ಖಡ್ಗಮೃಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಘೇಂಡಾಮೃಗ ಇಂದ ಪುನರ್ನಿರ್ದೇಶಿತ)
ಘೇಂಡಾಮೃಗ
Temporal range: Eocene–Recent
ಕಪ್ಪು ಘೇಂಡಾಮೃಗ (Diceros bicornis) ಸೈಂಟ್ ಲೂಯಿಸ್ ಪ್ರಾಣಿಸಂಗ್ರಹಾಲಯದಲ್ಲಿ
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಕೆಳವರ್ಗ:
ಗಣ:
ಉಪಗಣ:
ಮೇಲ್ಕುಟುಂಬ:
ಕುಟುಂಬ:
ರಿನೋಸೆರೋಟೋಯ್ಡೆ

Gray, 1820
Extant genera

Ceratotherium
Dicerorhinus
Diceros
Rhinoceros
Extinct genera, see text

ಘೇಂಡಾಮೃಗ
ಭಾರತದ ಘೇಂಡಾ, ಕಾಜಿರಂಗ ರಾಷ್ಟ್ರೀಯ ಉದ್ಯಾನ

ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹಾಗೂ ಉಪೋಷ್ಣವಲಯಗಳ ಮೂಲವಾಸಿಯಾದ ಒಂದು ಬೃಹದ್ಗಾತ್ರದ ಸಸ್ತನಿ. ಘೇಂಡಾಮೃಗ ಪರ್ಯಾಯನಾಮ. ಮ್ಯಾಮೇಲಿಯ ವರ್ಗದ ಪೆರಿಸೊಡ್ಯಾಕ್ಟಿಲ ಗಣದಲ್ಲಿನ ರೈನೊಸೆರಾಟಿಡೀ ಕುಟುಂಬಕ್ಕೆ ಸೇರಿದೆ. ಬೆಸಸಂಖ್ಯೆಯ ಬೆರಳುಗಳುಳ್ಳ ಗೊರಸುಗಳು ಮತ್ತು ಮೂತಿಯ ಮೇಲೆ ಒಂದು ಅಥವಾ ಎರಡು ಕೊಂಬುಗಳಿರುವುದು ಈ ಪ್ರಾಣಿಯ ವಿಶಿಷ್ಟ ಲಕ್ಷಣಗಳು. ಪೆರಿಸೊಡ್ಯಾಕ್ಟಿಲ ಗಣಕ್ಕೆ ಸೇರಿದ ಕುದುರೆ, ಝೀಬ್ರಾ, ಟಾಪಿರ್ ಪ್ರಾಣಿಗಳಿಗೆ ಹತ್ತಿರದ ಸಂಬಂಧಿ ಇದು. ಇವಕ್ಕೂ ಖಡ್ಗಮೃಗಕ್ಕೂ ಬೆಸಸಂಖ್ಯೆಯ ಬೆರಳುಗಳ ಲಕ್ಷಣದಲ್ಲಿ ಪರಸ್ಪರ ಸಾಮ್ಯವಿದೆ.

ಪ್ರಬೇಧಗಳು[ಬದಲಾಯಿಸಿ]

ಖಡ್ಗಮೃಗಗಳಲ್ಲಿ ಒಟ್ಟು 4 ಜಾತಿಗಳಿಗೆ ಸೇರಿದ 5 ಪ್ರಭೇದಗಳಿವೆ. ಆಫ್ರಿಕದ (ಉಗಾಂಡ, ಕಾಂಗೊ, ಜೂಲೂ ಲ್ಯಾಂಡ್, ಕೀನ್ಯ) ಸವಾಸ ಹುಲ್ಲುಗಾಡುಗಳಲ್ಲಿ ಮತ್ತು ದಟ್ಟ ಕಾಡುಗಳಲ್ಲಿ ಡೈಸೆರಾಸ್ ಬೈಕಾರ್ನಿಸ್ (ಕರಿ ಖಡ್ಗಮೃಗ) ಮತ್ತು ಸೆರಟೊತೀರಿಯಂ ಸೈಮಸ್ (ಬಿಳಿ ಖಡ್ಗಮೃಗ)[೧] ಪ್ರಭೇದಗಳೂ ಭಾರತದ ಅಸ್ಸಾಮಿನ ಕಾಡುಗಳಲ್ಲಿ ರೈನಾಸರಾಸ್ ಯೂನಿಕಾರ್ನಿಸ್ ಪ್ರಭೇದವೂ[೨],[೩] ಜಾವದಲ್ಲಿ ರೈನಾಸರಾಸ್ ಸೋಂಡೇಕಸ್ ಪ್ರಭೇದವೂ ಸುಮಾತ್ರದಲ್ಲಿ ಡೈಡರ್ಮೊಸೆರಾಸ್ (ಡೈಸೆರಾರೈನಸ್) ಸುಮಾತ್ರೆನ್ಸಿಸ್ ಪ್ರಭೇದವೂ ಕಾಣದೊರೆಯುತ್ತವೆ.[೪]

