುಮಾನ ಧನವನ್ನು ಘೋಷಿಸಲಾಗಿದ್ದುದರಿಂದ ಹಳ್ಳಿಗರೂ ಬುಡಕಟ್ಟು ಜನರೂ ಸಂದರ್ಭ ಸಿಕ್ಕಿದ ಹಾಗೆಲ್ಲಾ ಹುಲಿಗಳಿಗೆ ಗುಂಡು ಹೊಡೆಯಲು, ವಿಷ ಉಣಿಸಲು, ಹೇಗೆ ಬೇಕಾದರೂ ಕೊಲ್ಲಲು ಕಾತರರಾಗಿದ್ದರು. ಹೆಚ್ಚು "ಆಹಾರ ಬೆಳೆಯಿರಿ" (ಗ್ರೋ ಮೋರ್ ಫುಡ್) ಆಂದೋಲನವಂತೂ ಜನರನ್ನು ಹುಲಿಯ ಅಳಿದುಳಿದ ನೆಲಗಳನ್ನೆಲ್ಲಾ ಕೃಷಿ ಭೂಮಿಗಳನ್ನಾಗಿ ಪರಿವರ್ತಿಸಲು ಪ್ರೋತ್ಸಾಹ ಕೊಟ್ಟಿದ್ದಲ್ಲದೆ ನಿರಂತರವಾದ ಮಾನವ-ಹುಲಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಇದೇ ಆಂದೋಲನದ ಭಾಗವಾಗಿ ಬಂದೂಕುಗಳ ಲೈಸೆನ್ಸ್‌ಗಳನ್ನು ಉದಾರವಾಗಿ ವಿತರಿಸಿದ್ದರಿಂದ ಈಗಾಗಲೇ ಪಾರಂಪರಿಕ ಬೇಟೆಯ ವಿಧಾನಗಳಿಂದ ನಡೆಯುತ್ತಿದ್ದ ಕಾಡು ಪ್ರಾಣಿಗಳ ಹತ್ಯೆ ಇನ್ನಷ್ಟು ಸುಲಭ ಸಾಧ್ಯವಾಯಿತು. ಮಹಾಯುದ್ಧದ ಆನಂತರದ ಕಾಲಕ್ಕೆ ಜೀಪುಗಳು ಮತ್ತು ಬ್ಯಾಟರಿ ಟಾರ್ಚುಗಳ ಬಳಕೆ ಪ್ರಾರಂಭವಾಗಿ, ಬೇಟೆಗಾರರಿಗೆ ಹೆಚ್ಚಿನ ಸೌಲಭ್ಯಗಳ ಪೂರೈಕೆಯಾದಂತಾಯಿತು. ಇದೇ ವೇಳೆಗೆ, ಲೈಸೆನ್ಸ್ ಪಡೆದ ವಿದೇಶಿ ಮತ್ತು ಭಾರತೀಯ ಮೃಗಯಾವಿನೋದಿ ಬೇಟೆಗಾರರೂ ವನ್ಯಜೀವಿ ಹತ್ಯೆಗೆ ತಮ್ಮ ಕಾಣಿಕೆ ಸಲ್ಲಿಸಿದರು. ಮೈಸೂರಿನ ಪ್ರಸಿದ್ಧ ಚರ್ಮ ಹದಗಾರರೊಬ್ಬರು ತಾವು 1940ರ ದಶಕದಲ್ಲಿ ಪ್ರತಿ ವರ್ಷ ಈ ಬೇಟೆಗಾರರು ತಂದೊಪ್ಪಿಸುತ್ತಿದ್ದ 600ಕ್ಕೂ ಹೆಚ್ಚು ಹುಲಿ ಚರ್ಮಗಳನ್ನು ಹದಗೊಳಿಸುತ್ತಿದ್ದುದಾಗಿ ಅಂದಾಜು ಮಾಡಿದ್ದಾರೆ. ಹಣಕ್ಕಾಗಿ ಬೇಟೆಯಾಡುವ ಸ್ಥಳೀಯರ ಬೇಟೆಯ ಸಂಭ್ರಮಕ್ಕೆ ಉದಾಹರಣೆ ಕೊಡುವುದಾದರೆ, "ನರಿಬೊಡಿ" (ಎಂದರೆ, ಹುಲಿಗೆ ಗುಂಡಿಕ್ಕುವ) ಎಂಬ ವಿಶೇಷಣಕ್ಕೆ ಪಾತ್ರರಾದ (ದಿವಂಗತ) ಚಂಗಪ್ಪ ಎನ್ನುವವರು 1947 ರಿಂದ 1964 ಅವಧಿಯಲ್ಲಿ ನಾಗರಹೊಳೆಯ ಸಮೀಪದ ತಮ್ಮ ಗ್ರಾಮದ ಆಸುಪಾಸಿನಲ್ಲೇ 27 ಹುಲಿಗಳನ್ನು ಕೊಂದಿದ್ದರು.
  • ಏಷ್ಯಾದಲ್ಲಿ ಮಾನವನು ಬೇಟೆಯಾಡುವ ಐದು ದೊಡ್ಡ ವನ್ಯಪ್ರಾಣಿಗಳಲ್ಲಿ ಹುಲಿ ಸಹ ಒಂದು. ಹುಲಿ ಬೇಟೆಯು ಇಲ್ಲಿ ಮಾನವನಿಗೆ ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಜೊತೆಗೆ ಹುಲಿ ಚರ್ಮವನ್ನು ಹೊಂದಿರುವುದು ಸಮಾಜದಲ್ಲಿ ಗೌರವದ ಸಂಕೇತವಾಗಿತ್ತು. ಮಾನವ ಮತ್ತು ಹುಲಿಗಳ ನಡುವೆ ಘರ್ಷಣೆ ಸಾಮಾನ್ಯವಾಗಿದ್ದು ಪರಿಣಾಮವಾಗಿ ಹುಲಿಗಳಲ್ಲಿ ಕೆಲವು ನರಭಕ್ಷಕಗಳಾದರೆ ಇನ್ನೊಂದೆಡೆ ಮಾನವನು ಹುಲಿಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವನು.
  • ಜೊತೆಗೆ ಹುಲಿಯ ಉಗುರು ಮತ್ತು ಇತರ ಕೆಲವು ಅಂಗಗಳನ್ನು ಮಾನವನು ಔಷಧಿಗಳಲ್ಲಿ ಮತ್ತು ಅಲಂಕಾರಿಕವಾಗಿ ಬಳಸುವನು. ಚೀನಾದಲ್ಲಿ ಹುಲಿಯ ಅಂಗಗಳಿಂದ ತಯಾರಿಸಲಾದ ಔಷಧಿಗಳ ಬಳಕೆ ಹೆಚ್ಚಿದ್ದು ಇದರ ಬಿಸಿ ಹುಲಿಗಳ ಸಂಖ್ಯೆಯ ಮೇಲೆ ತಾಗಿದೆ.[೩೧][೩೨][೩೩]

