ಕಾಕಸಸ್
ಕಪ್ಪುಸಮುದ್ರಕ್ಕೂ ಕ್ಯಾಸ್ಪಿಯನ್ ಸಮುದ್ರಕ್ಕೂ ನಡುವೆ ಇರುವ ಕೆರ್ಚ್ ಜಲಸಂಧಿಯ ಬಳಿಯಿಂದ ಹಿಡಿದು ಕ್ಯಾಸ್ಪಿಯನ್ ಸಮುದ್ರದ ವರೆಗೆ ವಾಯುವ್ಯದಿಂದ ಆಗ್ನೇಯಾಭಿಮುಖವಾಗಿ 900 ಮೈಲಿಗಳಷ್ಟು ದೂರ ಹಬ್ಬಿರುವ ಪರ್ವತ ಶ್ರೇಣಿ.[೧] ಸಮ ಹರಡು, ಕಿರು ಅಗಲ, ಉತ್ತರ ದಕ್ಷಿಣ ಪಕ್ಕಗಳ ಖಚಿತ ಹೊರರೇಖೆ-ಇವುಗಳಿಂದಾಗಿ ಅದು ಆಲ್ಪ್ಸ್ ಪರ್ವತಕ್ಕಿಂತ ಪಿರೆನೀಸ್ ಪರ್ವತವನ್ನೇ ಹೆಚ್ಚಾಗಿ ಹೋಲುತ್ತದೆ. ಪಿರೆನೀಸಿನಂತೆ ಇದೂ ಎತ್ತರ. ಆಲ್ಪ್ಸ್ ಪರ್ವತದಂತೆ ಇದನ್ನು ಕಣಿವೆಗಳು ಸೀಳಿಲ್ಲ. ಪಿರೆನೀಸ್ ಪರ್ವತದಂತೆ ಕಾಕಸಸಿನ ಅತ್ಯುನ್ನತ ಶಿಖರಗಳೂ ಇದರ ಉಪಶ್ರೇಣಿಗಳಲ್ಲಿವೆಯೇ ಹೊರತು ಪ್ರಧಾನ ಶ್ರೇಣಿಯಲ್ಲಿಲ್ಲ.
ಕಾಕಸಸ್ ಪರ್ವತಶ್ರೇಣಿಯ ವಿಭಾಗ
[ಬದಲಾಯಿಸಿ]ಕಾಕಸಸ್ ಪರ್ವತಶ್ರೇಣಿಯನ್ನು ಪಶ್ಚಿಮ, ಮಧ್ಯ ಮತ್ತು ಪೂರ್ವವಿಭಾಗಗಳೆಂದು ವಿಂಗಡಿಸಬಹುದು.
ಪಶ್ಚಿಮ ವಿಭಾಗ
[ಬದಲಾಯಿಸಿ]ಕೆರ್ಚ್ ಜಲಸಂಧಿಯ ಬಳಿಯಿಂದ ಉತ್ತರ ಇರಾನಿನ ಎಲ್‍ಬುರ್ಜ್ ಪರ್ವತದ ವರೆಗೆ ವ್ಯಾಪಿಸಿ, ಕಪ್ಪುಸಮುದ್ರಕ್ಕೆ ಸಮಾಂತರದಲ್ಲಿ 420 ಮೈಲಿಗಳಷ್ಟು ದೂರ ಸಾಗಿರುವುದು ಪಶ್ಚಿಮವಿಭಾಗ, ಪ್ರಧಾನ ಶ್ರೇಣಿಗೂ ಸಮುದ್ರಕ್ಕೂ ನಡುವೆ ಇಕ್ಕಟ್ಟಾದ ಕಣಿವೆಗಳಿಂದ ಪ್ರತ್ಯೇಕವಾಗಿರುವ ಎರಡು ಸಮಾಂತರದ ಶ್ರೇಣಿಗಳಿವೆ. ಪ್ರಧಾನಶ್ರೇಣಿಯ ಹಿಂದೆಯೂ ಇದೇ ರೀತಿ ಕಡಿದಾದ ಬೊಕೊವೊಯ್ ಖ್ರಿಬೆಟ್ ಕಣಿವೆಯಿಂದ ಪ್ರತ್ಯೇಕವಾಗಿರುವ ಹಾಗೂ ಪ್ರಧಾನ ಶ್ರೇಣಿಗೆ ಸಮಾಂತರದಲ್ಲಿರುವ ಮೂರನೆಯ ಉಪಶ್ರೇಣಿಯೊಂದುಂಟು. ಈ ಪ್ರದೇಶದಲ್ಲಿ ಮಳೆ ಹೆಚ್ಚಾಗಿ ಬೀಳುವುದರಿಂದಲೂ ಅನುಕೂಲ ಹವಾಮಾನವಿರುವುದರಿಂದಲೂ ಈ ಎಲ್ಲ ಶ್ರೇಣಿಗಳ ಅನೇಕ ಇಕ್ಕಟ್ಟಾದ ಕಂದರಗಳಲ್ಲಿ ಹಾಗೂ ಕಮರಿಗಳಲ್ಲಿ ಸಸ್ಯಸಂಪತ್ತು ಸಮೃದ್ಧವಾಗಿದೆ. ಈ ಭಾಗದ ಬೆಟ್ಟದ ಚಾಚುಗಳು ಸಮುದ್ರದ ಕಡೆ ಕಡಿದಾಗಿರುವುದರಿಂದಲೂ ತೀರಪ್ರದೇಶ ಕಗ್ಗಾಡಿನಿಂದ ಕೂಡಿರುವುದರಿಂದಲೂ ಪ್ರವೇಶ ಸುಲಭ ಸಾಧ್ಯವಾಗಿಲ್ಲ. ಕೆಲವು ಕಡೆ ಈ ಚಾಚುಗಳು 2.000'-3,000' ಎತ್ತರಕ್ಕಿವೆ. ಪ್ರಧಾನ ಶ್ರೇಣಿ ಪೂರ್ವದತ್ತ ಸಾಗಿದಂತೆ 10,000' ಗಳಿಂದ 12,000' ಗಳ ವರೆಗೆ ಏರುತ್ತದೆ. ಈ ವಿಭಾಗದಲ್ಲಿರುವ ಪ್ರಮುಖ ಶಿಖರಗಳಿವು: ಫಿಷ್ಟ್ (8,040'), ಓಷ್ಟೆನ್ (9,210'), ಷುಗುಜ್ (10,640'), ಸೈಷ್ (12,425'). ಪ್ರಧಾನ ಶ್ರೇಣಿ ಗಟ್ಟಿಯಾದ ಸ್ಫಟಿಕ ಮಾದರಿಯ ಕಲ್ಲುಬೆಟ್ಟಗಳಿಂದ ಕೂಡಿದೆ. ಉಪಶ್ರೇಣಿಗಳು ಸುಲಭವಾಗಿ ಬಿಡಿಸಬಹುದಾದ ಮೆತ್ತನೆಯ ಕಲ್ಲುಪದರಗಳಿಂದ ಕೂಡಿವೆ. ಅತ್ಯಂತ ಹಿರಿಯ ಶಿಖರಗಳಲ್ಲಿ 9,000' ಎತ್ತರದಲ್ಲಿ ಮಂಜು ಮುಸುಕಿರುತ್ತದೆ. ಕೆಲವು ಕಡೆ 8,000' ಎತ್ತರದಲ್ಲೂ ಹಿಮರೇಖೆಯುಂಟು. ಓಷ್ಟೆನ್ ಶೃಂಗದ ಪೂರ್ವದಲ್ಲಿ ಪ್ರಧಾನ ಪರ್ವತಪಂಕ್ತಿ ಸದಾ ಮಂಜಿನಿಂದ ಕೂಡಿ, ಅಲ್ಲಿಂದ ಅನೇಕ ಹಿಮನದಿಗಳು ಇಳಿಬಿದ್ದು ಕಣಿವೆಗಳಲ್ಲಿ ಸಾಗುತ್ತವೆ.