ಲಕ್ಷಣಗಳು[ಬದಲಾಯಿಸಿ]

ಖಡ್ಗಮೃಗದ ದೇಹ ಬಲು ಸ್ಥೂಲ (ಪೂರ್ಣ ಬೆಳೆದ ಗಂಡು ಖಡ್ಗಮೃಗದ ಉದ್ದ ಸುಮಾರು 2-4.2 ಮೀ., ಎತ್ತರ ಸುಮಾರು 1-2 ಮೀ. ತೂಕ 1-3.5 ಮೆಟ್ರಿಕ್ ಟನ್ನುಗಳು). ಆನೆಯನ್ನು ಬಿಟ್ಟರೆ ಆಫ್ರಿಕದ ಸೆರಟೊತೀರಿಯಮ್ ಸೈಮಸ್ ಪ್ರಭೇದವೇ ಬಲು ದೊಡ್ಡ ಭೂವಾಸಿ ಪ್ರಾಣಿಯೆನ್ನಲಾಗಿದೆ. ಹೆಣ್ಣು ಗಂಡಿಗಿಂತ ಚಿಕ್ಕದು. ಚರ್ಮ ಬಹಳ ದಪ್ಪ ಹಾಗೂ ಗಡುಸು. ಆಫ್ರಿಕದ ಪ್ರಭೇದಗಳಲ್ಲಿ ಚರ್ಮ ನಯವಾಗಿದೆ. ಆದರೆ ಭಾರತ ಹಾಗೂ ಜಾವದಲ್ಲಿನ ಖಡ್ಗಮೃಗಗಳ ಚರ್ಮ ಕತ್ತು ಹಾಗೂ ಕಾಲುಗಳ ಬಳಿ ಮಡಿಚಿಕೊಂಡಿದ್ದು ಒಂದು ಬಗೆಯ ಯುದ್ಧ ಕವಚದಂತೆ ಕಾಣುತ್ತದೆ. ಕಿವಿಯ ಅಂಚು, ಬಾಲದ ತುದಿ ಇವುಗಳನ್ನು ಬಿಟ್ಟರೆ ದೇಹದ ಮೇಲೆ ಎಲ್ಲೂ ಕೂದಲುಗಳಿಲ್ಲ. ದೇಹದ ಬಣ್ಣ ಬೂದಿ ಇಲ್ಲವೆ ಕಂದು. ಆಫ್ರಿಕದ ಡೈಸೆರಾಸ್ ಪ್ರಭೇದವನ್ನು ಕರಿ ಖಡ್ಗಮೃಗವೆಂದೂ ಸೆರಟೊ ತೀರಿಯಂ ಪ್ರಭೇದವನ್ನು ಬಿಳಿ ಖಡ್ಗಮೃಗವೆಂದೂ ಕರೆಯುವುದು ವಾಡಿಕೆಯಲ್ಲಿದೆಯಾದರೂ ಅವು ವಾಸ್ತವವಾಗಿ ಶುದ್ಧ ಬಿಳಿ ಬಣ್ಣದವಲ್ಲ. ಬಿಳಿ ಬಗೆಯದರ ಮೈ ಬಣ್ಣ ಬೇರೆ ಬಗೆಗಳಿಗೆ ಹೋಲಿಸಿದರೆ ಕೊಂಚ ತಿಳಿಯಾಗಿದೆ ಅಷ್ಟೆ. ಖಡ್ಗಮೃಗಗಳ ದೇಹದ ಮೇಲೆ ಅಲ್ಲಲ್ಲೆ ಗುಬುಟುಗಳಿರುವುದೂ ಉಂಟು. ಮೈಗಾತ್ರಕ್ಕೆ ಹೋಲಿಸಿದರೆ ಕಾಲುಗಳು ಬಲುಚಿಕ್ಕವು; ಕಂಬದಂತಿವೆ. ಮುಂಗಾಲು ಮತ್ತು ಹಿಂಗಾಲುಗಳಲ್ಲಿ ತಲಾ ಮೂರು ಬೆರಳುಗಳಿವೆ. ಒಂದೊಂದು ಬೆರಳಲ್ಲೂ ಪರಸ್ಪರ ಬಿಡಿಬಿಡಿಯಾದ ಗೊರಸುಗಳಿವೆ. ಖಡ್ಗಮೃಗದ ಕತ್ತು ಚಿಕ್ಕದು. ತಲೆ ಭಾರಿಯಾಗಿದೆ. ಮೇಲ್ಮುಖವಾಗಿ ಕೊಂಚ ಬಾಗಿದಂತಿರುವ ಮೂತಿಯ ಮೇಲೆ ಕೊಂಬುಗಳಿವೆ. ಆಫ್ರಿಕದಲ್ಲಿ ಮತ್ತು ಸುಮಾತ್ರದಲ್ಲಿ ವಾಸಿಸುವ ಖಡ್ಗಮೃಗಗಳಲ್ಲಿ ಒಂದರ ಹಿಂದೊಂದು ಇರುವ 2 ಕೊಂಬುಗಳೂ ಭಾರತ ಹಾಗೂ ಜಾವದಲ್ಲಿರುವ ಪ್ರಭೇದಗಳಲ್ಲಿ ಒಂದೇ ಕೊಂಬೂ ಇವೆ. ಕೊಂಬುಗಳಿಗೂ ತಲೆಬುರುಡೆಯ ಮೂಳೆಗಳಿಗೂ ಯಾವುದೇ ಸಂಬಂಧವಿಲ್ಲ. ಮೂತಿಯ ಮೇಲಿನ ಕೆಲವು ವಿಶೇಷ ಬಗೆಯ ಕೂದಲುಗಳು ಒತ್ತಾಗಿ ಹೆಣೆದುಕೊಂಡು, ಬಿರುಸುಗೊಂಡು ಉಂಟಾದ ರಚನೆಗಳಿವು. ಇದರಿಂದಾಗಿ ಖಡ್ಗಮೃಗದ ಕೊಂಬುಗಳು ಬೇರೆ ಪ್ರಾಣಿಗಳ (ದನ, ಜಿಂಕೆ, ಜಿರಾಫೆ ಇತ್ಯಾದಿ) ಕೊಂಬುಗಳಿಂದ ಭಿನ್ನರೀತಿಯಾಗಿವೆ. ಭಾರತದಲ್ಲಿ ಖಡ್ಗಮೃಗ ತನ್ನ ಕೊಂಬನ್ನು ಯಾವುದಾದರೂ ಗಟ್ಟಿಯಾದ ತಲಕ್ಕೆ ಮಸೆದು ಚಪ್ಪಟೆ ಮಾಡಿಕೊಳ್ಳುವುದುಂಟು. ಆಫ್ರಿಕದಲ್ಲಿನ ಪ್ರಭೇದಗಳು ಈ ರೀತಿ ಮಾಡುವುದಿಲ್ಲವಾಗಿ ಕೊಂಬುಗಳು ಚೂಪಾಗಿಯೇ ಇರುತ್ತವೆ. ಆಫ್ರಿಕದ ಪ್ರಭೇದಗಳಲ್ಲಿ ಮುಂದಿನದು ಹೆಚ್ಚು ಉದ್ದವಾಗಿರುತ್ತವೆ. (ಕೆಲವು ಮೃಗ) ಗಳಲ್ಲಿ ಸುಮಾರು 3.5 ಮೀ. ಉದ್ದವಿರುವುದುಂಟು. ಖಡ್ಗ ಮೃಗ ಆಕ್ರಮಣಕ್ಕೆ ಮತ್ತು ತನ್ನ ರಕ್ಷಣೆಗೆ ಕೊಂಬನ್ನು ಆಯುಧವನ್ನಾಗಿ ಬಳಸುತ್ತದೆ. ರೈನಾಸೆರಾಸ್ ಮತ್ತು ಡೈಸರಾಸ್ ಪ್ರಭೇದಗಳಲ್ಲಿ ಮೇಲ್ದುಟಿ ಕೊಂಚ ಮುಂದಕ್ಕೆ ಚಾಚಿದಂತಿದ್ದು ಅದಕ್ಕೆ ಆಹಾರವನ್ನು ಹಿಡಿದುಕೊಳ್ಳುವ ಸಾಮಥ್ರ್ಯವುಂಟು. ಉಳಿದ ಪ್ರಭೇದಗಳಲ್ಲಿ ಮೇಲ್ದುಟಿ ಮೊಂಡಾಗಿದೆ. ತಲೆಯ ಇಕ್ಕೆಲಗಳಲ್ಲಿ ಪುಟ್ಟ ಗಾತ್ರದ ಕಣ್ಣುಗಳಿವೆ. ಕಿವಿಗಳು ಚಿಕ್ಕವು. ಕಿವಿಗಳ ತುದಿಯಲ್ಲಿ ಕೂದಲುಗಳ ಕುಚ್ಚಿದೆ.

