ಪುಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳ್ಳೆಯ ಕರ್ಮವನ್ನು ಪುಣ್ಯವೆಂದೂ ಕೆಟ್ಟ ಕರ್ಮವನ್ನು ಪಾಪ ಎಂದು ಕರೆಯಲಾಗಿದೆ. ಸಮಾಜ ಮತ್ತು ವ್ಯಕ್ತಿ ಈ ಎರಡೂ ದೃಷ್ಟಿಯಿಂದಲೂ ಒಳಿತು ಕೆಡುಕುಗಳನ್ನು ಮತ ಧರ್ಮಗಳು ನಿರ್ಣಯಿಸಿವೆ. ಪುಣ್ಯ ಕರ್ಮ ಸಾಧು ಕರ್ಮ ; ಪಾಪಕರ್ಮ ಅಸಾಧುಕರ್ಮ. ಇವುಗಳ ಪರ್ಯಾಯ ನಾಮಗಳು - ಸುಕೃತ, ದುಷ್ಕೃತ, ಅರ್ಧ ಶ್ಲೋಕದಲ್ಲಿ ವ್ಯಾಸರು ಹೇಳಿದ್ದಾರೆ - ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಂಡನಂ ಎಂದು. ಪರೋಪಕಾರ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ಭಾವನೆಗೆ ಇದೇ ಮೂಲ. ಇದರ ಅರ್ಥ ಪರೋಪಕಾರ ರೂಪ ಸುಕೃತ ಮಾಡಿದರೆ ಪುಣ್ಯ ಕರ್ಮದ ಫಲ ಲಭಿಸುತ್ತದೆ ಎಂಬುದು. ಒಳ್ಳೆಯ ಕರ್ಮದ ಫಲ. ಒಳ್ಳೆಯ ಕರ್ಮದ ಫಲ ಒಳ್ಳೆಯದಾಗಿ ಸುಖಮಯವಾಗಿ ಇರುತ್ತದೆ. ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮಗಳನ್ನು ಒಪ್ಪಿರುವ ಹಿಂದೂ ಧರ್ಮದ ಪ್ರಕಾರ ಎಂಥ ಕರ್ಮವೇ ಆಗಲಿ ತನಗೆ ಅನುಗುಣವಾದ ಫಲವನ್ನು ಕಾಲಕ್ರಮದಲ್ಲಿ ಕೊಟ್ಟೇ ಕೊಡುತ್ತದೆ. ಕರ್ಮಕ್ಕೆ ನಾಶವಿಲ್ಲ. ಅದು ಈ ಜನ್ಮದಲ್ಲೇ ಫಲ ಕೊಡದಿರಬಹುದು ; ಮುಂದಿನ ಜನ್ಮಗಳಲ್ಲಂತೂ ಕೊಟ್ಟೇ ತೀರುತ್ತದೆ. ನಾವು ಮಾಡಿದ ಪುಣ್ಯದ ಫಲವಾಗಿ ನಮ್ಮ ಮರಣಾನಂತರ ನಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆಂಬುದೂ ಸಾರ್ವತ್ರಿಕವಾದ ನಂಬಿಕೆ. ಈ ಸ್ವರ್ಗವಾಸವೂ ಅಲ್ಲಿನ ಸುಖಾನುಭವವೂ ನಾವು ಮಾಡಿರುವ ಪುಣ್ಯದ ಪ್ರಮಾಣಾನುಗುಣವಾದ ಕಾಲ ಪರಿಮಿತಿಯುಳ್ಳದ್ದು. ಕ್ಷೀಣೇ ಪುಣ್ಯೇ ಮತ್ರ್ಯಲೋಕಂ ವಿಶಂತಿ ಎಂಬ ಶ್ರುತಿವಾಕ್ಯ ಇದನ್ನೇ ಹೇಳುತ್ತದೆ.