ಪಶ್ಚಿಮ ಕಾಕಸಸ್ ವಿಭಾಗದಲ್ಲಿರುವ ಕೆಲವೇ ಕಣಿವೆ ಮಾರ್ಗಗಳು ಬಹಳ ಎತ್ತರದಲ್ಲಿವೆ. ಪರ್ವತದ ಉತ್ತರಭಾಗದ ಮೇಡುಗಳು ಇಳಿಜಾರುಗಳಿಂದ ಕೂಡಿಲ್ಲದಿದ್ದರೂ ಕಪ್ಪುಸಮುದ್ರ ಮತ್ತು ಕೂಬ್ಯಾನ್ ಕಣಿವೆಗೂ ಆ ಕಣಿವೆಯ ಆಚಿನ ಮೈದಾನ ಪ್ರದೇಶಕ್ಕೂ ಸಂಪರ್ಕ ಸುಲಭವಲ್ಲ. ಪಶ್ಚಿಮದಿಂದ ಪೂರ್ವಕ್ಕೆ ಹೋಗುವ ಕಣಿವೆ ಮಾರ್ಗಗಳಲ್ಲಿ ಮುಖ್ಯವಾದವು-ಷೇಖ್ (5,435'), ಷೆಟ್ಲಿಬ್ (6,060'), ಸೆಯಷ್ಕ್ (6,880'), ಸಾಂಚಾರ್ (7,990'), ಸಾಂಚಾರ್ ಘಾಟ್ ಮಾರ್ಗಕ್ಕೂ ಎಲ್‍ಬುರ್ಜ್ ಪರ್ವತಕ್ಕೂ ನಡುವೆ ಮುರುಖ್ (11,500'), ಕ್ಲುಖೋರ್ (9,450') ಮತ್ತು ನಾಖರ್ (9,615') ಕಣಿವೆ ಮಾರ್ಗಗಳಿವೆ.
ಪಶ್ಚಿಮ ಕಾಕಸಸ್ ವಿಭಾಗದ ಪ್ರಾದೇಶಿಕ ಲಕ್ಷಣ ಮತ್ತು ಅನುಕೂಲ ವಾಯು ಗುಣದಿಂದ ಅದರ ದಕ್ಷಿಣದ ತೆರಪಿನಲ್ಲಿ ಗಿಡಮರಗಳು ಒತ್ತಾಗಿಯೂ ಯಥೇಚ್ಛವಾಗಿಯೂ ಬೆಳೆದು ನಿಂತಿವೆ. ವಿವಿಧ ಮರಗಳನ್ನೂ ಬಳ್ಳಿಗಳನ್ನೂ ಒಳಗೊಂಡ ದಟ್ಟ ಕಾಡುಗಳು ಈ ಪ್ರದೇಶದ ಶೇಕಡ 56ರಷ್ಟು ಭಾಗವನ್ನು ಆಕ್ರಮಿಸಿಕೊಂಡಿವೆ. ಆಷ್, ಫರ್, ಪೈನ್, ಬೀಚ್, ಎಲ್ಮ್, ಲೈಮ್, ಯ್ಯೂ, ಎಲ್ಡರ್, ವಿಲೊ, ಓಕ್ ಮೊದಲಾದ ಮಧ್ಯ ಐರೋಪ್ಯ ವೃಕ್ಷಗಳು ಈ ಅರಣ್ಯಗಳಲ್ಲಿ ಬೆಳೆಯುವುವಲ್ಲದೆ ನಿತ್ಯಹಸುರಿನ ಪೈನ್ ಜಾತಿಯ ಮರಗಳೂ ವ್ಯಾಪಕವಾಗಿ ಉಂಟು. ಅನೇಕ ಬಗೆಯ ಕುರುಚಲುಗಳನ್ನೂ ಜಲಸಸ್ಯಗಳನ್ನೂ ಇಲ್ಲಿ ಕಾಣಬಹುದು. ದ್ರಾಕ್ಷಿ, ಪೀಚ್, ದಾಳಿಂಬೆ, ಅಂಜೂರ ಮತ್ತು ಆಲೈವ್ ಇವು ಸಮುದ್ರಮಟ್ಟಕ್ಕೆ 1,500' ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತವೆ. ಜೆಸ್‍ನಟ್, ಏಪ್ರಿಕಾಟ್, ಸೇಬು, ಪೇರುಹಣ್ಣು, ಪ್ಲಂ, ಚೆರಿ, ಕರಬೂಜು-ಕಲ್ಲಂಗಡಿ, ಮುಸುಕಿನ ಜೋಳ, ಆಲೂಗೆಡ್ಡೆ, ಬಟಾಣಿ, ಹತ್ತಿ, ಬತ್ತ, ಹೊಗೆಸೊಪ್ಪು-ಇವು ಈ ಪರ್ವತಭಾಗದ ಬೆಳೆಗಳು.
ಪರ್ವತದ ಈ ಭಾಗದ ನೆರೆಯ ಕಡಲಕರೆ-ಬಹುತೇಕ ನೇರ, ರೇವುಪಟ್ಟಣಗಳು ವಿರಳ, ಕ್ರಿಮಿಯದ ಆಗ್ನೇಯ ತೀರದಲ್ಲಿರುವಂತೆ ಇಲ್ಲಿ ಹಲವು ಬೇಸಗೆಯ ಈಜುದಾಣಗಳಿವೆ. ನಾವರಸ್ಯೀಕ್ಸ್, ಗ್ಲೆಂಜಿಕ್, ಅನಪ, ಸುಖುಂ-ಕಾಲ್ಜ್, ಪೋಟಿ ಮತ್ತು ಬಾಟೂ ಮುಖ್ಯ ಲಂಗರು ನೆಲೆಗಳು.
ಮಧ್ಯ ವಿಭಾಗ
[ಬದಲಾಯಿಸಿ]ಪರ್ವತಶ್ರೇಣಿಯ ಮಧ್ಯವಿಭಾಗವನ್ನು ಮತ್ತೆ ಪಶ್ಚಿಮ ಪೂರ್ವಭಾಗಗಳಾಗಿ ವಿಂಗಡಿಸಬಹುದು. ಪಶ್ಚಿಮ ಉಪ ಭಾಗ ಎಲ್‍ಬುರ್ಜ್ ಪರ್ವತದಿಂದ ಪ್ರಾರಂಭವಾಗಿ ಕಾಸ್ಬೆಕ್ ಪರ್ವತ ಹಾಗೂ ಡೇರಿಯಲ್ ಘಾಟಿನ ವರೆಗೆ 200 ಮೈಲಿಗಳಷ್ಟು ಅಂತರ ಹೊಂದಿದೆ. ಈ ಭಾಗದಲ್ಲಿ ಇಡೀ ಕಾಕಸಸ್ ಶ್ರೇಣಿಯಲ್ಲೇ ಅತ್ಯಂತ ಎತ್ತರವಾದ ಶಿಖರಗಳಿವೆ. ಸಮುದ್ರಮಟ್ಟಕ್ಕೆ 15,000' ಗೂ ಹೆಚ್ಚು ಎತ್ತರದ ಶಿಖರಗಳಿವು: ಷ್ಕಾರಾಟೌ (17,040,') ಕಾಷ್ಟಾನ್-ಟೌ (16,875'), ಎಲ್‍ಬುರ್ಜ್ (ಪಶ್ಚಿಮಶಿಖರ: 18,465'; ಪೂರ್ವಶಿಖರ 18,345'), ಜೈಕಿಲ್ (17,780'), ಡಿಕ್-ಟೌ (17,050'), ಜಂಗಾ-ಟೌ (ಪಶ್ಚಿಮಶಿಖರ 16,660'; ಪೂರ್ವಶಿಖರ 16,525'), ಕಾಸ್ಬೆಕ್ (16,545'), ಮಿಷಿರ್ಘಿ-ಟೌ (ಪಶ್ಚಿಮಶಿಖರ 16,410'; ಪೂರ್ವ ಶಿಖರ 16,350'), ಅಡಿಷ್ ಅಥವಾ ಕಾಟ್ಯುನ್-ಟೌ (16,295'), ಗೆಸ್ಟೊಲ (15,940'), ಟೆಟ್‍ನುಲ್ಡ್ (15,920'), ಗಿಮಾರೈ-ಖೋಖ್ (15,670') ಉಷ್ಬ (ನೈಋತ್ಯ ಶಿಖರ 15,410'; ಈಶಾನ್ಯ ಶಿಖರ 15,400'), ಉಲ್ಲು-ಔಜ್ (15,350'), ಆಡೈ-ಖೋಖ್ (15,275'), ಟೆಖ್ ಟೆಂಜಿನ್ (15,135') ಮತ್ತು ಟಿಯುಟಿಯನ್-ಟೌ (15,115'). ಪರ್ವತಾರೋಹಿಗಳು ಹೆಚ್ಚಾಗಿ ಹತ್ತುವ ಶಿಖರಗಳು ಕಾಸ್ಬೆಕ್ ಮತ್ತು ಎಲ್‍ಬುರ್ಜ್.
ಪ್ರಧಾನ ಪರ್ವತಶ್ರೇಣಿಯ ತುದಿ 10,000' ಗಳಿಗೆ ಏರಿದರೂ ಅದರ ಉಪಶ್ರೇಣಿಯಾದ ಬೊಕೊವೊಯ್ ಖ್ರಿಬೆಟ್ ಅದಕ್ಕಿಂತಲೂ ಎತ್ತರವಾಗಿದೆ. ಬೊಕೊವೊಯ್ ಪರ್ವತಸಾಲಿನಲ್ಲಿ ಬೆಟ್ಟಗಳು ಅಂತಸ್ತು-ಅಂತಸ್ತುಗಳಾಗಿ ರಚಿತವಾಗಿ ಅನೇಕ ಚಾಚುಗಳಿಂದ ಕೂಡಿವೆ. ಬೆಟ್ಟಗಳ ನಡುವೆ ಕಡಿದಾಗಿರುವ ಕಂದರಗಳಲ್ಲಿ ಹಿಮನದಿಗಳು ಇಳಿದು, ಸುಲಭವಾಗಿ ಹರಿಯಲು ಅವಕಾಶವುಂಟಾದ ಕೂಡಲೆ ಆಳವಾದ ಕಮರಿಗಳಲ್ಲಿ ಪ್ರವಹಿಸಿ, ಉತ್ತರದ ಇಳುಕಲುಗಳಲ್ಲಿ ಸರಿದು, ಟೆರೆಕ್ ಅಥವಾ ಕೂಬ್ಯಾನ್ ನದಿಯನ್ನು ಸೇರುತ್ತವೆ; ಕೆಲವು ಹಿಮನದಿಗಳು ದಕ್ಷಿಣದ ಇಳಿಮೇಡಿನಲ್ಲಿ ಹರಿದು, ರಿಯಾನ್ ಅಥವಾ ಕೂರಾ ನದಿ ಸೇರುತ್ತವೆ. ಮೇಲ್ಮಟ್ಟದ ಒತ್ತಾದ ಕಣಿವೆಗಳಲ್ಲಿ ಸರೋವರಗಳಾಗಲಿ, ಜಲಪಾತಗಳಾಗಲಿ ಕಾಣಬರುವುದಿಲ್ಲ. ತಳಭಾಗದ ಕಣಿವೆಗಳಲ್ಲಿ ಸಹ ಸ್ವಿಟ್ಜರ್ಲೆಂಡಿನಲ್ಲಿರುವಂತೆ ಯಾವ ಸರೋವರಗಳೂ ಇಲ್ಲ. ಈ ಭಾಗದ ಅತ್ಯುನ್ನತ ಶಿಖರಗಳು ಪ್ರಧಾನ ಪರ್ವತಪಂಕ್ತಿಯಲ್ಲಿಲ್ಲ; ಬೊಕೊವೊಯ್ ಖ್ರಿಬೆಟ್ ಸಾಲಿಗೂ ಇತರ ಉಪಶ್ರೇಣಿಗಳಿಗೂ ಪ್ರಧಾನ ಪಂಕ್ತಿಯನ್ನು ಸೇರಿಸುವ ಕಿರಿಯ ಪರ್ವತಚಾಚುಗಳಲ್ಲಿವೆ.
ಮಧ್ಯ ಕಾಕಸಸ್ ಪರ್ವತದ ಪಶ್ಚಿಮಭಾಗದಲ್ಲಿ 9,500'-10,000' ಗಳ ಎತ್ತರದಲ್ಲಿ ನಿರಂತರ ಹಿಮಕಚವುಂಟು. ದಕ್ಷಿಣಮುಖದಲ್ಲಿ ಹಿಮರೇಖೆ ಇರುವುದು. ಇನ್ನೂ ಎತ್ತರದಲ್ಲಿ ಈ ಭಾಗದಲ್ಲಿ 900 ಹಿಮನದಿಗಳು ಸರಿದು ಬರುತ್ತವೆ. ಅವು ಸಮುದ್ರಮಟ್ಟಕ್ಕೆ ನಿರ್ದಿಷ್ಟವಾದೊಂದು ಎತ್ತರದ ವರೆಗೆ ಹೆಪ್ಪುಗಟ್ಟಿದ್ದು ಅಲ್ಲಿಂದ ಕೆಳಕ್ಕೆ ಬಂದಾಗ ಕರಗಿ ಹರಿಯುತ್ತವೆ. ಇಲ್ಲಿಯ ಹಿಮನದಿಗಳ ಪೈಕಿ ಬೆಂಜಿಂಗ್ ಅಥವಾ ಉಲ್ಲುವಿನ ಉದ್ದ 10 1/2 ಮೈ.; ಸಮುದ್ರಮಟ್ಟಕ್ಕೆ 6,537' ವರೆಗೆ ಇಳಿಯುತ್ತದೆ. ಲೆಕ್ಸೈರ್ 7 1/2 ಮೈ.; 5,690' ಮಟ್ಟಕ್ಕೆ ಇಳಿಯುತ್ತದೆ. ಸೈಯ ಅಥವಾ ಜೆ 6 ಮೈ.; 6,730' ಮಟ್ಟಕ್ಕೆ ಇಳಿಯುತ್ತದೆ. ಕಾರಗೊಂ 9 1/2 ಮೈ. ; 5.790' ಮಟ್ಟಕ್ಕೆ ಇಳಿಯುತ್ತದೆ. ಡೈವಡೋರಕ್ 2 1/2 ಮೈ.; 7,530' ಮಟ್ಟಕ್ಕೆ ಸರಿದುಬರುತ್ತದೆ. ಬಾಲ್ಡ್ ಅಥವಾ ಗೆರೆಷೋ 4 1/2 ಮೈ.; ಟುಯ್ಬರ್ 6 1/2 ಮೈ.; 6,565' ಮಟ್ಟಕ್ಕೆ ಇಳಿಯುತ್ತದೆ. ಸನ್ನೆರ್ ಅಥವಾ ಜನ್ನೆರ್ 6 1/2 ಮೈ.; 6,805' ಎತ್ತರದ ವರೆಗೆ ಇಳಿಯುತ್ತದೆ. ಆಡಿಷ್ ಅಥವಾ ಲರ್ಡ್‍ಖಟ್ ಹಿಮನದಿ 5 ಮೈ.; 7,450' ಮಟ್ಟಕ್ಕೆ ಇಳಿಯುತ್ತದೆ. ಪರ್ವತದ ಈ ಭಾಗದಲ್ಲಿ ಹಿಮನದಿಗಳು ಆವರಿಸಿರುವ ಪ್ರದೇಶ ಸುಮಾರು 650 ಚ.ಮೈ. ಇವುಗಳಲ್ಲಿ ಅತ್ಯಂತ ಉದ್ದವಾದ ಮಾಲಿವ್ 36 ಮೈ.ಗಳಷ್ಟು ದೂರ ಹಿಮಗಡ್ಡೆಗಳಿಂದ ಕೂಡಿದೆ. ಕೆಲವು ಹಿಮನದಿಗಳು ಹಿಂದಕ್ಕೆ ಸರಿಯುತ್ತಿವೆಯೆಂಬ ಅಭಿಪ್ರಾಯವುಂಟು.