ಹುಲಿಗಳ ಸಂಖ್ಯೆ-ಇತ್ತೀಚಿನ ಗಣತಿ

[ಬದಲಾಯಿಸಿ]
  • 13/08/2016 ರಲ್ಲಿ:
ದೇಶ 2010 2011 2016
ಭಾರತ 1706 1411 2226
ಬಾಂಗ್ಲಾ 440 440 106
ನೇಪಾಳ 155/198 155 198
ಭೂತಾನ್ 50/75 75 103
ರಷ್ಯಾ 360 360 433
ಇಂಡೊನೇಷ್ಯಾ 225/670 325 371
ಮಲೇಷ್ಯಾ 300 500 250
ಚೀನಾ 7 45 7
ಥಾಯ್ಲೆಂಡ್ 185/221 200 189
ಲಾವೊಪಿಡಿಆರ್ 2/17 17 2
ವಿಯೆಟ್ನಾಂ 5/20 10 5
ಮ್ಯಾನ್ಮಾರ್ 7 85 -
ಕಾಂಬೋಡಿಯಾ 20 20 0
ಒಟ್ಟು 3068/4041 3643 3980

[೩೪]

ಹುಲಿ 2018ರ ಗಣತಿಯಂತೆ

[ಬದಲಾಯಿಸಿ]
  • 2018 ರ ಗಣತಿಯಂತೆ ಹುಲಿಗಳ ಸಂಖ್ಯೆ ಜಗತ್ತಿನಲ್ಲಿ 3980 ಇದೆ. ಅವುಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಹೆಚ್ಚು ಹುಲಿಗಳನ್ನು ಹೊಂದಿರುವುದು ಭಾರತ -ಭಾರತದಲ್ಲಿ 2264 ಹುಲಿಗಳಿರುವುದಾಗಿ ತಿಳಿದು ಬಂದಿದೆ. ಅವು 90,000 ಚದರ ಕಿ.ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ. ಆದರೆ ಕಾಡಿನಲ್ಲಿ ಅವುಗಳಿಗೆ ಆಹಾರಕ್ಕೆ ಬೇಕಾದ ಪ್ರಾಣಿಗಳ ಕೊರತೆಯಿಂದ ಕಾಡಿನ ಪಕ್ಕದ ಊರುಗಳಿಗೆ ಪ್ರವೇಶ ಮಾಡುತ್ತಿವೆ. ಸುಮಾತ್ರಾದಲ್ಲಿ 400; ಥಾಯ್ಲೆಂಡ್ ಪ್ರದೇಶದಲ್ಲಿ 340; ರಷ್ಯಾ, ಚೀನಾಗಳಲ್ಲಿ ಸೈಬೀರಿಯಾದ ದೊಡ್ಡ ಜಾತಿಯ ಹುಲಿ 540; ಥಾಯ್ಲೆಂಡ್ ಮ್ಯನ್ಮಾರ್ ಗಡಿ ಪ್ರದೇಶದಲ್ಲಿ 250 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಭಾರತ ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ 524 ಎಂದು ಲೆಕ್ಕಹಾಕಲಾಗಿದೆ.[೩೫]

ಗ್ಯಾಲರಿ

[ಬದಲಾಯಿಸಿ]