ಜೀವನ ವಿಧಾನ[ಬದಲಾಯಿಸಿ]

ಖಡ್ಗಮೃಗ ಸಾಮಾನ್ಯವಾಗಿ ಒಂಟಿಯಾಗಿಯೇ ವಾಸಿಸುತ್ತದೆ. ಸಂತಾನವೃದ್ಧಿಯ ಕಾಲದಲ್ಲಿ ಮಾತ್ರ ಹೆಣ್ಣು ಮತ್ತು ಗಂಡು ಪ್ರಾಣಿಗಳು ಜೊತೆಜೊತೆಯಾಗಿಯೇ ಓಡಾಡುತ್ತವೆ. ಖಡ್ಗಮೃಗಗಳು ನಿಶಾಚರಿಗಳು. ಸಂಜೆಯಿಂದ ಮುಂಜಾವಿನ ವರೆಗೂ ಆಹಾರಾನ್ವೇಷಣೆಯಲ್ಲಿ ತೊಡಗಿದ್ದು ಹಗಲೆಲ್ಲ ಯಾವುದಾದರೂ ವಿವಿಕ್ತ ಸ್ಥಳದಲ್ಲಿ ಅಡಗಿರುತ್ತವೆ. ಬಲು ಒತ್ತುಕಟ್ಟಾದ ಪೊದೆಗಳಲ್ಲಿ ಅವಿತಿಟ್ಟುಕೊಂಡಿದ್ದು ನಿದ್ದೆ ಮಾಡುವುದೇ ರೂಢಿ. ನಿಂತುಕೊಂಡು ಇಲ್ಲವೆ ನೆಲದ ಮೇಲೆ ಒರಗಿ ನಿದ್ದೆ ಮಾಡುತ್ತವೆ. ಬಿಸಿಲಿನ ತಾಪ ಹೆಚ್ಚಾದಾಗ ಕೆಸರು ನೀರಿನಲ್ಲಿ ಹೊರಳಾಡುತ್ತ, ನದಿಗಳಲ್ಲಿ ಈಜುತ್ತ ಕಾಲಕಳೆಯುವುದೆಂದರೆ ಇವಕ್ಕೆ ಬಲು ಅಚ್ಚುಮೆಚ್ಚು. ಎಲ್ಲ ಬಗೆಯ ಖಡ್ಗಮೃಗಗಳೂ ಸಂಪೂರ್ಣ ಸಸ್ಯಹಾರಿಗಳು. ಸೆರಟೋತೀರಿಯಂ ಜಾತಿಯ ಖಡ್ಗ ಮೃಗಗಳು ಹುಲ್ಲು ಮೇಯುತ್ತವೆ. ಉಳಿದವು ಗಿಡಮರಗಳ ಎಳೆಚಿಗುರನ್ನೂ ಮೊಗ್ಗುಗಳನ್ನೂ ಮೆಲ್ಲುತ್ತವೆ. ಖಡ್ಗಮೃಗಗಳು ಬಲು ಸ್ಥೂಲ ಗಾತ್ರದವಾದರೂ ಚೆನ್ನಾಗಿ, ವೇಗವಾಗಿ (ಗಂಟೆಗೆ ಸುಮಾರು 45 ಕಿಮೀ. ವೇಗದಲ್ಲಿ) ಓಡಬಲ್ಲವು. ಓಟ ಕುದುರೆಯ ನಾಗಾಲೋಟವನ್ನು ಹೋಲುತ್ತದೆ. ಖಡ್ಗಮೃಗದ ದೃಷ್ಟಿಶಕ್ತಿ ಬಲುಮಂದ. ಆದರೆ ಘ್ರಾಣಶಕ್ತಿ ಹಾಗೂ ಶ್ರವಣಶಕ್ತಿಗಳು ಬಹಳ ಚುರುಕಾಗಿವೆ. ಖಡ್ಗಮೃಗಗಳಿಗೆ ಮನುಷ್ಯನನ್ನು ಬಿಟ್ಟರೆ ಬೇರಾವ ಶತ್ರುಗಳೇ ಇಲ್ಲ ಎಂದು ಹೇಳಬಹುದು. ಆಫ್ರಿಕದ ಕಪ್ಪು ಖಡ್ಗಮೃಗವನ್ನು ಬಿಟ್ಟರೆ ಉಳಿದವೆಲ್ಲ ಸಾಧುಸ್ವಭಾವದವು. ಅಂಜುಕುಳಿಗಳೆಂದರೂ ತಪ್ಪಿಲ್ಲ. ಆದರೆ ಶತ್ರುಗಳಿಂದಾವೃತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಾಗ ಬಲು ಕ್ರೂರವಾಗಿ ಹೋರಾಡಬಲ್ಲುವು. ರಭಸದಿಂದ ಶತ್ರಗಳ ಮೇಲೆ ನುಗ್ಗಿ ಕೊಂಬಿನಿಂದ ಇಲ್ಲವೆ ಹಲ್ಲುಗಳಿಂದ ತಿವಿಯುತ್ತವೆ.