ಮಧ್ಯ ಕಾಕಸಸಿನ ಪಶ್ಚಿಮ ಭಾಗದ ಪರ್ವತಪುಂಜ ಬಹಳ ಕಡಿದು. ಅಲ್ಲಿ ದಕ್ಷಿಣ ರಷ್ಯಕ್ಕೂ ಆರ್ಮೇನಿಯ ಮತ್ತು ಏಷ್ಯ ಮೈನರ್ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಡೇರಿಯಲ್ ಮತ್ತು ಮಾಮಿಸನ್ ಕಣಿವೆ ಮಾರ್ಗಗಳಿವೆ. ಕಾಸ್ಬೆಕ್ ಶಿಖರಕ್ಕೆ ಪೂರ್ವದಲ್ಲಿರುವ ಡೇರಿಯಲ್ ಘಾಟಿನಲ್ಲಿ 1811-64ರ ಕಾಲಾವಧಿಯಲ್ಲಿ ನಿರ್ಮಿಸಿದ ಜಾರ್ಜಿಯನ್ ಮಿಲಿಟರಿ ರಸ್ತೆ ವ್ಲಾಡಿಕಾವ್‍ಕಜ್‍ನಿಂದ ಟಿಪ್ಲ್ಲಿಸ್ ವರೆಗೆ ಹೋಗುತ್ತದೆ. ಇಬ್ಬದಿಯಲ್ಲೂ ಹಬ್ಬಿದ ಬೃಹದಾಕಾರದ ಪರ್ವತಗಳ ಮಧ್ಯೆ 8 ಮೈಲಿಗಳಷ್ಟು ಉದ್ದದ ಸುಂದರ ಕಣಿವೆಯಲ್ಲಿ ಈ ಮಾರ್ಗ ಸಾಗುತ್ತದೆ. ಕಡಿದಾದ ಈ ಕಣಿವೆಯಲ್ಲಿ ರಸ್ತೆಗೂ ಅದರ ಪಕ್ಕದಲ್ಲಿ ಹರಿಯುವ ಟೆರೆಕ್ ನದಿಗೂ ಮಾತ್ರವೇ ಸ್ಥಳವುಂಟು. ರಸ್ತೆ ಇನ್ನೂ ಮುಂದೆ ದಕ್ಷಿಣದಲ್ಲಿ ಪ್ರಧಾನಶ್ರೇಣಿಗೆ ಅಡ್ಡಲಾಗಿ ಹಾದು ಹೋಗಲು ಸಾಧನವಾಗುವಂತೆ ಇರುವ ಕೆಸ್ಚೊವಾಯ ಗೋರಾ ಘಾಟ್ ಸಮುದ್ರ ಮಟ್ಟಕ್ಕೆ 7,805' ಎತ್ತರದಲ್ಲಿದೆ. ಟೆರೆಕ್ ನದಿಯ ಭಾಗದಿಂದ ರಿಯಾನ್ ನದಿಯ ಕಂದರದ ಕುಟಾಯಿಸ್ ವರೆಗೆ ಹೋಗುವ ಒಸ್ಸೆಟಿಕ್ ಮಿಲಿಟರಿ ರಸ್ತೆ ಮಾಮಿಸನ್ ಕಣಿವೆಯ ಮೂಲಕವೇ ಸಾಗುತ್ತದೆ. ಅದನ್ನು 1889ರಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಚಿಸಲಾಯಿತು. ಈ ಪರ್ವತಭಾಗದ ಇತರ ಕಣಿವೆ ಮಾರ್ಗಗಳಲ್ಲಿ ಕುದುರೆಯ ಮೇಲೆ ಕುಳಿತು ಬೇಸಗೆಯ ಕೆಲವು ದಿನಗಳಲ್ಲಿ ಮಾತ್ರ ಸಂಚರಿಸಬಹುದು. ಅವುಗಳಲ್ಲಿ ಹೆಚ್ಚಾಗಿ ಉಪಯೋಗದಲ್ಲಿರುವುದು ದಕ್ಷಿಣದ ಉಪಶ್ರೇಣಿಯಲ್ಲಿರುವ ಲಾಟ್‍ಪಾರಿ ಕಣಿವೆ ಮಾರ್ಗ.
ಕಾಕಸಸ್ ಪರ್ವತದ ಈ ಭಾಗದ ದಕ್ಷಿಣದ ಇಳಿಮೇಡುಗಳಲ್ಲಿ, ವಿಶೇಷವಾಗಿ ಸ್ವನೇಟಿಯ ಪ್ರದೇಶದಲ್ಲಿ, ಗಿಡಮರಗಳು ಒತ್ತಾಗಿರುವುದಲ್ಲದೆ ಅಲ್ಲಿ ಬೆಳೆಯುವ ಪುಷ್ಪಗಳು ಆಲ್ಪ್ಸ್ ಪರ್ವತಗಳಲ್ಲಿ ಬೆಳೆಯುವವಕ್ಕಿಂತ ಹೆಚ್ಚು ವೈವಿಧ್ಯಪೂರಿತ. ಹಿರಿಯ ಜಾತಿಯ ಫರ್ನ್ ಸಸ್ಯಗಳು, ಬಳ್ಳಿಗಳು ಮತ್ತು ಗಗನಚುಂಬಿ ವೃಕ್ಷಗಳು ಈ ಪ್ರದೇಶವನ್ನು ರಮ್ಯಗೊಳಿಸಿವೆ. ಇಂಗ್ಲೆಂಡಿನ ತೋಟಗಳಲ್ಲಿ ಬೆಳೆಯುವ ಜಾತಿಯ ಹೂ ಗಿಡಗಳು ಇಲ್ಲಿ ಸ್ವಾಭಾವಿಕ ಪರಿಸರದಲ್ಲಿ ಹುಲುಸಾಗಿ ಬೆಳೆದಿವೆ. ಸುಂದರವಾದ ವನಸುಮಗಳು 13,000' ಎತ್ತರದ ಉತ್ತರದ ಮೇಡುಗಳಲ್ಲಿ ಯಥೇಚ್ಛವಾಗಿ ಉಂಟು. ವಾಲ್‍ನಟ್ ಮರಗಳು 5,400' ಮಟ್ಟದ ವರೆಗಿನ ಪ್ರದೇಶಗಳಲ್ಲಿಯೂ ದ್ರಾಕ್ಷಿ ಮತ್ತು ಉಪ್ಪುನೇರಳೆ 3,250' ಮಟ್ಟದಲ್ಲಿಯೂ ಬೆಳೆಯುತ್ತವೆ. ಮೂಲಿಕೆಗಳೂ ಪುಷ್ಪಸಿಂಚಿತ ನಿತ್ಯಹಸಿರು ಗಿಡಗಳೂ ಹುಲ್ಲುಗಾವಲುಗಳೂ 9,000 ಮಟ್ಟದ ವರೆಗೆ ಹರಡಿಕೊಂಡಿವೆ. ಪರ್ವತದ ಈ ಪ್ರದೇಶದಲ್ಲಿ ಗೋದಿ, ರೈ, ಓಟ್ಸ್, ಬಾರ್ಲಿ ಬೀನ್ಸ್, ಹೊಗೆಸೊಪ್ಪು ಇವನ್ನು ಹೇರಳವಾಗಿ ಬೆಳೆಯುತ್ತಾರೆ.