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ವಿಶ್ವ ಹುಲಿದಿನ
  2. Guggisberg, C. A. W. (1975). "Tiger Panthera tigris (Linnaeus, 1758)". Wild Cats of the World. New York: Taplinger Pub. Co. pp. 180–215. ISBN 978-0-7950-0128-4.
  3. Sanderson, E.; Forrest, J.; Loucks, C.; Ginsberg, J.; Dinerstein, E.; Seidensticker, J.; Leimgruber, P.; Songer, M.; Heydlauff, A.; O'Brien, T.; Bryja, G.; Klenzendorf, S.; Wikramanayake, E. (2006). Setting Priorities for the Conservation and Recovery of Wild Tigers: 2005–2015: The Technical Assessment (PDF). New York – Washington DC: WCS, WWF, Smithsonian, and NFWF-STF. Archived from the original (PDF) on 18 January 2012. Retrieved 7 August 2019.
  4. Hayward, M. W.; Jędrzejewski, W.; Jędrzejewska, B. (2012). "Prey preferences of the tiger Panthera tigris". Journal of Zoology. 286 (3): 221–231. doi:10.1111/j.1469-7998.2011.00871.x.
  5. Guggisberg, C. A. W. (1975). "Tiger Panthera tigris (Linnaeus, 1758)". Wild Cats of the World. New York: Taplinger Pub. Co. pp. 180–215. ISBN 978-0-7950-0128-4.
  6. Mazák, V. (1981). "Panthera tigris". Mammalian Species (152): 1–8. doi:10.2307/3504004. JSTOR 3504004.
  7. Miquelle, D. (2001). "Tiger". In MacDonald, D. (ed.). The Encyclopedia of Mammals (2nd ed.). Oxford University Press. pp. 18–21. ISBN 978-0-7607-1969-5.
  8. Godfrey, D.; Lythgoe, J. N.; Rumball, D. A. (1987). "Zebra stripes and tiger stripes: the spatial frequency distribution of the pattern compared to that of the background is significant in display and crypsis". Biological Journal of the Linnean Society. 32 (4): 427–433. doi:10.1111/j.1095-8312.1987.tb00442.x.
  9. Karanth, K. U. (2006). A View from the Machan: How Science Can Save the Fragile Predator. Delhi: Orient Blackswan. p. 42. ISBN 978-81-7824-137-1.
  10. Turner, C. G.; Ovodov, N. D.; Pavlova, O. V. (2013). Animal Teeth and Human Tools: A Taphonomic Odyssey in Ice Age Siberia. Cambridge: Cambridge University Press. p. 378. ISBN 978-1-107-03029-9.
  11. Balakrishnan, M. (2016). Wildlife Ecology and Conservation. 21st Century Biology and Agriculture. Jodhpur, Delhi: Scientific Publishers. p. 139. ISBN 978-93-87307-70-4.
  12. Nowell, K.; Jackson, P. (1996). Wild Cats: Status Survey and Conservation Action Plan (PDF). Gland, Switzerland: IUCN/SSC Cat Specialist Group. p. 56. ISBN 2-8317-0045-0.
  13. Guillery, R. W.; Kaas, J. H. (1973). "Genetic abnormality of the visual pathways in a "white" tiger". Science. 180 (4092): 1287–1289. Bibcode:1973Sci...180.1287G. doi:10.1126/science.180.4092.1287. PMID 4707916. S2CID 28568341.
  14. Thapar, V. (1989). Tiger: Portrait of a Predator. New York: Smithmark. ISBN 978-0-8160-1238-1.
  15. Mills, S. (2004). Tiger. London: BBC Books. p. 89. ISBN 978-1-55297-949-5.