ವಾಸ[ಬದಲಾಯಿಸಿ]

ನೀರಿನ ಆಸರೆಗಳ ಸಮೀಪದ ಪ್ರದೇಶಗಳಲ್ಲೆ ಖಡ್ಗಮೃಗಗಳ ವಾಸ. ಸಾಮಾನ್ಯವಾಗಿ ದಟ್ಟ ಪೊದೆಗಳ ನಡುವೆ ಸುರಂಗದ ರೀತಿಯ ದಾರಿ ಮಾಡಿಕೊಂಡು ತಾವು ಆಹಾರವನ್ನು ಮೇಯುವ ಸ್ಥಳಗಳಿಂದ ನೀರಿನ ನೆಲೆಗಳಿಗೆ ಹೋಗಿಬರುತ್ತವೆ. ಸಾಧಾರಣವಾಗಿ ಒಂದೊಂದು ಖಡ್ಗಮೃಗವೂ ಒಂದು ನಿರ್ದಿಷ್ಟ ಪ್ರದೇಶವನ್ನು ಆರಿಸಿಕೊಂಡು ಅದರ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿಕೊಳ್ಳುತ್ತದೆ. ಆ ಪ್ರದೇಶದ ಎಲ್ಲೆಕಟ್ಟನ್ನು ಗುರುತಿಸುವುದಕ್ಕಾಗಿ ಎಂಬಂತೆ ಅಲ್ಲಲ್ಲಿ ಲದ್ದಿ ಇಲ್ಲವೆ ಮೂತ್ರ ವಿಸರ್ಜನೆ ಮಾಡುತ್ತದೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಮತ್ತು ಹೆಣ್ಣು ಖಡ್ಗ ಮೃಗಗಳು ಜೊತೆಗೂಡಿ ವಾಸಿಸತೊಡಗುತ್ತವೆ. ಸುಮಾರು 4 ತಿಂಗಳು ಕಾಲ ಹೀಗೆ ಜೊತೆಯಾಗಿರುವುದುಂಟು. ದೀರ್ಘಾವಧಿಯ ಗರ್ಭಧಾರಣೆಯ ಕಾಲದ ಅನಂತರ ಸೂಲಿಗೆ ಒಂದೇ ಒಂದು ಮರಿ ಹುಟ್ಟುತ್ತದೆ. ಗರ್ಭಧಾರಣೆಯ ಅವಧಿ ಯೂನಿಕಾರ್ನಿಸ್ ಪ್ರಭೇದದಲ್ಲಿ 19 ತಿಂಗಳು, ಸೋಂಡೇಕಸ್ ಪ್ರಭೇದದಲ್ಲಿ 17 ತಿಂಗಳು, ಸುಮಾತ್ರದ ಖಡ್ಗಮೃಗದಲ್ಲಿ 7-8 ತಿಂಗಳು, ಆಫ್ರಿಕದ ಬೈಕಾರ್ನಿಸ್ ಹಾಗೂ ಸೆರಟೊತೀರಿಯಂ ಪ್ರಭೇದದಲ್ಲಿ 18 ತಿಂಗಳು-ಹೀಗೆ ಬೇರೆಬೇರೆಯಾಗಿದೆ.