ಮಧ್ಯಕಾಕಸಸಿನ ಪೂರ್ವಭಾಗ ಕಾಸ್ಬೆಕ್ ಪರ್ವತ ಹಾಗೂ ಡೇರಿಯಲ್ ಕಣಿವೆಗಳಿಂದ ಹಿಡಿದು ಬಾಬಾ-ಡಾಘ್ ಪರ್ವತದ ವರೆಗೆ 230 ಮೈ. ದೂರ ವ್ಯಾಪಿಸಿದೆ. ಕಾಕಸಸ್ ಪರ್ವತ ತನ್ನ ಪರಮಾವಧಿ ಅಗಲವಾದ 230 ಮೈಲಿಗಳಿಗೆ ಹಿಗ್ಗಿರುವುದು ಈ ಭಾಗದಲ್ಲೇ. ಸರಾಸರಿ ಎತ್ತರ 10,000'. ಅದರ ಶಿಖರಗಳು. ಈ ಎತ್ತರದಿಂದ 2,000'-5.000' ವರೆಗೆ ಮೇಲೆದ್ದು ನಿಂತಿವೆ. ಶಿಖರಗಳಿಂದ ಇಳಿಯುವ ಹಿಮನದಿಗಳು ಇದೇ ಅನುಪಾತದಲ್ಲಿ ಇಳಿದು ಸಮುದ್ರಮಟ್ಟದಿಂದ 6,000'ಗಳಿಗೆ ಸರಿದಾಗ ಕರಗಿ ಹರಿಯುತ್ತವೆ. ಈ ಭಾಗದಲ್ಲಿ ಸಹ ಪ್ರಮುಖ ಶೃಂಗಗಳಿರುವುದು ಉಪಶ್ರೇಣಿಗಳಲ್ಲೆ. ಮುಖ್ಯವಾದುವು ಇವು; ಟಸ್ಮಿಯಾಕೊಂ-ಖೋಖ್ (13,570'), ಷಾನ್-ಟೌ (14,530'), ಕೆಡೆನೈಸ್-ಮಾಗಲಿ (13,840'), ಜಿಲ್ಲಾಖೋಖ್ (12,645'), ಜಿಕಾರಿ (12,565') ಚೌಖಿ (12,110'), ಜುಲ್ಡಿ-ಡಾಘ್ (12,430'), ಅಲಾ ಖುನ್-ಡಾಘ್(12,690') ಮತ್ತು ಮಾಘಿ-ಡಾಘ್ (12,445'). ಈ ಭಾಗದ ಪ್ರಧಾನ ಪಂಕ್ತಿಯ ಶಿಖರಗಳಿವು ; ಬೋರ್ ಬಾಲೋ (10,175'), ಮಹಾಷಾವಿ ಕಲ್ಡೆ (12,325'), ಮುರೋವ್ (11.110'), ಅನ್‍ಸಾಲ್ (12,740'), ಜಿನೋರ್-ರೊಸೊ (11,120') ಪ್ರಧಾನ ಶ್ರೇಣಿಗೆ ಮತ್ತೂ ಪೂರ್ವಕ್ಕಿರುವ ಶಿಖರಗಳಿವು: ಟ್ರಪಾನ್-ಡಾಘ್ (13,765'), ಬಜಾರ್‍ಡೈಯುಜ್ ಅಥವಾ ಕಿಚ್ಚೆನ್ (14,727'). ಅದೇ ದಿಕ್ಕಿನಲ್ಲಿ, ಪ್ರಧಾನ ಪಂಕ್ತಿಯ ಪಕ್ಕಕ್ಕಿರುವ ಷಾ-ಡಾಘ್ (13,955'), ಷಾಲ್‍ಬಜ್ (13,675') ಮತ್ತು ಮುಲ್ಕಾಮಡ್ (12,750').
ಉತ್ತರದಲ್ಲಿ ಪ್ರಧಾನ ಪಂಕ್ತಿಗೆ ಜೋಡಿಸಿದಂತಿದ್ದು ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರದೊಳಕ್ಕೆ ಚಾಚಿರುವ ವಿಶಾಲವಾದ ದಘೇಸ್ತಾನ್ ಪ್ರಸ್ಥಭೂಮಿಯೂ ಉತ್ತರದಲ್ಲಿರುವ ಸುಂದರ ಟೆರೆಕ್ ಕಣಿವೆಗಳೂ ಪರ್ವತದ ಈ ಭಾಗದ ವೈಶಿಷ್ಟ್ಯ. ಆಂಡಿ ಪರ್ವತದ ಅಡ್ಡಸಾಲೇ ಈ ಪ್ರಸ್ಥಭೂಮಿಯ ಒಂದು ಕೊನೆ. ಪ್ರಸ್ಥಭೂಮಿಯ ಉಳಿದ ಪ್ರದೇಶದಲ್ಲಿ 7,500' ಗಳಿಂದ 12,500' ಗಳ ವರೆಗಿನ ಹಲವಾರು ಸಮಾಂತರವಾದ ಹಾಗೂ ಒರಟು ಶೃಂಗಗಳುಂಟು. ಈ ಪ್ರದೇಶದಲ್ಲಿ ಮರಗಳಿಲ್ಲವೆಂದೇ ಹೇಳಬೇಕು.
ಪರ್ವತದ ಈ ಭಾಗದ ಕೆಲವು ಶಿಖರಗಳಲ್ಲಿ ಅದರಲ್ಲೂ ಡಿಕ್ಲೋಸ್‍ಮಾಟ ಶಿಖರದಲ್ಲಿ ನೀರ್ಗಲ್ಲ ನದಿಗಳೂ ಹೆಪ್ಪುಗಟ್ಟಿ ಮರಳಿನಿಂದ ಕೂಡಿ ಹರಿಯುವ ನದಿಗಳೂ (ನೇವೆ) ಇಳಿದುಬರುತ್ತವೆ. ಡಿಕ್ಲೋಸ್‍ಮಾಟ ಶಿಖರದ ಹಿಮನದಿಗಳು ಉತ್ತರದ ಕಡೆ 7,700' ಗಳಿಗೂ ದಕ್ಷಿಣದ ಕಡೆ 8,350'ಗಳಿಗೂ ಇಳಿಯುತ್ತವೆ. ಈ ಭಾಗದ ಕಣಿವೆಗಳು ಎಲ್‍ಬುರ್ಜ್ ಮತ್ತು ಕಾಸ್ಬೆಕ್ ಪರ್ವತಗಳ ನಡುವೆ ಇರುವ ಕಣಿವೆಗಳಿಗಿಂತ ತಗ್ಗಿನವು. ಬಲು ಎತ್ತರದ ಕಣಿವೆಗಳು ಪರ್ವತದ ಪೂರ್ವವಿಭಾಗದ ಕಣಿವೆಗಳಂತೆ ಕಡಿದಾಗಿದ್ದು ಭಾರಿ ಪ್ರಪಾತಗಳಿಂದ ಕೂಡಿವೆ. ಇಲ್ಲಿಯ ಕಣಿವೆಗಳ ಪೈಕಿ ಕೆಸ್ಟೊವೊಯ ಗೋರ (7,805') ಇರುವುದು ಡೇರಿಯಲ್ ಕಣಿವೆಗೆ ದಕ್ಷಿಣದಲ್ಲಿರುವ ಜಾರ್ಜಿಯನ್ ಮಿಲಿಟರಿ ಮಾರ್ಗದಲ್ಲಿ. ಕೊಡೊರ್ (9,300'), ಸಟ್ಸ್‍ಖೇನಿ ಮತ್ತು ಗೂಡೂರ್ (10,120') ಹಾಗೂ ಸಾಲ್ವಟ್ (9,280') ಕಣಿವೆಗಳು ಅಖಿಟಿ ಮಿಲಿಟರಿ ಮಾರ್ಗದಲ್ಲಿವೆ. ಈ ಭಾಗದ ವೃಕ್ಷಗಳು ಪರ್ವತದ ಪಶ್ಚಿಮತುದಿಯ ವೃಕ್ಷಗಳನ್ನೇ ಹೋಲುತ್ತವೆ.