  16. Burger, B. V.; Viviers, M. Z.; Bekker, J. P. I.; Roux, M.; Fish, N.; Fourie, W. B.; Weibchen, G. (2008). "Chemical Characterization of Territorial Marking Fluid of Male Bengal Tiger, Panthera tigris". Journal of Chemical Ecology. 34 (5): 659–671. doi:10.1007/s10886-008-9462-y. hdl:10019.1/11220. PMID 18437496. S2CID 5558760.
  17. Smith, J. L. David; McDougal, C.; Miquelle, D. (1989). "Scent marking in free-ranging tigers, Panthera tigris". Animal Behaviour. 37: 1–10. doi:10.1016/0003-3472(89)90001-8. S2CID 53149100.
  18. Perry, R. (1965). The World of the Tiger. p. 260.
  19. "Trouble for rhino from poacher and Bengal tiger". The Telegraph. 2008. Archived from the original on 27 September 2014. Retrieved 3 June 2014.
  20. "Tiger kills elephant at Eravikulam park". The New Indian Express. 2009. Archived from the original on 2016-05-11. Retrieved 2023-10-07.
  21. "Tiger kills adult rhino in Dudhwa Tiger Reserve". The Hindu. 2013.
  22. Sunquist, M. (2010). "What is a Tiger? Ecology and Behaviour". In R. Tilson; P. J. Nyhus (eds.). Tigers of the World: The Science, Politics and Conservation of Panthera tigris (Second ed.). London, Burlington: Academic Press. p. 19−34. ISBN 978-0-08-094751-8.
  23. Novak, R. M.; Walker, E. P. (1999). "Panthera tigris (tiger)". Walker's Mammals of the World (6th ed.). Baltimore: Johns Hopkins University Press. pp. 825–828. ISBN 978-0-8018-5789-8.
  24. Schaller, G. (1967). The Deer and the Tiger: A Study of Wildlife in India. Chicago: Chicago Press.
  25. Sankhala, p. 23
  26. Heptner, V. G. & Sludskij, A. A. (1992) [1972]. "Tiger". Mlekopitajuščie Sovetskogo Soiuza. Moskva: Vysšaia Škola [Mammals of the Soviet Union. Volume II, Part 2. Carnivora (Hyaenas and Cats)]. Washington DC: Smithsonian Institution and the National Science Foundation. pp. 95–202.
  27. Global Tiger Forum (2016). "Global wild tiger population status, April 2016" (PDF). Global Tiger Forum, WWF. Archived from the original (PDF) on 24 September 2018. Retrieved 22 November 2017.
  28. "Front Page : Over half of tigers lost in 5 years: census". The Hindu. 13 February 2008. Archived from the original on 20 February 2008. Retrieved 10 June 2010. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  29. Foster, P. (2007). "Why the tiger's future is far from bright". The Telegraph. Archived from the original on 10 January 2022. Retrieved 19 September 2018.
  30. "Tiger Reserves". ENVIS Centre on Wildlife & Protected Areas. Retrieved 19 September 2018.
  31. van Uhm, D.P. (2016). The Illegal Wildlife Trade: Inside the World of Poachers, Smugglers and Traders (Studies of Organized Crime). New York: Springer.
  32. "Traditional Chinese Medicine". World Wildlife Foundation. Archived from the original on 11 May 2012. Retrieved 3 March 2012.
  33. Jacobs, A. (2010). "Tiger Farms in China Feed Thirst for Parts". The New York Times.
  34. ಇನ್ನೂ ಕಾಲ ಮಿಂಚಿಲ್ಲ
  35. ಭಾರತದಲ್ಲಿ ಹುಲಿ

ಹೆಚ್ಚಿನ ಓದಿಗೆ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹುಲಿ&oldid=1265320" ಇಂದ ಪಡೆಯಲ್ಪಟ್ಟಿದೆ