ಮರಿ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಚುರುಕಾಗಿ ಓಡಾಡತೊಡಗುತ್ತದೆ. ಮರಿಯಲ್ಲಿ ಕೊಂಬುಗಳು ಚೆನ್ನಾಗಿ ರೂಪುಗೊಂಡಿರುವುದಿಲ್ಲ. ತಾಯಿಗೆ ಮತ್ತೊಂದು ಮರಿ ಹುಟ್ಟುವವರೆಗೂ ತಾಯಿಯೊಂದಿಗೆ ಇದ್ದು ಅನಂತರ ಬೇರೆಯಾಗಿ ಒಂಟಿ ಜೀವನ ಆರಂಭಿಸುತ್ತದೆ. ಖಡ್ಗಮೃಗದ ಆಯುಸ್ಸು ಸುಮಾರು 50 ವರ್ಷಗಳು.

ವಿನಾಶದ ಭಯ[ಬದಲಾಯಿಸಿ]

ಖಡ್ಗಮೃಗಗಳನ್ನು ಬಹು ಹಿಂದಿನಿಂದಲೂ ಮಾನವ ಬೇಟೆಯಾಡುತ್ತ ಬಂದಿದ್ದಾನೆ. ಆಫ್ರಿಕದ ಕೆಲವು ಬುಡಕಟ್ಟುಗಳಲ್ಲಿ ಇದರ ಮಾಂಸ ಬಹಳ ರುಚಿಕಟ್ಟಾದ ಆಹಾರವೆನಿಸಿದೆ. ಇದರ ಯಕೃತ್ತಂತೂ ಬಹಳ ಅಚ್ಚುಮೆಚ್ಚಿನ ಖಾದ್ಯ. ಇದರ ಒರಟಾದ ಚರ್ಮದಿಂದ ಚಾವಟಿ ಮುಂತಾದವನ್ನು ಮಾಡುವುದಿದೆ. ಅಲ್ಲದೆ ಸೋಮಾಲಿಯದ ನಿವಾಸಿಗಳು ಇದರ ಚರ್ಮದಿಂದ ಗುರಾಣಿಗಳನ್ನು ತಯಾರಿಸುತ್ತಾರೆ. ಖಡ್ಗಮೃಗಗಳ ಕೊಂಬಿಗೆ ಕಾಮೋತ್ತೇಜಕ ಗುಣ ಇದೆ ಎಂದು ಚೀನದಲ್ಲಿ ನಂಬಲಾಗಿದೆ. ಅಲ್ಲದೆ ವಿಷಾಪಹಾರಿ ಬೇಟೆ ನಿರ್ಭಾದಿತವಾಗಿ ಸಾಗುತ್ತಿದ್ದು ಇವು ನಿರ್ವಂಶವಾಗುವ ಸ್ಥಿತಿಯಲ್ಲಿವೆ. ಆದ್ದರಿಂದ ಆಯಾ ದೇಶಗಳ ಸರ್ಕಾರಗಳು ಖಡ್ಗಮೃಗಗಳ ಬೇಟೆಯನ್ನು ಕಾನೂನಿನ ಮೂಲಕ ನಿಷೇಧಿಸಿವೆ.

ಉಲ್ಲೇಖ[ಬದಲಾಯಿಸಿ]

  1. Skinner, John D.; Chimimba, Christian T. (2005). The Mammals Of The Southern African Subregion. Cambridge University Press. p. 527. ISBN 978-0-521-84418-5. {{cite book}}: Unknown parameter |lastauthoramp= ignored (help)
  2. Bhaumik, Subir. "Assam rhino poaching 'spirals'". BBC News.
  3. Prasanta Mazumdar. "One of world's biggest rhino horns found in Assam". The New Indian Express. Archived from the original on 2016-09-14. Retrieved 2017-02-04.
  4. Derr, Mark. "Racing to Know the Rarest of Rhinos, Before It's Too Late". The New York Times.
"https://kn.wikipedia.org/w/index.php?title=ಖಡ್ಗಮೃಗ&oldid=1205541" ಇಂದ ಪಡೆಯಲ್ಪಟ್ಟಿದೆ