ಪೂರ್ವ ವಿಭಾಗಭ
[ಬದಲಾಯಿಸಿ]ಕಾಕಸಸ್ ಪರ್ವತದ ಪೂರ್ವಭಾಗ ಬಾಬಾಡಾಘ್ ಪರ್ವತದ ಪೂರ್ವದಲ್ಲಿ ಕ್ರಮಕ್ರಮವಾಗಿ ಕ್ಯಾಸ್ಪಿಯನ್ ಸಮುದ್ರದ ಕಡೆಗೆ ಇಳಿದು ಅಪ್ಷಿರಾನ್ ಪರ್ಯಾಯದ್ವೀಪದಲ್ಲಿ ಕೊನೆಗೊಳ್ಳುತ್ತದೆ. ಆದರೂ ಅದು ಕ್ಯಾಸ್ಪಿಯನ್ ಸಮುದ್ರದ ಜಲಮಟ್ಟದ ತಳದಲ್ಲಿಯೇ ಮುಂದುವರಿದು ಸಮುದ್ರಕ್ಕೆ ಪೂರ್ವದಿಕ್ಕಿನಲ್ಲಿ ಕೋಪೆಟ್-ಡಾಘ್ ಪರ್ವತದ ರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ. ಆ ಪರ್ವತ ಇರುವುದು ಪರ್ಷಿಯದ ಈಶಾನ್ಯ ಅಂಚಿನಲ್ಲಿ. ಕಾಕಸಸ್ ಪರ್ವತದ ಪೂರ್ವಭಾಗದಲ್ಲಿ ಯಾವ ಶಿಖರವೂ 9,000' ಗಿಂತ ಹೆಚ್ಚು ಎತ್ತರದಲ್ಲಿಲ್ಲ. ಪ್ರಧಾನ ಶ್ರೇಣಿಯ ಶಿಖರಗಳಲ್ಲಿ ಹಿಮ ಕವಿಯುವುದಿಲ್ಲ. ಅಲ್ಲಿಯ ಪ್ರಮುಖ ಘಾಟ್ ಮಾರ್ಗ 4.355' ಮಟ್ಟದಲ್ಲಿರುವ ಆಲ್ಟಿ-ಅಗೆಜ್.
ಪರ್ವತದ ಈ ಭಾಗದಲ್ಲಿ ಉತ್ತರ-ದಕ್ಷಿಣ ದಿಕ್ಕುಗಳ ನಡುವೆ ವಾಯುಗುಣದಲ್ಲಿ ಬದಲಾವಣೆ ಕಾಣುವುದಲ್ಲದೆ ಪ್ರಕೃತಿಯಲ್ಲಿಯೂ ವ್ಯತ್ಯಾಸವುಂಟು. ಹೆಚ್ಚು ಮಳೆಯಾದರೂ ಬೆಚ್ಚನೆಯ ವಾಯುಗುಣ ಇರುವ ನೈಋತ್ಯದ ಇಳಿಜಾರುಗಳ ಮತ್ತು ಕಣಿವೆಗಳ ಪ್ರದೇಶವೆಲ್ಲ ಮನಮೋಹಕವಾದ ಅರಣ್ಯಗಳಿಂದ ತುಂಬಿದೆ. ಆದರೆ ಒಳ ನಾಡಿನ ಸುರಾಂ ಅಥವಾ ಮೆಸ್ಕೆಸ್ ಶ್ರೇಣಿಗಳಲ್ಲಿ ಬೆಂಗಾಡುಗಳೇ ಹೆಚ್ಚು. ಬಂಡೆಗಳಿಲ್ಲದ ಕಡೆ ಪರ್ವತದ ಇಳಿಮೇಡುಗಳು ಹುಲ್ಲುಗಾವಲುಗಳಿಂದ ಕೂಡಿವೆ. ಆದರೆ ನದಿಯ ಕಮರಿಗಳಲ್ಲಿಯ ಪ್ರಕೃತಿದೃಶ್ಯ ಆಲ್ಪ್ಸ್ ಪರ್ವತದ ಕಣಿವೆಗಳ ದೃಶ್ಯಕ್ಕಿಂತಲೂ ಹೆಚ್ಚು ಮನೋಹರ. ಬಾಕು-ಬಟೂಮಿ ರೈಲುಮಾರ್ಗ ಹಾದುಹೋಗುವುದು ಸುರಾಂ ಪರ್ವತ ಸಾಲುಗಳಿಗೆ ಅಡ್ಡಲಾಗಿ.