ಧರ್ಮ, ಪುಣ್ಯ, ಶ್ರೇಯಸ್ಸು, ಸುಕೃತ, ವೃಷ - ಈ ಐದೂ (ಪುಣ್ಯ ಶಬ್ದಕ್ಕೆ) ಪರ್ಯಾಯವಾಚಿಗಳೆಂದು ಅಮರಕೋಶದಲ್ಲಿ ಹೇಳಿದೆ. ಧರ್ಮವೂ ಪುಣ್ಯವೇ ಎಂಬುದು ಇದರಿಂದ ಸ್ಪಷ್ಟ. ಪುಣ್ಯಶಬ್ದ ವ್ಯಾಪಕವಾದ ಅರ್ಥವುಳ್ಳದ್ದು. ಧರ್ಮ ಪುಣ್ಯದ ಒಂದು ರೂಪ. ಧರ್ಮರೂಪ ಪುಣ್ಯಂ ಚ ಗಂಗಾಸ್ವಾನಾದಿಜನ್ಯಂ-ಮುಂತಾದ ಪ್ರಯೋಗಗಳೂ ಧರ್ಮಗ್ರಂಥಗಳಲ್ಲಿ ಹೇರಳವಾಗಿವೆ. ಧರ್ಮ ಶಬ್ದಕ್ಕೂ ನಿಖರವಾದ ಅರ್ಥ ಹೇಳಲಾಗುವುದಿಲ್ಲ. ಮಹಾಭಾರತದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳಿದೆ. ವಿಹಿತ ಕರ್ಮದಿಂದ ಜನ್ಯವಾಗುವುದು ಧರ್ಮ ಎಂಬುದು ತರ್ಕ ಸಂಗ್ರಹದಲ್ಲಿ ಕೊಟ್ಟಿರುವ ಧರ್ಮಲಕ್ಷಣ. ಕಣಾದರು ಯತೋಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮಃ ಎಂದು ಸೂತ್ರಿಸಿದ್ದಾರೆ. ಸಾಮಾನ್ಯವಾಗಿ ಇಜ್ಯೆ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೃತಿ, ಕ್ಷಮಾ, ಅಲೋಭ ಎಂದು ಎಂಟು ಬಗೆಯಾಗಿ ಧರ್ಮವನ್ನು ನಿರೂಪಿಸುವುದು ವಾಡಿಕೆ. ಧರ್ಮಕ್ಕಿಂತ ವ್ಯಾಪಕವಾದ ಅರ್ಥವುಳ್ಳ ಪುಣ್ಯವನ್ನು ಕುರಿತು ಬೃಹದಾರಣ್ಯಕೋಶ ನಿಷತ್ತಿನಲ್ಲಿ ಕಂಡುಬರುವ ಯಾಜ್ಞವಲ್ಕ್ಯರ ವಿವೇಚನೆ ಆರ್ಥಪೂರ್ಣವಾಗಿದೆ. ಹಸಿವು, ನೀರಡಿಕೆ, ಸುಖ, ದುಃಖ ಇತ್ಯಾದಿಗಳಲ್ಲಿ ಅತಿಶಯವಾಗಿ ಸಿಲುಕಿ ಸಂಶಯ, ಭ್ರಾಂತಿ, ಅಜ್ಞಾನ, ಮತ್ರ್ಯತ್ವ, ವಿನಾಶಗಳ ಕಡೆ ಪ್ರವರ್ತಿಸುವುದು ಪಾಪ ; ಮೇಲೆ ಹೇಳಿದ ಅವಾಂಛನೀಯ ಸನ್ನಿವೇಶಗಳಲ್ಲೇ ಇದ್ದು ಆ ಕಡೆ ಪ್ರವರ್ತಿಸದೆ ಜ್ಞಾನ, ಆನಂದ, ಅಮೃತತ್ತ್ವಗಳ ಕಡೆ ಹೋಗುವುದು ಪುಣ್ಯ. ಪರೋಪಕಾರ ಕರ್ತೃತ್ವಂ ಅಹಿಂಸಾಲೋಭವರ್ಜನಂ 1 ವಿಷ್ಣುಪೂಜಾ ಚ ತಲ್ಲೀಲಶ್ರವಣಂ ಪುಣ್ಯಮುಚ್ಯತೇ - ಎಂಬ ಈ ಶ್ಲೋಕ ಪುಣ್ಯದ ಬಗೆಗೆ ಮೇಲೆ ಹೇಳಿದ ಎಲ್ಲ ಅಭಿಪ್ರಾಯಗಳ ಸಾರಸೂಚಿ. ಪುಣ್ಯಪಾಪಗಳು ಪ್ರತ್ಯಕ್ಷ ಗೋಚರಗಳಲ್ಲವಾದ್ದರಿಂದ ಅವನ್ನು ಅದೃಷ್ಟ ದುರದೃಷ್ಟ ಶಬ್ದಗಳಿಂದ ನಿರ್ದೇಶಿಸಲಾಗುತ್ತದೆ.

ಮತಧರ್ಮಗಳಲ್ಲಿ, ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮ ತತ್ತ್ವಗಳಲ್ಲಿ ನಂಬಿಕೆ ಇಲ್ಲದವರು ಕೂಡ ಲೌಕಿಕ ದೃಷ್ಟಿಯ ಪರಿಮಿತಿಯಲ್ಲಿ ಪಾಪ ಪುಣ್ಯಗಳನ್ನು ನಂಬಿರುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪುಣ್ಯ&oldid=904634" ಇಂದ ಪಡೆಯಲ್ಪಟ್ಟಿದೆ