ನದಿಗಳು
[ಬದಲಾಯಿಸಿ]ಕಾಕಸಸಿನ ಹಿರಿಯ ನದಿಗಳೆಲ್ಲ ಪರ್ವತದ ಮಧ್ಯಭಾಗದಲ್ಲಿಯೆ ಉದ್ಭವಿಸುತ್ತವೆ. ರಭಸವಾಗಿ ಹರಿಯುವ ಮಜಿಂಟ ಪಿಜೌವ್, ಬಿಜೈಬ್ ಮತ್ತು ಕೊಡೊರ್ ನದಿಗಳು ಎಲ್‍ಬುರ್ಜ್ ಪರ್ವತದ ಪಶ್ಚಿಮದಲ್ಲಿ ಹರಿಯುತ್ತವೆ.[೨] ಇನ್ಗುರ್, ಟಷ್ಕೇನಿಸ್-ಟಷ್ಕಲಿ, ರಿಯಾನ್ ಮತ್ತು ಅದರ ಕೂಡುನದಿಗಳು ಉದ್ದವಾಗಿರುವುವಲ್ಲದೆ ರಭಸವಾಗಿಯೂ ಹರಿಯುತ್ತವೆ. ಅವು ಎಲ್‍ಬುರ್ಜ್ ಮತ್ತು ಕಾಸ್ಬೆಕ್ ಪರ್ವತಗಳ ನಡುವಣ ಮಹಾ ಹಿಮಪ್ರದೇಶಕ್ಕೆ ಸೇರಿದವು. ರಿಯಾನ್ ನದಿಯನ್ನು ಪೂರ್ವಿಕರು ಫಾಸಿಸ್ ಎಂದು ಕರೆಯುತ್ತಿದ್ದರು. ಪ್ರಾಚೀನ ಗ್ರೀಕರು ಕಾಲ್ಚಿಸ್ ಎಂದು ಕರೆಯುತ್ತಿದ್ದ ಪ್ರದೇಶದಲ್ಲಿ ಅದು ಹರಿಯುತ್ತದೆ. ಕೂರಾದ ಉಪನದಿಗಳಾದ ಲ್ಯಾಖ್ವಾ ಮತ್ತು ಅರಗ್ವಗಳು ಪ್ರಧಾನ ಶ್ರೇಣಿಯ ಜಲವನ್ನು ಕಾಸ್ಬೆಕ್ ಪರ್ವತದ ದಕ್ಷಿಣಕ್ಕೆ ಸಾಗಿಸುತ್ತದೆ. ಉಳಿದ ಉಪನದಿಗಳು ಸಂಗ್ರಹಿಸುವುದು ಮೂಲಶ್ರೇಣಿಯ ಪೂರ್ವಭಾಗದ ನೀರನ್ನು. ಈ ಪ್ರದೇಶದಲ್ಲಿ ಹರಿಯುವ ಆರಾಸ್ ಮಹಾನದಿ ಹುಟ್ಟುವುದು ಕಾಕಸಸ್ ಪರ್ವತದಲ್ಲಲ್ಲ; ಅರಾರತ್ ಪರ್ವತದ ನೈಋತ್ಯಕ್ಕೆ ಅತ್ಯಂತ ದೂರದಲ್ಲಿರುವ ಆರ್ಮೀನಿಯದ ಪ್ರಸ್ಥಭೂಮಿಯಲ್ಲಿ. ಕಾಕಸಸ್ ಪರ್ವತದ ಮಧ್ಯಭಾಗದಲ್ಲಿ ಹುಟ್ಟಿ ಹರಿಯುವ ನದಿಗಳು ದಕ್ಷಿಣಕ್ಕೆ ಹರಿಯುವ ನದಿಗಳಿಗಿಂತ ಉದ್ದ. ಅವುಗಳಲ್ಲಿ ಮುಖ್ಯವಾದವು ಕೂಬ್ಯಾನ್, ಟೆರಕ್, ಮಲ್ಕಾ ಬಕ್ಸಾನ್, ಛೆಗೆಂ, ಛೆರೆಕ್, ಉರುಖ್ ಮತ್ತು ಆರ್ಡನ್. ಟೆರೆಕ್ ನದಿಯ ಉತ್ತರಕ್ಕೆ ಬೆಂಗಾಡಿನಲ್ಲಿ ಹರಿಯುವ ಕೂಮಾ ನದಿ ಹುಟ್ಟುವುದು ಪ್ಯಟಿಗೋರಸ್ಕ್ ಬಳಿಯ ಪರ್ವತಗಳ ನಡುವೆ. ಇದು ಸಮುದ್ರವನ್ನು ಸೇರುವುದಕ್ಕೆ ಮುಂಚೆ ಬಂಜರು ಮೈದಾನಗಳಲ್ಲಿ ಬಹಳವಾಗಿ ಇಂಗುತ್ತದೆ. ದಘೇಸ್ಥಾನದ ಎತ್ತರವಾದ ಮಲೆನಾಡು ಪ್ರಾಂತ್ಯಗಳಲ್ಲಿ ಹರಿಯುವ ನಾಲ್ಕು ಪ್ರಮುಖ ನದಿಗಳು ಸಂಗಮಿಸಿದಾಗ ತಳೆಯುವ ಹೆಸರು ಸಮೂರ್, ಈ ನದಿ ಬೀಳುವುದು ಕ್ಯಾಸ್ಪಿಯನ್ ಸಮುದ್ರಕ್ಕೆ. ಕಾಕಸಸ್ ಪರ್ವತದ ಹಿರಿಯ ನದಿಗಳು-ಮುಖ್ಯವಾಗಿ ಕೂಬ್ಯಾನ್, ರೀಯಾನ್ ಮತ್ತು ಟೆರೆಕ್ ನದಿಗಳು-ವಿದ್ಯುಚ್ಛಕ್ತಿಯ ಉತ್ಪಾದನೆಗೂ ವ್ಯವಸಾಯಕ್ಕೂ ಉಪಯುಕ್ತವಾದವು.
ಅಗ್ನಿಪರ್ವತಗಳು
[ಬದಲಾಯಿಸಿ]ಕಾಕಸಸಿನ ಪ್ರಧಾನ ಮತ್ತು ಉಪಶ್ರೇಣಿಗಳು ಸಂಧಿಸುವ ಹಲವು ಕಡೆಗಳಲ್ಲಿ ಒಮ್ಮೆ ಜೀವಂತವಾಗಿದ್ದು ಈಗ ಸ್ತಬ್ಧವಾಗಿರುವ ಜ್ವಾಲಾಮುಖಿಗಳುಂಟು. ಅವುಗಳಲ್ಲಿ ಪ್ರಸಿದ್ಧವಾದವು ಎಲ್‍ಬುರ್ಜ್ ಮತ್ತು ಕಾಸ್ಪಕ್ ಪರ್ವತಗಳಲ್ಲಿವೆ. ಕಾಕಸಸ್ ಪರ್ವತದ ಪೂರ್ವ ಅಂಚಿನಲ್ಲಿರುವ ಷೆಮಖ ನಗರದ ಬಳಿಯ ಅಗ್ನಿಪರ್ವತ 1859, 1872 ಮತ್ತು 1902ರಲ್ಲಿ ಉಕ್ಕಿತ್ತು. ಅದರ ಪಕ್ಕದ ಅಪ್ಷಿರಾನ್ ಪರ್ಯಾಯದ್ವೀಪದಲ್ಲಿ ಮಣ್ಣೆರಚುವ ಅನೇಕ ಪರ್ವತಗಳುಂಟು. ಕಾಕಸಸಿನ ಉತ್ತರದ ತಪ್ಪಲಿನ ಉದ್ದಕ್ಕೂ ಅನೇಕ ಕಡೆ ಖನಿಜಸತ್ತ್ವವುಳ್ಳ ಬಿಸಿನೀರಿನ ಊಟೆಗಳಿವೆ. ಪ್ಯಾಟಿಗೋರಸ್ಕ್, ಝೆಲೆಸ್ನೋವೊಡಸ್ಕ್, ಎಸ್ಸೆನ್‍ಟುಕಿ ಮತ್ತು ಕ್ಲಿಸ್ಲೊವೊಡಸ್ಕ್‍ಗಳಲ್ಲಿ ಅವನ್ನು ಕಾಣಬಹುದು. ದಘೇಸ್ತಾನದ ಬೆಟ್ಟಗಾಡಿನ ಈಶಾನ್ಯ ಸ್ಥಳಗಳಲ್ಲಿ ಬುಗ್ಗೆಗಳುಂಟು. ಅರಾರತ್, ಅಲಗೊಜ್, ಅಕ್ಮಂಗನ್, ಸಂಸರ್, ಗೊಡೊರ್ಬಿ ಮತ್ತು ಅಬುಲ್ ಬೆಟ್ಟಗಳ ದಕ್ಷಿಣಕ್ಕೆ, ಆರ್ಮೇನಿಯದ ಪ್ರಸ್ಥಭೂಮಿಯ ಉತ್ತರದ ಅಂಚಿನಲ್ಲಿ, ಅಗ್ನಿಪರ್ವತಗಳಿದ್ದ ಚಿಹ್ನೆಗಳಿವೆ.
ಭೂ ರಚನೆ
[ಬದಲಾಯಿಸಿ]ಕಾಕಸಸ್ ಪರ್ವತ ಬೀಸಣಿಗೆಯ ಆಕಾರದಲ್ಲಿ ಬಾಗಿದೆ. ಅದರ ಭೌಗೋಳಿಕ ಪ್ರದೇಶ ಕಪ್ಪುಸಮುದ್ರದಿಂದ ಕ್ಯಾಸ್ಪಿಯನ್ ಸಮುದ್ರದವರೆಗೆ ವ್ಯಾಪಿಸಿದ್ದು, ಇಡೀ ಪರ್ವತ ಪಂಕ್ತಿಗಳು ಇರುವುದು ಸೋವಿಯತ್ ದೇಶದ ಗಡಿಯೊಳಗೆ. ಪರ್ವತದ ಮಧ್ಯಭಾಗವೆಲ್ಲ ಬಲು ಗಟ್ಟಿಯಾದ ಸ್ಫಟಿಕಮಾದರಿಯ ಕಲ್ಲುಬೆಟ್ಟಗಳಿಂದ ಕೂಡಿದೆ. ಈ ರಚನೆ ಕ್ರಮೇಣ ಪೂರ್ವಭಾಗದಲ್ಲಿ ಕಾಣದಂತಾಗುತ್ತದೆ. ಕಲ್ಲುಬೆಟ್ಟಗಳಲ್ಲಿ ಆದಿ ಭೂಯುಗದ ಖನಿಜ ಪದರಶಿಲೆಗಳೂ ಜೂರಾಜ್ ಪರ್ವತದಲ್ಲಿರುವಂಥ ಸುಣ್ಣಕಲ್ಲು ಪದರಗಳೂ ಉಂಟು. ಪರ್ವತದ ಉತ್ತರ ಭಾಗದಲ್ಲಿ ಸಹ ಇದೇ ಬಗೆಯ ಸುಣ್ಣಕಲ್ಲು ಪದರಗಳೂ, ಸೀಮೆಸುಣ್ಣ ಮಾದರಿಯ ಪದರಗಳೂ ಹೇರಳವಾಗಿವೆ. ಪರ್ವತದ ದಕ್ಷಿಣ ಭಾಗದಲ್ಲಿರುವವು ಮೂರನೆಯ ಭೂ ಯುಗದ ಶೇಖರಣೆಗಳನ್ನುಳ್ಳ ದ್ವಿತೀಯ ಪದರಗಳು. ಪೂರ್ವಕ್ಕೆ ಸ್ಫಟಿಕ ಅಥವಾ ಬೆಣಚುಕಲ್ಲು ಬೆಟ್ಟಗಳಿಲ್ಲ. ಉತ್ತರಭಾಗ ಎರಡನೆಯ ಭೂಯುಗದ ಶಿಲಾಸ್ತರಗಳಿಂದ ಕೂಡಿದ್ದು. ಆದಿಭೂಯುಗದ ಪದರಗಳು ಹಂತ ಹಂತಗಳಲ್ಲಿ ಕೂರಾ ಬಯಲಿನಲ್ಲಿ ಇಳಿಯುತ್ತವೆ. ಅವುಗಳ ತಳದಲ್ಲಿ ಎರಡನೆಯ ಭೂಯುಗದ ಖನಿಜಪದರಗಳು ಮುಂದುವರಿದಿವೆ. ಕಾಕಸಸ್ ಶಿಲಾಪದರಗಳಲ್ಲಿ ಪ್ರಾಣಿ ಹಾಗೂ ಸಸ್ಯಗಳ ಪಳೆಯುಳಿಕೆಗಳಿಲ್ಲ. ಆದಿ ಭೂಯುಗದಿಂದಲೂ ಅಸ್ತಿತ್ವದಲ್ಲಿರುವ ಈ ಪರ್ವತಶ್ರೇಣಿಯ ಬೆಳೆವಣಿಗೆಯಲ್ಲಿ ಎಲ್‍ಬುಜ್ರ್ó ಮತ್ತು ಕಾಸ್ಬೆಕ್ ಪರ್ವತಗಳ ಜ್ವಾಲಾಮುಖಿಗಳು ಕೊನೆಯ ಹಂತದ ರಚನೆಗೆ ಸೇರಿರಬೇಕು.
ಸೋವಿಯತ್ ದೇಶದ ಎರಡು ಸ್ವಾಭಾವಿಕ ವಿಭಾಗಗಳಾದ ಉತ್ತರ ಮತ್ತು ದಕ್ಷಿಣ ಕಾಕಸಸ್ ಪರ್ವತ ಪ್ರದೇಶಗಳಲ್ಲಿ ಕೈಗಾರಿಕೆಗಳಿಗೆ ಉಪಯುಕ್ತವಾದ ಖನಿಜ ಸಂಪತ್ತು ಹೇರಳವಾಗಿದೆ. ಬಾಕು, ಗ್ರೋಜ್ನಿ ಮತ್ತು ಮೈಕಾಫ್‍ಗಳಲ್ಲಿ ಪೆಟ್ರೋಲ್, ಚೈಟ್ರೊರಾದಲ್ಲಿ ಮ್ಯಾಂಗನೀಸ್, ಓರ್ಜೊನಿಕಿಡ್ಜ್‍ನಲ್ಲಿ ಸೀಸ ಮತ್ತು ತವರ ಮತ್ತು ಟ್ಯೆರ್ನಿಔಜ್‍ನಲ್ಲಿ ಕಬ್ಬಿಣ ಮಿಶ್ರಲೋಹಗಳು ಸಿಗುತ್ತವೆ. ಜಾರ್ಜಿಯ ಪ್ರದೇಶದಲ್ಲಿ ಸಣ್ಣಪುಟ್ಟ ಕಲ್ಲಿದ್ದಲ ಗಣಿಗಳಿರುವುದರಿಂದಲೂ ಕಬ್ಬಿಣದ ಅದುರು ದೊರಕುವುದರಿಂದಲೂ ಟಿಪ್ಲಿಸ್ ಬಳಿ ಹೊಸ ಕಬ್ಬಿಣದ ಮತ್ತು ಉಕ್ಕಿನ ಕಾರ್ಖಾನೆಗಳುಂಟು. ಕಾಕಸಸ್ ಪ್ರದೇಶದಲ್ಲಿರುವ ಪ್ರಾಣಿ-ಪಕ್ಷಿಗಳು ವೈವಿಧ್ಯಮಯ. ಅವಕ್ಕಾಗಿ ಅಭ್ಯಯಾರಣ್ಯಗಳನ್ನು ಏರ್ಪಡಿಸಿದೆ. ಕಾಕಸಸ್ ಪ್ರದೇಶದಾದ್ಯಂತ ಅನೇಕ ಬುಡಕಟ್ಟುಗಳಿಗೆ ಹಾಗೂ ದೇಶಗಳಿಗೆ ಸೇರಿದ ಜನರನ್ನೂ ವಿವಿಧ ಭಾಷೆಗಳನ್ನಾಡುವ ಜನಾಂಗಗಳನ್ನೂ ಕಾಣಬಹುದು. ಸ್ವರ್ಗದ ಜ್ಯೋತಿಯನ್ನು ತಂದ ಪ್ರೊಮೀಥಿಯಸನನ್ನು ಜೂóಸ್ ದೇವತೆ ಈ ಪರ್ವತದ ಬಂಡೆಯೊಂದರ ಮೇಲೆ ಬಂಧಿಸಿದನೆಂಬುದು ಗ್ರೀಕ್ ಐತಿಹ್ಯ.
ಉಲ್ಲೇಖಗಳು
[ಬದಲಾಯಿಸಿ]
https://caucasusmountains.info/ Archived 2020-10-24 ವೇಬ್ಯಾಕ್ ಮೆಷಿನ್ ನಲ್ಲಿ.